ಬುದ್ಧನ ಕಥೆಯಲ್ಲಿ ‘ಸ್ತ್ರೀ’: ಡಾ. ಎಚ್.ಎಸ್. ಸತ್ಯನಾರಾಯಣ

ಮನುಕುಲದ ಮಹಾವ್ಯಕ್ತಿಗಳಲ್ಲಿ ಗೌತಮಬುದ್ಧನ ಸ್ಥಾನ ಅತ್ಯಂತ ಎತ್ತರದ್ದು, ಹಿರಿದಾದುದು. ಅವನ ಉನ್ನತ ವ್ಯಕ್ತಿತ್ವವು ಯಾವ ಹಂತಕ್ಕೇರಿದೆಯೆಂದರೆ ಆತ ಅವತಾರ ಪುರುಷನೆಂದು ಬಲವಾಗಿ ನಂಬುವಷ್ಟರಮಟ್ಟಿಗೆ! ಈಗಲೂ ಅನೇಕರಲ್ಲಿ ದಶಾವತಾರಗಳಲ್ಲಿ ಬುದ್ಧಾವತಾರವೂ ಒಂದೆಂಬ ನಂಬುಗೆ ಬಲವಾಗಿ ನೆಲೆಯೂರಿದೆ. ಆದರೂ ಬುದ್ಧನನ್ನು ಒಳಗೊಂಡು ರಚಿತವಾದ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ತೀರಾ ಕಡಿಮೆ. ಲೆಕ್ಕಮಾಡಿದರೆ ಸುಮಾರು ಮುವತ್ತೈದು ಪ್ರಕಟಣೆಗಳ ಶೀರ್ಷಿಕೆಯನ್ನು ಪಟ್ಟಿ ಮಾಡಬಹುದೇ ಹೊರತು ಓದುಗರ ನೆನಪಿನಲ್ಲುಳಿಯುವ ಗಟ್ಟಿ ಕೃತಿಗಳು ಕೆಲವು ಮಾತ್ರ! ಅದರಲ್ಲಿಯೂ ಬುದ್ಧನಿಗೆ ಸಂಬಂಧಿಸಿದ ವೈಚಾರಿಕ ಕೃತಿಗಳೂ, ಅನುವಾದಗಳೂ ಪಾಲು ಪಡೆದಿವೆ. ಬುದ್ಧನ ಜೀವನದ ಪ್ರಸಂಗಗಳನ್ನು ಆಧರಿಸಿದ ಕೆಲವು ಕವಿತೆಗಳು, ಸಣ್ಣಕತೆಗಳು ಮತ್ತು ನಾಟಕಗಳು ನವೋದಯ ಸಂದರ್ಭದಲ್ಲಿ ಪ್ರಕಟವಾದವು. ತೊಂಬತ್ತರ ದಶಕದಿಂದೀಚೆಗೆ ಬುದ್ಧನನ್ನು ಕುರಿತ ಮಹಾಕಾವ್ಯಗಳು ಪ್ರಕಟವಾಗಿವೆ. ಮಹಾವ್ಯಕ್ತಿತ್ವದ, ಸಮೃದ್ಧ ಜೀವನಾನುಭವದ, ತಿಳಿವಳಿಕೆಯ ವ್ಯಕ್ತಿತ್ವವನ್ನು ಗಮನಿಸಿದಾಗ ಕನ್ನಡದಲ್ಲಿ ಪ್ರಕಟವಾದ ಪುಸ್ತಕಗಳು ಕಡಿಮೆಯೇ.

ಕನ್ನಡದಲ್ಲಿ ಬುದ್ಧನ ಬಗ್ಗೆ ಮೊಟ್ಟಮೊದಲು ಕೃತಿ ಪ್ರಕಟಿಸಿದ ಕೀರ್ತಿ ಬಿದಿರೆ ಅಶ್ವತ್ಥನಾರಾಯಣ ಶಾಸ್ತ್ರೀಯವರಿಗೆ ಸಲ್ಲುತ್ತದೆ. ಅವರು ೧೯೦೭ರಲ್ಲಿ ‘ಬೌದ್ಧಾವತಾರ’ ಎಂಬ ಕೃತಿಯನ್ನು ಹೊರತಂದಿದ್ದು ಐತಿಹಾಸಿಕವಾಗಿ ಮೊದಲ ದಾಖಲೆಯಾಗಿದೆ. ೧೯೩೮ರಲ್ಲಿ ಎಸ್. ನರಸಿಂಹಶಾಸ್ತ್ರಿಯವರ ‘ಬುದ್ಧ ಗೀತಾವಳಿ’ ಎಂಬ ಕೃತಿ ಪ್ರಕಟವಾಯಿತು. ಬುದ್ಧನ ಬೋಧನೆಯ ಸಾರವನ್ನು ಗೀತೆಯ ರೂಪದಲ್ಲಿ ಕಾಣಿಸಿದ ಕೃತಿಯಿದು. ರಾಜರತ್ನಂ ಅವರು ಬುದ್ಧನ ವಿಷಯವನ್ನು ಕುರಿತ ಸುಮಾರು ಮೂವತ್ತೈದು ಕೃತಿಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಅನುವಾದದ ಪಾಲು ಹೆಚ್ಚು. ೧೯೫೬ರಲ್ಲಿ ಕಡವ ಶಂಭುವರ್ಮರ ‘ಸೌಂದರಾನಂದ’, ೧೯೭೪ರಲ್ಲಿ ಪ್ರಕಟವಾದ ಎಸ್. ವಿ. ಪರಮೇಶ್ವರಭಟ್ಟರ ‘ಕನ್ನಡ ಬುದ್ಧ ಚರಿತೆ’, ೧೯೯೯ರಲ್ಲಿ ಎಲ್. ಬಸವರಾಜು ಅವರ ‘ಬುದ್ಧಚರಿತೆ’ ಗಮನಾರ್ಹವಾದ ಕೃತಿಗಳು. ಗೋವಿಂದ ಪೈ ಅವರ ವೈಶಾಖಿ, ಶಿವರಾಮ ಕಾರಂತರ ‘ಕಿಸಾಗೋತಮಿ’ ಮತ್ತು ‘ಬುದ್ಧೋದಯ,’. ಮಾಸ್ತಿಯವರ ‘ಯಶೋಧರಾ’ ಕುವೆಂಪು ಅವರ ‘ಮಹಾರಾತ್ರಿ’ ಹೆಚ್ಚು ಚರ್ಚೆಗೊಳಗಾದ ನಾಟಕಗಳು. ಇದರ ನಡುವೆ ಹಿರಿಯ ವಿದ್ವಾಂಸರಾದ ಆರ್.