ಅನುಶ್ರೀಗೆ ಜ್ಯೋತಿಯ ಗೆಳೆತನ, ಜ್ಯೋತಿಯ ಮೂಲಕ ಲಲಿತಳ ಗೆಳೆತನ ಸಿಕ್ಕು ಬದುಕು ಒಂದು ರೀತಿ ನೆಮ್ಮದಿ ಕಾಣತೊಡಗಿತ್ತು. ಆಗಾಗ್ಗೇ ಮೂರು ಜನರು ಕೂಡಿ ಮಾತು ಹರಟೆ ಹೊಡೆಯುತ್ತಿದ್ದರು. ಜ್ಯೋತಿಗೆ ಅಜ್ಜಿ ಇದ್ದಾಳೆ. ಅನುಶ್ರೀಗೆ ತಂದೆ ಇದ್ದಾನೆ. ಲಲಿತಳಿಗೆ ಇದ್ದಾರೆ ಎಂದರೆ ಉಂಟು ಇಲ್ಲ ಅಂದರೆ ಯಾರೂ ಇಲ್ಲ. ಕದಂಪುರದ ಕರುಣೆಯ ಮನೆಯೊಂದರಲ್ಲಿ ಬೆಳೆದು, ತನ್ನ ಹದಿನಾರನೆ ವಯಸ್ಸಿನಲ್ಲೇ ಆಶ್ರಯ ಹುಡುಕಿಕೊಂಡು ಬೆಂಗಳೂರಿಗೆ ಬಂದು ನಿಂತವಳು. ಕೈತುಂಬ ಸಂಪಾದಿಸುವ ಹೊತ್ತಿಗಷ್ಟೇ ಮಲತಾಯಿಗೆ ಬೇಕಾದ ಮಗಳು. ಕೆಲಸ ಸಿಕ್ಕ ಮೇಲೆ ಸ್ವತಂತ್ರವಾಗಿ ಬದುಕುತ್ತಿದ್ದಾಳೆ. ಇವರನ್ನೆಲ್ಲಾ ನೋಡಿ ಅವರ ಕಥೆ ಕೇಳಿ ಅನುಶ್ರೀ ಕಂಬನಿ ಮಿಡಿದಿದ್ದಳು. ಎಷ್ಟು ಚೆಂದ ಕಂಡರೂ ಎಲ್ಲರಿಗೂ ಒಂದಲ್ಲ ಒಂದು ರೀತಿ ಕಷ್ಟ ಇರುವುದು ಸುಳ್ಳಲ್ಲ ಎಂಬ ಸತ್ಯವನ್ನು ಆಕೆ ಅರಿತುಕೊಳ್ಳುತ್ತಾ ದಿನ ದಿನಕ್ಕೂ ಪ್ರಬುದ್ಧಳಾಗತೊಡಗಿದ್ದಳು.
ಕ್ರಮೇಣ ಜ್ಯೋತಿ ಮತ್ತು ಅನು ಎಷ್ಟು ಆಪ್ತರಾದರೆಂದರೆ ರಾತ್ರಿ ಊಟ ಜೊತೆಯಲ್ಲೇ ಸಾಗುತ್ತಿತ್ತು. ಜ್ಯೋತಿಯ ಅಜ್ಜಿ ಜಯಲಕ್ಷ÷್ಮಮ್ಮ ಸಹ ಅನುಶ್ರೀಯ ಸೌಮ್ಯತೆ, ಸೌಂದರ್ಯ, ಕಷ್ಟದ ಜೀವನಕ್ಕೆ ಕರುಳು ಕರಗಿಸಿಕೊಂಡಿದ್ದರು. ಲಲಿತ ಸಹ ಬಹಳ ಒಳ್ಳೆಯವಳು. ಆದರೆ ಆಕೆಯ ಮನೆ ಬೆಲ್ ಕಾಲನಿಯಲ್ಲಿ. ಓಡಾಡುವುದು ಸುಲಭವಾಗಿರಲಿಲ್ಲ. ಹಾಗಾಗಿ ಆಕೆ ತಿಂಗಳಿಗೊಮ್ಮೆ ಬಂದು ಎಲ್ಲರನ್ನೂ ಮಾತಾಡಿಸಿಕೊಂಡು ಹೋಗುತ್ತಿದ್ದಳು. ಲಲಿತ ಪ್ರಾರಂಭದಲ್ಲಿ ಅನುಶ್ರೀಯ ಸೌಂದರ್ಯ ಕಂಡು ಒಳಗೊಳಗೆ ಈರ್ಷೆಗೀಡಾಗಿದ್ದಳು. ನಂತರ ಅನುಶ್ರೀ ಜಾಸ್ತಿ ಓದಿಲ್ಲವೆಂದು ತಿಳಿದಾಗ, ಆಕೆ ತನ್ನ ಬಾಳಿನೊಂದಿಗೆ ಪೈಪೋಟಿ ಹೂಡಲಾರಳೆಂದು ನಿರಾಳವಾಗಿದ್ದಳು.
ಚೈತನ್ ಈಗ ತುಂಬ ಉತ್ಸುಕತೆಯಿಂದ ಮೊದಲಿಗಿಂತಲೂ ಮೋಹಕವಾಗಿ ಕಾಣುತ್ತಿದ್ದ. ಕಾಲಿಗೊಬ್ಬ, ಕೈಗೊಬ್ಬ ಆಳುಗಳಿದ್ದರೂ ತಾನೇ ಕೆಂಪಮ್ಮನ ಅಂಗಡಿಗೆ ನಂದಿನಿ ಹಾಲಿನ ಪಾಕೆಟ್ ತರುವುದಕ್ಕೆ ಬರುತ್ತಿದ್ದ. ಗೌಳಿ ರಂಗಣ್ಣ ಮನೆಗೆ ನಿತ್ಯವೂ ೨ ಲೀಟರ್ ಹಸುವಿನ ಹಾಲು ಕೊಡುತ್ತಿದ್ದರೂ ಈ ನಂದಿನಿ ಹಾಲಿನ ಪಾಕೆಟ್ಗೆ ಚೈತನ್ ಅಣ್ಣ ಯಾಕೆ ಹೋಗುತ್ತಾನೆ ಅಂತ ಮನೆಯ ಎಲ್ಲಾ ಆಳುಗಳಿಗೂ ತಲೆ ಬಿಸಿಯಾಗಿತ್ತು. ಈತನ ಹೊಸ ದಿನಚರಿ ಕಂಡು ಕೆಂಪಮ್ಮ, ಜಯಲಕ್ಷ÷್ಮಮ್ಮ ಮತ್ತು ಇತರ ಮುದುಕರು ಒಳಗೊಳಗೆ ನಗುತ್ತಿದ್ದರು. ಚೈತನ್ ಕಾಲು ನಡಿಗೆಯಲ್ಲೇ ಓಣಿಯ ಆಚೆ ತುದಿಯಿಂದ ಈ ತುದಿಯಲ್ಲಿರುವ ಅಂಗಡಿಗೆ ಬರುತ್ತಾನೆಂದರೆ ಜನರಿಗೆ ಅರ್ಥವಾಗದಿದ್ದೀತೆ! ಆತ ಹಾಲು ತರುವ ನೆಪದಲ್ಲಿ ಯಾಕೆ ಬರುತ್ತಾನೆ ಅಂತ ಬಾಯಿ ಬಿಟ್ಟು ಆಡಿಕೊಳ್ಳುವ ಮನಸ್ಸಾಗುತ್ತಿಲ್ಲ. ಅಲ್ಲಿ ನೆರೆ ಹೊರೆ ಜನಕ್ಕೆ ತಿಳಿದ ಪ್ರಕಾರ ಅನುಶ್ರೀ ಮುಗ್ಧ ತಬ್ಬಲಿ ಮಗಳು. ಆಕೆಯ ಕುರಿತು ಏನಾದರೂ ಗಾಳಿ ಮಾತು ಹಬ್ಬಿಸಿದರೆ ಮುಂದೆ ಆಕೆಯ ಬಾಳು ಕಳಂಕಕ್ಕೆ ಈಡಾಗಬಾರದು. ಆದರೆ ಚೈತನ್ ಬರುವುದಂತೂ ಅನುಶ್ರೀಯನ್ನು ನೋಡಲೆಂದೆ! ಸ್ವತಃ ಅನುಶ್ರೀಗೂ ಆತನ ಉದ್ದೇಶ ಆತನ ನೋಟದಿಂದಲೇ ತಿಳಿದಿತ್ತು.
