' ಒಗಟು ' ಜನಪದ ಸಾಹಿತ್ಯದ ಒಂದು ಪ್ರಕಾರ. ಇವು ಚಿಕ್ಕವಾದರೂ ಬುದ್ಧಿಜನ್ಯವಾದವು. ಆದ್ದರಿಂದ ಕಬ್ಬಿಣದ ಕಡಲೆಗಳು! ಇವಕ್ಕೆ ಒಡಪು, ಮುಂಡಿಗೆ ಮುಂತಾದ ಹೆಸರುಗಳು ಇವೆ ಎಂಬುವರು. ಇವು ಮೆದುಳಿಗೆ ಮೇವು, ಜಾಣತನಕ್ಕೆ ಸವಾಲು! ಒಗಟು ಹಾಕುವುದು ಎಂದರೆ ಒಗಟನ್ನು ಬಿಡಿಸಲು ಇನ್ನೊಬ್ಬರ ಜಾಣತನಕ್ಕೆ ಸವಾಲು ಹಾಕುವುದು. ಒಂದು ವಸ್ತುವಿನ ಗುಣ, ರೂಪ, ನಡೆ, ಆಕಾರ, ವರ್ತನೆ, ಬಣ್ಣ, ವಾಸನೆ ಮುಂತಾದುವನ್ನು ಇನ್ನೊಂದು ವಸ್ತುವಿನ ಮೂಲಕ ವಿಶೇಷವಾಗಿ ವರ್ಣಿಸಿ ಆ ಒಂದು ವಸ್ತುವನ್ನು ಪತ್ತೆಹಚ್ಚುವಂತೆ ಸವಾಲು ಎಸೆಯುವಂತಹವನ್ನು ಒಗಟುಗಳು ಎನ್ನಬಹುದು. ಇಲ್ಲಿ ಉಪಮಾನ ವಾಚ್ಯ ವಾಗಿರುತ್ತದೆ ಅದರ ಆಧಾರದ ಮೇಲೆ ಗೌಪ್ಯವಾಗಿರುವ ಉಪಮೇಯವನ್ನು ಪತ್ತೆಹಚ್ಚುವುದು. ಒಗಟುಗಳಿಗೆ ವೇದಗಳಷ್ಟು ಪುರಾತನ ಕಾಲದ ಇತಿಹಾಸ ಇದೆ ಎನ್ನುವರು. ರಾಮಾಯಣ ಮಹಾಭಾರತಗಳಲ್ಲಿ, ಎಲ್ಲಾ ಧರ್ಮ ಗ್ರಂಥಗಳಲ್ಲಿ ಇವೆ ಎನ್ನುವರು. ಹನ್ನೆರಡನೆಯ ಶತಮಾನದ ವಚನಗಳಲ್ಲಿ, ಸರ್ವಜ್ಞನ ವಚನಗಳಲ್ಲಿ ಕಾಣಬಹುದು. ಅಲ್ಲಮನ ಬೆಡಗಿನ ಅನೇಕ ವಚನಗಳು ಒಗಟುಗಳೇ ಆಗಿವೆ. ವಿದ್ವಾಂಸರು ತಮ್ಮ ವಿದ್ವತ್ತಿನ ಪ್ರದರ್ಶನ ಮಾಡಲು ಸಹ ತಮ್ಮ ಬರಹಗಳಲ್ಲಿ ಸೃಜಿಸಿರುವರು. ವಚನ, ಪದ್ಯ ಬೇರೆ ಬೇರೆ ರೂಪಗಳ ಇರುವುದನ್ನು ಕಾಣಬಹುದು. ಬೇರೆ ಬೇರೆ ದೇಶದ ಸಾಹಿತ್ಯದಲ್ಲಿ ಸಹ ಒಗಟು ಇವೆ ಎಂಬುವರು. ಗ್ರೀಕರ ಸ್ಪರ್ದೆ ಮೇಳಗಳಲ್ಲಿ ಹೆಚ್ಚು ಬಳಕೆಯಾಗಿವೆ ಎಂಬುವರು. ಕ್ರೀಡೆ, ಮನರಂಜನೆ, ಹಾಸ್ಯವನ್ನು ಎಲ್ಲಾ ಮಾನವರು ಬಯಸುವುದರಿಂದ ಮಾನವ ಜನಾಂಗ ಇರುವ ಕಡೆಗಳಲ್ಲೆಲ್ಲಾ ಇವು ಇರಲು ಸಾಧ್ಯ. ಮಾನವ ಯಾವಾಗ ಸಂವಹನ ಮಾಡತೊಡಗಿದನೋ ಆಗಲೇ ಒಗಟುಗಳು ಹುಟ್ಟಿರುವ ಸಾಧ್ಯತೆ ಹೆಚ್ಚು. ಜನಜನಿತವಾಗಿರುವ ಜಾನಪದ ಒಗಟುಗಳೇ ಜನರಿಗೆ ಚಿರಪರಿಚಿತ. ಇವೇ ಹಳ್ಳಿಯ ಜನರು ನಾಲಿಗೆಯಲ್ಲಿ ನಲಿದದ್ದು. ಅವರಿಂದಲೇ ಹೆಚ್ಚು ಸೃಷ್ಟಿಯಾದದ್ದು. ಅವೇ ಹೆಚ್ಚು ಜನರಿಗೆ ತಿಳಿದಿರುವುದು. ಆಧುನಿಕ ಮನರಂಜನಾ ಮಾಧ್ಯಮಗಳಿಂದ ಮೂಲೆಗುಂಪಾಗಿದ್ದ ಅವು ಇಂದು ಅವುಗಳಿಂದಲೇ ಪರಿಚಿತವಾಗುತ್ತಿವೆ. ಆದರೆ ಹಿಂದಿನಂತೆ ಇಂದು ಜನರ ಜೀವನದಲ್ಲಿ ಜೀವಂತವಾಗಿಲ್ಲ.
ಸಾಮಾನ್ಯವಾಗಿ ಎಲ್ಲಾ ವಿಷಯಗಳು ಒಗಟುಗಳಿಗೆ ವಸ್ತು ಆಗಿವೆ. ಸಮಾನ ಮನಸ್ಕರ, ಸಮಾನ ವಯಸ್ಕರಲ್ಲಿ ಒಗಟು ಒಡೆಯುವ ಆಟವೋ ಸ್ಪರ್ದೆಯೋ ಹೆಚ್ಚಾಗಿ ನಡೆಯುತ್ತಿದ್ದ ಕಾರಣ ಅವರಿಗೆ ಪರಿಚಿತ ಎನಿಸುವ ಅವರು ವಾಸಿಸುವ ಪರಿಸರದ ವಿಷಯ, ವಸ್ತುಗಳೇ ಅಲ್ಲಿ ಇದ್ದಿರಬೇಕು, ಇರುತ್ತಿದ್ದವು. ವಿವಿಧ ವಯೋಮಾನದವರ ಗುಂಪುಗಳಲ್ಲಿ ಸಹ ಈ ಮನರಂಜನೆ ಏರ್ಪಟ್ಟಿರಬಹುದು. ಜೀವನಾನುಭವ ಮತ್ತು ಜಾಣ್ಮೆ ಒಗಟು ಎಸೆಯಲು, ಒಡೆಯಲು, ಒಗಟು ಸೃಷ್ಟಿಸಲು ಅನುಕೂಲಕರ.
ಕೆಲವು ಒಗಟು ಕಬ್ಬಿಣದ ಕಡಲೆಯಾದರೆ, ಹಲವು ಸರಳ ಎನಿಸುವುವು, ಇನ್ನು ಕೆಲವು ಊಹೆಗೆ ನಿಲುಕದಾಗುವುವು. ಕೆಲವರಿಗೆ ಅವುಗಳ ಉತ್ತರ ಪರಿಚಯವೇ ಇಲ್ಲದಂತೆ ಆಗಿರಬಹುದು. ಮೂರು ಪದಗಳಿದ್ದರೆ ಸಾಕು ಒಗಟು ಆಗಬಹುದು! ಊರಿಗೆಲ್ಲಾ ಒಂದೇ ಕಂಬಳಿ " ಅಂದರೆ ಆಕಾಶ! ಒಗಟು ಅಷ್ಟು ಚಿಕ್ಕದು! " , ಬಾವಿ ಸುತ್ತ ಬೆಳ್ಳಿ ಗೂಟ ( ಬಂಡೆಗಲ್ಲು ) " ಅಂದರೆ ಹಲ್ಲುಗಳ ಸಾಲು. ಹಿಂದೆ ತೆರೆದ ಬಾವಿಗಳು ವೃತ್ತಾಕಾರವಾಗಿರುತ್ತಿದ್ದವು. ಕೆಲವು ಕಡೆ ತೆರೆದ ಬಾವಿಗಳ ಸುತ್ತ ತಡೆ ಗೋಡೆಗಳನ್ನು ಬಂಡೆಗಲ್ಲುಗಳ ನೆಟ್ಟು ನಿರ್ಮಿಸಿರುತ್ತಿದ್ದರು. ಒಗಟಿನಲ್ಲಿ ಅವನ್ನು ಬೆಳ್ಳಿ ಗೂಟ ಎಂದು ಹಲ್ಲುಗಳಿಗೆ, ಬಾಯಿಯನ್ನು ಬಾವಿಗೆ ಹೋಲಿಸಿದೆ. ಗುಡ್ಡದ ಹಿಂದೆ ಗುಂಡು ಕಲ್ಲು " ಅಂದರೆ ತುರುಬು . ಹೀಗೆ ಮೂರೂ, ನಾಲ್ಕು ಪದಗಳಿಂದ ಸಹ ಒಗಟು ರಚನೆಯಾಗಿವೆ.
ಬಹಳ ಜನರಿಗೆ ಪರಿಚಯವಿರುವುದು ಜಾನಪದ ಒಗಟುಗಳು. ಬಿಡುವಿನ ಸಮಯದಲ್ಲಿ, ಹೊರಸಂಚಾರ, ಪ್ರವಾಸ ಹೋದಾಗ, ಇನ್ನೂ ಬೇರೆ ಸಂದರ್ಭಗಳಲ್ಲಿ ಬೇಸರ ನೀಗಲು, ಕಾಲವನ್ನು ಲವಲವಿಕೆಯಿಂದ ಕಳೆಯಲು, ಮೆದುಳನ್ನು ಚುರುಕಾಗಿರಿಸಿಕೊಳ್ಳಲು, ಖುಷಿಯಾಗಿರಲು, ಪರಸ್ಪರರ ಬುದ್ದಿವಂತಿಕೆಯನ್ನು ಪರೀಕ್ಷಿಸಲು ಒಗಟಿನ ಆಟವನ್ನು ಆಡುತ್ತಿದ್ದರು. ಜೂಜು, ಸ್ಪರ್ಧೆ, ಪ್ರತಿಭೆ ಪ್ರದರ್ಶನ ಮುಂತಾದವುಗಳಿಗೆ ಇವುಗಳ ಬಳಸಿರಬಹುದು. ಮೊದಲು ಒಬ್ಬ ( ಮೊದಲನೆಯವ ) ಎದುರಾಳಿಗೆ ( ಎರಡನೆಯವನಿಗೆ ) ಒಗಟು ಹಾಕಿ ಒಡೆಯುವ ಸವಾಲು ಹಾಕುವುದು. ಒಡೆಯುವುದು ಎಂದರೆ ಉತ್ತರ ಹೇಳುವುದು ಅಂತ ಅರ್ಥ. ಒಗಟನ್ನು ಒಡೆಯಲು ಎದುರಾಳಿ ವಿಫಲನಾದರೆ ಅವನು ತನ್ನ ಎದುರಾಳಿಗೆ ತನ್ನ ಭತ್ತಳಿಕೆಯಲ್ಲಿರುವ ಒಗಟುಗಳ ಎದುರಾಳಿ ವಿಫಲವಾಗುವವರೆಗೆ ಎಸೆಯುವುದು. ಮೊದಲನೆಯವ ಯಾವುದೋ ಒಂದು ಒಗಟನ್ನು ಒಡೆಯಲು ವಿಫಲನಾದಾಗ ತಾನು ಎಸೆದಿದ್ದ ಒಗಟಿಗೆ ಉತ್ತರ ಹೇಳಿ ಮತ್ತೆ ಅವನ ಎದುರಾಳಿ ( ಎರಡನೆಯವ ) ವಿಫಲನಾಗುವವರೆಗೆ ಒಗಟಿನ ಬಾಣ ಎಸೆಯುವುದು ಅವನು ವಿಫಲನಾದಾಗ ಅವನು ಒಡೆಯದ ಒಗಟಿನ ಉತ್ತರ ಹೇಳಿ ಮತ್ತೆ ಒಗಟುಗಳು ಎಸೆಯುವುದು. ಹೀಗೆ ಮುಂದುವರಿಯುವುದು ಒಗಟಿನ ಆಟ. ಎರಡು ಗುಂಪುಗಳ ನಡುವೆ ಸಹ ಹೀಗೆ ಆಡಬಹುದು.
ಯಾವ ವಸ್ತುವಿನ ಮೂಲಕ ಒಂದು ವಸ್ತುವನ್ನು ವರ್ಣಿಸುತ್ತಿರುತ್ತಾರೋ ಆ ವಸ್ತುವಿಗೆ ಸರಿಯಾಗಿ, ಹೆಚ್ಚು ಅನ್ವಯವಾಗುವಂತೆ ವರ್ಣಿಸಿದರೆ, ಹೋಲಿಸಿದರೆ ಅದು ಉತ್ತಮ ಒಗಟಾಗುವುದು. ಒಗಟಿಗೆ ಆದಷ್ಟು ಸುಲಭವಾಗಿ ಉತ್ತರ ಕಂಡುಕೊಳ್ಳಲು ಸಹ ಸಾಧ್ಯವಾಗುವುದು. " ತಾಯಿ ತರ್ಕಿ ಮಗಳು ಬೋಡಿ, ಮೊಮ್ಮಗಳು ಕಮಗಡ್ಲೆ " ಈ ಒಗಟಿನ ಮೂಲಕ ಒಗಟಿನಲ್ಲಿ ತಿಳಿಸಿದ ಗುಣಗಳನ್ನು ಹೊಂದಿದ ವಸ್ತುವನ್ನು ಕಂಡುಹಿಡಿಯುವುದೇ ಒಗಟಿನ ಸವಾಲು! ತರಕಿಯಾಗಿರುವ ತಾಯಿಯ ಹೊಟ್ಟೆಯಲ್ಲಿ ಬೋಡು ತಲೆಯ ಮಗಳು ಇರುವುದು, ಆ ಬೋಡು ಮಗಳ ಬಸಿರಿನಲ್ಲಿ ಕಮಗಡಲೆಯಂತಹ ಮೊಮ್ಮಗಳು ಇರುವಂತಹುದು ಯಾವುದಿದೆ ಅಂತ ಬಿಡದೆ ಧ್ಯಾನಿಸಿದರೆ ಲೋಕಾನುಭವ ಇದ್ದವರಿಗೆ, ಅದರಲ್ಲೂ ಹಣ್ಣುಗಳ ಬಗ್ಗೆ ಹೆಚ್ಚು ತಿಳಿದವರಿಗೆ ಉತ್ತರ ದೊರೆಯುವುದು. ಮುಳ್ಳುಗಳಂತಹ ಮೈ ಇರುವ ' ಹಲಸಿನ ಹಿಡಿ ಹಣ್ಣು' ತರಕಿಯಂತಹ ತಾಯಿಯಾದರೆ, ಆ ಹಲಸಿನ ಬಸಿರಲ್ಲಿರುವ ' ಹಲಸಿನ ನುಣುಪಾದ ತೊಳೆ ' ಬೋಡಿಯಂತಹ ಮಗಳಾದರೆ, ಆ ತೊಳೆಯ ಬಸಿರಲಿ ಇದ್ದು ಘಮಘಮಿಸುವ ಕಡಲೆಯಂತಹ ' ಹಲಸಿನ ಬೀಜವೇ' ಮೊಮ್ಮಗಳು! ಸರಿಯಾದ ಅನ್ವಯ, ಸೊಗಸಾದ ಹೋಲಿಕೆ ಮತ್ತು ವರ್ಣನೆ! ಉತ್ತಮ ಹೋಲಿಕೆ ವರ್ಣನೆಯೇ ಒಗಟಿನ ಜೀವಾಳ!
ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಒಗಟಿದೆ ಅದನ್ನು ಗಮನಿಸೋಣ. " ಮುಳ್ಳಮ್ಮನ ಹೊಟ್ಯಾಗ ಮೂರು ನೂರು ಮಕ್ಕಳು " - ಅಂಗಂದರೆ ಹಲಸಿನಹಣ್ಣು, ಮತ್ತು ತೊಳೆಗಳು. ಹಲಸಿನ ಮೇಲ್ಮೈ ರಚನೆ ಮುಳ್ಳು ಮುಳ್ಳುಗಳಂತಿರುವುದರಿಂದ ಹಲಸು ಮುಳ್ಳಮ್ಮ. ಮುಳ್ಳಮ್ಮನ ಹೊಟ್ಟೆ ಅಂದರೆ ಹಲಸಿನ ಹಣ್ಣಿನ ಒಳ ಭಾಗ. ಮೂರು ನೂರು ಮಕ್ಕಳು ಅಂದರೆ ಒಳಗಿರುವ ಬಹಳ ಹಲಸಿನ ತೊಳೆಗಳು.