ಸಿ. ಹಿರೇಮಠ ಅವರು ‘ತಥಾಗತ ಚಾರಿತ್ರ’ವನ್ನು ಬುದ್ಧನನ್ನು ಕುರಿತ ಮಹಾಕಾವ್ಯವೆಂದು ಬಣ್ಣಿಸಿಕೊಂಡರು. ಚಿಕ್ಕಮಗಳೂರಿನ ಕಾಶಿ ವಿಶ್ವನಾಥಶೆಟ್ಟರು ಆರು ಸಾವಿರ ಪದ್ಯಗಳ, ಇಪ್ಪತ್ತನಾಲ್ಕು ಸಾಲುಗಳ ಮಹಾಕಾವ್ಯ ‘ಬುದ್ಧಚರಿತ ಮಹಾಮಧು’ ಮತ್ತೊಂದು ದಾಖಲೆಯಾಯಿತು. ಹಿರಿಯರಾದ ಬಿ. ಪುಟ್ಟಸ್ವಾಮಯ್ಯನವರ ‘ಗೌತಮಬುದ್ಧ’ ಮತ್ತು ಪ್ರಭುಶಂಕರರ ‘ಅಂಗುಲಿಮಾಲಾ’, ‘ಆಮ್ರಪಾಲಿ’ ‘ಸುಜಾತ ಮತ್ತು ಗಾಳಿಯೆಂಬ ಕುದುರೆಯೇರಿ’ ಪ್ರಮುಖ ಕೃತಿಗಳೆನಿಸಿವೆ. ಶ್ರೀಮತಿ ಲತಾ ರಾಜಶೇಖರ ಅವರು ಬರೆದಿರುವ ಮಹಾಕಾವ್ಯಗಳಲ್ಲಿ ಬುದ್ಧನನ್ನು ಕುರಿತ ಮಹಾಕಾವ್ಯವೂ ಇದೆ. ತೀರಾ ಇತ್ತೀಚೆಗೆ ಹೆಚ್ಚು ಚರ್ಚೆಗೊಳಗಾದ ಹಿರಿಯಕವಿ ಎಚ್.ಎಸ್. ವೆಂಕಟೇಶಮೂರ್ತಿಯವರ ‘ಬುದ್ಧಚರಣ’ ಮಹಾಕಾವ್ಯ ಓದುಗರ ಗಮನ ಸೆಳೆದು ಮೂರ್ನಾಲ್ಕು ಮರುಮುದ್ರಣಗಳ ಭಾಗ್ಯವನೂ ಕಂಡಿತು. ನನ್ನ ಗಮನಕ್ಕೆ ಬಾರದಿರುವ ಇನ್ನು ಕೆಲವು ಕೃತಿಗಳಿರಬಹುದು. ಒಟ್ಟಿನಲ್ಲಿ ಈ ಪಕ್ಷಿನೋಟವನ್ನು ಗಮನಿಸಿದರೆ ಬುದ್ಧನನ್ನು ಕುರಿತ ಸಾಹಿತ್ಯ ಕನ್ನಡದಲ್ಲಿ ಪ್ರಕಟವಾಗಿರುವುದು ಸ್ವಲ್ಪವೇ. ಇತ್ತೀಚಿನ ಕಂನಾಡಿಗಾ ನಾರಾಯಣ ಅವರ ‘ಬುದ್ಧಯಾನ’ ಎಂಬ ಕಾದಂಬರಿ ಕನ್ನಡ ಸಾಹಿತ್ಯಕ್ಕೆ ಮತ್ತೊಂದು ಕೊಡುಗೆ.

ಈ ಕೆಲವು ರಚನೆಗಳು ಕೂಡ ಬುದ್ಧನ ಪಾತ್ರಪೋಷಣೆಯತ್ತ ಗಮನ ಹರಿಸಿವೆ. ಪುರುಷಪ್ರಜ್ಞೆಯು ಮುನ್ನೆಲೆಯಲ್ಲಿರುವ ಕಾರಣದಿಂದ ಸ್ತ್ರೀಪಾತ್ರಗಳು ಬುದ್ಧನಷ್ಟು ಪ್ರಾಮುಖ್ಯತೆ ಪಡೆಯದಿರುವುದಕ್ಕೆ ಬುದ್ಧ ಮತ್ತವನ ಧರ್ಮದ ವಿಚಾರಗಳ ಹರಹು ಲೇಖಕರಿಗೆ ದೊಡ್ಡ ಸವಾಲಾಗಿರಬಹುದು. ಹಾಗಾಗಿ ಗೌತಮನನ್ನು ಹೆತ್ತ ತಾಯಿ ಮಾಯಾದೇವಿ, ಸಲಹಿದ ತಾಯಿ ಗೌತಮಿ, ಪತ್ನಿ ಯಶೋಧರೆ, ಶಿಷ್ಯೆಯರಾದ ಆಮ್ರಪಾಲಿ, ಕಿಸಾಗೋತಮಿ ಮುಂತಾದವರೆಲ್ಲ ಪೋಷಕ ಪಾತ್ರಕ್ಕೆ ಸೀಮಿತಗೊಂಡಿರಬಹುದು. ಮಾಸ್ತಿ, ಕಾರಂತರಂತಹ ಕೆಲವರ ಗಮನ ಮಾತ್ರ ಸ್ತ್ರೀಪಾತ್ರಗಳತ್ತ ಹರಿದಿರುವುದನ್ನು ನಾವು ಗಮನಿಸಬಹುದು. ಎಚ್.ಎಸ್. ವೆಂಕಟೇಶಮೂರ್ತಿಯವರ ‘ಬುದ್ಧಚರಣ’ ಮಹಾಕಾವ್ಯದಲ್ಲಿ ಬರುವ ಯಶೋಧರೆ ಜಾಗೃತಪ್ರಜ್ಞೆಯ ಸ್ತ್ರೀಯಾಗಿ ಕಾಣಬರುವುದು ವಿಶೇಷ!

