
ಮಾನವರಲ್ಲಿ ಕುಟುಂಬ ಎಂದರೆ ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹಬಾಳ್ವೆಯಿಂದ ಒಟ್ಟಾಗಿರುವ ಒಂದು ಗುಂಪು. ಇದು ಸಮಾಜದ ಬಹುಮುಖ್ಯ ಅಂಗ. ನಾವು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆ. ಭಾಷೆ ಸಂಸ್ಕೃತಿ ಸಂಪ್ರದಾಯ ಶಾಸ್ತ್ರಗಳು ಪಾರಂಪರಿಕವಾಗಿ ಬೆಳೆದು ಬರುವುದಕ್ಕೂ ಈ ಕುಟುಂಬವೇ ಕಾರಣ. ಹುಟ್ಟಿದಾಗಿನಿಂದ ಕುಟುಂಬದೊಳಗೆ ಬೆಳೆದು ಪ್ರೀತಿ, ಕಾಳಜಿ ,ದಯೆ ಇತ್ಯಾದಿ ಜೀವನ ಮೌಲ್ಯಗಳನ್ನು ಕಲಿಯುವುದು ಇಲ್ಲಿಯೇ. ಇದು ನಮ್ಮ ಮೊದಲ ಪಾಠ ಶಾಲೆ ಎನ್ನಬಹುದು.
ಹಿಂದೆಲ್ಲ ಹೆಚ್ಚಾಗಿ ಅವಿಭಕ್ತ ಕುಟುಂಬಗಳಿರುತ್ತಿದ್ದವು. ಅಂದರೆ ಒಂದೇ ಕಡೆ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಸಂಸಾರ ಅಥವಾ ಕುಟುಂಬಗಳು ಕೂಡಿ ಬದುಕುವುದು. ಅಥವಾ ಹಲವಾರು ತಲೆಮಾರುಗಳು ಒಂದೇ ಸೂರಿನಡಿಯಲ್ಲಿ ವಾಸಿಸುವುದು. ಆ ಮನೆಯ ಹಿರಿಯರೊಬ್ಬರು ಕುಟುಂಬದ ಯಜಮಾನನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮನೆಯ ಕಷ್ಟ ಸುಖ ಅಗು ಹೋಗುಗಳು, ಜಮೀನಿನ ಕೆಲಸ ಕಾರ್ಯಗಳು ಮುಂತಾದ ವಿಷಯಗಳ ಬಗ್ಗೆ ಯಜಮಾನ ಮತ್ತು ಇತರ ಸದಸ್ಯರುಗಳ ಜೊತೆ ಪರಸ್ಪರ ಚರ್ಚೆಯಾಗುತ್ತಿದ್ದವು. ಊಟ ತಿಂಡಿ ಹಬ್ಬ ಹರಿದಿನಗಳನ್ನು ಎಲ್ಲರೂ ಒಟ್ಟಾಗಿ ಮಾಡಿ ಖುಷಿ ಪಡುತ್ತಿದ್ದರು. ಪ್ರೀತಿ ವಿಶ್ವಾಸ ಸಹಾಯ ಸಹಕಾರಗಳ ವಿನಿಮಯದ ಮೂಲಕ ಬದುಕು ನಡೆಯುತ್ತಿದ್ದವು. ಇದು ಉತ್ತಮ ಸಂಬಂಧಗಳನ್ನು ಜೀವನ ಮೌಲ್ಯಗಳನ್ನು ಸೃಷ್ಟಿಸುವ ವೇದಿಕೆಯಾಗಿತ್ತು. ಆದರೆ ನಾಗರಿಕತೆ ಬೆಳೆದಂತೆ ಮನುಷ್ಯ ಬುದ್ದಿವಂತನಾದ. ಸಮಾಜದ ಬೆಳವಣಿಗೆಯೂ ಆಯಿತು. ಹಲವಾರು ಸಮಸ್ಯೆಗಳು, ಬದಲಾವಣೆಗಳೂ ಆಗುತ್ತಲೇ ಹೋದವು. ಹಾಗೇ ಅವಿಭಕ್ತ ಕುಟುಂಬಗಳೂ ವಿಭಜನೆಯಾಗುತ್ತ ಹೋದವು. ಪರಿಣಾಮ ಇಂದು ನ್ಯೂಕ್ಲೀಯರ್ ಕುಟುಂಬಗಳು ಜಾಸ್ತಿಯಾಗಿ ನಮ್ಮ ಮಕ್ಕಳಿಗೆ ಅವಿಭಕ್ತ ಕುಟುಂಬದ ಬಗ್ಗೆ ಪುಟ್ಟ ಕಥೆಯಂತೆ ಹೇಳುವಂತಾಗಿದೆ.
