ಕರ್ಫ್ಯೂ ದಿನಗಳಲ್ಲಿನ ಒಂದು ಪಯಣದ ಹಾದಿ…: ಪಿ. ಎಸ್. ಅಮರದೀಪ್…

ತುಂಬಿದ ಹಾಸ್ಟಲ್ ನಲ್ಲಿದ್ದಾಗಿನ ಹುಡುಗರ ಕೇಕೆ, ನಗು, ತಣ್ಣನೇ ನೀರು ಮೈಮೇಲೆ ಸುರುವಿಕೊಳ್ಳಲೂ ಹಿಂದು ಮುಂದು ನೋಡುತ್ತಾ ದಬಾದಬಾಂತ ಚೊಂಬಿನಿಂದ ತಲೆ ಮೇಲೆ ಹಾಕಿಕೊಳ್ಳುವಾಗಿನ ಅಪಶೃತಿ ಹಾಡುಗಳು, ಅಷ್ಟರಮಟ್ಟಿಗೆ ತಮ್ಮಲ್ಲೇ ತಾವು ದೊಡ್ಡ ಸಿಂಗರ್ ಎಂಬ ಬಿಲ್ಡಪ್ಪು. ರೂಮಿಗೆ ಬಂದ ತಕ್ಷಣವೇ ಕಿಟಕಿಯಲ್ಲಿದ್ದ ಅಥವಾ ಪುಸ್ತಕ ಇಟ್ಟುಕೊಳ್ಳಲು ಇರುವ ಕಪಾಟಿನೊಳಗಿನ ದೇವರ ಚಿಕ್ಕ ಫೋಟೋಗೆ ಕೈಮುಗಿಯುವುದು. ತಲೆ
ಒರೆಸಿಕೊಳ್ಳುವ ಗ್ಯಾಪ್ ನಲ್ಲೇ ಮೇಲ್ಮಹಡಿ ರೂಮಿನಿಂದ ಇಣುಕಿದರೆ ಪಕ್ಕದಲ್ಲೇ ಇದ್ದ ತರಳಬಾಳು ಸಂಸ್ಥೆಗೆ ಹೊರಡುವ ಬಿ.ಎಡ್. ಓದುವ ಹುಡುಗಿಯರ ದಂಡಿಗೆ ಕೇಳುವಂತೆ ಹಾಡುವ ಕೀಟಲೇ ಭರಿತ ಹಾಡುಗಳು, ಎಲ್ಲವೂ ಸಹಜವೆಂಬಂತೆ . ಈ ದಿನಗಳಲ್ಲಾಗಿದ್ದರೆ, ಮೊಬೈಲು ರೆಕಾರ್ಡಿಂಗ್ ಮಾಡಿ ಹುಡುಗಿಯರು “ಏಯ್, ಯಾಕಲೇ, ಹೆಂಗಿದೆ ಮೈಗೆ?” ಅಂದಿರುತ್ತಿದ್ದರು.

ಆ ದಿನ ತಿಂಡಿ ಏನು ಮಾಡಿದ್ದಾರೆಂದು ಹೇಳುವುದೇ ಬೇಡ ವಾಸನೆ ಇಡೀ ಹಾಸ್ಟಲ್ ಹರಡಿರುತ್ತಿತ್ತು. ಅಡುಗೆ ಭಟ್ಟ ರವಿ, ಅವರ ವಯಸ್ಸಾದ ಮಾವ ಶ್ರೀನಿವಾಸ, ಅವರಿಬ್ಬರಿಗೂ ಒಬ್ಬ ಅಸಿಸ್ಟಂಟ್ ಕುಕ್ಕು ರಾಜು. ಬರೊಬ್ಬರಿ ನಲವತ್ತೊಂಭತ್ತು ರೂಮುಗಳಲ್ಲಿ ಎರಡನ್ನು ಬಿಟ್ಟು ಉಳಿದೆಲ್ಲಾ ರೂಮುಗಳಲ್ಲಿ ಡಿಪ್ಲೋಮಾ ವರ್ಷದ ವಿದ್ಯಾರ್ಥಿಗಳು, ಒಂದರಲ್ಲಿ ವಾರ್ಡನ್ನು ಮತ್ತೊಂದರಲ್ಲಿ ವಾಚಮನ್ನು.

