ಹೀಗೆ ಪ್ರಾರಂಭವಾದ ಜ್ಯೋತಿ, ಲಲಿತ. ಚೈತನ್, ಶಂಕರರ ಸ್ನೇಹ ಏಳೆಂಟು ವರ್ಷಗಳಲ್ಲಿ ಹೆಮ್ಮರವಾಗಿತ್ತು. ಈಗ ಚೈತನ್ನ ಸ್ನೇಹ ವೃಂದದ ಸದಸ್ಯರೆಲ್ಲ ಒಳ್ಲೊಳ್ಳೆ ಕೆಲಸಕ್ಕೆ ಸೇರಿ ಒಳ್ಳೆ ಸಂಪಾದನೆಯಲ್ಲಿ ತೊಡಗಿಸಿಕೊಂಡಿದ್ದರು.
ಜ್ಯೋತಿಯಂತೆಯೇ ತನ್ನೊಂದಿಗೂ ಆತ್ಮೀಯತೆಯಿಂದ ಚೈತನ್ ವರ್ತಿಸುತ್ತಿದ್ದನು. ಮೊದ ಮೊದಲು ಚೈತನ್ ಮತ್ತು ಜ್ಯೋತಿಯ ಸ್ನೇಹವನ್ನು ಸಂಶಯದಿಂದ ನೋಡುತ್ತಿದ್ದ ಲಲಿತೆಗೆ ಕ್ರಮೇಣ ಸ್ನೇಹದ ಅಗಾಧತೆ, ಅದರ ಮಹತ್ವದ ಬಗ್ಗೆ ಅರ್ಥವಾಗಿತ್ತು. ಜ್ಯೋತಿ ಮತ್ತು ಚೈತನ್ ನಡುವಿನ ಸ್ನೇಹ, ಪ್ರೀತಿ, ಬಾಂಧವ್ಯ ಒಡಹುಟ್ಟಿದವರ ನಡುವಿನ ಬಾಂಧವ್ಯದಂಥದ್ದು ಎಂದು ತಿಳಿದಾಗ ಲಲಿತ ಚೈತನ್ನನ್ನು ಹೃದಯದಲ್ಲಿಟ್ಟುಕೊಂಡು ಆರಾಧಿಸತೊಗಿದ್ದಳು. ಭಾನುವಾರ ಬಂದಿತೆಂದರೆ ಲಲಿತೆ ಬೇಗ ಬರದಿದ್ದರೆ ಜ್ಯೋತಿ, ಚೈತನ್, ಶಂಕರ , ರಾಮು ಗುಂಪುಗೂಡಿ ಹಾಸ್ಟೆಲ್ ಮುಂದೆ ಲಗ್ಗೆ ಇಡುತ್ತಿದ್ದರು. ಒಮ್ಮೊಮ್ಮೆ ಚೈತನ್ ಅಷ್ಟೆ ಬಂದು ಮಾತಾಡಿಸಿ, ಕರೆದುಕೊಂಡು ಅಜ್ಜಿ ಮನೆಗೆ ಬರುತ್ತಿದ್ದ. ಅಂತಹ ತನ್ನ ಚೈತನ್ ಇಂದು ಮದುವೆಯಾಗುತ್ತಿದ್ದಾನೆ. ಲಲಿತೆ ಮಗ್ಗಲು ಬದಲಾಯಿಸಿದಳು ನಿದ್ರೆ ಸಮೀಪವೂ ಸುಳಿಯಲಿಲ್ಲ.
ಈಗ ತನ್ನ ಮನದ ತುಮುಲವನ್ನು ಯಾರ ಹತ್ತಿರ ಹೇಳಿಕೊಳ್ಳಬೇಕು! ಶಾಮಣ್ಣ ಮದುವೆ ಮಾಡಿಕೊಂಡಿದ್ದಾನೆ. ವಿನೋದಣ್ಣ, ಮುತ್ತಣ್ಣ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಪಿಳ್ಳೆ-ಪಿಳ್ಳೆಯಂತಿದ್ದ ರವಿ, ಕಿರಣ, ರಾಜು, ಮುರಳಿ, ಕಿಟ್ಟಿ, ರಾಜೇಶ ಸುರೇಶ ಹೈಸ್ಕೂಲು ಕಾಲೇಜು, ಡಿಗ್ರಿ ಕಾಲೇಜಿನ ಮೆಟ್ಟಿಲೇರಿದ್ದಾರೆ. ಶಾಮಣ್ಣ ಗಂಡು ಮಗುವಿನ ತಂದೆಯಾಗಿ ಆ ಮೂಲಕ ಲಲಿತಳೇ ಇನ್ನೂ ಆ ಮನೆಯ ಪ್ರೀತಿಗೆ ಹಕ್ಕುದಾರಿಣಿಯಾಗಿ ಉಳಿದಿದ್ದಾಳೆ. ಅಜ್ಜ ತೀರಿಕೊಂಡು ಎರಡು ವರ್ಷ ಕಳೆದಿವೆ. ಶಾಮಣ್ಣ ಆಗಾಗ್ಗೆ ಪತ್ರಗಳಲ್ಲಿ ಬಸಮ್ಮವ್ವನ ಒಳ್ಳೆಯತನವನ್ನು ಹೊಗಳಿ ಬರೆದಿರುತ್ತಾನೆ. ಆಕೆ ಆದಷ್ಟು ಬೇಗನೆ ಅಳಿಯನನ್ನು ಹುಡುಕಬೇಕೆಂದು ಅವಸರಿಸುತ್ತಿದ್ದಾಳೆ. ಆದರೆ ತಾನು ಆ ಎಲ್ಲ ಪ್ರೀತಿಯ ಮನಸ್ಸುಗಳಿಗೆ ಪೆಟ್ಟು ನೀಡಲು ತಯಾರಾಗುತ್ತಿದ್ದೇನೆ ಎಂದುಕೊಂಡಳು ಲಲಿತೆ.
ಯಾಕೋ ದಾವಣಗೆರೆಗೆ ಹೋಗಿ ಅಲ್ಲೆ ಕೆಲಸ ಮುಂದುವರೆಸಬೇಕೆಂದು ಆಸೆಯಾಯಿತು. ‘ಹೌದು’ ಯೋಚಿಸಿದಷ್ಟೂ ಅದೇ ಸೂಕ್ತವೆನ್ನಿಸುತ್ತಿದೆ ಎಂದುಕೊಂಡಳು. ಮಾರನೇ ದಿನ ಆಫೀಸಿಗೆ ಹೋಗಿ ಶಶಿಕಲಾ, ಮಂಜುಳೆಗೆ ತಾನು ಬೇರೆ ಕಡೆ ಕೆಲಸದ ನಿಮಿತ್ಯ ಹೋಗುತ್ತಿರುವುದಾಗಿಯೂ, ಬರುವುದು ಎರಡು ದಿನಗಳಾಗುತ್ತದೆ ಎಂದೂ ತಿಳಿಸಿದಳು. ಚೀಲಕ್ಕೆ ಒಂದೆರಡು ಧಿರಿಸು ತುರುಕಿಕೊಂಡು, ಜಿನ್ಸ್ ಪ್ಯಾಂಟ್ ಟೀ ಶರ್ಟ್ ಧರಿಸಿ ಮೆಜೆಸ್ಟಿಕ್ ಸೇರಿದಳು. ದಾವಣಗೆರೆ ಬಸ್ ಆಗಲೆ ಹೊರಟು ನಿಂತಿತ್ತು. ಲಲಿತ ಬಸ್ ಹತ್ತಿದಾಗ ಸೀಟುಗಳೆಲ್ಲಾ ತುಂಬಿದ್ದವು. ಆಕೆ ಬುಕ್ ಮಾಡಿಸಿದ ಸೀಟಿನ ಪಕ್ಕ ಒಬ್ಬ ಹುಡುಗ ಕುಳಿತಿದ್ದ. ಆಕೆ ತನ್ನ ಸೀಟಿನಲ್ಲಿ ಕುಳಿತಳು. ಬಸ್ ದಾವಣಗೆರೆ ಕಡೆ ಹೊರಟಿತು.
