ಮಕ್ಕಳ ಹಕ್ಕುಗಳ ಗ್ರಂಥಾಲಯ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪುಸ್ತಕಗಳ ಪಾತ್ರ: ವಾಣಿ ಚೈತನ್ಯ

ಗ್ರಂಥಾಲಯ ಎಂದರೇನೆಂದು ಕೇಳಿದ್ದೇವೆ, ಮಕ್ಕಳ ಹಕ್ಕುಗಳ ಗ್ರಂಥಾಲಯವೆಂದರೆ ಏನು ಎಂದು ಎಲ್ಲರೂ ಯೋಚಿಸಬಹುದು. ವಿಶ್ವಸಂಸ್ಥೆ ರಚಿಸಿ, ಭಾರತವು ಸಹಿ ಮಾಡಿದ ಮಕ್ಕಳ ಹಕ್ಕುಗಳು ಇರುವುದೇ ಎಲ್ಲರಿಗೂ ಗೊತ್ತಿಲ್ಲದೇ ಇರುವಾಗ, ಮಕ್ಕಳ ಹಕ್ಕುಗಳ ಗ್ರಂಥಾಲಯ ಬಗ್ಗೆ ಸಾರ್ವತ್ರಿಕ ತಿಳುವಳಿಕೆ ಇನ್ನೊಂದು ಹೊಸ ಸವಾಲು.

ಸಾಮಾನ್ಯವಾಗಿ ಗ್ರಂಥಾಲಯವೆಂದರೆ, ಪುಸ್ತಕಗಳನ್ನು ಸಂಗ್ರಹಿಸಿ ಇಡುವ ಮನೆ. ಪುರಾತನ ಕಾಲದಿಂದ, ಮಾನವರು ಅನುಭವಿಸಿ ಕಲಿತ, ವಿಜ್ಞಾನಿಗಳು ಪ್ರಯೋಗಗಳಿಂದ ಕಂಡುಕೊಂಡ ಜ್ಞಾನ ಭಂಡಾರಗಳ, ಮಾಹಿತಿಗಳ ಮೂಲ. ಶಾಲೆಗೆ ದಾಖಲಾಗಿ ಪಠ್ಯ ಪುಸ್ತಕಗಳನ್ನು ಓದುವುದೇ ದುಸ್ತರವಾಗಿದ್ದ ಕಾಲದಲ್ಲಿ ಭಾರತದ ವಿಷ್ಣು ಶರ್ಮಾ ಮಕ್ಕಳಿಗಾಗಿ ಪಂಚತಂತ್ರದ ಕಥೆಗಳನ್ನು ರಚಿಸಿದನು. ಮಕ್ಕಳಿಗೆ ಕಥೆ ಎಂದರೆ ಹೇಳುವುದು ಕೇಳುವುದು ಮಾತ್ರ ಆಗಿತ್ತೇ ಹೊರತು ಓದುವುದಾಗಿರಲಿಲ್ಲ.

ಪೋಷಕರು ದುಡಿಯುವ, ಅಜ್ಜ ಅಜ್ಜಿ ಇಲ್ಲದ ವಿಭಕ್ತ ಕುಟುಂಬದಲ್ಲಿ ಮಕ್ಕಳ ಪುಸ್ತಕಗಳು ಎಂದು ವಿಂಗಡಿಸಿ, ಮಕ್ಕಳಿಗೆ ಕಡ್ಡಾಯ ಶಿಕ್ಷಣ ವ್ಯವಸ್ಥೆ ಪ್ರಾರಂಭಿಸಿ, ಮಕ್ಕಳು ಓದಲು ಬರೆಯಲು ಕಲಿತು, ಮಕ್ಕಳಿಗೆ ಮನೋರಂಜನೆಯ ಕಥೆ ಇರುವ ಕಾಮಿಕ್ಸ್ ಪುಸ್ತಕಗಳು ಸಿಗುವುದು ಪ್ರಾರಂಭವಾಗಿದ್ದು ಸ್ವಾತಂತ್ರ್ಯ ಸಿಕ್ಕ ನಂತರವೇ ಇರಬೇಕು.

ವಿವಿಧ ಕಥೆಯ ಪುಸ್ತಕಗಳು ಮಕ್ಕಳಲ್ಲಿ ಏಕಾಗ್ರತೆ, ಕಲ್ಪನೆಯ, ವಿಶ್ಲೇಷಣೆ, ಕಥೆಯ ಸಾರ ಅರ್ಥೈಸಿಕೊಂಡು ಅದನ್ನು ಇನ್ನೊಬ್ಬರಿಗೆ ಹೇಳುವ ಸಾಮರ್ಥ್ಯ ವೃದ್ಧಿಸುತ್ತದೆ. ಇದು ಶಿಕ್ಷಕರು ಹೇಳಿದ್ದನ್ನು ಕೇಳಿ ಪರೀಕ್ಷೆಯಲ್ಲಿ ಉರು ಹೊಡೆದು ಕಕ್ಕುವ ಪ್ರಕ್ರಿಯೆಗಿಂತ ತುಂಬಾ ವಿಭಿನ್ನ ಕೌಶಲ್ಯಗಳನ್ನು ಕಥೆ ಪುಸ್ತಕ ಓದುವುದರಿಂದ ಅಭಿವೃದ್ಧಿ ಗೊಳ್ಳುತ್ತದೆ. ಮಕ್ಕಳ ಪುಸ್ತಕಗಳು ಕಥೆಗಳು, ಎಲ್ಲಾ ನಾಗರಿಕತೆಯಲ್ಲಿ ಕಂಡುಬಂದರೂ, ಅವು ಮಕ್ಕಳ ಹಕ್ಕುಗಳ ಜಾರಿಗೆಗೆ ಸ್ಪೂರ್ತಿ ನೀಡುವ ಗ್ರಂಥಾಲಯ ನಿರ್ಮಾಣಕ್ಕೆ ನಾಂದಿಯಾಗಿಲ್ಲ. ಮಕ್ಕಳಿಗೆ ಮನೆಯಲ್ಲೂ ಶಾಲೆಯಲ್ಲಿಯೂ ಮಕ್ಕಳಿಗಾಗಿಯೇ ಇರುವ ಗ್ರಂಥಾಲಯ ಇರುವ ಸಾಧ್ಯತೆಗಳು ವಿರಳವಾಗಿವೆ.