ಇಲ್ಲಿ ಒಂದೇ ವಸ್ತುವಿನ ಬಗ್ಗೆ ಇಬ್ಬರು ಎರಡು ಒಗಟುಗಳ ಕಟ್ಟುವಿಕೆ, ವರ್ಣನೆ, ಹೋಲಿಕೆಯ ನಡುವಿನ ವ್ಯತ್ಯಾಸ, ಒಗಟುಗಳ ಸೊಗಸು, ಅವನ್ನು ಸೃಜಿಸಿದವನ ಹೋಲಿಸುವ, ವರ್ಣಿಸುವ ಸಾಮರ್ಥ್ಯ ಅರಿಯಬಹುದು.
ಒಗಟುಗಳ ಅರ್ಥ ವಿವರಣೆಯ ಅವಶ್ಯಕತೆ :
ಬದುಕು ನಿಂತ ನೀರಲ್ಲ. ಸದಾ ಹರಿಯುವ ನದಿ. ಬದಲಾವಣೆ ಜಗದ ನಿಯಮ ! ಬದುಕು ಬದಲಾಗುತ್ತದೆ. ಬದುಕಿನೊಂದಿಗೆ ವೇಷಭೂಷಣ, ಅವರು ಬಳಸುವ ವಸ್ತುಗಳು, ಮಾಡುವ ಉದ್ಯೋಗ, ಸಂಬಂಧಿಸಿದ ವಸ್ತುಗಳು, ನಡೆ - ನುಡಿ ಎಲ್ಲಾ ಬದಲಾಗುತ್ತಿರುತ್ತದೆ. ಹೊಸ ಹೊಸ ಆವಿಷ್ಕಾರಗಳಿಂದ ಹೊಸ ಹೊಸ ವಸ್ತುಗಳ ಆಗಮನದಿಂದ ಹಳೆಯ ವಸ್ತುಗಳು, ಕೆಲ ಪದಗಳು, ಉಡುಗೆ - ತೊಡುಗೆಗಳು, ಮನೆಯ, ಹೊಲದಲ್ಲಿನ ವಸ್ತುಗಳು, ಉಪಕರಣಗಳು ಬಳಸದಂತಾಗಿ ಮೂಲೆ ಗುಂಪಾಗಿ ಮರೆಯಾಗುವುವು.. ಒರಳು, ಒನಕೆ, ಬೀಸುವಕಲ್ಲು, ಗುಂಡು ಬಂಡೆ, ಬಿತ್ತಲು ಬಳಸುವ ಮರದ ಕೂರಿಗೆ, ನೇಗಿಲು, ಕುಂಟೆ, ಎತ್ತಿನ ಗಾಡಿ, ಸೂಲಗಿತ್ತಿಯರು ಮುಂತಾದವು ಕಣ್ಮರೆಯಾದಂತೆ ಅನೇಕ ವಸ್ತುಗಳು ಕಣ್ಮರೆಯಾಗುವುವು. ಆಗ ಅವುಗಳನ್ನು ಆದರಿಸಿ ಸೃಷ್ಟಿಯಾದ ಒಗಟುಗಳು ಅರ್ಥವಾಗುವುದು, ಅವುಗಳ ಕಲ್ಪಿಸಿಕೊಳ್ಳುವುದು, ಅನ್ವಯಿಸುವುದು, ವರ್ಣನೆಗಳ ಅರ್ಥ ಮಾಡಿಕೊಳ್ಳುವುದು ಕಷ್ಟ. ಸ್ವಲ್ಪ ವಿವರಣೆಗಳಿದ್ದರೆ ಸ್ವಲ್ಪನಾದರೂ ಅರ್ಥ ಆಗುವುವು. ಅಷ್ಟೇ ಅಲ್ಲ ಹಳ್ಳಿ, ಕೃಷಿ, ಮೀನುಗಾರಿಕೆ, ಮರುಭೂಮಿ, ಮಲೆನಾಡು, ಬಯಲು ಸೀಮೆ ಮುಂತಾದ ಕೆಲವು ಪ್ರದೇಶಗಳಿಗೆ ಸೀಮಿತವೂ ಸಂಬಂಧಿಸಿದವೂ ಆದ ಒಗಟುಗಳು ಆ ಪರಿಸರದಿಂದ ದೂರ ಇದ್ದವರಿಗೆ ಅರ್ಥ ಆಗವು. ವಿವರಣೆ ಅನುಕೂಲಕರ. ವೀಡಿಯೋ ಇದ್ದರಂತೂ ತುಂಬಾ ಅನುಕೂಲ. ಆ ದೃಷ್ಟಿಯಿಂದ ವಿವರಣೆ ಅವಶ್ಯಕ ಅನಿಸಿತು.
ಒಗಟು ೧ " ತಂದೆ ಶೆಟ್ಟಿ ಮಗ ಸಂಸಾರಿ ಮೊಮ್ಮಗ ಪೋಲಿ "
ಉತ್ತರ : ತಂದೆ ಶೆಟ್ಟಿ ‘ ಹಂಡೆ ‘
ಮಗ ಸಂಸಾರಿ ‘ ಕೊಡ ‘
ಮೊಮ್ಮಗ ಪೋಲಿ ‘ ಚಂಬು ‘
ಹಿಂದೆ ಎಲ್ಲರ ಅಡುಗೆ ಮನೆಯಲ್ಲಿ ಅಡುಗೆ ಮಾಡಲು ಮತ್ತು ಕುಡಿಯಲು ಬೇಕಾಗುವ ನೀರನ್ನು ಒಂದು ಮಣ್ಣಿನದೋ ಇಲ್ಲಾ ತಾಮ್ರದ್ದೋ ದೊಡ್ಡ ಪಾತ್ರೆಯಲ್ಲಿ ಸಂಗ್ರಹಿಸಿಡುತ್ತಿದ್ದರು. ಆ ಪಾತ್ರೆಯನ್ನು ಹಂಡೆ ಎಂದು ಕರೆಯುತ್ತಿದ್ದರು. ದೊಡ್ಡ ಗಾತ್ರದ ದುಂಡಾಕಾರದ ಪಾತ್ರೆಗಳನ್ನು ಹಂಡೆ ಎನ್ನುವರು. ಹಿಂದೆಲ್ಲಾ ಅವಿಭಕ್ತ ಕುಟುಂಬಗಳು ಇದ್ದುದರಿಂದ ಕುಡಿಯಲು, ಅಡುಗೆ ಮಾಡಲು ಬಳಸಲು ಹೆಚ್ಚು ನೀರು ಬೇಕಾಗುತ್ತಿತ್ತು ಸಂಗ್ರಹಿಸಲು ದೊಡ್ಡ ಹಂಡೆ ಇಟ್ಟುಕೊಂಡಿದ್ದರು. ಕೆಲವರ ಮನೆಯಲ್ಲಿ ಅವು ಇನ್ನೂ ಇವೆ. ಬಹುತೇಕರ ಮನೆಗಳಲ್ಲಿ ಅವುಗಳ ಜಾಗವನ್ನು ವಾಟರ್ ಕ್ಯಾನುಗಳು , ವಾಟರ್ ಪ್ಯೂರಿಪೈಯರುಗಳು ಆಕ್ರಮಿಸಿವೆ. ಹಿಂದೆ ಕಿರಾಣಿ ಅಂಗಡಿ ತೆರೆದು ಜನರಿಗೆ ದಿನನಿತ್ಯದ ವಸ್ತುಗಳ ಮಾರಿ ಲಾಭ ಗಳಿಸಿ ಹಣವನ್ನು ಕೂಡಿಡುತ್ತಿದ್ದವರು ಶೆಟ್ಟರು ಎಂಬ ಜನಾಂಗ. ತಂದೆ ತಾನು ಮನೆಮಂದಿಗಾಗಿ ದುಡಿದ ಹಣದ ಜೊತೆಗೆ ದುಡಿಯುವ ಮನೆ ಸದಸ್ಯರ ಹಣವನ್ನೂ ಮನೆಮಂದಿಯ ಖರ್ಚಿಗೆ ಜೋಪಾನವಾಗಿ ಸಂಗ್ರಹಿಸಿಟ್ಟುಕೊಂಡಿರುತ್ತಿದ್ದರು. ಶೆಟ್ಟರು ಸಂಪತ್ತನ್ನು ಕೂಡಿಟ್ಟಂತೆ ಹಂಡೆ ನೀರನ್ನು ಸಂಗ್ರಹಿಸಿಡುತ್ತಿದ್ದರಿಂದ ಹಂಡೆ ಕುಟುಂಬಕ್ಕಾಗಿ ಕೂಡಿಡುವ ತಂದೆಯ ಸಂಕೇತವಾಗಿ ಶೆಟ್ಟರನ್ನು ಪ್ರತಿನಿಧಿಸುವುದು! ಸಂಸಾರದ ಜವಾಬ್ದಾರಿ ಹೊತ್ತವರು ಸಂಸಾರಕ್ಕೆ ಬೇಕಾದ ವಸ್ತುಗಳ ಮನೆಗೆ ದುಡಿದು ತರುವಂತೆ ಮನೆ ಮಂದಿಗೆ ಬೇಕಾದ ನೀರನ್ನು ಕೊಡಗಳು ತರುತ್ತಾ ಹಂಡೆಯನ್ನು ತುಂಬಿಸುವುದರಿಂದ ' ಕೊಡ ' ಉತ್ತಮ ಸಂಸಾರಿಕ ' ಮಗನ ' ಸಂಕೇತ! ಮನೆಯಲ್ಲಿರುವ ಸಂಪತ್ತನ್ನೆಲ್ಲಾ ಹಾಳು ಮಾಡುವ ಪೋಲಿಗಳಂತೆ ಹಂಡೆಯಲ್ಲಿ ಸಂಗ್ರಹವಾಗಿರುವ ನೀರನ್ನು ಚಂಬು ನಿರಂತರವಾಗಿ ಖಾಲಿ ಮಾಡುವುದರಿಂದ ' ಚಂಬು ' ಪೋಲಿಯಾದ ಮೊಮ್ಮಗನ ಸಂಕೇತವಾಗುವುದು. ಇಲ್ಲಿ ಒಂದು ಕುಲದ ವೃತ್ತಿ, ಶೆಟ್ಟಿ, ಸಂಸಾರಿ, ಪೋಲಿ ಎನ್ನುವ ಹೋಲಿಕೆ ತುಂಬಾ ಸುಂದರ, ಅರ್ಥಗರ್ಭಿತ. ಆರು ಪದಗಳ ಈ ಒಗಟು ಎಷ್ಟು ವಿವರಣೆ ಬಯಸುತ್ತದೆಯಲ್ಲವೇ? ಹಂಡೆ ಈಗ ಆದರ ಜಾಗದಿಂದ ಮಾಯವಾಗಿದೆ, ಕೊಡ ಸಹ ಆ ಜಾಗದಿಂದ ಮಾಯವಾಗುತ್ತಿದೆ. ಉತ್ತಮ ಒಗಟು.
ಒಗಟು ೨ ” ಅಗಟಕ ಬುಗಟಕ ನಿನ್ನ ನೋಡಿ ನನ್ನ ಜೀವ ಟಕಟಕ “
ಇದು ಒಗಟಾ ? ಇದು ಕನ್ನಡ ಭಾಷೆಯ ಒಗಟಾ ? ಇದು ಕೇವಲ ಸಜಾತಿ ಅಕ್ಷರಗಳ ಕುಣಿತವಾ ? ಬರಿ ಒಂದೇ ರೀತಿಯ ಶಬ್ದಗಳ ರಿಂಗಣವಾ? ಎಂದು ತಲೆ ಕೆರೆದುಕೊಳ್ಳುವಂತೆ ಈ ಒಗಟನ್ನು ಓದಿದ, ಆಲಿಸಿದ ಕೆಲವರಿಗೆ ಅನಿಸಬಹುದು. ಇದು ಅಚ್ಚ ಕನ್ನಡದ ಸ್ವಚ್ಚವಾದ ಗ್ರಾಮ್ಯ ಭಾಷೆಯ, ಗ್ರಾಮೀಣ ಜಾಣನೊಬ್ಬ ಸೃಜಿಸಿದ ಒಗಟು. ವಸ್ತುವಿನ ಆಕಾರದ ರಚನೆ, ಆ ವಸ್ತುವಿನ ರುಚಿ, ಆ ವಸ್ತುವನ್ನು ಕಂಡಾಗ ಆ ಜೀವ ಅದಕ್ಕೆ ಮಿಡಿಯುವ ಪ್ರತಿಕ್ರಿಯೆಯ ರೀತಿಯನ್ನು ಭಾವಾಭಿನಯದಿಂದ ಸೊಗಸಾಗಿ ಅಭಿವ್ಯಕ್ತಿಸುವ ಒಗಟಾಗಿದೆ.
ಈ ಒಗಟಿಗೆ ಉತ್ತರ ' ಹುಣಸೆ ಫಲ ' ! ನಗರದ ಅನೇಕರು ಹುಣಸೇಹಣ್ಣು ತಿನ್ನುತ್ತಾರಾಗಲಿ ಹುಣಸೇಮರವನ್ನಾಗಲಿ, ಹುಣಸೇಕಾಯಿಯನ್ನಾಗಲಿ, ಹುಣಸೇ ಬರಲಿರುವ ಮರವನ್ನಾಗಲಿ ನೋಡಿದರೂ ಅದನ್ನು ಗುರುತಿಸಲಾರರು. ಏಕೆಂದರೆ ಅವರು ಸಿಪ್ಪೆ, ಬೀಜ, ನಾರು ತೆಗೆದು ಉಂಡೆ ಕಟ್ಟಿದ ಅಥವಾ ಬೇರೆ ಬೇರೆ ಗಾತ್ರ ಮತ್ತು ಆಕಾರದಲ್ಲಿ ಸಂಗ್ರಹಿಸಿದ ಹಣ್ಣನ್ನು ನೋಡಿರುತ್ತಾರೆ ವಿನಃ ಮರದಲ್ಲಿದ್ದ ಅರ್ಧ ಚಂದ್ರಾಕಾರದ ಹುಣಸೇ ಹಣ್ಣನ್ನಲ್ಲ! ಅಪರೂಪಕ್ಕೆ ಕೆಲವರು ಕಾಯಿಗಳು ಇರುವ ಮರವನ್ನು ಕಂಡಾಗ, ಮರದಡಿ ಹೋದಾಗ ಕೆಳಗೆ ಬಿದ್ದು ಫಲ ಕಂಡಾಗ ಮಾತ್ರ ಕೆಲವರು ಗುರುತಿಸಿ ಇದು ಹುಣಸೇ ಮರವಾ ಎಂದು ಅಚ್ಚರಿಗೊಂಡು ಉದ್ಘರಿಸಿಯಾರು. ಈ ಒಗಟು ಹುಣಸೇಕಾಯಿಯ ಮೇಲ್ಮೈ ರಚನೆ ಮತ್ತು ಅದರ ರುಚಿಯನ್ನು ಅಭಿವ್ಯಕ್ತಿಸುವುದರಿಂದ ಹುಣಸೇಕಾಯಿಯನ್ನು ಬಲ್ಲವರು ತಕ್ಷಣ ಊಹಿಸುವರು. ನೋಡಿರದವರು ಅದನ್ನು ನೋಡಿದಾಗ ತಕ್ಕಮಟ್ಟಿಗೆ ಸರಿಯಾಗಿ ಒಗಟನ್ನು ಅರ್ಥಮಾಡಿಕೊಳ್ಳಬಹುದು. . ಅಗಟು ಬುಗಟು ಇವು ಹುಣಸೇ ಕಾಯಿಯ ಮೇಲಿರುವ ಬುಗುಟುಗಳ ರಚನೆಯನ್ನು ಸೂಚಿಸಿದರೆ, ಟಕಟಕ ಎಂಬುದು ದ್ವಾರಹುಣಸೆಕಾಯಿಯ ( ಹಣ್ಣಾಗುವ ಪೂರ್ವದ ಸ್ಥಿತಿ ) ರುಚಿಯನ್ನು ಮತ್ತು ಅದನ್ನು ತಿನ್ನಲು ಜೀವ ಸ್ಪಂದಿಸುವ ಬಗೆಯನ್ನು ಸೂಚಿಸುವುದು. ಹುಣಸೇ ಕಾಯಿಗಳು ಸಾಮಾನ್ಯವಾಗಿ ಎತ್ತಿನ ಲಾಳಾಕಾರವಾಗಿರುತ್ತವೆ. ಅಷ್ಟೇ ಅಗಲ, ಕೆಲವು ಅಷ್ಟು, ಕೆಲವು ಅದಕ್ಕೂ ಕಡಿಮೆ, ಕೆಲವು ಅದಕ್ಕೂ ಹೆಚ್ಚು ಉದ್ದ ಇರುವುವು. ಸ್ವಲ್ಪ ಹೆಚ್ಚೂ ಕಡಿಮೆ ಅರ್ಧ ಇಂಚಿನಷ್ಟು ದಪ್ಪ ಇರಬಹುದು.