*
ಜ್ಯೋತಿಗೆ ಊಟಕ್ಕೂ ಪುರುಷೊತ್ತಿಲ್ಲದಂತೆ ಮೈ ತುಂಬಾ ಕೆಲಸ. ತನ್ನ ಆಫೀಸ್, ಕಾಲೇಜು, ಲೈಬ್ರ್ರಿ ಅಂತಾದ ಮೇಲೆ ಚೈತನ್ ಆಫೀಸ್, ವೃದ್ಧಾಶ್ರಮ, ಮನೆಯಲ್ಲಿ ಅಜ್ಜಿಗೆ ನೆರವಾಗುವ ಕೆಲಸ ಹೀಗೆ ಹತ್ತು ಹಲವು ಜವಾಬ್ದಾರಿ ಆಕೆಯ ಮೇಲೆ ಬಿದ್ದಿವೆ. ಜೊತೆಗೆ ಲಲಿತಳ ಯಾವುದೇ ಸುಳಿವು ಸಿಗುತ್ತಿಲ್ಲ. ಬೆಲ್ ಕಾಲನಿಯ ಮನೆಯನ್ನು ಖಾಲಿ ಮಾಡಿ ಎಂಟು ದಿನಗಳಾಯಿತು ಎಂದು ಜ್ಯೋತಿ ಅಲ್ಲಿಗೆ ಹೋದಾಗಲೇ ತಿಳಿದಿದ್ದು. ಆಫೀಸ್ನಲ್ಲಿ ಸಿಗಬಹುದೆಂದು ಅಲ್ಲಿಗೆ ಹೋದರೆ ಆಫೀಸ್ ಸ್ಥಳಾಂತರವಾಗಿದ್ದು ತಿಳಿಯಿತು. ಆದರೆ ಯಾವ ಸ್ಥಳ ಎಂದು ತಿಳಿಯಲಿಲ್ಲ. ಆಕೆಯ ಇ-ಮೇಲ್ಗೆ ಚೈತನ್ ಬರೆಯುತ್ತಲೇ ಇದ್ದಾನೆ. ಆದರೆ ಆಕೆಯಿಂದ ಉತ್ತರ ಬರುತ್ತಿಲ್ಲ. ಆಕೆ ಆನ್ ಲೈನ್ನಲ್ಲಿ ಕಾಣಿಸುತ್ತಲೂ ಇಲ್ಲ. ಮೊಬೈಲಂತೂ ಸ್ವಿಚ್ ಆಫ್ ಆಗೇ ಇರುತ್ತದೆ. ಶಂಕರ್, ಚೈತನ್, ಜ್ಯೋತಿಗೆ ಲಲಿತಳದೆ ಚಿಂತಯಾಗಿ ಬಿಟ್ಟಿದೆ. ಶಂಕರ ಒಳಗೊಳಗೆ ಲಲಿತಳ ಬಿಳುಚಿದ ಮುಖದ ಹಿಂದೆ ಇದ್ದಿರಬಹುದಾದ ನೋವನ್ನು ಹೆಕ್ಕಿ ಮೂರ್ತರೂಪ ಕೊಡಲು ಯತ್ನಿಸುತ್ತಾನೆ. ಈ ಚಿಂತೆಯಲ್ಲಿ ಚೈತನ್ ಮದುವೆಯ ನಿಶ್ಚಿತಾರ್ಥ ದಿನವನ್ನು ಮುಂದೆ ಹಾಕಿದ್ದಾನೆ. ಇದ್ಯಾವುದರ ಬಗ್ಗೆ ಗೊತ್ತೇ ಇಲ್ಲದೆ ಅನುಶ್ರೀ ತಾನು ಅನಾಥೆ, ತಾನು ಭಿಕಾರಿ, ತಾನು ಪಾಪಿ ಅಂತ ಯೋಚಿಸಿ ಯೋಚಿಸಿ ಅತ್ತು ಅತ್ತು ಹೈರಾಣಾಗಿದ್ದಾಳೆ.
ಮುಖದ ಕಳೆಯನ್ನೇ ಕಳೆದುಕೊಂಡು ಓಡಾಡುತ್ತಿರುವ ಚೈತನ್, ಜ್ಯೋತಿಯ ಮುಖ ನೋಡಿ ಕೆಂಪಮ್ಮ ಮಮ್ಮಲ ಮರುಗುತ್ತಾಳೆ. ಅಜ್ಜಿ ಜಯಲಕ್ಷ್ಮಮ್ಮ ಹಾಸಿಗೆ ಹಿಡಿದಿದ್ದಾರೆ. “ಹೀಗೆ ಇದ್ದಕ್ಕಿದ್ದಂತೆ ಹುಡುಗರ ಮಂಗಾಟವೆಲ್ಲ ನಿಂತು, ಜೋಲು ಮುಖ ಹಾಕಿಕೊಂಡು ತಿರುಗಾಡುತ್ತಿವೆ. ಇವಕ್ಕೆಲ್ಲಾ ಒಂದೊಂದು ಮದುವೆ ಆಂತ ಬ್ಯಾಗನೆ ಆಗ್ಬುಟ್ರೆ ಚಿಂತಿಲ್ಲ ದ್ಯಾವ್ರೆ” ಎಂದುಕೊಮಡು ನಿಟ್ಟುಸಿರಾಗುತ್ತಾಳೆ ಕೆಂಪಮ್ಮ.