ಗ್ರಂಥಾಲಯವೆಂದರೆ, ಕೇವಲ ಕೆಲವೇ ವರ್ಗಕ್ಕೆ, ಪುಸ್ತಕದ ಹುಳುಗಳಿಗೆ, ಪಂಡಿತರು, ವಿದ್ವಾಂಸರು, ಕೂಚು ಭಟ್ಟರಿಗೆ ಎನ್ನುವ ಮಾತು ಇತ್ತು. ಆದರೆ, ಸಾರ್ವತ್ರಿಕ ಶಿಕ್ಷಣದ ಅಡಿಯಲ್ಲಿ ಎಲ್ಲರಿಗೂ ಶಿಕ್ಷಣ ಉಚಿತವಾಗಿ ಸರ್ಕಾರಿ ಶಾಲೆಯಲ್ಲಿ ನೀಡುವ ನಿರ್ಧಾರವಾದಾಗ, ಸಾರ್ವಜನಿಕ ಗ್ರಂಥಾಲಯಗಳ ಅಗತ್ಯವೂ ಮೂಡಿತ್ತು. ಅಂತಹ ಒಂದು ಗ್ರಂಥಾಲಯದ ಮೂಲೆಯಲ್ಲಿ ಒಂದು ಸಣ್ಣ ಚೌಕಟ್ಟನ್ನು ಮಕ್ಕಳ ಪುಸ್ತಕ ಸಂಗ್ರಹವೆಂದು ಮೀಸಲಿಡಲಾಗುತ್ತಿತ್ತು.

ನಮ್ಮ ಬಾಲ್ಯದಲ್ಲಿ, ಮಕ್ಕಳಿಗಾಗಿ ಇದ್ದ ಪುಸ್ತಕಗಳೇ ವಿರಳ. ನಮಗೆಲ್ಲ ಚಂದಮಾಮ, ಬಾಲಮಂಗಳ ಮುಂತಾದ ಕತೆಗಳ ಕಾಮಿಕ್ಸ್ ನೋಡಲು ಓದಲು ಎಷ್ಟು ಖುಷಿಯಾಗುತ್ತಿತ್ತು. ದೊಡ್ಡವರ ಮ್ಯಾಗಜಿನ್ನಲ್ಲಿ ಒಂದು ಪುಟ ಮಕ್ಕಳಿಗಾಗಿ ಇದ್ದರೆ ಅದನ್ನು ನೋಡಲು ದೊಡ್ಡವರ ಅನುಮತಿ, ನಿಯಮಿತ ಸಮಯದ ತಾಕೀತು, ಬೇರೆ ಏನನ್ನೂ ಓದದೇ, ಕೇವಲ ಮಕ್ಕಳ ಪುಟ ನೋಡಲು ಹೇಳಲಾಗುತ್ತಿತ್ತು.

ಮಕ್ಕಳ ಪುಸ್ತಕ ನೋಡಲೂ ಕೂಡ, ರಜೆ ದಿನಗಳು ಮಾತ್ರ ಸಾಧ್ಯವಿತ್ತು. ಆಗಿನ ಕಾಲಕ್ಕೆ ಕಥೆ ಪುಸ್ತಕ ಓದುವುದರಿಂದ ಮಕ್ಕಳು ಹಾಳಾಗುತ್ತಾರೆ, ಅವರ ಉತ್ತಮ ಬೆಳವಣಿಗೆಗೆ ಕಥೆ ಪುಸ್ತಕಗಳು ಅಡ್ಡಿ ಬರುತ್ತವೆ, ದೊಡ್ಡವರ ವಿಷಯಗಳನ್ನೊಳಗೊಂಡ ಕಥೆಗಳನ್ನು ಮಕ್ಕಳು ಓದುವುದು ಸರಿಯಲ್ಲ ಎನ್ನುವ ಮನೋಭಾವವಿತ್ತು. ಎಲ್ಲೋ history repeats ಅನ್ನುವ ಹಾಗೆ ಈಗಿನ ಮಕ್ಕಳು ಟಿವಿ, ಮೊಬೈಲ್ ದಾಸರಾಗಿದ್ದಾರೆ. ಅದರಲ್ಲೂ reels ಗಳಲ್ಲಿ ದೊಡ್ಡವರ ವಿಷಯಗಳನ್ನೊಳಗೊಂಡ ಮಾಹಿತಿ ಪುಂಕಾನುಪುಂಕವಾಗಿ ಬಿತ್ತರವಾಗುತ್ತಿದೆ. ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತಿದೆ ಮತ್ತು ಇದು ಅವರ ಮನಸ್ಸು ದೇಹ ಬೆಳವಣಿಗೆ ಎರಡನ್ನೂ ಕುಂಠಿತಗೊಳಿಸುತ್ತದೆ ಎಂದು ಚರ್ಚೆಗಳು ನಡೆಯುತ್ತಿವೆ.

