ಹೌದು ಮಾರ್ರೆ, ಎಂತಂತ ಹೇಳ್ಲಿ ಈ ಹೊಟ್ಟೆಯ ಬಗ್ಗೆ? ಒಂದೆರಡು ಹೊತ್ತು ಊಟ ಇಲ್ಲದೆ ಇರಬಹುದು ಆದರೆ ಗಾಳಿ ಇಲ್ಲದೆ ಬದುಕೋಕೆ ಸಾಧ್ಯಾನಾ? ನಮ್ ಬದುಕಿನಲ್ಲಿ ಮೂಗು, ಗಾಳಿ, ಶ್ವಾಸಕೋಶಗಳೇ ಮುಖ್ಯ ಅಂತ ನೀವು ಹೇಳೋದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಅಲ್ವೇ? ಇತ್ತೀಚೆಗಂತೂ ಜನ ಕಂಡ ಕಂಡಲ್ಲಿ ಹೃದಯ ಒಡೆದು, ರಕ್ತನಾಳ ಒಡೆದು, ಹಾರ್ಟ್ಗೆ ಅಟ್ಯಾಕ್ ಆಗಿ ಸಾಯಲು ಕಾರಣ ಹೊಟ್ಟೆ ತಾನೇ? ಇದನ್ನು ನೀವು ನಂಬಲೇ ಬೇಕು. ಕಾರಣ? ಹೊಟ್ಟೆಗೆ ಬೇಡದ, ಕರಗದ, ಕರಗಿಸಲಾಗದ ವಸ್ತುಗಳನ್ನು ತಿಂದ ಸಲುವಾಗಿ ಅದು ರಕ್ತಕ್ಕೆ ಪರಿವರ್ತನೆ ಆಗದೆ, ನರಗಳನ್ನು ಬ್ಲಾಕ್ ಮಾಡಿದ ಪರಿಣಾಮ ಹೃದಯಾಘಾತ ಅಲ್ವೇ? ಹೊಟ್ಟೆಗೆ ಬಹಳ ಮಹತ್ವ ಇದೆ ಅಂತ ಆಯ್ತು ತಾನೇ? ಅದಕ್ಕೇ ಹೇಳಿದ್ದು ನಾನು ’ಹೊಟ್ಟೇ ನಿನ್ನಿಂದ ನಾ ಕೆಟ್ಟೆ ’ ಅಂತ. ಈಗ ಗೊತ್ತಾಯ್ತಾ?
ಈಗಿನ ಕಾಲವಂತೂ ಟೆಕ್ನಿಕಲ್ ಯುಗದ ಹಾಗೆಯೇ ಪಾರ್ಟಿ ಯುಗ ಸಹ ಅಲ್ಲವೇ? ಹುಟ್ಟುಹಬ್ಬ ಬಂದರೆ ಪಾರ್ಟಿ, ಮಕ್ಕಳ ಹುಟ್ಟುಹಬ್ಬ, ಹೆಂಡತಿ, ಅತ್ತೆ, ಮಾವ, ಅಣ್ಣ,ತಂಗಿ ಎಲ್ಲರ ಹುಟ್ಟು ಹಬ್ಬದ ಪಾರ್ಟಿಯ ಬಳಿಕ ಕೆಲಸದಲ್ಲಿ ಬಡ್ತಿ ಬಂದರೆ ಪಾರ್ಟಿ, ಮನೆಗೆ ಹೊಸ ಟಿವಿ, ಲ್ಯಾಪ್ ಟಾಪ್ ತಂದರೆ ಪಾರ್ಟಿ, ಮಗಳಿಗೆ ಮಗನಿಗೆ ರ್ಯಾಂಕ್ ಬಂದರೆ, ಪ್ರಶಸ್ತಿ ಬಂದರೆ, ಕೆಲಸ ಸಿಕ್ಕಿದರೆ ಪಾರ್ಟಿ, ಇನ್ನು ಮಡದಿ ಗರ್ಭಿಣಿಯಾದರೆ ಪಾರ್ಟಿ, ಮಗುವಾದರೆ ಪಾರ್ಟಿ, ಕೆಲಸ ಸಿಕ್ಕಿದ್ರೆ ಪಾರ್ಟಿ, ಮೊಮ್ಮಗುವಾದರೂ ಪಾರ್ಟಿ, ಮನೆಗೆ ಬೆಕ್ಕು, ನಾಯಿ ತಂದರೆ ಪಾರ್ಟಿ, ಕಾರು ಬೈಕು ಕೊಂಡರೆ ಪಾರ್ಟಿ ಅಂತೂ ಇಂತೂ ಇದು ಪಾರ್ಟಿಯ ಯುಗವೇ ಸೈ. ಪ್ರತಿ ಪಾರ್ಟಿಯಲ್ಲಿ ನಿಜವಾಗಿ ಖುಷಿ ಪಡುವುದು ಹೊಟ್ಟೆ! ಖುಷಿ ಪಡುತ್ತದೋ, ಬೇಜಾರು ಮಾಡಿ ಕೊಳ್ಳುತ್ತದೋ ಯಾರಿಗೆ ಗೊತ್ತು ಪಾಪ! “ಇವ ಕಂಠದವರೆಗೆ ಪಾರ್ಟಿಯಲ್ಲಿ ತಿಂದು ಬಂದದ್ದನ್ನು ನಾ ಹೇಗಪ್ಪಾ ಕರಗಿಸಿಕೊಳ್ಳಲಿ! ಒಂದು ರೌಂಡ್ ವಾಕ್ ಕೂಡಾ ಮಾಡಲ್ಲ ಪ್ರಾಣಿ, ಗಟ್ಟಿ ತಿಂದು ಮಲಗಿ ಗೊರಕೆ ಹೊಡೆಯುತ್ತಿರುತ್ತಾನೆ, ನನಗೆ ಕೆಲಸ ಕೊಟ್ಟು…” ಅಂತ ಹೊಟ್ಟೆಗೆ ತಲೆನೋವು ಬಂದು, ಅಲ್ಲಲ್ಲ ಹೊಟ್ಟೆನೋವು ಬಂದು , ಅದು ಅಪ್ಸೆಟ್ ಆಗಿ, ಮರುದಿನ ಒಮ್ಮೆ ಹೋಗುವ ಟ್ಯಾಲೆಟ್ಗೆ ನಾಲ್ಕೈದು ಬಾರಿ ಹೋಗಿ, ಹೆಚ್ಚಾಗಿ ತಿಂದುದನೆಲ್ಲ ಬಿಕ್ಕಿ ಬಿಕ್ಕಿ ಹೊರ ಹಾಕಿ ’ ಅಬ್ಬಾ ‘ ಅಂದುಕೊಳ್ಳುವುದು ಸುಲಭದ ಮಾತಂತೂ ಅಲ್ಲ!
’ಬಲ್ಲವನೇ ಬಲ್ಲ , ಬೆಲ್ಲದ ಸವಿಯ’ ಎಂದ ಹಾಗೆ ಅನುಭವಿಸಿದವನಿಗೆ ಮಾತ್ರ ಗೊತ್ತು ಲೂಸ್ ಮೋಷನ್ ಸುಸ್ತು! ನೀರು ನೀರಾದ ಗಟ್ಟಿಯೂ ಆದ ಮಲ ಅಜೀರ್ಣದಿಂದ ಬಂದರೆ ಚಿಕ್ಕವರಿದ್ದಾಗ ಅಮ್ಮ ಚಹಾದ ಹುಡಿಯನ್ನು ಹುರಿದು, ಅದರ ಕಟ್ಟನ್ ಚಹಾ, ಇಲ್ಲವೇ ದಾಳಿಂಬೆ ಸಿಪ್ಪೆಯಿಂದ ಕಹಿ ಕಷಾಯ ಮಾಡಿ ಅರ್ಧ ಗ್ಲಾಸ್ ಕುಡಿಸಿ ಬಿಟ್ಟರೆ ಮುಗಿಯಿತು. ಎಲ್ಲವೂ ಸ್ಟಾಪ್! ಯಾವ ಮದ್ದು ಮಾತ್ರೆ ಬೇಕಾಗಿರಲಿಲ್ಲ. ಈಗ ಹಾಗಲ್ಲ, ಟೆಕ್ನಿಕಲ್, ಮಾಡರ್ನ್ ಯುಗ ನೋಡಿ! ಎಂಬಿಬಿಎಸ್, ಎಂ ಟೆಕ್ ಅಲ್ಲಲ್ಲ, ಎಂ.