ಅಂದು ಸಂಜೆ ಚೈತನ್, ಶಂಕರ, ರಮೇಶ, ಜ್ಯೋತಿ, ರವಿ, ಗೀತಾ ಎಲ್ಲರೂ ಚೈತನ್ನ ಆಫೀಸ್ನಲ್ಲಿ ಸೇರಿದ್ದರು. ಯಾರಿಗೂ ಲಲಿತೆಯ ಪತ್ತೆ ಸಿಗುತ್ತಿಲ್ಲ. ಎಲ್ಲರೂ ನಿರಾಸೆಗೆ ಈಡಾಗಿದ್ದಾರೆ. ಲಲಿತಳ ಹಳ್ಳಿಗೆ, ಆಕೆಯ ತಾಯಿ ಹಾಗೂ ಶಾಮಣ್ಣನ ಮನೆಗೆ ಫೋನ್ ಮಾಡಿ ಕೇಳುವ ಮಾತು ನಡೆದರೂ, ಅದಕ್ಕೆ ಚೈತನ್, ಜ್ಯೋತಿ ಶಂಕರ ಒಪ್ಪಲಿಲ್ಲ. “ಮೊದಲೆ ಹಳ್ಳಿಯ ಜನ. ಒಂದಕ್ಕೆಂಟು ಸುದ್ದಿ ಸೃಷ್ಠಿಸಿಬಿಡುತ್ತಾರೆ. ಸುಮ್ಮನೆ ಆ ಮಾತು ಬೇಡ” ಎಂದು ಶಂಕರ ಕಡ್ಡಿ ಮುರಿದಂತೆ ಹೇಳಿದನು. ಕೊನೆಗೆ ಜ್ಯೋತಿ, “ಲಲಿತಳ ಮಾಹಿತಿ ಸಿಗುತ್ತಿಲ್ಲ. ಈಗ ಪೊಲೀಸ್ ಕಂಪ್ಲೇಂಟ್ ಮಾಡಿ ಬಿಡೋಣ ಬೆಟರ್ ಅನ್ಸುತ್ತೆ” ಎಂದಳು. ಚೈತನ್ ಬೇಡವೆಂದು ಅಡ್ಡಡ್ಡಕ್ಕೆ ತಲೆ ಅಲುಗಾಡಿಸಿದನು. ಶಂಕರ ಕೂಡ ಅದನ್ನೇ ಹೇಳಿದ್ದನು. ಕೊನೆಗೆ ಶಂಕರನನ್ನು ಲಲಿತಳ ಹಳ್ಳಿಗೆ ಕಳಿಸುವುದೆಂದು ತೀರ್ಮಾನವಾಯಿತು. ಅಲ್ಲಿ ಏನೂ ಹೇಳದೆ ಕೆಲಸದ ನಿಮಿತ್ಯ ಈ ಕಡೆ ಬಂದಿರುವುದಾಗಿಯೂ, ಹಾಗೇ ಮಾತಾಡಿಸಿಕೊಂಡು ಹೋದರಾಯಿತೆಂದು ಹಳ್ಳಿಗೆ ಬಂದುದಾಗಿಯೂ ಹೇಳುವುದೆಂದು ತೀರ್ಮಾನವಾಯಿತು.
ಆರೆಂಟು ದಿನಗಳಿಂದ ಅನುಶ್ರೀಯ ಹತ್ತಿರ ಜಾಸ್ತಿ ಮಾತಾಡಲು ಸಮಯವೇ ಸಿಕ್ಕಿರಲಿಲ್ಲ. ಈ ದಿನ ಆಕೆಯ ಹತ್ತಿರ ಸ್ವಲ್ಪ ಜಾಸ್ತೀನೆ ಮಾತಾಡಬೇಕು ಎಂದುಕೊಂಡು ಜ್ಯೋತಿ ಮೇಲೆದ್ದಳು. ಚೈತನ್ ಕೂಡ ಮೇಲೆದ್ದು ತನ್ನ ದಾರಿ ಕಾಯದೆ, ಆಫೀಸ್ ಬಾಗಿಲು ಮುಚ್ಚಿಕೊಂಡು ಮನೆಗೆ ಹೋಗಲು ರಂಗಣ್ಣನಿಗೆ ತಿಳಿಸಿ ಜ್ಯೋತಿಯನ್ನು ಹಿಂಬಾಲಿಸಿದನು. “ಜ್ಯೋತಿ ಎಲ್ಲಿಗೆ ಹೋಗುವದು” ಎಂದನು. “ನಾನು ಅನು ಹತ್ರ ಹೋಗಿ ಮಾತಾಡ್ಬೇಕು. ಎಂಟು ದಿನಗಳಿಂದ ಅವಳಿಗೆ ಹೈ ಬೈ ಅಂತಷ್ಟೆ ಮಾತಾಡಿಸಿದ್ದೀನಿ. ಪಾಪ ಅವಳಿಗೆಷ್ಟು ಬೇಜಾರಾಗಿದೆಯೋ ಏನೋ” ಎಂದಳು. ಚೈತನ್ ಕೂಡ ಮುಖ ಸಪ್ಪಗಾಗಿಸಿ, “ನಾನೂ ಕೂಡ ಅವಳನ್ನು ನೋಡದೇ ಎಂಟು ದಿನಗಳಾದವು” ಎಂದನು. “ಸರಿ ಬಿಡು ಈಗ ಇಬ್ರೂ ಅಲ್ಲಿಗೇ ಹೋಗೋಣ” ಎಂದು ಜ್ಯೋತಿ ಗಾಡಿಯ ವೇಗವನ್ನು ಹೆಚ್ಚಿಸಿದಳು. ಚೈತನ್ ಸಹ ತನ್ನ ಬೈಕ್ನ ವೇಗವನ್ನು ಹೆಚ್ಚಿಸಿದನು. ಯಾಕೋ ಅವರಿಗೆ ಅರಿವಿಲ್ಲದೇ ಒಂಥರಾ ಸಂಕಟವಾಗುತ್ತಿದೆ. ಇಬ್ಬರೂ ತಮಗಾಗುತ್ತಿರುವ ಕಳವಳದಿಂದ ಮಾತಾಡದೆ ಮೌನವಾಗಿ ಗಾಡಿ ಒಡಿಸಿದರು. ಅವರೆಷ್ಟೇ ಅವಸರದಿಂದ ಬಂದರೂ ಚಿಕ್ಕಬಾಣಾವರ ಜಂಕ್ಷನ್ನಲ್ಲಿ ರೈಲು ಹಾದು ಹೋಗುವ ಸಮಯ. ಸಾಲುಗಟ್ಟಿಕೊಂಡು ಗರ್ರ್, ಬುರ್, ಬ್ರ್ರ್ ಬ್ರಕ್, ಬ್ರಕ್… ನಾನಾ ತರಹ ಶಬ್ದ ಮಾಡುತ್ತ ವಿವಿಧ ವಾಹನಗಳ ಚಾಲಕರು ಅಸಹನೆಯಿಂದ ರೈಲಿನ ದಾರಿ ಕಾಯುತ್ತಿದ್ದಾರೆ. ತಡೆ ಬೀಳುವ ಮೊದಲೆ ಪಾರಾಗಬೇಕೆಂದು ಎಷ್ಟು ಪ್ರಯತ್ನಿಸಿದರೂ ಜ್ಯೋತಿ, ಚೈತನ್ ನಿರುಪಾಯದಿಂದ ಗಾಡಿ ನಿಲ್ಲಿಸಿದರು.
