ದಿಕ್ಕುಗಳು (ಭಾಗ 12): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಕೆಲವು ನಿಮಿಷ ನಿದ್ರಿಸುತ್ತ, ಒಮ್ಮೊಮ್ಮೆ ಬೆಚ್ಚಿ ಬೀಳುತ್ತಾ ಬಡಬಡಿಸಿ, “ಲೇಯ್ ನಿಂಗೆಷ್ಟೇ ಕಾಯ್ಬೇಕೂ…” ಅಂತ ಏನೇನೋ ಕನವರಿಸುತ್ತಾ ಅಜಿಯ ನಿದ್ರೆಯನ್ನೂ ಕೊಂದು ಹಾಕಿದ್ದಳು ಜ್ಯೋತಿ. ಹೊರಗೆ ಹಕ್ಕಿಗಳ ಚಿಲಿಪಿಲಿ ಇನಿಧ್ವನಿ, ಗಾಡಿ ಮೋಟಾರುಗಳ ಸದ್ದು ಜ್ಯೋತಿಗೆ ಸಂಪೂರ್ಣ ಎಚ್ಚರವಾಗುವಂತೆ ಮಾಡಿದ್ದವು. ಎಚ್ಚರವಾದರೂ ರಾತ್ರಿಯೆಲ್ಲಾ ಅರೆಬರೆ ನಿದ್ರಿಸಿದ್ದರಿಂದ ಮೈ ಜಡವಾಗಿತ್ತು. ಮನಸು ಭಾರವಾಗಿತ್ತು. ಊರಿಗೆ ಹೋಗಿರುವ ಶಂಕರನಿಂದ ಇನ್ನೂ ಯಾವುದೇ ವಿಷಯ ತಿಳಿದಿಲ್ಲ. ತಲೆ ಚಿಟಿ ಚಿಟಿ ಅನ್ನುತ್ತಿದೆ. ಎದ್ದು ಸೀದಾ ಬಚ್ಚಲು ಮನೆಗೆ ಸಾಗಿದಳು. ಹಂಡೆಯ ನೀರನ್ನು ಖಾಲಿ ಮಾಡಿ ಶುಚಿಗೊಳಿಸಿ ಶುದ್ಧವಾದ ನೀರನ್ನು ತುಂಬಿಸಿ ಒಲೆಗೆ ಸೌದೆ ತುರುಕಿ ಬೆಂಕಿ ಹಾಕಿದಳು. ಒಣಗಿದ ತೆಂಗಿನ ಚಿಪ್ಪು ಕರಟ ಚಿಟ್ ಚಿಟರ್ ಅಂತ ಆಗೀಗ ಸದ್ದು ಮಾಡುತ್ತಾ ದಿಗ್ ದಿಗ್ ಅತ ಉರಿಯಹತ್ತಿದವು. ನೀರು ಕಾಯತೊಡಗಿತು. ಮತ್ತಷ್ಟು ಸೌದೆಯನ್ನು ಒಲೆಗೆ ತುಂಬಿ ಅಜ್ಜಿ ಇರುವಲ್ಲಿಗೆ ಹೋಗಿ ಆಕೆಯ ತಲೆತಯ ಬದಿ ಕುಳಿತಳು. ಯಾಕೊ ಅಜ್ಜಿ ಇನ್ನೂ ಮಲಗಿದೆ ಮಲಗಿಕೊಳ್ಳಲಿ ಬಿಡು ಎಂದುಕೊಂಡು ಆಕೆಯ ಹಣೆ ತಲೆ ನೇವರಿಸಿದಳು. ಆಕೆಯ ಮೃದು ಸ್ಪರ್ಶ ಆ ಹಿರಿಯ ಜೀವದ ನಿದ್ದೆಯನ್ನು ಓಡಿಸಿ ಎಚ್ಚರಗೊಳಿಸಿತ್ತು. “ಅಯ್ಯೊ ತಾಯಿ/ ಸೂರ್ಯ ನೆತ್ತೀ ಮ್ಯಾಲೆ ಬಂದವ್ನೆ. ಇಂಗೆ ಹಾಳಾದ ನಿದ್ದೆ ಮಾಡ್ಬಿಟ್ಟೆ” ಎನ್ನುತ್ತ ಅಜ್ಜಿ ಎದ್ದು ಕುಳಿತರು.

“ನಾನು ಒಂದೈದು ನಿಮಿಷ ಟೆರೇಸ್ ಮೇಲರ್ತೀನಿ ಅಜ್ಜಿ” ಎಂದು ಆಕೆಯ ಉತ್ತರಕ್ಕೂ ಕಾಯದೇ ಜ್ಯೋತಿ ತನ್ನ ಮೊಬೈಲ್ನೊಂದಿಗೆ ಮಾಳಿಗೆ ಏರಿದಳು. ಅವಳಿಗೆ ಎಂದಿನಂತೆ ಸೂರ್ಯೋದಯದ ಸೊಬಗಿನಲ್ಲಿ , ಬೆಳಗಿನ ಹಕ್ಕಿಗಳ ಕಲರವದಲ್ಲಿ ಆಗಸದ ಹೊಂಬಣ್ಣದಲ್ಲಿ, ಮುಸುಕಿರುವ ತಂಪಾದ ಗಾಳಿಯಲ್ಲಿ, ನಿಧಾನಕ್ಕೆ ನಿಗುಚಿಕೊಳ್ಳುತ್ತಿರುವ ಮರದೆಲೆಗಳಲ್ಲಿ, ಘಮ್ ಅಂತ ಗಾಳಿಯಲ್ಲಿ ತೇಲಿ ಬರುವ ಸಂಪಿಗೆ, ದುಂಡು ಮೊಗ್ಗು, ಗುಲಾಬಿ, ಜಾಜಿ ಮೊಲ್ಲೆಯ ಪರಿಮಳದಲ್ಲಿ ಮನಸ್ಸನ್ನು ಹಿಡಿದಿಡುವ ಆಸಕ್ತಿ ಇಲ್ಲ. ಅವಳ ಚಿಗುರು ಬೆರಳು ಚಕ ಚಕನೆ ಮೊಬೈಲ್ ಗುಂಡಿಗಳ ಮೇಲೆ ಓಡಾಡಿತು. ಶಂಕರ ಅತ್ತ ಕಿಣಿಗುಟ್ಟಿದ ತನ್ನ ಮೊಬೈಲ್ನು÷್ನ ಕಿಸೆಯಿಂದ ಹೊರತೆಗೆದನು. ಜ್ಯೋತಿಯ ಕರೆ! ಇವಳು ತಮ್ಮೆಲ್ಲರಿಗಿಂತ ಸ್ವಲ್ಪ ಜಾಸ್ತಿಯೇ ಲಲಿತಳಿಗಾಗಿ ಕೊರಗುತ್ತಿದ್ದಾಳೆ. ಏಳೆಂಟು ವರ್ಷಗಳಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವ ಗೆಳೆತನದ ಬೇರುಗಳು ಸುಮ್ಮನೆ ಒಣಗಿ ಹೋಗಲಾರವು. ಆತ್ಮಶಕ್ತಿಯ, ಅಮೃತ ಸ್ಪರ್ಶದ ಬಿಗಿ ಬಂಧನದಲ್ಲಿರುವ ಈ ಗೆಳೆತನ ಮುರುಟಲಾರದು.