ಒಂದು ಕಾಲಕ್ಕೆ ಮಕ್ಕಳನ್ನು ದೂರವಿಟ್ಟಿದ್ದ ಗ್ರಂಥಾಲಯಗಳು ಈಗ ಮಕ್ಕಳನ್ನು ಕೈಬೀಸಿ ಕರೆಯಲು, ಅವರನ್ನು ಪುಸ್ತಕ ಪ್ರೇಮಿಗಳನ್ನಾಗಿ ಮಾಡುವ ಎಲ್ಲ ಹರ ಸಾಹಸವನ್ನು ಮಾಡುತ್ತಿವೆ. ಮಕ್ಕಳ ಪುಸ್ತಕಗಳನ್ನೇ ಮುದ್ರಿಸುವ ಸಂಸ್ಥೆಗಳು, ಅದರ ಪ್ರಚಾರ ಮಾಡಲು ದುಡ್ಡು ಹರಿಸುತ್ತಿವೆ. ತಾವು ಕಾಣದ ರಂಗುರಂಗಿನ ಪುಸ್ತಕಗಳನ್ನು ಕೊಳ್ಳಲು ಪೋಷಕರೂ ಮುಂದಾಗಿದ್ದಾರೆ. ಆದರೆ, ಕಾಲ ಅದೇ ಸಮಯದಲ್ಲಿ ಉಳಿದಿಲ್ಲ. ಈಗಿನ ಮಕ್ಕಳಿಗೆ ಬೇರೊಂದು ಮಾಯೆ ಮುಸುಕಿದೆ.

ತಂತ್ರಜ್ಞಾನದ ಮಾಹಿತಿಯ ದುಷ್ಪರಿಣಾಮಗಳು:

ಪ್ರಸ್ತುತ ಜಗತ್ತಿನಲ್ಲಿ ಗೂಗಲ್, ರೀಲ್ಸ್ ಮತ್ತು ರೆಡಿಮೇಡ್ ಯೂಟ್ಯೂಬ್ ಮಾಹಿತಿಯಿಂದ ನಾವೆಲ್ಲಾ ತಿಳಿದುಕೊಂಡಿದ್ದು ಮತ್ತೆ ನೆನಪಿಗೆ ಬಂದು ಮರುಜೀವ ಪಡೆಯುತ್ತಿರುವುದು ಉತ್ತಮ ಬದಲಾವಣೆ ಆದರೆ, ಮಕ್ಕಳಿಗೆ ಯಾವುದೇ ಹಿನ್ನೆಲೆ, ಪೂರ್ವ ಅಧ್ಯಯನ ಇಲ್ಲದ ಮಾಹಿತಿಗಳು, ಸಂಪೂರ್ಣವಾಗಿ ಮಾಹಿತಿ ಜ್ಞಾನದ ತಿಳುವಳಿಕೆ ನೀಡಲಾರವು. ಹಲವು ವರ್ಷದ ಅಧ್ಯಯನದ ಅನುಭವ ಪಡೆದ ಶಿಕ್ಷಕರು ಕೂಡ ಮಕ್ಕಳನ್ನು ಶಿಕ್ಷಣ ಮತ್ತು ಓದಿನತ್ತ ಸೆಳೆಯುವಲ್ಲಿ ಬಹುತೇಕ ವಿಫಲರಾಗಿದ್ದಾರೆ. ಅವರಿಗೆ ಚೈಲ್ಡ್ friendly approach, ಹೊಸ ತಂತ್ರಜ್ಞಾನದ ಮಾಹಿತಿ ಅಳವಡಿಸಿ ಪಾಠ ಮಾಡುವುದು ದೊಡ್ಡ ಸವಾಲು. ಅದೇ ಸಮಯದಲ್ಲಿ, ಮಕ್ಕಳು, ಕರೋನ ನಂತರ ಮೊಬೈಲ್ ನಲ್ಲಿ ಪಾಠದ ನೆಪದಲ್ಲಿ ಬೇಕು ಬೇಡಿಲ್ಲದ ಮಾಹಿತಿಯಿಂದ ಭ್ರಮ ಚಿತ್ತರಾಗಿದ್ದಾರೆ. ಅದೇ ಎಲ್ಲ ಮಾಹಿತಿಗೆ ಮತ್ತು ಮನೋರಂಜನೆಗೆ ಮೂಲವೆಂಬಂತೆ ಅದಕ್ಕೆ ಅಂಟಿಕೊಂಡಿದ್ದಾರೆ. ಅಂತರ್ಜಾಲ ಮಾಹಿತಿ ಬ್ರಹ್ಮಾಂಡವನ್ನೇ ಒಳಗೊಂಡಿರುವುದು ನಿಜವಾದರೂ, ಅದರ ಪ್ರಸ್ತುತತೆ ಎಳೆ ಮನಸ್ಸುಗಳಿಗೆ ಕ್ಲಿಷ್ಟ ಮತ್ತು ಗೊಂದಲ ಉಂಟು ಮಾಡುವುದು. ಅದೇ ಕ್ರಮಬದ್ಧ ವಿಧಾನವನ್ನು ಅಳವಡಿಸಿ ಓದುವುದು, ಯೋಜಿತ ಮಕ್ಕಳ ಪಠ್ಯಗಳು, ಪುಸ್ತಕಗಳು, ಆಯಾ ವಯಸ್ಸಿನ ಆಧಾರಿತ ಮಾಹಿತಿ ನೀಡುವುದು ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೂರಕವಾಗಿವೆ.

ಈ ರೀತಿ ಅನುಭವಿಸಿ ಬರೆದ, ಸಂಪಾದಿತ ಕೃತಿಗಳಿಗಿಂತ ಅಂತರ್ಜಾಲ ಜ್ಞಾನ ಅಗಾಧವಾಗಿ ಆದರೂ ಅದರ ಮೂಲ, ಅದರ ಸತ್ಯತೆ, ಅದರ ಪರಿಣಾಮ ತಿಳಿಯುವುದು ಸೈಬರ್ ಪೊಲೀಸ್ ಗೆ ಸಾಧ್ಯ. ಸ್ವಲ್ಪ ಹೊಸದೇನಾದರೂ ತಿಳಿದರೆ ತಕ್ಷಣ ಅಂತರ್ಜಾಲದಲ್ಲಿ ಹರಿಬಿಡುವ ಇಂದಿನ ಜನಾಂಗ ಅಲ್ಪ ಯಶಸ್ಸು, ಅಲ್ಪ ಸಂತೋಷ, ಕ್ಷಣ ಚಿತ್ತ, ಕ್ಷಣ ಪಿತ್ತದ ಗಾದೆಯಂತೆ ಬದುಕುತ್ತಿದ್ದಾರೆ.

ತಂತ್ರ ಜ್ಞಾನ ಇಂದಿನ ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತಿರುವ ಈ ಸಮಯದಲ್ಲಿ, ನಮಗೆ ಸಿಗದ ಪುಸ್ತಕಗಳ ಕೊಂಡು ನಾವು ಮಕ್ಕಳಿಗೆ ಮನೋರಂಜನೆಯ bed time Stories, ನೀತಿ ಕಥೆ, ರಾಮಾಯಣ ಮಹಾಭಾರತ, ದೇಶ ವಿದೇಶದ ಜ್ಞಾನವನ್ನೆಲ್ಲ ಕೊಡಲು ಬಯಸುತ್ತೇವೆ. ಪುಸ್ತಕದ ಮಹತ್ವ ನಮಗೆ ಅರಿವಾಗಿದೆ. ಆದರೆ, ಮಕ್ಕಳಲ್ಲಿ ಪುಸ್ತಕ ಪ್ರೇಮ ಹುಟ್ಟಿಸುವುದು ಹೇಗೆ! ಅದಕ್ಕಾಗಿ ಮಕ್ಕಳ ಹಕ್ಕುಗಳ ಗ್ರಂಥಾಲಯ ಮಾಡುವುದು ಅಗತ್ಯ.

ಏನದು ಮಕ್ಕಳ ಗ್ರಂಥಾಲಯ!

ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಇರುವ ಗ್ರಂಥಾಲಯವನ್ನು ನಾವು ಮಕ್ಕಳ ಗ್ರಂಥಾಲಯ ಎನ್ನಬಹುದು.

ಉದ್ದೇಶಗಳು:

  1. ವಿವಿಧ ಬಣ್ಣದ ವಿಂಗಡಣೆಯ ಪುಸ್ತಕಗಳ ಮೂಲಕ ಮಕ್ಕಳಲ್ಲಿ ಪುಸ್ತಕ ಪ್ರೇಮ ಹುಟ್ಟಿಸುವುದು.
  2. ಮಕ್ಕಳ ಕಲಿಕಾ ಮಟ್ಟದ ಸಾಮರ್ಥ್ಯದ ಮೇಲೆ ಮಕ್ಕಳನ್ನು ಪುಸ್ತಕ ಲೋಕಕ್ಕೆ ಪರಿಚಯಿಸುವುದು.
  3. ಮಕ್ಕಳ ಓದುವ ಗ್ರಹಿಸುವ ಬೆಳವಣಿಗೆಯನ್ನು ಗುರುತಿಸಿ, ಅವರ ಪಾಠ ಕಲಿಯುವ ಸಾಮರ್ಥ್ಯವನ್ನು ಉತ್ತೇಜಿಸುವುದು.
  4. ಪುಸ್ತಕ ಓದುವುದರಿಂದ ಮಕ್ಕಳಲ್ಲೂ ಭಾಷೆ ಸ್ಪಷ್ಟತೆ, ಸೂಕ್ತ ಮಾಹಿತಿ, ಕಲ್ಪನೆಯ ಬೆಳವಣಿಗೆ ಸಾಧ್ಯವಾಗುತ್ತದೆ.
  5. ಪುಸ್ತಕ ಜ್ಞಾನ ಬೆಳವಣಿಗೆ, ಮಾಹಿತಿ ಬೆಳವಣಿಗೆಗೆ ಹೊಸ ಪುಸ್ತಕ ಪರಿಚಯ, ವೈವಿಧ್ಯತೆ, ಸ್ಪರ್ಧೆ, ಕಥೆ ಹೇಳುವ, ಕೇಳುವ ಅವಕಾಶ, ಒಂದು ಪುಸ್ತಕದ ಬಗ್ಗೆ ಚರ್ಚೆ ಯಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದು.
  6. ಮಕ್ಕಳೇ ಗ್ರಂಥಾಲಯ ನಿರ್ವಹಿಸಿಕೊಂಡು ಹೋಗಲು ತರಬೇತಿ ನೀಡಿ, ಅವರಲ್ಲಿ ನಾಯಕತ್ವ ಮತ್ತು ನಿರ್ವಹಣೆ ಸಾಮರ್ಥ್ಯ ಹೆಚ್ಚಿಸುವುದು.
  7. ಮಕ್ಕಳ ಸಾಧನೆ, ಪ್ರತಿಭೆ ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ, ಅವಕಾಶಗಳ ಮಾಹಿತಿ ನೀಡುವುದು.
  8. ಮಕ್ಕಳಲ್ಲಿ ಶೋಷಣೆ, ಲಿಂಗ ತಾರತಮ್ಯ, ಮೊಬೈಲ್ ಚಟ, ಹದಿಹರೆಯದ ಸಮಸ್ಯೆ ಮುಂತಾದವುಗಳನ್ನು ಚರ್ಚಿಸುವುದು ಮತ್ತು experts talk ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು.
  9. ಮಕ್ಕಳ ಭಾಗವಹಿಸುವಿಕೆ ಹಕ್ಕನ್ನು ಎತ್ತಿಹಿಡಿಯುವ ಮೂಲಕ ರಾಷ್ಟ್ರದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವುದು.
  10. ಸ್ವಚ್ಛತೆ, ಪರಿಸರ ಪ್ರೇಮ, ವಿಚಾರ ಸಂಘಟನೆ, ಅಂತರಾಷ್ಟಿಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಹರಿಕಾರರನ್ನಾಗಿ ಮಾಡಿ ಮಕ್ಕಳ ಹಕ್ಕು ರಕ್ಷಣೆ ಮಾಡುವುದು.
  11. ಮಕ್ಕಳ ಪುಸ್ತಕಗಳ ಸಮರ್ಪಕ ಉಪಯೋಗ, ಹಂಚಿಕೆ, ವಿಲೇವಾರಿ, ವಿನಿಮಯ, ನಿರ್ವಹಣೆ ಮೂಲಕ ಮಕ್ಕಳ ಹಕ್ಕುಗಳ ಗ್ರಂಥಾಲಯದ ಉಪಯೋಗದ ಪ್ರಯೋಗವನ್ನು ಎಲ್ಲ ಮಕ್ಕಳಿಗೆ ತಲುಪುವಂತೆ ಮಾಡುವುದು.

