ಬಾಡುತಿನಿ ಸಸ್ಯಗಳು ಮತ್ತು ಅವುಗಳ ಬೇಟೆಯೊಂದಿಗಿನ ಸಂಬಂಧ: ಗುಗ್ಗಳದ ಗೋವರ್ಧನ ಯಾದವ್‌, ರಮೇಶ ಪೂಜಾರ, ಬಸವರಾಜ ಸಾಲಿಯವರ್

ಪರಿಚಯ
ಸಸ್ಯಗಳು ಇಂಗಾಲದ ಡೈ ಆಕ್ಸೈಡ್, ನೀರು ಮತ್ತು ಸೂರ್ಯನ ಬೆಳಕನ್ನು ಬಳಸಿಕೊಂಡುಎಲೆಗಳ ಪತ್ರಹರಿತ್ತಿನ ಸಹಾಯದಿಂದ ಆಹಾರವನ್ನು ತಯಾರಿಸುವ “ಬೆಳಕಿನಡುಗೆ” ಎಂಬ ವಿಶಿಶ್ಟ ಸಾಮರ್ಥ್ಯವನ್ನು ಹೊಂದಿವೆ. ಇದರ ಜೊತೆಗೆ ಬೇರಿನ ಏರ್ಪಾಡಿನ ಮೂಲಕ ನೀರು ಮತ್ತು ಖನಿಜಗಳನ್ನು ಹೀರಿಕೊಳ್ಳುತ್ತವೆ. ಆದರೆ, ಪರಾವಲಂಬಿ (Parasitic) ಮತ್ತು ಬಾಡುತಿನಿ ಸಸ್ಯಗಳಂತಹ (Carnivorous plants) ಕೆಲವು ಸಸ್ಯಗಳು ಈ ಮೂಲ ಗುಣಗಳಿಂದ ಬೇರ್ಪಟ್ಟು, ಆಹಾರ ಮತ್ತು ಖನಿಜಗಳಿಗೋಸ್ಕರ ಬೇರೆ ಜೀವಿಗಳ ಮೇಲೆ ಅವಲಂಬಿತವಾಗಿರುತ್ತವೆ. ಪರಾವಲಂಬಿ ಜೀವಿಗಳು ತಮ್ಮ ನೀರು, ಆಹಾರ ಅಥವಾ ಖನಿಜಗಳು ಅಥವಾ ಈ ಎಲ್ಲವುಗಳಿಗೋಸ್ಕರ ಬೇರೆ ಸಸ್ಯಗಳ ಮೇಲೆ ಅವಲಂಬಿತವಾಗಿದ್ದರೆ, ಬಾಡುತಿನಿ ಸಸ್ಯಗಳು ಮುಖ್ಯವಾಗಿ ಕೀಟಗಳು ಮತ್ತು ಇತರೆ ಚಿಕ್ಕ ಪ್ರಾಣಿಗಳ ಮೇಲೆ ಮುಖ್ಯವಾಗಿ ಖನಿಜಗಳಿಗಾಗಿ ಅವಲಂಬಿತವಾಗಿವೆ. ಈ ಬಾಡುತಿನಿಗಳು ಜವುಗು ಮತ್ತು ಸವಳು ಮಣ್ಣು ಹಾಗೂ ಮರಳು-ಮಿಶ್ರಿತ ಮಣ್ಣಿನಂತಹಕಡಿಮೆ-ಸತ್ವವಿರುವ ಪ್ರದೇಶಗಳಲ್ಲಿ ಬೆಳೆಯುತ್ತವೆ. ಹೀಗಾಗಿ, ಸಾರಜನಕ ಮತ್ತು ಇತರೆ ಖನಿಜಗಳ ಕೊರತೆಯನ್ನು ನೀಗಿಸಲು ಇರುವೆ, ಜೀರುಂಡೆ ಮತ್ತು ಚಿಟ್ಟೆಯಂತಹ ಚಿಕ್ಕ ಕೀಟಗಳನ್ನು ತಮ್ಮ ಎಲೆಗಳಿಂದ ಮಾರ್ಪಾಡಾದ ವಿಶೇಷ ಬಲೆಗಳಿಂದ (Trap) ಹಿಡಿದು, ಜೀರ್ಣಿಸಿಕೊಂಡು ಅವುಗಳ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಈ ತರಹ ಸುಮಾರು 810 ಬಾಡುತಿನಿ ಸಸ್ಯಪ್ರಬೇಧಗಳು ಕಂಡುಬಂದಿವೆ. ಅವುಗಳಲ್ಲಿ, ಏಳು ಸಸ್ಯ ಕುಟುಂಬಕ್ಕೆ ಸೇರಿದ, ಡ್ರಾಸೆರಾ(Drosera), ಡಯೋನಿಯಾ(Dionaea), ಡ್ರಾಸೋಫಿಲ್ಲಮ್(Drosophyllum),ನೆಪೆಂಥಿಸ್(Nepenthes), ಹೀಲಿಯಾಂಫೋರಾ(Heliamphora), ಸರಾಸೀನಿಯಾ(Sarracenia) ಮತ್ತು ಉಟ್ರಿಕುಲೇರಿಯಾ(Utricularia)ದಂತಹ 15 ಜಾತಿಗಳು ಪ್ರಮುಖವಾದವು.