ಕಾರಂತರ ಕಿಸಾಗೋತಮಿ ಮತ್ತು ಮಾಸ್ತಿಯವರ ಯಶೋಧರಾ ನಾಟಕಗಳು ನವೋದಯ ಸಾಹಿತ್ಯ ಸಂದರ್ಭದ ಮಹತ್ತ್ವದ ರಚನೆಗಳು. ಕಾರಂತರ ‘ಕಿಸಾಗೋತಮಿ’ ಬುದ್ಧನಿಂದ ಸಾಂತ್ವನ ಪಡೆದ ತಾಯಿಯೋರ್ವಳು ಹೊಸ ಬೆಳಕನ್ನು ಕಂಡ ಕತೆಯನ್ನು ಹೇಳುವುದಕ್ಕೆ ಸೀಮಿತಗೊಂಡಿದೆ. ಸಂಸ್ಕೃತ ಭಾಷೆಯಲ್ಲಿ ಈಕೆಯ ಹೆಸರು ಕೃಷ್ಣಗೌತಮಿ. ಪಾಲಿ ಭಾಷೆಯಲ್ಲಿ ಕಿಸಾ ಗೋತಮಿ ಎಂದಾಗಿ ಕನ್ನಡದಲ್ಲಿಯೂ ಅದೇ ನಾಮಧೇಯವೇ ಉಳಿದು ಬಂದಿದೆ. ಈಕೆ ಶ್ರಾವಸ್ತಿಯ ಒಬ್ಬ ಶ್ರೀಮಂತ ವ್ಯಕ್ತಿಯ ಪತ್ನಿ. ಇವಳ ಕಥೆ ಬೌದ್ಧಧರ್ಮದಲ್ಲಿ ಬರುವ ಕತೆಗಳಲ್ಲಿಯೇ ಅತ್ಯಂತ ಪ್ರಸಿದ್ಧವಾದ ಕಥೆಯೆನಿಸಿದೆ. ತನ್ನ ಏಕೈಕ ಮಗುವನ್ನು ಕಳೆದುಕೊಂಡ ಬಳಿಕ ಹತಾಶೆಗೊಂಡ ಕಿಸಾಗೋತಮಿಯು ಯಾರಾದರೂ ತನ್ನ ಮಗುವನ್ನುಳಿಸಿಕೊಳ್ಳಲು ಸಹಾಯಮಾಡಬಹುದೇ ಎಂದು ಹಲುಬುತ್ತಿರುತ್ತಾಳೆ. ಸಾಗರದಷ್ಟು ದುಃಖದಲ್ಲಿ ಅದ್ದಿ ಹೋಗಿರುವ ಆಕೆ ತನ್ನ ಮನಸ್ಸನ್ನೇ ಕಳೆದುಕೊಂಡಿದ್ದಾಳೆಂದೇ ಆಕೆಯ ಸುತ್ತಲಿನವರು ಭಾವಿಸಿರುತ್ತಾರೆ. ಒಬ್ಬ ವೃದ್ಧ ಬುದ್ಧನನ್ನು ಕಾಣುವಂತೆ ಆಕೆಗೆ ಸಲಹೆ ನೀಡುತ್ತಾನೆ. “ಸಾವಿಲ್ಲದ ಮನೆಯಿಂದ ಬಿಳಿಯ ಸಾಸಿವೆಯನ್ನು ತಂದರೆ” ಆಕೆಯ ಮಗುವನ್ನು ಮತ್ತೆ ಬದುಕಿಸಬಹುದೆಂದು ಬುದ್ಧ ಆಕೆಗೆ ತಿಳಿಸುತ್ತಾನೆ. ಆತನ ಮಾತಿನಂತೆ ಅವಳು ಅದನ್ನರಸುತ್ತಾ ಮನೆ ಮನೆ ತಿರುಗಿ ನಿರಾಶಳಾಗುತ್ತಾಳೆ. ಬಂಧುಬಾಂಧವರ ಮರಣದ ದುಃಖವನ್ನನುಭವಿಸದ ಕುಟುಂಬವನ್ನು ಕಾಣಲು ವಿಫಲಳಾದ ಕಿಸಾಗೋತಮಿಗೆ ಹುಟ್ಟಿದ ಬಳಿಕ ಮರಣದಿಂದ ಮುಕ್ತವಾದ ಮನೆಯಿಲ್ಲ ಎಂಬ ಅರಿವು ಮೂಡುತ್ತದೆ. ತನ್ನ ಬಳಿಗೆ ಹಿಂದಿರುಗಿದ ಆಕೆಯನ್ನು ಬುದ್ಧನೇ ಸಮಾಧಾನ ಪಡಿಸಿ, ತನ್ನ ಧರ್ಮವನ್ನು ಆಕೆಗೆ ಬೋಧಿಸುತ್ತಾನೆ. ಅವಳ ಪ್ರಜ್ಞೆ ಜಾಗೃತಗೊಳ್ಳುತ್ತದೆ. ಈ ಜ್ಞಾನೋದಯದ ಮೂಲಕ ಅವಳು ಹಂತಹಂತವಾಗಿ ಬುದ್ಧನ ಶಿಷ್ಯಳಾಗುವ ಅರ್ಹತೆಗೇರುತ್ತಾಳೆ. ಅಂತಿಮವಾಗಿ ಬುದ್ಧನ ಶಿಷ್ಯರಲ್ಲಿ ಕಿಸಾಗೋತಮಿಯು ಅತ್ಯಂತ ಶಿಸ್ತಿನ ಭಿಕ್ಷುಣಿಯಾಗಿ ನಮ್ಮ ನೆನಪಿನಲ್ಲಿ ಉಳಿಯುತ್ತಾಳೆ. ಬುದ್ಧನು ಹೆಣ್ಣುಮಕ್ಕಳಿಗೆ ಧರ್ಮಬೋಧೆ ಮಾಡಿದ, ಅವರನ್ನು ಶಿಷ್ಯೆಯರನ್ನಾಗಿ ಸ್ವೀಕರಿಸಿದ ಆದ್ಯ ಪ್ರವರ್ತಕನಾಗುವುದರ ಮೂಲಕ, ಬೌದ್ಧಧರ್ಮವು ಸ್ತ್ರೀ ಸಮಾನತೆಗೆ ನೀಡಿದ ಮಹತ್ತ್ವದ ಸಂಗತಿಯು ಚರಿತ್ರೆಯಲ್ಲಿ ದಾಖಲಾಗುವಂತೆ ಮಾಡಿದ್ದಾನೆ. ಕಾರಂತರು ಕಿಸಾಗೋತಮಿಯನ್ನು ಕೇಂದ್ರ ಪಾತ್ರವಾಗಿಸಿಕೊಂಡಿರುವುದರ ಆಶಯದಲ್ಲಿಯೂ ಬೌದ್ಧಧರ್ಮವು ಸ್ತ್ರೀಯರಿಗೆ ಕೊಟ್ಟ ಗಮನದ ಸಂಗತಿಗಳು ಪ್ರತಿಫಲಿಸಿವೆ.

