ಹೆಣ್ಣು ಗಂಡೆಂಬ ಅಸಮಾನತೆಯ ಹಳತಾದ ಚರ್ಚೆಗೆ ಇನ್ನೊಂದು ಆಯಾಮ: ವಾಣಿ ಚೈತನ್ಯ

ಪ್ರಜ್ಞಾವಂತ ನಗರೀಕೃತ ಭಾರತದಲ್ಲಿ, ಮಗಳಿಗೆ ಓದಿಸಬೇಕು ಎನ್ನುವ ಹಂಬಲ ಹೆಚ್ಚಾಗಿ, ಕಾಲೇಜು ಮೆಟ್ಟಿಲೇರಿರುವ ಹೊಸ gen G ಪೀಳಿಗೆಯಲ್ಲಿ, ಲಿಂಗ ಅಸಮಾನತೆ ಎನ್ನುವ ಚರ್ಚೆಯು ಔಟ್ ಡೇಟೆಡ್ ಚರ್ಚೆ ಎನ್ನಿಸುತ್ತಿದೆ.
ನಾನು 15 ವರ್ಷದ ಹಿಂದೆ ಬಿಜಾಪುರದಲ್ಲಿ ಕೌಟುಂಬಿಕ ದೌರ್ಜನ್ಯದ ವಿಷಯವಾಗಿ ಕೆಲಸಮಾಡುವಾಗ, ದೇವದಾಸಿ ಮಹಿಳೆಯರ ಇರುವಿಕೆ, ಕಷ್ಟ ಸುಖ ತಿಳಿದು, ಒಂದು ಪತ್ರಿಕೆಗೆ ಕಥೆಯ ರೂಪದಲ್ಲಿ ಲೇಖನ ಬರೆದಿದ್ದೆ. ಅದನ್ನು ಬೆಂಗಳೂರಲ್ಲಿ ಕುಳಿತ ಸಂಪಾದಕರು, ಔಟ್ ಡೇಟೆಡ್ ಎಂದು ಆಗಿನ ಕಾಲಕ್ಕೆ ಸೂಕ್ತವಲ್ಲ ಎಂದು ತಿರಸ್ಕರಿಸಲಾಗಿತ್ತು. ನಾನು ಪೋನು ಮಾಡಿ ಮಾತಾಡಿ, ನಾನು ಮಾಡುತ್ತಿರುವ ಕೆಲಸದ ಬಗ್ಗೆ ವಿವರಿಸಿದಾಗ, ಅದನ್ನು ಅವರು ಪ್ರಕಟಿಸಿದ್ದರೂ ಕೂಡ. ನಿನ್ನೆ ಮೊನ್ನೆ ಅಷ್ಟೇ ದೇವದಾಸಿ ಮಕ್ಕಳಿಗೆ ತಾಯಿಯ ಹೆಸರು ಉಪಯೋಗಿಸುವ ಹಕ್ಕು ಇರಬೇಕು ಇಲ್ಲವೇ, ತಂದೆಯ ಹೆಸರು ಕೇಳುವ ಒತ್ತಾಯ ಇರಬಾರದು ಎನ್ನುವ ಆದೇಶ ಓದಿದಾಗ, ಜನ ಮತ್ತೆ ದೇವದಾಸಿಯರೇ?!? ಇಂದು ಮೂಗು ಮುರಿದಿರಬಹುದು.
ಹೀಗೆ, ನಮ್ಮ ಗಮನಕ್ಕೆ ಬಾರದ್ದು, ನಮ್ಮ ಅನುಭವಕ್ಕೆ ನಿಲುಕದ್ದು, ನಮ್ಮ ಸುತ್ತ ಮುತ್ತ ಇಲ್ಲದೆ ಇರುವುದು, ಜಗತ್ತಿನಲ್ಲಿ ಇಲ್ಲವೇ ಇಲ್ಲ ಎನ್ನುವ ಕೂಪ ಮಂಡೂಕದ ಮನಸ್ಥಿತಿ ನಮ್ಮೆಲ್ಲರಲ್ಲೂ ಇದೆ.

