|
ಗುರುಃ ಬ್ರಹ್ಮ ಗುರುಃ ವಿಷ್ಣುಃ ಗುರುಃ ದೇವೋ ಮಹೇಶ್ವರಃ|
ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||
ವೇದಕಾಲದಿಂದಲೂ ನಮ್ಮ ಭಾರತದಲ್ಲಿ ಗುರು ಶಿಷ್ಯ ಪರಂಪರೆಯಿಂದಲೇ ವಿದ್ಯೆಯ ಕಲಿಕೆ ಸಾಗಿ ಬಂದಿದೆ. ತನ್ನ ಅರಿವಿಗೆ ಬಂದದ್ದನ್ನೆಲ್ಲವನ್ನೂ ಶಿಷ್ಯನಿಗೆ ಧಾರೆ ಎರೆಯುವ ಗುರು, ಗುರುವಿಗೆ ತನ್ನ ತನು ಮನಗಳಿಂದ ಸೇವೆ ಮಾಡಿ ಅವರ ಜ್ಞಾನವನ್ನು ತಾನು ಪಡೆದು ಮುಂದೆ ತಾನೊಬ್ಬ ಶ್ರೇಷ್ಠ ಗುರುವಾಗಿ ತನ್ನ ಶಿಷ್ಯರಿಗೆ ಜ್ಞಾನ ಹಂಚುವುದು ಇದು ಪರಂಪರೆ. ಇದೇ ರೀತಿಯಲ್ಲಿ ಪ್ರಾಚೀನ ಜ್ಞಾನವಾಹಿನಿ ಹರಿದು ಬರುತ್ತಿತ್ತು. ಮನುಷ್ಯನಿಗೆ ಅವನ ಮಾತಾ ಪಿತರ ಸ್ಥಾನದ ನಂತರದ ಸ್ಥಾನ ಗುರುವಿಗೇ ಕೊಡಲಾಗಿದೆ. “ಆಚಾರ್ಯ ದೇವೋ ಭವ” ಎಂದು ಉಪನಿಷತ್ತು ಸಾರುತ್ತದೆ.
ಅಜ್ಞಾನಾಂಧಕಾರದಿಂದ ಜ್ಞಾನದ ಸೂರ್ಯನ ಕಡೆಗೆ ಕರೆದೊಯ್ಯುವ ದೇವರ ಸಮಾನ ಸ್ಥಾನ ಗುರುವಿನದು. ಗುರಿವಿಗೆ ತಿಳಿಯದ ತತ್ತ್ವವಿಲ್ಲ, ಗುರುವಿಗೆ ತಿಳಿಯದ ತಪವಿಲ್ಲ ಗುರುವಿಗಿಂತ ಜಾಸ್ತಿ ಜ್ಞಾನವಿಲ್ಲ ಎನ್ನುವಷ್ಟು ಗುರುವಿಗೆ ನಮ್ಮ ಧರ್ಮದಲ್ಲಿ ಪ್ರಾಮುಖ್ಯತೆ ಕೊಡಲಾಗಿದೆ. ಅಜ್ಞಾನದ ಕತ್ತಲನ್ನು ದೂರಮಾಡಿ ಭಗವಂತನ ತೋರಿಸುವವನು ಗುರು. ತಾನು ಮಾಡಿದ ಉಪದೇಶವನ್ನು ಆಚರಿಸಿ ತೋರಿಸುವವನು ಆಚಾರ್ಯ. ಪಾಠವನ್ನು ಹೇಳಿಕೊಡುವವನು ಉಪಾಧ್ಯಾಯ ಎಂದು ಕಲಿಕೆಯ ಶ್ರೇಣಿಯನ್ನು ಗುರುತಿಸಲಾಗಿತ್ತು. ಆದರೆ ಗುರು ಮತ್ತು ಆಚಾರ್ಯ ಸ್ಥಾನಗಳು ಮಾಯದಾಗಿ ಬರೀ ಉಪಾಧ್ಯಯರಲ್ಲೇ ಅವರನ್ನು ಸಹ ಕಾಣಬೇಕಾಗಿದೆ.