ಚಿಕ್ಕವರಿದ್ದಾಗ ದ್ವಾರಹುಣಿಸೆಗೆ ತಕ್ಕಷ್ಟು ಉಪ್ಪು ಕಾರ ಹಾಕಿ ಕುಟ್ಟಿ ಹದವಾದಮೇಲೆ ಅದನ್ನು ದುಂಡಗೆ ಗೋಲಿಯಾಕಾರದ ಉಂಡೆ ಮಾಡಿ ಅದಕ್ಕೆ ಒಂದು ಮೂರಿಂಚಿನ ಕಡ್ಡಿಯನ್ನು ಸಿಕ್ಕಿಸಿಕೊಂಡು ಬಹಳಹೊತ್ತು ನೆಕ್ಕುತ್ತಾ ಸವಿಯುತ್ತಿದ್ದೆವು. ಅದು ಇಂದು ಕುಟ್ಟುಂಡಿ ಅಂತ ಹೆಸರಾಗಿ, ಫ್ಯಾಕ್ಟರಿಗಳಲ್ಲಿ ತಯಾರಾಗುತ್ತಿರುವುದು, ಎಲ್ಲಾ ಅಂಗಡಿಗಳಲ್ಲೂ ದೊರೆಯುವಂತಾಗಿರುವುದು ಅದರ ರುಚಿಗೆ ಎಲ್ಲರೂ ಮನಸೋತುದರ ಸಂಕೇತ! ನಿನ್ನ ನೋಡಿ ನನ್ನ ಜೀವ ಟಕಟಕ ಅಂತ ಹೇಳಿರುವುದು ಅದರ ರುಚಿಗೆ ಈ ಜೀವ ಮಿಡಿಯುವ ಪರಿ!
ಆಕಾಶದಲ್ಲಿ ಕೊಡಲಿಗಳು ತೇಲುತ್ತಿವೆ. - ಇದು ಒಂದು ಒಗಟು. ಇದರ ಉತ್ತರ ಸಹ ಹುಣಸೇ ಮರದಲ್ಲಿರುವ ಹುಣಸೇಕಾಯಿಗಳು. ಆದರೆ ಒಗಟು ಎಲ್ಲೋ ತಪ್ಪಿದಂತೆ ಅನಿಸುತ್ತದೆ. ಕೊಡಲಿಗಳು ಬದಲಾಗಿ ಕುಡುಗೋಲುಗಳು ಅಂತ ಆಗಬೇಕಿತ್ತೇನೋ. ಏಕೆಂದರೆ ಹುಣಸೇಕಾಯಿ ಆಕಾರ ಕುಡುಗೋಲಿನ ಆಕಾರದಂತೆ ಇರುತ್ತದೆ. ಕುಡುಗೋಲಿನ ಬದಲಾಗಿ ಕೊಡಲಿ ಎಂದು ಬರವಣೆಗೆ ದೋಷವೂ ಆಗಿರಬಹುದು.
ಅಂಬರದಾಗೆ ಅಪ್ಪಣ್ಣ, ಕೆಳಗೆ ಬಿದ್ದರೆ ತುಪ್ಪಣ್ಣ, ಅಂಗಿ ಕಳಚಿದರೆ ಕೆಂಪಣ್ಣ, ಉಪ್ಪು ಬೆರೆತರೆ ರುಚಿಯಣ್ಣ. ಇಂದು ಹುಣಸೇ ಹೆಣ್ಣಿನ ಬಗೆಗಿನ ಇನ್ನೊಂದು ಒಗಟು.
ಒಗಟು ೩ ಒಬ್ಬಣ್ಣ ಹತ್ತಣ್ಣ
ಒಬ್ಬಣ್ಣ ಇಳಿಯಣ್ಣ
ಉತ್ತರ : ರೊಟ್ಟಿ ಬೇಯಿಸುವಾಗಿನ ಕ್ರೀಯೆ.
ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಒಗಟು. ಒಬ್ಬ ಹತ್ತುತ್ತಿರುವ ಅಣ್ಣ, ಒಬ್ಬ ಇಳಿಯುತ್ತಿರುವ ಅಣ್ಣ ಅಂತ ಇದರ ಅರ್ಥ. ಉತ್ತರ ರೊಟ್ಟಿ, ಚಪಾತಿ, ದೋಸೆ ಯಾವುದಾದರೂ ಬೇಯಿಸುವ ಕ್ರಿಯೆ ಆಗಿರಬಹುದು. ಇಳಿಯುವಿಕೆ ಹತ್ತುವಿಕೆ ಕ್ರೀಯೆಗಳು ಇಲ್ಲಿ ನಿರಂತರ. ರೊಟ್ಟಿ ಸಿದ್ದ ಮಾಡುವ ಮಣೆ ರೊಟ್ಟಿ ಬೇಯಿಸುವ ಸ್ಟೌ ಗಿಂತ ಕೆಳಗಿರುತ್ತದೆ. ಅಂದರೆ ರೊಟ್ಟಿ ಬೇಯಿಸುವ ಸ್ಟೌವ್ ಎತ್ತರದ ಸ್ಥಾನದಲ್ಲಿರುತ್ತದೆ. ಮಣೆಯ ಮೇಲೆ ಹಿಗ್ಗಿದ ರೊಟ್ಟಿ ಸ್ಟೌ ಮೇಲಿನ ತವಾದ ಮೇಲೆ ಬೇಯಿಸಲು ಹಾಕುವುದನ್ನು ಹತ್ತುವುದು, ಹತ್ತಿದ ರೊಟ್ಟಿ ಬೆಂದ ನಂತರ ಸ್ಟೌಗಿಂತ ಕೆಳಗಿರುವ ಪಾತ್ರೆಯಲ್ಲಿ ಹಾಕುವುದನ್ನು ಇಳಿಯವುದು ಎಂದು ತಿಳಿಯುವುದು. ಇದು ನಿರಂತರ ಕ್ರೀಯೆ. ಮಣೆ ಮೇಲಿನ ರೊಟ್ಟಿ ಮೇಲೇರುವುದು. ಒಬ್ಬಣ್ಣ ಹತ್ತಣ್ಣ ಅಂತ, ಬೆಂದ ರೊಟ್ಟಿ ಕೆಳಗಿಳಿಯುವುದು ಒಬ್ಬಣ್ಣ ಇಳಿಯಣ್ಣ ಅಂತ. ರೊಟ್ಟಿಯೇ ಅಣ್ಣ. ಈ ಒಗಟಿನಲ್ಲಿ ' ಣ ' ಕಾರಗಳ ರಿಂಗಣ ಒಗಟು ನೆನಪಿಟ್ಟುಕೊಳ್ಳಲು, ಉಚ್ಚರಿಸಲು ಸುಲಭವಾಗಿಸಿದೆ.
ಕೆಂಪು ಕುದುರೆ, ಕರಿ ತಡಿ, ಒಬ್ಬ ಏರುತ್ತಾನೆ ಒಬ್ಬ ಇಳಿತಾನೆ - ಇದರ ಉತ್ತರ ಸಹ ರೊಟ್ಟಿ ಬೇಯಿಸುವ ಪ್ರಕ್ರಿಯೆ. ಕೆಂಪು ಕುದುರೆ ಉರಿಯುತ್ತಿರುವ ಒಲೆಯಲ್ಲಿನ ಬೆಂಕಿಯ ಜ್ವಾಲೆ. ಕರಿ ತಡಿಯೇ ತವ. ಏರುವುದು ಇಳಿಯುವುದು ಬೇಯಿಸಲು ಸಿದ್ಧವಾದ ರೊಟ್ಟಿ ತವಾದ ಮೇಲೇರುವುದು, ಬೆಂದ ರೊಟ್ಟಿ ಕೆಳಗಿಳಿಯುವ ಕ್ರೀಯಿಗಳು. ರೊಟ್ಟಿ ರೂಪುಗೊಂಡು ಬೇಯುವ ಕ್ರೀಯೆಗಳು.
ಒಗಟು ೪ ” ಹಸಿರು ಪಾಲಿಕೆ ಮುತ್ತಿನ ದಂಡೆ ಹಸಿರು ಪಾಲಿಕೆಯಲ್ಲಿ ಕುಳಿತುಕೊಂಡು ಹೋಗುತ್ತಿದ್ದಾಳೆ ಚದಾಂಬರದ ಮುಂಡೆ “
ಉತ್ತರ : ಹಸಿರು ಪಾಲಿಕೆ ‘ ಮೆಣಸಿನ ಗಿಡ ‘
ಮುತ್ತಿನ ದಂಡೆ : ಮೆಣಸಿನ ಹೂವು
ಚದಾಂಬುರದಮುಂಡೆ : ಮೆಣಸಿನ ಕಾಯಿ.
ಇದು ಒಂದು ಸುಂದರ ಒಗಟು. ಹಚ್ಚ ಹಸಿರಾಗಿ ಸ್ವಲ್ಪ ಹೆಚ್ಚೂ ಕಡಿಮೆ ಪಲ್ಲಕ್ಕಿಯ ಆಕಾರ ಇರುವ ಮೆಣಸಿನ ಗಿಡವೇ ಹಸಿರು ಪಾಲಿಕೆ. ದಂಡದಂತಿದ್ದು ಮೇಲಕ್ಕೆ ಹೋದಂತೆ ದಪ್ಪ ಆಗಿ ತುದಿ ಮುತ್ತಿನಾಕಾರ ಹೊಂದುವ ಶ್ವೇತ ಬಣ್ಣದಂತಹ ಮೆಣಸಿನ ಗಿಡದಲ್ಲಿನ ಹೂವೇ ಮುತ್ತಿನ ದಂಡೆ, ಖಾರ, ಘಾಟು ಇರುವ ಮೆಣಸಿನ ಕಾಯಿಯೇ ಚದಾಂಬರದ ಮುಂಡೆ. ಚದಾಂಬರದ ಮುಂಡೆ ಎಂದರೆ ಕಾರದ ಮೆಣಸಿನಕಾಯಿಯಂತೆ ಘಾಟಿ ಹೆಣ್ಣು ಅಂತ ಅರ್ಥನೂ ಆಗಬಹುದು. ' ಉದ್ದನ್ನವನೇ ಉರಿ ಮುಖದವನೆ ಎದ್ದು ಬಾರೋ ಮುದ್ದು ಕುಮಾರ' . ಇದು ಅದಕ್ಕೆ ಸಂಬಂಧಿಸಿದ ಇನ್ನೊಂದು ಒಗಟು.
ಒಗಟು ೫ – ಪದರು ಪಲ್ಲಂಗ ಮಾಡಿ
ಅದರಕೆ ಅದುನ್ನ ಇಟ್ಟು
ಎದುರು ಮನೆ ಹುಡುಗ
ಅದುನ್ನೇ ಬಯಸುತ್ತಾನೆ.
. ಅಂಗಂದರೆ ಏನು ?
ಉತ್ತರ: ಹೋಳಿಗೆ ಮತ್ತು ಅದನ್ನು ಮಾಡುವ ಕ್ರೀಯೆ.
ಹೋಳಿಗೆ ತಯಾರಿಸಲು ಮೈದಾವನ್ನು ಕಲಿಸಿ ಬಿಲ್ಲೆ ಮಾಡಿ ಅದನ್ನು ಮತ್ತೆ ಮತ್ತೆ ಸುತ್ತ ಪಲ್ಲಂಗದಂತೆ ಹಿಗ್ಗಿಸುವ ಕ್ರೀಯೆಯೇ ಪದರು ಪಲ್ಲಂಗ ಮಾಡುವುದು. ಅದರಲ್ಲಿ ಹೂರಣ ಇಡುವುದು ಪಲ್ಲಂಗ ಮಾಡಿದ ಮೈದಾಕ್ಕೆ ಸಂಬಂಧಿಸಿದುದನ್ನು ಅದರಲ್ಲಿ ಅದನ್ನು ಇಡುವ ಕ್ರೀಯೆ. ನಂತರ ಹಿಗ್ಗಿದ ಕಣಕವನ್ನು ಸುತ್ತಲಿಂದ ಸ್ವಲ್ಪ ಸ್ವಲ್ಪ ಹೂರಣದ ತಲೆ ಮೇಲೆ ತಂದು ನಂತರ ಅದನ್ನು ಹಿಗ್ಗಿಸಿ ಹೋಳಿಗೆ ಮಾಡುವುದು. ಇಂತಹ ಹೋಳಿಗೆಯನ್ನು ಎದುರು ಮನೆ ಹುಡುಗ ಬಯಸುವನು. ಅಂದರೆ ಹುಡುಗರು ಇಷ್ಟ ಪಡುವಂತಹ ಖಾದ್ಯ ಅಂತ ಇರಬಹುದು.
ಒಗಟು ೬ – ” ಸುತ್ತಿ ಸುತ್ತಿ ಬರುತ್ತಿದ್ದೆ ನನಗಾಗಿ, ಮೇಲೊಬ್ಬ ಕುಂತೌನೆ ನಿನಗಾಗಿ, ಬಂದಿದ್ರೆ ಸಾಯ್ತಿದ್ದೆ ನನಗಾಗಿ “
ಈ ಒಗಟು ಎಲ್ಲಿಯದೋ ಏನೋ. ಕೇಳಿದ ನೆನಪು. ಸುಂದರ ಒಗಟು.
ಉತ್ತರ : ಮೀನನ್ನು ಗಾಳದಿಂದ ಹಿಡಿಯುವ ಕ್ರೀಯೆ.
ಮೇಲಿನ ಒಗಟನ್ನು ಎರಡು ಸಂದರ್ಭಗಳಿಗೆ ಅನ್ವಹಿಸಬಹುದು.
೧ ತನ್ನನ್ನು ತಿನ್ನದಂತೆ ಗಾಳದ ಹುಳು ಮೀನಿಗೆ ಎಚ್ಚರಿಸುವ ಸಂದರ್ಭ : ಮೀನನ್ನು ಗಾಳದಿಂದ ಹಿಡಿಯುವವರು ಕೆರೆ, ಮಡು, ತೆರೆದ ಬಾವಿಗಳ ದಡದಲ್ಲಿ ಕುಳಿತು ಮೀನಿಗೆ ಗಾಳ ಹಾಕಿ ಮೀನು ಗಾಳಕ್ಕೆ ಬೀಳುವುದನ್ನು ಕಾಯುತ್ತಾ ಕುಳಿತುಕೊಳ್ಳುವರು, ಗಾಳಕ್ಕೆ ಬಿದ್ದ ತಕ್ಷಣ ಗಾಳ ಎತ್ತಿ ಮೀನನ್ನು ಗಾಳದಿಂದ ಬಿಡಿಸಿಕೊಳ್ಳುವರು. ಒಮ್ಮೆಗೆ ಒಂದೇ ಮೀನು ಗಾಳಕ್ಕೆ ಬೀಳುವುದು.
