“ಬಿಡು, ಇದೆಲ್ಲ ಕಾಮನ್, ಒಂದ್ ಎಕ್ಸ್ಪೀರಿಯೆನ್ಸ್ ಅಷ್ಟೇ. ಇದರಲ್ಲೇನು ಹೋದಂಗಾಯಿತು..?”
“ಸುಮ್ಮನೆ ಎಕ್ಸ್ಪೀರಿಯೆನ್ಸ್ ಗೆ ಇರಲಿ ಅಂತ ಮಾಡ್ತಿದೀನಿ ಮತ್ತಿನ್ನೇನಿಲ್ಲ. ಇದರಲ್ಲೇನು ಹೋಗೋದಿದೆ..?”
ಒಂದ್ ನಿಮಿಷ… ಎಕ್ಸ್ಪೀರಿಯೆನ್ಸ್ ಅನ್ನೋದೆ ಒಂದ್ ದೊಡ್ಡ ವಿಚಾರ. ಇದನ್ನೇನು ಬಿಡು ಕಾಮನ್ ಅಂತ ಹೇಳೋದು..? ಎಕ್ಸ್ಪೀರಿಯೆನ್ಸ್ ಅನ್ನೋದೆ ಪ್ರಾಕ್ಟಿಕಲ್ ಜ್ಞಾನ. ಇನ್ನು ಅದರಲ್ಲೇನು ಹೋದಂಗಾಯಿತು ಅನ್ನೋದು..?
ಏನೇ ಮಾಡಿದ್ರು ಎಕ್ಸ್ಪೀರಿಯೆನ್ಸ್ ಸಿಗ್ತದೆ ಅಂದ ಮೇಲೆ ಎಕ್ಸ್ಪೀರಿಯೆನ್ಸ್ ಗೆ ಅಂತಾನೇ ಮಾಡ್ತಿದೀನಿ ಅನ್ನೋದರಲ್ಲಿ ಅರ್ಥ ಇದೆಯಾ..?
ಇಲ್ಲಾ ಅಲ್ವಾ..
ಹಾಗಿದ್ರೆ ಯಾಕೆ ಇಂತಹ ಅಸಂಬದ್ದವಾದ ಡೈಲಾಗ್ ಗಳನ್ನು ಆಡುತ್ತಿರುತ್ತೇವೆ..? ಯಾಕೆ ಇಂತಹ ಡೈಲಾಗ್ ಗಳು ಸಲೀಸಾಗಿ ನಮ್ಮ ನಾಲಿಗೆಯಲ್ಲಿ ಬಂದುಬಿಡುತ್ತದೆ..?
ಇಲ್ಲಿ ಗಮನಿಸಬೇಕಾದ ವಿಷಯ, ಈ ಡೈಲಾಗ್ ಗಳೆಲ್ಲ ಸುಮ್ಮನೆ ಮಾತಿಗೆ ಹೇಳೋದಾ…? ಅಥವಾ ಮನಸಲ್ಲಿ ಇರೋದನ್ನೆ ಆಡೋದಾ..?
ಅಯ್ಯೋ, ಸುಮ್ಮನೆ ಮಾತಿಗೆ ಬರ್ತದೆ ಬಿಡಿ, ಅದನ್ಯಾಕೆ ಅಷ್ಟು ಸಿರೀಯಸ್ ತಗೋಬೇಕು ಅಂತೀರಾ?
ಆಯಿತು. ಹಾಗೆ ಅಂದುಕೊಳ್ಳೋಣ.
ಹಾಗಿದ್ದರೂ ಈ ಡೈಲಾಗ್ ನ ಅರ್ಥ ಏನು…? ಇದು ಏನ್ ಹೇಳೋಕೆ ಹೊರಟಿದೆ..? ಈ ತರಾ ಆಡ್ತಾ ಆಡ್ತಾ ನಿಮ್ಮ ಮೈಂಡ್ ನಲ್ಲಿ ಏನ್ ರಿಜಿಸ್ಟರ್ ಆಗುತ್ತಿರುತ್ತೆ..? ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಇದು ನಿಮ್ಮನ್ನೆ ಸೈಲೆಂಟಾಗಿ ಮೂರ್ಖರನ್ನಾಗಿ ಮಾಡೋದಲ್ವ ..? ಆಗಿರೋದು ಎಕ್ಸ್ಪೀರಿಯೆನ್ಸ್. ಅದನ್ನ ಬಿಡು, ಅದೆಲ್ಲ ಕಾಮನ್ ಅದರಲ್ಲೇನು ಹೋದಂತಾಯಿತು ಅಂದ್ರೆ ಏನು…?