ನಮ್ಮ ಶಿಕ್ಷಣ ವ್ಯವಸ್ಥೆ ಹೆಚ್ಚು ಹೆಚ್ಚು ಮಾಹಿತಿಯಿಂದ ಕೇಳಿದ ಪ್ರಶ್ನೆಗೆ ಮಾತ್ರ ಉತ್ತರಿಸಿ ಎನ್ನುತ್ತದೆಯೇ ಹೊರತು, ಪ್ರಶ್ನೆಯನ್ನು ಹುಟ್ಟಿಸುವ ಕುತೂಹಲದಿಂದ ಕಣ್ಣರಳಿಸುವ ವಿಷಯಗಳಿಂದ ಅಲ್ಲ.
ಪ್ರಶ್ನೆ ಕೇಳುವುದರಲ್ಲಿ ತಪ್ಪೇನಿದೆ!
ಎಲ್ಲಿ ಕುತೂಹಲ, ಕಲಿಯುವ ಹಂಬಲ, ಆಸಕ್ತಿ, ಆಸ್ಥೆ, ವಯಸ್ಸು, ಸಮಯ ಎಲ್ಲವೂ ಇದೆ ಅಲ್ಲಿ ಜ್ಞಾನಾರ್ಜನೆ ಅಗತ್ಯ.
ಅದಕ್ಕೆ ದಂಡಿಯಾಗಿ ಅಂಕಗಳನ್ನು ಗಳಿಸಿ, ದಂಡಿಯಾಗಿ ದುಡ್ಡು ಮಾಡಿ, ಮೊಮ್ಮಕ್ಕಳಿಗೂ ಕೂಡಿಟ್ಟು ಅಪ್ಪ ಹಾಕಿದ ಆಳದ ಮರವೆಂದು ಬದುಕಿಬಿಡುವುದು.
ಆದರೆ, ಎಲ್ಲ ಕಾಲಕ್ಕೂ ಪ್ರಸ್ತುತವಾದ ಒಂದೇ ಸತ್ಯವೆಂದರೆ ಅದು ಆಳುವವರಿಂದ/ಶ್ರೀಮಂತರಿಂದ/ಬಲಿಷ್ಠರಿಂದ/ಗಂಡಿನಿಂದ ಆಗುವ ಶೋಷಣೆಗಳು.. ಯಾರಿಗೆ ಎಂದು ಕೇಳಬೇಡವೇ?

ಪ್ರಶ್ನೆ ಎತ್ತುವುದರಲ್ಲೂ ಏನು ತಪ್ಪಿದೆ?

ಅನುಮಾನ, ಅಪಮಾನ, ಅಗೌರವ, ಅಸುರಕ್ಷಿತ, ಅಪಾಯ ಅನ್ನಿಸಿದಾಗ ಅಲ್ಲಿ ಪ್ರಶ್ನಿಸುವುದು ಅನಿವಾರ್ಯ.

ಆದರೆ, ಇವರಿಗೆ ಅಂದರೆ, ಬಡವರಿಗೆ, ಕಾರ್ಮಿಕರಿಗೆ, ಹೆಣ್ಣಿಗೆ ಜ್ಞಾನ ಕೇಳಿದರೂ, ನ್ಯಾಯ ಕೇಳಿದರೂ ಸಿಗುವುದು ಯಾಕಿಷ್ಟು ಕಷ್ಟ?

ಹರಿಯುವ ನೀರಿನಲ್ಲಿ ಕಸವು ಕೊಚ್ಚೆಯಾಗಿ, ಸ್ವಚ್ಚತೆ ಮಲೀನವಾದಂತೆ, ಕಲಿಯುವ ಮನಸಿನಲ್ಲಿ ತಾರತಮ್ಯ, ನಿರ್ಲಕ್ಷ್ಯ, ಸೋಮಾರಿತನ, ಆಸೆಬುರುಕುತನ ತಾಂಡವವಾಡಿ, ದಡ್ಡತನ ಮನೆಮಾಡಿ ಜಗತ್ತಿನ ಅನ್ಯಾಯವನ್ನೆಲ್ಲ ತಿರಸ್ಕರಿಸಿ ನಾವು ಮೊಬೈಲ್ ಪ್ರಿಯರಾಗಿದ್ದೇವೆ.

ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹ, ವರದಕ್ಷಿಣೆ, ಆಡಂಬರದ ವಿವಾಹ, ಲೈಂಗಿಕ ಶೋಷಣೆ, ಬಾಲಕಾರ್ಮಿಕ ವ್ಯವಸ್ಥೆ ಎಲ್ಲವೂ ಇದ್ದರೂ ಇಲ್ಲದೆ ಇದ್ದುಬಿಡುವ, ಅಯ್ಯೋ ಶಾಲೆ ಕಾಲೇಜು ವಿಶ್ವವಿದ್ಯಾಲಯ ಎಲ್ಲ ಕಡೆ ಅದೇ ಚರ್ಚೆಯೇ ಎಂದು ಬೇಸರಿಸುವ gen G ಪೀಳಿಗೆಯಲ್ಲಿ ಸತ್ಯವನ್ನು ಕಷ್ಟವನ್ನು ಎದುರಿಸುವ ಸಾಹಸಕ್ಕಿಂತ, ಅದನ್ನು ಕೊಡವಿಕೊಂಡು ಎದ್ದು ನಿಲ್ಲುವ ಛಲ ಬರಬೇಕಲ್ಲವೇ!

ಆದರೆ, ಇನ್ನೂ ನಾಚಿಕೆ ಹೆದರಿಕೆ ಹಿಂದೆ ಬಿಟ್ಟು ಎದ್ದು ನಿಲ್ಲಲೇಬೇಕು ಎನ್ನುವ ಛಲ ನಮ್ಮಲಿಲ್ಲವಲ್ಲ.

ಇದ್ದರೆ ಜೊತೆಗಿರಬೇಕು, ಎದ್ದರೆ ಜೊತೆಯಾಗಿ ಏಳಬೇಕು. ನಡೆದರೆ ಜೊತೆಯಾಗಿ ನಡೆಯಬೇಕು. ಆಗ ಆ ಧ್ವನಿಗೆ ಬೆಲೆ. ಹೆಂಗಸರೆಲ್ಲಾ ಒಟ್ಟಾಗಿ ತಮಗೆ ಆಗುವ ಅನ್ಯಾಯದ ವಿರುದ್ಧ ಹೋರಾಡುವ ಎಂದರೆ ಎಲ್ಲರೂ ಎದ್ದಾರೆಯೇ!

ಹೆಂಗಸರು ಎಂದರೆ ಇಲ್ಲಿ ಹೆಣ್ಣು ಮಾತ್ರವಲ್ಲ ಅವಳು ಹಲವಾರು ಹಿನ್ನೆಲೆ, ವಯಸ್ಸು, ಸಮಯ ಪೀಳಿಗೆಯಿಂದ ಬಂದವಳು. ಅಮ್ಮನ ನೋವಿಗೆ ಅಪ್ಪನ ವಿರುದ್ಧ ಮಗಳು ಹೋರಾಡಲು, ಸೊಸೆಯ ನೋವಿಗೆ ಮಗನ ವಿರುದ್ಧ ತಾಯಿ ಹೋರಾಡಲು ಸಾಧ್ಯವೇ!

ನೋವುಗಳ ಅನಾವರಣ ಅವರ ವ್ಯಕ್ತಿತ್ವ ನಿರ್ಧರಿಸದೆ ಅವರ ವ್ಯಯಕ್ತಿಕ ಹಿನ್ನೆಲೆ ನಿರ್ಧರಿಸುತ್ತದ. ಎಲ್ಲರ ನೋವು ಅವಮಾನಕ್ಕೆ ಅವರದೇ ಬೇರೆ ಬೇರೆ ಮದ್ದು ಆದರೆ ಹಚ್ಚುವರು ಯಾರಿಲ್ಲ. ಬಡವರಲ್ಲೂ, ಕಾರ್ಮಿಕ ವರ್ಗದಲ್ಲೂ ಹೆಣ್ಣಿದ್ದಾಳೆ, ಹೆಣ್ಣಿನ ಕಷ್ಟದಲ್ಲೂ ಹೆಣ್ಣಿದ್ದಾಳೆ. ಅಧಿಕಾರದ ಪಿರಮಿಡ್ನಲ್ಲಿ ಅತ್ಯಂತ ಕೆಳಸ್ತರದ ಅತ್ಯಂತ ಶೋಷಿತ ವರ್ಗಕ್ಕೆ ಹೆಣ್ಣು ಮಕ್ಕಳು ಸೇರುತ್ತಾರೆ.

