‘ಎದೆ ತುಂಬಿ ಹಾಡಿದ ಕವಿ ಜಿ. ಎಸ್ ಶಿವರುದ್ರಪ್ಪ’: ಡಾ. ಸುಶ್ಮಿತಾ. ವೈ.


ನವೋದಯ ಕವಿ ದಿಗ್ಗಜರುಗಳ ಸಾಲಿನಲ್ಲಿ ‘ಬೆಳಕಿನ ಮನೆಯ ಕವಿ’ ಜಿ.ಎಸ್.ಎಸ್ ಅವರದ್ದೂ ಮಹತ್ವದ ಹೆಸರು. ಇವರು ತಮ್ಮ ಹೈಸ್ಕೂಲಿನ ದಿನಗಳಿಂದಲೇ ಚಿಕ್ಕ ಚಿಕ್ಕ ಕವಿತೆಗಳನ್ನು ಬರೆಯುತಿದ್ದರು. ಆನಂತರದಲ್ಲಿ ಗಳಗನಾಥ, ವೆಂಕಟಾಚಾರ್ಯ, ಕುವೆಂಪು, ಅನಕೃ, ಶಿವರಾಮ ಕಾರಂತರ ಬರಹಗಳು ಸಾಹಿತ್ಯದ ಬಗೆಗೆ ಅವರಲ್ಲಿ ಪ್ರೀತಿ, ಆಸಕ್ತಿಯನ್ನು ಹುಟ್ಟಿಸಲು ಕಾರಣವಾದವು. ಅವರು ಕಾಲೇಜಿನ ದಿನಗಳಲ್ಲಿ ಅನುವಾದಿಸಿದ ‘ಥಾಮಸ್ ಗ್ರೇ’ ಕವಿಯ ಕವಿತೆಗೆ ಅಧ್ಯಾಪಕರಾಗಿದ್ದ ಜಿ.ಪಿ ರಾಜರತ್ನಂ ಅವರಿಂದ ಪ್ರಶಂಸೆಯೂ ದೊರಕಿತ್ತು. ಅದು ಪ್ರಕಟವಾಗಿ ಕಾವ್ಯ ರಚನೆಗೆ ಹೊಸ ಹುಮ್ಮಸ್ಸು ದೊರೆಯಿತು. ನಾನೊಬ್ಬ ಕವಿ, ನಾನೂ ಬರೆಯ ಬಲ್ಲೆ ಎನ್ನುವುದನ್ನು ಈ ಕವಿತೆ ಮನಗಾಣಿಸಿತು ಎಂದು ಅವರು ಹೇಳಿಕೊಂಡಿದ್ದಾರೆ.

‘ನಾನೇಕೆ ಬರೆಯುತ್ತೇನೆ’ ಎಂದು ಕೇಳಿಕೊಳ್ಳುವ ಕವಿ ಅದರ ಉತ್ತರವನ್ನೂ ಕಂಡುಕೊಂಡು ಕಾವ್ಯ ರಚನೆಗೆ ಇಳಿಯುತ್ತಾರೆ. ಜಿ.ಎಸ್.ಎಸ್ ಕಾವ್ಯದ ವಸ್ತು ವಿಷಯಗಳು ಮೇಲ್ನೋಟಕ್ಕೆ ಸರಳವೆನಿಸಿದರೂ ಕವಿತೆಯ ಒಡಲಲ್ಲಿ ಗಾಂಭರ್ಯದ ನಡೆ ಇದ್ದೇ ಇರುತ್ತದೆ. ಮಲ್ಲಿಗೆ, ಜಡೆ, ಗೋಡೆ, ಸಮಾಜ, ಜಾತಿ, ಧರ್ಮ, ಹಣತೆ, ಪ್ರೀತಿ ಪ್ರಣಯ, ಬದುಕು ಹೀಗೆ ಕವಿ ಕವಿತೆಯಲ್ಲಿ ಬರೆಯದ ವಸ್ತು ವಿಷಯಗಳಿಲ್ಲ. ಕುವೆಂಪು ‘ಹೀರೆ’ ಹೂವಿನ ಮೇಲೆ ಕವಿತೆ ಬರೆದಂತೆ ಅವರ ಶಿಷ್ಯರಾದ ಇವರು ‘ಕಸ ಪೊರಕೆ’ಯ ಮೇಲೂ ಕವಿತೆ ಬರೆದಿರುವುದು ಗಮನಾರ್ಹ ಸಂಗತಿ.

ಕಾವ್ಯದ ಪ್ರೇರಣೆ ಯಾವುದು ಎನ್ನುವ ಪ್ರಶ್ನೆಗೆ ಜಿ.ಎಸ್.ಎಸ್ ಸಾಕಷ್ಟು ಕಡೆಯಲ್ಲಿ ಚರ್ಚಿಸುತ್ತಾರೆ. ಕವಿತೆಯೆನ್ನುವುದು ಬೆಂಬಿಡದೇ ಕಾಡುವ ಪ್ರಜ್ಞೆ, ಸದಾ ಜಾಗೃತ ಪ್ರಜ್ಞೆ ಎನ್ನುವುದದನ್ನು ಹೇಳುತ್ತಾ ಕವಿತೆಯೇ ಕವಿಯನ್ನು ಕಾಡಿಸಿ ಬರೆಯಿಸಿದ ಹಲವಾರು ಉದಾಹರಣೆಗಳನ್ನು ಅವರು ಹೇಳಿದ್ದಾರೆ. ಕವಿಗೆ ಯಾವುದಾದರೂ ಕಾವ್ಯದ ವಸ್ತು ವಿಷಯ ತಲೆಯೊಳಗೆ ಹೊಕ್ಕರೆ ಅದನ್ನು ಕಾವ್ಯ ಬಂಧದಲಿ ಕಟ್ಟುವ ತನಕ ಏನೋ ತಳಮಳ, ಅಸಮಧಾನ. ಇದನ್ನು ಬೇಂದ್ರೆ, ಕುವೆಂಪು ಹಾಗೂ ಕನ್ನಡದ ಅನೇಕ ಕವಿಗಳೂ ಗುರುತಿಸಿದ್ದಾರೆ. ಜಿ.ಎಸ್.ಎಸ್ ಅವರ ಜಡೆ, ಮಲ್ಲಿಗೆಯಂತಹ ಅನೇಕ ಕವಿತೆಗಳನ್ನು ಈ ಹಿನ್ನೆಲೆಯಲ್ಲಿ ಕಾಣಬಹುದು. ಉದಾಹರಣೆಗೆ ಜಿ.ಎಸ್.ಎಸ್ ಅವರ ಮನೆಯ ಹಿತ್ತಲಿನ ಏಳು ಸುತ್ತಿನ ಮಲ್ಲಿಗೆ ದುಂಡಗೆ ದಳ ತೆರೆದು ಅರಳಿದ ಹೂವು ಅವರನ್ನು ಆಕರ್ಶಿಸಿತಂತೆ. ಅದರ ಕಂಪು ಸೊಗಸು ಅವರನ್ನು ಬೆಂಬಡದೇ ಕಾಡಿತು. ನಂತರ ಸುಂದರ ಕವಿತೆಯೊಂದು ರಚನೆಯೂ ಆಯಿತು-

ನೋಡು ಇದೋ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಗೆ
ಇಷ್ಟು ಹಚ್ಚನೆ ಹಸುರ ಗಿಡದಿಂ
ದೆಂತು ಮೂಡಿತು ಬೆಳ್ಳಗೆ!

ಹೀಗೆ ಕಾವ್ಯ ಮೂಡಿ ಕವಿ ಪ್ರಜ್ಞೆ ಬೆರಗು, ವಿಸ್ಮಯ ಕುತೂಹಲಗಳಲ್ಲಿ ಮಿಂದೇಳುತ್ತದೆ. ಕವಿಯ ರಸಾನುಭವತೆ ಮತ್ತು ಸೌಂದರ್ಯ ಪ್ರಜ್ಞೆ ಈ ಕವಿತೆಯ ಪ್ರತಿ ಸಾಲಿನಲ್ಲೂ ಅನುಭವಕ್ಕೆ ಬರುತ್ತದೆ.

ಕವಿಗೆ ಕಾವ್ಯ ರಚನೆಗೆ ಸ್ಪೂರ್ತಿ ಪ್ರೇರಣೆ ಎಷ್ಟು ಮುಖ್ಯವೋ ಸಹೃದಯ ಕೂಡ ಅಷ್ಟೇ ಮುಖ್ಯ. ಕವಿಯ ಕಾವ್ಯ ಸಾರ್ಥಕತೆ ಪಡೆಯುವುದು ಸಹೃದಯ ಆಸ್ವಾದಿಸುವ ಮೂಲಕ. ಪೊನ್ನ ‘ಕಟ್ಟಿಯುಮೇನೋ ಮಾಲೆಗಾರನು ಪೊಸ ಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೆ’ ಎಂದಿರುವುದು ಈ ನೆಲೆಯಲ್ಲಿಯೆ ಎನ್ನಬಹುದು.

