ಮಾರನೆ ದಿನ ಶಾಮಣ್ಣ ದಿನ ಪತ್ರಿಕೆಯಲ್ಲಿರುವ ಜಾಹೀರಾತು ನೋಡಿ ಯೋಚನಾಮಗ್ನಾಗಿದ್ದ. ತಾನು ಹತ್ತನೇ ತರಗತಿಯಲ್ಲಿ ಸಾಧಾರಣ ಅಂಕದೊಂದಿಗೆ ಪಾಸಾಗಿ ಮನೆಯ ಹಿರಿಯ ಮೊಮ್ಮಗನಾಗಿದ್ದುದರಿಂದ ತಂದೆಯೊಂದಿಗೆ ಕೆಲಸಕ್ಕೆ ನಿಂತಿದ್ದ. ಆತ ಜಾಸ್ತಿ ಓದಿರದಿದ್ದರೂ, ಓದುವ ಹುಡುಗರಿಗೆ ಸಹಾಯ ಮಾಡುವ ಸ್ವಭಾವದವನು. ಆತನ ಅಂತಹ ಸಹಾಯ ಮಾಡುವ ಗುಣಕ್ಕೆ ಮನೆಯಲ್ಲಿ ಎಲ್ಲರಿಗೂ ಹೆಮ್ಮೆ ಎನ್ನಿಸಿತ್ತು. ಶಾಮಣ್ಣ ಆ ಪತ್ರಿಕೆಯನ್ನು ಹಿಡಿದುಕೊಂಡು ನಡುವಮನೆಯಲ್ಲಿ ಟಿ.ವಿ ನೋಡುತ್ತಾ ಕುಳಿತ್ತಿದ್ದ ಲಲಿತೆಯನ್ನು ಕರೆದನು, “ಲಲ್ಲೀ, ಲೇ ಲಲ್ಲೀ ಬಾ ಇಲ್ಲೆ ಸ್ವಲ್ಪ” ಎಂದು ಶಾಮಣ್ಣ ಕರೆದಾಗ ಲಲಿತ, “ಬಂದೆ ಬಂದೆ ತಡಿ” ಎನ್ನುತ್ತ ತನ್ನ ಲಂಗದ ನೆರಿಗೆಯನ್ನು ಒದೆಯುತ್ತಾ ಬಂದು ಅಣ್ಣನ ಪಕ್ಕದಲ್ಲಿ ಕುಳಿತಳು. “ಏನೈತಣ್ಣ, ಸ್ಪೆಶಲ್ಲೂ” ಎಂದು ಪತ್ರಿಕೆಯ ಮೇಲೆ ಕಣ್ಣು ಹಾಯಿಸಿದಳು. ಶಾಮಣ್ಣ , “ಶ್” ಎಂದು ಸುಮ್ಮನೆ ಓದು ಎಂಬಂತೆ ಸಂಜ್ಞೆ ಮಾಡಿ ಪೇಪರನ್ನು ಆಕೆಯ ಮುಂದಿಟ್ಟನು. ತಾನು ಗುರುತಿಸಿದ ಅಂಕಣದಲ್ಲಿರುವ ಜಾಹೀರಾತನ್ನು ನೋಡಲು ಸೂಚಿಸಿದನು. ಹತ್ತನೆ ತರಗತಿಯಲ್ಲಿ ಪಾಸಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪಿ.ಯು.ಸಿಗೆ ಪ್ರವೇಶ ಕೋರಿ ಅರ್ಜಿ ಕರೆಯಲಾಗಿತ್ತು. ಶಾಮಣ್ಣ ತಾನು ಇಷ್ಟಪಟ್ಟ ಕಾಲೇಜಿನ ವಿಳಾಸವನ್ನು ಬೆರಳಿನಿಂದ ಸೂಚಿಸಿ ತೋರಿಸಿದನು. ಬೆಂಗಳೂರಿನ ವಿಜಯನಗರದ ಸರಕಾರಿ ಕಾಲೇಜಿನ ಜಾಹೀರಾತು. ಬಡ ಮಕ್ಕಳಿಗೆ ಉಚಿತ ಊಟ, ವಸತಿಯ ಸೌಕರ್ಯವಿದೆ. ಲಲಿತೆ ಖುಷಿಯಿಂದ ಅಣ್ಣನ ಮುಖ ನೋಡಿದಳು. “ಕಾಲೇಜಿಗೇನು ಕಡಿಮೆ. ಇಲ್ಲೆ ಎಲ್ಯಾರ ಸಮೀಪ ಓದ್ತೀನಂದ್ರೂ ಸರಿ. ನಿನಗ ಇಷ್ಟ ಆದಂಗ ಮಾಡು. ಬೆಂಗಳೂರಾಗ ಓದ್ತೀನಂದ್ರ ನಾನೆಲ್ಲಾ ವ್ಯವಸ್ಥೆ ಮಾಡ್ತೀನಿ” ಶಾಮಣ್ಣ ಮೆಲ್ಲನೆ ಹೇಳಿದ. ಲಲಿತೆ, “ಅಲ್ಲಣ್ಣ ನಂಗೇನು ಅಷ್ಟು ದೊಡ್ಡ ಸಿಟ್ಯಾಗ ಓದೂದಂದ್ರ ಖುಷಿ. ಆದ್ರ ಖರ್ಚು ವೆಚ್ಚ ಹೆಂಗ? ಅದೂ ಅಲ್ದಾ ನಾನು ನಿಮ್ಮೆಲ್ಲರನ್ನೂ ಬಿಟ್ಟು ಅಷ್ಟು ದೂರ ಹೆಂಗಿರೂದು..” ಎಂದಳು.
“ಏಯ್ ತಲೆಹರಟೆ, ಬಾಯ್ಮುಚ್ಕೊಂಡು ಬೀಳು. ಬೆಂಗಳರ‍್ನಾಗ ಸೀಟು ಸಿಕ್ರ ಕಣ್ಮುಚ್ಕೊಂಡು ಹೋಗಿ ಓದು. ಉಳಿದ ಉಸಾಬರಿಗೆ ನಾನಿರ್ತೀನಿ, ಈಗ ಯಾರಿಗೂ ಏನೂ ಹೇಳ್ಬಾ÷್ಯಡ. ಮಾರ್ಕ್ ಲಿಸ್ಟ್ ಬಂದ್ಮಾ÷್ಯಲೆ ತಂದು ನನ್ನ ಕೈಗೆ ಕೊಡು ಆತಿಲ್ಲ. ಈಗ ನೀನು ಟಿ.ವಿ ನೋಡ್ಬೋದು. ಬೈಯ್ಸಿಕೊಳ್ಳಬೇಕಂದ್ರ ಸಣ್ಣವ್ವನ ಹತ್ರ ಹೋಗ್ಬಹುದು” ಎಂದು ಶಾಮಣ್ಣ ಲಲಿತೆಯ ತಲೆಯ ಮೇಲೆ ಮೊಟಕಿದನು. ಶಾಮಣ್ಣನ ಪ್ರಯತ್ನಕ್ಕೆ ಪ್ರತಿಫಲವಾಗಿ ಲಲಿತೆಗೆ ಬೆಂಗಳೂರಿನ ಆ ಕಾಲೇಜಿನಲ್ಲಿ ಪ್ರವೇಶ ಸಿಕ್ಕಿತು. ಅಂಚೆಯ ಮೂಲಕವೇ ಪ್ರವೇಶವನ್ನೂ ಗಿಟ್ಟಿಸಲಾಗಿತ್ತು. ಅಲ್ಲಿ ಕಾಲೇಜಿಗೆ ಪ್ರವೇಶ ಪಡೆದ ದಿವಸ, ಈ ವಿಷಯ ಬಹಿರಂಗವಾಗಿತ್ತು. ಮತ್ತೆ ರುದ್ರಪ್ಪಜ್ಜನ ಮನೆಯಲ್ಲಿ ದೊಡ್ಡ ಸಂತೋಷ ಹರವಿತ್ತು. ಹಬ್ಬದೂಟವೂ ಆಯ್ತು. ಹೆಣ್ಣು ಮಕ್ಕಳನ್ನೇ ಕಾಣದ ರುಕ್ಕಮ್ಮ, ಶೀಲಮ್ಮ, ರಾಮಕ್ಕ, ಸಾವಿತ್ರಮ್ಮ ಲಲಿತಳನ್ನು ತಮ್ಮ ಹೊಟ್ಟೆಯ ಮಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ತಲೆಗೆ ಎಣ್ಣೆ ಉಣ್ಣಿಸಿ ಬಾಚುತ್ತಿದ್ದರು. ತಮ್ಮೊಂದಿಗೆ ಒಂದೇ ತಟ್ಟೆಯಲ್ಲಿ ಸೇರಿಸಿಕೊಂಡು ಉಣ್ಣುತ್ತಿದ್ದರು. ಈಗ ತಮ್ಮ ಮಡಿಲಲ್ಲೇ ಆಡುತ್ತಾ ಬೆಳೆದಿರುವ ಹುಡುಗಿ ದೂರದ ಬೆಂಗಳೂರಿಗೆ ಹೋಗುತ್ತಿದ್ದಾಳೆ. ಒಂದು ಕಡೆ ಸಂತೋಷ ಮತ್ತೊಂದು ರೀತಿ ಯೋಚಿಸಿದರೆ ಆಕೆಗೆ ಅಲ್ಲಿ ಯಾರೂ ಪರಿಚಿತರಿಲ್ಲ, ಸಂತೈಸುವವರಿಲ್ಲ. ಸಣ್ಣ ಹುಡುಗಿ, ತಬ್ಬಲಿ, ಇಲ್ಲಿಯಾದರೆ ನಾವೆಲ್ಲಾ ಇದ್ದೆವು. ಅಲ್ಲಿ ಮಗು ಹೇಗೆ ಬಾಳುವುದೋ ಎಂದು ಪರಸ್ಪರರು ಮಾತಾಡಿಕೊಂಡು, ಚಿಂತಿಸಿ ಕಣ್ಣೊರೆಸಿಕೊಂಡರು. ಶಾಮಣ್ಣನ ಜಾಣತನಕ್ಕೆ ಎಲ್ಲರೂ ಹೆಮ್ಮೆ ಪಟ್ಟಿದ್ದರು.
ರಾಜು ಮುರುಳಿ, ಕಿಟ್ಟಿಯರಂತೂ ತಾವೂ ಲಲ್ಲಕ್ಕನ ಕೂಡ ಬೆಂಗಳೂರಿಗೆ ಹೋಗುವುದಾಗಿ ಹಟ ಮಾಡುತ್ತಾ ಚೀರಾಡತೊಗಿದ್ದರು. ಕಿರಣ ಸೆಟೆದುಕೊಂಡು ಅಟ್ಟ ಹತ್ತಿ ಅಳುತ್ತಾ ಕುಳಿತಿದ್ದ. ಮುತ್ತಣ್ಣ, ವಿನೋದಣ್ಣ, “ಲೇ ಲಲ್ಲೀ ಬೆಂಗಳೂರಿಗೆ ಹೋದಮ್ಯಾಲೆ ಪತ್ರ ಬರೀತಿರು. ಹುಷಾರ್ ನೋಡು ಅದು ಮಾಯಾನಗರಿ ಅಂತ ಹೆಸರಾಗೇತಿ” ಎಂದು ಲಲ್ಲಿಯ ಕಿವಿ ತಿರುವಿ ಹೇಳಿದ್ದರು.
ರುದ್ರಪ್ಪಜ್ಜ ಲಲಿತೆಯನ್ನು ಕರೆದು, ತಲೆ ನೇವರಿಸಿ , “ಲಲ್ಲಕ್ಕ ಚೊಲೋತ್ನಾಗಿ ಓದವ್ವ, ಯಾರ ಬಗ್ಗೆನೂ ಚಿಂತೆ ಮಾಡಬ್ಯಾಡ. ನಿನ್ನ ಖರ್ಚು ವೆಚ್ಚಕ್ಕೆ ಚಿಂತಿಸಬ್ಯಾಡ. ನೀನು ಸ್ಯಾಣ್ಯಾಕೆಂತ ಮುಂದ ಓದಾಕ ಕಳ್ಹಾಕ್ಹತ್ತೀನಿ ನೋಡವ್ವ. ನೀನೂ ಎಲ್ಲಾ ಹುಡುಗ್ಯಾರಂಗ ಒಂಚೂರು ದಡ್ಡಿ ಇದ್ದಿದ್ರ, ಇಷ್ಟೊತ್ಗೆ ನಿನ್ನ ಒಬ್ಬ ಚೊಲೊ ಹುಡುಗನ್ನ ನೋಡಿ ಲಗ್ನ ಮಾಡಿ ಕಳಿಸಿಬಿಡ್ತಿದ್ದೆ” ಎಂದು ಅಜ್ಜ ಅಕ್ಕರೆಯಿಂದ ಹೊಟ್ಟೆಯ ಮಗಳಿಗೆ ಹೇಳುವಂತೆ ಹೇಳಿದ. ಆತ ತನ್ನ ಕನ್ನಡಕ ತೆಗೆದು ಕಣ್ಣೊರೆಸಿಕೊಂಡು, “ಇನ್ನು ನಮ್ಮನ್ಯಾಗ ಜಗಳ ಮಾಡ್ಕೊಂತ, ನಗಿಸಿಗೊಂತ ಓಡಾಡಾರು ಯಾರೂ ಇಲ್ಲ ನೋಡವ್ವ..” ಎಂದಾಗ ಮನೆಯ ಹೆಣ್ಮಕ್ಕಳೆಲ್ಲರೂ ಸರ‍್ರ್ ಬರ‍್ರ್ ಅಂತ ಅತ್ತು ಬಿಟ್ಟಿದ್ದರು.
