ಆ ಹಿರಿಯ ಮನುಷ್ಯ ವೆಂಕಟರಮಣರಾವ್ ತೋರಿಸಿದ ಮನೆ, ಶಿವಪ್ಪ ಮತ್ತು ಆತನ ಮಗಳಿಗೆ ಇಷ್ಟವಾಯಿತು. ಒಂದು ಕೋಲಿ, ನಡುಮನೆ, ಅಡುಗೆಮನೆ ಅಚ್ಚುಕಟ್ಟಾಗಿದ್ದವು. ಸುತ್ತಲೂ ಪೌಳಿ ಇತ್ತು. ಆ ಆವಾರದಲ್ಲಿ ಬಚ್ಚಲುಮನೆ ಮತ್ತು ಪಾಯಖಾನೆ ಇದ್ದವು. ನೀರಿಗೂ ಕೊರತೆ ಇರಲಿಲ್ಲ. ಆವಾರದಲ್ಲಿಯೇ ನೀರಿನ ನಳವನ್ನು ಹೊಂದಿಸಲಾಗಿತ್ತು. ಅನುಶ್ರೀ ಅಂತೂ, “ಇಲ್ಲೇ ಇದ್ದು ಬಿಡೂದು ಚೊಲೊ ನೋಡಪ್ಪಾ” ಎಂದಳು. ಅಮಾಯಕ ಜನ ಮತ್ತು ಇನ್ನೂ ಕೆಲಸ ಹುಡುಕಿಕೊಂಡಿಲ್ಲವೆಂಬುದನ್ನು ತಿಳಿದ ಮುನಿಶಿವರಾಜುವಿಗೆ ಶಿವಪ್ಪನ ಮೇಲೆ ಕನಿಕರ ಹುಟ್ಟಿತ್ತು. ಮುಂಗಡ ಹಣವನ್ನೇನೂ ಕೇಳದೇ ತಿಂಗಳ ಬಾಡಿಗೆ ಏಳುನೂರು ರೂಪಾಯಿ ಅಂತ ಹೇಳಿದ. ವೆಂಕಟರಮಣರಾವ್ ಅವರಿಗೆ ಬಹಳ ಮೆಚ್ಚುಗೆಯಾಯಿತು. ಅವರು, ‘ಇಲ್ಲಿ ಮನೆ ಸಿಗೂದು ತುಂಬಾ ಕಷ್ಟದ್ದು. ಹಾಗಿದ್ರೂ ಮುನಿಶಿವರಾಜು ಹಣದ ಮುಖ ನೋಡುವ ಮನುಷ್ಯನಲ್ಲ. ಅದಿಕ್ಕೇ ಇಷ್ಟು ಅನುಕೂಲವಿರುವ ಮನೆಯನ್ನು ಕಡಿಮೆ ಬಾಡಿಗೆಗೆ ಕೊಡುತ್ತಿದ್ದಾರೆ. ಇಲ್ಲೇ ಇದ್ದು ಬಿಡಿ ಶಿವಪ್ಪ..” ಎಂದು ಆತನ ಭುಜವನ್ನು ಒತ್ತಿ ಆತ್ಮೀಯತೆಯಿಂದ ಹೇಳಿದರು. ಅವರು ತಮ್ಮ ಮನೆಗೂ ಹೋಗದೇ ಹೀಗೆ ರೈಲು ಇಳಿದು ಬಂದು ಶಿವಪ್ಪನ ಸಲುವಾಗಿ, ಅಲ್ಲಿಯೇ ನಿಂತಿದ್ದರು. ಮಗಳ ನೆರವಿನಿಂದ ಕಸ ಗುಡಿಸಿ, ಸ್ವಚ್ಛಮಾಡಿ ತಂದಿದ್ದ ಸಾಮಾನು ಸರಂಜಾಮನ್ನೆಲ್ಲಾ ಎತ್ತಿ ಒಳಗಿಟ್ಟನು ಶಿವಪ್ಪ. ಆ ಹಿರಿಯರ ಅಣತಿಯಂತೆ ಹಾಲುಕ್ಕಿಸಿದಳು ಅನುಶ್ರೀ. ನಂತರ ವೃದ್ಧರು ತಮ್ಮ ಮನೆಯ ವಿಳಾಸವನ್ನು ಕೊಟ್ಟು, ಏನಾದರೂ ಸಹಾಯ ಬೇಕಾದರೆ ಸಂಕೋಚವಿಲ್ಲದೇ ಕೇಳಬಹುದೆಂದು ಹೇಳಿ ತಮ್ಮ ಮನೆಗೆ ಹೋದರು.
ಶಿವಪ್ಪನ ಹತ್ತಿರವಿದ್ದ ಸ್ವಲ್ಪ ಹಣ ನೀರಿನಂತೆ ಖರ್ಚಾಗಿತ್ತು. ಉಳಿದಿದ್ದ ನೂರಾರು ರೂಪಾಯಿಗಳನ್ನು ಶಿವಪ್ಪ ಮಗಳ ಕೈಯಲ್ಲಿ ಕೊಟ್ಟಿದ್ದ. ಆಗಲೇ ನಾಲ್ಕೈದು ದಿನಗಳು ಕಳೆದಿದ್ದವು ಬೆಂಗಳೂರಿಗೆ ಬಂದು. ಆ ದಿನ ಮದ್ಯಾಹ್ನ ಊಟ ಮಾಡುವಾಗ ಶಿವಪ್ಪ ಹೇಳಿದ, “ನಾನು ನಾಳಿಂದ ಕೂಲಿಗಿ ಹೊಕ್ಕೀನವ್ವಾ, ಮನ್ಯಾಗ ಒಬ್ಬಾಕಿನಾ ಇರ್ತಿ. ಹುಷಾರಿರು” ಎಂದನು. “ಏನು ಕೂಲಿ ಮಾಡ್ತೀಯಪ್ಪಾ, ನನಗೂ ಕೆಲಸ ಸಿಕ್ರ ಬರ್ಲೇನು?”, “ಬ್ಯಾಡವ್ವಾ, ಗೊತ್ತು ಗುರಿ ಇಲ್ಲದ ಜಗ ಇದು. ಹೆಣ್ಮಗಳು ನೀನು. ಸುಮ್ಕ ಮನ್ಯಾಗಿರು”. ತಂದೆಯ ಮಾತು ಖರೆ ಅನ್ನಿಸಿತು ಅನೂಶ್ರೀಗೆ.