ಈ ರೀತಿಯ ಶ್ರೇಷ್ಠ ಗುರು ಶಿಷ್ಯರ ಜ್ಞಾನ ಪರಂಪರೆ ವಿದೇಶೀಯರ ದಾಳಿಗಳು ಮತ್ತು ಅವರ ದೌರ್ಜನ್ಯಗಳಿಂದ ನಮ್ಮ ದೇಶದಲ್ಲಿಯ ಗ್ರಂಥಾಲಯಗಳಲ್ಲಿದ್ದ ಜ್ಞಾನಭಂಡಾರ ನಾಶವಾಗುವುದಷ್ಟೇ ಅಲ್ಲ, ಈ ಗುರುಕುಲಗಳು ಸಹ ನಾಶವಾದವು. ಪರಕೀಯರು ನಮ್ಮ ಗುರುಕುಲದ ಪರಂಪರೆಯನ್ನು ಪರಿಗಣಿಸದೇ, ನಮ್ಮನ್ನು ಅನಾಗರಿಕರೆಂದು ಕರೆಯುತ್ತ, ತಮ್ಮ ವಿದ್ಯಾವಿಧಾನವನ್ನು ನಮ್ಮ ಮೇಲೆ ಹೇರಿದರು. ಸುಮಾರು ಒಂದು ಸಾವಿರ ವರ್ಷದ ಪರಕೀಯರ ರಾಜ್ಯದಲ್ಲಿ ಅನೇಕ ತಲೆಮಾರುಗಳು ನಮ್ಮ ವೈದಿಕ ಜ್ಞಾನವನ್ನು, ಗುರು ಶಿಷ್ಯ ಪರಂಪರೆಯನ್ನು, ಗುರುಕುಲಗಳನ್ನು ಮರೆತು ಹೋದರು. ಪರಕೀಯರ ಭಾಷೆಗಳೇ ರಾಜ ಭಾಷೆಗಳಾದವು. ಅದರಲ್ಲಿ ಕಲಿತು ಪರಿಣತಿ ಹೊಂದಿದವರಿಗೇ ಮಾತ್ರ ನೌಕರಿಗಳು ಸಿಗುತ್ತಿದ್ದು, ತಮ್ಮ ಜೀವನ ಭೃತಿಗಾಗಿ ಜನರು ಆ ಭಾಷೆಗಳನ್ನು ಅವರ ಕಲಿಕಾ ವಿಧಾನವನ್ನು ಅವಲಂಬಿಸಬೇಕಾಯಿತು. ಆದರೆ ಜನರಲ್ಲಿ ಗುರುಗಳ, ಆಚಾರ್ಯರ ಅಥವಾ ಉಪಾಧ್ಯಾಯರ ಬಗ್ಗೆಗಿನ ಆದರ, ಗೌರವ ಕಡಿಮೆಯಾಗಿರಲಿಲ್ಲ. ಸಮಾಜದಲ್ಲಿ ಅವರಿಗೆ ಆದರ ಸಮ್ಮಾನ ಸಿಗುತ್ತತ್ತು. ಆದರೆ ಸಮಾಜವನ್ನು ಒಂದು ಒಳ್ಳೆಯ ದಾರಿಯಲ್ಲಿ ನಡೆಸುವ ಉಪಾಧ್ಯಾಯರ ಜೀವನ ತುಂಬಾ ಕಷ್ಟದಲ್ಲಿ ಸಾಗುತ್ತಿತ್ತು. ಕೆಲಸಕ್ಕೆ ತಕ್ಕ ವರಮಾನ ಸಿಕ್ಕುತ್ತಿರಲಿಲ್ಲ.