ಅಂದರೆ ಇಂತಹ ಅನುಭವ ಮತ್ತೆ ಮತ್ತೆ ನಡಿತದೆ, ಹಾಗೆ ನಡೆದಾಗಲೂ ಕಾಮನ್ ಅಂತ ತಿಳಿಬೇಕು, ಅದರಲ್ಲಿ ಹೋಗೋದ್ ಏನು ಇಲ್ಲ ಅಂತನಾ..? ಅಂದ್ರೆ, ಈಗಾಗಲೇ ಆ ಎಕ್ಸ್ಪೀರಿಯೆನ್ಸ್ ನಿಂದ ಏನೋ ಹೋಗಿದೆ ಅಂತ ತಾನೆ..? ಆದರೂ ಏನು ಹೋಗಿಲ್ಲ ಅಂತ ಭಾವಿಸಿ ಇದೆಲ್ಲ ಕಾಮನ್ ಅಂತಂದುಕೊಳ್ಳಬೇಕಾ..? ಇದೆಲ್ಲ ತುಂಬಾ ಸಿಲ್ಲಿ ಏನಿಸುವುದಿಲ್ಲವ..? ಇದು ನಿಮ್ಮನ್ನು ಮತ್ತಷ್ಟು ಕೇರ್ ಲೆಸ್ ರನ್ನಾಗಿ ಮಾಡೋದಲ್ವ..?
ಇಷ್ಟಕ್ಕೂ ಇದೆಲ್ಲ ಕಾಮನ್ ಅಂತ ಹೇಳಿಕೊಳ್ಳುವುದಕ್ಕೆ ಅದೇನು..? ಅದು ಎಕ್ಸ್ಪೀರಿಯೆನ್ಸ್ ಅಲ್ಲವಾ…? ಎಕ್ಸ್ಪೀರಿಯೆನ್ಸ್ ಅಂದ್ರೆನೆ ಏನೋ ಒಂದನ್ನು ಪಡೆದಿದ್ದೀರಿ ಅಂತಾ ತಾನೆ..? ಅದು ಒಳ್ಳೇಯದೇ ಇರಬಹುದು, ಕೆಟ್ಟದ್ದೆ ಇರಬಹುದು. ಒಂದು ಅನುಭವ ಅಂದ ಮೇಲೆ ಅದರಿಂದ ಒಳ್ಳೆಯದನ್ನೊ ಕೆಟ್ಟದ್ದನ್ನೊ ಗಳಿಸಿಕೊಂಡಿದ್ದೀರಿ ಅಂತಾ ತಾನೆ.? ಮತ್ತೆ ಅದನ್ನೇನು ಬಿಡಿ ಕಾಮನ್ ಅಂತ ಬಿಟ್ಟಾಕೋದು..? ಇದು ನಿಮಗೆ ಯಾವ ರೀತಿಯ ಮಾರ್ಗದರ್ಶನ ನೀಡುತ್ತೆ…? ಒಳ್ಳೆ ಪ್ರತಿಫಲ ಸಿಕ್ಕಿದ್ರು ಅದನ್ನು ಉಳಿಸಿಕೊಳ್ಳುವುದರ ಬಗ್ಗೆ ಯೋಚಿಸಬೇಕಲ್ವ? ಒಂದು ವೇಳೆ ಕೆಟ್ಟ ಅನುಭವಗಳಾದರೆ ಅದರಿಂದಲೂ ಪಾಠ ಕಲಿತು ಮುಂದೆ ಹಾಗಾಗದಂತೆ ಎಚ್ಚರ ವಹಿಸಬೇಕಲ್ವ…? ಎಲ್ಲದಕ್ಕೂ ಕಾಮನ್ ಏನ್ ಹೋದಂಗಾಯಿತು ಅಂತ ಅಂದುಕೊಳ್ಳುತ್ತಾ ಹೋದರೆ ಅರ್ಥ ಇದೆಯಾ..? ಜೀವನದುದ್ದಕ್ಕೂ ಈ ತರಹದ ಡೈಲಾಗ್ ಗಳನ್ನು ಆಡಿಕೊಳ್ಳುತ್ತ ಹೋದರೆ ನಿಮಗೆ ನೀವೇ ಮೀಸ್ ಲೀಡ್ ಮಾಡಿಕೊಂಡಾಗೆ ಅಲ್ಲವಾ…? ಯಾವ ಅನುಭವದಿಂದಲೂ ಏನು ಕಲಿಯದೇ ಎಲ್ಲಾ ಕಾಮನ್ ಅಂದುಕೊಳ್ಳುತ್ತಾ ಪ್ರತಿಸಾರಿಯೂ ಅದಕ್ಕೆ ತೆರೆದುಕೊಳ್ಳುತ್ತಾ ಹೋದರೆ ಕೊನೆಗೆ ನೀವು ಎಲ್ಲಿಗೆ ಬಂದು ತಲುಪುತ್ತೀರಿ..? ಮುಂದೆ ಸರಿಮಾಡಿಕೊಳ್ಳೋಣ ಅಂದರೂ ಸಮಯವೆಲ್ಲಿರುತ್ತೆ..? ಎಲ್ಲಾ ಮುಗಿದೊಗಿರುತ್ತೆ ಅಷ್ಟೇ. ಹೇಳಿಕೊಳ್ಳೋಕೆನೋ ನಿಮ್ಮತ್ರ ಸಿಕ್ಕಾಪಟ್ಟೆ ಅನುಭವವಿದೆ. ಆದರೆ ಯಾವುದೂ ಕೆಲಸಕ್ಕೆ ಬರೋದಿಲ್ಲ ಅಷ್ಟೆ. ಅನುಭವಕ್ಕಿಂತ ಯಾವುದು ದೊಡ್ಡದಿಲ್ಲ ಅಂತ ಸಾಯೋವರೆಗೂ ಸವೆದು ಹೋಗಬಾರದಲ್ವ. ಆಮೇಲೆ ತಿದ್ದುಕೊಂಡು ಸರಿಮಾಡಿಕೊಳ್ಳೊಕೆ ಏನು ಉಳಿದಿರಲ್ಲ. ಅಲ್ವಾ..?
ಅದರಲ್ಲಿ ಬೇರೆ ಎಕ್ಸ್ಪೀರಿಯೆನ್ಸ್ ಗೆ ಇರಲಿ ಅಂತಾ ಮಾಡೋದಂತೆ..!! ಜೀವನದಲ್ಲಿ ಏನೇ ಮಾಡಿದರೂ ಎಕ್ಸ್ಪೀರಿಯೆನ್ಸ್ ಆಗುತ್ತೆ ಅಂದಮೇಲೆ ಎಕ್ಸ್ಪೀರಿಯೆನ್ಸ್ ಗೆ ಇರಲಿ ಅಂತಾ ಅದೇನ್ ಮಾಡೋದು…? ಅಂದ್ರೆ ಇಲ್ಲಿಯವರೆಗೆ ಮಾಡಿದ ಕೆಲಸದಲ್ಲಿ ಎಕ್ಸ್ಪೀರಿಯೆನ್ಸ್ ಸಿಕ್ಕಿಲ್ಲ ಅಂತನಾ..? ಅಥವಾ ಆ ಎಕ್ಸ್ಪೀರಿಯೆನ್ಸ್ ಸಾಕಾಗಿಲ್ಲ ಅಂತನಾ..? ಇದೀಗ ಅದರ ಸಲುವಾಗೆ ಸ್ಪೇಷಲ್ ಆಗಿ ಮಾಡೋಕೆ ಹೊರಡೋದಾ…? ಎಲ್ಲಾ ಕಾಮನ್, ಜಸ್ಟ್ ಎಕ್ಸ್ಪೀರಿಯೆನ್ಸ್ ಇದರಲ್ಲೇನು ಹೋಯಿತು ಅನ್ನೋ ಆಟಿಟ್ಯೂಡ್ ಇದ್ದರೆ ನಿಜವಾದ ರೀತಿಯಲ್ಲಿ ಎಲ್ಲಿ ಅನುಭವ ಆಗುತ್ತೆ…?