ಆದರೆ ಮತ್ತೆ ನಲಿವನ್ನು ತುಂಬಿಕೊಡುವ ಲಲಿತೆಯÀ ಸಾನಿಧ್ಯ ತಮಗೆಲ್ಲಾ ಸಿಕ್ಕೀತೆ?! ಕಾಲವೇ ಉತ್ತರಿಸಬೇಕು ಎಂದುಕೊಂಡನು ಶಂಕರ್. ಮೊಬೈಲ್ ಒಂದೆ ಸಮನೆ ಚೀರತೊಡಗಿದಾಗ ಅವನು ಕರೆಯನ್ನು ಸ್ವೀಕರಿಸಿದನು. “ಹಲೋ ಶಂಕರ್! ಏನು, ಏನಾಯ್ತು ಹೇಳು ಅವಳ ಸುಳಿವು ಸಿಕ್ಕಿತಾ, ಇದ್ದಳಾ, ಇಲ್ವಾ?!” ಜ್ಯೋತಿ ತನ್ನ ಮನದಾಳದ ಧಾವಂತ ದುಗುಡಗಳನ್ನೆಲ್ಲಾ ಬೆರೆಸಿ ಕೇಳಿದಳು.
“ಜ್ಯೋತಿ, ಗಾಬರಿ ಬೀಳಬೇಡ್ವೆ! ಅವಳು ತನ್ನ ಊರಿಗೆ ಹೋಗಿಲ್ಲ ಕಣೆ! ಒಂದು ತಿಂಗಳ ಹಿಂದೆ ಶಾಮಣ್ಣನಿಗೆ ಪತ್ರ ಬರೆದು ಹಾಕಿದ್ದಾಳೆ. ಬೆಂಗಳೂರ್ ಪೋಸ್ಟ್ನಿಂದಲೇ. ತನ್ನ ತಾಯಿ ಬಸಮ್ಮನರ್ಗೆ ಹಣ ಕಳುಹಿಸಿದ್ದಾಳೆ. ಬಹುಶಃ ಇದಾದ ಒಂದೆರಡು ದಿನಗಳಲ್ಲಿ ಅವಳು ಬೆಂಗಳೂರಿನಿಂದ ನಿರ್ಗಮಿಸಿರಬಹುದು ಅಥವಾ ನಮಗೆ ಸಿಕ್ಕದ ಹಾಗೆ ಇಲ್ಲಿಯೇ ಬೇರೆ ಕಡೆ ಉಳಿದುಕೊಂಡಿರಲೂ ಸಾಕು” ಶಂಕರನ ಧ್ವನಿಯಲ್ಲಿ ಸಾವಧಾನ ಇತ್ತು.
“ಇದು ಬಗೆಹರಿಬೇಕೆಂದ್ರೆ ಏನಾದ್ರೂ ಕ್ರಮ ತೆಗೆದುಕೊಳ್ಳಬೇಕು ಶಂಕರ್! ನನಗೆ ಭಯ ಆಗ್ತಾ ಇದೆ”

“ತಾಳು ಜ್ಯೋತಿ. ನೀನೇ ಹಿಂಗೆ ಧೈರ್ಯಗೆಟ್ರೆ ಹೆಂಗೆ? ನಾನು ಇನ್ನೊಂದು ತಾಸಿನಲ್ಲಿ ಊರಿಗೆ ತಲುಪುತ್ತೇನೆ. ಮನೆಗೆ ಹೋಗಿ ಸ್ನಾನ ಮಾಡ್ಕೊಂಡು ಬರ್ತೀನಿ. ಕಾಯ್ತಾ ಇರು. ಇವತ್ತು ಹೇಗೂ ಭಾನುವಾರ ಅಲ್ವಾ? ಚೈತನ್ ಅನುಶ್ರೀಗೂ ಭೇಟಿಯಾಗೋಣ. ಆರಾಮಾಗಿರು. ಜಾಸ್ತಿ ಚಿಂತಿಸಬೇಡ. ನಿನ್ನ ಆರೋಗ್ಯದ ಕಡೆ ಗಮನ ಇರಲಿ”
“ಆಂತಯ್ತು ಬೇಗ ಬಂದು ಬಿಡು” ಜ್ಯೋತಿಯ ಧ್ವನಿಯಲ್ಲಿ ಆತುರವಿತ್ತು.

*

ಅನುಗೆ ಎಚ್ಚರವಾದಾಗ ರೇಡಿಯೋದಲ್ಲಿ ವಾರ್ತೆ ಕೇಳಿ ಬರುತ್ತಾ ಇತ್ತು. ಗಡಿಯಾರ ನೋಡಿದಳು. ಏಳು ಗಂಟೆ ಹೊಡೆದಿತ್ತು. ಸೂರ್ಯನ ಎಳೆಯ ಕಿರಣಗಳು ಕಿಟಕಿ ಮೂಲಕ ಹಾಯ್ದು ಅನುಶ್ರೀಯ ಕಣ್ಣಿನ ಜೊತೆ ಚೆಲ್ಲಾಟವಾಡುತ್ತಿವೆ. ಚೈತನ್ನ ಹಾಸಿಗೆ ದಿಂಬು ಅಚ್ಚುಕಟ್ಟಾಗಿ ತಮ್ಮ ಜಾಗದಲ್ಲಿ ಸೇರಿಸಲ್ಪಟ್ಟಿವೆ. ಇವನೆಲ್ಲಿ ಹೋದನು ಎಂದು ಈಕೆ ಕಣ್ಣುಜ್ಜಿಕೊಂಡು ಕಿಡಕಿಯ ಹೊರಗೆ ಇಣುಕಿದಳು. ಅವನಾಗಲೇ ಸಣ್ಣಗೆ ಸಿಳ್ಳು ಹಾಕುತ್ತಾ ಗಿಡಬಳ್ಳಿಗಳಿಗೆ ನೀರುಣಿಸುತ್ತಿದ್ದಾನೆ. ಏನೋ ಕಸ ಗುಡಿಸುವ ಸಪ್ಪಳ ಕೇಳಿ ಪಕ್ಕದ ಕೊಟಡಿಯ ಕಡೆ ನಡೆದು ಇಣುಕಿದಳು. ಹೊಸದಾಗಿ ಕೆಲಸಕ್ಕೆ ಸೇರಿದ ಸುಮಾರು ಹದಿನಾರರ ಕಿಶೋರನೊಬ್ಬ ಕಸ ಗುಡಿಸುತ್ತಿದ್ದಾನೆ. ಕಾಲ್ಗೆಜ್ಜೆ ಸದ್ದು ಆಲಿಸಿ ಹುಡುಗ ತಿರುಗಿ ನೋಡಿದನು. ಆವಾಕ್ಕಾದನು. “ಈಯಮ್ಮ ಚೈತನ್ ಅಣ್ಣಂಗಿಂತ ಎಷ್ಟು ಚೆನ್ನಾಗವ್ಳೆ. ಅಣ್ಣಂಗೇನಾಗಬೇಕಿವುö್ರ…” ಎಂದು ತನ್ನೊಳಗೆ ತರ್ಕಿಸಿಕೊಂಡು ಮತ್ತೆ ತನ್ನ ಕೆಲಸಕ್ಕೆ ಗಮನ ಕೊಟ್ಟನು.

ಆ ಹೊತ್ತಿಗೆ ಚೈತನ್ನ ತೋಟದ ಕೆಲಸ ಮುಗಿಯುತ್ತಾ ಬಂದಿತ್ತು. ಅವನ ತಲೆಯಲ್ಲೂ ಲಲಿತಳದೆ ಕೊರೆಯತೊಡಗಿತ್ತು. ಯಾಕಾಗಿ ಹೋಗಿರುವಳು ಯಾರಿಗೂ ಹೇಳದೆ? ಬಹುಶಃ ತನ್ನ ಸ್ನೇಹಿತರ ವಿಷಯದಲ್ಲಿ ಯಾರೂ ಇತರರಿಗೆ ಬೇಡವಾದವರಿಲ್ಲ. ಅಂತಹುದರಲ್ಲಿ ಯಾರಿಂದಲಾದರೂ ಆಕೆಗೆ ಏನಾದರೊ ಅಪಾಯ ಬಂದೊದಗಿದ್ದರೆ? ಯಾಕಾಗಿರಬಾರದು? ತಮಗೆ ತಿಳಿಯದೆ ಯಾರಾದರೂ ಹಿತಶತೃಗಳು ಹುಟ್ಟಿಕೊಂಡಿರಲೂ ಬಹುದು. ಹೇಗೂ ಇವತ್ತು ಶಂಕರ್ ಶಾಮಣ್ಣನ ಮನೆಯಿಂದ ಬರುತ್ತಿದ್ದಾನೆ. ಅವನಿಂದ ಇನ್ನೂ ಕರೆ ಬಂದಿಲ್ಲ. ತಾನೇ ಸಂರ್ಕಿಸಿದರಾಯಿತು ಎಂದುಕೊಂಡನು. ಒಂದು ವೇಳೆ ಶಂಕರ್ ಸಕಾರಾತ್ಮಕ ಉತ್ತರವನ್ನು ತಂದಿದ್ದರೆ ತಾನು ಸ್ವಲ್ಪ ಸಮಯದ ಮುಂಚೆ ಯೋಚಿಸಿದ್ದೇ ನಿಜವಾಗಿ ಹೋಗಿದ್ದರೆ? ಏನೇ ಇರಲಿ. ಶಂಕರನ ಹತ್ತಿರ ಮಾತಾಡಿದ ಮೇಲೆ ವಿಷಯ ಏನು ಅಂತ ತಿಳಿದ ಮೇಲೆ ಮುಂದಿನ ನರ್ಧಾರವನ್ನು ತೆಗೆದುಕೊಳ್ಳುವುದೆಂದು ಯೋಚಿಸಿದನು, ಎಂಜಿನ್ ಬಂದ್ ಮಾಡಿ ನೀರಿನ ಪೈಪನ್ನು ಸುತ್ತಿಟ್ಟು ಒಳಬಂದನು. ಅನುವಿನ ನೆನಪಾಗುತ್ತಲೆ ಅವಳು ತನ್ನ ಬಾಳಿನಲ್ಲಿ ಚಿಗುರುತ್ತಿರುವ ಆಶಾಕಿರಣ ಎಂದುಕೊಂಡು ಅವಳನ್ನು ಹುಡುಕಿಕೊಂಡು ತನ್ನ ಕೋಣೆಗೆ ಹೋದನು. ಆಕೆ ಅಲ್ಲಿಲ್ಲ. ಸ್ನಾನದ ಕೋಣೆಗೆ ಹೋಗಿರಬೇಕೆಂದುಕೊಂಡು ಅಡುಗೆ ಮನೆಗೆ ಬಂದನು.

