
ಶ್ರೀ ಗುರುವೇ
ಗುರುವೇ ನಿಮಗೆ ನಮನ
ನಿಮ್ಮಿಂದಲೇ ಪಡೆದೆವು ಜ್ಞಾನ
ಜ್ಞಾನದ ದೀಪವನು ಹಚ್ಚಿದಿರಿ
ಅಂಧಕಾರವ ದೂರ ಸರಿಸಿದಿರಿ.
ನಿಮ್ಮ ಮಾತುಗಳು ಕೇಳಲು
ನಮ್ಮಿಂದ ತಪ್ಪುಗಳಾಗದು
ಕೀಟಲೆ, ಕಿತಾಪತಿಗಳೆಂದಿಗೂ
ನಮ್ಮಿಂದ ಎಂದೆಂದಿಗಾಗದು.
ತಿಳಿದೋ ತಿಳಿಯದೆಯೋ
ನೋವುಂಟು ಮಾಡಿದ್ದರೆ ನಾವು
ಕೈಮುಗಿದು, ಶಿರಬಾಗಿ ನಿಮಗೆ
ಕ್ಷಮೆಯ ಕೇಳುವೆವು ನಾವು.
ನೀವು ನೀಡಿದ ಶಿಕ್ಷಣವು
ನಮ್ಮೆಲ್ಲರ ಬದುಕಿಗೆ ಉಸಿರು
ಪ್ರತಿಕ್ಷಣವೂ ಮರೆಯದೇ
ಸ್ಮರಿಸುವೆವು ನಿಮ್ಮ ಹೆಸರು.
ಅಭಿನಂದನಾ ಕೆ ಎಂ
ಗೆಲ್ಲುವಿರಿ
ನಿಮ್ಮ ದಿನಗಳು
ಚಲಿಸುತ್ತಿವೆ ಬೇಗ
ಅದಕ್ಕಾಗಿ ಸತತವಿರಲಿ
ನಿಮ್ಮ ಶ್ರಮದ ವೇಗ.
ಜೀವನದಲ್ಲಿ ಒಂದೇ ಸಾರಿ
ಬಂದೇ ಬರುತ್ತದೆ ಯೋಗ
ಆಗ ನಿಮಗೆ ಸಮಾಜದಲ್ಲಿ
ಸಿಗುವುದು ಉನ್ನತ ಜಾಗ.
ನಿಮ್ಮ ಗುರಿಯೆಂದಿಗೂ
ದೊಡ್ಡ ದೊಡ್ಡದಾಗಿರಲಿ
ಗುರಿ ತಲುಪುವ ದಾರಿಯಲ್ಲಿ
ತೊಂದರೆಗಳೆಷ್ಟೇ ಬರಲಿ.
ತೊಂದರೆಗಳೆದುರಿಸಿ ನಿಲ್ಲುವ
ಮನೋಸ್ಥೈರ್ಯದ ಶಕ್ತಿ ನಿಮಗಿರಲಿ
ನಿಮ್ಮ ಮನೋಸ್ಥೈರ್ಯ ಶಕ್ತಿಯಿಂದ
ವೀರಾಧಿವೀರರಾಗಿ ಜಗವ ಗೆಲ್ಲುವಿರಿ.
ಸಮೃದ್ಧಿ ಎಂ ಪ್ರಭುಗೌಡರ್
ನಮ್ಮ ಗುರುಗಳು
ಏನೂ ಕೂಡ ತಿಳಿಯದ
ನಾವು ಪುಟ್ಟ ಕರುಗಳು
ಎಲ್ಲವೂ ಕೂಡ ತಿಳಿದಿರುವ
ನೀವೇ ನಮ್ಮ ಗುರುಗಳು.
ನಮ್ಮೆಲ್ಲರನ್ನು ತಿದ್ದಿ ತೀಡಿ
ಸರಿದಾರಿಯಲ್ಲಿ ನಡೆಸುವಿರಿ
ಒಳ್ಳೆಯ ಬುದ್ಧಿ ನೀಡಿ
ವಿದ್ಯಾವಂತರಾಗಿ ಮಾಡುವಿರಿ.