ಈಚೆಗೆ ಆಕೆ ಹಾಲನ್ನು ತರಲೆಂದು ಅಂಗಡಿಗೆ ಹೋಗುವ ಸಮಯವನ್ನು ಬದಲಿಸಿದ್ದಾಳೆ. ಚೈತನ್ನ ಸಪ್ಪೆ ಮುಖ ಕಂಡು ಕೆಂಪಮ್ಮನ ಹೃದಯ ಅಯ್ಯೋ ಎನ್ನುತ್ತಿದೆ. ತನ್ನ ಊರಿಗಷ್ಟೇ ಅಲ್ಲ, ಇಡೀ ಬೆಂಗಳೂರಿನಲ್ಲಿರುವ ಯುವ ನಾಯಕರ ಗುಂಪಿನಲ್ಲಿ ಎದ್ದು ಕಾಣಿಸುವ, ಸಾಮಾಜಿಕ ಕಾಳಜಿ ಹೊಂದಿರುವ ಜನಪ್ರಿಯ ಹುಡುಗ ಹೀಗೆ ಪ್ರೇಮಕ್ಕೆ ಬೀಳುತ್ತಿದ್ದಾನೆ ತಿಳಿದು ಬಹಳಷ್ಟು ಜನರಿಗೆ ಖುಷಿಯಾಗಿಬಿಟ್ಟಿತ್ತು. ಆರೂ ಕಾಲು ಅಡಿ ಎತ್ತರದ, ಎಣ್ಣೆಗೆಂಪು ಬಣ್ಣದ, ಉಂಗುರುಗೂದಲಿನ, ಆಕರ್ಷಕ ಕಣ್ಣು ಮೂಗು ಹೊಂದಿದ, ನಕ್ಕರೆ ಬೆಳದಿಂಗಳನ್ನು ಚೆಲ್ಲುವ ದಂತಪಂಕ್ತಿಯ, ನಡೆದರೆ ಮಹಾಭಾರತದ ಭೀಮನನ್ನು ಸ್ಮರಣೆಗೆ ತರುವ ನಿಲುವಿನ ತಮ್ಮೆಲ್ಲರ ಕಣ್ಮಣಿಯಾಗಿರುವ ಚೈತನ್ ತನ್ನ ಬಾಳ ಸಂಗಾತಿಯನ್ನಾಗಿ ಎಂಥವಳನ್ನು ಆಯ್ಕೆ ಮಾಡಬಹುದು ಎಂದು ಯೋಚಿಸುತ್ತಿದ್ದ ಅಭಿಮಾನಿಗಳಿಗೆ ಉತ್ತರ ಸಿಕ್ಕು ಬಿಟ್ಟಿತ್ತು. ಆದರೆ ಯಾರೂ ಆತನ ಎದುರಿಗೆ ಆ ಬಗ್ಗೆ ಪ್ರಶ್ನಿಸುವ ಧೈರ್ಯ ಮಾಡಿರಲಿಲ್ಲ. ಆ ಬೀದಿಯ ಹುಡುಗರು ಪ್ರಾರಂಭದ ನಾಲ್ಕಾರು ದಿನಗಳವರೆಗೆ ಅನುಶ್ರೀಯನ್ನು ಕಂಡಾಗ ಬಾಯ್ದೆರೆದು ಎವೆ ಇಕ್ಕದೆ ನೋಡುತ್ತಿದ್ದರು. ಚೈತನ್ ಆಕೆಯ ಬಗ್ಗೆ ಗಮನ ಕೊಡುತ್ತಿದ್ದಾನೆಂದು ಗೊತ್ತಾದ ನಂತರ, ‘ಇದು ಅಣ್ಣನ ಸೊತ್ತು’ ಎಂದುಕೊಂಡು ತೆಪ್ಪಗಾಗಿದ್ದರು.
ನಿತ್ಯವೂ ಬೆಳಿಗ್ಗೆ ಏಳು ಗಂಟೆಗೆ ಹಾಲನ್ನು ತರಲು ಹೋಗುತ್ತಿದ್ದ ಅನುಶ್ರೀ ಚೈತನ್ನ ನೋಟ ಎದುರಿಸಲಾಗದೆ ತತ್ತರಿಸಿದಳು. ನೋಡದೆ ಬರಬೇಕೆಂದುಕೊಂಡರೆ ಹಾಗೆ ಮಾಡಲು ಸಾಧ್ಯವೇ ಆಗುತ್ತಿಲ್ಲ. ‘ಇವನು ಜ್ಯೋತಿಗೆ ಮೋಸ ಮಾಡಾಕ್ಹತ್ಯಾನ ನಾನೇ ಆಕೆಗೆ ಈತನ ಕೆಟ್ಟತನದ ಬಗ್ಗೆ ಹೇಳಿಬಿಡಬೇಕು’ ಎಂದುಕೊಳ್ಳುತ್ತಿದ್ದಳು. ಆದರೆ ಜ್ಯೋತಿಗೆ ಈ ವಿಷಯ ತಿಳಿದರೆ ಆಕೆ ತನ್ನದೇ ತಪ್ಪೆಂದು ಭಾವಿಸಿ ಗೆಳೆತನದಿಂದ ದೂರವಾದರೆ ಇಲ್ಲಿ ಬಹುಪಾಲು ಜನರಿಗೆ ತಾನು ಬೇಡವಾದಂತೆಯೇ ಸರಿ ಎಂದೂ ಯೋಚಿಸಿದಳು. ಅವನು ನೋಡುತ್ತಾ ತಿರುಗಾಡಲಿ ಬಿಡು ತನಗೇನು ನಷ್ಟ! ತಾನೇನೂ ಆತನ್ನು ಹುಡುಕಿಕೊಂಡು ಅಲೆದಾಡಿಲ್ಲ. ಒಂದು ಸಲವೂ ಆತನನ್ನು ಮಾತಾಡಿಸಿಲ್ಲ. ಆತನೂ ಕೂಡ ತನ್ನನ್ನು ಮಾತಾಡಿಸಿಲ್ಲ. ಹೀಗಿರುವಾಗ ತನ್ನ ಬಗ್ಗೆ ಜನರು ಏನೂ ಅಂದುಕೊಳ್ಳಲು ಸಾಧ್ಯವಿಲ್ಲ. ಇನ್ನು ಅಂಗಡಿಗೆ ಹೋಗುವ ಸಮಯವನ್ನು ಮಾತ್ರ ಬದಲಾಯಿಸಲೇಬೇಕು ಎಂದು ಯೋಚಿಸಿದಳು.