ಶಾಮಣ್ಣ ತಾನೊಬ್ಬನೆ ಒಮ್ಮೆ ಹೋಗಿ, ಹಾಸ್ಟೆಲ್, ಕಾಲೇಜು ನೋಡಿಕೊಂಡು ಕಾಲೇಜಿನ ಪ್ರಿನ್ಸಿಪಾಲರ ಹತ್ತಿರ ಹಾಸ್ಟೆಲ್ ವಾರ್ಡನ್ ಲಕ್ಷ÷್ಮಮ್ಮನವರ ಹತ್ತಿರ ಮಾತಾಡಿ ಬಂದಿದ್ದನು. ಪ್ರಿನ್ಸಿಪಾಲ್ ರಂಗಾಚಾರ್ ಬಹಳ ವಿನಮ್ರ ವ್ಯಕ್ತಿ ಎಂದು ತಿಳಿದು ಸಂತೋಷವಾಯಿತು. ಸರಕಾರಿ ಕಾಲೇಜಾದರೂ ಎಲ್ಲ ರೀತಿಯಿಂದ ಖಾಸಗಿ ಕಾಲೇಜಿನಂತೆ ಆಕರ್ಷಣೀಯವಿತ್ತು. ತನ್ನ ತಂಗಿ ಲಲಿತ ಇಂಥಲ್ಲಿ ಓದಲು ಪುಣ್ಯ ಮಾಡಿರಬೇಕು ಎಂದು ಶಾಮಣ್ಣ ಹಿಗ್ಗಿ ಹೀರೆ ಕಾಯಿಯಾಗಿದ್ದ. ಬೆಂಗಳೂರಿನಿಂದ ವಾಪಸಾದಾಗ ಶಾಮಣ್ಣನ ತಾಯಿ, ಸಣ್ಣವ್ವಂದಿರು, ಚಿಕ್ಕಪ್ಪಂದಿರು, ತಮ್ಮಂದಿರು ಅಜ್ಜನ ಸುತ್ತ ಕುಳಿತು, ಅಜ್ಜನ ಪಕ್ಕದಲ್ಲಿ ಶಾಮಣ್ಣ ರಾಜನಂತೆ ಕುಳಿತು ಲಲಿತೆಯ ಕಾಲೇಜಿನ್ನು, ಪ್ರಿನ್ಸಿಪಾಲರನ್ನು ಹೊಗಳುವುದನ್ನು ಕೇಳಿ ಆನಂದಪಟ್ಟಿದ್ದರು. ತಮ್ಮ ಶಾಮಣ್ಣನೆಂದರೆ ಸಾಮಾನ್ಯನಲ್ಲ ಅನ್ನುವಂತೆ ಆತನನ್ನು ಎಲ್ಲರೂ ಕೌತುಕದಿಂದ ನೋಡಿದ್ದರು.
ಬೆಂಗಳೂರಿಗೆ ಓದಲು ಹೋಗುವ ಸಂಭ್ರಮದಲ್ಲಿ ಲಲಿತೆಗೆ ತಂದೆ ಸತ್ತ ದುಃಖ ಕಡಿಮೆಯಾಗುತ್ತ ಬಂದಿತ್ತು. ತನ್ನ ಬಾಲ್ಯದಲ್ಲೇ ತೊರೆದು ಹೋದ ತಾಯಿಯ ಮುಖ ನೆನಪಿನಿಂದ ಅಳಿಸಿ ಹೋಗಿತ್ತು. ಮಲತಾಯಿ ಬೈಗುಳ, ತಮ್ಮಂದಿರ ಕೀಟಲೆ ಆಕೆಗೆ ಎಂದೂ ಅಷ್ಟೊಂದು ಬಾಧಿಸಿರಲಿಲ್ಲ. ಆ ರೀತಿ ನಿರುಮ್ಮಳವಾಗಿ ಬೆಳೆಯಲು ರುದ್ರಪ್ಪಜ್ಜ ಮತ್ತು ಆತನ ಮನೆಯ ಮಂದಿಯ ನಿಷ್ಕಲ್ಮಶ ಪ್ರೀತಿಯೇ ಕಾರಣವಾಗಿತ್ತು.
ಲಲಿತೆ ಕಾಲೇಜಿಗೆ ಹೋಗುವುದು ಒಂದು ವಾರವಿದ್ದಾಗಲೆ ಅಜ್ಜನ ಸೊಸೆಯಂದಿರೆಲ್ಲಾ ಪ್ರತಿಯೊಬ್ಬರಿಗೂ ತೋಚಿದ ನಾಲ್ಕಾರು ತರಹದ ಸಿಹಿ ಭಕ್ಷ÷್ಯಗಳನ್ನು ಮಾಡಲು ಶುರು ಮಾಡಿದರು. ತುಪ್ಪ ಉಪ್ಪಿನಕಾಯಿ, ಸೇಂಗಾ ಚಟ್ನಿ, ಕಡಲೆ ಚಟ್ನಿ, ಕರಿದ ಅವಲಕ್ಕಿ ಪ್ಯಾಕ್ ಆಗಿ ಕುಂತವು. ಮುತ್ತಣ್ಣ, ವಿನೋದಣ್ಣ ತಮಗೆ ಚೆಂದವೆನ್ನಿಸಿದ ಲಲಿತೆಗೆ ಒಪ್ಪವಂತಹ ಎಂಟ್ಹತ್ತು ಜೊತೆ ಚೂಡಿದಾರ್ ಖರೀದಿಸಿ ತಂದಿದ್ದರು. ಶಾಮಣ್ಣನ ತಾಯಿ ಚೆನ್ನಮ್ಮ ಲಲ್ಲಿಯ ಕಿವಿಗೆ ಒಂದು ಜೊತೆ ಗುಲಾಬಿ ಹರಳಿನಿಂದ ಅಲಂಕೃತವಾಗಿದ್ದ ಚಿನ್ನದ ಸ್ಟಾರ್ ಓಲೆಯನ್ನು ಇಟ್ಟು ಆನಂದ ಪಟ್ಟಳು.
ಲಲಿತೆ ಬೆಂಗಳೂರಿಗೆ ಹೋಗುವ ದಿನ ಬಂದೇ ಬಿಟ್ಟಿತು. ಸುದ್ದಿ ಹಿಂದಿನ ದಿನದಿಂದ ಓಣಿಯಲ್ಲಿ ಸುಳಿದಾಡುತ್ತಾ ಲಲಿತೆಯ ಮಲತಾಯಿ ಬಸಮ್ಮನಿಗೂ ತಿಳಿಯಿತು. ಎರಡು ಗಂಡು ಮಕ್ಕಳ ತಾಯಿ ಬಸವ್ವನಿಗೆ ತಾನು ಬಂದಾಗಿನಿಂದ ಇಲ್ಲಿಯವರೆಗೆ ಲಲಿತಳ ವರ್ತನೆ ಕಣ್ಣಿಗೆ ಕಟ್ಟಿದಂತಾಯಿತು. ತಾನು ಒಂದು ದಿನವೂ ಲಲಿತೆಗೆ ಜಡೆ ಹಾಕಿ, ಮೈತೊಳೆದು, ಪ್ರೀಯಿಂದ ಉಣ್ಣಿಸಲಿಲ್ಲ. ಕುಲದವರಲ್ಲದ, ಸಂಬಂಧಿಕರಲ್ಲದ ರುದ್ರಪ್ಪಜ್ಜನ ಮನೆಯಲ್ಲಿ ಲಲಿತೆ ಮಗಳಂತೆ ಬೆಳೆದಳು. ಈಗ ದೂರದ ಊರಿಗೆ ಹೊರಟು ಹೋಗುತ್ತಾಳೆ. ತನ್ನನ್ನು ಕಣ್ಣೆತ್ತಿಯೂ ನೋಡದೆ ಮರೆತು ಬಿಡುವಳೇನೊ ಎಂದುಕೊಂಡು, ಕಣ್ಣೀರು ತಡೆಯದೆ ಅತ್ತು ಬಿಟ್ಟಳು. ಸದಾ ಕೀಟಲೆ ಮಾಡುವ ಲಲಿತೆಯ ತಮ್ಮಂದಿರು ರಾಜೇಶ, ಸುರೇಶನಿಗೂ ಈ ವಿಷಯ ತಿಳಿದು ಲಲಿತೆ ಮನೆ ಒಳಗೆ ಬರುತ್ತಲೇ ಆಕೆಯ ಕೈಯನ್ನು ಹಿಡಿದುಕೊಂಡು ಇಬ್ಬರೂ, “ಅಕ್ಕಾ” ಎಂದು