ಅನು ಸದ್ದು ಮಾಡದೆ ಪಾತ್ರೆ ಉಜ್ಜಿ ತೊಳೆದು ಇಡುತ್ತಾ ಇದ್ದಳು. ಚೈತನ್ ಮೆಲ್ಲನೆ ಬಂದು ಅವಳ ಕಣ್ಣು ಮುಚ್ಚಿದ. ಈ ಮನೆಯಲ್ಲಿ ಏನೇ ಕಿಲಾಡಿತನ ನಡೆದರೂ ಅದು ಇವನದೇ ಅಲ್ಲವೇ ಎಂದುಕೊಂಡಳು ಹುಡುಗಿ. ಕೈಯನ್ನು ಒರೆಸಿಕೊಂಡು, “ಯಾರವ್ರು ಕಣ್ಣು ಮುಚ್ಚಿದ್ದು ಬಿಡ್ತೀರೇನಿಲ್ಲ” ಎಂದು ಗದರುವ ಧಾಟಿಯಲ್ಲಿ ಕೇಳುತ್ತ ಅವನ ಕೈ ಸಡಿಲಿಸಲು ಪ್ರಯತ್ನಿಸಿದಳು. “ಕಳ್ಳ” ಎನ್ನುತ್ತ ಅವನ ನೀಳ ಮೂಗನ್ನು ಹಿಂಡಿದಳು ಅಚ್ಛೆಯಿಂದ. ಚೈತನ್ ಸ್ನಾನ ಮಾಡಿ ತಯಾರಾಗುವ ಹೊತ್ತಿಗೆ ಅವನ ಸೆಲ್ ಫೋನ್ ಕಿಣಿಗುಟ್ಟತೊಡಗಿತ್ತು. ಶಂಕರನ ಕರೆ. ಒಂದು ರೀತಿಯ ಆತುರದಿಂದಲೆ ಫೋನೆತ್ತಿಕೊಂಡ. “ಹಲೊ ಶಂಕರ್! ಎಲ್ಲಿದ್ದೀಯ?” “ಇಲ್ಲಿಗೆ ಬಂದಿದ್ದೀನಿ. ಮನೇಲಿದ್ದೀನಿ. ನೀನೆಲ್ಲಿದ್ದೀಯ?” “ನಾನೂ ಮನೇಲೇ ಇದ್ದೀನಿ”. “ಇವತ್ತು ಭಾನುವಾರ ಅಲ್ವ? ಸ್ವಲ್ಪ ಸಮಯ ನಮ್ಮದೇ ಕೆಲಸಕ್ಕಿರಲಿ. ಲಲಿತಾ ಊರಿಗೂ ಹೋಗಿಲ್ಲ ಹಾಗಾಗಿ ಇನ್ನು ಬೇರೆ ಯೋಚ್ನೆ ಮಾಡೋದೊಳ್ಳೇದು”. “ನಾನೂ ನಿನ್ನ ಹತ್ತಿರ ವಿಷಯ ತಿಳ್ಕೊಂಡು ಯೋಚಿಸಿದರಾಯ್ತೆಂದುಕೊಂಡಿದ್ದೆ. ಮಾತಾಡೋಣ. ಜ್ಯೋತಿ ಸಹ ಕಳವಳದಿಂದ ನೊಂದುಕೊಳ್ಳುತ್ತಿದ್ದಾಳೆ.
“ಅದ್ಸರಿ. ನಾನು ಹನ್ನೆರಡು ಗಂಟೆಗೆ ನಿನ್ನ ಆಫೀಸಿನ ಮುಂದೆ ಇರುತ್ತೇನೆ. ಜ್ಯೋತಿಗೂ ತಿಳಿಸು”.

“ಸರಿ ಸರಿ. ನಾವಿಬ್ರೂ ಅಷ್ಟು ಹೊತ್ತಿಗೆ ಅಲ್ಲಿಗೆ ರ್ತೀವಿ”.
ಅನುಶ್ರೀ ಚೈತನ್ ನ ಕಡೆಗೆ ಬಂದಳು. ಬೆಡ್ ರೂಮ್ನಲ್ಲಿ ಕನ್ನಡಿ ಮುಂದೆ ನಿಂತು ಕ್ರಾಸ್ ಸರಿಪಡಿಸಿಕೊಳ್ಳುತ್ತಿದ್ದ ಅವನು ತನ್ನ ಕಂದಿದ ಮುಖದ ಮೇಲೆ ನಗೆಯನ್ನೆಳೆದು ತರಲು ಯತ್ನಿಸುತ್ತಿದ್ದ . ಅವಳು ತನ್ನಡೆಗೆ ಬರುತ್ತಿರುವುದನ್ನು ಕನ್ನಡಿಯಲ್ಲೇ ಕಂಡಿದ್ದ. ಆದರೆ ಲಲಿತಾ ತನ್ನ ಊರಲ್ಲಿಯೂ ಇಲ್ಲದಿರುವುದು ಖಚಿತವಾದದ್ದು ಚೈತನ್ ನನ್ನು ಮುಂದಿನ ಯೋಚೆನೆಗೆ ದೂಡಿತ್ತು.

