ದಿಕ್ಕುಗಳು (ಭಾಗ 7): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಆದರೆ ಇಂದು ಲಲಿತಳ ಹುಡುಗುತನವೆಲ್ಲಾ ಒಂದೇ ಏಟಿಗೆ ಸತ್ತು ಹೋಗಿದೆ. ಅವಳು ಚೈತನ್‌ನನ್ನು ಮರೆಯಲು ಸಾಧ್ಯವೇ ಇಲ್ಲವೆಂದುಕೊಂಡಳು. ಹಾಗಂತ ಆತನನ್ನು ಬೇರೊಬ್ಬಳೊಂದಿಗೆ ನೋಡುಡುವುದೂ ತನ್ನಿಂದಾಗದು ಎಂದು ಬಿಕ್ಕಿದಳು. ಆಕೆ ತನ್ನ ರೂಮಿಗೆ ಬಂದಾಗ ಎಂಟು ಗಂಟೆಯಾಗಿತ್ತು. ಎಂದಿನಂತೆ ಮುಖ ತೊಳೆಯಲಿಲ್ಲ. ಬಟ್ಟೆ ಬದಲಾಯಿಸಲಿಲ್ಲ. ತನ್ನ ಕಂಪ್ಯೂಟರ್ ಮುಂದೆ ಕುಳಿತು, ಇ-ಮೈಲ್ ಬಾಕ್ಸ್ ತೆರೆದಳು. ಅಲ್ಲಿ ಹಲವಾರು ಪತ್ರಗಳು ತನಗಾಗಿ ಕಾಯುತ್ತಿದ್ದವು. ಚೈತನ್‌ನಿಂದ ಕೂಡ ಒಂದು ಪತ್ರ ಬಂದು ಕುಳಿತಿತ್ತು. ಏನು ಬರೆದಿರಬಹುದು ಎಂದು ಆತನ ಪತ್ರವನ್ನು ತೆರೆದಳು. ಆತ ತನ್ನ ಮದುವೆ ನಿಶ್ಚಿತಾರ್ಥದ ಬಗ್ಗೆ ಖುಷಿಯಿಂದ ಹೇಳಿಕೊಂಡಿದ್ದ. ತಾನು, ಅಜ್ಜಿ,ಜ್ಯೋತಿ ಎಲ್ಲರೂ ಲಲಿತೆಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಕಳವಳ ವ್ಯಕ್ತಪಡಿಸಿದ್ದ. ತಾನು ಕೆಲಸದ ಒತ್ತಡಕ್ಕೆ ಸಿಕ್ಕಿ ಲಲಿತಳನ್ನು ಕಾಣಲು ಹೋಗದೆ ಇದ್ದುದಕ್ಕಾಗಿ ಕ್ಷಮೆ ಕೋರಿದ್ದ. ಸದ್ಯದಲ್ಲೇ ತನ್ನ ನಿಶ್ಚಿತಾರ್ಥದ ದಿನವನ್ನು ಗೊತ್ತು ಮಾಡುವುದಾಗಿ ತಿಳಿಸಿದ್ದ. ಲಲಿತ ಅದೆಲ್ಲವನ್ನೂ ಓದಿ ಸುಮ್ಮನೆ ಕುಳಿತಳು. ಎಲ್ಲದಕ್ಕೂ ಅದೃಷ್ಟವಿರಬೇಕು ಎಂದುಕೊಂಡಳು..

ಆಕೆ ತನ್ನ ಬಾಲ್ಯವನ್ನು ನೆನಪಿಸಿಕೊಂಡಳು. ತನಗೆ ತಿಳುವಳಿಕೆ ಬರುವ ಹೊತ್ತಿಗೆ ತಾಯಿ ತಂದೆ ನಡುವೆ ಮೂರು ಹೊತ್ತು ಜಗಳ ನಡೆಯುತ್ತಿತ್ತು. ತಾಯಿ ಅಡಿಗೆ ಮನೆಯಲ್ಲಿಯ ಸಾÀಮಾನುಗಳ ಮೇಲೆ ತನ್ನ ಸಿಟ್ಟನ್ನು ಹಾಕುತ್ತಿದ್ದಳು. ತಂದೆ ಬಾಸುಂಡೆ ಬರುವಂತೆ ಆಕೆಯನ್ನು ಬಡಿಯುತ್ತಿದ್ದನು. ಎಷ್ಟೊ ಸಲ ಎಳೆಯ ಲಲಿತ ಕಣ್ಮುಚ್ಚಿಕೊಂಡು ನಡುಗುತ್ತಾ ಕುಳಿತು ಬಿಡುತ್ತಿದ್ದಳು. ಒಂದು ದಿನ ಅವಳು ಶಾಲೆಯಿಂದ ಮನೆಗೆ ಬಂದಾಗ ಓಣಿಯ ಜನರು ತನ್ನ ಮನೆಯ ಮುಂದೆ ನೆರೆದಿದ್ದನ್ನು ಕಂಡಳು. ಜನರ ನಡುವೆ ದಾರಿ ಮಾಡಿಕೊಂಡು ಬಾಗಿಲಿಗೆ ಬಂದಳು. ಎಲ್ಲರನ್ನೂ ಆಶ್ಚರ್ಯ ಚಕಿತಳಾಗಿ ನೋಡಿದಳು. ತಂದೆ ತಲೆಗೆ ಕೈಕೊಟ್ಟು ಸುಮ್ಮನೆ ಕುಳಿತಿದ್ದನು. ರುದ್ರಪ್ಪಜ್ಜ, ತಮ್ಮಣ್ಣ, ಶೇಖಪ್ಪ ಸಾಹುಕಾರ ಮೊದಲಾದವರು ನಿಂಗಪ್ಪನ ಮುಂದೆ ಕುಳಿತಿದ್ದರು. ರುದ್ರಪ್ಪಜ್ಜ, “ ಈಗ ಚಿಂತಿ ಮಾಡೂದ್ರಾಗೇನೂ ಇಲ್ಲ. ಕಮಲವ್ವ ತಾನಾ ಬರದಿಟ್ಟ ಪ್ರಕಾರ ಆ ಬಸ್ಯಾನ ಜೊತಿ ಹೋಗಿದ್ದ ಖರೆ ಅಂತ ಎಲ್ಲರ‍್ಗೂ ಗೊತ್ತಾಗೇತೆಲ್ಲ. ಬಸ್ಯಾನ ಹೆಂಡತಿ ಮಕ್ಕಳ ಗೋಳಂತೂ ನೋಡಾಕ ಒಲ್ಲೆ. ಎಲ್ಲಾದಕ್ಕೂ ನೀನಾ ಕಾರಣ. ಇನ್ನು ಮುಂದಾದರೂ ಕುಡಿಯೂದನ್ನ ಬಿಟ್ಟು ಚೊಲೊ ಮನುಷ್ಯ ಆಗು..” ಎಂದಿದ್ದನ್ನು ಲಲಿತ ಕೇಳಿಸಿಕೊಂಡಳು. “ಅವ್ವ ಬಸ್ಯಾನ ಜೊತೆ ಯಾಕ ಹೋದ್ಲು, ನನ್ಯಾಕ ಕರ್ಕೊಂಡು ಹೋಗ್ಲಿಲ್ಲ” ಎಂದು ಒಂದನೇ ತರಗತಿಯಲ್ಲಿ ಓದುತ್ತಿದ್ದ ಲಲಿತ ಎಲ್ಲರೆದುರಿಗೆ ತಂದೆಗೆ ಕೇಳಿದ್ದಳು. ಆ ಪುಟ್ಟ ಹುಡುಗಿಯನ್ನು ರುದ್ರಪ್ಪಜ್ಜ ತೊಡೆ ಮೇಲೆ ಕುಳ್ಳಿರಿಸಿಕೊಂಡು , “ಹಂಗೆಲ್ಲಾ ಏನೂ ಕೇಳ್ಬಾ÷್ಯಡವ್ವಾ, ನಿನಗ ಏನು ಬೇಕೊ ಅಪ್ಪ ಎಲ್ಲಾ ಕೊಡಿಸ್ತಾನ. ಅಳ್ಬೇಡ. ಸಾಲಿಗೆ ಹೋಗಿ ಶಾಣ್ಯಾಕ್ಯಾಗು..” ಎಂದಿದ್ದನು.

