ಆತಂಕ ಸೃಷ್ಟಿಸಿದ ಗೋವಾ ಪ್ರವಾಸ !: ಎಲ್. ಚಿನ್ನಪ್ಪ


ಪ್ರವಾಸ ಎಂದರೆ, ದೇಹಕ್ಕೆ ನವೋಲ್ಲಾಸ ಮತ್ತು ಮನಸ್ಸಿಗೆ ಮುದ ನೀಡುವ ಒಂದು ಮಾನಸಿಕ ಕ್ರಿಯೆ. ಪ್ರತಿದಿನ ಯಾಂತ್ರಿಕ ಬದುಕಿನಲ್ಲಿ ದುಡಿದು ಬಸವಳಿದವರು ಒಂದೆರಡು ದಿನಗಳು ಪ್ರವಾಸ ಮಾಡಿ ಬಂದರೆ, ಅವರಲ್ಲಿ ನವ ಚೈತನ್ಯ ತುಂಬುತ್ತದೆ, ಹುರುಪು ಹೆಚ್ಚಾಗುತ್ತದೆ, ಕದಡಿದ ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ವರ್ಷಕ್ಕೊಮ್ಮೆ ಯಾವುದಾದರೊಂದು ಪ್ರವಾಸ ಮಾಡಿ ಬರುವುದು ದೈಹಿಕ ಹಾಗು ಮಾನಸಿಕ ದೃಷ್ಟಿಯಿಂದಲೂ ಒಳ್ಳೆಯದು. ಪ್ರವಾಸಕ್ಕೆ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದು ಅವರವರ ಇಚ್ಛೆಗೆ ಬಿಟ್ಟದ್ದು. ಕೆಲವರು ಪ್ರವಾಸಕ್ಕೆ ಪುಣ್ಯ ಸ್ಥಳಗಳನ್ನು ಆಯ್ಕೆ ಮಾಡಿಕೊಂಡರೆ, ಕೆಲವರು ಐತಿಹಾಸಿಕ ಸ್ಥಳಗಳನ್ನೋ, ಪ್ರಕೃತಿ ಸೊಬಗಿನ ಗಿರಿಧಾಮಗಳನ್ನೋ ಆಯ್ಕೆಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಪ್ರವಾಸವೆಂದರೆ, ಕುಡಿದು, ತಿಂದು ಮೋಜು ಮಾಡಿ ಬರುವುದೆಂದು ಭಾವಿಸುತ್ತಾರೆ. ಅದಕ್ಕಾಗಿಯೇ ಪ್ರವಾಸ ಹಮ್ಮಿಕೊಳ್ಳುವವರೂ ಇದ್ದಾರೆ. ಗೋವಾ ಅಂಥಹವರಿಗೆ ಹೇಳಿ ಮಾಡಿಸಿದ ತಾಣ ಎಂಬ ಪ್ರತೀತಿಯೂ ಇದೆ. ಏಕೆಂದರೆ, ಅಲ್ಲಿ ಅಬಕಾರಿ ಶುಲ್ಕ ರಹಿತ ಅಗ್ಗದ ಧರದಲ್ಲಿ ಸಿಗುವ ಮಧ್ಯ ಒಂದು ಕಾರಣವಾದರೆ, ಮನೆಯವರ ಕಣ್ತಪ್ಪಿಸಿ ಅವರಿಗೆ ತಿಳಿಯದಂತೆ ತಮ್ಮ ಇಚ್ಚಾನುಸಾರ ಕುಡಿದು ತಿಂದು ಮಜಾ ಮಾಡಿ ಬರುವುದಕ್ಕೆ ಗೋವಾ ಪ್ರವಾಸ ಆಯ್ಕೆಮಾಡಿಕೊಳ್ಳುತ್ತಾರೆ.