ರೈಲು ಸಾಗಿದ ತಕ್ಷಣ ವಾಹನಗಳು ಹೊಗೆ ಉಗುಳುತ್ತ ಸಾಗಹತ್ತಿದವು. ಜ್ಯೋತಿ ಚಾಕ ಚಕ್ಯತೆಯಿಂದ ದಾರಿ ಮಾಡಿಕೊಂಡು ಚೈತನ್ಗಿಂತ ಮುಂದೆ ಓಡುತ್ತಿದ್ದಾಳೆ. ಚೈತನ್ ಸಹ ಒಂದು ಬಗೆಯ ಉದ್ವೇಗದಿಂದ ವೇಗವಾಗಿ ಚಲಿಸುತ್ತಿದ್ದಾನೆ. ಜ್ಯೋತಿ ಅನುಶ್ರೀಯ ಮನೆ ಮುಂದೆ ಗಾಡಿ ನಿಲ್ಲಿಸಿದಳು. ಅನುಶ್ರೀ ಒಳಗೆ ನೇಣು ಕುಣಿಕೆ ಎಳೆದುಕೊಳ್ಳಲು ಯತ್ನಿಸುತ್ತಿದ್ದಾಳೆ. ಆದರೆ ಹಗ್ಗ ಸರಿದಾಡುತ್ತಿಲ್ಲ. ಹೇಗೋ ಮಾಡಿ ಹಗ್ಗವನ್ನು ಎಳೆದುಕೊಂಡಳು. ಹೊರಗೆ ಜ್ಯೋತಿ ಬಾಗಿಲು ಬಡಿದೇ ಬಡಿಯುತ್ತಿದ್ದಾಳೆ. ಅನುಶ್ರೀ ತಟ್ಟನೆ ಬಾಗಿಲು ತೆಗೆಯುವ ಅಭ್ಯಾಸದವಳು. ಯಾಕೆ ತೆಗೆಯುತ್ತಿಲ್ಲ ಎಂದುಕೊಂಡಳು. ಕಿಡಕಿ ತಟ್ಟಿದಳು. ಅದರ ಬೋಲ್ಟ್ ಹಾಕಿಲ್ಲದಿದ್ದುದರಿಂದ ಅದು ಸರಕ್ಕನೆ ಒಳಗೆ ಸರಿಯಿತು. ನಡು ಮನೆಯ ಬಾಗಿಲು ಮುಚ್ಚಿಲ್ಲ. ಅನುಶ್ರೀ ಫ್ಯಾನ್ ಕೆಳಗೆ ಪುಟ್ಟದೊಂದು ಟೇಬಲ್ ಮೇಲೆ ನಿಂತು ಹಗ್ಗದ ಕುಣಿಕೆಯನ್ನು ಕತ್ತಿಗೆ ಎಳೆದುಕೊಳ್ಳಲು ಯತ್ನಿಸುತ್ತಿದ್ದಾಳೆ. ಜ್ಯೋತಿಯ ಎದೆ ದಸಕ್ ಎಂದಿತು. “ಅನೂ, ಚೈತೂ” ಎಂದು ಚೀರಿದಳು. ಆ ಹೊತ್ತಿಗೆ ಚೈತನ್ ಕೂಡ ಗಾಡಿ ನಿಲ್ಲಿಸಿ ಜ್ಯೋತಿಯ ಕೂಗಿನಿಂದ ಅನುಮಾನಿಸಿ ಕಿಡಕಿಯಲ್ಲಿ ಇಣುಕಿದ, ತಡಮಾಡದೆ ತನ್ನೆಲ್ಲಾ ಶಕ್ತಿ ಒಟ್ಟು ಗೂಡಿಸಿ ಕದಕ್ಕೆ ಒದ್ದು, ಒಳಗೋಡಿ ಅನುಶ್ರೀಯನ್ನು ಹಿಡಿದುಕೊಂಡು ಕುಣಿಕೆ ಬಿಗಿಯಾಗದಂತೆ ಬಲಗೈಯಿಂದ ಹಗ್ಗ ಸರಿಸಿ ಹಿಡಿದನು. ಆ ಹೊತ್ತಿಗೆ ಜ್ಯೋತಿ ತೇಕುತ್ತಾ ಒಳಗೆ ಬಂದು ಚೇರ್ ಮೆಲೆ ಹತ್ತಿ ಹಗ್ಗ ತೆಗೆದೆಸೆದಳು.
ಅನುಶ್ರೀಗೆ ಅಲ್ಲಿ ಏನು ನಡೆಯುತ್ತಿದೆ ಎಂಬುದು ಅರ್ಥವಾಗುವ ಹೊತ್ತಿಗೆ ಅವಳನ್ನು ಕೆಳಗಿಳಿಸಿದ ಚೈತನ್ ಫಟೀರ್ ಕೆನ್ನೆಗೆ ಬಾರಿಸಿಬಿಟ್ಟನು. ಆ ಕಡೆ ಲಿತಾ ಆ ರೀತಿ ನೋಯಿಸುತ್ತಿರುವಾಗ, ಇಲ್ಲಿ ಈಕೆ ನೇಣು ಬಿಗಿದುಕೊಳ್ಳುತ್ತಿದ್ದಾಳೆ. ಚೈತನ್ಗೆ ರೋಸಿ ಹೋಗಿತ್ತು. ಯಾರಿಗೂ ಬೈದು, ಬಡಿದು ಅನುಭವವೇ ಇಲ್ಲದ ಅವನು ಸ್ವತಃ ತಾನೆ ಬೈಗುಳ, ಬಡಿತ, ಅವಮಾನಕ್ಕೆ ಈಡಾಗಿ ಬೆಳೆದವನಲ್ಲ. ಅವನ ಮನೋರಾಜ್ಯ ಒಂದು ಶಾಂತ ಸಾಗರವಿದ್ದಂತೆ. ಅಂತಹ ಅವನ ಮನಸ್ಸು ಇಂದು ಕಳವಳಗೊಂಡು, ಅನುಶ್ರೀಯ ಮೇಲಿನ ಮೋಹ ಆತನನ್ನು ಹಾಗೆ ಹೊಡೆಯಲು ಪ್ರೇರೇಪಿಸಿತ್ತು. ಜ್ಯೋತಿ ಆವಾಕ್ಕಾಗಿ ನಿಂತಿದ್ದು ಬಿಟ್ಟಳು. ಅನುಶ್ರೀ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಮೊಣಕಾಲ ಮೇಲೆ ಗದ್ದವಿರಿಸಿಕೊಂಡು ಬಿಕ್ಕಳಿಸುತ್ತಿದ್ದಾಳೆ. ಒಂದೆ ನಿಮಿಷ ತಡವಾಗಿದ್ದರೆ ಆಕೆ ಸಾವಿನ ಮನೆಯನ್ನು ಪ್ರವೇಶಿಸಿರುತ್ತಿದ್ದಳು. ಚೈತನ್ ಹಾಗೆ ಕೆನ್ನೆಗೆ ಹೊಡೆದವನು ತನ್ನ ಕೈಯನ್ನೇ ದುರುಗುಟ್ಟಿಕೊಂಡು ಅತ್ತಿಂದಿತ್ತ ಇತ್ತಿಂದತ್ತ ನಾಲ್ಕಾರು ಸಲ ಚಡಪಡಿಕೆಯಿಂದ ಹೆಜ್ಜೆ ಹಾಕಿದನು. ಒಂದು ನಿರ್ಧಾರಕ್ಕೆ ಬಂದವನಂತೆ ಬಾಗಿ ಅನುಶ್ರೀಯ ರಟ್ಟೆಗೆ ಕೈ ಹಾಕಿ ಮೇಲೆಬ್ಬಿಸಿದನು. ಆಕೆ ನಡುಗುತ್ತಿದ್ದಳು. ಆ ಹೊತ್ತಿಗೆ ಕೆಂಪಮ್ಮ, ಜಯಲಕ್ಷ÷್ಮಮ್ಮ ಮತ್ತು ಬೀದಿಯ ಆರೆಂಟು ಜನ ಸೇರಿ ಗಾಬರಿಯಿಂದ ಸನ್ನಿವೇಶವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸತೊಡಗಿದ್ದರು. ಅಲ್ಲೇ ಇದ್ದ ಚೇರ್ ಫ್ಯಾನ್, ಬಿದ್ದಿದ್ದ ಹಗ್ಗ ಎಲ್ಲ ಕಂಡಾಗ ನೆರೆದವರಿಗೆ ನಡೆದ ಸಂಗತಿ ಅರ್ಥವಾಗಿ ನಿಟ್ಟುಸಿರು ಬಿಟ್ಟರು. ಚೈತನ್ ಅನುಶ್ರೀಯ ಕಣ್ಣಗಳನ್ನು ದಿಟ್ಟಿಸಿದನು. ಆಕೆ ತಲೆ ಕೆಳಗೆ ಹಾಕಿದಳು. ಆತ ಹೆಚ್ಚು ಕಡಿಮೆ ಆಕೆಯನ್ನು ಎಳೆದುಕೊಂಡೇ ಹೊರಗೆ ಬಂದು ಬೈಕ್ ಹತ್ತಿ, ಆಕೆಗೂ ಹತ್ತಲು ಹೇಳಿದನು.