ಮನೆಗೆಲಸ ಮಾಡಿಕೊಂಡು ತಂದೆಗೆ ಊಟಕ್ಕೆ ಕೊಟ್ಟು, ಮದ್ಯಾಹ್ನಕ್ಕೆ ಬುತ್ತಿ ಕಟ್ಟಿ ಕೊಡುತ್ತಿದ್ದಳು. ತಂದೆ ಕೆಲಸಕ್ಕೆ ಹೋದನಂತರ ಅನೂಶ್ರೀ ಬಾಗಿಲು ಹಾಕಿಕೊಂಡು ಕುಳಿತು ಬಿಡುತ್ತಿದ್ದಳು. ಆಕೆಯ ಕಂಗಳು ಅಡಕೊತ್ತಿನಲ್ಲಿ ಸಿಕ್ಕಿಕೊಂಡ ಅಡಕೆಯಂತಾಗಿದ್ದವು. ಹಳೆಯ ನೆನಪುಗಳು ಬಿಡುತ್ತಿಲ್ಲ; ಹೊಸ ಕನಸುಗಳು ಅರಳುತ್ತಿಲ್ಲ. ಒಂಥರಾ ಅನಾಥ ಭಾವನೆ. ಓದನ್ನಾದರೂ ಮುಂದುವರೆಸಬೇಕೆಂದರೆ ಅಪ್ಪ ಏನನ್ನುವನೊ ಎಂಬ ಹಿಂಜರಿಕೆ..
ಏನೇನೋ ನೆನಪುಗಳು. ಹೈಸ್ಕೂಲಿಗೆ ಸೇರಿದಾಗಿನ ನೆನಪುಗಳು ಕಾಡುತ್ತವೆ. ಉದ್ದವಾದ ಎರಡು ಜಡೆಗಳಿಗೆ ಕೆಂಪು ರಿಬ್ಬನ್ನು ಹೆಣೆದು ಮೇಲೆ ಕಟ್ಟುತ್ತಿದ್ದಳು ಅವ್ವ. ಜಡೆ ಮೇಲೆತ್ತಿ ಕಟ್ಟಿದರೂ ಮೊಳ ಉದ್ದ ಕಾಣುವ ಸೊಂಪಾದ ಜಡೆ. ಪಾದ ಮುಚ್ಚುವಂತಹ ನೀಲಿ ಬಣ್ಣದ ಲಂಗ, ಬಿಳಿ ಬಣ್ಣದ ಪೋಲಕಾ. ಮೊದಲರ್ಧ ದಿನಗಳು ಒಂದು ರೀತಿ ಚೆಂದಗೇ ಕಳೆದವು. ದಸರಾ ರಜೆಯ ನಂತರ ಅವ್ವನ ಆರೋಗ್ಯ ಮೊದಲಿಗಿಂತ ಹದಗೆಟ್ಟಿತು. ಒಂದು ದಿನ ಹೋದರೆ ಒಂದಿನ ತಪ್ಪಿಸುತ್ತಾ ಎಂಟನೇ ತರಗತಿ ಪರೀಕ್ಷೆ ಮುಗಿಸಿದ್ದೇ ದೊಡ್ಡ ಸಾಹಸವಾಯಿತು. ಅಷ್ಟರಲ್ಲಿ ಅವ್ವ ಸಂಪೂರ್ಣ ಹಾಸಿಗೆ ಹಿಡಿದರಳು. ‘ಅನೂ ಬಾ ಇಲ್ಲೆ. ಎಲ್ಲೀ ಹೋಗಬ್ಯಾಡ, ಕುಂತ್ಕೊ ನನ್ನ ಹತ್ರಾನ..” ಅಂತ ಅವ್ವ ಬಡಬಡಿಸುತ್ತಿದ್ದ ಮಾತುಗಳು ಈಗಲೂ ಕಿವಿಗೆ ಬಡಿದಂತೆ ಬಾಸವಾಗುವುದನ್ನು ತಪ್ಪಿಸಿಕೊಳ್ಳಲು ನಿದ್ದೆಯ ಮೊರೆ ಹೋಗುವಳು ಹುಡುಗಿ. ನಿದ್ದೆಯನ್ನಾದರೂ ನಿರುಮ್ಮಳವಾಗಿ ಮಾಡಲಾಗದು. ಕತ್ತು ಹಿಸುಕುವ ಕನಸುಗಳು. ಶಾಲೆಯಲ್ಲಿ ಸಹಪಾಠಿ ಹುಡುಗರು ಹುಡುಗಿಯರೊಂದಿಗೆ ಖೋ ಖೋ ಆಟ ಆಡುವ ಕನಸು, ಪಾತಮ್ಮನ ಕಡೆ ಪ್ಯಾರಲಹಣ್ಣು ತಗೊಂಡು ತಿನ್ನಲು ತಾವೆಲ್ಲ ಗೆಳತಿಯರೂ ಸುತ್ತುಗಟ್ಟಿ ನಿಲ್ಲುವ ಕನಸು.. ಬೆಂತೂರು ಮಾಸ್ತರರು ಹೇಳುತ್ತಿದ್ದ (a + b)2 = a2 + b2 + 2ab ಇತ್ಯಾದಿ ಬೀಜಗಣಿತ ಸೂತ್ರಗಳ ಪಾಠದ ಕನಸು… ದಡಕ್ಕನೆ ಎದ್ದು ಕುಳಿತು ಕಣ್ಣೀರು ಹರಿಸುವಳು ಹುಡುಗಿ. ‘ನಾನು ಸಾಯ್ತೀನಿ. ಹಿಂಗಾದ್ರ ಬದುಕೂದ್ಹೆಂಗ, ನಂಗ್ಯಾರದಾರ ಇಲ್ಲಿ. ಒಬ್ಬಾಕಿಯಾದ್ರೂ ಗೆಳತಿ, ಅಕ್ಕ-ತಂಗಿ, ಅಣ್ಣ-ತಮ್ಮ, ಚಿಗವ್ವ-ದೊಡ್ಡವ್ವ ಅಂತ ಯಾರದಾರಿಲ್ಲಿ?! ಊರಾಗಿದ್ರೇನು ಅಲ್ಲಿ ಯಾರಿದ್ರು? ಊಹೂಂ ಎಲ್ಲಿ ಹೋದ್ರೂನೂ, ಯಾವ ದಿಕ್ಕಿಗಿ ಅಡರಿದ್ರೂನೂ ನನಗ್ಯಾರೂ ಇಲ್ಲ. ಅಪ್ಪ ಅಷ್ಟಾ ನನಗ ದಿಕ್ಕು, ಅಪ್ಪಗ ನಾನು ದಿಕ್ಕು… ಯಾರೂ ಇಲ್ಲ ಯಾರೂ ಇಲ್ಲ. ಮೊಣಕಾಲು ಸಂಧಿಯಲ್ಲಿ ಮುಖ ಹುದುಗಿಸಿ ಅಳುವಳು…
*