ಜಿ.ಎಸ್.ಎಸ್ ಅವರಿಗೆ ಅವರ ಕಾವ್ಯ ರಚನೆಯ ಮೊದಲ ಹಂತದಲ್ಲಿ ಸಿಕ್ಕ ಸಹೃದಯರು, ಸಹೃದಯ ಕವಿಗಳು ಹೃದಯ ಶ್ರೀಮಂತರೇ ಆಗಿದ್ದಾರೆ. ತ.ಸು ಶಾಮರಾಯ, ತೀ.ನಂಶ್ರೀ, ಕುವೆಂಪು, ರಾಜರತ್ನಂ ಅವರ ಕವಿತೆಗಳನ್ನು ಓದಿ ಪ್ರಶಂಸಿಸುವ ಜೊತೆಗೆ ತಿದ್ದುವ ಕಾರ್ಯವನ್ನೂ ಮಾಡಿದರು. ಉದಾಹರಣೆಗೆ ಜಿ.ಎಸ್.ಎಸ್ ತಮ್ಮ ಕಾವ್ಯ ರಚನೆಗೆ ಸ್ಪೂರ್ತಿಯಾಗಿದ್ದ ತ.ಸು ಶಾಮರಾಯರಿಗೆ ‘ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅದನು ನೀವು’ ಎನ್ನುವ ಕವಿತೆ ಬರೆದು ಅದನ್ನು ಅವರ ಬಳಿ ಹಾಡಿ ಗುರುಕಾಣಿಕೆಯಾಗಿ ಅರ್ಪಿಸುತ್ತಾರೆ. ಜಿ.ಎಸ್.ಎಸ್ ಅವರ ‘ಸಾಮಗಾನ’ ಪ್ರಕಟವಾಗಲು ತ.ಸು ಶಾಮರಾಯರೇ ಕಾರಣ ಎನ್ನುವುದನ್ನು ಕವಿ ಉಲ್ಲೇಖಿಸಿದ್ದಾರೆ.

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ಎನಗೆ
ಕೇಳುವವರಿಹರೆಂದು ನಾ ಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ.

ಎಂದು ಹಾಡಿಕೊಳ್ಳುತ್ತಾ ಕವಿ ನಿರಾಳರಾಗುವ ಬಗೆ ವಿಶಿಷ್ಟವಾದುದಾಗಿದೆ. ಕವಿ ತನ್ನ ಕಾವ್ಯದ ಖಾಸಗೀತನವನ್ನು ಗೌರವಿಸುವ, ವ್ಯಕ್ತಪಡಿಸುವ ಬಗೆಯಿದು. ಕವಿ ಹೊಗಳಿಕೆ, ಬಹುಮಾನಗಳಿಗೆ ಆಸೆ ಪಡದೇ ಇಷ್ಟರಲ್ಲೇ ಸಾರ್ಥಕಭಾವವನ್ನು ಅನುಭವಿಸುತ್ತಾನೆ.

“ಸ್ವಾಸ್ಥಯಂ ಪ್ರತಿಭಾಭ್ಯಾಸೋ ಭಕ್ತಿರ್ವಿದ್ವತ್ಕಥಾ ಬಹುಶ್ರುತತಾ ಸ್ಮೃತಿದಾರ್ಢ್ಯ ಮನಿರ್ವೆದಶ್ಚ ಮಾತರೋಷ್ಟೌ ಕವಿತ್ವಸ್ಯ” ಅಂದರೆ ದೇಹ ಮನಸ್ಸುಗಳ ಸ್ವಾಸ್ಥತೆ, ಪ್ರತಿಭೆ, ಅಭ್ಯಾಸ, ಭಕ್ತಿ, ವಿಧ್ವಾಂಸರೊಡನೆ ಚರ್ಚೆ, ಪಾಂಡಿತ್ಯ, ದೃಢವಾದ ಜ್ಞಾಪಕ ಶಕ್ತಿ, ಉತ್ಸಾಹ ಈ ಮೇಲಿನ ಎಂಟು ಗುಣಗಳು ‘ಕವಿತೆಯ ತಾಯಂದಿರು’ ಎನ್ನುತ್ತಾನೆ ಮೀಮಾಂಸಕ ರಾಜಶೇಖರ. ಅದರಂತೆ ಈ ಎಲ್ಲವೂ ಜಿ.ಎಸ್.ಎಸ್ ಅವರಿಗೆ ಸಿದ್ಧಿಸಿತ್ತು ಎನ್ನುವುದು ಗಮನಾರ್ಹ. ಹಾಗಾಗಿಯೇ ಕವಿ ತನ್ನ ಪ್ರಗತಿಗೆ, ಪ್ರತಿಭೆಗೆ ಕಾರಣರಾದ ತಾಯಿ, ಗುರು, ಹಿರಿಯರನ್ನು ಕವಿಯೊಂದರಲ್ಲಿ ಹೀಗೆ ಸ್ಮರಿಸಿಕೊಳ್ಳುತ್ತಾರೆ-

ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದಿದು
ಋಣದ ರತ್ನಗಣಿಯೋ?