ಮೀನಿಗೆ ಗಾಳ ಹಾಕುವುದು ಅಂದರೆ ಸುಮಾರು ಒಂದು ಹತ್ತು ಹನ್ನೆರಡು ಅಡಿ ಉದ್ದದ ಹಿಡಿ ಗಾತ್ರದ ಕೋಲಿನ ತುದಿಗೆ ಉದ್ದವಾದ ದಾರದ ಒಂದು ತುದಿಯನ್ನು ಕಟ್ಟುವುದು. ದಾರದ ಇನ್ನೊಂದು ತುದಿಗೆ ಜೆ ಆಕಾರದ ಒಂದು ದೊಡ್ಡ ತಂತಿಯ ಮೇಲಿನ ತುದಿಗೆ ಕಟ್ಟುವರು. ಅದೇ ಗಾಳ. ಗಾಳದ ಕೆಳಗಿನ ತುದಿ ಸ್ವಲ್ಪ ಹಿಂದಕ್ಕೆ ವಿರುದ್ದ ದಿಕ್ಕಿನಲ್ಲಿ ಬೆಳೆದಿರುತ್ತದೆ. ಆ ತುದಿಗೆ ಎರೆ ಹುಳುವನ್ನು ಅದು ಹಿಂದಕ್ಕೆ ಬರದಂತೆ ತೂರಿಸುವುದು. ಗಾಳ ಎನ್ನುವ ತಂತಿಯನ್ನು ನುಂಗುವ ರೀತಿ ಎರೆ ಹುಳುವನ್ನು ತೂರಿಸಿ ನೀರಿಗೆ ಬಿಡುವರು. ಗಾಳಿ ನೀರಲ್ಲಿ ಮುಳುಗುವುದು. ಗಾಳದಿಂದ ಅಂದಾಜು ಆರೇಳು ಅಡಿ ಮೇಲಿನ ದಾರಕ್ಕೆ ಒಂದು ಬೆಂಡು ಅಥವಾ ತೇಲುವ ವಸ್ತು ಕಟ್ಟುವರು. ನೀರಲ್ಲಿ ಹೊಯ್ದಾಡುವ ಎರೆ ಹುಳುವನ್ನು ತಿನ್ನಲು ಮೀನುಗಳು ಅದರ ಸುತ್ತ ಸುತ್ತುವುವು. ಯಾವುದಾದರೂ ಒಂದು ಮೀನು ಎರೆ ಹುಳುವನ್ನು ನುಂಗಲು ಯಶಸ್ವಿಯಾದಮೇಲೆ ಬೇರೆ ಕಡೆಗೆ ಚಲಿಸುವುದು. ಆಗ ನೀರಿನ ಮೇಲೆ ತೇಲುತ್ತಿದ್ದ ಬೆಂಡು ಮುಳುಗುವುದು. ತಕ್ಷಣ ಗಾಳ ಹಾಕಿದವರಿಗೆ ಗಾಳದ ಹುಳುವನ್ನು ಮೀನು ನುಂಗಿ ಬೇರೆಡೆಗೆ ಹೋಗುವುದು ತಿಳಿಯುವುದು. ಆಗ ಗಾಳವನ್ನು ಮೇಲಕ್ಕೆ ಎತ್ತಿ ಮೀನನ್ನು ಗಾಳದಿಂದ ಕಿತ್ತುಕೊಳ್ಳುವರು. ಇದು ಗಾಳ ಹಾಕಿ ಮೀನು ಹಿಡಿಯುವ ವಿಧಾನ.
ಮೇಲಿನ ಒಗಟನ್ನು ಗಾಳಕ್ಕೆ ಸಿಕ್ಕಿಹಾಕಿಕೊಂಡಿರುವ ಎರೆಹುಳು ತನ್ನನ್ನು ನುಂಗಲು ಬರುವ ಮೀನಿಗೆ ಹೇಳುವಂತಹದ್ದು. " ಸುತ್ತಿ ಸುತ್ತಿ ಬರುತ್ತಿದ್ದೆ ನನಗಾಗಿ ಮೇಲೊಬ್ಬ ಕುಳಿತೌನೆ ನಿನಗಾಗಿ. ಬಂದಿದ್ದರೆ ಸಾಯ್ತಿದ್ದೆ ನನಗಾಗಿ. ಎಷ್ಟು ಸುಂದರ. ಎಂಥಾ ಹೋಲಿಕೆ.
೨ ಒಳಗೆ ಬಂದರೆ ಗಂಡನ ಕೈಗೆ ಸಿಕ್ಕಿಹಾಕಿಕೊಳ್ಳುವೆ ಎಂದು ಪ್ರಿಯಕರನಿಗೆ ಎಚ್ಚರಿಸುವ ಸಂದರ್ಭ: ಇದರ ವಿವರಣೆ ತಿಳಿಯಲು ಎರಡು ಪದಗಳ ಅರ್ಥ, ಕಲ್ಪನೆ ಅರಿಯುವುದು ಅವಶ್ಯಕ. ೧ ಅಟ್ಟ : ಹಳ್ಳಿ ಮನೆಗಳಲ್ಲಿ ಬಾಲ್ಕನಿ ಥರ ಇರುವ ಎತ್ತರದ ಜಾಗ. ೨ ಬೀಸುವುದು : ಹಿಂದೆ ಮನೆಯಲ್ಲಿ ದವಸ ಧಾನ್ಯಗಳ ಹಿಟ್ಟು ಮಾಡಿಕೊಳ್ಳಲು ಬೀಸುವ ಕಲ್ಲನ್ನು ಬಳಸುತ್ತಿದ್ದರು. ಬೀಸುವಕಲ್ಲಿನಿಂದ ಹಿಟ್ಟು ಮಾಡಿಕೊಳ್ಳುವ ಕ್ರೀಯೆಗೆ ಬೀಸುವುದು ಎನ್ನುತ್ತಿದ್ದರು.
ಗಂಡ ತನ್ನ ಹೆಂಡತಿಯ ಅಕ್ರಮ ಸಂಬಂಧವನ್ನು ಬಯಲು ಮಾಡಬೇಕೆಂದು ಆ ಪುರುಷ ಮನೆಗೆ ಬರುತ್ತಿದ್ದ ಸಮಯಕ್ಕೆ ಸರಿಯಾಗಿ ಅಟ್ಟ ಹತ್ತಿ ಕುಳಿತುಕೊಳ್ಳುತ್ತಾನೆ. ಈ ವಿಷಯ ತಿಳಿದ ಹೆಂಡತಿಗೆ ತನ್ನ ಪ್ರಿಯಕರ ಮನೆಯ ಬಳಿ ಬರುತ್ತಿದ್ದಂತೆ ಬೀಸುತ್ತಾ ಮೇಲಿನ ಆ ಒಗಟನ್ನು ಮತ್ತೆ ಮತ್ತೆ ಏರು ದನಿಯಲ್ಲಿ ಹಾಡಿ ಪ್ರಿಯಕರ ಒಳಗೆ ಬರದಂತೆ ಸೂಚನೆ ಕೊಡುತ್ತಾಳೆ. ಅಟ್ಟದ ಮೇಲೆ ಕುಳಿತ' ಗಂಡ ' ಗಾಳ ಹಾಕಿ ಮೀನು ಹಿಡಿಯಲು ದಡದಮೇಲೆ ಕುಳಿತು ಮೀನು ಹಿಡಿಯುವವನ ಸಂಕೇತವಾದರೆ, ಒಂದು ಕಡೆ ಗಂಡು ಇನ್ನೊಂದು ಕಡೆ ಪ್ರಿಯಕರನ ನಡುವೆ ಸಿಲುಕಿರುವ ಹೆಂಡತಿ ಗಾಳಕ್ಕೆ ಸಿಲುಕಿರುವ ' ಎರೆಹುಳುವಿನ ಸಂಕೇತ, ಪರರ ಹೆಂಡತಿಯ ಪ್ರೀತಿಗಾಗಿ ಮತ್ತೆ ಮತ್ತೆ ಮನೆಯ ಸುತ್ತಿ ಸುತ್ತಿ ಬರುತ್ತಿರುವ ' ಪ್ರಿಯಕರ ' ಗಾಳದ ಹುಳವನ್ನು ತಿನ್ನಲು ಗಾಳದ ಸುತ್ತ ಸುತ್ತಿ ಸುತ್ತಿ ಬರುವ ಮೀನಿನ ಸಂಕೇತ. ಇದು ಗೀತೆಯ ರೂಪ ಸೋಗಸಾದ ಒಗಟು. ಎರಡು ಸಂದರ್ಭಗಳಿಗೆ ತುಂಬಾ ಚೆನ್ನಾಗಿ ಅನ್ವಯಿಸುವ ಒಗಟು.
ಗೇಯಾಂಶವುಳ್ಳು ಅರ್ಥಗರ್ಭಿತ ಒಗಟು ಎಂಬುದು ಇದರ ವೀಶೇಷ.
ಒಗಟು ೭ – ಕಣ್ಣಾ ಮುಚ್ಚೇ ಕಾಡೇ ಗೂಡೇ
ಉದ್ದಿನ ಮೂಟೆ ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ
ನಿಮ್ಮಯ ಹಕ್ಕಿ ಅಡಗಿಸಿಕೊಳ್ಳಿ ಕೊ ನ
ಕಣ್ಣಾಮುಚ್ಚಾಲೆ ಆಟ ಆಡುವಾಗ ಈ ಹಾಡನ್ನು ಹಾಡುತ್ತಿದ್ದರು. ಈ ಆಟ ಆಡಲು ಕನಿಷ್ಟ ಮೂವರು ಬೇಕು. ಒಬ್ಬ ಕಣ್ಣು ಮುಚ್ಚುವವ ಇನ್ನೊಬ್ಬ ಕಣ್ಣು ಮುಚ್ಚಿಸಿಕೊಳ್ಳುವವ. ಬಚ್ಚಿಟ್ಟುಕೊಳ್ಳುವವರು ಕನಿಷ್ಟ ಒಬ್ಬರು ಇರಬೇಕು. ಆದರೆ ಒಬ್ಬರಿಗಿಂತ ಹೆಚ್ಚು ಜನ ಇದ್ದಾರೆ ಸೊಗಸು ಎನಿಸುವುದು.
ನಾವು ಅದೆಷ್ಟುಬಾರಿ ಈ ಹಾಡು ಹಾಡಿದ್ದೆವೋ, ಆಟ ಆಡಿದ್ದೆವೋ ಏನೋ ಆದರೆ ಅದರ ಅರ್ಥ ಮಾತ್ರ ಇತ್ತೀಚಿನವರೆಗೂ ತಿಳಿದಿರಲಿಲ್ಲ. ಅನೇಕರು ಇದನ್ನು ಅರ್ಥೈಸಿರುವುದ ಓದಿ ಗಾಬರಿಯಾಯಿತು. ಆಟ ಆಡಲು ಇಂತಹ ಹಾಡು ಹೇಳುತ್ತಿದ್ದಾರಲ್ಲಾ ಅಂತ. ಇಲ್ಲಿ ಪದಸಹ ಅರ್ಥ ನೋಡೋಣ. ಕಣ್ಣು ಮುಚ್ಚುವುದು ಎಂದರೆ ನಿದ್ರಿಸುವುದು, ನೋಡದಿರುವುದು, ಇಲ್ಲವಾಗುವುದು ಎಂಬ ಅರ್ಥಗಳಿದ್ದರೂ ಇಲ್ಲಿ ಇಲ್ಲವಾಗುವುದು ಎಂಬ ಅರ್ಥ ಬರುವುದು. ' ಕಾಡೇ ಗೂಡು' ಅಂದರೆ ಶವವಾದಮೇಲೆ ಕಾಡಿಗೆ ಒಯ್ದು ಗೂಡು ಕಟ್ಟುವರು. ಅದೇ ಸಮಾಧಿ. ಉದ್ದಿನ ಮೂಟೆ ಉರುಳೇ ಹೋಯ್ತು ಅಂದರೆ ಸಾಯಲಾರ ಎಂದುಕೊಂಡ ಸದೃಢಕಾಯದ ವ್ಯಕ್ತಿ ನೆಲಕ್ಕೆ ಬೀಳುವುದು. ಅಂದರೆ ಸತ್ತುಹೋಗುವುದು ಎಂದು ಅರ್ಥ. ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ ಅಂದರೆ ಸತ್ತ ನಂತರ ಪ್ರಾಣ ಹೋಗುವುದನ್ನು ನನ್ನ ಪ್ರಾಣ ಪಕ್ಷಿಯನ್ನು ಹಾರಿ ಹೋಗಲು ಬಿಟ್ಟೆ ಎಂಬುದಾಗಿದೆ. ನಿಮ್ಮಯ ಹಕ್ಕಿ ಅಡಗಿಸಿಕೊಳ್ಳಿ ಎಂಬುದು ನನ್ನ ಪ್ರಾಣ ಅಂತು ಹೋಯ್ತು ನಿಮ್ಮ ಪ್ರಾಣ ಜೋಪಾನ ಮಾಡಿಕೊಳ್ಳಿ ಎಂಬ ಎಚ್ಚರಿಕೆ ಅಲ್ಲಿದೆ. ಮುಪ್ಪು ಬಂದಾಗ ಸಾಯುವುದು ಸಾಮಾನ್ಯ. ಕಣ್ಣು ಮುಚ್ಚಿದಾಗ ಸತ್ತು ಕಾಡು ಸೇರಿ ಸಮಾಧಿಯಾಗುವುದು, ಸದೃಢಕಾಯದ ವ್ಯಕ್ತಿ ಸಹ ಸತ್ತು ಹೋದಮೇಲೆ ಅವರ ಪ್ರಾಣ ಹಾರಿ ಹೋಗುವುದು. ಇಂತಹ ಸಧೃಢಕಾಯನನ್ನೇ ಸಾವು ಬಿಡಲಿಲ್ಲ! ನಿಮ್ಮ ಪ್ರಾಣಪಕ್ಷಿ ಹಾರಿ ಹೋಗದಂತೆ ರಕ್ಷಿಸಿಕೊಳ್ಳಿ ಎಂಬ ಅರ್ಥ ಕಾಣಬಹುದು. ಸದೃಢಕಾಯನೇ ಹೋದನೆಂದರೆ ಇತರರ ಪಾಡೇನು ಎನ್ನುವ ದ್ವನಿ ಅನುರಣಿಸುವುದು. ನಿಮ್ಮ ಪ್ರಾಣಪಕ್ಷಿ ರಕ್ಷಿಸಿಕೊಳ್ಳಿ ಎಂಬುದು ರಕ್ಷಿಸಿಕೊಳ್ಳಲು ಆಗದು ಎಂಬ ದನಿ ಬರುವುದು!
ಈ ಹಾಡನ್ನು ಆಟಕ್ಕೆ ಅನ್ವಹಿಸಿ ನೋಡೋಣ. ಬಚ್ಚಿಟ್ಟುಕೊಂಡವರ ಹುಡುಕಲು ಹೋಗುವ ವ್ಯಕ್ತಿಯನ್ನು ಉದ್ದಿನ ಮೂಟೆ ಉರುಳಿಹೋದ ವ್ಯಕ್ತಿಯ ಪ್ರಾಣ ಪಕ್ಷಿ ಅಂತ ಅಂದುಕೊಂಡರೆ. ಬಚ್ಚಿಟ್ಟುಕೊಂಡವರು ಬದುಕ ಬೇಕಾಗಿರುವ ಜೀವಗಳು. ಆ ಬಚ್ಚಿಟ್ಟುಕೊಂಡವರನ್ನು ಪ್ರಾಣಪಕ್ಷಿ ಹುಡುಕಿ ಕಣ್ಣು ಮುಚ್ಚಲು ಹಿಡಿದು ತರುವುದು ಯಾರು ಎಷ್ಟು ಸಿಗಬಾರದೆಂದು ಅಡಗಿಕೊಂಡರೂ ತಪ್ಪಿಸಿಕೊಳ್ಳಲಾಗದು. ಎಲ್ಲರೂ ಒಂದಾನು ಒಂದು ಸಲ ಸಿಕ್ಕಿಬಿದ್ದು ಕಣ್ಣು ಮುಚ್ಚಿಸಿಕೊಳ್ಳಬೇಕಾಗುವುದು. ಇದು ಎಲ್ಲರ ಪ್ರಾಣ ಪಕ್ಷಿ ಇಂದಲ್ಲ ನಾಳೆ ಹಾರಿ ಹೋಗುವಂತಹದ್ದೇ ಆಗಿದೆ ಎಂಬುದನ್ನು ಸಾರುವುದು. ಇಲ್ಲಿ ಯಾರೂ ಶಾಶ್ವತವಾಗಿ ಬದುಕಲಾಗದು ಎಂಬುದು ಈ ಆಟದ ಧ್ವನಿ.
ನನಗೆ ಬೇರೆಯವರು ತೊಂದರೆ ಕೊಟ್ಟು ಸಾಯುವಂತೆ ಮಾಡಿದ್ದಾರೆ. ನೀವು ಅವರಿಂದ ದೂರವಿದ್ದು ನಿಮ್ಮ ಜೀವ ಅವರಿಂದ ಉಳಿಸಿಕೊಳ್ಳಿ ಎಂಬುದು ಈ ಹಾಡಿನ ಅರ್ಥ ಎಂದು ಕೆಲವರು ಅರ್ಥೈಸಿರುವರು.
ಕೆಲವರು ಇದರಲ್ಲಿ ರಾಮಾಯಣದ ಕತೆ ಇದೆ ಎಂಬುವರು. ದಶರಥ ಮಹಾರಾಜ ಕಣ್ಣನ್ನು ಮುಚ್ಚಲು ರಾಮ ವನವಾಸಕ್ಕೆ ಹೋಗಿ ಕಾಡನ್ನು ಗೂಡು ಮಾಡಿಕೊಳ್ಳಬೇಕಾಯಿತು. ರಾಮ ರಾವಣನ ಉದ್ದಿನ ಮೂಟೆಯಂತಹ ದೇಹವನ್ನು ಕೊಂದು ರಾವಣ ಬಚ್ಚಿಟ್ಟ ಸೀತೆಯನ್ನು ಹುಡುಕಿ ತಂದ ಎಂದು ಕೆಲವರು ಮಜ್ಜಿಗೆಗೆ ಬಂದ ಅಜ್ಜಿ ರಾಮಾಯಣ ಕತೆಯನ್ನು ಮಜ್ಜಿಗೆ ಕೊಡುವವಳಿಗೆ ಮಜ್ಜಿಗೆ ಕೊಡುವುದರ ಒಳಗಾಗಿ ' ರಾಮ ಬಂದ ಕೊಂದ ತಂದ' ಎಂದು ಹೇಳಿದಂತೆ ಹೇಳಿರುವರು. ರಾಮ ಕಾಡಿಗೆ ಬಂದ ರಾವಣನನ್ನು ಕೊಂದ ಸೀತೆಯನ್ನು ತಂದ ಎಂದು ಹೇಳಿದಂತೆ. ಕಣ್ಣಾಮುಚ್ಚಾಲೆ ಈ ಹಾಡು ಇನ್ನೂ ಎಂಥಾ ಅರ್ಥ ಅಡಗಿಸಿಕೊಂಡಿದೆಯೋ ಎನೋ ..!