ಜ್ಯೋತಿಗೆ ದಿಕ್ಕು ತೋಚದಂತಾಗಿತ್ತು. ತನ್ನ ಕೆ.ಜಿ ಕ್ಲಾಸಿನಿಂದಲೂ ಒಡನಾಡಿಯಾಗಿ ಬೆಳೆದಿರುವ ಚೈತನ್ ಎಂದೂ ಇಷ್ಟೊಂದು ಸಪ್ಪೆಯಾಗಿರಲಿಲ್ಲ. ಅವನ ಚಿಂತೆಗೆ ಕಾರಣವೇನಿರಬಹುದು? ಅತ್ತ ಲಲಿತ ಸಹ ಮೊದಲಿನಂತೆ ಮಾತಿಗೆ ಸಿಗುತ್ತಿಲ್ಲ. ಚೈತನ್ ನಿತ್ಯವೂ ಸಿಗುತ್ತಾನೆ. ಆದರೆ ಅವನ ಹೊಳಪಿನ ಕಣ್ಣುಗಳು ಗುಳಿ ಬಿದ್ದಂತಾಗಿವೆ. ಈಗ ನಾಲ್ಕಾರು ದಿನಗಳಿಂದ ಮುಖ ಶೌಚ ಕೂಡ ಮಾಡಿಲ್ಲವೆಂದು ತೋರುತ್ತದೆ. ಕೆನ್ನೆಯ ಮೇಲೆ ಕುರುಚಲು ಬೆಳೆದಂತೆ ಅಸಹ್ಯವಾಗಿ ಕಾಣುತ್ತಾನೆ. ಇವತ್ತು ಏನಾದರಾಗಲಿ ಅವನ ಬಾಯಿಂದಲೇ ಅವನ ಖಿನ್ನತೆಗೆ ಕಾರಣವನ್ನು ಕೇಳಿ ತಿಳಿದಯಬೇಕೆಂದುಕೊಂಡಳು. ತನ್ನ ತರಗತಿಗಳು ಮುಗಿದ ಮೇಲೆ ಗ್ರಂಥಾಲಯಕ್ಕೆ ಹೋಗದೇ ನೇರವಾಗಿ ಬಸವನ ಗುಡಿಯ ಎಸ್.ಆರ್.ಸಿ ರಸ್ತೆಗೆ ಕೈನಿ ಓಡಿಸಿದಳು. ನಿರೀಕ್ಷಿಸಿದಂತೆ ಚೈತನ್ ಎದುರಿಗೆ ನಾಲ್ಕಾರು ಜನ ಸಮಾಲೋಚನೆಯಲ್ಲಿ ತೊಡಗಿದ್ದರು. ಜ್ಯೋತಿಗೆ ಚೈತನ್ ಆಫೀಸ್ ಎಂದರೆ ತನ್ನ ತವರು ಇದ್ದಂತೆ. ಆಕೆ ರಾಜಾರೋಷವಾಗಿ ಬರುತ್ತಾಳೆ ಹೋಗುತ್ತಾಳೆ ಯಾವುದೇ ಹಿಂಜರಿಕೆ ಇಲ್ಲದೆ. ಆಕೆ ಬಂದದ್ದು ಚೈತನ್ನ ಗಮನಕ್ಕೆ ಬಂದಿತು. ಆಕೆ ಸೀದಾ ಒಳ ಬರದೆ ಹೊರಗಿನ ಕೋಲಿಯಲ್ಲಿ ಕುಳಿತಳು. ಔಟ್ ಲುಕ್, ಟೈಮ್ಸ್ ಆಫ್ ಇಂಡಿಯಾ ಇನ್ನೂ ಯಾವುದ್ಯಾವುದೋ ಪತ್ರಿಕೆಗಳು ಮೇಜಿನ ಮೇಲಿದ್ದವು. ಜ್ಯೋತಿ ಅವುಗಳನ್ನು ನೋಡಿದರೂ ಓದುವ ಗೋಜಿಗೆ ಹೋಗಲಿಲ್ಲ. ಚೈತನ್ನ ಮಾತುಗಳು ಮುಗಿಯುತ್ತಿಲ್ಲ. ಆಗಲೇ ಸಂಜೆ ಐದರ ಸಮಯ. ಕಛೇರಿಯ ನೌಕರರು ಒಬ್ಬೊಬ್ಬರೆ ಮನೆಗೆ ನಡೆದರು. ಸಮಾಲೋಚನೆಗೆ ಬಂದಿದ್ದ ಗ್ರಾಹಕರೂ ಹೊರಟು ನಿಂತರು. ಆಕೆಗೆ ಮಾತನಾಡುವ ಆತುರ. ರಾತ್ರಿ ೭ ಗಂಟೆಗೆ ಚೈತನ್ ವೃದ್ಧಾಶ್ರಮದಲ್ಲಿ ಪ್ರತ್ಯಕ್ಷನಾಗುತ್ತಾನೆ. ಆತನ ಸಮಯ ಎಲ್ಲೂ ಒಂದು ಕ್ಷಣವೂ ಹಾಳಾಗುವ ಮಾತಿಲ್ಲ. ಆ ಏಳರೊಳಗೆ ತಾನು ನಿತ್ಯ ಚೈತನ್ನನ್ನು ಕಾಣುವುದು.
ದಿನಾಲೂ ಗ್ರಂಥಾಲಯದಿಂದ ಆರು ಗಂಟೆಗೆ ಬರುವವಳು ಇಂದು ಐದು ಗಂಟೆಗೇ ಬಂದು ಬಿಮ್ಮೆಂದು ಕುಂತಿದ್ದಳು ಮುಖ ಉಬ್ಬಿಸಿಕೊಂಡು. ಚೈತನ್ ತನ್ನ ಕಡತಗಳನ್ನೆಲ್ಲಾ ಹೊಂದಿಸಿಡಲು ಗುಮಾಸ್ತ ರಂಗಣ್ಣನಿಗೆ ಹೇಳಿದನು. ರಂಗಣ್ಣ ತನ್ನ ಕೆಲಸ ಮುಗಿಸಿ ಚೈತನ್ಗೆ ವಂದಿಸಿ ಹೊರಟು ಹೋದ. ನಂತರ ಆತ ಎದ್ದು ಬಂದು ಜ್ಯೋತಿಯ ಮುಂದೆ ನಿಂತು, “ಹಲೋ ಅಮ್ಮಯ್ಯ” ಎಂದನು. ಆಕೆಯ ಕಣ್ಣುಗಳಲ್ಲಿ ನೀರು ಧಾರೆಯಾಗಿ ಇಳಿಯತೊಡಗಿತ್ತು. ಚೈತನ್ಗೆ ಒಂಥರಾ ಸಂಕಟವಾಯಿತು. ಎಂದೂ ಯಾವುದಕ್ಕೂ ಜ್ಯೋತಿ ಅತ್ತಿದ್ದೇ ಇಲ್ಲ. ಆಕೆಯ ಅಳುಮುಖವನ್ನು ನೋಡಿದ ನೆನಪೇ ಇಲ್ಲ. ಎಲ್ಲರನ್ನೂ ನಗಿಸುತ್ತಾ, ನಗುತ್ತಾ, ಪ್ರೀತಿಯಿಂದ ಮಾತಾಡುವ ಮಾತಿನ ಮಲ್ಲಿ ಆಕೆ. ಇಂದು ಅಳುವಂಥಾದ್ದೇನಾಯಿತು ಎಂದು ಆತ ಆತಂಕಗೊಂಡನು. “ಜ್ಯೋ ಏನಾಯ್ತೂಂತ ಹೇಳ್ಬರ್ದೇ, ಯಾರ್ ಏನಂದ್ರು? ಅಜ್ಜಿ ಹೆಂಗವ್ರೆ?” ಅವನ ಹಣೆ ನೆರಿಗೆಗಟ್ಟಿತ್ತು. ಜ್ಯೋತಿ ತಲೆ ಎತ್ತದೇ ಹೇಳಿದಳು, “ಈ ಜಗತ್ತಿನ್ಯಾಗೆ ಎಲ್ರೂ ಹುಷಾರವ್ರೆ, ಸುಮ್ನೆ ಅಳೋದಿಕ್ಕೆ ನಂಗೆ ತಲೆ ಕೆಟ್ಟಂತೆ”. “ಅಯ್ಯೊ ತಾಯಿ! ಇದೇನ್ ರೋಗ ಬಂತು ನಿನಗೆ, ನಡೆದ ಸಂಗತಿ ಏನಂತ ಹೇಳು, ನನಗೆ ತುಂಬಾ ಕೆಲಸೈತೆ, ಬೇಗ ಹೇಳು” ಎಂದು ಅವಳ ತಲೆ ನೇವರಿಸಿದನು. “ನಾನು ಕೇಳಿದ್ದಕ್ಕ ಉತ್ರ ಹೇಳ್ತೀ ತಾನೇ?” ಕೇಳುತ್ತಾ ಚಿಕ್ಕ ಮಕ್ಕಳಂತೆ ಮೂಗೇರಿಸಿದಳು. “ನಾನೇನಾದರೂ ನಿನ್ನಿಂದ ಮುಚ್ಚಿಡ್ತೀನಾ? ಯಾಕೆ ನನ್ನ ಜೀವ ತಿಂತೀಯಾ? ಕೇಳು ಏನದು?”. “ಪ್ರಾಮೀಸ್” ಚಾಚಿದಳು. ಆಕೆ ಬಾಲ್ಯದ ಚಾಳಿಯನ್ನು ಬಿಟ್ಟೇ ಇಲ್ಲ. “ಪ್ರಾಮೀಸ್ ಹೇಳು” ಆತ ಕೈ ಮೇಲೆ ಕೈ ಹಾಕಿ ಕೇಳಿದ. “ಮತ್ತೆ ಹದಿನೈದು ದಿನಗಳಿಂದ ಒಂಥರಾ ಇದ್ದೀಯಾ.ನಾನೇ ಮಾತಾಡ್ಸೀದ್ರೆ ಮಾತಾಡ್ತೀ, ಇಲ್ಲದಿದ್ರೆ ಸುಮ್ನೆ ಚಿಂತೆ ಮಾಡೋ ಥರಾ ಕೂತ್ಕೊಳ್ತೀಯ. ಯಾಕೆ ಚೈತೂ, ನೀನು ಈ ಹಿಂದೆ ಎಂದೂ ಹಿಂಗೆ ಮಾಡ್ತರ್ಲಿಲ್ಲ. ನಿನ್ನ ಮುಖ ನೋಡ್ಕೊಂಡಿದ್ದೀಯಾ ಕನ್ನಡಿಯಲ್ಲಿ?!”
“ನಂಗೇನೂ ಆಗಿಲ್ಲ ಕಣಮ್ಮ. ಒಳ್ಳೆ ಗುಂಡುಕಲ್ಲಿನ ಹಾಗಿದೀನಿ. ನೀನು ಸರ್ವ ನಾಶವಾಯ್ತು ಅನ್ನೂವಂಗ ಅಳ್ತಾ ಇದ್ದೀಯಲ್ಲ” ಎಂದನು ತಲೆಯ ಮೇಲೆ ಮೊಟಕಿ. ಆತ ಹಾಗೆ ಗೆಲುವಾಗಿ ಮಾತಾಡಿದರೂ ಆತನ ಕಣ್ಣಿನ ಹೊಳಪು ಎಲ್ಲೋ ಕಳೆದಂತಾಗಿತ್ತು. ಜ್ಯೋತಿ ದಡಕ್ಕನೆ ಎದ್ದು, “ಹಾಗಾದ್ರೆ ನಾನು ಬರ್ತೀನಿ, ನಿನ್ನ ತಲೆ ತಿಂದಿದ್ಕೆ ಸಾರಿ” ಎಂದು ತನ್ನ ಹೆಗಲು ಚೀಲವನ್ನು ಕೈಗೆತ್ತಿಕೊಂಡಳು. ಚೈತನ್ಗೆ ಆಕೆಯ ವರ್ತನೆ ಕಂಡು ಸ್ವಲ್ಪ ದಿಗಿಲಾಯಿತು. ಈ ಜಗತ್ತಿನಲ್ಲಿ ತನ್ನನ್ನು ಅಷ್ಟೊಂದು ಪ್ರೀತಿಸುವ ಜೀವಿ ಜ್ಯೋತಿ ಮಾತ್ರ. ಅಂತಹ ತಾಯಿ ಹೃದಯದ ಅವಳನ್ನು ನೋಯಿಸುವುದು ಸರಿಯಲ್ಲ. ಅಷ್ಟಕ್ಕೂ ಎಂದಾದರೊಂದು ದಿನ ತನ್ನ ಸಮಸ್ಯೆಯನ್ನು ಆಕೆಯ ಮುಂದೆ ಹೇಳಲೇಬೇಕಲ್ಲವೆ ಎಂದುಕೊಂಡು, “ಜ್ಯೋತಿ ಕೂತ್ಕೂಳ್ಳೆ ತಾಯಿ, ಹೇಳ್ತೀನಿ” ಅಂದನು ದೈನ್ಯದಿಂದ. ಆಕೆ, “ನಿಜವಾಗಿ ಹೇಳ್ತೀಯಾ” ಎಂಬಂತೆ ನೋಡಿ ಪುನಃ ಕುರ್ಚಿ ಮೇಲೆ ಕುಳಿತಳು. “ಹೇಳು” ಎಂದಳು. “ಅದೂ… ಜ್ಯೋ… ಅದೂ ಏನಂದ್ರ…” ಚೈತನ್ ಪೆದ್ದನಂತೆ ತೊದಲಿ ತಲೆ ಕೆರೆದುಕೊಂಡನು. ಅವನ ಹೊಸ ವರ್ತನೆ ನೋಡಿ ಆಕೆಗೆ ನಗು ಉಕ್ಕಿ ಬಂದರೂ ನಗದೇ, “ಏಯ್ ಅದೇನು ಬಾಯ್ಬಿಡು ಕತ್ತೆ! ನಿಂಗೇನೋ ಆಗ್ಬಾರದ್ದಾಗೈತೆ ಅನ್ಸುತ್ತೆ” ಎಂದಳು. ಆತ ಎದ್ದು ನಿಂತು ಮೇಜಿಗೆ ಬೆನ್ನು ಕೊಟ್ಟು ನಿಂತನು. ಕೈ ಕಟ್ಟಿಕೊಂಡು ಜ್ಯೋತಿಯ ಕಡೆ ನೋಡದೆ, “ಜ್ಯೋ, ಆ ಶಶಿ ಕಿರಾಣಿ ಸ್ಟೋರ್ಸ್ ಹತ್ರ , ಮುನಿಶಿವರಾಜು ಮನೇಲಿ ಬಾಡಿಗೆ ಅವ್ರಲ್ಲ ತಂದೆ-ಮಗಳು ಆ ಹುಡುಗೀನ ನೋಡಿದ್ದೀಯೇನೇ!” ಎಂದನು. ಜ್ಯೋತಿಗೆ ನಗೆ ತಡೆಯಲಾರದೇ ಜೋರಾಗಿ ನಕ್ಕುಬಿಟ್ಟಳು. ಆತನ ಬೆನ್ನಿಗೊಂದು ಗುದ್ದಿ, “ಏಯ್ ಕಳ್ಳ ಸಮಾಚಾರ ಹಿಂಗೈತಾ ನಾನು ಆ ಹುಡುಗೀನ ಸರಿಯಾಗಿ ನೋಡಿಲ್ಲ. ನೀನು ನೋಡಿದ್ರೆ ಹೇಳು, ಹೆಂಗವ್ಳೆ?” ಎಂದಳು.
