ಸಾವನ್ನು ಹೊಡೆದಟ್ಟಿದರೂ ಮತ್ತೆ ಸಾವು ದುತ್ತನೇ ಎರಗಿ ಬಂತು ! ಕರುಳು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, ಸಾವಿನ ದವಡೆಯಿಂದ ಪಾರಾಗಿ ಬಂದರೂ, ಸಾವು ಮತ್ತೊಂದು ರೂಪದಲ್ಲಿ ಅವನಿಗೆ ಸಿದ್ದವಾಗಿತ್ತು, ತನ್ನ ನೇಣು ಕುಣಿಕೆಯನ್ನು ಅವನಿಗಾಗಿ ಚಾಚಿ ಕುಳಿತಿತ್ತು !
‘ವಿಶಾಲಮೂರ್ತಿ’ ಹೆಸರಿಗೆ ತಕ್ಕಂತ ಮನಸ್ಸು ಮತ್ತು ಹೃದಯ ಅವನದು. ಸ್ನೇಹಮಯ ವ್ಯಕ್ತಿತ್ವ, ಎಲ್ಲರೊಡನೆ ಅನ್ಯೋನ್ಯತೆಯಿಂದ ಬೆರೆಯುತ್ತಿದ್ದ. ‘ಒಳ್ಳೆಯವರು, ದೀರ್ಘಕಾಲ ಬದುಕುವುದಿಲ್ಲವಂತೆ, ಅವರನ್ನು ದೇವರು ಬಹುಬೇಗ ಕರೆದುಕೊಂಡು ಬಿಡುತ್ತಾನಂತೆ’ ಎಂಬುದು ಜನಜನಿತ ಲೋಕೋಕ್ತಿ. ಇದಕ್ಕೆ ಪೂರಕವೋ ಎಂಬಂತೆ ಅವನಿಗೆರಗಿದ್ದ ಸಾವು ಹಿಂದೆ ಸರಿದಿದ್ದರೂ ಮತ್ತೊಮ್ಮೆ ಹಠಾತ್ತಾಗಿ ಬಂದು ಅವನ ಪ್ರಾಣವನ್ನು ಬಕಪಕ್ಷಿಯಂತೆ ಕಬಳಿಸಿತು.
ಕುಟುಂಬದ ಸಂಪೂರ್ಣ ಜವಾಬ್ದಾರಿ ಅವನ ಹೆಗಲಿಗಿತ್ತು. ದಂಪತಿ ಹಾಗು ಎರಡು ಮಕ್ಕಳ ಅನ್ಯೋನ್ಯ ಕುಟುಂಬವದು. ಯಾರ ನೆರವೂ ಇಲ್ಲದೆ ತನ್ನ ಸ್ವಂತ ಗಳಿಕೆಯಲ್ಲೇ ಹೆಂಡತಿ ಮಕ್ಕಳನ್ನು ಸಾಕುತ್ತ ಸ್ವತಂತ್ರವಾಗಿ ಜೀವಿಸುತ್ತಿದ್ದ ವ್ಯಕ್ತಿ. ಅಂಥಹ ಸಮಯದಲ್ಲಿ ಮಾರಕ ಕಾಯಿಲೆಯೊಂದು ಅವನನ್ನು ಅಟಕಾಯಿಸಿಕೊಂಡಿತು. ಆ ವೇಳೆಗೆ ಅವನ ಹಿರಿಯ ಮಗಳ ವಿದ್ಯಾಭ್ಯಾಸ ಮುಗಿದಿದ್ದು ಮಗ ಇನ್ನೂ ಚಿಕ್ಕವನಾಗಿದ್ದ. ವಂಶೋದ್ಧಾರಕನಾಗಿ ಹುಟ್ಟಿದ್ದ ಅವನನ್ನು ದಂಪತಿಗಳು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಮಗಳ ವಿದ್ಯಾಭ್ಯಾಸವು ಮುಗಿದಿದ್ದರಿಂದ ದಂಪತಿಗಳು ಆಕೆಯ ವಿವಾಹದ ಸಿದ್ಧತೆಯಲ್ಲಿದ್ದರು. ಅದಾಗಲೇ ಇಬ್ಬರು ಗಂಡುಗಳನ್ನು ಗುರುತಿಸಿದ್ದು ದಂಪತಿಯರು ಅವರ ಆಯ್ಕೆಲ್ಲಿದ್ದರು. ಇಂತಹ ಅನಿಶ್ಚಿತ ಸಮಯದಲ್ಲಿ ವಿಶಾಲಮೂರ್ತಿಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಕಂಡ ಕಂಡ ಕಡೆ ಚಿಕಿತ್ಸೆಗಳನ್ನು ಪಡೆದ. ಚಿಕಿತ್ಸೆ ಪಡೆದಷ್ಟೂ ಕಾಯಿಲೆ ಇನ್ನಷ್ಟು ಉಲ್ಬಣಗೊಂಡಿತೆ ಹೊರತು ಅದು ವಾಸಿಯಾಗಲಿಲ್ಲ. ಮುಂದೆಯೂ ಅದು ಸುಧಾರಣೆಯಾಗದೆ ಅವನು ಶಾಶ್ವತವಾಗಿ ಹಾಸಿಗೆ ಹಿಡಿದ.
ಜೀವನಕ್ಕೆ ಆಧಾರವಾಗಿದ್ದವನು ಕಾಯಿಲೆ ಬಿದ್ದು ಹಾಸಿಗೆ ಹಿಡಿದ ಮೇಲೆ, ಅವನ ಗಳಿಕೆಯನ್ನೇ ನೆಚ್ಚಿಕೊಂಡಿದ್ದ ಕುಟುಂಬವು ಕಷ್ಟಕ್ಕೆ ಸಿಲುಕಿತು. ದಂಪತಿಗಳು ತಮ್ಮ ಮಗಳ ವಿವಾಹವನ್ನು ಬದಿಗೊತ್ತಿ ಆಸ್ಪತ್ರೆಗೆ ಅಲೆದಾಡತೊಡಗಿದರು. ಅಲ್ಲಿ ಅವನಿಗೆ ಹಲವಾರು ಮೆಡಿಕಲ್ ಟೆಸ್ಟುಗಳು ತಪಾಸಣೆಗಳು ಜರುಗಿದವು. ಅವನ ರೋಗವನ್ನು ಪತ್ತೆ ಹಚ್ಚುವ ವೇಳೆಗೆ ಸಾಕಷ್ಟು ಹಣ ನೀರಿನಂತೆ ಪೋಲಾಗಿತ್ತು. ಅಷ್ಟರಲ್ಲಿ ರೋಗವು ಇನ್ನೂ ಉಲ್ಬಣಗೊಂಡು ಅವನು ವಿಷಮ ಸ್ಥಿತಿಗೆ ತಲುಪಿದ. ಕ್ಯಾನ್ಸರ್ ರೋಗವನ್ನು ಪ್ರಾರಂಭದಲ್ಲಿ ಕಂಡುಹಿಡಿಯುವುದು ಬಹಳ ಕಷ್ಟ. ಅದರ ಕೋಶಗಳು ದೇಹದಲ್ಲಿ ಗುಟ್ಟಾಗಿ ಬೆಳವಣಿಗೆ ಹೊಂದಿ ಬಹುರೂಪಿಗಳಾಗಿ ಹರಡಿದ ಬಳಿಕವೇ ಅವು ತಮ್ಮ ಅಸ್ಥಿತ್ವವನ್ನು ಸಾರುತ್ತವೆ. ಸೂಕ್ತ ಸಮಯದಲ್ಲಿ ತಜ್ಞ ವೈದ್ಯರಿಂದ ಮತ್ತು ಆಧುನಿಕ ಪ್ರಯೋಗಶಾಲೆಗಳ ನೆರವಿನಿಂದ ಮಾತ್ರ ಈ ರೋಗವನ್ನು ಪತ್ತೆಹಚ್ಚಲು ಮತ್ತು ಗುಣಪಡಿಸಲು ಸಾಧ್ಯವೆಂಬುದು ವೈದ್ಯರ ಅನಿಸಿಕೆ.
