ಅಪ್ಪನೆಂಬ ಬದುಕು ಕಲಿಸಿದ ಗುರು: ನಾಗರಾಜನಾಯಕ ಡಿ. ಡೊಳ್ಳಿನ


“ಅಪ್ಪಾಜಿ” ಅಂದರೆ ಧೈರ್ಯ
“ಅಪ್ಪಾಜಿ” ಅಂದರೆ ಹುರುಪು
“ಅಪ್ಪಾಜಿ” ಅಂದರೆ ಹಸನ್ಮುಖಿ
“ಅಪ್ಪಾಜಿ” ಅಂದರೆ ಕರುಣೆ
“ಅಪ್ಪಾಜಿ” ಅಂದರೆ ಕನಸು
“ಅಪ್ಪಾಜಿ”ಅಂದರೆ ಬೆನ್ನೆಲುಬು
“ಅಪ್ಪಾಜಿ” ಅಂದರೆ ಆತ್ಮವಿಶ್ವಾಸ.
“ಅಪ್ಪಾಜಿ “, ಅಂದರೆ ಪ್ರಯತ್ನ.

ಮೊಬೈಲ್ ನ ವಾಟ್ಸಾಪ್ ನಲ್ಲಿ ಈ ಸಂದೇಶ ಬಂದೊಡನೆ ನನಗೂ ಅಪ್ಪನ ನೆನಪಾಯಿತು. ಅಪ್ಪಾಜಿ ಅಂದರೆ ಎಲ್ಲರಿಗೂ ಅವರವರ ಹೀರೊ. ನಮ್ಮ ತೊದಲು ನುಡಿಗಳನ್ನು ತಿದ್ದುತ್ತ, ಮುದ್ದಿಸುತ್ತಾ, ಬದುಕಿನ ಪಾಠಗಳನ್ನು ಸದ್ದಿಲ್ಲದೇ ಕಲಿಸುವ ಗುರು. ಅಪ್ಪಾಜಿಯೆಂಬ ಗುರು ಯಾವ ವಿಶ್ವವಿದ್ಯಾಲಯದ ಪ್ರೊಫೆಸರ್ ಗಿಂತ ಕಡಿಮೆಯಲ್ಲ.

ಅಪ್ಪಾಜಿಯ ಸೈಕಲ್ಲಿನ ಮುಂದಿನ ಭಾಗದಲ್ಲಿನ ಪುಟಾಣಿ ಸೀಟಿನಲ್ಲಿ ಕೂರಿಸಿ ಕೊಪ್ಪಳದಲ್ಲಿ ಸುತ್ತಾಡಿಸಿದ್ದು, ಅಂಗನವಾಡಿಗೆ ಕಳುಹಿಸಿದ್ದು, ನನ್ನನ್ನು ಬ್ಯಾಡಗಿಯಲ್ಲಿ ಬಿಟ್ಟು ಬರುವಾಗ ಧೈರ್ಯ ಹೇಳಿದ್ದು ನಿನ್ನೆ ಮೊನ್ನೆ ನೆಡದಂತಿದೆ. ಅಪ್ಪಾಜಿ ತನ್ನ ತಾಯಿಯನ್ನು ನೋಡಿದ ನೆನಪಿಲ್ಲ ಯಾಕಂದ್ರೆ ಅಪ್ಪನಿನ್ನು ಎರಡು ವರ್ಷದ ಕಂದಮ್ಮನಾಗಿರುವಾಗಲೇ ತಾಯಿಯನ್ನು ಕಳೆದುಕೊಂಡು ಬೆಳೆದ ಅಪ್ಪನಿಗೆ ತಾಯಿ ಬಗ್ಗೆ ಬಹಳ ಗೌರವ ಪ್ರೀತಿ, ಆ ಕಾರಣಕ್ಕೆ ತಾನು ವಾಸಿಸಲು ಕಟ್ಟಿಸಿದ ಮನೆಗೆ ತಾಯಿ ನೆರಳು ಅಂತ ಹೆಸರಿಟ್ಟಿದ್ದ. ಅಷ್ಟೇ ಅಲ್ಲದೆ ನಮ್ಮೂರಿನಲ್ಲಿ ತನ್ನ ತಾಯಿಯನ್ನು ನೋಡಿದ ವರಸೆಯಲ್ಲಿ ತನಗೆ ಮಾವನಾದ ಕಲಾವಿದ ಯಲ್ಲಪ್ಪರನ್ನು ಮಾವ ನಮ್ಮ ಅವ್ವ ನೋಡಾಕರ ಹೇಂಗ ಇದ್ದಳು ಅಂತ ಅಪ್ಪ ಪದೇ ಪದೇ ಕೇಳುತ್ತಿದ್ದ. ನೀನು ಎಲ್ಲರದೂ ಚಿತ್ರ ಬಿಡಸುವೆ, ನಿನ್ನ ನೆನಪಿನಲ್ಲಿ ಇರುವ ನನ್ನ ಅವ್ವನದು ಒಂದು ಚಿತ್ರ ಬಿಡಿಸು ಅಂತ, ಬಿಡಿಸಿಕೊಂಡು ತನ್ನ ಕೊನೆಗಾಲದವರೆಗೂ ಅದನ್ನು ಫೋಟೊವಾಗಿಸಿ ಜೋಪಾನವಾಗಿಟ್ಟುಕೊಂಡಿದ್ದ. ತಾಯಿ ಪ್ರೀತಿ ಕಾಣದೇ ಬಡತನದಲ್ಲಿ ಬೇಯುತ್ತಾ, ಹಸಿವಿನೊಂದಿಗೆ ಬದುಕಿನ ಪಾಠಗಳನ್ನು ಕಲಿತ ನನ್ನಪ್ಪ. ನಮ್ಮ ಕುಟುಂಬದಲ್ಲೇ ಮೊದಲು ಅಕ್ಷರ ಕಲಿತದ್ದು ಅಪ್ಪನೇ, ಹೀಗಿರಬೇಕಾದರೆ ಅಪ್ಪಾಜಿಯ ನೆನಪು ನಮ್ಮೊಳಗೆ ಆವರಿಸಿಕೊಳ್ಳುತ್ತಿದ್ದಂತೆ ಮೊದಲು ನೆನಪಾಗುವದು