ಇತ್ತೀಚೆಗೆ ತುಂಬಾ ಜನರು ʻ ನಾವೆಲ್ಲಾ ಕೂಡು ಕುಟುಂಬದಲ್ಲಿ ಬೆಳೆದಿದ್ದೆವು. ಆಗಿನ ಬದುಕು ಎಷ್ಟು ಚೆನ್ನಾಗಿತ್ತು. ಒಂದೇ ಮನೆಯಲ್ಲಿ ಅಪ್ಪ-ಅಮ್ಮ ಮಾತ್ರವಲ್ಲ ದೊಡ್ಡಪ್ಪ, ಚಿಕ್ಕಪ್ಪ, ದೊಡ್ಡಮ್ಮ, ಚಿಕ್ಕಮ್ಮ, ಅಜ್ಜ ಅಜ್ಜಿ ಅಣ್ಣಂದಿರು, ತಮ್ಮಂದಿರು, ಅಕ್ಕಂದಿರು, ತಂಗಿಯರು ಎಂದು ಎಲ್ಲರೂ ಕೂಡಿಯೇ ಇರುತ್ತಿದ್ದೆವು. ಎಲ್ಲಾದರೂ ಹೋಗುವುದಿದ್ದರೆ, ಆಡುವುದಿದ್ದರೆ, ಕೆಲಸ ಮಾಡುವುದಿದ್ದರೆ ಕೂಡಿಯೇ ಮಾಡುತ್ತಿದ್ದೆವು. ಊಟ-ತಿಂಡಿ ಭಜನೆ, ಪಾಟ ಎಲ್ಲವೂ ಒಟ್ಟಿಗೇ ಇರುತ್ತಿದ್ದವು. ಕೂಡಿಯೇ ಶಾಲೆಗೆ ಹೋಗುವುದು. ಏನೇ ತಂದರೂ ಪರಸ್ಪರ ಹಂಚಿಕೊಂಡು ತಿನ್ನುತ್ತಿದ್ದೆವು. ಮನೆಯಲ್ಲಿ ಯಾರೊಬ್ಬರ ಹುಟ್ಟು ಸಾವು, ಅನಾರೊಗ್ಯ, ಮದುವೆ-ಮುಂಜಿಯಂತಹ ಕಾರ್ಯಗಳಲ್ಲಿ ಅವರಿಗೆ ಇವರು ಇವರಿಗೆ ಅವರು ಎಂದು ಪರಸ್ಪರ ಸಹಾಯ-ಸಹಕಾರ ಕೊಡುತ್ತಿದ್ದೆವು. ಎಲ್ಲರಲ್ಲೂ ನಮ್ಮದೆಂಬ ಪ್ರೀತಿ ವಾತ್ಸಲ್ಯ ಎಂದು ತುಂಬಿ ತುಳುಕುತ್ತಿತ್ತು. ಎಲ್ಲರೂ ಒಗ್ಗಟ್ಟಿನಲ್ಲಿ ಹೊಂದಾಣಿಕೆಯಿಂದ ಬದುಕುತ್ತಿದ್ದೆವುʼ ಎಂದು ಹೆಮ್ಮೆ ಪಡುವುದನ್ನು ಕಾಣುತ್ತೇವೆ. ಇದರ ಜೊತೆಗೇ “ಈಗೆಲ್ಲಾ ಪುಟ್ಟ ಕುಟುಂಬ ಅಪ್ಪ-ಅಮ್ಮ, ಒಂದೋ ಎರಡೋ ಮಕ್ಕಳು, ಹೊಂದಾಣಿಕೆಯ ಸ್ವಭಾವವೇ ಇರುವುದಿಲ್ಲ. ಈ ಮಕ್ಕಳೋ ಒಂಟಿಯಾಗಿ ಬೆಳೆಯುತ್ತಾರೆ. ಸ್ವಾರ್ಥ, ದ್ವೇಷ, ಹಟದಿಂದಲೇ ಬೆಳೆಯುತ್ತಾರೆ” ಎಂದು ಗೊಣಗುವುದನ್ನೂ ನೋಡುತ್ತೇವೆ, ಕೇಳುತ್ತೇವೆ. ಇವೆಲ್ಲವೂ ನಿಜವೂ ಹೌದು. ಅವಿಭಕ್ತ ಕುಟುಂಬದಲ್ಲಿ ಹಿರಿಯರಿಗೆ ಗೌರವ ಕೊಡುವುದು, ಚಿಕ್ಕವರನ್ನು ಕಾಳಜಿಯಿಂದ ನೋಡುವುದು ಮುಖ್ಯ ಲಕ್ಷಣವಾಗಿತ್ತು. ಇಲ್ಲಿ ಸಂಸ್ಕಾರ, ಸಂಪ್ರದಾಯ, ಸಂಸ್ಕೃತಿಗಳು ತಲೆಮಾರಿನಿಂದ ತಲೆಮಾರಿಗೆ ಮುಂದುವರೆದುಕೊಂಡು ಹೋಗುತ್ತಿದ್ದವು. ಮಕ್ಕಳು ಶಿಸ್ತು, ಸಹನೆ, ಹಂಚಿಕೊಳ್ಳುವ ಗುಣಗಳನ್ನು ಹಿರಿಯರನ್ನು ನೋಡಿಯೇ ಕಲಿಯುತ್ತಿದ್ದರು. ಸಂತೋಷವಾಗಲಿ ದು:ಖವಾಗಲಿ ಒಟ್ಟಾಗಿ ಎದುರಿಸುತ್ತಿದ್ದರು. ಒಗ್ಗಟ್ಟು ಎನ್ನುವುದು ಅವಿಭಕ್ತ ಕುಟುಂಬದ ಶಕ್ತಿಯಾಗಿತ್ತು. ಪರಸ್ಪರ ಬೆಂಬಲದಿಂದ ಕುಟುಂಬದಲ್ಲಿ ಭದ್ರತೆ ಹೆಚ್ಚುತ್ತಿತ್ತು. ಹಾಗಾದರೆ ಅವಿಭಕ್ತ ಕುಟುಂಬದಲ್ಲಿ ಇಷ್ಟೊಂದು ಉಪಯೋಗವಿದ್ದಾಗ ಅವು ನಶಿಸಿದ್ದು ಹೇಗೆ? ಯಾಕೆ ಈ ಮನುಷ್ಯ ವಿಭಕ್ತ ಕುಟುಂಬವನ್ನು ಇಷ್ಟಪಡುವಂತಾಯ್ತು..? ಎಂಬ ಪ್ರಶ್ನೆಯೂ ಉದ್ಬವಿಸುವುದು ಸಹಜ ಅಲ್ಲವೇ..?
ಪ್ರತಿಯೊಂದು ಕ್ರಿಯೆಗೂ ಸಮನಾದ ಹಾಗೂ ವಿರುದ್ಧವಾದ ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ ಎಂದು ನ್ಯೂಟನ್ನನ ಬಲದ ನಿಯಮವನ್ನು ವಿಜ್ಞಾನದಲ್ಲಿ ಓದಿದ್ದೇವೆ. ಇದನ್ನು ನಮ್ಮ ಬದುಕಿನಲ್ಲೂ ಅನ್ವಯಿಸಬಹುದೇನೋ. ನಾವು ಯಾವುದೇ ವಿಚಾರ, ಯೋಜನೆಗಳನ್ನು ತೆಗೆದುಕೊಳ್ಳಲಿ ಅಲ್ಲಿ ಅನುಕೂಲ ಮತ್ತು ಅನಾನುಕೂಲ ಎರಡೂ ಇರುತ್ತವೆ ಅಲ್ಲವೇ..?. ಹಾಗೇ ಈ ಅವಿಭಕ್ತ ಕುಟುಂಬಗಳಲ್ಲೂ ಎಷ್ಟು ಅನುಕೂಲವಾಯಿತೋ ಅಷ್ಟೇ ಸಮಸ್ಯೆಗಳೂ ಹುಟ್ಟಿಕೊಂಡವು. ಆಗ ಸಹಜವಾಗಿಯೇ ಹೊಂದಾಣಿಕೆಯ ಸ್ವಭಾವದ ಕೊರತೆಯೂ ಕಾಣಿಸಿಕೊಂಡಿತು. ಈ ಕೂಡು ಕುಟುಂಬ ಎನ್ನುವುದು ಮನೆಯ ಮುಖ್ಯಸ್ಥನ ನಿಯಂತ್ರಣದಲ್ಲಿ ಇರುತ್ತಿದ್ದರಿಂದ ದಿನಕಳೆದಂತೆ ಅಲ್ಲಿ, ಅಧಿಕಾರ, ಅಹಂಕಾರ ಸ್ವಾರ್ಥಗಳು ಚಿಗುರಿದವು. ಇದರ ಜೊತೆಗೇ ನಾಗರಿಕತೆಯ ಬೆಳವಣಿಗೆ, ಶಿಕ್ಷಣ, ಆಧುನಿಕತೆ, ತಾಂತ್ರಿಕತೆ ತೆರೆದಂತೆಲ್ಲಾ ಮನುಷ್ಯ ಸಹಜವಾದ ಆಸೆ ಆಕಾಂಕ್ಷೆ, ನಿರೀಕ್ಷೆಗಳೂ ಹೆಚ್ಚಾದವು. ಪರಿಣಾಮ ಮೋಸ, ಸುಳ್ಳು, ಕಳ್ಳತನ, ದ್ವೇಷಗಳೂ ಹೆಚ್ಚಾದವು. ಅವಿಭಕ್ತ ಕುಟುಂಬದಲ್ಲಿ ಯಾವುದೇ ವಯಕ್ತಿಕ ಆಸೆ-ಆಕಾಂಕ್ಷೆಗಳಿಗೆ ಭಾವನೆಗಳಿಗೆ ಬೆಲೆಯಿರುತ್ತಿರಲಿಲ್ಲ. ಆರ್ಥಿಕ ಸ್ವಾತಂತ್ರ್ಯವಂತೂ ಇಲ್ಲವೇ ಇಲ್ಲ. ದುಡಿಯುವವ ದುಡಿಯುತ್ತಲೇ ಇದ್ದರೆ ತಿರುಗಾಡುವವ ತಿರುಗುತ್ತಲೇ ಇರುತ್ತಿದ್ದ. ಕೆಲಸದ ಹಂಚಿಕೆ ಸರಿಯಾಗಿ ಇರುತ್ತಿರಲಿಲ್ಲ. ಎಷ್ಟೋ ಕಡೆ ಯಜಮಾನನಿಗೆ ಮಾತ್ರ ಗೌರವ ಕೊಡುತ್ತಿದ್ದರು. ದುಡಿಯುವವನಿಗೆ ಬೆಲೆಯಿರುತ್ತಿರಲಿಲ್ಲ. ಯಾಕೆಂದರೆ ಯಜಮಾನನಾದವನು ಮಾತ್ರ ಬುದ್ದಿವಂತ ಎನ್ನುವ ಭಾವನೆ ಜನರಲ್ಲಿ ಇರುತ್ತಿತ್ತು. ದುಡಿಯುವವನಿಗೆ ವ್ಯವಹಾರದ ಜ್ಞಾನ ಇರುವುದು ಕಡಿಮೆ ಎನ್ನುವುದು ಸಾಮಾನ್ಯ ಜನರ ಅಭಿಪ್ರಾಯವಾಗಿತ್ತು. ಅದಕ್ಕೇ ಆತನಿಗೆ ಗೌರವ ಕೊಡುವುದು ತೀರಾ ಕಡಿಮೆ ಇರುತ್ತಿತ್ತು. ಇನ್ನು ಮಹಿಳೆಯರ ವಿಚಾರಕ್ಕೆ ಬಂದರಂತೂ ಅವಳು ಕೇವಲ ಅಡುಗೆ ಮನೆಯ ನಾಲ್ಕು ಗೋಡೆಯ ಮಧ್ಯೆ ಖೈದಿಯಾಗಿದ್ದಳು. ಶಿಕ್ಷಣ, ಸ್ವಾತಂತ್ರ್ಯ ಆಸೆ, ಆಕಾಂಕ್ಷೆಗಳಿಂದ ವಂಚಿತಳಾಗಿದ್ದಳು. ವಯಕ್ತಿಕ ಪ್ರತಿಭೆಗಳು ಬೆಳೆಯುವುದಕ್ಕೆ ಅವಕಾಶವೇ ಇರಲಿಲ್ಲ. ಗಂಡ-ಹೆಂಡತಿಗಾಗಲಿ ಅವರ ಮಕ್ಕಳಿಗಾಗಲಿ ಖಾಸಗೀತನವೇ ಇಲ್ಲದೆ ಪ್ರೀತಿ ವಾತ್ಸಲ್ಯದ ಮಾತುಗಳಿಗೆ ಅವಕಾಶವೇ ಇರುತ್ತಿರಲಿಲ್ಲ. ಇದರಿಂದ ಪರಸ್ಪರರಲ್ಲಿ ಜಗಳ, ಕೊಂಕು, ಬೇದ-ಭಾವ, ದ್ವೇಷ, ಅಸೂಯೆಗಳು ಬೆಳೆಯುತ್ತ ಹೋದವು. ಮುಖವಾಡದ ಬದುಕು ಎದ್ದು ಕಾಣುವುದಕ್ಕೆ ಶುರುವಾಯ್ತು. ಕಣ್ಣೆದುರು ನೋಡುವುದಕ್ಕೆ ಹೋಂದಾಣಿಕೆಯಂತೆ ಕಂಡರೂ ಒಳಗೊಳಗೇ ದ್ವೇಷ ಅಸೂಯೆಗಳು ಬೂದಿ ಮುಚ್ಚಿದ ಕೆಂಡದಂತೆ ಇರುತ್ತಿದ್ದವು. ಇದೇ ಕಾರಣಕ್ಕೆ ಮನುಷ್ಯ ಗಂಡ-ಹೆಂಡತಿ ಮಕ್ಕಳು ಎನ್ನುವ ಚಿಕ್ಕ ಕುಟುಂಬದ ಅಸೆಯನ್ನು ಪಟ್ಟಿದ್ದರಲ್ಲಿ ಆಶ್ಚರ್ಯವಿಲ್ಲ. ಚಿಕ್ಕ ಕುಟುಂಬ ಚೊಕ್ಕ ಕುಟುಂಬ. ಅಲ್ಲಿ ಖುಷಿಯಾಗಿ ಇರಬಹುದು ಎನಿಸಿ ಅವಿಭಕ್ತ ಕುಟುಂಬದಿಂದ ಹೊರಬಂದು ಪ್ರತ್ಯೇಕವಾಗಿ ಇರುವುದಕ್ಕೆ ಶುರು ಮಾಡಿದ. ಇದೇ ವಿಭಕ್ತ ಕುಟುಂಬ ಅಥವಾ ನ್ಯೂಕ್ಲೀಯರ್ ಕುಟುಂಬ.
ಈ ಆಧುನಿಕ ಅಥವಾ ನ್ಯೂಕ್ಲೀಯರ್ ಕುಟುಂಬದಲ್ಲಿ ಪೋಷಕರು ಮತ್ತು ಅವರ ಮಕ್ಕಳು ಮಾತ್ರ ಒಟ್ಟಾಗಿ ಇರುತ್ತಾರೆ. ಅಥವಾ ಪೋಷಕರ ತಂದೆತಾಯಿಗಳು, ಪೋಷಕರು, ಮಕ್ಕಳು ಇರುತ್ತಾರೆ. ಇಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ವಯಕ್ತಿಕ ಹಿತಾಸಕ್ತಿಗಳನ್ನು ಅನುಸರಿಸಲು ಅವಕಾಶವಿರುತ್ತದೆ. ಅತಿಯಾದ ನಿರ್ಬಂಧಗಳು ಇರುವುದಿಲ್ಲ. ಅವಿಭಕ್ತ ಕುಟುಂಬದಲ್ಲಿ ಸಾಂಪ್ರದಾಯಿಕ ಜೀವನಶೈಲಿ ಮತ್ತು ಮೌಲ್ಯಗಳಿದ್ದರೆ ಇಲ್ಲಿ ಆಧುನಿಕ ಜೀವನ ಶೈಲಿ ಮತ್ತು ಮೌಲ್ಯಗಳು ಇರುತ್ತವೆ. ವಯಕ್ತಿಕ ದ್ವೇಷ, ಬೇಧ-ಭಾವ, ಅಸೂಯೆಗಳು ಕಡಿಮೆ ಎನ್ನಬಹುದು. ಊಟ-ತಿಂಡಿ, ವೇಷ ಭಾಷೆ,ಸಂಪ್ರದಾಯ, ಶಿಕ್ಷಣ ಎಲ್ಲವೂ ಅವರವರಿಗೆ ಬೇಕಾದಂತೆ ಬಳಕೆಯಾಗುತ್ತವೆ. ಇಷ್ಟದ ಹವ್ಯಾಸಗಳನ್ನು ರೂಢಿಸಿಕೊಳ್ಳಬಹುದು. ನಮಗೆ ಇಷ್ಟವಾದ ನೆಂಟರಿಷ್ಟರು ಬಳಗದವರನ್ನು ಕರೆದು ಮಾತುಕತೆ ಭೋಜನ ಪ್ರವಾಸ ಎಲ್ಲವನ್ನೂ ಸ್ವತಂತ್ರವಾಗಿ ಮಾಡಬಹುದು. ಮಕ್ಕಳ ಬಗ್ಗೆ ಹೆಚ್ಚು ಪ್ರೀತಿ, ಅಕ್ಕರೆ, ಕಾಳಜಿ, ಜವಾಬ್ದಾರಿ ತೋರಿಸಲು ಅವಕಾಶವಾಗುತ್ತದೆ. ಯಾರ ಕಟ್ಟಳೆಗಳು ಬಂಧನಗಳು ಇರುವುದಿಲ್ಲ. ಅನಗತ್ಯ ವಾದ-ವಿವಾದಗಳನ್ನು ನಿರ್ಲಕ್ಷಿಸಿ ನೆಮ್ಮದಿಯ ವಾತಾವರಣವನ್ನು ಕಾಯ್ದುಕೊಳ್ಳುವ ಅವಕಾಶ ಹೆಚ್ಚಿರುತ್ತದೆ. ಸ್ವತಂತ್ರವಾದ ಬದುಕು. ಕುಟುಂಬ ನಿರ್ವಹಣೆಯಲ್ಲಿ ಸಮಸ್ಯೆಗಳು ಕಡಿಮೆ. ಒಟ್ಟಿನಲ್ಲಿ ಖುಷಿಯ ನಿರಾಳತೆಯ ಜೀವನ.
