ಅವರು ತಟ್ಟುವ ಚಪ್ಪಾಳೆಗಳಲ್ಲಿ ವಿಭಿನ್ನವಾದ ಒಂದು ದನಿ ಇದೆ. ಆ ಚಪ್ಪಾಳೆಯ ಶಬ್ದ ಕಿವಿಗೆ ಬಿದ್ದೊಡನೆಯೇ ಇದು ಅವರದ್ದೇ ಚಪ್ಪಾಳೆ ಎಂದು ಮನಸು ನಿರ್ಧರಿಸಿ ಬಿಡುತ್ತದೆ. ತಟ್ಟನೆ ನಮ್ಮ ಕತ್ತು ಆ ಧ್ವನಿ ಬಂದತ್ತ ತಿರುಗುತ್ತದೆ. ಆ ಚಪ್ಪಾಳೆಗಳಲ್ಲಿ ರೋಷ, ಕೋಪ, ಉತ್ಸಾಹ, ಧೈರ್ಯ ಎಲ್ಲವೂ ಅಡಗಿರುತ್ತದೆ. ಕ್ರಿಯಾಶೀಲರಾಗಿ ಚಕ ಚಕನೆ ಅತ್ತಿಂದಿತ್ತ ಓಡಾಡುವ ಇವರಿಗೆ ಎಂಥವರ ಚಿತ್ತವನ್ನೂ ತಮ್ಮತ್ತ ಸೆಳೆದುಕೊಂಡು ಬಿಡುವ ಆಕರ್ಷಣೆ ಇದೆ. ಇವರ ಶೃಂಗಾರ, ಒನಪು, ವೈಯ್ಯಾರ ಸ್ತ್ರೀಯರನ್ನೇ ನಾಚಿಸುವಂತಿರುತ್ತದೆ. ಒಳ್ಳೆಯವರಿಗೆ ಒಳ್ಳೆಯವರು, ಕೆಟ್ಟವರಿಗೆ ಕೆಟ್ಟವರು ಎಂಬ ಅಲಿಖಿತ ನಿಯಮದೊಂದಿಗೆ ಬದುಕುವುದು ಇವರ ಜಾಯಮಾನ.
ದೂರದೂರಿಗೆ ಪಯಣಿಸುವಾಗ ಹೈವೇಗಳಲ್ಲಿ ಸಿಗುವ ಟೋಲ್‌ಗಳಲ್ಲಿ ಹೆಚ್ಚಾಗಿ ಕಂಡು ಬರುವ ಮಂಗಳ ಮುಖಿಯರು ನೆನಪಲ್ಲಿ ಉಳಿಯುವಂತಹವರು. ಟೋಲ್‌ನಲ್ಲಿ ಸಾಲಾಗಿ ನಿಲ್ಲುವ ವಾಹನಗಳತ್ತ ತೆರಳಿ ಹಣವನ್ನು ಬೇಡುವ ಇವರಿಗೆ “ಬೇಡುವ ಕಾಯಕ” ಅನಿವಾರ್ಯವೆ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಇವರ ಬದುಕನ್ನು ಕೆದಕುತ್ತ ಹೋದರೆ ಸಮಾಜವೇ ಈ ಅನಿವಾರ್ಯತೆಗೆ ಇವರನ್ನು ದೂಡಿದೆ ಎನ್ನಿಸುತ್ತದೆ. ಬೆರಳೆಣಿಕೆಯಷ್ಟು ತೃತೀಯ ಲಿಂಗಿಗಳು ಮಾತ್ರ ಸಮಾಜಕ್ಕೆ ಸೆಡ್ಡು ಹೊಡೆದು ಮೌಲ್ಯಯುತ ಜೀವನವನ್ನು ನಡೆಸುತ್ತಿದ್ದಾರೆ.