ಡಿ ಕಲಿತ ಸ್ಪೆಷಲೈಸ್ಡ್ ಡಾಕ್ಟರ್ ಅದೆಷ್ಟು ದುಡ್ಡು ಕೊಟ್ಟು ಆ ಕೋರ್ಸ್ ಮಾಡಿರುತ್ತಾರೆ! ಅವರಿಗೆ ನಮ್ಮ ಹೊಟ್ಟೆಯಿಂದಾಗಿಯಾದರೂ ದುಡ್ಡಾಗಬೇಡವೇ? ಹಾಗಾಗಿ ಸ್ಪೆಷಲ್ ಡಾಕ್ಟರ್ ಹತ್ತಿರ ಹೋಗಿ ಮೂರು ದಿನ ವೀಕ್ನೆಸ್ಗೆ ಡ್ರಿಪ್ಸ್ ಹಾಕಿಸಿ, ಆಸ್ಪತ್ರೆಯಲ್ಲೇ ಮಲಗಿ, ಒಂದೆರಡಾದರೂ ಸೂಜಿ ಚಿಚ್ಚಿಸಿಕೊಂಡು, ಒಂದಷ್ಟು ನೂರಿನ್ನೂರು ಗ್ರಾಮ್ ಮಾತ್ರೆ ತಿಂದು ಮನೆಗೆ ಬರುವಷ್ಟು ಹೊತ್ತಿಗೆ ಹಲವು ಸಾವಿರಗಳ ಬಿಲ್ಲು ನಮ್ಮನ್ನು ರಾಮನನ್ನು ಸೀತೆ ಕಾದಂತೆ ಕಾಯುತ್ತಾ ಕುಳಿತಿರುತ್ತದೆ. ಇನ್ನೇನು? ಏನಿಲ್ಲ, ಬಿಲ್ ಕಟ್ಟು, ಡಿಸ್ಚಾರ್ಜ್ ಆಗಿ ಮತ್ತೆ ಹೊರಗೆ ತಿನ್ನುವುದನ್ನು ಕಡಿಮೆ ಮಾಡು! ಹಾಗಂತ ಸ್ಟಾಫ್ ಕೊಡಿಸುವ ಇನ್ನೊಂದು ಪಾರ್ಟಿ ಬಿಡಲಾದೀತೆ?
ಪಾರ್ಟಿ ಮಾಡಿ ಕೆಡಿಸಿಕೊಂಡದ್ದು ಹೊಟ್ಟೆಯನ್ನೇ! ಮಾತ್ರೆ ತಿಂದದ್ದೂ ಕೂಡ ಹೊಟ್ಟೆಗೇನೆ! ಮತ್ತೆ ಪಾರ್ಟಿ ಕೂಡ ಹೊಟ್ಟೆಗೇನೆ! ಬದುಕಲಿಕ್ಕಾಗಿ ತಿನ್ನುವುದಿಲ್ಲ, ಪಾರ್ಟಿಗಾಗಿ ತಿನ್ನುವುದು! ಇನ್ನು ಈಗಿನ ಪಾರ್ಟಿ ಎಂದರೆ ಹೊಟ್ಟೆಗೆ ತಿನ್ನುವುದು ಮಾತ್ರವಲ್ಲ, ಕುಡಿಯುವುದು ಕೂಡ ಉಂಟು ಅಲ್ಲಿ! ಘನ ಮಾತ್ರವಲ್ಲ, ದ್ರವ ಪದಾರ್ಥವೂ ಕೂಡಾ ಹೊಟ್ಟೆ ಸೇರಿ, ಉಸಿರಾಡಿದ ಅನಿಲ ಆಮ್ಲಜನಕದ ಜೊತೆ ಹೊಟ್ಟೆಯೊಳಗೆ ಸೇರಿದರೆ ಮಾತ್ರ ಜೀವ ಇರಲು ಸಾಧ್ಯ ಅಲ್ಲವೇ? ಈ ನೀತಿ ಜನರಿಗೆ ತಿಳಿದ ಕಾರಣ ಗಂಟೆಗಟ್ಟಲೆ ಗಾಳಿ ತೆಗೆದುಕೊಳ್ಳುತ್ತಾ, ರೆಸ್ಟೋರೆಂಟ್ , ಪಬ್, ಬಾರ್, ರೆಸಾರ್ಟುಗಳಲ್ಲಿ ಕುಳಿತು, ಕುಡಿದು, ತಿಂದು, ಮತ್ತೆ ಕುಡಿದು ಹೊಟ್ಟೆ ಪೂರ್ತಿಯಾದ ಮೇಲೆ ಹೊರಟು ಬರುವುದು, ಹೊರ ಬರಲು ಸಾಧ್ಯ ಆಗದೆ ಇದ್ದರೆ ಯಾರಾದರೂ ಕರೆದು ತಂದು ಮನೆಗೆ ಎತ್ಹಾಕಿ ಬಿಡುವುದು.