ಪ್ರಕ್ರಿಯೆ:

ಮಕ್ಕಳ ಹಕ್ಕುಗಳ ಗ್ರಂಥಾಲಯ ಸ್ಥಾಪನೆಗೆ 30 ಮಕ್ಕಳಿಗೆ ಸುಮಾರು 200 ಪುಸ್ತಕ, ಅದನ್ನು ಇಡಲು ಸೂಕ್ತ ಸ್ಥಳ, ಪುಸ್ತಕಗಳನ್ನು ಹೇಗೆ grade ಮಾಡಬಹುದೆಂಬ ಮಾಹಿತಿ, ಮಕ್ಕಳನ್ನು ಆಕರ್ಷಿಸಲು ಆಟ ಪಾಠ, ಮಕ್ಕಳಿಗೆ ಗ್ರಂಥಾಲಯದ ಕಾರ್ಯ ನಿರ್ವಹಿಸಿಕೊಂಡು ಹೋಗಲು ಜವಾಬ್ದಾರಿ ನೀಡುವುದು ಮುಖ್ಯ.

ಹಿಪ್ಪೋ ಕ್ಯಾಂಪಸ್ ಎಂಬ ಸಂಸ್ಥೆಯ GROW BY’ concept ಆಧಾರಿತ ಪುಸ್ತಕಗಳ ಗ್ರೇಡಿಂಗ್ ಮಾಡಿ, ಮಕ್ಕಳಿಗೆ ಅವರ ಕಥೆಯನ್ನು ಅರಿತುಕೊಂಡು ತರ್ಕವನ್ನು ಉಪಯೋಗಿಸಿ ಪ್ರಶ್ನೋತ್ತರ ಮೂಲಕ ಗ್ರೀನ್, ರೆಡ್, orange, white, blue ಮತ್ತು yellow ಪುಸ್ತಕಗಳ ಅಡಿಯಲ್ಲಿ ಗ್ರಂಥಾಲಯದ ಸದಸ್ಯತ್ವ ನೀಡಿ, ಮೇಲಿನ ಹಂತ ತಲುಪಲು ಪ್ರೇರೇಪಿಸುವುದು, ಒಬ್ಬರಿಗೊಬ್ಬರು ಸ್ಪೂರ್ತಿ ಹೊಂದಿ ಪುಸ್ತಕ ಓದುವುದರಿಂದ, ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿ, ಯೋಜನೆ ಹಂತದಿಂದ ಎಲ್ಲವನ್ನೂ ತಾವೇ ಮಾಡಿಕೊಂಡು ಹೋಗುವ ಒಂದು ಅವಕಾಶ. ಪುಸ್ತಕದ ಲೋಕಕ್ಕೆ ಪರಿಚಯದೊಂದಿಗೆ ಸಾಮಾಜಿಕ ಜೀವನ ನಿರ್ವಹಣೆ, ಸ್ನೇಹ, ನಾಯಕತ್ವ ಕೌಶಲ್ಯ ಅಭಿವೃದ್ಧಿ, ಕಾರ್ಯಕ್ರಮ ನಿರ್ವಹಣೆ, ಹೀಗೆ ಹಲವಾರು ಜೀವನ ಕೌಶಲ್ಯವನ್ನು ಕಲಿಯುತ್ತಾರೆ.