ವಿಶಾಲಮೂರ್ತಿಯು ತನ್ನ ಪುತ್ರಿಯ ವಿವಾಹಕ್ಕೆಂದು ಉಳಿತಾಯಮಾಡಿದ್ದ ಹಣ ಮತ್ತು ಒಡವೆಗಳೆಲ್ಲ ಅವನ ಚಿಕಿತ್ಸೆಗೆ ಖಾಲಿಯಾದವು. ಅವನು ಉದ್ಯೋಗಕ್ಕೆ ದೀರ್ಘರಜೆ ಹಾಕಿದ್ದರಿಂದ, ಗಾಯದ ಮೇಲೆ ಬರೆ ಎಳೆದಂತೆ, ಬರುತ್ತಿದ್ದ ವೇತನವೂ ನಿಂತುಹೋಯಿತು. ಕ್ಯಾನ್ಸರ್ ರೋಗದ ಚಿಕಿತ್ಸೆಯಂತು ದುಬಾರಿ ! ಹೋಗಿ ಹೋಗಿ ಈ ಕ್ಯಾನ್ಸರ್ ರೋಗ ನಮ್ಮಂಥ ಬಡವರಿಗೇ, ದುರ್ಬಲರಿಗೇ ಬರುತ್ತದಲ್ಲ ಎಂದು ಅವರು ವಿಧಿಯನ್ನು ಶಪಿಸದೆ ಇರಲಿಲ್ಲ. ಉದ್ಯೋಗ ನೀಡಿದ್ದ ಸಂಸ್ಥೆಯು ಅವನ ವೈದ್ಯಕೀಯ ವೆಚ್ಚಕ್ಕಾಗಿ ನೀಡಿದ ಮೊತ್ತ ಯಾವ ಮೂಲೆಗೂ ಸಾಲಲಿಲ್ಲ. ಜೀವಕ್ಕಿಂತ ಹಣ ದೊಡ್ಡದಲ್ಲವೆಂದು ಅವನ ಪತ್ನಿ ಯರ್ಯಾ ರಿಂದಲೋ ಸಾಲ ಪಡೆದು ಗಂಡನ ಚಿಕಿತ್ಸೆಗೆ ಖರ್ಚುಮಾಡಿದಳು. ಹೇಗಾದರೂ ಮಾಡಿ ತನ್ನ ಪತಿಯನ್ನು ಉಳಿಸಿಕೊಳ್ಳಲೇಬೇಕೆಂಬ ಕಾತುರ ಅವಳದು. ವಿಶಾಲಮೂರ್ತಿ ದೈಹಿಕವಾಗಿ ಕುಗ್ಗಿದ್ದರೂ ಮಾನಸಿಕವಾಗಿ ಸದೃಡವಾಗಿದ್ದ. ಅದರಿಂದ ಮುಂದೆ ಅವನು ಗುಣಹೊಂದಲು ಸಹಕಾರಿಯಾಯಿತು. ಅಂತು ವಿಶಾಲಮೂರ್ತಿ ಧೀರ್ಘ ಕಾಲ ಚಿಕಿತ್ಸೆ ಪಡೆದ ಮೇಲೆ ಗುಣಮುಖನಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ. ಅಷ್ಟರಲ್ಲಿ ಅವನ ಕುಟುಂಬವು ಸಾಲದ ಕಡಲಲ್ಲಿ ಮುಳುಗಿತ್ತು. ಮಗಳ ವಿವಾಹಕ್ಕಿಂತ ಚಿಕಿತ್ಸೆಗೆ ಮಾಡಿದ ಸಾಲ ತೀರಿಸುವುದೇ ಅವರಿಗೆ ದೊಡ್ಡ ಸಮಸ್ಯೆಯಾಯಿತು.