೨ ರೂಪಾಯಿ ನಂದಿಬೆಟ್ಟ

ಅಪ್ಪಾಜಿ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ಹಾಗೂ ಚಿಂತಾಮಣಿಯಲ್ಲಿದ್ದಾಗ ಮದುವೆ ಆಗಿ ಅಮ್ಮನನ್ನು ಕರೆದೊಯ್ದಿದ್ದರು. ತಾವಿದ್ದ ಸ್ಥಳದಿಂದ ನಂದಿ ಬೆಟ್ಟಕ್ಕೆ ಎರಡು ರೂಪಾಯಿ ಚಾರ್ಜು ಇದ್ದರೂ ಅಂದಿನ ಆರ್ಥಿಕ ಪರಿಸ್ಥಿತಿ, ಬದುಕು ಕಟ್ಟಿಕೊಳ್ಳುವ ಭರದಲ್ಲಿ ಹೋಗಲಾಗಲಿಲ್ಲ, ನಿಮ್ಮ ಅಮ್ಮನಿಗೂ ತೋರಿಸಿಲಾಗಲಿಲ್ಲ ಅಂತ ಹೇಳುತ್ತಿದ್ದರು. ಅಣ್ಣ ಅಪ್ಪಾಜಿಗೆ ದೆಹಲಿ ತೋರಿಸಿದ ಹಾಗೆ, ನಾನು ಅಪ್ಪಾಜಿ ಅಮ್ಮ ನನ್ನು ಕರೆದುಕೊಂಡು ಕೋಲಾರ ಹಾಗೂ ಮೈಸೂರು ಪ್ರವಾಸ ಮಾಡಬೇಕೆಂದು ಕೊಂಡಿದ್ದೆ. ಕೋಲಾರದ ಕಲಾವಿದ ಮಿತ್ರ ಮೂಕಯ್ಯ ಕೋಲಾರ ಮನೆಗೆ ಬಂದಾಗ ಅಪ್ಪಾಜಿ ಅವರೊಂದಿಗೆ ಮಾತನಾಡುವಾಗ ತನ್ನ ಅಲ್ಲಿಯ ದಿನಗಳು ಆ ಸ್ಥಳಗಳಕುರಿತು ಮಾತನಾಡುದ್ದರು. ಮೂಕಯ್ಯ ನಾವು ಮಾಡಿದ ವೀರ ಸಿಂಧೂರ ಲಕ್ಷ್ಮಣ ನಾಟಕದ ಸಿಡಿ ಹಾಗೂ ಪುಸ್ತಕವನ್ನು ಪಡೆಯಲು ಬಂದಿದ್ದರು. ಅಲ್ಲಿನ ತಮ್ಮ ಕಲಾಬಳಗದೊಂದಿಗೆ ಆ ನಾಟಕ ಆಡಬೇಕೆನ್ನುವುದು ಅವರ ಆಶಯವೂ ಆಗಿತ್ತು. ನಮ್ಮ ನಾಟಕ ಹಾಗೂ ಅವರ ವಂಶಸ್ಥರನ್ನು ಕರೆಸಿದ್ದನ್ನು ವಾಟ್ಸಾಪ್ ಗ್ರೂಪ್ ನಲ್ಲಿ ನೋಡಿ ನನ್ನ ಸಂಪರ್ಕಕ್ಕೆ ಬಂದಿದ್ದರು. ಪ್ರದರ್ಶನಕ್ಕೆ ಫೋನ್ ಮೂಲಕ ಪ್ರೀತಿಯ ಆಹ್ವಾನವನ್ನು ನೀಡಿದ್ದರು. ಸರ್ ನೀವು ಅಪ್ಪಾಜಿ ಅಮ್ಮನನ್ನು ಕರೆದುಕೊಂಡು ಬನ್ನಿ ನಾವೆಲ್ಲರೂ ಕೂಡಿ ಅವರನ್ನು ಈ ಭಾಗದಲ್ಲಿ ಸುತ್ತಾಡಿಸೋಣ ಅನ್ನುವ ಪ್ರೀತಿಯ ಆಹ್ವಾನ ಜೊತೆಗಿತ್ತು. ಅಪ್ಪಾಜಿ ಅದಾಗಲೇ ಹಾಸಿಗೆ ಹಿಡಿದಿದ್ದರು. ಹೋಗುವ ಸ್ಥಿತಿಯಲ್ಲಿರಲಿಲ್ಲ.