ಎಲ್ಲರೂ ಉಸಿರು ಬಿಗಿ ಹಿಡಿದು ನೋಡುತ್ತಾ ನಿಂತಿದ್ದರು. ಕೆಂಪಮ್ಮನಿಗೆ ಆ ಜೋಡಿಯನ್ನು ಕಂಡು ಹಾಲಿನ ಪ್ರಕರಣ ನೆನಪಾಯಿತು. ಆಕೆಯ ಕಂಗಳಲ್ಲಿ ಒಂದು ರೀತಿಯ ನೆಮ್ಮದಿ ಕುಣಿದಾಡತೊಡಗಿತ್ತು. ಚೈತನ್ ಮತ್ತೆ ಅನುಶ್ರೀಯ ಕಡೆ ತಿರುಗಿದ. ಆಕೆಯ ಕಂಗಳಲ್ಲಿ ಒಂದು ರೀತಿಯ ಭಯ ಹರವಿತ್ತು. “ಮನೆಗೆ ಹೋಗೋದು” ಎಂದನು. ಆಕೆ ಸುಮ್ಮನೆ ನಿಂತಿದ್ದಳು. ಚೈತನ್ ಬೈಕ್ ಚಾಲೂ ಮಾಡಿ, “ಹತ್ತು” ಎಂದನು. ಅನು “ಒಲ್ಲೆ” ಎಂದಳು. “ಏನಂದೆ” ಕೇಳಿದವನ ತುಟಿಯ ಮೇಲೆ ಕಿರುನಗೆ ಮೂಡಿ ಮಾಯವಾಯಿತು. ಆಕೆ ಹಿಂಜರಿಯುತ್ತ, “ನಾನು ಒಲ್ಲೆ” ಎಂದಳು. “ಎಲ್ಲಿರುತ್ತೀ ಮತ್ತೆ” “ಮನ್ಯಾಗ”. “ಯಾರ ಮನ್ಯಾಗ”. ಈಗ ಅನುಶ್ರೀಯ ಕಣ್ಣಿಗೆ ಚುಚ್ಚಿದಂತಾಗಿ ಜಿಲ್ ಅಂತ ಕಣ್ಣೀರು ಧಾರೆ ಇಳಿಯಿತು. ಹೌದು ತಾನೀಗ ಇರುವ ಬಾಡಿಗೆ ಮನೆಯಲ್ಲಿ ಅಪ್ಪನೂ ಇಲ್ಲ. ಆ ಮನೆಗೆ ತನ್ನ ಮನೆ ಅನ್ನಬೇಕೆ, ಅಪ್ಪನ ಮನೆ ಅನ್ನಬೇಕೆ, ಮುನಿಶಿವರಾಜು ಮನೆ ಅನ್ನಬೇಕೆ- ಆಕೆಗೆ ತಲೆ ಒಡೆದು ಹೋಳಾಗಿ ಹೋದ ಅನುಭವವಾಯಿತು. ತಾನು ಸತ್ತು ಹೋಗಿದ್ದರೆ ಈ ಎಲ್ಲಾ ಪ್ರಶ್ನೆಗಳು ಹುಟ್ಟುತ್ತಿರಲಿಲ್ಲವೆಂದುಕೊಂಡು ಒಳಕ್ಕೆಳೆದುಕೊಂಡು ಮೂಗೇರಿಸಿದಳು. “ಏನ್ರೀ ಏನು ಯೋಚ್ನೆ ಮಾಡ್ತೀರಿ?” ಚೈತನ್ನ ಕಂಚಿನ ಕಂಠ ಮೊಳಗಿದಾಗ ಅನುಶ್ರೀ ದುಃಖ, ಅಸಹಾಯಕತೆ, ಅವಮಾನದಿಂದ ಕುದ್ದು ಹೋದಳು. ಚೈತನ್ಗೆ ತನ್ನ ಮುಖ ಕಾಣದಿರಲಿ ಅಂತ ತನ್ನ ಎಡಕ್ಕೆ ತಿರುಗಿ ತೋರು ಬೆರಳಿನಿಂದ ಕಂಬನಿ ಒರೆಸಿಕೊಂಡಳು. “ಹೂಂ ಕೇಳಿಸ್ತಿಲ್ವಾ?” ಹತ್ತಬೇಕಂದ್ರೆ ಹತ್ತಬೇಕು ಅಷ್ಟೆ. ಎಷ್ಟೊತ್ತು ಇಲ್ಲಿ ನಿಲ್ಲೋದು?” ಎಂದು ತುಸು ಗಂಭೀರವಾಗಿ.
“ನನಗ ಭಯ ಆಕ್ಕೆತೈತ್ರಿ. ನಾನೊಲ್ಲೆ ಗಾಡಿ ಮ್ಯಾಲೆ ಹತ್ತಾಕೆ” ಅನುಶ್ರೀ ದಾವಣಿಯ ಸೆರಗಿನಿಂದ ಬೆವರಿದ ಅಂಗೈಗಳನ್ನು ಒರೆಸಿಕೊಂಡಳು. “ಓಹ್ ಹಂಗಾ” ಎಂದನು ಆತ. ಆಕೆ ತಾತನ ಮುಖ ನೋಡಿದಳು. ಚಡಪಡಿಸಿದಳು. ಚೈತನ್ಗೆ ಆಕೆಯ ಮನಸ್ಥಿತಿ ಅರ್ಥವಾಯಿತು, “ಭಯ ಮಾಡ್ಕೊಬೇಡ. ಹೆದರಿಕೆ ಆದ್ರೆ ನನ್ನ ಭುಜ ಹಿಡ್ಕೊಳ್ಳೋದು.ಇಲ್ಲಿಂದ ನಾಲ್ಕೈದು ನಿಮಿಷದ ದಾರಿ ಅಷ್ಟೆ” ಎಂದನು. ಅನುಶ್ರೀ ಇನ್ನೂ ಸುಮ್ಮನೆ ನಿಂತಿದ್ದಳು. ಕೆಂಪಮ್ಮ ಎಲ್ಲರಿಗಿಂತಲೂ ಸ್ವಲ್ಪ ಜಾಸ್ತಿ ಕುತೂಹಲದಿಂದ ನೋಡುತ್ತಿದ್ದಳು.