ಗೋವಾ ಹಲವು ಪ್ರಸಿದ್ದ ಪ್ರಕೃತಿ ತಾಣಗಳಿಗೂ ಬೀಚುಗಳಿಗೂ ಹೆಸರುವಾಸಿ. ‘ಬೀಚುಗಳ ರಾಣಿ’ ಎಂದು ಕರೆಸಿಕೊಳ್ಳುವ ರಾಜ್ಯವು ತನ್ನದೇ ಆದ ಪ್ರಕೃತಿ ಸೌಂದರ್ಯವನ್ನು ಹೊಂದಿದೆ. ಅನೇಕ ವೈವಿದ್ಯತೆಗಳಿಂದ ಕೂಡಿರುವ ಅಲ್ಲಿನ ಪರಿಸರವು ಪ್ರವಾಸಿಗರ ಗಮನ ಸೆಳೆಯುವುದರಲ್ಲಿ ಆಶ್ಚರ್ಯವೇನಿಲ್ಲ. ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಗೋವಾ ಮುಂಚೂಣಿಯಲ್ಲಿದೆ. ಗೋವಾದ ಮತ್ತೊಂದು ವಿಶೇಷತೆ ಏನೆಂದರೆ, ಅಲ್ಲಿ ಹೊಸವರ್ಷಾರಣೆಯು ಅತ್ಯಂತ ವರ್ಣಮಯವಾಗಿ ಜರುಗುತ್ತದೆ. ಡಿಸೆಂಬರ್ 31 ರಂದು ಸಂಜೆ ಅಲ್ಲಿನ ಲಾಂಚ್ಗಳಲ್ಲಿ ಹೊಸವರ್ಷಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ. ಯುವಕರು ಆ ಕಾರ್ಯಕ್ರಮಗಳನ್ನು ವೀಕ್ಷಿಸಲು ಮುಗಿ ಬೀಳುತ್ತಾರೆ. ದೇಶ ವಿದೇಶಗಳಿಂದ ಹಾಗು ಎಲ್ಲಾ ಕಡೆಗಳಿಂದಲೂ ಪ್ರವಾಸಿಗರು ಅಲ್ಲಿಗೆ ಆಗಮಿಸುತ್ತಾರೆ. ಯುವಕರಲ್ಲದೆ ಇತರರೂ ಗೋವಾವನ್ನು ಕಂಡು ಸವಿದು ಬರಲು ಅಲ್ಲಿಗೆ ಹೋಗುತ್ತಾರೆ.

ಈ ವಿಚಾರ ನಮಗೆ ಅಲ್ಲಿಗೆ ಹೋಗಿ ಬಂದವರಿಂದ ತಿಳಿಯಿತು. ನಮಗೆ ಕುತೂಹಲ ಹೆಚ್ಚಾಗಿ ಒಮ್ಮೆ ನಾವೂ ಏಕೆ ಅಲ್ಲಿಗೆ ಹೋಗಿ ಬರಕೂಡದು ಎನಿಸಿತು. ಇದನ್ನು ತಿಳಿದ ನಮ್ಮ ಸ್ನೇಹಿತರಲ್ಲಿ ಕೆಲವರು ‘ ಓಹೋ ! ಏನು ಕಂಠಪೂರ್ತಿ ಕುಡಿದು ಬರಲು ಅಲ್ಲಿಗೆ ಪ್ರವಾಸ ಹೊರಟಿದ್ದೀರಾ’ ಎಂದು ನಮ್ನನ್ನು ಛೇಡಿಸಿದರು. ಹೌದು, ಗೋವಾ ಮಧ್ಯಪಾನ ಪ್ರಿಯರ ನೆಚ್ಚಿನ ತಾಣ ಎಂಬುದಕ್ಕೆ ಅವರ ಕುಚೋದ್ಯವೂ ಥಳುಕುಹಾಕಕೊಂಡಿದೆ.

ನಮ್ಮ ನಿಗದಿತ ಕಾರ್ಯಕ್ರಮದಂತೆ, ಕರ್ನಾಟಕದ ಕಾಶ್ಮೀರ ಎಂದು ಕರೆಯುವ ಕಾರವಾರದ ಬೀಚುಗಳನ್ನು ಹಾಗು ಅಲ್ಲಿನ ಮೀನು ಮಾರುಕಟ್ಟೆಯಲ್ಲಿ ಕಾಣಸಿಗುವ ತರಾವರಿ ಮೀನುಗಳ ರಾಶಿಗಳನ್ನು ನೋಡಿಕೊಂಡು ಡಿಸೆಂಬರ್ 30 ರಂದು ರಾತ್ರಿ ಗೋವಾ ತಲುಪಿದೆವು. ಮಾರನೇ ದಿನ ‘ಬೀಚುಗಳ ರಾಣಿ’ಎನಿಸಿಕೊಂಡ ಗೋವಾದ ಪ್ರಸಿದ್ದ ಬೀಚುಗಳಾದ, ಕಾಲಂಗುಟೆ, ಕ್ಯಾಂಡೋಲಿಮ್, ಕೋಲ್ವ, ಅಂಜುನ, ಮಿರಾಮಾರ್, ಇತ್ಯಾದಿ ಬೀಚುಗಳನ್ನು ಸುತ್ತಾಡಿಕೊಂಡು ಬಂದೆವು. ಸಂಜೆ ಏಳು ಗಂಟೆಗೆ ಲಾಂಚ್ಗಳಲ್ಲಿ ಜರುಗುವ ಹೊಸ ವರ್ಷಾಚರಣೆ ವೀಕ್ಷಣೆ ಕಾರ್ಯಕ್ರಮ ನಿಗದಿಯಾಗಿತ್ತು. ಅಂತೆಯೇ ಸಂಜೆ ಏಳು ಗಂಟೆ ಹೊತ್ತಿಗೆ ನಾವೆಲ್ಲ ಲಾಂಚ್ಗಳು ನಿಲ್ಲುವ ಕಡಲ ತಡಿಗೆ ತೆರಳಿದೆವು. ಅಲ್ಲಿ ಅದಾಗಲೇ ಒಂದೆರಡು ಲಾಂಚ್ಗಳು ಸಿಂಗರಿಸಿಕೊಂಡು ಹೊರಡಲು ತಯಾರಾಗಿ ನಿಂತಿದ್ದವು. ನಾವು ಟಿಕೆಟ್ಗಳನ್ನು ಪಡೆದು ಲಾಂಚ್ ಹತ್ತಿ ಕುಳಿತೆವು. ಅದಾಗಲೇ ಹತ್ತಿ ಕುಳಿತಿದ್ದ ಕೆಲವು ಪ್ರೇಕ್ಷಕರು ಒಳಗೆ ಪಾನೀಯಗಳನ್ನು ಸೇವಿಸುತ್ತ ಲೋಕಾಬಿರಾಮವಾಗಿ ಹರಟುತ್ತಿದ್ದರು. ವೇದಿಕೆಯ ಮೇಲೆ ವಾದ್ಯ ನುಡಿಸುವವರು ಅಸೀನರಾಗಿದ್ದು ಕಾರ್ಯಕ್ರಮ ಆರಂಭಿಸಲು ಸಿದ್ಧರಾಗುತ್ತಿದ್ದರು.

ಲಾಂಚ್ನ ಒಳಾಂಗಣವನ್ನು ಬಣ್ಣ ಬಣ್ಣದ ಬಲೂನ್ಗಳಿಂದ ವಿದ್ಯುತ್ ದೀಪಗಳಿಂದ ಹಸಿರು ತೋರಣಗಳಿಂದ ಚೆನ್ನಾಗಿ ಅಲಂಕರಿಸಿದ್ದರು. ಆ ವೇಳೆಗೆ ಸೂರ್ಯ ಅಸ್ತಮಿಸಿ ಅದಾಗ ತಾನೆ ಮಬ್ಬುಗತ್ತಲಿಗೆ ಜಾರಿದ್ದರಿಂದ ಒಳಗೆ ಬಣ್ಣ ಬಣ್ಣದ ವಿದ್ಯುತ್ ದೀಪಗಳು ನಮಗೆ ವರ್ಣಮಯವಾಗಿ ಗೋಚರಿಸಿದವು. ಲಾಂಚ್ನ ಒಳಾಂಗಣವು ವಿಶಾಲವಾಗಿದ್ದು ಸಾಕಷ್ಟು ಪ್ರೇಕ್ಷಕರು ಕುಳಿತುಕೊಳ್ಳಬಹುದಿತ್ತು. ನಮಗೆ ಇಷ್ಟವಾದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಜೊತೆ ಜೊತೆಯಾಗಿ (ದಂಪತಿ) ಕುಳಿತೆವು. ಒಳಗೆ ಆಸನಗಳೆಲ್ಲ ಭರ್ತಿಯಾದ ಮೇಲೆ, ಲಾಂಚ್ ನಿಧಾನವಾಗಿ ಚಲಿಸತೊಡಗಿತು. ಸಂಜೆಯ ತಣ್ಣನೆಯ ವಾತಾವರಣವು ಮೈಮನಸ್ಸನ್ನು ಪುಳಕಗೊಳಿಸಿತ್ತು. ಕಡಲ ಮೇಲಿಂದ ಬೀಸಿ ಬರುತ್ತಿದ್ದ ತಂಗಾಳಿಯು ತುಂಬಾ ಆಹ್ಲಾದಕರವಾಗಿತ್ತು. ನಮ್ಮ ಕಡಲ ಮೇಲಿನ ಯಾನವು ಜೋಕಾಲಿಯಲ್ಲಿ ಕುಳಿತು ಹೊಯ್ದಾಡುವಂತೆ ಸಾಗಿತ್ತು. ವಾದ್ಯ ನುಡಿಸುವರು ತಮ್ಮ ವಾದ್ಯಗಳಿಂದ ಸುಮದುರ ಗೀತೆಗಳನ್ನು ನುಡಿಸತೊಡಗಿದ್ದರು. ನಂತರ ಯುವಕರನ್ನು ರಂಜಿಸುವ, ಪ್ರಚೋದಿಸುವ ಹಿಂದಿ ಚಲನ ಚಿತ್ರಗಳ ಗೀತೆಗಳನ್ನು ಹಾಡತೊಡಗಿದರು. ಪ್ರಣಯಭರಿತ ಹಾಡುಗಳಿಗೆ ಯುವಕರು ಉನ್ಮತ್ತರಾಗಿ ಕುಣಿಯ ತೊಡಗಿದರು. ಅವರಿಗೆ ಡ್ಯಾನ್ಸ್ ಮಾಡಲೆಂದೇ ಆರ್ಕೆಷ್ಟ್ರಾ ವೇದಿಕೆಯ ಪಕ್ಕದಲ್ಲಿ ಪ್ರತ್ಯೇಕ ಸ್ಥಳವೂ ಇತ್ತು. ಉನ್ಮತ್ತರಾದ ಕೆಲವು ಯುವಕರು ಅಲ್ಲಿಗೆ ಹೋಗಿ ವಾದ್ಯಗಳ ಸಂಗೀತಕ್ಕೆ ತಕ್ಕಂತೆ ಡ್ಯಾನ್ಸ್ ಮಾಡತೊಡಗಿದರು.

ಮದ್ಯಪಾನ ಪ್ರಿಯರಿಗೆ ಅಲ್ಲೊಂದು ಬಾರ್ ಸಹ ಇತ್ತು. ಕೆಲವರು ಅಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದರು. ಆದರೆ, ಅಲ್ಲಿ ದುಬಾರಿ ರೇಟ್ ಎಂದು ತಿಳಿದವರು ತಾವು ಬರುವಾಗಲೇ ಸಾಕಷ್ಟು ಅಮಲೇರಿಸಿಕೊಂಡು ಬಂದಿದ್ದರು. ವಿದ್ಯುತ್ ದೀಪಗಳು ಕೆಲವೊಮ್ಮೆ ಮಿಂಚಿನಂತೆ ಕೋರೈಸುತ್ತಿದ್ದರೆ, ಕೆಲವೊಮ್ಮೆ ಮಬ್ಬು ಬೆಳಕನ್ನು ಸೂಸುತ್ತಿದ್ದವು. ಬೆಳಕು ಕತ್ತಲೆಯ ಜುಗಲ್ಬಂದಿ ವಾದ್ಯಗೋಷ್ಠಿಯವರ ಅಬ್ಬರದ ಸಂಗೀತ ಯುವಕರ ಮೋಜಿನ ಕುಣಿತ ಪ್ರೇಕ್ಷರನ್ನು ಆನಂದ ಸಾಗರದಲ್ಲಿ ಮುಳುಗಿಸಿತ್ತು. ಕಡಲ ಮೇಲೆ ಜೋಕಾಲಿಯಂತೆ ಸಾಗುವ ಯಾನವು ವಾದ್ಯಗೋಷ್ಟಿಯವರ ಪ್ರಣಯಭರಿತ ಗೀತೆಗಳು, ಕತ್ತಲು-ಬೆಳಕಿನ ಚಮತ್ಕಾರವು, ಯುವಕರ ಉನ್ಮತ್ತ ಕುಣಿತವು, ನಮಗೆ ಅಲ್ಲೊಂದು ಹೊಸಲೋಕವನ್ನೇ ಸೃಷ್ಟಿಸಿತ್ತು. ಹಾಗೆಯೇ ನಮ್ಮ ಲಾಂಚ್ ನಿಧಾನವಾಗಿ ಚಲಿಸುತ್ತ 10-12 ಕಿಮೀ. ಕ್ರಮಸಿದ ಮೇಲೆ ಒಂದು ಕಡೆ ತಿರುವು ಪಡೆದುಕೊಂಡು ಅದು ವಾಪಸ್ ಮರಳಿತು. ನಾವು ಲಾಂಚ್ನಿAದ ಇಳಿದು ಒಮ್ಮೆ ಸಮುದ್ರದ ಕಡೆಗೆ ದೃಷ್ಟಿ ಹಾಯ್ಸಿದೆವು. ಆಗ ನಮಗೆ ದೂರದಲ್ಲಿ ಸಾಗುತ್ತಿದ್ದ ಲಾಂಚ್ಗಳಲ್ಲಿ ಮಿನುಗುವ ವಿದ್ಯುತ್ ದೀಪಗಳು ಸಾಲು ಸಾಲು ನಕ್ಷತ್ರಗಳಂತೆಯೇ ಕಂಡವು. ಸಂಜೆ ಒಂದು ಗಂಟೆ ಅವಧಿಯ ನಮ್ಮ ಯಾನವು ತುಂಬಾ ಆಹ್ಲಾದಕರವಾಗಿತ್ತು.