ರುದ್ರಪ್ಪಜ್ಜ ಹೇಳಿದ ಪ್ರಕಾರ ತಂದೆ ಬಹಳ ಚೊಲೊ ಮನುಷ್ಯನಾದನು. ತನಗೆ ಬೇಕೆಂದ ಆಟಿಕೆ, ತಿನಿಸುಗಳನ್ನು ಬೇಕೆಂದಾಗಲೇ ತಂದು ಕೊಡುತ್ತಿದ್ದನು. ತಾನು ಹಟ ಮಾಡದೇ, ಅಳದೇ ಶಾಲೆಗೆ ಹೋಗುತ್ತಿದ್ದಳು. ಯಾವಾಗಾದರೊಮ್ಮೆ ಅವ್ವ ಯಾವಾಗ ಬರುತ್ತಾಳೆ ಎಂದು ಪ್ರಶ್ನಿಸುತ್ತಿದ್ದಳು. ಇನ್ನು ಸ್ವಲ್ಪ ದಿವಸ ಬಿಟ್ಟು ಬರುತ್ತಾಳೆಂದು ನಿಂಗಪ್ಪ ಮಗಳನ್ನು ಎತ್ತಿಕೊಂಡು ಸಮಾಧಾನಿಸುತ್ತಿದ್ದ. “ಕಮಲಿ ಹಾಳಾಗಿ ಹೋಗಲು ತಾನೆ ಕಾರಣವಾದದ್ದು’ ಎಂದು ಕೊರಗುತ್ತಿದ್ದ. ಒಂದು ವರ್ಷ ಕಳೆಯುವಷ್ಟರಲ್ಲಿ ನಿಂಗಪ್ಪ ಮರು ಮದುವೆಗೆ ತಯಾರಾಗಿದ್ದ. ಓಣಿಯ ಹಿರಿಯ ಜನರು ಆತನಿಗೆ ಪ್ರೋತ್ಸಾಹ ಕೊಟ್ಟಿದ್ದರು. ಮುಂಡರಗಿಯ ಲೆಂಕಪ್ಪನ ಮಗಳು ಬಸವ್ವ ನಿಂಗಪ್ಪನಿಗೆ ಒಪ್ಪಿಗೆಯಾಗಿದ್ದಳು. ಬಸವ್ವ ಸಣ್ಣ ವಯಸ್ಸಿನವಳು. ನಿಜ ಹೇಳಬೇಕೆಂದರೆ ಆಕೆ ಚೆಲುವಿಯೇ. ತಂದೆಯ ಬಡತನದಿಂದಾಗಿ ಎರಡನೇ ಸಂಬಂಧದ ಮದುವೆಗೆ ಒಪ್ಪಿಕೊಂಡಿದ್ದಳು. ಲಲಿತಳಿಗೆ ಅದೆಲ್ಲ ಆಗ ಅರ್ಥವಾಗಿರಲಿಲ್ಲ. ಎರಡು ಫ್ರಿಲ್‌ಗಳ ಫ್ರಾಕ್ ಹಾಕಿಕೊಂಡು ಕಾಲಿಗೆ ಚಪ್ಲಿ ಮೆಟ್ಟಿಕೊಂಡು, ಕೊರಳಿಗೆ ಒಂದು ಬೆಳ್ಳಿಯ ಸರ ಹಾಕಿಕೊಂಡು ಆಕೆ ತಂದೆಯ ಮದುವೆಯ ದಿನ ಆನಂದದಿಂದ ಕುಣಿದಾಡಿದ್ದಳು.