ಗುರುವಾಗಲಿ, ಆಚಾರ್ಯರಾಗಲಿ ಅಥವಾ ಉಪಧ್ಯಾಯರಾಗಲಿ ಒಂದು ಸಮಾಜ ಏಳಿಗೆಗೆ ಕಾರಣಪುರುಷರಾಗುತ್ತಾರೆ. ತನ್ನ ಪ್ರಾಣವನ್ನು ಉಳಿಸಿದ ವೈದ್ಯನನ್ನು ಒಬ್ಬ ಮನುಷ್ಯ ಹೇಗೆ ಮರೆಯುವುದಿಲ್ಲವೋ ಅದೇ ರೀತಿ ತನ್ನ ಚಾರಿತ್ರವನ್ನು ತಿದ್ದಿ ಸಮಾಜದಲ್ಲಿ ತನ್ನನ್ನ ಒಬ್ಬ ಬಾಧ್ಯತಾಯುತ ನಾಗರಿಕನನ್ನಾಗಿ ಮಾಡಿದ ಉಪಾಧ್ಯಾಯರನ್ನು ಮನುಷ್ಯ ಮರೆಯುವುದಿಲ್ಲ. ಹಾಗಾಗಿ ಸಮಾಜದಲ್ಲಿ ಉಪಾಧ್ಯಾಯರ ಸ್ಥಾನ ತುಂಬಾ ಹಿರಿಯದು ಎನ್ನಬಹುದು. ಅಂಕಿತ ಭಾವವಿರುವ ಉಪಾಧ್ಯಾಯ ಅಥವಾ ಉಪಾಧ್ಯಾಯಿನಿ ತನ್ನ ತರಗತಿಯಲ್ಲಿದ್ದ ಎಲ್ಲ ಮಕ್ಕಳನ್ನೂ ಒಂದೇ ತರಾ ಪ್ರೀತಿಸುತ್ತಾರೆ, ಅವರೆಲ್ಲರೂ ಚೆನ್ನಾಗಿ ಓದು ಕಲಿತು ದೇಶದ ಏಳಿಗೆಗೆಗಾಗಿ ಶ್ರಮಿಸುತ್ತಾರೆ ಎಂದೇ ನಂಬುತ್ತಾರೆ. ಆ ರೀತಿ ತಯಾರು ಮಾಡಲು ಹೆಣಗುತ್ತಾರೆ. ಈಗೀಗ ನಮಗೆ ನೋಡಲು ಸಿಗುವ ವಿಡಿಯೋಗಳಲ್ಲಿ ಒಬ್ಬ ಒಳ್ಳೆ ಉಪಾಧ್ಯಾಯ ಅಥವಾ ಉಪಾಧ್ಯಾಯಿನಿ ವರ್ಗಾವಣೆ ಆಗಿ ಹೋಗುವಾಗ ಅಥವಾ ನಿವೃತ್ತಿ ಹೊಂದುವಾಗ ಶಾಲಾ ಮಕ್ಕಳು ಕಂಬನಿಗರೆಯುವುದನ್ನು ನೋಡಬಹುದಾಗಿದೆ.