ಈ ಹೊಟ್ಟೆಗೆ ತಿನ್ನುವುದರಲ್ಲಿ ಗಂಡು ಹೆಣ್ಣೆಂಬ ಬೇಧವಿಲ್ಲ, ಜಾತಿ ವಿಜಾತಿಯೂ ಇಲ್ಲ, ಮೇಲು ಕೀಳಂತೂ ಇಲ್ಲವೇ ಇಲ್ಲ! ಊಟ ತನ್ನಿಷ್ಟ! ಅವರವರ ಹೊಟ್ಟೆ ಏನನ್ನು ಕೇಳುತ್ತದೆಯೋ ಅದನ್ನೆಲ್ಲ ಆರ್ಡರ್ ಮಾಡಿ ತಿನ್ನೋದೇ! “ಯಾರಿಗೆ ಗೊತ್ತು ಯಾವಾಗ ಸಾಯುತ್ತೇವೆ ಅಂತ! ಇರುವಷ್ಟು ದಿನ ಇಷ್ಟ ಆಗೋದನ್ನು ತಿನ್ನೋಣ… ” ಇದು ಹಲವರ ನಂಬಿಕೆ ಅಲ್ವಾ? ಹಾಗಿರುವಾಗ ತಿನ್ನೋದಕ್ಕೆ ಯಾರೂ ಹಿಂದೆ ಮುಂದೆ ನೋಡಲ್ಲ. ಹೊಟ್ಟೆಯೋ, ನಾಲಗೆಯ ಚಪಲವೋ ಗೊತ್ತಿಲ್ಲ, ಕೆಲವರಿಗೆ ಮಾಂಸವೇ ಬೇಕು, ಇನ್ನು ಕೆಲವರಿಗೆ ತರಕಾರಿಯೇ ಬೇಕು, ಮತ್ತೆ ಕೆಲವರಿಗೆ ಮೊಟ್ಟೆ ಇದ್ದರೆ ಸಾಕು, ಇನ್ನು ಕೆಲವರಿಗೆ ಮಟನ್, ಮೀನು, ಕೋಳಿ ಮಾಂಸ ಎಲ್ಲವೂ ಬೇಕು. ಹೀಗೆಲ್ಲಾ ವೆರೈಟಿಗಳಿವೆ. ಭಾರತದ ಜನರ ಹೊಟ್ಟೆಗಳಂತೂ ಬಹು ವೆರೈಟಿ. ಯಾಕೆಂದರೆ ಸಸ್ಯಾಹಾರಿ, ಮಾಂಸಾಹಾರಿ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಮಿಶ್ರಾಹಾರಿ ಮಾನವನ ಹೊಟ್ಟೆ ಶುಕ್ರವಾರ ಸಸ್ಯಾಹಾರಿ ಕೆಲವರು, ಶನಿವಾರ ಇನ್ನೂ ಕೆಲವರು, ಸ್ವಲ್ಪ ಜನ ಸೋಮವಾರ, ಇನ್ನೂ ಸ್ವಲ್ಪ ಜನ ಗುರುವಾರ ಹೀಗೆ, ಇನ್ನೂ ಕೆಲವರು ಮೀನು ಮಾತ್ರ ತಿನ್ನುವವರು, ಕೆಲವರು ಫ್ರೈ ಮಾತ್ರ ತಿನ್ನುವವರು! ಮತ್ತೆ ಕೆಲವರು ಚಿಕನ್ ಮಾತ್ರ ತಿನ್ನುವವರು, ಕೆಲವರು ಮೊಟ್ಟೆ ಮಾತ್ರ ತಿನ್ನುವ ಸಸ್ಯಾಹಾರಿಗಳು! ಅಬ್ಬಾ! ಭಯಂಕರ ತರಹೇವಾರಿ ಬಯಕೆಯ, ವಿಧವಿಧ ಹೊಟ್ಟೆಗಳು!