ಹೊಸದಾಗಿ ಸೇರಿದ ದಿನಗಳಲ್ಲಿ ಹಾಸ್ಟಲ್ ನಲ್ಲಿರುವ ಹುಡುಗರು ಅದೆಷ್ಟು ಖುಷ್ ಖುಷಿಯಿಂದ ಕೇಕೆ ಹಾಕುತ್ತಾ ಇರುತ್ತಾರಲ್ಲ ಅನ್ನಿಸುವುದು. ನನ್ನಂತೆ ಕೆಲವರಿಗೆ ಹೋಂ ಸಿಕ್ಕು. ಬರುಬರುತ್ತಾ ಅಭ್ಯಾಸವಾಯ್ತು. ಪೂರ್ಣ ಪ್ರಮಾಣದ ದಾಖಲಾತಿ ಆಗದೇ ಮೆಸ್ ಶುರು ಆಗದಿದ್ದ ಕಾರಣ ರೂಮಿನಲ್ಲಿ ಸ್ಟೋವ್ ಸೀಮೆ ಎಣ್ಣೆ ತಂದು ಅನ್ನ ಕುದಿಸಿ ಹತ್ತಿರದಲ್ಲೇ ಇದ್ದ ಅನಂತರಾಮ್ ಪ್ಯಾರಡೈಸ್ ನಲ್ಲಿ ಸಿಗುವ ಹಿಟ್ಟು ಕಲೆಸಿದ ಟೊಮೇಟೋ ಸಾರು….ಅಲ್ಲಲ್ಲ ನೀರಿನಂತಹ ಸಾಂಬರು.. ಕಲೆಸಿ ತಿನ್ನುತ್ತಿದ್ದೆವು. ಪಕ್ಕದಲ್ಲಿ ಬಿ.ಡಿ.ಟಿ ಎಂಜನಿಯರಿಂಗ್ ಹಾಸ್ಟಲ್ಲು. ಅಲ್ಲಿ ನಡೆಯುವ ಹೊಡೆದಾಡುವ ದಂಡು ಕೆಳಗೆ ಬಿದ್ದವನೊಬ್ಬನನ್ನು ದಾರಿಗುಂಟ ಒದೆಯುತ್ತಾ ಸೀದ ನಮ್ಮ ಹಾಸ್ಟಲ್ ಮುಂದಿದ್ದ ಬಯಲಿಗೆ ಶಿಫ್ಟ್ ಆಗುತ್ತಿತ್ತು. ಕತ್ತಲಲ್ಲಿ “ಅಯ್ಯೋ, ಅಮ್ಮ , ಯಪ್ಪೋ” ಅನ್ನುವ ಸೌಂಡಷ್ಟೇ ನಮಗೆ ಕೇಳುತ್ತಿದ್ದುದು.

ಭರ್ತಿಯಾದ ನಂತರ ಹಾಸ್ಟಲ್ ನಲ್ಲಿ ಎರಡನೇ ಮತ್ತು ಮೂರನೇ ವರ್ಷದ ಡಿಪ್ಲೋಮಾ ಹುಡುಗರನ್ನು ನೋಡುತ್ತಿದ್ದರೆ ನಮಗಿಂತ ಐದಾರು ವರ್ಷ ದೊಡ್ಡವರೇ ಅನ್ನಿಸೋದು. ಅಷ್ಟರಮಟ್ಟಿಗೆ ದಾಂಡಿಗರಂತಿರುತ್ತಿದ್ದರು. ವಿಕೆಂಡ್ ದಿನಗಳಲ್ಲಿ ಮೆಕ್ಯಾನಿಕ್ ಮತ್ತು ಸಿವಿಲ್ ಬ್ರ್ಯಾಂಚಿನ ಹುಡುಗರ ಮಧ್ಯೆ ಸಣ್ಣ ಪುಟ್ಟ ಕಿರಿಕ್ಕುಗಳು ಆದವೆಂದರೆ ಸಾಕು…. ಊಟದ ನಂತರ ತಮ್ಮ ತಮ್ಮ ರೂಮುಗಳಿಂದ ಹಾಕಿ ಸ್ಟಿಕ್ಕು, ಬ್ಯಾಟು. ಮಟೀರಿಯಲ್ಲು ಸಹಿತ ಎದುರಿಗೆ ಇದ್ದ ಕತ್ತಲ ಬಯಲಿಗೆ ಪೆರೇಡ್ ಹೊರಡುತ್ತಿದ್ದರು. ಮತ್ತದೇ. “ ಅಯ್ಯೋ….. ಅಮ್ಮ…. ಅಪ್ಪ….” ಸೌಂಡು…