ಉಪಾಧ್ಯಾಯರ ಈ ಪಾತ್ರವನ್ನು ಚೆನ್ನಾಗಿ ಅರಿತವರೆಂದರೆ ನಮ್ಮ ಭಾರತದ ಎರಡನೆಯ ರಾಷ್ಟ್ರಪತಿಗಳಾಗಿದ್ದ ಶ್ರೀ ಸರ್ವೆಪಲ್ಲಿ ರಾಧಾಕೃಷ್ಣನ್ ಅವರು. ಅವರು ಉಪಾಧ್ಯಾಯರಾಗಿ ಕೆಲಸ ಮಾಡಿದವರು. ೧೯೬೨ರಲ್ಲಿ ಅವರು ಭಾರತದ ರಾಷ್ಟ್ರಪತಿಯಾದಾಗ ಅವರ ವಿದ್ಯಾರ್ಥಿಗಳು ಅವರ ಜನ್ಮದಿನವನ್ನು ಆಚರಣೆ ಮಾಡಲು ಮುಂದೆ ಬಂದಾಗ ಅವರು ನಯವಾಗಿ ತಿರಸ್ಕರಿಸುತ್ತಾ, ತಮ್ಮ ಹುಟ್ಟಿದ ದಿನವನ್ನು “ಉಪಾಧ್ಯಾಯರ ದಿನ” ವೆಂದು ಘೋಷಿಸಲು ಹೇಳಿದರು. ಹಾಗಾಗಿ ಅವರ ಜನ್ಮದಿನವಾದ ಸಪ್ಟೆಂಬರ್ ೫ನೆಯ ತಾರೀಕಿನ ಅವರ ಜನ್ಮದಿನವನ್ನು ಉಪಾಧ್ಯಾಯರ ದಿನವಾಗಿ ನಾವು ಆಚರಿಸುತ್ತೇವೆ.
ಅವತ್ತಿನ ದಿನ ಬಹುತೇಕ ಎಲ್ಲ ಶಾಲೆಗಳಲ್ಲಿ ವಿಧ್ಯಾರ್ಥಿಗಳು ತಮ್ಮ ತರಗತಿಯ ಉಪಾಧ್ಯಾಯರುಗಳನ್ನು ಗೌರವಿಸುತ್ತಾರೆ, ಅವರಿಗೆ ವಂದಿಸುತ್ತಾರೆ. ಕೆಲವು ಕಡೆ ವಿಧ್ಯಾರ್ಥಿಗಳು ಅಂದು ಉಪಾಧ್ಯಾಯರಾಗಿ ಪಾಠ ಹೇಳುತ್ತಾರೆ. ಕೆಲ ಕಡೆ ಉಪಾಧ್ಯಾಯರಿಗೆ ಆಟಗಳಿರುತ್ತವೆ. ಶ್ರೀ ರಾಧಾಕೃಷ್ಣನ್ ಅವರ ಬಗ್ಗೆ ವಿದ್ಯಾರ್ಥಿಗಳನ್ನು ಮಾತನಾಡಲು ಹೇಳುತ್ತಾರೆ. ಒಟ್ಟಾರೆ ಶಾಲೆಗಳಲ್ಲಿ ಹಬ್ಬದ ವಾತಾವರಣವಿದ್ದು, ಅತ್ತ ವಿಧ್ಯಾರ್ಥಿಗಳು ಇತ್ತ ಉಪಾಧ್ಯಾಯರುಗಳು ಸಂತೋಷಭರಿತರಾಗಿ ಅಂದಿನ ದಿನ ಕಳೆಯುವುದು ಕಾಣಬಹುದು.
ಉಪಧ್ಯಾಯರ ಉತ್ಸಾಹವನ್ನು ಮತ್ತು ಅಂಕಿತ ಭಾವವನ್ನು ಗೌರವಿಸಲು ಭಾರತ ಸರಕಾರ ೧೯೫೮ರಿಂದ ಶಿಕ್ಷಕರಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಆಯ್ಕೆಯಾದ ಉಪಾಧ್ಯಾಯರಿಗೆ ಕೊಟ್ಟು ಸತ್ಕರಿಸುತ್ತಿದೆ. ಆರಿಸಿ ಬಂದ ಉಪಾಧ್ಯಾಯರನ್ನು ಉಪಾಧ್ಯಾಯರ ದಿನವೇ ಪ್ರಶಸ್ತಿ ಕೊಟ್ಟು ಗೌರವಿಸುತ್ತಾರೆ. ಪ್ರಶಸ್ತಿ ಪಡೆದ ಉಪಾಧ್ಯಾಯರು ಒಂದು ಸರ್ಟಿಫಿಕೇಟ್, ಒಂದು ಮೆಡಲ್ ಮತ್ತು ೫೦,೦೦೦ ನಗದು ಪಡೆಯುತ್ತಾರೆ.
