ಡಾ.ದೊಡ್ಡರಂಗೇಗೌಡರ ಕಾವ್ಯ: ಸಂತೋಷ್ ಟಿ.

ಮಾನವೀಯತೆಯ ಮಹೋನ್ನತ ಭಾವಗಳ ಆಧುನಿಕ ಕಾವ್ಯ ಪುನರುತ್ಥಾನ ಪರ್ವದ ಮಹಾಮೇರು ಕವಿ ಪದ್ಮಶ್ರೀ ಡಾ ದೊಡ್ಡರಂಗೇಗೌಡರು ಎಂದು ಬಹು ಹೆಮ್ಮೆಯಿಂದ ಹೇಳಬಹುದು. ಕನ್ನಡ ಕಾವ್ಯ ನದಿಯು ಹರಿದು ಹರಿದು ಸವಕಲಾಗಿ ಹಳೆಯದಾದರೂ ಉಕ್ಕಿ ಹರಿಯುವ ನೂತನ ತವನಿಧಿಯಂತೆ ತನ್ನ ನಿರಂತರ ಚಲನಶೀಲತೆ ಮತ್ತು ಮತ್ತು ಅದು ತೆಗೆದುಕೊಂಡು ತಿರುವು ಪಾತ್ರ ಆಕಾರ ಗುಣ ಸಂಪನ್ಮೂಲಗಳಲ್ಲಿ ಭಾಷೆಯ ಸ್ವರೂಪ ಬದಲಾಗಿದೆ. ಛಂದಸ್ಸಿನಲ್ಲಿ ಸುಧಾರಣೆಯಾಗಿದೆ. ಜನಪದ ಸಾಹಿತ್ಯದ ಮೂಲ ಧಾತುಗಳಿಂದ ಕೂಡಿ ಇಲ್ಲಿಯವರಗಿನ ಅದರ ಸ್ಫೂರ್ತಿಯ ಚಿಲುಮೆ ಎಂದಿಗೂ ಬತ್ತಿಲ್ಲ. ಅದು ಬತ್ತಲಾರದ ಗಂಗೆಯು ಹೌದು. ಆಧುನಿಕ ಎನ್ನುವ ಕನ್ನಡದ ನುಡಿ ರಚನೆ ಆರಂಭವಾದದ್ದು ಹತ್ತೋಂಭತ್ತನೇಯ ಶತಮಾನದ ನಂತರದ ಕಾಲಘಟ್ಟ. ಅದಕ್ಕು ಪೂರ್ವದಲ್ಲಿ ಹನ್ನೆರಡನೇ ಶತಮಾನದ ವಚನ ಸಾಹಿತ್ಯ ಸಾಹಿತ್ಯಕ ದೃಷ್ಟಿಯಿಂದ ಬಹು ಸರಳ ಮತ್ತು ಅರ್ಥವಾಗುವ ಭಾಷಿಕ ನುಡಿಯನ್ನು ಹೊಂದಿತ್ತು. ಅದು ಬಹು ಜನರನ್ನು ತಲುಪಿ ಸಮಾಜ ಸುಧಾರಣೆಯನ್ನು ಮಾಡಿತು, ಎಂಬುದು ಜನಪ್ರಿಯ ಐತಿಹ್ಯವಾಗಿದೆ. ೧೮-೧೯ ನೇ ಶತಮಾನದ ಯುಗಪಲ್ಲಟ ತಂದ ವಿನೂತನತೆ ಎಂದರೆ ಆಂಗ್ಲರ ಆಡಳಿತ, ಶಿಕ್ಷಣ, ಉದ್ಯೋಗ ಇತರೆ ಅಗತ್ಯಗಳ ಜೊತೆಗೆ ಕನ್ನಡ ನಾಡಿನ ಪ್ರಾಚೀನತೆ, ಸಾಹಿತ್ಯ, ಸಂಸ್ಕೃತಿ, ಶಾಸನಗಳ ಸಂಗ್ರಹಣೆ ಮತ್ತು ಅವುಗಳ ಪಾಠ ವಿವರಣೆ , ಜನಪದ ಸಾಹಿತ್ಯ ಸಂಗ್ರಹಣೆ , ಹಸ್ತಪ್ರತಿ ಸಂಗ್ರಹ ಮತ್ತು ಗ್ರಂಥಸಂಪಾದನೆ , ಪುಸ್ತಕ ಗ್ರಂಥ ಪ್ರಕಟಣೆಯಂತ ಬಹುಮುಖ್ಯ ಕ್ರಿಯೆ ಮತ್ತು ಚಟುವಟಿಕೆಗಳಿಂದ ಕನ್ನಡ ಭಾಷೆಯಲ್ಲಿ ಆಧುನಿಕ ನುಡಿಯ ರಚನೆ, ವ್ಯಾಕರಣ, ಸರಳತೆ, ವಾಗ್ಮಿತೆ, ಆಡುನುಡಿಯ ಯಥಾ ಸ್ಥಿತಿ ಬಳಕೆ, ಗ್ರಂಥಸ್ಥ ಭಾಷೆಯಲ್ಲಿ ಸರಳತೆ ಬಂದು ಜನರಿಗೆ ಸಾಹಿತ್ಯವೆಂಬುದು ಬಹಳ ಹತ್ತಿರವಾಯಿತು. ಅದಕ್ಕು ಮುಂಚೆ ಅದರ ಸ್ವರೂಪ ರಚನೆಗಳು ಅರಮನೆಯ ವಿದ್ವಾಂಸರಿಗೆ ಪಂಡಿತರಿಗೆ ಮಾತ್ರ, ಜನಸಾಮಾನ್ಯರಿಗಲ್ಲ ಎಂಬಷ್ಟು ಸಂಸ್ಕ್ರತ ಭೂಯಿಷ್ಠ ಕಠಿಣತೆ ಸಾಹಿತ್ಯ ಕೃತಿಗಳಲ್ಲಿ ಇತ್ತು. ಮುದ್ದಣನ ನಂತರ ಸಾಹಿತ್ಯ ತನ್ನ ಚಲನೆ ಮತ್ತು ಗತಿ ಶಕ್ತಿಯಲ್ಲಿ ಹೊಸ ಚೈತನ್ಯದ ಮರುಹುಟ್ಟನ್ನು ಪಡೆದು ಎಂದಿಲ್ಲದಂತೆ ಪ್ರವಹಿಸಿತು. ತನ್ನ ಪಾತ್ರವನ್ನು ಹಿಗ್ಗಿಸಿತು. ಏರು ದಿಣ್ಣೆ ತಗ್ಗು ಪ್ರಪಾತ ಕಂದರಗಳು ಕೊರಕಲುಗಳು ಇಕ್ಕಾಟಾದ ಜಾಗಗಳಲ್ಲಿ ಎಲ್ಲಾ ಕಡೆಯು ಉಕ್ಕಿ ಹರಿದು ಅರುಣೋದಯದ ಕಹಳೆಯನ್ನು ಊದಿ ನವೋದಯ ಕಾಲದ ಸಾಹಿತ್ಯ ರಚನೆಯಲ್ಲಿ ಕಾವ್ಯ ಪ್ರಮುಖ ಪ್ರಕಾರವಾಗಿ ಕಾಣಿಸಿಕೊಂಡಿತು.

ಚುರುಮುರಿ ಶೇಷಗಿರಿರಾಯ, ಆಲೂರು ವೆಂಕಟರಾಯರು, ಬಿ.ಎಲ್ ರೈಸ್, ಈ.ಪಿ ರೈಸ್, ಎಫ್ ಕಿಟೆಲ್, ಶಾಂತಕವಿ, ಎಸ್.ಜಿ ನರಸಿಂಹಚಾರ್ಯ, ಪಂಜೆ ಮಂಗೇಶರಾಯ, ಜಯರಾಯಚಾರ್ಯ ಹಟ್ಟಿಯಂಗಡಿ ನಾರಾಯಣರಾಯ, ಮಂಜೇಶ್ವರದ ಗೋವಿಂದ ಪೈಗಳು, ಬೆಳ್ಳೂರು ಮೈಲಾರಪ್ಪ ಶ್ರೀಕಂಠಯ್ಯ, ಎಂ.ಎನ್ ಕಾಮತ್, ಪೇಜಾವರ ಸದಾಶಿವ, ಸೋಡಿಯಾಪು ಕೃಷ್ಣಭಟ್ಟ, ಮೈಸೂರು ಅರಮನೆಯ ಸಾಂಪ್ರದಾಯಿಕ ಕವಿಗಳು ಕೆಲವರಿಂದ ಆದ ರಚನೆಗಳು, ಬಿಡಿ ರಚನೆಗಳು , ಅನುವಾದ ಕಾವ್ಯಗಳು ಕನ್ನಡ ಕಾವ್ಯ ಸಾಹಿತ್ಯದ ಆಧುನಿಕ ಕಾಲದ ಅರುಣೋದಯ ಕಾಲಘಟ್ಟ ಎನ್ನಬಹುದು. ನಂತರ ಇಂಹತ ಅಮೋಘವಾದ ಹೊಸ ತಾಜಾತನವೊಂದು ಲಭ್ಯವಾದ ಹಿನ್ನೆಲೆಯಲ್ಲಿ ಪಾಶ್ಚಾತ್ಯ ಶಿಕ್ಷಣದ ಪ್ರಭಾವ ಮತ್ತು ಭಾರತೀಯ ಪರಂಪರೆಯ ಭಾರತೀಯ ಕಾವ್ಯ ಮೀಮಾಂಸೆ ಹಾಗೂ ಪಾಶ್ಚಾತ್ಯ ಕಾವ್ಯ ಮೀಮಾಂಸೆ ಜೊತೆಗೆ ಪೌರತ್ಯ ರಾಷ್ಟ್ರಗಳ ಕಾವ್ಯ ವಿಚಾರ ತತ್ವಗಳು ಅಭ್ಯಾಸ ಮಾಡಿದ ತರುಣ ಪರಂಪರೆಯ ಯುವ ಪೀಳಿಗೆ ಹೊಸ ಕಾವ್ಯ ರಚನೆಗೆ ಸ್ವತಂತ್ರ ಅಸ್ಥಿತ್ವದ ಭಾಷಿಕ ತುಡಿತ ಮಿಡಿತಗಳಿಗೆ ಒಳಗಾಗಿ ಹೊಸ ಸಂಚಲನವನ್ನು ಸೃಷ್ಟಿಸಿತು. ಅದು ತಾಜಾ ಜೀವಂತಿಕೆಯಿಂದ ಕೂಡಿದ ನೂತನ ಭಾಷಿಕ ಆವಿಷ್ಕಾರದಂತೆ ಕಂಡಿತು. ಡಿವಿಜಿ, ಮಾಸ್ತಿ, ಕುವೆಂಪು, ಬೇಂದ್ರೆ , ವಿ. ಸೀತಾರಾಮಯ್ಯ, ಎಂ.ವಿ ಸೀತಾರಾಮಯ್ಯ, ಪು.ತಿ.ನ, ಮಧುರಚೆನ್ನ, ಆನಂದಕಂದ, ಕೆ.ಎಸ್ ನರಸಿಂಹಸ್ವಾಮಿ, ತಿ.ನಂ.ಶ್ರೀ, ಈಶ್ವರ ಸಣ್ಣಕಲ್ಲ, ಐರಸಂಗ, ಡಿ.ಎಸ್ ಕರ್ಕಿ, ಹುಯಲಗೋಳ ನಾರಾಯಣ ರಾಯ, ರಸಿಕ ರಂಗ ಮೊದಲಾದವರ ರಚನೆಗಳು ಕನ್ನಡ ಕಾವ್ಯ ಸಾಹಿತ್ಯದಲ್ಲಿ ರಮ್ಯವಾದ ಮಧುರ ಸುಮಧುರ ಎನ್ನಬಹುದಾದ ಪ್ರಕೃತಿಯ ವಿವರಗಳಿಂದ ಹಿಡಿದು ರಾಷ್ಟ್ರಭಕ್ತಿಯವರೆಗೂ ಒಂದು ತಲ್ಲೀನತೆಯ ಪ್ರೀತಿಯ ರಮ್ಯ ದಾಟಿಯಲ್ಲಿ ಜನಮಾನಸವನ್ನು ತಲುಪಿ ಎಚ್ಚರಗೊಳಿಸಿತು. ಇದೆ ಸಮಯದಲ್ಲಿ ಭಾರತ ಸ್ವಾತಂತ್ರ್ಯವಾಗಿ ಕರ್ನಾಟಕ ಏಕೀಕರಣ ಚಳುವಳಿ ಆರಂಭವಾಗಿ ಜನರಲ್ಲಿ ಆತ್ಮ ಶಕ್ತಿ, ನೈತಿಕ ಕಾಳಜಿಗಳನ್ನು ಉಂಟುಮಾಡಿತು. ಜನರಲ್ಲಿ ನೆಲ, ಜಲ, ಭಾಷೆ, ಸಂಸ್ಕೃತಿ ವಿಚಾರದಲ್ಲಿ ಆಲೋಚಿಸುವಂತೆ ಮಾಡಿತು.

ಕನ್ನಡ ಅಥವಾ ಕರ್ನಾಟಕ ಎಂದರೆ ಬರೀ ಕಾವ್ಯವಲ್ಲ, ಸಾಹಿತ್ಯವಲ್ಲ, ಕತೆಯಲ್ಲ, ಪುರಾಣವಲ್ಲ ,ಇತಿಹಾಸವಲ್ಲ, ಭಾಷೆಯಲ್ಲ ಅದು ಎಲ್ಲವೂ ಹೌದು. ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಆಡಳಿತಾತ್ಮಕವಾಗಿ, ಭಾಷಿಕವಾಗಿ, ಸಾಹಿತ್ಯವಾಗಿ, ಚರಿತ್ರೆಯಾಗಿ ಚಿರಸ್ಥಾಯಿಯಾದ ಒಂದು ದೊಡ್ಡ ಪರಂಪರೆ ನಮ್ಮದು ಎಂಬುದು ಕನ್ನಡಿಗರಿಗೆ ಮನವರಿಕೆಯಾಯಿತು. ಇದರ ಪ್ರತಿಫಲ ಭಾಷಾವಾರು ಪ್ರಾಂತ್ಯ ರಚನೆಯಾಗಿ ವಿಶಾಲ ಮೈಸೂರು ರಾಜ್ಯ ಎಂಬ ಪರಿಕಲ್ಪನೆ ಜಾರಿಯಾಯಿತು. ಈ ಕಾಲದಲ್ಲಿ ಆದ ಸಾಹಿತ್ಯ ಮಹಾ ವಿಪ್ಲವ ಅಥವಾ ಚಳುವಳಿಗಳೇ ಅರುಣೋದಯದಿಂದ ಹಿಡಿದು ನವೋದಯ, ಪ್ರಗತಿಶೀಲ, ನವ್ಯ, ದಲಿತ ಮತ್ತು ಬಂಡಾಯ ಎಂದು ಅಧ್ಯಯನ ಶೀಲ ವಿಭಾಗ ಕ್ರಮಗಳು ಚಳುವಳಿಯ ಭಾಗವಾಗಿಯೇ ರೂಪುಗೊಂಡವು. ಅವು ಏಕತೆಯಲ್ಲಿ ಸಾಹಿತ್ಯ ಎಂಬ ಬಗೆಯಾದರೂ ಅವುಗಳ ರಚನೆ ಮತ್ತು ಪ್ರಣಾಳಿಕೆ ಕಾಲದ ದೃಷ್ಟಿಯಿಂದ ಮುಖ್ಯವಾಗಿ ಕಾಲ ದೇಶ ಅಂತರ ಅಗತ್ಯಗಳ ಪರಿಣಾಮವಾಗಿ ಸುಧಾರಣೆಯ ಮಾಧ್ಯಮವಾಗಿ ಬೆಳೆದಿರುವುದನ್ನು ಕಾಣಬಹುದು. ಒಂದು ಪರಂಪರೆ ಹೇಗೆ ತನ್ನ ರಚನೆಯ ದೃಷ್ಟಿಯಿಂದ ಭಿನ್ನವಾಗಿದೆ ಎಂಬುದನ್ನು ಗುರ್ತಿಸಲು ಈ ಹೋರಾಟದ ಧಾತುಗಳು ಪ್ರಮುಖ ಅಜೆಂಡಾಗಳು ಸಹಕಾರಿಯಾಗಿವೆ ಎನ್ನಬಹುದು. ಜನರಿಗೆ ಏನು ಬೇಕು ಮತ್ತು ಬೇಡ, ಸಮಾಜದ ಯುಗಧರ್ಮ, ಮಾನವರ ನೈತಿಕ ತುಷ್ಟಿಗುಣ, ಅವರ ಅಭಿರುಚಿಗಳು, ಆಯ್ಕೆಗಳು, ಸ್ಫೂರ್ತಿ ಪರಿಣಾಮಗಳು ಇವುಗಳಿಗೆ ಪೂರಕವಾದ ನೆಲೆಯಲ್ಲಿ ಸಾಹಿತ್ಯವು ಮನೋ ವೈಜ್ಞಾನಿಕ ನೆಲೆಯಲ್ಲಿ ಬೆಳೆಯಿತು. ಆರಂಭದಲ್ಲಿ ಅನುವಾದ ಕಾವ್ಯಗಳು ಕನ್ನಡಕ್ಕೆ ಬಂದು ಹೇಗೆ ಒಂದು ಪೀಳಿಗೆ ತನ್ನ ಭಾಷೆಯ ಅಂತಃಸತ್ವ ಗುಣದಿಂದ ಚಲನಶೀಲವಾಯಿತು. ಹಾಗೆ ಅನುವಾದ ಕಾದಂಬರಿ, ಕತೆಗಳು, ಕ್ರಿಶ್ಚಿಯನ್ ಮಿಷನರಿಗಳ ನೈತಿಕ ಕಾಳಜಿಯ ಭಾಷೆಯ ಕಲಿಸುವಿಕೆಯ ಪದ್ಯಗಳ ರಚನೆ ಜೊತೆಗೆ ಮಕ್ಕಳ ಶಿಕ್ಷಣ ಕ್ರಮದ ಭಾಗವಾಗಿ ಸಾಹಿತ್ಯ ಪಠ್ಯಗಳ ನಿರ್ವಹಣೆ, ವ್ಯಾಕರಣ ಮತ್ತು ಛಂಧಸ್ಸು ಹೊಸದೊಂದು ಮನ್ವಂತರವನ್ನು ತೆರೆಯಿತು. ಬಿ.ಎಂ.ಶ್ರೀಯವರ ಕಾವ್ಯ ಮೂಲ ಪ್ರೇರಣೆಯಾಗಿ ನಂತರ ಸ್ವತಂತ್ರ ರಚನೆಗಳು ಶುದ್ಧವಾದ ಭಾವಾಭಿವ್ಯಕ್ತಿಯಿಂದ ಜನರನ್ನು ಆಕರ್ಷಕ ಶೈಲಿಯಲ್ಲಿ ರಂಜಿಸಿದವು. ಕುವೆಂಪು ಬೇಂದ್ರೆಯವರ ರಚನೆಯ ಭಾವಗೀತೆಗಳಂತೂ ಮಾಡಿದ ತವಕ ತಲ್ಲಣ ಕುತೂಹಲ ಯುವಕರಲ್ಲಿ ಆಶ್ಚರ್ಯವನ್ನು ತಂದು ಭಾಷೆಯನ್ನು ಬೆಳೆಸಿತು.