ಕಿಸಾಗೋತಮಿಗಿಂತಲೂ ಮುನ್ನವೇ ಬುದ್ಧನ ಶಿಷ್ಯತ್ವವನ್ನು ಪಡೆದ ಕೀರ್ತಿ ಆಮ್ರಪಾಲಿಯದು. ಬುದ್ಧನ ಬಗ್ಗೆ ಬಂದಿರುವ ಬಹುತೇಕ ಬರಹಗಳಲ್ಲಿ ‘ಆಮ್ರಪಾಲಿ’ಯ ಕಥೆಯ ಉಲ್ಲೇಖವಿರುವುದನ್ನು ನಾವು ಗಮನಿಸಬಹುದು. ಆಮ್ರಪಾಲಿ ಬುದ್ಧನ ಸಮಕಾಲೀನಳಾದ ವೇಶ್ಯೆ. ಇವಳು ವೈಶಾಲಿ ಗಣರಾಜ್ಯದ ನಗರವಧುವಾಗಿದ್ದಳು. ಅಪೂರ್ವ ಸುಂದರಿಯಾದ ಈಕೆಯ ಸ್ನೇಹವನ್ನು ಬಯಸಿ ಅನೇಕ ಶ್ರೀಮಂತರು ಇವಳ ಮನೆಯ ಬಾಗಿಲಲ್ಲಿ ಗುಂಪಾಗಿ ಕಾಯುತ್ತಿದ್ದರು ಎಂದು ಕಥೆಯಿದೆ. ಹಾಗಾಗಿ ಈಕೆ ಅಪಾರವಾದ ಐಶ್ವರ್ಯಕ್ಕೆ ಒಡತಿಯಾಗಿದ್ದಳು. ಹಾಡು, ನರ್ತನಗಳು ಆಕೆಯ ವ್ಯಕ್ತಿತ್ವದ ಭಾಗ. ಅನಂತರ ಬುದ್ಧನ ಆಧ್ಯಾತ್ಮಿಕ ಪ್ರಭಾವಕ್ಕೆ ಒಳಗಾಗಿ ತನ್ನ ಪೂರ್ವ ಜೀವನವನ್ನು ಬಿಟ್ಟು ಗೃಹಿಭಕ್ತೆಯಾದಳು. ಬುದ್ಧ ಇವಳಿಂದ ಭಿಕ್ಷೆಯನ್ನು ಸ್ವೀಕರಿಸಿದ. ತನ್ನ ಒಂದು ಮಾವಿನ ತೋಪನ್ನು (ಆಮ್ರವನ) ಸಂಘದ ಉಪಯೊಗಕ್ಕೆ ದಾನ ಮಾಡಿದ್ದರಿಂದ ಇವಳಿಗೆ ಆಮ್ರಪಾಲಿ ಎಂದು ಹೆಸರು ಬಂತು ಎಂಬುದೂ ಒಂದು ಕಥೆ.

ಆಮ್ರಪಾಲಿಯ ಬಗ್ಗೆ ಇನ್ನೂ ಅನೇಕ ಕತೆಗಳಿವೆ. ಆಮ್ರಪಾಲಿಯ ಬದುಕಿನ ಕತೆಗೆ ನಾವು ಕ್ರಿಸ್ತ ಪೂರ್ವ ಐದನೇ ಶತಮಾನಕ್ಕೆ ಹೋಗಬೇಕು. ಮಾವಿನ ಚಿಗುರಿನಂತೆ ಮನೋಹರವಾಗಿ ಇದ್ದ ಹುಡುಗಿಗೆ ಅದೇ ಅರ್ಥದಲ್ಲಿ ಆಮ್ರಪಾಲಿ ಎಂದು ಹೆಸರಿಟ್ಟಿದ್ದರು. ಬಾಲ್ಯದಲ್ಲೇ ಅತ್ಯಂತ ಚೆಲುವೆ. ವೈಶಾಲಿ ನಗರದಲ್ಲಿಯೇ ಅತ್ಯಂತ ಸುಂದರಿ ಎಂಬ ಹೆಸರು ಪಡೆದಿದ್ದಳು. ಆಕೆಯನ್ನು ಪಡೆಯಲು, ಸುಖಿಸಲು ಅಂದಿನ ಶ್ರೀಮಂತರು ಸಾಲುಗಟ್ಟಿದ್ದರು. ಹಾಡು, ನೃತ್ಯ, ಕುಣಿತ ಅಂದರೆ ಆಕೆಗೆ ಜೀವ. ವೈಶಾಲಿಯ ನಗರನರ್ತಕಿ ಸ್ಪರ್ಧೆಯಲ್ಲಿ ಆಮ್ರಪಾಲಿ ಭಾಗವಹಿಸಿದಳು. ಗೆದ್ದು ಬಂದಳು. ಅಂದೇ ಅಲ್ಲಿನ ರಾಜ ಮನುದೇವನ ಕಣ್ಣು ಆಕೆಯ ಮೇಲೆ ಬಿತ್ತು. ಅಂದು ನಗರನರ್ತಕಿ ಆಗುವುದೆಂದರೆ ವೇಶ್ಯೆಯಾಗುವುದೆಂದೇ ಅರ್ಥ. ಆದರೆ ಆಮ್ರಪಾಲಿಗೆ ಅಂಥ ಬದುಕು ಬದುಕಲು ಇಷ್ಟವಿರಲಿಲ್ಲ. ಆಕೆ ಬಾಲ್ಯಸ್ನೇಹಿತ ಪುಷ್ಪಕುಮಾರನನ್ನು ಪ್ರೀತಿಸುತ್ತಿದ್ದಳು. ಅವರಿಬ್ಬರು ಮದುವೆಯಾಗಲು ನಿರ್ಧರಿಸಿದರು. ಇಬ್ಬರೂ ದೇವಾಲಯವೊಂದರಲ್ಲಿ ಮದುವೆಯಾದರು. ಆಮ್ರಪಾಲಿ ಸುಖಸಂಸಾರದ ಕನಸು ಕಂಡಳು. ಆದರೆ, ಆಕೆಯನ್ನು ಪಡೆಯುವ ಹಠಕ್ಕೆ ಬಿದ್ದಿದ್ದ ರಾಜ ಮನುದೇವ, ಮದುವೆಯ ದಿನವೇ ಪುಷ್ಪಕುಮಾರನನ್ನು ಕೊಲ್ಲಿಸಿದ. ಅನಂತರ ಸಂತಾಪ ಸೂಚನೆಯ ನಾಟಕವಾಡಿ, ಆಮ್ರಪಾಲಿಯಂಥ ಸುಂದರಿ ಏಕಾಂಗಿಯಾಗಿದ್ದರೆ ಕೇಡಾಗುವುದೆಂದೂ ಪರಪುರುಷರು ಕೂಡ ಆಕೆಯನ್ನು ಪಡೆಯಲು ಪರಸ್ಪರ ಹೊಡೆದಾಡಿ ನಗರದ ನೆಮ್ಮದಿ ಕೆಡುವುದೆಂದೂ ಕಾರಣ ನೀಡಿ ಆಕೆಯನ್ನು ವೈಶಾಲಿಯ `ನಗರ ವಧು’ ಎಂದು ಘೋಷಿಸಿದ. ನಗರವಧು ಅಂದರೆ ಬೇರೇನೂ ಅಲ್ಲ, ವೇಶ್ಯೆ. ಆಕೆ ಶ್ರೀಮಂತರ ಚರಣದಾಸಿಯಾಗಬೇಕು, ರಾಜನ ಆಸ್ಥಾನದಲ್ಲಿ ನರ್ತಿಸಬೇಕು ಅಷ್ಟೇ.
