ಅಜ್ಜಿಯ ಒತ್ತಾಯಕ್ಕೆ ಮಣಿದು ಅನುಶ್ರೀ ಒಂದೆರಡು ತುತ್ತು ತಿಂದಳು. ಇಷ್ಟು ದಿನ ಸತ್ತು ಹೋಗಿರುವ ತಾಯಿಯ ನೆನಪುಗಳು ಬಾಧಿಸುತ್ತಿದ್ದರೂ ತಂದೆ ಇರುವನಲ್ಲ ಅಂತ ಧೈರ್ಯದಿಂದ ಇರಲು ಯತ್ನಿಸುತ್ತಿದ್ದವಳಿಗೆ ತಂದೆ ಇದ್ದೂ ಇಲ್ಲದಂತಾದ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಉಣ್ಣುತ್ತಿದ್ದ ತುತ್ತು ನೆತ್ತಿಗೆ ಹತ್ತಿ ಕೆಮ್ಮತೊಡಗಿದಳು. ಆ ಹೊತ್ತಿಗೆ ಚೈತನ್‌ನ ಬೈಕ್ ಅನುಶ್ರೀಯ ಮನೆಯ ಮುಂದೆ ನಿಂತಿತು. ಸದ್ದು ಕೇಳಿ ಬಾಗಿಲಿಗೆ ಓಡಿದಳು ಜ್ಯೋತಿ. ಯಾರಾಗಿರಬಹುದೆಂದು ಅನು ಚಡಪಡಿಸಿದಳು. ಬೈಕ್ ನಿಲ್ಲಿಸಿ ಚೈತನ್ ಒಳ ಬಂದನು. ವೃದ್ಧಾಶ್ರಮಕ್ಕೆ ಹೋಗದೇ ಸೀದಾ ಈ ಕಡೆ ಹೊರಟು ಬಂದಿದ್ದ. ಒಳಗೆ ಬಂದವನಿಗೆ ಅನುಶ್ರೀಯ ಸೊರಗಿದ ದೇಹ, ಉಬ್ಬಿದ ಕಣ್ಣು ನೋಡಿ ಗಾಬರಿಯಾದನು. ಜ್ಯೋತಿ ಆತನ ಕೈಗೆ ಆ ಕಾಗದವನ್ನು ಕೊಟ್ಟಳು. ಅವನು ಓದಿ ಎಲ್ಲ ಕೈ ಮೀರಿ ಹೋಯಿತು ಎಂದುಕೊಂಡನು. ‘ಶಿವಪ್ಪ ಸ್ವಲ್ಪ ತಾಳ್ಮೆಯಿಂದ ಇದ್ದಿದ್ದರೆ ಮಗಳೇ ನಿಂತು ಆತನ ಮದುವೆ ಮಾಡುವಂತೆ ಏರ್ಪಾಡು ಮಾಡುತ್ತಿದ್ದೆ’ ಎಂದುಕೊಂಡನು. ಮನುಷ್ಯನಿಗೆ ಅತಿಯಾಗಿ ಕಾಡುವುದು ಯಾವುದು? ಹಸಿವು-ತೃಷೆಯಂತೆ ಲೈಂಗಿಕ ಕಾಮವೂ ಕೂಡ ಹತ್ತಿಕ್ಕಲಾಗದ್ದೆ? ಹಾಗಲ್ಲದಿದ್ದರೆ ಮನುಷ್ಯರು ಹೀಗೇಕೆ ಓಡುತ್ತಿದ್ದರು? ವಯಸ್ಸಿಗೆ ಬಂದ ಮಗಳನ್ನು ಯಾರೂ ಅಂದರೆ ಯಾರೂ ದಿಕ್ಕಿಲ್ಲದ ದೂರದ ಅಪರಿಚಿತ ಊರಿನಲ್ಲಿ ಬಿಟ್ಟು ಆತ ಹೀಗೆ ಮಾಡಬೇಕಿತ್ತಾ?… ಹೀಗೆ ಯೋಚಿಸುತ್ತಿದ್ದವನಿಗೆ ತಟ್ಟನೆ ತನ್ನ ಜನ್ಮದ ಕಥೆ ತಿಳಿದು ಯೋಚನೆಗೆ ಕಡಿವಾಣ ಬಿದ್ದಿತು. ‘ಛೆ! ಎಲ್ಲಾ ಕಾಮಮಯ. ಅದರಿಂದಲೇ ಜಗತ್ತು. ಅದಿಲ್ಲದಿದ್ದರೆ ಏನೂ ಇಲ್ಲವೆಂಬಂತೆ ಇಡೀ ಜಗತ್ತಿನ ಜನರು ಅದರ ಬೆಂಬತ್ತಿ ಓಡುತ್ತಿದ್ದಾರೆ… ತಮ್ಮ ಸ್ವಾರ್ಥಕ್ಕಾಗಿ ಅನೇಕರು ಎಲ್ಲಾ ಚೌಕಟ್ಟುಗಳನ್ನು ಮುರಿದು ಮುನ್ನುಗ್ಗುತ್ತಿದ್ದಾರೆ… ಸ್ವಾರ್ಥವೇ ತುಂಬಿರುವೆಡೆಯಲ್ಲಿ ಬೇರೆಯವರು ಸತ್ತರೇನು ಇದ್ದರೇನು ಅನ್ನುವ ಲೆಕ್ಕಾಚಾರ ಮೇಲುಗೈ ಪಡೆಯುತ್ತದೆ…’
ಚೈತನ್ ಏನು ಹೇಳಬೇಕೆಂದುಕೊಂಡರೂ ಮಾತು ನಾಲಿಗೆಯಾಚೆ ಹೊರಬರುತ್ತಿಲ್ಲ. ಕಡೆಗೆ ಮಾತಾಡಲೇಬೇಕೆಂದು ನಿರ್ದರಿಸಿದ. ತನ್ನ ಹುಡುಗಿಯನ್ನು ದುಃಖದ ಈ ಸನ್ನಿವೇಶದಲ್ಲಿ ಮೊಟ್ಟ ಮೊದಲ ಸಲ ಮಾತಾಡಿಸುತ್ತಿದ್ದೇನೆಂದುಕೊಂಡನು.. “ಅನು ನಿಮ್ಮಪ್ಪ ತನ್ನ ಸುಖವನ್ನು ಹುಡುಕಿಕೊಂಡು ಹೋದದ್ದು ನಿಜ. ಹಾಗಂತ ನೀನು ಎದೆಗುಂದಬೇಕಿಲ್ಲ. ಇಲ್ಲೇ ಅಜ್ಜಿ ಇದ್ದಾರೆ. ಜ್ಯೋತಿ ಇದ್ದಾಳೆ. ನೀನು ಅವರೊಂದಿಗೆ ನಗುತ್ತಾ ಇರಕ್ಕೆ ಪ್ರಯತ್ನಿಸು. ಹಳೆಯದೆಲ್ಲ ಮರೆತು ಬಿಡೋಕೆ ಪ್ರಯತ್ನಿಸು. ಯಾಕಂದ್ರ ಆ ನೆನಪುಗಳಿಂದ ಯಾವ ಖುಷಿಯೂ ಇಲ್ಲ. ಏನೂ ಪ್ರಯೋಜನ ಇಲ್ಲ…” ಅವನು ನೇರವಾಗಿ ಅವಳನ್ನೇ ನೋಡಿದನು. ಅನುಶ್ರೀ ಅತ್ತು ಅತ್ತು ನಿಃಶಕ್ತಿಯಾಗಿದ್ದಳು. ಏನೂ ಮಾತನಾಡಲಾಗದೆ ಸುಮ್ಮನೆ ಆತನನ್ನು ನೋಡಿ ನೆಲಕ್ಕೆ ದೃಷ್ಟಿ ಚೆಲ್ಲಿದಳು.