ತನಗೆ ಹೊಸ ಅವ್ವ ಬಂದಳೆಂದುಕೊಂಡು ಮಲತಾಯಿಯ ಹಿಂದೆ ಮುಂದೆ ಕರುವಿನಂತೆ ಅವಳು ಓಡಾಡುತ್ತಿದ್ದಳು. ಆದರೆ ಅವಳ ಖುಷಿಗೆ ತಣ್ಣೀರೆರಚಿದಂತಾಗಿತ್ತು. ತಂದೆ ಇಲ್ಲದ ಸಮಯದಲ್ಲಿ ಪುಟ್ಟ ಲಲಿತೆಗೆ ಮಲತಾಯಿಯಿಂದ ಏಟುಗಳು ಬೀಳತೊಡಗಿದ್ದವು. ಮಲತಾಯಿಯ ಕೋಪಕ್ಕೆ ಲಲಿತಳ ಕಿವಿ,ಕೆನ್ನೆಗಳೂ ದಿನಾಲೂ ಬಲಿಯಾಗುತ್ತಿದ್ದವು. ಮಲತಾಯಿ ಬಂದು ಒಂದು ವರ್ಷದೊಳಗೆ ಲಲಿತಳಿಗೆ ಖಾತರಿಯಾಗಿ ಹೋಗಿತ್ತು ಹೊಸ ಅವ್ವ ತನ್ನವ್ವನಂತೆ ಮುದ್ದಿಸುವುದಿಲ್ಲವೆಂದು. ಆ ಪುಟ್ಟ ಹುಡುಗಿ ಮತ್ತೆ ನಡುಗುತ್ತಾ ಮೂಲೆ ಹಿಡಿದು ಕೂಡ್ರಹತ್ತಿತ್ತು. ಬಸವ್ವ ಗಂಡು ಮಗುವಿಗೆ ಜನ್ಮ ಕೊಟ್ಟಾಗ ತಂದೆಯೂ ಸಹ ಲಲಿತಳನ್ನು ಮುದ್ದಿಸುವುದಿರಲಿ ಮಾತಾಡಿಸುವುದನ್ನೂ ಕೂಡ ಕಡಿಮೆ ಮಾಡಿದ್ದನು. ಆತ ಪುಟ್ಟ ತಮ್ಮನನ್ನು ಎತ್ತಿ ಲೊಚ ಲೊಚ ಮುದ್ದಿಡುತ್ತಿದ್ದಾಗ ಲಲಿತೆಗೆ ಸಿಟ್ಟಿನಿಂದ ಅಳುವಂತಾಗುತ್ತಿತ್ತು. ಜೊತೆಗೆ ಕಸ, ಮುಸುರೆ, ಸಣ್ಣ ಬಿಂದಿಗೆಯಿಂದ ನೀರು ತರುವುದು ಆಕೆಗೆ ಬೀಳುತ್ತಿತ್ತು. ಕ್ರಮೇಣ ಕೆಲಸ ಹೆಚ್ಚಾಗತೊಡಗಿದ್ದರಿಂದ ಆಕೆಗೆ ಶಾಲೆಗೆ ಹೋಗುವುದು ತಪ್ಪತೊಡಗಿತು. ಶಾಲೆಗೆ ಹೋಗು ಎಂದು ತಂದೆಯಾಗಲಿ, ಸಣ್ಣವ್ವನಾಗಲಿ ಆಕೆಗೆ ಹೇಳುತ್ತಿರಲಿಲ್ಲ. ಶಾಲೆಗೆ ಹೋಗೇ ತೀರಬೇಕೆಂಬ ಆಸೆ ಲಲಿತೆಗೂ ಇರಲಿಲ್ಲ.

ಒಂದು ದಿನ ಲಲಿತೆ ಮಲತಾಯಿಯ ಕಣ್ತಪ್ಪಿಸಿ ಹತ್ತರ ನಾಲ್ಕು ನೋಟುಗಳನ್ನು ಕದ್ದು ತನ್ನ ಸ್ಕರ್ಟಿನ ಕಿಸೆಯಲ್ಲಿ ಹುದುಗಿಸಿಕೊಂಡಳು. ಬಸವ್ವ ಕೂಸಿಗೆ ಮೊಲೆಯೂಡುತ್ತಾ ಹಾಗೆ ನಿದ್ರೆಗೆ ಜಾರಿದ್ದಳು. ಲಲಿತೆ ಆಟ ಆಡಲು ಹೆÆÃದಂತೆ ಹೊರಗೆ ಹೋಗಿ ಬಸ್ ಸ್ಟಾ÷್ಯಂಡ್ ಕಡೆ ನಡೆದಳು. ಗದಗಿಗೆ ಹೋಗುವ ಬಸ್ ಹತ್ತಿ ಕುಳಿತಳು. ತನ್ನ ತಾಯಿ ಎಲ್ಲಿಯಾದರೂ ಸಿಗಬಹುದು ಎಂಬುದು ಆಕೆಯ ಎಣಿಕೆ ಆಗಿತ್ತು. ಗದಗ್ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಕೆಳಗೆ ಇಳಿದು ಪುಟ್ಟ ಕಣ್ಣುಗಳನ್ನು ಅಗಲಲಿ ಸುತ್ತೂ ಕಡೆ ನೋಡಿದಳು. ಹೊಟ್ಟೆ ಚುರುಗುಟ್ಟತೊಡಗಿತ್ತು. ಒಂದು ರೂಪಾಯಿ ಕೊಟ್ಟು ಒಂದೆರಡು ಬಾಳೇ ಹಣ್ಣು ತೆಗೆದುಕೊಂಡು ತಿಂದಳು. ಅಲ್ಲೇ ಬಸ್‌ಸ್ಟಾ÷್ಯಂಡ್‌ನ ಪಬ್ಲಿಕ್ ನಳದಲ್ಲಿ ನೀರು ಕುಡಿದಳು. ಇಲ್ಲೆ ನಿಂತರೆ ಅಪ್ಪ ಹುಡುಕಿಕೊಂಡು ಬಂದಾನು ಎಂದುಕೊಂಡು ಗಲಿಬಿಲಿಗೆ ಒಳಗಾದಳು. ಬರ‍್ರ್ ಬರ‍್ರ್ ಬರ‍್ರ್ ಮಾಡುತ್ತಾ ಚಲಿಸಲು ತಯಾರಾಗಿ ನಿಂತಿದ್ದ ಬಸ್ಸನ್ನು ನೋಡಿದಳು. ಅದು ದಾವಣಗೆರೆಗೆ ಹೊರಟಿತ್ತು. ಲಲಿತ ಯೋಚನೆ ಮಾಡದೇ ಆ ಬಸ್ಸನ್ನು ಹತ್ತಿ ಕುಳಿತಳು.

