ಮಾನವ ಜೀವನ, ಪ್ರಾಣಿ ಜೀವನ ಹಾಗೂ ಭೂಮಿಯ ಪರಿಸರ ವ್ಯವಸ್ಥೆಯ ಮೂಲವೇ ಸಸ್ಯಗಳು. ಸಸ್ಯವಿಲ್ಲದೆ ಜೀವವೇ ಅಸಾಧ್ಯ ಎಂಬ ಮಾತು ಅತಿಶಯೋಕ್ತಿಯಲ್ಲ. ಏಕೆಂದರೆ ಸಸ್ಯಗಳು ಆಹಾರ, ಆಮ್ಲಜನಕ, ಔಷಧಿ, ವಸ್ತ್ರ, ವಾಸಸ್ಥಾನ ಮತ್ತು ನೂರಾರು ನೈಸರ್ಗಿಕ ಸಂಪತ್ತುಗಳನ್ನು ಒದಗಿಸುತ್ತವೆ. ಈ ಸಸ್ಯಗಳ ಜೀವನ, ರಚನೆ, ವಿಕಾಸ, ಕ್ರಿಯಾಶೀಲತೆ ಹಾಗೂ ಅವುಗಳ ಪರಿಸರ ಸಂಬಂಧಗಳನ್ನು ಅಧ್ಯಯನ ಮಾಡುವ ಶಾಸ್ತ್ರವನ್ನು ಸಸ್ಯಶಾಸ್ತ್ರ ಅಥವಾ ಬೋಟನಿ (Botany) ಎಂದು ಕರೆಯಲಾಗುತ್ತದೆ. “ಬೋಟನಿ” ಎಂಬ ಪದವು ಗ್ರೀಕ್ ಭಾಷೆಯ Botane ಎಂಬ ಪದದಿಂದ ಉಗಮಿಸಿದ್ದು, ಅದರ ಅರ್ಥ ‘ಔಷಧಿ ಗಿಡ’ ಅಥವಾ ‘ಮೇವು’ ಎಂದು ಬರುತ್ತದೆ. ಆದ್ದರಿಂದ ಸಸ್ಯಶಾಸ್ತ್ರವು ಪೌರಾಣಿಕ ಕಾಲದಿಂದಲೂ ಮಾನವ ಜೀವನಕ್ಕೆ ಆಳವಾಗಿ ಬೆಸೆಯಲ್ಪಟ್ಟಿದೆ.
ಪ್ರಾಚೀನ ಭಾರತದಲ್ಲಿ ಋಷಿಗಳು ಮತ್ತು ಆಯುರ್ವೇದ ತಜ್ಞರು ಸಸ್ಯಗಳ ಉಪಯೋಗ, ಗುಣಧರ್ಮ ಮತ್ತು ಔಷಧೀಯ ಮಹತ್ವಗಳ ಬಗ್ಗೆ ಗ್ರಂಥಗಳನ್ನು ರಚಿಸಿದ್ದರು. ಚರಕ ಸಂಹಿತೆ, ಸುಶ್ರುತ ಸಂಹಿತೆ, ವೃಕ್ಷಾಯುರ್ವೇದ ಮೊದಲಾದವುಗಳಲ್ಲಿ ಸಸ್ಯಗಳ ವಿವರ ಲಭ್ಯ. ಪಾಶ್ಚಾತ್ಯ ದೇಶಗಳಲ್ಲಿ ಅರಿಸ್ಟಾಟಲ್, ಥಿಯೊಫ್ರಾಸ್ಟಸ್ ಮೊದಲಾದ ತತ್ತ್ವಜ್ಞರು ಸಸ್ಯಗಳ ಅಧ್ಯಯನಕ್ಕೆ ಅಡಿಪಾಯ ಹಾಕಿದರು. ವಿಶೇಷವಾಗಿ ಥಿಯೊಫ್ರಾಸ್ಟಸ್ ಅವರನ್ನು “ಸಸ್ಯಶಾಸ್ತ್ರದ ಪಿತಾಮಹ” ಎಂದು ಕರೆಯಲಾಗುತ್ತದೆ. ಆಧುನಿಕ ಯುಗದಲ್ಲಿ ಮೈಕ್ರೋಸ್ಕೋಪ್ ಆವಿಷ್ಕಾರದಿಂದ ಸಸ್ಯಶಾಸ್ತ್ರದ ಅಧ್ಯಯನವು ಮತ್ತಷ್ಟು ವೈಜ್ಞಾನಿಕ ಸ್ವರೂಪ ಪಡೆದು, ಜೀವಕೋಶದ ರಚನೆ, ದೇಹಚಟುವಟಿಕೆಗಳು ಮತ್ತು ಆಣ್ವಿಕ ಮಟ್ಟದ ಪ್ರಕ್ರಿಯೆಗಳ ಅಧ್ಯಯನಕ್ಕೆ ಅವಕಾಶ ನೀಡಿತು.