ಜ್ಯೋತಿ, ಅಜ್ಜಿಗೆ ಅನುಶ್ರೀ ಹತ್ತಿರವೇ ಇರಲು ಹೇಳಿ ಚೈತನ್ ಜೊತೆಗೆ ಹೊರಹೋದಳು. ಚೈತನ್ ಇಂದು ವೃದ್ಧಾಶ್ರಮಕ್ಕೆ ಹೋಗದೇ ಹೀಗೆ ಬಂದಿದ್ದನ್ನು ತಿಳಿಸಿದನು. ತಾನು ಆಮೇಲೆ ಮನೆಗೆ ಬರುವುದಾಗಿ ಹೇಳಿ ಅವನು ಬೈಕ್ ಏರಿ ಆಶ್ರಮದ ಕಡೆ ಓಡಿದನು. ಅಲ್ಲಿಯ ಕಾರ್ಯಗಳು ಸುಸೂತ್ರವಾಗಿ ಸಾಗಿದ್ದನ್ನು ಖಚಿತಪಡಿಸಿಕೊಂಡು ಅರ್ಧ ತಾಸು ಅಲ್ಲಿ ಕಳೆದನು. ಎಲ್ಲರೂ ಚೈತನ್ ಮುಖ ಕುಗ್ಗಿದ್ದನ್ನು ಗಮನಿಸಿದರು. ಜೀವ ತಡೆಯಲಾರದೇ, ವೃದ್ಧ ಗಂಗಜ್ಜಿ, “ಉಸಾರಿಲ್ವಾ ಬುದ್ದಿ” ಎಂದು ವಿಚಾರಿಸಿದಳು. “ಹಾಗೇನಿಲ್ಲಮ್ಮಾ, ಹುಷಾರಾಗಿದ್ದೀನಿ. ನೀನು ಸರಿಯಾಗಿ ಊಟ ಮಾಡು. ಚಿಂತೆ ಮಾಡೂದು ಬೇಡ…” ಎಂದು ಅಜ್ಜಿಯ ಭುಜದ ಮೇಲೆ ಕೈ ಹಾಕಿಕೊಂಡು ಮಾತಾಡಿ ಆಕೆಯಿಂದ ಬೀಳ್ಕೊಂಡು ತನ್ನ ಛೇಂಬರಿನ ಕಡೆ ನಡೆದನು. ಎಂದಿನಂತೆ ಪ್ರಾರ್ಥನೆ ಮುಗಿದ ಮೇಲೆ ಸ್ವಲ್ಪ ಹೊತ್ತು ಅಲ್ಲಿ ಕಳೆಯಲು ಚೈತನ್‌ಗೆ ಸಾಧ್ಯವಾಗಲಿಲ್ಲ. ಕರೆ ಗಂಟೆ ಬಾರಿಸಿದನು. ಅಡುಗೆ ವ್ಯವಸ್ಥೆ ಉಸ್ತುವಾರಿ ನೋಡಿಕೊಳ್ಳುವ ನೀತಾ ಬಂದು ಪ್ರಶ್ನಾರ್ಥಕವಾಗಿ ಚೈತನ್ ಮುಂದೆ ನಿಂತಳು. “ಎಲ್ಲಾ ಸರಿ ಇದೆಯಾ?” “ಎಸ್ ಸರ್”. “ಸರಿ ನಾಳೆ ಸಿಗುವೆ. ಈಗ ಬೇರೆ ಕಡೆ ಕೆಲಸ ಇದೆ. ನಾನು ಬರ್ತೀನಿ” ಎಂದು ಮೇಲೆದ್ದನು. ನೀತಾ ಆಯ್ತು ಸರ್ ಎಂಬಂತೆ ಅಡ್ಡಡ್ಡವಾಗಿ ತಲೆ ಅಲುಗಾಡಿಸಿ, ಅವನು ಹೋಗುವುದನ್ನೇ ನೋಡುತ್ತ ನಿಂತಳು.