ಬಾಡುತಿನಿ ಸಸ್ಯಗಳೆಂದರೆ ಯಾವುವು?
ಒಂದು ಸಸ್ಯವನ್ನು ಬಾಡುತಿನಿ ಎಂದು ಕರೆಯಬೇಕೆಂದರೆ ಅದು ಈ ಮುಂದಿನ ಗುಣಗಳನ್ನು ಹೊಂದಿರಬೇಕಾಗುತ್ತದೆ. ಅವುಗಳೆಂದರೆ: ಬೇಟೆಯನ್ನು ಹಿಡಿಯಲು ಎಲೆಗಳಿಂದ ಮಾರ್ಪಾಡಾದ ಬಲೆಯಿರಬೇಕು; ಹಿಡಿದ ಬೇಟೆಯನ್ನು ಕೊಂದು ಜೀರ್ಣಿಸಿಕೊಳ್ಳಬೇಕು; ಬೇಟೆಯಿಂದ ಪೋಷಕಾಂಶಗಳನ್ನು ಹೀರಿಕೊಂಡು ತನ್ನ ಬೆಳವಣಿಗೆಯಲ್ಲಿ ಬಳಸಿಕೊಳ್ಳಬೇಕು. ಈ ಎಲ್ಲಾ ಲಕ್ಷಣಗಳಿದ್ದರೆ ಅಂತಹವುಗಳನ್ನು ನೆರೆಬಾಡುತಿನಿಗಳು (Holocarnivorous plant) ಎಂದು ಕರೆಯಲಾಗುತ್ತದೆ ಮತ್ತು ಡ್ರಾಸೆರಾ ಹಾಗೂ ನೆಪೆಂಥಿಸ್ ನಂತಹ ಸಸ್ಯಗಳು ಈ ಗುಂಪಿಗೆ ಸೇರುತ್ತವೆ. ಆದರೆ, ಕೆಲವೊಂದು ಸಸ್ಯಗಳಿಗೆ ಬೇಟೆಯನ್ನು ಹಿಡಿದು ಕೊಂದರೂ, ಅವುಗಳ ಜೀರ್ಣಕ್ರಿಯೆಗೆ ಬೇಕಾದ ಕಿಣ್ವ (Enzymes)ತಯಾರುಮಾಡಲಾಗುವುದಿಲ್ಲ, ಹಾಗಾಗಿ ಅವು ಬ್ಯಾಕ್ಟೀರಿಯಾ, ಶಿಲೀಂದ್ರ,ಆದಿಮಜೀವಿ (Protozoan) ಅಥವಾ ಕೀಲುಕಾಲುಪ್ರಾಣಿ (Arthropod) ಗಳಂತಹ ಜೀವಿಗಳಮೇಲೆ ಅವಲಂಬಿತವಾಗಿರುತ್ತವೆ. ಅಂತಹವುಗಳನ್ನು ಅರೆಬಾಡುತಿನಿಗಳು (Hemicarnivorous plant) ಎನ್ನಲಾಗುತ್ತದೆ ಮತ್ತು ಹೀಲಿಯಾಂಫೋರಾ ಪ್ರಬೇಧಗಳು ಈ ಗುಂಪಿಗೆ ಸೇರುತ್ತವೆ.

ಬೇಟೆಗಳಿಂದ ಅವು ಏನನ್ನು ಪಡೆಯುತ್ತವೆ?
ಎಲ್ಲಾ ಬಾಡುತಿನಿ ಸಸ್ಯಗಳೂ ಬೆಳಕಿನಡುಗೆಯ ಮೂಲಕ ತಮ್ಮ ಇಂಗಾಲದ ಹಾಗೂ ಶಕ್ತಿಯ ಅಗತ್ಯವನ್ನು ಪೂರೈಸಿಕೊಳ್ಳುತ್ತವೆ ಮತ್ತು ತಮ್ಮ ಖನಿಜಗಳ ಅಗತ್ಯದ ಒಂದಿಷ್ಡು ಪಾಲನ್ನು ಬೇಟೆಗಳಿಂದ ಪಡೆಯುತ್ತವೆ. ಆದರೆ, ಕೆಲವು ಸಸ್ಯಗಳು – ಮುಖ್ಯವಾಗಿ ನೀರುಬಾಡುತಿನಿಗಳು –ಮಾತ್ರ ಬೇಟೆಗಳಿಂದ ಖನಿಜಗಳ ಜೊತೆಗೆ ತಮ್ಮ ಇಂಗಾಲದ ಮೂಲವನ್ನೂ ಪಡೆಯುತ್ತವೆ. ಅವುಗಳನ್ನು ಮಿಕ್ಸೋಟ್ರೋಫ್ ಎನ್ನಲಾಗುತ್ತದೆ.ಇಲ್ಲಿಯವರೆಗಿನ ಅರಕೆಗಳು ಕಂಡುಕೊಂಡದ್ದೇನೆಂದರೆ, ಬಾಡುತಿನಿ ಸಸ್ಯಗಳು ದುರ್ಬಲ ಬೇರುಗಳನ್ನು ಹೊಂದಿರುತ್ತವೆ (ಉಟ್ರಿಕುಲೇರಿಯಾದಂತಹ ಸಸ್ಯಗಳಲ್ಲಿ ಬೇರುಗಳೇ ಇರುವುದಿಲ್ಲ) ಮತ್ತು ಇದರಿಂದ ಖನಿಜಗಳ ಹೀರಿಕೊಳ್ಳುವಿಕೆಯು ತಗ್ಗುತ್ತದೆ.ಈ ಸಮಸ್ಯೆಯನ್ನು ಸತ್ವವಿಲ್ಲದ ಮಣ್ಣು ಮತ್ತಷ್ಟೂ ಉಲ್ಬಣಗೊಳಿಸುತ್ತದೆ. ಆದ್ದರಿಂದ ತಮ್ಮ ಸಾರಜನಕ ಹಾಗೂ ಇತರೆ ಹಿರಿ-ಖನಿಜಗಳಾದ (Macronutrients) ರಂಜಕ, ಪೊಟ್ಯಾಶಿಯಮ್, ಕ್ಯಾಲ್ಸಿಯಮ್ ಮತ್ತು ಮೆಗ್ನೇಷಿಯಮ್ ಕೊರತೆಯನ್ನು ತಮ್ಮ ಬೇಟೆಗಳ ಮೂಲಕ ನೆರವೇರಿಸಿಕೊಳ್ಳುತ್ತವೆ. ತಮ್ಮ ಎಲೆ ಮಾರ್ಪಾಡು ಬಲೆಗಳಿಂದ ಸಿಗುವ ಖನಿಜಗಳು ಬಾಡುತಿನಿ ಸಸ್ಯಗಳಿಗೆ ಮುಖ್ಯವಾದರೂ,ಇದು ಬೇರುಹೀರಿಕೆಗೆ ಬೆಂಬಲವಾಗಿರುತ್ತದೆಯಷ್ಟೇ. ಕೆಲವು ಬೇರುಗಳೇ ಇಲ್ಲದ ನೀರುಬಾಡುತಿನಿ ಸಸ್ಯಗಳನ್ನು ಹೊರತುಪಡಿಸಿ, ಉಳಿದೆಲ್ಲವುಗಳೂ ಈ ಮೂಲದಿಂದ ಖನಿಜಗಳು ಸಿಗದಿದ್ದರೂ ಬದುಕುತ್ತವೆ.

ಬೇಟೆಗಳನ್ನು ಸೆಳೆಯಲು ಅನುಸರಿಸುವ ತಂತ್ರಗಳು
ಬಾಡುತಿನಿ ಸಸ್ಯಗಳು ಬೇಟೆಯನ್ನು ಬಲೆಯ ಕಡೆಗೆ ಸೆಳೆಯಲು ಹಲವಾರು ತಂತ್ರಗಳನ್ನು ಅನುಸರಿಸುತ್ತವೆ.ಜೆನ್ಲೀಸಿಯಾ(Genlisea) ಮತ್ತು ಉಟ್ರಿಕುಲೇರಿಯಾದಂತಹ ನೀರುಬಾಡುತಿನಿಗಳಲ್ಲಿ ಬೇಟೆಯು ಬಲೆಯ ಹತ್ತಿರ ಬರುವುದು ಪೂರ್ತಿ ಆಕಸ್ಮಿಕವಾದರೂ ನೆಲಬಾಡುತಿನಿಗಳು ಅವುಗಳನ್ನು ಸೆಳೆಯಲು ಬಹುದೊಡ್ಡ ಹಲತನವನ್ನು ತೋರಿಸುತ್ತವೆ. ಈ ತಂತ್ರಗಳನ್ನು ಪ್ರಮುಖವಾಗಿ ಮೂರು ವಿಧಗಳಾಗಿ ಬೇರ್ಪಡಿಸಬಹುದು, ಅವುಗಳೆಂದರೆ: 1. ಕಾಣಬಲ್ಲ (Visual) ಎಬ್ಬಿಸುಗೆ, 2. ವಾಸನೆಯ (Olfactory) ಎಬ್ಬಿಸುಗೆ ಮತ್ತು 3. ಸವಿಕುಡಿಗೆಯ (Nectar) ಸಿಗುವಿಕೆ.

ಕಾಣಬಲ್ಲ ಎಬ್ಬಿಸುಗೆಯು ಹಗಲುಬೆಳಕಿನಲ್ಲಿ ಬೇಟೆಯನ್ನು ಬಲೆಯತ್ತ ಸೆಳೆಯುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಡ್ರಾಸೆರಾ ಮತ್ತು ನೆಪೆಂಥಿಸ್ ಪ್ರಬೇಧಗಳು ಸೇರಿದಂತೆ ಹಲವಾರು ಸಸ್ಯಗಳಲ್ಲಿ ಬಲೆಗಳು ಗಾಢ ಕೆಂಪುಬಣ್ಣದಿಂದ ಕೂಡಿರುತ್ತವೆ ಮತ್ತು ಬಣ್ಣದ ತೀವ್ರತೆಯು ಬಲೆಯ ಬೇಟೆಯನ್ನು ಹಿಡಿಯುವ ಸಾಮರ್ಥ್ಯದ ದಕ್ಷತೆಗೆ ನೇರಹೊಂದಳತೆಯಲ್ಲಿರುತ್ತದೆ.ಡ್ರಾಸೆರಾದಂತಹ ಕೆಲವು ಪ್ರಬೇಧಗಳ ಬಲೆಗಳಲ್ಲಿ ಅಂಟುರಸ ಸುರಿಗೆಗಳು (Sticky gland)ಮತ್ತು ಹೊಳೆರಸಗಳು (Shiny fluid) ಸೂರ್ಯನ ಬೆಳಕಿಗೆ ಹೊಳೆದು ಕೀಟಗಳನ್ನು ಸೆಳೆಯುತ್ತವೆ ಮತ್ತು ಗಟ್ಟಿಯಾಗಿ ಅಂಟಿಕೊಳ್ಳುವಂತೆ ಮಾಡಿ ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಇನ್ನೊಂದು ಬಗೆಯ ಮಾರ್ಪಾಡೆಂದರೆ, ಹೂಜಿಯಂತಹ ಬಲೆಯ (Pitcher trap)ಬುಡದಲ್ಲಿ ಪಾರದರ್ಶಕ ಜಾಗಗಳನ್ನು ರಚಿಸಿಕೊಂಡಿರುತ್ತವೆ ಮತ್ತು ಬೇಟೆಗೆ ಅದು ಹೊರಹೋಗುವ ದಾರಿಯಂತೆ ಕಾಣುವುದರಿಂದ ಅದರ ಮೂಲಕ ಸಾಗಲು ಪ್ರಯತ್ನಿಸಿ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ.