ಎಂದಿನಂತೆ ಚೈತನ್ ಹಾಲನ್ನು ಕೊಳ್ಳಲು ಬಂದ. ರೂಢಿಯಂತೆ ಚೌಡಪ್ಪಜ್ಜ ಅರಳೀಕಟ್ಟೆಯ ಮೇಲೆ ಆಸೀನನಾಗಿದ್ದ. ಹವಾ ಸೇವನೆಗೆಂದು ಆತ ತನ್ನ ಮನೆಯಿಂದ ನಡೆದು ಬಂದು, ಶಶಿ ಕಿರಾಣಿ ಅಂಗಡಿಯ ಸಮೀಪ ಇರುವ ಅರಳೀಕಟ್ಟೆಯ ಮೇಲೆ ಅರ್ಧ ತಾಸು ಕುಳಿತುಕೊಳ್ಳುತ್ತಿದ್ದ. ಚೈತನ್ ನಿತ್ಯವೂ ಆ ವೃದ್ಧನ ಜತೆ ಹತ್ತೆಂಟು ನಿಮಿಷ ಮಾತಾಡುವಷ್ಟರಲ್ಲಿ ಅನುಶ್ರೀ ಅಂಗಡಿಗೆ ಬರುತ್ತಿದ್ದಳು. ಚೈತನ್ ಆ ತಾತನಿಗೆ ವಿದಾಯ ಹೇಳಿ ಅಂಗಡಿಗೆ ಧಾವಿಸುತ್ತಿದ್ದ. ಇಂದೂ ಸಹ ಖುಷಿಯಿಂದ ಬಂದವನಿಗೆ ಅನುಶ್ರೀ ಹೊರಗೆ ಬರುತ್ತಿಲ್ಲ ಎನ್ನಿಸಿತು. ಸಮಯ ಏಳೂವರೆ ಆಯಿತು. ಆಕೆ ಬರಲಿಲ್ಲ. ಮತ್ತೆ ಹದಿನೈದು ನಿಮಿಷ ಕುಳಿತನು. ಆಕೆ ಬರಲೇ ಇಲ್ಲ. ಜ್ಯೋತಿ ಕಿಟಕಿಯಲ್ಲಿಯೇ ನಿಂತು ಈ ತಮಾಷೆ ನೋಡಿ ಬಿದ್ದು ಬಿದ್ದು ನಕ್ಕಿದ್ದಳು. ಕೊನೆಗೆ ಅಜ್ಜಿಯ ಬೈಗುಳ ತಿಂದು ಬಲವಂತದಿಂದ ಬಾಯಿ ಮುಚ್ಚಿಕೊಂಡಿದ್ದಳು. ಚೌಡಪ್ಪಜ್ಜ ಎದ್ದು ಹೊರಡಲನುವಾದ. ಚೈತನ್ ಎದ್ದು ಅಂಗಡಿಗೆ ಬಂದನು. ಕೆಂಪಮ್ಮನಿಗೆ ಪಾಪ ಅನ್ನಿಸಿತು. ಆಕೆ ಏನೂ ಮಾತಾಡದೇ ಒಂದೆರಡು ಹಾಲಿನ ಪಾಕೆಟ್ಗಳನ್ನು ಚೀಲಕ್ಕೆ ಹಾಕಿ ಆತನ ಕೈಗೆ ಕೊಟ್ಟಳು. ಅನುಶ್ರೀ ಬೇಕೆಂದೇ ಅಂಗಡಿಗೆ ಬಂದಿರಲಿಕ್ಕಿಲ್ಲ ಇಲ್ಲವೇ ಅವಳಿಗೆ ಹುಷಾರಿದೆಯೊ ಇಲ್ಲವೊ ಅಂತ ಕೆಂಪಮ್ಮ ಯೋಚಿಸಿದಳು. ಚೈತನ್ ಕೂಡ ಹಾಗೇ ಯೋಚಿಸುತ್ತಾ ಕೆಂಪಮ್ಮನ ಕೈಗೆ ಇಪ್ಪತ್ತು ರೂಪಾಯಿ ಇಟ್ಟು ಹೊರಟು ಹೋದ. ಎಂದಿನಂತೆ ಅವನು ಏನಾದರೂ ತಮಾಷೆ ಮಾಡುತ್ತಾ ಅಜ್ಜಿ ಹಾಗೆ ಹೀಗೆ ಅಂತ ಕೆಂಪಮ್ಮನ ಜೊತೆ ಹರಟಲಿಲ್ಲ. ಆಕೆ, “ಈ ಹುಡುಗನ ಪ್ರೇಮ ಗೆಲ್ಲಲಿ ದ್ಯಾವರೆ” ಎಂದು ಆದಿನಾರಾಯಣನ ಪಟದ ಕಡೆ ತಿರುಗಿ ಕೈಮುಗಿದಳು.
ಅನುಶ್ರೀ ಸಾಯಂಕಾಲ ಐದು ಗಂಟೆಗೆ ಅಂಗಡಿಗೆ ಬಂದು ಹಾಲಿನ ಪಾಕೆಟ್ ಕೇಳಿದಳು. ಕೆಂಪಮ್ಮ, ಬೆಳಿಗ್ಗೆ ಯಾಕೆ ತೆಗೆದುಕೊಂಡು ಹೋಗಲಿಲ್ಲ ಎಂದು ಹುಡುಗಿಗೆ ಕೇಳಿದಳು. ‘ನಿನ್ನೆಯ ಹಾಲು ಇನ್ನೂ ಉಳಿದಿತ್ತು. ಅದಕ್ಕೇ ಬರಲಿಲ್ಲ..” ಎಂದು ಆಕೆ ಸುಳ್ಳು ಹೇಳಿದಳು. ಕೆಂಪಮ್ಮ ಹಾಲಿನ ಪ್ಯಾಕೆಟ್ ಕೊಟ್ಟಳು. ಆಕೆ ಹಣ ಕೊಟ್ಟು ಹಾಲು ಪಡೆದು ಹೊರಟು ಹೋದಳು. “ ಈ ತಬ್ಬಲಿಯನ್ನ ಇಕ್ಕಟ್ಟಿಗೆ ಸಿಕ್ಕಿಸಬ್ಯಾಡ ದ್ಯಾವರೆ” ಅಂತ ಕೆಂಪಮ್ಮ ಮತ್ತೆ ತನ್ನ ದೇವರಲ್ಲಿ ಅನುಶ್ರೀಯ ಸಲುವಾಗಿಯೂ ಪ್ರಾರ್ಥಿಸಿದಳು.
ಕೆಂಪಮ್ಮ ಎಲ್ಲರಿಗೂ ಒಳಿತು ಬಯಸುವ ಜೀವಿ. ಆಕೆ ಯಾರ ಪಕ್ಷದವಳು ಅಂತ ಗುರುತಿಸುವುದೇ ಕಷ್ಟ. ಹಾಗಾಗಿ ಆಕೆಗೆ ಜ್ಯೋತಿ, ‘ಜಾತ್ಯಾತೀತ ಪಕ್ಷದ ಧುರೀಣೆ’ ಎಂದು ಕಿಚಾಯಿಸುತ್ತಿದ್ದಳು. ಕೆಂಪಮ್ಮನಿಗೆ ಜ್ಯೋತಿಯ ಕೀಟಲೆ ಒಮ್ಮೊಮ್ಮೆ ವಿಪರೀತವೆನ್ನಿಸಿ ರೇಗಿಸಿಬಿಡುತ್ತಿತ್ತು. ಆಗ ಕೈಗೆ ಸಿಕ್ಕ ಬಾಳೆಹಣ್ಣನ್ನೊ, ಸೌತೆಕಾಯಿಯನ್ನೋ ಎತ್ತಿ ಜ್ಯೋತಿಗೆ ಎಸೆದು ಬಿಡುತ್ತಿದ್ದಳು. ತಾನು ಹಾಗೆ ಎಸೆದ ವಸ್ತುಗಳನ್ನು ಬೀಳದಂತ್ನೆ ಜ್ಯೋತಿ ಹಿಡಿದಾಗ ಮುದುಕಿ ಕೌತುಕಪಟ್ಟುಕೊಳ್ಳುತ್ತಿತ್ತು. ಅದನ್ನು ತಿನ್ನುತ್ತಾ, “ಬೈ ಬೈ ಅಜ್ಜಿ” ಎಂದು ಹೋಗಿ ಬಿಡುತ್ತಿದ್ದಳು ಹುಡುಗಿ. ಜ್ಯೋತಿ ಚಿಕ್ಕಮಕ್ಕಳಂತೆ ಇರುತ್ತಾಳೆ. ಆದರೆ ಎಷ್ಟೊಂದು ಸಾಮಾಜಿಕ ಕಳಕಳಿಯ ಹುಡುಗಿ! ಆದ್ದರಿಂದ ಆಕೆ ಎಂದರೆ ಹಿರಿ-ಕಿರಿಯರಿಗೆ ಪ್ರೀತಿಯ ಅಮ್ಮಯ್ಯ.