ಈ ದಿನದ ಆಚರಣೆಗೆ ಮುಖ್ಯ ಕಾರಣರಾದ ಶ್ರೀ ರಾಧಾಕೃಷ್ಣನ್ ಅವರ ವೈಯಕ್ತಿಕ ಜೀವನದ ಕೆಲ ಪ್ರಮುಖ ವಿಷಯಗಳನ್ನು ತಿಳಿಯೋಣ. ಅವರ ಜನ್ಮ ಆಗ ಮದ್ರಾಸ್ ಪ್ರಾವಿನ್ಸ್ ನಲ್ಲಿದ್ದ ತಿರುತ್ತಣಿಯಲ್ಲಿ ೫ ಸೆಪ್ಟೆಂಬರ್ ೧೮೮೮ ರಂದು ಆಯಿತು. ಅವರ ಪ್ರಾಥಮಿಕ ವಿದ್ಯಾಭ್ಯಾಸ ತಿರುತ್ತಣಿಯಲ್ಲೇ ಆಯಿತು. ನಂತರ ಅವರು ತಮ್ಮ ಉನ್ನತ ವಿದ್ಯೆಯನ್ನು ತಿರುಪತಿ, ವಾಲಾಜಿಪೇಟ್ ಮತ್ತು ವೆಲ್ಲೂರ್ ಗಳಲ್ಲಿ ಮುಗಿಸಿದರು ತಮ್ಮ ಪದವಿಯನ್ನು ಮತ್ತು ಸ್ನಾತಕೋತ್ತರ ಪದವಿಗಳನ್ನು ಚೆನ್ನೈಯಲ್ಲಿಯ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಲ್ಲಿ ತಮ್ಮ ೧೬ನೆಯ ವಯಸ್ಸಿನಲ್ಲಿ ಪಡೆದರು. ಅವರ ಆರ್ಥಿಕ ಸ್ಥಿತಿಗತಿಗಳು ಚೆನ್ನಾಗಿರದಿದ್ದರಿಂದ ಅವರು ತಮಗಿಷ್ಟವಾದ ಗಣಿತವನ್ನು ಅಭ್ಯಾಸ ಮಾಡಲಾರದೆ ಹೋದರು. ಅವರ ಬಂಧುಗಳಲ್ಲಿಯ ಒಬ್ಬರು ತತ್ವಶಾಸ್ತ್ರದಲ್ಲಿ ಪದವಿ ಪಡೆದು, ಇವರಿಗೆ ಅವರ ಪುಸ್ತಕಗಳನ್ನು ಉಚಿತವಾಗಿ ಕೊಟ್ಟಿದ್ದರಿಂದ ರಾಧಾಕೃಷ್ಣನ್ ಅವರು ತತ್ವಶಾಸ್ತ್ರದಲ್ಲಿಯೇ ಪದವಿ ಮುಗಿಸಿದರು.
ಶ್ರೀ ರಾಧಾಕೃಷ್ಣನ್ ಅವರು ಬರೆದ ಒಂದು ಥೀಸಿಸ್ ಪಾಶ್ಚಾತ್ಯ ಆಲೋಚನಾಪರರಿಂದ ವಿಮರ್ಶೆಗೊಳಗಾಯಿತು. ಆಗ ಅವರಿಗೆ ಹಿಂದೂ ಧರ್ಮದ ಮತ್ತು ತತ್ವಶಾಸ್ತ್ರದ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕೆನ್ನುವ ಛಲ ಹುಟ್ಟಿತು. ಅವರು ಪರಿಚಯಿಸಿದ ತತ್ವಶಾಸ್ತ್ರ ಸಿದ್ಧಾಂತ “ಅಭೇದ ಭಾವ”ದ ಪ್ರಕಾರ ಎಲ್ಲ ಮನುಷರೂ ಮತ್ತೊಬ್ಬ ಮನುಷ್ಯನನ್ನು ಸಮನಾಗಿ ಕಾಣಬೇಕು ಎನ್ನುವ ಜಾಗತಿಕ ಸಂದೇಶ ಸಾರುತ್ತದೆ. ಅವರ ಈ ವೇದಾಂತಿಕ ನಿಲುವು ಮತ್ತು ಜ್ಞಾನ ಅವರಿಗೆ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನ ತತ್ವಶಾಸ್ತ್ರ ವಿಭಾಗದಲ್ಲಿ ಕೆಲಸ ಕೊಡಿಸಿತು. ನಂತರ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಪ್ರೊಫೆಸರ್ ಆಗಿ ಆಯ್ಕೆಯಾಗಿ ಮಹಾರಾಜಾ ಕಾಲೇಜಿನಲ್ಲಿ ಕೆಲಸ ಮಾಡಿದರು.