ಬೆಳಿಗ್ಗೆ ಎದ್ದು ಬ್ರಷ್ಷಿಗೆ ಪೇಸ್ಟ್ ಹಚ್ಚಿಕೊಂಡು ಸಾಮೂಹಿಕ ಸ್ನಾನದ ರೂಮಿನ ಕಡೆ ಹೊರಡುವಾಗ ಒಂದೊಂದು ಮುಖದ ಮೇಲೂ ಗುದ್ದಿದ ಏಟುಗಳು…. ಕುಂಟುಗಾಲು. ಯಾರಾದರೂ ಕೇಳಿದರೆನ್ನಿ “ ಏನಿಲ್ಲ ಬಿಡು ಮಗಾ…. ರಾತ್ರಿ ಸ್ವಲ್ಪ ವಾರ್ ಅಯ್ತು” ಅಷ್ಟೇ. ದೂರದಲ್ಲಿ ಇನ್ನೊಂದು ಗುಂಪಿನ ಹುಡುಗರು “ ಬೀಳ್ಲಿಬೀಳ್ಲೀ“ ಎನ್ನುತ್ತಾ ಹಂಗಿಸುವುದು.

ಜಂಟಲ್ಮನ್ ಸಿನಿಮಾದ ಪ್ರಭುದೇವನ ಹಾಡು.. ಚುಕುಬುಕು ರೈಲೇ… ಹಾಡಿನಲ್ಲಿನ ಮೂಳೆ ಇಲ್ಲವೇನೋ ಎಂಬಂತಿದ್ದ ಡಾನ್ಸ್ ಹವಾ… ರೋಜಾ ಎಂಬ ಅಪ್ಪಟ ಮಣಿರತ್ಮಂ ಮತ್ತು ಎ.ಆರ್. ರಹಮಾನ್ ಅದ್ಭುತ ಸಂಗೀತದ ಗುಂಗಿನ ಸಿನಿಮಾ ಹಾಡುಗಳು…. ಅದೇ ತಾನೇ ಬಾಲಿವುಡ್ಡಿಗೆ “ ತೂನೆ ಪೆಹಲಿ ನಜರ್ ಮೇ ಸನಮ್….ಮೇರೆ ದಿಲ್ ಕೋ ಚುರಾಯಾ…..” ಎಂದು ಹುಚ್ಚೆದ್ದು ಕುಣಿಯುತ್ತಾ ಎಂಟ್ರಿ ಕೊಟ್ಟ ಶಾರುಖ್ …… ಕಾಲೇಜು, ಸಿನಿಮಾ, ಹಾಡು, ಕೈಯಲ್ಲಿ ದುಡ್ಡಿಲ್ಲದೇ ಹಾಗೆ ಸ್ಟೇಡಿಯಂ ಸುತ್ತಿ… ಕೆ.ಇ.ಬಿ. ಜಯದೇವ ಸರ್ಕಲ್, ದಾಟಿ ಪಿ.ಬಿ. ರಸ್ತೆಗುಂಟ, ಅಶೋಕ ರಸ್ತೆ ಮಂಡಿಪೇಟೆ ತಿರುಗಿ ಅರುಣಾ ಟಾಕೀಸಿನ ಪೋಸ್ಟರ್ ನೋಡಿಕೊಂಡು ರಾತ್ರಿ ರಾಮ್ ಅಂಡ್ ಕೋ ಸರ್ಕಲ್ ನಲ್ಲಿ ತಿರುಗುವ ಚೆಂದ ಚೆಂದದ ಹುಡುಗಿಯರ ನೋಡಿ ಹಾಸ್ಟಲ್ ಗೆಬಂದು ಉಂಡು ಮಲಗುತ್ತಿದ್ದ ಆರಂಭದ ದಿನಗಳು ಆ ವರ್ಷದ ಡಿಸೆಂಬರ್ ಶುರುವಾಗುತ್ತಿದ್ದಂತೆ ಗಂಭೀರವಾಗುತ್ತಾ ಹೋಯಿತು…..