ಕೆಲವರು ಬದುಕಲು ತಿಂದರೆ, ಇನ್ನು ಕೆಲವರು ತಿನ್ನಲು ಬದುಕುವವರು! ಎಲ್ಲವೂ ಹೊಟ್ಟೆಗಾಗಿ ಅಷ್ಟೇ! ದುಡಿಯುವುದು ಕೂಡಾ ಅದಕ್ಕೆ ಅಲ್ವಾ? ತಿನ್ನಲು ಏನೂ ಇಲ್ಲ ಎಂದಾದರೆ ದುಡಿಯುವುದು ಯಾಕಾಗಿ? ಇನ್ನು ಕೆಲವರು ಕೆಲಸ ಹೆಚ್ಚಾಗಿ, ಹೊಟ್ಟೆಗೆ ತಿನ್ನಲು ಸಮಯ ಇಲ್ಲವಾಗಿ ಹೊಟ್ಟೆಯ ರೋಗಗಳನ್ನು ತಾನೆ ತಂದುಕೊಳ್ಳುವವರು! ಕೆಲವರು ಹೊಟ್ಟೆ ತುಂಬಿಸುವ ಸಲುವಾಗಿ ನೂರಾರು ಕಿಲೋಮೀಟರ್ ನಡೆದರೆ ಇನ್ನೂ ಕೆಲವರು ಹೊಟ್ಟೆ ಕರಗಿಸುವ ಸಲುವಾಗಿ ಹಲವಾರು ಕಿಲೋ ಮೀಟರ್ ನಡೆಯುವವರು! ಈ ಪ್ರಪಂಚ, ಈ ಹೊಟ್ಟೆ ಎಂತಹ ವಿಚಿತ್ರ ಮಾರ್ರೆ!
ಹುಟ್ಟಿನಿಂದ ಸಾಯುವವರೆಗೂ ಹೊಟ್ಟೆ ತುಂಬಿಸುವುದೇ ಕೆಲಸ! ಹುಟ್ಟಿದ ಕೂಡಲೇ ಅಮ್ಮನ ಹಾಲಿಗಾಗಿ ಹೊಟ್ಟೆಯ ಮಾತು ಕೇಳಿ ಅತ್ತರೆ, ಬದುಕಿಡೀ ಒಂದು ಗೇಣಿನ ಹೊಟ್ಟೆ ತುಂಬಿಸುವ ಸಲುವಾಗಿ ನಾನಾ ವೇಷಗಳು! ಹೊಟ್ಟೆ ಎಷ್ಟೇ ತುಂಬಿಸಿದರೂ ಒಮ್ಮೆ ಮಾತ್ರ ತುಂಬುತ್ತದೆ! ಮತ್ತೆ ಒಂದೆರಡು ಗಂಟೆಗಳಲ್ಲಿ ಕೇಳುತ್ತಲೇ ಇರುತ್ತದೆ! ತುಳುವಿನಲ್ಲಿ ಒಂದು ಗಾದೆ ಇದೆ, “ಕೆಲಸ ಮಾಡಿದವನಿಗೆ ಕೆಲಸ ಹೆಚ್ಚು,ತಿಂದವನಿಗೆ ಹಸಿವು ಹೆಚ್ಚು” ಅಂತ! ಹಾಗೆ ಹೊಟ್ಟೆ, ಎಷ್ಟು ಕೊಟ್ಟರೂ ಆಗಾಗ ಬೇಕೆನ್ನುತ್ತದೆ, ಅದರ ನಡುವೆ ಒಂದಷ್ಟು ಜನ ಕಷ್ಟ ಪಟ್ಟು, ದೇವರ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ.. ಪಾಪ ಹೊಟ್ಟೆ, ರೆಸ್ಟ್ ಅನ್ನಿಸಿದರೂ ಹಸಿವಿನಿಂದ ನರಳುತ್ತಾ ಇರುತ್ತದೆ, ನೀರಾದರೂ ಕೊಡಿ ಅಂತ ಕೇಳುತ್ತಿರುತ್ತದೆ, ಕೊಡದೆ ಹೋದರೆ ಬಾಯಿಯವರೆಗೂ ವಾಸನೆ ಹರಡುತ್ತದೆ! ಅಲ್ವಾ? ಇಲ್ಲಾಂದ್ರೆ ಒಂದು ದಿನ ಊಟ, ನೀರು ಬಿಟ್ಟು ನೋಡಿ, ಬಾಯಿ ವಾಸನೆ!
