ಮಂಗಟ್ಟೆ ಪಕ್ಷಿಯ ವಿಸ್ಮಯ ಲೋಕ: ಶ್ರೀಧರ ಬನವಾಸಿ

ಅರಣ್ಯ ಸಂರಕ್ಷಣೆ ಮತ್ತು ಜೀವ ಸಂಕುಲಗಳ ಅಳಿವು ಉಳಿವಿನ ಹೋರಾಟವು ಸದಾ ಪರಿಸರ ಪ್ರಿಯರನ್ನು ಕಾಡುವ ಪ್ರಶ್ನೆ. ಮಾನವ ಅನಾದಿಕಾಲದಿಂದಲೂ ಕಾಡು, ಅಲ್ಲಿನ ಜೀವರಾಶಿಗಳ ನಡುವೆ ಸಹಬಾಳ್ವೆಯಿಂದಲೇ ಬದುಕುತ್ತಾ ಬಂದವನು. ಕಾಲಘಟ್ಟದ ಕಡುವೈರುಧ್ಯವೋ ಏನೋ…ಮಾನವ ತನ್ನ ಹಿಂದಿನ ಹಾದಿ ತಪ್ಪಿ ಹಿಂಸೆ, ಸ್ವಾರ್ಥದ ಚಿಂತನೆಯ ದಿಕ್ಕಿನತ್ತ ಸಾಗಿದಾಗ ಅಲ್ಲಿಂದ ಕಾಡಿನ ಜೊತೆ ಅವನ ಹೋರಾಟ ಶುರುವಿಟ್ಟುಕೊಂಡ. ಇದೊಂದು ಅನೈಸರ್ಗಿಕ ಸುದೀರ್ಘ ಪಯಣ. ಈ ದುರುಳ ಹಾದಿಯಲ್ಲಿ ನಾವು ಕಳೆದುಕೊಂಡ ಸಂಪತ್ತೇಷ್ಟೋ! ಒಂದು ರೀತಿಯಲ್ಲಿ ಮಾನವನ ಅಜ್ಞಾನದ ಹಾದಿಯು ಸುಗಮವಾಗುತ್ತಾ ಹೋಗಿದ್ದರಿಂದ ನಮ್ಮಿಂದ ಕೈತಪ್ಪಿದ ಆ ಪರಿಸರದ ಕೊಂಡಿಗಳನ್ನು ಹುಡುಕಲು ಇನ್ನೆಷ್ಟು ವರುಷಗಳು ಬೇಕೋ?

ಈ ಅಮಾನವೀಯತೆಯ ಹೋರಾಟದ ಕತ್ತಲೆಯಲ್ಲಿ ನಾವು ಕಳೆದುಕೊಂಡದ್ದು ಅಸಂಖ್ಯ ಜೀವ ಸಂಕುಲ ಮತ್ತು ಅರಣ್ಯ ಸಂಪತ್ತು. ಇದರಿಂದ ಪ್ರಕೃತಿ , ಜೀವ ಸಂಕುಲ ಮತ್ತು ಮಾನವ ನಡುವಿನ ಸಂಪರ್ಕ ಕೊಂಡಿ ಕಳಚಿತು. ಅದರ ತೀವ್ರ ಪರಿಣಾಮವನ್ನು ಇಂದು ನಾವು ಅನುಭವಿಸುತ್ತಿದ್ದೇವೆ. ಪ್ರಕೃತಿ ಮುನಿಸಿನ ವಿಕೋಪವನ್ನು ಎದುರು ನೋಡುತ್ತಿದ್ದೇವೆ. ಎದುರಿಸುತ್ತಿದ್ದೇವೆ. ಎಲ್ಲವನ್ನೂ ಎದುರಿಸಿದ ಮೇಲೆ ನಮ್ಮ ತಪ್ಪಿನ ಅರಿವಿನ ಸಂದರ್ಭ ಈಗ ಎದುರಾಗಿದೆ.

ಕಾಲ ತಡವಾಗಿ ನಮ್ಮನ್ನು ಎಚ್ಚರಿಸಿದೆ. ಈಗಾಗಲೇ ನಾವು ಕಳೆದುಕೊಂಡ ಜೀವ ಸಂಕುಲದ ಪಳಿಯುಳಿಕೆಯ ಮೇಲೆ ಪುನರುತ್ಥಾನದ ಕನಸನ್ನು ಕಾಣುತ್ತಿದ್ದೇವೆ. ಆ ನಿಟ್ಟಿನಲ್ಲಿ ಪರಿಸರ ಪ್ರೇಮಿಗಳು, ಹೋರಾಟಗಾರರು ಕಾಡು, ಅಲ್ಲಿನ ಜೀವ ಸಂಕುಲ, ಬುಡಕಟ್ಟು ಸಮುದಾಯಗಳನ್ನು ಉಳಿಸುವ ನಿಟ್ಟಿನಲ್ಲಿ ಅವಿರತ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆಳುವ ವ್ಯವಸ್ಥೆಗಳು, ಅಲ್ಲಿನ ಅಧಿಕೃತ ಆರಕ್ಷಕರು ಕೂಡ ನಮ್ಮನ್ನು ಬದುಕಿಸುತ್ತಿರುವ ಪರಿಸರ, ಅರಣ್ಯವನ್ನು ನಾಶ ಮಾಡುತ್ತಿದ್ದರೆ, ಕೆಲವು ಮನಸುಗಳು ಅದರ ವಿರುದ್ಧ ಟೊಂಕ ಕಟ್ಟಿ ಹೋರಾಟ ಮಾಡುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಅಂತಹ ಒಂದು ಜಾಗೃತಿಯೇ ಪ್ರಶಾಂತ್ ಸಾಗರ ಅವರು ನಿರ್ದೇಶಿಸಿ, ನಿರ್ಮಾಣ ಮಾಡಿರುವ `ಕೌತುಕ’ ಎಂಬ ವನ್ಯಜೀವಿ ಕಿರುಚಿತ್ರ.

