ದಿಕ್ಕುಗಳು (ಭಾಗ 10): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅದೇ ರೀತಿ ಸುಸಜ್ಜಿತವಾದ ಆಧುನಿಕ ಸ್ನಾನದ ಕೋಣೆ, ಪಾಯಖಾನೆಯನ್ನು ನೋಡಿದಾಗ ಅನುಶ್ರೀ ಗೊಂದಲಕ್ಕೀಡಾದಳು. ಚೈತನ್ ಆಕೆಯ ಕೈ ಹಿಡಿದುಕೊಂಡೇ ನಡೆದು ಬಚ್ಚಲು ಮನೆಯಲ್ಲಿಯ ಬಿಸಿ ನೀರು, ತಣ್ಣೀರಿನ ನಲ್ಲಿಗಳನ್ನು ತೋರಿಸಿ, ಪಾಯಖಾನೆ ಬಳಸುವ ಪದ್ಧತಿಯನ್ನೂ ಸೂಚ್ಯವಾಗಿ ತಿಳಿಸಿ ಸಂಕೋಚಪಟ್ಟುಕೊಳ್ಳುವ ಅಗತ್ಯವಿಲ್ಲವೆಂದು ಬೆನ್ನು ತಟ್ಟಿ ಹೇಳಿದನು. “ಸ್ನಾನ ಮಾಡಿ ಬಿಡು. ಫ್ರೆಶ್ ಆಗುತ್ತೆ ಮನಸ್ಸು ಕೂಡ” ಎಂದಾಗ ಆಕೆ, “ಬ ಬ ಬಟ್ಟೆ..” ಎಂದು ತೊದಲಿದಳು. “ನಾ ನಾ ನಾಳೆ ತರ್ತೀನಿ. ಈಗ ನನ್ನ ಬಟ್ಟೆ ಹಾಕಿಕೊ” ಎಂದು ಚೈತನ್ ಅಣಕಿಸುತ್ತಾ ಹೇಳಿದಾಗ ಹುಡುಗಿ ನಾಚಿಕೊಂಡು ಕೆಂಪು ಕೆಂಪಾದಳು.

ಅನುಶ್ರೀ ಸ್ನಾನ ಮಾಡಿ ಇದ್ದ ಬಟ್ಟೆಗಳಲ್ಲೆ ಹೊಂದಾಣಿಕೆ ಮಾಡಿಕೊಂಡು ಬಚ್ಚಲು ಕೋಣೆಯ ಕನ್ನಡಿಯಲ್ಲಿ ತನ್ನ ಹೊಸ ಉಡುಗೆ ಕಂಡು, ನಾಚಿ ನೀರಾದಳು. ಪ್ರಾರಂಭದಲ್ಲಿ ಜ್ಯೋತಿಗೆ ‘ಗಂಡುರಾಮಿ’ ಎಂದು ತಾನು ಕೆಕ್ಕರಿಸಿಕೊಂಡು ನೋಡಿದ್ದು ನೆನಪಾಗಿ ಕಿಸಕ್ಕನೆ ನಕ್ಕಬಿಟ್ಟಳು. ಈಗ ಈ ಗಂಡುರಾಮನ ಕೈಲ್ಲಿ ತಾನು ಗಂಡುರಾಮಿಯಾಗಿದ್ದು ಕಂಡು, ಸಂಕೋಚಗೊಂಡು ಹೊರ ಬರದೆ ಕನ್ನಡಿಗೆ ಬೆನ್ನು ಮಾಡಿಕೊಂಡು ನಿಂತು ಬಿಟ್ಟಿದ್ದಳು. ಹಾಲಿಗೆ ಬೆಲ್ಲ ಬೆರೆಸುತ್ತಿದ್ದ ಚೈತನ್ ಅಡುಗೆಮನೆಯಿಂದಲೇ, ‘ಓಯ್’ ಎಂದು ಕೂಗು ಹಾಕಿದಾಗ ಆಕೆ ಸಂಕೋಚದಿಂದಲೇ ಹೊರಬಂದಳು. ಲಂಗ ಹಿಡಿದುಕೊಂಡು ಓಡಾಡುವ ರೂಢಿಯಿಂದಾಗಿ ಪ್ಯಾಂಟನ್ನು ಹಿಡಿದುಕೊಂಡೆ ಕಿಚನ್ ಕಡೆ ಬಂದಿದ್ದನ್ನು ನೋಡಿದ ಚೈತನ್ ಉಕ್ಕಿ ಬಂದ ನಗೆಯಿಂದಾಗಿ ಹಾಲು ಚೆಲ್ಲೀತೆಂದು ಲೋಟವನ್ನು ಕಟ್ಟೆಯ ಮೇಲಿಟ್ಟನು. ಈ ಲಲನೆ ಪ್ಯಾಂಟ್ ಹಾಕಿಕೊಂಡರೂ ಲಂಗದ ನೆರಿಗೆ ಚಿಮ್ಮುತ್ತಾ ನಡೆದಂತೆ ಸಾಗಿ ಅವನ ಮುಂದೆ ನಿಂತಾಗ ಚೈತನ್ಗೆ ನಗೆ ತಡೆಯಲಾಗಲಿಲ್ಲ. ಸಂಕೋಚದಿಂದ ಹಿಡಿಯಾಗಿದ್ದ ಹುಡುಗಿ ಆತನನ್ನೊಮ್ಮೆ ತನ್ನನ್ನೊಮ್ಮೆ ನೋಡಿಕೊಂಡು ತಲೆ ತಗ್ಗಿಸಿ ನಿಂತಳು ಮಾತು ಬಾರದೆ. ತನ್ನ ಮಾರುದ್ದದ ಜಡೆಗೆ ಮುಡಿದಿದ್ದ ಗುಲಾಬಿ ಹೂವು ಎದುರಿಗಿದ್ದ ಹುಡುಗನ ವಾಂಛೆಯನ್ನು ಕೆರಳಿಸುವಂತೆ ಶೋಭಿತವಾಗಿತ್ತು. ಇಬ್ಬರೂ ಮೌನವಾಗಿ ಹಾಲು ಕುಡಿಯುವಾಗ ಕಣ್ಣುಗಳೇ ಅಲ್ಪಸ್ವಲ್ಪ ಮಾತಾಡತೊಡಗಿದ್ದವು.

ಹಾಲು ಕುಡಿಯುವಾಗ ಇದ್ದಕ್ಕಿದ್ದಂತೆ ಇಬ್ಬರಿಗೂ ಕೆಂಪಮ್ಮನ ಅಂಗಡಿಯ ಹಾಲಿನ ಪ್ರಕರಣ ನೆನಪಾಯಿತು. ಚೈತನ್ ತನ್ನ ಆಗಿನ ಪಡಿಪಾಟಲನ್ನು ನೆನೆದು ಕಿಸಕ್ಕನೆ ನಕ್ಕು ಬಿಟ್ಟನು. ಅನು ಆತನ ಮುಖವನ್ನು ನೋಡಿದಳು. ಆತ ಆಕೆಯ ಮನಸ್ಸನ್ನು ಓದಿಕೊಂಡು ಕೇಳಿದನು, “ನೀವು ಹಾಲು ತಗೊಳ್ಳೋ ಟೈಮ್ ಚೇಂಜ್ ಮಾಡೀದ್ರಲ್ಲಾ ಅದು ನೆನಪಾಯ್ತು… ಆಮ್ಯಾಲೆ ಎಷ್ಟು ಗಂಟೆಗೆ ಹಾಲು ತಗೊಂಡು ಹೋಗ್ತಿದ್ರಿ” ಎಂದವನ ಕಣ್ಣುಗಳಲ್ಲಿ ತುಂಟತನವಿತ್ತು. ಆಕೆ ತನ್ನ ಬದಲಾದ ಸಮಯವನ್ನೂ, ಕೆಂಪಮ್ಮನ ಸಿಡಿಮಿಡಿಯನ್ನು, ತಾನು ಚಹ ಕುಡಿಯುವುದನ್ನೇ ನಿಲ್ಲಿಸಿದ್ದನ್ನು, ಅವತ್ತಿನಿಂದ ಹಾಲು, ಚಹದಿಂದ ದೂರವಾಗಿದ್ದವಳು ಇವತ್ತೆ ಮತ್ತೆ ಹಾಲು ಕುಡಿದದ್ದು ಎಂದಾಗ ಚೈತನ್ ಕರುಳು ಚುರುಕ್ ಎಂದಂತಾಗಿತ್ತು. ಭಾವುಕನಾಗಿದ್ದ ಆತ ಎಷ್ಟು ಕಡಿವಾಣ ಹಾಕಿಕೊಂಡರೂ ಸಾಧ್ಯವಾಗದೇ, ಪಕ್ಕದಲ್ಲಿಯೇ ಕುಳಿತಿದ್ದೆ ಆಕೆಯ ಭುಜವನ್ನು ಬಳಸಿ ಹಡಿದು, “ಅನೂ ಇಲ್ಲಿ ನನ್ನ ಜೊತೆ ಇದ್ದು ಬಿಡು. ಇಲ್ಲಿ ನಿನಗೇನೂ ತೊಂದ್ರೆ ಇಲ್ಲ” ಎಂದನು. ಅನುಶ್ರೀ ಆತನ ಹಿಡಿತದಲ್ಲಿ ಕರಗಿ ಹೋಗುತ್ತಿರುವಂತೆ ಭಾವುಕಳಾದಳು. ಈತನ ವರ್ತನೆಯೇ ಅರ್ಥವಾಗುತ್ತಿಲ್ಲ.

ಜ್ಯೋತಿ ಜೊತೆ ಹಾಗೆ ತಿರುಗುತ್ತಾನೆ. ತನ್ನ ಹತ್ತಿರ ಹೀಗೆ ಹೇಗ್ಹೇಗೋ ಖುಷಿ ಆಗುವಂತೆ, ಸಂಶಯವಾಗುವಂತೆ ವರ್ತಿಸುತ್ತಾನೆ. ಆತನಿಂದ ದೂರ ಸರಿದು ನಿಲ್ಲಲೂ, ಕುಳಿತುಕೊಳ್ಳಲೂ ಯೋಚಿಸಿದರೂ ತನಗೇಕೆ ದೂರ ಸರಿಯಲಾಗುತ್ತಿಲ್ಲವೊ ಈತನ ಹತ್ತಿರವೇ ಇರಬೇಕೆನ್ನಿಸುತ್ತಿದೆ.. ಹೀಗೆ ಆಕೆ ಏನೇನೋ ಯೋಚನೆಗೆ ಈಡಾಗಿದ್ದಳು. ಆತ ಆಕೆಯ ಕೆನ್ನೆಗೆ ಹಗುರವಾಗಿ ಚಿವುಟಿ, “ನಾನು ಹೇಳಿದ ಮಾತು ಕೇಳ್ತೀಯಾ” ಎಂದನು. ಆಕೆ ಅನುಮಾನದಿಂದ, “ಮೊದಲು ಹೇಳ್ರಿ, ಯಾವ ಮಾತು” ಎಂದಳು. ಆಕೆಯ ಮನಃ ಪಟಲದಲ್ಲಿ ಮಲಕಾಜಪ್ಪನ ಮುಖ ಕಾಣಿಸಿಕೊಂಡು ಮರೆಯಾಯಿತು. ಚೈತನ್ ಅಕೆಯ ಕೈಯನ್ನು ಮತ್ತಷ್ಟು ಬಿಗಿಯಾಗಿ ಹಿಡಿದುಕೊಂಡು , “ಇವತ್ತು ನೇಣಿಗೆ ಕತ್ತು ಕೊಟ್ಟಿದ್ದೆಲ್ಲಾ, ಅದೆಲ್ಲಾ ಮತ್ತೆಂದೂ ಬ್ಯಾಡ. ಸರಿಯಾ?” ಎಂದನು. ಅನುಶ್ರೀ ಬಿಳುಚಿಕೊಂಡು ‘ಹೂ’ ಎಂಬಂತೆ ತಲೆ ಅಲುಗಾಡಿಸಿದಳು.

ಆ ದಿನ ಚೈತನ್ ಆಕೆಯ ಭುಜವನ್ನು ಬಳಸಿ ಹಿಡಿದಾಗ “ನೀವು ಹಿಂಗ್ಯಾಕ ಮಾಡ್ತೀರಿ” ಎಂದಳು. ಚೈತನ್ ಆಕೆಯನ್ನು ಕೈ ಬಿಟ್ಟು, ತುಸು ಸರಿದು ಕೈಕಟ್ಟಿಕೊಂಡು ಹುಬ್ಬೇರಿಸಿ, “ಹೆಂಗ ಮಾಡ್ತೀನಿರಿ? ನೀವು ಚೊಲೊ ಅದೀರಿ ಎಲ್ಯಾರ” ಎಂದನು. ಲಲಿತಳ ಒಡನಾಟದಲ್ಲಿ ಆತನಿಗೆ ಉತ್ತರ ಕರ್ನಾಟಕದ ಮಾತಿನ ಧಾಟಿ ಕರಗತವಾಗಿತ್ತು. ಆತ ತನಗೆ ಅಣಕಿಸುತ್ತಿದ್ದಾನೆಂದು ಅನುಶ್ರೀ ಸಂಕೋಚದಿಂದ ಎಡಗೈಯನ್ನು ಹಣೆಯ ಮೇಲಿಟ್ಟುಕೊಂಡು ಆತನ ಕಣ್ಣೆದುರಿಸಲಾರದೆ ತಲೆ ಕೆಳಗೆ ಹಾಕಿದಳು. ಚೈತನ್ ಸರಿದು ಆಕೆಯನ್ನು ಮತ್ತೆ ತನ್ನೆಡೆ ಎಳೆದುಕೊಂಡು, “ಹೇಳ್ರಿ ನಾನೇನು ಮಾಡ್ತೀನಿ ತಪ್ಪ ಕೆಲ್ಸ” ಎಂದನು. ಆಕೆಗೆ ಓಡೋಡಿ ಬಂದು ಕುಳಿತಾಗ ತೇಕುವ ಹಾಗೆ ತೇಕು ಬಂದಿತ್ತು. ಈತ ಎಂಥಾ ಮನುಷ್ಯ! ಉಕ್ಕಿಗೆ ಕಬ್ಬಿಣದ ತುಂಡು ಅಂಟಿಕೊಳ್ಳುವಂತೆ ತನ್ನ ಮನಸ್ಸು ಆತನಿಗೆ ಅಂಟಿಕೊಂಡುಬಿಟ್ಟಿರು”ವಾಗ ಕೈ ಕೊಸರಿಕೊಂಡು ದೇಹದಿಂದ ದೂರ ಸರಿಯುವುದಾದರೂ ಹೇಗೆ ಎಂದು ಯೋಚಿಸತೊಡಗಿದಳು.

“ನಾನು ಏನು ಕೇಳಿದರೂ ತಪ್ಪು ತಿಳ್ಕೊಳ್ಳಂಗಿಲ್ಲ ಹೌದಿಲ್ರಿ” ಎಂದು ಆಕೆ ಕೇಳಿದಾಗ, ‘ಇಲ್ಲ’ ಎನ್ನುವಂತೆ ಚೈತನ್ ತಲೆ ಅಲುಗಾಡಿಸಿ ತನ್ನ ತೋರು ಬೆರಳಿನಿಂದ ಆಕೆಯ ಕೆನ್ನೆಯನ್ನು ಸವರುತ್ತಾ ಕುಳಿತ. ಆಕೆ ಕೇಳಿದಳು, “ನೀವು ಜ್ಯೋತಿನ್ನ ಮದುವೆ ಮಾಡ್ಕೊಳ್ಳಾಗಿಲ್ಲೇನು?”. ಚೈತನ್ ಆಕೆಯ ಮುಗ್ಧತೆಗೆ ಸುಮ್ಮನೆ ನಕ್ಕನು. ಆತನ ಆಕೆಯ ಮುಂಗುರಳನ್ನು ನೀವುತ್ತಾ, “ನೀನು ಓದಿದ್ದು ಎಷ್ಟನೆ ಕ್ಲಾಸು?” ಎಂದನು. “ಎಂಟನೆ ಕ್ಲಾಸಿಗೆ ಬಿಟ್ಟು ಬಿಟ್ಟೆ” ಎಂದವಳ ಮುಖ ಮ್ಲಾನವಾಗಿತ್ತು. “ಹಾಂ, ಹೌದಲ್ಲ ಜ್ಯೋತಿ ಹೇಳಿದ್ದಳು. ಮರೆತಿದ್ದೆ. ಅಂದ್ಹಂಗೆ ಯಾವ್ಯಾವ ಭಾಷೆ ಸರಿಯಾಗಿ ಓದಕ್ಕೆ, ಬರೆಯಕ್ಕೆ, ಮಾತಾಡಕ್ಕೆ ಬರುತ್ತೆ?” “ನಂಗ ಕನ್ನಡ ಅಷ್ಟಾ ಓದಾಕ, ಬರೆಯಾಕ, ಮಾತಾಡಾಕ ಬರುತ್ರಿ. ಇಂಗ್ಲಿಷ್, ಹಿಂದಿ ಆವಾಗ ಪಾಠ ಓದಿ ಅರ್ಥ ಮಾಡ್ಕೊಂತಿದ್ದೆ. ಈಗ ಮೂರು ವರ್ಷನಾ ಆದ್ವು. ನಾ ಏನೂ ಓದಿಕೊಂಡೇ ಇಲ್ಲ. ಹಿಂದಿ ಇಂಗ್ಲಿಷ್ ತಪ್ಪಾಗಬೋದ್ರಿ” ಎಂದಳು. “ಗಣಿತ” , “ಮಗ್ಗಿ ಬರ್ತಾವ್ರಿ.ಲೆಕ್ಕ ತಪ್ತಾವೇನ್ರಿ”, “ಕನ್ನಡ ಓದಾಕ ತೊಂದ್ರೆ ಇಲ್ಲಂದೆಯಲ್ವಾ, ಈಗ ನಾನು ಬರೆದು ತೋರಿಸುತ್ತೀನಿ. ಅದನ್ನು ಓದಬೇಕು. ಸರಿಯಾ” ಎಂದಾತನ ಆಜ್ಞೆಗೆ ಹೂಂ ಎನ್ನುವಂತೆ ತಲೆಯಾಡಿಸಿದಳು. ಆತ ಏನೋ ಸರ ಸರ ಬರೆದು ಆ ಚೀಟಿಯನ್ನು ಆಕೆಯ ಕೈಯಲ್ಲಿಟ್ಟು, “ಓದಿ ಹೇಳು” ಎಂದನು. ಅದನ್ನು ಓದಿದ ಆಕೆಗೆ ಗಲಿಬಿಲಿಯಾಯಿತು. ರೋಮಾಂಚನವಾಗಿ ಕೆನ್ನೆ ಥರಗುಟ್ಟಿದಾಗ ಎರಡೂ ಕೈಗಳಿಂದ ಗಲ್ಲವನ್ನು ಹಿಡಿದುಕೊಂಡು ಹೌಹಾರಿ ಆತನ ಮುಖವನ್ನು ನೋಡಿದಳು. “ಜೋರಾಗಿ ಓದು, ಅಂದ್ರೆ ನಿನಗೆ ಓದೋಕೆ ಬರುತ್ತೋ ಇಲ್ವೊ ಅಂತ ನನಗೆ ತಿಳಿಯುತ್ತೆ” ಎಂದನು. ಅನುಶ್ರೀ ತನ್ನ ಕೆಳದುಟಿಯನ್ನು ಕಚ್ಚಿಕೊಂಡು ನೆಲವನ್ನು ನೋಡುತ್ತಾ ಕುಳಿತಳು.