ಸಸ್ಯಶಾಸ್ತ್ರವು ಬಹಳ ವಿಶಾಲವಾದ ವಿಷಯ. ಇದರಲ್ಲಿ ಹಲವು ಉಪಶಾಖೆಗಳು ಕಂಡು ಬರುತ್ತವೆ. ಉದಾಹರಣೆಗೆ – ಶಾಕವಿಜ್ಞಾನ (Phycology) ಅಲ್ಗೆಗಳ ಅಧ್ಯಯನ, ಕವಕಶಾಸ್ತ್ರ (Mycology) ಶಿಲೀಂಧ್ರಗಳ ಅಧ್ಯಯನ, ಬ್ರಯೋಲಜಿ (Bryology) ಶೈವಲಗಳ ಅಧ್ಯಯನ, ಪ್ಟೆರಿಡಾಲಜಿ (Pteridology) ಪ್ಟೆರಿಡೋಫೈಟ್ಸ್ ಅಧ್ಯಯನ, ಜಿಮ್ನೋಸ್ಪರ್ಮ್ ಶಾಸ್ತ್ರ ಹಾಗೂ ಆಂಜಿಯೋಸ್ಪರ್ಮ್ ಶಾಸ್ತ್ರ ಮುಂತಾದವು. ಇದರ ಜೊತೆಗೆ ಸಸ್ಯ ಶರೀರ ಶಾಸ್ತ್ರ (Physiology), ಸಸ್ಯ ಶಿಲ್ಪಶಾಸ್ತ್ರ (Morphology), ಪರಿಸರಶಾಸ್ತ್ರ (Ecology), ವರ್ಗೀಕರಣ ಶಾಸ್ತ್ರ (Taxonomy), ಕೋಶಶಾಸ್ತ್ರ (Cytology), ಆಣ್ವಿಕ ಜೀವಶಾಸ್ತ್ರ (Molecular Biology) ಮೊದಲಾದ ಶಾಖೆಗಳು ಅಭಿವೃದ್ಧಿ ಹೊಂದಿವೆ. ಈ ಎಲ್ಲ ಉಪಶಾಖೆಗಳು ಸೇರಿ ಸಸ್ಯಶಾಸ್ತ್ರವನ್ನು ಸಮಗ್ರ ವಿಜ್ಞಾನವನ್ನಾಗಿ ರೂಪಿಸಿವೆ.
ಸಸ್ಯಗಳ ವರ್ಗೀಕರಣವು ಸಸ್ಯಶಾಸ್ತ್ರದ ಪ್ರಮುಖ ಅಂಶ. ಪ್ರಾಚೀನ ಕಾಲದಲ್ಲಿ ಸಸ್ಯಗಳನ್ನು ಅವುಗಳ ರೂಪ, ಗಾತ್ರ ಅಥವಾ ಉಪಯೋಗವನ್ನು ಆಧರಿಸಿ ವಿಭಾಗಿಸಲಾಗುತ್ತಿತ್ತು. ಆದರೆ ಆಧುನಿಕ ಯುಗದಲ್ಲಿ ಕಾರ್ಲ್ ಲಿನ್ನಿಯಸ್ ಅವರು ದ್ವಿನಾಮ ಪದ್ಧತಿಯನ್ನು (Binomial Nomenclature) ಪರಿಚಯಿಸಿ, ಪ್ರತಿ ಸಸ್ಯಕ್ಕೆ ವೈಜ್ಞಾನಿಕ ಹೆಸರನ್ನು ನೀಡಿದರು. ಇದರಿಂದಾಗಿ ವಿಶ್ವದ ಎಲ್ಲೆಡೆ ಒಂದು ಗಿಡಕ್ಕೆ ಒಂದೇ ಹೆಸರನ್ನು ಬಳಸುವ ವ್ಯವಸ್ಥೆ ಬಂತು. ಇದು ಸಸ್ಯಶಾಸ್ತ್ರವನ್ನು ಜಾಗತಿಕವಾಗಿ ಅರ್ಥೈಸಿಕೊಳ್ಳಲು ಮಹತ್ವದ ಹಂತವಾಯಿತು.