” ಜನವಾಣಿ ಬೇರು ಕವಿವಾಣಿ ಹೂವು” ಎಂಬ ಕನ್ನಡದ ಕಣ್ವ ಮಹರ್ಷಿಗಳಾದ ಬಿಎಂಶ್ರೀಯವರ ಮಾತು ನವ ಕವಿಗಳನ್ನು ಜಾನಪದ ಜಗತ್ತಿನ ಆಡುನುಡಿಯ ಸಮೀಪಕ್ಕೆ ಅರ್ಥವಾಗುವ ಭಾಷೆಯ ಸನ್ನಿಹಕ್ಕೆ ಕೊಂಡುಹೋಗಿ ಕಾವ್ಯ ರಚನೆಯನ್ನು ಮಾಡಿಸಿತು. ಪಾಶ್ಚಾತ್ಯ ಪೌರತ್ವ ಕವಿಗಳ ಕಾವ್ಯದ ಓದಿನ ಪ್ರಭಾವ ಪ್ರೇರಣೆ ಎಂದರೂ, ಇಲ್ಲಿನ ಪ್ರಕೃತಿ ಪರಿಸರವೇ ಪ್ರತಿಭೆಗಳ ಸಹಜ ಸ್ಫೂರ್ತಿಯ ಉದ್ಭುದ ಅದ್ಭುತ ನೆಲೆಯಾಗಿ ಪರಿಣಮಿಸಿತು. ಪ್ರಗತಿಶೀಲರಲ್ಲಿ ಅಷ್ಟಾಗಿ ಕಾವ್ಯ ರಚನೆ ನಿರೀಕ್ಷಸಲಾಗಲಿಲ್ಲ ಅಲ್ಲಿನ ಒಂಟಿತನ ಮತ್ತು ಸಮಾಜದ ಪರ ರಭಸದ ಆಲೋಚನಾ ಲಹರಿ ಏಕತಾನವಾಗಿ ಹರಿದರು, ಕಾವ್ಯದಂತ ಸೃಜನಶೀಲ ರಚನೆ ಅವರಲ್ಲಿ ಹೆಚ್ಚು ಕಾಣದೆ ಕತೆ ಕಾದಂಬರಿ ವಿಮರ್ಶೆಗಳಿಗೆ ಸೀಮಿತವಾಯಿತು. ಆಗಲೂ ನವೋದಯ ಕವಿಗಳು ಬರೆದೆ ಇದ್ದರೂ. ನವ್ಯ ಸಾಹಿತ್ಯದ ಹರಿಕಾರರಲ್ಲಿ ವಿನಾಯಕರು ಮತ್ತು ಗೋಪಾಲ ಕೃಷ್ಣ ಅಡಿಗರ ಹೆಸರು ಪ್ರಖ್ಯಾತವಾಗಿದೆ. ಇದೇ ಕಾಲದಲ್ಲಿ ಕೆ.ಎಸ್ . ನಿಸಾರ್ ಅಹಮ್ಮದ್, ಜಿ.ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಸಿದ್ದಯ್ಯ ಪುರಾಣಿಕ, ಜಿ.ಪಿ. ರಾಜರತ್ನಂ, ಗಂಗಾಧರ ಚಿತ್ತಾಲ, ಕಾವ್ಯನಂದ, ವಸಂತ ಕುಷ್ಟಗಿ, ಬಿ.ಎ ಸನದಿ, ಕಡೆಂಗ್ಲೋಡು ಶಂಕರಭಟ್ಟ, ಕಯ್ಯಾರ ಕಿಞ್ಞಣ್ಣ ರೈ ಮೊದಲಾದವರು ತಮ್ಮದೆ ಆದ ಪ್ರತಿಭೆಯಿಂದ ಭಾಷೆಯಲ್ಲಿ ಒಂದು ವಿನೂತನ ಪ್ರಯೋಗ ಪ್ರಯತ್ನಗಳನ್ನು ಮಾಡಿ ಗಪದ್ಯಗಳೆಂಬಂತೆ ಗದ್ಯವಾಗಿಯೂ ಪದ್ಯವಾಗಿಯೂ ತನ್ನ ವಾಗ್ಮಿತೆಯ ಸೋಪಾಜ್ಞ ಶೈಲಿಯಿಂದಲೂ ಕೆಲವು ರಚನೆಗಳು ಭಾವಗೀತಾಧಿ ಮಧುರ ಶೃತಿ ವಿನ್ಯಾಸಗಳಿಂದಲೂ ರಚನೆಯಾದವು. ಇಲ್ಲಿನ ಮುಖ್ಯ ಗುಣ ಲಕ್ಷಣಗಳೆಂದರೆ ವ್ಯಕ್ತಿಯ ಭಾವತೀವ್ರತೆಯ ಭಾವಾಭಿವ್ಯಕ್ತಿ, ಏಕತಾನತೆ, ಒಬ್ಬೊಂಟಿತನ, ಗ್ರಹಿಕೆಯಲ್ಲಿ ಮನೋವಿಕಾಸ ಮತ್ತು ವಿಡಂಬಕ ಧಾಟಿ, ವಿಚಿಕಿತ್ಸಕ ಪ್ರಶ್ನಾವಳಿ, ಮನೋ ವೈಜ್ಞಾನಿಕ ನೆಲೆಯ ಆತುರತೆ, ಅಸ್ಮಿತೆಯ ಮಾನಸಿಕ ತೊಳಲಾಟ, ತುಸು ಬಂಡಾಯ, ಸುಧಾರಣೆಯ ಧೋರಣೆಗಳೊಂದಿಗೆ ಸಾಮಾಜಿಕ ವೈಚಾರಿಕ ವೈವಿಧ್ಯಮಯ ಸಾಹಿತ್ಯ ರಚನೆಯನ್ನು ಮೈಗೂಡಿಸಿಕೊಂಡಿತು. ನಂತರ ಮಾನವೀಯ ಕಾಳಜಿಯ ಜಾಗೃತಿಯಾಗಿ ದಲಿತ ಬಂಡಾಯ ಸಾಮಾಜಿಕ ಅಸಮಾನತೆಯ ವಿರುದ್ಧ ತಪ್ತ ಕಾವ್ಯವನ್ನು ರಚಿಸಿತು. ಇಲ್ಲಿ ಇನ್ನು ಆಧುನಿಕ ಆಧುನಿಕೋತ್ತರ ಎಂಬಂತಹ ಮೌಲ್ಯಗಳು ಕಾಣಿಸಿಕೊಂಡವು. ಜಗತ್ತು ಕಂಡ ಮಹಾಯುದ್ಧಗಳು ಆದರಿಂದಾದ ಪರಿಣಾಮಗಳು, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ, ಮೇಲುಕೀಳು ಎಂಬ
ಭಾವನೆ ಹೊಗಲಾಡಿಸುವಿಕೆ, ಜನಪದೀಯ ಮೂಲ ಅಸ್ಮಿತೆ ಮತ್ತು ತಳಹಂತದ ವೈಜ್ಞಾನಿಕ ವೈಚಾರಿಕ ಸಾಮಾಜಿಕ ಸಾಂಸ್ಕೃತಿಕ ಬುಡಕಟ್ಟು ಜನಾಂಗದ ಸಂಸ್ಕೃತಿ ಉಪಸಂಸ್ಕೃತಿಗಳ ಸಂರಚನೆ, ದಲಿತರ ಅಕ್ಷರ ಲೋಕದ ಪ್ರತಿಭೆಯ ಬೆಳಕು , ಅಕ್ಷರ- ಅರಿವು-ಸಂಘಟನೆ- ಹೋರಾಟದ ಲಕ್ಷಣಗಳಿಂದ ಇಲ್ಲಿನ ದೃಷ್ಟಿಕೋನಗಳು ರೂಪುಗೊಂಡವು. ಕಾರ್ಲ್ಡ್ ಮಾರ್ಕ್ಸ್, ರಾಮ ಮನೋಹರ ಲೋಹಿಯಾ, ಗಾಂಧಿ, ಅಂಬೇಡ್ಕರ್, ಬಸವಾದಿ ಶರಣರ ತತ್ವ ಸಿದ್ಧಾಂತಗಳು ಮರುಕಳಿಸಿದಂತೆ ಕಂಡರು ಅವು ಮೂಲ ಸಬ್ ಅಲ್ಟ್ರಾನ್ ಸಾಮಾಜಿಕ ಶ್ರೇಣಿಕರಣ ಅಭ್ಯಾಸಗಳ ಸಮಾಜಗಳ ಅಧ್ಯಯನಗಳಂತೆ ಕಂಡವು.

ಡಾ.ಸಿದ್ಧಲಿಂಗಯ್ಯ, ಚೆನ್ನಣ್ಣ ವಾಲೀಕಾರ, ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲಾ, ಡಿ.ಎಸ್. ವೀರಯ್ಯ, ಕಾಳೇಗೌಡ ನಾಗವಾರ, ಡಿ.ಆರ್. ನಾಗರಾಜ್, ಕಿ.ರಂ.ನಾಗರಾಜು, ಶೂದ್ರ ಶ್ರೀನಿವಾಸ್, ಲಂಕೇಶ್, ದೇವನೂರು ಮಹಾದೇವ, ಎಲ್ ಎನ್.ಮುಕುಂದ ರಾಜು, ಸತ್ಯಾನಂದ ಪಾರ್ತೋಟ, ಎಚ್.ಟಿ.ಪೋತೆ, ಕೋಲಾರ ಲಕ್ಷ್ಮೀಪತಿ, ಮೂಡ್ನಾಕೂಡು ಚಿನ್ನಸ್ವಾಮಿ, ಮೊದಲಾದವರು ಈ ದಲಿತ ಬಂಡಾಯ ಸಾಹಿತ್ಯದ ರೂವಾರಿಗಳಾಗಿ ಸಂಘಟನೆ ಹೋರಾಟದ ಜೊತೆಗೆ ಕಾವ್ಯ ಸಾಹಿತ್ಯದ ಹೋರಾಟ ಸ್ಥಾಯಿ ಮತ್ತು ಅದರ ಸಂಚಾರಿ ಭಾವಗಳಾದ ಅಸ್ಪೃಶ್ಯತೆ ಮುಟ್ಟಾವಳಿ, ಅಸಮಾನತೆಯ ಕೂಗು, ಜಾತಿ ವಿನಾಶ, ಅಂತರ ಜಾತಿ ವಿವಾಹ, ಮೀಸಲಾತಿ, ಮೂಲಭೂತ ಸೌಕರ್ಯ,ಮಾನವ ಹಕ್ಕುಗಳು ಮೊದಲಾದ ವಿಚಾರಧಾತುಗಳು ಕೂಡಿದವು. ಇದರ ಜೊತೆಯಲ್ಲಿ ಮಹಿಳಾ ಸಂವೇಧನೆ ಎನ್ನುವ ಪರಿಕಲ್ಪನೆ ಸ್ತ್ರೀ ಸಂವೇದನೆ , ಸ್ತ್ರೀ ಸಾಹಿತ್ಯ ಹೋರಾಟ, ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಂ ಸಂವೇದನೆಯ ಅಂಶಗಳು ಸೇರಿದವು. ವಿವಿಧ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಘಟನೆಗಳು ರಚನೆಯಾದವು. ಮಾನವ ಹಕ್ಕುಗಳ ಹೋರಾಟವೇ ಇವುಗಳ ಕಲ್ಪನೆಯಾದರೂ, ರಚನೆಯಾದ ಪದ್ಯ ಮತ್ತು ಗದ್ಯ ಸಾಹಿತ್ಯ ಒಂದು ವೈಚಾರಿಕ ಆಲೋಚನೆಯ ಕ್ರಮವನ್ನು ಕಟ್ಟಿಕೊಟ್ಟಿದೆ. ಇಂತಹ ಸುಸಂದಿಗ್ಧ ಕಾಲಘಟ್ಟದಲ್ಲಿ ಬರವಣಿಗೆಗೆ ತೊಡಗಿದ ದೊಡ್ಡರಂಗೇಗೌಡರ ಕಾವ್ಯ ಜಿಜ್ಞಾಸೆಯ ಪರಿಪೋಷಕ ಪಿಠೀಕೆ ಆಧುನಿಕ ಕನ್ನಡ ಸಾಹಿತ್ಯದ ಮೂಲ ಬೇರುಗಳು ಎನ್ನಬಹುದು.

ಗ್ರಾಮೀಣ ಸೊಗಡಿನ ಅಪ್ಪಟ ದೇಸಿ ನುಡಿಗಳ ಆಧುನಿಕ ಕನ್ನಡದ ಚೆತ್ತಾಣ ಬೆದಂಡೆಯಂತೆ ಕಸಿಕಟ್ಟಿದ ಅನುಭವವಾದರೆ ಅದು ಕವಿಯ ಸಹಜ ಕೃಷಿ. ಕನ್ನಡ ಭಾವಗೀತೆ ಪ್ರಪಂಚಕ್ಕೆ ಘನವಾದ ಕೊಡುಗೆಯನ್ನು ನೀಡುತ್ತಾ ಬಂದ ಕವಿ ದೊಡ್ಡರಂಗೇಗೌಡರ ಕಾವ್ಯ ಎಲ್ಲವನ್ನು ಒಳಗೊಂಡು ಪರಿಪಕ್ವತೆಯ ಹಾದಿಯಲ್ಲಿ ನಡೆದು ಬಂದ ಮಾನವತಾವಾದದ ಅನುರಣನವೇ ಆಗಿವೆ. ಗೀತಗಾರುಡಿಯಿಂದ ಆರಂಭವಾದ ಅವರ ಕಾವ್ಯ ನಿಲುಗಡೆಯನ್ನು ಕಾಣದ ಜನಪ್ರಿಯ ವಾಹಿನಿಯಾಗಿ ಹರಿದು ಚಲನಚಿತ್ರ ಗೀತೆಗಳಾಗಿ ಕಾಲದ ಅಗತ್ಯಕ್ಕೆ ತಕ್ಕಂತೆ ಯುವಕರ ಸ್ಫೂರ್ತಿ ಚಿಲುಮೆಯಾಗಿ ಉಕ್ಕಿ ಹರಿದವು. ಹೋಳಿ ಹುಣ್ಣಿಮೆ, ಪ್ರೇಮಾಂಜಲಿ, ತೀರದ ತುಡಿತ, ಸಪ್ತಶೃಂಗ, ಕಾವ್ಯ ಕಲ್ಯಾಣಿ, ಮಾವು- ಬೇವು, ತಾಳ – ಮೇಳ, ಗೀತ ಗಂಗೋತ್ರಿ, ರಾಗ ತರಂಗಿಣಿ, ಗೀತ – ವೈಭವ, ರಾಗಮುಖಿ, ಭಾವ ಭಾಗೀರಥಿ, ಹೂವು – ಹಣ್ಣು, ಕಾವ್ಯ ಕಾರಂಜಿ, ಗೆಯ್ಮೆ, ಭೂಮಿ ಮತ್ತು ಬಾನು ಇವರ ಭಾವಗೀತೆಗಳ ಸಂಕಲನ ಸುಂದರ ಲೋಕವಾದರೆ, ನವ್ಯದ ಕಾಲಕ್ಕೆ ರೂಪುಗೊಂಡ ಸಾಮಾಜಿಕ ಸಾಂಸ್ಕೃತಿಕ ಅಸ್ಥಿತ್ವ ಮತ್ತು ಮಾನವೀಯ ಅನುಕಂಪದ ನೆಲೆಗಳ ತಲ್ಲಣಗಳು ಅನುಭೂತಿಯಾದ ಪ್ರಾಥಮಿಕ ಪ್ರತಿಭೆ ಮತ್ತು ಅನುಭವದ ಜೀವ ಕೇಂದ್ರದಲ್ಲಿ ಅರಳಿದ ದ್ವೀತಿಯ ಪ್ರತಿಭೆ ಕೋಲರಿಜನ ಪರಿಕಲ್ಪನೆಯಂತೆ ಮತ್ತು ಭಾರತೀಯ ಕಾವ್ಯ ಮೀಮಾಂಸೆಯ ಪದ್ಧತಿಯಂತೆ ಭವನೀಮಜ್ಜನ ಚಾತುರ್ಯ ಮತ್ತು ಲಘಿಮಾ ಕೌಶಲ್ಯಗಳು ನವ್ಯದ ಭರಪೂರ ಉತ್ಸಾಹಿ ತರುಣ ಕವಿಗಳನ್ನು ಕಾಡಿದಂತೆ ದೊಡ್ಡರಂಗೇಗೌಡರನ್ನು ಕಾಡಿ ಬೇಡಿ ಬರೆಸಿದವು. ಜಗಲಿ ಹತ್ತಿ ಇಳಿದು, ಕಣ್ಣು ನಾಲಗೆ ಕಡಲು, ನಾಡಾಡಿ, ಮೌನ ಸ್ಪಂದನ, ಏಳು ಬೀಳಿನ ಹಾದಿ, ಕುದಿಯುವ ಕುಲುಮೆ, ಚದುರಂಗದ ಕುದುರೆಗಳು, ಯುಗವಾಣಿ, ಐವತ್ತರ ಐಸಿರಿ, ಬದುಕು ತೋರಿದ ಬೆಳಕು, ಹೊಸ ಹೊನಲು, ಲೋಕಾಯಣ, ನೆಲವಿಲ್ಲದೆ ಬೇರಿಲ್ಲ, ಗೀತ – ಸಿರಿ ಕವನ ಸಂಕಲನಗಳು ಇವು ನಿಚ್ಚಳವಾಗಿ ನವ್ಯ ಪ್ರಜ್ಞೆಯ ಆಧುನಿಕ ಕನ್ನಡ ಸಾಹಿತ್ಯದ ಸೃಜನಶೀಲ ಭೂಮಿಕೆಗಳು. ಭಕ್ತಿಗೀತೆ ಪ್ರಕಾರದಲ್ಲಿ ಶ್ರೀ ಸಿದ್ದೇಶ್ವರ ಸ್ತುತಿ , ಭಕ್ತಿ ಕುಸುಮಾಂಜಲಿ, ನೂರೆಂಟು ನಮನ, ಶ್ರೀಗುರು ಚರಣದಲ್ಲಿ ಎಂಬ ಸಂಕಲನಗಳು ಅವರ ಭಕ್ತಿಯ ಆಧ್ಯಾತ್ಮಿಕ ಪ್ರಪಂಚಕ್ಕೆ ಸ್ತೋತ್ರ ಪದಗಳಾಗಿವೆ.