ಅನುಶ್ರೀ ಕೆಲವೇ ದಿನಗಳಲ್ಲಿ ಸಂಕೋಚದಿಂದ ಬಹಳಷ್ಟು ಮುಕ್ತಳಾಗಿದ್ದಳು. ಅವಳು ಚೈತನ್ ನ ಹತ್ತಿರಕ್ಕೆ ಸಾಗಿ ಅವನ ಬಲಿಷ್ಠ ಹಸ್ತವನ್ನು ತನ್ನೆರಡೂ ಕೈಗಳಿಂದ ಹಿಡಿದಕೊಂಡು ಅವನ ಮುಖವ್ನೇ ದಿಟ್ಟಿಸಿದಳು. ಅವನ ತುಟಿಗಳು ಅರಳಿದರೂ ಕಣ್ಣುಗಳು ನಿಃಸ್ತೇಜವಾಗಿರುವುದನ್ನು ಗಮನಿಸಿ ತಾನೂ ಮುಖ ಸಪ್ಪಗೆ ಮಾಡಿಕೊಂಡಳು. ಚೈತನ್ ಅದನ್ನು ತಿಳಿದು ಅವಳ ಭುಜದ ಸುತ್ತ ಕೈ ಹಾಕಿಕೊಂಡು, “ಯಾಕೆ ಅನು? ಏನು ಯೋಚನೆ?” ಎಂದು ಕೇಳುತ್ತಲೆ ಅವಳೊಂದಿಗೆ ಡೈನಿಂಗ್ ಟೇಬಲ್ ಕಡೆ ಸಾಗಿದ. ಅವಳು, “ ನಾನು ಏನೂ ಯೋಚ್ನೆ ಮಾಡಾಕ್ಹತ್ತಿಲ್ಲ. ನಿಮ್ಮ ಮುಖ ಯಾಕ ಸಣ್ಣಗಾಗೇತಲ್ಲ” ಎಂದಾಗ ಅವಳ ದನಿ ರ್ದ್ರವಾಗಿತ್ತು. ಅಷ್ಟು ಕೇಳುವಷ್ಟರಲ್ಲಿ ಅವಳ ನೀಳ ರೆಪ್ಪೆಯಂಚಿನಲ್ಲಿ ಕಂಬನಿ ಮಿಂಚಿ ಪಳಕ್ಕನೆ ಕೆಳಗೆ ಉದುರಿತು. ಚೈತನ್ ಅವಳ ಮುಖವನ್ನು ತನ್ನೆರಡು ಕೈಗಳಲ್ಲಿ ತೆಗೆದುಕೊಂಡು ಹಣೆಗೊಂದು ಹೂಮುತ್ತನ್ನಿತ್ತನು. “ನಂಗೇನೂ ಆಗಿಲ್ಲ ಕಣೆ, ಹೊರಗೆ ಆಫೀಸ್ ಕೆಲಸ, ಓಡಾಟದ ಯೋಚನೆಯಲ್ಲಿದ್ದೆ. ನೀನು ಮುಖ ಸಣ್ಣಗಾಗಿದೆ ಅಂತ ಚಿಂತಿಸ್ತಿ ಸುಮ್ಮನೆ. ಹಿಂಗೆಲ್ಲಾ ಅಳಬಾರದು. ಎಲ್ಲಿ ನಗು ನೋಡೋಣ! ಅಮ್ಮಾವ್ರ ನಗೆ ತುಂಬಾ ದುಬಾರಿಯಾದರೆ ನಾನು ಬಡವ ಹೆಂಗೆ ಗಿಟ್ಟಿಸುವುದು!” ಅವನ ಧ್ವನಿಯಲ್ಲಿ ತಮಾಷೆ ಖುಷಿ ಬೆರೆತಿತ್ತಾದರೂ ಕಂಗಳಲ್ಲಿ ಕಂಡೂ ಕಾಣದಂತೆ ವಿಷಾದ ಭಾವದ ತೆರೆಯೊಂದು ಹರವಿತ್ತು. ಅನುಶ್ರೀ ಅವನ ಮನಸನ್ನು ನೋಡಯಿಸಬಾರದೆಂದುಕೊಂಡು ಅವನ ಉರುಟು ಕೆನ್ನೆಯ ಮೇಲೆ ಕೈಯ್ಯಾಡಿಸಿ ನಕ್ಕಳು. ಅವಳು ನಕ್ಕಿದ್ದು ಸಹ ತನಗಾಗಿಯೇ ಎಂಬುದನ್ನು ಚೈತನ್ ನ ಸೂಕ್ಷ್ಮಮತಿಗೆ ತಿಳಿಯಿತು.

ಅಷ್ಟರಲ್ಲಿ ಕೆಲಸದ ಹುಡುಗ ಜಿಮ್ಮಿ ಹೊರಗಿನಿಂದಲೇ “ಅಣ್ಣೋವ್ ನಾನ್ ಬರತೀನಿ ಕಣಣ್ಣ” ಎಂದು ಕೂಗಿ ಹೇಳಿದ. “ನಿಲ್ಲು ಸ್ವಲ್ಪ. ಬಾ ಇಲ್ಲಿ”. ಚೈತನ್ ನ ಕರೆಗೆ ಹುಡುಗ ಬಂದು ಪ್ರಶ್ನರ್ಥಕವಾಗಿ ನೋಡಿದ. ಚೈತನ್ ಹುಡುಗನ ಭುಜದ ಮೇಲೆ ಕೈ ಹಾಕಿಕೊಂಡು ”ಅನು ಇವನು ಜಿಮ್ಮಿ. ಜಾಣ ಹುಡುಗ. ಒಂಬತ್ತನೇ ತರಗತಿಯಲ್ಲಿ ಓದ್ತಾ ಇದ್ದಾನೆ. ಜಿಮ್ಮಿ ಇವರು ನಿನ್ನ ಅಕ್ಕ. ಈ ಮನೆಯ ಯಜಮಾನಿ” ಎಂದು ಹುಡುಗನ ಕಡೆ ಕಣ್ಣು ಮಿಟುಕಿಸಿದನು. ಹುಡುಗ ತನ್ನ ಪ್ರಶ್ನೆಗೆ ಉತ್ತರ ಸಿಕ್ಕಿದ್ದರಿಂದಲೊ ಚೈತನ್ ಅಣ್ಣನ ಹೆಂಡತಿ ಇಷ್ಟೊಂದು ಸೌಮ್ಯ ಎಂತಲೊ ಒಟ್ಟಿನಲ್ಲಿ ತನ್ನ ನೀಲಿ ಕಂಗಳನ್ನು ಅರಳಿಸಿ ನಕ್ಕು, “ನಮಸ್ಕಾರ ಅಮ್ಮಾವ್ರೆ” ಎಂದು ಕೈ ಜೋಡಿಸಿದನು. “ನಮಸ್ಕಾರ” ಎಂದು ಅನು ಪ್ರತಿವಂದಿಸಿ ತಪ್ಪಾಯಿತೇನೊ ಎಂದುಕೊಂಡು ಚೈತನ್ ಕಡೆ ನೋಡಿದಳು. ಅವನು ಕಣ್ಣಲ್ಲೇ ನಿಶ್ಚಿಂತೆಯಿಂದಿರು ಎಂಬಂತೆ ನಕ್ಕನು. ಹುಡುಗ ಇಬ್ಬರನ್ನೂ ಮತ್ತೊಮ್ಮೆ ಕಣ್ತುಂಬ ನೋಡಿ ಖುಷಿಯಿಂದ ನರ್ಮಲವಾಗಿ ನಕ್ಕು ಕೈ ಬೀಸಿ ಹೊರ ಹೋದನು.