ಸಸ್ಯಗಳು ಪ್ರಕೃತಿಯಲ್ಲಿ ಕೇವಲ ಹಸಿರು ಸುಂದರತೆ ನೀಡುವುದಲ್ಲ, ಭೂಮಿಯ ಪರಿಸರ ಸಮತೋಲನದಲ್ಲಿ ಅವು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಸಸ್ಯಗಳು ಸೂರ್ಯನ ಶಕ್ತಿಯನ್ನು ಫೋಟೋಸಿಂಥಸಿಸ್ ಮೂಲಕ ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ, ಅದು ಎಲ್ಲಾ ಜೀವಿಗಳಿಗೆ ಉಸಿರಾಟಕ್ಕೆ ಅಗತ್ಯ. ಸಸ್ಯಗಳಿಲ್ಲದೆ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಹೆಚ್ಚಾಗಿ ಭೂಮಿಯ ತಾಪಮಾನ ಏರುತ್ತದೆ, ಪರಿಸರ ದೂಷಣ ಉಂಟಾಗುತ್ತದೆ. ಆದ್ದರಿಂದ ಸಸ್ಯಗಳು ಭೂಮಿಯ “ಹಸಿರು ಶ್ವಾಸಕೋಶ” ಎಂದು ಕರೆಯಲ್ಪಡುತ್ತವೆ.
ಸಸ್ಯಶಾಸ್ತ್ರದ ಅಧ್ಯಯನವು ಮಾನವ ಸಮಾಜಕ್ಕೆ ಅನೇಕ ರೀತಿಯಲ್ಲಿ ಉಪಯುಕ್ತವಾಗಿದೆ. ಕೃಷಿಯಲ್ಲಿ ಉತ್ತಮ ಬೀಜಗಳು, ರೋಗನಿರೋಧಕ ತಳಿಗಳು, ಉತ್ಪಾದಕತೆ ಹೆಚ್ಚಿಸುವ ವಿಧಾನಗಳು—aಎಲಾವು ಸಸ್ಯಶಾಸ್ತ್ರದ ಜ್ಞಾನದಿಂದ ಸಾಧ್ಯವಾಗಿದೆ. ಅರಣ್ಯ ವಿಜ್ಞಾನ, ಉದ್ಯಾನವನ ನಿರ್ಮಾಣ, ಹೂಗಾರಿಕೆ, ಔಷಧ ತಯಾರಿ, ಆಹಾರ ತಂತ್ರಜ್ಞಾನ, ಕಾಗದ, ಬಟ್ಟೆ, ಇಂಧನ ಉತ್ಪಾದನೆ ಮುಂತಾದವುಗಳಲ್ಲಿ ಸಸ್ಯಶಾಸ್ತ್ರದ ಜ್ಞಾನ ಮಹತ್ವದ್ದಾಗಿದೆ. ಅಲ್ಲದೆ, ಇಂದಿನ ಯುಗದಲ್ಲಿ ಬಯೋಟೆಕ್ನಾಲಜಿ ಮತ್ತು ಜನನತಂತ್ರಜ್ಞಾನ (Genetic Engineering) ಕ್ಷೇತ್ರಗಳಲ್ಲಿ ಸಸ್ಯಶಾಸ್ತ್ರ ಪ್ರಮುಖ ಪಾತ್ರವಹಿಸುತ್ತಿದೆ. ಉದಾಹರಣೆಗೆ ಜಿಎಂ ಬೆಳೆಗಳು, ಮೈಕ್ರೋಪ್ರೊಪಗೇಷನ್, ಟಿಷ್ಯೂ ಕಲ್ಚರ್, ಡಿಎನ್ಎ ಫಿಂಗರ್ ಪ್ರಿಂಟಿಂಗ್— ಎಲಾವು ಸಸ್ಯಶಾಸ್ತ್ರದ ಆಧಾರದ ಮೇಲೆ ಅಭಿವೃದ್ಧಿಯಾಗಿದೆ.