ವಾಸನೆಯ ಎಬ್ಬಿಸುಗೆಯಲ್ಲಿ ಸಸ್ಯಗಳ ಬಲೆಗಳು ಹಲವಾರು ರೀತಿಯ ವಾಸನೆಯುಕ್ತ ಆವಿಯಾಗುವ ರಾಸಾಯನಿಕಗಳನ್ನು (Volatile chemicals) ಬಿಡುಗಡೆ ಮಾಡುತ್ತವೆ.ಈ ರಾಸಾಯನಿಕಗಳು ಹೂವಿನ ಅಥವಾ ಹಣ್ಣಿನ ಕಂಪನ್ನು ಹೋಲುತ್ತಿರುತ್ತವೆ ಮತ್ತು ಬೇಟೆಯನ್ನು ಸೆಳೆಯುವಲ್ಲಿ ಗೆಲ್ಲುತ್ತವೆ.ನೆಪೆಂಥಿಸ್ ಅಲ್ಬೋಮಾರ್ಜೀನೇಟಾ(Nepenthes albomarginata) ಎನ್ನುವ ಸಸ್ಯದಲ್ಲಿ ಅದರ ಹೂಜಿಯಂತಹ ಬಲೆಯ ಬಾಯಿಯ ಹೊರಭಾಗದ ಕೆಳಗೆ ಬಿಳಿಬಣ್ಣದ ರಚನೆಗಳಿರುತ್ತವೆ ಮತ್ತು ಅವು ಒಂದು ವಿಶಿಶ್ಟವಾದ ವಾಸನೆಯನ್ನು ಹೊರಸೂಸುತ್ತವೆ. ಈ ವಾಸನೆಗೆ ಗೆದ್ದಲುಹುಳದ ಪ್ರಬೇಧವೊಂದು (Hospitalitermessps.) ಆಕರ್ಷಿತವಾಗುತ್ತದೆ. ಒಂದು ವಿಶೇಶವೆಂದರೆ ಆ ಗೆದ್ದಲುಗಳು ಕುರುಡಾಗಿದ್ದು, ಯಾವಾಗ ಹೆಚ್ಚಿನ ಸಂಖ್ಯೆಯಲ್ಲಿ ಬಲೆಯ ಹತ್ತಿರ ಸೇರುತ್ತವೋ, ಆಯತಪ್ಪಿ ಹೂಜಿಯ ಒಳಗೆ ಬೀಳುತ್ತವೆ ಮತ್ತು ಆ ಸಸ್ಯಕ್ಕೆ ಆಹಾರವಾಗುತ್ತವೆ. ಗಮನಿಸಬೇಕಾದ ಅಂಶವೆಂದರೆ, ಕೆಲವೊಂದು ಸಸ್ಯಗಳು ರಾಸಯನಿಕಗಳ ಮೂಲಕ ಕೇವಲ ಬೇಟೆ-ಕೀಟಗಳನ್ನು ಮಾತ್ರ ಸೆಳೆಯುತ್ತವೆ ಮತ್ತು ಪರಾಗಸ್ಪರ್ಶ ಮಾಡುವ ಕೀಟಗಳನ್ನು ಹಿಮ್ಮೆಟ್ಟಿಸುತ್ತವೆ.

