ದಿಕ್ಕುಗಳು (ಭಾಗ 11): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅಜ್ಜಿಯ ಜೊತೆಗೆ ಜ್ಯೋತಿ ತನ್ನ ಮನೆ ತಲುಪಿ, ತನ್ನ ಕಂಪ್ಯೂಟರ್ ಮುಂದೆ ಹೋಗಿ ಕುಳಿತುಕೊಂಡಳು. ಅಜ್ಜಿಗೆ ಅನುಶ್ರೀಯ ಆತ್ಮಹತ್ಯೆಯ ಪ್ರಯತ್ನ ತುಂಬಾ ಆಘಾತ ನೀಡಿತ್ತು. ಆಕೆ ಜ್ಯೋತಿಗಾಗಿರುವ ಮಾನಸಿಕ ಪೆಟ್ಟನ್ನು ಅದರ ಆಳವನ್ನು ಪತ್ತೆ ಹಚ್ಚಿದ್ದಾಳೆ. ಮಾತನ್ನೆ ಕಳೆದುಕೊಂಡಂತಾಗಿರುವ ಮೊಮ್ಮಗಳನ್ನು ಕಂಡು ಅವರ ಹೃದಯ ವಿಲವಿಲನೆ ಒದ್ದಾಡುತ್ತಿದೆ. ಸದಾ ಏನಾದರೂ ಹರಟೆ ಹೊಡೆಯುತ್ತಾ, ಆ ಹರಟೆಯಲ್ಲಿಯೇ ಒಂದಿಷ್ಟು ನೆಮ್ಮದಿ ಕೊಡುತ್ತಾ, ಪಡೆಯುತ್ತಾ ಬೆಳೆದಿರುವ ಹುಡುಗಿ ಮಾತನ್ನೂ, ಕಣ್ಣಿನ ಹೊಳಪನ್ನೂ, ಊಟದ ಮೇಲಿನ ಆಸಕ್ತಿಯನ್ನೂ ಕಳೆದುಕೊಂಡು ಹೀಗೆ ಸೊರಗಿ ಕಡ್ಡಿಯಂತಾಗುತ್ತಿದ್ದರೆ ತಾನು ನಿಃಶ್ಚಿಂತೆಯಿಂದ ಇರುವುದಾದರೂ ಹೇಗೆಂದು ಅಜ್ಜಿ ಕಣ್ಣೀರಾಯಿತು. ಅಜ್ಜಿಗೂ ನೋವಾಗಿದೆ ಎಂಬ ಅರಿವಿರುವ ಜ್ಯೋತಿ ತಾನೇ ಎದ್ದು ಬಂದು ಅಜ್ಜಿಯ ಮೊಣಕಾಲ ಮೇಲೆ ತನ್ನ ಗದ್ದವಿರಿಸಿ, “ಹಸಿವು ಕಣಮ್ಮ” ಎಂದಾಗ ಅಜ್ಜಿ ತನ್ನ ಗತಿಸಿ ಹೋಗಿರುವ ಮಗಳೇ, ವಿನೀತಳೇ ಎದುರಿಗೆ ಬಂದು ಕೇಳಿದಂತೆ ಭ್ರಮಿಸಿ ಅವಳ ತಲೆ ನೇವರಿಸಿದಳು. ಮೌನವಾಗಿ ಊಟಕ್ಕೆ ಬಡಿಸುತ್ತಿರುವ ಅಜ್ಜಿಗೆ, “ಮಾತಾಡದೇ ಮೂಗಿಯಾಗಿಬಿಟ್ಟೆ ನೀನಂತೂ. ಚಿಂತೆ ಬಿಟ್ಟು ಬಿಡು. ಇನ್ನು ನಮ್ಮ ಕಷ್ಟದಲ್ಲಿ ಅರ್ಧವಾದರೂ ಕಡಿಮೆಯಾಗಿದೆ. ಒಂದು ಕಷ್ಟಕ್ಕಾದರೂ ಪರಿಹಾರ ದೊರಕಿದೆ” ಎಂದಳು ಅನ್ನಕ್ಕೆ ಸಾರು ಕಲೆಸುತ್ತಾ. ಅಜ್ಜಿ ಬೊಚ್ಚು ಬಾಯಿ ತೆರೆದು, “ನಾನೂ ಅದ್ನೇ ಹರಕೆ ಕಟ್ಕೊಂಡು ಕೂತೀನಿ ಕಣೆ. ಆ ಅನು, ಈ ಚೈತನ್, ನಾಪತ್ಯೆ ಆಗಿರೊ ಲಲಿತ, ಊಟ ಮಾಡದೆ ಕಂಗಾಲಾಗಿ ತಿರುಗ್ತಿರೊ ನೀನು, ಶಂಕರ… ನಂಗೆ ಜೀವಮಾನದ ಎಲ್ಲಾ ನೋವಿಗಿಂತ್ಲೂ ಎಳೆ ಹುಡುಗರ ಈ ಬದುಕು ಕಂಡು ಸುಸ್ತಾಗಿ ಹೋಗಿದೆ ಕಣೆ ಅಮ್ಮು” ಎಂದು ಹೇಳುತ್ತಾ ಜ್ಯೋತಿಯ ತಟ್ಟೆಗೆ ಮೊಸರನ್ನ ಬಡಿಸಿದರು. ಅವಳು ಕತ್ತೆತ್ತಿ ಅಜ್ಜಿಯ ಕಡೆ ನೋಡಿದಳು. ಈ ಹದಿನೈದು ದಿನಗಳಲ್ಲಂತೂ ಅಜ್ಜಿ ಸೊರಗಿ ಹೋಗಿದ್ದಾರೆ ಎಂದುಕೊಂಡಳು. ತಾನು ಕೈ ತೊಳೆದುಕೊಂಡು ಅಜ್ಜಿಗೆ ಊಟಕ್ಕೆ ಬಡಿಸಿದಳು. ಮೊಮ್ಮಗಳು ಇವತ್ತು ಸ್ವಲ್ಪ ಹಗುರವಾಗಿದ್ದನ್ನು ಕಂಡು ಅಜ್ಜಿ ಒಂದೆರಡು ತುತ್ತನ್ನು ನೆಮ್ಮದಿಯಿಂದ ಉಂಡರು.

ಜ್ಯೋತಿಯು ಅಜ್ಜಿಗೆ ಮಲಗಿಕೊಳ್ಳಲು ಹೇಳಿ ತಾನು ಕಂಪ್ಯೂಟರ್ ಮುಂದೆ ಹೋಗಿ ಕುಳಿತಳು. ಆಕೆಯ ಮನಸ್ಸು ಬಹಳ ನೊಂದು ಹೋಗಿತ್ತು. ತಾನು ಬಹುಶಃ ಅಕ್ಕ-ತಂಗಿ, ಅಣ್ಣ-ತಮ್ಮ ಎಂಬ ರಕ್ತ ಬಾಂಧವರನ್ನು ಪಡೆದುಕೊಂಡಿದ್ದರೆ ಈ ರೀತಿಯಾಗಿ ಅನುಶ್ರೀ, ಚೈತನ್, ಲಲಿತ, ಶಂಕರ, ರವಿ ಮುಂತಾದ ಸ್ನೇಹಿತರೊಂದಿಗೆ ಇಷ್ಟು ಅಂಟಿಕೊಂಡಿರುತ್ತಿರಲಿಲ್ಲವೇನೊ ಎಂದುಕೊಂಡಳು. ಅದಕ್ಕಿಂತ ಇನ್ನೊಂದು ಪ್ರಶ್ನೆ ಇವರನ್ನೆಲ್ಲಾ ಅವರ ಪಾಡಿಗೆ ಅವರನ್ನು ಬಿಟ್ಟು ತನ್ನ ಸುಖವನ್ನಷ್ಟೇ ಅರಸಿಕೊಂಡು ಹೋಗುವುದು ತನಗೆ ಸಾಧ್ಯವಾದೀತೆ ಎಂಬುದು. ಆಕೆ ಅದನ್ನೇ ಚಿಂತಿಸುತ್ತಾ ತುಂಬ ಹೊತ್ತು ಕುಳಿತಳು. ತನ್ನಿಂದ ಈ ಸ್ನೇಹದ ನಂಟನ್ನು ತೆಗೆದುಹಾಕಿ ಬದುಕುವುದು ಸಾಧ್ಯವೇ ಇಲ್ಲ. ಅಂತಹ ಬದುಕಿಗೆ ಬೆಲೆಯೇ ಇರುವುದಿಲ್ಲ ಎಂದುಕೊಂಡಳು.

ಲಲಿತಳ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಶಂಕರ ನಾಳೆ ಆ ಹಳ್ಳಿಯನ್ನು ತಲುಪುವವನಿದ್ದಾನೆ. ಆತ ಅಲ್ಲಿಗೆ ತಲುಪುವುದೊಂದೆ ತಡ ಅಲ್ಲಿ ಲಲಿತ ಇರುವಳೋ ಇಲ್ಲವೊ ಎಂಬುದು ಖಚಿತವಾಗುತ್ತದೆ. ಆಮೇಲೆ ಮುಂದಿನ ನಿರ್ಣಯಕ್ಕೆ ಬರುವುದು ಎಂದುಕೊಂಡಳು. ತನ್ನ ಇ-ಮೈಲ್ ತೆರೆದು ಎಂದಿನಂತೆ ಲಲಿತಳ ಪತ್ರ ಬಂದಿರಬಹುದೆ ಎಂದು ನೋಡಿದಳು. ಲಲಿತಳ ಹೊರತುಪಡಿಸಿ ಬೇರೆ ಯಾರಾರದೋ ಹತ್ತಾರು ಪತ್ರಗಳು ಅಲ್ಲಿ ಜಮಾಯಿಸಿದ್ದವು. ಯಾಕೋ ಅವತ್ತು ಅವೆಲ್ಲವನ್ನೂ ಓದಿ, ಅವುಗಳಿಗೆ ಉತ್ತರಿಸುವುದಾಗಲಾರದು ಎಂದುಕೊಂಡು ಕಂಪ್ಯೂಟರನ್ನು ಆಫ್ ಮಾಡಿ ಅಜ್ಜಿ ಪಕ್ಕಕ್ಕೆ ಹೋಗಿ ಅಂಗಾತವಾದಳು. ಶಂಕರನಿಂದ ಬರಬಹುದಾದ ಉತ್ತರದ ನಿರೀಕ್ಷೆಯಲ್ಲಿ ಅವಳಿಗೆ ಯಾವಾಗಲೋ ನಿದ್ರೆ ಆವರಿಸಿತ್ತು.