ಇದರ ಜೊತೆಗೆ ಔಷಧಶಾಸ್ತ್ರದಲ್ಲಿ ಸಸ್ಯಗಳ ಪಾತ್ರ ಅಮೂಲ್ಯ. ಪ್ರಾಚೀನ ಕಾಲದಿಂದಲೂ ಸಸ್ಯಗಳನ್ನು ಔಷಧೀಯವಾಗಿ ಬಳಸಲಾಗುತ್ತಿತ್ತು. ಇಂದಿಗೂ 80% ಕ್ಕೂ ಹೆಚ್ಚು ಜನಸಂಖ್ಯೆ ಸಸ್ಯ ಮೂಲದ ಔಷಧಿಗಳನ್ನು ಅವಲಂಬಿಸಿದೆ. ತುಳಸಿ, ಅರಿಶಿನ, ಅಶ್ವಗಂಧಾ, ಬ್ರಹ್ಮಿ, ಗಿಲೋಯ್ ಮುಂತಾದ ಸಸ್ಯಗಳು ಆರೋಗ್ಯ ರಕ್ಷಣೆಗೆ ಸಹಕಾರಿ. ಸಸ್ಯಶಾಸ್ತ್ರದ ಆಧಾರದ ಮೇಲೆ ಹೊಸ ಔಷಧ ಸಂಶೋಧನೆಗಳು ನಡೆಯುತ್ತಿವೆ.
ಪರಿಸರ ಸಂರಕ್ಷಣೆಗೂ ಸಸ್ಯಶಾಸ್ತ್ರದ ಮಹತ್ವ ಅಸಾಧಾರಣ. ಅರಣ್ಯ ನಾಶ, ಹವಾಮಾನ ಬದಲಾವಣೆ, ಜೈವವೈವಿಧ್ಯ ನಾಶ, ಮಣ್ಣು-ನೀರು ಮಾಲಿನ್ಯ— ಎಲಾವು ಇಂದಿನ ಜಗತ್ತಿಗೆ ಸವಾಲಾಗಿದೆ. ಈ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಸಸ್ಯಶಾಸ್ತ್ರದ ಜ್ಞಾನ ಅಗತ್ಯ. ಹಸಿರು ಆವರಣ ಹೆಚ್ಚಿಸುವುದು, ಜಲವಾಯು ನಿಯಂತ್ರಿಸುವುದು, ಸಸ್ಯ ಸಂಪತ್ತು ಉಳಿಸುವುದು— ಎಲಾವು ಮಾನವ ಜೀವನದ ಸ್ಥಿರತೆಗೆ ಅವಶ್ಯಕ.
ಒಟ್ಟಿನಲ್ಲಿ ಹೇಳಬೇಕಾದರೆ, ಸಸ್ಯಶಾಸ್ತ್ರವು ಕೇವಲ ಪುಸ್ತಕದ ವಿಷಯವಲ್ಲ; ಅದು ಜೀವನದ ಪಾಠ. ಇದು ನಮಗೆ ಪ್ರಕೃತಿ ಪ್ರೀತಿ, ಪರಿಸರ ಸಂರಕ್ಷಣೆ, ಆರೋಗ್ಯ ರಕ್ಷಣೆಯ ದಾರಿ ತೋರಿಸುತ್ತದೆ. ಪ್ರತಿಯೊಬ್ಬರೂ ಸಸ್ಯಶಾಸ್ತ್ರದ ಮೂಲಭೂತ ಜ್ಞಾನವನ್ನು ತಿಳಿಯಬೇಕು. ಇದು ಮಾನವನಾಗಲಿ, ವಿದ್ಯಾರ್ಥಿಯಾಗಲಿ, ವಿಜ್ಞಾನಿಯಾಗಲಿ—ಎಲ್ಲರಿಗೂ ಅವಶ್ಯಕವಾದ ವಿಜ್ಞಾನ. ಸಸ್ಯಶಾಸ್ತ್ರವನ್ನು ಅರಿತುಕೊಂಡಾಗಲೇ ನಾವು ಪ್ರಕೃತಿಯೊಂದಿಗೆ ಸಮನ್ವಯ ಸಾಧಿಸಿ, ಸುಸ್ಥಿರ ಭವಿಷ್ಯವನ್ನು ನಿರ್ಮಿಸಬಹುದು.