ಅಪ್ಪಾಜಿ ಬಾಯ್ತುಂಬ ಕರೆಯುತ್ತಿದ್ದ ಅಕ್ಷರಗಳು ಮತ್ತೆ ಕೇಳಬಾರದೆ, ಆತನ ಕನಸಿನಂತೆ ಕಟ್ಟಿದ ಹೊಸಮನೆಯಲ್ಲಿ ಜೋಕಾಲಿ ಹಾಕಿ ಅಪ್ಪ ಕುತೂ ಪೇಪರ್ ಓದುವ ದೃಶ್ಯ ಈ ಕಣ್ಣುಗಳು ನೋಡದಂತಾಯಿತು.

ಸವಿನೆನಪು ಕಟ್ಟಿಕೊಟ್ಟ ನಂ ೧೭

೧೯೮೦-೮೩ ರ ಸುಮಾರಿಗೆ ನಮ್ಮ ಕುಟುಂಬ ನೆಲೆ ನಿಂತದ್ದು ಸಿಂಧನೂರಿನಲ್ಲಿ. ರಾಯಚೂರು ಜಿಲ್ಲೆಯ ಸಿಂಧನೂರಿನ ವಸತಿ ನಿಲಯ ನಂ : ೧೭ ರಲ್ಲಿ, ಅಪ್ಪಾಜಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖಾ ಗ್ರಂಥಾಲಯ ಸಿಂಧನೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದು. ಅಪ್ಪಾಜಿ ಅಮ್ಮನಿವೆ ಮೊದಲ ಮಗನಾಗಿ ಅಣ್ಣ ಮಂಜುನಾಥ ಡಿ. ಡೊಳ್ಳಿನ ಅವರ ಜನನ. ಅಜ್ಜ ಫಕೀರಪ್ಪ ಈರಗಾರ ಬಂದುಹೋದ ನೆನಪು. ಹೀಗೆ ಹಲವಾರು ಸಿಹಿ ನೆನಪುಗಳನ್ನು ಕಟ್ಟಿಕೊಟ್ಟಿತು.
ಬಹಳ ವರ್ಷಗಳ ನಂತರ ಇಂದು ಮತ್ತೆ ಕಾರ್ಯ ನಿಮಿತ್ಯ ಮತ್ತೆ ರಾಯಚೂರಿಗೆ ಹೋಗುವಾಗ. ಮಾರ್ಗ ಮಧ್ಯ ಸಿಕ್ಕ ಸಿಂಧನೂರಿನಲ್ಲಿ ತಾವು ವಾಸವಿದ್ದ, ಜೀವನ ಕಳೆದ ಮನೆ ನೋಡಬೇಕೆಂಬ ಅಮ್ಮನ ಆಸೆಯೊಂದಿಗೆ ನಮ್ಮೆಲ್ಲರದು ಆಸೆ ಆಗಿತ್ತು.
ಮನೆ ನೋಡುತ್ತಿದ್ದಂತೆ ಮಾಮ ಇಲ್ಲೇ ಅನ್ನುತ್ತಿದ್ದಂತೆ ಅಣ್ಣ ಸುಮಾರು ಎರಡು ವರ್ಷದ ಮಗು ಆಗಿದ್ದಾಗಿನ ನೆನಪು ಮಾಡಿಕೊಳ್ಳುತ್ತಿದ್ದರು. ಈಗ ವಾಸವಿದ್ದವರ ಅನುಮತಿಯೊಂದಿಗೆ ಮನೆಯ ಪ್ರವೇಶ ಮಾಡಿದ ನಮಗೆ ಅಮ್ಮ ತಮ್ಮ ಅಂದಿನ ದಿನಗಳ ನೆನಪಿಗೆ ಜಾರಿದರು. ಅಣ್ಣನ ಜನನ, ಅಜ್ಜ ಬಂದಿದ್ದು, ತಂಗಿ ಮಲ್ಲಮ್ಮಳ ಶಾಲೆ ಅವಳೊಂದಿಗೆ ಕಳೆದ ದಿನ. ಅಪ್ಪಾಜಿ ಪುಸ್ತಕ ವಿಭಾಗ ಪತ್ರಿಕಾ ವಿಭಾಗ ಹಾಗೂ ಪಕ್ಕದಲ್ಲೇ ವಸತಿ ನಿಲಯ ಹೀಗೆ ಎಲ್ಲವೂ ಅವರ ಸ್ಮೃತಿ ಪಟಲದಲ್ಲಿ ಹಾದು ಹೋದವು. ಸಾಂಸಾರಿಕ ಬದುಕಿನ ಆರಂಭದ ದಿನಗಳು, ಅಣ್ಣ ಅಂಬೆಗಾಲಿನಲ್ಲಿ ನಲಿದಾಡಿದ ಮನೆ, ಓದುಗರಿಗೆ ಅಪ್ಪಾಜಿ ಪುಸ್ತಕ ವಿತರಿಸಿದ್ದು ಎಲ್ಲವೂ ನೆನಪಿಗೆ ಬಂದವು ಅಮ್ಮ ಮನೆಯನ್ನೆಲ್ಲಾ ಒಂದು ಸುತ್ತು ಹಾಕಿ ಅಂದಿನ ನೆನಪುಗಳಿಗೆ ಜಾರಿದರು. ಅಪ್ಪಾಜಿಯು ಇದ್ದಿದ್ದರೆ ಆ ಖುಷಿಯ ಬೇರೆ. ಅಪ್ಪನ ನೆನಪಲ್ಲಿ ನಮ್ಮ ಕುಟುಂಬ ಬದುಕಿದ ಮನೆಯನ್ನು ಕಣ್ತುಂಬಿಕೊಂಡೆವು.