***

ಶಂಕರನಿಗೆ ಮುಂದೆ ಸಂಭವಿಸಬಹುದಾಗಿರುವ ಘಟನೆಗಳ ಬಗ್ಗೆ ಖಚಿತವಾದ ನಿರ್ದಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ರೈಲು ವೇಗವಾಗಿ ಓಡುತ್ತಿತ್ತು. ಅದಕ್ಕಿಂತಲೂ ಶಂಕರನ ಮನಸ್ಸು ಇನ್ನೂ ವೇಗವಾಗಿ ಓಡತೊಡಗಿತ್ತು. ನಿಧಾನಕ್ಕೆ ಅವನ ಕಣ್ಣುಗಳು ನೀರು ತುಂಬತೊಡಗಿದವು. ತಂಗಿ ಪುಷ್ಪಳ ಮುಖದಲ್ಲಿಯೇ ಲಲಿತಳ ಮುಖ ಕಂಡಂತೆನಿಸಿತು. ಹೌದಲ್ಲ, ಲಲಿತಳ ಮತ್ತು ತನ್ನ ನಡುವಿನ ಗೆಳೆತನ ತನಗೆ ಅರಿವಿಲ್ಲದೆ ತನ್ನನ್ನು ಸಹೋದರನ ಸ್ಥಾನದಲ್ಲಿ ನಿಲ್ಲಿಸಿದೆ ಎಂದುಕೊಂಡನು. ಲಲಿತಳನ್ನು ರೇಗಿಸಿದ್ದು, ನಗಿಸಿದ್ದು, ತುಂಟತನ ಮಾಡಿ ಅವಳ ಕೈಯಿಂದ ಗುದ್ದು ತಿಂದಿದ್ದು, ಅವಳೊಂದಿಗೆ ಸಮಸ್ಯೆಗಳನ್ನು ಹೇಳಿಕೊಂಡದ್ದು, ಅವಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಳಿಗೆ ನೆರವಾಗಿದ್ದು, ಅವಳು ಸಂಕೋಚವನ್ನು ತೊರೆದು, ದಿಟ್ಟಳಾಗುತ್ತಾ ಹೋದಂತೆ ತಾನು ಒಳಗೊಳಗೆ ಹೆಮ್ಮೆ ಪಟ್ಟದ್ದು ಎಲ್ಲಾ ಅಲೆಗಳಂತೆ ಉಕ್ಕಿ ಉಕ್ಕಿ ಮನಸ್ಸಿನ ಕಿನಾರೆಗೆ ಬಡಿದು ಹಿಂದೆ ಸರಿಯತೊಡಗಿದ್ದವು. ಲಲಿತ ತಮ್ಮ ಗೆಳೆಯರ ಬಳಗವನ್ನು ಒಮ್ಮಿಂದೊಮ್ಮೆಲೆ ತೊರೆದು, ಯಾರಿಗೂ ಹೇಳದೇ ಕಾಣೆಯಾಗುವುದೆಂದರೆ, ಅದಕ್ಕೆ ಕಾರಣ ಏನಿರಬಹುದು? ಅಂದು ಚೈತನ್‌ನ ಮದುವೆ ವಿಷಯವನ್ನು ತಾನು ಪ್ರಸ್ತಾಪಿಸಿದಾಗ ಅವಳ ಮುಖ ಬಿಳುಚಿದಂತಾಯಿತಲ್ಲ; ಅದೇಕೆ ಆಕೆ ಹಾಗೆ ಮಾಡಿದಳು? ಲಲಿತಳಿಗೆ ಚೇತನ್ ಬಗ್ಗೆ ಏನಾದರೂ ಪ್ರೇಮ ಭಾವನೆ ಇದ್ದಿತೊ ಏನೋ? ಹಾಗಿದ್ದರೆ ಒಂದು ದಿನವೂ ಅದರ ಸುಳಿವು ತನಗಷ್ಟೇ ಅಲ್ಲ, ಮತ್ತಾರಿಗೂ ತಿಳಿಯಲಿಲ್ಲವೇಕೆ? ಹೀಗೇ ಶಂಕರನ ಯೋಚನೆ ಲಲಿತಳ ನಾಪತ್ತೆಯ ವಿಷಯಕ್ಕೆ ಕಾರಣವಾಗಿರುವ ಅಂಶದ ಸಮೀಪ ಸುತ್ತುತ್ತಿದ್ದರೂ ಅದೇ ನಿಜವಾದ ಕಾರಣ ಎಂದು ನಿರ್ದರಿಸಲಾಗದೆ ಚಡಪಡಿಸುತ್ತಿದ್ದ. ರೈಲು ದ್ರಕ್ ದ್ರಕ್ ಚುಕ್ ಬುಕ್ ಅಂತ ಸದ್ದು ಮಾಡುತ್ತಾ ಕೊನೆಗೆ ನಿಂತಿತು. ಹೊರಗೆ ಇಣುಕಿದ ಶಂಕರ. ಕುಂದಗೋಳ ಜಂಕ್ಷನ್. ಸೀರೆಯ ಸೆರಗು ಹೊದ್ದುಕೊಂಡು, ಕಂಕುಳಲ್ಲಿ ಕೂಸನ್ನೋ, ಲಗೇಜನ್ನೋ ಎತ್ತಿಕೊಂಡ ಮಹಿಳೆಯರು ಹತ್ತುವವರಿಗಿಂತ ಇಳಿಯುವವರು, ಇಳಿಯುವವರಿಗಿಂತ ಹತ್ತುವವರು ಅವಸರ ಮಾಡುತ್ತಿದ್ದಾರೆ. ಒಲ್ಲಿಯ ಚುಂಗನ್ನು ಹಿಡಿದುಕೊಂಡು ರೈತ ಜನರು ಪ್ರಯಾಣಕ್ಕೆ ಆತುರರಾಗಿ ಆಸನ ಸಿಕ್ಕುವುದೊ ಇಲ್ಲವೊ ಎಂಬ ಧಾವಂತವನ್ನು ತಮ್ಮ ಒತ್ತಾಗಿ ಬಿಗಿದುಕೊಂಡಿರುವ ತುಟಿಗಳು ಮತ್ತು ಚಂಚಲವಾಗಿ ಸರಿದಾಡುತ್ತಿರುವ ಕಣ್ಣುಗಳಲ್ಲಿಯೇ ವ್ಯಕ್ತಪಡಿಸುತ್ತಾರೆ. ಅಲ್ಲಲ್ಲಿ ಹುಡುಗರು, “ಚಾಯ್” ಎಂದು ರಾಗವಾಗಿ ಕೂಗುತ್ತಾ ಥರ್ಮಾಸ್ ಹಿಡಿದು ರೈಲು ಕಿಟಕಿಗಳ ಮೂಲಕವೇ ತಮ್ಮ ವ್ಯಾಪಾರ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳು ತಮ್ಮ ಮಕ್ಕಳಿಗೆಂದು ಬಿಸ್ಕೆಟ್, ಬ್ರೆಡ್, ಹುರಿಗಡಲೆ, ಸೇಂಗಾ, ಕಾರ ಚುರುಮರಿ ಹೀಗೆ ಒಂದಲ್ಲಾ ಒಂದು ತಿನಿಸನ್ನು ಖರೀದಿಸುತ್ತಿದ್ದಾರೆ… ಶಂಕರನ ಚಿತ್ತ ತಾತ್ಕಾಲಿಕವಾಗ ವಾಸ್ತವದ ಈ ದೃಶ್ಯಕ್ಕೆ ಕಣ್ಣಾಗಿತ್ತು. ಮತ್ತೆ ಗಾಡಿ ದ್ರಕ್ ದ್ರಕ್ ಚುಕ್ ಬುಕ್ ಅಂತ ಲಯಬದ್ಧವಾಗಿ ಶಬ್ದ ಮಾಡುತ್ತ, ಹೊಗೆಯುಗುಳುತ್ತ ಹೊರಟಿತು.

ಮತ್ತೆ ಶಂಕರನ ಯೋಚನೆ ಲಲಿತಳ ಸುತ್ತಲೇ ಸುತ್ತತೊಡಗಿತು. ಅವಳು ತನ್ನ ಊರಿಗೆ ಹೋಗಿರಬಹುದೆ? ಅಥವಾ ಬೇರೆಲ್ಲಿಗೆ ಹೋಗಿರಬಹುದು? ಆಕೆಯ ಕಡೆಯ ಜನರು ಹೇಗಿರಬಹುದು? ಶಾಮಣ್ಣ ಮಾತ್ರ ತುಂಬ ಒಳ್ಳೆಯವನು ಎಂದು ತಾನೇ ಕಂಡು ತಿಳಿದ ವಿಷಯ. ಆತನ ಮನೆಯ ಜನರು ಒಳ್ಳೆಯವರೆಂದೆ ಲಲಿತ ಹೇಳಿದ್ದುಂಟು. ಆದರೆ ಈಗ ಅವರು ಏನು ಪ್ರಶ್ನಿಸಬಹುದು? ಯಾವ ಕಾರಣಕ್ಕೂ ಲಲಿತಳ ಪ್ರಸ್ತುತ ಸಂಗತಿಯನ್ನು ಅವರ ಹತ್ತಿರ ವ್ಯಕ್ತಪಡಿಸಬಾರದು ಎಂದು ಶಂಕರ ಒಂದೇ ಸಮನೆ ಯೋಚಿಸುತ್ತಿದ್ದ.