ಸವಿಕುಡಿಗೆಯ (Nectar) ಆಮಿಷವು ಸಸ್ಯಗಳು ಬೇಟೆಯ̧ನ್ನು– ಪ್ರಮುಖವಾಗಿ ಇರುವೆಗಳು – ಸೆಳೆಯುವಲ್ಲಿ ಬಳಸುವ ಪ್ರಮುಖ ಚಳಕಗಳಲ್ಲಿ ಒಂದು. ಸಾಮಾನ್ಯವಾಗಿ ಸವಿಕುಡಿಗೆಯು ಬಹುತೇಕ ಎಲ್ಲಾ ಬಾಡುತಿನಿ ಸಸ್ಯಗಳಲ್ಲಿ ಕಂಡುಬರುತ್ತದೆ ಮತ್ತು ಯಾವಾಗಲೂ ಬಲೆಯಹಿಡಿಯುವ-ನೆಲೆಗಳ ಹತ್ತಿರದಲ್ಲಿಯೇ ಕಂಡುಬರುತ್ತದೆ. ಸವಿಕುಡಿಗೆಯನ್ನು ಪಡೆಯಲು ಬರುವ ಕೀಟವು ಈ ಅತೀ ಅಪಾಯಕಾರಿ ಹಿಡಿಯುವ ಜಾಗದ ಹತ್ತಿರ ಹೋಗಲೇಬೇಕಾಗುತ್ತದೆ. ಒಂದು ವೇಳೆ, ಸಾಮಾಜಿಕ ಕೀಟಗಳಾದ ಇರುವೆಗಳಂತಹವುಗಳು ಸವಿಕುಡಿಗೆಯನ್ನು ಪಡೆಯುವಲ್ಲಿ ಗೆದ್ದು, ಬಲೆಯಿಂದ ತಪ್ಪಿಸಿಕೊಂಡು ಹೊರಬಂದರೆ, ತನ್ನ ಕಾಲೋನಿಯಲ್ಲಿರುವ ಇತರೆ ಕೀಟಗಳನ್ನು ಅದರ ಹತ್ತಿರ ಹೋಗಲು ಪ್ರೇರೇಪಿಸುತ್ತದೆ ಮತ್ತು ಇದರಿಂದ ಸಸ್ಯಕ್ಕೆ ಆಹಾರ ಸಿಗುವ ಸಾಧ್ಯತೆ ಮತ್ತೂ ಹೆಚ್ಚುತ್ತದೆ.

ಬಾಡುತಿನಿ ಸಸ್ಯಗಳ ಬೇಟೆಯ ಆಯ್ಕೆ

ಕೆಲವು ಪ್ರಬೇಧಗಳನ್ನು ಹೊರತುಪಡಿಸಿ, ಸಾಮಾನ್ಯವಾಗಿ ಬಾಡುತಿನಿ ಸಸ್ಯಗಳು ತಮ್ಮ ಬೇಟೆಯ ಆಯ್ಕೆಯಲ್ಲಿ ತುಂಬಾ ಕರಾರುವಾಕ್ಕಾಗಿ ವರ್ತಿಸುವುದಿಲ್ಲ. ಬಾಡುತಿನಿ ಸಸ್ಯಗಳು ಬಗೆಬಗೆಯ ಬೇಟೆಗಳನ್ನು ತಿನ್ನುತ್ತವೆಯಾದರೂ ಬೆನ್ನೆಲುಬಿರದ (Invertebrate) ಗುಂಪಿನ ಪ್ರಾಣಿಗಳು ಪ್ರಮುಖ ಬೇಟೆಗಳಾಗಿ ಸೇವೆ ಸಲ್ಲಿಸುತ್ತವೆ. ಅದರಲ್ಲೂ ಕೀಲುಕಾಲುಪ್ರಾಣಿಗಳಾದ (Arthropods) ಇರುವೆಗಳು, ಕೀಟಗಳು ಮತ್ತು ಚಿಟ್ಟೆಗಳು ನೆಲಬಾಡುತಿನಿ ಸಸ್ಯಗಳಿಗೆ ಆಹಾರವಾಗುತ್ತವೆ ಹಾಗೂಉಟ್ರಿಕುಲೇರಿಯಾ ಮತ್ತು ಜೆನ್ಲೀಸಿಯಾದಂತಹ ನೀರುಬಾಡುತಿನಿ ಸಸ್ಯಗಳು ದುಂಡುಹುಳುಗಳು (Nematodes) ಮತ್ತುಆದಿಮಜೀವಿ(Protozoa) ಯಂತಹ ಪ್ರಾಣಿಗಳನ್ನು ಆಹಾರವಾಗಿ ಬಳಸುತ್ತವೆ.ಕೆಲವು ಉಟ್ರಿಕುಲೇರಿಯಾ ಪ್ರಬೇಧಗಳು ದೊಡ್ಡ ಬಲೆ-ಚೀಲಗಳನ್ನು ಹೊಂದಿರುತ್ತವೆ ಮತ್ತು ಅವುಗಳು ಚಿಕ್ಕಗಾತ್ರದ ಮೀನುಗಳು ಮತ್ತು ಗೊದಮೊಟ್ಟೆ(Tadpole)ಗಳನ್ನೂ ತಿನ್ನುವಂತಹ ಸಾಮರ್ಥ್ಯವಿರುತ್ತದೆ. ಕೆಲವು ಸಂಶೋಧನೆಗಳು ನೆಪೆಂಥಿಸ್ ಮತ್ತು ಸರ್ರಾಸೀನಿಯಾ ಪ್ರಬೇಧಗಳ ಹೂಜಿಬಲೆಗಳಲ್ಲಿ ಕಪ್ಪೆ, ಇಲಿ ಮತ್ತು ಹಲ್ಲಿಗಳನ್ನೂ ಗುರುತಿಸಿವೆ. ನೆಪೆಂಥಿಸ್ ಆಂಪುಲ್ಲೇರಿಯಾ(Nepenthes ampullaria)ಎನ್ನುವ ಪ್ರಬೇಧವು, ಬೇರೆ ಸಸ್ಯಗಳ ಎಲೆ ಮತ್ತು ಇತರೆ ಭಾಗಗಳನ್ನು ತನ್ನ ಹೂಜಿಬಲೆಯಲ್ಲಿ ಜೀರ್ಣಿಸಿಕೊಂಡು ತನ್ನ ಖನಿಜ-ಕೊರತೆಯನ್ನು ನೀಗಿಸಿಕೊಳ್ಳುತ್ತದೆ.