ಸಸ್ಯಶಾಸ್ತ್ರ ಮತ್ತು ಮಾನವ ಕಲ್ಯಾಣ
ಸಸ್ಯಗಳು ಭೂಮಿಯ ಜೀವಸಂಕುಲದ ಜೀವನಾಡಿ. ಅವು ಆಮ್ಲಜನಕವನ್ನು ಒದಗಿಸುವುದರ ಜೊತೆಗೆ ಆಹಾರ ಸರಪಳಿಯ ಮೂಲವಾಗಿವೆ. ಸಸ್ಯಗಳಿಲ್ಲದೆ ಜೀವಜಗತ್ತು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಕೃಷಿ ಅಭಿವೃದ್ಧಿ, ಔಷಧ ನಿರ್ಮಾಣ, ಕೈಗಾರಿಕೆಗಳಿಗೆ ಕಚ್ಚಾ ವಸ್ತು, ವನ್ಯಜೀವಿ ಸಂರಕ್ಷಣೆ, ಪರಿಸರ ಸಮತೋಲನ ಇವೆಲ್ಲವೂ ಸಸ್ಯಗಳ ಮೇಲೆ ಅವಲಂಬಿತವಾಗಿವೆ. ಆದ್ದರಿಂದ ಸಸ್ಯಶಾಸ್ತ್ರವು ಮಾನವ ಕಲ್ಯಾಣಕ್ಕೆ ನೇರ ಸಂಬಂಧ ಹೊಂದಿರುವ ವಿಜ್ಞಾನ.
ವಿದ್ಯಾರ್ಥಿಗಳಿಗೆ ಸಸ್ಯಶಾಸ್ತ್ರದ ಅಗತ್ಯತೆ
ವಿದ್ಯಾರ್ಥಿಗಳು ಸಸ್ಯಶಾಸ್ತ್ರವನ್ನು ಅಧ್ಯಯನ ಮಾಡುವುದರಿಂದ ಅವರಿಗೆ ಪ್ರಕೃತಿಯೊಂದಿಗೆ ಆಳವಾದ ಬಾಂಧವ್ಯ ನಿರ್ಮಾಣವಾಗುತ್ತದೆ. ಪರಿಸರದ ಮಹತ್ವ ಅರಿವಾಗುತ್ತದೆ. ವೈಜ್ಞಾನಿಕ ಕುತೂಹಲ ಬೆಳೆಯುತ್ತದೆ. ಕೃಷಿ, ವನಸಂಪತ್ತು, ಔಷಧ ತಯಾರಿಕೆ, ಪರಿಸರ ವಿಜ್ಞಾನ, ಜೈವ ತಂತ್ರಜ್ಞಾನ ಮೊದಲಾದ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಸಸ್ಯಶಾಸ್ತ್ರ ಆಧಾರವಾಗುತ್ತದೆ.
ಸಮಾರೋಪ
ಸಸ್ಯಶಾಸ್ತ್ರವು ಕೇವಲ ಶಾಸ್ತ್ರೀಯ ಅಧ್ಯಯನವಲ್ಲ, ಅದು ಮಾನವಜೀವನದ ಪ್ರತಿ ಹಂತಕ್ಕೂ ಹತ್ತಿರವಾಗಿ ಸಂಬಂಧಿಸಿದ ವಿಜ್ಞಾನ. ಪ್ರಾಚೀನ ಕಾಲದ ಔಷಧೋಪಯೋಗದಿಂದ ಹಿಡಿದು ಆಧುನಿಕ ಜೀವತಂತ್ರಜ್ಞಾನದವರೆಗೂ ಸಸ್ಯಶಾಸ್ತ್ರದ ಪ್ರಗತಿ ನಿರಂತರವಾಗಿದೆ. ಪ್ರಕೃತಿ ಮತ್ತು ಪರಿಸರವನ್ನು ರಕ್ಷಿಸಿ ಭವಿಷ್ಯದ ಪೀಳಿಗೆಯ ಸುಸ್ಥಿರ ಬದುಕಿಗೆ ನೆರವಾಗಲು ಸಸ್ಯಶಾಸ್ತ್ರವು ದಾರಿದೀಪವಾಗಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ, ಸಂಶೋಧಕ ಮತ್ತು ಸಾಮಾನ್ಯ ಮನುಷ್ಯನು ಸಸ್ಯಗಳ ಮಹತ್ವವನ್ನು ಅರಿತು ಸಂರಕ್ಷಣೆ ಮಾಡುವುದು ಅನಿವಾರ್ಯ.
–ರೋಹಿತ್ ವಿಜಯ್ ಜಿರೋಬೆ