ಹುಬ್ಬಳ್ಳಿಯಲ್ಲಿ ರೈಲು ನಿಂತಿತು. ಶಂಕರನೂ ತನ್ನ ವಿಚಾರ ಸರಣಿಯಿಂದ ಹೊರಬಂದ. ಅವನು ಬೂಟುಗಳನ್ನು ಹಾಕಿಕೊಳ್ಳುವಷ್ಟರಲ್ಲಿ ಇಳಿಯುವವರ ಗದ್ದಲ ಕಡಿಮೆಯಾಗಿತ್ತು. ತನ್ನ ಚೀಲವನ್ನು ಹೆಗಲಿಗೇರಿಸಿಕೊಂಡು ಕೆಳಗಿಳಿದ. ನಿನ್ನೆ ಸಾಯಂಕಾಲದಿಂದಲೂ ಏನೂ ತಿನ್ನದೇ ಇದ್ದುದು ಹೊಟ್ಟೆ ಗೊರ್ ಎಂದು ಚೀರಿದಾಗಲೆ ಗಮನಕ್ಕೆ ಬಂದಿತು. ಚೀಲದಿಂದ ಬ್ರಷ್ ತೆಗೆದು ಹಲ್ಲು ತಿಕ್ಕಿ ಅಲ್ಲೇ ಇದ್ದ ನಲ್ಲಿಯಲ್ಲಿ ಮುಖ ಬಾಯಿ ತೊಳೆದುಕೊಂಡು, ತಲೆಗೂದಲು ಸರಿಪಡಿಸಿಕೊಂಡನು. ಕಾಮತ್ ಹೊಟೆಲ್ ಹೊಕ್ಕು ಒಂದು ಬೆಣ್ಣೆ ದೋಸೆಗೆ ಆಜ್ಞೆ ಮಾಡಿದನು. ತಾನು ಹೀಗೆ ಯಾವಾಗಲಾದರೂ ಹುಬ್ಬಳ್ಳಿ ಧಾರವಾಡಕ್ಕೆ ಬಂದಾಗ ಬೆಣ್ಣೆ ದೋಸೆ ತಿನ್ನುವುದೇನೂ ಹೊಸದಲ್ಲ. ಆದರೆ ಈ ಸಲ ಅಭಿರುಚಿಗಾಗಿ ತಿನ್ನುವ ಹುಮ್ಮಸ್ಸಿಲ್ಲ. ಚುರುಗುಡುತ್ತಿರುವ ಹೊಟ್ಟೆಯ ಸಮಾಧಾನಕ್ಕೆ ಎಂದುಕೊಂಡನು. ತಿಂದು ಟೀ ಕುಡಿದು ಬಿಲ್ ಚುಕ್ತಾ ಮಾಡಿ ಬಸ್ ನಿಲ್ದಾಣದ ಒಳಗೆ ನಡೆದನು. ಅಷ್ಟೊ÷್ಹತ್ತಿಗೆ ಗದಗ್ ಬಸ್ ಆಗಲೇ ತಯಾರಾಗಿ ನಿಂತಿತ್ತು. ಡ್ರೆöÊವರ್ ಪಕ್ಕದ ಉದ್ದವಾದ ಆಸನದಲ್ಲೇ ಕುಳಿತುಕೊಂಡನು. ಬಸ್ ಗದಗ್ ಕಡೆ ಮುಖ ಮಾಡಿ ಚಲಿಸತೊಡಗಿತು. ದಾರಿ ಸಾಗಿದಂತೆಲ್ಲ ಗಿಡ ಮರಗಳು ಅತ್ಯಂತ ವಿರಳವಾಗಿರುವ ನಿಸರ್ಗ ಅವನಿಗೆ ಒಂದು ಥರದ ಭಾವನೆಗೆ ತಿದಿಯೊತ್ತಿದ್ದವು. ಬಹುಶಃ ಲಲಿತ ಮನಸ್ಸು ಈ ಬಯಲು ಭೂಮಿಯಂತೆ ರಣಗುಡುತ್ತಿರಬಹುದೇ, ಬೆಳಗಿನ ಎಂಟಕ್ಕೆ ಇಷ್ಟು ಬಿಸಿಲಿರುವ ಈ ಕಡೆಯ ಜನರು ಗಟ್ಟಿಗರು ಎಂದುಕೊಂಡನು. ಮತ್ತೆ ತಲೆ ಲಲಿತಳ ಕಡೆಯೇ ತಿರುಗಿತು. ಅವಳ ಆ ಅರಳು ಕಂಗಳಲ್ಲಿಯ ಕನಸುಗಳೇನಾಗಿರಬಹುದು? ಅವಳ ಮನಸ್ಸು ಎಲ್ಲರ ಮೋಹ, ಗೆಳೆತನವನ್ನು ತೊರೆದು ಇರಲು ಅದೆಷ್ಟು ಶಕ್ತವಾಗಿರಬಹುದು ಅಥವಾ ದುಃಖವನ್ನೇ ಸಹ್ಯವಾಗಿರಿಸಿಕೊಂಡು ಅವಳದೆಷ್ಟು ಕೊರಗುತ್ತಿರಹುದು… ಹೀಗೆ ಶಂಕರ ತಲೆ ಬಾಲ ಏಕಮಾಡಿ ಯೋಚಿಸಿಯೇ ಯೋಚಿಸುತ್ತಿದ್ದನು. ಗದಗ್ ತಲುಪಿದಾಗ ಒಂಭತ್ತು ಗಂಟೆ ಆಗಿತ್ತು. ಸೂರ್ಯ ಬಲಿಯತೊಡಗಿದ್ದ. ಶಂಕರ ಮುಂಡರಗಿಯ ಬಸ್ ಯಾವ ಕಡೆ ನಿಲ್ಲುವುದೆಂದು ಕೇಳಿ ತಿಳಿದುಕೊಂಡನು. ಆಗಲೆ ಮುಂಡರಗಿ ಬಸ್ ಬರ್ ಬರ್ ಬುರ್ ಬುರ್ ಅಂತ ತಯಾರಿಯಲ್ಲಿತ್ತು. ಅವನು ಬಸ್ ಏರಿ ಮುಂದಿನ ಸೀಟ್‌ನಲ್ಲೇ ಕುಳಿತನು. ಬೆಳಗಿನ ಸಮಯವಾಗಿದ್ದರಿಂದ ಬಸ್ ಜನರಿಂದ ತುಂಬಿ ಹೋಗಿರಲಿಲ್ಲ. ಟ್ರಾಫಿಕ್ ಜಾಮ್‌ನ ಕಾಟವಿಲ್ಲದ ಈ ಕಡೆಯ ಊರುಗಳು ಶಂಕರನಿಗೆ ಸ್ವಲ್ಪ ಆಕರ್ಷಣೆ ಎನ್ನಿಸಿದವು. ಆದರೆ ಸ್ತಿçÃಪುರುಷರು ಎಂಬ ಬೇಧವಿಲ್ಲದೆ ತಮಗೆ ಬೇಕಾದಲ್ಲಿ ವಕ್ಕರಿಸುವುದನ್ನು ಕಂಡು ಆಶ್ಚರ್ಯವಾಯಿತು. ಬಸ್ ಕೆಲವು ನಿಲ್ದಾಣಗಳನ್ನು ದಾಟಿದಂತೆಲ್ಲಾ ಗದ್ದಲವಾಗತೊಡಗಿತ್ತು. ಆಸನ ಸಿಗದೆ ನಿಂತಿರುವ ಹೆಣ್ಣುಮಕ್ಕಳಿಗೆ ಕೆಲವು ಗಂಡಸರು ಮೇಲೆದ್ದು ನಿಂತು ಜಾಗ ಬಿಟ್ಟುಕೊಡುವುದನ್ನು ಕಂಡು ಖುಷಿ ಆಯಿತು. ಬಸ್ ಅಡವಿ ಸೋಮಾಪುರ ದಾಟಿ ಮುಂಡರಗಿ ಕ್ರಾಸ್‌ಗೆ ಮುಖ ತಿರುವಿದಾಗ ಶಂಕರ ಬಹಳ ಕುತೂಹಲದಿಂದ ಕದಾಂಪುರವನ್ನು ನಿರೀಕ್ಷಿಸತೊಡಗಿದ್ದ. ಸ್ವಲ್ಪ ಸೋಜಿಗವನ್ನುಂಟು ಮಾಡುವಂತಹ ಹೆಸರಿನ ಒಂದೆರಡು ಹಳ್ಳಿಗಳನ್ನು ದಾಟಿದ ನಂತರ ‘ಕದಾಂಪುರ’ ಇಳಿಯಾರಿದ್ರ ಇಳೀರಿ ಎಂದು ಕಂಡಕ್ಟರ್ ಸೀಟಿ ಊದಿದ. ಶಂಕರ್ ಬಸ್‌ನಿಂದ ಇಳಿದು ಆ ಕಡೆ ಈ ಕಡೆ ನೋಡಿದ. ಬಸ್ ಸ್ಟಾ÷್ಯಟ್ ಕಟ್ಟಡ ಇಲ್ಲದ ಊರು. ರಸ್ತೆ ಬದಿಯೇ ಬಸ್ ನಿಲ್ಲುವ ಬಿಡುವ ಕ್ರಿಯೆಗಳು. ಅವನ ಹೊಸ ಮುಖ ನೋಡಿದ ಹಳ್ಳಿಯ ಜನರು ಮತ್ತೆ ಮತ್ತೆ ನೋಡಿದರು. ಕೈಯಲ್ಲಿ ತಂಬಿಗೆ ಹಿಡಿದು ಹೊರಕಡೆಗೆ ಹೊರಟಿದ್ದ, ಎತ್ತುಗಳೊಂದಿಗೆ ಕರೆಗೆ ಹೊರಟಿದ್ದ, ಚಕ್ಕಡಿ ಏರಿ ಹೊಲಕ್ಕೆ ಹೊರಟ್ಟಿದ್ದ, ಬುತ್ತಿಗಂಟು ಹೊತತು ಅವಸರದಿಂದ ಕೂಲಿಗೆ ಹೋಗುತ್ತಿದ್ದ ಹೆಣ್ಣುಮಕ್ಕಳು, ಗಂಡಸರು ಶಂಕರನ್ನು ಎವೆ ಇಕ್ಕದೆ ನೋಡಿದರು. ಅಷ್ಟರಲ್ಲಿ ಶಂಕರ ಒಂದು ಸಣ್ಣ ಚಹದಂಗಡಿ ಮುಂದೆ ನಿಂತಾಗ ಅಂಗಡಿಯ ಯುವಕ, ‘ರ‍್ರಿ ರ‍್ರಿ’ ಎಂದು ಗ್ರಾಹಕರನ್ನು ಕರೆಯುವಂತೆ ಖುಷಿಯಿಂದ ಕರೆದನು. ಶಂಕರನು ಆ ಯುವಕನಿಗೆ ವಂದಿಸಿದಾಗ ಅವನೂ ಪ್ರತಿಯಾಗಿ ವಂದಿಸಿ, ಬೆಂಚನ್ನು ತೋರಿಸಿ ಕುಳಿತುಕೊಳ್ಳಲು ವಿನಂತಿಸಿದನು.