ಪ್ರಗಾಥ ಪ್ರಕಾರದಲ್ಲಿ ಕೈಯಾಡಿಸಿದ ಇವರ ಕೃತಿಗಳು ಪ್ರೀತಿ ಪ್ರಗಾಥ, ಹಳ್ಳಿ ಹುಡುಗಿ ಹಾಡು – ಪಾಡು ಇವು ಗೀತಿಕೆಗಳ ಬಹಳ ದೊಡ್ಡ ನಿದರ್ಶನ. ಮುಕ್ತಕ ಬಿಡಿ ಪದಗಳು ಮಣ್ಣಿನ ಮಾತುಗಳು, ಮಿಂಚಿನ ಗೊಂಚಲು, ಗದ್ಯ ಸಾಹಿತ್ಯ ವರ್ತಮಾನದ ವ್ಯಂಗ್ಯದಲ್ಲಿ, ವಿಚಾರ ವಾಹಿನಿ.
ಅವರ ವಿಮರ್ಶಾ ಕೃತಿಗಳೆಂದರೆ ಸಮಯೋಚಿತ ಔಚಿತ್ಯ ಪ್ರಜ್ಞೆಯ ವೈಚಾರಿಕ ಪ್ರಕರ್ಷದ ಕುಲುಮೆಯಲ್ಲಿ ಕುಸುರಿಗೆಲಸ ಮಾಡಿ ಪುಟವಿಟ್ಟ ಪುಸ್ಥಳಿಯ ಬಂಗಾರ ಶಿಲೆಗಳು ಎನ್ನಬಹುದು. ನಿಖರವಾದ ಮಾಹಿತಿ ಅರ್ಥವತ್ತಾದ ಮೌಲ್ಯಮಾಪನ, ಕೃತಿಗಳ ಬೆಲೆ ನಿರ್ಣಯ, ಕವಿ ಕಾವ್ಯ ಮೀಮಾಂಸೆ, ಸಾಹಿತ್ಯ ಚರಿತ್ರೆ ಚಿತ್ರಣ ಜಾನಪದ ದೇಸಿಯತೆ ಅಂಶಗಳಿಂದ ನಿಕಷಕ್ಕೆ ಒಡ್ಡಲಾದವು ಎನ್ನಬಹುದು. ಆ ಕೃತಿಗಳು ಸಾಹಿತ್ಯ ಸರಸ್ವತಿ, ಜೀವಂತ ಜಾನಪದ, ಧರ್ಮ ಮಾರ್ಗ, ಪ್ರಾಚೀನ ಸಾಹಿತ್ಯ, ಅಭಿಜಾತ ಸಾಹಿತ್ಯ, ಆಧುನಿಕ ಸಾಹಿತ್ಯ, ನವ್ಯ ನಿರೀಕ್ಷೆ, ಪ್ರಸ್ತುತ ಸಾಹಿತ್ಯ, ಅಭಿಮುಖ, ನಮ್ಮ ನಾಡು – ನಮ್ಮ ನುಡಿ, ರಮ್ಯವಾದ, ನವೋದಯ ಕಾವ್ಯ, ಅಭಿರುಚಿ, ಅಭ್ಯುದಯ, ಕನ್ನಡ ನವೋದಯ ಕಾವ್ಯ, ಸಾಹಿತ್ಯ ಸೌರಭ, ಸಾಹಿತ್ಯ ಸುರಭಿ, ಕರಾವಳಿ ಕವಿಗಳು ಇವರ ಪ್ರಮುಖ ವಿಮರ್ಶಾ ಕೃತಿಗಳು. ಇವರ ಸಾಹಿತ್ಯ ಕೃಷಿಗೆ ಸಂದ ಗೌರವ ಅಭಿನಂದನೆ ಗ್ರಂಥಗಳು ನಾಡಿನ ಗಣ್ಯವಕ್ತಿಗಳು, ಸಾಹಿತಿಗಳು, ರಾಜಕಾರಣಿಗಳು, ವಿಮರ್ಶಕರು, ಸಂಗೀತ ಸಂಯೋಜಕರು, ನಿರ್ದೇಶಕರು, ಅಭಿಮಾನಿ ಸಹೃದಯರು ಸಂಭಾವನೆ ಗ್ರಂಥದ ಲೇಖನಗಳನ್ನು ಬರೆದು ಸಂಕಲನ ಮಾಡಿ ಅರ್ಪಿಸಿರುವರು. ಅವು ಸೃಜನ ಸಂಪನ್ನ, ಸಮಾಜ ಮುಖಿ, ಸಾಹಿತ್ಯ ಸಂಪದ, ಸಾಹಿತ್ಯ ಸಮೀಕ್ಷೆಯಾಗಿವೆ. ದೊಡ್ಡರಂಗೇಗೌಡರ ಅರವತ್ತೈದು ಕನ್ನಡ ಕವಿತೆಗಳು ಹನ್ನೊಂದು ಜನ ಆಂಗ್ಲ ಪ್ರಾಧ್ಯಾಪಕರಿಂದ ತರ್ಜುಮೆಯಾಗಿ ಕೃತಿ ರೂಪ ತಾಳಿದೆ. The Wheel Of Time and Other Poems. ಇನ್ನು ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಇವರ ಕವಿತೆಗಳು ಅನುವಾದವಾಗಿವೆ. ತಮಿಳು, ತೆಲುಗು, ಉರ್ದು ಭಾಷೆಗಳಲ್ಲಿ ಜನಪ್ರಿಯ ಆವೃತ್ತಿಗಳಾಗಿವೆ. ಹಿಮಶ್ವೇತಾ, ಮಯೂರ ದರ್ಶನ, ಚಂದ್ರಗಿರಿ ದರ್ಶನ, ಚಿರಂತನ ಚುಂಚನಗಿರಿ ಅವರ ರೂಪಕಗಳಾಗಿವೆ. ಇನ್ನು ಇವರ ಸಂಪಾದನೆಯಲ್ಲಿ ತೋರುಗಂಬ, ಕವಿತೆಗಳು – ೧೯೮೬, ಜ್ಞಾನ ಬಾಗಿನ, ಕನ್ನಡ ಕಥನ ಕಾವ್ಯಗಳು ಸೇರಿದಂತೆ ಹಲವಾರು ಕೃತಿಗಳು ಗ್ರಂಥ ಸಂಪಾದನೆ ಕ್ಷೇತ್ರಕ್ಕೆ ನಿದರ್ಶನವಾಗಿವೆ.

ದೊಡ್ಡರಂಗೇಗೌಡರ ಕಾವ್ಯವನ್ನು ವಿವೇಚಿಸುವ ಗುಣವೆಂದರೆ ದಟ್ಟವಾದ ಗ್ರಾಮೀಣ ಪರಿಸರದ ಹಳ್ಳಿಗಳ ಬದುಕಿನ ದೇಸಿಯತೆ ಮತ್ತು ವಸಾಹತುಶಾಹಿ ನಗರಗಳ ಬದುಕಿನ ಜಾಗತಿಕ ಬದುಕು, ಬೆಳವಣಿಗೆಯ ವಿಕಸಿತ ದ್ವಂದ್ವ ಬಹಳ ಪ್ರಖರವಾದ ವೈಜ್ಞಾನಿಕ ವಸ್ತು ಸ್ಥಿತಿಗಳಾಗಿರುವುದನ್ನು ಗಮನಿಸಬಹುದು. ಆಗಲೂ ಅವರಿಗೆ ಈ ಪ್ರಕೃತಿಯ ವಿರಾಟ್ ರೂಪ ಪಂಚಭೂತ ತತ್ವಗಳ ಬಗ್ಗೆಯೇ ಸೋಜಿಗ ಹುಟ್ಟುವಷ್ಟು ಕುತೂಹಲ ಕೌತುಕವಿದೆ. ಜ್ಞಾನದ ಮುಗ್ಧತೆಯ ಪರಿಪಕ್ವ ಆಳದಲ್ಲಿ ಅಂತಃಕರಣದ ಚಕ್ಷು ಕಂಡ ಕಾವ್ಯ ಸೌಂದರ್ಯದ ಹೊಳಹುಗಳಿವೆ. ವಾಸ್ತವತೆಯ ಜೀವನದಲ್ಲಿ ಬುದ್ಧಿ ಜನ್ಯ ಅನುಭವಗಳ ಭಾವ ಪರವಶತೆ ಎದುರಿಸುವ ವಿಭಿನ್ನ ಅಭೀಪ್ಸೆ ಮತ್ತು ಅಭಿವ್ಯಕ್ತಿಗಳ ಹುಡುಕಾಟಗಳ ಕಾಣಬಹುದು. ಅದರ ಗತ್ತು ಗೈರತ್ತು ಠೀವಿಗಳ ನಗ್ನ ಸತ್ಯಗಳ ಸುತ್ತ ಮಾನವೀಯ ಕಾಳಜಿಯ ಮಣ್ಣಿನ ಮಕ್ಕಳ ತವಕ ತಲ್ಲಣಗಳನ್ನು ಕಟ್ಟುವ ಒಂದು ಮಾದರಿಯ ಸಂಕಟದ ಯಾತನೆಯಲ್ಲಿ ಮಾನಸಿಕ ತೋಳಲಾಟಗಳ ಉನ್ಮಾದ ಸ್ಥಿತಿಯಲ್ಲಿ ಕವಿ ಕಂಡು ಕೊಳ್ಳುವ ಒಂದು ಫಾರ್ಮ್ ಭಾವಗೀತೆಯ ಪ್ರತಿಭಾ ಸ್ವರೂಪವನ್ನು ಹಿಡಿದಿಡುವ ಕ್ರಮ ಇಲ್ಲಿ ಚಿರನೂತನವಾಗಿವೆ. ಅದೆಷ್ಟೋ ಸಮಸ್ಯೆಗಳಾಗಿ ಕಾಣುವ ಸಾಮಾಜಿಕ ಪೆಡಂಭೂತಗಳು ಗಹಗಹಿಸಿ ನಗುವ ಕರಾಳ ಮುಖಗಳ ಹಿಂಸೆ, ಜಾಗತಿಕ ಮಟ್ಟದಲ್ಲಿ ಮನುಷ್ಯರ ಬದುಕು ಅನುಭವಿಸುವ ಇಬ್ಬಂದಿತನದ ಡೆಲ್ಟಿನೆಸ್ ಆದ ಅನುಭವ, ತೋರಿಕೆಯ ಮಿಥ್ಯ ಮುಖವಾಡದ ಮುಖಗಳು, ನೌಟಂಕಿ ನಡತೆಯ ಸಾಮಾಜಿಕ ಚಿಲ್ಲರೆ ಪ್ರವರ್ತನೆಗಳು, ಪ್ರಲೋಭನೆಗಳ ಒಡ್ಡಿ ಬಂಡವಾಳಶಾಹಿಯಾದ ಸಮಾಜ, ಸಣ್ಣ ಮನಸ್ಥಿತಿಯ ನೀಚ ಸ್ವಭಾವಗಳು ಸನ್ನಿವೇಶಗಳು ಈ ಇಕ್ಕಟಿನ ದಾರಿಯಲ್ಲಿ ಆಲೋಚನೆಯ ಕ್ರಿಯಾಶೀಲತೆಯೆಡೆಗೆ ಕರೆದೊಯ್ಯೂವ ನಿತ್ಯ ಸತ್ಯಗಳು, ಹಳ್ಳಿಗಾಡಿನ ಜನರ ಮಾತು ಬಾರದ ಮುಗ್ಧ ಸೌಂದರ್ಯ, ಪರಿಸರ ಪ್ರಕೃತಿ ಇವೆಲ್ಲವು ವಸ್ತುವಾಗಿ ಕಾವ್ಯದೊಳಗೆ ಇಣುಕಿದರೆ ಅದು ಆಧುನಿಕ ಮಾನವನ ಬದುಕಿನ ಕ್ರೂರ ಕಠೋರ ಲೋಕವೆಂದು ಮನಗಾಣಿಸುವ ಮತ್ತು ಮೂಲ ಪ್ರಕೃತಿ ಸೊಬಗಿನ ಪರಿಸರಕ್ಕೆ ಕೊಂಡುಯ್ಯುವ ತೂಯ್ದಾಟ ಇಡಿ ಅವರ ಕಾವ್ಯದ ತುಂಬ ಕಾಣಬಹುದು. ಇಂತಹ ಕವಿ ಸಮಯದ ತಪನೆ ತಪ್ತ ಬಂಡಾಯದಲ್ಲಿ ಬರಹವಾಗಿ ವಿಕ್ಷಿಪ್ತ ಪರಿಸರದಲ್ಲೂ ಆತ್ಮೀಯತೆಯ ಹುಡುಕುವ ಧೈರ್ಯ ಕವಿಯ ಮನಸ್ಥಿತಿ. ವಸಾಹತುಶಾಹಿ ಧೋರಣೆಗಳು ಮಾನವ ಜೀವನವನ್ನು ಹಾಳುಗೆಡಹುವ ಹುನ್ನಾರಗಳ ಮಧ್ಯೆ ಮಾನವೀಯತೆಯ ಡ್ರಿಲ್ಲುಗಳ ಬಾರಿಸಿದಂತೆ ಮಣ್ಣಿನ ಮಗನ ಮಾತು ಎಂದು ಹೇಳಿದರೆ ಹೆಚ್ಚು ಸಮಂಜಸವಾದೀತೂ. ಅಂತರಂಗದ ತವಕ ತಲ್ಲಣಗಳ ಪರಿಪ್ರೇಕ್ಷ ನಿಲುವುಗನ್ನಡಿಗಳಲ್ಲಿ ತನ್ನ ಮುಖವನ್ನು ತಾನು ಕಂಡು ಅದರಲ್ಲಿ ಸಮಾಜದ ಸಮಸ್ತ ಅನುಭವಗಳ ಪ್ರವೃತ್ತಿ ಸನ್ನಿವೇಶಗಳ ಏರಿಳಿತಗಳ ಆತ್ಮವಿಶ್ವಾಸದ ಮಾತು ಕವಿ ದತ್ತವಾದ ಮನೋವೈಜ್ಞಾನಿಕ ಜಿಜ್ಞಾಸೆಯಾಗಿದೆ. ಬರಹ ಮತ್ತು ಬದುಕು ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸಾಚಾತನದ ಮೂಲ ವ್ಯಕ್ತಿತ್ವದ ಸುತ್ತ ಸರಿ ಕಂಡ ಅನುಭವ ನಂಬಿಕೆಗಳ ಇಂಬು ಕೈ ಮಾಡಿಕೊಂಡು ಬರೆದ ಕಾವ್ಯ ತಾಜಾತನದ ನೂತನ ಅಭಿವ್ಯಕ್ತಿಗಳಲ್ಲಿ ದೇಸಿಯತೆಯ ಕನ್ನಡದ ಮಾತುಗಳ ಅನಾವರಣವೆ ಕವಿಯ ಕಾಣ್ಕೆಯಾಗಿದೆ. ಇವರ ಕವಿತೆಗಳನ್ನು ಓದುವುದು ಮತ್ತು ಕೇಳುವುದು, ಸಂಗೀತ ಆಲಿಸುವುದೆಂದರೆ ಮತ್ತೆ ಮತ್ತೆ ನಮ್ಮ ಬದುಕನ್ನು ನಾವು ಆಲೋಚಿಸಿದಂತೆ ನಮ್ಮ ಮೂಲ ಅನುಭವಗಳೇ ಗ್ರಾಮೀಣ ಜನರ ಭಾವ ಭಾಗೀರಥಿಯಾಗಿ ಅನುರಣಿಸುವ ಭಾಷ್ಯವಿದ್ದಂತೆ ಎಂದರೆ ಬಹುಶಃ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಜನರ ನಾಡಿ ಮಿಡಿತವನ್ನು ಬಲ್ಲ ಸಾಂಸ್ಕೃತಿಕ ಪ್ರವರ್ಧಮಾನಗಳ ಜಾತಕವೆ ದೊಡ್ಡರಂಗೇಗೌಡರ ಕಾವ್ಯ.

“ಬೈಗು ನಕ್ಕಿತು, ಮುದುಕಿ ನಗೆ ಬಾನ ಮುಖದೊಳಗೆ_
ನೋಡುತ್ತ ನಡೆದೆ ಮಬ್ಬು ಕತ್ತಲೆ ಕೆಳಗೆ;
ಹಕ್ಕಿ ಹಾಡು ಕಾಡಿನ ಜಾಡಿನ ಉದ್ದಗಲ ಮೇಳ ನಡೆಸಿದೆ
ರೆಕ್ಕೆ ಬಡಿತ ಗಾಳಿಪಲಕು ದಂಗುಳಿ ಹಿಮ್ಮೇಳ ಹೊಂದಿಸಿದೆ
ಗಿಡಮರ ಮಾತಾಡುತ್ತಿವೆ ಎಲೆ ಉದುರಿದ ನೆಲದ ಮೇಲೆ ಕತ್ತಲೆ_ ಹುಣ್ಣು
ಪೊರೆ ಸೀಳಿ ಮಿನುಗುತ್ತಿವೆ ಮಿಣುಕು ಹುಳು ತಲೆಯೆತ್ತುತ್ತಿವೆ ಚುಕ್ಕೆ ಕಣ್ಣು.”( ಪ್ರಕೃತಿ, ಕಣ್ಣು ನಾಲಗೆ ಕಡಲು)

ಹೀಗೊಂದು ಸಂಜೆಯ ಚಿತ್ರಣದ ಅನುಭವ ಕೊಡುವ ವಿಸ್ಮಯ ನಗರಗಳಲ್ಲಿ ಹುಡಕಲಾದೀತೇನೂ! ಅಷ್ಟರ ಮಟ್ಟಿಗೆ ಕವಿಯ ಸ್ಫೂರ್ತಿ ಪಲ್ಲವಿಸಿದ ನವಿರಾದ ಭಾವದಲೆಗಳು ಭಾವಗೀತೆಯ ವಸ್ತುವಾಗಿ ಮೂಡಿದರೆ ಪ್ರಕೃತಿಯ ನಿಜ ಸತ್ಯ ಕಂಡಿತೂ.