ಇತರೆ ಬೇರೆ ಪ್ರಾಣಿಗಳೊಂದಿಗಿನ ಕೂಡುಬಾಳ್ವೆ

ಬಾಡುತಿನಿ ಸಸ್ಯಗಳುಬಹಳಷ್ಟು ಪ್ರಾಣಿಗಳೊಡನೆ ವೈವಿಧ್ಯಮಯವಾದ ಕೂಡುಬಾಳ್ವೆ ವ್ಯವಸ್ಥೆಯನ್ನು (Symbiotic association) ಹೊಂದಿವೆ.ಈ ಕೂಡುಬಾಳ್ವೆಯು ಸಸ್ಯದ ಬೇಟೆಹಿಡಿಯುವಿಕೆಯ ದಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ, ಪೋಷಕಾಂಶಗಳನ್ನು ಪಡೆಯಲು ಬೇಟೆಯ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುತ್ತದೆ ಅಥವಾ ಇಲ್ಲವಾಗಿಸುತ್ತದೆ. ಮುಂದುವರೆದು, ಬೇಟೆಯನ್ನು ಜೀರ್ಣಿಸಿಕೊಳ್ಳಲು ಮತ್ತು ಅದರಿಂದ ಖನಿಜಗಳನ್ನು ಹೀರಿಕೊಳ್ಳಲೂ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯ ಕೂಡುಬಾಳ್ವೆಯಲ್ಲಿ, ಪ್ರಾಣಿಗುಂಪುಗಳಾದ ಆದಿಮಜೀವಿಗಳು, ಬ್ಯಾಕ್ಟೀರಿಯಾ, ಶಿಲೀಂದ್ರಗಳು ಮತ್ತು ಕೆಲವು ಕೀಲುಕಾಲುಪ್ರಾಣಿಗಳು, ಜೀರ್ಣಕ್ರಿಯೆಗೆ ಬೇಕಾದ ಉಪಯುಕ್ತವಾದ ಕಿಣ್ವಗಳನ್ನು ಬಿಡುಗಡೆ ಮಾಡುವುದರ ಮೂಲಕಸಸ್ಯಗಳಿಗೆ ಪೋಷಕಾಂಶಗಳನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತವೆ.ಹೀಲಿಯಾಂಫೋರಾ ಜಾತಿಯ ಪ್ರಬೇಧಗಳು ಈ ತರಹದ ಸಂಬಂಧವನ್ನು ಹೊಂದಿವೆ ಮತ್ತು ಅವುಗಳನ್ನು ಅದಕ್ಕಾಗಿಯೇ ಅರೆಬಾಡುತಿನಿ ಸಸ್ಯಗಳು ಎನ್ನುತ್ತಾರೆ. ಕೆಲವು ನೆಪೆಂಥಿಸ್ ಪ್ರಬೇಧಗಳ ಹೂಜಿಬಲೆಗಳಲ್ಲಿ ಕ್ರಾಬ್-ಸ್ಪೈಡರ್ ಎನ್ನುವ ಜೇಡಗಳು ವಾಸವಾಗಿರುತ್ತವೆ ಮತ್ತು ಅವು ಬೇರೆ ಕೀಟಗಳನ್ನು ಹಿಡಿದು ತಿಂದು ಹೂಜಿಯೊಳಗೆ ಮಲವನ್ನು ಬಿಡುತ್ತದೆ. ನಂತರ, ಅದರಿಂದ ಬಿಡುಗಡೆಯಾಗುವ ಖನಿಜ ಮತ್ತು ಪೋಷಕಾಂಶಗಳನ್ನು ಸಸ್ಯವು ಬಳಸಿಕೊಳ್ಳುತ್ತದೆ.ರೋರಿಡುಲಾ ಗೋರ್ಗೋನಿಯಾಸ್(Roridula gorgonias) ಎನ್ನುವ ಸಸ್ಯ ತನ್ನ ಅಂಟುರಸ ಸುರಿಗೆಗಳು (Sticky gland) ಇರುವಉದ್ದನೆಯ ಬಲೆಯೊಂದಿಗೆಕೀಟಗಳನ್ನು ಹಿಡಿಯುತ್ತದೆ. ಆದರೆ ಅವುಗಳನ್ನು ಪಾಮೇರಿಡಿಯಾ ರೋರಿಡುಲೇ(Pameridea roridulae)ಎನ್ನುವ ತಗಣಿ ಪ್ರಬೇಧವೊಂದು ತಿನ್ನುತ್ತದೆ ಮತ್ತು ಅದು ಹೊರಹಾಕುವ ಮಲದ ಹಿಕ್ಕೆಗಳಿಂದ ಬಿಡುಗಡೆಯಾಗುವ ಪೋಷಕಾಂಶಗಳನ್ನು ಸಸ್ಯವು ಹೀರಿಕೊಳ್ಳುತ್ತದೆ. ಕೆಲವು ಚಿಕ್ಕ ಸಸ್ತನಿ ಇಲಿ (Rattus baluensis) ಮತ್ತು ಮೌಂಟೆನ್ ಶ್ರೆವ್ (Tupaia montana) ಎನ್ನುವ ಪ್ರಬೇಧಗಳು ನೆಪೆಂಥಿಸ್ ರಾಜಾ(Nepenthes rajah), ನೆಪೆಂಥಿಸ್ ಲೋವಿ (N. lowii) ಮತ್ತು ನೆಪೆಂಥಿಸ್ ಮಾಕ್ರೋಫಿಲ್ಲಾ (N. macrophylla) ಎನ್ನುವ ಸಸ್ಯಗಳ ಹೂಜಿಬಲೆಯ ಬಾಯಿಯ ಮುಚ್ಚಳದಲ್ಲಿರುವ ಸವಿಕುಡಿಗೆಯನ್ನು ತಿನ್ನಲು ಬರುತ್ತವೆ. ಆ ಸಮಯದಲ್ಲಿ ಹೂಜಿಯೊಳಗೆ ಮಲವನ್ನು ಬಿಡುತ್ತವೆ ಮತ್ತು ಅದರಿಂದ ಬರುವ ಖನಿಜಗಳು ಸಸ್ಯಗಳ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಇದೇ ತರಹದ ಕೂಡುಬಾಳ್ವೆಯು ಒಂದು ಬಾವಲಿಯ ಪ್ರಬೇಧ (Kerivoula hardwickii) ಮತ್ತು ನೆಪೆಂಥಿಸ್ ಹೆಮ್ಸಲಿಯಾನಾ(N. hemsleyana) ಸಸ್ಯದ ನಡುವೆಯೂ ಕಂಡುಬರುತ್ತದೆ. ಈ ರೀತಿಯಾಗಿ, ಪ್ರಾಣಿಗಳ ಮಲದಿಂದಲೂ ಬಾಡುತಿನಿ ಸಸ್ಯಗಳು ಪೋಷಕಾಂಶಗಳನ್ನು ಪಡೆಯುತ್ತವೆ.