ಜ್ಯೋತಿ ಮೊದಲ ದಿನವೇ ಅನುಶ್ರೀಯನ್ನು ನೋಡಿದ್ದಳು. ತಾನೇ ಚೆಲುವೆ ಎಂದು ಓಡಾಡುತ್ತಿದ್ದ ತನಗೆ ಅನುಶ್ರೀಯ ಸೌಂದರ್ಯ ಕಂಡು ನಿಬ್ಬೆರಗಾಗಿ ಹೋಗಿತ್ತು. ತಾನೇನಾದರೂ ಹುಡುಗನಾಗಿದ್ದರೆ ಅಂತ ಯೋಚಿಸಿ ನಕ್ಕಿದ್ದಳು. ಅಂತಹ ಹುಡುಗಿ ಇವನ ಕಣ್ಣಿಗೆ ಬಿದ್ದು ಇವನಿಗೆ ಹುಚ್ಚು ಹಿಡಿಯುವಂತಾಗಿದ್ದು ಸಹಜ ಎಂದುಕೊಂಡಳು. ಚೈತನ್ ಕೆನ್ನೆ ಕೆಂಪು ಮಾಡಿಕೊಂಡು ತಾಯಿಯ ಮುಂದೆ ತಪ್ಪಿತಸ್ತನಾಗಿ ನಿಂತ ಮಗುವಿನಂತೆ ನಿಂತಿದ್ದನು. “ಏಯ್ ಹುಚ್ಚ, ಆ ಹುಡುಗಿ ಹೆಸರು ಅನುಶ್ರೀ. ಎಂಟನೆ ತರಗತಿ ಫಸ್ಟ್ ಕ್ಲಾಸ್. ತಾಯಿ ಇಲ್ಲ. ತಂದೆ ಮಾತ್ರ ದಿಕ್ಕು. ಈಗ ಹೊಲಿಗೆ, ಹೆಣಿಕೆ ಅಂತ ನಾಲ್ಕು ಗೋಡೆ ಒಳಗೆ ಅವಳ ಬದುಕು. ಅದ್ಸರಿ ನೀನು ಅವಳನ್ನು ಯಾವಾಗಪ್ಪ ನೋಡ್ದೆ?” ಎಂದಳು. ಚೈತನ್ ರೈಲು ಪ್ರಯಾಣದ ದೃಶ್ಯವನ್ನು ಮತ್ತು ನಿತ್ಯ ಒಮ್ಮೆಯಾದರೂ ಅವಳನ್ನು ನೋಡಲು ತಾನೆಷ್ಟು ಪರದಾಡುವಂತಾಗಿದೆ ಎಂಬುದನ್ನು ಸವಿವರವಾಗಿ ಹೇಳಿದನು. ತಟ್ಟನೆ ಜ್ಯೋತಿಯ ಕೈ ಹಿಡಿದುಕೊಂಡು, “ಜ್ಯೋ ಹೆಂಗಾದರೂ ಮಾಡಿ ಅವಳನ್ನ ಪರಿಚಯಿಸುತ್ತೀಯಾ, ಅವಳು ಎಂಟನೇ ಕ್ಲಾಸು ಓದಿದ್ರೆ ಅಷ್ಟೇ ಸಾಕು. ಅದು ಅವಳ ಬಂಡವಾಳ” ಎಂದನು. “ಚೈತೂ ಈ ನಿನ್ನ ತಂಗಿ, ನಿನ್ನ ಈ ಸಣ್ಣ ಕೋರಿಕೆಯನ್ನು ಪೂರೈಸಲಾರದಷ್ಟು ಅಶಕ್ತಳೇನೋ” ಎಂದವಳ ಕಣ್ಣುಗಳಲ್ಲಿ ವಿಶ್ವಾಸದ ಮಿಂಚು ಕಾಣಿಸಿತು.
ಹರೆಯಕ್ಕೆ ಕಾಲಿರಿಸಿದ ಮೇಲೂ ಎಷ್ಟೊಂದು ಗಾಂಭೀರ್ಯದಿಂದ ಬೆಳೆದವನು ಚೈತನ್. ತಮಾಷೆ ಅಂತ ಕೂಡ ಹುಡುಗಿಯರೊಂದಿಗೆ ಚೆಲ್ಲು ಚೆಲ್ಲಾಗಿ ವರ್ತಿಸಿದವನಲ್ಲ. ಬಾಲ್ಯದಿಂದಲೂ ಅವನು ಶಿಸ್ತಿಗೆ ಹೆಸರಾದವನು. ಶಿಸ್ತಿಗೆ ಇನ್ನೊಂದು ಹೆಸರೆ ಚೈತನ್ ಎಂದು ಸ್ನೇಹಿತರು ಆಗಾಗ್ಗೆ ಹೊಗಳುತ್ತಿದ್ದರು. ಎಂತಹ ತರಲೆ ಹುಡುಗಿಯರಾದರೂ ಚೈತನ್ ಎದುರಿಗೆ ಬಂದರೆ ಗೌರವದಿಂದ ನಮಸ್ಕರಿಸಿ, ವಿನೀತರಾಗಿ ಮುಂದೆ ಸಾಗುವರು. ಅಂತಹ ಚೈತನ್ ಪ್ರೀತಿಗೆ ಬಿದ್ದಿದ್ದಾನೆ. ಅವನ ಪ್ರೀತಿ ಅವನಿಗೆ ದಕ್ಕಲಿ. ತಾನು ಈ ಪ್ರೀತಿಯ ಸೌಧಕ್ಕೆ ಒಂದು ಇಟ್ಟಿಗೆಯಾಗಬೇಕು ಎಂದು ಜ್ಯೋತಿ ಆಶಿಸಿದಳು.