ಬಿಕ್ಕಳಿಸಿದ್ದವು. ತನಗಿಂತ ಕ್ರಮವಾಗಿ ಆರು, ಎಂಟು ವರ್ಷಕ್ಕೆ ಕರಿಯರಾದ ಆ ಹುಡುಗರನ್ನು ಲಲಿತೆ ತನ್ನ ತೆಕ್ಕೆಯಲ್ಲಿ ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಳು. ತಾಯಿ ಕಾಣದಿದ್ದುದಕ್ಕ, “ಅವ್ವಾ?!” ಎಂದು ತಮ್ಮಂದಿರನ್ನು ಕೇಳಿದಳು. ಅವೆರಡೂ ಹುಡುಗರು ಮಲಗುವ ಕೋಣೆಯತ್ತ ಕೈ ಮಾಡಿ ತೋರಿಸಿದವು. ಲಲಿತೆ ಒಳ ಹೋಗಿ ನೋಡಿದಳು. ಬಸಮ್ಮನ ಗಲ್ಲದ ಮೇಲೆ ಕಣ್ಣೀರು ಕರೆಗಟ್ಟಿದೆ. ಅವ್ವ ಅತ್ತಿದ್ದಾಳೆ ಎಂದುಕೊಂಡಳು. ಹಣೆ ಹಿಡಿದು ಆಕೆಯ ಕೂದಲನ್ನು ಹಿಂದಕ್ಕೆ ಸರಿಸಿದಳು. ಬಸವ್ವನಿಗೆ ಕೆಂಡದಂತಹ ಜ್ವರ! ಲಲಿತೆಯ ಸ್ಪರ್ಶಕ್ಕೆ ಆಕೆ ಕಣ್ತೆರೆದು ನೋಡಿದಳು. ಲಲಿತೆಯ ಕೈ ಗಟ್ಟಿಯಾಗಿ ಹಿಡಿದುಕೊಂಡು ಗೊಳೊ ಅಂತ ಅತ್ತು ಬಿಟ್ಟಳು. ಅಕ್ಕ, ತಾಯಿ ಅಳುವುದನ್ನು ಕಂಡು ಹುಡುಗರೂ ರೋಧಿಸಹತ್ತಿದವು. “ಲಲ್ಲೂ, ನಾ ನಿನ್ನ ಸರಿಯಾಗಿ ನೋಡ್ಕಳ್ಲಿಲ್ಲ. ಅದಕ್ಕಾ ನೀನು ನಮ್ಮನ್ನೆಲ್ಲಾ ಬಿಟ್ಟು ದೂರ ಹೊಂಟಿಯಲ್ಲಾ, ನಿಮ್ಮ ಅಪ್ಪ ಹೇಳದೇ ಬಿಟ್ಟು ಹೋಗಿ ಬಿಟ್ಟ, ಈಗ ನೀನೂ ಹೊಂಟು ನಿಂತಿಯಲ್ಲ ತಾಯಿ! ನನ್ನ ಪುಣ್ಯನಾ ನೀನು ಉಂಡಿದ್ದು ಅಷ್ಟರಾಗ ಐತಿ, ನೀನು ಖರೇನ ನನ್ನ ಮರ್ತುಬಿಡತೀ..” ಅಂತ ದುಃಖಿಸಿದಳು. ಲಲಿತೆಗೆ ತನ್ನ ತಾಯಿಯಲ್ಲಾದ ಬದಲಾವಣೆ ಕಂಡು ಕರುಳು ಕಿತ್ತು ಬಾಯಿಗೆ ಬಂದಂತಾಯಿತು. ಬಹುಶಃ ಇಲ್ಲೇ ಇದ್ದಿದ್ದರೆ ತಾಯಿ ತನ್ನನ್ನೆಂದೂ ಪ್ರೀತಿಸುತ್ತಿರಲಿಲ್ಲವೇನೊ ಎಂದುಕೊಂಡಳು. ಆಕೆಯ ತೊಡೆಯ ಮೇಲೆ ತಲೆ ಇಟ್ಟು, “ ಎವ್ವಾ, ಅಳಬ್ಯಾಡಬೆ, ನಾನು ಆಗಾಗ್ಗೆ ಪತ್ರ ಬರಿತೀನಿ. ತಮ್ಮಾರನ್ನ ಸಾಲಿಗೆ ಸರಿಯಾಗಿ ಕಳಿಸು. ಚಿಂತಿ ಮಾಡಬ್ಯಾಡ. ಬ್ಯಾಸರಾದ್ರ ಅಜ್ಜಾರ ಮನೆಗೆ ಹೋಗು. ಅವರು ನಿನ್ನನ್ನ ಆಗಾಗ್ಗೆ ಕೇಳುತಿರ್ತಾರ. ಅವರು ನಿನಗೆ ಏನಾರ ಸಹಾಯ ಬೇಕಾದ್ರ ಕೊಡ್ತಾರ” ಎಂದು ಹೇಳಿದಳು.
ಅವತ್ತು ಬಸಮ್ಮ ಹೊಸ ಮನುಷ್ಯಳಾದ ದಿನ. ಮೂರೂ ಜನ ಮಕ್ಕಳನ್ನು ಕರೆದುಕೊಂಡು ಊಟ ಮಾಡಿದಳು ಜ್ವರವನ್ನು ಲೆಕ್ಕಿಸದೆ ಲಲಿತೆಗೆ ಸ್ವಲ್ಪ ರವೆಯ ಉಂಡಿ ಚುರುಮರಿ, ತಯಾರಿಸಿದಳು. ಲಲಿತೆಗೆ ಈಗಾಗಲೆ ಅಜ್ಜನ ಮನೆಯಲ್ಲಿ ಸಾಕಷ್ಟು ಸಜ್ಜಾಗಿವೆ ಅಂತ ಗೊತ್ತಿದ್ದರೂ ತನ್ನ ತಾಯಿಯ ಕೈಯ್ಯ ಪ್ರೀತಿಯ ಉಣಿಸಿಗೆ ಶತಮಾನಗಳಿಂದಲೂ ಕಾದು ಕುಳಿತವಳಂತೆ ಆಸೆಯಿಂದ ನೋಡಿದಳು.
ನಸುಕಿನಲ್ಲೇ ಎರಡೂ ಮನೆಯ ಜನರು ಎಚ್ಚರಗೊಂಡಿದ್ದರು. ಅಲ್ಲಿ ಶಾಮಣ್ಣನ ತಾಯಂದಿರು ಲಲಿತೆಗಾಗಿ ಎಣ್ಣೆ, ನೀರು ರೆಡಿ ಮಾಡಿ ಕಾಯತೊಡಗಿದ್ದರು. ಇಲ್ಲಿ ಬಸಮ್ಮ ಮಗಳ ತಲೆಗೆ ಎಣ್ಣೆ ಉಣ್ಣಿಸಿ, ಬಿಸಿ ನೀರನ್ನು ಸುರಿದು, ಬೆನ್ನು ಉಜ್ಜಿ, ತನ್ನಷ್ಟಕ್ಕೆ ತಾನೆ ತಾನು ತಾಯಿಯಾದುದು ಸಾರ್ಥಕವಾಯಿತೆಂದು ಪುಳಕಗೊಂಡಿದ್ದಳು. ಅನಾಮತ್ತಾಗಿ ಹತ್ತು ವರ್ಷಗಳ ಸುಖವನ್ನು ತಾನಾಗಿಯೇ ತಿರಸ್ಕರಿಸಿದೆನೆಂದು ತನ್ನ ತಪ್ಪಿನ ಅರಿವಾಗಿ ಮತ್ತೆ ಕಣ್ತುಂಬಿಕೊಂಡಳು. ಇತ್ತ ಕಿಟ್ಟಿ, ಕಿರಣ, ರಾಜು, ಮುರುಳಿ ಗದ್ದಲ ಮಾಡುತ್ತ, “ಲಲ್ಲಕ್ಕ ಏನ್ಮಾಡಾಕ್ಹತ್ತೀ? ಅವ್ವಾರು ಕಾಯಾಕ್ಹತ್ಯಾರ ಬಾ” ಅಂತ ಲಲಿತಳ ಮನೆಯೊಳಗೆ ನುಗ್ಗಿದರು.
ಲಲಿತ ತಾಯಿಗೆ ನಮಸ್ಕರಿಸಿ ಚೀಲವನ್ನೆತ್ತಿಕೊಂಡಳು. ಎರಡೂ ಮನೆಗಳ ಹುಡುಗರು ತಾನು, ತಾನು ಎಂದು ಚೀಲವನ್ನು ಆಕೆಯ ಕೈಯಿಂದ ಕಸಿದುಕೊಳ್ಲಲು ಮುಗಿ ಬಿದ್ದರು. ಕಿಟ್ಟಿ ಎಲ್ಲರನ್ನೂ ನೂಕಿ ಚೀಲವನ್ನು ಹೆಗಲೇರಿಸಿಕೊಂಡು ದೊಡ್ಡ ಹಿರಿ ಮನುಷ್ಯನಂತೆ, “ಬೇ ಅಕ್ಕ ಬಂದ್ಲು. ಬರ ಬರ ರೆಡಿ ಮಾಡ್ರಿ” ಅಂತ ಹೊರಬಾಗಿಲಿನಿಂದಲೇ ಕೂಗು ಹಾಕಿದ್ದ. ಅವನು. ಕೂಗಿದ ಸ್ಟೆöÊಲ್ ಕಂಡು ಮುತ್ತಣ್ಣ, ವಿನು ಕಿಕಿಕಿ ಅಂತ ನಕ್ಕರು.
ಸುಶೀಲಮ್ಮ ಬಾಗಿಲಿಗೆ ಬಂದು ಆವಾಕ್ಕಾಗಿ ನೋಡಿದಳು ಬಸಮ್ಮ ಮಗಳೊಂದಿಗೆ ಬಂದಿದ್ದಾಳೆ. ತಲೆ ತುಂಬ ಸೆರಗು ಹೊದ್ದುಕೊಂಡಿದ್ದಾಳೆ. ಆಕೆಯ ಉಬ್ಬಿದ ಕಣ್ಣುಗಳು ಆಕೆ ಅತ್ತಿದ್ದಾಳೆಂದು ಸೂಚಿಸುತ್ತಿವೆ. ಮಕ್ಕಳೂ ಬಂದಿದ್ದಾರೆ. ಸುಶೀಲಮ್ಮ, “ಬಾರಾ ಬಸಮ್ಮ, ಒಳಗ ಬಾ, ನಾನು ಬಾಳೊತ್ತಾತು, ದಾರಿ ಕಾಯಾಕ್ಹತ್ತೀ” ಎಂದಳು. ಸುಶೀಲಮ್ಮನಿಗೆ ಲಲಿತೆಯನ್ನು ನೋಡುತ್ತಲೇ ತಿಳಿದು ಹೋಯಿತು ಆಕೆಗೆ ಜಳಕವಾಗಿದೆ ಎಂದು.
ಶಾಮಣ್ಣ, ಮುತ್ತಣ್ಣ, ವಿನೋದ ಸೇರಿ ಎಲ್ಲಾ ಸಾಮಾನುಗಳ ಲಗೇಜನ್ನು ಚಕ್ಕಡಿಗೆ ತುಂಬಿದರು. ಕಾಕಾ ಮೈಲಾರಪ್ಪ ಚಕ್ಕಡಿಯ ನೊಗಕ್ಕೆ ಎತ್ತು ಕಟ್ಟಿ ಬಸ್ ಸ್ಟಾ÷್ಯಂಡ್ ಕಡೆ ಚಕ್ಕಡಿ ಬಿಟ್ಟನು. ಎಲ್ಲರೂ ಲಲಿತೆಯನ್ನು ತಬ್ಬಿಕೊಂಡು, “ದೇವರು ನಿನಗೊಂದು ದಾರಿ ತೋರಿಸ್ತಾನ ನನ್ನ ಮಗಳ” ಅಂತ ಆ ತಾಯಂದಿರು ಹರಸಿದರು. ಬಸಮ್ಮ ಮೆಲ್ಲನೆ ಬಿಕ್ಕಿ ಬಿಕ್ಕಿ ಅಳಹತ್ತಿದಳು. ಅಜ್ಜ ಎಲ್ಲರಿಗೂ, “ಸುಮ್ಕ ಆಗ್ರೆವ್ವಾ ಹೋಗುವಾಗ ಹಂಗ ಅಳಬಾರದು” ಎಂದು ಹೇಳಿದನಾದರೂ ತಾನೇ ಮೂಗೇರಿಸಿ ಚಸ್ಮಾ ತೆಗೆದು ಕಣ್ಣೊರೆಸಿಕೊಂಡನು.
ಓಣಿಯ ಜನರೆಲ್ಲಾ ಲಲಿತೆಯನ್ನು ಅಚ್ಚರಿಯಿಂದ ನೋಡಿದರು. “ಪುಣ್ಯವಂತಿ. ತಂದಿ-ತಾಯಿ ಇಲ್ದಿದ್ರೂನೂ ಇಷ್ಟು ಬೇಕಾಗಿ, ಎಲ್ಲರಿಗೂ ಮಗಳಾಗಿ ಓಡಾಡೀದ್ಲು. ಇನ್ನು ರುದ್ರಪ್ಪಜ್ಜನ ಸೊಸೆಯರಿಗೆ ಹೊತ್ತು ಹೆಂಗ್ಹೋಗುತ್ತೇನಾ” ಎನ್ನುವ ಧಾಟಿಯಲ್ಲಿ ಮಾತಾಡಿಕೊಂಡರು.
ಹೇಳಬೇಕಂದರೆ ಹುಡುಗಿಯರು ಗದಗ್, ಮುಂಡರಗಿ, ಡಂಬಳಕ್ಕೆ ಓದಲು ಹೋಗುತ್ತಿದ್ದುದು ಇತ್ತು. ಆದರೆ ಬೆಂಗಳೋರಿಗೆ ಯಾರೂ ಹೋಗಿರಲಿಲ್ಲ ಆ ಹಳ್ಳಿಯಿಂದ. ಲಲಿತ ಅದಕ್ಕಾಗಿ ಎಲ್ಲರ ಕಣ್ಣಿಗೆ ರತ್ನದಂತೆ ಕಂಡಿದ್ದಳು.