ಶಂಕರ ತಾನು ಭೇಟಿಯಾಗಬೇಕಾಗಿರುವ ಶಾಮಣ್ಣನ ಮನೆ ಬಗ್ಗೆ ವಿಚಾರಿಸಿದನು. ಅಂಗಡಿಯ ಆ ಯುವ ಮಾಲೀಕ ಕಲ್ಲಪ್ಪನಿಗೆ ಈ ತರುಣ ಬೆಂಗಳೂರಿನವನೇ ಇರಬೇಕೆಂದು ಖಾತ್ರಿಯಾಯಿತು. “ಸರ್, ನೀವು ಬೆಂಗಳೂರಿಂದ ಬಂದಿರೇನ್ರಿ?” ಎಂದು ಕಲ್ಲಪ್ಪÀ ಕೇಳಿದಾಗ ಶಂಕರ “ಹೌದು ನಿಮ್ಮ ಊಹೆ ಸರಿ” ಎಂದು ಖುಷಿಯಿಂದ ಹೇಳಿದನು. “ಲಲ್ತಕ್ಕ ಕಂಡಿದ್ಲೇನು ನಿಮಗ? ಆರಾಮದಾರೇನ್ರಿ” ಎಂದು ಕಲ್ಲಪ್ಪ ಕೇಳಿದಾಗ ಶಂಕರ, “ಹಾಂ, ಚೆನ್ನಾಗಿದ್ದಾರೆ ಸರ್” ಎಂದು ಹೇಳಿದನು. ಲಲ್ತಕ್ಕನ ಪ್ರೀತಿ ಎಲ್ಲರಲ್ಲಿಯೂ ಇದೆ ಎಂದುಕೊಂಡನು. “ಲೇ ಅಜ್ಜಾ ಬರ‍್ಲೇ ಇಲ್ಲೊಂಚೂರು” ಕಲ್ಲಪ್ಪ ಕರೆದಾಗ ಶಂಕರ ಬೆಪ್ಪಾಗಿ ಆತನನ್ನೇ ನೋಡಿದ. ಹುಡುಗನೊಬ್ಬ ಚಿಣಿಪಣಿ ಆಡುವುದನ್ನು ಬಿಟ್ಟು ಅವುಗಳನ್ನು ಹಿಡಿದುಕೊಂಡೆ, “ಏನೊ ಕಲ್ಲಣ್ಣ” ಎಂದು ಕೇಳಿದ. “ಅಜ್ಜಾ ಲೇ” ಎಂದು ಕೂಗಿದಾ ಯಾವನೋ ಅಜ್ಜನಿಗೆ ಈವಯ್ಯ ಲೇ ಬೇರೆ ಸೇರಿಸುತ್ತಾನಲ್ಲ ಎಂದುಕೊಂಡಿದ್ದ ಶಂಕರ. ಹುಡುಗನ ಹೆಸರು ಏನೋ ಅಜಯ್, ಅಜಿತ್ ಏನೋ ಹೋಗಿ ಅಜ್ಜಾ ಆಗಿರಬಹುದು ಈ ಭಾಗದವರ ಮಾತಿನಲ್ಲಿ ಎಂದುಕೊಂಡನು. ಕಲ್ಲಪ್ಪ ಆ ಹುಡುಗನಿಗೆ ಶಾಮಣ್ಣನ ಮನೆ ತೋರಿಸಲು ತಿಳಿಸಿದನು. ಹುಡುಗ ಆರಡಿ ಎತ್ತರದ ಆ ಚೆಂದದ ಗಂಡುಮಗನೊಂದಿಗೆ ಹೋಗುವುದೆಂದರೆ ತಾನು ಶ್ರೇಷ್ಠನೆಂಬಂತೆ ಆಚೀಚೆಯವರಿಗೆ ತನ್ನ ಬಿಂಕದಲ್ಲಿಯೇ ತೋರಿಸಿಕೊಳ್ಳುತ್ತಾ ಮುಂದೆ ಮುಂದೆ ಹೊರಟನು. “ನಿನ್ನ ಹೆಸರನೇನು ಮರಿ” ಎಂದು ಶಂಕರ ಇವನ ಭುಜದ ಮೇಲೆ ಕೈ ಹಾಕಿ ಕೇಳಿದನು. “ನನ್ನ ಹೆಸರು ಚಂದ್ರಕಾಂತರಿ, ನಿಮ್ಹೆಸರೇನ್ರೀ” ಎಂದ ಹುಡುಗ. ಶಂಕರ ಉತ್ತರಿಸಿ ಮತ್ತೆ ಕೇಳಿದ, “ಶಾಮಣ್ಣನ ಮನೆ ಇನ್ನೂ ದೂರ ಇದೆಯಾ?” “ಇಲ್ರಿ, ಇಲ್ಲೇ ಬಂತು. ಬಸಂದೇರ್ ಗುಡಿ ದಾಟಿ ಬಿಟ್ರ ಒಂದ್ಯಾಡ ಮನಿ ದಾಟಿಂದ ಶಾಮಣ್ಣಾರ ಮನೀನ” ಎಂದನು. ಶಂಕರನಿಗೆ ಬಸವಣ್ಣ ದೇವರ ಗುಡಿ, ಬಸಂದೇರ್ ಗುಡಿ ಆಗಿದ್ದನ್ನು ಕೇಳಿ ಒಳಗೊಳಗೆ ನಗೆ ಬಂದಿತ್ತು. ಬಸವಣ್ಣನ ಗುಡಿ ದಾಟಿದಾಗ ಹುಡುಗ ಬುರ್ ಬುರ್, ಬ್ರಕ್ ಅಂತ ಬಾಯಿಂದ ಶಬ್ದ ಮಾಡಿ ಗಾಡಿ ಬಿಟ್ಟಿದ್ದನ್ನು ಕಂಡು ಶಂಕರನಿಗೆ ನಗೆಯ ಜೊತೆಗೆ ಸ್ವಲ್ಪ ಕಾತರವೂ ಆಯಿತು. ಅಷ್ಟರಲ್ಲಿ ಹುಡುಗ ಒಂದು ದೆಲ್ಲ, ಶಾಮಣ್ಣ ಒಳಗದಾನ” ದೊಡ್ಡ ಮನೆಯ ಮುಂದೆ ಬ್ರೇಕ್ ಹಾಕಿ ತನ್ನ ಗಾಡಿ ನಿಲ್ಲಿಸಿ, “ಯೋ ಎಣ್ಣಾ ಶಾಮಣ್ಣಾ” ಎಂದು ಕೂಗಿದ ತಕ್ಷಣ, “ಯಾಕ್ಲೇ ಬೆರ‍್ಕೊಂತ ಓಡಿ ಬಂದ್ಯಲ್ಲ” ಎನ್ನುತ್ತಲೇ ಸ್ವಲ್ಪ ದೂರದಲ್ಲಿ ನಿಂತಿದ್ದ ಯುವಕನನ್ನು ಕಂಡು ತಾನೇ ಅವನ ಹತ್ತಿರ ಹೋಗಿ, ಮುಗುಳ್ನಕ್ಕು “ಯಾರು ಬೇಕಾಗಿತ್ರಿ, ಎಲ್ಲಿಂದ ಬಂದೀರಿ” ಎಂದು ಒಮ್ಮೆಲೆ ಕೇಳಿದನು. ಶಂಕರ ಉತ್ತರಿಸಿದನು. ವಿನೋದ್ ಖುಷಿಯಿಂದ ಅವನ ಕೈ ಕುಲುಕಿ ತನ್ನನ್ನು ಪರಿಚಯಿಸಿಕೊಂಡನು. “ಇದಾ ನಮ್ಮನೀರಿ. ರ‍್ರಿ ಒಳಗ” ಎಂದು ಸಂಭ್ರಮದಿಂದ ಶಂಕರನನ್ನು ಕರೆದೊಯ್ದನು. ಶಂಕರನಿಗೆ ಆ ಮನೆ ಬಹಳ ಸುಂದರವಾಗಿ ಕಾಣಿಸಿತು. ಕಲ್ಲು ಹಾಸಿನ ಮನೆಯಂಗಳ. ಬಂಕದ ಮನೆ. ಬಂಕದ ಹೊರಗೆ ಮನೆಯ ವಿಸ್ತೀರ್ಣದುದ್ದಕ್ಕೂ ಕಟ್ಟೆ. ಬಂಕದ ಗೋಡೆಗಳ ಮೇಲೆ ತೀರಿ ಹೋಗಿರುವ ಹಿರಿಯ ಭಾವ ಚಿತ್ರಗಳು. ಈ ಭಾಗದ ಶೈಲಿಯ ಹೆಣಿಕೆಯ ವಸ್ತುಗಳಿಂದ ಬಾಗಿಲುಗಳು ಅಲಂಕೃತವಾಗಿವೆ. ಬಂಕದ ನಾಗೊಂದಿಯಲ್ಲಿ ಗುಬ್ಬಿಗಳು ಚಿಂವ್ ಚಿಂವ್ ಎಂದು ಅತ್ತಿಂದಿತ್ತ ಇತ್ತಿಂದತ್ತ ಪುಟ್ರರ್ ಪುಟರ್ ಅಂತ ಶಬ್ದ ಮಾಡುತ್ತ ಹಾತಾಡುತ್ತಿವೆ. ಬಂಕದ ನಾಗೊಂದಿಗೆಗೆ ಒಂದೆರಡು ಗುಬ್ಬಿಯ ಬೊಚ್ಚು ಇಳಿ ಬಿದ್ದಿವೆ. ಗುಬ್ಬಿಗಳು ಮರಿಗಳ ಬಾಯಿಗೆ ಬಾಯಿಟ್ಟು ಗುಟ್ಟಿ ಕೊಟ್ಟು ಮತ್ತೆ ಪುಟ್ರರ್ ಪುರ್ ಅಂತ ಹಾರಾಡುತ್ತಿವೆ. ಒಳಗಿಂದ ಎತ್ತುಗಳ ಕೊರಳಿಂದ ಲಯಬದ್ಧವಾಗಿ ಗಂಟೆಗಳ ಸದ್ದು ಕೇಳುತ್ತಿವೆ. ಲೋಬಾನದ ಹೊಗೆ ಮೂಗಿಗೆ ಬಡಿದಾಗ ಪೂಜೆಯ ಸೊಗಡು ಶಂಕರನಿಗೆ ಹಿತವೆನ್ನಿಸಿತು. ವಿನೋದ್ ಒಳಗೆ ನಡೆದು ಶಾಮಣ್ಣನಿಗೆ ತಿಳಿಸಿದನು. ಶಾಮಣ್ಣ ತನ್ನ ಕೋಣೆಯಿಂದ ಹೊರಬಂದು ಪಡಸಾಲೆಯಲ್ಲಿ ಮಂಚದ ಮೇಲೆ ಕುಳಿತಿದ್ದ ಶಂಕರನಲ್ಲಿಗೆ ಬಂದನು. ಶಂಕರ ಮೇಲೆದ್ದವನೆ ತಾನೇ ಮೊದಲು ಶಾಮಣ್ನನ ಕೈ ಕುಲಕಿದನು ಮುಗುಳ್ನಗುತ್ತಾ. ಇಬ್ಬರೂ ಯೋಗಕ್ಷೇಮ ಕ್ಷೇಮ ವಿನಿಮಯಿಸಿಕೊಂಡರು. ಅಷ್ಟರಲ್ಲಿ ಶಾಮಣ್ಣನ ತಾಯಿ ಚೆನ್ನಮ್ಮ, “ಏ ಶಂಕ್ರಮ್ಮ, ಒಂಚೂರು ಚಾಕಿಡು ಯವ್ವಾ” ಎಂದದ್ದು ಶಂಕರನ ಕಿವಿಗೆ ಬೀಳದಿರಲಿಲ್ಲ. ರಾಮಕ್ಕನ ಸಹ ಹೊರಬಂದು, “ಏನಪ್ಪಾ ತಮ್ಮ ಬೆಂಗಳೋರಿಂದ ಬಂದೀ ಅನ್ಸುತ್ತಾ” ಎಂದಾಗ ಶಾಮಣ್ಣ ಗೌದೆಂದು ತಲೆ ಆಡಿಸಿ, ಶಂಕರನಿಗೆ ತನ್ನನ್ನ ತಾಯಂದಿರನ್ನು ಪರಿಚಯಿಸಿದನು. ರಾಮಕ್ಕ ಶಂಕರನ ಯೋಗಕ್ಷೇಮ ಕೇಳಿ ಲಲಿತಳ ಬಗ್ಗೆ ಕೇಳಿದಳು. ಆಕೆಯ ಮಾತಿನಲ್ಲಿ ಲಲಿತಳ ಬಗ್ಗೆ ಮಗಳೆಂಬ ಮಮತೆ ಸ್ಪುರಿಸಿತ್ತು. ಶಂಕರ ಎಲ್ಲಿಯೂ ಸಂಶಯಕ್ಕೆ ಎಡೆ ಸಿಗದಂತೆ ಲಲಿತಳ ಬಗ್ಗೆ ಮಾತಾಡಿದನು. ಅವನು ಬಂದ ಕೆಲಸ ಮುಗಿದಂತಾಗಿತ್ತು. ಅವನಿಗಾದ ನಿರಾಸೆ, ದುಃಖ, ಉದ್ವೇಗಗಳನ್ನು ಹೊರಹಾಕುವಂತಿರಲಿಲ್ಲ. ಆ ಅಮಾಯಕ ಜನರಿಗೆ ಮಾತೃವಾತ್ಸಲ್ಯ ನೀಡಿ ಲಲಿತಳನ್ನು ಬೆಳೆಸಿದ್ದ ಹೃದಯಗಳಿಗೆ ನೋವುಂಟು ಮಾಡಲು ಅವನು ಇಚ್ಛಿಸಲಿಲ್ಲ. ಹಾಗಂತ ಹೀಗೆ ಬಂದು ಹೀಗೆ ಹೊರಟು ಬಿಡುವಂತೆಯೂ ಇಲ್ಲ. ಅತಿಥಿಗಳ ಅಭ್ಯಾಗತರ ಸೇವೆ ಎಂದರೆ ದೇವರ ಸೇವೆ ಎಂದು ಭಾವಿಸುವ ಈ ಜನರು ತನ್ನನ್ನು ಇವತ್ತು ಊರಿಗೆ ಹೋಗಲು ಖಂಡಿತಾ ಬಿಡುವುದಿಲ್ಲ ಎಂದೆನ್ನಿಸಿದೆ. ಸುಮ್ಮನೆ ಶಾಮಣ್ಣನೊಂದಿಗೆ ಮಾತಿಗಿಳಿದ.