ನೆಪೆಂಥಿಸ್ ಬೈಕಾಲ್ಕರಾಟ (N. bicalcarata) ಎನ್ನುವ ಸಸ್ಯದ್ದು ಒಂದು ವಿಶೇಷತೆಯಿದೆ. ಇದು ಕ್ಯಾಂಪೋನೋಟಸ್ ಸ್ಮಿಟ್ಜಿ(Camponotus schmitzi) ಎನ್ನುವ ಇರುವೆಯೊಂದಿಗೆ ಕೂಡುಬಾಳ್ವೆಯಲ್ಲಿರುತ್ತದೆ. ಈ ಸಂಬಂಧದಲ್ಲಿ ಇರುವೆಯ ಕಾಲೋನಿಗಳು ಸಸ್ಯದ ಹೂಜಿಬಲೆಯಲ್ಲಿ ತಯಾರಾಗುವ ಸವಿಕುಡಿಗೆಯನ್ನು ತಿಂದು ಬದುಕುತ್ತವೆ ಮತ್ತು ಆ ಸಸ್ಯವನ್ನುಒಂದು ಬಗೆಯ ಜೀರುಂಡೆಯ ಪ್ರಬೇಧದಿಂದ ರಕ್ಷಣೆ ಮಾಡುತ್ತದೆ. ಅದರ ಜೊತೆಗೆ ಆ ಸಸ್ಯವು ಬೇರೆ ಕೀಟಗಳನ್ನು ಹಿಡಿದು ತಿಂದ ನಂತರ ಹೂಜಿಯಲ್ಲಿ ಉಳಿಯುವ ಸತ್ತದೇಹಗಳನ್ನು ತಿಂದು ಅಥವಾ ಅವುಗಳನ್ನು ಹೊರಹಾಕುವುದರ ಮೂಲಕ ಹೂಜಿಯನ್ನು ಸ್ವಚ್ಛವಾಗಿಡುತ್ತವೆ. ಇನ್ನೊಂದು ಸಂಬಂಧದಲ್ಲಿ ಹೂವಿನ ನೊಣದ ಪ್ರಬೇಧವು(Toxomerus basalis)ಡ್ರಾಸೆರಾ ಸಸ್ಯವೊಂದರ ಬಲೆಯ ಮೇಲೆ ಕೂತು, ಡ್ರಾಸೆರಾ ಹಿಡಿದುತಿಂದು ಉಳಿದ ಬೇಟೆಯ ಸತ್ತದೇಹವನ್ನು ತಿನ್ನುತ್ತದೆ. ಆದರೆ ಈ ಸಂಬಂಧದಲ್ಲಿ ಸಸ್ಯಕ್ಕೆ ಯಾವುದೇ ಲಾಭವಾಗುವುದಿಲ್ಲ. ಇತ್ತೀಚಿನ ಒಂದು ಸಂಶೋಧನೆ ತಿಳಿಸುವಂತೆ ಕೆಲವು ಸೂರಕ್ಕಿಯ ಪ್ರಬೇಧಗಳು (songbirds)ನೆಪೆಂಥಿಸ್ ರಾಫ್ಲೇಸಿಯಾನಾ (N. rafflesiana)ಮತ್ತು ನೆಪೆಂಥಿಸ್ ಗ್ರಾಸಿಲಿಸ್ (N. gracilis) ಎನ್ನುವ ಸಸ್ಯಪ್ರಬೇಧಗಳ ಹೂಜಿಬಲೆಯಲ್ಲಿರುವ ಸವಿಕುಡಿಗೆಯನ್ನು ತಿನ್ನುತ್ತವೆ. ಆದರೂ, ಆ ಹಕ್ಕಿಗಳ ಗಾತ್ರ ದೊಡ್ಡದಾಗುವುದರಿಂದ ಅವುಗಳನ್ನು ಬೇಟೆಯಾಗಿ ಬಳಸಲೂ ಸಸ್ಯಗಳಿಗೆ ಸಾಧ್ಯವಾಗುವುದಿಲ್ಲ.