ಲಲಿತೆ ಹಠ ಮಾಡಿ ಲಂಗ ರವಿಕೆಯನ್ನೇ ತೊಟ್ಟಿದ್ದಳು. ವಿನೋದ, ಮುತ್ತಣ್ಣ್ಣ ಚೂಡಿ ಹಾಕಿಕೊಳ್ಳಲು ಬಹಳ ಒತ್ತಾಯಿಸಿದರು. ಲಲಿತೆ ಹಠ ಬಿಡಲಿಲ್ಲ. ಕೊನೆಗೆ ಮುತ್ತಣ್ಣ ಆಕೆಯ ಬೆನ್ನಿಗೊಂದು ಗುದ್ದಿ, “ಹೋಗಾ ಸೊಕ್ಕಿಂದಾ, ಬೆಂಗಳೋರಿಗೆ ಹೋಗಿ ನಿನ್ನ ಲಂಗ ಹಾಕ್ಕೊಂಡ್ ಕಾಲೇಜಿಗ್ಹೋಗಾ ಗೊತ್ತಾಗುತ್ತ. ನಿನ್ನ ಲಂಗ ಬರೇ ನಿನ್ನ ಸಿಂಬಳ ರ‍್ಸಾಕ ಬರುತ್ತಷ್ಟ ಅಲ್ಲೆ. ಚೆಂದಗ ಒಂದು ಚೂಡಿ ಹಾಕ್ಕೊಂಡ್ರ ನಾವೆಲ್ಲಾ ಖುಷಿಯಾಗ್ತಿದ್ವಿ..” ಎಂದನು ಸಪ್ಪೆ ಮುಖ ಮಾಡಿ. ಲಲಿತೆಗೆ ತನ್ನ ಹಠ ಬಿಡದೆ ಬೇರೆ ಮಾರ್ಗವಿರಲಿಲ್ಲ. ಮುತ್ತಣ್ಣ, ವಿನೋದಣ್ಣನ ಮುಖ ಸಪ್ಪಗಾಗಿದ್ದನ್ನು ಕಂಡು ಆಕೆಗೆ ಕೆಟ್ಟೆನಿಸಿತು. ಒಳಗೋಡಿ ಹೋಗಿ ಒಂದೆರಡು ನಿಮಿಷದಲ್ಲಿ ಚೂಡಿ ಧರಿಸಿ ಬಂದಳು. ತಿಳಿ ಗುಲಾಬಿ ಬಣ್ಣ ಆ ಹೊಸ ಉಡುಗೆಯಲ್ಲಿ ಲಲಿತ ಬಹಳ ಚೆಂದವಾಗಿ ಕಂಡಳು. ಎಲ್ಲರೂ ಖುಷಿಯಿಂದ, “ಈಗ ಎಷ್ಟು ಭಗ್ ಅನ್ಸುತ್ತ ನೋಡು” ಎಂದರು. ಶಾಮಣ್ಣನೊಬ್ಬನೇ ಬಹಳ ಧೈರ್ಯದಿಂದ ಒಂದು ಹನಿ ಕಣ್ಣೀರು ಹಾಕದೆ ಓಡಾಡಿದ್ದ. ಲಲಿತೆಯನ್ನು ಬಸ್ಸಿಗೆ ಹತ್ತಿಸಿ ಎಲ್ಲರೂ ಕೈ ಬೀಸಿದರು. ಹಳ್ಳಿಯ ಅರ್ಧ ಜನರು ನೆರೆದಿದ್ದರು. ಬಸ್ ಚಲಿಸಲು ಶುರುವಾದಾಗ ಕೆಲವು ಜನ ಹಿರಿಯರು, “ಶಾಮ ಹುಷಾರ್ ನೋಡು, ಲಲ್ತಾ ಚೊಲೊತ್ನಾಗಿ ಓದು” ಎಂದು ಕೈ ಬೀಸಿದರು. ವಿನೋದ ಕಣ್ಣುಗಳು ದಿವ್ಯ ಮಿಂಚಿನಿಂದ ಕೂಡಿದ್ದವು. ಲಲಿತೆಗೆ ಅದೂವರೆಗೆ ಬಿಗಿ ಹಿಡಿದ ಕಣ್ಣಿರನ್ನು ತಡೆಯಲಾಗಲಿಲ್ಲ. ಕರವಸ್ತçದಿಂದ ಮತ್ತೆ ಮತ್ತೆ ಕಣ್ಣೊರೆಸಿಕೊಂಡರೂ ಕಣ್ಣೀರು ನಿಲ್ಲುತ್ತಿಲ್ಲ. ತಾನು ಶಾಲೆಯಲ್ಲಿ ಓದಿದ, ‘ಚಂದ್ರಹಾಸನ ಬಾಲ್ಯ’ ಎಂಬ ಪದ್ಯದೊಳಗಿನ ಚಂದ್ರಹಾಸನ ನೆನಪಾಯಿತು. ತಾನೂ ಚಂದ್ರಹಾಸನಂತೆ ಕಂಡವರ ಮನೆಯ ಮಗಳಾಗಿ ಇಂದು ಆ ತಾಯಂದಿರಿಂದ ದೂರವಾಗಿ ಹೋಗುತ್ತಿದ್ದೇನೆ ಎಂದುಕೊಂಡು ದುಃಖಿಸಿದಳು.
ಲಲಿತೆಗೆ ರೈಲು ಪ್ರಯಾಣ ಇದೆ ಮೊದಲು. ಪ್ರಯಾಣದುದ್ದಕ್ಕೂ ಶಾಮಣ್ಣ ಹಂಗೆ ಲಲ್ಲಿ, ಹಿಂಗೆ ಲಲ್ಲಿ, ಹಂಗ್ಮಾಡು, ಹಿಂಗ್ಮಾಡಬ್ಯಾಡ ಅಂತ ಬೆಂಗಳೋರಿನ ರೀತಿ, ರಿವಾಜು, ಉಡುಗೆ-ತೊಡುಗೆ ಶೈಲಿ, ಮಾತಾಡುವ ಶೈಲಿ, ಇಂಗ್ಲಿಷಿನ ಪ್ರಭಾವ ಒಂದೊಂದನ್ನೆ ತಂಗಿಗೆ ತಿಳಿಸಿ ಹೇಳಿದ್ದ. ಲಲಿತೆ ಹೂಂ ಹೂಂ ಎನುತ್ತಿದ್ದಳು.
ಆಕೆಯನ್ನು ವಾರ್ಡನ್, ಪ್ರಿನ್ಸಿಪಾಲರಿಗೆ ಪರಿಚಯಿಸಿ, ಹಾಸ್ಟೆಲ್‌ನಲ್ಲಿ ಬಿಟ್ಟ. ಅವರು ಆತ್ಮೀಯತೆಯಿಂದ ಮಾತಾಡಿದರು. ಚಿಂತಿಸುವ ಅಗತ್ಯವಿಲ್ಲವೆಂದು ಶಾಮಣ್ಣನಿಗೆ ತಿಳಿಸಿದರು. ಗ್ರಾಮಾಂತರ ಪ್ರದೇಶದಲ್ಲಿ ಒಳ್ಳೆ ಅಂಕ ಪಡೆದು, ಮಹಾನಗರಿಯಲ್ಲಿ ವಾಣಿಜ್ಯ ವಿಷಯವನ್ನು ಆಯ್ದುಕೊಂಡು ಓದಲು ನಿರ್ಧರಿಸಿದ ಲಲಿತಳ ಧೈರ್ಯಕ್ಕೆ ಪ್ರಿನ್ಸಿಪಾಲರು ಮೆಚ್ಚುಗೆ ಸೂಚಿಸಿದರು.