ಚೈತನ್ನ ನಿರೀಕ್ಷೆ ಮೂರು ನಾಲ್ಕು ದಿನ ವಿಫಲವಾಗುತ್ತಲೇ ಹೋಯಿತು. ಆಗ ಜ್ಯೋತಿಯ ಹತ್ತಿರ ಹೇಳಿಕೊಂಡು ಪೇಚಾಡಿದ. ಆದರೆ ಜ್ಯೋತಿ ಏನೂ ಮಾಡುವಂತಿರಲಿಲ್ಲ. “ಅವಸರ ಬೇಡ ಚೈತೂ, ಕಗ್ಗಾಯಿಯನ್ನು ಹಿಸುಕಿ ಮೆತ್ತಗೆ ಮಾಡಬಾರದು. ಹಣ್ಣಾಗುವವರೆಗೆ ಕಾಯುವ ತಾಳ್ಮೆ ಇರಲಿ” ಎಂದು ಮುಂಗೈ ಒತ್ತಿ ಸಮಾಧಾನ ಹೇಳಿದ್ದಳು.
ಕೆಂಪಮ್ಮನಿಗೆ ಖಚಿತವಾಗಿ ಹೋಯಿತು. ಅನುಶ್ರೀ ಬೇಕೆಂದೇ ಸಾಯಂಕಾಲ ಅಂಗಡಿಗೆ ಬರುತ್ತಾಳೆ ಎಂಬುದರಲ್ಲಿ ಸಂಶಯ ಉಳಿಯಲಿಲ್ಲ. ಆಕೆಗೆ ಚೈತನ್ನ ಒಣಗಿದ ಮುಕ ನೋಡಿ ನೋಡಿ ಸಾಕಾಗಿ ಹೋಯಿತು. ನಾಲ್ಕನೇ ದಿನ ಹೇಳಿದಳು, “ಮಗಾ ನೀನು ಸಾಯಂಕಾಲ ಐದು ಗಂಟೆಗೆ ಬಂದ್ರೆ ಆಲು ಸಂದಾಕಿರುತ್ತೆ. ತಾಜಾ ಇರುತ್ತೆ”. ಕಛೇರಿಯನ್ನು ಬಿಟ್ಟು ಸಾಯಂಕಾಲ ಬರುವುದು ಅಸಾಧ್ಯವೆಂದುಕೊಂಡನು. ಆತ ಮರುಮಾತಾಡದೇ ಹಾಲಿನ ಪಾಕೆಟ್ ಹಿಡಿದುಕೊಂಡು ಹೊರಟು ಹೋದನು. ಆತ ಸತತ ನಾಲ್ಕು ದಿನಗಳಿಂದ ಅನುಶ್ರೀಯನ್ನು ಕಾಣದೇ ಚಡಪಡಿಸುತ್ತಿದ್ದನು. ಇತ್ತ ಅನುಶ್ರೀಗೂ ಒಂಥರಾ ಸಂಕಟವಾಗುತ್ತಿತ್ತು. ಆತನನ್ನು ನೋಡಬೇಕೆನ್ನಿಸುತ್ತಿತ್ತು. ಆದರೆ ತನ್ನ ಯೋಗ್ಯತೆ ಮೀರಿ ಹಾಗೇ ಆಸೆ ಮಾಡುವುದು ಒಳ್ಳೆಯದಲ್ಲವೆಂದುಕೊಂಡು ಸುಮ್ಮನಾದಳು. ತನ್ನ ವೇಳಾಪಟ್ಟಿಯನ್ನು ಬದಲಿಸಲಿಲ್ಲ.
ಎಂದಿನಂತೆ ಅನುಶ್ರೀ ಸಾಯಂಕಾಲ ಅಂಗಡಿಗೆ ಹೋದಳು. ಕೆಂಪಮ್ಮನಿಗೆ ಗೊತ್ತು ಹುಡುಗಿ ಹಾಲಿಗೆ ಬಂದಿದ್ದಾಳೆಂದು. ಅಂಗಡಿಯ ಫ್ರಿಜ್ನಲ್ಲಿ ಹಾಲಿನ ಪಾಕೆಟ್ಗಳು ಸಾಕಷ್ಟಿದ್ದವು. ಕೆಂಪಮ್ಮ ಹೇಳಿದಳು, “ಆಲ್ ತೀರೋಯ್ತು ಮಗಾ”. ಅನುಶ್ರೀ, “ಹೌದೇನ್ರಿ” ಎಂದು ಒಂದು ನಿಮಿಷ ನಿಂತು, “ಹಾಗಾದ್ರ ಬರ್ತೀನಜ್ಜಿ” ಎಂದು ಮನೆಗೆ ನಡೆದಳು. ಕೆಂಪಮ್ಮ ಹೊಂದ್ಹಿಡಿದು ನಾಲ್ಕು ದಿನ ಹಾಲಿಲ್ಲ ಎಂದು ಸತಾಯಿಸಿದಳು. ಚೈತನ್ ಆಸೆ ಬಿಡದೇ ಬೆಳಿಗ್ಗೇ ಬರುತ್ತಾನೆ. ಅನುಶ್ರೀ ಹಟ ಹಿಡಿದವಳಂತೆ ಸಾಯಂಕಾಲ ಬರುತ್ತಾಳೆ. ಕೆಂಪಮ್ಮ ಅನುಶ್ರೀಗೆ ಬುದ್ಧಿ ಕಲಿಸಬೇಕೆಂದು ಹಾಲಿಲ್ಲ ಎನ್ನುತ್ತಾಳೆ. ಹೀಗೆ ವಾರಗಟ್ಟಳೆ ನಡೆಯಿತು. ಕೊನೆಗೂ ಅನುಶ್ರೀಯ ನಿರ್ಣಯ ಬದಲಾಗಲಿಲ್ಲ. ಚೈತನ್ ಹಾಲಿಗೆ ಬರುವುದನ್ನು ನಿಲ್ಲಿಸಿದ. ಕೆಂಪಮ್ಮನಿಗೆ ಅನು ಮೇಲೆ ದೊಡ್ಡ ಮೊತ್ತದ ಸಿಟ್ಟು ಕುಂತಿತು. “ತಾಳು ಹೆಣ್ನೇ, ಅವುö್ನ ಮನಸ್ಸು ಮಾಡಿದ್ಮಾ÷್ಯಲೆ ನೀನು ತಪ್ಪಿಸಿಕೊಳ್ಳೋದು ಸಾಧ್ಯನಾ? ಅವ್ನ ನಿರ್ದಾರ ಅಂದ್ರ ನಿರ್ದಾರ. ಸಿರಿ ರಾಮ ಚಂರ್ನಂಥಾ ಉಡುಗನ್ನ ಕಣ್ಣೆತ್ತಿ ನೋಡದೆ ಇರುವಷ್ಟು ಕೊಬ್ಬು ತುಂಬೈತಾ ನಿನಗೆ? ಅದು ಕರುಗುವ ಸಮಯ ಬ್ಯಾಗ ಬರಲಿ ದ್ಯಾವ್ರೆ” ಎಂದು ಆಕೆ ತನ್ನ ದೇವರಲ್ಲಿ ಪ್ರಾರ್ಥಿಸಿಕೊಂಡಳು.