ಹೆಣ್ಣು ಇನ್ನೂ ಹಿಂದೆ ಉಳಿದಿದ್ದಾಳೆ ಎಂದಾಗ, ಅವಳಿಗೆ ಶಿಕ್ಷಣ, ಅಧಿಕಾರ, ಉದ್ಯೋಗದಲ್ಲಿ ಮೀಸಲಾತಿ ಒದಗಿಸುವುದು ಅಗತ್ಯ. ಹೆಣ್ಣು ಶೋಷಣೆಗೆ ಒಳಗಾಗುತ್ತಾಳೆ ಎಂದಾಗ, ಕಾನೂನು, ಪರಿಹಾರ, ಪರ್ಯಾಯ ಸುರಕ್ಷಿತ ಆಶ್ರಯ ನೀಡುವುದಕ್ಕೆ ವ್ಯವಸ್ಥೆ ಅಗತ್ಯ. ಆದರೆ ಇನ್ನೂ ಹೆಣ್ಣು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಸಂದರ್ಭಗಳು ಯಾವುದೇ ಅವಕಾಶ ಮತ್ತು ವ್ಯವಸ್ಥೆಯನ್ನು ಮೀರಿ ಅಸ್ಥಿತ್ವದ ಅಡಿಯ ಪ್ರಶ್ನೆ ಮೂಡುತ್ತದೆ!
ದೈಹಿಕ ದೌರ್ಜನ್ಯ ಮಾನಸಿಕ ತಡೆಯಾದರೆ, ಮಾನಸಿಕ ದೌರ್ಜನ್ಯ ತಾರತಮ್ಯಗಳು ಸೂಕ್ಷ್ಮಾತಿ ಸೂಕ್ಷ್ಮ ಮನಸ್ಸಿನ ಘಾಸಿಗಳು. ಅನಕ್ಷರಸ್ಥ ಗ್ರಾಮೀಣ ಮಹಿಳೆಯ ಕಷ್ಟಗಳ ಅರಿವು, ಅಕ್ಷರಸ್ಥ ಉದ್ಯೋಗ ನಿರತ ಹೆಣ್ಣುಮಕ್ಕಳ ಕೌಟುಂಬಿಕ ಜೀವನದ ಅನುಭವಕ್ಕೆ ವ್ಯತಿರಿಕ್ತ ಎಂದರೆ ಸುಳ್ಳಾಗುತ್ತದೆ.
ಯಾವುದೇ ಪ್ರಶ್ನೆ ಸಂಬಂಧಗಳನ್ನು ಗೋಜಲುಗೊಳಿಸಿ, ತಿಳಿನೀರನ್ನು ಕೆಸರು ಮಾಡುತ್ತವೆಯೇ ಹೊರತು ಕೆಸರನ್ನು ಸೊಸುವುದು ಕಷ್ಟ.
ನಾನು ನನ್ನ ಹೆಂಡತಿಯನ್ನು ಚೆನ್ನಾಗಿ ಇಟ್ಟುಕೊಂಡಿರುವೆ ಎನ್ನುವ ಗಂಡಿನ ಅಹಂನ್ನಲ್ಲಿ ಹೆಣ್ಣಿನ ದಾಸ್ಯ ಅಡಗಿದೆ

ಇಂದಿನ ಸಮಾಜದಲ್ಲಿ, ಎಲ್ಲರನ್ನೂ ಓಲೈಸುವ, ಆದರೂ ತನ್ನ ಆಸೆ ಆಕಾಂಕ್ಷೆ ಬಿಟ್ಟುಕೊಡದ ಹೆಣ್ಣು ಮಕ್ಕಳು, ಮನೆಯ ಹೊರಗೂ ಒಳಗೂ ಸಾಕಷ್ಟು ಕೆಲಸವನ್ನು ಲೀಲಾಜಾಲವಾಗಿ ಮಾಡುತ್ತಿದ್ದಾರೆ. ಆದರೆ ಕೆಲಸದ ಒಳಗೂ ಹೊರಗೂ ಸಮಾನತೆ ಇದೆಯೇ? ಜೋಡೆತ್ತು ನಡೆಯುವಾಗ ಒಂದು ಚಿಕ್ಕ ಸಣ್ಣವಾದರೆ, ನಾವೇನೂ ಗೆಲ್ಲುತ್ತಿದ್ದೆವು ಆದರೆ, ಎನ್ನುವ ಅನುಮಾನ. ಅದಕ್ಕೆ ನೀರಿಗೆ ಬಿದ್ದಾಗಲೇ ಆಳದ ಅರಿವು ಮೂಡುತ್ತದೆ. ಹೆಣ್ಣು ಹೆಣ್ಣಾದ ಹಾಗೆ ನಟಿಸುತ್ತಾಳೆ. ಜೀವನವನ್ನು ಅನುಭವಿಸುವುದಿಲ್ಲ.