ಅನುಶ್ರೀ ಸ್ನಾನ ಮಾಡಿ ಬರುವ ಹೊತ್ತಿಗೆ ಚೈತನ್ ಅಡುಗೆ ಪಾತ್ರೆಗಳು, ತಟ್ಟೆ, ಲೋಟ ಎಲ್ಲಾ ಟೇಬಲ್ ಮೇಲೆ ಹೊಂದಿಸಿದ್ದನು. ಆಕೆ ದೇವರ ಮನೆಗೆ ಹೋಗಿ ನಮಸ್ಕರಿಸಿ ಒಂದು ನಿಮಿಷ ಅಲ್ಲೇ ನಿಂತಳು. ಅವನು ದೇವರ ಪಟದ ಮೇಲಿರಿಸಿದ ದಾಸವಾಳ, ಮಲ್ಲಿಗೆ, ಸಂಪಿಗೆ, ಗುಲಾಬಿಗಳು, ಗರಿಕೆ, ತುಳಸಿ ಪತ್ರೆಗಳು, ಬೆಳಗುತ್ತಿರುವ ದೀಪ, ಪರಿಮಳಪೂರಿತ ವಾತಾವರಣದಲ್ಲಿ ಆಕೆ ಇಹವನ್ನೇ ಮರೆತಿದ್ದಳು. “ಅನೂ” ಕಂಚಿನ ಕಂಠದ ದನಿಗೆ ಎಚ್ಚೆತ್ತು ಹೊರ ಬಂದಳು. ಅವನು ಆಫೀಸಿಗೆ ಹೋಗಬಹುದು ಎಂದುಕೊಂಡಳು. ಅವನು ಚಿಕ್ಕ ಮಗುವಿನಂತೆ ತಟ್ಟೆಯನ್ನು ಹಿಡಿದುಕೊಂಡು ಆಕೆಯ ಮುಂದೆ ಚಾಚಿದನು ಪ್ರೀತಿಯಿಂದ. ಅನುಶ್ರೀ ಚಪಾತಿ, ಆಲೂಗಡ್ಡೆ ಪಲ್ಯ, ಟೊಮೆಟೊ ಚಟ್ನಿ ಬಡಿಸಿದಳು. ಆತ ತಿನ್ನುತ್ತ ಆಗೀಗ ತಲೆ ಆಕೆಯ ಕಡೆಗೆ ನೋಡುತ್ತಿದ್ದನು. ಆಕೆಯೂ ಸಹ ದಿವ್ಯ ಕಂಗಳನ್ನು ಅರಳಿಸಿ ನೋಡುತ್ತಿದ್ದಳು. ತಿಂಡಿ ತಿಂದಾದ ಬಳಿಕ ತಾನು ಆಫೀಸಿಗೆ ಹೋಗುವುದಾಗಿ ಅವನು ಹೇಳಿದಾಗ “ಹೋಗಿ ರ್ರಿ” ಎಂದು ಬೀಳ್ಕೊಟ್ಟಳು. ಅವನು ಹೊರ ಹೋಗುವ ಮೊದಲು ಸಾಯಂಕಾಲ ಬರುವುದಾಗಿ ಹೇಳಿದನು.

*
ಜ್ಯೋತಿ ತನ್ನ ಕಂಪ್ಯೂಟರನ್ನು ಆನ್ ಮಾಡಿಕೊಂಡು ಕುಳಿತಳು. ಆಕೆಗೆ ಶಂಕರ ಹಳ್ಳಿಗೆ ಹೋಗಿ ಮಾಹಿತಿ ಇಲ್ಲದೇ ಹಿಂದಿರುಗಿದ್ದುದು ಬಹಳ ಸಂಕಟ ತಂದಿತ್ತು. ಲಲಿತೆಯ ಅನುಪಸ್ಥಿತಿಯಲ್ಲಿ ಜರುಗಿದ ಎಲ್ಲಾ ಘಟನೆಗಳೂ ಅವುಗಳ ಫಲಿತಾಂಶ ರೂಪದ ಉಪ ಘಟನೆಗಳೂ ಎಲ್ಲಾ ಕಣ್ಮುಂದೆ ಸುಳಿದು ಹೋದವು. ಅವಳು ಇಮೇಲ್ ಬಾಕ್ಸ್ ತೆರೆದು ಮೊದಲೇ ನರ್ಧರಿಸಿಕೊಂಡ ರೀತಿಯಲ್ಲಿ ಸಾಧ್ಯಂತವಾಗಿ ಮನಮುಟ್ಟುವಂತೆ ಪತ್ರವೊಂದನ್ನು ಟೈಪ್ ಮಾಡಿ ಮತ್ತೆ ಓದಿದಳು. ಇದಾದರೂ ಏನಾದರೂ ಸುದ್ದಿಯನ್ನು ಹೊತ್ತು ತರಲಿ ಅಂತ ಹಾರೈಸಿ ಲಲಿತಳಿಗೆ ಇಮೇಲ್ ಮಾಡಿದಳು. ಅವಳು ಸಿಸ್ಟಮ್ ಇರಿಸಿದ ಟೇಬಲ್ ಕೆಳಗೆ ನೇರವಾಗಿ ಕಾಲು ಚಾಚಿ ಕೈ ಮೇಲೆತ್ತಿ ಮೈಮುರಿದು, “ನೋಡುವಾ ಏನೇನಾಗುತ್ತದೆಯೊ” ಎಂದು ಸಣ್ಣಗೆ ಗುನುಗಿದಳು. ಅಷ್ಟು ಹೊತ್ತಿಗೆ ಅವಳ ಮೊಬೈಲ್ ರಾಗವಾಗಿ ಹಾಡತೊಡಗಿತು. ಎತ್ತಿಕೊಂಡಳು. ಚೈತನ್ ಕರೆ. “ಹಲೊ ಚೈತ್ಯೂ “ರ್ತಾ ಇದ್ದೀನಿ” “ಆಯ್ತು ನಾನು ರೆಡಿಯಾಗಿ ರ್ಧ ತಾಸಿನಲ್ಲಿ ರ್ತೀನಿ” “ಸರಿ ಸರಿ ನಾನು ಆಫೀಸಿನಲ್ಲಿ ಕಾಯ್ತರ್ತೀನಿ. ಬೇಗ ಬಾ”