ಜಿ.ಎಸ್.ಎಸ್ ಕವಿತೆಗಳ ಚಿತ್ತವಿರುವುದು ಬಹುವಾಗಿ ಈ ನೆಲದತ್ತ, ಮಣ್ಣಿನ ಗುಣದತ್ತ, ನಮ್ಮ ಸಂಸ್ಕೃತಿಯ ಒಳಿತು ಕೆಡುಕುಗಳು, ಸಾಂಸ್ಕೃತಿಕ ಚರಿತ್ರೆಯ ಅನಾವರಣದ ಕಡೆಗೆ, ಅಂತಿಮವಾಗಿ ಮನುಷ್ಯತ್ವದ ಕಡೆಗೆ ಎನ್ನಬಹುದು. ಅಲ್ಲಿ ಮಾನವನ ಬದುಕಿಗೆ, ಸಮಾಜಕ್ಕೆ ವಿಶಿಷ್ಟವಾಗಿ ಸ್ಪಂದಿಸುವ ಗುಣವಿದೆ, ಮಲ್ಲಿಗೆಯ ಕಂಪಿದೆ, ಸಂಜೆ ಕೆಂಪಿದೆ, ಬೆಳಗಿನ ಪ್ರಕಾಶಮಾನ ಬೆಳಕಿದೆ, ಹೊಂಬಿಸಿಲಿದೆ ಅಲ್ಲದೇ ಹಣತೆ ಹಚ್ಚುವ ಮೂಲಕ ಕತ್ತಲನ್ನು ಓಡಿಸುವ ಭರವಸೆಯೂ ಅಲ್ಲಿ ಅಡಗಿದೆ. ಪುರಾಣ-ಚರಿತ್ರೆಗಳನ್ನು ಹೊಸ ಬೆಳಕಿನಲ್ಲಿ ನೋಡುವ ಕ್ರಮವೂ ಅಲ್ಲಿದೆ. ಸಮಕಾಲೀನ ಜಗತ್ತಿಗೆ ಸ್ಪಂದಿಸುತ್ತಲೇ ಸಾರ್ವಕಾಲಿಕತೆಯನ್ನು ಪಡೆಯುವ ಕಾವ್ಯ ಅವರದ್ದಾಗಿದೆ ಎನ್ನುವುದು ಗಮನಾರ್ಹ.

“ನಾನು ಬರೆಯುತ್ತೇನೆ
ಖುಷಿಗೆ, ನೋವಿಗೆ
ರೊಚ್ಚಿಗೆ ಮತ್ತು ಹುಚ್ಚಿಗೆ
ಅಥವಾ ನಂದಿಸಲಾಗದ ಕಿಚ್ಚಿಗೆ”

“ನಾನು ಬರೆಯುತ್ತೇನೆ
ಕೊನೆಯಿರದ ಬೀದಿಗಳ ಮೇಲೆ
ಕೀರ್ತಿಗೆ ಕಚ್ಚಾಡುವವರನು ಕುರಿತು,
ಅರಳುವ ಕನಸುಗಳನ್ನು ಕುರಿತು
ಉರುಳುವ ಚಕ್ರಗಳನ್ನು ಕುರಿತು
ನಾನು ಬರೆಯುತ್ತೇನೆ, ನನ್ನ
ಒಂದೊಂದೇ ಎಲೆಯುದುರಿ
ನಾನು ಬೋಳಾಗುವುದನ್ನು ಕುರಿತು”