ಸಿಂಧನೂರಿನಿಂದ ಕೊಪ್ಪಳಕ್ಕೆ ವರ್ಗಾವಣೆಯೊಂದಿಗೆ ಬಂದ ಅಪ್ಪಾಜಿ ಮುಂದೆ ಕೊಪ್ಪಳದಲ್ಲೆ ನೆಲಸಿದ್ದು ಈಗ ಇತಿಹಾಸ. ಕೊಪ್ಪಳಕ್ಕೆ ಬಂದ ಮೇಲೆ ಅಕ್ಕಂದಿರ ಹಾಗೂ ನನ್ನ ಜನನ. ಬದುಕಿಗೆ ತಾಯಿ ನೆರಳು, ಹೀಗೆ ಎಲ್ಲವೂ ಮತ್ತೇ ಮತ್ತೇ ನೆನಪು ಮಾಡಿಕೊಳ್ಳುತ್ತಲೇ ಅಲ್ಲಿಂದ ನೆನಪುಗಳನ್ನು ಕಟ್ಟಿಕೊಂಡು ಬಂದಿದ್ದೇವೆ. ಕೊಪ್ಪಳದಲ್ಲೂ ನಾವು ಬಹುಕಾಲ ವಾಸವಿದ್ದ ಮನೆ ಯ ಸಂಖ್ಯೆ ನಂ ೧೭ ಬದುಕಿನಲ್ಲಿ ಎಂದೂ ಅಂಕೆ ಸಂಖ್ಯೆಗಳ ಶಾಸ್ರö್ತಕ್ಕೆ ಬೆಲೆ ಕೊಡದ ಅಪ್ಪ, ನಂಬುತ್ತಿದ್ದದ್ದು ಬದುಕಿನ ಕಾಯಕವೇ ಕೈಲಾಸ ಅನ್ನುವವರನ್ನು, ಮೂಢ ನಂಬಿಕೆಗಳಿಗೆ ಬೆಲೆ ಕೊಡುತ್ತಿರಲಿಲ್ಲ.

೧೯೭೯ ರ ಆಸುಪಾಸಿನಲ್ಲಿ ಅಪ್ಪಾಜಿ ರಾಯಚೂರಿಗೆ ಬಂದ ಅಪ್ಪಾಜಿ ಕೆಲವೇ ದಿನಗಳಲ್ಲಿ ಸಿಂಧನೂರಿಗೆ ಬಂದರು. ಮೂರು ವರ್ಷಗಳ ನಂತರ ೧೯೮೩ ರಲ್ಲಿ ಕೊಪ್ಪಳಕ್ಕೆ ಬಂದೆವು. ಈ ಬಿಸಿಲೂರುಗಳೇ ನಮ್ಮ ಪಾಲಿಗೆ ತಂಪೆರೆದವು. ಸಿಂಧನೂರು ಮತ್ತು ಕೊಪ್ಪಳದಲ್ಲಿ ಗ್ರಂಥಾಲಯಗಳ ಶಾಖೆ ತೆರದಿದ್ದು ಅಪ್ಪಾಜಿಯವರು.
ವೃತ್ತಿ ಪ್ರೇಮಿ ನನ್ನಪ್ಪ ದೇವೇಂದ್ರಪ್ಪ ಎನ್ ಡೊಳ್ಳಿನ
ಹೈದರಾಬಾದ್ ಕರ್ನಾಟಕ ಪ್ರದೇಶದ ಕೊಪ್ಪಳ ಭಾಗದಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಓದುಗಸ್ನೇಹಿಯಾಗಿ ಬೆಳೆಸಿ, ಪುಸ್ತಕ ಪ್ರೀತಿಯನ್ನು ಜನಸಮುದಾಯದಲ್ಲಿ ಹೆಚ್ಚಿಸಲು ತಮ್ಮ ಸೇವಾವಧಿಯ ಉದ್ದಕ್ಕೂ ಶ್ರಮಿಸಿದ ಕೊಪ್ಪಳದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ ಗ್ರಂಥಪಾಲಕ ದಿವಂಗತ. ದೇವೆಂದ್ರಪ್ಪ ಎನ್ . ಡೊಳ್ಳಿನ ಅವರು , ಸಾರ್ವಜನಿಕ ಗ್ರಂಥಾಲಯದ ಏಳ್ಗೆಗೆ ತಮ್ಮ ಬದುಕು ಸವೆಸಿದ ಹಾದಿಯ ಒಂದು ಮೆಲುಕು ಇಲ್ಲಿದೆ.