ಶಾಮಣ್ಣನ ತಂದೆ ಹನುಮಂತಪ್ಪ ತಾಯಿ ಚೆನ್ನಮ್ಮ, ಚಿಕ್ಕಪ್ಪಂದಿರಾದ ರಂಗಪ್ಪ- ರುಕ್ಕಮ್ಮ, ಬಸವಣ್ಣೆಪ್ಪ-ಶೀಲಮ್ಮ, ಮೈಲಾರಪ್ಪ-ರಾಮಕ್ಕ ಜೋಡಿಗಳಾಗಿಯೇ ಬಂದು ಶಂಕರನೊಂದಿಗೆ ಆತ್ಮೀಯತೆಯಿಂದ ಯೋಗಕ್ಷೇಮವನ್ನು ಹಂಚಿಕೊಂಡರು. ಲಲಿತ ಯಾವಾಗ ಬರುತ್ತಾಳೆ ಎಂದು ಚಿಕ್ಕಮ್ಮಂದಿರು ಕೇಳಿದಾಗ ಶಂಕರ ಬಹುಶಃ ಕೆಲವು ತಿಂಗಳ ನಂತರ ಬರುತ್ತಾಳೆಂದು ಹೇಳಿದ. ಕಿರಣ, ಕಿಟ್ಟಿ, ರಾಜು ಮುರುಳಿ, ಮುತ್ತಣ್ಣ ಎಲ್ಲರೂ ಹಸನ್ಮುಖರಾಗಿ ಶಂಕರನನ್ನು ಮಾತಾಡಿಸಿದರು. ಅಷ್ಟರಲ್ಲಿ ಚೆನ್ನಮ್ಮ ಎಲ್ಲರಿಗೂ ಉಪಾಹಾರಕ್ಕೆ ಏಳಲು ಸೂಚಿಸಿದಳು. ರುದ್ರಪ್ಪಜ್ಜ ತೀರಿಕೊಂಡ ನಂತರ ಮನೆಯ ಹಿರಿಮಗ, ಹಿರಿಸೊಸೆ ಹನುಮಂತಪ್ಪ -ಚೆನ್ನಮ್ಮ ಮನೆಯ ಹಿರಿತನಕ್ಕೆ ಜವಾಬ್ದಾರರಾಗಿದ್ದರು. ಶಾಮಣ್ಣ ಶಂಕರನ ಜೊತೆಗೆ ಹಿತ್ತಲಿನಲ್ಲಿರುವ ಬಚ್ಚಲಿಗೆ ಹೋಗಿ ಕಾಲು ಮುಖ ತೊಳೆದುಕೊಂಡು ಬಂದು ಪಂಕ್ತಿಯಲ್ಲಿ ಕುಳಿತನು. ಮನೆಯ ಯಜಮಾನ ಹನುಮಂತಪ್ಪನಿಂದ ಹಿಡಿದು ಕೊನೆಯ ಮಗ ಕಿರಣನವರೆಗೆ ಎಲ್ಲರೂ ಒಮ್ಮೆಲೆ ಉಪಾಹಾರ ಸೇವಿಸುವುದು ಅವರ ನಿತ್ಯದ ರೂಢಿ. ಶಂಕರ ಆ ದೊಡ್ಡ ಬಳಗದಲ್ಲಿ ನೆಲದ ಮೇಲೆ ಹಾಸಿದ ಚಾಪೆಯ ಮೇಲೆ ಕುಳಿತು ಒಂದು ರೀತಿಯ ವಿಶ್ರಾಂತ ಭಾವನೆಗೆ ತೆರಳಲು ಪ್ರಯತ್ನಿಸಿದ್ದ. ಶಾಮಣ್ಣನ ಹೆಂಡತಿ ಶಂಕ್ರಮ್ಮ ದೊಡ್ಡ ಪಾತ್ರೆಯಲ್ಲಿ ಉಪ್ಪಿಟ್ಟು ತಂದಳು. ಚೆನ್ನಮ್ಮ ಎಲ್ಲರಿಗೂ ತಟ್ಟೆ ಕೊಡುತ್ತಾ ಸಾಗಿದಂತೆ ಸೊಸೆ ಉಪ್ಪಿಟ್ಟು ಬಡಿಸಿದಳು. ಶೀಲಮ್ಮ ಒಂದು ಬೋಗುಣಿಯಲ್ಲಿ ಗಟ್ಟಿಯಾದ ಬೆಣ್ಣೆ ಗುಂಡನ್ನು ತಂದು ಎಲ್ಲರ ತಟ್ಟೆಗೂ ಸಮೃದ್ಧವಾಗಿ ಬೆಣ್ಣೆ ಹರಿದು ಇಡುತ್ತಾ, ಶಂಕರನಿಗೆ ತುಸು ಹೆಚ್ಚೇ ಹಾಕಿದಳು. ನಿಜವಾಗಿಯೂ ಶಂಕರ ಘಮ್ ಎನ್ನುವ ಉದುರು ಉದುರಾಗಿರುವ ದೊಡ್ಡ ನುಚ್ಚಿನ ಉಪ್ಪಿಟ್ಟು-ಬೆಣ್ಣೆ ಎಷ್ಟೊಂದು ರುಚಿಯಿದೆ ಎಂದುಕೊಂಡು ಸಂಕೋಚಪಡದೆ ತಿಂದು ಮುಗಿಸಿದನು. ಹುಡುಗರು, ದೊಡ್ಡವರು ಮತ್ತೆ ಸ್ವಲ್ಪ ಹಾಕಿಸಿಕೊಂಡು ತಿಂದರು. ಶಂಕರನಿಗೆ ಮೊದಲು ಬಡಿದಿದ್ದೇ ಸಮೃದ್ಧವಾಗಿ ಹೊಟ್ಟೆ ತುಂಬಿತ್ತು. ಅವನು ಚೆನ್ನಮ್ಮನ ಒತ್ತಾಯಕ್ಕೆ ಮಣಿದು ಮತ್ತಷ್ಟು ಹಾಕಿಸಿಕೊಳ್ಳಲು ಹೋಗಲಿಲ್ಲ. ಕೈ ತೊಳೆದುಕೊಂಡನು. ಶಂಕ್ರಮ್ಮ ಗಟ್ಟಿ ಹಾಲಿನಿಂದ ಮಾಡಿದ ಚಹ ತಂದು ಶಂಕರನಿಗೂ, ಉಳಿದೆಲ್ಲರಿಗೂ ಕೊಟ್ಟಳು. ಶಂಕರ ಆ ಮನೆಯವರ ಸರಳ, ಸಂಪನ್ನ ಪ್ರೀತಿಗೆ ಮಾರು ಹೋಗಿದ್ದನು. ಉಪಾಹಾರದ ಸಮಯದಲ್ಲಿ ಚಿಕ್ಕಪ್ಪಂದಿರು ಲಲಿತಳೂ ಬರಬೇಕಾಗಿತ್ತು. ತುಂಬ ದಿನಗಳಿಂದ ಆಕೆ ಊರುಕಡೆಗೆ ಮುಖವನ್ನೇ ಹಾಕಿಲ್ಲ ಅಂತ ದೂರಿಕೊಂಡರು.