“ಸರಿ ಹಂಗೇ ಮಾಡ್ತೀನಿ”. ಅವಳು ಮೊಬೈಲ್ ಕೆಳಗಿಟ್ಟು ಸಿಸ್ಟಮ್ ಮುಚ್ಚಿ ಅಡಿಗೆ ಮನೆಗೆ ಹೋದಳು. ಅಜ್ಜಿ ತರಕಾರಿ ಹೆಚ್ಚಿಕೊಳ್ಳುತ್ತಿದ್ದಳು. ಮೊಮ್ಮಗಳು ಬಂದಿದ್ದನ್ನು ಗಮನಿಸಿದ ಅಜ್ಜಿ “ಇವತ್ತೇನು ಅವಸರ ಮಾಡ್ತ ಇಲ್ಲ ಕಾಣ್ಸುತ್ತೆ. ಹೋಗಾಕಿಲ್ವಾ ಆಫೀಸಿಗೆ” “ಹೋಗಬೇಕಜ್ಜಿ, ಚೈತನ್, ಶಂಕರ್ ಕಾಯ್ತಾ ಇದ್ದಾರೆ ಆಫೀಸಿನಲ್ಲಿ” “ಸರಿ ಸ್ನಾನ ಮಾಡಿಕೊ ಹೋಗು. ನೀನು ರೆಡಿ ಆಗೋ ಹೊತ್ತಿಗೆ ದೋಸೆ ಹಾಕಿ ಕೊಡ್ತಿನಿ” “ಕ್ಚ್ಯ ಕ್ಚ್ಯ” ಎಂದು ಜ್ಯೋತಿ ಅಜ್ಜಿಯ ಕಡೆ ನೋಡಿ ಗಲ್ಲ ಉಬ್ಬಿಸಿ ಹವಾ ಹೊರಗೆ ಬಿಟ್ಟಳು. ಅಜ್ಜಿ ಅವಳಿಗೆ “ ನಿನ್ನ ಮಂಗಾಟ ನಿಲ್ಲೋದಿಲ್ಲ ಬಾ. ನಿಂಗೊಂದು ಮೂಗುದಾರ ಹಾಕೊತಂಕ” ಎಂದಳು ಹುಸಿಮುನಿಸಿನಿಂದ.

ಜ್ಯೋತಿಗೆ ಎಲ್ಲಾ ಕೆಲಸ ರ್ತವ್ಯಗಳ ಒತ್ತಡದಲ್ಲಿಯೂ ಅಜ್ಜಿಯ ಮೇಲೆ ಅಪಾರ ಕಾಳಜಿ. ತನ್ನ ಕೈಲಾಗುವ ಎಲ್ಲಾ ಕೆಲಸಗಳನ್ನು ಮಾಡುತ್ತ ಅಜ್ಜಿಗೆ ನೆರವಾಗುವ ಆಕೆಯ ಯತ್ನಕ್ಕೆ ಅಜ್ಜಿಯೆ ತಡೆ ಹಾಕುವುದುಂಟು. ಅಷ್ಟೊಂದು ಜವಾಬ್ದಾರಿಯನ್ನು ಹೊತ್ತು ಓಡಾಡುವ ಈ ಹುಡುಗಿ ಖುಷಿಯಿಂದ ಎರಡು ತುತ್ತು ಜಾಸ್ತಿ ಉಂಡರೆ ಅದೇ ದೊಡ್ಡ ಖುಷಿ ಅಜ್ಜಿಗೆ. ಮಗಳು, ಮಗ, ಮೊಮ್ಮಗಳು ಹೀಗೆ ತನ್ನ ಪಾಲಿನ ಏಕೈಕ ಪ್ರೀತಿಯ ರಕ್ತದ ಕುಡಿ ಜ್ಯೋತಿ. ಹಾಗಾಗಿ ಜ್ಯೋತಿ ಇಪ್ಪಂತೆಟರ ಸಮೀಪ ನಿಂತಿದ್ದರೂ ಸಣ್ಣ ಮಗುವನ್ನು ಉಪಚರಿಸುವಂತೆ ಉಪಚರಿಸುತ್ತಾರೆ.

ತಿಳಿ ಹಸಿರು ಬಣ್ಣದ ಚೂಡಿಯಲ್ಲಿ ಜ್ಯೋತಿ ಮುದ್ದಾಗಿ ಕಾಣುತ್ತಾಳೆ. ಅಜ್ಜಿ ಅವಳಿಗೆ ತಿಂಡಿ ಹಾಕಿ ಕೊಟ್ಟು ಸುಮ್ಮನೆ ಅವಳನ್ನೇ ದಿಟ್ಟಿಸುತ್ತಾ ನಿಂತಿದ್ದಾರೆ. ಒಂದು ತುತ್ತು ಬಾಯಿಗೆ ಹಾಕಿಕೊಂಡಳು. ಪಟ್ಟನೆ ಮುಖವೆತ್ತಿ ನೋಡಿದರೆ ಅಜ್ಜಿಯ ಕಣ್ಣು ನೀರಿನಿಂದ ತುಂಬಿವೆ. ಜ್ಯೋತಿ ಮುಖ ಮೇಲೆತ್ತಿ ನೋಡುತ್ತಲೆ ಅಜ್ಜಿ ಸರಕ್ಕನೆ ಏನೋ ಹುಡುಕುವ ಹಾಗೆ ಯಾವುದೊ ಪಾತ್ರೆಗೆ ಕೈ ಹಾಕಿದರು ಮೊಮ್ಮಗಳಿಗೆ ಕಂಬನಿ ಕಾಣದಿರಲೆಂದು. “ಅಜ್ಜಿ ನೀನೂ ತಿಂಡಿ ತಿಂದು ಬಿಡಬಾರದೇ” ಅವರನ್ನು ಮಾತಾಡಿಸಲು ಯತ್ನಿಸಿದಳು. “ಆಮ್ಯಾಲೆ ತಿಂತೀನಿ. ನೀನು ತಿಂದ್ಬಿಟ್ಟು ಹೋಗು” “ಅದೆಲ್ಲಾ ಆಗಲ್ಲ. ಬಾ ಈಗ್ಲೆ, ನಂಜೊತೆ ತಿನ್ನು” “ಬೇಡ್ವೆ ತಾಯಿ! ನಾನೀಗ ಇಷ್ಟು ಬೇಗ ತಿನ್ನಬೇಕೇನು?” “ಏನಾಗುತ್ತೆ? ನಾನೂ ಕೂಡ ಇವತ್ತು ಬೇಗನೇ ತಿಂತಿದ್ದೀನಲ್ಲಾ” “ನೀನು ಚಿಕ್ಕೋಳು, ಹೊರಗಡೆ ಕೆಲಸ ಅಂತ ಹೋಗೋಳು. ನನಗೇನ್ ಅಷ್ಟು ಅವಸರ ಐತ್ಯಾ?” “ವಾದಿಸಬೇಡ ಅಜ್ಜಿ. ಚಿಕ್ಕೋಳು ದೊಡ್ಡೋಳು ರ್ಕ ಬೇಡ. ನೀ ಈಗ್ಲೇ ತಿನ್ನದಿದ್ರೆ ನನಗೂ ಬೇಡ ತಿಂಡಿ ಇಕೋ ಇಲ್ಲಿಟ್ಟೆ” ಜ್ಯೋತಿಯು ತಿಂಡಿಯ ತಟ್ಟೆಯನ್ನು ಇಡುವ ಹಾಗೆ ಹೆದರಿಸಿದಾಗ ಅಜ್ಜಿ “ಅಯ್ಯೊ ತಾಯಿ! ಬ್ಯಾಡ್ವೆ ತಿನ್ನು ತಿನ್ನು. ನಾನೂ ತಿಂತೀನಿ ತಿನ್ನು” ಎಂದು ಮತ್ತೆರಡು ದೋಸೆಗಳನ್ನು ಅವಳಿಗೆ ಹಾಕಿದರು.