ಬಿರಿದ ಬೇಸಗೆ ನೆಲ ಮುಗಿಲ ಮಳೆಗೆ
ಕಾಯುವ, ಕಾತರಿಸುವ ಹಾಗೆ
ಕಾವ್ಯದಲ್ಲಿ ಪ್ರತಿಮಿಸುವ ಸವಕಲುಛಲ, ಒಳಗಿನ ಬಗೆಗೆ ;

ಪ್ರೇಮ ಕವಿತೆಯ ತುಂಬ ಹೋಲಿಕೆ ತುಂಬಿ
ಬರಿ ಮಾತು ತಬ್ಬುವ ಭಾವ ಘಟಿಸುವ ಸಿಂಬಿ
ಫಲವಷ್ಟೇನೇ ಪ್ರೇಮ? ಪ್ರೇಮದರ್ಥ ಜಾಲ?

ಪ್ರೇಮದ ಅರ್ಥವನ್ನೆ ಕಳೆದಕೊಂಡಿರುವ ಜಾಗತೀಕರಣದ ನಗರ ಪ್ರದೇಶಗಳ ಜನತೆಯ ಕಾಮ ಮತ್ತು ನಿಷ್ಕಾಮ ಅರ್ಥಗಳ ನಡುವಿನ ಸ್ವಚ್ಛಂದ ಪ್ರೇಮದ ಅರಿವಿನ ಕಾತರಿಕೆ ಮತ್ತು ಪ್ರಕೃತಿಯ ನಡುವಿನ ವಿಪರ್ಯಾಸ ಕಾವ್ಯ ಪ್ರತಿಮಿಸಲು, ಹೋಲಿಕೆಗಳ ರೂಪಕ ಉಪಮೆಗಳ ಜಾಡು ಹಿಡಿವುದು ಬರೀ ಮಾತು ತಬ್ಬುವ ಕ್ಷಣಿಕ ಭಾವ ಘಟಿಸುವ ಸಿಂಬಿಯ ಹೊಲಬು ಫಲವಷ್ಟೇನೇ! ಅಲ್ಲ ಪ್ರೇಮ ಅದರರ್ಥ ಇನ್ನು ವಿಕಸಿತವಾದ ಮಾನವ ಪ್ರೀತಿ ಮತ್ತು ಈ ವಿಶ್ವದ ಪ್ರಕೃತಿಯ ಪಂಚಭೂತಗಳಾಗಿವೆ.

ಐಬುಗಳ ಮನನ ಮಾಡದೆ
ನಾವು ಬದಲಾಗುವುದು ಹೇಗೆ?
ಅವಗುಣಗಳ ಕಳಚಿ ಊನ ವಾಸಿಯಾಗದೆ
ನಮ್ಮ ಪ್ರಗತಿಪಥ ದಕ್ಕುವುದು ಹೇಗೆ?

ಹೆಜ್ಜೆ ಇಟ್ಟಲೆಲ್ಲಾ ಚೂಪು ಮುಳ್ಳು ತಾಕಿ
ಸಾಗದು ನಡಿಗೆ
ಸೋತ ಜೀವಗಳು ಸಾವಿನಾಹವದೊಳಗೆ ಮೂರು ಹೊತ್ತು ಸೆಣಸಿ
ಎದ್ದಿದೆ ಕುದಿದ ಪ್ರತಿ ಹೃದಯದೊಳಗೆ;

ರಾತ್ರಿಯೆಲ್ಲಾ ಅಕ್ಕಪಕ್ಕದ ಅಳಲ ಕೇಳಿ
ನಿದ್ದೆ ಬರದು ನನಗೆ –
ಸುತ್ತ ಒಡೆದ ಮಾತು ಮನ ಜೀವನ
ಕಲಕಿದೆ ಮಾನವೀಯತೆ. (ಆಕ್ರಂದನ)

ಬಂಡಾಯ ಕಾವ್ಯದ ತಪ್ತ ನೋವುಗಳು ಕವಿಯನ್ನು ಕಾಡುವುದು ಹೀಗೆ. ನಮ್ಮ ನಮ್ಮ ಸರಿ ತಪ್ಪುಗಳ ಆತ್ಮವಾಲೋಕನ ಮಾಡಿಕೊಳ್ಳದೆ ನಾವು ಸರಿ ಹೋಗುವ ದಾರಿಯಾದರು ಎಂತು ಎಂಬ ಇಂಗಿತದೊಂದಿಗೆ ನಮ್ಮ ಅವಗುಣ ಊನಗಳು ವಾಸಿಯಾಗದೆ ನಮ್ಮ ಪ್ರಗತಿಪಥ ಸಾಧ್ಯವಿಲ್ಲ. ಸಾವಿನ ಸನಿಹದಲ್ಲಿ ಜೀವಗಳ ನರಳಾಟ ಹೃದಯ ವಿದ್ರಾವಕ ಸ್ಥಿತಿಯೊಂದು ಕಡೆ ಇದ್ದರೆ ಇರುಳೆಲ್ಲ ನೆರೆಹೊರೆಯವರ ಅಳಲು ಕೇಳಿ ನಿದ್ದೆಯೆಂಬುದೆ ಮರೆತ ಕವಿಗೆ ಒಡೆದ ಮಾತು ಜೀವನ ಮತ್ತು ಮನವನ್ನು ಕಲಕಿದೆ. ಮಾನವೀಯತೆಯ ಹುಡುಕಾಟದಲ್ಲಿ ಮನುಶ್ಯರ ತೊಳಲಾಟ ಇಂತಹ ಸ್ಥಿತಿಯದು.

ಗೊಬ್ಬರ ತುಂಬಿದ ಕೈ ಬರೆದ ಮಣ್ಣಿನ ಹಾಡು ನನ್ನದು
ಸಗಣಿ ಮೆತ್ತಿದ ಬೆರಳು ಹಿಡಿದ ಗ್ರಾಮೀಣ ಲೇಖನಿ ನನ್ನದು;
ಕೋರಿ ಬಟ್ಟೆ ತುಂಡು ತೊಟ್ಟ ಒರಟು ದೇಹ ನನ್ನದು
ಒಡೆದ ಕಾಲು ನೆತ್ತರು ಸುರಿಸೋ ಹೆಜ್ಜೆ ಗುರುತು ನನ್ನದು

ಕವಿಯ ಮೂಲ ಪರಿಸರದ ಗ್ರಾಮೀಣ ಕಸುವು ಅವರನ್ನು ಉನ್ನತಸ್ಥಾಯಿಗೆ ಏರಿಸಿದೆ. ಇಂತಹ ಗ್ರಾಮೀಣ ಜನಜೀವನದಿಂದ ಬಂದ ಕವಿಯ ಕಾವ್ಯ ಜಿಜ್ಞಾಸೆ ಮೆಚ್ಚುವಂತದ್ದು. ಬದುಕಲು ಬೇಕಾದ ಮೂಲಭೂತ ಅಗತ್ಯ ಸೌಕರ್ಯಗಳ ನೆಲೆಯಿಂದ ಕನ್ನಡ ಪ್ರಾಧ್ಯಾಪಕರಾಗಿ ಬಂದ ದಿನಗಳ ಕಷ್ಟ ಸಹಿಷ್ಣುತೆ ಅವರ ಜೀವನದ ಭಾಗವಾಗಿದೆ. ಅಸಹಾಯಕತೆಯ ನೆಲೆಯಿಂದ ಧೃಡ ಸಂಕಲ್ಪದ ದಾರಿಯಲಿ ಇರಬೇಕಾದ ನಂಬಿಕೆ ಅವರನ್ನು ಕೈಹಿಡಿದು ಇಲ್ಲಿಯವರೆಗೆ ನಡೆಸಿದೆ ಎಂದರೆ ಸರಿಯಾಗುತ್ತದೆ.

ಈ ನಗರಕ್ಕೆ ಸುಸ್ತಾದದ್ದೇ ಕಾಣಲಿಲ್ಲ
ಇಲ್ಲಿಲ್ಲ ಹಗಲ ಇರುಳ ಭೇದ;

ಟಿಂಬಕ ಟೀವಕ ಮೋಡಿ ಮಾಡುವ
ಗಂಡು ಹೆಣ್ಣಿನ ತರಾತುರಿ ತಣ್ಣಗಾಗಿದ್ದಿಲ್ಲ,
ಬೆಳಗಾದರೆ ರೇಸಿನ ಕುದುರೆ ಓಟ
ರಸ್ತೆ ರಸ್ತೆಗಳ ತೂರಿ
ಸ್ಕೂಲು ಕಾಲೇಜು ಆಫೀಸು ಫ್ಯಾಕ್ಟರಿ ಮುಟ್ಟಿ
ಕೂತಲ್ಲಿ ಕೂರದೆ
ನಿಂತಲ್ಲಿ ನಿಲ್ಲದೆ ಹೋಟೆಲಲ್ಲಿ ಕಾಫಿ ಹೀರಿ
ಪೂರಿ ಮಸಾಲೆ ಪುಳಿಯೋಗರೆ ಗಂಟಲಡರಿ
ಅಲ್ಲಿಂದಿಲ್ಲಿಗೆ ಮೆರವಣಿಗೆ ನಡೆಯುತ್ತದೆ…
ಕೊನೆಗೆ, ಸುಸ್ತಾದ ಜಾಕಿಯ ಹಾಗೆ
ಮನೆ ಕಡೆಗೆ ನಡೆಯುವಾಗಲೂ
‘ ಇಂದಿಗೆತ್ತು ನಾಳಿಂಗೆಂತು ‘ ಎನ್ನುವ ಗೋಜಿಲ್ಲ.

ಬೆಳಗ್ಗೆ ಅರೆಕೊರೆ ಬಿಸಿಲು ಬಿಟ್ಟ ನೆರಳು
ರಾತ್ರಿ ನಿಯಾನ್ ಬೆಳ್ದಿಂಗಳ ಚೆಲ್ಲಿ
ರಸ್ತೆಯಲ್ಲಿ ರಂಗವಲ್ಲಿ ತುಂಬಿ ಅರೆಘಳಿಗೆ ಸದ್ದುನಿಂತದ್ದಿಲ್ಲ… ( ನಗರದ ಒಂದು ಮುಖ)

ನಗರ ಮತ್ತು ಗ್ರಾಮೀಣ ಪರಿಸರದ ದ್ವಂದ್ವ ಕವಿಯನ್ನು ಕಾಡಿದೆ. ಹಳ್ಳಿಗಾಡಿನ ಮುಗ್ಧಜನರ ಪ್ರಜ್ಞೆಗೂ ನಗರ ಪ್ರದೇಶದ ಜನರ ಟೀವಕ ಟಿಂಬಕ ಮೋಡಿಯ ಜಗತ್ತಿಗೂ ವ್ಯತ್ಯಾಸಗಳಿವೆ. ಜಿ.ಎಸ್. ಶಿವರುದ್ರಪ್ಪನವರ ಮುಂಬೈ ಜಾತಕ ಎಂಬ ಕವಿತೆಯ ಪರಿಚಯವಿದ್ದವರಿಗೆ ಇಲ್ಲಿನ ಕವಿಯ ದ್ವಂದ್ವ ಅರ್ಥವಾಗುತ್ತದೆ. ವಾಸ್ತವದ ಜಗತ್ತಿನಲ್ಲಿ ಏನೆಲ್ಲಾ ನಡೆದಿದೆ ನೆಡೆಯುತಿದೆ ಎಂಬದರ ಸಂಕೇತವೇ ಕವಿತೆಯ ಸ್ವಾರಸ್ಯ. ಅಪರಿಚಿತ ಮುಖಗಳ ಮುಖವಾಡಗಳಲ್ಲಿ ಸರಕು ಸಂಜಾಮ್ಮಿನಲ್ಲಿ ತುಷ್ಟಿಗುಣ ತುಂಬಿ ನಂಬಿಸುವ ಜನರೆ ಅಧಿಕವಾದ ವಸ್ತು ಈ ಕವಿತೆಯ ನಿರೂಪಣೆಯ ಆಗಿದೆ.

ಇದು ಶಹರ ಎತ್ತ ನೋಡಿದರೂ ಇಲ್ಲಿ ಜನ ಸಮುದ್ರ
ಮತಿ ಮರೆತರಿಲ್ಲಿ ಥೈಲಿಗೆ ಕತ್ತರಿ
ಮಾನ ಚೀಲಕ್ಕೂ ಶೂಲ

ಇದು ದೈತ್ಯ ಭೀಕರ; ಕತ್ತ ಬಗ್ಗಿಸಿದರಿಲ್ಲಿ ನುಣ್ಣಗೆ
ಕ್ಷೌರಿಸುವ ಕಟುಕರ ರಾಜ್ಯಭಾರ

ಇದು ಥಳುಕಿನ ಕಣ್ಬೆಳಕಿನ ಮಾದಕ ಗುಂಡಿನ
ಮೋಹಕ ದಂಡಿನ ಮೋಸದ ಉಸುಕಿನ ಜೊಂಡಿನ
ಮುಗ್ಧರ ಒದೆಯುವ ಕಾಲ್ಚೆಂಡಿನ ನಿಗಿ ನಿಗಿ ನಗರ

ಇದು ಶಹರ ಇಲ್ಲಿ ಮುಖವಾಡಗಳಿಗಿಲ್ಲ ಬರ
ಮಾತೆಲ್ಲ ನವಿರು ನವಿರಾದ ಸಕ್ಕರೆ ಪೂರ
ವಾಸ್ತವದ ಬಗಲಲ್ಲಿ ಕೋಟಿ ಕ್ಷಾರ… ( ಇದು ಶಹರ)

ಅದೇ ನಗರ ಸಂಸ್ಕೃತಿ ಜೀವನದ ಬಿರುಸಿನ ಚಟುವಟಿಕೆಗಳು ಹೇಗೆ ಮಾನವೀಯತೆಯನ್ನು ಕಳೆದುಕೊಂಡಿವೆ. ಮೋಸ, ಸುಲಿಗೆ, ವಂಚನೆ, ಕಪಟ, ತನ್ನದಲ್ಲದ ಬದುಕುವ ಧಾವಂತ, ವ್ಯಕ್ತಿತ್ವ ಕಳೆದುಕೊಂಡು ನಾಟಕವಾಡುವ ಬಗೆಗಳು, ಮುಖವಾಡದ ಥಳುಕು ಬಳುಕಿನ ಜೀವನ ಶೈಲಿ ಎಲ್ಲವೂ ಕವಿಯನ್ನು ಕಾಡಿ ಕಾವ್ಯ ಬರೆಸಿವೆ. ಅಷ್ಟರ ಮಟ್ಟಿಗೆ ನಗರ ಜೀವನದ ಕ್ರೂರ ಮೃಗೀಯತೆ ಕವಿ ಹೃದಯವನ್ನು ತಟ್ಟಿದೆ.

ಎಲ್ಲೆಲ್ಲಿ ಹೆಜ್ಜೆ ಹಾಕಿದರೂ
ಎತ್ತೆತ್ತ ದಿಟ್ಟಿ ಅಟ್ಟಿದರೂ
ಪತ್ತೆಯಾಗಲಿಲ್ಲ ನನಗೆ ಸಿಟಿಯ ದೈತ್ಯ ಕಟಿ !

ಅಂಕೆ ಸಂಖ್ಯೆಗಳ ನಕ್ಷೆಯ ದಾಟಿ
ಮಹಲು ಗುಡಿಸಲುಗಳ ಅಂಗಳ ಮೀಟಿ

ಹೇಗೆ ಹೇಗೋ ಅರಸಿ ಮರುಗಿದರೂ
ಹಗಲು ಇರುಳ ಸೋಸಿ ಸೊರಗಿದರೂ
ಸುಳಿವೇ ಸಿಗಲಿಲ್ಲ ನಗರ ನಾಗರನ ಕ್ರೂರ ತುಟಿ!

ರಾಜ ಮಾರ್ಗದ ಬದಿಗೆ ಗಗನ ಚುಂಬಿ ಭವನ
ಹೊಸ ಬಡಾವಣೆ ತುದಿಗೂ ಕೊಂಪೆವಾಸಿ ಜನ; ( ಸಿಟಿಯ ದೈತ್ಯ ಕಟಿ)

ಎಲ್ಲಿ ಹೋದರೂ ಈ ಸಿಟಿಯ ದೈತ್ಯ ಕಟಿ ಎಂಬ ಜಾಗತಿಕರಣದ ಕಟಿಯಲ್ಲಿ ಕ್ರೂರ ನಾಗರನ ವ್ಯವಹಾರ ಪ್ರಪಂಚ ಬುಸುಗೂಟುವ ಆಲಾಪ ಬಂಡವಾಳ ಶಾಹಿಗಳು ಮತ್ತು ಶ್ರಮಿಕರ ನಡುವಿನ ಅಜಗಜಾಂತರ ವ್ಯತ್ಯಾಸ ನಿರ್ಜೀವದ ಗಗನ ಚುಂಬಿ ಕಟ್ಟಡಗಳು ಹಾಳುಕೊಂಪೆಯ ನಿರ್ಗತಿಕರ ಗುಡಿಸಲುಗಳು ಅವರನ್ನು ಕಾಡಿದ್ದಿದೆ. ಕವಿತೆಗೆ ಬಹಳ ಸುಂದರವಾದ ರೂಪಕ ಪ್ರತಿಮೆ ಉಪಮೆಗಳೆ ಬೇಕೆಂದಿಲ್ಲ. ವಾಸ್ತವದ ಅರಿವಿನ ಬೆಳಕಿನಲ್ಲಿ ಮಾನವ ಸಮಾಜದ ಬದುಕನ್ನು ಕಂಡು ಮರುಗಿದ ಕವಿಯ ಮನಸ್ಥಿತಿಯಿಂದ ಇಂತ ಕವಿತೆಗಳು ಹೊರಡುತ್ತವೆ. ನವ್ಯದ ಅಬ್ಬರದ ಕಾಲದಲ್ಲಿ ಇಂತಹ ಚಿಂತನೆಗಳು ತುಸು ವ್ಯಂಗ್ಯ ವಿಡಂಬಕ ಶೈಲಿಯಲ್ಲಿ ತಪ್ತತೆ ಅಸಹಾಯಕ ಆಲಾಪನೆಗಳಿಂದ ಹೊರಟ ಕವಿವಾಣಿ ಪ್ರಕೃತಿಯ ಎಲ್ಲಾ ನೋವಿಗೂ ಪ್ರತಿಸ್ಪಂದಿಸಿದ ಗುಣ ಇವುಗಳಲ್ಲಿ ಕಾಣಬಹುದು.