ಶಾಮಣ್ಣ ಲಲಿತೆಗೆ ಹೇಳಿದ್ದ ಜಾಗೃತಿ ಮಾತುಗಳನ್ನೆ ಮತ್ತೆ ಮತ್ತೆ ಹೇಳಿ ಆಕೆಯ ತಲೆ ನೇವರಿಸಿ, ಊರು ಕಡೆ ಮುಖ ಮಾಡಿದ. ಶಾಮಣ್ಣ ಕಣ್ಮರೆಯಾಗುವತನಕ ಆಕೆ ನೋಡುತ್ತ ಸುಮ್ಮನೆ ನಿಂತಿದ್ದಳು ದಿಗ್ಮೂಢಳಾಗಿ. ಶಾಮಣ್ಣ ಇನ್ನೇನು ರಸ್ತೆಯ ತಿರುವಿನಲ್ಲಿ ಮಾಯವಾಗುತ್ತಾನೆಂದು ತಿಳಿದ ತಕ್ಷಣ ಲಲಿತೆ ಜೋರಾಗಿ, “ಶಾಮಣ್ಣಾ” ಎಂದು ಕಣ್ಣೀರಿಳಿಸುತ್ತಾ ಓಡಿ ಬಿಟ್ಟಳು. ಆಕೆಯ ಧ್ವನಿ ಕೇಳಿದಂತಾಗಿ ಶಾಮಣ್ಣ ಹಿಂತಿರುಗಿ ನೋಡಿದರೆ ಲಲಿತೆ ನಿಜವಾಗಿ ಅಳುತ್ತಾ ಓಡಿ ಬರುತ್ತಿದ್ದಾಳೆ. ಆತ ಎಷ್ಟೇ ತಡೆದರೂ ದುಃಖ ಉಮ್ಮಳಿಸಿ ಬಂತು. ಹಾಗೇ ಲಲಿತೆಗೆದುರಾಗಿ ನಾಲ್ಕಾರು ಹೆಜ್ಜೆ ಧಾವಿಸಿದನು. ಲಲಿತೆ ಬಲಗಾಲಿನ ಹೆಬ್ಬೆರಳನ್ನು ಎಡವಿ ಒಡೆದುಕೊಂಡು ರಕ್ತ ಸೋರಿಸುತ್ತಲೇ ಓಡಿ ಬಂದು ಶಾಮಣ್ಣನ ಕೈಗಳನ್ನು ಗಟ್ಟಿಯಾಗಿ ಹಿಡಿದು ಕಣ್ಣಿಗೊತ್ತಿಕೊಂಡು ಅತ್ತು ಬಿಟ್ಟಳು. ಆಕೆ ಹಾಗೆ ಓಡಿದ್ದನ್ನು ಗಮನಿಸಿದ ಹಾಸ್ಟೆಲ್ ಗಾರ್ಡ್ ರಾಮಣ್ಣ ಅಷ್ಟು ದೂರ ಬೆನ್ನು ಹತ್ತಿ ಹೋಗಿ ಇಬ್ಬರಿಗೂ ಸಮಾಧಾನ ಹೇಳಿದ್ದ. ಲಲಿತೆಯ ತಲೆಯ ನೇವರಿಸಿ, “ಹಂಗೆಲ್ಲಾ ಅಳಬಾರದು ಕಣಮ್ಮ. ಚೆಂದಾಗಿ ಓದಿ ಮುಂದೆ ಬರ್ಬೇಕು. ನಾವೆಲ್ಲಾ ಇದ್ದೀವಲ್ಲ. ಚಿಂತೆ ಮಾಡಬೇಡ. ಕ್ಲಾಸ್ ಶುರುವಾದ್ಮೇಲೆ ಎಲ್ಲಾ ಸರಿ ಹೋಗುತ್ತೆ” ಎಂದನು. ಶಾಮಣ್ಣ ಲಲಿತೆಗೆ ಸುಮ್ಮನಿರುವಂತೆ ಗದರಿ, ಹೊರಟು ಹೋದನು. “ರೈಲು ಗದಗ್ ಕಡೆ ಮುಖ ಮಾಡಿದಾಗ ಶಾಮಣ್ಣ ಲಲಿತೆಯ ಮುಂದಿನ ಜೀವನ ಸುಂದರವಾಗಲಿ ಅಂತ ಹಾರೈಸಿದ. ಲಲಿತೆಯ ಜಗಳ, ನಗು, ಗುಟ್ಟಾಗಿ ಏನಾದರೂ ಹೇಳಿ ನಗಿಸುವುದು ಕಣ್ಮುಂದೆ ತೇಲಿ ಬಂದಂತಾಯಿತು. ಆಕೆ ತನ್ನ ಖಾಸಾ ತಂಗಿಯಾಗಿ ಹುಟ್ಟಿರದಿದ್ದರೂ, ತನಗಷ್ಟೆ ಅಲ್ಲ ತನ್ನಿಡೀ ಕುಟುಂಬದ ಏಳು ಜನ ಸಹೋದದರಿಗೆ ಅಕ್ಕರೆಯ ಅಕ್ಕ ತಂಗಿಯಾಗಿ ಬೆಳೆದಾಕೆ. ತಾನು ಅಂತಹ ಬುದ್ಧಿವಂತೆ ತಂಗಿಂನ್ನು ಪಡೆಯಲು ಪುಣ್ಯ ಮಾಡಿದ್ದಿನೇನೊ ಎಂದುಕೊಂಡನು. ಊರು ತಲುಪುವ ತನಕವೂ ಶಾಮಣ್ಣನ ಯೋಚನೆಗೆ ತಡೆಯೇ ಇರಲಿಲ್ಲ.
ಆ ರಾತ್ರಿ ಕದಾಂಪುರದ ರುದ್ರಪ್ಪಜನ ಮನೆಯಲ್ಲಿ ಯಾರೂ ಸರಿಯಾಗಿ ಊಟ ಮಾಡಲಿಲ್ಲ. ಲಲಿತೆಯ ಗುಣಗಳನ್ನು ಹೊಗಳುತ್ತಾ, ನೆನಪಿಸಿಕೊಳ್ಳುತ್ತಾ ಸಾಕಷ್ಟು ಮಾತಾಡಿದ್ದೆ ಮಾತಾಡಿದ್ದು. ಹುಡುಗರು ಊಟಕ್ಕೆ ಕುಳಿತರೂ ಲಲಿತೆಯ ನೆನಪು ಮಾಡಿಕೊಂಡು ತಾಟಿನಲ್ಲಿ ಹಾಗೇ ಬಿಟ್ಟು ಕೈ ತೊಳೆದಿದ್ದರು. ಬಸಮ್ಮ ಮತ್ತು ಆಕೆಯ ಮಕ್ಕಳು ಸಹ ಲಲಿತಳ ನೆನಪಿನಲ್ಲಿ ಉಣ್ಣದೆ ಮಲಗಿಕೊಂಡರು. ನಿದ್ರೆ ಬಾರದೇ ಒದ್ದಾಡಿದ ವಿನೋದ ಎದ್ದು ಕುಳಿತು ನಿರಿಗೆ ಲಂಗ ಉಟ್ಟು ಜೋಡು ಜಡೆ ಹಾಕಿಕೊಳ್ಳುತ್ತಿದ್ದ ಲಲಿತೆಯ ಚಿತ್ರವನ್ನು ಬಿಡಿಸಿ ಅದನ್ನು ತೆಗೆದು ಜೋಪಾನವಾಗಿ ತನ್ನ ಟ್ರಂಕ್ ನ ತಳದಲ್ಲಿ ನೋಟ್ ಬುಕ್ ಒಂದರಲ್ಲಿ ಹುದುಗಿಸಿದ.