ಉಪಾಹಾರದ ನಂತರ ಚಿಕ್ಕಪ್ಪಂದಿರು ತಂತಮಗೆ ಒಪ್ಪಿಸಿದ ಹೊಲ-ಗದ್ದೆಗಳ ಕಡೆ ಮುಖ ಮಾಡಿ ಹೊರಟು ನಿಂತರು. ಶಂಕರಗೆ ಒಂದೆರಡು ದಿನ ಇರಬೇಕೆಂದು ತಾಕೀತು ಮಾಡಿದರು. ಹುಡುಗರು ಸ್ಕೂಲ್ ಕಾಲೇಜು ಎಂದು ಮುಂಡರಗಿ, ಗದಗ್‌ಗೆ ಹೋದರು. ಮುತ್ತಣ್ಣ ಡಂಬಳದ ಬಸವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕ. ಆತನೂ ಕಾಲೇಜಿಗೆ ಹೊರಟು ನಿಂತನು.

ಮುತ್ತಣ್ಣ, ವಿನೋದ ಸಹ ಶಂಕರಗೆ ಒಂದೆರಡು ದಿವ ಇದ್ದೇ ಹೋಗಬೇಕೆಂದು ವಿನಂತಿಸಿದರು. ಆದರೆ ಶಂಕರ ತನ್ನ ಮುಂದಿನ ಕೆಲಸಕ್ಕೆ ಸಮಯ ಸಾಲುವುದಿಲ್ಲ, ಇನ್ನೊಂದು ಸಲ ಬಂದಾಗ ನಾಲ್ಕು ದಿನ ಇದ್ದು ಹೋಗುವುದಾಗಿಯೂ, ಬೇಸರಪಟ್ಟುಕೊಳ್ಳಬಾರದೆಂದೂ ಎಲ್ಲರಿಗೂ ವಿನಮ್ರನಾಗಿ ಹೇಳಿದನು. ಅವನು ಅದೇ ದಿನ ಸಾಯಂಕಾಲ ಗದಗ್‌ನಿಂದ ಬೆಂಗಳೂರಿಗೆ ರೈಲು ಹಿಡಿದು ಹೋಗಲೇಬೇಕೆಂದುಕೊಂಡಿದ್ದನು. ಅದನ್ನೇ ಶಾಮಣ್ಣನಿಗೂ ಹೇಳಿದನು.

ಹೆಣ್ಣುಮಕ್ಕಳೆಲ್ಲರೂ ಉಪಾಹಾರ ತಿಂದು ಮತ್ತೆ ಮದ್ಯಾಹ್ನದ ಅಡುಗೆಗೆ ಕುಳಿತರು. ಚೆನ್ನಮ್ಮ ನಾಲ್ಕು ಎಮ್ಮೆಗಳ ಹಾಲು ಕರೆದುಕೊಂಡು ಒಳನಡೆದಳು. ಕೆಲಸದ ಆಳು ಸಿದ್ಧಪ್ಪ ಬಂದು ದನಗಳನ್ನೆಲ್ಲಾ ಹೊರಗೆ ಹಿತ್ತಲಿನ ಗೋದಲಿ ಸುತ್ತ ಕಟ್ಟಿ ಮೇವು ಹಾಕಿದನು. ಸಗಣಿ ಉಚ್ಚೆಯನ್ನೆಲ್ಲ ಬಳಿದು ದನದ ಹಕ್ಕಿಯಲ್ಲಿ ಪುಡಿ ಹೊಟ್ಟನ್ನು ತೇವವಿದ್ದಲ್ಲಿ ಹರಡಿದನು. ಉಚ್ಚೆ ಸಗಣಿಯ ವಾಸನೆ ದುರ್ನಾತವೆನ್ನಿಸಲಿಲ್ಲವಾದರೂ ಸುವಾಸನೆ ಎಂಬಲೂ ಆಗದೆಂದು ಶಂಕರ ಯೋಚಿಸಿದ.

ಅಡುಗೆ ಮನೆಯಿಂದ ಹಲವಿಧ ಪರಿಮಳ ಒಂದರ ನಂತರ ಒಂದು ಗಾಳಿಯಲ್ಲಿ ತೇಲಿ ಬಂದು ಬಂಕದಲ್ಲಿ ಕುಳಿತಿದದ ಶಾಮಣ್ಣ-ಶಂಕರರ ಹತ್ತರವೂ ಸುಳದಾಡುತ್ತಿತ್ತು. ಶಂಕರ ಅವತ್ತೇ ಊರಿಗೆ ಹೊರಡುವುದು ಖಚಿತವಾದಾಗ ಚೆನ್ನಮ್ಮ ತನ್ನ ಓರಗಿತ್ತಿಯರಿಗೆ, “ತಂಗ್ಯಾರ ಏನಾರ ಸೀಯಡಗಿ ಮಾಡಬೇಕ್ರೆ, ಅಪರೂಪಕ್ಕ ದೊಡ್ಡ ಊರಿಂದ ಓದಿದ ಹುಡುಗ ಬಂದಾನ” ಎಂದಾಗ “ಹೌದ ಎಕ್ಕಾ, ಮಾಡೂನಾಳು” ಎಂದು ರಾಮಕ್ಕ ಸಿದ್ಧಳಾಗಿದ್ದಳು. ತಲಾಗೊಂದೊಂದು ಕೆಲಸವನ್ನು ಹಂಚಿಕೊಂಡು ಮಾಡಿ ಮುಗಿಸಿದ್ದರು. ಮಾತಿನಲ್ಲಿ ತೊಡಗಿದ್ದ ಶಾಮಣ್ಣ ತಾಯಿ ಊಟಕ್ಕೆ ಎಬ್ಬಿಸಿದಾಗಲೆ ವಾಸ್ತವಕ್ಕೆ ಬಂದಿದ್ದ. ಅರೇಳು ವರ್ಷಗಳ ಪರಿಚಯ ಅವರಿಬ್ಬರ ನಡುವೆ ಸಲುಗೆಯಾಗಿ ಸ್ನೇಹವಾಗಿ ಏಕವಚನದಲ್ಲಿ ಮಾತಾಡಿಕೊಳ್ಳುವಷ್ಟು ಆತ್ಮೀಯರಾಗಿದ್ದರು. ಶಂಕರ ತನ್ನ ಓದು, ಉದ್ಯೋಗ, ಗುರಿ ಹೀಗೆ ಒಂದೊಂದನ್ನೇ ಶಾಮಣ್ಣನೊಂದಿಗೆ ಹೇಳಿಕೊಂಡಿದ್ದ. ಶಾಮಣ್ಣನ ಅಣತಿಯಂತೆ ಶಂಕರ ಸ್ನಾನಕ್ಕೆ ಹೋದನು.