ರಾಕೆಟ್ಟಿನೊಂದಿಗೆ ಜಿಗಿಯ ಬಲ್ಲರು ಈಗ ಹುಟ್ಟುವ ಮಕ್ಕಳು
ಯಾವ ಲೋಕದಲ್ಲೂ ಹೆಜ್ಜೆಯೂರಬಲ್ಲ ಧೀರರು
ಪೊಗರು ಧೀಮಂತರು… ಈ ಹೈಕಳು.

ಊಹೆಗೂ ಸಿಗದು ಇದರ ಯುಗದ ಪ್ರವರದ
ನಗದು ಲೆಕ್ಕಾಚಾರ_ ಅಷ್ಟು ಬೆಳೆದಿವೆ ದಿನಗಳು,
ಪ್ರತಿ ಕ್ಷಣಗಳೂ ಪೈಥಾಗರಸ್ ನ ಮೀರಿಸುವ ಪ್ರಮೇಯಗಳು
ಇಷ್ಟು ಬೆಳೆದಿವೆ ತಲೆಗಳು…
ಕೃತಕ ಮಳೆ _ ಹೈಬ್ರಿಡ್ ಬೆಳೆ _ ತಳಿ_ ಜೀವಜೀವಾಣುಗಳು ( ಒಗಟು)

ನಮ್ಮ ಇತ್ತೀಚಿನ ಪೀಳೆಗೆ ಅನೇಕ ಸಾಹಸ ಕಾರ್ಯಗಳನ್ನು ಮಾಡುತ್ತಿದೆ. ಲೋಕದ ತಂತ್ರಜ್ಞಾನ ಯಂತ್ರಜ್ಞಾನಗಳಿಂದ ರಾಕೆಟ್ ಉಡಾವಣೆಗಳ ತನಕ ಸಾಹಸ ಪ್ರವೃತ್ತಿ ಸಾಗಿದೆ. ಆದರೆ ಬೌದ್ಧಿಕ ಬೆಳವಣಿಗೆಯ ವಿಕಾಸದಲ್ಲಿ ಭೌತಿಕ ನೆಲೆಗಟ್ಟಿನ ಎಷ್ಟೋ ವಿಚಾರಗಳನ್ನು ಬದಿಗೊತ್ತಿ ವೈಜ್ಞಾನಿಕ ಸತ್ಯಗಳನ್ನು ಕಲಸುಮೇಲೋಗರವೆಂಬಂತೆ ಬಳಕೆ ಮಾಡಿ ಉದ್ಧಾರವಾಗಿರುವುದು ಎಷ್ಟು ಎಂಬ ವ್ಯಂಗ್ಯ ಒಗಟು ಕವಿತೆಯಲ್ಲಿದೆ. ಎಲ್ಲವೂ ನಗದು ಲೆಕ್ಕಾಚಾರವಾಗಿ ಮಾನವ ಸಂಬಂಧಗಳು ಹದಗೆಟ್ಟಿರುವ ಸ್ಥಿತಿಯಿದೆ. ರೇಖಾಗಣಿತದ ಪೈಥಾಗೋರಸನ ಪ್ರಮೇಯಗಳನ್ನು ಮೀರಿಸುವ ಸಾಹಸ ನಾವು ಕಂಡಿದ್ದೇವೆ. ಮೋಡಕ್ಕೆ ಭಿತ್ತನೆ ಕೃತಕ ಮಳೆ ಬರಿಸುವ ಧಾವಂತ ಹೈಬ್ರಿಡ್ ಬೆಳೆಗಳು, ಕೀಟನಾಟಕಗಳ ಬಳಕೆ ಇತ್ಯಾದಿ ಬಳಕೆಯಿಂದ ಶುದ್ಧವಾದ ಪರಿಸರವನ್ನು ಹದಗೇಡಿಸಿದ ಪರಿಣಾಮವೇ ಇಂದಿನ ಅನೇಕ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಿವೆ. ಮಾನವರ ತಲೆಯಷ್ಟೆ ದೊಡ್ಡದಾಗಿ, ಮೆದುಳಷ್ಟೆ ಚುರುಕಾಗಿ, ದೇಹದ ಅಂಗಗಳು ಕುಂಠಿತ ಊನಾಪಿಯಾಗಿರುವುದು ಇದೆ. ಜೀವ ಜಗತ್ತಿನ ತವಕ ತಲ್ಲಣಗಳಿಗೆ ಧ್ವನಿಯಾದ ಕವಿತೆಯ ಸ್ವಾರಸ್ಯ , ಇಂದು ನಾವು ಮಾಡಿಕೊಂಡಿರುವ ಪ್ರಪಂಚದ ಅವಸ್ಥೆಯಾಗಿದೆ.

ಇದ್ದವರು ಆರಾಮಾಗಿರುವರಯ್ಯಾ
ಇಲ್ಲದವರು ನಾವೇನು ಮಾಡಬೇಕಯ್ಯಾ?
ಮುಂಜಾನೆ ಬಿಸಿಲಿಗೆ ಚಾಚುತ್ತೇವೆ ಕೈಯ
ಸೋಮಾರಿ ಸೊಂಪಿಗೆ ಹರಡುತ್ತೇವೆ ಮೈಯ?

ಇದ್ದವರೆಲ್ಲ ಹಾಡುತ್ತಾರೆ ಆಡುತ್ತಾರೆ ಮಾಡುತ್ತಾರೆ
ಇಲ್ಲದವರು ನಾವು ನೋಡುತ್ತೇವೆ ಬೇಡುತ್ತೇವೆ
ಆಮೆ ನಡಿಗೆಯೊಳಗೆ ಪ್ರತಿ ಹಗಲು ಇರುಳ ಬಲವಂತ ದೂಡುತ್ತೇವೆ. ( ಇಲ್ಲದವರ ಪಾಡು)

ಈ ಚಿಂತನೆ ಜಾಗತಿಕ ಮಹಾಯುದ್ಧಗಳ ಭೀಕರ ಪರಿಣಾಮ ಅನುಭವಿಸಿದ ಜಗತ್ತು ಕಾಲ್ಡ್ ಮಾರ್ಕ್ಸ್ ಸಿದ್ಧಾಂತದಿಂದ ಹೊರಟ ಕಮ್ಯುನಿಸ್ಟ್ ಚಿಂತನೆಗಳು ಜಾಗತಿಕರಣದ ಸಮಯದಲ್ಲಿ ವರ್ಗ ಶ್ರೇಣಿಕರಣವನ್ನು ನಿರ್ಮಿಸಿದೆ. ಅದುವೇ ಇಲ್ಲಿನ ಕವಿತೆಯ ಧಾತು. ಬಂಡವಾಳಿಗರು – ಶ್ರಮಿಕರು, ಶ್ರೀಮಂತರು – ಬಡವರು ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದ ರೀತಿ ಬೆಳವಣೆಯ ಹಂತದಲ್ಲಿರುವ ದೇಶಗಳಿಗೆ ಹೇಗೆ ಮಾರಕವಾಗಿವೆ ಎಂಬ ಹೊಳಹು ಇಲ್ಲಿದೆ. ಇದ್ದವರು ಇಲ್ಲದವರ ಮಧ್ಯೆದ ರೇಖೆ ಜಾಗತಿಕ ಬಡತನವನ್ನು ಬಿಂಬಿಸುತ್ತದೆ. You have and you have not ಹಣ ಇದ್ದವರು ಮತ್ತು ಇಲ್ಲದವರ ನಡುವಿನ ವ್ಯಾತ್ಯಾಸ ಮತ್ತು ಗುಣಲಕ್ಷಣಗಳನ್ನು ಹೇಳುತ್ತದೆ. ಅಲ್ಲದೆ ಈ ಕವಿತೆಯು ಬಸವಾದಿ ಶರಣರ ವಚನ ರೂಪದಲ್ಲಿರುವುದು ವಿಶೇಷವಾಗಿ ಹನ್ನೆರಡನೆ ಶತಮಾನದ ಕಾಯಕತತ್ವ, ಅಸಮಾನತೆ, ಸಮಾನತೆ, ಬಡತನ ನಿರ್ಮೂಲನೆ ಮೊದಲಾದ ಅಂಶಗಳನ್ನು ನೆನಪಿಸುತ್ತದೆ.

ಬೆನ್ನ ಹಿಂದಿನ ನೆರಳಂತೆ ಗವಿಸಿದ್ಧ ತನ್ನಪ್ಪ ತಿಪ್ಪೇಸಿದ್ಧನ ಜೊತೆ
ಮುಂಜಾನೆಯೇ ಮಂಕರಿ ಹೊತ್ತು ಹೊರಡುತ್ತಾನೆ ಕೆಲಸಕ್ಕೆ…

ಹೆಜ್ಜೆಗಳು ದಾರಿ ಸವೆಸಿದಂತೆ ಗೆಪ್ತಿಗೆ ಬರುತ್ತವೆ ಕಂತೆ ಕಂತೆ ಚಿಂತೆ
ಬಗಲಲ್ಲಿ ನೇತಾಡುವ ಬಿದಿರು ಕೊಳಲು ಅಳಲ ಮಾರ್ನುಡಿದಂತೆ
ಬೆಳೆಯುತ್ತಾ ಬರ ಬರ ಹರಿಯುತ್ತಾ ಉರುಲಾದಂತೆ
ಭ್ರಮೆಯಾಗಿ ಉಸಿರ್ಗಟ್ಟಿದ ವ್ಯಥೆ _ ಹೊಟ್ಟೆ ಬಟ್ಟೆಯ ಕಥೆ ;

ಕಂಕುಳಲ್ಲಿ ಕುರವು ಹೊತ್ತೇ ಕಲ್ಲು ಬೆಂಜರ ಹೊಲದಲ್ಲಿ
ನೆಗ್ಗಲು ಮುಳ್ಳು ತುಂಬಿದ ಉಕ್ಕೆಯಾಗದ ನೆಲದಲ್ಲಿ
ಬೆವರು ಸುರಿಸುತ್ತಾ ನೆತ್ತರು ಬಸಿಯುತ್ತಾ ದುಡಿಮೆ ಕಣದಲ್ಲಿ
ತೇಯುತ್ತಾರೆ ಜೀವ, ಬೆಂಕಿ ಬಿಸಿಲಲ್ಲಿ ಇಂಗದ ಹಸಿವಿನಲ್ಲಿ… ( ಕುರುಹುಗಳು)

ಈ ಕವಿತೆಯಲ್ಲಿ ಕವಿ ಸವೆಸಿ ಬಂದ ಗ್ರಾಮೀಣ ಬದುಕಿನ ಮುಖ ಅನಾವರಣಗೊಂಡಿದೆ. ಅವರ ಮುಗ್ಧತೆ, ಅವರ ಕಾಯಕ, ಶ್ರಮ, ಬುದ್ಧಿ, ಬೆವರು, ನಂಬಿಕೆ, ಬಡತನ ಎಲ್ಲವೂ ಸನ್ನಿವೇಶ ನಿರ್ಮಾಣದ ಪದತತ್ತಿಯಿಂದ ಜೀವಂತವಾಗಿವೆ. ನೆತ್ತಿ ಮಣ್ಣು ನೆಲಕೊಯ್ದುಕೊಂಡರು ರೈತಾಪಿ ಜನರ ಬವಣೆ ತೀರದ ಬದುಕು. ಅವರ ಜೀವ ತೇದು ಕೂಲಿನಾಲಿ ಮಾಡಿ ಬಿಸಿಲು, ಮಳೆ, ಚಳಿ ಎನ್ನದೆ ದುಡಿದರು ಅವರು ಬೆಳೆದ ಪಡಿ ಪಾದರ್ಥಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದಾಗಿನ ನೋವಿನ ಸಂಗತಿ ಅವರನ್ನು ಹಸಿವಿನಲ್ಲೆ ದೂಡಿದ ವ್ಯವಸಾಯ ಮನೆ ಮಂದಿಯೆಲ್ಲ ಸಾಯ ಎಂಬ ಪಡೆನುಡಿಗಟ್ಟನ್ನು ನೆನಪಿಸುವಂತಿದೆ.

ನಮ್ಮ ಅನ್ನಪೂರ್ಣೆ ನೆಲಕ್ಕೆ ಸಾವಿರದ ಕಣ್ಣಿವೆ
ಹೊಳೆದಷ್ಟೂ ಅರ್ಥ ತುಂಬುವ ಪದಗಳಿವೆ ;

ನಡಿಗೆಗೆ ಅಸ್ತಿತ್ವ ಕೊಡುವ ಶಕ್ತಿ ಶಾಶ್ವತ ಬಸಿರಾಗಿ ನಿಂತು
ಈ ಧರಿತ್ರಿಯ ಕೆನ್ನೆ ತುಂಬ ಅನಾಮಿಕ ಕೈವಾಡ ನಡೆದು
ಇವಳ ಮಡಿಲ ಉದ್ದಗಲಕ್ಕೆ ಜೀವಭಾವ ಅಡಗಿ

ಗಾಳಿ-ಗೀತಗಳು ದಿನದಿನವೂ ಮೊಳಗಿವೆ
ನಾಡಾಡಿ ಮನೆಗಳು ಕಿವಿಯರಳಿಸಿ ಆಲಿಸಿವೆ.

ಇಂಥ ಮಣ್ಣಿನ ತೌರಿನಲ್ಲಿ ಕರುಳ ಅಳಲು
ಕಣ್ಣೀರಾಗಿ ಹರಿಯುವುದನ್ನೇ ಕಂಡಿದ್ದೇನೆ

ಇಲ್ಲಿ ಸಂತೋಷದ ಹೊನಲು ಉಕ್ಕಿ
ದಿಕ್ಕು ದಿಕ್ಕಿಗೆ ಚೈತನ್ಯ ಕೊಟ್ಟಿದ್ದ ಹಿರಿಯರಿಂದ ತಿಳಿದಿದ್ದೇನೆ ( ನಮ್ಮ ನೆಲ)

ಅನ್ನಪೂರ್ಣೆ ಅನ್ನ ದೇವತೆಯಾದರು ಇಲ್ಲಿ ಬಳಕೆಯಾದ ರೀತಿ ಅವಳು ವಸುಧೆ ಅಥವಾ ವಸುಂಧರೆ. ನೈಸರ್ಗಿಕವಾದ ನೀರಿನ ಸೆಲೆಗಳಿಂದ ದೂರವಾದ ಇಂದಿನ ಕೃಷಿ ಚಟುವಟಿಕೆಗಳು ತೋಡಿದ ಕೊಳವೆ ಬಾವಿಗಳು ಸಾವಿರವೇನು ಎಷ್ಟೋ ಲಕ್ಷ ಕಣ್ಣುಗಳಾಗಿವೆ. ಕೈಗಾರಿಕೆ ವಸಾಹತು ಶಾಹಿ ಕಾಣದ ಕೈಗಳ ಕೈವಾಡದಲ್ಲಿ ಬಲಿಯಾದ ಈ ಭೂಮಿಯ ತುಂಬಾ ಅಡಗಿರುವ ಜೀವಭಾವಗಳು ಗಾಳಿಗೀತೆಗಳಾಗಿಯೋ ಅರಣ್ಯನ್ಯಾಯಗಳಾಗಿಯೋ ಚಾಲ್ತಿಯಲ್ಲಿವೆ. ಕೈಗಾರಿಕರಣ ಧಾವಂತ ತಂದ ಇಂತಹ ವಿಕ್ಷುಬ್ಧ ಪ್ರಸಂಗಗಳು ಮಣ್ಣೆನ ತೌರಿನ ಗುಣವನ್ನು ಕಳೆದುಕೊಂಡು ಕಣ್ಣೀರಾದ ಕತೆಗಳು ಹರಿದಿರುವದನ್ನು ಕವಿ ಕಂಡಿದ್ದಾರೆ. ಅಲ್ಲಿನ ಹಿರಿಯರು ಕಟ್ಟಿಕೊಟ್ಟಿದ ಬದುಕಿನ ಚೈತನ್ಯ ಇಗ ಅಸ್ತವ್ಯಸ್ತವಾಗಿ ಹೋಗಿ ಬದುಕಲು ತವಕಿಸುವ ಮಕ್ಕಳ ಅಸಹಾಯಕ ಆಲಾಪನೆಗಳಾಗಿರುವದನ್ನು ಅದೆ ಹಿರಿಯರಿಂದ ಕೇಳಿದ್ದೇನೆ ಎಂಬ ಸಂಗತಿ ವಕ್ತೃಗಳಿಂದ ಜನರ ಬದುಕನ್ನು ತಿಳಿದ ಸಂಗತಿ ಹೇಳುತ್ತದೆ.

ಹಗಲಿರುಳೂ ತನ್ನ ರಕ್ತ ಬುದ್ಧಿ ಚೈತನ್ಯಗಳ ಸುರಿಯುವಲ್ಲಿ
ಚಳಿಯೆನ್ನದೆ ಸೇಕೆಯೆನ್ನದೆ ಜೀವ ತೇದು ತನ್ನೊಡಲ ತಣಿಸುವಲ್ಲಿ
ನಾಡಿನೊಡಲನುಳಿಸುವಲ್ಲಿ ಇವನ ತ್ರಾಣ ಮಿಡಿದಿದೆ ;

ಇದು ಕಥೆಯಲ್ಲ ಇರುವಿಕೆ ಹಾಡು
ಇವನು ದೇಶದ ಹೃದಯ, ಶಕ್ತಿಯ ಆಸ್ತಿ
ಪ್ರಗತಿಯ ಬೆನ್ನೆಲುಬು, ನಿಜ…ಆದರಿವನ ಪಾಡು?
ಊಹಿಸುವುದಕ್ಕಿಂತ ಪರೀಕ್ಷಿಸುವುದು ಮೇಲು…

ಮೂವತ್ತು ದಿನವೂ ಕಠಿಣ ದುಡಿಮೆಗೆ ಮುಡಿಪಾದರೂ
ಬೊಗಸೆ ತುಂಬದು ಇವನ ಗಳಿಕೆ; ( ಕಾರ್ಮಿಕ)

ಶ್ರಮಿಕ ಕಾರ್ಮಿಕರ ಜೀವನವಾದರೂ ಹೇಗಿದೆಯೆಂದರೆ ಆತ ತನ್ನ ಚೈತನ್ಯ ಶಕ್ತಿ ರಕ್ತ ಮಾಂಸಗಳೆಲ್ಲ ಬಸಿದು ದುಡಿದರು. ಪ್ರಕೃತಿಯ ವಿಕೋಪಗಳು, ಋತುಮಾನಗಳಿಂದ ಆಗುವ ಶ್ರಮದ ನೋವು ಸಹಿಸಿ ದುಡಿದರೂ ತಿಂಗಳಾಂತ್ಯಕ್ಕೆ ಬರುವ ಜೀತದ ಸಂಬಳ ಸಾಲದಾದ ಗಳಿಕೆ ಮತ್ತು ಆತನ ತನ್ನವರಿಗಾಗಿ ತನ್ನ ದೇಶದ ಪ್ರಗತಿಗೆ ದುಡಿದರು ಆತನ ತೂತ್ತಿನ ಚೀಲ ತುಂಬುವುದು ಕಷ್ಟ . ಅಷ್ಟು ಕಠಿಣವಾದ ಬದುಕು ಶ್ರಮಿಕ ಕಾರ್ಮಿಕರದು ಎಂಬ ಇಂಗಿತ ತಹತಹ ಈ ಕವಿತೆಯ ವಸ್ತುವಾಗಿದೆ.

ನುಡಿಸಬೇಕೆಂದಿದ್ದೆ ಆ ರಾಗಗಳ _
ಒಳ ತರಂಗಗಳ ಮಧುರ ಕಂಪನಗಳ
ಅವುಗಳ ಜೊತೆ ಜೊತೆಯಾಗಿ ಬುಳ ಬುಳ
ಹರಿದಾಡುವ ಅವ್ಯಕ್ತ ಪಲುಕುಗಳ!

ಬಿಡಿಸಬೇಕೆಂದಿದ್ದೆ ನಿಚ್ಚಳ
ಅವುಗಳಂತರಂಗ ನೆಳಲ
ಪೂರ್ವಾಪರ ತಿರುಳು ;
ಮೃದುವಾಗಿ ಮಿಡಿಯಬೇಕೆಂದಿದ್ದೆ
ಬೇರೆ ಬೇರೆ ಸ್ಥಾಯಿಗಳ

ಮತ್ತೂ ದುಡಿಸಬೇಕೆಂದಿದ್ದೆ ತಾಳಲಯಗಳ
ಅವುಗಳಾಲಿಂಗನಗೊಂಡ ಸಂಗತಿಗಳ
ಬೆನ್ನ ಹಿಂದೆ ಹರಿವ ಅಸದಳ ಮೌನ ತಂತುಗಳು… ( ರಂಗಾಗದ ರಾಗಗಳು)

ಕವಿಯ ಕಾವ್ಯ ರಚನೆಗೆ ಇಂಬಾದ ಪದತತ್ತಿ ಮತ್ತು ಭಾಷಿಕ ಧ್ವನಿ ಧ್ವನಿಮಾ ನುಡಿ ಪೋಣಿಸುವ ಪ್ರತಿಭೆಯ ಅವಲೋಕನದ ದೃಷ್ಟಿಯಿಂದ ಜಿಜ್ಞಾಸೆಗೆ ಹಚ್ಚುವ ಅವರ ಕವಿತೆಗಳನ್ನು ಗಮನಿಸಿದರೆ ಮೂಲ ಪ್ರಕೃತಿ ಯಾವಾಗಲೂ ಪ್ರಾಥಮಿಕವಾದ ನೆಲೆಯಲ್ಲಿರುತ್ತದೆ. ದ್ವೀತಿಯ ಪ್ರತಿಭೆಯಾಗಿ ಅದನ್ನು ಹಿಡಿದಿಡಲು ಪರಿಶ್ರಮ ಪಟ್ಟ ಭಾಷೆ , ಕವಿ ಚಕ್ಷು ದರ್ಶನ ಮತ್ತು ಬುದ್ಧಿಭಾವಗಳ ಅಕ್ಷರಗಳ ನಾದಿ ಮಿದಿದು ಹೂರಣತುಂಬಿ ಹದವಾದ ಪಾಕಮಾಡುವ ರಸನಿರ್ಮಿತಿ ದ್ರಾಷ್ಟತೆಯನ್ನು ಪ್ರತಿಭೆ ಎಂಬ ಪ್ರಸ್ಥಾನದಿಂದ ಕಾಣಬಹುದು. ಅಂತಹ ಜ್ಞಾನ ಆಲೋಚನೆಗೆ ಹಚ್ಚುವ ಇಲ್ಲಿನ ಕವಿತೆಯ ವಸ್ತು ಸ್ಥಾಯಿ ಅವುಗಳ ಮಧುರಾತಿ ಮಧುರ ನೆನಪುಗಳು, ಪಲುಕುಗಳು, ಕಂಪನಗಳು, ರಾಗ ತಾಳಾನ್ವಿತ ಲಯ ಪ್ರಾಸದಿಗಳು ಅದಕ್ಕೆ ಬೇಕಾದ ಪೂರ್ವ ಮತ್ತು ಪೂರಕ ತಯಾರಿಕೆಗಳನ್ನು ಅಥವಾ ಕಾವ್ಯದ ಸಲಕರಣೆಗಳ ಮುಕ್ತ ಛಂಧಸ್ಸಿನ ಬಿಡಿ ರಚನೆಗಳ ವಿಚಾರಗಳನ್ನು ಇಲ್ಲಿ ಅರಿಯಬಹುದಾಗಿದೆ.

ಅಸ್ಪಷ್ಟ ಕತ್ತಲ ಕಲಸು ಮೇಲೋಗರದ ಗೆರೆಗಳು_
ಸ್ಪಷ್ಟವಾಗುತ್ತಾ
ಅನಿತ್ಯ ಬದುಕಿನ ಭಾವನೆಗಳು
ನಿತ್ಯ ನಿತ್ಯವೂ ದಟ್ಟ ಕಾಣುತ್ತಾ
ಅನುಭವದ ಕರಿನೆರಳು
ಒಟ್ಟೊಟ್ಟಾಗಿ ದಾಪುಗಾಲು ಹಾಕುತ್ತಾ ( ನನ್ನ ಕಾವ್ಯ)

ಸವಿ ಭಾವದ ಬೆಡಗಿಯೇ
ಸಿಹಿ ನೋಟದ ತುಡುಗಿಯೇ
ನೀನೇ ಈ ಸೃಷ್ಟಿಯ ಚೆಲುವಿನಾ ಕವನ! ( ನಿರಾಭರಣ ಸುಂದರಿ)

ಕವಿತೆ ಬರೆಯಲು ಹೊರಟ ಕವಿಗೆ ಅಸ್ಪಷ್ಟವಾದ ಕಲಸುಮೇಲೋಗರದ ಗೆರೆಗಳು ಕಂಡು ಒಂದು ಸ್ಪಷ್ಟ ಚಿತ್ರಣದ ರೂಪಕ ಕಟ್ಟುವಲ್ಲಿ ನೆರವಾಗಬಹುದಾದ ಹೃದಯದ ಭಾವ ತೀವ್ರತೆಯ ಮಿಡಿತ ಇಲ್ಲಿ ಕಾಣಬಹುದು. ಸವಿಭಾವದ ಬೆಡಗಿ ಸಿಹಿನೋಟದ ತುಡುಗಿಯಾದ ಈ ಸೃಷ್ಟಿಯೆ ಒಂದು ಚೆಲುವಿನ ಕವನ ಅದನ್ನು ಬರೆದ ಕವಿ ನಾನು ಎಂದು ಇಲ್ಲಿನ ಗ್ರಹಿಕೆಯಾಗಿದೆ.

ಶ್ರಾವಣದ ಹೂ-ಬನ ಎಂದೂ ಸಂಮೋಹನ
ಬಾನಿನ ವರುಣ-ಗಾನ ಭೂಮಿಗೆ ಚೇತನ
ಮೋಡಗಳೊಡಲಲಿ ಮಿಂಚಿನ ನರ್ತನ
ದಢ ದಢ ಹನಿಯಲು ನಿಸರ್ಗದ ಸ್ಪಂದನ; ( ಶ್ರಾವಣ ಗೀತಿಕೆ)

ಪ್ರಾಯದ ಹುಚ್ಚು ಕಚ್ಚಿ ಓಡತೊಡಗಿತು ಕಾಲು ಬಗೆ ಬಗೆ
ದಿಕ್ಕಿಗೆ ; ಕಾರ್ಯದ ನಚ್ಚು ಅಚ್ಚೊತ್ತುವ ಬದಲು
ಶೌರ್ಯದ ಕೆಚ್ಚು ಕ್ರೌರ್ಯದ ಸ್ವಿಚ್ಚು ಹಚ್ಚುವ ಮೊದಲು
ಅತೃಪ್ತ ಬಯಕೆ ಬೆಂಕಿ ಹಸಿ ಭಾವಗೀತೆಯಾಯ್ತು (ಯೌವನ)

ಕವಿ ಕವಿತೆಯನ್ನು ಬರೆಯುತ್ತೇನೆ ಎಂಬ ಆತ್ಮವಿಶ್ವಾಸದಿಂದ ಲೇಖನಿ ಹಿಡಿದು ಹೊರಟರೆ ಅದು ಸಾಗುವ ದಾರಿ ಬೇರೊಂದು. ಪ್ರತಿಭೆ ಎಂಬುದು ಒಂದು ಮಿಂಚಿ ಮರೆಯಾಗುವ ಪ್ರಸಂಗ ಸಂಗತಿ. At A flash. ಅದು ಈ ನಿಸರ್ಗ ಅದನ್ನು ಕವಿತೆಯಲ್ಲಿ ಪದಗಳಿಂದ ಹಿಡಿದು ಕಟ್ಟುವುದು ಹೇಗೆ ಎಂಬ ಚಿಂತನೆ ಮತ್ತು ಪ್ರಾಯದಲ್ಲಿ ಎಲ್ಲರೂ ಕವಿತೆ ಬರೆಯುತ್ತಾರೆ. ಆದರೆ, ಆದರಿಂದ ಸಫಲವಾದವರೂ ಕಡಿಮೆ. ಅದೆ ವೃತ್ತಿಯೋ, ಪ್ರವೃತ್ತಿಯೋ, ಹವ್ಯಾಸವೋ ಆದರೆ ಆಗ ಅದೊಂದು ಖಚಿತತೆಯ ರೂಪಕ್ಕೆ ಸ್ವರೂಪ ಒದಗಿಬರುತ್ತದೆ. ಅತೃಪ್ತ ಬಯಕೆಗಳಿಂದ ಬರೆಯಲು ಹೊರಟ ಕವಿಗೆ ಜ್ಞಾನ ಬೆಂಕಿ ಬೆಳಕಾಗಿ ಹಸಿಯಾದ ಕವಿತೆಯಾದ ಸಂದರ್ಭ ಮತ್ತು ಅದರ ಔಚಿತ್ಯಗಳನ್ನು ಹೇಳುತ್ತದೆ. ಅವರ ಸುಂದರ ಭಾವಗೀತೆಗಳನ್ನು ಅನುಲಕ್ಷಿಸಿದರೆ ಈ ಕಾವ್ಯ ಔಚಿತ್ಯದ ಪ್ರತಿಭೆಯ ಮೀಮಾಂಸೆ ಅವರನ್ನು ಕೈಹಿಡಿದು ಕಾವ್ಯ ಬರೆಸಿದೆ. ಇಲ್ಲಿ ಪೂರ್ವ ಸೂರಿ ಕವಿಗಳ ನೆನಪು ಸಹ ಆಗಾಗ ನೆನಪಿಗೆ ಬರುತ್ತವೆ. ಅದು ಅವರ ಪ್ರಭಾವ ಪ್ರೇರಣೆ ಎನ್ನಬಹುದು. ಅಲ್ಲಿನ ರಮಣೀಯ ಅದ್ಭುತ ಕಲ್ಪನೆಯು ಸಹ ಒಂದು ಹೊಳಹಾಗಿ ಕಂಡಿರಬಹುದು.

ಕಣ್ಣ ತೆರೆದಂತೆಲ್ಲಾ ತಲೆಹಾಕಿವೆ ಬನ್ನ
ಎಲ್ಲಿ ಹುದುಗಿದ್ದವೋ ಈ ಮುನ್ನ ?

ನುಡಿಯ ಹೊರಟಂತೆಲ್ಲಾ ಬಿಕ್ಕಳಿಕೆ
ಬವಣೆ_ ತಲ್ಪ
ಕಡೆಯ ಹೋದಂತೆಲ್ಲಾ ಛಿದ್ರ_
ಸಂಪನ್ನ ಶಿಲ್ಪ
ಅತ್ತಿತ್ತ ಭಾವ ತೂಗುಯ್ಯಾಲೆ
ಚಿಂತನೆ ಅಲೆ, ಮೂಡಿದ್ದು ಅತ್ಯಲ್ಪ!

ಯಾವುದೋ ನೋಟ ದಕ್ಕಿ
ಎಂಥದೋ ರಂಗಿನ ರಚನೆ_ ( ವಿನುಗಿದೆ ಸೃಜನೆಯ ದೀವಿಗೆ)

ಸೃಜನತೆಯ ಕಾವ್ಯ ರಾಚನಿಕ ನೆಲೆಯಲ್ಲಿ ಕಣ್ಣು ತೆರೆದಂತೆಲ್ಲಾ ತಲೆಹಾಕುವ ಬಣ್ಣಗಳು ಇಲ್ಲಿಯತನಕ ಹೊಳೆದಿರಲಿಲ್ಲವೆ ಬುದ್ಧಿ ಮತ್ತು ಆಲೋಚನೆಗೆ ಎಂದರೆ ಮನಃಶಾಸ್ತ್ರದಲ್ಲಿ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಶಾಸ್ತ್ರ ಒಂದು ನಿಯಮಿತವಾದ ಕ್ರಮವನ್ನು ರೂಪಿಸಿದರೆ ಸೃಜನಶೀಲ ಕಲೆಯ ಕಾವ್ಯ ಪ್ರಕಾರ ಒಡಮೂಡುವುದು ಅದರ ಬವಣೆಗಳಿಂದ ವಿಚ್ಛಿನ ಶಿಲ್ಪಗಳ ಛಿದ್ರವಾದ ಭಗ್ನವಾದ ನೆಲೆಯಿಂದ ಸಾಗುವ ಮನಸ್ಸಿನ ಹೊಯ್ದಾಟ ಭಾವನೆಗಳ ತೂಗೂಯ್ಯಾಲೆ ಚಿಂತನೆಗಳು ಹುತ್ತಕಟ್ಟಿ ಚಿತ್ತವಾಗಿ ಬರುವ ಹೊತ್ತಿಗೆ ದಟ್ಟವಾದ ಭಾವಗಳು ಅತ್ಯಲ್ಪವಾಗುತ್ತವೆ. ಮಹೋನ್ನತೆಯ ಅಂಶಗಳನ್ನು ಕಡೆಯಲು ಹೊರಟಾಗ ಎಲ್ಲವೂ ಕವಿಯ ಭಾವಪರವಶತೆಗೆ ದಕ್ಕುತ್ತದೆಯೇ! ಅವರವರ ಆಲೋಚನಾ ಲಹರಿ ಹರಿದಂತೆ ಅದು ಭಾವದೀಪ್ತವಾಗುತ್ತದೆ. ಅದೇ ಯಾವುದೋ ಚಕ್ಷು ದರ್ಶನ ನೋಟ ಎಂಥದೋ ರಚನೆಯಾಗಿ ಬಿಡುತ್ತದೆ. ರಾಚನಿಕ ನೆಲೆಯಲ್ಲಿ ಧ್ವನಿ, ಅರ್ಥ, ಉಪಮೆ, ರೂಪಕ, ಅಲಂಕಾಲ, ಔಚಿತ್ಯ, ರಸ ಎಲ್ಲವೂ ಕಾವ್ಯ ತತ್ವದ ಪರಿಧಿಯಲ್ಲಿ ಹುತ್ತಕಟ್ಟಿ ಚಿತ್ತವಾಗುತ್ತದೆ.

ಚೈತ್ರದ ಬರವಿಗೆ ವಸುಮತಿ ವೈಭವ
ಬಣ್ಣದ ಮೇಳವ ನಡೆಸುತಿದೆ;
ಕಾಣುವ ಕಣ್ಣಿಗೆ ಚೆಲುವಿನ ಸಂಭ್ರಮ
ಮೋಹಕ ಕಾವ್ಯವ ನುಡಿಸುತಿದೆ!

ಯಾವೆಡೆ ನೋಡಲಿ ಹೂವಿನ ಬೆಡಗು_
ರಂಗಿನ ಚಿತ್ರವ ಬರೆಯುತಿದೆ;
ಅನುಪಮ ಕೋಗಿಲೆ ತಳಿರನು ಸವಿದು_
ಇಂಪಿನ ಗಾನವ ಹಾಡುತಿದೆ!

ಕಾನನ ಫಥದಲಿ ಹಸಿರಿನ ನರ್ತನ
ಪ್ರಣಯದ ಜೋಡಿಯ ಕಾಡುತಿದೆ!
ಮನುಜನ ಮನಸಿಗೆ ಸೌಂದರ್ಯ ವೀಕ್ಷಣ…
ಹೊಸತಿನ ಸ್ಪಂದನ ನೀಡುತಿದೆ ! ( ಚೈತ್ರ ಚೈತನ್ಯ)

ಮೂಲ ಪ್ರಕೃತಿಯೇ ಒಂದು ಸುಂದರ ಕಾವ್ಯವಾಗಿರುವ ನಿದರ್ಶನವಿದು. ಅದೇ ಸ್ಫೂರ್ತಿ. ಅದನ್ನು ಕಂಡ ಕವಿ ತನ್ನ ಜ್ಞಾನದಿಂದ ಅದನ್ನು ಸೃಷ್ಟಿಸುತ್ತಾನೆ. ಅದನ್ನು ಕಾವ್ಯತ್ಮಾಕವಾದ ಭಾಷೆಯಲ್ಲಿ ತರಲು ಬೇಕಾದ ಔಚಿತ್ಯ ಜ್ಞಾನ ಮತ್ತು ಲೋಕದ ಸಾಮಾನ್ಯ ವಾರ್ತೆಯಂತೆ ಪಲುಕಿಸುವ ಗದ್ಯಗಂಧಿಗೂ ವ್ಯಾತ್ಯಾಸವಿದೆ. ಕವಿ ಚೈತ್ರ ಮಾಸದ ಪೃಕೃತಿಯನ್ನು ಕಾಣುತ್ತಿದ್ದಾರೆ. ಅದೊಂದು ವಸುಮತಿಯ ಭೂಮಿಯ ವೈಭವ. ಕಾಣುವ ಕಣ್ಣಿಗೆ ಚೆಲುವಿನ ಸಂಭ್ರಮ, ಹೂವಿನ ಬೆಡಗು, ಕೋಗಿಲೆ ಇಂಚರ, ಕಾಡಿನ ಹಸಿರಿನ ನರ್ತನ, ಸೌಂದರ್ಯದ ವೀಕ್ಷಣ ಎಂಬ ಸಾಲುಗಳು ನಿಜವಾಗಲು ಒಂದು ನಿಜದ ಕಲ್ಪನೆಯನ್ನು ಕವಿ ಕಟ್ಟುವ ಪದಪುಂಜಗಳಿಂದ ಜೀವಂತವಾಗಿಡುತ್ತದೆ. ಅದೇ ಲೋಕ ವಾರ್ತೆಯಾದರೆ ವರದಿಯ ರೀತಿಯಲ್ಲಿ ಇರಬಹುದು. ಪ್ರಬಂಧವಾದರೆ ಸಾರಲೇಖ ಸ್ಥಿತಿಯಲ್ಲಿರಬಹುದು. ಹಾಗಾಗಿ ಕವಿ ಬ್ರಹ್ಮ ಸದೃಶ್ಯ. ಆತನ ಕಾವ್ಯ ಸೃಷ್ಟಿ ಅಷ್ಟೆ ಮಹತ್ವ ಪಡೆಯುತ್ತದೆ ಎಂಬುದು ವಿಧಿತ.