ಅನುಶ್ರೀ ಹಾಲಿಗೆ ಹೋಗುವುದನ್ನೇ ನಿಲ್ಲಿಸಿದಳು. ಬೆಳಿಗ್ಗೆ ಹೋದರೆ ಹಾಲು ಸಿಗುತ್ತದೆ. ಆದರೆ ಚೈತನ್ನನ್ನು ಎದುರಿಸಲಾರಳು. ಸಾಯಂಕಾಲ ಹೋಗಿ ಬರಿಗೈಲಿ ಬರುವುದೆಂದರೆ ಬೇಸರ. ಚಹದ ಸಹವಾಸವೇ ಸಾಕು ಎಂದುಕೊಂಡು ಸುಮ್ಮನಾಗಿಬಿಟ್ಟಳು.
ಈ ಏಳೆಂಟು ತಿಂಗಳಲ್ಲಿ ಶಿವಪ್ಪನು ಹಲವಾರು ಜನರನ್ನು ಆತ್ಮೀಯವಾಗಿ ಹಚ್ಚಿಕೊಂಡಿದ್ದಾನೆ. ಎರಡೇ ತಿಂಗಳಲ್ಲಿ ಆತನ ಒಲ್ಲಿ ಮಾಯವಾಗಿ ಪ್ಯಾಂಟು ಶರ್ಟು ಬಂದು ಬಿಟ್ಟಿದ್ದವು. ಈ ಮಹಾನಗರದಲ್ಲಿ ಬದುಕಿನ ರೀತಿಯನ್ನು ಬದಲಿಸಿಕೊಳ್ಳದಿದ್ದರೆ ಬದುಕು ಸಾಗುವುದೇ ಕಷ್ಟವೆಂದು ಆತ ತನ್ನ ಸ್ವ ಅನುಭವದಿಂದ ಕಂಡುಕೊಂಡಿದ್ದನು. ಮಗಳಿಗೂ ತಂದೆಯ ಹೊಸ ಉಡುಗೆ ಕಂಡು ಖುಷಿಯಾಗಿತ್ತು.
ಶಿವಪ್ಪನ ಫ್ಯಾಕ್ಟರಿ ಕೆಲಸ ಅಡೆತಡೆ ಇಲ್ಲದೇ ಸಾಗಿತ್ತು. ಅನುಶ್ರೀ ಆಗೀಗ ತಂದೆ ಕೊಡುತ್ತಿದ್ದ ದುಡ್ಡನ್ನು ಕೂಡಿಡುತ್ತಿದ್ದಳು. ಪಕ್ಕದ ಬೀದಿಯಲ್ಲಿರುವ ಸ್ಟೇಶ್ನರಿ ಅಂಗಡಿಯಿಂದ ಉಲ್ಲಾಣ ಮತ್ತಿತರ ಕಸೂತಿ ಸಾಮಾನುಗಳನ್ನು ತಂದು ಹೆಣಿಕೆ, ಕಸೂತಿಯಲ್ಲಿ ಸಮಯ ಕಳೆಯುತ್ತಿದ್ದಳು. ಅದೊಂದು ಕಲೆ ಆಕೆಗೆ ತಾಯಿಯಿಂದ ಬಂದ ಬಳುವಳಿಯಾಗಿತ್ತು.
ಅದೊಂದು ದಿನ ಶಿವಪ್ಪ ಮಗಳಿಗೆ ಹೇಳಿದ, “ಅನು, ನೀನು ಮನ್ಯಾಗ ಕುಂತು ಬ್ಯಾಸರ ಮಾಡ್ಕೊಬ್ಯಾಡ, ಏನಾರ ಓದಬೇಕಂದ್ರ ಸಾಲಿಗೆ ಹಚ್ಕೊರವ್ವಾ”. ಮಗಳಿಗೆ ತಂದೆಯ ಮಾತು ಕೇಳಿ ಖುಷಿಯಾಯಿತು. “ ಈ ವರ್ಷ ಬ್ಯಾಡಪ್ಪಾ, ನನಗಿನ್ನೂ ಹೊರಗಿನ ಜನರದು ಪರಿಚಯ ಇಲ್ಲ. ಹೊರಗ ಒಬ್ಬಾಕೆ ಹೋಗಾಕ ಬರಾಕ ಹೆದರಿಕ್ಯಾಕೈತಿ” ಎಂದಳು. ಶಿವಪ್ಪ ಆ ವಿಷಯವನ್ನು ಒತ್ತಾಯಿಸಲಿಲ್ಲ.
ದಿನಗಳು ಯಾರ ಬಿಡೆಯೂ ಇಲ್ಲದೇ ಸರಿಯುತ್ತಿದ್ದವು. ಶಿವಪ್ಪ ಮಗಳಿಗೆ ಉಣ್ಣಲು ಉಡಲು ಕೊರತೆ ಮಾಡಿರಲಿಲ್ಲ. ಆದರೆ ಅನುಶ್ರೀಗೆ ಸಂದಾಯವಾಗುತ್ತಿದ್ದ ಪುಡಿಗಾಸು ಕ್ರಮೇಣ ಕಡಿಮೆಯಾಯಿತು. ಕಡಿಮೆ ಸಿಗುತ್ತಿದ್ದ ಮೊತ್ತವೂ ವಿಳಂಬವಾಗತೊಡಗಿತು. ಒಂದು ದಿನ ನಿಂತೂ ಹೋಯಿತು. ತಂದೆಯ ಮುಂದೆ ಆಕೆ ಕೈ ಒಡ್ಡಿ ಕೇಳುತ್ತಿರಲಿಲ್ಲ. ಆತ ಮೊದಲಿನಂತೆ ತಾನೇ ಮಗಳ ಕೈಗೆ ಅಕ್ಕರೆಯಿಂದ ದುಡ್ಡನ್ನು ಹಾಕುತ್ತಿರಲಿಲ್ಲ. ಹೀಗೆ ದಿನಗಳು ಸರಿಯತೊಡಗಿದವು. ತಂದೆಯ ವರ್ತನೆಯಲ್ಲಿ ಏನೋ ಬದಲಾವಣೆ ಆಗುತ್ತಿದೆ ಅನ್ನಿಸಿತು ಆ ಮುಗ್ಧ ಹುಡುಗಿಗೆ. ತಂದೆ ಮೊದಲಿನಂತೆ ಮನೆಗೆ ಲಗೂನೆ ಬರುವುದಿಲ್ಲ. ಸರಿಯಾಗಿ ಊಟ ಮಾಡುವುದಿಲ್ಲ. ಒಂದೊಂದು ದಿನವಂತೂ ಊಟವೇ ಬೇಡವೆನ್ನುತ್ತಾನೆ. ಈ ಬಗ್ಗೆ ಅನುಶ್ರೀ ಜ್ಯೋತಿಯ ಹತ್ತಿರ ಹೇಳಿಕೊಂಡು ಅತ್ತಳು. ಜ್ಯೋತಿ ಅನುವಿನ ತಲೆ ನೇವರಿಸಿ ಚಿಂತೆ ಮಾಡದಿರು ಎಂದು ಧೈರ್ಯ ಹೇಳಿದ್ದಳು.
ಚೈತನ್ನು ಅನುಶ್ರೀಯ ಈ ತೊಳಲಾಟವನ್ನು ಜ್ಯೋತಿಯ ಮೂಲಕ ತಿಳಿದುಕೊಂಡನು. ಆಕೆಗೆ ಇಷ್ಟೆಲ್ಲಾ ಮಾನಸಿಕ ಅಸೌಖ್ಯ ಇರುವಾಗ, ಸಂತೋಷದಿಂದ ಹೊರಗೆ ಮುಖ ಹಾಕಿ ಅಡ್ಡಾಡುವ ಉಮೇದಿ ಎಲ್ಲಿ ಬರಬೇಕು, ಹಾಗಾಗಿ ಆಕೆ ತನ್ನಿಂದ ದೂರ ಉಳಿಯುತ್ತಿದ್ದಾಳೆ ಎಂದುಕೊಂಡನು.