೨೦೧೮ ಎಪ್ರಿಲ್ ತಿಂಗಳಲ್ಲಿ ಕೇರಳದ ಅತಿರಪಿಲ್ಲಿ’ ಎಂಬ ಗಂಡು ಮಂಗಟ್ಟೆ ಪಕ್ಷಿಯೊಂದು ಅಚಾನಕ್ ಆಗಿ ರಸ್ತೆ ಅಪಘಾತದಲ್ಲಿ ತೀರಿ ಹೋದಾಗ ಅದರ ಕೊಕ್ಕಿನಲ್ಲಿ ಹಣ್ಣುಗಳಿರುವುದನ್ನು ಗಮನಿಸಿದ ಪರಿಸರ ಪ್ರಿಯ ಬೈಜು ವಾಸುದೇವನ್ ಎಂಬ ವ್ಯಕ್ತಿಯು ಆ ಪಕ್ಷಿಯ ಕುಟುಂಬವನ್ನು ಉಳಿಸುವ ನಿಟ್ಟಿನಲ್ಲಿ ಮಾಡಿದ ಸೋಜಿಗ ಪ್ರಯತ್ನಗಳು ಮತ್ತು ೨೦೦೬ರಲ್ಲಿ ನಮ್ಮ ರಾಜ್ಯದ ದಾಂಡೇಲಿಗೆ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬರುವ ಐಎಫ್ಎಸ್ ಅಧಿಕಾರಿ ಮನೋಜ್ಕುಮಾರ್ ಅವರು ತಮ್ಮ ವ್ಯಾಪ್ತಿಯ ಅರಣ್ಯದಲ್ಲಿ ಬರುವ ಅಪರೂಪದ ಪಕ್ಷಿಗಳನ್ನು ಉಳಿಸುವ ನಿಟ್ಟಿನಲ್ಲಿ ಮಾಡಿದ ಜನ ಜಾಗೃತಿ ಕಾರ‍್ಯಕ್ರಮಗಳು... ಇವೆರಡರ ನೈಜ ಘಟನೆಗಳನ್ನು ಇಟ್ಟುಕೊಂಡುಕೌತುಕ’ ಚಿತ್ರವನ್ನು ವಸ್ತುನಿಷ್ಠವಾಗಿ ನಿರ್ದೇಶಕರು ರೂಪಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಅತಿಹೆಚ್ಚು ಅರಣ್ಯ ಸಂಪತ್ತು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಕಾಡಿನಲ್ಲಿ ಕಾಣಸಿಗುವ ಮಂಗಟ್ಟೆ ಎಂಬ ಪಕ್ಷಿಯ ಕುರಿತು ಈ ಚಿತ್ರವು ಬೆಳಕನ್ನು ಚೆಲ್ಲುತ್ತದೆ. ಕೌತುಕ’ ಬರೀ ಅಳಿವಿನಂಚಿನಲ್ಲಿರುವ ಮಂಗಟ್ಟೆ ಎಂಬ ಪಕ್ಷಿಯನ್ನು ಉಳಿಸುವ ಕಥೆಯಲ್ಲ! ನಾವು ಈಗಾಗಲೇ ಕಳೆದುಕೊಳ್ಳುತ್ತಿರುವ ಅಸಂಖ್ಯೆ ಜೀವ ಸಂಕುಲವನ್ನು ನಾವು ಉಳಿಸಿಕೊಳ್ಳಬೇಕಾದ ಎಚ್ಚರಿಕೆಯನ್ನು ಈ ಚಿತ್ರವು ನೀಡುತ್ತದೆ. ಚಿತ್ರ ನೋಡಿದ ಮೇಲೆ ಸಹಜವಾಗಿ ಅನಿಸುವ ಭಾವನೆಯೆಂದರೆ, ನಮ್ಮ ಬಾಲ್ಯದಲ್ಲಿ ನಾವು ಕಂಡ, ಜೊತೆಗೇನೆ ಹಾರಾಡಿದ ಅನೇಕ ಕಾಡಿನ ಪ್ರಾಣಿ ಪಕ್ಷಿಗಳು ಈಗ ಎಲ್ಲಿ ಹೋದವು? ಆಗ ಕಂಡಂತಹವು ಈಗೇಕೆ ಕಾಣುತ್ತಿಲ್ಲ! ಎಲ್ಲಿಯಾದರೂ ವಲಸೆ ಹೋದವೇ? ನಶಿಸಿ ಹೋದವೇ ಎಂಬ ಪ್ರಶ್ನೆಗಳು ಮೂಡುವುದು ಸಹಜ.ಮಂಗಟ್ಟೆ’ ಕೂಡ ಅಂತಹದೇ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ. ನಮ್ಮೊಳಗೆ ಅರಿವಿಲ್ಲದೇ ಪಾಪಪ್ರಜ್ಞೆಯನ್ನು ಮೂಡಿಸುತ್ತದೆ. ಇನ್ನು ಮುಂದಾದರೂ ಮಾನವ ತನ್ನ ಸುತ್ತಲಿನ ಪರಿಸರದೊಂದಿಗೆ ಹೇಗೆ ಸಹಬಾಳ್ವೆಯೊಂದಿಗೆ ಬದುಕಬೇಕು ಎಂಬುದನ್ನು ತಿಳಿಸುತ್ತದೆ.