ಆ ವೇಳೆಗೆ ಅವರು ಭಾರತೀಯ ತತ್ವಶಾಸ್ತ್ರದ ಬಗ್ಗೆ ಪುಸ್ತಕಗಳನ್ನು ಬರೆದಿದ್ದರು. ರವೀಂದ್ರನಾಥ ಟಾಗೋರರ ವೇದಾಂತ ಧೋರಣಿಯನ್ನು ಅವರು ಭಾರತದ ಆತ್ಮವೆಂದು ಕರೆದರು. ಅವರು ಸದಾ ಭಾರತದ ಚಿಂತನೆಯನ್ನು ಪಾಶ್ಚಾತ್ಯ ಚಿಂತನೆಯೊಂದಿಗೆ ಹೊಂದಿಸಲು ಶ್ರಮಿಸಿದರು. ಅವೆರಡರ ನಡುವೆ ತಾವು ಸೇತುವೆಯಾಗಲು ಯತ್ನಿಸಿದರು. ಅವರ ಪ್ರಕಾರ “ಸನಾತನ ಹಿಂದೂ ಧರ್ಮ ಎಂದಿಗೂ ತಮ್ಮ ಜ್ಞಾನಭಂಡಾರವನ್ನು ಹೆಚ್ಚಿಸುತ್ತಾ ಊರ್ಧ್ವದಿಶೆಯಲ್ಲಿ ಸಾಗಬೇಕು ಎನ್ನುತ್ತದೆ” ಎಂದು ಹೇಳುತ್ತಿದ್ದರು. ಅವರು ಆದಿ ಶಂಕರಾಚಾರ್ಯರ ತತ್ತ್ವವನ್ನು ಆಚರಿಸುತ್ತ ಅವರ ಬೋಧನೆಗಳನ್ನು ಬಿಡಿಸಿ ಹೇಳಲು ಪ್ರಯತ್ನಿಸುತ್ತಿದ್ದರು. ಅವರ ಪ್ರಕಾರ ಪಾಶ್ಚಾತ್ಯ ವೇದಾಂತವೆಲ್ಲವೂ ಅವರ ಧರ್ಮದ ದೇವತಾಶಾಸ್ತ್ರದ ಪ್ರಭಾವಕ್ಕೆ ಒಳಗಾಗಿದೆ, ಆದರೆ ಹಿಂದೂ ತತ್ವಶಾಸ್ತ್ರ ಮಾತ್ರ ತನ್ನ ಸ್ವತಂತ್ರ ಧೋರಣೆಯಲ್ಲಿ ಆತ್ಮ ಸಾಕ್ಷಾತ್ಕಾರವನ್ನು ಬೋಧಿಸುತ್ತದೆ ಎನ್ನುತ್ತಿದ್ದರು.