“ಓದೋಕೆ ಬರಲ್ಲ ಅಲ್ವಾ” ಎಂದು ಆತ ಕೇಳಿದಾಗ ಆತನ ಮಾತಿನ ಅರ್ಥ ತನ್ನನ್ನು ಅವಮಾನಿಸುವುದಾಗಿರಬಹುದೇ ಎಂದುಕೊಂಡಳು. “ನನಗ ಓದಾಕ ಬರುತ್ರೀ” ಎಂದು ಆಕ್ಷೇಪಣೆಯ ಧಾಟಿಯಲ್ಲಿ ಉಳಿದಳು. “ಮತ್ತೆ ಓದ್ರೀ, ಅಂದ್ರ ನನಗ ನಂಬಿಕಿ ಬರುತ್ರೀ” ಎಂದನು ಆಕೆಯ ಧಾಟಿಯಲ್ಲಿಯೇ. ಅನುಶ್ರೀ ರ್ರನೆ ಪೇಪರತ್ರಿಕೊಂಡು ಓದತೊಡಗಿದಳು. “ನಾನು ನಿನ್ನನ್ನೇ ಪ್ರೀತಿಸುತ್ತೇನೆ” ಎಂದು ಮುಗಿಸುತ್ತಿದ್ದಂತೆ, “ಸರಿ ಸರಿ ಮತ್ತೆ” ಎಂದನು. “ನಿನ್ನನ್ನು ನೀನಿಷ್ಟಪಟ್ಟರೆ ಮದುವೆಯಾಗುತ್ತೇನೆ” ಎಂದು ಗಟ್ಟಿಯಾಗಿ ಓದಿ ತುಟಿ ಕಚ್ಚಿಕೊಂಡಳು. ಆಮೇಲೆ ಎಂದನು. “ಜೀವನದುದ್ದಕ್ಕೂ ನಿನ್ನ ಜೊತೆ ಇರುತ್ತೇನೆ” ಆಕೆ ಮೂರನೇ ವಾಕ್ಯ ಓದಿ ಮುಗಿಸುತ್ತಿದ್ದಂತೆಯೇ, “ಆಯ್ತಾಯ್ತು ಮತ್ತೆ” ಎಂದನು ಚೈತನ್ ಆಕೆಯ ಕಣ್ಣುಗಳನ್ನು ದಿಟ್ಟಿಸುತ್ತಾ. “ನಿನಗೆ ತೊಂದರೆಯಾಗದಂತೆ ಸುಖವಾಗಿರುವ ಹಾಗೆ ನೋಡಿಕೊಳ್ಳುತ್ತೇನೆ” ಆಕೆ ಓದಿ ಮುಗಿಸಿದ ತಕ್ಷಣ “ನಿಜಾನಾ” ಎಂದು ಆತ ಆಕೆಯ ಕೈ ಹಿಡಿದು ಕೇಳಿದ್ದ. ಆಕೆ ಮುಖವನ್ನು ಮೊಣಕಾಲ ಸಂಧಿಯಲ್ಲಿ ಹುದುಗಿಸಿ, “ನೀವು ಬೇಕಂತಾ ಹಿಂಗ ರ್ದು ನಂಗ ಓದಾ ಕೊಟ್ಟೀರಿ ಮತ್ತ…” ಎಂದು ಆಕ್ಷೇಪಣೆಯನ್ನು ಅರ್ಧಕ್ಕೆ ನಿಲ್ಲಿಸಿ ಬಿಕ್ಕಿ ಬಿಕ್ಕಿ ಅತ್ತಳು. “ಏನು ಮತ್ತ ಹೇಳು ಅನೂ” ಚೈತನ್ ತನ್ನ ಕಡೆಗೆ ಆಕೆಯನ್ನು ಎಳೆದುಕೊಂಡ ತೊಡೆಯ ಮೇಲೆ ಮಗುವಿನಂತೆ ಮಲಗಿಸಿಕೊಂಡು ತಲೆ ನೇವರಿಸಿದ. ಆಕೆಯ ಬಿಸಿಯಾದ ಕಣ್ಣೀರು ಕಾಲಿಗೆ ಸೋಕಿ ಆತನ ಮನಸ್ಸನ್ನು ಮತ್ತಷ್ಟು ತೇವಗೊಳಿಸಿತ್ತು.

ಅನುಶ್ರೀ ಚೈತನ್ ಮನೆಗೆ ಬಂದು ಅದಾಗಲೇ ಇಪ್ಪತ್ತು ದಿನಗಳು ಮುಗಿಯುತ್ತಾ ಬಂದವು. ಅವರಿಬ್ಬರಲ್ಲಿ ಪ್ರಾರಂಭದಲ್ಲಿದ್ದ ಮೌನ ಈಗೀಗ ಮಾತಾಗಿ ಹರಿದಾಡುತ್ತಿದೆ. ಒಂದೇ ಸ್ಥಳದಲ್ಲಿ ವಾಸಿಸುತ್ತಿರುವ ಅನಿವಾರ್ಯತೆ, ಗಂಡು-ಹೆಣ್ಣೆಂಬ ಆಕರ್ಷಣೆ ಮತ್ತು ಅವೆರಡನ್ನೂ ಮೀರಿದ ಬಾಂಧವ್ಯದಿಂದಾಗಿ ಅವರಲ್ಲಿ ಮಾತುಗಳ ಸಂಚಾರವಾಗತೊಡಗಿತ್ತು. ಇದರಿಂದ ಅನುಶ್ರೀಯ ಮನಸ್ಸು ಹಗುರವಾದಂತಾಗಿತ್ತು. ಅಲ್ಲದೇ ವಾರದಲ್ಲಿ ಎರಡು ಮೂರು ಸಲ ಬರುವ ಜ್ಯೋತಿ ಅನುಶ್ರೀಯ ಜೊತೆ ಸಾಕಷ್ಟು ಮಾತಾಡುತ್ತಾಳೆ. “ಹೇಳಲ್ವಾ?! ಏನು ಹೇಳು, ನಾನು ಕೆಟ್ಟವನೆನಿಸಿದರೆ ನಿನಗೆಲ್ಲಿ ಒಳ್ಳೆ ಬದುಕು ಸಿಕ್ರೆ ಅಲ್ಲಿಗೆ ಹೋಗು, ಬೇಡ ಅನ್ನೋಲ್ಲ. ಸರಿಯಾ?” ಎಂದನು. ಆತನ ಧ್ವನಿ ಮೆಲುವಾಗಿ, ದೈನ್ಯತೆಯಿಂದ ಕೂಡಿತ್ತು.