ಆಮ್ರಪಾಲಿ ತನ್ನ ಬದುಕನ್ನು ಮೌನವಾಗಿ ಸ್ವೀಕರಿಸಿದಳು. ಆದರೆ ತನ್ನ ಬಳಿ ಕಷ್ಟವೆಂದು ಹೇಳಿಕೊಂಡು ಬಂದವರಿಗೆ ಧಾರಾಳವಾಗಿ ಸಹಾಯ ನೀಡುತ್ತಿದ್ದಳು ಆಕೆ. ಆಮ್ರಪಾಲಿಯ ಚೆಲುವಿನ ಬಣ್ಣನೆ ನೆರೆಯ ಮಗಧ ಸಾಮ್ರಾಜ್ಯದ ರಾಜ ಬಿಂದುಸಾರನ ಕಿವಿಗೆ ಬಿತ್ತು. ವೈಶಾಲಿ ಮತ್ತು ಮಗಧ ರಾಜ್ಯಗಳು ಶತ್ರು ರಾಷ್ಟ್ರಗಳು. ಆಮ್ರಪಾಲಿಯ ಬಳಿ ಪ್ರೇಮ ಯಾಚನೆ ಮಾಡಲು ಹೋಗುವುದಾದರೂ ಹೇಗೆ? ಯೋಚಿಸಿದ ಬಿಂದುಸಾರ ತನ್ನ ರೂಪ ಮರೆಮಾಚಿ ವೀಣಾವಾದಕನಾಗಿ ಬಂದ. ಸುಂದರನಾಗಿದ್ದ ಆತನಿಗೆ ಆಮ್ರಪಾಲಿಯ ಸ್ನೇಹ ಸಂಪಾದಿಸಲು ಹೆಚ್ಚು ಕಾಲ ಬೇಕಾಗಲಿಲ್ಲ. ಅವರಿಬ್ಬರೂ ಪ್ರೇಮಿಗಳಂತೆ ಇರತೊಡಗಿದರು.

ಬಿಂದುಸಾರನಿಂದ ಆಮ್ರಪಾಲಿಗೆ ಗಂಡು ಮಗು ಜನಿಸಿತು. ಬಿಂದುಸಾರನಿಗೆ ಆಮ್ರಪಾಲಿಯನ್ನು ಬಿಟ್ಟು ಇರಲು ಸಾಧ್ಯವಾಗದೆ, ವೈಶಾಲಿಯನ್ನು ಗೆದ್ದು ಆಕೆಯನ್ನು ಶಾಶ್ವತವಾಗಿ ಪಡೆಯಲು ಯೋಚಿಸಿ ದಂಡೆತ್ತಿ ಬಂದ. ಆದರೆ ವೈಶಾಲಿಯನ್ನು ಅತೀವವಾಗಿ ಪ್ರೀತಿಸುತ್ತಿದ್ದ ಆಮ್ರಪಾಲಿ, ಬಿಂದುಸಾರನ ಯೋಚನೆಗೆ ಯಾಚನೆಗೆ ಸೊಪ್ಪು ಹಾಕಲಿಲ್ಲ. ಆಕೆಯ ಮಾತಿಗೆ ಮಣಿದು ಬಿಂದುಸಾರ ಮಗಧಕ್ಕೆ ಮರಳಿದ. ಮುಂದೆ ಬಿಂದುಸಾರನ ಪಟ್ಟದರಸಿಯ ಮಗ ಅಜಾತಶತ್ರು ತಂದೆಗಾದ ಅವಮಾನ ತೀರಿಸಿಕೊಳ್ಳಲು ವೈಶಾಲಿಗೆ ಮುತ್ತಿಗೆ ಹಾಕಿದ. ಅವನೂ ಆಮ್ರಪಾಲಿಯ ಸೌಂದರ್ಯಕ್ಕೆ ಸೋತಿದ್ದ. ಆಕೆಯನ್ನು ಸೆರೆ ಹಿಡಿದು, ಇಡಿಯ ನಗರವನ್ನು ಸುಟ್ಟು ಹಾಕಿಸಿದ. ಅನಂತರ ಆಕೆಯ ಬಳಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡ. ತನ್ನ ನೆಲಕ್ಕೆ, ತನ್ನ ಜನರಿಗೆ ಅಜಾತಶತ್ರು ತಂದಿತ್ತ ಗತಿಯಿಂದ ನೊಂದಿದ್ದ ಆಕೆ ಅದನ್ನು ತಿರಸ್ಕರಿಸಿದಳು. ಆದರೆ ಅಜಾತಶತ್ರು ಅದಕ್ಕೆ ಮಣಿಯಲಿಲ್ಲ. ಈತ ತನ್ನ ಪ್ರೇಮಿ ಬಿಂದುಸಾರನ ಮಗ ಎಂದು ತಿಳಿದು ಆಮ್ರಪಾಲಿಗೆ ಮತ್ತಷ್ಟು ದುಃಖವಾಯಿತು.

ಈ ದುಃಖ, ಬದುಕಿನ ಬಗ್ಗೆ ಶೂನ್ಯ ಆವರಿಸಿದ ಗಳಿಗೆಯಲ್ಲೇ ಆಕೆಗೆ ನಗರಕ್ಕೆ ಬಂದ ಬುದ್ಧನ ಗಣ ಕಾಣಿಸಿತು. ನೋಟ ಮಾತ್ರದಿಂದಲೇ ಶಾಂತಿ ನೆಮ್ಮದಿಯನ್ನು ಕರುಣಿಸಿದ ಬುದ್ಧನನ್ನು ನೋಡಿ ಮಾರುಹೋದ ಆಕೆ, ಆತನನ್ನು ಸತ್ಕರಿಸಲು ಮನೆಗೆ ಕರೆದಳು. ನಗರದ ಜನ, ವೇಶ್ಯೆಯ ಮನೆಯಲ್ಲಿ ಬುದ್ಧ ಊಟ ಮಾಡುವುದು ಅಪಚಾರ ಎಂದು ಮಾತಾಡಿಕೊಂಡರು. ಆದರೆ ಬುದ್ಧ ಅದನ್ನೆಲ್ಲ ಲೆಕ್ಕಿಸದೆ, ಆಮ್ರಪಾಲಿಯ ಆತಿಥ್ಯ ಸ್ವೀಕರಿಸಿದ. ಆಕೆಯನ್ನು ಹರಸಿದ. ನಾಲ್ಕು ತಿಂಗಳು ಆಕೆಯ ಅರಮನೆಯ ಉದ್ಯಾನದಲ್ಲಿದ್ದ. ಬುದ್ಧನ ಸಾಂಗತ್ಯದಿಂದ ಆಮ್ರಪಾಲಿ ನೆಮ್ಮದಿ ಪಡೆದಳು. ಆಮ್ರಪಾಲಿಗೆ ಶಿಷ್ಯತ್ವವನ್ನು ನೀಡಲೆಂದೇ ಬುದ್ಧ ತನ್ನ ಧರ್ಮದ ವಿಚಾರಗಳಲ್ಲಿ ಸುಧಾರಣೆಯನ್ನು ತಂದನೆಂಬ ಸಂಗತಿಯನ್ನು ನಾವಿಲ್ಲಿ ವಿಶೇಷವಾಗಿ ಉಲ್ಲೇಖಿಸಬೇಕು. ಆಮ್ರಪಾಲಿಯ ಕಥೆಯನ್ನಾಧರಿಸಿ ಕನ್ನಡದಲ್ಲಿ ಕಾದಂಬರಿ, ಕತೆ, ಕವಿತೆಗಳು ಪ್ರಕಟಗೊಂಡಿವೆ.

ಬುದ್ಧನ ಶಿಷ್ಯತ್ವ ಸ್ವೀಕರಿಸಿದ ಹಲವು ಭಿಕ್ಷುಣಿಯರಲ್ಲಿ ಕಿಸಾಗೋತಮಿ, ಆಮ್ರಪಾಲಿಯರು ಇಲ್ಲಿ ನಮ್ಮ ಗಮನದಲ್ಲಿದ್ದಾರೆ. ಮತ್ತೆ ಕೆಲವು ಲೇಖಕರ ಗಮನ ಬುದ್ಧನಾಗುವ ಮೊದಲು ಸಿದ್ಧಾರ್ಥನಾಗಿದ್ದವನ ಪತ್ನಿ ಯಶೋಧರೆಯ ಕಡೆಗಿದೆ. ಕಂನಾಡಿಗಾ ನಾರಾಯಣ ಅವರ ‘ಬುದ್ಧಯಾನ’ ಕಾದಂಬರಿಯಲ್ಲಿ ಬರುವ ಸ್ತ್ರೀಪಾತ್ರಗಳು ವಿಶೇಷವಾಗಿ ನಮ್ಮ ಗಮನಸೆಳೆಯುವಲ್ಲಿ ಸಫಲವಾಗಿವೆ. ಪೌರಾಣಿಕ ಚೌಕಟ್ಟಿನಿಂದ ಕಳಚಿಕೊಂಡು ನಮ್ಮಂಥ ಸರಳ ಸಹಜ ಪಾತ್ರಗಳಂತೆ ಈ ಕಾದಂಬರಿಯ ಪಾತ್ರಗಳಿವೆ. ಇಲ್ಲಿ ಬರುವ ಬುದ್ಧನ ಹೆತ್ತ ತಾಯಿಯಾದ ಮಾಯಾದೇವಿಯು ಜಗತ್ತಿನ ಉದ್ದಾರಕ್ಕಾಗಿ ಬುದ್ಧನೆಂಬ ಬೆಳಕನ್ನು ಹೆತ್ತು ಮಿಂಚಿನಂತೆ ಕಣ್ಮರೆಯಾಗಿ ಹೋಗುತ್ತಾಳೆ. ಸಾಕು ತಾಯಿಯಾದ ಗೌತಮಿಯು ಸಿದ್ಧಾರ್ಥನು ಜ್ಞಾನವನ್ನರಸಿ ಹೊರಡುವವರೆಗೆ ಜತನದಿಂದ ಆತನನ್ನು ಕಾಪಾಡುವ ಮಮತಾಮಯಿಯಾಗಿದ್ದಾಳೆ. ಅವಳ ತವರಿನಲ್ಲಿ ಭತ್ತವನ್ನು ಹೆಚ್ಚಾಗಿ ಬೆಳೆಯುತ್ತಿದ್ದುದ್ದರಿಂದ ಆಕೆಗೆ ಗೋತಮಿ-ಗೌತಮಿ ಎಂಬ ಹೆಸರು ಬಂದಿತಂತೆ. ಈ ಪದದ ನಿಷ್ಪತ್ತಿಯ ವಿಚಾರದ ಆಚೆಯೂ ಈಕೆ ನಾವೆಲ್ಲ ಬುದ್ಧನನ್ನು ‘ಗೌತಮ ಬುದ್ಧ’ನೆಂದು ಇಂದಿಗೂ ಕರೆಯಲು ಕಾರಣಳಾದ ಮಾತೃಹೃದಯಿಯೆಂಬುದನ್ನು ನೆನೆದರೆ ಆಕೆಯ ಕೊಡುಗೆಯ ಮೌಲ್ಯ ಅರಿವಿಗೆ ಬರಬಹುದು.

ಕುವೆಂಪು ಅವರ ‘ಮಹಾರಾತ್ರಿ’ಯು ಸಿದ್ಧಾರ್ಥನು ಜ್ಞಾನದೆಡೆಗೆ ಸಾಗುವ ನಿರ್ಧಾರದ ರಾತ್ರಿಯ ತಳಮಳವನ್ನು ಆವರಣದೊಳಗಿಟ್ಟುಕೊಂಡಿರುವುದರಿಂದ ಮಲಗಿ ನಿದ್ರಿಸುತ್ತಿರುವ ಯಶೋಧರೆಯು ಉಲ್ಲೇಖ ಮಾತ್ರದಲ್ಲಿಯೇ ಮಿಂಚಿ ಮರೆಯಾಗಿಬಿಡುತ್ತಾಳೆ.