ಅನುಶ್ರೀಗೆ ಅಂದು ಒಂಥರಾ ಖಿನ್ನತೆ ಆವರಿಸಿತ್ತು. ಅಡುಗೆ ಮುಗಿಸಿ ಕೈ ಒರೆಸಿಕೊಳ್ಳುತ್ತಾ ಹೊರಬಂದವಳಿಗೆ ಅಚ್ಚರಿಯಾಯಿತು. ತಂದೆ ಎಂದಿಗಿಂತಲೂ ಅವತ್ತು ಒಂದು ತಾಸು ಬೇಗನೆ ಬಂದಿದ್ದನು. ಮಗಳೊಂದಿಗೆ ನಗುತ್ತಾ ಊಟ ಮಾಡಿದನು. ಊಟದ ನಂತರ, “ಯವ್ವಾ ನಿನಗೇನು ತಂದೀನ್ನೋಡು” ಎಂದು ಮಗಳ ಮುಂದೆ ಮುಚ್ಚಿದ ಮುಷ್ಟಿಯನ್ನು ಹಿಡಿದನು. ಅನುಶ್ರೀಗೆ ಖುಷಿಯೊಂದಿಗೆ ಒಂದು ಚಿಕ್ಕ ಅನುಮಾನ ಬಂದು ಹೋಯಿತು. ಅದನ್ನು ತೋರಗೊಡದೆ ಅಕ್ಕರೆಯಿಂದ ತಂದೆಯ ಮುಷ್ಠಿಯನ್ನು ಬಿಡಿಸಿದಳು. ಒಂದು ಜೊತೆ ಚಿನ್ನದ ಜುಮುಕಿ ಓಲೆ ಝಗ್ ಅಂತ ಹೊಳೆಯುತ್ತಿತ್ತು. ಆಕೆಗೆ ತಕ್ಷಣ ತಾಯಿಯ ನೆನಪಾಯಿತು. “ಕಿವಿಗೆ ಹಾಕ್ಕೊಳ್ಳವ್ವಾ, ಚೆಂದ ಕಾಣ್ತವು” ಎಂದ ತಂದೆಯ ಮಾತಿಗೆ ಎಚ್ಚೆತ್ತು ಕಣ್ಣೊರೆಸಿಕೊಂಡಳು. ಓಲೆಯನ್ನು ಕಿವಿಗೆ ಹಾಕಿಕೊಂಡಳು. ತಂದೆಯ ಮುಖ ಮುದ್ದು ಮಗಳ ಚೆಲುವನ್ನು ನೋಡಿ ಇಷ್ಟಗಲವಾಯಿತು. ಮರುಕ್ಷಣ ಏನೋ ನೆನಪು ಮಾಡಿಕೊಂಡಂತಾಗಿ ಆತನ ಮುಖ ಕಳೆಗುಂದಿತು.
ಎಂದಿನಂತೆ ಬೆಳಿಗ್ಗೆ ಎಚ್ಚರಗೊಂಡ ಅನು ಕೋಣೆಯಿಂದ ಹೊರಬಂದಳು. ನಡುಮನೆಯಲ್ಲಿ ಅಪ್ಪ ಇಲ್ಲ. ಬಚ್ಚಲು, ಪಾಯಿಖಾನೆಗೆ ಹೋಗಿರಬಹುದೇ ಎಂದು ನೋಡಿದಳು. ಅಲ್ಲೆಲ್ಲೂ ಇಲ್ಲ. ಮತ್ತೆ ಕೈಯಲ್ಲಿ ಜೀವ ಹಿಡಿದುಕೊಂಡು, ಏದುಸಿರು ಬಿಡುತ್ತಾ ನಡುಮನೆಗೆ ಬಂದು ನೋಡಿದಳು. ಅಪ್ಪನ ಬಟ್ಟೆ-ಬರೆ ಏನೂ ಇಲ್ಲ. ಚಪ್ಪಲಿ ಇಲ್ಲ. ಕನ್ನಡಿ ಕಡೆ ಲಕ್ಷ÷್ಯ ಹೋಯಿತು. ಅಲ್ಲಿ ಒಂದು ಕಾಗದದಲ್ಲಿ ಸೊಟ್ಟನೆಯ ಅಕ್ಷರಗಳಲ್ಲಿ ಶಿವಪ್ಪ ತನ್ನ ಭವಿತವ್ಯವನ್ನು ತೆರೆದಿಟ್ಟಿದ್ದ. “ಅನು ನನ್ನ ಕ್ಷಮಿಸು. ನಾನು ಫ್ಯಾಕ್ಟಿç ಕೆಲಸಕ್ಕ ಬರೂ ರತ್ನಮ್ಮನ್ನ ಗೆಳೆತನಕ್ಕೆ ಬಿದ್ದೆ. ಆಕೆ ತನ್ನನ್ನ ಮದುವೆಯಾಗದಿದ್ರೆ ಆತ್ಮಹತ್ಯೆ ಮಾಡ್ಕೊಂತೀನಿ ಅಂತ ಅತ್ಲು. ನಾನು ಹೆದರಿದೆ. ಆಕೆ ಹೇಳಿದ ಪ್ರಕಾರ ಆಕೀ ಜೊತೆ ಇವತ್ತ ಮದುವಿಯಾಗ್ತೀನಿ…” ಪತ್ರ ಓದುತ್ತಿದ್ದ ಹಾಗೆ ಅನುಶ್ರೀ ಬಾಯಾರಿ ಬಳಲಿದಳು. ಒಂದು ದಿನಾನೂ ತಂದೆ ತನ್ನ ಸಮಸ್ಯೆಯನ್ನು ಹೇಳಿಕೊಳ್ಳಲಿಲ್ಲ. ಹೇಳಿದ್ದರೆ ತಾನೇನೂ ಜಗಳಾಡುತ್ತಿರಲಿಲ್ಲ. ಏಕಾಏಕಿ ತನ್ನ ತೊರೆದು ಹೋದ ಅಪ್ಪ ಅಂತ ಬಿಕ್ಕಿ ಬಿಕ್ಕಿ ಅತ್ತಳು. ‘ಬೆಂಗಳೂರಿಗೆ ಬಂದು ಅಪ್ಪನ್ನ ಕಳಕೊಂಡೆನಲ್ಲಾ, ಇನ್ನೇನೈತಿ ಜೀವನಕ್ಕ ಅರ್ಥ? ನನ್ನ ಹಣೆ ಬರಹಾನ್ನ ಕತ್ತೀ ಗೆಂಡಿಯಿಂದ ರ್ದಾನೇನೋ ಬ್ರಹ್ಮ… ಊರಾಗಿದ್ರ ಏನೇನೋ ಆದೀತು ಅಂತ ಹೆದರಿ ಇಲ್ಲಿಗೆ ಬಂದೆ ಅಪ್ಪನ್ನ ಕರಕೊಂಡು.. ಇಲ್ಲಿ ಪೂರಾ ಮುಣುಗಿಬಿಟ್ಟೆ..’ ಅಂತ ಯೋಚಿಸುತ್ತಾ ಕಣ್ಣೀರಾದಳು. ತಂದೆ ಮದುವೆಯಾದರೂ ಸರಿ ಮರಳಿ ಮನೆಗೆ ಬರಲಿ ಅಂತ ಬಿಕ್ಕಿ ಬಿಕ್ಕಿ ಅತ್ತಳು. ಅಡುಗೆ ಮನೆಯ ಪಳಿಯಲ್ಲಿ ಐದು ನೂರರ ನಾಲ್ಕು ನೋಟುಗಳನ್ನು ಇಟ್ಟು ಹೋಗಿದ್ದನು. ಅನುಶ್ರೀ ಆವೇಶದಿಂದ ಆ ನೋಟುಗಳನ್ನು ಎತ್ತಿ ಬೀಸಿ ಎಸೆದಳು. ಅವು ಚಪ್ಪಲಿ ಬಿಡುವ ಜಾಗದಲ್ಲಿ ಬಿದ್ದುಕೊಂಡವು. ಕಿವಿ ಹರಿದೀತು ಎಂಬ ಪ್ರಜ್ಞೆಯೂ ಇಲ್ಲದೇ ಕಿವಿಯಲ್ಲಿದ್ದ ಹೊಸ ಓಲೆಯನ್ನು ಕಿತ್ತು ಎಸೆದಳು. ಹುಚ್ಚಿಯಂತೆ ತಲೆ ಬಡಕೊಂಡು ಸಾಕಷ್ಟು