ಮಾರನೆ ದಿನ ಚೈತನ್ನ ಗಡ್ಡ ಮಾಯವಾಗಿ ಮತ್ತೆ ಲವಲವಿಕೆಯಿಂದ ಓಡಾಡತೊಡಗಿದ್ದ. ಜ್ಯೋತಿಯ ಹತ್ತಿರ ತನ್ನ ಸಮಸ್ಯೆ ಏನೇ ಇರಲಿ ಹೇಳಿಬಿಟ್ಟರೆ ಮುಗಿಯಿತು. ಮುಂದೆ ಆ ಸಮಸ್ಯೆ ಬಗೆ ಹರಿದಂತೆಯೇ ಎಂಬ ನಂಬಿಕೆ. ಹಾಗಾಗಿ ಅವನು ಜ್ಯೋತಿ ತರಬಹುದಾಗಿದ್ದ ಶುಭ ಸಮಾಚಾರ ಕೇಳಲು ತುದಿಗಾಲ ಮೇಲೆ ನಿಂತಿದ್ದ. ಆಕೆಯ ದಾರಿ ಕಾಯ್ದು ಕಾಯ್ದು ಸಾಕಾಯಿತು. ಆರಾದರೂ ಇಲ್ಲ. ಏಳಾದರೂ ಅವಳ ಸುಳಿವೇ ಇಲ್ಲ. ಚೈತನ್ ಮ್ಲಾನವಾಗಿ ತನ್ನ ಚೀಲವನ್ನೆತ್ತಿಕೊಂಡು ಕಛೇರಿ ಬಾಗಿಲು ಹಾಕಿಕೊಂಡು ಕಾರ್ ಪಾರ್ಕ್ ಕಡೆ ನಡೆದನು. ಅವನ ಸಂಪಾದನೆಯ ನಾಲ್ಕನೇ ಒಂದು ಭಾಗ ಚೇತನಾ ವೃದ್ಧಾಶ್ರಮಕ್ಕೆ ಖರ್ಚಾಗುತ್ತಿತ್ತು. ಚೇತನಾ ವೃದ್ಧಾಶ್ರಮದ ಜೀವಿಗಳು ನಿತ್ಯವೂ ಏಳು ಗಂಟೆಗೆ ಮುಖ ತೋರಿಸುವ ತಮ್ಮ ಅನ್ನದಾತನಿಗಾಗಿ ಕಾಯುತ್ತಿರುತ್ತಾರೆ. ವೃದ್ಧರೊಂದಿಗೆ ನಿತ್ಯವೂ ಒಂದು ತಾಸು ಕಷ್ಟ ಸುಖಕ್ಕೆ ಕಿವಿಯಾಗುವ ಆತನಿಗೆ ಆ ಆಶ್ರಮವೆಂದರೆ ತನ್ನ ಶ್ರಮದ ಫಲ ಎಂಬ ಅಪಾರ ಹೆಮ್ಮೆ, ಮಮಕಾರ. ಅದೇ ವ್ಯಾಮೋಹದಿಂದ ಆಶ್ರಮದ ಕಡೆ ಕಾರು ಓಡಿಸಿದನು.
ಜ್ಯೋತಿ ಗ್ರಂಥಾಲಯದಿಂದ ಅಂದು ಚೈತನ್ನ ಕಛೇರಿಗೆ ಹೋಗಲಿಲ್ಲ. ನೇರವಾಗಿ ಮನೆಗೆ ಬಂದಳು. ಎರಡು ತಾಸು ಮುಂಚಿತವಾಗಿ ಬಂದ ಮೊಮ್ಮಗಳನ್ನು ಅಜ್ಜಿ ಪ್ರಶ್ನಾರ್ಥಕವಾಗಿ ನೋಡಿದಳು. ಅದನ್ನು ಅರ್ಥಮಾಡಿಕೊಂಡ ಅವಳು, “ಏನಿಲ್ಲಜ್ಜಿ, ಇವತ್ತು ಚೈತನ್ಗೆ ಭೇಟಿ ಕೊಟ್ಟಿಲ್ಲ. ಮನೆಗೆ ಬರಬೇಕೆನ್ನಿಸ್ತು. ಅದಕ್ಕೆ ಬೇಗ ಬಂದೆ” ಎಂದು ಕಣ್ಣು ಮಿಟುಕಿಸಿದಳು ತುಂಟತನದಿಂದ. “ಸರಿ ಬಿಡು, ಮುಖ ತೊಳೆದು ಬಾ. ಕಾಫಿ ಕೊಡ್ತೀನಿ” ಅಜ್ಜಿ ಅಡುಗೆ ಮನೆಗೆ ನಡೆದಳು. ಜ್ಯೋತಿ ಮುಖ ಒರೆಸಿಕೊಳ್ಳುತ್ತಾ ಅದೇ ಟವೆಲ್ಲನ್ನು ಅಜ್ಜಿಯ ಕುತ್ತಿಗೆಗೆ ಹಾಕಿ ಎಳೆದು ತಮಾಷೆ ಮಾಡುತ್ತಾ ನಿಂತಳು. ಅಜ್ಜಿ, “ಸಾಕು ನಿಲ್ಸೆ, ನಿಂದೊಳ್ಳೆದಾಯ್ತು ಅಂತೀನಿ. ನಿನ್ನ ವಯಸ್ನಾಗೆ ನಾನು ನಿಮ್ಮಮ್ಮನ್ನ ಹಡೆದಿದ್ದೆ” ಎಂದರು. “ಸರಿ ಬಿಡು ಒಳ್ಳೆದಾಯ್ತು, ನಾನೀಗ ಯಾರನ್ನ ಹಡೆಯಲಿ” ಜ್ಯೋತಿ ಅಜ್ಜಿಯ ಟೊಂಕ ಬಳಸಿ ಕೇಳಿದಳು. “ಥೂ ನಿನ್ನ, ಕೋತಿಯಂತವ್ಳೆ, ನಿನಗೆ ಶಾಸ್ತಿ ಮಾಡ್ತೀನಿ ಇರು” ಎನ್ನುತ್ತಾ ಕಾಫಿಯ ಕಪ್ಪನ್ನು ಅವಳಿಗೆ ಕೊಟ್ಟರು. ಕಾಫಿ ಕುಡಿದ ಬಳಿಕ ಒಂದು ನಿಮಿಷವೂ ನಿಲ್ಲದೆ ಜ್ಯೋತಿ ಹೊರಗೆ ಜಿಗಿದು ಓಡಿದಳು. ಹೊರಗೆ ಹೋಗಿ ಚಪ್ಪಲಿ ಹಾಕಿಕೊಂಡು, “ಅಜ್ಜಿ ಹುಡುಕೂದ ಬ್ಯಾಡ. ನಾನು ಅನುಶ್ರೀ ಮನೆಗೆ ಹೋಗ್ತಾ ಇದ್ದೀನಿ” ಎನ್ನುತ್ತಲೆ ಹೊರಟು ಹೋದಳು. “ಒಳ್ಳೆ ಹುಡುಗಿ, ಇದೊಂದು ಜೀವ ಇರದಿದ್ದರೆ ತಾನು, ತನ್ನ ಗದ್ದೆ, ಮನೆ ಯಾವುದಕ್ಕೆ ಬೆಲೆ ಇರುತ್ತಿತ್ತು?…” ಎಂದು ಅಜ್ಜಿ ತೀರಿಹೋದ ಮಕ್ಕಳನ್ನು ನೆನೆದು ಕಣ್ಣೊರೆಸಿಕೊಂಡಿತು. ಜ್ಯೋತಿ ಬೇಗನೆ ಕಣ್ಣಿಗೆ ಬಿದ್ದುದು ಶಶಿ ಸ್ಟೋರ್ನ ಕೆಂಪಮ್ಮನಿಗೆ ಖುಷಿ ಎನ್ನಿಸಿತು. “ಏನೇ ಇವತ್ತು ಅಜ್ಜೀನ ಗೋಳು ಹುಯ್ಕಾಳ್ಳಾಕೆ ಬ್ಯಾಗ್ಬಂದ್ಯಾ” ಎಂದಳು ಅಕ್ಕರೆಯಿಂದ. ಜ್ಯೋತಿ ಅಲ್ಲೇ ಚೀಲದಲ್ಲಿರಿಸಿದ ಹುರಿಗಡಲೆ ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುತ್ತಾ, “ನಿನಗೆಲ್ಲೋ ಭ್ರಮೆ ಅಜ್ಜಿ, ನಾನು ಬೇಗ ಬಂದ್ರೆ ನೀವಿಬ್ರೂ ಹೊಟ್ಟೆಕಿಚ್ಚುಪಟ್ಕೊತೀರಿ, ನಿನ್ನಕ್ಕನ್ನ ನಾನೇನೂ ಮೂಸಿ ನೋಡಿಲ್ಲ. ಆಕೆಗೇನಾದ್ರೂ ತೊಂದ್ರೆ ಕೊಟ್ಟಿದ್ದೇನಾ ಅಂತ ನೀನೇ ಹೋಗಿ ಖಾತ್ರಿ ಮಾಡ್ಕೊ” ಅಂತ ಕೆಂಪಮ್ಮನಿಗೆ ಕಣ್ಣು ಮಿಟುಕಿಸಿ, “ನಾನು ಅನುಶ್ರೀ ಹತ್ರ ಹೋಗ್ತೀನಿ. ಆಮ್ಯಾಲೆ ಬರ್ತೀನಿ ಇರು” ಎಂದು ತನ್ನ ಹೆರಳನ್ನು ತಿರುವುತ್ತಾ ನಡೆದಳು.
ಪಾತ್ರೆ ತೊಳೆದಿಟ್ಟು ಕೈ ಒರೆಸಿಕೊಳ್ಳುತ್ತ ನಿಂತಿದ್ದಳು ಅನು. ಬಾಗಿಲು ಬಡಿದ ಸದ್ದಿಗೆ ಕಿವಿಗೊಟ್ಟಳು. “ಅಪ್ಪ ಇವತ್ತು ಲಗೂನ ಬಂದಂಗೈತಿ”ಎಂದುಕೊಂಡು ಕಿಟಕಿಯಲ್ಲಿ ಹಣಿಕಿ ನೋಡಿದಳು. ‘ದಿನಾಲೂ ಆ ಚೆಂದನ್ನ ಹುಡುಗನ ಕೂಡ ಹೋಗಿ ಬರುವಾಗ ಕಾಣಿಸುತ್ತಾಳಲ್ಲ ಆಕಿ ಈ ಹುಡುಗಿ’ ಎಂದುಕೊಂಡು ಬಾಗಿಲು ತೆರೆದು, ‘ರ್ರಿ ಒಳಗ’ ಎಂದಳು. ಆಕೆ ಒಳಬಂದಳು ಮುಗುಳ್ನಗುತ್ತಾ. ಅನುಶ್ರೀ ಒಂದು ಚಾಪೆಯನ್ನು ಹಾಸಿ, “ಕುಂತ್ಕೊರಿ” ಎಂದಳು ವಿನಮ್ರತೆಯಿಂದ. ಅನುಶ್ರೀ ತಾನು ಕುಳಿತು ಆಕೆಗೂ ಕುಳಿತುಕೊಳ್ಳಲು ಕೇಳಿದಳು. ಮುಖ ತೊಳೆದುಕೊಂಡು, ದೀಪ ಹಚ್ಚಿ ಬರುವುದಾಗಿ ಅನುಶ್ರೀ ಒಳಗೆ ಹೋದಳು. ಜ್ಯೋತಿ ಎದ್ದು ಮನೆಯನ್ನು ನೋಡಿದಳು. ಇದ್ದಷ್ಟೇ ಸಾಮಾನು, ಸರಂಜಾಮುಗಳನ್ನು ಅಚ್ಚುಕಟ್ಟಾಗಿ ಹೊಂದಿಸಿದ್ದಳು. ಹೊಂದಿಸಿಟ್ಟಿದ್ದ ಕಟ್ಟಿಗೆ ನೋಡಿ ಸೌದೆ ಒಲೆ ಬಳಸುತ್ತಾಳೆಂದುಕೊಂಡಳು.