ಕವಿ ಜಿ.ಎಸ್.ಎಸ್. ಕವಿಯಾದವನಿಗೆ ಖುಷಿಯಲ್ಲಿದ್ದಾಗ ಕಾವ್ಯ ರಚನೆಗೆ ಸ್ಪೂತಿ ಒದಗಿದಂತೆ ನೋವಲ್ಲಿದ್ದಾಗಲೂ, ಮನಸ್ಸು ಕ್ಷೆÆÃಭೆಗೆ ಒಳಗಾದಾಗಲೂ ಕಾವ್ಯ ಮೂಡುತ್ತದೆ. ತನ್ನ ಸುತ್ತಲಿನ ಸಮಾಜ, ಪರಿಸರದ ಪ್ರತಿಯೊಂದು ನೋವು-ನಲಿವುಗಳು ಆತನಿಗೆ ವಸ್ತುಗಳಾಗುತ್ತವೆ. ಅದನ್ನು ಕವಿ ಹೀಗೆ ಈ ಮೇಲಿನ ಪದ್ಯದಲ್ಲಿ ವ್ಯಕ್ತ ಪಡಿಸುತ್ತಾರೆ. ಅಲ್ಲದೇ ಇಲ್ಲಿ ಕವಿ ತನ್ನನ್ನು ತಾನು ಕಂಡುಕೊಳ್ಳುವ ಪ್ರಯತ್ನವೂ ಇದೆ. “ಹಾಡು ಹಳೆಯದಾದರೇನು ಭಾವ ನವನವೀನ, ಎದೆಯ ಭಾವ ಹೊಮ್ಮುವುದಕೆ ಭಾಷೆ ಒಂದು ಸಾಧನ” ಎನ್ನುವ ಸರಳತೆಯಲ್ಲಿಯೇ ತನ್ನ ಹಾಡನ್ನು ಗುನುಗಿಕೊಂಡ ಕವಿ ಜಿ.ಎಸ್.ಎಸ್.
ಜಿ.ಎಸ್.ಎಸ್ ಕವಿತೆಗಳಲ್ಲಿ ಹೆಣ್ಣಿನ ಪರಿಕಲ್ಪನೆ ಹೇಗೆ ವ್ಯಕ್ತವಾಗಿದೆ ಎನ್ನುವುದನ್ನು ನಾವು ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಅವರು ಹೆಣ್ಣನ್ನು ಪಕೃತಿಯ ವಿಶಿಷ್ಟ ಶಕ್ತಿಯಾಗಿ ಭಾವಿಸುತ್ತಾರೆ. ಹೆಣ್ಣೆಂದರೆ ಜಗತ್ತನ್ನೇ ಸಲಹುವ ಮಾತೆ ಎನ್ನುವುದೇ ಅವರ ಅಭಿಪ್ರಾಯ.

ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

ತಾಯೊಲವೆ ತಾಯೊಲವು ಈ ಲೋಕದೊಳಗೆ
ಕಡಲಿಂಗೆ ಕಡಲಲ್ಲದುಂಟೆ ಹೋಲಿಕೆಗೆ!

ಓ ಅಮೃತ ಪ್ರೇಮವೇ
ಓ ಮಾತೃ ರೂಪವೇ
ತೀರಲಾರದ ತೃಷೆಗೆ ಮರುಜನ್ಮ ಬೇಕು
ಮತ್ತೊಮ್ಮೆ ಶಿಶುವಾಗಿ ನಾ ನಲಿಯಬೇಕು.

ಎನ್ನುತ್ತಾ ಕವಿ ಹಂಬಲಿಸುತ್ತಾರೆ. ಎರಡನೆಯ ಕವಿತೆ ಸಾಲು ಅವರ ತಾಯಿ ತೀರಿದಾಗ ಬರೆದ ಕವಿತೆಯಾಗಿದೆ. ಈ ಕವಿತೆಯುದ್ದಕ್ಕೂ ಕವಿಯ ತಾಯಿಪ್ರೇಮ, ತಾಯಿಯನ್ನು ಕಳೆದುಕೊಂಡ ನೋವು ಕರುಣಾರಸವಾಗಿ ಹರಿದಿದೆ. ಮೇಲಿನ ‘ಸ್ತಿçÃ’ ಕವಿತೆಯಲ್ಲಿ ಹೆಣ್ಣೆಂದರೆ ಅವಳಿಗೆ ಹೋಲಿಕೆಯ ವಸ್ತು ಇನ್ನೊಂದು ಸಿಗದು ಎನ್ನುತ್ತಾ ಪಕೃತಿ ಮಾತೆಯ ರೂಪವೇ ಅವಳು ಎನ್ನುವ ಅನಿಸಿಕೆ ಕವಿಯದ್ದಾಗಿದೆ.