ಲಲಿತ ಹಿಂದೆ ಸರಿದು ಹೋಗುವ ಗಿಡ-ಮರ ಹಳ್ಳಿಗಳನ್ನು, ಹೊಲಗಳನ್ನೂ ಕಂಡು ಆನಂದಿಸಿದಳು. ತಾನು ಹೀಗೆ ಯಾವಾಗಲೂ ಬಸ್ಸಿನಲ್ಲೇ ಹೋಗುತ್ತಿರಬೇಕು ಎಂದುಕೊಂಡಳು. ಬಸ್ಸು ಪ್ರತಿ ಸಲ ನಿಂತಾಗ ಬಸ್ಸಿಗೆ ಹತ್ತಲು ಬರುವ ಪ್ರಯಾಣಿಕರ ಗುಂಪಿನಲ್ಲಿ ತನ್ನ ತಾಯಿ ಇರಬಹುದೇ ಎಂದು ಹುಡುಕುತ್ತಿದ್ದಳು. ಬಸ್‌ನಲ್ಲಿ ಕುಳಿತುಕೊಂಡೆ ನಿಲ್ದಾಣದ ಗದ್ದಲಲ್ಲಿ ತನ್ನ ತಾಯಿ ಸಿಕ್ಕಾಳು ಎಂದು ಕಣ್ಣರಳಿಸಿ ನೋಡುತ್ತಿದ್ದಳು. ಹೀಗೆ ಲಲಿತ ಓಡುವ ಬಸ್ಸಿನ್ನೊಂದಿಗೆ ಎಂದೂ ಕಂಡಿರದ, ಎಂದೂ ನೋಡಿರದ, ಕೇಳಿರದ ದಾವಣಗೆರೆಗೆ ಬಂದಿಳಿದಳು. ಆ ಹೊತ್ತಿಗೆ ರಾತ್ರಿ ಒಂಭತ್ತು ಗಂಟೆಯಾಗಿತ್ತು. ಹುಡುಗಿಗೆ ಮಬ್ಬ್ಬು ಬೆಳಕಿನ ಗದ್ದಲದ ಪಟ್ಟಣ ಕಂಡು ದಿಗಿಲಾಗಿತ್ತು. ನಡೆದು ನಡೆದು ತಾನು ಆ ಪಟ್ಟಣದ ಯಾವುದೋ ಒಂದು ಗಲ್ಲಿ ತಲುಪಿದ್ದಳು. ಅಲ್ಲಿ ಈ ಹುಡುಗಿಯನ್ನು ಯಾರೂ, “ಯಾರು ನೀನು” ಎಂದು ಕೇಳುವವರಿರಲಿಲ್ಲ. ಅವಳಿಗೆ ಮಲತಾಯಿಯಿಂದ ತಪ್ಪಿಸಿಕೊಂಡು ಬಂದದ್ದೆ ಸಾಕಾಗಿತ್ತು. ಇನ್ನು ಅವ್ವನನ್ನು ಹುಡುಕಬೇಕೆಂದು ಮೌನವಾಗಿ ನಡೆದೇ ನಡೆದಳು. ಬಾಯಾರಿಕೆ, ಹಸಿವಿನಿಂದ ಮುಂದೆ ನಡೆಯುವುದು ಕಷ್ಟವೆನ್ನಿಸತೊಡಗಿತ್ತು. ಅಲ್ಲಲ್ಲಿ ಕುಳಿತು ವಿಶ್ರಮಿಸಿಕೊಂಡು ಮತ್ತೆ ನಡೆದಳು. ಆ ಹೊತ್ತಿಗೆ ರಾತ್ರಿ ಬಹಳ ಹೊತ್ತಾಗಿದ್ದಂತೆ ಆಕೆಯ ಗ್ರಹಿಕೆಗೆ ಬಂದಿತು. ಬೀದಿಯ ಮನೆಗಳ ಬಾಗಿಲುಗಳೆಲ್ಲಾ ಮುಚ್ಚಿದ್ದವು. ಜನರ ಓಡಾಟ ನಿಂತು ಹೋಗಿತ್ತು. ಬೀದಿಯ ಎರಡೂ ಬದಿಯಲ್ಲಿ ಮನೆಗಳು ಮಾತ್ರ ಇವೆ. ಅವೂ ಕೂಡ ಬಾಗಿಲು ಹಾಕಿವೆ. ಲಲಿತೆಗೆ ಹಸಿವು ತಾಳಲಾಗುತ್ತಿಲ್ಲ. ಜೊತೆಗೆ ಅಂಗಾಲು ಉರಿಯುತ್ತಿವೆ. ಕಣ್ಣಿಗೆ ನಿದ್ದೆ ಬಂದಂತಾಗುತ್ತಿದೆ. ಅವಳು ಅಲ್ಲೇ ಒಂದು ಮನೆಯ ಕಟ್ಟೆಯ ಮೇಲೆ ಮುದ್ದೆಯಾಗಿ ಮಲಗಿಕೊಂಡಳು. ಕಿಡÀಕಿಂi ಪರದೆಯಲ್ಲಿ ಈ ಹುಡುಗಿಯನ್ನು ಕಂಡು ರೇಣಕಮ್ಮ ತನ್ನ ಪತಿ ಅಂದಾನಪ್ಪನಿಗೆ ಹೇಳಿದರು, ರ‍್ರೀ ಸ್ವಲ್ಪ ಹೊರಗೆ ಹೋಗಿ ನೋಡ್ರಿ, ಯಾವ್ದಾ ಹುಡುಗಿ ಕಟ್ಟೆ ಮ್ಯಾಲೆ ಕುಂತ್ಹಂಗೈತಿ”. ಹೊದಿಕೆ ತೆಗೆದು ಇಟ್ಟು ಅಂದಾನಪ್ಪ ಹೊರಗೆ ಬಂದರು. ಮುಗಿಬೀಳತೊಡಗಿದ್ದ ಸೊಳ್ಳೆಗಳನ್ನು ಪಟ್ ಪಟ್ ಹೊಡೆದುಕೊಳ್ಳುತತಾ ಸಣ್ಣ ಹುಡುಗಿ ಮಲಗಿತ್ತು. ಅವರಿಗೆ ಅಚ್ಚರಿಯಾಯಿತು. ಕಣ್ಣು ಮುಚ್ಚಿ ಅದಾಗಲೆ ನಿದ್ರೆಗೆ ಜಾರುತ್ತಿದ್ದ ಹುಡುಗಿಯನ್ನು ದಿಟ್ಟಿಸಿದರು. ಬೆಳ್ಳಗೆ ಮುದ್ದಾಗಿ ಕಾಣುವ ಆ ಹುಡುಗಿ ಭಿಕ್ಷುಕರ ಹುಡುಗಿಯಂತೂ ಅಲ್ಲವೆನ್ನಿಸಿತು. ರೇಣುಕಮ್ಮನೂ ಹೊರಗೆ ಬಂದರು. ಹುಡುಗಿಯನ್ನು ಎಬ್ಬಿಸಿದರು. ಅದು ನಿದ್ದೆಗಣ್ಣಿನಲ್ಲಿ ಏನೇನೋ ಬಡಬಡಿಸುತ್ತಾ ಅಳತೊಡಗಿತು. ರೇಣುಕಮ್ಮ ನೀರು ತಂದು ಅದರ ಮುಖಕ್ಕೆ ಸಿಂಪಡಿಸಿದರು. ಅದು ಎಚ್ಚರವಾಗಿ ಕಣ್ಣು ಬಿಟ್ಟು ನೋಡಿತು. ಅವರು ತನ್ನನ್ನು ಹೊಡೆಯುತ್ತಾರೆಂದು ಭಾವಿಸಿ ಲಲಿತೆ ನಡುಗಹತ್ತಿದಳು.