ಇದರ ಮಧ್ಯೆ ಒಮ್ಮೆ ಒಂದ್ಯಾವುದೋ ಯಾತ್ರೆ ದೂರದೂರಿಂದ ಶುರುವಾಗಿ ನಾವಿದ್ದ ದಾವಣಗೆರೆಯನ್ನು ದಾಟಿ ಹೋಯಿತು.

ಹಾಸ್ಟಲ್ ನಲ್ಲಿ ಟೀವಿಯಿಲ್ಲದ ಕೇವಲ ದಿನ ಪತ್ರಿಕೆಗಳಿಂದಷ್ಟೇ ತಿಳಿಯುತ್ತಿದ್ದ ಸುದ್ದಿಗಳ ಕೇಳಿ ಎಲ್ಲೆಡೆ ಗಲಭೆ ಶುರುವಾದವು. ಅದು ದಾವಣಗೆರೆ ಎಂಬ ಊರಿಗೂ ಕಿಡಿ ತಾಕಿ ನಿಂತಾಗ ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಅನಿರ್ಧಿಷ್ಟ ಅವಧಿಗೆ ಸೆಕ್ಷನ್ 144 ವಿಧಿಸಲಾಯಿತು. ಹಾಸ್ಟಲ್ ನಲ್ಲಿ ವಾರಕ್ಕೊಮ್ಮೆ ಮಾತ್ರ ತರಕಾರಿ ದಿನಸಿ ತರಲಾಗುತ್ತಿತ್ತು. ನಿಷೇದಾಜ್ಞೆ ಜಾರಿಯಾದ ಹಿನ್ನೆಲೆಯಲ್ಲಿ ದಾಸ್ತಾನು ಇರುವವರೆಗೂ ಅಡುಗೆ ಮಾಡಿ ಹಾಕಿದರು. ತರಕಾರಿ ಅಡುಗೆ ದಿನಸಿ ಖಾಲಿಯಾಗಲು ಇನ್ನೇನು ಎರಡು ದಿನಗಳಿವೆ ಅಂದಾಗ ವಾರ್ಡನ್ ಎಲ್ಲಾ ಹುಡುಗರಿಗೆ ಮೆಸ್ ಹಾಲ್ ಗೆ ಬಂದು “ ನಿಷೇಧಾಜ್ಞೆ ಜಾರಿ ಮಾಡಿ ಶಾಲಾ ಕಾಲೇಜು, ಮಾರ್ಕೆಟ್ಟು, ಎಲ್ಲವೂ ಬಂದ್ ಆದ ಕಾರಣ ನೀವೆಲ್ಲಾ ನಿಮ್ಮ ನಿಮ್ಮ ಊರಿಗೆ ಹೇಗೆ ಹೋಗ್ತೀರೋ ವ್ಯವಸ್ಥೆ ಮಾಡಿಕೊಳ್ಳಿ…. ನಿಷೇಧಾಜ್ಞೆ ತೆರವುಗೊಳಿಸಿ ಕಾಲೇಜು ಶುರುವಾದರೆ ಮಾಹಿತಿ ಪಡೆದು ಬನ್ನಿ” ಅಂದುಬಿಟ್ಟರು.

ದುಡ್ಡಿದ್ದ ಹುಡುಗರು ರಾತ್ರೊ ರಾತ್ರಿ ಬ್ಯಾಗು ಹೆಗಲಿಗೇರಿಸಿಕೊಂಡು ಊರು ಬಿಟ್ಟರು. ಮೊದಲ ವರ್ಷದಲ್ಲಿದ್ದ ನಾನು ನನ್ನಂತೆ ಹಲವರು ಮನೆ ಕಡೆಯಿಂದ ಎಂ.ಓ… ಬರುವುದನ್ನು ಕಾಯುತ್ತಿದ್ದೆವು. ಈಗ ಮೂಲೆಯಲ್ಲಿದ್ದ ಸ್ಟೋವ್ ಮತ್ತೆ ರೂಮಿನ ಮಧ್ಯೆ ಜಾಗಕ್ಕೆ ಬಂತು. ಕಳುವಿನಿಂದ ಅಂಗಡಿ ಬಾಗಿಲು ತೆಗೆಸಿ ತಂದ ಅಕ್ಕಿ ಬೇಯುತ್ತಿತ್ತು. ಮತ್ತದೇ ಅನಂತರಾಮ್ ಪ್ಯಾರಡೈಸ್ ಮುಚ್ಚಿದ ಶೆಟರ್ ಬಡಿದು “ನಾವು ಹಾಸ್ಟಲ್ ಹುಡುಗರು” ಅಂದರೆ ಸರ್ರನೇ ತೆಗೆದು ಒಂದು ಚೊಂಬು ನೀರಂಥ ಸಾರು ಕೊಡುತ್ತಿದ್ದ. ಅದನ್ನೇ ತಿಂದು ಇರುತ್ತಿದ್ದೆವು…