ಕಡಲು ಮತ್ತು ಹಣತೆಯ ರೂಪಕಗಳ ಮೂಲಕ ಕವಿ ವ್ಯಕ್ತ ಪಡಿಸಿದ ಭಾವಗಳು ಹಲವಾರು. ಅವರ ಕಾವ್ಯದ ತುಂಬ ಈ ಪ್ರತಿಮೆಗಳೇ ಹೆಚ್ಚಾಗಿ ತುಂಬಿಕೊಂಡಿವೆ. ಉದಾಹರಣೆಗೆ-

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೇ ಒಂದು ದಿನ?
ಕಡಲನು ಸೇರ ಬಲ್ಲೆನೆ ಒಂದು ದಿನ?

ಕಡಲ ಕಾಂಬಾಸೆ ಕಡಲುವರಿದಿತ್ತು ನನ್ನ ಮನಸಿನೊಳಗೆ
ವರುಷವಿಪ್ಪತ್ತು ಮೂರು ತುಂಬುತಿರೆ ನನ್ನ ಕಂಡ ದಿನಕೆ

ಕಡಲು ಮೊರೆವುದೇಕೆ ಅಂತು
ಹಗಲಿರುಳೂ ಯುಗ ಯುಗ

ಕಡಲತ್ತ ಹರಿದ ಹೊಳೆಯನು ಮತ್ತೆ ಉಗಮದೆಡೆ
ತಿರುಗಿಸುವ ಬಯಕೆ

ಇದು ಕಡಲೆಡೆಗೆ ನಡೆವಂಥ ಹಿರಿ ಚೇತನ
ಹಿರಿದರೆಡೆ ನಡೆವವರು ಹಿರಿಯಪ್ಪರು ಕಾಣ!

ಹೀಗೆ ಕವಿಯ ಕಾವ್ಯದಲ್ಲಿ ಸಾಕಷ್ಟು ಬಾರಿ ಕಡಲು ಉಪಮೆ, ರೂಪಕಗಳ ಪ್ರತಿಮೆಯಾಗಿ ಬಳಕೆಗೊಂಡಿರುವುದನ್ನು ಗುರುತಿಸಬಹುದು. ಕಡಲಿನ ಅನಂತತೆ ಕವಿಯನ್ನು ಸೆಳೆದಂತೆ ಹಣತೆಯ ನಿರಂತರತೆಯೂ ಕವಿಯನ್ನು ಆಕರ್ಷಿಸಿದೆ ಎನ್ನುವುದನ್ನು ಅವರ ಕಾವ್ಯದಲ್ಲಿ ಅನೇಕ ಪ್ರತಿಮೆಗಳು ಸಿಗುತ್ತವೆ. ಉದಾಹರಣೆಗೆ-

ಬೆಳಕು ಒಳಬರಲೆಂದು ತೆರೆದ ಕಿಟಕಿಗಳಿಂದ
ದೂಳು ಒಳ ಬರುವುದು ಯಾರ ಆನಂದ?

ಹಗಲ ಬೆಳಕಿನ ಗಡಿಗೆ-
ಯೊಡೆದು ಚೂರಾಯಿತದೊ
ಪಶ್ಚಿಮಾದ್ರಿಯ ಶಿಖರದರೆಯೊಂದರಲ್ಲಿ!

ಹಣತೆ ಹಚ್ಚುತ್ತೇನೆ ನಾನೂ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ ಮತ್ತೆ
ನಾನು ಯಾರೋ

ಬೆಳಕು ಹರಿಯಿತು ಹೊರಗಡೆ
ಕತ್ತಲಿನ್ನೂ ಒಳಗಡೆ

ಈ ಮೇಲೆ ಗಮನಿಸಿದಂತೆ ಕವಿಯ ಕಾವ್ಯದಲ್ಲಿ ಈ ಎರಡು ಪ್ರತಿಮೆಗಳು ಸಾಮಾನ್ಯವಾಗಿ ಬರುವಂತಹುಗಳು ಎನ್ನುವುದನ್ನು ಗುರುತಿಸಬಹುದು.

ಕವಿಯ ಸೃಜನಶೀಲ ಕಾವ್ಯ ಎಂದೂ ಚಲನಶೀಲತೆಯತ್ತ ಸಾಗುತ್ತಿರುತ್ತದೆ. ಬದಲಾದ ಕಾಲಮಾನಕ್ಕೆ ಸ್ಪಂದಿಸುವ ಗುಣ ಕವಿಯಲ್ಲಿರಬೇಕಾದ ಅಗತ್ಯ ಗುಣ ಎಂದು ಭಾವಿಸಬಹುದು. ಜಿ.ಎಸ್.ಎಸ್ ಅವರ ಕಾವ್ಯಕ್ಕೆ ಅಗತ್ಯವಾಗಿ ಈ ಗುಣವಿದೆ. ಅದಕ್ಕೇ ಅವರ ಅನೇಕ ಕವಿತೆಗಳು ಸಾಕ್ಷಿಯಾಗಿವೆ. ಅವರ ಕವಿತೆಗಳು ವಾಸ್ತವದ ನೆರಳಲ್ಲಿಯೇ ಆಶಾವಾದದ ಕಡೆಗೆ ಸಾಗುತ್ತವೆ. ಹೊಸ ಬದುಕಿನ ಕನಸು ಕನವರಿಕೆಗಳು ಅಲ್ಲಿವೆ.