“ಯಾರು ನೀನು ಹುಡುಗಿ, ಇಲ್ಯಾಕ ಬಂದೀ” ರೇಣುಕಮ್ಮ ಕೇಳಿದರು. ಲಲಿತೆ ತನ್ನ ಬಾಲ ಭಾಷೆಯಲ್ಲಿ, “ಅವ್ವನ್ನ ನೋಡಾಕ ಬಂದೀನಿ” ಎಂದಳು. “ಎಲ್ಲಿದಾಳು ನಿಮ್ಮವ್ವ, ನಿನ್ನ ಹೆಸರೇನು” ಎಂದರಾಕೆ. “ಅವ್ವ ದೂರ ಹೋಗ್ಯಾಳಂತ. ನನ್ನ ಹೆಸರು ಲಲಿತ” ಎಂದಳು. ಅವರು ಹುಡುಗಿಗೆ ತಿಳಿದಷ್ಟನ್ನೂ ಹೇಳಲಾಗುತ್ತಿಲ್ಲ. ಬೆಳಿಗ್ಗೆ ಕೇಳಿದರಾಯ್ತೆಂದು ಒಳಕ್ಕೆ ಕರೆದುಕೊಂಡು ಊಟಕ್ಕೆ ಬಡಿಸಿದರು. ಹುಡುಗಿ ಹೊಟ್ಟೆ ತುಂಬ ಗಬಗಬನೆ ತಿಂದಿತು.ರÉÃಣುಕಮ್ಮ ಒಂದು ಚಾಪೆ ಹಾಸಿ ಮಲಗಿಸಿ ಒಂದು ಚಾದರ ಹೊದಿಸಿದರು. “ಪಾಪ ಹುಡುಗಿ ಎಷ್ಟು ಚೆಂದೈತಿ, ಮನ್ಯಾಗ ಪರಿಸ್ಥಿತಿ ಸರಿ ಇಲ್ವೊ ಏನು ಗದದ್ದಲದಾಗ ತಾಯಿ-ತಂದೆಯನ್ನು ಕಳಕೊಂಡೈತೊ” ಎಂದರು

. ಅಂದಾನಪ್ಪ-ರೇಣುಕಮ್ಮ ದಂಪತಿಗಳು ಬಹಳ ಒಳ್ಳೆಯವರು.

ಬೆಳಿಗ್ಗೆ ರೇಣುಕಮ್ಮ ಹುಡುಗಿಯ ಬಾಯಿಂದ ಮತ್ತೆ ಮತ್ತೆ ಹೊಸ ವಿಷಯವನ್ನು ಹೊರಗೆಳೆಯಲು ಪ್ರಯತ್ನಿಸಿದರು. ಏಳು ವರ್ಷ ಮೀರದ ವಯಸ್ಸಿನ ಆ ಲಲಿತೆ ತನಗೆ ತಿಳಿದಷ್ಟು ಹೇಳಿದಳು. ಹೊಸ ಅವ್ವನ ಏಟಿನ ಬಗ್ಗೆ ಹೇಳಿದಳು. ತನ್ನ ತಂದೆ ಪುಟ್ಟ ತಮ್ಮನನ್ನು ಮುದ್ದಿಸುತ್ತಾನೆ, ತನ್ನನ್ನು ಮುದ್ದಿಸುವುದೂ ಇಲ್ಲ, ಮಾತಾಡಿಸುವುದೂ ಇಲ್ಲ ಎಂದು ಎಲ್ಲಾ ಹೇಳಿದಳು. ಅವಳ ಎಲ್ಲಾ ಮಾತುಗಳನ್ನು ಅರ್ಥ ಮಾಡಿಕೊಂಡ ದಂಪತಿಗಳ ತಾಯಿ ಮನೆ ಬಿಟ್ಟು ಹೋದ ಮೇಲೆ ತಂದೆ ಎರಡನೆ ಮದುವೆ ಆಗಿದ್ದಾನೆ ಎಂಬ ನಿರ್ಣಯಕ್ಕೆ ಬಂದರು. ಲಲಿತ ತನ್ನ ಊರು ಕಂದಾಪುರ ಎಂದು ಹೇಳಿದ್ದನ್ನು ಅವರು ಕುಂದಾಪುರ ಇರಬೇಕೆಂದು ಅರ್ಥಮಾಡಿಕೊಂಡರು. ಲಲಿತಳನ್ನು ಪೊಲೀಸ್ ವಶಕ್ಕೆ ಕೊಟ್ಟಾಗ ಅವಳನ್ನು ಕುಂದಾಪುರ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು. ಅಲ್ಲಿ ಲಲಿತಳಿಂದ ಸರಿಯಾದ ಮಾಹಿತಿ ಸಿಗದೆ, ಅವಳು ಹೇಳಿದ ತಂದೆ-ತಾಯಿ ಸಿಗದೆ ಬಹಳ ಪೇಚಾಟವಾಯಿತು. ಆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ ಅಂದಾನಪ್ಪ ದಂಪತಿಗಳನ್ನು ಕರೆಸಿಕೊಂಡು ವಿಚಾರಿಸಿದರು. ಅವರು ನಡೆದುದನ್ನು ನಡೆದ ಹಾಗೆ ತಿಳಿಸಿದರು. ಲಲಿತ ಕುಂದಾಪುರದಲ್ಲಿ ಇದು ನಮ್ಮೂರಲ್ಲ, ಇಲ್ಲಿ ನಮ್ಮಪ್ಪ ನಮ್ಮವ್ವ ಇಲ್ಲ ಎಂದು ಆಕಾಶ ಭೂಮಿ ಒಂದು ಮಾಡಿ ಅಳತೊಡಗಿದಳು. ಅವಳ ಭಾಷೆ ಸಹ ಉತ್ತರ ರ‍್ನಾಟಕದ್ದು ಎಂದು ತಿಳಿದ ಪೊಲೀಸ್ ಅಧಿಕಾರಿ ಯೋಚನೆ ಮಾಡಿದರು, ಲಲಿತೆ ಸ್ಕರ್ಟನಿಂದ ಸೋರುತ್ತಿದ್ದ ಮೂಗನ್ನು ಒರೆಸಿಕೊಳ್ಳುತ್ತ ಅಳುವುದನ್ನು ನಿಲ್ಲಿಸಲೆತ್ನಿಸಿದಳು. ಅಂದಾನಪ್ಪ ತನ್ನ ಗದುಗಿನ ಸ್ನೇಹಿತರೊಬ್ಬರಿಗೆ ಫೋನ್ ಮಾಡಿ, “ಕುಂದಾಪುರ ಥರಾನೆ ಉಚ್ಚಾರಾಗೂ ಊರು ನಿಮ್ಮ ಕಡೆ ಇದ್ದಂಗೈತೆಲ್ರೀ. ನಾನು ಯಾವಾಗೊ ಒಮ್ಮೆ ಕೇಳಿದ್ದೆ. ಈಗ ನೆನಪಾತು. ಅರ್ಜೆಂಟ್ ಒಂದು ಸಮಸ್ಯೆ ಬಗೆಹರೀಬೇಕು. ಆ ಊರು ಯಾವುದಂತ ತಿಳೀವಲ್ದು” ಎಂದರು.