ಇವರು ತಮ್ಮದಲ್ಲದ ತಪ್ಪಿಗೆ ಇಡೀ ಬದುಕನ್ನು ಅಪಮಾನ, ಅವಹೇಳನ, ಕಳಂಕಗಳನ್ನು ಹಾಸಿ, ಹೊದ್ದುಕೊಂಡೇ ಕಳೆಯುತ್ತಾರೆ. ಪ್ರಾಥಮಿಕವಾಗಿ ತಮ್ಮ ಕುಟುಂಬದ ಸದಸ್ಯರಿಂದಲೇ ಹೀಯಾಳಿಕೆಗೆ ಒಳಗಾಗುವ ಇವರು ಸ್ವತ: ಪಾಲಕರಿಂದಲೇ ಅಸ್ವೀಕೃತಗೊಳ್ಳುತ್ತಾರೆ, ಮೂದಲಿಕೆಗೆ ಒಳಗಾಗುತ್ತಾರೆ. ಶಾಲೆಗಳಲ್ಲೂ ಸಹಪಾಠಿಗಳಿಗೆ ತಮಾಷೆಯ ವಸ್ತುವಾಗುತ್ತಾರೆ. ಪ್ರೌಢಾವಸ್ಥೆಗೆ ಕಾಲಿಟ್ಟಾಗ ಅವರಲ್ಲಾಗುವ ಬದಲಾವಣೆಗಳು ಮತ್ತಷ್ಟು ಇವರನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತವೆ. ಸಮಾಜ ಇವರನ್ನು ನೋಡುವ ದೃಷ್ಠಿಕೋನವೇ ಬೇರೆಯಾಗಿರುತ್ತದೆ. ಆಗ ತಾನೊಬ್ಬ ಮೂರನೆಯ ವ್ಯಕ್ತಿ ಎಂಬ ಭಾವನೆ ಇವರಲ್ಲಿ ಮೂಡ ತೊಡಗುತ್ತದೆ. ಇದರಿಂದ ಅಕ್ಷರಷ: ಇವರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಸ್ನೇಹ, ಪ್ರೀತಿ, ವಿಶ್ವಾಸಕ್ಕಾಗಿ ಇವರ ಮನ ಹಂಬಲಿಸತೊಡಗುತ್ತದೆ. ತನ್ನವರೆನ್ನಿಸಿಕೊಳ್ಳುವವರಿಗಾಗಿ ಸದಾ ಇವರು ಹಾತೊರೆಯುತ್ತಿರುತ್ತಾರೆ. ಇಂಥ ಸಂದರ್ಭಗಳಲ್ಲಿ ಈ ಮೊದಲೇ ಸಂಘಟಿತರಾದ ಇಂಥವರ ಗುಂಪು ಈ ವ್ಯಕ್ತಿಯನ್ನು ತೆರೆದ ಹೃದಯದಿಂದ ಸ್ವಾಗತಿಸುತ್ತದೆ. ಅಲ್ಲಿ ಸೇರ್ಪಡೆಯಾದ ಇವರು ಬೆಚ್ಚನೆಯ, ಸುರಕ್ಷಿತ ಭಾವವನ್ನು ಹೊಂದುತ್ತಾರೆ. ಆಗ ಆತ್ಮ ಗೌರವ, ಆತ್ಮ ಸನ್ಮಾನವನ್ನು ಗಳಿಸಿದ ಸಂತೃಪ್ತಿ ಇವರಿಗೆ ಲಭಿಸುತ್ತದೆ.