‘ಮೂರು ವರ್ಷಗಳ ಹಿಂದೆ ತಾನು ತಾಯಿಯನ್ನು ಕಳೆದುಕೊಂಡ ನಂತರ ಪೂರ್ಣ ಬೀದಿಯ ಪಾಲಾಗಿದ್ದೆ. ತಾಯಿ ಇದ್ದಾಗ ಭಿಕ್ಷೆ ಬೇಡುವುದನ್ನು ಬಿಟ್ಟರೆ ಬೇರೆ ಯಾವ ಕೆಲಸವನ್ನೂ ಕಲಿಸಿರಲಿಲ್ಲ. ಈಗ ಭಿಕ್ಷೆ ಬೇಡಬೇಕೆಂದರೂ ಹೆದರಿಕೆ. ತಾಯಿ ಹತ್ತಿರವಿದ್ದಾಗ ಜೀವದಿಂದ ಇದ್ದಾಗ ಭಿಕ್ಷುಕ ಬದುಕಿನಲ್ಲೇ ಒಂದು ರೀತಿಯ ಭದ್ರತೆ ಇತ್ತು. ಆದರೆ ತಾಯಿ ಅವತ್ತು ರ‍್ರಾ ಬರ‍್ರಿ ಬರುತ್ತಿದ್ದ ಲಾರಿಗೆ ದಾರಿ ಬಿಟ್ಟು ಪಕ್ಕಕ್ಕೆ ಸರಿಯುವ ಪ್ರಯತ್ನದಲ್ಲೇ ಅಲಕುಮಲಕು ಹಚ್ಚಿ ಕೊನೆಗೆ ಲಾರಿ ಬಾಯಿಗೆ ಸಿಕ್ಕು ಜಜ್ಜಿ ಹೋಗಿದ್ದಳು. ಅದೇ ಕೊನೆ. ತಾನು ಅನಾಥಳಾದೆ. ತಾಯಿ ತೀರಿಹೋದ ಭಯಾನಕ ದೃಶ್ಯ ಮತ್ತೆ ಮತ್ತೆ ನೆನಪಾಗಿ, ಗುಡಿಸಲಿನಲ್ಲೇ ಮುದ್ದೆಯಾಗಿ ಮುದುರಿಕೊಂಡು ಕುಳಿತಿದ್ದೆ ಎರಡು ದಿನ. ಆಜೂಬಾಜಿನ ಭಿಕ್ಷುಕ ಬಾಂಧವರು ಎಷ್ಟೋ ಅಷ್ಟು ತಂದು ತಿನ್ನು ಅಂತ ರಮಿಸಿದರೂ ಕೂಳು ತಿನ್ನಲಾಗದೇ ತತ್ತರಿಸಿ, ಬಿಕ್ಕಿ ಬಿಕ್ಕಿ ಅತ್ತಿದ್ದೆ. ದುಃಖದ ಕಟ್ಟೆ ಒಡೆದು ಕೈ ಮೇಲೆತ್ತಿ ಅವ್ವಾ.. ಹೋ… ಅಂತ ಅಳತೊಡಗಿದಾಗ ಭಿಕ್ಷೆ ಬೇಡಲು ಕೂಡ ನಿತ್ರಾಣಗೊಂಡು ಗುಡಿಸಲಿನಲ್ಲೇ ತೆವಳಿಕೊಂಡಿದ್ದ ಕೆಲವು ಮುದುಕ ಮುದುಕಿಯರು ತೇಕುತ್ತಾ ಬಂದು ತಮ್ಮ ಇಂಗಿದ ಕಣ್ಣು ಗುಂಡಿಯಿಂದ ಕಣ್ಣೀರು ಹರಿಸಿ, “ಅಳಬೇಡಾ ಮಗಾ, ಯೋಸ್ದಿನ ಅಳ್ತೀಯಾ ಏಳು! ಸಾವು ಯಾರಿಗೂ ಬಿಡಾಕಿಲ್ಲ ತಾಯಿ..” ಅಂತ ಆಕೆಗೆ ಧೈರ್ಯ ಹೇಳಿದರೂ ಆ ಹುಡುಗಿಯ ಸಂಕಟ, ತಮ್ಮ ಹಸಿವಿನ ಸಂಕಟ, ವೃದ್ಧಾಪ್ಯದ ನೋವು ಎಲ್ಲಕ್ಕೂ ಈಡಾಗಿ ಮುದುಕರು ಮುಸಿ ಮುಸಿ ಅಳತೊಡಗಿದರು. ಹೆಣ್ಣೂರು ಕ್ರಾಸಿನ ಆ ದಾರಿಯಲ್ಲಿ ಬೈಕ್ ಓಡಿಸಿಕೊಂಡು ಬಂದ ಯುವಕ ಆ ಭಿಕ್ಷುಕ ಯುವತಿ, “ಅವ್ವಾ.. ಹೋ’ ಅಂತ ಚೀರಿ ಕೈಮೇಲೆತ್ತಿ ಹೃದಯ ಕಿತ್ತುಬರುವಂತೆ ಅತ್ತಾಗ, ಅವನು ಬೈಕ್‌ಗೆ ಬ್ರೇಕ್ ಹಾಕಿ ಅಲ್ಲೇ ನಿಲ್ಲಿಸಿದ…
ಎಂಟೇ ದಿನಗಳಲ್ಲಿ ಹೆಣ್ಣೂರು ಕ್ರಾಸಿನ ಆ ಭಿಕ್ಷುಕರ ಗುಡಿಸಲುಗಳು ಮಾಯವಾಗಿದ್ದವು. ಅದೇ ರಸ್ತೆಯ ತುದಿಯಲ್ಲಿದ್ದ ಬಂಗಲೆಯೊಂದು ವೃದ್ಧಾಶ್ರಮವಾಗಿ ನಿಂತಿತ್ತು. ಭಿಕ್ಷುಕ ಮುದುಕ ಮುದುಕಿಯರಿಗೆ ಅಲ್ಲಿ ವಾಸ್ತವ್ಯ ಕಲ್ಪಿಸಲಾಯಿತು. ಭಿಕ್ಷುಕ ಯುವಕರಿಗೆ ಒಂದು ತಿಂಗಳ ಕಾಲ ಕೋಳಿ ಸಾಕಣೆ, ಮೊಲ ಸಾಕಣೆ, ಜೇನು ಸಾಕಣೆ ಇತ್ಯಾದಿ ತರಬೇತಿ ನೀಡಲಾಯಿತು. ಯುವತಿಯರಿಗೆ ಊದು ಬತ್ತಿ, ಮೇಣದ ಬತ್ತಿ, ಹೂವಿನ ಕುಂಡ ತಯಾರಿಕೆ ಇತ್ಯಾದಿ ತರಬೇತಿಗಳನ್ನು ಅವರವರ ಆಸಕ್ತಿಯ ಮೇರೆಗೆ ಕೊಡಿಸಲಾಯಿತು. ನೀತಾ ಕನ್ನಡ ಓದಬಲ್ಲ ಏಕೈಕ ಭಿಕ್ಷುಕ ಯುವತಿ. ಆಗಷ್ಟೇ ಹದಿನೆಂಟರ ಯುವತಿ. ಅವರ ಸಮುದಾಯದಲ್ಲಿ ಎಳೆಯ ಹೀಚುಗಳಿಗೇ ಮದುವೆ, ಗಂಡ ಸಂಸಾರ ಅಂತ ಹಚ್ಚುವ ಆ ಜನರ ಮಧ್ಯೆ ನೀತಾ ಹೇಗೋ ಪಾರಾಗಿ ಏಳನೇ ತರಗತಿ ತನಕ ಓದು ಮುಗಿಸಿದ್ದಳು. ನಂತರ ತಾಯಿ ಬೇಡ ಎಂದಿದ್ದಕ್ಕೆ ಓದು ಬಿಟ್ಟು ತಾಯಿಯ ಹಿಂದು ಮುಂದೆ ಕರುವಿನ ಹಾಗೆ ಅಲೆದಾಡಿಕೊಂಡಿದ್ದಳು. ಅವಳ ಎತ್ತರ, ಮೈಕಟ್ಟು, ಆತ್ಮವಿಶ್ವಾಸ ಬಿಂಬಿಸುತ್ತಿದ್ದ ಕಣ್ಣುಗಳನ್ನು ನೋಡಿ ಚೈತನ್ ಕೇಳಿದ್ದ, “ಏನಮ್ಮಾ ಅಡುಗೆ ಮನೆ ವ್ಯವಸ್ಥೆ ನೋಡಿಕೊಳ್ಳುವ, ಹಣಕಾಸು, ಖರ್ಚು-ವೆಚ್ಚದ ಲೆಕ್ಕಾಚಾರ ಒಪ್ಪಿಸುವ ಹೊಣೆ ನಿನಗೆ ಕೊಡ್ತೀನಿ. ನಿಭಾಯಿಸ್ತೀಯಾ” ಎಂದಿದ್ದಕ್ಕೆ, ಹುಡುಗಿ ಮಾತಾಡಲೂ ತೋಚದಷ್ಟು ಖುಷಿಯಾಗಿ ಹೋಗಿದ್ದಳು. ತುತ್ತು ಅನ್ನಕ್ಕಾಗಿ ಇಡೀ ಜೀವನವನ್ನು ಕೈಯೊಡ್ಡಿ ಕಳೆದ ತನ್ನವ್ವ, ಆಕೆ ತಂದಿದ್ದ ಹಳಸಿದ ತಂಗೂಳು ಭಿಕ್ಷಾನ್ನ ತಿಂದು ಬೆಳೆದ ನನಗೆ ಇಷ್ಟೊಂದು ದೊಡ್ಡ ಸ್ಥಾನವೇ ಅಂತ ಹೆದರಿಕೆ. ಮರುಕ್ಷಣ ಮಾಡುವೆ ಎಂಬಂತೆ ತಲೆ ಅಡ್ಡಡ್ಡಾಗಿ ಅಲುಗಾಡಿಸಿದಳು. ಅವತ್ತಿನಿಂದ ಇವತ್ತಿಗೂ ಅಗತ್ಯವಿದ್ದಷ್ಟೇ ಮಾತಾಡುತ್ತ, ಸೌಮ್ಯವಾಗಿ ಅಡುಗೆ ಮನೆ ನಿಭಾಯಿಸಿ, ವೃದ್ಧರ ಊಟೋಪಚಾರ ನೋಡಿಕೊಳ್ಳುವ ಹುಡುಗಿ, ಹೊರಗೆ ತರಕಾರಿ, ದಿನಸಿ ತರಲೆಂದು ಹೋದಾಗ ನೋಡಿದವರಿಗೆ ಆಕೆಗೆ ಭಿಕ್ಷಾಟನೆಯ ಹಿನ್ನೆಲೆ ಇದೆ ಎನ್ನುವುದರ ಸುಳಿವು ಕೂಡ ಸಿಗದಂತೆ ಗತ್ತು ಗಾಂಭರ‍್ಯದಿಂದ ಕಾಣಿಸಿಕೊಳ್ಳುವಳು. ಅದೆಲ್ಲಾ ಚೈತನ್‌ನ ತರಬೇತಿಯ ಫಲ… ಹೀಗೇ ದಿನೇ ದಿನೇ ದಿಕ್ಕಿಲ್ಲದ ವೃದ್ಧರ ಉಸಿರಿಗೆ ದಿಕ್ಕಾದ ಆ ಮನೆಗೆ ನೀತಾ ಅನ್ನ ಸಂತರ್ಪಣೆಯ ವ್ಯವಸ್ಥಾಪಕಿಯಾಗಿ, ಖಜಾಂಚಿಯಾಗಿ ಬೆಳೆದು ನಿಂತಿದ್ದಳು. ಚೈತನ್ ಆ ಎಲ್ಲಾ ವ್ಯವಸ್ಥೆಯ ಮೂಲ ಚೈತನ್ಯವಾಗಿದ್ದನು. ಪ್ರಾರಂಭದಲ್ಲಿ ಭಿಕ್ಷಾಟನೆ ಬಿಡಿಸಿ ಅವರಿಗೆ ದುಡಿಮೆ, ಗೌರವದ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಚೈತನ್‌ಗೆ ಸ್ವತಃ ಭಿಕ್ಷುಕ ಸಮುದಾಯದಿಂದಲೇ ಅಗೌರವ, ವಿರೋಧ ಎದುರಾಗಿದ್ದರೂ ಕ್ರಮೇಣ ಆತನ ಅಂತಃಕರಣಕ್ಕೆ ಅವರೆಲ್ಲ ಸೋತು ಹೋಗಿದ್ದರು.
***
ಅಂದು ರಾತ್ರಿ ಅಜ್ಜಿಯ ಮನೆಯಲ್ಲೇ ಚೈತನ್ ಮತ್ತು ಅನುಶ್ರೀಯ ಊಟವಾಯಿತು. ಸಾಯಂಕಾಲದ ವೇಳೆಗೆ ಅನುಶ್ರೀಯ ತಂದೆಯ ಸಂಗತಿ ಗಲ್ಲಿಯವರಿಗೆಲ್ಲ ತಿಳಿದಿತ್ತು. ಅನುಶ್ರೀ ಹೊರಗೆ ಮುಖ ಹಾಕುವುದು ತನ್ನಿಂದಾಗುವುದಿಲ್ಲವೆಂದು ತಿರಸ್ಕರಿಸಿದರೂ ಚೈತನ್ ತುಸು ಸಿಟ್ಟು ನಟಿಸಿ ಹೇಳಿದ್ದ, “ಎಷ್ಟು ದಿನಾಂತ ಅಳ್ತಾ ಒಳಗೆ ಕೂಡೋದು? ಮುಂದಿನ ಕೆಲಸಕ್ಕೆ ಎದೆಗೊಟ್ಟು ನಿಲ್ಲೋದನ್ನು ಕಲಿಯಬೇಕಷ್ಟೆ. ಈಗ ಸುಮ್ಮನೆ ಎದ್ದು ಅಜ್ಜಿ ಮನೆಗೆ ಹೋಗೂದು” ಎಂದನು ಆಜ್ಞೆಯ ಧಾಟಿಯಲ್ಲಿ. ಜ್ಯೋತಿ ಅನುಶ್ರೀಯ ಭುಜ ತಟ್ಟಿ ಹೌದೆಂದು ಸನ್ನೆ ಮಾಡಿದಳು. ಅನುಶ್ರೀಗೆ ಚೈತನ್ ಮೇಲೆ ತಿರಸ್ಕಾರ ಹುಟ್ಟಿತ್ತು. ಗಂಡು ದಿಕ್ಕಿಲ್ಲದ ಜ್ಯೋತಿ, ಲಲಿತ ಮತ್ತು ಈಗ ತಾನು.. ಹೀಗೆ ಇವನ ಗರಡಿಯಲ್ಲಿ ಅದೆಷ್ಟು ಹುಡುಗಿಯರಿದ್ದಾರೊ ಎಂದು ಸಂಶಯಪಟ್ಟಳು.