ನಮ್ಮನ್ನು ಇಳಿಸಿದ ಲಾಂಚ್ ಮತ್ತೊಂದು ಸುತ್ತಾಟಕ್ಕೆ ತಯಾರಾಗಿ ನಿಂತು ಪ್ರೇಕ್ಷಕರನ್ನು ಹತ್ತಿಸಿಕೊಳ್ಳತೊಡಗಿತ್ತು. ನಾವು ಸಮೀಪವೇ ಇದ್ದ ಹೋಟೆಲ್ಗೆ ತೆರಳಿ ಅಲ್ಲಿ ಊಟ ಮುಗಿಸಿಕೊಂಡು ಬಸ್ ಹತ್ತಿ ಕುಳಿತೆವು. ಅಲ್ಲಿಂದ ಹೊರಟ ಬಸ್ ನಮ್ಮನ್ನು ಗೋವಾದ ಸಂತ ಕ್ಸೇವಿಯರ್ ಚರ್ಚ್ ಬಳಿ ಇಳಿಸಿತು. ನಮ್ಮ ಮುಂದಿನ ಕಾರ್ಯಕ್ರಮ ರಾತ್ರಿ 11 ಗಂಟೆಗೆ ಚರ್ಚ್ ನಲ್ಲಿ ಜರುಗುವ ಹೊಸವರ್ಷಾಚರಣಯನ್ನು ನೋಡಿಕೊಂಡು ನಂತರ ಹೋಟೆಲ್ಗೆ ಮರಳುವುದು. ಚರ್ಚ್ನಲ್ಲಿ ಹೊಸವರ್ಷಾಚರಣೆ ಮುಗಿದ ಮೇಲೆ ಅಲ್ಲೇ ಇರಿಸಲಾಗಿದ್ದ ಸುಮಾರು 500 ವರ್ಷಗಳಷ್ಟು ಹಳೆಯ ಸಂತ ಕ್ಸೇವಿಯರ್ ಪಾರ್ಥಿವ ಶರೀರವನ್ನು ವೀಕ್ಷಿಸಿದೆವು. ಶವವು ಸಂಕುಚಿತಗೊAಡು ಅದರ ದೇಹದ ಮಾಂಸ ಖಂಡಗಳು ತೊಗಲಿನೊಂದಿಗೆ ಎಲುಬುಗಳಿಗೆ ಅಂಟಿಕೊAಡು ಅದು ಇನ್ನೂ ಹೆಣವಾಗಿಯೇ ಉಳಿದಿತ್ತು. ಆ ಐತಿಹಾಸಿಕ ದೃಶ್ಯವನ್ನು ಕಂಡು ನಾವು ಮೂಕವಿಸ್ಮಿತರಾದೆವು. ಒಂದೆಡೆ ನಮಗೆ ಸೋಜಿಗವೆನಿಸಿದರೆ, ಮತ್ತೊಂದೆಡೆ ಇತಿಹಾಸಕ್ಕೆ ಅದು ಸಾಕ್ಷಿ ಎನ್ನುವಂತಿತ್ತು. ಅಂದಿನ ಎಲ್ಲಾ ಕಾರ್ಯಕ್ರಮಗಳು ಮುಗಿದ ಮೇಲೆ ನಾವು ಹೋಟೆಲ್ಗೆ ಮರಳಲು ಬಸ್ ಹತ್ತಿ ಕುಳಿತೆವು.