ಒಗಟು ೮ - ರಥ ಸಾಗುತ್ತೆ
ಭಂಡಾರ ಸುರಿಯುತ್ತೆ:
ಇದು ಒಂದು ಜಾನಪದ ಒಗಟು. ರಥ ಸಾಗುತ್ತೆ ಭಂಡಾರಿ ಸುರಿಯುತ್ತೆ ಅಂದರೆ ದೇವರ ತೇರುಗಳನ್ನು ರಥ ಎನ್ನುವರು. ಇವು ಆಯಾ ದೇವರ ಜಾತ್ರೆಗಳಲ್ಲಿ ನಿಗದಿ ಪಡಿಸಿದ ಭಕ್ತರು ಶ್ರದ್ಧಾ ಸ್ಥಳಕ್ಕೆ ಕ್ರಮಿಸಿ ನಂತರ ಹಿಂದಿರುಗುವುದು. ಇದನ್ನು ರಥ ಸಾಗುವುದು ಎನ್ನುವರು. ರಥ ಸಾಗುವಾಗ ಅರಿಶಿನ ಪುಡಿ ರಥಕ್ಕೆ ಎರಚುವ ಭಕ್ತಿ ಸಂಬಂಧಿತ ಕ್ರೀಯೆಗಳು ನಡೆಯುವುದನ್ನು ಭಂಡಾರ ಸುರಿಸುವುದು ಎನ್ನುವರು. ಇದು ಪದ, ವಾಕ್ಯ ಸಹಿತ ಈ ಒಗಟಿನ ಅರ್ಥ.
ಈ ಒಗಟಿಗೆ ಉತ್ತರ ' ಬೀಸುವ ಕಲ್ಲನ್ನು ಬೀಸುವುದು. ಸುಮಾರು ೮ ಇಂಚಿನ ೨ ಜ್ಯಾ ದಷ್ಟು ಅಥವಾ ಬೇರೆ ಬೇರೆ ಅಳತೆ ಇರುವ ವೃತ್ತಾಕಾರದ ಎರಡು ಬಂಡೆಗಳ ಒಂದರ ಮೇಲೆ ಒಂದು ಹಾಕಿರುತ್ತಾರೆ ಕೆಳಗಿನದನ್ನು ನೆಲಕ್ಕೆ ಬಂಧಿಸಿರುತ್ತಾರೆ. ಮೇಲಿನದನ್ನು ಕೆಳಗಿನ ಬಂಡೆಗೆ ಮಧ್ಯದಲ್ಲಿ ಬಂಧಿಸಿ ಆ ಜಾಗದಲ್ಲಿ ದವಸ ಧಾನ್ಯ ಕೆಳಗಿನ ಬಂಡೆಗೆ ಹೋಗಲು ವ್ಯವಸ್ಥೆ ಮಾಡಿ ಮೇಲಿನ ಬಂಡೆಯ ಅಂಚಿನ ಒಂದು ಕಡೆ ಗೂಟದ ವ್ಯವಸ್ಥೆ ಮಾಡಿರುತ್ತಾರೆ. ಅದನ್ನು ಹಿಡಿದುಕೊಂಡು ಹಿಗ್ಗಿದರೆ ವೃತ್ತಾಕಾರವಾಗಿ ಚಲಿಸುವುದು. ಬಂಡೆ ಚಲಿಸಿದಾಗ ಹಾಕಿದ್ದ ದವಸ ಧಾನ್ಯ ಹಿಟ್ಟಾಗುತ್ತಾ ವೃತ್ತಾಕಾರದ ಬಂಡೆಯ ಸುತ್ತಾ ಸುರಿಯುತ್ತದೆ. ಆ ಸುಂದರ ನೋಟ ನೋಡಲು ಸೊಗಸು. ಬೀಸುವ ಕಲ್ಲಿನಲ್ಲಿ ದವಸ ಧಾನ್ಯ ಬೀಸುವುದು, ಅಂದರೆ ಮೇಲಿನ ಬಂಡೆ ಇದ್ದಲ್ಲೇ ಕೆಳಗಿನ ಬಂಡೆಯ ಮೇಲೆ ಚಾಲನೆ ಪಡೆಯುವುದು. ಬೀಸುವ ಕಲ್ಲಿನ ಬಂಡೆಗಳ ಚಲನೆಯನ್ನು ರಥದ ಗಾಲಿಗಳ ಚಲನೆ ಎಂದು ಕಲ್ಪಿಸಲಾಗಿದೆ, ರಥ ಸಾಗುವಿಕೆಯನ್ನು ಬೀಸುವ ಕ್ರೀಯೆ ನಡೆಯುವಾಗಿನ ಅದರ ಚಲನೆಯ ಕ್ರೀಯೆಗೆ ರಥ ಚಲನೆಯನ್ನು ಹೋಲಿಸಲಾಗಿದೆ, ರಥ ಸಾಗಿದಂತೆ ಕಲ್ಲಿನ ಸುತ್ತ ಹಿಟ್ಟು ಸುರಿಯುವುದು ಅದು ಭಂಡಾರ ಸುರಿಯುವಿಕೆ. ಹೀಗೆ ಅನ್ವಹಿಸಿದರೆ ಸ್ವಲ್ಪವಾದರೂ ಒಗಟು ಅರ್ಥ ಆದೀತು!
ಈ ಬೀಸುವ ಕಲ್ಲನ್ನು ಕುರಿತು ಇನ್ನೊಂದು ಒಗಟು ಇದೆ ಅದನ್ನು ನೋಡೋಣ. " ನೆತ್ತಿಯಲ್ಲಿ ಉಂಬುವದು, ಸುತ್ತಲೂ ಸುರಿಯುವುದು ಎತ್ತಿದರೆ ಎರಡು ಹೋಳಾಗುವುದು " ಎರಡು ಹೋಳು ಆಗುವುದು ಎಂಬುದು ಈ ಒಗಟಿನ ಹೆಚ್ಚಿನ ವಿವರಣೆ. ಬೀಸುವ ಮೇಲಿನ ಕಲ್ಲನ್ನು ಎತ್ತಬಹುದು. ಆಗ ಅದು ಎರಡು ಹೋಳಾಗುವುದು. ಇದೂ ಸಹ ಉತ್ತಮ ಒಗಟಾಗಿದೆ.
ನೆತ್ತಿಯಲ್ಲಿ ತಿಂದು ಪಕ್ಕದಲಿ ಸುರಿಯುವುದು ಸುದತಿಯರ ಕರದಲ್ಲಿ ತಿರುಗುವುದು, ಒತ್ತಿದರೆ ಅದರ ದವಸ. ಬಿತ್ತರಿಸಿ ಹೇಳ್ರೀ ನಿಮ್ಮ ಮನೆಯಲಿಹುದು. ಇದು ಸಹ ಬೀಸುವ ಕಲ್ಲನ್ನು ವರ್ಣಿಸಿದ ಮತ್ತೊಂದು ಒಗಟಾಗಿದೆ. ಇಲ್ಲಿ ಅದನ್ನು ಜೀವಿಯಾಗಿ ಭಾವಿಸಿ ಅದು ತಿನ್ನುವ ಪ್ರಕ್ರಿಯೆಯಲ್ಲಿ ತೊಡಗಿರುವುದನ್ನು ಸೂಚಿಸುವುದು. ಸಾಮಾನ್ಯವಾಗಿ ಬೀಸುತ್ತಿದ್ದವರು ಹೆಣ್ಣುಮಕ್ಕಳೇ ಆಗಿರುತ್ತಿದ್ದ,ರು ಎಂಬುದನ್ನು ಸುಂದರಿಯರ ಕರದಲ್ಲಿ ತಿರುಗುವುದು ಎನ್ನುವಲ್ಲಿನ ಅಭಿವ್ಯಕ್ತಿ ಸೂಚಿಸುವುದು. ಇದನ್ನು ಈ ಒಗಟು ಹೆಚ್ಚಿಗೆ ತಿಳಿಸಿದೆ. ಹಾಗೂ ಹಿಂದೆ ಇದು ಎಲ್ಲರ ಮನೆಯಲ್ಲಿಯೂ ಇರತ್ತಿತ್ತು ಇದನ್ನು ಹೆಂಗಸರು ಬಳಸುತ್ತಿದ್ದರು ಎಂಬುದನ್ನು ಇದು ' ನಿಮ್ಮ ಮನೆಯಲ್ಲಿಹುದು,' ಎಂಬುದರಿಂದ ಸೂಚಿಸುವುದು.
” ಎರಡು ಚಕ್ರವುಂಟು ಬಂಡಿಯಲ್ಲ
ಎರಡು ಕಣ್ಣುಂಟು ಮನುಷ್ಯನಲ್ಲ
ಕೊಂಬುಂಟು ಎತ್ತಲ್ಲ “. ಎಂಬುದು ಮತ್ತೊಂದು ಬೀಸುವಕಲ್ಲಿನ ಬಗ್ಗೆ ಇರುವ ಅಂಕಿ ಅಂಶಕ್ಕೆ ಮಹತ್ವ ಕೊಟ್ಟ ಭಿನ್ನ ಒಗಟು.
ಒಂದರಲ್ಲಿ ರಥಕ್ಕೆ ಹೋಲಿಸಿ, ಇನ್ನೊಂದರಲ್ಲಿ ಏನೋ ತಿನ್ನುವ ಜೀವಿಗೆ ಹೋಲಿಸಿ, ಮತ್ತೊಂದರಲ್ಲಿ ಬಂಡಿಯಲ್ಲ ಎತ್ತಲ್ಲ ... ಎಂದು ನಿರಾಕರಿಸುವ ಭಿನ್ನ ಒಗಟುಗಳು ಸೃಷ್ಟಿಯಾಗಿವೆ. ವಸ್ತುವನ್ನು ನೋಡುವ ದೃಷ್ಟಿಕೋನಗಳು ಬೇರೆಯಾದಾಗ ವಿಭಿನ್ನವಾಗಿ ಆ ವಸ್ತು ಕಂಡು ವಿಭಿನ್ನ ಒಗಟುಗಳು ಸೃಷ್ಟಿಯಾಗಲು ಕಾರಣವಾಗಿದೆ.
ಒಗಟು ೯ – ” ನಮ್ಮ ಮನೆಯಲ್ಲಿ ಒಬ್ಬ ಹುಡುಗ
ಇದ್ದಾನೆ ಅವನು ಎಗ್ಗೆಗ್ಗರಿ ಪೇಟ ಸುತ್ತುತ್ತಾನೆ .”
ನಮ್ಮ ಮನೆಯಲ್ಲಿ ಒಬ್ಬ ಹುಡುಗ ಇದ್ದಾನೆ
ಅವನು ಎಗರಿ ಎಗರಿ … ಪೇಟ ಸುತ್ತುತ್ತಾನೆ. – ಇದು ಆ ಒಗಟಿನ ಸರಳೀಕರಣ.
ಇಂದು ಯಾರಿಗೂ ಅರಳಿನ ಕಲ್ಪನೆ ಇಲ್ಲ. ಏಕೆಂದರೆ ಯಾರ ಮನೆಯಲ್ಲೂ ಅರಳು ಮಾಡುತ್ತಿಲ್ಲ. ನಾಲ್ಕೋ ಐದೋ ದಶಕದ ಹಿಂದೆ ಯಾವ ಚಿಪ್ಸು, ಕುರುಕುರೆ, ಗೋಬಿ ಮಂಚೂರಿ ಗೋಲ್ ಗಪ್ಪ ... ಇರಲಿಲ್ಲ. ಅರಳುಗಳೇ ಆ ಸ್ಥಾನದಲ್ಲಿದ್ದವು. ಗಾಳಿ ಕಾಲದಲ್ಲಿ ಹಸಿವು ಹೆಚ್ಚು. ಎಷ್ಟು ತಿಂದರೂ ಹಸಿವು ಕಡಿಮೆ ಆಗುವುದಿಲ್ಲ. ಆಗ ಏನನ್ನು ತಿನ್ನಲಿ ಎಷ್ಟು ತಿನ್ನಲಿ ಅಂತ ಸೋರೆ, ಡಬ್ಬಿ ಏನೇನೋ ಹುಡುಕುತ್ತಿದ್ದರು. ಗಾಳಿ ಕಾಲದಲ್ಲಿ ತಿನ್ನಲು ಬರುವುದೆಂದು ಚಿನಕುರಳಿ, ಅರಳು, ದ್ವಿದಳ ಧಾನ್ಯಗಳ ಉಂಡೆ ಮುಂತಾದವ ಮಾಡಿ ಸ್ವಾರೆ, ಡಬ್ಬಿಗಳಲ್ಲಿ ಇಡುತ್ತಿದ್ದರು. ಅರಳನ್ನು ಪುಡಿಮಾಡಿ ಬೇರೆ ಖಾದ್ಯ ತಯಾರಿಸುತ್ತಿದ್ದರು. ಮಕ್ಕಳು ಹಸಿವು ಎಂದು ಕಾಟ ಮಾಡಿದಾಗ ಇವನ್ನು ಕೊಡುತ್ತಿದ್ದರು. ಪಾಪ್ ಕಾರ್ನ್ ಅಂತ ಅನ್ನುತ್ತೇವಲ್ಲಾ ಅವೇ ಮೆಕ್ಕೇಜೋಳದ ಅರಳು. ಜೋಳ ಮುಂತಾದ ಧಾನ್ಯಗಳ ಹುರಿದರೆ ಪಾಪ್ ಕಾರ್ನ್ ರೀತಿ ಆಗುವುವು. ಅವೇ ಅರಳು. ಜೋಳಕ್ಕೆ ಉಪ್ಪಿನ ನೀರು ಹಚ್ಚಿ ಕಾದ ಹೆಂಚಿನ ಮೇಲೆ ಹಾಕಿ ಹುರಿದರೆ ಬಿಸಿ ತಡೆಯಲಾರದೆ ಒಂದು ಅಡಿಗಿಂತ ಹೆಚ್ಚು ಎತ್ತರಕ್ಕೆ ಎಗರಿ ಕೆಳಗೆ ಬರುವುದರೊಳಗೆ ಬಸಿರನ್ನು ಹೊರಹಾಕುವುವು. ಆಗ ಹೂವಿನಂತೆ ಕಾಣುತ್ತವೆ. ಅವೇ ಜೋಳದ ಅರಳು. ಹಾಗೆ ಧಾನ್ಯ ಮೇಲಕ್ಕೆ ಹೋಗಿ ಅರಳಾಗುವುದನ್ನು ಹುಡುಗ ಎಗರಿ ಎಗರಿ ಪೇಟ ಸುತ್ತುವಿಕೆ ಎಂದು ಈ ಒಗಟಿನಲ್ಲಿ ವರ್ಣಿಸಲಾಗಿದೆ. ಉತ್ತಮ ಅನ್ವಯ, ಉತ್ತಮ ಹೋಲಿಕೆ, ಸುಂದರ ವರ್ಣನೆ.
ಒಗಟು ೧೦ : ನಮ್ಮ ಮನೆಯಲ್ಲಿ ಒಬ್ಬ ಹುಡುಗಿ ಐದಾಳೆ ಎದ್ದ ತಕ್ಷಣ ಮೊದಲಿಂಗಿತ್ತಿ ಆಗುತ್ತಾಳೆ.