ಗುರುಗಳ ಬಗ್ಗೆ ಎಲ್ಲರಿಗಿರಲಿ ಶ್ರದ್ಧೆ
ಗಮನವಿಟ್ಟು ಕಲಿಯಬೇಕು ವಿದ್ಯೆ
ಗುರುಗಳೇ ನಮಗೆ ಆದರ್ಶ ವ್ಯಕ್ತಿ
ಗುರುಗಳಿಂದಲೇ ಜೀವನ ಮುಕ್ತಿ.
ನಮ್ಮ ಜೊತೆಗಿರಲು ಸಾಧಿಸುವ ಛಲ
ಗುರುಗಳೇ ನೀಡುವರು ನಮಗೆ ಬೆಂಬಲ
ಗುರುಗಳು ತೋರಿದ ದಾರಿಯಲ್ಲಿ ಸಾಗೋಣ
ತಾಯ್ತಂದೆ ಗುರುಗಳಿಗೆ ಕೀರ್ತಿಯ ತರೋಣ.
ಲಿಖಿತ ಎಸ್
ನಮ್ಮ ಗುರುಗಳಿವರು
ಗುರುಗಳಿವರು ನಮ್ಮ ಗುರುಗಳಿವರು
ನಮ್ಮ ಬಾಳ ಬೆಳಗುವ ದೀಪಗಳಿವರು.
ಕಪ್ಪು ಬಿಳುಪು ಬಣ್ಣಗಳ ಬಳಸಿ
ನಮ್ಮ ಜೀವನವ ರಂಗಾಗಿಸುವ
ಬಣ್ಣಗಾರರಿವರು ನಮ್ಮ ಗುರುಗಳಿವರು.
ಬೆತ್ತವನ ಹಿಡಿದು ತಪ್ಪನು ತಿದ್ದುತ
ಸರಿ ದಾರಿಯಲ್ಲಿ ನಮ್ಮನು ನಡೆಸುವ
ಕಾವಲುಗಾರರಿವರು ನಮ್ಮ ಗುರುಗಳಿವರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳೆನ್ನುತ
ದೇಶ ಸೇವೆಗೆ ಮುಕ್ಕಳನು ಅಣಿಗೊಳಿಸುವ
ಮಹಾ ಸೇವಕರಿವರು ನಮ್ಮ ಗುರುಗಳಿವರು.
ತಾಯಿಯಂತೆ ವಾತ್ಸಲ್ಯ ಹರಿಸುವರು
ತಂದೆಯಂತೆ ಸ್ಥೈರ್ಯದಿ ದೃಢವಾಗಿಸುವರು
ಸ್ನೇಹಿತರಂತೆ ಸದಾ ಬೆನ್ನು ತಟ್ಟುವರು
ಬಹುರೂಪಿಗಳಿವರು ನಮ್ಮ ಗುರುಗಳಿವರು.
ಮೇಣದಂತೆ ಕರಗುತ
ಬೆಳಕು ನೀಡುವ ನಿಸ್ವಾರ್ಥಿಗಳಿವರು
ಕಲ್ಲುಗಳ ಕಟೆದು ಶಿಲ್ಪಿಗಳಾಗಿಸುವ ಶಿಲ್ಪಗಾರರಿವರು
ಅನುದಿನವು ಪೂಜಿಸಲ್ಪಡುವ ಪೂಜ್ಯರಿವರು
ನಮ್ಮ ಗುರುಗಳಿವರು, ನಮ್ಮ ಗುರುಗಳಿವರು.
ಜಾಹ್ನವಿ ಎಂ ಬಿ
ಈ ನಾಲ್ಕು ಜನ 8ನೇ ತರಗತಿ ವಿದ್ಯಾರ್ಥಿಗಳು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