ಹಿರಿಯರ ಪಾತ್ರ:

ದೊಡ್ಡವರು ಗ್ರಂಥಾಲಯ ಸ್ಥಾಪಿಸಿ, ವಾರಕ್ಕೊಮ್ಮೆ ಮಕ್ಕಳನ್ನು ಕಲೆಹಾಕಿ ಹೊಸ ಹಂತ ತಲುಪಲು ಪ್ರೇರೇಪಿಸುವುದು, ಅದಕ್ಕೆ ನಿರಂತರ ಹೊಸ ಪುಸ್ತಕ ಸರಬರಾಜು, ಮಕ್ಕಳಲ್ಲಿ ಪುಸ್ತಕ ನಿರ್ವಹಣೆ ತರಬೇತಿ ಮತ್ತು ಸಹಾಯಕ್ಕಾಗಿ, ಮಕ್ಕಳ ಹಕ್ಕುಗಳ ಪರಿಚಯ, ಗ್ರಂಥಾಲಯದ ಬಗ್ಗೆ, ಅದರ ನಿರ್ವಹಣೆ ಬಗ್ಗೆ ಪ್ರಾಥಮಿಕ ಆಕರ್ಷಣೆ ಹೆಚ್ಚಿಸಲು, ಮೇಲ್ವಿಚಾರಣೆ, ice breaking games ಮತ್ತು ಕಥೆ ಹೇಳಿ ಗ್ರಂಥಾಲಯಕ್ಕೆ ಆಕರ್ಷಿಸುವ ಕಾರ್ಯ ಸಹಾಯ ಮಾಡುವುದು.

ಎಲ್ಲಾ ಪ್ರಕ್ರಿಯೆಯಲ್ಲಿ ಸ್ವಾರ್ಥವಿಲ್ಲದೆ, ವೈಮನಸ್ಸು ಇಲ್ಲದೆ, ಸ್ಪರ್ಧಾತ್ಮಕ ಮನೋಭಾವ ಇಲ್ಲದೆ, ಯಾವುದೇ ಲಾಭದ ದೃಷ್ಟಿಯಿಂದ ನೋಡದೆ “Best interest of the child’ /ಮಕ್ಕಳ ದೃಷ್ಟಿಕೋನ ಮಾತ್ರ ಉದ್ದೇಶ ಹೊಂದಿರುವ ಕಾರ್ಯ ಮಾಡುವುದು.

ಮಕ್ಕಳ ಹಕ್ಕುಗಳನ್ನು ಜಾರಿಮಾಡಿ, ಅದನ್ನು ಮಕ್ಕಳಿಗೆ ತಿಳಿದುಕೊಳ್ಳಲು ಮಕ್ಕಳ ಸರ್ವತೋಮುಖ ಅಭಿವೃದ್ಧಿ ಖಚಿತ ಪಡಿಸಲು ಮಕ್ಕಳ ಹಕ್ಕುಗಳ ಗ್ರಂಥಾಲಯ ಒಂದು ಉತ್ತಮ ಸಾಧನ. ಇದನ್ನು 10ರಿಂದ 50 ಮಕ್ಕಳು ಇರುವ ಯಾವುದೇ ಬಡಾವಣೆ, ಶಾಲೆ, ವಸತಿ ನಿಲಯ, ವಸತಿ ಸಂಕೀರ್ಣ, ಸಮುದಾಯ, ಗ್ರಾಮಗಳಲ್ಲಿ ಪ್ರಾರಂಭಿಸಬಹುದು. ಮಕ್ಕಳ ಹಕ್ಕುಗಳ ಗ್ರಂಥಾಲಯ ಸ್ಥಾಪನೆಗೆ ಹೆಚ್ಚಿನ ಮಾಹಿತಿಗೆ ಸಹಾಯಕ್ಕೆ, ಮಕ್ಕಳ ಹಕ್ಕುಗಳ ಗ್ರಂಥಾಲಯ ಸ್ಥಾಪನೆ ಹರಿಕಾರ nagasimha Rao ನಾಗಸಿಂಹ ಜಿ ರಾವ್ ಇವರೊಂದಿನ ತರಬೇತಿಗೆ, ಮಾರ್ಗದರ್ಶನ, ಪುಸ್ತಕ ದಾನ ಮಾಡಲು, ಕರೆ ಮಾಡಿ 98804 77198.

ಮಕ್ಕಳ ಹಕ್ಕುಗಳ ಗ್ರಂಥಾಲಯ ಸ್ಥಾಪನೆಗೆ ನಾವೆಲ್ಲರೂ ಮಕ್ಕಳ ಸ್ನೇಹಿ ಸಮಾಜವಾಗಿ ರೂಪುಗೊಳ್ಳೋಣ.

ವಾಣಿ ಚೈತನ್ಯ

ಕನ್ನಡದ ಬರಹಗಳನ್ನು ಹಂಚಿ ಹರಡಿ
4 4 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
H N MANJURAJ
H N MANJURAJ
1 month ago

ಮಕ್ಕಳನು ಬೆಳೆಸುವುದು, ಸುಮ್ಮನೆ ಬೆಳೆಸುವುದಲ್ಲ; ಕುಟುಂಬಕ್ಕೂ ಸಮಾಜಕ್ಕೂ ದೇಶಕ್ಕೂ (ಈಗ ಪರದೇಶಕ್ಕೂ !) ಹೊಣೆ ಹೊತ್ತ ನಾಗರಿಕ ಸುಸಂಸ್ಕೃತ ಸಂಭಾವಿತ ಪ್ರಜೆಗಳನ್ನಾಗಿಸುವುದೇ ದೊಡ್ಡವರ
ಟಾಸ್ಕು !! (ಪೋಷಕರು ಹಾಗೆಂದುಕೊಂಡಿದ್ದರೆ)

ಮಕ್ಕಳಿಗೆ ಆಸ್ತಿ ಮಾಡುವುದಲ್ಲ; ಮಕ್ಕಳನ್ನೇ ಆಸ್ತಿ ಮಾಡುವುದು ಎಂದು ಇದನ್ನು ಸಿಂಪಲ್ಲಾಗಿ ಹೇಳಬಹುದು. ಹೀಗಿರುವಾಗ ಮಕ್ಕಳು ಪೋಷಕರು ಮಾಡುವುದನು ಗಮನಿಸುವರು; ಹೇಳುವುದನ್ನಲ್ಲ ಎಂಬುದು ಮನೋತಜ್ಞರ ಅಂಬೋಣ.