ಅನುಶ್ರೀ ಅಪ್ರಯತ್ನಪೂರ್ವಕವಾಗಿ ಆತನ ಮುಖವನ್ನು ಎರಡೂ ಬೊಗಸೆಯಲ್ಲಿ ಹಿಡಿದುಕೊಂಡು, “ನೀವು ಭಾಳ ಒಳ್ಳೇರು, ನಾನು ಎಲ್ಲಿಗೂ ಹೋಗಂಗಿಲ್ಲ. ನಂಗೆ ಯಾರೂ ದಿಕ್ಕಿಲ್ಲ ಅಂದ್ಕೊಂಡು ಜೀವ ಸಾಕು ಅನ್ನಿಸಿ ಉರುಲು ಹಾಕ್ಕೊಳ್ಳಾಕ ಹೋಗಿದ್ದೆ. ಆದ್ರ ನೀವು ದಿಕ್ಕಾಗಿ ಬಂದು ಉಳಿಸಿಬಿಟ್ರಿ. ಇನ್ನು ಮುಂದೆ ನನಗ ತಂದೆ ತಾಯಿ ಎಲ್ಲಾ ನೀವಾ. ಆದ್ರ…” ಎಂದಳು. “ಆದ್ರೇನು ಹೇಳು? ಸಂಕೋಚ ಬೇಡ” ಎಂದನು. “ನಿಮ್ಮನ್ಯಾಗ ಯಾರೂ ಇಲ್ಲಲ್ಲ. ಯಾಕ? ಎಲ್ಲಿಗ್ಯಾರ ಹೋಗ್ಯಾರೇನು? ಇಲ್ಲ ನನ್ನಂಗ್ಹನಾ ನೀವೂ ಒಬ್ರಾ ಏನು?” “ಬೇರೆ ಯಾರೂ ಇಲ್ಲ. ಬರುವುದೂ ಇಲ್ಲ. ನಾನೊಬ್ಬನೇ. ನೀನೂ ಇಲ್ಲಿರಲು ಒಪ್ಪಿಕೊಂಡೆಲ್ಲಾ ಇನ್ನು ಮೇಲೆ ನಾವಿಬ್ರು. ನೀನು ನನ್ನ ಮದುವೆ ಮಾಡಿಕೊಂಡ್ರೆ ನೀನಿಷ್ಟ ಪಟ್ಟಷ್ಟು ರಾಜಕುಮಾರಿ/ರರು ಬರುತ್ತಾರೆ. ಆಮ್ಯಾಲೆ ಯಾವತ್ತೂ ನಿನಗೆ ಈ ಮನೆ ಈ ಬದುಕು ಬೇಸರ ಆಗಲ್ಲ. ನನ್ನ ಮಾತು ನಂಬು” ಎಂದು ಚೈತನ್ ಆಕೆಯ ಕೈಯನ್ನು ಹಿಡಿದುಕೊಂಡು ಯಾಚಿಸಿದ್ದ. ಅನೂಶ್ರೀ ಚಟಕ್ಕನೇ ಎದ್ದು ಆತನನ್ನು ಬಿಗಿಯಾಗಿ ಅಪ್ಪಿಕೊಂಡು ಬಿಟ್ಟಳು. ಚೈತನ್ಗೆ ನಿರೀಕ್ಷಿತ ಖುಷಿ ದಕ್ಕತೊಡಗಿತ್ತು, ಆ ಅಪ್ಪುಗೆಯಲ್ಲಿ ದೇಹ ವಾಂಛೆಯನ್ನು ಮೀರಿದ ಒಂದು ಆತ್ಮೀಯ ಸಮಾಧಾನವಿತ್ತು.

ಯಾರದೂ ಅಪ್ಪುಗೆಯನ್ನೇ ಕಾಣದೆ ಬೆಳೆದು ನಿಂತ ಎರಡು ಜೀವಗಳು ಜೀವನದಲ್ಲಿ ಪ್ರಪ್ರಥಮ ಸಲ ಅಪ್ಪುಗೆಯ ಸುಖವನ್ನು ಹೀರಿಕೊಳ್ಳತೊಡಗಿದ್ದವು. ಬೇನೆಯಲ್ಲಿಯೇ ನವೆಯುತ್ತಿದ್ದ ಅವ್ವ ಒಂದಿನಾನೂ ತನ್ನನ್ನು ಅಪ್ಪಿಕೊಂಡು ಮುದ್ದಾಡುವಷ್ಟು ಆರೋಗ್ಯದಿಂದಿರಲಿಲ್ಲ. ತನಗೆ ತಿಳುವಳಿಕೆ ಬಂದಾಗಿನಿಂದಲೂ ಅವ್ವ ತನ್ನನ್ನು ಎದೆಗವಚಿಕೊಂಡದ್ದು ನೆನಪೇ ಇಲ್ಲ. ಆಮೇಲೆ ಆ ಸೌಮ್ಯಮೂರ್ತಿ ಅವ್ವ ಬದುಕಿನಿಂದಲೇ ದೂರವಾದಳು. ಅಪ್ಪ ಉಣ್ಣು ತಿನ್ನುವುದಕ್ಕೆ ಕಡಿಮೆ ಮಾಡಿರಲಿಲ್ಲ. ಆದ್ರೆ ಅಪ್ಪ ಮುದ್ದಾಡಿದ್ದು ನೆನಪಿಲ್ಲ. ತಂದೆ ಹೆಣ್ಮಕ್ಕಳು ಬೆಳೆದಂತೆ ಮುದ್ದು ಮಾಡುವುದನ್ನು ಕಡಿಮೆ ಮಾಡುವುದು ಸಹಜವೇನೊ ಎಂದು ಯೋಚಿಸತೊಗಿದ್ದಳು.

ಚೈತನ್ ತನ್ನ ಬಾಲ್ಯವನ್ನು ನೆನಪಿಸಿಕೊಂಡನು. ಆತನ ‘ವಾತ್ಸಲ್ಯ’ ಎಂಬ ಅನಾಥಾಶ್ರಮದ ಮಡಿಲಲ್ಲಿ ಬೆಳೆದಾತ. ಅಲ್ಲಿಯ ಮಕ್ಕಳು ಬೆಳೆದಂತೆಲ್ಲಾ ಶಿಸ್ತಿಗೆ ಹೆಚ್ಚಿನ ಆದ್ಯತೆ. ಹಸುಗೂಸಿರುವಾಗ, ಮುದ್ದು, ಪ್ರೀತಿ ಎಲ್ಲರಿಂದಲೂ ಯಥೇಚ್ಛವಾಗಿ ಅಲ್ಲಿ ಸಿಕ್ಕಿದ್ದು ನಿಜವಿರಬಹುದು. ಬೆಳೆದಂತೆಲ್ಲಾ ತಮ್ಮ ಕೆಲಸ-ಕಾರ್ಯಗಳನ್ನು ತಾವೇ ಮಾಡಿಕೊಳ್ಳುವ ಅನಾಥ ಮಕ್ಕಳಿಗೆ ಮಮತೆಯ ಸಾಂತ್ವನ ಸೂಸುವ ಅಪ್ಪಗೆ ಎಲ್ಲಿಯದು! ಚೈತನ್ ಕೂಡ ಒಂದು ಸಮೃದ್ಧವಾದ ಪ್ರೀತಿಯಿಂದ ತುಂಬಿದ ಒಂದು ಸುಭದ್ರವಾದ ಅಪ್ಪುಗೆಗೆ ಹಲಬುತ್ತಲೆ, ಯಾರಿಗೂ ತೋರಗೊಡದಂತೆ ಕೊರಗುತ್ತ ಬೆಳೆದಾತ. ಈಗ ಅವರಿಬ್ಬರ ಅಪ್ಪುಗೆಯಲ್ಲಿ ಕಾಮಾತೀತವಾದ ಎಂದೆಂದೂ ಆಸರೆ ನೀಡುವೆ ಎಂಬಂಥ ಅಪ್ಪುಗೆ ಸಂಭವಿಸಿತ್ತು. ಅಲ್ಲಿ ಮಾತುಗಳಿಗೆ ಆಸ್ಪದವೇ ಇರಲಿಲ್ಲ. ಬಹಳ ಹೊತ್ತು ಅವರಿಬ್ಬರೂ ಹಾಗೇ ಚಿಕ್ಕ ಮಕ್ಕಳಂತೆ ಅಂಟಿಕೊಂಡೇ ಕುಳಿತಿದ್ದರು.