ಪೂರ್ವ ದಿಗಂತದಿ ನೇಸರು ಮೂಡಲು
ಬಾನೊಳು ತೆರಿಯಿತು ಹೊಂಬೆಳಗು;
ತಾವರೆ ಕೊಳದಲಿ ಹೂಗಳು ಅರಳಲು_
ಮುತ್ತಿದವೊಮ್ಮೆಗೇ ದುಂಬಿಗಳು!

ಅಂಬರ ಕಡಲಲಿ ಸೂರ್ಯನ ಸಿರಿ ಪಟ
ಹೊಳೆಯುತ ತೇಲುತ ಸಾಗಿರಲು…
ಬೆಳ್ಳನೆ ಹಕ್ಕಿಯ ಸೊಬಗಿನ ಸಾಲು
ಹಾರಿವೆ ರವಿಯನೆ ಹಿಡಿದಿರಲು! ( ಹೊಂಬೆಳಗು)

ಈ ಕವಿತೆ ರಮ್ಯಾದ್ಭುತವಾದ ಪದಪಂಕ್ತಿಗಳಿಂದ ಕಂಗೋಳಿಸುತ್ತದೆ. ಇಲ್ಲಿ ಪ್ರಕೃತಿಯ ಮೂಲ ಸ್ವರೂಪ ಉದಯವಾಗುವ ಸೂರ್ಯೋದಯದ ಕಲ್ಪನೆಯನ್ನು ಹೇಳುವ ರೀತಿ ತನ್ನ ಸೋಪಜ್ನತೆಯ ಶೈಲಿಯಿಂದ ಸಹೃದಯರ ಮನ ತಣಿಸುತ್ತದೆ. ಇದು ದೊಡ್ಡರಂಗೇಗೌಡರ ಕಾವ್ಯ ಶೈಲಿ. ಇಲ್ಲಿ ಕುವೆಂಪು, ಬೇಂದ್ರೆಯವರ ಕವಿತೆಗಳು ಸಾಂದರ್ಭಿಕವಾಗಿ ನೆನಪಾದರೂ ಅವರ ಶೈಲಿಯೇ ಬೇರೆ ಇವರ ಶೈಲಿಯೇ ಬೇರೆ. ಹಕ್ಕಿ ಹಾರುತಿದೆ ನೋಡಿರಾ, ಮೂಡಲ ಮನೆಯ, ದೇವರು ಋಜು ಮಾಡಿದನು ಕವಿತೆಗಳನ್ನು ಗಮನಿಸಬಹುದು.

ತೇರ ಏರಿ ಅಂಬರದಾಗೆ ನೇಸರು ನಗುತಾನೆ
ಮರಗಿಡ ತೂಗ್ಯಾವೆ _ ಹಕ್ಕಿ ಹಾಡ್ಯಾವೆ ;

ಬೀರ್ಯಾವೇ-ಚೆಲುವ- ಬೀರ್ಯಾವೇ
ಬಾ ನೋಡಿ ನಲಿಯೋಣ ತಮ್ಮಾ
ನಾವು ಹಾಡಿ ಕುಣಿಯೋಣ ತಮ್ಮಾ

ಬೇಲಿಮ್ಯಾಗೆ ಬಣ್ಣ ಬಣ್ಣದ ಹೂವು ಅರಳ್ಯಾವೆ
ಆ ಹೂವಿನ ತುಂಬ ಸಣ್ಣ ಚಿಟ್ಟೆ ಕುಂತಾವೆ_
ಬಾಗಿ ಬೀಗಿ ಅತ್ತ ಇತ್ತ ಬಾಳೆ ಬಳುಕ್ಯಾವೆ
ಆ ಬಾಳೆ ವನವೇ ನಕ್ಕು ಹಣ್ಣು ತಂದಾವೆ_
ಕುಂತರೆ ಸೆಳೆವಾ
ಸಂತಸ ತರುವಾ
ಹೊಂಗೆ ಟೊಂಗೆ ತೂಗಿ ಬಾಗಿ-ಗಾಳಿ ಬೀಸ್ಯಾವೆ

ಭೂಮಿಮ್ಯಾಗೆ ಹಚ್ಚ ಹಚ್ಚಗೆ ಹಾದಿ ತೆರೆದಾವೆ
ಆ ಹಾದಿ ಅಕ್ಕ ಪಕ್ಕ ಬಳ್ಳಿ ಬೆಳೆದಾವೆ_
ಸಾಲು ಸಾಲು ಬೆಟ್ಟ ಗುಡ್ಡ ಮೌನ ತಳೆದಾವೆ
ಆ ಮೌನದ ಗಾನ ಎಲ್ಲರ ಮನಸ ಸೆಳೆದಾವೆ_
ಭಾವ ಬಿರಿದು
ಹತ್ತಿರ ಕರೆದು
ಮಾವು ಬೇವು ತಾಳೆ ತೆಂಗು- ಲಾಲಿ ಹಾಡ್ಯಾವೆ

ಭೇದ ಭಾವ ಮುಚ್ಚು ಮರೆ ಒಂದೂ ಮಾಡ್ದೇನೆ
ಆ ಸೂರ್ಯ ಒಂದೇ ಬೆಳಕ ನಮಗೆ ನೀಡ್ಯಾನೆ_
ಗಾಳಿ ನೀರು ಎಲ್ಲ ಕೊಟ್ಟು ಜಗವ ನಡೆಸ್ಯಾನೆ
ಆ ಸಿರಿಯ ಹಂಚಿಕೊಂಡರೆ ಬಾಳು ಸವಿಜೇನೆ_
ಪ್ರೀತಿ ಬೆಳೆದು
ಸ್ನೇಹ ತಳೆದು
ನಗ್ತಾ ನಗ್ತಾ ನಾವು ನೀವು _ಸವಿಯುವ ಸುಖವನ್ನೇ ( ನೇಸರು ನಗುತಾನೆ. ಮೌನಸ್ಪಂದನ ಸಂಕಲನ)

ಈ ಕವಿತೆ ದೊಡ್ಡರಂಗೇಗೌಡರ ಜನಪ್ರಿಯ ಕವಿತೆ ಮತ್ತು ಚಲನಚಿತ್ರದಲ್ಲಿ ಅಳವಡಿಸಲಾಗಿದೆ. ಮುಂಬೈ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಒಂದು ಕಾಲದಲ್ಲಿ ಈ ಪದ್ಯ ಪಠ್ಯವಾಗಿ ಇತ್ತು. ರಮ್ಯಾದ್ಭುತ ಕಲ್ಪನೆಯ ಭಾವೈಕ್ಯತೆಯ ದೃಷ್ಟಿಕೋನ ಬೀರುವ ಈ ಕವಿತೆ ಗ್ರಾಮೀಣ ಹಳ್ಳಿಗಾಡಿನ ಜನರ ಪ್ರಕೃತಿಯ ಜೀವಂತಿಕೆಯನ್ನು ಹಿಡಿದಿಟ್ಟಿದೆ. ಬದುಕಿನ ಸಹ್ಯತೆಯ ಸಹಿಷ್ಣುತೆಯನ್ನು ಅಳವಡಿಸಿದೆ. ಭಾಷೆ ಮತ್ತು ಭಾವ ಶ್ರೀಮಂತಿಕೆಯ ನಿಸರ್ಗ ರಮಣೇಯ ಅದ್ಭುತ ಕಲ್ಪನೆಯಾದರೂ ನೈಜ ಸತ್ಯದ ಅರಿವಿಗೆ ನಿಲುಕುವ ಸನ್ನಿವೇಶಗಳನ್ನು ಹಿಡಿದು ಜನಮನವನ್ನು ರಂಜಿಸಿ ಸಹೃದಯರ ಮೆಚ್ಚುಗೆಗೆ ಪಾತ್ರವಾಗಿದೆ. ಪಲ್ಲವಿ, ಅನುಪಲ್ಲವಿ, ನಾಲ್ಕು ಸಾಲಿನ ಮಧುರ ಬಂಧದ ಅಂತ್ಯ ಪ್ರಾಸಗಳು ಎರಡು ಚಿಕ್ಕ ಧ್ವನಿಮಾ ಅಂತ್ಯ ಪ್ರಾಸ ಕೂಡುವ ಪದ ಮತ್ತು ಒಂದು ಸಾಲು ಇಡೀ ಸಂಗತಿಯನ್ನು ಹಿಡಿದಿಡುವ ಕ್ರಮದಿಂದ ಭಾವಗೀತೆಯ ವಿನೂತನವಾದ ಛಂದ ಎಂದು ಇದನ್ನು ಗುರ್ತಿಸಬಹುದು. ಒಟ್ಟು ಮೂರು ಪದ್ಯಗಳ ಬಿಗಿಕಟ್ಟಿನ ಸ್ವಚ್ಛಂದ ಛಂದಸ್ಸು ಪದ್ಯ ರಚನೆಗಳಿಗೆ ಪ್ರೇರಕವಾದರೂ ಕವಿಯೆ ಶೋಧಿಸುವ ಪದ್ಯ ಬಂಧ ಬಂಧುರ ಬಹಳ ಆತ್ಮೀಯ ಮತ್ತು ಆತ್ಮಿಕ ಎನ್ನಿಸುತ್ತದೆ. ಹಾಗಾಗಿಯೇ ಇದು ಜನಪ್ರಿಯ ಸಾಹಿತ್ಯವು ಹೌದು ಗಂಭೀರ ಅಧ್ಯಯನಶೀಲ ಸಾಹಿತ್ಯವು ಹೌದು.

ದೊಡ್ಡರಂಗೇಗೌಡರ ಕಾವ್ಯದಲ್ಲಿ ರಮ್ಯಾಧ್ಭುತ ಸೌಂದರ್ಯವೇ ತುಂಬಿ ಹೋದ ಕಡೆಯಲ್ಲೂ ಜೀವನದ ನೋವೊಂದು ಅದರ ಭಾಗವಾಗಿ ಇರುವ ರಚನೆಗಳೆ ಬಹಳ ಪ್ರಿಯ. ಯಾಕೆಂದರೆ ಬದುಕು ಸಂಭ್ರಮದ ಸವಿನೆನಪಿಗಿಂತ ಕಠೋರ ಕಷ್ಟ ಪರಂಪರೆಗಳನ್ನು ಎದುರಿಸಿದ ದುರಂತ ಸಂದರ್ಭಗಳನ್ನು ಸಹ ಅವರು ಕಾವ್ಯ ದುಡಿಮೆಗೆ ಬಳಸಿರುವುದು ಒಂದು ಹೃದಯಾಂತರಾಳದ ಸಂವೇದನೆಯಾಗಿ ಕಾಣುತ್ತದೆ. ಅವರು ರಚಿಸಿದ ಎಷ್ಟೋ ಮಧುರಾತಿ ಮಧುರ ಗೀತೆಗಳು ಭಾವಗೀತೆಗಳ ಕ್ಯಾಸೆಟ್ ಸಿಡಿಗಳು ಧ್ವನಿ ಮುದ್ರಣಗಳಾಗಿವೆ. ಚಲನಚಿತ್ರ ಗೀತೆಗಳಂತು ಎಲ್ಲರೆದೆ ರಂಜಿಸಿ ಅವರಿಗೊಂದು ಕನ್ನಡ ಸಾಹಿತ್ಯದಲ್ಲಿ ಸರಸ್ವತಿ ಸಿಂಹಾಸನವನ್ನು ಕೊಟ್ಟಿದೆ. ಮಾನವರ ಭಾವನೆಗಳನ್ನು ಕಾವ್ಯ ಗಾರುಡಿಯಲ್ಲಿ ಪಡಿಮಿಡಿಯುವ ಶಬ್ದ ಬ್ರಹ್ಮ ಎಂದರೆ ದೊಡ್ಡಮಾತಾದೀತೂ ನಿಜ. ಆದರೆ ಅದು ಸ್ಥಿತವಾದ ಸತ್ಯವೆ ಆಗಿದೆ. ಬದುಕಿನ ಏರಿಳಿತಗಳ ತಲಸ್ಪರ್ಶಿ ಅನುಭವಗಳ ಎರಕಹೊಯ್ದ ಹೂರಣವೇ ಕಾವ್ಯದೇವಿಯಾಗಿ ನಿಂತತೆ ಇತರ ಕವಿಗಳ ಶೈಲಿಗಳಿಂದ ಬಿಡಿಸಿಕೊಂಡಾಗಲೂ ಅವರಿಗೆ ಧಕ್ಕಿರುವ ವಿನೂತನ ಶೈಲಿಯೊಂದು ದೊಡ್ಡರಂಗೇಗೌಡರನ್ನು ದೊಡ್ಡ ಮನಸ್ಸಿನವರಾಗಿ ಮಾಡಿದೆ. ಸ್ವಯಂ ಪೂರ್ಣ ಪ್ರತಿಭೆಯ ಸ್ಫೂರ್ತಿಯಿಂದ ಸಾಹಿತ್ಯರಾಧನೆಗೆ ತೊಡಗಿದ ಕವಿ ಸಾಮಾಜಿಕ ಸಾಂಸ್ಕೃತಿಕ ಕ್ಷೇಮವನ್ನು ಅರ್ಥಪೂರ್ಣ ನೆಲೆಯಲ್ಲಿ ಕಾವ್ಯದಲ್ಲಿ ಇಡಿದಿರಿಸಿದ ಮಹಿಮರು ಎನ್ನಬಹುದು. ಸಾಮಾಜಿಕ ಬಂಡಾಯವೇ ಇರಲಿ, ಸಾಂಸ್ಕೃತಿಕ ವೈಭವಿಕರಣವೇ ಇರಲಿ, ವೈಚಾರಿಕ ವೈಜ್ಞಾನಿಕ ಪ್ರಕರ ಔಚಿತ್ಯವೇ ಇರಲಿ ಅಲ್ಲೆಲ್ಲೆ ಕವಿಯ ಮನೋಧರ್ಮದ ಮೂಲ ಪ್ರತಿಭೆ ಕಾಣಸಿಗುತ್ತದೆ. ಇಡೀ ಜೀವನ ಪಯಣವೇ ಒಂದು ಜೀವಕೇಂದ್ರವಾಗಿ ಹಂತ ಹಂತವಾಗಿ ಪರಿಪಾಕ ಹೊಂದಿ ಬೆಳೆದ ಸ್ಥಿತಿಯಿಂದ ಅವರ ಕಾವ್ಯವನ್ನು ಗುರುತಿಸಿದರೆ ಕಾಲ ದೇಶ ಅಂತರ ಸ್ಥಿತಿ ಗತಿ ಎಲ್ಲವೂ ಕೆಲಸ ಮಾಡಿದೆ. ದೊಡ್ಡರಂಗೇಗೌಡರೆಂದರೆ ಸಿನಿಮಾ ಗೀತ ಸಾಹಿತ್ಯ, ಜನಪ್ರಿಯ ಸಂಗೀತ ಭಾವಗೀತೆಗಳಿಗೆ ಹೆಸರಾದವರು ಎನ್ನುವ ಕಡೆಯೇ, ಅವರ ಬದುಕು ಸಹ ಕಷ್ಟದ ಸನ್ನಿವೇಶಗಳನ್ನು ಕಂಡು ಮರುಗಿ ಕಂಡುಕೊಂಡ ಸತ್ಯಗಳ ಅನಾವರಣವೆಂಬುದಿದೆಯಲ್ಲ ಅದು ಬಹಳ ಸಹ್ಯವಾದ ಮಾನವೀಯ ನೆಲೆ ಎಂದು ಅನ್ನಿಸುತ್ತದೆ. ಒಬ್ಬ ಕವಿಗೆ ಇರಬೇಕಾದ ಅಂತಃಕರಣ ಇಂತಹ ನೆಲೆಯಲ್ಲಿ ಕೆಲಸ ಮಾಡುತ್ತದೆ. ಈ ಸೃಷ್ಟಿಯೆ ಒಂದು ವಿರಾಟ್ ಸ್ವರೂಪವನ್ನು ಪಡೆದಿರುವಾಗ ಅದರಿಂದ ವಿಕಸಿತವಾದ ಪ್ರತಿಭೆ ಕವಿ. ಭಾವತೀವ್ರತೆಯನ್ನು ಕಾವ್ಯದಲ್ಲಿ ಹಿಡಿಯುವುದೆಂದರೆ ಮಿಂಚಿನ ಸೆಳೆತ, ನೋವಿನ ನೆನಪುಗಳು, ಕಷ್ಟದ ದಿನಗಳು, ಬಾಲ್ಯದಲ್ಲಿ ಆದ ಅನುಭವಗಳು, ಔದ್ಯೋಗಿಕವಾಗಿ ಆದ ಅನುಭವಗಳು, ಅದಕ್ಕು ಮೀರಿದ ಪ್ರಕೃತಿಯ ಸತ್ಯಗಳು ಒಂದೊಂದು ಜೋಡಿಸಿಕೊಂಡು ಹೊರಟ ಮೆರವಣಿಗೆಯಂತೆ ಕಾವ್ಯ ಕಂಡರೆ ಅದರಲ್ಲಿನ ಮೋಹಕತೆಯ ಬೆಡಗು ಬಿನ್ನಾಣದಷ್ಟೆ ಜೀವಕಾಳಜಿಯ ಜೀವಂತಿಕೆಯ ಸಂವೇದನೆಗಳಾಗುತ್ತವೆ. ಭಾವುಕತೆಯ ದಟ್ಟ ಅನುಭವಗಳ ಗ್ರಾಮೀಣ ಸೊಗಡಿನ ಚಿತ್ರಣಗಳು, ಸಿನಿಮಾ ಗೀತೆಗಳ ಸಂಗೀತ ಪ್ರಾಧಾನ್ಯತೆ ಮತ್ತು ಅವುಗಳ ವಸ್ತು ವೈವಿಧ್ಯತೆ ಗಾನ ಗಾರುಡಿಯ ದಿವ್ಯತೆಯ ಆನಂದಾನೂಭೂತಿ ನೀಡುತ್ತದೆ. ವಾಗರ್ಥವನ್ನು ಮೀರಿದ ದೀಪಿಕೆಗಳಲ್ಲಿ ಪದ್ಯಗಳು ಕಂಡುಬರುತ್ತವೆ. ಕಾವ್ಯವೆಂದರೆ ಸಮರ್ಥ ಅಭಿವ್ಯಕ್ತಿಯ ಮಾಧ್ಯಮವಾಗಿ ಬೆಳಕಿಗೆ ಬಂದ ಭಾಷಾಸರಸ್ವತಿ. ಅವರ ಲೇಖನಿಯಲ್ಲಿ ಸರಸ್ಪತಿ ವಾಗ್ದೇವಿ ಜೀವಂತವಿದ್ದಾಳೆ. ಅವರ ಕೆಲವು ಪದ್ಯಗಳು ವಿಶ್ವವಿದ್ಯಾಲಯ ಪಠ್ಯಕ್ರಮಗಳಲ್ಲಿ ಅಳವಡಿಸಲಾಗಿದೆ. ” ತೇರಾ ಏರಿ ಅಂಬರದಾಗೆ ನೇಸರು ನಗುತಾನೆ” ” ಅಸೀಮ ರೂಪಿ ಅಂಬರದಲ್ಲಿ ಮುಂಗಾರು ಮೂಡಿದೆ” “ಟೊಂಗೆ ಟೊಂಗೆ ಹೂವಾಗಿ – ಕಂಡ ಕಣ್ಣು ಹುಚ್ಚಾಗಿ ಕೋಗಿಲೆ ಇನಿದಾಗಿ ” ” ಒಲುಮೆ ಸಿರಿಯಾ ಕಂಡು ಬಯಕೆ ಸಿಹಿಯ ಉಂಡು” ಹೀಗೆ ಹಲವಾರು ಗೀತೆಗಳು ಜನಪ್ರಿಯವೆ ಆಗಿರುವುದು. ಅದಕ್ಕಾಗಿ ಒಂದು ಓದುಗ ವರ್ಗ ಇಂಟಲೆಕ್ಚುವಲ್ ಆದ ವರ್ಗ ಇರುವುದು ಕಾಣಬಹುದು. ಇದೆಲ್ಲದರಾಚೆಗೂ ಕವಿ ಮಾನವೀಯತೆಯ ಸವ್ಯಸಾಚಿಯಾಗಿ ನಿಂತಿದ್ದಾರೆ. ಕಾವ್ಯಕ್ಕೆ ವಸ್ತು ಪ್ರಪಂಚದಲ್ಲಿ ಹಲವು ಇದೆ. ಅವೆಲ್ಲವೂ ಅವರಿಗೆ ಒದಗಿ ಬಂದ ಮಧುರ ಕ್ಷಣಗಳು. ಅವುಗಳನ್ನು ಬಳಸಿದ ಕವಿ ಧನ್ಯ.