ಅತ್ತಳು. ಬಾಗಿಲು ಭದ್ರಪಡಿಸಿಕೊಂಡು ಅತ್ತು ಅತ್ತು ಅಲ್ಲೇ ನೆಲದ ಮೇಲೆ ಒರಗಿಕೊಂಡಳು. ಒಂದು ಹನಿ ನೀರನ್ನು ಕುಡಿಯಲು ಸಹ ಏಳಲಿಲ್ಲ. ಏನು ಮಾಡಿದರೇನು? ತನ್ನ ಬದುಕಿಗೆ ಅರ್ಥ ಇಲ್ಲ, ದಿಕ್ಕಿಲ್ಲ ದೆಸಿ ಇಲ್ಲ ಅಂತ ಕೊರಗಿದಳು. ‘ಅಪ್ಪ ಸತ್ತು ಅವ್ವ ಉಳಿದಿದ್ರ ಹೆಂಗಿರ್ತಿತ್ತು?.. ಹೆಂಗಿರ್ತಿತ್ತೊ ಹೆಂಗ್ಹೇಳೂದು’ ಎಂದುಕೊಂಡಳು. ಅತ್ತು ಅತ್ತು ಕಣ್ಣು ಮೂಗು ಎಲ್ಲಾ ಕೆಂಪಾಗಿ ಉರಿಯತೊಡಗಿದ್ದವು. ಗಂಟಲು ಒಣಗಿದ ಅನುಭವಾಗಹತ್ತಿತು. ತಾನು ಸತ್ತು ಹೋದರೇ ಚೊಲೊ ಎಂದುಕೊಂಡು ಹಾಗೇ ಕುಳಿತಳು ಗೋಡೆಗೊರಗಿಕೊಂಡು. ಕುಳಿತಲ್ಲೇ ನಿದ್ದೆ ಹತ್ತಿತ್ತು…
ಸಾಯಂಕಾಲ ದಿನಾಲೂ ಆರೂವರೆಗೆ ಬರುತ್ತಿದ್ದ ಜ್ಯೋತಿ ಅವತ್ತು ನಾಲ್ಕೂವರೆಗೆ ಕೊನೆ ಕ್ಲಾಸ್ನ್ನು ಅರ್ಧಕ್ಕೆ ನಿಲ್ಲಿಸಿ ತನಗೆ ಹುಷಾರಿಲ್ಲ ಎಂದು ಹೇಳಿ ಬಂದು ಬಿಟ್ಟಿದ್ದಳು. ವಿಪರೀತ ಸಂಕಟವಾಗಿ, ಅನುಶ್ರೀಯನ್ನು ನೋಡಬೇಕೆನ್ನಿಸಿ ನೇರವಾಗಿ ಅನು ಮನೆಗೆ ಬಂದಳು. ಅನುಶ್ರೀ ಕಿಟಕಿ ಬಾಗಿಲು ಭದ್ರಪಡಿಸಿಬಿಟ್ಟಿದ್ದಾಳೆ. ಯಾಕಿರಬಹುದೆಂದು ಟಪಟಪನೆ ಬಾಗಿಲು ಬಡಿದಳು. ಅನುಶ್ರೀ ಎಚ್ಚರಗೊಂಡು ಮೇಲೇಳಲು ಪ್ರಯತ್ನಿಸಿದಳು. ಮೈ ಕೈಯೆಲ್ಲಾ ಗುಂಡಿನಿಂದ ಜಜ್ಜಿದ ಹಾಗೆ ನೋವೆನ್ನಿಸಿತು. ತಾನು ನಿನ್ನೆ ರಾತ್ರಿ ಉಂಡು ನೀರು ಕುಡಿದದ್ದೆ ಕೊನೆ; ಇಂದು ನೀರೂ ಸಹ ಕುಡಿದಿಲ್ಲ ಎಂಬ ನೆನಪಾಯಿತು. ಕೈಕಾಲುಗಳು ನಿಃಶಕ್ತಿಯಾಗಿಬಿಟ್ಟಿವೆ. ನಿಧಾನವಾಗಿ ಹೋಗಿ ಕದ ತೆಗೆದಳು. ಅನುಶ್ರೀಯ ಕೆದರಿದ ಕೂದಲು, ಉಬ್ಬಿದ ಕಣ್ಣು, ತೂರಾಡುವ ದೇಹವನ್ನು ಕಂಡು ಜ್ಯೋತಿಗೆ ಎದೆ ಡವಗುಟ್ಟಿ ಹೋಯಿತು. “ದೇವರೇ, ಏನಿದು,! ಏನಿದು ಅನು?” ಎಂದು ಆಕೆ ಅನುವನ್ನು ಹಿಡಿದು ಕೆಳಗೆ ಕೂಡಿಸಿದಳು. ಅನುಶ್ರೀಗೆ ಮಾತಾಡಲು ಕೂಡ ಚೈತನ್ಯ ಉಳಿದಿರಲಿಲ್ಲ. ಜ್ಯೋತಿಯ ತೊಡೆಯ ಮೇಲೆ ತಲೆ ಇಟ್ಟು ಸುಮ್ಮನೆ ಮೇಲೆ ದಿಟ್ಟಿಸಿದಳು. ಕಣ್ಣು ಉರಿದಂತಾಗಿ ಮತ್ತೆ ಕಣ್ಣು ಮುಚ್ಚಿಕೊಂಡಳು. ಮುಚ್ಚಿದ ಕಣ್ಣುಗಳಿಂದ ಕಣ್ಣೀರು ಹರಿಯತೊಡಗಿತು. ಅಷ್ಟರಲ್ಲಿ ಜ್ಯೋತಿ ಆ ಕಾಗದ ನೋಡಿ ಕೈಗೆತ್ತಿಕೊಂಡಳು. ಆಕೆಗೆ ಈಗ ಅನುಶ್ರೀಯ ದುಃಖದ ಕಾರಣ ತಿಳಿಯಿತು. ಆಕೆ ಲಕ್ಷ÷್ಯ ಬಾಗಿಲ ಕಡೆ ಹರಿಯಿತು. ಅಲ್ಲಿ ನೋಟುಗಳು ಅನಾಥವಾಗಿ ಬಿದ್ದಿವೆ. ಅನುಶ್ರೀ ಅವನ್ನೆಲ್ಲಾ ಸಿಟ್ಟಿನಿಂದ ಎಸೆದಿರಬಹುದೆಂದು ಊಹಿಸಿದಳು. ಮೂಲೆಯೊಂದರಲ್ಲಿ ಓಲೆ ಜುಮುಕಿ ಬಿದ್ದಿವೆ. ಜ್ಯೋತಿಗೆ ಎಲ್ಲವೂ ಅರ್ಥವಾಯಿತು. “ಒಂದು ಜೊತೆ ಓಲೆ, ಒಂದೆರಡು ಸಾವಿರ ರೂಪಾಯಿ ನಿನ್ನ ಮಗಳನ್ನು ಸುಖವಾಗಿ, ಸುರಕ್ಷಿತವಾಗಿ ಬದುಕಿಸುತ್ತವೆಯಾ ಮೂರ್ಖ..” ಎಂದುಕೊಂಡಳು. ಮನುಷ್ಯನನ್ನು ಅತಿಯಾಗಿ ಕಾಡುವ ಸಂಗತಿ ಯಾವುದು? ಬಹುಶಃ ದೈಹಿಕ ಕಾಮ ಇರಬಹುದು. ಹಾಗಿಲ್ಲದಿದ್ದರೆ ಲಲಿತಳ ತಾಯಿ ಹಾಗೆ ಮಾಡುತ್ತಿರಲಿಲ್ಲ. ಅನುಶ್ರೀಯ ತಂದೆ ಹೀಗೆ ಮಾಡುತ್ತಿರಲಿಲ್ಲ. ಇವರು ಅಂತಹ ಜನರ ಪ್ರತಿನಿಧಿಗಳಷ್ಟೆ. ಅದೆಷ್ಟು ಜನರು ತಮ್ಮ ಮಕ್ಕಳನ್ನು ಬೀದಿಗೆ ತಳ್ಳಿ ತಮ್ಮ ದಾರಿ ಹುಡುಕಿಕೊಂಡು ಹೋಗಿದಾರೋ, ಹೋಗುವರೋ ಎಂದುಕೊಂಡು ಜ್ಯೋತಿ ಅಂತರ್ಮುಖಿಯಾದಳು.