ಮದ್ಯಾಹ್ನವೆ ಚೈತನ್ ನಡೆದ ಸಂಗತಿಯನ್ನೆಲ್ಲಾ ತನ್ನ ಆತ್ಮೀಯ ಗೆಳೆಯ, ರಾಮುಲು ಮಗ ಶಂಕರನ ಹತ್ತಿರ ಸವಿವರವಾಗಿ ಹೇಳಿದ್ದನು.. ತಂದೆಯವರಿಗೂ ಈ ವಿಷಯವನ್ನು ತಿಳಿಸಬಹುದೆಂದು ಅನುಮತಿಸಿದ್ದ. ಅವರೊಬ್ಬರು ತನ್ನ ಪಾಲಿನ ಹಿರಿಯರು, ಅವರನ್ನು ತೆಗೆದು ಹಾಕುವಂತಿರಲಿಲ್ಲ. ತನ್ನ ನಿರ್ಣಯದ ಪ್ರಕಾರ ಏಪ್ರೀಲ್ ಕೊನೆಯ ವಾರದೊಳಗೆ ಅನುಶ್ರೀಯ ಜೊತೆ ಗೃಹಸ್ಥಾಶ್ರಮ ಪ್ರವೇಶಿಸುವುದಾಗಿ, ಶಂಕರನಿಗೆ ತನ್ನ ಅಭಿಪ್ರಾಯ ತಿಳಿಸಿದನು. ಶಂಕರನಿಗೂ ಚೈತನ್‌ನ ಪ್ರೇಮದ ವಿಷಯ ತಿಳಿದು ನಾಲ್ಕು ತಿಂಗಳಾಗಿತ್ತು. ಆದರೆ ಇಷ್ಟು ಬೇಗ ಮದುವೆ ಸಂದರ್ಭ ಹೀಗೆ ಧುತ್ ಎಂದು ಬಂದೀತು ಎಂದುಕೊಂಡಿರಲಿಲ್ಲ. ಶಂಕರನಿಗೆ ಬಹಳ ಖುಷಿಯಾಯಿತು. ಚೈತನ್‌ನ ಭುಜವನ್ನು ಸ್ನೇಹದಿಂದ ಹಿಡಿದುಕೊಂಡು, “ಹಾಗೇ ಆಗಲಿ ಚೈತನ್, ನಿನ್ನ ಜೀವನಕ್ಕೆ ಒಂದು ಹಿಡಿ ಪ್ರೀತಿ, ಸೌಖ್ಯ, ಪ್ರೋತ್ಸಾಹ ಹಂಚಿಕೊಡುವ ಒಂದು ಜೀವ ಸಿಗಲಿ ಅಂತ ನಾನು ನಿತ್ಯ ಹಾರೈಸುತ್ತಿದ್ದೆ. ಈಗ ನನಗೆ ತುಂಬ ನಿರಾಳವಾಗುತ್ತಿದೆ. ಅಪ್ಪ ಅಮ್ಮನ ಹತ್ತಿರ ನಾನೇ ವಿಷಯ ತಿಳಿಸ್ತೀನಿ. ವಾವೆಲ್ಲಾ ನಿಂತುÀ ನಿನ್ನ ಮದುವೆ ಧಾಮ್ ಧೂಮ್ ಅಂತ ಭರ್ಜರಿ ಮಾಡ್ತೀವಿ…” ಎಂದು ಅವನ ಕೆನ್ನೆ ತಟ್ಟಿದನು. ಗೆಳೆಯನ ಸಂಭ್ರಮ ಕಂಡು ಚೈತನ್‌ನ ಕಣ್ಣು ಹೊಳೆದವು.
ರಾತ್ರಿ ಊಟವಾದ ಮೇಲೆ ಚೈತನ್ ಜ್ಯೋತಿ ಮತ್ತು ಅಜ್ಜಿಗೆ ಹೇಳಿ ಅನುಶ್ರೀ ಕಡೆ ಸುಮ್ಮನೆ ನೋಡಿ ಬೈಕ್ ಹತ್ತಿ ತನ್ನ ಮನೆಗೆ ಹೋದನು. ತಾನು ಬದುಕುವುದಕ್ಕೆ ಅರ್ಥವೇ ಇಲ್ಲ ಅನ್ನಿಸತೊಡಗಿತ್ತು ಅನುಶ್ರೀಗೆ. ಅವಳಿಗೆ ಮಲಕಾಜಪ್ಪನ ಒಳ್ಳೆಯತನದ ಸೋಗು ನೆನಪಾಯಿತು. ಈಗ ಚೈತನ್ ಅಥವಾ ಮತ್ಯಾರೋ ತನಗೆ ಸಹಾಯ ಮಾಡುವ ನೆಪದಲ್ಲಿ ಎಷ್ಟು ಹೊಂಚಿ ಕುಳಿತಿದ್ದಾರೊ ಎಂದು ಚಿಂತೆಗೆ ಈಡಾಗಿದ್ದಳು. ಜ್ಯೋತಿ. ಅನುಶ್ರೀ ಮನೆಯಲ್ಲಿ ಉಳಿದುಕೊಂಡು ರಾತ್ರಿ ಬಹಳ ಹೊತ್ತು ಮಾತಾಡಿದಳು. ಚಿಂತೆ ಮಾಡದಿರಲು ತಿಳಿಸಿದಳು. ಆದರೆ ಚೈತನ್‌ನ ನಿರ್ಧಾರವನ್ನು ಇನ್ನೊಂದು ನಾಲ್ಕು ದಿನಗಳ ನಂತರ ಹೇಳುವುದೆಂದು ಜ್ಯೋತಿ ಮತ್ತು ಚೈತನ್ ಮಾತಾಡಿಕೊಂಡಿದ್ದರು.