ಜಿ.ಎಸ್.ಎಸ್ ಅವರು ಈ ಸಂಕಲನದಲ್ಲಿ ತಮ್ಮ ಕಾವ್ಯ ಪ್ರತಿಭೆ ಇನ್ನೂ ವಿಕಾಸವಾಗಬೇಕಾಗಿರುವ ಅರಿವನ್ನು ಕಂಡುಕೊಳ್ಳುತ್ತಾರೆ. ಉದಾಹರಣೆಗೆ ಅವರ ಕರೆ, ಒಳದನಿಯಂತಹ ಕವಿತೆಗಳಲ್ಲಿ ಕವಿಯ ಆಂತರ್ಯದ ಅಳಲು ವ್ಯಕ್ತವಾಗಿದೆ. ವಿಮರ್ಶಕರ ಟೀಕೆಗಳಿಗೆ ಇವು ಉತ್ತರಗಳೂ ಆಗಿವೆ.

ಕಾಲು ಕೀಳದೆ ಎನಿತು ರೆಕ್ಕೆಗಳ ಬಡಿದರೇಂ
ಹಾರಲಾಗುವುದೇನು ಬಾನಿನಲ್ಲಿ?
ಓ ಗುರುವೆ ದಯೆಗೈದು ಬಿಡಿಸು ಬಾ ಬೇಗದಲಿ
ಹೊಸಶಕ್ತಿಯನು ನೀಡು, ಅಡಿಯ ಪಂಕದಿ ಬಿಡಿಸಿ
ನಿನ್ನ ರಕ್ಷೆಯನೆನ್ನ ರೆಕ್ಕೆಗಳಿಗಳವಡಿಸಿ.

ಇಲ್ಲಿ ಕವಿ ತನಗೆ, ತನ್ನ ಕಾವ್ಯಕ್ಕೆ ಬೇಕಾಗಿರುವ ಪ್ರತಿಭೆಯ ಶಕ್ತಿಯನ್ನು ಕರುಣಿಸುವಂತೆ ಗುರುವಿನಲ್ಲಿ ಪ್ರಾರ್ಥಿಸುತ್ತಿದ್ದಾನೆ. “ಬಾ ರೂಪುಕೊಡು ಗುರುವೇ, ಕೃಪೆಯ ಕೈ ನೀಡು; ನಿನ್ನ ಕೈಚಳಕದಲಿ ಮಣ್ತನವ ನೀಗಿಸುತ” ಎನ್ನುತ್ತಾರೆ. ಇಲ್ಲಿ ಕವಿಯ ಅಂತರಂಗದ ಅಭೀಪ್ಸೆಯಿದೆ. ಕೇಳುವ ಧ್ವನಿಯಲ್ಲಿ ನಮ್ರತೆಯಿದೆ, ವಿನಯ ವಿಧೇಯತೆಯಿದೆ. ತನ್ನ ಕಾವ್ಯ ಇನ್ನೂ ರೆಕ್ಕೆಬಿಚ್ಚಿಹಾರಲಾಗದೇ ಇರುವ ಹಕ್ಕಿ ಎನ್ನುವ ಸತ್ಯವನ್ನು ಕವಿ ಒಪ್ಪಿಕೊಂಡು ಬರೆದಿರುವುದು ಕವಿಯ ದೊಡ್ಡತನವನ್ನು, ಪ್ರಮಾಣಿಕತೆಯನ್ನು ಸಾಂಕೇತಿಸುತ್ತದೆ.

ಹಾರದಿರು ಹಾರದಿರು, ಈಗಲೇ ಹಾರದಿರು
ಅನಂತ ವಿಸ್ತರದ ನೀಲ ನಭಕೆ
ರೆಕ್ಕೆ ಬಲಿಯದ ಮುನ್ನ, ಪುಕ್ಕವೇಳದ ಮುನ್ನ
ಮೈಯಲ್ಲಿ ಸಾಕಷ್ಟು ಬಲಬರದ ಮುನ್ನ
ಹಾರಲೆಳಸುವೆಯೇಕೆ
ಈ ನೀಲ ನಭಕೆ?