ಸೃಜನಶೀಲ ನಿರ್ದೇಶಕ, ಬರಹಗಾರ ಪ್ರಶಾಂತ್ ಸಾಗರ್ ‘ಕೌತುಕ’ ಎಂಬ ಕಿರು ಚಿತ್ರದ ಮೂಲಕ ಅನೇಕ ಮಜಲುಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿ ಕಾಡಿನ ಬುಡಕಟ್ಟು ಮಕ್ಕಳ ಸ್ಥಿತಿಗತಿ, ಅವರ ಕಡು ಶಿಕ್ಷಣ ಪದ್ಧತಿ,ದೈನಂದಿನ ಹೋರಾಟ, ಅಲ್ಲಿನ ಅರಣ್ಯ ಇಲಾಖೆ, ಶಿಕ್ಷಕರು, ಪರಿಸರ ಕಾಳಜಿಯ ಮನಸ್ಸುಗಳು… ಹೀಗೆ ಹಲವು ಪಾತ್ರಗಳನ್ನಿಟ್ಟುಕೊಂಡು ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಅತ್ಯುತ್ತಮವಾಗಿ ಛಾಯಾಗ್ರಹಣ ಕೂಡ ಮಾಡಿದ್ದಾರೆ. ಕಾಡಿನಲ್ಲಿರುವ ಸಹಜ ನಿಶ್ಯಬ್ದ ಮೌನವನ್ನು ಅವರು ಯಥಾವತ್ ಆಗಿ ಚಿತ್ರಿಸಿರುವ ಬಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ನಮ್ಮೊಳಗೆ ಒಂದುಕೌತುಕ’ ಹುಟ್ಟಿಸುವ ಬಗೆ ಮನಸ್ಸನ್ನು ಕಾಡುತ್ತದೆ. ಮಂಗಟ್ಟೆ ಪಕ್ಷಿ ನಾವು ನಮ್ಮ ಸ್ವಾರ್ಥ, ಹಸಿವಿಗೆ ಕಳೆದುಕೊಂಡ ಜೀವ ಸಂಕುಲದ ಒಂದು ಕುರುಹಿನಂತೆ ಕಾಣುತ್ತದೆ. ತನ್ನಂತಯೇ ಅನೇಕ ಜೀವಗಳಿರುವ ಈ ಸಂಕುಲವನ್ನು ಕಾಪಾಡಬೇಕಾದ ಕರ್ತವ್ಯವನ್ನು ನೆನಪಿಸುತ್ತದೆ. ಮಾನವನಾಗಿ ಹುಟ್ಟಿದ ಮೇಲೆ ಈ ಅರಿವನ್ನು ನಾವು ಕಾಣಲೇಬೇಕಲ್ಲವೇ!

ಕೌತುಕ‘ ಚಿತ್ರದ ರೂವಾರಿ ಪ್ರಶಾಂತ್ ಸಾಗರ್ ಹಾಗೂ ಅವರ ಈ ಸಾಹಸಕ್ಕೆ ಸಹಕರಿಸಿದ, ಜೊತೆಯಾದ ಎಲ್ಲ ಮನಸುಗಳನ್ನು ಅಭಿನಂದಿಸುತ್ತಾ, ಅವರ ಈ ಚಿತ್ರದ ಆಶಯವು ಜಗದಲವೂ ಹಬ್ಬಲಿ ಎಂಬ ಹಾರೈಕೆ ನನ್ನದು. 'ಕೌತುಕ’ ಚಿತ್ರವು ಯುಟ್ಯೂಬ್ ನಲ್ಲಿದೆ. ಅದರ ಕೊಂಡಿ ಇಲ್ಲಿದೆ.

ಶ್ರೀಧರ ಬನವಾಸಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x