ಮೈಸೂರಿನ ಅವರ ಕೆಲಸದ ನಂತರ ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿ ಕಿಂಗ್ ಜಾರ್ಜ್ ೫ ಅವರ ಮಾನಸಿಕ ಮತ್ತು ನೈತಿಕ ವಿಜ್ಞಾನದ ಕುರ್ಚಿಯಲ್ಲಿ ಆಸೀನರಾದರು. ಜಾಗತಿಕ ವಿಶ್ವವಿದ್ಯಾಲಯಗಳ ಸಮಾವೇಶದಲ್ಲಿ ಅವರು ಕಲ್ಕತ್ತಾ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಅವರನ್ನು ಕೆಲ ಉಪನ್ಯಾಸಗಳಿಗಾಗಿ ಪಾಶ್ಚಾತ್ಯ ವಿಶ್ವವಿದ್ಯಾಲಯಗಳು ಕರೆದಿದ್ದವು. ನಂತರ ಅವರಿಗೆ ಮಾಂಚೆಸ್ಟರ್ ಕಾಲೇಜಿನ ಪ್ರಾಂಶುಪಾಲರಾಗಲು ಕರೆ ಬಂದು ಅದರಿಂದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡುವ ಅವಕಾಶ ದೊರೆಯಿತು. ೧೯೩೧ರಲ್ಲಿ ಅವರಿಗೆ ಬ್ರಿಟಿಷ್ ಸರಕಾರ ನೈಟ್ ಹುದ್ದೆ ಕೊಟ್ಟಿತು. ಆದರೆ ಭಾರತ ಸ್ವತಂತ್ರವಾದ ಮೇಲೆ ಅವರು ಆ ಬಿರುದನ್ನು ಉಪಯೋಗಿಸಲಿಲ್ಲ. ನಂತರ ಅವರು ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು. ೧೯೩೬ ರಲ್ಲಿ ಅವರ ಹೆಸರು ಪ್ರತಿಷ್ಟಾತ್ಮಕ ನೊಬೆಲ್ ಪುರಸ್ಕಾರಕ್ಕಾಗಿ ನಾಮಾಂಕಿತ ಮಾಡಲಾಯಿತು. ನಂತರ ಅವರು ವಾರಣಾಸಿಯ ಹಿಂದೂ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ೧೯೪೮ರ ವರೆಗೆ ಸೇವೆ ಸಲ್ಲಿಸಿದರು.
ಈ ರೀತಿಯ ಯಶಸ್ವಿ ಶೈಕ್ಷಣಿಕ ವೃತ್ತಿಜೀವನದ ನಂತರ ಶ್ರೀ ರಾಧಾಕೃಷ್ಣನ್ ಅವರು ಐದು ವರ್ಷ ಯುನೆಸ್ಕೋದಲ್ಲಿ ಭಾರತದ ಪ್ರತಿನಿಧಿಯಾಗಿ ಮತ್ತು ರಷ್ಯಾ ದೇಶದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದರು. ನಂತರ ಅವರು ಶಾಸಕರಾಗಿ ಚುನಾಯಿತರಾದರು. ೧೯೫೨ರಲ್ಲಿ ಅವರು ಭಾರತದ ಮೊದಲ ಉಪ ರಾಷ್ಟ್ರಪತಿಯಾಗಿ ಚುನಾಯಿತರಾದರು. ಅವರು ಆ ಪದವಿಯಲ್ಲಿ ಹತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ತರುವಾಯ ೧೯೬೨ರಲ್ಲಿ ಭಾರತದ ಎರಡನೆಯ ರಾಷ್ಟ್ರಪತಿಯಾಗಿ ಐದು ವರ್ಷಗಳ ಕಾಲ ಪದವಿಯಲ್ಲಿದ್ದರು. ಪ್ರಜಾತಂತ್ರದ ಮೌಲ್ಯಗಳನ್ನು ಮತ್ತು ಭಾರತೀಯ ಮೌಲ್ಯಗಳನ್ನು ಕಾಪಾಡಲು ಅವರು ತಮ್ಮ ಅವಧಿಯಲ್ಲಿ ಶ್ರಮಿಸಿದರು.