ಕೆ.ಆರ್ ಸರ್ಕಲ್ ಬಳಿ ಸಿಗ್ನಲ್ ಬಿದ್ದಾಗ ಶಂಕರ ಚಡಪಡಿಸಿದ. ತನ್ನ ಹಾಗೆಯೇ ಅವಸರದಲ್ಲಿ ಹೋಗುತ್ತಿದ್ದವರು ಸಿಗ್ನಲ್‌ನ ಹಸಿರು ಸಂಕೇತಕ್ಕೆ ಕಾಯುತ್ತಿದ್ದರು. ಚೈತನ್ ತನ್ನ ಎಡಗಡೆ ದೃಷ್ಟಿ ಹರಿಸಿದಾಗ, ಕೊನೆಯಲ್ಲಿ ಹೆಲ್ಮೆಟ್‌ಧಾರಿ ಯುವತಿ ಕೈನಿಯ ಮೇಲೆ ಆಕರ್ಷಕ ಭಂಗಿಯಲ್ಲಿ ಆತುರದಿಂದ ಸಿಗ್ನಲ್‌ಗೆ ಕಾಯುತ್ತಿದ್ದಳು. ಅರೆ ಇವಳು ಲಲಿತ ಅಲ್ಲವೇ ಎಂದುಕೊಂಡನು. ಯಾಕೊ ಆಕೆ ಇತ್ತೀಚೆಗೆ ಸಿಗುವುದು ಅಪರೂಪವಾಗಿ ಬಿಟ್ಟಿದೆ ಎಂದುಕೊಂಡನು. ಹಸಿರು ಸಿಗ್ನಲ್ ಆದಾಗ ವಾಹನಗಳು ಚೀರಾಟ ಮಾಡುತ್ತಾ, ತಂತಮ್ಮ ಯಜಮಾನನ ಅಣತಿಯಂತೆ ಓಡತೊಡಗಿದವು. ಸ್ವಲ್ಪ ದೂರ ಸಾಗಿದ ನಂರ ಆ ಯುವತಿ ಗಾಡಿಯನ್ನು ರಸ್ತೆ ಬದಿಗೆ ನಿಲ್ಲಿಸಿದಳು. ಹೆಲ್ಮೆಟ್ ಸಡಿಲಿಸಿ ತೆಗೆದು, ಮೊಬೈಲ್ ಕರೆಗೆ ಉತ್ತರಿಸಿತೊಡಗಿದಳು. ಶಂಕರನಿಗೆ ಲಲಿತಾ ಎಂದು ಖಚಿತವಾಗಿ ಅವನೂ ಗಾಡಿಯನ್ನು ನಿಲ್ಲಿಸಿದನು. ಅವಳು ತನ್ನ ಗಾಡಿಯ ಕನ್ನಡಿಯಲ್ಲೆ ಶಂಕರನನ್ನು ಗುರುತಿಸಿದಳು. ಶಂಕರ ಕೆಳಗಿಳಿದು ಹಲೋ ಎನ್ನುವಷ್ಟರಲ್ಲಿ ಅವಳು ಹಲೋ ಎಂಬಂತೆ ಸಂಜ್ಞೆ ಮಾಡಿ ಕಣ್ಣಲ್ಲಿಯೇ ಸಂತಸ ವ್ಯಕ್ತ ಮಾಡಿದಳು. ಮೊಬೈಲ್ ಸಂಭಾಷಣೆ ಮುಗಿದ ಮೇಲೆ ಅವಳು ಶಂಕರನೊಂದಿಗೆ ಆತ್ಮೀಯತೆಯಿಂದ ಯೋಗ ಕ್ಷೇಮ ವಿಚಾರಿಸಿದಳು. “ನಾವೆಲ್ರೂ ಚೆನ್ನಾಗೇ ಇದ್ದೀವಿ. ಆದ್ರೆ ನೀನು ಮಾತ್ರ ನಮ್ಮಿಂದ ದೂರಾಗ್ತಾ ಇದ್ದೀಯ…” ಎಂದು ತನಗನಿಸಿದ್ದನ್ನು ಪ್ರಾಮಾಣಿಕವಾಗಿ ಆಕೆಯ ಮುಂದೆ ತೋಡಿಕೊಂಡನು. ಅವನ ಧ್ವನಿಯಲ್ಲಿ ನೋವಿನಿಂದ ಕೂಡಿದ ಆಕ್ಷೇಪಣೆ ಇತ್ತು. ‘ಹಂಗೇನಿಲ್ಲ ಬಿಡು…’ ಲಲಿತಳ ಉತ್ತರ ಚುಟುಕಾಗಿ, ವಿಷಯಾಂತರ ಮಾಡುವುದಾಗಿತ್ತು…
ಆಕೆಗೇನಾದರೂ ಅರ್ಜೆಂಟ್ ಕೆಲಸ ಇದೆಯೇನೋ ಎಂದುಕೊಂಡು ಆ ಬಗ್ಗೆ ಕೇಳಿದನು ಶಂಕರ. ಲಲಿತಳಿಗೆ ಬಾಸ್ ಬೈಯ್ಯುತ್ತಾರೆಂಬ ಚಿಂತೆ ಇಲ್ಲ. ತಾನೇ ಬಾಸ್. ಒಂಭತ್ತು ಗಂಟೆಗೆ ಟೈಪಿಸ್ಟ್ ಶಶಿಕಲಾ, ಮಂಜುಳಾ ಬಂದು ಝರಾಕ್ಸ್, ಕಂಪ್ಯೂಟರ್ ಕೆಲಸದಲ್ಲಿ ತೊಡಗುತ್ತಾರೆ. ಒಂಭತ್ತೂವರೆಗೆ ತಾನು ಆಫೀಸಿಗೆ ಹೋಗಿ ಕುಳಿತುಕೊಂಡರೆ ಮುಗೀತು. ಹನ್ನೊಂದು ಗಂಟೆಯ ಸುಮಾರಿಗೆ ಸಿದ್ಧಾರ್ಥ ಕಾಲೇಜಿನಲ್ಲಿ ಹಾಜರಾಗುತ್ತಾಳೆ. ಅಲ್ಲಿ ಪಿ.ಯು.