ಆಗ ರಾತ್ರಿ 12. 30 ಗಂಟೆ. ಹೊರಗಡೆ ಜನ ಸಂದಣಿ ಕರಗಿಹೋಗಿತ್ತು. ಹತ್ತು ನಿಮಿಷ ಕಳೆದರೂ ಡ್ರೈವರ್ ಬರಲಿಲ್ಲ. ಇಳಿದು ನೋಡಿದರೆ, ಡ್ರೈವರ್ ಅಲ್ಲೊಂದು ಸಿಮೆಂಟ್ ಬೆಂಚ್ ಮೇಲೆ ಹಾಯಾಗಿ ಮಲಗಿಬಿಟ್ಟಿದ್ದ. ನಮ್ಮ ಟೂರ್ ವ್ಯವಸ್ಥಾಪಕ ಅಲ್ಲಿಗೆ ತೆರಳಿ ‘ಮಂಜು, ಮಂಜು’ ಎಂದು ಅವನನ್ನು ತಟ್ಟಿ ಎಬ್ಬಿಸಿದ. ಆದರೆ ಅವನಿಗೆ ಎಚ್ಚರವಾಗಲಿಲ್ಲ. ಮದ್ಯದ ಅಮಲು ಹೆಚ್ಚಾಗಿ ಡ್ರೈವರ್ ಗಾಢ ನಿದ್ರೆಗೆ ಜಾರಿದ್ದ. ಒಂದು ವೇಳೆ ಎಚ್ಚರಗೊಂಡರೂ ಅವನಿಂದ ಬಸ್ ಓಡಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಂಡು ಪುನಃ ಬಸ್ ಹತ್ತಿ ಕುಳಿತೆವು. ‘ಡ್ರೈವರ್ ಎಲ್ಲೋ ಜಾಸ್ತಿ ಕುಡಿದು ಬಿಟ್ಟಿದ್ದಾನೆ, ಇನ್ನೆಲ್ಲಿ ಅವನು ಬಸ್ ಓಡಿಸೋದು’ಎಂದುಕೊಂಡ ಕೆಲವರು ಹಾಗೆಯೇ ಮಾತಾಡುತ್ತ ತೂಕಡಿಕೆಗೆ ಜಾರಿದರು. ನಿದ್ರೆ ಬಾರದವರು ಮೆಲ್ಲಗೆ ಮಾತಾಡುತ್ತ ಬೆಳಗಾಗುವುದನ್ನೇ ಕಾಯುತ್ತ ಕುಳಿತರು. ಸುಮಾರು ಒಂದು ಗಂಟೆ ಕಳೆದಿರಬಹುದು. ಟೂರ್ ವ್ಯವಸ್ಥಾಪಕ ಮತ್ತು ಕ್ಲೀನರ್ ಇಬ್ಬರೂ ಸೇರಿ ಡ್ರೈವರ್ನನ್ನು ಎಬ್ಬಿಸಿಕೊಂಡು ಬಂದರು. ಅವನು ತನ್ನ ಸೀಟ್ನಲ್ಲಿ ಕುಳಿತವನೇ ಒಂದೆಡೆಗೆ ವಾಲಿಬಿಟ್ಟ. ‘ಅರೆ ಪ್ರಜ್ಞಾವಸ್ಥೆಯಲ್ಲಿರುವವನು ಬಸ್ಸನ್ನು ಹೇಗೆ ತಾನೆ ಓಡಿಸಿಯಾನು? ಅಮಲು ಇಳಿದ ಬಳಿಕವೇ ಅವನು ಬಸ್ ತೆಗೆಯಲಿ, ನಮಗೆ ನಮ್ಮ ಸೇಪ್ಟಿ ಮುಖ್ಯ’ ಎಂದು, ಕೆಲವರು ಬೊಬ್ಬೆ ಹಾಕಿದರು. ವ್ಯವಸ್ಥಾಪಕ ಏನೂ ಮಾತಾಡಲಿಲ್ಲ. ಡ್ರೈವರ್ ಇದಾವುದರ ಪರಿವೆಯೂ ಇಲ್ಲದೆ ತನ್ನ ಮಾಡಿಗೆ ತಾನು ಸೀಟಿಗೊರಗಿ ಕುಳಿತೇ ಇದ್ದ. 15-20 ನಿಮಿಷ ಕಳೆದಿರಬಹುದು. ಡ್ರೈವರ್ನ ಮುಖಕ್ಕೆ ನೀರು ಸಿಂಪಡಿಸಿದ ವ್ಯವಸ್ಥಾಪಕ ಮತ್ತೊಮ್ಮೆ ಅವನನ್ನು ಎಬ್ಬಿಸಲು ಪ್ರಯತ್ನಿಸಿದ. ಅಷ್ಟರಲ್ಲಿ ಕೆಲವರು ‘ಸುಮ್ನೆ ಇರಿ, ಅವ್ನಿಂದ ಬಸ್ ಓಡ್ಸೋಕ್ಕೆ ಆಗ್ತಾ ಇಲ್ಲ, ಅವ್ನು ಯಾವಾಗ ಸರಿಯಾಗಿ ಬಸ್ ತೆಗೀತಾನೋ ತೆಗೀಲಿ, ನಮ್ಗೆ ನಮ್ ಪ್ರಾಣ ಮುಖ್ಯ’ ಎಂದು ವ್ಯವಸ್ಥಾಪಕನ ಮೇಲೆ ಹರಿಹಾಯ್ದರು. ಮತ್ತೆ 15 ನಿಮಿಷ ಕಳೆದಿರಬಹುದು. ಏನಾಶ್ಚರ್ಯ ! ಮಂಜು ತಾನಾಗಿಯೇ ಎಚ್ಚರಗೊಂಡು ತನ್ನ ಸೀಟ್ನಲ್ಲಿ ಸರಿಯಾಗಿ ಕುಳಿತು, ಗೇರ್ ಹಾಕಲು ತನ್ನ ಎಡಗೈಯನ್ನು ಅಭ್ಯಾಸಬಲದಂತೆ ಚಾಚಿದ. ಆದರೆ ಗೇರ್ ರಾಡ್ ಅವನ ಕೈಗೆ ಸಿಗಲಿಲ್ಲ.