ಆಕೆ ಮೆಲ್ಲನೆ ಕೈ ಆತನನ್ನು ಕೈ ಬಿಟ್ಟು ಸುಮ್ಮನೆ ಆತನ ತೊಡೆಯ ಮೇಲೆ ತಲೆ ಇರಿಸಿ, ಆತನ ಬಲಿಷ್ಠ ಕಂಬಂದಂಥ ಕಾಲನ್ನು ಹಿಡಿದುಕೊಂಡು ಕಣ್ಮುಚ್ಚಿಕೊಡು ಮಲಗಿದಳು. ಗೌರವರ್ಣದ, ನೀಳಕಾಯದ, ಕೇಶ ಸೌಂದರ್ಯದ ಸೊಬಗಿನ ಖನಿ ಅನುಶ್ರೀ ತನಗಾಗಿಯೇ ಹುಟ್ಟಿದವಳು ಎಂದುಕೊಂಡನು. ಆತ ಬಹಳ ಹೊತ್ತು ಆಕೆಯ ಮುಖವನ್ನೆ ನೋಡುತ್ತ ಕುಳಿತುಬಿಟ್ಟಿದ್ದ. ಆಕೆಯ ನೀಳವಾದ ಸಂಪಿಗೆ ಎಸಳಿನಂತಹ ಮೂಗು, ಪುಟ್ಟ ಬಾಯಿ, ಹೊಳಪಿನ ಕಣ್ಣು, ಡೊಂಕಿನ ಹುಬ್ಬು ಚೈತನ್ಗೆ ನಿಸರ್ಗದ ಸಿರಿಯಾಗಿ ಕಂಡವು. ಆಕೆ ಅದಾಗಲೇ ನಿದ್ರೆಗೆ ಜಾರಿದ್ದಳು. ಅನಿಶ್ಚಿತತೆಯ, ಹೆದರಿಕೆ ಹುಟ್ಟಿಸುವ ಜೀವನದಿಂದ ಆಕೆ ಒಂದು ಅಭಯದ ನೆಲೆಗೆ ತಲುಪಿದ್ದಾಳೆ. ಮನಸ್ಸು ನಿರಾಳವಾಗಿದೆ. ಚೈತನ್ ಆಕೆಯ ನಿದ್ರೆಗೆ ಭಂಗ ತರಬಾರದೆಂದುಕೊಂಡನು. ಆದರೆ ಆಗಲೆ ಒಂಬತ್ತು ಗಂಟೆಯಾಗಿದೆ. ಇಬ್ಬರೂ ಊಟ ಮಾಡಿಲ್ಲ. ಆಕೆಯ ತಲೆಯನ್ನು ಮೆಲ್ಲನೆ ದಿಂಬಿನ ಮೇಲಿರಿಸಿ ಅಡುಗೆ ಮನೆ ಹೊಕ್ಕನು. ಒಂದೈದು ನಿಮಿಷದಲ್ಲಿ ಪಲಾವ್ ಮಸಾಲೆ ಎಲ್ಲಾ ರುಬ್ಬಿಕೊಂಡು ಮತ್ತು ತರಕಾರಿಗಳನ್ನೆಲ್ಲಾ ಕೊಯ್ದು ಸಿದ್ಧಪಡಿಸಿದ. ಒಗ್ಗರಣೆಗೆ ರುಬ್ಬಿಕೊಂಡಿರುವ ರಸಾಯನವೆಲ್ಲವನ್ನೂ ಸುರಿದು, ಅಳತೆಗೆ ತಕ್ಕಷ್ಟು ನೀರು ಹಾಕಿದನು. ಅಕ್ಕಿ ತೊಳೆದು ಹಾಕಿ, ಕುಕ್ಕರ್ ಬಾಯಿ ಮುಚ್ಚಿದನು. ಆತನಿಗೆ ನಿತ್ಯಕ್ಕಿಂತಲೂ ಜಾಸ್ತಿ ಹುರುಪು ಬಂದಂತೆನ್ನಿಸಿತು.

ಮೊದಲೇ ಕ್ರಿಯಾಶೀಲ ಜೀವಿ ಆತ. ಈಗ ಆತನು ಮೆಚ್ಚಿಕೊಂಡಿರುವ ಅನುಶ್ರೀ ಆತನ ಜೀವನದಲ್ಲಿ ಪ್ರವೇಶಿಸಿದ್ದಾಳೆ. ಆಕೆಯ ಸೌಂದರ್ಯ, ಒಳ್ಳೆಯತನ, ಮುಗ್ಧತೆ, ಎಲ್ಲಕ್ಕೂ ಕಳಶ ವಿಟ್ಟಂತೆ ಆಕೆ ಶಿಕ್ಷಣ ಪಡೆಯಬೇಕು. ಆಕೆಯ ಸರ್ವಾಂಗೀಣ ಪ್ರಗತಿಗೆ ತನ್ನ ಪ್ರೇಮ, ದಾಂಪತ್ಯ ತೊಡಕಾಗಬಾರದು. ಮಕ್ಕಳು ಮರಿ ಅಂತಾಗುವ ಹೊತ್ತಿಗೆ ಅನುಶ್ರೀ ನಿಜವಾದ ಅರ್ಥದಲ್ಲಿ ವಿದ್ಯಾವಂತೆ ಆಗಿರಬೇಕು. ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತಾಡುವಂತಾಗಬೇಕು. ಅದಕ್ಕಾಗಿ ತಾನು ಮಾಡುವ ಕೆಲಸ ಬಹಳ ಇದೆ… ಹೀಗೆ ಚೈತನ್ ಏನೇನೋ ಸ್ವಾರಸ್ಯಕರವಾಗಿ ಯೋಚಿಸತೊಡಗಿದ್ದ. ಆಕೆ ನಡೆದಾಡಿದರೆ ಅಂಗಾಲುಗಳು ಸವೆಯುತ್ತವೆಯೇನೋ ಎಂಬಷ್ಟು ಸೌಮ್ಯ ಸುಂದರಿ. ಆತ ಹಾಗಂತ ಯೋಚಿಸುತ್ತ ಮತ್ತೆ ಆಕೆಯ ಕೆನ್ನೆಯನ್ನು ಮೃದುವಾಗಿ ಸವರಿ, ತಲೆಯನ್ನೆತ್ತಿ ಮಡಿಲಲ್ಲಿರಿಸಿಕೊಂಡು, ಆಕೆಯ ಮುಂಗುರುಳನ್ನು ನೇವರಿಸುತ್ತಾ ಕುಳಿತನು. ಕುಕ್ಕರ್ ಕೂಗಿಕೊಂಡಾಗ ಆಕೆ ಬೆಚ್ಚಿಬಿದ್ದು ಎದ್ದು ಎಚ್ಚರಾದಳು. ಆತನು ಇಲ್ಲೇ ಇದ್ದಾನೆ ಎಂದುಕೊಂಡು ಮತ್ತೆ ಆತನ ಕಾಲನ್ನು ಹಿಡಿದುಕೊಂಡು, ಸುಂದರಾಂಗನ ಮುಖವನ್ನು ದಿಟ್ಟಿಸುತ್ತಾ ಮಲಗಿದಳು.

“ಹಸಿವಾಗ್ತಿದೆ ಊಟ ಹಾಕಲ್ವಾ?!” ಚೈತನ್ನ ಮುಖ ಇಷ್ಟಗಲ ಖುಷಿಯನ್ನು ಹೊರಚೆಲ್ಲುತ್ತಿತ್ತು. “ಹೂಂ ಹೂಂ ಎದ್ದೆ” ಎಂದು ಅನು ಮೇಲೆದ್ದಳು. ಆತನೇ ಕೈಹಿಡಿದೆಳೆದು ಮತ್ತೆ ಕೂಡ್ರಿಸಿದನು. ಆಕೆಯ ತೊಡೆ ಮೇಲೆ ತಲೆ ಇಟ್ಟು ಕಾಲು ಚಾಚಿ ಸುಮ್ಮನೆ ಮಲಗಿಕೊಂಡನು. ಇಬ್ಬರೂ ಪರಸ್ಪರ ನೋಡುತ್ತಲೇ ಇದ್ದರು. ಚೈತನ್ ಒಮ್ಮೆಲೆ ಮೇಲೆದ್ದು ಆಕೆಯನ್ನು ಗಟ್ಟಿಯಾಗಿ ಅಪ್ಪಿಕೊಂಡು “ಅನೂ” ಎಂದನು. ಆತನ ಅನಿರೀಕ್ಷಿತ ಹಿಡಿತದಿಂದ ಆಕೆ ತೀರ ನಾಚಿಕೆಯಿಂದ ಮುದುರಿಕೊಂಡಳು. ಆತ ಆಕೆಯನ್ನು ಎದೆಗಪ್ಪಿಕೊಂಡು ಸುಮ್ಮನೆ ಕಣ್ಮುಚ್ಚಿಕೊಂಡನು. ಆತ ಏದುಸಿರು ಬಿಡುತ್ತಿದ್ದನು. ಆಕೆ ಸಹ ಅಸಹನೆಯಿಂದ ಚಡಪಡಿಸುತ್ತಿದ್ದಳು. ಇಬ್ಬರಿಗೂ ಈ ಕ್ಷಣವು ಸುಡು ತುಪ್ಪದಂತೆ ತೋರಿತ್ತು. ಚೈತನ್ ತಾನು ಆಕೆಗಿಂತ ಏಳೆಂಟು ವರ್ಷ ದೊಡ್ಡಾತ. ತಾನೇ ಹುಚ್ಚನಂತೆ ವರ್ತಿಸಿದರೆ ಆಕೆಯ ಗತಿ ಏನು? ನಾನೇಕೆ ಇಷ್ಟು ಆವೇಶಕ್ಕೆ ಈಡಾಗುತ್ತಿದ್ದೇನೆ? ನಾನೇಕೆ ಇಂದು ಉದ್ರೇಕಗೊಳ್ಳುತ್ತಿದ್ದೇನೆ? ಜ್ಯೋತಿ ಒಡಹುಟ್ಟಿದವಳಂತೆ ಎಂದಿನಿಂದಲೂ ಒಡನಾಡಿದ್ದಾಳೆ.