ವಿಶಾಲಮೂರ್ತಿ ಪುನಃ ಉದ್ಯೋಗಕ್ಕೆ ಮರಳಿದ್ದು, ಅದು ಅವನಿಗೆ ದೊರೆತ ಪುನರ್ಜನ್ಮ. ಸತತ ಒಂಭತ್ತು ತಿಂಗಳುಗಳ ಕಾಲ ಪಡೆದ ಚಿಕಿತ್ಸೆಯ ಪರಿಣಾಮವಾಗಿ ಅವನ ಕಾಯಿಲೆ ವಾಸಿಯಾಗಿದ್ದರೂ ಅವನಲ್ಲಿ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿದ್ದವು. ಕಿಮೋ ತೆರಪಿ ಚಿಕಿತ್ಸೆಯ ಪ್ರಭಾವಕ್ಕೆ ಅವನ ತಲೆಯ ಕೂದಲುಗಳೆಲ್ಲ ಉದುರಿಹೋಗಿದ್ದವು. ತಲೆ ಸಂಪೂರ್ಣ ಬೋಳು ಬೋಳಾಗಿತ್ತು. ಮಾಂಸಖಂಡಗಳು ಕುಗ್ಗಿಹೋಗಿದ್ದವು. ಚರ್ಮವು ಅಸ್ಥಿಪಂಜರಕ್ಕೇ ಅಂಟಿಕೊಂಡಂತೆ ಗೋಚರಿಸುತ್ತಿತ್ತು. 65 ಕೆ.ಜಿ.ತೂಕ ಇದ್ದವನು 40 ಕೆ.ಜಿ.ಗೆ ಇಳಿದಿದ್ದ. ಅವನ ಮುಖ ಚರ್ಯೆಯೇ ಬದಲಾಗಿತ್ತು. ಚಿಕಿತ್ಸೆಯ ಅಡ್ಡ ಪರಿಣಾಮಗಳಿಂದ ಅವನ ಜೀವಕೋಶಗಳೆಲ್ಲವೂ (working cells) ನಶಿಸಿ ಹೋಗಿದ್ದವು. (shrinkage of cells) ವರ್ಣ ತಂತುಗಳೆಲ್ಲ ಚೂರು ಚೂರಾಗಿ ಅವು ನಿ ಷ್ಕ್ರಿಯೆ ಗೊಂಡಿದ್ದವು. ಬಿಳಿಯ ರಕ್ತ ಕಣಗಳು ಅವನ ಕೆಂಪು ರಕ್ತಕಣಗಳನ್ನು ಆಕ್ರಮಿಸಿದ್ದವು. ಒಟ್ಟಾರೆ ಅವನ ದೇಹ ರಚನೆ ಶೇ.70% ರಷ್ಟು ಭಾಗವು ನಶಿಸಿ ಹೋಗಿತ್ತು. ತಿಂದ ಆಹಾರ ಜೀರ್ಣವಾಗುತ್ತಿರಲಿಲ್ಲ. ಗಟ್ಟಿ ಆಹಾರವನ್ನು ಸೇವಿಸಲಾಗುತ್ತಿರಲಿಲ್ಲ. ಆಫೀಸಿಗೆ ಬರುವಾಗ ಮನೆಯಿಂದಲೇ ಗಂಜಿಯನ್ನು ತರುತ್ತಿದ್ದ.
ಒಂದಷ್ಟು ಗಂಜಿಯನ್ನು ಸೇವಿಸಲು ಅವನು ಪಡುತ್ತಿದ್ದ ಕಷ್ಟ ಹೇಳತೀರದು. ಹೇಗೋ ದಿನಗಳು ಕಳೆದವು. ವಿಶಾಲಮೂರ್ತಿ ಕ್ಯಾನ್ಸರ್ ವರ್ತುಲದಿಂದ ಪಾರಾದ. ಸಾವನ್ನು ಜಯಿಸಿ ಬಂದ ಧೀರ ಎಂದು ಹೇಳಬಹುದು. ನಂತರ ಸಹೋದ್ಯೋಗಗಳ ಜೊತೆ ಹೋಟೆಲ್‌ನಲ್ಲಿ ಕುಳಿತು ಕಾಫಿ ಕುಡಿಯುವಷ್ಟು ಮಟ್ಟಿಗೆ ಅವನ ಆರೋಗ್ಯ ಸುಧಾರಿಸಿತು. ಅದಕ್ಕೆ ಅವನು ಭಾರಿ ಬೆಲೆಯನ್ನೇ ತೆರಬೇಕಾಗಿ ಬಂದಿತ್ತು. ಒಂದು ಅಂದಾಜಿನ ಪ್ರಕಾರ ಅವನ ಚಿಕಿತ್ಸೆಗಾಗಿ ಖರ್ಚಾದ ಹಣ ಬರೋಬರಿ 20 ಲಕ್ಷ !