ಇನ್ನೂ, ತೆಳ್ಳಗೆ ಬೆಳ್ಳಗೆ ಇರುವ ಜವಾಬ್ದಾರಿ, ಮಕ್ಕಳು ಹೆತ್ತರೂ 😎 ಕೂಲ್ ಆಗಿ ಕಾಣುವ ಕನಸು, ವಯಸ್ಸಾದರೂ ಯುವತಿಯಂತೆ ಕಾಣುವ ಹುಚ್ಚು, ಎಲ್ಲ ಹೊಸ ತರಹದ ಅನುಭವಕ್ಕೆ ತೆರೆದುಕೊಳ್ಳುವ ಕುತೂಹಲ, ಹೊಸದನ್ನು ಉಟ್ಟು ತೊಟ್ಟು ಬಾಳುವ ಆಸೆ ಆಕಾಂಕ್ಷೆ, ಜೀವಿಸುವ ಕನಸು ಹೆಣ್ಣು ಮಕ್ಕಳನ್ನು ಜೀವಂತವಾಗಿರಿಸಿವೆ.

ಅವರಿಗೆ ತಮ್ಮ ದೇಹದ ತೂಕ, ಚರ್ಮದ ಬಣ್ಣ, ಕೂದಲಿನ ರಂಗಿನ ಮೇಲೆ ಯಾರಾದರೂ ನಗುತ್ತಾರೆಯೇ! ನಮ್ಮನ್ನು ಹೀಗಳಿಯುತ್ತಾರೆ ಎನ್ನುವುದೇ ಚಿಂತೆ. ಅದು ತನ್ನ ಸಂತೋಷವಾಗಿರುವ ಸ್ವಾತಂತ್ರ್ಯವನ್ನು, ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸುವ, ಅತ್ಯುನ್ನತ ಸ್ಥಾನವನ್ನು ಗಳಿಸುವ ಗುರಿಯಲ್ಲಿ ಅಡೆತಡೆ ಒಡ್ಡಬಹುದು, ಇದೆಲ್ಲದರಲ್ಲಿ ನಾನು ಬಂಧಿಯಾಗಿದ್ದೇನೆ ಎನ್ನುವ ಗಮನವೂ ಬಾರದಷ್ಟು ಹೆಣ್ಣು ತನ್ನ ಸೌಂದರ್ಯ ಆರೈಕೆ ಮತ್ತು ವಸ್ತ್ರ ಆಭರಣ ಸರಂಜಾಮಿನಲ್ಲಿ ಮಗ್ನರಾಗಿರುತ್ತಾರೆ.
ಹೆಣ್ಣಿಗೆ ಹೆಣ್ಣೆ ಶತ್ರು ಎನ್ನುವ ಮಾತು ಇಷ್ಟು ಸತ್ಯವಾದರೆ, ಹೆಣ್ಣು ತನ್ನ ಶತ್ರುವನ್ನು ಕೂಡ ಎಂದೂ ಶತ್ರುವೆಂದು ಗೊತ್ತಿರದೆ, ತನ್ನ ಶಾಪಿಂಗ್ ಜೊತೆಗೆ ಮಾಡಿಕೊಂಡು, ಒಬ್ಬರನ್ನೊಬ್ಬರು ಹೋಲಿಸಿಕೊಂಡು, ಒಂದೇ ಮನೆಯಲ್ಲೇ ವಾಸಿಸಿಕೊಂಡು ಇಡೀ ಜೀವನ ಕಳೆದಿರುತ್ತಾಳೆ.

ಅದಕ್ಕೆ ಹಿರಿಯರು ಹೇಳಿದ್ದು, ಹೆಣ್ಣಿನ ಜಾಡನ್ನು ಅರಿಯುವುದು ಕಷ್ಟ ಎನ್ನುವ ಮಾತೊಂದಿದೆ. ಹೆಣ್ಣು ಮಾಯೆ, ಹೆಣ್ಣು ಮಾನಿನಿ. ಒಮ್ಮೆ ಅರಿತು ನೋಡಿ, ಹೆಣ್ಣು ಹೆಣ್ಣಿನ ಈರ್ಷೆ ಇಲ್ಲದೆ, ಹೆಣ್ಣು ಗಂಡೆಂಬ ಬೇಧವಿಲ್ಲದೆ.

ವಾಣಿ ಚೈತನ್ಯ

ಕನ್ನಡದ ಬರಹಗಳನ್ನು ಹಂಚಿ ಹರಡಿ
2.5 2 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x