ಆದರೆ ಇಲ್ಲೂ ಕೂಡ ಸಮಸ್ಯೆಗಳು ತಪ್ಪಲಿಲ್ಲ. ಕುಟುಂಬದಲ್ಲಿ ಯಾವುದೇ ಸಮಸ್ಯೆ ಉದ್ಬವಿಸಲಿ ಮಾರ್ಗದರ್ಶನ ಕೊಡುವುದಕ್ಕೆ ತುಂಬಾ ಕಡೆ ಹಿರಿಯರು ಇರುವುದಿಲ್ಲ ಗಂಡ ಹೆಂಡತಿ ಇಬ್ಬರೇ ನಿರ್ವಹಿಸಬೇಕು. ಎಲ್ಲಾ ಕೆಲಸಗಳು, ಜವಾಬ್ದಾರಿಗಳನ್ನೂ ಇಬ್ಬರೇ ಮಾಡಬೇಕು. ಅವಿಭಕ್ತ ಕುಟುಂಬದಲ್ಲಾದರೆ ಹಂಚಿಕೆಯಾಗುತ್ತಿತ್ತು. ಅನಾರೋಗ್ಯದ ವಿಚಾರದಲ್ಲಾಗಲಿ, ಮದುವೆ ಮುಂಜಿಯಂತಹ ಕಾರ್ಯಗಳಲ್ಲಿ, ಸ್ತ್ರೀಯರ ಬಾಣಂತನ, ಮಕ್ಕಳನ್ನು ಲಾಲನೆ ಪಾಲನೆ ಮಾಡುವ ಕೆಲಸಗಳಲ್ಲಿ ಪರಸ್ಪರ ಸಹಕಾರವಿರುತ್ತಿದ್ದರಿಂದ ಯಾರ ಮೇಲೂ ಹೆಚ್ಚಿನ ಒತ್ತಡ ಬೀಳುತ್ತಿರಲಿಲ್ಲ. ಇಲ್ಲಿ ಒತ್ತಡ ಜಾಸ್ತಿ. ಅದರಲ್ಲೂ ಇತ್ತೀಚೆಗಂತೂ ತಂದೆ ತಾಯಿ ಒಂದು ಕಡೆಯಾದರೆ ಮಕ್ಕಳ ಸಂಸಾರ ಇನ್ನೊಂದು ಕಡೆ. ಇನ್ನು ಕೆಲವರದ್ದಂತೂ ವಯಸ್ಸಾದ ತಂದೆತಾಯಿ ಹಳ್ಳಿಯಲ್ಲಿ ಜಮೀನು ಮನೆಯ ಜೊತೆ, ಮಕ್ಕಳ ಸಂಸಾರ ನಗರದಲ್ಲಿ ಅಥವಾ ಹೊರ ದೇಶದಲ್ಲಿ. ಎರಡೂ ದೋಣಿಯ ಮೇಲೆ ಒಂದೊಂದು ಕಾಲಿಟ್ಟು ಸಂಸಾರವೆಂಬ ಸಾಗರದಲ್ಲಿ ಮುನ್ನಡೆಯಬೇಕಿದೆ. ಇದು ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿದೆ.