ಸಿಯ ಕಾಮರ್ಸ್ ಎರಡೂ ತರಗತಿಗಳ ವಿದ್ಯಾರ್ಥಿಗಳಿಗೆ ಅರ್ಥಶಾಸ್ತç ಪಾಠ ಮಾಡುತ್ತಾಳೆ. ಒಂದು ಗಂಟೆಯಿಂದ ನಾಲ್ಕರವರೆಗೆ ಐಸಿಐಸಿಐನ ವಿವಿಧ ಸ್ಕೀಮ್‌ಗಳ ಕೆಲಸದಲ್ಲಿ ನಿರತಳಾಗುತ್ತಾಳೆ. ಸಾಯಂಕಾಲ ನಾಲ್ಕೂವರೆಗೆ ಮತ್ತೆ ತನ್ನ ಆಫೀಸಿನಲ್ಲಿ ಪ್ರತ್ಯಕ್ಷಳಾಗುತ್ತಾಳೆ. ಕೆಲಸದವರು ಹೋದ ಮೇಲೆ ರಾತ್ರಿ ಏಳೂವರೆಗೆ ತಾನೊಬ್ಬಳೆ ಕುಳಿತು ಅಂದಿನ ಲೆಕ್ಕ ಬಾಕಿ ನೋಡುತ್ತಾಳೆ. ಎಂಟು ಗಂಟೆಗೆ ಬೆಲ್ ಕಾಲನಿಯಲ್ಲಿರುವ ತನ್ನ ಪುಟ್ಟ ಗೂಡಿಗೆ ಹಿಂತಿರುಗುತ್ತಾಳೆ. ರವಿವಾರಕ್ಕೊಮ್ಮೆ ಎಲ್ಲರನ್ನೂ ಪ್ರೀತಿಯಿಂದ ಭೆಟ್ಟಿ ಮಾಡುತ್ತಿದ್ದ ಲಲಿತೆ ಕ್ರಮೇಣ ತಿಂಗಳಿಗೊಮ್ಮೆ ಸಿಗತೊಡಗುತ್ತಾಳೆ. ಕಳೆದ ನಾಲ್ಕಾರು ತಿಂಗಳಿಂದ ಶಂಕರ, ಅನುಶ್ರೀ, ಚೈತನ್ ಮೊದಲಾದ ಸ್ನೇಹಿತರಿಗೆ ಸಿಗುವುದೇ ಅಪರೂಪವಾಗಿದೆ. ಶಂಕರನ ಪ್ರಶ್ನೆಗೆ ಲಲಿತ ಹೇಳಿದಳು, “ಹಾಗೇನೂ ಅರ್ಜೆಂಟಿಲ್ಲ, ಏನಾದ್ರೂ ಮಾತಾಡೂದೈತಾ?”. “ಹೌದು, ಆಫೀಸ್‌ಗೆ ಹೋಗೋಣ್ವಾ? ನಾನೇ ನಾಡಿದ್ದು ಭಾನುವಾರ ನಿನ್ನ ಹುಡುಕಿಕೊಂಡು ಬರುವವನಿದ್ದೆ. ಅಷ್ಟರಲ್ಲಿ ನೀನೆ ಸಿಕ್ಕಿದದು ಒಳ್ಳೇದೆನ್ನಿಸಿತು” ಶಂಕರ. “ಸರಿ, ನನ್ನ ಆಫೀಸ್ ಕಡೆ ಹೋಗೂನು ನಡಿ” ಎಂದು ಅವಳು ತಲೆಗೆ ಹೆಲ್ಮೆಟ್ ಏರಿಸಿದಳು.
ಶಂಕರ್ ನೇರವಾಗಿ ಮಾತಿಗಿಳಿದನು. ಚೈತನ್‌ನ ಬಗ್ಗೆ ಆಕೆಗೆ ಗೊತ್ತಿರಬಹುದು ಎಂದುಕೊಂಡು ಆ ಕುರಿತು ಕೇಳಿದನು. ಅದಕ್ಕೆ ಅವಳುÀ ತಾನು ಒಂದೂವರೆ ತಿಂಗಳಿಂದ ಜ್ಯೋತಿ, ಚೈತನ್‌ನನ್ನು ಕಂಡೇ ಇಲ್ಲ. ಯಾವಾಗಾದರೊಮ್ಮೆ ಜ್ಯೋತಿ ಫೋನ್ ಮಾಡುತ್ತಿರುತ್ತಾಳೆ ಎಂದು ಹೇಳಿದಳು. ಶಂಕರ ಸುಮ್ಮನೆ ಹುಂ ಎಂದನು. ಆತನೇ ಚೈತನ್‌ನ ಮದುವೆಯ ಬಗ್ಗೆ ಹೇಳಿದನು. ಅವನ ಮಾತನ್ನು ಕೇಳಿ ಲಲಿತೆಯÀ ಮುಖ ಬಿಳುಚಿದಂತಾಯಿತು. ಅದು ಶಂಕರನ ಗಮನಕ್ಕೆ ಬಾರದಿರಲಿ ಎಂದು ಇಲ್ಲದ ನಗೆಯನ್ನು ತುಟಿಗೆಳೆದುಕೊಂಡು, “ಹುಡುಗಿ ಯಾರು, ಯಾವೂರು?” ಎಂದು ಕೇಳಿದಳು. “ಅನುಶ್ರೀ” . ಉತ್ತರ ಕೇಳಿ ಆಕೆಯ ಮುಖದಲ್ಲಿ ರಕ್ತವೇ ಇಲ್ಲದಂತೆ ಕಾಣಿಸಿತು. ತನ್ನ ಹತ್ತಿರ ಜ್ಯೋತಿ ಚೈತನ್‌ನ ಹಾಲಿನ ಪ್ರಕರಣ ಹೇಳಿದಾಗಲೆ ಲಲಿತಳ ಎದೆ ನಡುಗಿತ್ತು. ತಾನು ಏನು ನಡೆಯಬಾರದೆಂದುಕೊಂಡು ಹಲುಬಿದ್ದಳೋ ಅದೇ ನಡೆಯತೊಡಗಿದೆ. ತನಗೆ ಯಾರು ಬೇಕೆಂದು ಆಶಿಸಿ ಕನಸು ಕಟ್ಟಿಕೊಂಡು ನಿರೀಕ್ಷಿಸಿದ್ದಳೋ ಅವರು ಮತ್ತೊಬ್ಬಳ ಹತ್ತಿರ ಸಾಗಿ ಹೋಗಿದ್ದಾರೆ. ಲಲಿತ ಸುಮ್ಮನೆ ನಕ್ಕು, “ಸರಿ ಬಿಡು ಶಂಕರ್! ಪಾಪ ಅನುಶ್ರೀ ಭಾಳ ನೊಂದ ಹುಡುಗಿ. ಆಕೀಗೆ ಚೈತನ್‌ನಿಂದಾದ್ರೂ ನೆಮ್ಮದಿ ಸಿಗಲಿ. ಚೈತನ್ ಕೂಡ ಅನುಶ್ರೀಯಂಥ ಹೆಂಡ್ತಿ ಜೊತೆ ಸುಖ ಕಾಣ್ಲಿ” ಎಂದು ತನ್ನ ಮಾತುಗಳನ್ನು ಜಾಗರೂಕತೆಯಿಂದ ಉಳಿದಳು.
ಲಲಿತಳ ಮುಖ ಅರಕ್ತವಾದುದು, ಆಕೆ ನರ್ವಸ್ ಆಗಿದ್ದನ್ನು ಗಮನಿಸಿದ ಶಂಕರನಿಗೆ ಒಂದು ಅನುಮಾನದ ಗೆರೆ ಮನಃಪಟಲದಲ್ಲಿ ಮೂಡಿತ್ತು. ಅವನು ಲಲಿತಗೆ ವಿದಾಯ ಹೇಳಿ ತನ್ನ ಆಫೀಸ್ ಕಡೆ ಹೋದನು.