ದೊಡ್ಡರಂಗೇಗೌಡರಿಗೆ ಈ ಕನ್ನಡ ನುಡಿಯೊಸಗೆಯ ನಾಡವರು, ರಾಷ್ಟ್ರದವರು, ಅಂತರರಾಷ್ಟ್ರದವರು ನೀಡಿದ ಪ್ರಶಸ್ತಿ ಗೌರವ ಪ್ರಶಂಸೆ ಆದರಣೆ ಬಹಳ ಮನಿನೀಯವಾದ ಸಂಗತಿಗಳಾಗಿವೆ. ೧೯೭೨ರಲ್ಲಿ ಅವರ ಕಣ್ಣು ನಾಲಿಗೆ ಕಡಲು ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ ೧೯೮೨ರಲ್ಲಿ ತೆರೆಕಂಡ ಅರುಣರಾಗ ಚಿತ್ರಕ್ಕೆ ನಾನೊಂದು ತೀರ ನೀನೊಂದು ತೀರ ಗೀತೆಗೆ ಅತ್ಯುತ್ತಮ ಗೀತೆ ಪುರಸ್ಕಾರ ದೊರೆತಿದೆ. ೧೯೯೦ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಾಕರ ಮುದ್ದಣ ಕಾವ್ಯ ಪ್ರಶಸ್ತಿ ಪ್ರೀತಿ ಪ್ರಗಾಥ ಕೃತಿಗೆ ಬಂದಿದೆ. ೧೯೯೯ ರಲ್ಲಿ ಜಯ ಎನ್ನಿ ಭೈರವಗೆ ಕ್ಯಾಸೆಟ್ ಧ್ವನಿಮುದ್ರಣ ಗೀತೆಗಳಿಗೆ ಆರ್ಯಭಟ ಪ್ರಶಸ್ತಿ ಬಂದಿದೆ. ಶ್ರೀಯುತರಿಗೆ ಭಾರತ ಸರ್ಕಾರದ ನಾಗರಿಕ ಪುರಸ್ಕಾರ ಪದ್ಮಶ್ರೀ ಪ್ರಶಸ್ತಿ ಬಂದಿದೆ. ಶ್ರೀಯುತರು ಕರ್ನಾಟಕ ರಾಜ್ಯ ನಾಮ ನಿರ್ದೇಶಿತ ಸದಸ್ಯರು (ಎಂ ಎಲ್. ಸಿ ) ಆಗಿ ಕಾರ್ಯಮಾಡಿರುವರು. ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷರು ಆಗಿದ್ದರು. ಅವರ ಚಲನಚಿತ್ರ ಗೀತೆಗಳಿಗಾಗಿ ಕರ್ನಾಟಕ ಸರ್ಕಾರ ನೀಡಿದ ಗೌರವಗಳು ೧೯೮೨ ಅಲೆಮನೆ ಚಿತ್ರಕ್ಕೆ ಬರೆದ ಭಾವೈಕ್ಯತೆ ವಿಶೇಷ ಗೀತೆ ಪ್ರಶಸ್ತಿ, ೧೯೯೨ ಗಣೇಶನ ಮದುವೆ ಚಿತ್ರಕ್ಕೆ ಬರೆದ ಗೀತೆಗೆ ವರ್ಷದ ಶ್ರೇಷ್ಠ ಗೀತೆ ಮತ್ತು ಬೆಳ್ಳಿ ಪದಕ ಪುರಸ್ಕಾರ, ೧೯೯೫ ಕಾವ್ಯ ಚಿತ್ರಕ್ಕೆ ಬರೆದ ಗೀತೆಗೆ ವರ್ಷದ ಶ್ರೇಷ್ಠ ಗೀತೆ ಮತ್ತು ಬೆಳ್ಳಿ ಪದಕ ಪುರಸ್ಕಾರ, ೧೯೯೭ ಜನುಮದ ಜೋಡಿ ಚಿತ್ರಕ್ಕೆ ಬರೆದ ಜಾನಪದ ಗೀತೆಗಳಿಗೆ ವರ್ಷದ ಶ್ರೇಷ್ಠ ಗೀತೆ ಮತ್ತು ಬೆಳ್ಳಿ ಪದಕ ಪುರಸ್ಕಾರ, ೧೯೯೯ ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ೨೦೦೦ ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, ೨೦೦೨ ರಲ್ಲಿ ಶ್ರವಣಬೆಳಗೊಳದ ಜೈನ ದಿಗಂಬರ ಮಠದಿಂದ ವರ್ಧಮಾನ ಮಹಾವೀರ ಪ್ರಶಸ್ತಿಗಳು ಅವರನ್ನು ಹರಸಿ ಬಂದಿವೆ. ಇನ್ನು ನಾಡಿನ ಜನ ಮತ್ತು ಶಾಲಾ ಕಾಲೇಜು ಸಭೆ ಸಮಾರಂಭಗಳು ಅವರನ್ನು ಪುರಸ್ಕರಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ, ಇಂಗ್ಲೇಂಡ್ ಕೇಂಬ್ರಿಡ್ಜ್ Man of Achievement ಪ್ರಶಸ್ತಿ, ದೆಹಲಿಯ ಗಣರಾಜ್ಯೋತ್ಸವ ಪರ್ವ ೧೯೭೭ ರಲ್ಲಿ ಸರ್ವಭಾಷಾ ಕವಿಗೋಷ್ಠಿ ಪ್ರತಿನಿಧಿತ್ವ, ಇನ್ನು ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಅವರನ್ನು ಸ್ವಾಗತಿಸಿ ಪುರಸ್ಕರಿಸಿದೆ. ದಾಖಲೆಯನ್ನು ನಿರ್ಮಾಣ ಮಾಡಿವೆ. ದೊಡ್ಡರಂಗೇಗೌಡರು ಐದುನೂರಕ್ಕೂ ಹೆಚ್ಚು ಜನಪ್ರಿಯ ಚಲನಚಿತ್ರಗೀತೆಗಳನ್ನು ಬರೆದಿರುವರು. ಹತ್ತು ಚಲನಚಿತ್ರಗಳಿಗೆ ಸಂಭಾಷಣೆ ಬರೆದಿರುವರು. ಐವತ್ತಕ್ಕೂ ಅಧಿಕ ಭಾವಗೀತೆ, ಆಧ್ಯಾತ್ಮಿಕ ಭಕ್ತಿ ಗೀತೆಗಳ ಧ್ವನಿ ಸುರಳಿಗಳು ಪ್ರಕಟವಾಗಿವೆ. ಅವರ ಗೀತೆಗಳಿರುವ ಚಲನ ಚಿತ್ರಗಳು ಹಲವು. ಜನಪ್ರಿಯ ಮಾಧ್ಯಮವಾದ ದೂರದರ್ಶನದ ಮೂಲಕ ಅವರ ಗೀತೆಗಳು ನಾಡಿನೆಲ್ಲೆಡೆ ತಲುಪಿವೆ. ರಂಜಿಸಿವೆ. ಪಡುವಾರಳ್ಳಿ ಪಾಂಡವರು, ಪರಸಂಗದ ಗೆಂಡೆತಿಮ್ಮ, ಬಂಗಾರದ ಜಿಂಕೆ, ಅಶ್ವಮೇಧ, ರಂಜಿತಾ, ರಶ್ಮಿ, ಪ್ರೇಮಪರ್ವ, ಕೃಷ್ಣ ರುಕ್ಮಿಣಿ, ಹೊಸನೀರು, ಒಲವೇ ಬದುಕು, ಆಲೆಮನೆ, ಗಣೇಶನ ಮದುವೆ, ಕಾವ್ಯ, ಜನುಮದ ಜೋಡಿ ಮೊದಲಾದ ಚಿತ್ರಗಳಿಗೆ ಅವರ ಗೀತೆಗಳನ್ನು ಅಳವಡಿಸಲಾಗಿದೆ. ಭಾವನಾತ್ಮಕ ಮಧುರ ಧ್ವನಿ ಧ್ವನಿಮಾಗಳ ಕಲಾತ್ಮಕ ಅಭಿವ್ಯಕ್ತಿ ಪಡೆದ ಗೀತೆಗಳಾಗಿ ಅವು ಜನಮಾನಸದಲ್ಲಿ ಬೇರೂರಿವೆ. ಅಂತಹ ಸಾಧನೆ ಕವಿಯದು ಎಂದರೆ ಉದ್ಗಾರವೊಂದು ಬರುತ್ತದೆ. ದೇಶ, ವಿದೇಶ, ನಾಡು, ಪರರಾಜ್ಯಗಳಲ್ಲೂ ಅವರ ಗೀತೆಗಳು ಮತ್ತು ಭಾವಗೀತೆಗಳು ಜನಪ್ರಿಯವಷ್ಟೆ ಅಲ್ಲದೆ ಗಂಭೀರ ಸಾಹಿತ್ಯ ಸ್ವರೂಪವನ್ನು ಪಡೆದಿವೆ. ಮಾವು ಬೇವು, ಗೀತ ವೈಭವ, ಕಾವ್ಯ ಕಾವೇರಿ, ತಂಗಾಳಿ, ಪ್ರೀತಿ ಭಾವನೆ, ಪ್ರೇಮ ಪ್ರಣಯ, ಹೃದಯದ ಹಕ್ಕಿ, ಹೋಳಿ ಹುಣ್ಣಿಮೆ, ಯುಗಾದಿ, ಚೈತ್ರೋತ್ಸವ, ಮಾವು ಮಲ್ಲಿಗೆ, ಭೂಮಿ ಬಾನು, ಸಿರಿ ಸಂವರ್ಧನ ಕ್ಯಾಸೆಟ್ ಗಳು ಧ್ವನಿಸುರಳಿ ಆಡಿಯೋ ಮಾಧ್ಯಮದಲ್ಲಿ ದಾಖಲೆಯ ಪ್ರಮಾಣದಲ್ಲಿ ಭಾವದೀಪ್ತವಾಗಿವೆ. ಸ್ವತಃ ಗಾಯಕರು, ಕವಿಯಾಗಿ, ವಿಮರ್ಶಕರಾಗಿ, ಸಂಶೋಧಕರಾಗಿ, ಸರ್ಕಾರದ ಹಲವು ಆಯ್ಕೆ ಸಮಿತಿಗಳ ಸದಸ್ಯರಾಗಿ, ಆರಿಂದ ವೃತ್ತಿ ಜೀವನದಲ್ಲಿ ಅಂಚೆ ಇಲಾಖೆಯ ಸೇವೆ, ಶ್ರೀ ಲ.ನ ಕಲೆ ವಾಣಿಜ್ಯ ವಿಜ್ಞಾನ ಮಹಾವಿದ್ಯಾಲಯದ ಅಧ್ಯಾಪಕರು, ಪ್ರಾಧ್ಯಾಪಕರು, ಪ್ರಾಂಶುಪಾಲರು, ಗೌರ್ನಿಂಗ್ ಕೌನ್ಸಿಲ್ ಸದಸ್ಯರು ಆಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ನವೋದಯ ಕಾವ್ಯ ಒಂದು ಪುನರ್ ಮೌಲ್ಯಮಾಪನ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿದೆ. ಶೇಷಾದ್ರಿಪುರಂ ಕಾಲೇಜು ಬೆಂಗಳೂರು ಕನ್ನಡ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರು ಆಗಿದ್ದರು. ದೇಶ ವಿದೇಶಗಳಲ್ಲಿ ಅವರ ಉಪನ್ಯಾಸ ಭಾಷಣ ಕಲೆಯ ಮೂಲಕ ಪ್ರಚಾರವಾಗಿವೆ. ಅವರ ಪ್ರಬಂಧಗಳು ಹಲವು ವೈವಿಧ್ಯಮಯವಾಗಿವೆ. ಪತ್ರಿಕೋದ್ಯಮದಲ್ಲಿ ಚೈತ್ರ ಪತ್ರಿಕೆ ಸಂಪಾದಕರಾಗಿ, ಆದಿ ಚುಂಚನಗಿರಿ ಮತ್ತು ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಕನ್ನಡ ಮತ್ತು ಆಂಗ್ಲ ಮಾಸಪತ್ರಿಕೆ ಸಂಪಾದಕರು ಆಗಿದ್ದಾರೆ. ಅವರ ಪತ್ನಿ ಡಾ .ಕೆ. ರಾಜೇಶ್ವರಿ ಅವರೊಡನೆ ಹಲವು ದೇಶಗಳನ್ನು ಸುತ್ತಿ ಬಂದಿರುವರು.
ಕರ್ನಾಟಕದ ಘನತೆಯನ್ನು ಸಾರುತ್ತ ಕನ್ನಡ ಸಾಹಿತ್ಯ, ಸಂಸ್ಕೃತಿ, ಪ್ರಾಚೀನತೆಗಳ ಸುವಾರ್ತೆಯನ್ನು ಸೃಜನಶೀಲ ಕಾವ್ಯ ಭಾಷಣಾದಿ ಉಪನ್ಯಾಸ ಕಲೆಗಳಲ್ಲಿ ಸಾಹಿತ್ಯದ ಮಹತ್ವವನ್ನು ಮನಗಂಡು ಪ್ರಚಾರ ಮಾಡಿ ಕನ್ನಡದ ಪಾರಿಚಾರಕತೆಯನ್ನು ಉದ್ದೀಪನ ಮಾಡಿರುವರು. ಅಂತಹವರ ಬಗ್ಗೆ ನಾವು ಬರೆಯುವುದು ಅಥವಾ ಅವರ ಕಾವ್ಯದ ನೆಲೆಬೆಲೆ ಮಹತ್ವವನ್ನು , ಜಿಜ್ಞಾಸೆಗೆ ಒಳಪಡಿಸಿ ಅರಿಯುವುದು ತುಸು ಕಷ್ಟವೆಂದು ಅನ್ನಿಸಿದರೂ ಅಂತದೊಂದು ಪ್ರಯತ್ನವನ್ನು ಮಾಡಲಾಗಿದೆ. ಹೀಗೆ ಹಿರಿಯರು ನೂರ್ಕಾಲ ನಮ್ಮಂತವರಿಗೆ ಮಾರ್ಗದರ್ಶನ ಆಶೀರ್ವಾದಗಳನ್ನು ನೀಡಲಿ. ಕನ್ನಡ ಕಾವ್ಯದ ಉದಯೋನ್ಮುಖ ಬರಹಗಾರರಿಗೆ ಒಂದು ಮಾದರಿಯಾಗಿರಲಿ. ಎಂದಿಲ್ಲದಂತೆ ದಾಂಬಲು ಬಿದ್ದು ಬರೆಯುತ್ತಿರುವ ಯುವ ಸಮೂಹಕ್ಕೆ ಅವರು ಪ್ರೇರಕ ಶಕ್ತಿಯಾಗಿರಲಿ ಎಂದು ಆಶಿಸುತ್ತೇನೆ.

ಸಂತೋಷ್ ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x