ಸಾರ್ವಜನಿಕ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸುತ್ತಲೇ ತಮ್ಮ ಇಲಾಖೆಯನ್ನು ಜನರೆಡೆಗೆ ಒಯ್ದ ಗ್ರಂಥಪಾಲಕರಿವರು. ತಾನು ಸೇವೆ ಸಲ್ಲಿಸಿದ ಇಲಾಖೆಗೆ ಕೊಪ್ಪಳದಲ್ಲಿ ಸ್ವಂತ ನಿವೇಶನ ದೊರಕಿಸಿ, ಕಟ್ಟಡವಾಗಲು ಶ್ರಮಿಸಿದವರು, ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತ, ಸದ್ದಿಲ್ಲದೆ ಓದುಗರ ದಾಹ ತೀರಿಸುತ್ತ ಸೇವೆ ಒದಗಿಸಿದವರು. ಸ್ವತಃ ಹಾಸ್ಟೇಲು ಜೀವನದ ಅನುಭವವಿದ್ದ ದೇವೆಂದ್ರಪ್ಪ ಎನ್. ಡೊಳ್ಳಿನ ಅವರು ವಿಶೇಷವಾಗಿ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳು ತಪ್ಪದೇ ಗ್ರಂಥಾಲಯಕ್ಕೆ ಬರುವುದನ್ನು ಪ್ರೋತ್ಸಾಹಿಸುತ್ತಿದ್ದರು. ಕ್ರೀಡೆ ಮತ್ತು ಗ್ರಂಥಾಲಯದ ನಿಕಟ ಸಂಪರ್ಕದಲ್ಲಿ ಇರುವ ಎಲ್ಲ ವ್ಯಕ್ತಿಗಳೂ ಸಮಾಜಕ್ಕೆ ಉತ್ತಮ ಮಾನವ
ಸಂಪನ್ಮೂಲವಾಗಬಲ್ಲರು ಎಂಬ ನಂಬಿಕೆಯಿರಿಸಿಕೊಂಡು ಅದರಂತೆ ಬದುಕಿದವರು. ಪುಸ್ತಕ ವಿತರಣೆಯ ವೃತ್ತಿಯ ಜೊತೆಗೆ ಕೊಪ್ಪಳದಲ್ಲಿ ಕುಸ್ತಿ, ಕಬಡ್ಡಿ ಪಂದ್ಯಾವಳಿಗಳ ಆಯೋಜನೆಯಲ್ಲಿಯೂ ಅವರು ಉತ್ಸುಕತೆಯಿಂದ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.

೧೯೮೩ ರ ಸಮಯ ಆಗಿನ್ನೂ ಕೊಪ್ಪಳ ರಾಯಚೂರು ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯ ಒಂದು ಪುಟ್ಟ ಶಾಖೆಯಾಗಿ ಅಸ್ತಿತ್ವಕ್ಕೆ ಬಂದಿತ್ತು. ಅದಕ್ಕೂ ಮುನ್ನ ಸಾರ್ವಜನಿಕ ವಾಚನಾಲಯಗಳು ನಗರ ಸ್ಥಳೀಯ ಸಂಸ್ಥೆಗಳ ಮೂಲಕವೇ ನಡೆಯುತ್ತಿದ್ದವು. ನಂತರ ಅವುಗಳನ್ನೆಲ್ಲ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವ್ಯಾಪ್ತಿಗೆ ಸೇರಿಸುವ ಕಾರ್ಯ ಎಂಬತ್ತರ ದಶಕದಲ್ಲಿ ರಾಜ್ಯದಾದ್ಯಂತ ನಡೆಯಿತು.

ದೇವೇಂದ್ರಪ್ಪ ಎನ್ ಡೊಳ್ಳಿನ ಕೊಪ್ಪಳಕ್ಕೆ ಬಂದು ೧೯೮೩ ರಲ್ಲಿ ಸಾರ್ವಜನಿಕ ಗ್ರಂಥಾಲಯ ಆರಂಭಿಸಿ, ಇಲ್ಲಿಯೇ ನೆಲೆ ನಿಂತು ಇಲ್ಲಿಯೇ ೨೦೦೬ ರಲ್ಲಿ ನಿವೃತ್ತರಾಗುವವರೆಗೆ ಸುಮಾರು ೨೬ ವರ್ಷಗಳ ಕಾಲ ಸುದೀರ್ಘ ತಮ್ಮ ಸೇವಾವಧಿಯಲ್ಲಿ ಕೊಪ್ಪಳ ಜನರ ಮನಸ್ಸಿನಲ್ಲಿ ಉಳಿಯುವಂಥ ಗ್ರಂಥಪಾಲಕರೆನಿಸಿದರು.