ಚೈತನ್ ‘ಹೂಂ’ ಎಂದು ಗುಡುಗಿ ಬೈಕ್ ಹತ್ತಿದನು. ಅನುಶ್ರೀ ಮೆಲ್ಲನೆ ಹಿಂದಿನ ಸೀಟಿನಲ್ಲಿ ಕುಳಿತು ಚೈತನ್ ಭುಜದ ಮೇಲೆ ಹಗುರವಾಗಿ ಕೈ ಇಟ್ಟಳು. ಬಲಗೈಯಿಂದ ಬೈಕ್ನ ಹೋಲ್ಡರ್ ಹಿಡಿದುಕೊಂಡಳು. ಗಾಡಿ ಮುಂದೆ ಓಡಿತು. ಜ್ಯೋತಿ, ಅಜ್ಜಿ, ಕೆಂಪಮ್ಮ ಎಲ್ಲರೂ ಕೈ ಬೀಸಿದರು. ಚೈತನ್ ಪ್ರತಿಯಾಗಿ ಮುಗುಳ್ನಗೆ ನಕ್ಕು ಗಾಡಿ ಓಡಿಸಿದನು. ಅಲ್ಲಿ ಸೇರಿದದ ಹುಡುಗರು ಚೈತನ್ ಕಡೆ ತಮಾಷೆಯಾಗಿ ಕಣ್ಣು ಮಿಟುಕಿಸಿ ತಮ್ಮ ಸಂತಸವನ್ನು ವ್ಯಕ್ತ ಪಡಿಸಿದರು. ಹೀಗೆ ಆ ವಿಪತ್ತು ದೂರವಾಗಿತ್ತು.
ಅನುಶ್ರೀ ಚೈತನ್ನ ಶರ್ಟನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು. ಆಕೆ ಅಲುಗಾಡಿದಂತೆಲ್ಲಾ ಶರ್ಟಿನ ಕೊರಳುಪಟ್ಟಿ ಕುತ್ತಿಗೆಗೆ ಬಿಗಿಯಾಗಿ ಚೈತನ್ಗೆ ತೊಂದರೆಯಾಗತೊಡಗಿತು. ಆತ ಗಕ್ಕನೆ ಬ್ರೇಕ್ ಹಾಕಿ ಗಾಡಿ ನಿಲ್ಲಿಸಿದಾಗ ಅನುಶ್ರೀ ಜೋಲಿ ಹೋದಂತಾಗಿ ಚೈತನ್ ಬೆನ್ನಿಗೆ ಅಪ್ಪಳಿಸಿದಳು. ಚೈತನ್ ಸಾವರಿಸಿಕೊಂಡು ಹಿಂದಕ್ಕೆ ರ್ರನೆ ತಿರುಗಿ, “ನನ್ನ ಉಸಿರುಗಟ್ಟಿಸಿ ಸಾಯಿಸ್ತೀಯ ನೀನು. ಜೊತೆಗೆ ನಿನ್ನ ಕೈಜಾರಿದರೆ ನಿನ್ನದೂ ಮುಗಿಯುತ್ತೆ ಕಥೆ. ನನ್ನ ಎಲ್ಲಿಗೆ ಕಳಿಸಬೇಕೂಂತ ಮಾಡಿದ್ದೀರಿ? ನಿಮಗೆ ನನ್ನ ಜೊತೆ ಬರೋಕೆ ಇಷ್ಟ ಇಲ್ಲಂದ್ರೆ ಇಲ್ಲಿಳಿದು ನಿಮ್ಮಿಷ್ಟ ಇದ್ದಲ್ಲಿಗೆ ಹೋಗ್ಬಹುದು. ಭುಜ ಗಟ್ಟಿಯಾಗಿ ಹಿಡ್ಕೊಂಡು ಕೂತ್ರೆ ನಿಮ್ಮದೇನಾದರೂ ಗಂಟು ಹೋಗುತ್ತಾ ಕಾಣೆ!” ಎಂದು ದಬಾಯಿಸಿದನು. “ತಪ್ಪಾತ್ರಿ, ಚೊಲೊತ್ನಾಗಿ ಕುಂತ್ಕತೀನಿ” ಇಂಪಾದ ಧ್ವನಿ ಕೇಳಿ ಚೈತನ್ಗೆ ಖುಷಿ. ನಗು ಬಂದರೂ ನಗಲಿಲ್ಲ. “ಸರಿ ಸರಿ. ಸರಿಯಾಗಿ ಕೂತ್ಕೊಳ್ಳಿ” ಎಂದು ಗಾಡಿ ಶುರು ಮಾಡಿದನು. ಈ ಸಲ ಅನುಶ್ರೀ ಭುಜವನ್ನು ಗಟ್ಟಿಯಾಗಿ ಹಿಡಿದಿದ್ದಳು. ಚೈತನ್ ಕನ್ನಡಿಯಲ್ಲೇ ಆಕೆಯನ್ನು ನೋಡಿ, ಆಕೆಯ ಹಿಡಿತ ಬಿಗಿಯಾಗುತ್ತಿರುವುದನ್ನು ಕಂಡು, ತನ್ನಷ್ಟಕ್ಕೆ ಪುಲಕಿತನಾಗಿದ್ದ. ಆಕೆಗೆ ಒಂಥರಾ ನೆಮ್ಮದಿಯಾದಂತಾಗಿ ತನ್ನ ಕೈ ಭಾರವನ್ನೆಲ್ಲಾ ಆತನ ಹೆಗಲ ಮೇಲಿಟ್ಟು ಬಿಟ್ಟಿದ್ದಳು. ಚೈತನ್ನಂತೆ ಆಕೆಗೂ ಒಳಗೊಳಗೆ ರೋಮಾಂಚನವಾಗಿತ್ತು. ಆಕೆಗೆ ತಾನು ಎಲ್ಲಿದ್ದಾಕೆ ಎಲ್ಲಿಗೆ ಬಂದು ಮತ್ತೆಲ್ಲಿಗೆ ಹೋಗುತ್ತಿದ್ದೇನೆ ಅಂತ ಜಿಜ್ಞಾಸೆ ಕಾಡತೊಡಗಿತು.
ಚೈತನ್ನ ಗಾಡಿ ಒಂದು ಭವ್ಯವಾದ ಬಂಗಲೆ ಮುಂದೆ ನಿಂತಿತು. ಅನುಶ್ರೀ ಕಣ್ಣರಳಿಸಿ ಮನೆಯನ್ನು, ಕಾಂಪೌಂಡಿನಲ್ಲಿರುವ ಹೂಬಳ್ಳಿ, ಗಿರ-ಮರಗಳನ್ನೂ ನೋಡಿ ವಿಸ್ಮಿತಳಾದಳು. ಗಾರ್ಡ್ ನಂಜಪ್ಪ ಎದ್ದು ಗೇಟು ತೆರೆದು ಚೈತನ್ಗೆ ಸೆಲ್ಯೂಟ್ ಹೊಡೆದ. ಚೈತನ್ ಮುಗುಳ್ನಕ್ಕು ಒಳನಡೆದು, ಹಿಂತಿರುಗಿ ಅನುಶ್ರೀಗೆ, ‘ಬಾ’ ಎಂದನು. ಅನುಶ್ರೀ ತನ್ನ ದಾವಣಿ ಸೆರಗನ್ನು ಕೈಗೆ ಸುತ್ತಿಕೊಂಡು ಮುಜುಗುರಕ್ಕೆ ಈಡಾದವಳಂತೆ ಕಂಡಳು. ಚೈತನ್ ನಂಜಪ್ಪನಿಗೆ ಅವಳನ್ನು ಪರಿಚಯಿಸಿದನು. ನಂಜಪ್ಪ ಅನುಶ್ರೀಗೆ ಗೌರವದಿಂದ ವಂದಿಸಿ ತನ್ನೊಳಗೆ ಒಂದೆರಡು ಪ್ರಶ್ನೆಗಳಿಗೆ ಜನ್ಮ ಕೊಟ್ಟನು.