ಅನಂತರ ಲಲಿತೆ ಬಹಳ ಹೊತ್ತು ಅತ್ತು ಬಿಟ್ಟಳು. ಶಶಿಕಲಾಗೆ ಫೋನ್ ಮಾಡಿ ತನಗೆ ಇಂದು ಬೇರೆ ಕೆಲಸವಿದೆ ಎಂದು ಹೇಳಿ ತಾನು ಆಫೀಸಿಗೆ ಬಂದು ಹೋಗುತ್ತಿರುವ ವಿಷಯ ತಿಳಿಸಿದಳು. ಚೈತನ್ ಗಂಭೀರ ಸ್ವಭಾದ ಹುಡುಗ. ಕಂಡವರ ಮೇಲೆ ಕಣ್ಣು ಹಾಕಲಾರನು ಎಂಬ ದೃಢ ವಿಶ್ವಾಸ ಲಲಿತೆಯಲ್ಲಿ ಬೇರೂರಿತ್ತು. ಎಂದಾದರೂ ಒಂದು ದಿನ ಆತ ತನಗೆ ಒಲಿಯುತ್ತಾನೆ. ಆತನೇ ಮೊದಲು ತನ್ನ ಪ್ರೇಮವನ್ನು ಹೇಳಿಕೊಂಡರೆ ಚೆಂದ ಎಂದು ಅವಳು ಕಾಯ್ದುಕೊಂಡಿದ್ದಳು. ಆದರೆ ಈಗ ಎಲ್ಲ ನಂಬಿಕೆ ಬುಡ ಸಮೇತ ಉರುಳಿತ್ತು. ಆಸೆಯ ಸೌಧ ಬಿರುಕು ಬಿಟ್ಟಿತ್ತು. ತಾನು ಸುಮ್ಮನೆ ನಿರೀಕ್ಷಿಸಿದ್ದೇ ತನ್ನ ತಪ್ಪರಬಹುದೆ ಎಂದು ಗೋಳಾಡಿಕೊಂಡಳು. ಜ್ಯೋತಿ ತಮಾಷೆ ಮಾಡುತ್ತಾ ಚೈತನ್‌ನ ಹಾಲಿನ ಪ್ರಕರಣ ಹೇಳಿದಾಗಲೇ ತನ್ನ ಮನಸ್ಸು ನೊಂದು ಹೋಗಿತ್ತು. ಅವತ್ತಿನಿಂದ ಆಕೆ ಚೈತನ್‌ಗೆ ಒಂದು ಫೋನ್ ಸಹ ಮಾಡಿರಲಿಲ್ಲ. ಇಂದು ಎಲ್ಲವೂ ಸ್ಪಷ್ಟವಾಗಿ ಬಿಟ್ಟಿದೆ ಚೈತನ್‌ನ ಭವಿತವ್ಯ. ಆತನ ಬಾಳಿನಲ್ಲಿ ತಾನೊಂದು ಕಪ್ಪು ಕಲೆಯಂತೆ ಉಳಿಯುವುದು ಸರಿಯಲ್ಲ ಎಂದುಕೊಂಡಳು. ಮೇಲೆದ್ದು ಸಿಂಕ್‌ನಲ್ಲಿ ಮುಖ ತೊಳೆದುಕೊಂಡು, ರೇಸಿಮೆಯಂತಹ ಮುಂಗುರಳನ್ನು ಸರಿಪಡಿಸಿಕೊಂಡು ಆಫೀಸ್ ಬಾಗಿಲಿಗೆ ಬೀಗ ಹಾಕಿದಳು. ಅವಳ ಮನಸ್ಸು ಭಯಂಕರ ಅಲೆಗಳನ್ನು ತನ್ನಲ್ಲೇ ಅಡಗಿಸಿಕೊಳ್ಳುವ ಸಮುದ್ರದಂತೆ ವಿಶಾಲವಾಗತೊಗಿತ್ತು. ಅವಳ ಗಾಡಿ ಸ್ಯಾಂಕಿ ಪರ‍್ಕ್ನತ್ತ ಓಡಿತು. ಅವಳಿಗೆ ಅದು ಬಲು ಪ್ರಿಯವಾದ ಸ್ಥಳ. ಬೆಂಗಳೂರಿಗೆ ಬಂದಾಗಿನಿಂದಲೂ ಆಕೆ ಬೇಸರವಾದಾಗ ಸ್ಯಾಂಕಿಗೆ ಕೆರೆಗೆ ಓಡುತ್ತಾಳೆ. ಪಾರ್ಕ್ನಲ್ಲಿ ಒಬ್ಬಳೇ ಅಲೆದಾಡುತ್ತಾಳೆ. ತಿನ್ನುವಂತೆ ಕಣ್ಣು ಬಿಡುವ ತರಲೆ ಹುಡುಗರು ಎದುರಾದರೆ ತಾನೇ ಮುಂದಾಗಿ ಹಾಯ್ ಅಂತ್ಹೇಳಿ, “ಚೆನ್ನಾಗಿದ್ದೀರಾ” ಅಂತಾನೂ ಕೇಳಿ ಗಾಬರಿ ಹುಟ್ಟಿಸುವ ಕಲೆ ಲಲಿತೆಗೆ ಕರಗತ. ಎಷ್ಟೊ ಸಲ ಆಕೆ ಹಾಗೆ ಮಾಡಿದ್ದನ್ನು ಕಂಡು ಜ್ಯೋತಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಳು. ಆ ರೀತಿ ಹುಡುಗರಿಬ್ಬರನ್ನು ಗಲಿಬಿಲಿಗೊಳಿಸಿದ್ದನ್ನು ಚೈತನ್ ಆಕಷ್ಮಿಕವಾಗಿ ಒಮ್ಮೆ ಕಂಡು, “ಓಹ್” ಎಂದುಕೊಂಡಿದ್ದ. ಆಮೇಲೆ ಹಾಗೆಲ್ಲಾ ಮಾಡ್ಬಾರದು. ಒಬ್ಬಳೇ ತಿರುಗಾಡುವಾಗ ಏನಾದರೂ ತೊಂದ್ರೆಯಾದರೆ ಹೇಗೆ ಎಂದು ಲಲಿತೆಗೆ ಗದರಿದ್ದನು.
ಮುಂದುವರೆಯುವುದು
–ಹಟ್ಟಿ ಸಾವಿತ್ರಿ ಪ್ರಭಾಕರಗೌಡ