ಕ್ರಮೇಣ ವಿಶಾಲಮೂರ್ತಿ ಹಂತ ಹಂತವಾಗಿ ಚೇತರಿಸಿಕೊಂಡ. ಪ್ರತಿ ದಿನ ಮನೆಯಿಂದಲೇ ಊಟ ತರುತ್ತಿದ್ದ. ಆರೋಗ್ಯದ ದೃಷ್ಟಿಯಿಂದ ಅವನು ಹೊರಗಡೆ ಹೋಟೆಲ್ ಊಟವನ್ನು ದೂರ ಮಾಡಿದ್ದ. ಸಾಲದ ಹೊರೆ ಹೆಚ್ಚಾಗಿದ್ದರಿಂದ ಮಗಳ ವಿವಾಹವನ್ನು ಮುಂದೂಡಿದ್ದ. ಮಗಳೂ ವಿವಾಹದ ಆಸೆ ಬಿಟ್ಟು ತನಗೊದಗಿ ಬಂದ ಜಾವಾಬ್ದಾರಿಯನ್ನು ಅರಿತು ನೌಕರಿ ಹಿಡಿದಿದ್ದಳು. ಇಬ್ಬರ ದುಡಿಮೆಯಿಂದ ಸಂಸಾರದ ರಥವು ಸಾಗುತ್ತಿತ್ತಲ್ಲದೆ, ಸಾಲದ ಭಾರವೂ ಕ್ರಮೇಣ ಇಳಿಯ ತೊಡಗಿತ್ತು.
ನಿಮ್ಮೊಂದಿಗೆ ನಾನು ಸಾವಿನ ವಿಷಯದ ಬಗ್ಗೆ ಪ್ರಸ್ತಾಪಿಸಿ, ಬೇರೇನನ್ನೋ ಹೇಳ ಹೊರಟಿದ್ದೆ. ಯಾವುದೋ ರೋಗದ ಬಗ್ಗೆ ಮತ್ತು ಗೆಳೆಯನ ಬಗ್ಗೆ ಹೇಳತೊಡಗಿದ್ದೆ. ಈಗ ನೇರ ವಿಷಯಕ್ಕೆ ಬರೋಣ. ಸಾವು ಎನ್ನುವುದು ಹೇಗೆ ಯಾವಾಗ ಯಾವ ರೂಪದಲ್ಲಿ ಬರುವುದೋ ಯಾರಿಗೂ ಗೊತ್ತಿಲ್ಲ. ಇಂತ ದಿನ ಸಾವು ಬರುತ್ತದೆ ಎಂದು ನಿಖರವಾಗಿ ತಿಳಿದಿದ್ದರೆ, ಅಂತಹವರು ಮುನ್ನೆಚ್ಚರಿಕೆ ವಹಿಸಿ ಸಾವನ್ನು ತಡೆಗಟ್ಟುತ್ತಿದ್ದರೇನೋ? ಅಂತಹ ಮುಂಜಾಗ್ರತೆಯ ಕ್ರಮದಿಂದ ಪ್ರಪಂಚವೇ ಸಾವಿನ ಸಂಕುಲದಿಂದ ಮುಕ್ತವಾಗುತ್ತಿತ್ತೇನೋ? ಬಡವ, ಶ್ರೀಮಂತನಾಗಲಿ, ಶ್ರೀಸಾಮಾನ್ಯನಾಗಲಿ, ಸಾವು ಎಲ್ಲರಿಗೂ ಸರ್ವೆ ಸಾಮಾನ್ಯ, ಅದು ಕಟ್ಟಿಟ್ಟ ಬುತ್ತಿ. ಸಾವಿಗೆ ಬಗೆ ಬಗೆಯ ಕಾರಣಗಳಿವೆ. ಕೆಲವರು ಆತ್ಮಹತ್ಯೆ ಮಾಡಿಕೊಂಡು