ಇನ್ನು ಮಕ್ಕಳ ಗ್ರಂಥಾಲಯದ ವಿಷಯಕ್ಕೆ ಬಂದರೆ, ನಗರಗಳಲ್ಲಿ ಈಗೀಗ ಪೋಷಕರಲ್ಲಿ ಜಾಗೃತಿ ಮೂಡಿದೆ. ಹಾಗೆಯೇ ಒಂದಷ್ಟು ವ್ಯವಹಾರವನ್ನೂ ಸೇವೆಯನ್ನೂ ಜೊತೆಗೊಯ್ಯುವವರು ಮಕ್ಕಳ ಖಾಸಗೀ (ಪೇಯ್ಡ್‌ ಅಂಡ್‌ ರೀಡ್)‌ ಗ್ರಂಥಾಲಯಗಳನ್ನು ನಡೆಸುತ್ತಿದ್ದಾರೆ. ನನಗಿದರ ಅನುಭವವಿದೆ. ಕಣ್ಣಾರೆ ಕಂಡಿದ್ದೇನೆ.

ತಂತ್ರಜ್ಞಾನವನ್ನು ಹಳಿಯದೇ (ಏಕೆಂದರೆ ಇದೇ ಅನ್ನ ಕೊಡುತ್ತಿರುವುದು ಮತ್ತು ಚಿನ್ನವಾಗುತ್ತಿರುವುದು) ಪುಸ್ತಕಗಳನ್ನು ಓದುವ ಹಾಗೆಯೇ ಅನಿಸಿದ್ದನ್ನು ಬರೆಯುವ ಅಭ್ಯಾಸವದು, ಹವ್ಯಾಸವಾಗಿಸುವುದು ಸದ್ಯದ ಚಾಲೆಂಜು. ನಾವು ಏನು ಹೊಡಕೊಂಡರೂ ಬಡಕೊಂಡರೂ ಇನ್ನೊಂದಿಪ್ಪತ್ತು ವರುಷ ಇವೆಲ್ಲಾ ಇದ್ದದ್ದೇ. ಅಂದರೆ ಪುಸ್ತಕಗಳೋದು ಮಕ್ಕಳಲ್ಲಿ ಕಡಮೆ; ಏಕೆಂದರೆ ಈಗ ಹಲವು ರೀತಿಗಳಲ್ಲಿ ಓದಬಹುದಾಗಿದೆ ಮತ್ತು ಬರೆಯಬಹುದಾಗಿದೆ. ಪುಸ್ತಕದಲ್ಲೇ ಏಕೆ ಓದಬೇಕು? ಎಂಬುದನ್ನು ತಿಳಿಸುವುದು ಸೂಕ್ತ. ಇದು ಸಹ ಚಾಲೆಂಜಿಂಗ್‌ ಟಾಸ್ಕು.

ಪುಟ್ಟ ಮಕ್ಕಳಿಗೆ ಓದಿಸಬಹುದು; ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ ಅವರೇ ತಮಗೆ ಬೇಕಾದುದನ್ನು ಆಯ್ಕಿಸಿ, ತಂದು ಮನೆಯಲ್ಲಿ ಓದುವಂತೆ ನೋಡಿಕೊಳ್ಳಬಹುದು. ಇದೆಲ್ಲವೂ ಸಾಧ್ಯವಾಗಿದೆ. ಹಾಗೆಂದು ಅವರು ಸ್ವಲ್ಪ ದೊಡ್ಡವರಾಗುತ್ತಿದ್ದಂತೆಯೇ (ಹೈಸ್ಕೂಲು ಮಟ್ಟ) ಸಮಸ್ಯೆ ಶುರುವಾಗುತ್ತದೆ. ಗ್ರಂಥಾಲಯದ ಓದು ಕಡಮೆಯಾಗಿ ನಿಂತೇ ಹೋಗುತ್ತದೆ. ಬರೀ ಪೋಷಕರನ್ನು ವಿಲನ್‌ ಮಾಡುವುದರಲ್ಲಿ ಅರ್ಥವಿಲ್ಲ. ಮಕ್ಕಳೆಲ್ಲರೂ ಶುಭ್ರರು; ಶುದ್ಧರು; ಸತ್ಯಸಂಧರು ಎಂದೇನಲ್ಲ! ಇಂದಿನ ಹಲವು ರೀತಿಯ ವ್ಯವಸ್ಥೆಯ ದೋಷಗಳು ಅವರನ್ನು ಕಲುಷಿತಗೊಳಿಸುತ್ತಿದೆ. ನೇರದಾರಿಗಿಂತ ಎಲ್ಲದರಲ್ಲೂ ಅಡ್ಡದಾರಿಯೇ ಬಹುಪ್ರಿಯವಾಗಿದೆ.

ಮಕ್ಕಳ ಎಲ್ಲ ಕೃತ್ಯಗಳಿಗೂ ಪೋಷಕರು ಹೊಣೆಯಲ್ಲ; ಹಾಗೆಯೇ ಪೋಷಕರನ್ನು ದೂರದೇ ಬೇರೆ ಗತ್ಯಂತರವಿಲ್ಲ. ಬರೀ ಹಕ್ಕುಗಳ ಬಗ್ಗೆ ಮಾತನಾಡುವುದು ಸಾಕು; ಕರ್ತವ್ಯಗಳನ್ನೂ ತಿಳಿಸಬೇಕು.