ಮದ್ಯಾಹ್ನ ಊಟಕ್ಕೆ ಶಾಮಣ್ಣ, ಶಂಕರ ಇಬ್ಬರೆ ಕುಳಿತಾಗ ಶಂಕರ ಏನನ್ನೊ ಕಳೆದುಕೊಂಡವನಂತೆ ಚಡಪಡಿಸಿದನು. ತುಂಬು ಪಂಕ್ತಿಯೊಂದಿಗೆ ಕುಳಿತು, ಪಟ್ಟಣದ ಪೋರ್ಕ್, ಚಮಚ, ಡೈನಿಂಗ್ ಟೇಬಲ್‌ನ ಬಿನ್ನಾಣವಿಲ್ಲದೇ ಹೊಟ್ಟೆ ತುಂಬ ನಿಃಸಂಕೋಚವಾಗಿ ಉಂಡಿದ್ದೆಂದರೆ ಇದೇ ಮೊದಲು. ಈಗ ಮದ್ಯಾಹ್ನದ ಊಟಕ್ಕೆ ಕೆಲಸ, ಶಾಲೆ-ಕಾಲೇಜ್ ಅಂತ ಮನೆಯ ಗಂಡುಮಕ್ಕಳೆಲ್ಲಾ ಹೊರ ಹೋಗಿದ್ದಾರೆ. ಶಂಕರನ ಮುಖ ಸಪ್ಪಗಾಗಿದ್ದನ್ನು ಗಮನಿಸಿದ ಶಾಮಣ್ಣ “ಯಾಕ ಮುಖ ಸಪ್ಪಗೆ ಮಾಡೀಯಲ್ಲ” ಎಂದನು ಅಕ್ಕರೆಯಿಂದ. “ಶಾಮಣ್ಣ ಎಲ್ಲರೊಂದಿಗೆ ಉಪಾಹಾರ ಮಾಡಿದ್ದು ನೆನಪಾಯ್ತು. ಈಗ ನಾವಿಬ್ರೆ ಅನ್ನಿಸ್ತು” ಎಂದು ಪ್ರಾಮಾಣಿಕವಾಗಿ ತನ್ನ ಭಾವನೆಯನ್ನು ಹೊರಹಾಕಿದನು.

“ಸೈ ಬಿಡು ಮಾರಾಯ, ನಮಗಿದೆಲ್ಲಾ ರೂಢಿಯಾಗಿ ಬಿಟ್ಟೆöÊತಿ. ಬೆಳಿಗ್ಗೆ ಮತ್ತ ರಾತ್ರಿ ಊಟಕ್ಕ ಪಂಕ್ತಾ÷್ಯಗ ಕೂಡೂದು. ಮದ್ಯಾಹ್ನ ಹೊಲಕ್ಕೆ ಹೋದಾರು ಹೊಲದಾಗ ಊಟ ಮಾಡ್ತಾರ. ಹುಡುಗರು ಡಬ್ಬಿ ಒಯ್ದಿರ್ತಾರ. ವಿನೋದ್, ಮುತ್ತಣ್ಣ ಕೂಡ ಡಬ್ಬಿ ಒಯ್ತಾರ. ಮನ್ಯಾಗ ಅವ್ವಾರಷ್ಟೆ ಇರ್ತಾರ. ಇವತ್ತ ನೀ ಬಂದೀಯಂತ ನಾನು ಮನ್ಯಾಗುಳಿದೆ. ಇಲ್ಲಿದ್ದರೆ ಮದ್ಯಾಹ್ನ ನಾವು ಗಂಡು ಮಕ್ಕಳು ಪತ್ತೇನೇ ಇರಲ್ಲ ಬಿಡು. ನೀನು ಖುಷಿಯಾಗಿ ಉಣ್ಣು. ಒಂದು ನಾಲ್ಕು ದಿವಸ ಇರು ಅಂದ್ರ ನೀನ್ ಏನೇನಾ ಹೇಳ್ತೀಯಪ್ಪ” ಎಂದನು.

“ಬೇಜಾರಾಗ್ಬೇಡ ಶಾಮಣ್ಣ ನಾನು ಮೊದಲೆ ಸಮಯ ಇಟ್ಟುಕೊಂಡು ಇನ್ನೊಂದ್ಸಲ ಬರ್ತೀನಿ. ಆಗ ಸ್ವಲ್ಪ ದಿನ ಇದ್ದರಾಯಿತು” ಎಂದನು.

“ನಿಜವಾಗ್ಲೂ ನೀನು, ಚೈತನ್, ಜ್ಯೋತಿ ಎಲ್ಲಾರೂ ರ‍್ರಿ. ನಮ್ಮ ಕಡೆ ಕಪ್ಪತಗುಡ್ಡ, ಲಕ್ಕುಂಡಿ, ಡಂಬಳ, ಇಟಗಿ, ಕೊಪ್ಪಳ, ಹಂಪಿ, ಅನ್ನಿಗೇರಿ ಎಲ್ಲಾ ನೋಡಿಕೊಂಡು ಹೋಗೀರಂತೆ. ಬ್ಯಾಸ್ರಾನೂ ಹೋಗುತ್ತ” ಎಂದನು. ಅಷ್ಟರಲ್ಲಿ ರುಕ್ಕಮ್ಮ ಇಬ್ಬರ ಮುಂದೆ ನೀರಿನ ತಂಬಿಗೆ ಇಟ್ಟು, ತಟ್ಟೆ ಹಾಕಿದಳು. ಶೀಲಕ್ಕ ಕಟಗುರೊಟ್ಟಿ ಮುರಿದು ತಾಟಿಗೆ ಹಾಕಿದಳು. ರಾಮಕ್ಕ ಪಲ್ಯದ ಬಟ್ಟಲುಗಳ ಸೆಟ್ಟನ್ನು ಎತ್ತಿಕೊಂಡು ಬಂದು ಎಣ್ಣೆಗಾಯಿ, ಸೇಂಗಾ ಚಟ್ನಿ, ತಾಟಿಗೆ ಬಡಿಸಿ, ಕೆನೆ ಮೊಸರು ತುಂಬಿದ ಬಟ್ಟಲನ್ನು ಮುಂದಿರಿಸಿದಳು. ಶಂಕರನಿಗೆ ಊಟ ರುಚಿ ಎನ್ನಿಸಿತು. ಲಲಿತಳ ನೆನಪು ಊಟ ಮಾಡುವಾಗ ಸುಳಿದಾಡಿತು. ಶೀಲಕ್ಕ ಶಾವಿಗೆ ಪಾಯಸ ಬಡಿಸಿ, ಬಟ್ಟಲು ತುಂಬ ತಂದಿದ್ದ ತುಪ್ಪವನ್ನು ಸುರಿದಳು. ಶಂಕರ ಅಷ್ಟು ಪಾಯಸವನ್ನು ಉಣ್ಣುವುದು ಕಷ್ಟವೆಂದುಕೊಂಡ. ಶಾಮಣ್ಣ ಕೈಯಿಂದಲೇ ಸೊರ್, ರ‍್ರ್ ಎಂದು ಪಾಯಸ ತಿನ್ನುವುದನ್ನು ಕಂಡೂ ತಾನೂ ಕೈಯಿಂದಲೇ ತಿಂದು ಸ್ಪೂನ್‌ನಿಂದ ತಿನ್ನುವುದು ಏನೂ ಅಲ್ಲ ಬಿಡು ಎಂದುಕೊಂಡ. ಮತ್ತೆ ಶೀಲಕ್ಕ ಪಾಯಸ ತಂದಾಗ ಶಾಮಣ್ಣ ಒತ್ತಾಯಿಸಿದರೂ ಶಂಕರ ಸಾಕೆಂದು ಹೇಳಿದ. ಅವನಿಗೆ ತೃಪ್ತಿಯಾಗುವಷ್ಟು ಮೊದಲೆ ಬಡಿಸಿದ್ದು ಸಾಕೆನ್ನಿಸಿತು. ಶೀಲಕ್ಕ ಅಡಿಗೆ ಮನೆಯಿಂದ ಅನ್ನ ತಂದು ಬಡಿಸಿದಳು. ಶಂಕ್ರಮ್ಮ ಹೆಸರು ಬೇಳೆ ಸಾರು ಹಾಕಿ, ಉಪ್ಪಿನ ಕಾಯಿ ಇಟ್ಟಳು ಜೊತೆಗೆ ಸಂಡಿಗೆ ಹಾಕಿದಳು. ಕೊನೆಗೆ ಶಂಕರ ಸಾಕೆಂದರೂ ಚೆನ್ನಮ್ಮ “ಮಜ್ಜಿಗೆ ಸಾರನ್ನ ಉಣ್ಣಬೇಕು” ಎಂದು ತಾಕೀತು ಮಾಡಿದಾಗ ಶಂಕರ ಮತ್ತೆ ಎರಡು ತುತ್ತು ಅನ್ನ ಹಾಕಿಸಿಕೊಂಡು ಮಜ್ಜಿಗೆ ಸಾರಿನೊಂದಿಗೆ ಕಲಸಿಕೊಂಡು ಉಂಡನು. ಲಲಿತ ಕಣ್ಮರೆಯಾದ ನಂತರ ಶಂಕರ ಈ ದಿನವೇ ಈ ಜನರ ಬಲವಂತಕ್ಕೆ ಮಣಿದು ತೇಗು ಬರುವಂತೆ ಉಂಡಿದ್ದ.