ಅಷ್ಟರಲ್ಲಿ ಅನು ಬಂದು ಜ್ಯೋತಿಯ ಮುಂದೆ ಕುಳಿತಳು. ಜ್ಯೋತಿಯೇ ಮಾತಿಗೆ ಶುರುವಿಟ್ಟಳು. “ನನ್ನ ಹೆಸ್ರು ಜ್ಯೋತಿ. ನಿಮ್ಮ ಬಗ್ಗೆ ನಮ್ಮಜ್ಜಿ ಕೆಂಪಮ್ಮ ಸ್ವಲ್ಪ ಹೇಳಿದ್ದಾರೆ. ನನಗೆ ಸಮಯದ ಕೊರತೆ. ಹಾಗಾಗಿ ಬರೋದಿಕ್ಕೆ ಆಗಿರಲಿಲ್ಲ. ಇವತ್ತು ನಿಮ್ಮ ಹತ್ರ ಮಾತಾಡೋಕ್ಕಂತ್ಲೇ ಬೇಗ ಬಂದಿದೀನಿ” ಎಂದಳು. ಅನುಶ್ರೀ ಸ್ನೇಹದಿಂದ ನಕ್ಕಳು. “ಚೊಲೊ ಆತ್ಬಿಡ್ರಿ. ನಿಮ್ಮನ್ನ ನೋಡಿದ್ದೆ ನಾನು. ಆದ್ರ ಮಾತಾಡೂ ಸಂದರ್ಭನಾ ಬಂದರ್ಲಿಲ್ಲ” ಎಂದು ನಕ್ಕಳು. ಈ ಹಳ್ಳಿ ಹುಡುಗಿಯ ಸ್ನಿಗ್ಧ ಸೌಂದರ್ಯ ಕಂಡು ಜ್ಯೋತಿಗೆ ಸೋಜಿಗವೆನಿಸಿತು. ಮುಂದೇನು ಮಾತಾಡಬೇಕೆಂದು ತೋಚದೇ ಇಬ್ಬರೂ ಕೆಲವು ಕ್ಷಣ ಸುಮ್ಮನೆ ಕುಳಿತರು. ಜ್ಯೋತಿ ಕೇಳಿದಳು, “ನಿಮಗೆ ಮದುವೆ ಗೊತ್ತಾಗಿದೆಯಾ?” “ಯಾರದು ಅಂತ ಕೇಳಾಕ್ಹತ್ತೀರಿ?” ಪರಸ್ಪರರ ಮಾತುಗಳು ಪೂರ್ಣವಾಗಿ ಪರಸ್ಪರರಿಗೆ ಅರ್ಥವಾಗುತ್ತಿಲ್ಲ. ಅದನ್ನು ಗ್ರಹಿಸಿದ ಜ್ಯೋತಿ, “ಅಲ್ಲಾ ಅನುಶ್ರೀ ನಿಮಗೆ ಮದುವೆ ಹುಡುಗನ್ನ ಗೊತ್ತು ಮಾಡಿದಾರಾ ನಿಮ್ಮ ತಂದೆ?” ಎಂದಳು. “ಇಲ್ಲ ಬಿಡ್ರಿ” ಅನು ಉತ್ತರಿಸಿದಳು. “ನಿಮಗೆಷ್ಟು ವಯಸ್ಸು” ಜ್ಯೋತಿಯ ಪ್ರಶ್ನೆ. “ನನಗೀಗ ಹದಿನೇಳು ನಡೆಯಾಕ್ಹತೈತ್ರಿ”, “ಓದುವುದನ್ನು ಯಾಕೆ ಬಿಟ್ರಿ?” ಜ್ಯೋತಿಯ ಪ್ರಶ್ನೆ ಅನುಶ್ರೀಗೆ ಸ್ವಲ್ಪ ದುಃಖ ತರಿಸಿತು. ಆಕೆಯ ಕಣ್ಣುಗಳು ಹನಿಗೂಡಿದವು. ಜ್ಯೋತಿ ತಾನು ಹಾಗೆ ಕೇಳಬಾರದಿತ್ತು ಎಂದುಕೊಂಡು, “ಸಾರಿ ಅನು, ನಿನಗೆ ಬೇಜಾರಾಗಿದ್ರೆ ಕ್ಷಮಿಸು. ಆದ್ರ ನನಗೆ ತಿಳ್ಕೊಬೇಕು ಅನ್ನಿಸ್ತು” ಎಂದಳು. ಆಕೆ ತನಗಿಂತ ದೊಡ್ಡಾಕೆ, ಓದಿದಾಕೆ ಎಂದುಕೊಂಡು, “ಇಲ್ಲ ಬಿಡ್ರಿ ಬ್ಯಾಸರೇನಾಗಿಲ್ಲ. ನಮಗ ಪರಿಸ್ಥಿತೀನಾ ಹಾಗ್ಬಂದ್ವು…” ಎಂದು ತನ್ನ ಮನೆ ತಾಯಿ, ತಂದೆ, ಊರು, ಜನರ ಬಗ್ಗೆ ವಿವರವಾಗಿ ಹೇಳಿದಳು. ಆಕೆ ಅದೆಲ್ಲವನ್ನೂ ಹೇಳುವಾಗ ನಡುನಡುವೆ ದುಃಖ ಉಮ್ಮಳಿಸಿ ದಾವಣಿಯಿಂದ ಕಣ್ಣೊರೆಸಿಕೊಳ್ಳುತ್ತಿದ್ದಳು. ತೀರ ಬಿಕ್ಕಳಿಕೆ ಬಂದಾಗ ಸುಮ್ಮನಾಗಿ ಮತ್ತೆ ಹೇಳುತ್ತಿದ್ದಳು. ಜ್ಯೋತಿಗೆ ಅನುಶ್ರೀಯ ಕರುಣ ಕಥೆ ಕೇಳಿ ಬಹಳ ದುಃಖವಾಯಿತು. ಅವಳ ದುಂಡುಗೆನ್ನೆಯ ಮೇಲೆ ಧಾರಾಕಾರವಾಗಿ ಕಂಬನಿ ಸುರಿಯತೊಡಗಿತ್ತು. ಅನುಶ್ರೀಗೆ ಇದು ಗಮನಕ್ಕೆ ಬರುವ ಹೊತ್ತಿಗೆ ತನ್ನ ಹಿಂದಿನ ಕಥೆಯನ್ನು ಹೇಳಿ ಮುಗಿಸಿಯಾಗಿತ್ತು.
“ಜ್ಯೋತಿ” ಎಂದು ಅನು ಆಕೆಯ ಭುಜ ಹಿಡಿದು ಅಲುಗಿಸಿದಾಗ ಜ್ಯೋತಿ ವಾಸ್ತವಕ್ಕೆ ಬಂದಳು. ಆಕೆ ಕಣ್ಣೊರೆಸಿಕೊಂಡು ಅನುಶ್ರೀಯ ಕೈಯನ್ನು ಪ್ರೀತಿಯಿಂದ ಹಿಡಿದು, “ಅನು ನನ್ನ ಬೇರೆ ಅಂತ ಭಾವಿಸಬೇಡ. ಈ ಅಂಗಡಿಯ ಪಕ್ಕದ ಮನೆ ನಮ್ಮದು. ಅಜ್ಜಿ ಜೊತೆ ಇದ್ದೇನೆ. ನಿನಗೆ ಏನೇ ಸಹಾಯ ಬೇಕಾದ್ರೂ ಸಂಕೋಚವಿಲ್ಲದೇ ಕೇಳು. ನಾನು ಇಲ್ಲಿರೂತನಕ ನಿನಗೆ ಯಾವುದೇ ಭಯ ಇಲ್ಲಂತ ತಿಳ್ಕೊ. ನಾನೀಗ ಬರಲಾ?” ಎಂದು ಮೇಲೆದ್ದಳು. “ಅಲ್ಲಾ, ಕುಂತ್ಕೊರಿ, ಸ್ವಲ್ಪ ಚಾ ಮಾಡ್ತೀನಿ” ಅನುವಿನ ಮೃದುಯಾಚನೆಯನ್ನು ತಿರಸ್ಕರಿಸಲಾಗದೇ ಜ್ಯೋತಿ, “ ಬಾ ಹಾಗಾದ್ರೆ, ಚಾ ಕೊಡು ಕುಡಿದು ಹೋಗ್ತೀನಿ” ಎನ್ನುತ್ತಾ ಅಡುಗೆ ಮನೆಗೆ ತಾನೂ ನಡೆದಳು.
ಮುಂದುವರೆಯುವುದು
–ಹಟ್ಟಿ ಸಾವಿತ್ರಿ ಪ್ರಭಾಕರಗೌಡ