ಉತ್ತರ : ಪ್ರತಿ ಬೆಳಗಿನಜಾವ ಪೂಜಿಸಲ್ಪಾಟ್ಟಾಗ ಸುಂದರವಾಗಿ ಕಾಣುವ ಹೊಸ್ತಿಲು
ಹಿಂದೆ ಅರ್ಧ ಅಡಿಗಿಂತ ಹೆಚ್ಚು ಅಗಲ ಮತ್ತು ಅಷ್ಟೇ ಎತ್ತರದ ಮುಖ್ಯ ದ್ವಾರದ ಹೊಸ್ತಿಲು ಇರುತ್ತಿದ್ದವು. ಮನೆಯ ಮಗಳೋ ಸೊಸೆಯೋ ಬೆಳಗಾದ ತಕ್ಷಣ ಎದ್ದು ಅಂಗಳದ ಕಸ ಗುಡಿಸಿ ನೀರೆರಚಿ ರಂಗವಲ್ಲಿ ಹಾಕಿ ಹೊಸ್ತಿಲಿಗೆ ಕೆಮ್ಮಣ್ಣು ಬಳಿಯುತ್ತಿದ್ದರು. ಕೆಮ್ಮಣ್ಣು ಅಂದರೆ ಕೆಂಪು ಮಣ್ಣು. ಅದನ್ನು ಬಳಿದಾಗ ಹೊಸ್ತಿಲಿಗೆ ಹೊಸ ಕೆಂಪು ಉಡುಗೆ ತೊಡಿಸಿದಂತೆ ಎದ್ದು ಕಾಣುತ್ತಿತ್ತು. ಆಮೇಲೆ ಮೊದಲೇ ಗುರುತಿಸಿದ ಅದರ ಕೆಲವು ಭಾಗಕ್ಕೆ ವೀಭೂತಿ ಅರಿಶಿಣ ಕುಂಕುಮ ಹಚ್ಚಿ ಹೂ ಮುಡಿಸಿ ನಿತ್ಯ ಸಿಂಗರಿಸುತ್ತಿದ್ದರು. ಹೊಸ್ತಿಲು ದೊಡ್ಡವು ಇದ್ದ ಕಾರಣ ಅಲಂಕಾರ ಎದ್ದು ಕಾಣುತ್ತಿತ್ತು. ಹೀಗೆ ಹೊಸ್ತಿಲು ಪ್ರತಿದಿನ ಸಿಂಗಾರವಾಗುವುದನ್ನು ಮೊದಲಿಂಗಿತ್ತಿಯ ಶೃಂಗಾರ ಮಾಡಿಕೊಳ್ಳುವಿಕೆಗೆ ಹೋಲಿಸಿ ಒಗಟು ರಚಿಸಲಾಗಿದೆ. ಹೊಸ್ತಿಲನ್ನು ಹುಡುಗಿಗೂ ಹೊಸ್ತಿಲ ಸಿಂಗಾರವನ್ನು ಮೊದಲಿಂಗಿತ್ತಿಯ ಶೃಂಗರಕ್ಕೂ ಹೋಲಿಸಿದೆ. ಪ್ರತಿದಿನ ಹೊಸ್ತಿಲನ್ನು ಮೊದಲಿಂಗಿತ್ತಿ ಮಾಡುವವರ ಆಸಕ್ತಿ, ಕಲೆ, ಶ್ರಮದ ಬಗ್ಗೆ ಗಮನಸೆಳೆದಿದೆ!
ಒಗಟು ೧೧ - ಅಡ್ಡಗೋಡೆ ಮೇಲೆ ಗಿಡ್ಡ ಪೂಜಾರಿ. - ಈ ಒಗಟಿಗೆ ಉತ್ತರ ' ಚೇಳು '. ಒಂದು ರೂಂ ವಿಭಾಗಿಸಿ ಎರಡು ರೂಮುಗಳನ್ನು ಮಾಡಲು ಆ ದೊಡ್ಡ ರೂಮಿನ ನಡುವೆ ಆರೋ ಏಳೋ ಅಡಿಯಷ್ಟು ಎತ್ತರದ ಗೋಡೆ ಕಟ್ಟಿ ಎರಡು ರೂಮುಗಳನ್ನು ಮಾಡುತ್ತಿದ್ದರು. ಕಟ್ಟಿದ ಗೋಡೆಯನ್ನು ಎರಡೂ ಕಡೆಯವರು ತಮಗೆ ಉಪಯೋಗವಾಗುವ ವಸ್ತುಗಳ ಇಡಲು ಬಳಸುತ್ತಿದ್ದರು. ಅಂತಹ ಗೋಡೆಯ ಮೇಲಿದ್ದ ಚೇಳನ್ನು ಅಡ್ಡಗೋಡೆಯ ಮೇಲೆ ಗಿಡ್ಡಪೂಜಾರಿ ಎಂದಿದೆ. ಪೂಜಾರಿಗೆ ತಲೆಯಲ್ಲಿ ಜುಟ್ಟು ಇರುವುದು. ಇಂದೂ ಕೆಲವರಿಗೆ ಇದೆ. ಜುಟ್ಟಿನ ಥರ ಕೊಂಡಿ ಇರುವ ಚೇಳನ್ನು ಗಿಡ್ಡಪೂಜಾರಿಗೆ ಹೋಲಿಸಿದೆ. ಚೇಳು ಮುಟ್ಟಿದರೆ ಗಂಟೆಜಾಗಟೆಯಷ್ಟು ದೊಡ್ಡ ಧ್ವನಿ ಮಾಡಿಸುವುದು.
ಒಗಟು ೧೨ - " ಕರಿ ಹೊಲದಲ್ಲಿ ಬಿಳಿ ದಾರಿ " ಈ ಒಗಟಿಗೆ ಉತ್ತರ ಏನೂ ಅಂತ ಊಹಿಸುತ್ತೀರ ? ಊಹಿಸುವುದು ಕಷ್ಟ. ' ಬೈತಲೆ ' ಇದಕ್ಕೆ ಉತ್ತರ. ಇಂದು ಯಾರೂ ಬೈತಲೆ ಬರುವಂತೆ ಬಾಚುತ್ತಿಲ್ಲ. ಬೈತಲೆ ಎಂದರೆ ಏನು ಅಂತ ಗೊತ್ತಿಲ್ಲ. ಕೂದಲನ್ನು ಎರಡು ಭಾಗ ಮಾಡಿದಾಗ ಮಧ್ಯೆ ಬೆಳ್ಳಗೆ ಕಾಣುವುದೇ ಬೈತಲೆ. ಹೆಣ್ಣು ಮಕ್ಕಳು ಮೂಗಿನ ನೇರಕ್ಕೆ ಬೈತಲೆ ಬರುವಂತೆ ತಲೆ ಬಾಚುತ್ತಿದ್ದರು. ಕಪ್ಪು ಕೂದಲಿನ ತಲೆ ಕರಿ ಹೊಲವಾದರೆ. ಬೆಳ್ಳಗೆ ಕಾಣುತ್ತಿದ್ದ ಬೈತಲೆಯೇ ಬಿಳಿ ದಾರಿ.
ಒಗಟು ೧೩ - ಹೋಗ್ತಾ ಹೋಗ್ತಾ ಕೆಂಪೆತ್ತು ಕೆಳಗೆ ಬಿತ್ತು - ಹಿಂದೆ ಎಲ್ಲಿಗಾದರೂ ಪ್ರಯಾಣಿಸುವಾಗ ಎತ್ತಿನ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದರು. ಎತ್ತುಗಳಲ್ಲಿ ಕೆಂಪು ಬಣ್ಣದ ಎತ್ತುಗಳೂ ಇರುತ್ತಿದ್ದವು. ಕೆಲವು ಗಾಡಿ ಎಳೆದೂ ಎಳೆದೂ ಸಾಕಾಗಿ ಮಾರ್ಗ ಮಧ್ಯದಲ್ಲೇ ಮಲಗುತ್ತಿದ್ದವು. ಮಲಗಿರುವುದನ್ನು ಕೆಂಪೆತ್ತು ಕೆಳಗೆ ಬಿತ್ತು ಅಂತ ಇರಬಹುದು. ಸಾಮಾನ್ಯವಾಗಿ ಈ ಹಿಂದೆ ಹಳ್ಳಿಗಳಲ್ಲಿ ಎಲ್ಲರೂ ಎಲೆ ಅಡಿಕೆ ಹಾಕುತ್ತಿದ್ದರು. ಜಗಿದಾಗ ಅದೆಲ್ಲಾ ಕೆಂಪಗೆ ಆಗುತ್ತಿತ್ತು. ಎಲ್ಲಿಯಾದರೂ ನಡೆದುಕೊಂಡು ಹೋಗುವಾಗ ಸಹ ಎಲೆ ಅಡಿಕೆ ಹಾಕಿಕೊಂಡೇ ಹೋಗುತ್ತಿದ್ದರು. ಮಾರ್ಗ ಮಧ್ಯದಲ್ಲಿ ಅದು ಅವಶ್ಯಕ ಇಲ್ಲ ಅಂದಾಗ ಉಗಿಯುತ್ತಿದ್ದರು. ಅದು ಕೆಂಪಾಗಿ ಕೆಳಗೆ ಬೀಳುತ್ತಿತ್ತು. ಅದನ್ನೇ ದಾರಿಯಲ್ಲಿ ಹೋಗುತ್ತಾ ಹೋಗುತ್ತಾ ಕೆಂಪೆತ್ತು ಕೆಳಗೆ ಬಿತ್ತು ಎಂದು ಆ ಗಾಡಿಯ ಎತ್ತಿಗೆ ಹೋಲಿಸಿ ಒಗಟು ಕಲ್ಪಿಸಿದ್ದಾರೆ. ಊಹೆ ಕಷ್ಟ!
೧೪ " ಅಂಕುಡೊಂಕಿನ ಬಾವಿ, ಶಂಖ ಚಕ್ರದ ಬಾವಿ, ಬೊಮ್ಮ ಮಾಡಿದ ಭಾವಿ, ಗುಬ್ಬಿ ಕುಡಿಯಲು ಒಂದು ಹನಿ ನೀರಿಲ್ಲ " ಉತ್ತರ ' ಕಿವಿ '. ತುಂಬಾ ಹೋಲಿಕೆಯಾಗುವ ಸುಂದರ ವರ್ಣನೆ. ಆರಂಭದ ಹಗಲವಾದ ಕಿವಿಯನ್ನು ಅಂಕುಡೊಂಕಾದ ಬಾವಿಯೆಂತಲೂ, ಒಳಕ್ಕೆ ಹೋಗುತ್ತಾ ಕಿರಿದಾಗುವ ಶಂಖದಂತಹ ಆಕಾರದ ಸುರಂಗದಂತಹ ಒಳಕಿವಿಯನ್ನು ಶಂಖ ಚಕ್ರದ ಬಾವಿ ಎಂತಲೂ ವರ್ಣಿಸಿದೆ! ಭಗವಂತ ಸೃಷ್ಟಿಸಿದ ಬಾವಿಯಾದರೂ ಅದರಲ್ಲಿ ಗುಬ್ಬಿ ಕುಡಿಯಲು ಒಂದು ಹನಿ ನೀರಿಲ್ಲ ಅಂತ ಕಿವಿಯನ್ನು ವರ್ಣಿಸಿ ಅಚ್ಚರಿ ವ್ಯಕ್ತಪಡಿಸಿದ ಒಗಟು ಇದಾಗಿದೆ.
೧೫ ” ಮಗಳು ತಾಯಿ ಮನೆಗೆ ಹೋಗಬಹುದು
ತಾಯಿ ಮಗಳ ಮನೆಗೆ ಹೋಗಲಿಕ್ಕೆ ಆಗದು!” ಈ ಒಗಟು ಕೇಳಿಯೇ ಆಶ್ಚರ್ಯ ಅಗುತ್ತದೆ. ಆದರೆ ಉತ್ತರ ತಿಳಿದ ಮೇಲೆ ಕುತೂಹಲ ತಣೆಯುತ್ತದೆ. ಆ ಕಲ್ಪನೆ ಸೊಗಸೆನಿಸುವುದು. ಇದಕ್ಕೆ ಉತ್ತರ ಸೇರು, ಅಚ್ಚೇರು. ಸೇರು, ಅಚ್ಚೇರು ಇವು ಹಿಂದೆ ದವಸಧಾನ್ಯ ಅಳೆಯುವ ಸಾಧನಗಳಾಗಿದ್ದವು. ಅಚ್ಚೇರು ಅಂದರೆ ಅರ್ದ ಸೇರು. ತಾಯಿಯನ್ನು ಸೇರಿಗೆ, ಮಗಳನ್ನು ಅರ್ಧ ಸೇರಿಗೆ ಹೋಲಿಸಿದೆ. ಅರ್ಧ ಸೇರಿಗೆ ಹೋಲಿಸಲಾದ ಮಗಳು ತನಗಿಂತ ಉದ್ದ ಮತ್ತು ಗಾತ್ರದಲ್ಲಿ ದೊಡ್ಡದಾಧ ಸೇರಿಗೆ ಹೋಲಿಸಲಾದ ತಾಯಿಯ ಒಳಗೆ ಹೋಗಬಹದಾಗಲಿ ತನಗಿಂತ ಗಾತ್ರದಲ್ಲಿ ಚಿಕ್ಕದಾದ ಮಗಳಿಗೆ ಹೋಲಿಸಿದ ಅರ್ಧ ಸೇರಿನ ಒಳಗೆ ತಾಯಿಗೆ ಹೋಲಿಸಿದ ಸೇರು ಪ್ರವೇಶಿಸಲಾಗದು. ಇಂದು ಸೇರು, ಅರ್ಧ ಸೇರು ವ್ಯವಹಾರದಿಂದ ದೂರವಾಗಿವೆ. ಇವುಗಳ ಪರಿಚಯ ಎಲ್ಲರಿಗೂ ಇರದಿರುವುದರಿಂದ ಉತ್ತರ ಊಹಿಸುವುದು ಕಷ್ಟ! ಅನಕ್ಷರಸ್ಥರಾದರೂ ಬುದ್ದಿವಂತರು ಎಂದು ಒಗಟಿನ ಕಲ್ಪನೆಗಳು ಸಾರುತ್ತವೆ.
. ೧೬ ” ಕಂಚಿನ ಕಣ, ಮಲ್ಲಿಗೆ ರಾಶಿ, ಐದು ಜನ ಕರ್ಸಿ ದುರ್ಗದ್ ಬಾಗ್ಲು ತೆಗ್ಸಿ.! ಸೊಗಸಾದ ಒಗಟು. ಸುಂದರ ಕಲ್ಪನೆ. ಕಂಚಿನ ಕಣ, ಮಲ್ಲಿಗೆ ರಾಶಿ, ಐದು ಜನ ಕರೆಯಿಸಿ, ದುರ್ಗದ ಬಾಗಿಲು ತೆಗೆಯಿಸಿ ” – ಹೀಗೆ ಅದನ್ನು ಗ್ರಂಥಸ್ಥ ಭಾಷೆಯಲ್ಲಿ ಬರೆಯಬಹುದು.
ಉತ್ತರ : ಕಂಚಿನ ಕಣ ಅಂದರೆ ಊಟದ ತಟ್ಟೆ
ಮಲ್ಲಿಗೆ ರಾಶಿ ಅಂದರೆ ತಟ್ಟೆಯಲ್ಲಿನ ರಾಶಿಯ ಆಕಾರದಲ್ಲಿರುವ ಅನ್ನ.
ಐದು ಜನ ಅಂದರೆ ಕೈಯ ಐದು ಬೆರಳು
ದುರ್ಗದ ಬಾಗಿಲು ಅಂದರೆ ಬಾಯಿ
ತಟ್ಟೆಯಲ್ಲಿನ ಅನ್ನವನ್ನು ಐದು ಬೆರಳಿನ ಕೈಯಿಂದ ಬಾಯಿಯಲ್ಲಿಟ್ಟು ಊಟ ಮಾಡುವ ಕ್ರಿಯೆಯನ್ನು ಹೀಗೆ ಒಗಟಾಗಿಸಿದೆ. ಎತ್ತರದಲ್ಲಿರುವ ತಲೆಯನ್ನು ದುರ್ಗಕ್ಕೆ ತಲೆಯಲ್ಲಿನ ಬಾಯಿಯನ್ನು ದುರ್ಗದ ಬಾಗಿಲಿಗೆ ಹೋಲಿಸಿರುವುದು ಸುಂದರ. ಊಟದ ತಟ್ಟೆಯನ್ನು ಕಂಚಿನ ಕಣಕ್ಕೆ , ನೆಲ್ಲಕ್ಕಿಯಿಂದ ತಯಾರಿಸಿ ಉಣಲು ಬಡಿಸಿದ ರಾಶಿ ಆಕಾರದ ಅನ್ನುವನ್ನು ಮಲ್ಲಿಗೆ ರಾಶಿಗೆ, ಊಟುಮಾಡುವ ಕೈಯ್ಯಲ್ಲಿನ ಐದು ಬೆರಳುಗಳನ್ನು ಐದು ಜನರಿಗೆ, ಐದು ಬೆರಳಿನ ಕೈ ಅನ್ನದ ತುತ್ತು ಹಿಡಿದು ಬಾಯಿಯ ಬಳಿ ಬಂದಾಗ ಬಾಯಿ ತೆರೆಯುವುದಕ್ಕೆ, ಐದು ಜನರ ಕರೆಯಿಸಿ ದುರ್ಗದ ಬಾಗಿಲು ತೆರೆಯಿಸುವಿಕೆಗೆ ಹೋಲಿಸಿದೆ. ಸುಂದರ ಕಲ್ಪನೆಯ ಒಗಟು.