ಭಾರತೀಯ ತತ್ವಶಾಸ್ತ್ರದ ಬಗ್ಗೆ ಮತ್ತು ರವೀಂದ್ರನಾಥ ಟಾಗೋರ್ ಅವರ ತತ್ವಶಾಸ್ತ್ರದ ಬಗ್ಗೆ ರಾಧ್ಯಾಕೃಷ್ಣನ್ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರು ನಮ್ಮ ಸನಾತನ ಧರ್ಮದಲ್ಲಿ ಅಡಗಿದ್ದ ಅನೇಕ ತತ್ತ್ವಗಳನ್ನ ತಮ್ಮ ಕೃತಿಗಳ ಮೂಲಕ ವಿಶ್ವದ ಮುಂದಿಡುವ ಪ್ರಯತ್ನ ಪಟ್ಟಿದ್ದಾರೆ. ವಿಶ್ವದ ಶ್ರೇಷ್ಠ ತತ್ತ್ವಜ್ಞಾನಿಗಳಲ್ಲಿ ಒಬ್ಬರಾಗಿ ಶ್ರೀ ರಾಧಾಕೃಷ್ಣನ್ ಅವರು ಗುರುತಿಸಲ್ಪಟ್ಟಿದ್ದಾರೆ. ಅವರ ಬಗ್ಗೆ ಸಹ ಅನೇಕ ಕೃತಿಗಳು ಹೊರಬಂದಿವೆ.
ಭಾರತದ ಅತ್ಯುನ್ನತ ಪುರಸ್ಕಾರವಾದ “ಭಾರತ ರತ್ನ” ಪ್ರಶಸ್ತಿಯೇ ಅಲ್ಲದೇ ಶ್ರೀ ರಾಧಾಕೃಷ್ಣನ್ ಅವರು ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅವರಿಗೆ ಬ್ರಿಟಿಷ್ ಸರಕಾರ ತಮ್ಮ ಆಡಳಿತ ಅವಧಿಯಲ್ಲಿ “ನೈಟ್ ಹುಡ್” ನೀಡಿ ಗೌರವಿಸಿತ್ತು. ಮೆಕ್ಸಿಕೊ, ಜರ್ಮನಿ, ದೇಶಗಳಿಂದಲೂ ಅವರ ವಿದ್ವತ್ತಿಗೆ ಪ್ರಶಸ್ತಿ ಸಿಕ್ಕಿವೆ. ಇವಷ್ಟೇ ಅಲ್ಲದೇ ತಮ್ಮ ಜೀವನದ ಅವಧಿಯಲ್ಲಿ ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ. ಅವರ ಸ್ಮರಣೆಗಾಗಿ ಭಾರತ ಸರಕಾರ ೧೯೬೭ನ್ ರಲ್ಲಿ ಮತ್ತು ೧೯೮೯ರಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿತ್ತು.
ರಾಧಾಕೃಷ್ಣನ್ ಅವರ ದಂಪತಿಗಳ ಐದು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಸಹ ಅನೇಕ ಪ್ರಮುಖ ಹುದ್ದೆಗಳು ನಿರ್ವಹಿಸಿದ್ದಾರೆ ಮತ್ತು ಸಾಮಾಜಿಕ ಜೀವನದಲ್ಲಿ ಹೆಸರು ಗಳಿಸಿದ್ದಾರೆ.
ಇಂದು ಶ್ರೀ ರಾಧಾಕೃಷ್ಣನ್ ಅವರ ಹೆಸರಲ್ಲಿ ನಾವು ಉಪಾಧ್ಯಾಯರ ದಿನವನ್ನು ಆಚರಿಸುತ್ತಾ, ವಿದ್ವತ್ತಿಗೆ ಮತ್ತೊಂದು ಹೆಸರೆನಿಸಿದ ಅವರನ್ನು ಸ್ಮರಿಸೋಣ.
–ಚಂದಕಚರ್ಲ ರಮೇಶ ಬಾಬು