ಆ ಅಕ್ಕಿಯೂ ಖಾಲಿಯಾಗಿ ಉಳಿದೆಲ್ಲರೂ ಹಾಸ್ಟಲ್ ಖಾಲಿ ಮಾಡುವ ದಿನ ಹತ್ತಿರ ಬಂದೇ ಬಿಟ್ಟಿತು. ಕೈಯಲ್ಲಿ ದುಡ್ಡಿಲ್ಲ…. ಎಂ.ಓ ಇನ್ನೂ ಬಂದಿರಲಿಲ್ಲ. ಅನಿವಾರ್ಯವಾಗಿ ವಾಚ್ಮನ್ ಶಿವಣ್ಣ ಒಂದಿನ ಬೆಳಿಗ್ಗೆ “ ನೋಡ್ರಪ್ಪಾ, ಹೆಂಗಾರ ಮಾಡಿ ನಿಮ್ ಊರು ಸೇರ್ಕಳಿ…” ಅಂದ. ಅಷ್ಟೊತ್ತಿಗೆ ಯಾರೆಂದರೆ ಯಾವ ಹುಡುಗರೂ ಇಲ್ಲ. ನಾನು ಇನ್ನೊಂದಿಬ್ಬರು ಅಷ್ಟೇ ಇದ್ದಿದ್ದು… ಕೊನೆಗೆ ವಾಚ್ಮನ್ ಶಿವಣ್ಣನನ್ನೇ ಬಸ್ ಚಾರ್ಜಿಗೆ ದುಡ್ಡು ಕೇಳಿದೆ. ಶಿವಣ್ಣ ಅಂಡರ್ವೇರ್ ನಲ್ಲಿ ಕೈಯಾಡಿಸಿ ತೆಗೆದರೆ ಕೇವಲ ಹತ್ತು ರೂಪಾಯಿ ಇತ್ತು. “ಇಷ್ಟೈತಪಾ, ನೋಡು
ಹೆಂಗೋಗ್ತಿ?” ಅಂದ. ಅದನ್ನೇ ಪಡೆದು ಬ್ಯಾಗ್ ಹಿಡಿದು ಹಾಸ್ಟಲ್ ನಿಂದ ಹೊರ ಬಿದ್ದೆ.

ಆಗ ದಾವಣಗೆರೆಯಿಂದ ಹಗರಿಬೊಮ್ಮನಹಳ್ಳಿಗೆ ಇದ್ದ ಬಸ್ ಚಾರ್ಜೇ ಹತ್ತು ರೂಪಾಯಿ. ಬಸ್ ಇದ್ದರೆ ನಿಲ್ದಾಣದವರೆಗೆ ಕಾಲೆಳೆದುಕೊಂಡು ನಡೆದು ಬಸ್ ಹತ್ತಬಹುದಾಗಿತ್ತು. ಬಸ್ಸು, ಆಟೋ, ಅಂಗಡಿ, ಹೋಟಲ್ಲು ಯಾವುದೂ ತೆಗೆದಿಲ್ಲ. ಹಾಸ್ಟಲ್ ಪಕ್ಕದ ರಸ್ತೆ ವಿದ್ಯಾನಗರದ ದಿಕ್ಕಿಗಿತ್ತು. ರಸ್ತೆಗುಂಟ ನಡೆದು ಬೈಪಾಸ್ ರಸ್ತೆಗೆ ಬಂದು ನಿಂತೆ. ಹೊಟ್ಟೆ ಹಸಿವು ಬೇರೆ. ಬೈಪಾಸ್ ರಸ್ತೆಯಾದ್ದರಿಂದ ಅತ್ತ ಸಣ್ಣ ಮನೆಯೂ ಅಲ್ಲದ ಗೂಡಂಗಡಿಯೂ ಅಲ್ಲದ ಒಂದರಲ್ಲಿ ಒಲೆ ಮೇಲಿದ್ದ ಇಡ್ಲಿ ಪಾತ್ರೆ ನೋಡಿ ಕೇಳಿದೆ. ನಾಲ್ಕು ಇಡ್ಲಿ ತಿಂದೆ. ಅಲ್ಲಿಗೆ ಮೂರು ರೂಪಾಯಿ ಖರ್ಚು. ಸಿಕ್ಕ ಪಂಜಾಬಿ ಲಾರಿಗೆ ಕೈ ತೋರಿಸಿ ಹತ್ತಿದೆ. ಹರಿಹರದ ಬೈಪಾಸ್ ರಸ್ತೆಗೆ ಬಂದು ನಿಲ್ಲಿಸಿದ. ಅಲ್ಲಿಗೆ ಮೂರು ರೂಪಾಯಿ ಚಾರ್ಜು. ಆ ಮೂರು ರೂಪಾಯಿ ಕೊಟ್ಟಾಗ ಸಿಖ್ ಡ್ರೈವರ್ ಮುಖ ನೋಡಿದೆ.
“ ಓಯ್ ಚಲ್ ಪುತ್ತರ್” ಅಂದ.