ಅನುಭವ ಒಳ್ಳೆದಿರಲಿ ಕೆಟ್ಟದಿರಲಿ ಆ ಅನುಭವದಿಂದ ಏನು ಕಲಿತೀರಿ ನಿಮ್ಮೊಳಗೆ ಏನು ವಿಚಾರ ವಿನಿಮಯಗಳಾದವು ಅನ್ನೋದು ಮುಖ್ಯ ಅಲ್ವಾ…? ಒಂದು ವಿಶ್ಲೇಷಣೆ, ಒಂದು ವಿಮರ್ಶೆ, ಒಂದು ಚಿಂತನೆ, ಒಂದು ಗ್ರಹಿಕೆ ಏನೋ ಒಂದ್ ಆಗಬೇಕಲ್ಲ.. ಆಗೋದೇಗೆ..? ನಿಮಗೆ ನೀವೇ ಇದೆಲ್ಲ ಕಾಮನ್ ಏನ್ ಹೋದಂಗಾಯಿತು ಅಂತಿದ್ದೀರಲ್ಲ? ಮತ್ತೆ ಮತ್ತೆ ಹೊಸ ಅನುಭವಗಳಾದಾಗಲೂ ಇದೇ ಮೆಂಟಾಲಿಟಿಯಲ್ಲಿದ್ದರೆ ನಿಜವಾದ ಅರ್ಥದಲ್ಲಿ ನೀವೇನು ಕಲಿತಂತಾಯಿತು..?
ಮತ್ಯಾಕೆ ಎಕ್ಸ್ಪೀರಿಯೆನ್ಸ್ ಗೆ ಅಂತ ಬೇರೆ ಏನೋ ಮಾಡೋಕೆ ಹೋಗ್ತಿರಿ..? ನಿರ್ದಿಷ್ಟವಾದ ಯಾವುದೋ ಒಂದ್ ಅನುಭವವನ್ನು ಪಡೆಯಲಿಕ್ಕಾ..? ಹಾಗಂತ ಅಂದುಕೊಂಡರೂ ಎಕ್ಸ್ಪೀರಿಯೆನ್ಸ್ ಅನ್ನೋದು ಹೀಗಿಗೆ ಇರುತ್ತೆ ಅಂತ ಮೊದಲೇ ಗೊತ್ತಾಗುತ್ತಾ..? ಇಲ್ಲ ಅಲ್ಲವಾ..? ಒಂದು ವೇಳೆ ನೀವಂದುಕೊಂಡ ಹಾಗೆ ಎಕ್ಸ್ಪೀರಿಯೆನ್ಸ್ ಆಗಲಿಲ್ಲ ಅಂದ್ರೆ ಅದನ್ನೇನು ಬಿಟ್ಟಾಕ್ತೀರ..? ಅಥವಾ ಬಿಡಿ ಇದೆಲ್ಲ ಕಾಮನ್ ಜಸ್ಟ್ ಎಕ್ಸ್ಪೀರಿಯೆನ್ಸ್ ಅಂದುಕೊಂಡು ಮುಂದಕ್ಕೆ ಹೋಗ್ತೀರಾ..? ಹ್ಯಾಗ್ ಮಾಡಿದ್ರು ಅದೇ ಕತೆ ತಾನೇ.
ಕೊನೆಯಲ್ಲಿ ಇಷ್ಟೇ, ಅನುಭವ ಅನ್ನೋದು ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿರುತ್ತೆ. ಕಾರಣ, ಪ್ರತಿಯೊಬ್ಬರ ಮನಸ್ಥಿತಿಯೂ ವಿಭಿನ್ನವಾಗಿರುವುದರಿಂದ. ಹಾಗಾಗಿನೆ ಬದುಕಿನಲ್ಲಿ ಯಾರೊಬ್ಬರ ಅನುಭವವೂ ನಿಮ್ಮದಾಗುವುದಿಲ್ಲ. ಯಾರೋ ಒಬ್ಬರ ಅನುಭವವನ್ನು ನೋಡಿಕೊಂಡು ಕೇಳಿಸಿಕೊಂಡು ಕಲ್ಪನೆ ಭ್ರಮೆಗಳಲ್ಲಿ ಕಳೆದು ಹೋಗುವುದರಲ್ಲಿ ಅರ್ಥವಿಲ್ಲ. ಹೀಗೀಗೆ ಅನುಭವ ಆಗ್ತದಂತ ಯಾವತ್ತಿಗೂ ಅಂದುಕೊಬೇಡಿ. ನಿರೀಕ್ಷೆ ಕಟ್ಟಿಕೊಳ್ಳಬೇಡಿ. ಇಷ್ಟಕ್ಕೂ ಅನುಭವ ಅನುಭವಿಸಿದ ಮೇಲೆನೆ ತಿಳಿಯೋದು. ಏನೇ ಅನುಭವವಾದರೂ ಅದನ್ನು ನೀವು ಹೇಗೆ ಸ್ವೀಕರಿಸುತ್ತೀರಿ ಅನ್ನೋದೆ ಮುಖ್ಯವಾಗೋದು. ಒಟ್ಟಿನಲ್ಲಿ ಜೀವನ ಅನ್ನೋದೆ ಅನುಭವ. ಇನ್ನು ಅನುಭವಕ್ಕಾಗಿಯೇ ಮಾಡ್ತಿದೀನಿ ಅನ್ನೊದ್ರಲ್ಲಿ ಅರ್ಥವಿಲ್ಲ. ಏನೇ ಕೆಟ್ಟ ಅಥವಾ ಮುಜುಗರದ ಅನುಭವಗಳಾದರೂ ಬಿಡಿ ಇದೆಲ್ಲ ಕಾಮನ್, ಏನು ಹೋದಂಗಾಯಿತು ಅಂತೆಲ್ಲ ಆಡೋಕೆ ಹೋಗಬೇಡಿ. ಅದು ಆ ಕ್ಷಣಕ್ಕೆ ನಿಮ್ಮ ಸಮಾಧಾನಕ್ಕೆ ನೀವು ಆಡಿಕೊಳ್ಳುವ ಮಾತಷ್ಟೇ. ಆದರೆ ಅದೇ ಚಾಳಿಯಾದರೆ ನೀವು ಜೀವನದಲ್ಲಿ ಸೀರಿಯಸ್ ನೆಸ್ ಇಲ್ಲದ ವ್ಯಕ್ತಿಯಾಗುತ್ತೀರಿ. ಮತ್ತೆ ಮತ್ತೆ ಆ ತರಹ ಅನುಭವ ಪಡೆದಾಗಲೂ ಅದೇ ಮೈಂಡ್ ಸೆಟ್ ನಲ್ಲಿರುತ್ತೀರಿ. ಅದು ಕಷ್ಟ. ಮುಂದ್ಯಾವತ್ತೊ ಎಲ್ಲಾ ತಿಳಿದು ಸರಿಮಾಡಿಕೊಳ್ಳುವ ಹೊತ್ತಿಗೆ ಸಮಯವೇ ಮುಗಿದೊಗಿರುತ್ತೆ. ಹಾಗಾಗಿ ಅನುಭವಕ್ಕಿಂತ ದೊಡ್ಡದು ಬೇರೊಂದಿಲ್ಲ ಅನ್ನೋ ಮೈಂಡ್ ಸೆಟ್ ನಲ್ಲಿ ಕಳೆದುಹೋಗುತ್ತಲೇ ಇರಬೇಡಿ. ಅಷ್ಟೊತ್ತಿಗೆ ಜೀವನಾನೇ ಮುಗಿದಿರುತ್ತೆ. ಹಾಗಾಗಬಾರದಲ್ಲವಾ.. ಅನುಭವಗಳಿಂದ ಪಾಠ ಕಲಿತು, ಇಲ್ಲಾ ಅದರಲ್ಲೆ ಒಳ್ಳೇದು ತಗೊಂಡು ತಕ್ಷಣವೇ ರೈಟ್ ಟ್ರ್ಯಾಕ್ ನಲ್ಲಿ ಸಾಗಬೇಕಲ್ಲವಾ..? ಎಕ್ಸ್ಪೀರಿಯೆನ್ಸ್ ನಿಂದ ಏನ್ ಕಲಿತಿರಿ ಏನ್ ತಗೊಂಡ್ರಿ ಅನ್ನೋದರ ಮೇಲೆನೆ ಅಲ್ವಾ ನಿಮ್ಮ ಅನುಭವಕ್ಕೆ ನಿಜವಾದ ಅರ್ಥ ಸಿಗೋದು…?
ಇದೇ ತರಹ ಕೇರ್ ಲೆಸ್ ಆಗಿ ಆಡುತ್ತಿದ್ದರೆ ಆ ಅರ್ಥ ಸಿಗುತ್ತದಾ..? ನಿಮ್ಮ ಅನುಭವಕ್ಕೆ ಅರ್ಥವಿಲ್ಲವೆಂದ ಮೇಲೆ ನಿಮ್ಮ ಜೀವನಕ್ಕೆ ಅರ್ಥವಿದೆಯಾ..?
-ಮಧುಕರ್ ಬಳ್ಕೂರು