ಸಿದ್ಧಣ್ಣನವರು ಕಣ್ಣು ಸಣ್ಣದು ಮಾಡಿ,”:ಕುಂದಾಪುರದಂತಾಗ ಉಚ್ಛಾರಾಗೂ ಊರಂದ್ರ, ಮುಂಡರಗಿ ತಾಲೂಕು ನಮ್ಮ ಜಿಲ್ಲೆಯದೆ. ಮುಂಡರಿಗೆ ಹೋಗೂವಾಗ, ಆ ತಾಲೂಕಿನ ವ್ಯಾಪ್ತಾ÷್ಯಗ ಕದಾಂಪುರ” ಅಂತ ಹಳ್ಳಿ ಐತ್ರಿ” ಎಂದು. ಅಂದಾನಪ್ಪನವರಿಗೆ ಸ್ವಲ್ಪ ಖುಷಿ ಎನ್ನಿಸಿತು. ಪೊಲಿಸ್ ಅಧಿಕಾರಿಗೆ ಮಾಹಿತಿ ಒಪ್ಪಿಸಿದರು. ಎಸ್.ಐ ರಮೇಶರಾವ್ ಟೆಲಿಫೋನ್ ಇಂಡೆಕ್ಸ್ ತೆಗೆದು ನೋಡಿದರು. ಸಿದ್ಧಣ್ಣ ಹೇಳಿದಂತೆ ಕದಾಂಪುರ ಮುಂಡರಗಿ ತಾಲೂಕಿನಲ್ಲಿದೆ. ಅಲ್ಲಿಯ ಗ್ರಾಮ ಪಂಚಾಯತಿಗೆ ಫೋನಾಯಿಸಿದರು. ಆಗ ಲಲಿತಳ ಬಗ್ಗೆ ಪೂರ್ಣ ಮಾಹಿತಿ ಸಿಕ್ಕಿತು. ಅವರು ಫೋನ್ ಕೆಳಗಿಟ್ಟು ಅಂದಾನಪ್ಪನವರಿಗೆ ಹೇಳಿದರು, “ಅಂದಾನಪ್ಪನವರೆ, ಲಲಿತಳ ಸ್ವಂತ ತಾಯಿ ಗಂಡನ ಕಾಟ ತಾಳದೆ ಬೇರೊಬ್ಬನ ಜೊತೆ ಎಲ್ಲಿಗೂ ಹೋಗಿ ಎರಡು ವರ್ಷಕ್ಕೆ ಸಮೀಪಿಸಿದೆ. ಈಗ ಲಲಿತಳ ತಂದೆ ಎರಡನೆ ಮದುವೆಯಾಗಿದ್ದಾನೆ. ಲಲಿತೆ ಮನೆ ಬಿಟ್ಟು ಓಡಿದ್ದೂ ಈಗ ಹಳ್ಳಿಯಲ್ಲಿ ಎಲ್ಲರಿಗೂ ತಿಳಿದಿದೆ. ಆಕೆಯ ತಂದೆ ಹುಡುಕುತ್ತಿದ್ದಾನೆ ಎಂದರು. ಲಲಿತಳನ್ನು ಮತ್ತೆ ದಾವಣಗೆರೆಯ ಪೊಲೀಸ್ ವಶಕ್ಕೆ ಕೊಡಲಾಯಿತು. ಮಾರನೆ ದಿನ ನಿಂಗಪ್ಪ ಪೊಲೀಸ್ ಠಾಣೆಗೆ ಬಂದಾಗ ಲಲಿತೆಯನ್ನು ತಂದೆಯ ಮುಂದೆ ಹಾಜರುಪಡಿಸಲಾಯಿತು. ಅವಳು ಓಡಿ ಹÉÆÃಗಿ ತಂದೆಯನ್ನು ಅಪ್ಪಿಕೊಳ್ಲಲಿಲ್ಲ . ಬದಲಾಗಿ ಅತ್ತು ಕರೆದು ರಂಪ ಮಾಡಿದಳು. “ಸಣ್ಣವ್ವ ಹೊಡೀತಾಳ, ನೀನು ಹೊಲಕ್ಕೆ ಹೋದ್ಮಾ÷್ಯಲೆ ಗಲ್ಲ ತಿವಿತಾಳ, ಕಿವಿ ಹಿಂಡಿ ಚೂಟತಾಳ. ನೀನು ತಮ್ಮನ್ನಷ್ಟಾ ಮಾತಾಡಿಸ್ತೀ, ನನ್ನ ಮಾತಾಡ್ಸಾಗಿಲ್ಲ. ನನಗ ಅವ್ವ ಬೇಕು. ಸಣ್ಣವ್ವ ನಮ್ಮನ್ಯಾಗಿರೂದು ಬ್ಯಾಡ” ಎಂದು ಕಣ್ಣು ಮೂಗು ಒರೆಸಿಕೊಳ್ಳುತ್ತಾ ಲಲಿತ ತಂದೆಯ ಮುಖಕ್ಕೆ ಉಗುಳಿದಂತೆ ಮಾತಾಡಿದ್ದಳು. ಪೊಲೀಸ್ ಅಧಿಕಾರಿ ಮೆಲುಧ್ವನಿಯಲ್ಲಿ, “ನಿಂಗಪ್ಪನನ್ನು ಎಚ್ಚರಿಸಿ, “ಮಗುವನ್ನು ಚೆನ್ನಾಗಿ ನೋಡಿಕೊಳ್ಳದೆ, ತಾತ್ಸಾರ ಮಾಡಿದ್ದಕ್ಕೆ ಆಕೆ ಹಾಗೆ ಮನೆ ಬಿಟ್ಟು ಹೊರಗೆ ಓಡಿ ಬಂದಿದ್ದಾಳೆ. ನಿನ್ನ ಎರಡನೇ ಹೆಂಡತಿಗೆ ಹೇಳು, ಈ ಮಗುವಿನ ಮೇಲೆ ಕೈ ಎತ್ತುವ ಅಧಿಕಾರ ಆಕೆಗಿಲ್ಲ. ಇನ್ನೊಂದ್ಸಲ ಏನಾದ್ರೂ ಈ ಮಗು ಮನೆಯಿಂದ ಹೊರಗೆ ಬಂದು, ಈ ಕೇಸು ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಾದ್ರೆ, ನಿನಗೂ ನಿನ್ನ ಹೆಂಡ್ತಿಗೂ ಒಳ್ಳೇ ಶಾಸ್ತಿ ಮಾಡ್ತೀವಿ” ಎಂದರು.