ಇನ್ನು ಈ ಮಕ್ಕಳ ವಿಚಾರಕ್ಕೆ ಬಂದಾಗ ಹಿಂದೆಲ್ಲಾ ಗಂಡ-ಹೆಂಡತಿ ಒಂದು ಜೋಡಿಗೆ ಎರಡಕ್ಕಿಂತ ಹೆಚ್ಚು ಮಕ್ಕಳಿರುತ್ತಿದ್ದರು. ಗಂಡನ ಆದಾಯದ ಮೇಲೆ ಕುಟುಂಬದ ನಿರ್ವಹಣೆ ನಡೆಯುತ್ತಿತ್ತು. ಮನೆಯಲ್ಲಿ ಆರ್ಥಿಕ ಸಬಲತೆ ಇರುತ್ತಿರಲಿಲ್ಲ. ಮಕ್ಕಳು ಹೀಗೇ ಬೇಳೆಯಬೇಕು ಇದನ್ನೇ ಮಾಡಬೇಕು ಇಷ್ಟೇ ಮಾಡಬೇಕು ಎಂಬ ಉದ್ದೇಶವಿರುತ್ತಿರಲಿಲ್ಲ. ನಿರೀಕ್ಷೆಯೂ ಇರುತ್ತಿರಲಿಲ್ಲ. ಈಗ ಹಾಗಿಲ್ಲ. ಗಂಡ-ಹೆಂಡತಿ ಇಬ್ಬರೂ ಸಮನಾಗೇ ದುಡಿಯುತ್ತಾರೆ. ಹಳ್ಳಿಗಳಲ್ಲೂ ಕೂಡ ಹೆಂಗಸರು ಸ್ವಾವಲಂಬಿ ಬದುಕು ನಡೆಸುತ್ತಾರೆ. ಇದರಿಂದ ಆರ್ಥಿಕವಾಗಿ ಅಷ್ಟೇನೂ ತೊಂದರೆ ಇರಲಾರದು. ಒಮ್ಮೆ ಹಾಗಿದ್ದರೂ ಮಕ್ಕಳಿಗೆ ಆ ತೊಂದರೆ ತಿಳಿಯದಂತೆ ನೋಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಒಂದು ಅಥವಾ ಎರಡು ಮಕ್ಕಳು ಇರುವುದರಿಂದ ಅವರ ಬಗ್ಗೆ ಅತಿಯಾದ ಕಾಳಜಿ, ಅವರಿಗೆ ಬೇಕಾಗಿದ್ದೆಲ್ಲವನ್ನೂ ಕೊಡಿಸುವುದು, ಅವರು ಹೇಳಿದಂತೆ ಕೇಳುವುದು ಹೆಚ್ಚಾಗಿರುತ್ತದೆ. ಅತಿಯಾದ ಪ್ರೀತಿ, ಅತಿಯಾದ ನಂಬಿಕೆ ಮಕ್ಕಳಿಗೆ ಸ್ವಾತಂತ್ರ್ಯದ ದುರುಪಯೋಗ ಮಾಡಿಕೊಳ್ಳಲು ಅವಕಾಶವಾದಂತಾಗಿದೆ. ತಂದೆ-ತಾಯಿಗಳಿಗೋ ತಾವು ದುಡಿಯುತ್ತಿರುವುದೇ ಮಕ್ಕಳಿಗೋಸ್ಕರ, ಅವರು ಚೆನ್ನಾಗಿರುವುದಕ್ಕೆಂದೇ ತಾವು ಕಷ್ಟಪಡುತ್ತಿರುವುದು ಎಂಬ ಭಾವನೆ. ಮಕ್ಕಳಿಗೆ ಕಷ್ಟ ನೋವು, ಬಡತನ ಇದ್ಯಾವುದೂ ತಿಳಿಯದಂತೆ ಬೆಳೆಸಬೇಕು ಎನ್ನುವ ಆಸೆ. ಪೋಷಕರ ಇಂಥಹ ಆಸೆಗಳೇ ಮಕ್ಕಳಿಗೆ ಯಾವುದೇ ರೀತಿಯ ಹೆದರಿಕೆ ಇಲ್ಲದಂತೆ ಬೆಳೆಯಲು ಅವಕಾಶವಾಗಿದೆ. ಪರಿಣಾಮ ಎಷ್ಟೋ ಮಕ್ಕಳು ಹಟ, ಅಹಂಕಾರ, ಸಿಟ್ಟು, ಇವುಗಳನ್ನು ರೂಢಿಸಿಕೊಂಡಿದ್ದಾರೆ. ಹೊಂದಾಣಿಕೆಯ ಸ್ವಭಾವ ತುಂಬಾ ಕಡಿಮೆಯಾಗಿದೆ. ಇತ್ತೀಚೆಗೆ ಟೀವಿ,ಮೊಬೈಲ್, ಕಂಪ್ಯೂಟರ್ ಇಂಟರ್ನೆಟ್ ಗಳಂತಹ ಆಧುನಿಕ ತಂತ್ರಜ್ಞಾನಗಳು ಬಂದಾಗಿನಿಂದ ಮಕ್ಕಳು ಮುಂಜಾನೆ ಬೇಗ ಏಳುವುದು. ಹೂ ಕೊಯ್ಯುವುದು,ದೇವರ ಪೂಜೆ ಪುನಸ್ಕಾರ ಮಾಡುವುದು, ತಂದತಾಯಿಗಳ ಕೆಲಸದಲ್ಲಿ ನೆರವಾಗವುದು, ನೆಂಟರಿಷ್ಟರು ಬಂದರೆ ಅವರನ್ನು ಮಾತನಾಡಿಸುವುದು, ಅವರ ಜೊತೆ ಬೆರೆಯುವುದು ಎಲ್ಲವೂ ತೀರಾ ಕಡಿಮೆಯಾಗಿದೆ. ಇದರಲ್ಲಿ ನಗರ ಹಳ್ಳಿ ಎಂಬ ಬೇಧವೇ ಇಲ್ಲ. ಹಳ್ಳಿಗಳಲ್ಲೂ ಸಹ ಹಿಂದೆಲ್ಲಾ ಸ್ಕೂಲಿಗೆ ಹೋಗುವಾಗ ಕಾಲ್ನಡಿಗೆಯಲ್ಲೇ ಹೋಗುವುದಿತ್ತು. ಆಗೆಲ್ಲಾ ಗುಡ್ಡ-ಬೆಟ್ಟ, ತೋಟ, ಗದ್ದೆ ಎಂದು ಕಾಲ್ದಾರಿಯಲ್ಲಿ ಹೋಗುತ್ತಿದ್ದರಿಂದ ಮಕ್ಕಳಿಗೆ ಮನೆಯ ಸುತ್ತ ಮುತ್ತಲಿನ ಗಿಡ ಮರಗಳು ತೋಟ-ಗದ್ದೆಗಳ ಬಗ್ಗೆ ಪರಿಚಯ, ದನ,ಕರು,ಬೆಕ್ಕು ನಾಯಿ ಇತ್ಯಾದಿ ಪ್ರಾಣಿಗಳ ಪರಿಚಯ, ಎಲ್ಲವೂ ಸಹಜವಾಗೇ ಆಗುತ್ತಿತ್ತು. ಈಗ ನಗರಗಳಲ್ಲಿ ಇರುವಂತೆ ಹಳ್ಳಿಗಳಲ್ಲೂ ಕಾರೋ ಬೈಕೋ, ಸ್ಕೂಲಿನ ಬಸ್ಸೋ ಬಂದು ಸ್ಕೂಲಿಗೆ ಕರೆದುಕೊಂಡು ಹೋಗುವ ಪರಿಪಾಠ ಶುರುವಾಗಿದ್ದರಿಂದ ಇವರಿಗೆ ಮನೆಯಲ್ಲೇ ಇರುವ ಹಲಸು ಮಾವು, ಹಣ್ಣುಗಳ ಮರವೂ ಗೊತ್ತಿರುವುದಿಲ್ಲ, ತೋಟದಲ್ಲಿ ಏನು ಬೆಳೆಯುತ್ತಾರೆ, ಗದ್ದೆಯಲ್ಲಿ ಏನು ಬಿತ್ತುತ್ತಾರೆ ಎಂದೂ ತಿಳಿಯದೇ ಇರುವುದು ಹಾಸ್ಯಾಸ್ಪದ ವಿಷಯವಾಗಿದೆ. ಹಾಗಂತ ಈಗಿನ ಮಕ್ಕಳು ಯಾರೂ ದಡ್ಡರಲ್ಲ. ಎಲ್ಲರೂ ಒಬ್ಬರಿಗಿಂತ ಒಬ್ಬರು ಚುರುಕಾಗಿರುತ್ತಾರೆ. ಆದರೆ ಇವರೆಲ್ಲರೂ ಬೌದ್ದಿಕವಾಗಿ ಚುರುಕಾಗಿದ್ದಾರೆಯೇ ಹೊರತೂ ದೈಹಿಕವಾಗಿ ಗಟ್ಟಿಯಾಗಿರುವವರು ತುಂಬಾ ಕಡಿಮೆ. ಇದಕ್ಕೆಲ್ಲಾ ಮುಖ್ಯ ಕಾರಣ ಆಧುನಿಕ ವ್ಯವಸ್ಥೆಗಳು ಮತ್ತು ಬದಲಾದ ಜೀವನ ಶೈಲಿಗಳು. ನಮ್ಮ ಆಸೆ, ನಿರೀಕ್ಷೆಗಳು.
ಕೇವಲ ಅವಿಭಕ್ತ ಕುಟುಂಬದಲ್ಲಿ ಬೆಳೆದವರು ಮಾತ್ರ ಹೊಂದಾಣಿಕೆ ಸ್ವಭಾವವವನ್ನು ಕಲಿತಿರುತ್ತಾರೆ, ಸಂಪ್ರದಾಯ ಶಾಸ್ತ್ರ, ಸಂಸ್ಕಾರಗಳನ್ನು ಅರಿತಿರುತ್ತಾರೆ ಎನ್ನುವುದು ನಮ್ಮ ತಪ್ಪು ಗೃಹಿಕೆ. ಚಿಕ್ಕ ಕುಟುಂಬದಲ್ಲೂ ಒಳ್ಳೆಯ ಸಂಸ್ಕಾರ ಸಂಪ್ರದಾಯಗಳನ್ನು ಕಲಿತವರು ಬೇಕಾದಷ್ಟು ಮಕ್ಕಳಿದ್ದಾರೆ. ಸಂಸ್ಕಾರ ಕಲಿಯದವರೂ ಅವಿಭಕ್ತ ಮತ್ತು ವಿಭಕ್ತ ಕುಟುಂಬ ಎರಡರಲ್ಲೂ ಇದ್ದಾರೆ. ಸಂಸ್ಕಾರ ಸಂಸ್ಕೃತಿಗೆ ಬಡವ- ಶ್ರೀಮಂತ, ಕೂಡು ಕುಟುಂಬ ಚಿಕ್ಕ ಕುಟುಂಬ ಎನ್ನುವ ಹಂಗಿಲ್ಲ. ಆ ಕುಟುಂಬದ ಹಿರಿಯರು ಅಥವಾ ಪೋಷಕರು, ತಂದೆ-ತಾಯಿಗಳು ಸಂಸ್ಕಾರವಂತರಾಗಿರಬೇಕು. ಈ ಮಕ್ಕಳು ಮಣ್ಣಿನ ಮುದ್ದೆಗಳಂತೆ. ನಾವು ಅವರಿಗೆ ಯಾವ ವಾತಾವರಣದಲ್ಲಿ ಬೆಳೆಸುತ್ತೇವೆ, ಕಲಿಸುತ್ತೇವೆ ಹಾಗೆ ಬೆಳೆಯುತ್ತಾರೆ. ಆಶ್ರಮದಲ್ಲಿ ಬೆಳೆಯುವ ಮತ್ತು ಕಟುಕನ ಮನೆಯಲ್ಲಿ ಬೆಳೆಯುವ ಗಿಳಿಗಳಿಗೆ ಹೇಗೆ ವ್ಯತ್ಯಾಸವಿರುತ್ತದೆಯೋ ಹಾಗೇ ಈ ಮಕ್ಕಳು. ಸಂಸ್ಕಾರ ಎನ್ನುವುದು ಯಾವ ಕುಟುಂಬ ಎನ್ನುವುದಕ್ಕಿಂತ ನಾವು ಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.