ಸತ್ತರೆ, ಕೆಲವರು ಕಾಯಿಲೆಯಿಂದ ನರಳಿ ನರಳಿ ಸಾಯುತ್ತಾರೆ. ಕೆಲವರು ವಯೋಸಹಜ ಕಾರಣಗಳಿಂದ ಸತ್ತರೆ, ಕೆಲವರು ಅಪಘಾತ, ಹೃದಯಾಘಾತಗಳಿಂದ ಸಾಯುತ್ತಾರೆ. ಅಂತು ಸಾವು ಯಾವುದಾದರೊಂದು ರೂಪದಲ್ಲಿ ಬಂದು ಮನುಷ್ಯನನ್ನು ಎಳೆದೊಯ್ಯುತ್ತದೆ. ಕಾಯಿಲೆಯಿಂದ ಅಥವಾ ವಯಸ್ಸಾದ ಮೇಲೆ ಬರುವ ಸಾವುಗಳೆಲ್ಲ ಸಹಜ. ಅವುಗಳನ್ನು ಹೊರತುಪಡಿಸಿ ಉಳಿದೆಲ್ಲ ಸಾವುಗಳು ಅಸಹಜ ಮತ್ತು ಆಕಸ್ಮಿಕವೇ.
ಎಂದಿನಂತೆ ವಿಶಾಲಮೂರ್ತಿ ಅಂದು ಕಛೇರಿಗೆ ಹೊರಟಿದ್ದ. ಅವನು ಪ್ರತಿ ದಿನ ಸುಮಾರು 30 ಕಿ.ಮೀ.ನಷ್ಟು ದೂರವನ್ನು ಬಸ್‌ನಲ್ಲಿ ಓಡಾಡಬೇಕಿತ್ತು. ಅಷ್ಟು ದೂರವನ್ನು ಕ್ರಮಿಸಲು ಅವನು ಎರಡು ಬಸ್‌ಗಳನ್ನು ಬದಲಾ ಯಿಸುತ್ತಿದ್ದ. ಅಂದೊಂದು ದಿನ ಅವನು ಇಳಿಯ ಬೇಕಾಗಿದ್ದ ಸ್ಟಾಪ್ ಬಂತು. ಪ್ರತಿದಿನ ಅವನು ಒಂದೇ ಬಸ್‌ನಲ್ಲಿ ಓಡಾಡುತ್ತಿದ್ದರಿಂದ ಕಂಡಕ್ಟರ್ ಹಾಗೂ ಡ್ರೈವರ್ ಅವನಿಗೆ ಪರಿಚಿತರು. ಆದ್ದರಿಂದ ಅವನು ಬೇರೊಂದು ಬಸ್ ಹತ್ತಲು ಅನುಕೂಲವಾಗುವಂತ ಸ್ಥಳದಲ್ಲಿ ಡ್ರೈವರ್ಲ ಅವನಿಗಾಗಿ ಬಸ್ ನಿಲ್ಲಿಸುತ್ತಿದ್ದ ಅವನು ಅಲ್ಲಿ ಇಳಿದು, ಸ್ವಲ್ಪ ಮುಂದೆ ಹೋಗಿ ಬೇರೆ ಬಸ್ಸನ್ನು ಹತ್ತುತ್ತಿದ್ದ. ಆದರೆ ಅಂದು ಅವನು ಹತ್ತಿದ ಬಸ್‌ನಲ್ಲಿ ಮಾಮೂಲಿ ಡ್ರೈವರ್ – ಕಂಡಕ್ಟರ್ ಇರಲಿಲ್ಲ. ಅವನ ಬಸ್ ಒಂದು ಕಡೆ ಎಡ ತಿರುವು ತೆಗೆದುಕೊಳ್ಳುವಾಗ ಡ್ರೈವರ್ ವಾಹನದ ವೇಗವನ್ನು ತಗ್ಗಿಸಿದ. ವೇಗ ತಗ್ಗಿದ್ದರಿಂದ ಮೂರ್ತಿ ಬಸ್ ಡ್ರೈವರ್ ಗೆ ಸೂಚನೆಕೊಟ್ಟು ಮುಂಭಾಗದ ಬಾಗಿಲಿನಿಂದ ಇಳಿದ. ಆದರೆ ಕೆಳಕ್ಕೆ ಕಾಲಿಡುವಾಗ ಹೆಜ್ಜೆಯ ಸಮತೋಲನ ತಪ್ಪಿ ಕೆಳಕ್ಕೆ ಬಿದ್ದು ಬಿಟ್ಟ. ಅವನು ತನ್ನ ಭುಜಕ್ಕೆ ನೇತುಹಾಕಿದ್ದ ಊಟದ ಬ್ಯಾಗ್ ಹಾರಿ ಪುಟ್‌ಪಾತ್ ಮೇಲೆ ಬಿತ್ತು. ಬಸ್ ಎಡ ತಿರುವು ಪಡೆದುಕೊಳ್ಳುವಷ್ಟರಲ್ಲಿ ಅದರ ಹಿಂದಿನ ಚಕ್ರವು ಕ್ಷಣಮಾತ್ರದಲ್ಲಿ ಅವನ ದೇಹದ ಮೇಲೆ ಹರಿದು ಬಿಟ್ಟಿತು. ಮರು ನಿಮಿಷವೇ ಮೂರ್ತಿ ಚಪ್ಪಟೆಯಾಗಿಬಿಟ್ಟ. ಅವನ ದೇಹವು ಮಾಂಸದ ಮುದ್ದೆಯಾಗಿ ನೆಲಕ್ಕೆ ಅಂಟಿಕೊಂಡಿತು. ಚಕ್ರದಡಿ ಸಿಲುಕಿ ಅಪ್ಪಚ್ಚಿಯಾಗಿದ್ದ ಅವನ ದೇಹದಿಂದ ಚಿಮ್ಮಿದ ರಕ್ತವು ರಸ್ತೆಯಲ್ಲಿ ಹರಿದಿತ್ತು. ಮೂರ್ತಿಯ ಪ್ರಾಣ ಪಕ್ಷಿ ಕ್ಷಣಮಾತ್ರದಲ್ಲಿ ಹಾರಿಹೋಗಿ ಅವನ ಚಪ್ಪಟೆಯಾದ ದೇಹವು ರಸ್ತೆಯ ಮೇಲೆ ಶವವಾಗಿ ಪವಡಿಸಿತು.
ಒಂಭತ್ತು ತಿಂಗಳು ಭಯಂಕರ ರೋಗ ಕ್ಯಾನ್ಸರ್‌ನೊಂದಿಗೆ ಸೆಣಸಾಡಿ, ಸಾವು-ಬದುಕಿನೊಂದಿಗೆ ಹೋರಾಡಿ ಕೊನೆಗೂ ಮೂರ್ತಿ ಸಾವನ್ನು ಹೇಗೋ ಜಯಿಸಿದ್ದ ! ಆದರೆ ಅದಕ್ಕೆ ಅವನು ತೆತ್ತ ಬೆಲೆ 20 ಲಕ್ಷ ! ಆದರೆ ಸಾವನ್ನು ಗೆದ್ದು ಬಂದು ಪುನಃ ಸಾವಿಗೇ ಶರಣಾಗಬೇಕಾದುದು ಅವನ ದುರ್ವಿದಿಯೋ, ದುರ್ದೈವವೋ? ಅಂತೂ ಸಾವಿನ ಭೂತ ಅವನ ಹೆಗಲೇರಿ ಕುಳಿತಿತ್ತು !
-ಎಲ್.ಚಿನ್ನಪ್ಪ, ಬೆಂಗಳೂರು.