ನಿಂಗಪ್ಪ ತಲೆ ಕೆಳಗೆ ಹಾಕಿಕೊಂಡು, “ಇಲ್ರೀ ಸಾಹೇಬ್ರ ಇನ್ನು ಮುಂದ ನನ್ಮಗಳ್ನ ಚೊಲೊತ್ನಾಗಿ ಜೋಪಾನ ಮಾಡ್ಕೊಂತೀನಿ” ಎಂದು ಕೈ ಮುಗಿದನು. ಎಸ್ ಐ ಶ್ರೀಕಾಂತ್‌ರಾವ್ ಲಲಿತೆಯ ತಲೆ ನೇವರಿಸಿ, “ಪುಟ್ಟಿ ಹಿಂಗೆಲ್ಲಾ ಮನೆ ಬಿಟ್ಟು ಬರಬಾರದಮ್ಮ. ಇನ್ನು ಅಪ್ಪನ ಜೊತೆ ಮನೆಗ್ಹೋಗು, ನಿನ್ನ ಸಣ್ಣವ್ವ ಇನ್ನು ಮುಂದ ನಿನಗೆ ಬಡಿಯಲ್ಲ” ಎಂದರು. ಹುಡುಗಿ ತನ್ನ ಸ್ಕರ್ಟ್ ನೆರಿಗೆಯೊಂದಿಗೆ ಆಟವಾಡುತ್ತಾ, “ಹೂಂ ಮತ್ತೆ ನಿಮ್ಮ ಹೆಸರೇನು” ಎಂದಳು. “ಪೊಲೀಸ್ ಮಾಮಾ” ಎಂದರು ಶ್ರೀಕಾಂತ್. ಅವರು ಹುಡುಗಿಯ ಕೆನ್ನೆಗೆ ಪ್ರೀತಿಯಿಂದ ತಟ್ಟಿ, “ನಡೆ” ಎಂದರು. ಲಲಿತ ತಂದೆಯ ಕೈ ಹಿಡಿದುಕೊಂಡು ಅಂದಾನಪ್ಪನವರಿಗೂ, ಪೊಲೀಸ್ ಮಾಮಾಗೂ ಟಾಟಾ ಮಾಡಿದಳು. ನಿಂಗಪ್ಪ ಅಂದಾನಪ್ಪನವರು ಹೇಳಿದ ಎಲ್ಲಾ ಬುದ್ಧಿ ಮಾತುಗಳನ್ನು ವಿನೀತನಾಗಿ ಕೇಳಿ, ಅವರಿಗೆ ಕೃತಜ್ಞತೆಯಿಂದ ನಮಸ್ಕರಿಸಿ ಗದಗ್ ಮೋಟಾರನ್ನು ಹತ್ತಿದನು. ಬಸ್ ಬಿಡುವ ಹೊತ್ತಿಗೆ ಅಂದಾನಪ್ಪನವರು ಓಡುತ್ತಾ ಬಂದು ಲಲಿತೆಯ ಕೈಗೆ ಪೇಡೆ ಪಾಕೀಟು ಕೊಟ್ಟು ಕಿಡಕಿಯಲ್ಲಿ ಕೈ ತೂರಿಸಿ ಹುಡುಗಿಯ ತಲೆ ನೇವರಿಸಿದರು. ಬಸ್ ಬಿಟ್ಟಾಗ ಲಲಿತೆ ಎದ್ದು ಕಿಡಕಿಯಲ್ಲಿ ಇಣುಕಿ ಮಾಮಾ ಟಾಟಾ ಎಂದಳು. ಅಂದಾನಪ್ಪನವರಿಗೆ ಏನೋ ಸಿಕ್ಕಂತೆಯೂ, ಅಷ್ಟೇ ಬೇಗ ಕಳೆದು ಹೋಗುತ್ತಿರುವಂತೆಯೂ ಅನ್ನಿಸತೊಡಗಿತ್ತು.

ಮುಂದೆ ಲಲಿತೆಗೆ ಸಣ್ಣವ್ವನಿಂದ ಏಟೂ ಸಿಗಲಿಲ್ಲ. ಪ್ರೀತಿಯೂ ಸಿಗಲಿಲ್ಲ. ನಿಂಗಪ್ಪ ಮಗಳ ಶಾಲೆ, ಆರೋಗ್ಯ, ಊಟ ಮೊದಲಾದವುಗಳ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿದ್ದನು. ಆತನ ದುಡಿಮೆಯೇ ಆ ಕುಟುಂಬಕ್ಕೆ ಆಧಾರವಾಗಿತ್ತು. ಲಲಿತೆ ತಂದೆಯ ಕಾಳಜಿಯಲ್ಲಿ ದೊಡ್ಡವಳಾದಳು. ರುದ್ರಪ್ಪಜ್ಜನ ಪ್ರೋತ್ಸಾಹ, ಪ್ರೀತಿ ಲಲಿತೆಳ ಓದಿಗೆ ಸಹಾಯಕವಾಗಿದ್ದವು. ಆಕೆಗೆ ರುದ್ರಪ್ಪಜ್ಜನ ಮನೆಯಲ್ಲಿ ಊಟ, ದೀಪಾವಳಿಗೊಮ್ಮೆ ಹೊಸ ಬಟ್ಟೆ ಪ್ರೀತಿಯ ಕಾಣಿಕೆಯಾಗಿ ಸಲ್ಲುತ್ತಿದ್ದವು. ಅವಳು ರುದ್ರಪ್ಪಜ್ಜನ ದೊಡ್ಡ ಕುಟುಂಬದಲ್ಲಿ ಪ್ರೀತಿಯ ಮಗಳಾಗಿದ್ದಳು. ನಾಲ್ಕು ಜನ ಗಂಡು ಮಕ್ಕಳಿಗೆ ತಲಾ ಎರಡೆರಡು ಗಂಡು ಮಕ್ಕಳು ಹುಟ್ಟಿದ್ದರು. ಕೊನೆಯ ಮಗನ ಮಕ್ಕಳಲ್ಲಿ ಚಿಕ್ಕ ಹುಡುಗ ಬಾಲ್ಯದಲ್ಲೇ ತೀರಿಕೊಂಡಿತ್ತು. ಆ ಹುಡುಗರೆಲ್ಲಾ ಪುಟ್ಟ ಲಲಿತೆಯೊಂದಿಗೆ ಕೈ ಹಿಡಿದುಕೊಂಡು ಆಡುತ್ತಾ ಬೆಳೆದಿದ್ದರು. ಅಜ್ಜನ ಶಿಸ್ತಿನಲ್ಲಿ ಬೆಳೆದಿರುವ ಅವರೆಲ್ಲಾ ಲಲಿತೆಯ ಅಣ್ಣಂದಿರಾಗಿದ್ದರು.