ಕೊಪ್ಪಳದ ಅಶೋಕ ವೃತ್ತದಲ್ಲಿನ ಈಗ ಸಾಹಿತ್ಯ ಭವನ, ಲಯನ್ಸ್ ಕಣ್ಣಿನ ಆಸ್ಪತ್ರೆ ಇರುವ ಸ್ಥಳದಲ್ಲಿ ಆಗ ಹಳೆಯ ಬಸ್ ನಿಲ್ದಾಣವಿತ್ತು. ಖಾಸಗಿ ಬಸ್ಸುಗಳೇ ಅಧಿಕವಾಗಿದ್ದವು. ಪುಟ್ಟ ತಾಲೂಕು ಕೇಂದ್ರವಾಗಿದ್ದ ಕೊಪ್ಪಳದಲ್ಲಿ ಆಗ ಜನಸಂಚಾರ, ವಾಹನ ಸಂಚಾರವೂ ಅಷ್ಟೇ ವಿರಳವಾಗಿತ್ತು.

ಅದರ ಆವರಣದಲ್ಲಿಯೇ ಈಗ ಸಾರ್ವಜನಿಕ ಗ್ರಂಥಾಲಯ ಇರುವ ಸ್ಥಳದಲ್ಲಿಯೇ ಇದ್ದ , ಹೈದರಾಬಾದ್ ನವಾಬರ ಕಾಲದ ಐತಿಹಾಸಿಕ ಹಂಚಿನ ಕಟ್ಟಡದಲ್ಲಿ ಗ್ರಂಥಾಲಯ ತಲೆ ಎತ್ತಿತು.

ಗ್ರಂಥಾಲಯಕ್ಕೆ ನಿವೇಶನ, ಕಟ್ಟಡ

ಕೊಪ್ಪಳದಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ನೀವೆಶನ ಪಡೆಯಲು ಡಿ. ಎನ್. ಡೊಳ್ಳಿನ ತಮ್ಮ ಹುದ್ದೆಯ ಇತಿಮಿತಿಗಳ ನಡುವೆಯೂ ಕೊಪ್ಪಳದ ಅಂದಿನ ಸಾಹಿತಿಗಳ, ಹೋರಾಟಗಾರರ, ವಿದ್ಯಾರ್ಥಿ ಸಂಘಟನೆಗಳು ಹಾಗೂ ಗ್ರಂಥಾಲಯ ಓದುಗರ ಸಹಕಾರ ಪಡೆದು ಅಂದಿನ ಕೊಪ್ಪಳ ಪುರಸಭೆಯ ಮೂಲಕ ಗ್ರಂಥಾಲಯ ಇಲಾಖೆಗೆ ನಿವೇಶನ ಪಡೆಯಲು ಪ್ರಮುಖಪಾತ್ರವಹಿಸಿದರು ಎಂದು ಆಗ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯದ ನಿರ್ದೇಶಕರಾಗಿದ್ದ ಟಿ. ಮಲ್ಲೇಶಪ್ಪ, ಹೊಂಡದಕೇರಿ, ಬಡ್ನಿ, ಡಾ. ಸತೀಶಕುಮಾರ ಹೊಸಮನಿ ಈಗಲೂ ನೆನಪಿಸಿಕೊಳ್ಳುತ್ತಾರೆ.
ನಂತರ ಹಳೆಯ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ತಲೆ ಎತ್ತಲೂ ಕೂಡ ಇವರು ಅಹರ್ನಿಶಿಯಾಗಿ ದುಡಿದದ್ದನ್ನು ಕೊಪ್ಪಳದ ಜನ ಈಗಲೂ ಸ್ಮರಿಸುತ್ತಾರೆ.

ಬಡವರ ಪಾಲಿನ ಮಾರ್ಗದರ್ಶಕ:
ಓರ್ವ ಗ್ರಂಥಪಾಲಕ ಉತ್ತಮ ಮಾಹಿತಿಯುಳ್ಳ ಸಂಪನ್ಮೂಲ ವ್ಯಕ್ತಿಯಾಗಿಯೂ ಇರಬೇಕು ಎಂಬಂತೆ ಡಿ. ಎನ್. ಡೊಳ್ಳಿನ ತಮ್ಮ ಕರ್ತವ್ಯವನ್ನು ಸರಸ್ವತಿ ದೇಗುಲದ ಸೇವೆ ಎಂಬ ಶ್ರದ್ಧೆಯೊಂದಿಗೆ ಪ್ರೀತಿಯಿಂದ ನಿರ್ವಹಿಸಿದರು.