ಇದನ್ನು ಕಂಡ ಕೆಲವರು ತಮ್ಮ ಸೀಟ್ಗಳನ್ನು ಬಿಟ್ಟು ಎದ್ದು ಬಂದು ವ್ಯವಸ್ಥಾಪಕನಿಗೆ ‘ಏನ್ರಿ ನಮ್ ಪ್ರಾಣ ತೆಗೀಬೇಕು ಅಂತ ಇದ್ದೀರಾ? ಅವ್ನಿಂದ ಬಸ್ ಓಡ್ಸೋಕ್ಕೆ ಆಗ್ತಾ ಇಲ್ಲ, ಬೇಡ ಅಂತ ಹೇಳ್ರಿ’ ಎಂದು ರೇಗಿ ಬಿದ್ದರು. ಸ್ವಲ್ಪ ಸಮಯ ಕಳೆಯಿತು. ಪಕ್ಕದಲ್ಲೇ ಕುಳಿತಿದ್ದ ಕ್ಲೀನರ್ ಡ್ರೈವರ್ಗೆ ಬಸ್ ಸ್ಟಾರ್ಟ್ ಮಾಡಲು ಮತ್ತು ಗೇರ್ ಹಾಕಲು ಸಹಾಯ ಮಾಡಿದ. ಬಸ್ ಸ್ಟಾರ್ಟ್ ಆಯಿತು. ಟೂರ್ ವ್ಯವಸ್ಥಾಪಕ ಎದ್ದು ನಿಂತು ಎಲ್ಲರನ್ನೂ ಸಮಾಧಾನಪಡಿಸುತ್ತ, ‘ದಯವಿಟ್ಟು ತಾವೆಲ್ಲ ಸಾವಕಾಶವಾಗಿ ಕೂತ್ಕೊಳ್ಳಿ, ನಿಮ್ಮನ್ನೆಲ್ಲ ಸುರಕ್ಷಿತವಾಗಿ ಕರ್ಕೊಂಡು ಹೋಗಿ ಸೇರಿಸೊ ಜವಾಬ್ದಾರಿ ನನ್ನದು’ ಎಂದು ವಿನಂತಿಸಿದ. ಬೇರೇನು ಮಾತಾಡದೆ ನಾವೆಲ್ಲರೂ ಬಾಯಿ ಮುಚ್ಚಿಕೊಂಡು ಕೈಯಲ್ಲಿ ಜೀವ ಹಿಡಿದುಕೊಂಡು ತೆಪ್ಪಗೆ ಕುಳಿತೆವು. ಬಸ್ನ ಗೇರ್ಗಳು ಕ್ರಮಬದ್ದವಾಗಿ ಬದಲಾವಣೆಗೊಂಡ ಬಳಿಕ ಅದು ತನ್ನ ವೇಗವನ್ನು ಹೆಚ್ಚಿಸಿಕೊಂಡಿತು. ನಾವೆಲ್ಲ ಕಣ್ಮುಚ್ಚಿ ನಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತೆವು. ಕೆಲವರು ಮನಸ್ಸಿನಲ್ಲೇ ಭಗವಂತನ ನಾಮಸ್ಮರಣೆ ಮಾಡತೊಡಗಿದರು. ನಮ್ಮ ಅವಸಾನದ ಕ್ಷಣಗಣೆ ಆರಂಭವಾಗಿದೆ, ನಮ್ಮ ಬಸ್ ಇಂದು ಅಫಘಾತಕ್ಕೀಡಾಗುವುದಂತು ಗ್ಯಾರಂಟಿ, ಆಯಸ್ಸು ಗಟ್ಟಿ ಇರೋರು ಉಳ್ಕೋತಾರೆ, ಇಲ್ದೋರು ಪರ್ಲೋಕ ಸೇರ್ಕೋಲತಾರೆ’ಎಂದುಕೊಂಡೆವು. ನಮ್ಮ ಬಸ್ ಎದುರುಗಡೆಯಿಂದ ಬರುವ ಬಸ್ಗೆ ಡಿಕ್ಕಿ ಹೊಡೆಯುವುದೋ,