ಆದರೆ ಲಲಿತ ಎಂದೂ ಅಣ್ಣ ಎಂದು ಕರೆದವಳಲ್ಲ. ಅವಳು ತನ್ನೊಂದಿಗೆ ನಡೆದುಕೊಂಡ ರೀತಿ ನೋಡಿದರೆ ಅವಳ ಬಗ್ಗೆ ಯಾವುದೇ ಭಾವನೆಗಳು ಹುಟ್ಟಲಿಲ್ಲ. ಶಂಕರನೊಂದಿಗೆ ಮಾತಾಡಿಸಿದರೆ ಹೇಗನ್ನಿಸಿತ್ತೊ ರವಿಯೊಂದಿಗೆ ತಿರುಗಾಡಿದಾಗ ಏನನ್ನಿಸಿತ್ತೋ ಲಲಿತೆ ಜೊತೆ ಪಕ್ಕಪಕ್ಕದಲ್ಲಿ ಕುಳಿತು ಮಾತಾಡಿದಾಗಲೂ ಅದೇ ನಿರುಮ್ಮಳ ಗೆಳೆತನ ಮಾತ್ರವಿತ್ತು. ಹಾಗೆ ನೋಡಿದರೆ ಲಲಿತ ತನ್ನೊಂದಿಗೆ ಒಂಟಿಯಾಗಿ ಅದೆಷ್ಟು ಅಲೆದಾಡಿಲ್ಲ. ಕೆಲಸದ ನಿಮಿತ್ಯ ತಿರುಗುವಾಗಾಗಲಿ, ಕಾಲೇಜಿನಲ್ಲಿ ಓದುವಾಗವಾಗಲಿ, ಫಿಲ್ಮ್, ಪಾರ್ಟಿ, ಟ್ರಿಪ್ ಎಲ್ಲಿಗೇ ಹೋಗಲಿ ಲಲಿತ ಜ್ಯೋತಿಗಿಂತಲೂ ಬೋಲ್ಡ್ ಆಗಿ ವರ್ತಿಸುತ್ತಿದ್ದಳು. ಹಾಗಿದ್ದರೂ ಅವಳ ಬಗ್ಗೆ ಯಾವುದೇ ಅಭಿಪ್ರಾಯ ಬರುತ್ತಿರಲಿಲ್ಲ. ಆದರೆ ಈ ಅನುಶ್ರೀ ಆ ದಿನ ರೈಲಿನಲ್ಲಿ ಕಂಡಾಗಲೇ ತನ್ನ ಎದೆ ಡವಗುಟ್ಟಿ ಹೋಗಿತ್ತಲ್ಲ. ಜ್ಯೋತಿಯ ಮೂಲಕ ಇವಳ ಮಾಹಿತಿ ಕಲೆ ಹಾಕುತ್ತಲೇ ಒಂದು ವರ್ಷ ಕಳೆಯಿತು. ಈಗ ಇವಳ ತಂದೆ ಇವಳನ್ನು ತೊರೆದು ಹೋಗುವ ಮೂಲಕ ವಿಧಿ ಇವಳನ್ನು ನನ್ನಲ್ಲಿಗೆ ತಲಪಿಸಿರುವುದೇ?!….. ಹೀಗೆ ಚೈತನ್ ಯೋಚನೆಗೀಡಾಗಿ ಉದ್ರೇಕಗೊಂಡ ಮನಸ್ಸನ್ನು ಹತೋಟಿಗೆ ತಂದನು.

ಅನುಶ್ರೀ “ಏನು ಯೋಚನೆ” ಎಂಬಂತೆ ಆತನ ಮುಖ ನೋಡಿದಳು. “ಏನೂ ಇಲ್ಲ” ಎಂಬಂತೆ ತಲೆ ಅಲುಗಿಸಿ, ಆಕೆಯ ತುಟಿಯ ಮೇಲೆ ಮೆಲ್ಲನೆ ಹೂಮುತ್ತನಿಟ್ಟು, “ಏಳು ಹಸಿವಾಗ್ತಾ ಇದೆ” ಎಂದನು. ಫಲಾವ್ ಪರಿಮಳೆ ನಿಧಾನವಾಗಿ ಮನೆಯಲ್ಲಿ ಸುಳಿದಾಡಿತ್ತು. ಚೈತನ್ ಎದ್ದು ಫ್ರಿಜ್ನಲ್ಲಿಯ ಕೆನೆ ಮೊಸರು, ಕಾಯಿ ಚಟ್ನಿ ತೆಗೆದನು…

ಊಟದ ನಂತರ ಚೈತನ್ ಟೆರೇಸ್ನಲ್ಲಿ ನಿಂತು ನಿತ್ಯದಂತೆ ಕಣ್ಣು ಕಾಣುವವರೆಗಿನ ಬೀದಿಯ ಮಬ್ಬು ಲೈಟುಗಳನ್ನು, ಮೌನ ಸಂಭಾಷಣೆ ಮಾಡುತ್ತಿರುವ ಭೂತಾಕಾರದ ಕಟ್ಟಡಗಳನ್ನು, ಅಲುಗಾಟವಿಲ್ಲದೆ ಸುಮ್ಮನೆ ನಿಂತಿರುವ ಹೊಂಗೆ, ಹಲಸು, ತೆಂಗು, ಗುಲ್ ಮೊಹರ್ ಹೀಗೆ ಹತ್ತು ಹಲವಾರು ಗಿಡಮರಗಳನ್ನು ರಾತ್ರಿಯ ಅಪ್ಪುಗೆಯಿಂದ ಏಕತ್ರವಾಗಿ ಕಾಣುತ್ತಿರುವ ಆ ವೃಕ್ಷ ಸಂಕುಲವನ್ನು ನಿಧಾನವಾಗಿ ಆದರೆ ಆನಂದದಿಂದ ಎಂಬಂತೆ ಆಕಾಶದಂಗಳದಲ್ಲಿ, ತನ್ನ ಹಾಗೆಯೇ ಹವಾ ಸಂಚಾರಕ್ಕೆಂಬಂತೆ ತೇಲಾಡುತ್ತಾ ನಿಧಾನವಾಗಿ ರೆಕ್ಕೆ ಬಡಿಯುತ್ತಾ ಹಾರಾಡುತ್ತಿರುವ ಕೆಲವು ಪಕ್ಷಿಗಳ ಜೊತೆಗಳನ್ನು ಪೂರ್ಣವಾಗಿ ಮೈತುಂಬಿಕೊಳ್ಳದಿದ್ದರೂ, ಆಗಲೆ ಬೆಳಕಿನ ಕಂಗಳನ್ನು ತೆರೆದು ಬೆಳದಿಂಗಳು ಚೆಲ್ಲುತ್ತಿದ್ದ ಚಂದ್ರನನ್ನೂ, ಆತನ ಬೆಳಕಿನ ಕಚಗುಳಿಗೆ ಸಂಕೋಚಪಟ್ಟುಕೊಂಡಂತೆ, ಮಿಣಕ್ ಮಿಣಕ್ ಎಂದು ಆಗೀಗ ಹೊಳೆದಂತೆ ಕಾಣುವ ನಕ್ಷತ್ರಗಳನ್ನೂ ನೋಡುತ್ತಾ ಯೋಚನಾರಹಿತನಾಗಿ ಅನಂತತೆಯ ಅಮೃತಾನಂದದಲ್ಲಿ ತೇಲಿ ಹೊರಟಿದ್ದನು.

ಎಷ್ಟೊ÷್ಹತ್ತಾದರೂ ಬರದೆ ಇರುವ ಚೈತನ್ನನ್ನು ಹುಡುಕಿ ಹುಡುಕಿ ಅನು ಬೇಸರಕ್ಕೀಡಾಗಿ ಆತ ಯಾವಾಗ ಬಂದಾನು ಎಂದು ದಾರಿ ಕಾಯುತ್ತಾ ನಿದ್ರೆಗೆ ಜಾರುತ್ತಿರುವ ತನ್ನ ಕಣ್ಣುಗಳನ್ನು ಬಲವಂತದಿಂದ ತೆರೆಯಲು ಯತ್ನಿಸಿ ಯತ್ನಿಸಿ ಸೋಲತೊಡಗಿದ್ದಳು.