ಶಂಕರ ಸಾಯಂಕಾಲ ಹೊರಟು ನಿಂತಾಗ ಆ ತಾಯಂದಿರು ಮತ್ತೆ ಪ್ರೀತಿಯಿಂದ ಅವಲಕ್ಕಿ ಚಹ ಮಾಡಿ ತಿನ್ನಿಸಿ ಉಪಚರಿಸಿದರು. ಚೆನ್ನಮ್ಮ ಎರಡು ಗಾಜಿನ ಭರಣಿಗಳಲ್ಲಿ ತುಪ್ಪ ಹಾಕಿ, ಬಿಗಿ ಮಾಡಿ, ಕªರಿನಲ್ಲಿ ಕಟ್ಟಿ ಒಂÀÄ ಒಳ್ಳೆಯ ಚೀಲದಲ್ಲಿಟ್ಟು ಶಂಕರನ ಕೈಗೆ ಕೊಟ್ಟು ಲಲಿತಗೂ ಕೊಡು ಎಂದಾಗ, ‘ಅಯ್ಯೋ’ ಎಂದನು ಅಚ್ಚರಿಯಿಂದ. ಅವ್ಯಕ್ತ ಸಂಕಟಕ್ಕೆ ಈಡಾದ ಅವನು, “ಆಗಲಮ್ಮ, ಕೊಡ್ತೀನಿ. ತಾವೇನೂ ಚಿಂತಿಸಬೇಡಿ. ನಾವೆಲ್ಲ ಅವಳ ಹತ್ತಿರಾನೆ ಇರ್ತೀವಲ್ಲ” ಎಂದು ಎಲ್ಲರಿಗೂ ಸಮಾಧಾನ ಮಾಡಿದ. ತಾಯಂದಿರಗೆಲ್ಲ ಶಂಕರ ನಮಸ್ಕರಿಸಿ ಶಾಮಣ್ಣೊಂದಿಗೆ ಬಸ್ ಸ್ಟಾ÷್ಯಂಡ್ ಕಡೆ ನಡೆದ. ಏನೊ ನೆನಪದಾದಂತಾಗಿ, “ಹಾಂ ಶಾಮಣ್ಣ! ಲಲಿತಾಳ ತಾಯಿ ಬಸಮ್ಮನರ‍್ನ ಮಾತಾಡಿಸಬೇಕಿತ್ತಲ್ಲ” ಎಂದಾಗ ಶಾಮಣ್ಣನಿಗೂ ಹೌದೆನ್ನಿಸಿತು. ಒಂದೈದು ನಿಮಿಷ ಮಾತಾಡಿ ಹೋದರಾಯಿತೆಂದು ಬಸಮ್ಮನ ಮನೆ ಕಡೆ ನಡೆದರು. ಚೆನ್ನಮ್ಮ ಹಾಗೂ ಆಕೆಯ ತಂಗಿಯರು ಸೊಸೆ ಎಲ್ಲರೂ ತಲೆ ತುಂಬ ಸೆರಗು ಹೊದ್ದು ಹೊರಬಂದು ಶಂಕರನನ್ನು ಬೀಳ್ಕೊಟ್ಟರು. ಶಾಮಣ್ಣ ಅನುಮಾನಿಸುತ್ತಲೆ ನಡೆದಿದ್ದ. ಬಸಮ್ಮ ಹೊಲದಿಂದ ಬಂದಿರಲಿಕ್ಕಿಲ್ಲ ಎಂದುಕೊಂಡೆ ಸಾಗಿದ್ದ. ಮಾರನೆ ದಿನ ಹುಣ್ಣಿಮೆ ಇರುವುದರಿಂದ ಬಸಮ್ಮ ಇಂದು ಬೇಗನೆ ಬಂದಿದ್ದಳು. ಕ್ರಮವಾಗಿ ಎಂಟು ಹತ್ತನೇ ತರಗತಿಯಲ್ಲಿ ಓದುತ್ತಿರುವ ಸುರೇಶ, ರಾಜೇಶ ಸಹ ಶಾಲೆಯಿಂದ ಬಂದಿದ್ದರು. ಸಾಮಣ್ಣನಿಗೆ ಮನೆಯ ಬಾಗಿಲು ತೆರೆದಿರುವುದು ದೂರದಿಂದ ಕಾಣಿಸಿದಾಗ, “ಸದ್ಯಕ್ಕ ಬಂದಾಳಲ್ಲ” ಎಂದುಕೊಂಡ. ಶಂಕರನಿಗೂ ಅದನ್ನೇ ಹೇಳಿದ. ಶಾಮಣ್ಣನೊಂದಿಗೆ ಅಪರಿಚಿತ ಯುವಕ ತಮ್ಮ ಮನೆಗೆ ಬರುತ್ತಿರುವುದು ಕಂಡು ಸುರೆಶ, “ಎವ್ವಾ, ಶಾಮಣ್ಣಣ್ಣನ ಕೂಡ ಯಾರಾ ಬಂದ್ರು” ಎಂದನು ಒಳಗೋಡಿ. ಕೌತುಕದಿಂದ ಬಸಮ್ಮ ಹೊರಗೆ ಬಂದು ನೋಡುವಷ್ಟರಲ್ಲಿ ಶಾಮಣ್ಣ ಮನೆಯಂಗಳಕ್ಕೆ ಬಂದಿದ್ದ. ಬಸಮ್ಮ, “ಬಾ ಬಾ ಶಾಮಣ್ಣ. ರ‍್ರೆಪ್ಪ” ಎಂದು ಇಬ್ಬರಿಗೂ ಸ್ವಾಗತಿಸಿದಳು. ಶಾಮಣ್ಣ ಪರಸ್ಪರರಿಗೆ ಪರಿಚಯಿಸಿದ. ಬಸಮ್ಮ ಲಲಿತಳನ್ನು ಕೇಳಿದಳು. ಆಕೆ ಮಾತು ಮಾತಾಡುತ್ತಲೇ ಕಣ್ಣೀರು ತುಂಬಿಕೊಂಡು, ನಿಟ್ಟುಸಿರು ಹೊರಚೆಲ್ಲಿದಳು. ಮಗಳು ಮಗನಂತೆ ನಿಂತು ತನ್ನ ಜೀವನಕ್ಕೆ ಆಸರೆಯಾಗಿದ್ದಾಳೆಂದು ಲಲಿತೆಯ ಶ್ರಮವನ್ನು ಆಕೆಯ ಸಹಾಯವನ್ನು ನೆನೆದಳು. ಲಲಿತೆಯ ಈ ಮಲತಾಯಿ ಒಂದೊಮ್ಮೆ ಅಷ್ಟು ಕಠೋರವಾಗಿದ್ದವಳು ಕಾಲನ ಹೊಡೆತಕ್ಕ ಸಿಕ್ಕು ಪರಿವರ್ತನೆಯಾಗಿ ಈಗ ಲಲಿತಳೇ ತನ್ನ ಬೆನ್ನೆಲುಬು ಎನ್ನುವಂತಾಗಿದ್ದು ಶಂಕರನಿಗೆ ನೆಮ್ಮದಿ ಎನ್ನಿಸಿತು. ಜೊತೆಗೆ ಅನುಕಂಪ ಮೂಡಿತು. ಆತ, “ಚಿಂತಿಸಬೇಡಿರಮ್ಮ” ಎಂದು ಹೇಳಿ ಆಕೆಯ ಕೈಗೆ ಒಂದು ನೋಟಿನ ಕಂತೆ ಇಟ್ಟು, ಆಕೆ ಬೇಡವೆಂದರೂ ಲಲಿತಾ ಕೊಟ್ಟಿದ್ದೆಂದು ಸುಳ್ಳು ಹೇಳಿ ಒಪ್ಪಿಸಿದನು. ಸುರೇಶ, ರಾಜೇಶನಿಗೆ ಹೇಳಿ ಬೆನ್ನು ಸವರಿ ಚೆನ್ನಾಗಿ ಓದಿರೆಂದು ಹೇಳಿದನು. ಬಸಮ್ಮ ಅಕ್ಕರೆಯಿಂದ ಕೊಟ್ಟ ಚಹವನ್ನು ಕುಡಿದು, ಅವರೆಲ್ಲರಿಂದ ಬೀಳ್ಕೊಂಡು ಬಸ್ ಸ್ಟಾ÷್ಯಂಡ್ ಕಡೆ ನಡೆದನು. ಬಸ್ ಒಂದೆರಡು ನಿಮಿಷಗಳಲ್ಲೇ ಬಂದಿತು. ಶಂಕರ ಬಸ್ ಹತ್ತುವಾಗ ಅಂಗಡಿ ಕಲ್ಲಪ್ಪ ಕಣ್ಣಲ್ಲೇ ಬೀಳ್ಕೊಟ್ಟಿದ್ದ ನಸುನಕ್ಕು.

ಮುಂದುವರೆಯುವುದು

ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x