ಅನುಶ್ರೀ ಆ ಪುಟ್ಟ ತೋಟವನ್ನು ಕಣ್ಣು ಬಿಟ್ಟು ಎವೆ ಇಕ್ಕದೆ ನೋಡಿದಳು. ತೆಂಗು, ಹಲಸು, ಪೇರಲ, ಲಿಂಬಿ ಗಿಡಗಳು, ಗುಲಾಬಿ, ಮಲ್ಲಿಗೆ, ದುಂಡು ಮೊಗ್ಗು, ಕನಕಾಂಬರ ಹೂಗಿಡಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಸಸ್ಯಗಳು ಅನುಶ್ರೀಗೆ ಇಲ್ಲಿ ಅಪರಿಚಿತವೆನ್ನಿಸಿದವು. ಅವಳ ಮುಗ್ಧ ಸಂತೋಷಕ್ಕೆ ಗುಲ್ ಮೊಹರ್ ಹೂಗಳು ಮುಗುಳ್ನಕ್ಕಂತೆ ಕಂಡವು. ಅವಳು ಗುಲಾಬಿ ಗಿಡವೊಂದರ ಮುಂದೆ ನಿಂತು ಬಿಟ್ಟಳು. “ಹೂವು ಬೇಕಾ” ಚೈತನ್ನ ಪ್ರಶ್ನೆ ಕೇಳಿ ಅವಳು, “ಬ್ಯಾಡ ಬ್ಯಾಡ್ರಿ ಸುಮ್ನಾ ನೋಡ್ದೆ” ಎಂದಳು. ಅವಳ ಸ್ನಿಗ್ಧ ಚೆಲುವು ಗುಲಾಬಿ ಹೂವಿಗಿಂತ ಚೆಂದದ್ದು ಪಾಪ ಅವಳಿಗೆ ಗೊತ್ತಿಲ್ಲ ತನ್ನ ರೂಪದ ಬಗ್ಗೆ ಎಂದುಕೊಂಡನು ಚೈತನ್. ಎರಡು ತಾಸಿನ ಹಿಂದಷ್ಟೆ ಬದುಕಿಗೆ ವಿದಾಯ ಹೇಳಲು ಯತ್ನಿಸಿದ್ದ ಹುಡುಗಿ ಈಗ ಅದಮ್ಯ ಆಸೆಯಿಂದ ಗುಲಾಬಿ ಹೂಗಳ ಮುಂದೆ ನಿಂತಿದ್ದಾಳೆ. ಚೈತನ್ ಎದೆ ಆನಂದದಿಂದ ತುಂಬಿತು. ಆತನು ತಾನೇ ಒಂದು ಚೆಂದದ ಕಡುಗೆಂಪು ಗುಲಾಬಿ ಹೂವನ್ನು ಕೊಯ್ದು ಕೊಂಡನು. ಆಕೆ ಮತ್ತೆ ಆಸೆಯಿಂದ ನೋಡುತ್ತಲೇ ಇದ್ದಳು. ಆತ ಹೂವು ಹಿಡಿದುಕೊಂಡೆ ಬಾಗಿಲನ್ನು ತೆರೆದು ಒಳ ನಡೆದನು. “ಹೂಂ ಬಾ” ಎಂದು ಪ್ರೇಮ ಭಾವದಿಂದ ಆಜ್ಞಾಪಿಸಿದನು. ಆಕೆ ಲಂಗದ ನೆರಿಗೆಯನ್ನು ಬಲಗೈಯಿಂದ ತುಸು ಮೇಲೆತ್ತಿಕೊಂಡು ಹೊಸ್ತಿಲು ದಾಟಿ ‘ಚೇತನ ನಿವಾಸ’ದಲ್ಲಿ ತನ್ನ ಕೋಮಲವಾದ ಕಾಲನ್ನಿಟ್ಟು ಒಳನಡೆದಳು. ಆತನಿಗೆ ಆಕೆ ತನ್ನ ಹೃದಯದ ಹೊಸ್ತಿಲು ದಾಟಿ ಬಂದು ಹೃದಯ ದೇಗುಲದಲ್ಲಿ ಕುಳಿತಷ್ಟು ಖುಷಿಯಾಯಿತು.
“ಅನು ಬಾ ಇಲ್ಲಿ” ಆಕೆ ಆತನನ್ನು ಸುಮ್ಮನೆ ಹಿಂಬಾಲಿಸಿದಳು. ಮುಖ್ಯ ದ್ವಾರಕ್ಕೆ ಅಂಟಿಕೊಂಡೇ ಸುಸಜ್ಜಿತವಾದ ಆಧುನಿಕ ಅಡುಗೆ ಮನೆ. “ದೇವರ ಮನೆ ಎಲ್ಲಿ?” ಎಂದಳು. ಆತ ತನ್ನ ಎದೆ ಹಿಡಿದುಕೊಂಡು ಇಲ್ಲಿ ಎಂದನು. ಇಬ್ಬರೂ ನಿಃಶಬ್ದವಾಗಿ ಬಾಯಿ ಅಗಲಿಸಿ ನಕ್ಕರು. ಅಡುಗೆ ಮನೆ ಪಕ್ಕದಲ್ಲೇ ದೇವರ ಮನೆ. ಶ್ರೀಕೃಷ್ಣನ ವಿಗ್ರಹದ ಮುಂದೆ ಎಣ್ಣೆ ತುಂಬಿದ ಸಮೆಯಲ್ಲಿ ದೀಪ ಚೆಂದಗೆ ಬೆಳಗತೊಡಗಿತ್ತು. ಅನುಶ್ರೀ ಮುಖ ಎತ್ತಿ ನೋಡಿದಳು. ಆತನು ನಿಮೀಲಿತ ನೇತ್ರನಾಗಿ ದೇವರ ಮನೆಯ ಬಾಗಿಲಿಗೆ ಒರಗಿ ನಿಂತಿದ್ದನು. ಆಕೆಯ ದೃಷ್ಟಿ ಆತನ ಕೈ ಕಡೆ ಹರಿಯಿತು. ಅಲ್ಲಿ ಕಡುಗೆಂಪು ಗುಲಾಬಿ ಹಾಗೇ ಇತ್ತು. ಚೈತನ್ ವಾಸ್ತವಕ್ಕೆ ಬಂದ. ಕೈಯಲ್ಲಿ ಹುವಿರುವುದು ನೆನಪಾಗಿ ಏನು ಮಾತಾಡದೆ ಅನುಶ್ರೀ ಮುಂದೆ ಕೈ ಚಾಚಿದ. ಅನುಶ್ರಿ ಬಹಳಷ್ಟು ವಿಷಯಗಳಲ್ಲಿ ಮುಗ್ಧಳು. ಆದರು ಆತನ ಹೂವು ಹಿಡಿದು ಮುಂದೆ ನಿಂತಿದ್ದು, ಆಕೆ ನೋಡಿದ ಸಿನಿಮಾಗಳಲ್ಲಿಯ ಪ್ರೇಮ ಪ್ರಕರಣಗಳ ನೆನಪಾಯಿತು. ಚಾಚಿದ ಕೈಯನ್ನು