ನಂತರ ಅನುಶ್ರೀ ತಲೆಗೆ ದಿಂಬಿನ ಆಸರೆ ಕೊಟ್ಟು ಮಲಗಿಸಿ, ಬಚ್ಚಲು ಮನೆಗೆ ಹೋಗಿ ನೀರೊಲೆಗೆ ಸೌದೆ ಹಾಕಿ ಪಟುವು ಮಾಡಿದಳು. ಅಡುಗೆ ಮನೆಗೆ ಹೋಗಿ ಚಹ ಕಾಯಿಸಲು ನೋಡಿದಳು. ಹಾಲಿರಲಿಲ್ಲ. ಸ್ವಲ್ಪ ಡಿಕಾಕ್ಷನ್ ಕುದಿ ಇಟ್ಟು, ತನ್ನ ಮನೆಗೆ ಓಡಿದಳು. ಅಜ್ಜಿಗೆ ಏನೂ ಮಾತಾಡಿಸದೇ ಹಾಲಿನ ಪಾತ್ರೆಯನ್ನು ಎತ್ತಿಕೊಂಡು ಅನುವಿನ ಮನೆಗೆ ಬಂದಳು. ಮೊಮ್ಮಗಳ ವರ್ತನೆ ಕಂಡು ಅಜ್ಜಿಗೆ ಆಶ್ಚರ್ಯವಾಯಿತು. ಮಾತಿಗೆ ಆಸ್ಪದವನ್ನೇ ಕೊಡದೆ ಜ್ಯೋತಿ ಹೊರಟು ಹೋಗಿದ್ದನ್ನು ಕಂಡು ಅಜ್ಜಿಗೆ ದಿಗಿಲಾಯಿತು. ಆಕೆ ಜ್ಯೋತಿಯನ್ನು ಹಿಂಬಾಲಿಸಿ ಹೋದಳು. ಜ್ಯೋತಿ ಅಡುಗೆ ಮನೆಯಿಂದ ಚಹ, ಬಿಸ್ಕಿಟ್ ಹಿಡಿದು ಹೊರ ಬಂದಾಗ ಅಜ್ಜಿ ಅನುಶ್ರೀಯ ತಲೆ ನೇವರಿಸುತ್ತ, ದಿಕ್ಕು ತಿಳಿಯದಂತಾಗಿ ಕುಳಿತಿದ್ದರು. ಜ್ಯೋತಿಯ ಕಣ್ಣಲ್ಲಿ ನೀರು ತೊಟ್ಟಿಕ್ಕುವುದನ್ನು ಕಂಡು ಅಜ್ಜಿ ಸೆರಗನ್ನು ಬಾಯಿಗೆ ಹಿಡಿದು ಬಿಕ್ಕಳಿಸಿದರು. ‘ಅನುಶ್ರೀ ಯಾಕೆ ಹೆಣ್ಣಾಗಿ ಹುಟ್ಟಿದ್ದೀತು? ಈ ಜೀವನದಾಗೆ ಈ ಮಗಿಗೆ ಸುಖ ಸಿಗಾಕಿಲ್ವಾ?’ ಎಂದು ಹಲುಬಿತು ಅಜ್ಜಿ. ಜ್ಯೋತಿ ಭುಜ ಹಿಡಿದು ಎಬ್ಬಿಸಿ ಕೂಡ್ರಿಸಿ ತಾನೆ ಬಿಸ್ಕಿಟ್ನ್ನು ಚಹದಲ್ಲಿ ಅದ್ದಿ ಬಾಯಿಗಿಟ್ಟಳು. ಅನುಶ್ರೀಗೆ ತಿನ್ನುವ ಮನಸ್ಸೇ ಇಲ್ಲ. ಆದರೆ ತನಗಾಗಿ ಕಣ್ಣೀರು ಸುರಿಸುತ್ತ ಉಪಚರಿಸುತ್ತಿರುವ ಅವರಿಗೆ ನೋವಾಗಬಾರದೆಂದು ತಿನ್ನಲು ಪ್ರಯತ್ನಿಸಿದಳು. ಇವರೆಲ್ಲಾ ತನಗೆ ಯಾರು? ಯಾವ ಜನ್ಮದಲ್ಲಿ ರಕ್ತ ಹಂಚಿಕೊಂಡು ಹುಟ್ಟಿದ್ದರೋ, ಯಾವ ಜನ್ಮದ ಋಣಾನುಬಂಧದ ಬಾಕಿ ಉಳಿದು ಈಗ ಒಂದಾಗಿದ್ದೀವೋ ಎಂದು ಅನುಶ್ರೀ ಬಾಹ್ಯವನ್ನು ಮರೆತು ಯೋಚನೆಗೆ ಬಿದ್ದಳು.
ಅನುಶ್ರೀಯ ತಲೆಗೆ ಎಣ್ಣೆ ಹಚ್ಚಿ ನಿಧಾನವಾಗಿ ಸಿಕ್ಕು ಬಿಡಿಸಿ ಬಾಚಿ ಜಡೆ ಹೆಣೆದಳು ಜ್ಯೋತಿ. ಅನುಶ್ರೀ ಮೇಲೆದ್ದು ಸ್ನಾನಕ್ಕೆ ಹೋದಳು. ಅಜ್ಜಿ ಸಹ ಓದುಬಲ್ಲವರಾಗಿದ್ದರಿಂದ ಅಲ್ಲೇ ಬಿದ್ದಿದ್ದ ಕಾಗದವನ್ನು ಓದಿ ಅರ್ಥ ಮಾಡಿಕೊಂಡಿದ್ದರು. ಜಾಸ್ತಿ ಏನೂ ಪ್ರಶ್ನಿಸಿ ಹುಡುಗಿಯ ಮನಸ್ಸಿಗೆ ನೋವು ಹೆಚ್ಚಿಸುವುದು ಸರಿಯಲ್ಲವೆಂದುಕೊಂಡು ಸುಮ್ಮನಿದ್ದರು. ಅನುಶ್ರೀ ಸ್ನಾನ ಮಾಡಿ ಬಂದಾಗ ಸ್ವಲ್ಪ ಚೇತರಿಸಿಕೊಂಡಂತೆ ಕಂಡಳು. ಅಜ್ಜಿ, ಮನೆಯಿಂದ ಬಿಸಿ ಅನ್ನ ಬೇಳೆಸಾರನ್ನು ತಂದು ಇಬ್ಬರಿಗೂ ಊಟ ಮಾಡಲು ಹೇಳಿದರು.
ಮುಂದುವರೆಯುವುದು
–ಹಟ್ಟಿ ಸಾವಿತ್ರಿ ಪ್ರಭಾಕರಗೌಡ