ಬೈಪಾಸ್ ರಸ್ತೆಯಿಂದ ಕಿರ್ಲೋಸ್ಕರ್ ಫ್ಯಾಕ್ಟರಿ ತನಕ ರಸ್ತೆಯುದ್ದಕ್ಕೂ ಪೋಲಿಸಿನವರದೇ ಪಾರುಪತ್ಯ. ಪೋಲಿಸರನ್ನು ಕಂಡರೆ ಎಲ್ಲಿ ಲಾಟಿ ಬೀಸುವರೋ ಎಂಬ ಭಯದಲ್ಲೇ ಅದೇ ಪೋಲಿಸಿನವರಿಗೆ “ಅಣಾ, ಹಿಂಗಿಂಗಾಗಿದೆ … ಊರಿಗೆ ಹೋಗಬೇಕು…ಏನಾರ ಮಾಡಿ ಹರಿಹರ ದಾಟಿದರೆ ಸಾಕು” ಅಂದೆ.. ಅಲ್ಲಿಂದ ಕಿರ್ಲೋಸ್ಕರ್ ಫ್ಯಾಕ್ಟರಿ ದಾಟಿಸಿ ತಮ್ಮದೇ ಜೀಪಿನಲ್ಲಿ ತಂದಿಳಿಸಿ ಹುಷಾರಾಗಿ ಹೋಗು ಅಂದರು ಅದೇ ಪೋಲಿಸರು. ಅಲ್ಲಿಗೆ ಕೈಯಲ್ಲಿದ್ದದ್ದೇ ನಾಲ್ಕು ರೂಪಾಯಿ. ಇನ್ನ ಎಂಭತ್ತು ಕಿಲೋ ಮೀಟರ್ ಇರುವ ಹಗರಿಬೊಮ್ಮನಹಳ್ಳಿ ಸೇರಬೇಕು. ನಾಲ್ಕು ರೂಪಾಯಿಗೆ ಅಲ್ಲಿಂದ ಊರಿಗೆ ಬರಲು ಲಾರಿ ಹತ್ತಲು ಬಿಟ್ಟಾರಾ? ಗೊತ್ತಿಲ್ಲ. ಆದರೂ ಕೈ ಮಾಡಿ ಸಿಕ್ಕ ಲಾರಿ ಹತ್ತಿದೆ. ತೆಲಿಗಿ ದಾಟಿತು, ನೀಲಗುಂದ ಕ್ರಾಸ್ ದಾಟಿತು, ಇನ್ನೇನು ಹರಪನಹಳ್ಳಿ ಹತ್ತಿರದ ಕೆರೆ ಕ್ರಾಸ್ ದಾಟಿ ಬಸ್ ನಿಲ್ದಾಣದ ಮುಂದೆ ಲಾರಿ ನಿಲ್ಲಿಸಿದ ಡ್ರೈವರ್. ಅಲ್ಲಿಂದ ಇಲ್ಲಿವರೆಗೆ ನಾನು ಎಷ್ಟು ದುಡ್ಡು ಕೊಡುತ್ತೇನೆಂದು ಕ್ಲೀನರ್ ಆಗಾಗ ನೋಡುತ್ತಲೇ ಇದ್ದ. ಇರುವ ನಾಲ್ಕು ರೂಪಾಯಿ ಕೊಟ್ಟರೆ ಹರಪನಹಳ್ಳಿಯಲ್ಲೇ ಇಳಿಸಿದರೆ ಏನ್ಮಾಡ್ಲಿ? ಸುಮ್ಮನೇ ಕುಳಿತಿದ್ದೆ. ಈ ಊರಲ್ಲಿ ಕರ್ಫ್ಯೂ ಇರಲಿಲ್ಲ.