ಹಾಗೇ ಹಿಂದಕ್ಕೆ ತೆಗೆದುಕೊಂಡಳು. ಆಕೆಗೆ ತನ್ನ ತಾಯಿ ನೆನಪಾದಳು. ತನ್ನದೇ ಸುಖವನ್ನರಸಿಕೊಂಡು ಹೋಗಿರುವ ತಂದೆಯ ನೆನಪಾಯಿತು. ಈಗ ಎದುರಿಗಿರುವ ಚೈತನ್ ಬಹಳ ಓದಿಕೊಂಡಿರುವನೆಂದು ಅಷ್ಟೆ ಗೊತ್ತು. ಮನೆಗೆ ಕರೆದುಕೊಂಡು ಬಂದು, ತಾನು ಆತ್ಮಹತ್ಯೆ ಪ್ರಯತ್ನಿಸಿದ್ದಕ್ಕೆ ಛೀಮಾರಿ ಹಾಕಿ ಬೈದು ಬುದ್ಧಿ ಹೇಳಲು ಕರೆದುಕೊಂಡು ಬಂದಿರಬಹುದು. ಆದರೆ ಆತನು ಅದನ್ನು ಮರೆತಂತೆ ಇದೆ ಎಂದುಕೊಂಡಳು. ಮನೆ ತೋರಿಸಿ ವಾಪಸ್ ಕಳಿಸುವನೊ ಏನೊ. ಇಲ್ಲಿ ಈ ಮನೆಯಲ್ಲಿ ಯಾರದೂ ಸುಳಿವೇ ಇಲ್ಲ. ಮನೆ ಕೆಲಸವನ್ನು ಕೊಡುವನೇನೋ. ತಾನಂತೂ ಯಾವುದಾದರೂ ಕೆಲಸ ಮಾಡಿದರಷ್ಟೆ ಮುಂದಿನ ಜೀವನ ಸಾಗುತ್ತದೆ. ಆದರೆ ತಾನು ಜಾಸ್ತಿ ಓದಿಲ್ಲ.
ಹೊಲದ ಕೆಲಸ, ಯಾವುದೇ ಫ್ಯಾಕ್ಟರಿ ಕೆಲಸ ಗೊತ್ತಿಲ್ಲ. ಗೊತ್ತಿರುವುದೆಂದರೆ ಮನೆ ಕೆಲಸ ಮಾತ್ರ. ಏನು ಮಾಡುವುದು ಎಂದು ಅನುಶ್ರೀ ಯೋಚನೆಯಲ್ಲಿ ಮುಳುಗಿದ್ದಳು. ಚೈತನ್ ಆಕೆಯ ಕಣ್ಮುಂದೆ ಕೈ ಅಲುಗಾಡಿಸಿದಾಗ ಆಕೆ ವಾಸ್ತವಕ್ಕೆ ಬಂದಳು. “ಇದು ನಿನಗೇ ಮುಡಿದುಕೊ” ಎಂದನು ಹೂವನ್ನು ಆಕೆಯ ಕೈಯಲ್ಲಿಡುತ್ತಾ. ಆಕೆ ಕೈ ಕೊಸರಲಿಲ್ಲ. ಬದಲಾಗಿ ಹೂಕೊಟ್ಟ ಆತನ ಕೈಯನ್ನು ತನಗರಿವಿಲ್ಲದೇ ಹಿಡಿದುಕೊಂಡಿದ್ದಳು. ಚೈತನ್ಗೆ ಆನಂದವಾಗಿತ್ತು. ತನ್ನ ಜೀವನದ ಎಲ್ಲಾ ತಿರುವುಗಳು ಆಕಷ್ಮಿಕವೆ! ಆತನ ಆಕೆಯ ಬೆರಳುಗಳಿಗೆ ಸಾತ್ವಿಕವಾಗಿ ಮುದ್ದಿಸಿ, ಆಕೆಯ ತಲೆ ನೇವರಿಸಿದನು. ಆಕೆಗೆ ದುಃಖ ಉಕ್ಕಿ ಬಂದು ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಳು. ಚೈತನ್ ಆಕೆಯನ್ನು ತನ್ನ ಎದೆಗೆ ಒರಗಿಸಿಕೊಂಡು ಸುಮ್ಮನೆ ತಲೆ ನೇವರಿಸಿದ. ಆಕೆಯ ಕೈಹಿಡಿದು ಅಡುಗೆ ಮನೆಗೆ ಹೋದ. ದೇವರ ಮನೆಗೂ ಅಡುಗೆ ಮನೆಗೂ ನಡುವೆ ಒಂದು ಗೋಡೆ ಅವೆರಡನ್ನೂ ಬೇರ್ಪಡಿಸಿತ್ತು. ಅಡುಗೆ ಮನೆಯ ಮುಂದೆ ಪುಟ್ಟ ಪಡಸಾಲೆ. ಅದನ್ನು ದಾಟಿಕೊಂಡು ಮುಂದೆ ಹೋದರೆ ಎದುರಿಗೆ ಎರಡು ಕೋಲಿಗಳು. ಆತ ಒಂದು ಕೋಲಿಯ ಬಾಗಿಲು ತೆರೆದನು. ಅಲ್ಲಿ ಒಂದೆಡೆ ಚೆಂದನೆಯ ಡೆಸ್ಕ ಮೇಲೆ ಕಂಪ್ಯೂಟರ್ ಕುಳಿತಿತ್ತು. ಅಲ್ಲಿಯೇ ಐದೈದು ಪಳಿಗಳ ಎರಡು ರ್ಯಾಕ್ನಲ್ಲಿ ಪುಸ್ತಕಗಳು ಅಚ್ಚುಕಟ್ಟಾಗಿ ಕುಳಿತಿದ್ದವು. ಗೋಡೆಗಳ ಮೇಲೆ ಆಡಂಬರವಲ್ಲದಿದ್ದರೂ ಆಡಂಬರವೆನ್ನಿಸುವ ನಿಸರ್ಗದ ಸಹಜ ಸೌಂದರ್ಯದ ಚಿತ್ರಗಳನ್ನು ಬಿಡಿಸಲಾಗಿತ್ತು. ಅಲ್ಲಿಯೇ ಒಂದು ಕಡೆ ಹಾಸಿದ ಕಂಬಳಿಯ ಮೇಲೆ ಸಂಗೀತ ಸಾಮಗ್ರಿಗಳಿದ್ದವು. ಅಪರೂಪವೆನ್ನಿಸುವ ಪ್ರಾಣಿ-ಪಕ್ಷಿಗಳ ಅಸ್ತಿ-ಪಂಜರಗಳು, ನಾಣ್ಯಗಳು, ವಿಗ್ರಹಗಳು, ಹಳೆಯ ಕಾಲದ ನಾಗರಿಕ ದಿನ ಬಳಕೆಯ ವಸ್ತುಗಳ ಮಾದರಿಗಳು ಕೂಡ ಅಲ್ಲಿದ್ದವು.
ಮುಂದುವರೆಯುವುದು
–ಹಟ್ಟಿ ಸಾವಿತ್ರಿ ಪ್ರಭಾಕರಗೌಡ