ಯಾವುದೇ ಕುಟುಂಬವಿರಲಿ ಒಂದು ನಿರ್ಧಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಮಾತ್ರ ಸುಂದರವಾಗಿರುತ್ತದೆ. ಇತ್ತೀಚೆಗೆ ಕೆಲವು ಮನೆಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವುದು ಆರ್ಥಿಕ ಸಬಲತೆಗೆ ಅವಶ್ಯವಾಗಿದ್ದರಿಂದ ಮಕ್ಕಳು ತಂದೆ-ತಾಯಿಯರ ಪ್ರೀತಿ ಅಕ್ಕರೆಯಿಂದ ವಂಚಿತರಾಗುತ್ತಿದ್ದಾರೆ. ಈ ಮಕ್ಕಳು ಏನು ಮಾಡುತ್ತಾರೆ, ಎಲ್ಲಿ ಹೋಗುತ್ತಾರೆ ಎನ್ನುವುದು ತಂದೆ-ತಾಯಿಯರಿಗೇ ತಿಳಿದಿರುವುದಿಲ್ಲ. ಒಳ್ಳೆಯ ಸಂಸ್ಕಾರ ಕೊಡುವುದಕ್ಕಾಗಲಿ, ಅವರ ಬಗ್ಗೆ ಕಾಳಜಿ ಮಾಡುವುದಕ್ಕಾಗಲಿ ಸಮಯವಿರುವುದಿಲ್ಲ. ಓದಿಸುವುದಕ್ಕಾಗಲಿ, ಕಥೆ ಹೇಳುವುದಕ್ಕಾಗಲಿ, ಬಾಯಿಪಾಠ ಮಾಡಿಸುವುದಕ್ಕಾಗಲಿ ಆಟ ಆಡಿಸುವುದಕ್ಕಾಗಲಿ ಯಾವುದಕ್ಕೂ ಯಾರಿಗೂ ಪುರುಷೊತ್ತಿಲ್ಲ. ತರಾತುರಿಯ ಜೀವನದ ನಡುವೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವುದಕ್ಕೂ ವೇಳೆಯಿಲ್ಲದೆ ಎಲ್ಲರೂ ಯಂತ್ರಗಳಾಗುತ್ತಿದ್ದಾರೆ ಎನ್ನವುದು ವಿಷಾದಕರ ವಿಷಯ. ಇನ್ನೂ ಕೆಲವರು ಅನುಕೂಲವಿದ್ದವರು ಮಕ್ಕಳನ್ನು ಸಂಗೀತ ಡಾನ್ಸ್, ಜಿಮ್, ಟ್ಯೂಷನ್, ಎಂದು ಇದ್ದಬಿದ್ದ ಎಲ್ಲಾ ಕ್ಲಾಸುಗಳಿಗೂ ಕಳುಹಿಸುತ್ತಾರೆ. ಒಟ್ಟಿನಲ್ಲಿ ಈಗಿನ ಬದುಕು ಒಂದು ರೀತಿಯ ಸಂತೆಯ ಜೀವನ. ಸಮ್ಮಿಶ್ರವಾಗಿದೆ. ಇಲ್ಲಿ ಎಲ್ಲವೂ ಇದೆ. ಸುಲಭವಾಗಿ ಸಿಗುತ್ತದೆ. ಆದರೆ ಅದರಲ್ಲಿ ನಮಗೆ ಬೇಕಾಗಿದ್ದನ್ನು ಆರಿಸಿಕೊಂಡು ಬದುಕಬೇಕು. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವುದು ನಮಗೆ ತಿಳಿದಿರಬೇಕು ಅಷ್ಟೆ.
ಕುಟುಂಬವೆಂದರೆ ಅವಲಂಬನೆ ಎಂಬರ್ಥವಲ್ಲ. ಅದು ನಾವು ರೂಪಿಸಿಕೊಂಡ ಸಹಭಾಗಿತ್ವ ಎನ್ನಬಹುದು. ಇಬ್ಬರೂ ಸ್ವಇಚ್ಚೆಯಿಂದ ಒಟ್ಟಾಗಿ ಒಂದೇ ದಿಕ್ಕಿನಲ್ಲಿ ಹೋಗುತ್ತಿದ್ದರೆ ಮಾತ್ರ ಸಹಭಾಗಿತ್ವ ಎನ್ನುವುದು ಅಮೂಲ್ಯವಾಗಿರುತ್ತದೆ. ಮನೆಯಲ್ಲಿದ್ದ ಸದಸ್ಯರು ಅತಿಯಾದ ನಿರೀಕ್ಷೆ, ಆಸೆಗಳನ್ನು ವ್ಯಕ್ತಪಡಿಸದೇ ಪರಸ್ಪರ ಯೋಗಕ್ಷೇಮದ ಬಗ್ಗೆ ಕಳಕಳಿಯನ್ನು ಹೊಂದಿದ್ದರೆ, ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡಿದ್ದರೆ ಈ ಹೊಂದಾಣಿಕೆ ಶಬ್ದವು ಅರ್ಥಪೂರ್ಣವಾಗಿರುತ್ತದೆ. ಬದುಕು ಸುಂದರವಾಗಿರುತ್ತದೆ.
ಒಟ್ಟಿನಲ್ಲಿ ಬದಲಾವಣೆ ಎನ್ನುವುದು ಜಗದ ನಿಯಮ. ಕಾಲಚಕ್ರ ಬದಲಾದಂತೆ ನಾವೂ ಬದಲಾಗುತ್ತೇವೆ. ಅದನ್ನು ನಾವು ಒಪ್ಪಿಕೊಳ್ಳಲೇಬೇಕು.
–ಕಲ್ಪನಾ ಪ್ರಭಾಕರ ಹೆಗಡೆ