. ೧೭ ಜಾನಪದ ಒಗಟಿನಂತೆ ಸರ್ವಜ್ಞನ ಒಂದು ಒಗಟಿನ ವಚನ ಜನಪ್ರಿಯ ಆಗಿರುವುದರಿಂದ, ಎಷ್ಟೋ ಜನ ಜಾನಪದ ಒಗಟು ಅಂತ ಇದನ್ನು ಭಾವಿಸಿರುವುದರಿಂದ ವಿವರಣೆಗೆ ತೆಗೆದುಕೊಂಡಿದೆ. ” ಕಲ್ಲರಳಿ ಹೂವಾಗಿ, ಎಲ್ಲರಿಗೆ ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ ” ಇದು ಸರ್ವಜ್ಞನ ವಚನ. ಹಿಂದೆ ಇಂದಿನಂತೆ ಮನೆಗಳಿಗೆ ಬಳಿಯಲು ಬಣ್ಣ ಇರಲಿಲ್ಲ. ಬಿಳಿಯದಾಗಿ ಕಾಣುವ ಸುಣ್ಣವನ್ನು ಹಬ್ಬ ಹರಿ ದಿನಗಳಲ್ಲಿ ಬಳಿಯುತ್ತಿದ್ದರು. ಒಂದು ಬಗೆಯ ಮೃದುವಾದ ಕಲ್ಲುಗಳನ್ನು ತಂದು ಸುಣ್ಣಗಾರರು ಗುಮ್ಮಿ ( ಬುಟ್ಟಿ ) ಯಲ್ಲಿ ಹಾಕಿ ಸುಟ್ಟಾಗ ಅವು ಸ್ವಲ್ಪ ಹಿಗ್ಗಿ ಮೃದು ಆಗುತ್ತಿದ್ದವು. ಅವನ್ನು ಜನ ಕೊಂಡು ಒಂದು ಸ್ವಾರೆ ( ಮಡಿಕೆ ) ಯಲ್ಲಿ ಹಾಕಿ ಕೆಲವರು ಬಿಸಿ ನೀರು, ಇನ್ನೂ ಕೆಲವರು ತಣ್ಣೀರು ಹಾಕುತ್ತಿದ್ದರು. ಆಗ ಅದು ವಿಪರೀತ ಉರಿ ಇಟ್ಟಂತೆ ಕೊತಕೊತ ಕುದಿಯುತ್ತಿತ್ತು. ಅಷ್ಟೇ ಅಲ್ಲ ಅದನ್ನು ಶೇಖರಿಸಿದ ಮಣ್ಣೆನ ಮಡಿಕೆ ಮುಟ್ಟಲಾಗದಷ್ಟ ಬಿಸಿಯಾಗಿರುತ್ತಿತ್ತು! ಇದು ನನಗೆ ಅಚ್ಚರಿ! ಒಂದರ್ಧ ಗಂಟೆಯ ನಂತರ ನಿಧಾನವಾಗಿ ಕುದಿಯುವುದು ನಿಲ್ಲುತ್ತಿತ್ತು. ನಿಲ್ಲುವ ಹೊತ್ತಿಗೆ ಕಲ್ಲೆಲ್ಲಾ ಹೂವಿನ ರೀತಿ ಹಿಗ್ಗಿ, ಕರಗಿ ಬೆಣ್ಣೆಯ ತರಹ ಆಗಿ ಹೆಪ್ಪುಗಟ್ಟಿ ಸಮವಾಗಿ ನಿಲ್ಲುತ್ತಿತ್ತು. ಇದೇ ಸುಣ್ಣ. ಇದು ಎಲ್ಲರ ಮನೆಯಲ್ಲೂ ಇರುತ್ತಿತ್ತು. ಹಿಂದೆ ಪ್ರತಿದಿನ ರಾತ್ರಿ ಊಟದ ನಂತರ ಎಲೆ ಅಡಿಕೆ ಹಾಕಲು ಮನೆಮಂದಿಯೆಲ್ಲಾ ಬಳಸುತ್ತಿದ್ದರು. ಬ್ರಶ್ ಎಂಬ ಮೋಟು ಪೊರಕೆ ತೆಗೆದುಕೊಂಡು ಈ ಸುಣ್ಣದಲ್ಲಿ ಅದ್ದಿ ಗೋಡೆಗೆ ಬಳಿಯುತ್ತಿದ್ದರು. ಅದೇ ಅಂದಿನ ಬಿಳಿಯ ಬಣ್ಣ! ಎಲ್ಲರು ಬಳಸುವ ಬಣ್ಣ!
" ಕಲ್ಲರಳಿ ಹೂವಾಗಿ " ಅಂದರೆ ಸುಣ್ಣಧ ಕಲ್ಲುಗಳೇ ಹೂವಿನಂತೆ ಅರಳಿ ಸುಣ್ಣ ಆಗುವುದು. " ಎಲ್ಲರಿಗೂ ಬೇಕಾಗಿ " ಅಂದರೆ ಎಲ್ಲರೂ ಎಲೆ ಅಡಿಕೆ ಹಾಕಲು, ಮನೆಗಳಿಗೆ ಬಳಿಯಲು ಬೇಕಾಗುವುದು. " ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ "ಎಂದರೆ ಮನೆ, ಮಠ, ದೇವಾಲಯಗಳಿಗೆ, ಅವುಗಳ ಶಿಖರಕ್ಕೂ ಸುಣ್ಣವನ್ನೇ ಬಿಳಿಯ ಬಣ್ಣವಾಗಿ ಬಳಿಯುತ್ತಿದ್ದರು. ಶಿಖರ ಮನೆ, ಮಠಗಳಿಗಿಂತ ಎತ್ತರ ಇರುತ್ತದೆ. ಸೂರ್ಯನ ಕಿರಣಗಳು ಮೊದಲು ಶಿಖರದ ಮೇಲೆ ಬೀಳುತ್ತವೆ. ಸುಣ್ಣ ಬಳಿದಿರುವುದರಿಂದ ಶಿಖರ ಹೆಚ್ಚು ಪ್ರಕಾಶಿಸುವುದು. ಮಲ್ಲಿಕಾರ್ಜುನನೇ ಬೆಳಕು ಕೊಡುವವನು. ಅವನ ಶಿಖರಕ್ಕೆ ಬೆಳಕು ಕೊಡುವುದು ಈ ಸುಣ್ಣದ ಹೆಚ್ಚುಗಾರಿಕೆ ! ಇದು ಉತ್ತಮ ಒಗಟು.
* " ಕಲ್ಲಲ್ಲಿ ಹುಟ್ಟುವುದು, ಕಲ್ಲಲ್ಲಿ ಬೆಳೆಯುವುದು, ನೆತ್ತಿಯಲ್ಲಿ ಕುದಿಯುವುದು " - ಸುಣ್ಣದ ಬಗ್ಗೆ ಇರುವಂತಹ ಒಂದು ಜಾನಪದ ಒಗಟಿದು.
೧೮ " ಕರ್ರನ್ನವಳೆ ಕರಿಮುಖದವಳೆ, ಕಾಲುಂಗರದವಳೆ ನೆರೆಮನೆಗೆ ಬರ್ರನ್ನೋಗಿ ಬಿರ್ರನೆ ಬಾರೆ " - " ಕರಿ ಸೀರೆ ಉಟ್ಟಾಳ,ಕಾಲುಂಗುರ ತೊಟ್ಟಾಳ, ಮೇಲೆ ಹೋಗುತ್ತಾಳ, ಕೆಳಗೆ ಬರುತ್ತಾಳ ". ಈ ಎರಡೂ ಒಗಟಿಗೆ ಉತ್ತರ ' ಒನಕೆ '. ಹಿಂದೆ ಎಲ್ಲರ ಮನೆಯಲ್ಲೂ ಇರುತ್ತಿದ್ದ ' ಒನಕೆ ' ಮಿಕ್ಸಿ , ಗ್ರೈಂಡರ್ ಬಂದಮೇಲೆ ಕಣ್ಮರೆಯಾಗಿದೆ. ಚಿತ್ರದುರ್ಗದ ಕೋಟೆಯ ಕಾವಲುಗಾರನ ಹೆಂಡತಿ ಓಬವ್ವ ಕೋಟೆಯ ಕಿಂಡಿಯೊಂದರಲ್ಲಿ ನುಸುಳುತ್ತಿದ್ದ ಹೈದರನ ಸೈನಿಕರ ತಲೆ ಚಚ್ಚುತ್ತಿದ್ದ ಉದ್ದನೆಯ ಮರದ ಆಯುಧವನ್ನು ' ನಾಗರಹಾವು ' ಚಲನಚಿತ್ರದಲ್ಲಿ ಗಮನಿಸದವರಿಲ್ಲ! ಅದೇ ಒನಕೆ. ಸಾಮಾನ್ಯವಾಗಿ ಒನಕೆ ಮರದ್ದಾಗಿರುತ್ತದೆ ಮತ್ತು ಕಪ್ಪಾಗಿರುತ್ತದೆ. ಇದನ್ನು ಒರಳಿನಲ್ಲಿ ನವಣೆಯ ಸಿಪ್ಪೆ ತೆಗೆಯಲು, ಮೆಣಸಿನಪುಡಿ, ಕಡಲೆ, ಸೆಂಗ ಮುಂತಾದವುಗಳ ಪುಡಿ ಮಾಡಲು ಬಳಸುತ್ತಿದ್ದರು. ಒನಕೆಯ ಕುಟ್ಟುವ ಭಾಗ ಕುಟ್ಟಿ ಕುಟ್ಟಿ ಛಿಧ್ರವಾಗದಿರಲೆಂದು ಕಬ್ಬಿಣದ ದುಂಡಾದ ಹಣಸು ಹಾಕಿರುತ್ತಿದ್ದರು. ಒನಕೆ ಕಪ್ಪಾಗಿದ್ದುದರಿಂದ ಅದನ್ನು ಕರ್ರನ್ನವಳೆಂದು, ಕರಿ ಸೀರೆ ಉಟ್ಟವಳೆಂದು, ಹಣಸನ್ನು ಕಾಲುಂಗುರವೆಂದು ಭಾವಿಸಿ ಕಾಲುಂಗುರದವಳೆಂದು ಕಲ್ಪಿಸಿ ಈ ಒಗಟು ರಚಿಸಿದೆ. ಪಕ್ಕದ ಮನೆಯವರು ಒನಕೆ ಬೇಕಿದೆ ಎಂದು ಕೇಳಲು ಬಂದಾಗ ಅದು ತಮಗೂ ಬೇಕು ಬೇಗ ಹಿಂದಿರುಗಿಸಿ ಎಂದು ತೆಗೆದುಕೊಂಡು ಹೋಗಲು ಬಂದವರಿಗೆ ಹೇಳಬೇಕಾಗಿರುವುದನ್ನು ಅವರಿಗೆ ಹೇಳದೆ ಒನಕೆಯನ್ನು ಮನೆಯ ಸದಸ್ಯೆ ಎಂದು ಭಾವಿಸಿ ಒನಕೆಗೇ " ಕರ್ರನ್ನವಳೆ ..... ಬಿರ್ರನೆ ಬಾ " ಎಂದು ಹೇಳಿದ್ದಾರೆ. ನಿರ್ಜೀವಿಯನ್ನೂ ಜೀವಿ, ಮನೆಯ ಸದಸ್ಯೆ ಎಂದು ಭಾವಿಸಿ ರಚಿಸಿರುವ ಈ ಒಗಟುಗಳು ಸುಂದರ.
ಒರಳಿನಲ್ಲಿರುವ ಪದಾರ್ಥಗಳು ಬೇಕಾದಂತೆ ಬದಲಾಗಲು ಒನಕೆಯನ್ನು ಮೇಲಕ್ಕೆ ಎತ್ತಿ ಅವುಗಳ ಮೇಲೆ ಬಲವಾಗಿ ಪ್ರಹಾರ ಮಾಡುವರು. ಪ್ರಹಾರ ಮಾಡುವಾಗ ಒನಕೆ ರಭಸವಾಗಿ ಕೆಳಕ್ಕೆ ಬರುವುದು. ಈ ಕ್ರೀಯೆಯನ್ನು " ಮೇಲಕ್ಕೆ ಹೋಗುತ್ತಾಳ ಕೆಳಕ್ಕೆ ಬರುತ್ತಾಳ " ಎಂದು ಇನ್ನೊಂದು ( ಎರಡನೆಯ ) ಒಗಟಿನಲ್ಲಿ ಹೇಳಿ ಗಮನಸೆಳೆದಿದೆ.
೧೯ " ಪುಟ್ಟ ಪುಟ್ಟ ದೇವಸ್ಥಾನ, ಬಗ್ಗಿ ಬಗ್ಗಿ ನಮಸ್ಕಾರ " - ಉತ್ತರ : ಕಟ್ಟಿಗೆಯ ಒಲೆ ಉರಿಯಲೆಂದು ಮತ್ತೆ ಮತ್ತೆ ಬಗ್ಗೀ ಬಗ್ಗೀ ಊದುವುದು. ಹಿಂದೆ ಎಲ್ಲರ ಮನೆಯಲ್ಲೂ ಕುಂಬಾರರು ಮಣ್ಣಿನಿಂದ ಮಾಡಿದ ಒಲೆಗಳಿದ್ದವು. ಅವಕ್ಕೆ ಕಟ್ಟಿಗೆಯನ್ನು ಇಟ್ಟು ಉರಿಸಿ ಅಡುಗೆ ಮಾಡಬೇಕಿತ್ತು. ಕಟ್ಟಿಗೆ ತೇವವಾದ ಕಾರಣಕ್ಕೋ ಹಸಿಯಾದ ಕಾರಣಕ್ಕೋ ಗಾಳಿಯ ಅಭಾವದ ಕಾರಣಕ್ಕೋ ಅವು ಉರಿಯುತ್ತಿರಲಿಲ್ಲ. ಊದುವ ಕೊಳವೆ ತೆಗೆದುಕೊಂಡು ಊದಿ ಗಾಳಿ ಒದಗಿಸಿ ಉರಿಸುತ್ತಿದ್ದರು. ಮತ್ತೆ ಮತ್ತೆ ಒಲೆ ಉರಿಯದಾದಾಗ ಮತ್ತೆ ಮತ್ತೆ ಊದುತ್ತಿದ್ದರು. ಮೂರು ಗುಂಡುಗಳಿಂದ ಕೊನೆಯಾಗುವ ಆ ಚಿಕ್ಕ ಒಲೆಗಳು ದೇವರ ಗುಡಿಯಂತೆ, ಅವುಗಳಿಗೆ ಕಟ್ಟಿಗೆ ಇಡುವ ಜಾಗ ಗರ್ಭಗುಡಿಯ ಚಿಕ್ಕ ದ್ವಾರದಂತೆ ಕಂಡಿರಬೇಕು. ಆದ್ದರಿಂದ ಒಲೆಯನ್ನು ದೇವರ ಗುಡಿಗೆ ಹೋಲಿಸಿದರೆ. ಆ ಒಲೆ ಮುಂದೆ ಮತ್ತೆ ಮತ್ತೆ ಬಾಗಿ ಬಾಗಿ ಊದುವ ಕ್ರೀಯೆನ್ನು ಒಲೆ ಎಂಬ ದೇವಸ್ಥಾನದ ಮುಂದೆ ಬಾಗಿ ಬಾಗಿ ನಮಸ್ಕಾರ ಮಾಡಿದಂತೆ ಎಂದು ಕಲ್ಪಿಸಿದೆ. ಇದು ಸುಂದರ ಕಲ್ಪನೆಯ ಒಗಟಾಗಿದೆ.
೨೦ ಸಂತ್ಯಾಗಿಂದ ತರೋದು, ಮುಂದಿಟ್ಟುಕೊಂಡು ಅಳೋದು. ( ಸಂತೆಯಿಂದ ತರುವುದು ಮುಂದೆ ಇಟ್ಟುಕೊಂಡು ಅಳುವುದು ) ಉತ್ತರ ಈರುಳ್ಳಿ. ಈರುಳ್ಳಿ ಸಂತೆಯಿಂದ ಕೊಂಡು ತರುವುದೆಂದರೆ ಅಳುವನ್ನು ಕೊಂಡು ತಂದಂತೆ. ಏಕೆಂದರೆ ಅದನ್ನು ಅಡುಗೆ ಮಾಡಲು ಬಳಸುವಾಗ ಈಳಿಗೆಯಿಂದಲೋ ಚಾಕಿನಿಂದಲೋ ಮುಂದೆ ಇಟ್ಟುಕೊಂಡೇ ಕತ್ತರಿಸುತ್ತೇವೆ. ಆಗ ಕಣ್ಣೀರು ಬರುವುದು. ಸ್ಪಷ್ಟ ಸರಳ ಒಗಟು.