ಕಡೆನುಡಿ
ಬಾಡುತಿನಿಸಸ್ಯಗಳು ಸಸ್ಯಜಗತ್ತಿನ ಅತ್ಯಂತ ಆಕರ್ಷಕ ಗುಂಪುಗಳಲ್ಲಿ ಒಂದಾಗಿದ್ದು, ಪೋಷಕಾಂಶಗಳ ಲಭ್ಯತೆ ಕಡಿಮೆ ಇರುವ ಮಣ್ಣಿನಲ್ಲಿ ಬೆಳೆಯುತ್ತವೆ ಮತ್ತು ಸಣ್ಣ ಪ್ರಾಣಿಗಳನ್ನು ಆಹಾರವಾಗಿ ಸೇವಿಸುತ್ತವೆ. ಇವುಗಳಎಲೆಗಳ ವಿಶೇಶ ಮಾರ್ಪಾಡುಮತ್ತು ಜೀವನಕ್ರಿಯಾತ್ಮಕ ಹೊಂದಾಣಿಕೆಗಳು, ಜೊತೆಗೆ ಬಗೆಬಗೆಯ ಪ್ರಾಣಿಗಳೊಂದಿಗೆ ಹೊಂದಾಣಿಕೆಯ ಸಂಬಂಧಗಳು, ಪರಿಸರದಲ್ಲಿ ಈ ಸಸ್ಯಗಳ ಮಹತ್ವವನ್ನು ತೋರಿಸುತ್ತವೆ. ಆದರೆ, ಕೃಷಿ ಚಟುವಟಿಕೆಗಳು, ಕಾಡಿನಿಂದ ಹೆಚ್ಚಿನ ಸಸ್ಯ ಸಂಗ್ರಹಣೆ, ವಾಸಸ್ಥಳ ನಾಶ ಮತ್ತು ಪರಿಸರದ ಮಾಲಿನ್ಯದ ಕಾರಣಗಳಿಂದ ಈ ಅಪರೂಪದ ಸಸ್ಯಗಳ ಉಳಿವಿಗೆ ಬೆದರಿಕೆ ಎದುರಾಗಿದೆ. ಅಂತಾರಾಷ್ಟ್ರೀಯಪ್ರಕೃತಿಸಂರಕ್ಷಣಾಸಂಘ(IUCN) ನಡೆಸಿದ ಸಂಶೋಧನೆಯಲ್ಲಿ ಪರಿಶೀಲಿಸಲಾದ 102 ಬಾಡುತಿನಿ ಸಸ್ಯಗಳಲ್ಲಿ 57 ಸಸ್ಯಗಳನ್ನು ಬೇರೆ ಬೇರೆ ರೀತಿಯ ಬೆದರಿಕೆಯ ಗುಂಪುಗಳಲ್ಲಿ ಹಾಕಲಾಗಿದೆಮತ್ತು ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಈ ವಿಶೇಷ ಸಸ್ಯಗಳನ್ನು ಮತ್ತು ಅವುಗಳ ನಾಜೂಕಿನ ಪರಿಸರವನ್ನು ಉಳಿಸಲು ತುರ್ತು ಸಂರಕ್ಷಣಾ ಕ್ರಮಗಳ ಅಗತ್ಯವಿದೆ.‌

1 ಗುಗ್ಗಳದ ಗೋವರ್ಧನ ಯಾದವ್‌, ಎ ಡಿ ಬಿ ಪ್ರಥಮ ದರ್ಜೆ ಕಾಲೇಜು, ಹರಪನಹಳ್ಳಿ, ವಿಜಯನಗರ ಜಿಲ್ಲೆ 583131

2 ರಮೇಶ ಪೂಜಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಬಕದ ಹೊನ್ನಳ್ಳಿ, ಧಾರವಾಡ 581204

3 ಬಸವರಾಜ ಸಾಲಿಯವರ್, ಬಸವೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಬಾಗಲಕೋಟೆ 587102


ಚಿತ್ರಗಳು: ಗುಗ್ಗಳದ ಗೋವರ್ಧನ ಯಾದವ್‌

References

  1. Adamec L (1997) Mineral Nutrition of Carnivorous Plants: A review. The Botanical Review 63:273-299. https://doi.org/10.1007/BF02857953
  2. James, Pietropaolo P (1986) Carnivorous plants of the world. Timber Pres, Inc, Oregaon, USA.
  3. Jennings DE, Rohr JR (2011) A reviw of the conservation threats to carnivorous plants. Biological Conservation 144: 1356-1363. https://doi.org/10.1016/j.biocon.2011.03.013
  4. Mithöfer A (2022) Carnivorous plants and their biotic interactions. Journal of Plant Interactions 17:333-343. https://doi.org/10.1080/17429145.2022.2038710

ಕನ್ನಡದ ಬರಹಗಳನ್ನು ಹಂಚಿ ಹರಡಿ
5 2 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x