ಚಂದ್ರನ ಬೆಳಕು ಸಮೃದ್ಧವಾಗುತ್ತಾ ಹೋದಂತೆಲ್ಲಾ ಬೀಸಿ ಬರುವ ಗಾಳಿಯು ಹಿತವಾಗಿ ತಂಪಾಗಿ ಮೈಗೆ ಸೋಕಿದಾಗ ಚೈತನ್ಗೆ ತಟ್ಟನೆ ನೆನಪಾದಳು ಅನುಶ್ರೀ. ಅಯ್ಯೊ ಅವಳು ನಿದ್ರೆ ಹೋದಳೋ ಅಥವಾ ಕಾಯುತ್ತ ಕುಳಿತಳೋ ಎಂದು ತನ್ನ ಮರೆವಿಗೊಂದಿಷ್ಟು ಬೇಸರಪಟ್ಟು ಕೆಳಗಿಳಿದು ಬಂದು ತನ್ನ ಬೆಡ್ ರೂಮ್ಗೆ ಹೋಗಿ ನೋಡುತ್ತಾನೆ. ಆಕೆ ಆಗಲೇ ನಿದರೆಯ ತೆಕ್ಕೆಯಲ್ಲಿದ್ದಾಳೆ. ಆಕೆಯ ಮಾರುದ್ದದ ಜಡೆ ಕರಿನಾಗರದಂತೆ ಅಂಕುಡೊಂಕಗಿ ಬಿದ್ದುಕೊಂಡಿದೆ. ಆಕೆ ತಿಳಿ ನೀಲಿ ಟೀ ಶರ್ಟ್ ದೊಗಳೆ ಚೊಣ್ಣದಲ್ಲಿ ಮುದ್ದಾಗಿ ಕಾಣುತ್ತಿದ್ದಾಳೆ. ಆಕೆಯ ನೀಳವಾದ, ಸುಂದರವಾದ ಮೂಗಿನಲ್ಲಿ ಬಿಳಿ ಹರಳಿನ ಸಣ್ಣ ಮೂಗುತಿ ಫಳಕ್ ಎಂದು ಹೊಳೆಯುತ್ತಿದೆ. ಆಕೆಯ ಸುಂದರವಾದ ಅಂಕುಡೊಂಕಿನ ಹುಬ್ಬು ಆತನ ಕಣ್ಣಿಗೆ ಹಬ್ಬವಾಗುತ್ತದೆ. ಚೈತನ್ನ ಕೈಕಟ್ಟಿಕೊಂಡು ನಿಂತು ಬಹಳ ಹೊತ್ತು ಆಕೆಯನ್ನು ನೋಡುತ್ತಲಿದ್ದ. ಸೃಷ್ಟಿಕರ್ತ ಅದೆಷ್ಟು ಶ್ರದ್ಧೆಯಿಂದ ತಿದ್ದಿ ತೀಡಿ ಇವಳನ್ನು ರೂಪಿಸಿರಬಹುದಲ್ಲವೇ ಎಂದು ಯೋಚಿಸಿದಾಗ ಆತನ ಸ್ವಗತದ ಆ ಮಾತಿನ ಕೊನೆಯ ಮೂರು ಅಕ್ಷರ ಆತನಿಗರಿವಿಲ್ಲದೆ ‘ದಲ್ಲವೇ’ ಎಂದು ಸಶಬ್ದವಾಗಿ ಹೊರಬಂದಾಗ ಅನುಶ್ರೀ ಪಕ್ಕನೆ ಕಣ್ತೆರೆದು ನೋಡಿದಳು. ಆತ ನಿಂತಿರುವ ಭಂಗಿ ಯಾರನ್ನೋ ಹೋಲುತ್ತದೆಯಲ್ಲ ಎಂದುಕೊಂಡು “ಹೌದು ಆತನೇ, ಆ ಕೃಷ್ಣ ಪರಮಾತ್ಮನಲ್ಲವೆ, ಹಿಂಗೆ ನಿಂತವನು” ಎಂದುಕೊಂಡು ಕಣ್ಣುಜ್ಜಿಕೊಳ್ಳುತ್ತ ಮೇಲೆದ್ದಳು. ಚೈತನ್ ಆಕೆಗೆ ಖುಷಿಯಿಂದ ಕಣ್ಣು ಮಿಟುಕಿಸಿ ಹೇಳಿದನು.

“ಬೇಸರವಾಯ್ತಾ ಅನು? ಟೆರೇಸ್ ಮೇಲೆ ನಿಂತಿದ್ದೆ. ಹಾಗೆ ಮರೆತು ಅಲ್ಲೆ ನಿಂತ್ಕೊಂಡಿದ್ದೆ. ನಿನ್ನ ನೆನಪಾಗಿ ಈಗಷ್ಟೆ ಬಂದೆ” ಎಂದನು. “ನೀವು ಅಲ್ಲಿಗೆ ಹೋಗಿದ್ದು ಗೊತ್ತಾಗಿದ್ರ ನಾನೂ ಬರ್ತಿದ್ದೆ” ಆಕೆಯ ಉತ್ತರ. “ಹೌದಾ ಸರಿ ನಾಳೆ ಖಂಡಿತಾ ಹೋಗೋಣ” ಎಂದೆನ್ನುತ್ತಾ ಆತ ತನಗೆ ದಿಂಬು, ಹಾಸಿಗೆ ಸುರುಳಿಯನ್ನು ತೆಗೆದುಕೊಂಡು, “ನೀನಿನ್ನು ಮಲಗು ಬಹಳ ಹೊತ್ತಾಗಿದೆ” ಎಂದು ಹೊರಡಲನುವಾದನು. ಅನುಶ್ರೀ ದಿಗ್ಗನೆ ಎದ್ದು ಕುಳಿತು, “ ನಿಲ್ರಿ ಸ್ವಲ್ಪ” ಎಂದಳು. ಚೈತನ್ ಗಕ್ಕನೆ ನಿಂತು ಹಿಂತಿರುಗಿ “ಏಕೆ” ಎನ್ನುವಂತೆ ನೋಡಿದನು. ಇಬ್ಬರೂ ಮಾತಾಡಲಿಲ್ಲ. ಕಣ್ಣುಗಳು ತಾವೇ ಮಾತಾಡಿಕೊಂಡವು. ಒಂದು ಜೊತೆ ಕಣ್ಣುಗಳಲ್ಲಿ ಭಯ, ಸಂಕೋಚ ಇದ್ದರೆ, ಇನ್ನೊಂದು ಜೊತೆ ಕಣ್ಣುಗಳಲ್ಲಿ ಅಭಯ, ದೃಢತೆ ಇತ್ತು. ಚೈತನ್ ತನ್ನ ದಿಂಬನ್ನು ಅದೇ ಕಾಟ್ ಮೇಲಿರಿಸಿ, ಹಾಸಿಗೆ ಸರಿಪಡಿಸಿ, “ಇಬ್ಬರೂ ಇದೇ ಕಾಟ್ ಮೇಲೆ ಅಡ್ಜಸ್ಟ್ ಮಾಡಿಕೊಂಡರಾಯ್ತು” ಎಂಬಂತೆ ಅವಳ ಕಡೆಗೆ ನೋಡಿದನು. ಅವನ ಇಂಗಿತ ಅರ್ಥವದಂತೆ ಸ್ವಲ್ಪ ಸರಿದು ಮಂಚದ ಒಂದೂವರೆ ಭಾಗವನ್ನು ಅವನಿಗೆ ಬಿಟ್ಟು ಇನ್ನುಳಿದ ಅರ್ಧ ಭಾಗದಲ್ಲಿ ತನ್ನ ಉದ್ದದ ದೇಹವನ್ನು ಮುದುರಿಕೊಂಡು, ಮಲಗಿಕೊಳ್ಳಲು ಯತ್ನಿಸಿದಳು. ಚೈತನ್ನ ಕಣ್ಣುಗಳು ಭಾರವಾಗಿದ್ದವು.