ಡ್ರೈವರ್ ಮತ್ತು ಕ್ಲೀನರ್ ಲಾರಿ ಇಳಿದು ರಸ್ತೆ ಬದಿಯ ತಟ್ಟಿ ಹೋಟಲೊಂದರಲ್ಲಿ ಇಡ್ಲಿ ತಿನ್ನುತ್ತಾ ಲಾರಿಯೊಳಗೆ ಕುಳಿತ ನನ್ನನ್ನೇ ನೋಡುತ್ತಿದ್ದರು. ಇವನೇನು ಪುಗಸಟ್ಟೆ ಗಿರಾಕಿಯಾ ಅಂತಿರಬಹುದಾ? ಅಂತ ನನ್ನ ಗುಮಾನಿ. ಡ್ರೈವರ್ ಗೆ ಏನನ್ನಿಸಿತೋ ಏನೋ ಅಲ್ಲಿಂದಲೇ ತಿಂಡಿ ತಿನ್ನಲು ಕರೆದರೂ ನಾನು ಹೋಗಲಿಲ್ಲ. ಊರಿಗೆ ಹೋಗಲೇ ದುಡ್ಡು ಕಡಿಮೆ ಇದೆ. ಅದನ್ನೇ ಹೇಗೆ ಹೇಳೋದು ಅನ್ನುವ ಗೊಂದಲದಲ್ಲಿದ್ದೆ. ಮತ್ತೆ ಶುರು ಪ್ರಯಾಣ. ನಂದಿಬೇವೂರು, ಇಟ್ಟಿಗಿ ದಾಟಿ ಉಲುವತ್ತಿ ಕೂಡ ಸಾಗಿತು. ಕ್ಲೀನರ್ ಆಗಲಿ ಡ್ರೈವರ್ ಆಗಲಿ ನನ್ನ ದುಡ್ಡು ಕೇಳಲೇ ಇಲ್ಲ. ಹಳೇ ಹಗರಿಬೊಮ್ಮನಹಳ್ಳಿ ಸೇತುವೆ ಹಾದು ಬಜಾರದಲ್ಲಿ ನಿಲ್ಲಿಸಿ, “ತಮ್ಮ ಎಲ್ಲೀಳೀತೀ?” ಅಂದರು. “ ಅಣಾ, ಇಲ್ಲೇ ಇಳಿತೀನಿ” ಅನ್ನುತ್ತಾ ಪ್ಯಾಂಟಿನ ಜೇಬಿಂದ ನಾಲ್ಕು ರೂಪಾಯಿ ಕ್ಲೀನರ್ ಕೈಗಿಟ್ಟೆ. ಹದಿನಾರು ವಯಸ್ಸಿನ ಹುಡುಗ, ಕೈಯಲ್ಲಿ ಪುಸ್ತಕ ಮತ್ತು ಬಟ್ಟೆಗಳಿರುವ ಬ್ಯಾಗಿದೆ. ನಾನು ಹತ್ತುವಾಗಲೇ ನೋಡಿ ಸುಮ್ಮನಿದ್ದರೋ ಅಥವಾ ಅವರು ತಿಂಡಿ ತಿನ್ನಲು ಕರೆದಾಗ ಹೋಗದಿದ್ದುದನ್ನು ಸೂಕ್ಷ್ಮವಾಗಿ ಗಮನಿಸಿದ್ದರೋ ಗೊತ್ತಿಲ್ಲ. ಆ ನಾಲ್ಕು ರೂಪಾಯಿಯನ್ನೂ ನನ್ನ ಕೈಗೇ ನೀಡಿ “ ಬೇಸಿ ವೋದಲೇ ತಮ್ಮಾ” ಅಂದು ಇಳಿಸಿ ಟಾಟಾ ಮಾಡಿ ಹೋದರು.