ಆದರೆ ಮಾಸ್ತಿಯವರು ತಮ್ಮ ನಾಟಕಕ್ಕೆ ‘ಯಶೋಧರಾ’ ಎಂದು ಶೀರ್ಷಿಕೆ ಕೊಡುವ ಮೂಲಕ ಬುದ್ಧನ ಬಾಳಸಂಗಾತಿಯತ್ತ ಕೇಂದ್ರಗಮನ ನೀಡಿರುವುದು ಅತ್ಯಂತ ಮುಖ್ಯವಾದ ವಿಚಾರವಾಗಿದೆ. ಮಾಸ್ತಿಯವರು ಯಶೋಧರೆಯ ಪಾತ್ರ ನಿರ್ವಹಣೆಯಲ್ಲಿ, ಅವಳ ಮನದಾಳದ ನೋವನ್ನು ಚಿತ್ರಿಸುವಲ್ಲಿ, ಅವಳ ಮನದಲ್ಲಿ ಉದ್ಭವಿಸುವ ಸಮಸ್ಯೆ, ಗೊಂದಲಗಳನ್ನು ಹಿಡಿದಿಡುವಲ್ಲಿ , ಅವಳು ಕೊನೆಯಲ್ಲಿ ಕಂಡುಕೊಂಡ ಶಾಂತಿಯನ್ನು ಯಶಸ್ವಿಯಾಗಿ ನಿರೂಪಿಸುವಲ್ಲಿ ಬುದ್ಧನಿಗಿಂತ ಮಿಗಿಲಾದ ಒಂದು ಸ್ಥಾನವನ್ನು ಓದುಗರ ಮನದಲ್ಲಿ ತಂದುಕೊಡುವುದರ ಮೂಲಕ ಶ್ರೇಷ್ಠವಾದ ಒಂದು ನಾಟಕವನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ರಾಹುಲ ಮತ್ತು ಅಂಬಿಕೆಯರ ಪ್ರಯತ್ನದಿಂದೆಂಬಂತೆ ಹತ್ತು ವರುಷಗಳ ಹಿಂದೆ ಜ್ಞಾನದ ಜಾಡನ್ನು ಹಿಡಿದು ನಡೆದಿದ್ದ ಸಿದ್ಧಾರ್ಥ ಬುದ್ಧನಾಗಿ ಕಪಿಲವಸ್ತುವಿಗೆ ಹಿಂದಿರುಗಿ ಬಂದಿದ್ದಾನೆ. ಆ ಹತ್ತು ವರ್ಷಗಳ ಕಾಲ ಯಶೋಧರೆಯ ಮನೋ ವ್ಯಾಕುಲತೆಯ ಪರಿಣಾಮಗಳನ್ನು ಮಾಸ್ತಿಯವರು ಸೊಗಸಾಗಿ ಚಿತ್ರಿಸಿದ್ದಾರೆ. ಬುದ್ಧನ ಆಪ್ತ ಶಿಷ್ಯನಾದ ಆನಂದನು “ಈ ಆರು ವರುಷಗಳಲ್ಲಿ ಇವರ ಉಪದೇಶದಲಿ ಹತ್ತು ಸಾವಿರ ಮಂದಿ ತ್ಯಾಗವನು ವರಿಸಿದರು” ಎಂದು ಹೆಮ್ಮೆಯಿಂದ ನುಡಿದಾಗ ಹತ್ತು ವರುಷಗಳ ತನ್ನ ಏಕಾಂತತೆ, ನೋವು, ವಿರಹಗಳ ನೆನಪಿನಿಂದ ಯಶೋಧರೆಯು “ಹತ್ತು ಸಾವಿರ ಮನೆಯ ಬೆಳಕುಗಳು ನಂದಿದವು, ಇಲ್ಲವೆ ಮಸುಕಾದವು. ಅಯ್ಯೋ ನನ್ನಂತೆ ಎಷ್ಟು ಸಾವಿರ ಮಂದಿ ನೊಂದರೋ!” ಎನ್ನುತ್ತಾಳಲ್ಲದೆ “ನೋವ ಬೀಜವ ಬಿತ್ತಿ, ಹುಲುಸಾದ ಬೇಳೆ ತೆಗೆದು, ಬೇನೆಯನ್ನವ ಬಡಿಸಿ, ಕಣ್ಣೀರುಗಳ ಕುಡಿಸಿ, ಹೆಮ್ಮೆ ಪಡುತಿರುವಿರೇ ತಪಸಿಗಳು?” ಎಂದು ವ್ಯಂಗ್ಯವಾಡುತ್ತಾಳೆ.
” ಮನಸಿನಲಿ ಕಲ್ಮಷಗಳಿಹವೆಂದು ಮನೆಗಳನು ಬಿಟ್ಟೋಡಿ, ಹೆಂಡಿರನು ಮಕ್ಕಳನು ಬೇಯಿಸಲು ತ್ಯಾಗವೆ? ವನದೊಳಿಹ ಪೊದೆಗಳನು ಜಯಿಸುವೊಡೆ ಕಿಚ್ಚಿಕ್ಕಿ ಹುಲ್ಲೆ ಮರಗಳ ಸುಡುವ ನೀತಿಯಿದು” ಎಂಬುದೇ ಅವಳ ನಿಲುವು. ತನ್ನ ಒಪ್ಪಿಗೆ ಪಡೆಯದೆ ಸಿದ್ಧಾರ್ಥ ದಾಂಪತ್ಯದಿಂದ ದೂರಾದುದನ್ನು ಆಕೆ ಒಪ್ಪುವುದಿಲ್ಲ. “ಎರಡನೆಯ ಜೀವ ಒಪ್ಪುವ ಮುನ್ನ ದಾಂಪತ್ಯ ಮುಗಿಯಬಹುದೆಂತು?” ಎಂದಾಕೆ ಬುದ್ಧನನ್ನು ಪ್ರಶ್ನಿಸುವಲ್ಲಿ ತರ್ಕ ಮುನ್ನೆಲೆಗೆ ಬರುತ್ತದೆ. ಅಂತಿಮವಾಗಿ ಯಶೋಧರೆ ಬುದ್ಧನ ಬೌದ್ಧಿಕ ತಿಳಿವಿಗೆ ಶರಣಾಗಿ, ಆಕೆ ಕೂಡ ಭಿಕ್ಷುಣಿಯಾದ ಸುದ್ದಿಯು ಆನಂದನಿಂದ ರಾಜನಾದ ಶುದ್ಧೋನನಿಗೆ ತಲುಪುತ್ತದೆ.