ಮಾಹಿತಿ ತಂತ್ರಜ್ಞಾನ ಈಗಿನಷ್ಟು ಅಭಿವೃದ್ಧಿ ಹೊಂದಿರದ ಕಾಲದಲ್ಲಿ ಪತ್ರಿಕೆಗಳು, ನಿಯತಕಾಲಿಕೆಗಳು ಹಾಗೂ ಸರ್ಕಾರದ ಗೆಜೆಟ್ ಗಳೇ ಆಗ ಮಾಹಿತಿಯ ಏಕೈಕ ಮೂಲಗಳಾಗಿದ್ದವು.
ಅವುಗಳಲ್ಲಿ ಪ್ರಕಟವಾಗುತ್ತಿದ್ದ ವಿವಿಧ ಪ್ರಕಟಣೆಗಳನ್ನು ಗುರುತಿಸಿ ತಮ್ಮ ಗ್ರಂಥಾಲಯಕ್ಕೆ ಬರುತ್ತಿದ್ದ ಅರ್ಹ ಓದುಗರಿಗೆ ಸ್ವತಃ ಒದಗಿಸಿ ಅರ್ಜಿ ಹಾಕಲು ಮಾರ್ಗದರ್ಶನ ಮಾಡುತ್ತಿದ್ದರು. ಅವರು ಸಿಂಧನೂರಿನ ಗ್ರಂಥಾಲಯದಲ್ಲಿದ್ದಾಗ ಅಂದು ನನ್ನ ವಿದ್ಯಾರ್ಹತೆ ಗಮನಿಸಿ ಭಾಷಾಂತರ ಇಲಾಖೆಗೆ ಅರ್ಜಿ ಸಲ್ಲಿಸಲು ಸೂಚಿಸಿದ ಕಾರಣದಿಂದಾಗಿಯೇ ಆ ಇಲಾಖೆಯ ಅತ್ಯುನ್ನತ ಹುದ್ದೆಯಾಗಿರುವ ನಿರ್ದೇಶಕ ಹುದ್ದೆಗೆ ಏರಲು ಕಾರಣವಾಯಿತು ಎಂದು ಹೆಸರಾಂತ ಸಾಹಿತಿ, ಭಾಷಾಂತರ ಇಲಾಖೆಯ ನಿವೃತ್ತ ನಿರ್ದೇಶಕ ಈರಪ್ಪ ಎಂ. ಕಂಬಳಿ ಈಗಲೂ ಸ್ಮರಿಸುತ್ತಾರೆ. ಇವರಂತೆ ಗ್ರಂಥಾಲಯದಲ್ಲಿ ಮಾಹಿತಿ ಪಡೆದ ಅದೆಷ್ಟೊ ಯುವಕರು ಇಂದು ನ್ಯಾಯಾಧೀಶರಾಗಿ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಉಪನ್ಯಾಸಕ, ಕೃಷಿ ಇಲಾಖೆ, ವಿವಿಧ ಕಡೆ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಯಾವುದೇ ಉನ್ನತ ಗೆಜೆಟೆಡ್ ಹುದ್ದೆ ಅಲಂಕರಿಸದೆ, ಸಾರ್ವಜನಿಕ ಗ್ರಂಥಾಲಯದಲ್ಲಿ ತಮ್ಮ ವೃತ್ತಿ ಪ್ರೇಮದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದ ಡಿ. ಎನ್. ಡೊಳ್ಳಿನ ಅವರು ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದವರು. ಹುಟ್ಟೂರು ಪಶುಪತಿಹಾಳ, ಕುಂದಗೋಳ, ಹುಬ್ಬಳ್ಳಿಯಲ್ಲಿ ಶಿಕ್ಷಣ ಪೂರೈಸಿ ಬೆಂಗಳೂರಿನಲ್ಲಿ ಸಿ. ಲಿಬ್. ಸೈನ್ಸ್ ಗ್ರಂಥಾಲಯ ತರಬೇತಿ ಪಡೆದು ನಂತರ ಕೋಲಾರ ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ, ರಾಯಚೂರು, ಸಿಂಧನೂರು, ಕೊಪ್ಪಳದಲ್ಲಿ ಸೇವೆ ಸಲ್ಲಿಸಿ ೨೦೦೬ ರಲ್ಲಿ ಸೇವಾ ನಿವೃತ್ತಿ ಹೊಂದಿ ಕೊಪ್ಪಳದಲ್ಲೆ ನೆಲೆಸಿದ್ದರು. ಕಳೆದ ೨೦೧೮ ರ ಅಕ್ಟೊಬರ್ ೨೯ ರಂದು ಮರಳಿ ಬಾರದ ಲೋಕಕ್ಕೆ ಪಯಣಿಸಿದರು.