ಹತ್ತು ರೂಪಾಯಿಗೇನು ಬರುತ್ತೆ ಈಗ?

ಆದರೆ ಆ ಹತ್ತು ರೂಪಾಯಿ ನನ್ನನ್ನು ಆ ಕರ್ಫ್ಯು ದಿನಗಳಲ್ಲಿ ದಾವಣಗೆರೆ ಡಿಪ್ಲೋಮಾ ಹಾಸ್ಟಲ್ ನಿಂದ ನೂರು ಕಿಲೋಮೀಟರ್ ದೂರದ ಹಗರಿಬೊಮ್ಮನಹಳ್ಳಿಯ ತನಕ ತಿಂಡಿ ತಿನಿಸಿ ಕರೆದುಕೊಂಡು ಬಂದಿತ್ತು, ಕೊನೆಗೆ ನಾಲ್ಕು ರೂಪಾಯಿ ಚಿಲ್ಲರೆ ಉಳಿಸಿ.

ವಾಚ್ಮನ್ ಶಿವಣ್ಣ ಆಗಲೇ ಹತ್ತತ್ತಿರ ನಲವತ್ತು ದಾಟಿದವ. ವಾಪಾಸ್ ಹೋಗಿ ಆತನಿಗೆ ಇನ್ನ ಇಪ್ಪತ್ತು ರೂಪಾಯಿ ಸೇರಿಸಿ ಕೊಟ್ಟು ಧನ್ಯವಾದ ಹೇಳಿದ್ದೆ. ಈಗ ಬದುಕಿದ್ದಾನೋ ಇಲ್ಲವೋ ಗೊತ್ತಿಲ್ಲ. ಆ ಸಿಖ್ ಡ್ರೈವರ್ ಯಾರೋ? ನಾಲ್ಕು ರುಪಾಯಿ ಚಿಲ್ಲರೆ ನನ್ನ ಕೈಗಿಟ್ಟ ಮತ್ತೊಬ್ಬ ಡ್ರೈವರ್ ಯಾರೋ? ಇಂದಿಗೆ ಅವರೆಲ್ಲಾ ಹೆಸರಿಲ್ಲದೇ ಕೃತಜ್ಞತೆಗೆ ಪಾತ್ರರಾದವರು. ಇಂದಿಗೂ ಹಾಗೆ ಉಳಿದವರು. ವಾತಾವರಣ ತಿಳಿಯಾದ ನಂತರ ನಾವು ಮತ್ತೆ ಹಾಸ್ಟಲ್ ಗೆ ಹೋದಾಗ ತಿಳಿದದ್ದೇನೆಂದರೆ,ಅದೊಂದು ದಿನ ರಾತ್ರಿ ಹಾಸ್ಟಲ್ ಹಿಂಭಾಗದಲ್ಲಿ ಗಂಟು ಕಟ್ಟಿದ ಗೋಣಿ ಚೀಲದಲ್ಲಿ ಹೆಣವೊಂದು ಸಿಕ್ಕು ಹಾಸ್ಟಲ್ ನಲ್ಲಿ ಪೋಲಿಸರು ಓಡಾಡಿದ್ದರಂತೆ.

ಇದೆಲ್ಲಾ ನಡೆದು ಮೂವತ್ನಾಲ್ಕು ವರ್ಷಗಳೇ ಕಳೆದಿವೆ. ಆದರೆ ಹೊಟ್ಟೆ ತುಂಬಿದಾಗ ಹಸಿವಿನ ದಿನಗಳು ನೆನಪಿರಬೇಕು. ಕೈಯಲ್ಲಿ ಸಾವಿರ ಸಾವಿರ ಸಂಬಳ ತುಂಬುವ ದಿನಗಳಲ್ಲಿ ಕೇವಲ ಹತ್ತು ರೂಪಾಯಿಯೂ ಕೂಡ ದೊಡ್ಡ ಮೊತ್ತವೆನ್ನುವುದು ಮರೆಯದಿರಬೇಕು.

ಪಿ. ಎಸ್. ಅಮರದೀಪ್…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x