ಅವನು ಕತ್ತಿನವರೆಗೆ ಹೊದ್ದು ಹೊಟ್ಟೆಯ ಮೇಲೆ ಕೈ ಇರಿಸಿಕೊಂಡು ಕಣ್ಮುಚ್ಚಿ ಮಲಗಿ ಬಿಟ್ಟನು. ಸ್ವಲ್ಪೆ ಸಮಯದಲ್ಲಿ ಅವನಿಗೆ ನಿದ್ರೆ ಆವರಿಸಿತ್ತು. ಅನುಗೆ ನಿದ್ರೆ ದೂರ ಸರಿದು ನಿಂತಿತ್ತು. ಆಕೆ ಪಕ್ಕಕ್ಕೆ ಹೊರಳಿ ತನ್ನವನಾಗಿರುವ ಆ ಭಾಗ್ಯವಂತನನ್ನು ನೋಡತೊಡಗಿದಳು. ಕೆಲವು ನಿಮಿಷಗಳು ಕಳೆದವು. ಅವಳಿಗೆ ಅವನೊಂದು ನಿಧಿ. ಯಾವುದಕ್ಕೂ, ಯಾರಿಗೂ ಹೋಲಿಸಲಾಗದ ಅಮೂಲ್ಯ ಸಂಪತ್ತೆನ್ನಿಸಿತು. ಅವಳು ಜೀವ ತಡೆಯಲಾರದೆ ಚೈತನ್ನ ಪಕ್ಕಕ್ಕೆ ಸರಿದು ಅವನ ಮುಖವನ್ನೇ ದಿಟ್ಟಿಸುತ್ತ ಮುಟ್ಟಲೋಬೇಡ ಎಂದುಕೊಳ್ಳುತ್ತ ಅವನ ಕೆನ್ನೆಯ ಮೇಲೆ ತನ್ನ ಕೋಮಲ ಹಸ್ತವನ್ನಿರಿಸಿದಳು. ಸೇವ್ ಮಾಡಿದ ಆ ಕೆನ್ನೆ ಅಷ್ಟು ಬಿರುಸಾಗಿದ್ದರೂ, ಒಳಗಿನ ಅವನ ಹೃದಯದ ಮೃದುತ್ವವೇ ಅಲ್ಲವೇ ತನ್ನನ್ನು ಕಾಪಾಡಿದ್ದು ಎಂದುಕೊಂಡಳು. ಅವಳ ಕೈ ಭಾರಕ್ಕೆ ಚೈತನ್ನ ನಿದ್ದೆ ಹಾರಿ ಹೋಗಿ ಬಿಟ್ಟಿತು. ಅವನು ಇನ್ನೂ ಸ್ವಲ್ಪ ಪಕ್ಕಕ್ಕೆ ಸರಿದು ಆಕೆಯ ತೆಳುವಾದ ಟೊಂಕದ ಸುತ್ತ ತನ್ನ ಬಲಿಷ್ಟವಾದ ಕೈಯಿಂದ ಹಿಡಿದುಕೊಂಡನು. ಇಬ್ಬರ ಉಸಿರುಗಳು ಬಿಸಿಗಾಳಿಯನ್ನು ಪರಸ್ಪರರಿಗೆ ವಿನಿಮಯಿಸುತ್ತಿವೆ. ಆದರೆ ಅಷ್ಟಕ ಆ ಜೀವಗಳು ತಟಸ್ಥವಾಗಬಹುದೇ ಎಂದು ಕಾಲ ಸಂಶಯದಿಂದ ನೋಡುತ್ತಿತ್ತು. ಚೈತನ್ನ ಎದೆ ಜೋರಾಗಿ ಬಡಿದುಕೊಳ್ಳುತ್ತಿದೆ. ಅನುವಿನ ಎದೆ ಉದ್ವೇಗದಿಂದ ಏರಿಳಿಯುತ್ತಿದೆ. ಒಬ್ಬ ಗಂಡಸಿನ ಅದರಲ್ಲೂ ಗಂಡನಾಗುವವನ ಸಾಮೀಪ್ಯ ಇಷ್ಟೊಂದು ಹಿತಕರವಾದುದೇ ತಾನು ಎಷ್ಟೊಂದು ಹಿತಕ್ಕೆ ಈಡಾಗುತ್ತಿದ್ದೇನೆ ಎಂದುಕೊಂಡು ಅವಳು ಅವನ ಕೆನ್ನೆಯ ಮೇಲಿನ ಕೈ ತೆಗೆದು ಅವನನ್ನು ತಬ್ಬಿ ಹಿಡಿದುಕೊಂಡು ಕಣ್ಣು ಮುಚ್ಚಿದಳು.

ಅವಳಿಗೆ ಒಬ್ಬ ತರುಣಿ ಒಬ್ಬ ತರುಣನೊಂದಿಗೆ ಹೀಗೆ ರಾತ್ರಿ ಕಳೆಯುವುದು ತನ್ನ ಹಳ್ಳಿಯಲ್ಲಿ ಸಾಧ್ಯವೇ ಎಂದು ಪ್ರಶ್ನೆ ಮೂಡಿತು. ಹಾಡು ಹಗಲೆ ತಿಂದು ತೇಗಲು ಅಲ್ಲಿ ಮಲಕಾಜಪ್ಪ ಸೆಟ್ಟಿಯಂತಹ, ಅವನ ಹಿಂಬಾಲಕರಂತಹ ಪ್ರಾಣಿಗಳಿವೆ ಎಂದುಕೊಂಡು ಅವಳು “ಶಿವ ಶಿವ” ಅಂತ ಸ್ಪಷ್ಟವಾಗಿ ಉಚ್ಛರಿಸಿಬಿಟ್ಟಾಗ ಚೈತನ್ ಕಣ್ತೆರೆದು, “ ಯಾಕೆ? ಏನು ಚಿಂತೆ, ನಿದ್ರೆ ಬರ್ತಿಲ್ವೇ?” ಎಂದನು. ಅವಳು, “ಏನೂ ಇಲ್ಲ” ಎಂಬಂತೆ ತಲೆ ಅಲುಗಾಡಿಸಿ ಅವನನ್ನು ಮತ್ತಷ್ಟು ಬಿಗಿಯಾಗಿ ಹಿಡಿದುಕೊಂಡು ಕಣ್ಣು ಮುಚ್ಚಿಕೊಂಡಳು. ಅವಳಿಗೆ ಮಾತು ಬೇಕಿರಲಿಲ್ಲ. ಚೈತನ್ ತನ್ನ ಬಾಳನ್ನು ಬೆಳಗುವವನು. ಕತ್ತಲೆಗೆ ದೂಡುವವನಲ್ಲ ಎಂಬ ನಂಬಿಕೆ ದೃಢವಾಗುತ್ತಾ ಹೋಗಿತ್ತು. ಆಕೆಗೆ ನಿದ್ರೆ ಹತ್ತುತ್ತಿಲ್ಲ ಎಂದು ತಿಳಿದಾಗ ಚೈತನ್ ಅವಳ ತಲೆಯನ್ನು ತನ್ನ ಎದೆಯ ಮೇಲಿಟ್ಟುಕೊಂಡು ಚಿಕ್ಕ ಮಕ್ಕಳನ್ನು ತಟ್ಟಿ ಮಲಗಿಸುವಂತೆ ಹಿತವಾಗಿ ತಟ್ಟತೊಡಗಿದನು. ತಾಯಿಯ ಸ್ಪರ್ಶವನ್ನೇ ಕಾಣದ ಆ ಗಂಡು ಜೀವ ತನ್ನೊಳಗೆ ಸೃಷ್ಟಿಯ ಕೊಡುಗೆಯಾಗಿ ಸಂಗ್ರಹಿಸಲ್ಪಟ್ಟಿರುವ ತಾಯ್ತನದ ಹಿತವಾದ ಬಿಸುಪನ್ನು ನೊಂದು ಬೆಂದು, ಮತ್ತೆ ಬಾಳಿಗೆ ಮುಖ ಮಾಡಿ ನಿಂತಿರುವ ಆ ಹೆಣ್ಣು ಜೀವಕ್ಕೆ ಧಾರೆ ಎರೆದು ನೆಮ್ಮದಿಯನ್ನು ಹಂಚಿಕೊಳ್ಳುವ ತವಕದಲ್ಲಿತ್ತು. ಅನುಗೆ ನಿದ್ದೆ ಹತ್ತಿದ್ದು ಖಚಿತವಾದಾಗ ಚೈತನ್ ಮೆಲ್ಲಗೆ ಅವಳ ತಲೆಯನ್ನು ದಿಂಬಿನ ಮೇಲಿರಿಸಿ, ಅವಳ ಕುತ್ತಿಗೆವರೆಗೆ ರಗ್ಗು ಹೊದಿಸಿದನು. ಅವಳು ನಿದ್ರೆಯಲ್ಲಿಯೇ ಹೊರಳಿ ತನ್ನ ಬಲಗಾಲೆತ್ತಿ ಅವನ ಮೇಲೆಸೆದು ಮತ್ತೆ ಅವನನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು. “ಅವ್ವ” ಅಂತ ಅವಳು ಕನವರಿಸಿದಾಗ ಚೈತನ್ನ ಹೃದಯ ಚೀರಿಕೊಂಡು, ಕಣ್ಣು ತುಂಬಿತ್ತು. ಅವನು “ಮತ್ತೆಂದೂ ನಿನ್ನ ಬಾಳು ಅತಂತ್ರವಾಗಲಾರದು ಕಣೆ” ಎಂದು ಅವಳನ್ನಪ್ಪಿಕೊಂಡೇ ನಿದ್ರೆಗೆ ಜಾರಿದನು.

ಮುಂದುವರೆಯುವುದು

ಹಟ್ಟಿ ಸಾವಿತ್ರಿ ಪ್ರಭಾಕರಗೌಡ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x