ಇತ್ತೀಚೆಗೆ ಬಂದ ಎಚ್.ಎಸ್. ವೆಂಕಟೇಶಮೂರ್ತಿಯವರ ‘ಬುದ್ಧಚರಣ’ ಮಹಾಕಾವ್ಯವು ಬುದ್ಧನ ನೆಪದಲ್ಲಿ ವರ್ತಮಾನದ ಸಂಕಟಗಳಿಗೆ ಪರ್ಯಾಯ ಹುಡುಕುವ ಪ್ರಯತ್ನ ಮಾಡಿದೆಯಾದರೂ ಬುದ್ಧನನ್ನು ಮೆರೆಸುವ ಭರದಲ್ಲಿ ಕವಿಯು ಉಳಿದ ಪಾತ್ರಗಳನ್ನು ಅವಗಣಿಸಿಲ್ಲ. ಬುದ್ಧಚರಣದ ಅನೇಕ ಪಾತ್ರಗಳು ತಮ್ಮ ಬಗ್ಗೆ ಧ್ಯಾನಿಸುವಂತೆ ಓದುಗರನ್ನು ಆಹ್ವಾನಿಸಬಲ್ಲವು. ಕೆಲವು ಸ್ತ್ರೀ ಪಾತ್ರಗಳಂತೂ ಅತ್ಯಂತ ಗಟ್ಟಿಯಾದವು, ಶಕ್ತಿಶಾಲಿಯಾದವು. ಎಚ್ಚೆಸ್ವಿ ತಮ್ಮನ್ನು ತಾವು ‘ಮಾತೃಗೋತ್ರ’ದ ಕವಿಯೆಂದು ವರ್ಣಿಸಿಕೊಂಡವರು. ಅಜ್ಜಿಯರು ಹಾಗೂ ತಾಯಿಯ ಆರೈಕೆಯಲ್ಲಿ ತಮ್ಮ ಅಂತಃಕರಣವನ್ನು ಸಂಪನ್ನಗೊಂಡವರಾದ್ದರಿಂದ ತಮ್ಮ ಕಾವ್ಯದ ಸ್ತ್ರೀ ಪಾತ್ರಗಳನ್ನು ಅನಾವರಣಗೊಳಿಸುವಲ್ಲಿ ಕಕ್ಕುಲಾತಿ ಉಕ್ಕಿ ಹರಿದಿದೆ. ಬುದ್ಧನ ಇಬ್ಬರು ತಾಯಂದಿರಾದ ಮಾಯಾದೇವಿ(ಹೆತ್ತ ತಾಯಿ) ಮತ್ತು ಗೌತಮಿ(ಬೆಳೆಸಿದ ತಾಯಿ)ಯರು ಸಮರ್ಥವಾಗಿ ಮುನ್ನಲೆಗೆ ಬರುವುದರೊಂದಿಗೆ ಯಶೋಧರ, ಆಮ್ರಪಾಲಿ, ಪ್ರಜಾಪತಿ ಮುಂತಾದ ಪಾತ್ರಗಳು ಕೂಡ ಹೆಚ್ಚು ಆರ್ದ್ರತೆಯಿಂದ ಅನಾವರಣಗೊಂಡಿವೆ.

ಈ ಕಾವ್ಯದ ಯಶೋಧರೆಯ ಪಾತ್ರವು ಹೆಚ್ಚು ನೆನಪಿನಲ್ಲುಳಿಯುವಂತಾದ್ದು. “ಎಲ್ಲ ಸುಖದಲ್ಲೂ ನನ್ನ ಜತೆ ಇದ್ದವನು ಮುಕ್ತಿ ಸುಖದಲ್ಲಿ ಮಾತ್ರ ಹೀಗೆ ಅಗಲಿದ್ದೇಕೆ?” ಎಂದು ಮೆಲುದನಿಯಲ್ಲಿ ಪ್ರಶ್ನಿಸುವಳಾದರೂ ಅದು ಕುಮಾರವ್ಯಾಸನ ದ್ರೌಪದಿಯು “ಸ್ತ್ರೀಮತವನುತ್ತರಿಸಲಾಗದೆ?” ಎಂದು ದಿಟ್ಟತನದಿಂದ ಪ್ರಶ್ನಿಸಿದಷ್ಟೇ ತೀವ್ರತೆ ಯಶೋಧರೆಯ ಪ್ರಶ್ನೆಗಿದೆ, ಅಷ್ಟೇ ಪರಿಣಾಮಕಾರಿಯಾಗಿದೆ. ಮಾಸ್ತಿಯವರ ಯಶೋಧರೆಯ ನೆನಪು ಇಲ್ಲಿ ಆವರಿಸಿದರೆ ಅಚ್ಚರಿಯೇನಿಲ್ಲ. ಆದರೆ ಎಚ್ಚೆಸ್ವಿಯವರ ಯಶೋಧರೆ ಪ್ರಗತಿಪರ ಧೋರಣೆಯವಳಾದರೂ ಸಮಚಿತ್ತದಿಂದ ಸಂದರ್ಭವನ್ನು ಸರಿದೂಗಿಸಿಕೊಂಡು ಹೋಗುವಲ್ಲಿ ಹೆಚ್ಚು ಪ್ರಬುದ್ಧಳಾಗಿ ಚಿತ್ರಿತಳಾಗಿರುವುದು ಆಕಸ್ಮಿಕವಲ್ಲ, ಬದಲಿಗೆ ವರ್ತಮಾನದ ಮನೋಧರ್ಮಕ್ಕೆ ಯಶೋಧರೆ ಮಾದರಿಯಂತಿದ್ದಾಳೆ.

ಬುದ್ಧನ ಕಥೆಯಲ್ಲಿ ಅನಾವರಣಗೊಂಡಿರುವ ಯಶೋಧರೆ, ಆಮ್ರಪಾಲಿ, ಪ್ರಜಾಪತಿ, ಕಿಸಾಗೋತಮಿ ಮುಂತಾದ ಕೇಂದ್ರ ಪಾತ್ರಗಳಲ್ಲದೆ ಲಕ್ಷಾಂತರ ಹೆಣ್ಣುಜೀವಗಳು ಬುದ್ಧಧರ್ಮದ ಅನುಯಾಯಿಗಳಾದ ವಿವರಗಳಿವೆ. ಸ್ತ್ರೀಯರಿಗೆ ಧಾರ್ಮಿಕ ಹಕ್ಕುಗಳನ್ನು ಮೊದಲು ಒದಗಿಸಿದ ಕೀರ್ತಿ ಬೌದ್ಧಧರ್ಮಕ್ಕಿದೆ. ಇಲ್ಲಿಯೂ ಭಿಕ್ಷುಗಳಿಗಿರುವ ಎಷ್ಟೋ ಆಯ್ಕೆಗಳನ್ನು ಭಿಕ್ಷುಣಿಯರಿಗೆ ನಿರಾಕರಿಸಲಾಗಿದೆ ಎಂಬುದನ್ನು ಮರೆಯುವಂತಿಲ್ಲವಾದರೂ ಬೌದ್ಧಧರ್ಮ ಸಮಾನತೆಯನ್ನು ಮೊದಲು ಪ್ರತಿಪಾದಿಸಿದೆಯೆಂಬುದನ್ನು ಅಲ್ಲಗಳೆಯಲಾಗದು.

-ಡಾ. ಎಚ್.ಎಸ್. ಸತ್ಯನಾರಾಯಣ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x