ಅಂತೂ ಹೊಟ್ಟೆ ಸಾಧಾರಣದ ಗಿರಾಕಿ ಅಲ್ಲ,
ಬಂದುದೆಲ್ಲವನ್ನೂ ಸ್ವಾಹಾ ಮಾಡುವ ಅಪ್ರತಿಮ ಕಿಲಾಡಿ! ದುಡಿದುದೆಲ್ಲ ಮುಗಿಸುವ ನೆಲ ಕಾಣದ ಗುಂಡಿ! ’ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ’ ಅಂತ ಹಿರಿಯರು ಹೊಟ್ಟೆಯ ಬಗ್ಗೆ ಕಟ್ಟಿದ ಗಾದೆಗಳಲ್ಲಿ ತುಂಬಾ ಖ್ಯಾತ ಗಾದೆ! ಅಂದರೆ ಇದರಲ್ಲೇ ನಮಗೆ ತಿಳಿಯಬೇಕು, ಮೊದಲು ಹೊಟ್ಟೆ, ನಂತರ ಇತರ ಬದುಕು ಅಂತ! ಹೊಟ್ಟೆ ಸರಿ ಇದ್ದರೆ ಅಂದರೆ ಅದಕ್ಕೆ ಸರಿ ಬಿದ್ದರೆ ಮಾತ್ರ ಆರೋಗ್ಯ, ನೆಮ್ಮದಿ, ಕೆಲಸ, ಶಕ್ತಿ ಎಲ್ಲವೂ ಸಾಧ್ಯ! ಇಲ್ಲದೆ ಹೋದರೆ ಹೊಟ್ಟೆ ಹಾಳಾದಾಗ ತಿಳಿವುದು ಅದರ ಸಂಕಷ್ಟ! ಅಥವಾ ಹೊಟ್ಟೆಗೆ ಹಿಟ್ಟಿಲ್ಲದ ಬಡತನ ಯಾವ ಪುಸ್ತಕವೂ ಕಲಿಸದ ಪಾಠವನ್ನು ಕಲಿಸುವುದು! ಹೌದು ತಾನೇ?
ಹೊಟ್ಟೆ ಕೆಡುವುದು, ಹೊಟ್ಟೆ ಕಿಚ್ಚುಪಡುವುದು, ಹೊಟ್ಟೆ ಹೊರುವುದು, ಹೊಟ್ಟೆ ತುಂಬಾ ತಿನ್ನುವುದು,ಹೊಟ್ಟೆ ಬಾಕತನ, ಹೊಟ್ಟೆ ಹೊರೆಯುವುದು, ಹೊಟ್ಟೆ ಉಬ್ಬಿ ಬರುವುದು, ಹೊಟ್ಟೆನೋವು, ಹೊಟ್ಟೆ ಕೆಡುವುದು, ಹೊಟ್ಟೆ ಕೆಡಿಸುವುದು, ಅಜೀರ್ಣ, ಹೊಟ್ಟೆ ಉಬ್ಬರ, ಹೊಟ್ಟೆ ಉರಿ ಇವೆಲ್ಲಾ ಹೊಟ್ಟೆಯಿಂದ ತಾನೇ ಬರುತ್ತೆ! ಅದೇನೇ ಇರಲಿ. ನಿಮ್ಮ ನಮ್ಮ ಹೊಟ್ಟೆ ತುಂಬಿರಲಿ, ಮತ್ತು ತಣ್ಣಗಿರಲಿ. ನೀವೇನಂತೀರಿ?
-ಪ್ರೇಮಾ ಆರ್ ಶೆಟ್ಟಿ