ಇನ್ನು ಲೇಖನದ ವಿಚಾರಗಳು ವಿಚಾರಶೀಲವಾಗಿವೆ. ಮತ್ತೆ ಪರೋಕ್ಷವಾಗಿ ಮಕ್ಕಳ ಹಕ್ಕುಗಳನ್ನೇ ಒತ್ತಿ ಒತ್ತಿ ಹೇಳಲಾಗಿದೆ. ಸರಿ ಸ್ವಾಮಿ, ಮಕ್ಕಳನ್ನು ಹೇಗೋ ಬೆಳೆಸಿದರೆ ಸಾಕು ಎಂಬ ಮನೋಧರ್ಮ ಈಗ ಯಾವ ಪೋಷಕರಲ್ಲೂ ಇಲ್ಲ. ಮಕ್ಕಳೇ ಬೇಡ ಎನ್ನುವ ಪೋಷಕರಿಗೆ ಸಹ ತರಬೇತಿ ಕಾರ್ಯಾಗಾರಗಳು ಆಗಬೇಕಿವೆ. ನಿಮ್ಮ ತಾಯ್ತಂದೆಯರು ಮಕ್ಕಳು ಬೇಡ ಎಂದಿದ್ದರೆ ನೀವು ಹುಟ್ಟುತ್ತಿರಲಿಲ್ಲ; ಹಾಗಾಗಿ ಮಕ್ಕಳನ್ನು ಮಾಡಿಕೊಳ್ಳುವುದು ಮತ್ತು ಸೂಕ್ತ ರೀತಿಯಲ್ಲಿ ಬೆಳೆಸುವುದು ನಿಮ್ಮಗಳ ಜವಾಬ್ದಾರಿ; ನಾಗರಿಕ ಕರ್ತವ್ಯ ಎಂದು ತಿಳಿ ಹೇಳಬೇಕಿದೆ. ಬರೀ ನನ್ನದು, ಖಾಸಗೀ, ಪರ್ಸನಲ್ಲು, ಮದುವೆ ಬೇಡ, ನಾಯಿ ಸಾಕು; ಮಕ್ಕಳೇಕೆ? ಎಂದೆಲ್ಲಾ ಹುಚ್ಚು ಹುಚ್ಚಾಗಿ ಕೂಗುವ ನರಳುವ ಅತಿ ಬುದ್ಧಿವಂತ ಸಮಾಜ ನಿರ್ಮಾಣವಾಗುತ್ತಿದೆ. ಅತಿ ವಿದ್ಯಾವಂತರ ಅನಾಹುತಗಳತ್ತಲೂ ಸ್ವಲ್ಪ ನಾವು ತಲೆ ಕೆಡಿಸಿಕೊಳ್ಳಬೇಕಿದೆ.

ಮುಖ್ಯವಾಗಿ ಭಾರತೀಯ ಕುಟುಂಬ ವ್ಯವಸ್ಥೆಯ ಅದ್ಭುತ ಪರಿಕಲ್ಪನೆಯನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕಿದೆ. ಸತ್ಪರಂಪರೆಯ (ಸತ್ತ ಪರಂಪರೆ ಎಂದು ಯಾರಾದರೂ ಅಣಕಿಸಿದರೆ ಅವರ ಮೇಲೆ ನನ್ನ ಕನಿಕರವಿದೆ) ಹಲವು ಮಜಲು, ಆಯಾಮಗಳನ್ನು ಮನಕ್ಕೆ ಮುಟ್ಟಿಸುವಂಥ ಪುಸ್ತಕಗಳನ್ನು ಓದಿಸಬೇಕಿದೆ; ಬರೆಯಬೇಕಿದೆ. ಬರೆದಿರುವುದನ್ನು ಸಹ ಓದಿಸಬೇಕಿದೆ; ಮುಖ್ಯವಾಗಿ ಪೋಷಕರಾದ ನಾವು ಓದಬೇಕಿದೆ.

(ಇಷ್ಟೆಲ್ಲಾ ಬೊಂಬಡ ಬಜಾಯಿಸುತ್ತೀಯಲ್ಲ; ನೀನೇನು ಮಾಡಿದೆ? ಎಂದು ಕೇಳಿ; ನಾನು ನನ್ನ ಮಗನನ್ನು ಬರೀ ದೇಶದ ಅಲ್ಲ; ಪ್ರಪಂಚದ ಆಸ್ತಿ ಮಾಡಿದ್ದೇನೆ.) ಇದು ಅಹಮಲ್ಲ; ವಿಶ್ವಾಸ. ಸರಿದಾರಿ; ಸರಿ ಬದುಕು.

ಪ್ರತಿಕ್ರಿಯೆಯ ನೆಪದಲ್ಲಿ ಏನೋ ಕಾರಿಕೊಂಡಿದ್ದಾನೆ ಎಂದು ನೀವು ಬಯ್ಯಬಹುದು. ನಿಮಗೆಲ್ಲ ಆ ಹಕ್ಕಿದೆ. ನಮಸ್ಕಾರ.

Dr Veena
Dr Veena
1 month ago

Congratulations for a very written article about an important aspect of children’s overall growth, Dr Vani! Actually, when we look at English literature, extensive global catalog with thousands of titles across genres are available for children. Thankfully, even though Kannada literature for children is limited in volume, it is growing steadily with regional publishers.
I really hope Kannada literature for children covers fantasy, science fiction, moral tales, educational content, multicultural stories.

2
0
Would love your thoughts, please comment.x
()
x