ನಮ್ಮ ಮನೆಯಲ್ಲಿ ಒಬ್ಬ ಹುಡುಗ ಇದ್ದಾನೆ ಅಂಗಿ ಮೇಲೆ ಅಂಗಿ ತೊಡುತ್ತಾನೆ. ಇದಕ್ಕೆ ಉತ್ತರ ಸಹ ಈರುಳ್ಳಿ.
ಮೊದಲನೆಯದರಲ್ಲಿ ಈರುಳ್ಳಿಯ ರಸದ ಪರಿಣಾಮದ ಬಗ್ಗೆ ಒಗಟು ರಚಿಸಿದರೆ ಎರಡನೆಯದರಲ್ಲಿ ಈರುಳ್ಳಿ ಕಾಯದ ರಚನೆ ಬಗ್ಗೆ ರಚಿಸಿದೆ.
೨೧ . ೧ ಚಿಕ್ಕ ಮನೆಗೆ ಚಿನ್ನದ ಬೀಗ
೨ ಮೋಟು ಮರಕ್ಕೆ ಗುದ್ದಲಿ ಸಿಕ್ಕಿಕೊಂಡಿದೆ.
೩ ಮೋಟು ಗೋಡೆ ಮೇಲೆ ದೀಪ ಉರಿತಿದೆ.
ಈ ಮೂರೂ ಒಗಟುಗಳಿಗೆ ಉತ್ತರ ಮೂಗುತಿ. ಒಂದನೆಯ ಒಗಟಿನಲ್ಲಿ ಮೂಗನ್ನು ಚಿಕ್ಕ ಮನೆಗೆ, ಮೂಗುತಿಯನ್ನು ಚಿನ್ನದ ಬೀಗಕ್ಕೆ ಹೋಲಿಸಿದರೆ, ಎರಡನೆಯದರಲ್ಲಿ ಮೂಗನ್ನು ಮೋಟು ಮರಕ್ಕೆ, ಮೂಗುತಿಯನ್ನು ಗುದ್ದಲಿಗೆ ಹೋಲಿಸಿದರೆ ಮೂರನೆಯದರಲ್ಲಿ ಮೂಗನ್ನು ಮೋಟು ಗೋಡೆಗೆ, ಮೂಗುತಿಯನ್ನು ದೀಪ ಉರಿಯುತ್ತಿರುವುದಕ್ಕೆ ಹೋಲಿಸಿದ್ದಾರೆ. ಅದು ಕೆಂಪು ಹರಳಿನ ಮೂಗುತಿ ಇದ್ದೀತು. ಮೂಗುತಿಯನ್ನು ಮೂವರು ಅವರವರ ಕಲ್ಪನಾ ಶಕ್ತಿಗನುಗುಣವಾಗಿ ಬೇರೆ ಬೇರೆಯದಕ್ಕೆ ಹೋಲಿಸಿ ವರ್ಣಿಸಿದ್ದಾರೆ. ಇಂದು ಎಲ್ಲರೂ ಮೂಗುತಿ ಇಟ್ಟುಕೊಳ್ಳದಿರುವುದರಿಂದ ಇವುಗಳ ಊಹೆನೂ ಕಷ್ಟ.
ಮರದಾಗೆ ಮರ ಹುಟ್ಟಿ ಮರ ಶಿಖರದಿ ಹಣ್ಣಾಗಿ ತಿನಬಾರದ ಹಣ್ಣು ಬಲು ರುಚಿ. ಇನ್ನೊಂದು ಒಟ್ಟಿನಲ್ಲಿ ' ಶಿಖರದಿ ' ಪದದ ಬದಲಾಗಿ ' ಚಕ್ರದಿ ' ಎಂಬ ಪದ ಇದೆ. ಉತ್ತರ ' ಮಗು' ಅಂತ ಹೇಳುವವರು. ಉತ್ತರ ಪೂರ್ಣ ಅನಿಸದೆ ಮಗು ಹೇಗೆ ಉತ್ತರ ಆಗುವುದು ಎಂಬ ಪ್ರಶ್ನೆ ಕಾಡುವುದರಿಂದ ವಿವರಣೆ ಅವಶ್ಯಕ.
ಒಂದು ಗೀತೆ ರೂಪದ ಒಗಟು
ಇದೊಂದು ಗೀತೆ ರೂಪದ ಒಗಟು. ಭಜನೆ, ಕೋಲಾಟಗಳಲ್ಲಿ ಹಾಡುತ್ತಿದ್ದರು. ಈಗ ಬೇರೆ ಬೇರೆ ಕಡೆ ಬಳಸಿರುವುದು ಕಾಣಬಹುದು. ಇದು ನಲ್ಲಿ ನಲ್ಲೆಯರ ಸಂಭಾಷಣೆಯ ರೂಪದಲ್ಲಿದೆ. ಈ ಗೀತೆ ಎರಡು ಮಾತುಗಳನ್ನು ಮಾತ್ರ ಹಂಚಿಕೊಂಡಿರುವೆ.
ಮಲ್ಲಿಗೆ :
ಒಬ್ಬನಿಗೆ ಕೈಕೊಟ್ಟೆ ಒಬ್ಬನಿಗೆ ಕಾಲ್ ಕೊಟ್ಟೆ
ಒಬ್ಬನಿಗೆ ಸೀರೆನೆ ಬಿಚ್ಚಿಕೊಟ್ಟೆ ಚೆಲುವ!
ಚೆಲುವ :
ಯಾವನಿಗೆ ಕೈಕೊಟ್ಟೆ ಯಾವನಿಗೆ ಕಾಲ್ ಕೊಟ್ಟೆ
ಯಾವನಿಗೆ ಸೀರೆಯನ್ನೇ ಬಿಚ್ಚಿಕೊಟ್ಟೆ ಮಲ್ಲಿಗೆ?!
ಮಲ್ಲಿಗೆ :
ಬಳೆಗಾರ್ಗೆ ಕೈಕೊಟ್ಟೆ ಆಕ್ಕಸಾಲಿಗೆ ಕಾಲ್ ಕೊಟ್ಟೆ
ಮಡಿವಾಳ್ಗೆ ಸೀರೆಯನೆ ಬಿಚ್ಚಿಕೊಟ್ಟೆ ಚೆಲುವ!
ಮಲ್ಲಿಗೆ :
ಒಬ್ಬನ್ನ ಕಟ್ಟಿದ್ದೆ, ಒಬ್ಬನ್ನ ಬಿಟ್ಟಿದ್ದೆ,
ಒಬ್ಬನ್ನ ಕರ್ಕೊಂಡು ಒಳಗಾಗಿದ್ದೆ ಚೆಲುವ !
ಚೆಲುವ :
ಯಾವನ್ನ ಕಟ್ಟಿದ್ದೆ ಯಾವನ್ನ ಬಿಟ್ಟಿದ್ದೆ
ಯಾವನ್ನ ಕರ್ಕೊಂಡು ಒಳಗಿದ್ದೆ ಮಲ್ಲಿಗೆ?
ಮಲ್ಲಿಗೆ:
ಹಸುವನ್ನು ಕಟ್ಟಿದ್ದೆ ಕರುವನ್ನು ಬಿಟ್ಟಿದ್ದೆ
ಹಾಲನ್ನು ಕರ್ಕೊಂಡು ಒಳಗಿದ್ದೆ ಚೆಲುವ!
- ಒಗಟು ಎಸೆಯುವ ಸೊಗಸು : ಒಗಟುಗಳು ಬುದ್ದಿವಂತರ ರಚನೆಗಳು ಅಂದಮೇಲೆ ಅವರು ಚೆನ್ನಾಗಿ ಕಟ್ಟಿರುತ್ತಾರೆ. ಕೆಲವರು ಹೋಲಿಕೆಗೆ ಮಹತ್ವ ಕೊಟ್ಟರೆ ಇನ್ನೂ ಕೆಲವರು ಅವುಗಳ ಕಟ್ಟುವಿಕೆಗೆ ಹಲವರು ಅಭಿವ್ಯಕ್ತಿಗೆ, ಮತ್ತೆ ಹಲವರು ಪದಗಳ ಆಯ್ಕೆಯಲ್ಲಿ ಚತುರತೆ ಮೆರೆಯಲು, ಶಬ್ದಗಳ ಪುನರಾವರ್ತನೆಯಿಂದ ಕಿವಿಗೆ ಹಿತವೆನಿಸುವಂತಹವುಗಳಿಗೆ ಮಹತ್ವ ಕೊಟ್ಟು ಒಗಟುಗಳ ರಚಿಸಿದ್ದಾರೆ. ನನ್ನನ್ನು ಗಮನಸೆಳೆದ ಅಂತಹ ಕೆಲವು ಒಗಟುಗಳ ನೋಡುವ.
- ಕಂಬದಮೇಲೆ ನಿಂಬೆ – ಲವಂಗ
- ” ಅಂತಪ್ಪನ ತೋಟದಾಗೆ ಇಂಥಿಂಥ ಹಣ್ಣು ತುಂಬಿಲ್ಲ ತುಸುಕಿಲ್ಲ ” – ಮುದ್ದೆ.
- ನಮ್ಮ ಮನೆಯಲ್ಲಿ ಒಬ್ಬ ಅಜ್ಜಿ ಇದ್ದಾಳೆ, ಅವಳನ್ನು ಗುದ್ದಿದರೆ ಮನೆತುಂಬ ಮಕ್ಕಳು ಆಗುತ್ತವೆ! – ಬೆಳ್ಳುಳ್ಳಿ.
- ಹಗ್ಗ ಹಾಸಿದೆ ಕೋಣ ಮಲಗಿದೆ – ಕುಂಬಳ ಬಳ್ಳಿ ಮತ್ತು ಅದರ ಕಾಯಿ.
- ಕೆಂಪು ಹುಡುಗ ಕಪ್ಪು ಟೋಪಿ.- ಗುಲಗುಂಜಿ.
- ಇಷ್ಟೇ ಹುಡುಗ ಚೂಟಿಗಾರ – ಸೂಜಿ
- ಇಷ್ಟೇ ಹುಡುಗ ಟೋಪಿಗಾರ. – ಬೆಂಕಿಕಡ್ಡಿ.
- ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ – ತಿಲಕ / ಕುಂಕುಮ
- ಚೋಟುದ್ದ ಹುಡುಗಿಗೆ ಮಾರುದ್ದ ಜಡೆ – ಸೂಜಿ ಮತ್ತು ಅದರಲ್ಲಿ ಇರುವ ದಾರಿ.
- ಹಸಿರು ಗಿಡದಲ್ಲಿ ಮೊಸರು ಚೆಲ್ಲಿದೆ – ಮಲ್ಲಿಗೆ ಬಳ್ಳಿ ಮತ್ತು ಅದರಲ್ಲಿನ ಹೂಗಳು.
- ಬೆಳಿಗ್ಗೆ ನಾಲ್ಕು ಕಾಲು , ಮಧ್ಯಾನ ಎರಡು ಕಾಲು, ಸಂಜೆ ಮೂರು ಕಾಲು. ಮಗು ಹುಟ್ಟಿ ಸ್ವಲ್ಪ ದಿನಕ್ಕೆ ಕೈಗಳನ್ನೂ ಕಾಲು ಮಾಡಿಕೊಂಡು ಅಂಬೆಗಾಲಿಡುವುದು ಬೆಳಿಗ್ಗೆ ನಾಲ್ಕು ಕಾಲು. ಮಗು ಬೆಳೆದು ಎರಡು ಕಾಲಲಿ ನಡೆಯುವುದು ಮಧ್ಯಾಹ್ನ ಎರಡು ಕಾಲು. ಮುದುಕರು ಆದಮೇಲೆ ಎರಡು ಕಾಲಲಿ ನಡೆಯಲು ತಡವರಿಸಿದಾಗ ಆಸರೆಗೆಂದು ಕೋಲು ಊರುವರು. ಅದು ಸಂಜೆ ಮೂರು ಕಾಲು.
- ಹುಡುಗಿ ಮುಂದೆ ನಾಗರಹಾವು ಹಿಂದೆ – ಜಡೆ. ಜಡೆಯು ಮೇಲೆ ಹಾವಿನ ಹೆಡೆಯ ರೀತಿ ಇದ್ದು, ಕೆಳಗಡೆ ಬರ್ತಾ ಬರ್ತಾ ಬಾಲದಂತೆ ಸಣ್ಣ ಆಗುವುದು. ಆದುದರಿಂದ ನಾಗರ ಹಾವಿಗೆ ಹೋಲಿಸಲಾಗಿದೆ.
- ನಮ್ಮ ಮನೆಯಲ್ಲಿ ಒಬ್ಬ ಹುಡುಗಿ ಐದಾಳೆ ಸೀರೆ ಮೇಲೆ ಸೀರೆ ಉಡುತ್ತಾಳೆ. – ಈರುಳ್ಳಿ. * ಒಂಟಿಕಾಲಿನ ಪಕ್ಷಿಗೆ ಒಂಬೈನೂರು ತತ್ತಿ – ಉತ್ತರ ಅಡಿಕೆ ಮರದ ಗೊನೆಯಲ್ಲಿನ ಅಡಿಕೆಕಾಯಿಗಳು. * ಅಮ್ಮನ ಸೀರೆ ಮಡಚಕಾಗಲ್ಲ
- ಕಟ್ಟೆಯಿಲ್ಲದ ಕೆರೇಲಿ ತಟ್ಟೆ ತೇಲುತ್ತೆ – ಆಕಾಶ ಚಂದಿರ
ಅಪ್ಪನ ದುಡ್ಡು ಎಣಿಸಕಾಗಲ್ಲ – ಆಕಾಶ , ನಕ್ಷತ್ರ - ಅರ್ಧ ರೊಟ್ಟಿ ಅವರೆ ಕಾಳು ಪಲ್ಯ – ಚಂದ್ರ, ನಕ್ಷತ್ರ
- ಗೋಡೆ ಮುದ್ದಪ್ಪ ನೀನಿದ್ದಲ್ಲಿ ನಿದ್ದೆ ಇಲ್ಲಪ್ಪ. – ತಿಗಣೆ
- ಕರಿ ಕಂಬಳಿ ನೆಂಟ ಸರ್ವತ್ತಲ್ಲಿ ಹೊಂಟ. – ಹೆಗ್ಗಣ
- ಹುಲಿಯ ಚಿಕ್ಕಮ್ಮ ಇಲಿಯ ಮುಕ್ಕಮ್ಮ ! – ಬೆಕ್ಕು * ಸಾಗರ ಪುತ್ರ, ಸಾರಿನ ಮಿತ್ರ.! – ಉಪ್ಪು
- ದಾಸ್ ಬುರುಡೆ ದೌಲತ್ ಬುರುಡೆ ಲೋಕಕೆಲ್ಲಾ ಎರಡೇ ಬುರುಡೆ! – ಸೂರ್ಯ ಚಂದ್ರ.
- ಕೂಗಿದರೆ ರಾವಣ ಹಾರಿದರೆ ಹನುಮಂತ ಕೂತರೆ ಮುನಿ!. – ಕಪ್ಪೆ
- ಅಂಗಣ್ಣ ಇಂಗಣ್ಣ
ಅಂಗಿ ಬಿಚ್ಚಿ ನುಂಗಣ್ಣ - ಬಡಬಡ ಬಂದ
ಅಂಗಿ ಕಳಚಿದ
ಬಾವಿಯೊಳಗೆ ಬಿದ್ದ
ಇವೆರಡು ಒಗಟು ಬೇರೆ ಬೇರೆಯಾದರೂ, ಒಂದನೆಯದು ಬಾಳೆಹಣ್ಣನ್ನು ಸೇವಿಸುವವರ ದೃಷ್ಟಿಯಲ್ಲಿ ನೋಡಿ ರಚಿಸಿದುದಾದರೆ, ಇನ್ನೊಂದು ಬಾಳೆಹಣ್ಣಿನ ದೃಷ್ಟಿಯಿಂದ ನೋಡಿ ರಚಿಸಿದುದಾಗಿದೆ. ಒಂದರಲ್ಲಿ ನುಂಗುವ ಕ್ರೀಯೆ, ಇನ್ನೊಂದರಲ್ಲಿ ಬೀಳುವ ಕ್ರೀಯೆ ಇದ್ದರೂ ಉತ್ತರ ಮಾತ್ರ ಒಂದೇ. ಬಾಳೆಹಣ್ಣು. ಲೆಕ್ಕವಿಲ್ಲದಷ್ಟು ಇರುವ ಜಾನಪದ ಒಗಟುಗಳಲ್ಲಿ ಇವು ನನ್ನ ಗಮನಕ್ಕೆ ಬಂದ ಅಭಿವ್ಯಕ್ತಿಸುವಿಕೆಯಲ್ಲಿನ ಕೆಲವು ಸೊಗಸಾದ ಒಗಟುಗಳು.
–ಕೆ ಟಿ ಸೋಮಶೇಖರ ಹೊಳಲ್ಕೆರೆ.