ಕಾಂಪೌಂಡ್ ಗೋಡೆ ಅಥವಾ ಮರಕ್ಕೆ ಗುದ್ದುವುದೋ, ರಾಜಕಾಲುವೆಗೆ ಉರುಳಿ ಬೀಳುವುದೋ, ಸೇತುವೆಯಿಂದ ಜಾರಿ ನದಿ ಸರೋವರಕ್ಕೆ ಬೀಳುವುದೋ ಎಂದು ಆತಂಕ ಕವಿದವರಾಗಿ ಚಡಪಡಿಸತೊಡಗಿದೆವು. ಆದರೆ ಬಸ್ ಇದಾವುದರ ಗಣನೆಯಿಲ್ಲದೆ ತನ್ನ ಪಾಡಿಗೆ ತಾನು ಒಂದೇ ವೇಗದಲ್ಲಿ ಓಡುತ್ತಲೇ ಇದೆ. ತನ್ನೆದುರಿಗೆ ಸಿಕ್ಕ ಅಡ್ಡರಸ್ತೆಗಳನ್ನು ತಿರುವುಗಳನ್ನು, ಸರ್ಕಲ್ಗಳನ್ನು, ಉಬ್ಬು ತಗ್ಗುಗಳನ್ನು, ಕೆಳಸೇತುವೆ, ಮೇಲ್ಸೇತುವೆಯನ್ನು ಹಾಯ್ದು ಬಂದು, ಬಸ್ ನಮ್ಮ ಹೋಟೆಲ್ ಮುಂದೆ ನಿಂತಿತು. 30 ಕಿ. ಮೀ. ನಷ್ಟು ದೂರವನ್ನು ಅದು ಕೇವಲ 20 ನಿಮಿಷಗಳಲ್ಲಿ ಕ್ರಮಿಸಿ ಬಂದಿತ್ತು. ಅದುಮಿ ಹಿಡಿದಿದ್ದ ನಮ್ಮ ಉಸಿರನ್ನು ಬಿಟ್ಟೆವು. ಕುಳಿತಲ್ಲೇ ದೇವರಿಗೊಂದು ದೊಡ್ಡ ನಮಸ್ಕಾರ ಹಾಕಿದೆವು. ನಾವು ಬಸ್ ಇಳಿದು ತುಟಿ ಪಿಟಕ್ಕೆನ್ನದೆ ನಮ್ಮ ನಮ್ಮ ರೂಮ್ಗಳತ್ತ ತೆರಳಿದೆವು. ಎದುರು ಸಿಕ್ಕ ಕ್ಲೀನರ್ನ ಮುಖವನ್ನು ನಾನೊಮ್ಮೆ ಪ್ರಶ್ನಾರ್ಥಕವಾಗಿ ನೋಡಿದೆ. ಅದಕ್ಕೆ ಅವನು ‘ಮಂಜು ಸ್ಟೀರಿಂಗ್ ಹಿಡ್ದಾ ಅಂದ್ರೆ ಅವನು ಪರ್ಪೆಕ್ಟ್ ಸಾರ್’ ಎಂದು ಹೇಳಿ ಹೊರಟ.

ಮಂಜುವಿನ ಡ್ರೈವಿಂಗ್ ಪರ್ಪೆಕ್ಟೋ, ನಮ್ಮ ಆಯಸ್ಸು ಪರ್ಪೆಕ್ಟೋ, ಅಂತು ಅಂದು ಅಪಘಾತ ಸಂಭವಿಸಿದೆ ಪಾರಾಗಿ ಬಂದದ್ದು ನಮ್ಮ ಪುಣ್ಯ ! ಅದೊಂದು ದೊಡ್ಡ ಪವಾಡ !

ಗೋವಾ ಪ್ರವಾಸವನ್ನು ನೆನೆದರೆ, ಈಗಲೂ ಮೈ ಜುಮ್ಮೆನ್ನುತ್ತದೆ !

-ಎಲ್. ಚಿನ್ನಪ್ಪ,


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x