ಲಲಿತ ಮೊದಲ ದಿನ ಹುರುಪಿನಿಂದ ಕಾಲೇಜಿಗೆ ಹೋದಾಗ ಆಶ್ಚರ್ಯಕ್ಕೆ ಈಡಾಗಿದ್ದಳು. ಹುಡುಗರು ಹುಡುಗಿಯರನ್ನು ಪ್ರತ್ಯೇಕವಾಗಿ ಗುರುತಿಸುವುದು ತುಸು ಕಷ್ಟವೆನ್ನಿಸಿತು ಅಷ್ಟು ಹುಡುಗಿಯರಲ್ಲಿ ಉದ್ದ ಜಡೆಯ ಹುಡುಗಿಯರೆಂದರೆ ಇಬ್ಬರೆ. ಒಬ್ಬಳು ಲಲಿತ ಮತ್ತು ಇನ್ನೊಬ್ಬಳು ಆಕೆಯ ಕಣ್ಣಿಗೆ ಬಿದ್ದ ಬೆಂಗಳೂರಿನ ಆ ಚೆಲುವೆ! ಯಾರನ್ನು ಹೇಗೆ ಮಾತನಾಡಿಸುವುದು ಎಂದು ಯೋಚನೆಯಾಗಿ ಎಲ್ಲರನ್ನೂ ಪಿಳಿ ಪಿಳಿ ನೋಡುತ್ತ ಗದ್ದಕ್ಕೆ ಕೈ ಹಚ್ಚಿಕೊಂಡು ಡೆಸ್ಕ್ ಮೇಲೆ ಮೊಣಕೈಊರಿಕೊಂಡು ಕುಳಿತು ಬಿಟ್ಟಿದ್ದಳು. ಆ ಉದ್ದ ಬಾಲದ ಬೆಂಗಳೂರಿನ ಹುಡುಗಿ ಲಲಿತಳಿಗಿಂತ ಸುಂದರಿ. ಎತ್ತರ, ಗೌರವರ್ಣದವಳು. ಅವಳ ಕಣ್ಣು ಫಳ ಫಳ ಹೊಳೆದಂತೆ ಕಾಣುತ್ತಿದ್ದವು. ಆ ಹುಡುಗಿ ಬೀಡು ಬೀಸಾಗಿ ನಿಂತುಕೊಂಡು ನಾಲ್ಕೆöÊದು ಹುಡುಗರೊಂದಿಗೆ ನಗುತ್ತಾ ಮಾತಾಡುತ್ತಿದ್ದಳು. ಆ ಹುಡುಗರಲ್ಲಿ ಎಲ್ಲರಿಗಿಂತ ತುಸು ಎತ್ತರವಾಗಿ, ಆಕರ್ಷಕವಾಗಿ, ಬಲಾಢ್ಯನಂತೆ ಕಾಣುವ ಗುಂಗುರು ಕೂದಲಿನ ಹುಡುಗ ಎಲ್ಲರಿಗಿಂತ ಕಡಿಮೆ ಮಾತಿನವನೆಂದು ತೋರಿತು. ಆ ಹೊತ್ತಿಗೆ ಉದ್ದ ಜಡೆಯ ಹುಡುಗಿ ಕ್ಲಾಸ್ ರೂಮ್‌ನೊಳಗೆ ಬಂದಳು. ಲಲಿತ ಆಕೆಯನ್ನು ನೋಡಿ ಮತ್ತೆ ಹೊರಗೆ ದೃಷ್ಟಿ ಹಾಯಿಸಿದಳು. ಆದರೆ ಆ ಹುಡುಗಿ ಲಲಿತಳ ಮುಂದೆಯೇ ನಿಂತು ಹಲೋ! ನಾನು ಜ್ಯೋತಿ ಅಂತ. ನಿಮ್ಮದೆ ಕ್ಲಾಸಿನವಳು. ಅಂದ್ಹಂಗೆ ನಿಮ್ಮ ಹೆಸ್ರು?” ಎಂದಳು ಕೈ ಕುಲುಕುತ್ತಾ. ಲಲಿತೆಗೆ ಪಟ್ಟಣದ ಶಿಷ್ಠಾಚಾರ ಗೊತ್ತಿಲ್ಲ. ಆಕೆ ಸ್ವಲ್ಪ ನಕ್ಕಂತೆ ಮುಖ ಅರಳಿಸಿ, “ನನ್ನ ಹೆಸರು ಲಲಿತ” ಎಂದಳು. ಜ್ಯೋತಿ ಲಲಿತೆಯ ಊರು, ಮನೆ, ತಂದೆ-ತಾಯಿಯ ಬಗ್ಗೆ ಪ್ರಶ್ನಿಸಿದಳು. ಲಲಿತೆ ಅಪರಿಚಿತಳೆದುರು ತಂದೆ-ತಾಯಿಯ ಕಥೆಯನ್ನು ಹೇಳಿಕೊಳ್ಳದೆ, ಊರಿನ ಹೆಸರನ್ನು ಪ್ರಾಮಾಣಿಕವಾಗಿ ಹೇಳಿ, ತಂದೆ-ತಾಯಿ ರೈತ ಜನ ಎಂದಷ್ಟೆ ಹೇಳಿದ್ದಳು. ಮಾರನೆ ದಿನ ಜ್ಯೋತಿ ಲಲಿತಳ ಭುಜದ ಮೇಲೆ ಕೈ ಹಾಕಿಕೊಡು ತನ್ನ ಸ್ನೇಹಿತರ ಗುಂಪಿನ ಕಡೆ ನಡೆದಾಗ ಲಲಿತೆÀ ಹಿಂಜರಿದು, “ನೀನ್ಹೋಗು, ನಾಲ್ಲೆ ಇರ್ತೀನಿ” ಎಂದಿದ್ದಳು. “ಏಯ್ ಸುಮ್ನೆ ಬಾ ನಂಜೊತೆ. ಅವರೆಲ್ಲ ನನ್ನ ಹಳೆಯ ಸ್ನೇಹಿತರು. ಅವರಿಗೆÉ ನಿನ್ನ ಪರಿಚಯಿಸ್ತೀನಿ” ಎಂದು ಆಕೆಯನ್ನು ಬಿಡದೆ ಹೆಚ್ಚೂ ಕಡಿಮೆ ನೂಕಿಕೊಂಡೆ ಆ ಗುಂಪಿನ ಕಡೆ ನಡೆದಿದ್ದಳು. ಇವರಿಬ್ಬರನ್ನು ನೋಡಿ ಶಂಕರ ಕಣ್ಣು ಮಿಟುಕಿಸಿ ನಕ್ಕಾಗ ಲಲಿತೆಗೆ ಸಂಕೋಚದಿಂದ ಮುಖ ಸಪ್ಪಗಾಯಿತು. ಶಂಕರ ಅದನ್ನು ಗಮನಿಸಿ, “ಪ್ರಮಾದವಾಯ್ತು ಜ್ಯೋತಿ ಪ್ರಮಾದವಾಯ್ತು” ಎಂದನು ನಾಟಕ ರೀಹರ್ಷಲ್ ಧಾಟಿಯಲ್ಲಿ. ಎಲ್ಲರೂ ಗೊಳ್ಳನೆ ನಕ್ಕರು. ಜ್ಯೋತಿ ಲಲಿತೆಗೆ, “ನೋಡು ಲಲಿತ, ಇವನು ರವಿ, ಇವನು ರಾಮು, ಇವನು ರಾಜು…” ಎಂದು ಐದೂ ಜನ ಹುಡುಗರನ್ನು ಪರಿಚಯಿಸಿದಳು. ಲಲಿತ ಎಲ್ಲರೊಂದಿಗೆ ಮುಗುಳ್ನಗೆ ವಿನಿಮಯಿಸಿಕೊಂಡಳು. ಅಷ್ಟು ಮಾಡುವ ಹೊತ್ತಿಗೆ ಲಲಿತೆಯ ಕೈ ನಡುಗುವುದನ್ನು ಚೈತನ್ ಗಮನಿಸಿ, ಜ್ಯೋತಿ ನಾವು ಬರ್ತಿವಿನ್ನು ಎಂದು ಗ್ರಂಥಾಲಯದ್ರ ಕಡೆ ಸಾಗಿದನು. ಹುಡುಗರೆಲ್ಲರೂ ಆತನ ಜೊತೆ ಹೆಜ್ಜೆ ಹಾಕಿದರು..
ಮುಂದುವರೆಯುವುದು
–ಹಟ್ಟಿ ಸಾವಿತ್ರಿ ಪ್ರಭಾಕರಗೌಡ