ಮೊಮ್ಮಗಳು ತುತ್ತು ಮಾಡಿ ಅಜ್ಜಿಯ ಬಾಯಿಗೆ ಹಾಕಿದಾಗ ಅವರು ಖುಷಿಯಿಂದ ಕಣ್ಣರಳಿಸಿದರು. ಅವರ ಕಣ್ಣಾಲಿಗಳು ತೇವವಾಗಿದ್ದವು. “ಇವತ್ತು ಬೇಗ ರ್ತೀಯೇನೇ” “ ಆಗ್ಲಿ ಅಜ್ಜಿ ರ್ತೀನಿ. ಮರ್ಕೆಟ್ ಗೆ ತಾನೇ ರ್ತೀನಿ ರ್ತೀನಿ” ಕೈ ತೊಳೆದುಕೊಳ್ಳುತ್ತಾ ಹೇಳಿದಳು. ಮನೆಗೆ ಬೇಕಾಗುವ ಸಾಮಾನುಗಳನ್ನು ತರುವ ನೆಪದಲ್ಲಿ ಅಜ್ಜಿಯನ್ನು ಹೊರಗಡೆಗೆ ಕರೆದೊಯ್ಯುವುದೆಂದರೆ ಜ್ಯೋತಿಗೆ ಎಲ್ಲಿಲ್ಲದ ಖುಷಿ. ಅಜ್ಜಿಯನ್ನು ತನ್ನ ಗಾಡಿಯ ಹಿಂದೆ ಕೂಡ್ರಿಸಿಕೊಂಡು ಅವರ ಕೈಯ್ಯನ್ನು ತಾನೇ ತನ್ನ ಭುಜದ ಮೇಲಿರಿಸಿಕೊಂಡು,” ರೆಡಿ ನಾನೋಡ್ತೀನಿ, ಗಟ್ಟ್ಯಾಗಿ ಕೂತ್ಕೊಳ್ಳಿ” ಎಂದು ಗಾಡಿ ಓಡಿಸುವುದೆಂದರೆ ಅವಳಿಗೆ ಬಹಳ ಆನಂದ. ಈ ಮುಗ್ಧ ಜೀವಿಗೆ ತಾನು ತಾಯಿ ಮಗಳು, ಮಗ, ಗೆಳತಿ ಏನೆಲ್ಲಾ ಆಗಬೇಕು ಎಂದುಕೊಳ್ಳುತ್ತಿತ್ತು ಆ ಪ್ರಿಯ ಜೀವ. ಯೋಚಿಸಿದಂತೆಯೇ ನಡೆದುಕೊಳ್ಳುತ್ತಿದ್ದಳು ಕೂಡ. ಎಷ್ಟೊ ಸಲ ಅಜ್ಜಿ “ ಈ ಹುಡುಗಿ ಹುಡುಗನಾಗಿದ್ದರೆ ಈ ಹೊತ್ತಿಗೆ ತನಗೊಬ್ಬ ಮರಿ ಸೊಸೆ ಬರುತ್ತಿದ್ದಳು” ಎಂದುಕೊಳ್ಳುತ್ತಿದ್ದರು. ಮರುಕ್ಷಣವೇ “ ಈಗೇನಾಯ್ತು ಈ ಮಹಾತಾಯಿ ಮದುವೆ ಮಾಡಿಕೊಂಡರೆ ಅಳಿಯ ಆದಂಗೂ ಸೈ, ಮನೆಗೆ ಗಂಡು ದಿಕ್ಕು ಆಗುತ್ತೆ. ಇವಳು ನೋಡಿದರೆ ದಮ್ಮಯ್ಯ ಅಂದರೂ ಜಪ್ಪೆನ್ನುತ್ತಿಲ್ಲ” ಎಂದು ಏನೇನೋ ಯೋಚಿಸುತ್ತಿದ್ದರು.

“ರ್ತೀನಜ್ಜಿ” ಎಂದು ಜ್ಯೋತಿ ತನ್ನ ಕೈನಿ ಹೊರಗೆಳೆದು ಒರೆಸಿ ಹತ್ತಿದಳು. ಬಾಗಿಲವರೆಗೆ ಬಂದ ಅಜ್ಜಿ ಕಣ್ಣಲ್ಲೇ ಅವಳಿಗೆ ಬೀಳ್ಕೊಟ್ಟರು. “ಇವತ್ತು ಮಾತಾಡಲೇ ಬೇಕು. ಎಲ್ಲರ ಬಾಳನ್ನು ಸರಿಯಾಗಿ ನಿಲ್ಲಿಸಲು ಓಡಾಡುವ ಹೊತ್ತಿಗೆ ಇವಳಿಗೆಷ್ಟಾಗಿದೆ ಈಗ ವಯಸ್ಸು ಬರಲಿ ವಾಪಸ್. ಏನಾದರೊಂದು ನರ್ಣಯ ಆಗ್ಲೇಬೇಕು. ಸುಮ್ಮನೆ ಇದ್ರೆ ನಾನು ಹಿಂಗೆ ಏನೂ ನೋಡೆದೇ ಇವಳನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿಬಿಟ್ಟೇನು” ಎಂದು ಅಜ್ಜಿ ಸ್ವಗತದಲ್ಲಿ ಮಾತಾಡಿಕೊಂಡರು.

ಮುಂದುವರೆಯುವುದು

–ಹಟ್ಟಿ ಸಾವಿತ್ರಿ ಪ್ರಭಾಕರಗೌಡ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x