ಇಲ್ಲಿ ಕವಿಗೆ ತಾನು ಕವಿ ಎಂಬ ಅಹಂಕಾರ ಮೂಡುವುದಿಲ್ಲ. ಬದಲಾಗಿ ತನ್ನ ಪ್ರತಿಭೆ, ಲೋಕಜ್ಞಾನ, ಕಾವ್ಯ ಕೌಶಲಗಳು ಬೆಳೆಯಬೇಕಾಗಿರುವ, ಆ ಮೂಲಕ ತನ್ನ ಕಾವ್ಯ ಶಕ್ತಿಯುತವಾಗಬೇಕಿರುವ ಮಾರ್ಗವನ್ನು ಕುರಿತು ಆಲೋಚಿಸುತ್ತಿದ್ದಾನೆ. ಅದರಂತೆ ಮುಂದೆ ಅವರ ಕಾವ್ಯ ವಿಕಸಿತವಾಗುತ್ತಾ ಸಾಗಿದೆ. “ಮೈಯಲ್ಲಿ ಬಲ ಬರಲಿ, ಹಾರುವ ಕೆಚ್ಚರಲಿ, ದೂರವೆನಿತಾದರೂ ಸಾಗಬಹುದು” ಎನ್ನುವ ನಂಬಿಕೆ, ಹುಮ್ಮಸ್ಸು ಕವಿಯದು.

ಜಿ.ಎಸ್.ಎಸ್ ಅವರು ಒಟ್ಟು ಹದಿನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಕಾವ್ಯ ಒಳಗೊಳ್ಳದ ವಸ್ತುವೇ ಇಲ್ಲ ಎನ್ನಬಹುದು. ಅವರ ಕಾವ್ಯದ ವಸ್ತುಗಳು ವಿಭಿನ್ನವಾಗಿವೆ. ರಸಪ್ರಜ್ಞೆ, ಸಾಮಾಜಿಕ ಕಳಕಳಿ, ಸ್ವ ಅನುಭವದ ಅಭಿವ್ಯಕ್ತಿ, ಪ್ರಕೃತಿಯ ವರ್ಣನೆ ಮತ್ತು ಅದರ ಬಗೆಗಿನ ಕುತೂಹಲ ಪ್ರಜ್ಞೆ ಇವೇ ಮುಂತಾದವುಗಳ ಜಿ.ಎಸ್.ಎಸ್ ಕಾವ್ಯದ ಕೇಂದ್ರ ವಸ್ತು ವಿಷಯಗಳು. ಅವರ ಕಾವ್ಯದ ಶೈಲಿ ಸರಳ, ಸಹಜ, ಗಂಭೀರವಾಗಿದೆ. “ಜಾಗ ಕೊಡಿ ಸ್ವಾಮಿ, ನನಗೆ ಈ ಮೂಲೆಯಲಿ, ನಾನೂಒಬ್ಬ ಕವಿ, ನನಗೆ ಬೇಕಾದದ್ದು ಹೃದಯವಿರುವಂಥ ಐದೋ ಆರೋ ಕಿವಿ” ಎನ್ನುವುದು ಕವಿಯ ಅಪೇಕ್ಷೆಯಾಗಿದೆ. ತನ್ನ ಕಾವ್ಯವನ್ನು ಜಗತ್ತೇ ಮೆಚ್ಚಿ ಹೊಗಳಬೇಕು ಎನ್ನುವ ಅತಿ ಆಸೆ ಕವಿಯಲ್ಲಿ ಎಲ್ಲೂ ಕಾಣುವುದಿಲ್ಲ. ಸಹಜವಾಗಿ ತನ್ನ ಖುಷಿಗೆ ಹಾಡಿಕೊಳ್ಳುವ ಕೋಗಿಲೆಯ ಧ್ವನಿಯಂತೆ ಕಾವ್ಯವೆಂದು ಅವರು ಭಾವಿಸುತ್ತಾರೆ. ಹಾಗಾಗಿಯೇ ಅವರ ಕಾವ್ಯ ವರ್ತಮಾನಕ್ಕೆ ಮುಖಾ-ಮುಖಿಯಾಗುತ್ತಲೇ ಸಾರ್ವಕಾಲಿಕ ಗುಣವನ್ನು ಪಡೆಯುತ್ತದೆ.

-ಡಾ. ಸುಶ್ಮಿತಾ. ವೈ.

ಕನ್ನಡದ ಬರಹಗಳನ್ನು ಹಂಚಿ ಹರಡಿ
5 4 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x