ಶಿಕ್ಷಣದಿಂದ ವಂಚಿತರಾಗುವ ಇವರು ಆಯ್ದುಕೊಳ್ಳುವ ಮಾರ್ಗವೆಂದರೆ ಭಿಕ್ಷೆ ಬೇಡುವುದು. ತಮಗಿಷ್ಟವಿದ್ದೊ ಇಲ್ಲದೆಯೋ ತಮ್ಮ ಸಮುದಾಯದವರು ಮಾಡುವ ಕಾಯಕವನ್ನೇ ಜೀವನೋಪಾಯಕ್ಕೆ ಆಯ್ದುಕೊಳ್ಳುವ ಅನಿವರ‍್ಯತೆ ಇವರಿಗೆ ಬಂದೊದಗುತ್ತದೆ. ದುಡಿದು ಉಣ್ಣುವ ಅವಕಾಶವನ್ನು ಸಮಾಜ ಇವರಿಂದ ಕಸಿದುಕೊಳ್ಳುತ್ತದೆ. ಆದಷ್ಟು ತೆರೆ ಮರೆಯಲ್ಲಿ ಬದುಕುವ ಇವರು ಸಮಾಜದ ಜೊತೆ ಬೆರೆಯಲು ಹಿಂಜರಿಯುತ್ತಾರೆ. ಜನರ ಕುಹುಕ ನೋಟ, ಅಪಹಾಸ್ಯಗಳಿಗೆ ಹೆದರಿ ಸಮಾಜದಿಂದ ಹೊರಗೆ ಉಳಿಯುತ್ತಾರೆ.
ತೃತೀಯ ಲಿಂಗಿಗಳು ಹೊಟ್ಟೆ ಪಾಡಿಗಾಗಿ ಅಪಾಯಕರ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇವರ ಶ್ರೇಯೋಭಿವೃದ್ಧಿಗಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ, ಲಾ ಕಮೀಷನ್ ಆಫ್ ಇಂಡಿಯಾ, ಜಾಗತಿಕ ಆರೋಗ್ಯ ಮಂತ್ರಾಲಯ, ರಾಷ್ಟ್ರೀಯ ಮಾನವ ಹಕ್ಕು ಆಯೋಗಗಳು ಕೆಲಸ ಮಾಡುತ್ತಿವೆ. ಕೌಟುಂಬಿಕ ವಾತಾವರಣದಲ್ಲಿದ್ದು, ಶಿಕ್ಷಣವನ್ನು ಪಡೆದು ಎಲ್ಲ ಸವಾಲುಗಳನ್ನು ಎದುರಿಸಿ ಸ್ವಾವಲಂಬಿಗಳಾಗಿ ಬದುಕುತ್ತಿರುವವರು ಬೆರಳೆಣಿಕೆಯಷ್ಟು ತೃತೀಯ ಲಿಂಗಿಗಳು ಮಾತ್ರ. ಸರ್ಕಾರಿ, ಸರಕಾರೇತರ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಕೆಲವರು ಆತ್ಮ ಗೌರವದಿಂದ ಬದುಕುತ್ತಿದ್ದಾರೆ.
ತಳಹದಿಯಲ್ಲೇ ಪಾಲಕರು ಇವರನ್ನು ಅರ್ಥೈಸಿಕೊಂಡು, ಒಪ್ಪಿಕೊಳ್ಳಬೇಕು. ಅಂದಾಗ ಮಾತ್ರ ಇವರು ಕುಟುಂಬದಲ್ಲಿ ನೆಲೆ ನಿಂತು ಯೋಗ್ಯ ಶಿಕ್ಷಣವನ್ನು ಹೊಂದಿ ಸಮಾಜ ಮುಖಿಗಳಾಗಲು ಸಾಧ್ಯ. ಇಲ್ಲದಿದ್ದಲ್ಲಿ ಕುಟುಂಬದಿಂದ ಹೊರಗುಳಿದು ಅನೈತಿಕ ಚಟುವಟಿಕೆಗಳಲ್ಲಿ ತೊಡಗುವ ಇಲ್ಲವೆ ಬೇಡುವ ಕಾಯಕಕ್ಕೆ ಇಳಿಯುತ್ತಾರೆ. ಆತ್ಮ ಗೌರವದೊಂದಿಗೆ ಬದುಕಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಸಮಾಜ ಇದಕ್ಕೆ ಸಹಕರಿಸುವ ಮನಸ್ಸು ಮಾಡಬೇಕು.
-ಗೌರಿ ಚಂದ್ರಕೇಸರಿ.