ಹೀಗೆ ಲಲಿತೆ ಹತ್ತನೇ ತರಗತಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಳು. ಅದೊಂದು ದಿನ ತಂದೆ ಸೈಕಲ್ ತುಳಿಯುತ್ತಾ ಬರುತ್ತಿರುವಾಗ ಎದುರಿಗೆ ಲಾರಿ ಬರುತ್ತಿರುವುದನ್ನು ಕಂಡು ಪಕ್ಕಕ್ಕೆ ಸರಿಯಲು ಯತ್ನಿಸುತ್ತಿರುವಾಗಲೆ ಹಿಂದಿನಿಂದ ಬಂದ ಲಾರಿಯ ಬಾಯಿಗೆ ಸಿಕ್ಕಿಕೊಂಡು ಅಪ್ಪಚ್ಚಿಯಾಗಿದ್ದ. ಲಲಿತೆಗೆ ಬದುಕೆಲ್ಲಾ ಸುಟ್ಟು ಭಸ್ಮವಾದಂತೆ ಕಂಡಿತು. ತಂದೆ ದುರ್ಮರಣಕ್ಕೆ ಈಡಾಗಿದ್ದು ಆಕೆಯ ಚೈತನ್ಯವನ್ನೇ ಉಡುಗಿಸಿತು. ತನ್ನವರು ಯಾರೂ ಇಲ್ಲ. ದೂರ ದೂರದಲ್ಲಿರುವ ತಂದೆ-ತಾಯಿಯ ಸಂಬಂಧಿಗಳ ಹತ್ತಿರ ಹೋದರೆ ಊಟ, ಬಟ್ಟೆ ಮನೆ ಕೆಲಸ ಸಿಗುತ್ತದೆ. ಓದುವುದು ಸಾಧ್ಯವಿಲ್ಲ. ಆಶ್ರಯ ಕೊಟ್ಟವರ ಮಾತು ಮೀರಲಾಗುವುದಿಲ್ಲ. ಅವರು ತೋರಿಸಿದ ಕಡೆ ಮದುವೆಯಾಗಬೇಕು. ಆದರೆ ಅದೆಲ್ಲಾ ತನಗೆ ಇಷ್ಟವಿಲ್ಲ. ಹೇಗಾದರೂ ಮಾಡಿ ದೂರ ಎಲ್ಲಾದರೂ ಹೋಗಿ ಓದಬೇಕು ಎಂದುಕೊಂಡಳು. ಮಲತಾಯಿ ಇಷ್ಟು ವರ್ಷ ಬಾಯಿ ಮುಚ್ಚಿಕೊಂಡಿದ್ದಾಕೆ ಈಗ ಬಾಯಿಗೆ ಬಂದಂತೆ ಬೈಯ್ಯತೊಡಗಿದ್ದಳು, “ಅನಿಷ್ಟ ಮುಂಡೆ, ತಾಯಿನ ಕಳ್ಕೊಂತು ಚೋಟುದ್ದ ಇದ್ದಾಗ, ಹೋಗಿತ್ತು ಹಾಳಾಗಿ ಅತ್ಲಾಗಾ ಹೋಗ್ಲಿಲ್ಲ. ಮತ್ತೆ ಹೊಳ್ಳಿ ಬಂದು ತಂದೀನೂ ನುಂಗ್ತು” ಎಂದು ಕೆಂಡ ಕಾರುವಳು. ಲಲಿತೆ ಎದುರಾಡದೆ ತನ್ನ ಕೆಲಸ ಮುಗಿಸಿಕೊಂಡು ರುದ್ರಪ್ಪಜ್ಜನ ಮನೆಗೆ ಹೋಗಿ ಆ ದೊಡ್ಡವ್ವಂದಿರ ಜೊತೆ ಮಾತಾಡುತ್ತಾ, ರವಿ, ಕಿರಣ, ರಾಜು, ಮುರುಳಿ, ಕಿಟ್ಟಿ ಜೊತೆ ಜಗಳ ಕಾಯುತ್ತಾ ಶಾಮಣ್ಣ, ಮುತ್ತಣ್ಣ, ವಿನೋದಣ್ಣನ ಹತ್ತಿರ ಏನಾದರೂ ಪಾಠ ಹೇಳಿಸಿಕೊಂಡು ಸಾಯಂಕಾಲ ಮನೆಗೆ ಬರುತ್ತಾಳೆ. ಮತ್ತೆ ಮನೆ ಕೆಲಸ ಮಾಡಿ ಸಣ್ಣವ್ವನ ಮಾತಿಗೆ ಕಿವಿ ಬಾಯಿ ಮುಚ್ಚಿಕೊಂಡಿದ್ದು ಬಿಡುತ್ತಾಳೆ.

ಶಾಮಣ್ಣ ಬಹಳ ಒಳ್ಳೆಯವನು. ಆತನ ತಂದೆ-ತಾಯಿ ಚೆನ್ನಮ್ಮ-ಹನುಮಪ್ಪ. ಅವರೂ ಕೂಡ ತಂದೆ ರುದ್ರಪ್ಪನಂತೆ ಸಹೃದಯಿಗಳು. ಅಜ್ಜನ ಎಲ್ಲ ಸದ್ಗುಣಗಳು ಮಕ್ಕಳಿಗೆ, ಮೊಮ್ಮಕ್ಕಳಿಗೆ ಬಳುವಳಿಯತೆ ಬಂದಿದ್ದವು. ಶಾಮಣ್ಣ ಲಲಿತಳ ಜಾಣ್ಮೆಗೆ ಬಹಳ ಮೆಚ್ಚಿದ್ದ. ಆಕೆ ಹಳ್ಳಿಯ ಹುಡುಗ-ಹುಡುಗಿಯರಲ್ಲೇ ಜಾಣ ಹುಡುಗಿ ಎಂದು ಎಲ್ಲರಿಗೂ ತಿಳಿದಿತ್ತು. ಆಕೆಯ ಫಲಿತಾಂಶ ಬಂದಾಗ ರುದ್ರಪ್ಪಜ್ಜನ ಮನೆಯಲ್ಲಿ ಹಬ್ಬದ ಸಂಭ್ರಮ ಹರವಿತ್ತು. ತಂದೆ ಇಲ್ಲದ್ದೊಂದೆ ಲಲಿತಳ ದುಃಖ. ಆದರೆ ರುದ್ರಪ್ಪಜ್ಜನ ನಾಲ್ಕೂ ಜನ ಮಕ್ಕಳು, ಆತನ ಮೊಮ್ಮಕ್ಕಳು, ಆ ತಾಯಂದಿರು ಎಲ್ಲರ ಪ್ರೀತಿಗೆ ತಾನು ಪಾತ್ರಳಾದವಳು. ಅವರೆಲ್ಲರೂ ಶೇಕಡಾ ಎಂಬತ್ತೆöÊದು ಅಂಕದೊಂದಿಗೆ ಉತ್ತೀರ್ಣಳಾಗಿದ್ದ ಲಲಿತಳನ್ನು ಹೊಗಳಿದ್ದೆ ಹೊಗಳಿದ್ದು. ಅವತ್ತು ಎಲ್ಲರೂ ಹೋಳಿಗೆ ತುಪ್ಪ ಸವಿದು ಲಲಿತೆಗೆ ಹಾರೈಸಿದ್ದರು. ತನಗೆ ಏನೂ ಸಂಬಂಧವಿರದ ಈ ಮನೆಯವರು ತನ್ನವರಾದರು. ತನ್ನ ತಂದೆ-ತಾಯಿಯರು ದೂರವಾದರು ಅಂತ ಲಲಿತೆಗೆ ದುಃಖವಾಯಿತು.

ಮುಂದುವರೆಯುವುದು

ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x