ಡಾ. ಬಿ. ಆರ್. ಅಂಬೇಡ್ಕರ ನಿವಾಸ
ಅಣ್ಣ ಆಕಾಶವಾಣಿಯಲ್ಲಿ ಸೇವೆಸಲ್ಲಿಸುತ್ತಿದ್ದ ದಿನಗಳವು, ಆಕಾಶವಾಣಿಯ ತರಬೇತಿಗಾಗಿ ದೆಹಲಿಗೆ ನಿಯೋಜಿಸಿದಾಗ ಅಣ್ಣ ತಮ್ಮೊಂದಿಗೆ ಅಪ್ಪಾಜಿ ಅಮ್ಮನೊಂದಿಗೆ ನನ್ನನ್ನು ಕರದುಕೊಂಡು ಹೋಗಿದ್ದ. ದೆಹಲಿಯ ವಿಧಾನಸೌಧದ ಎದುರುಗಡೆ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಸಚಿವರಿದ್ದಾಗ ಕೆಲಕಾಲ ತಂಗಿದ್ದ ಮನೆಯ ಒಂದು ಭಾಗವನ್ನು ಗ್ರಂಥಾಲಯ ಹಾಗೂ ಮತ್ತೊಂದು ಭಾಗವನ್ನು ಮ್ಯೂಸಿಯಂ ಮಾಡಿದ್ದಾರೆ,
ಅದು ಬಾಬಾಸಾಹೇಬ ರು ಇದ್ದ ಮನೆಯಂದೊಡನೆ ಅಪ್ಪಾಜಿ ಕಣ್ಣಲ್ಲಿನ ಖುಷಿ, ಹಾಗೂ ಧನ್ಯತಾ ಭಾವದಿಂದ ಕೈ ಮುಗಿದು, ಅಂಬೇಡ್ಕರ ವಾಸವಿದ್ದ ನಡೆದಾಡಿದ ನೆಲದಲ್ಲಿ ನಾವಿದ್ದೇವೆ ಎಂಬ ಸಂಭ್ರಮ ಪಟ್ಟಿದ್ದರು ಅಪ್ಪ. ಇಂದಿರಾಗಾಂಧಿ ಮನೆ, ಅಕ್ಷರ ಧಾಮ, ತಾಜ್ ಮಹಲ್, ಕೆಂಪುಕೋಟೆ, ಮಥುರಾ, ಫತೇಫುರ ಸಿಕ್ರಿ, ರಾಷ್ಟ್ರಪತಿ ಭವನ, ಸಂಸತ್ ಭವನ ಎಲ್ಲವನ್ನು ಖುಷಿಯೊಂದಿಗೆ ನೋಡಿದ್ದ ಅಪ್ಪಾಜಿ.

ಹೊಸತು ಮಾಸಪತ್ರಿಕೆಯಲ್ಲಿ ನನ್ನ ದೇವರಿಗೊಂದು ಪತ್ರ ಪ್ರಬಂಧ ಪ್ರಕಟವಾದಾಗ ಓದಿ, ಖುಷಿಪಟ್ಟು ಸಂಭ್ರಮಿಸಿದರು. ಈ ತರಹದೇ ಬರಹಗಳೇ ಪುಸ್ತಕದಲ್ಲಿ ಪ್ರಕಟಗೊಳ್ಳುತ್ತವೇ ಅನ್ನುವ ಅಪ್ಪಾಜಿಯ ಮಾತಿನಂತೆ, ನನ್ನ ಸಾಹಿತ್ಯ ಅಕಾಡೆಮಿಯ ಸಂಕಲನ ಪ್ರಬಂಧ ೨೦೧೬ ರ ಸಂಕಲನದಲ್ಲಿ ಪ್ರಕಟವೂ ಆಯಿತು. ಅಪ್ಪಾಜಿ ಇದ್ದಾಗ ಬರಬೇಕಿತ್ತು ಆದರೆ ಅದು ಇಂದು ಕೈ ಸೇರಿದೆ.

ಅದೊಂದು ದಿನ ಅಪ್ಪಾಜಿಯ ನೆನಪಲ್ಲಿ ಎಂದಿನಂತೆ ಗ್ರಂಥಾಲಯಕ್ಕೆ ಆಗಮಿಸಿದ ನನ್ನನ್ನು ಬರಮಾಡಿಕೊಂಡಿದ್ದು, ಅಪ್ಪಾಜಿ ಗೆಳೆಯ ಗೊಂಡಬಾಳದ ನೀಲಕಂಠಯ್ಯ ಹಿರೇಮಠ ಅವರು. ನನ್ನ ನೋಡಿ ಮಾತನಾಡಲು ಆಗದೇ ಅತ್ತಲಿತ್ತ ಓಡಾಡುತ್ತಿದ್ದ ಆ ಹಿರಿಯ ಜೀವಿ ನನ್ನ ಬಳಿ ಬಂದು, ನಿಮ್ಮ ಅಪ್ಪಾಜಿಯ ಅಗಲಿಕೆ ನನಗೆ ನಿನ್ನೆಯಷ್ಟೇ ತಿಳಿಯಿತು. ನಾನು ಮುಂಬೈನ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದೆ ಇದೀಗ ನಿವೃತ್ತಿ ಜೀವನವನ್ನು ಮುಂಬೈನಲ್ಲೆ ಕಳೆಯುತ್ತಿರುವೆ. ಅಂದರು. ಅಪ್ಪಾಜಿ ಯೊಂದಿಗಿನ ಅವರ ಗೆಳೆತನ ನೆನೆದು ಭಾವುಕರಾದರು. ಅವರೊಬ್ಬ ನನ್ನ ಪ್ರೀತಿಯ ಮಿತ್ರರಾಗಿದ್ದರು ಅಂತ ನುಡಿದು, ಅವರ ಮಕ್ಕಳಾದ ನಮ್ಮೆಲ್ಲರ ಬಗ್ಗೆ ಕ್ಷೇಮ ವಿಚಾರಿಸಿ, ಅಪ್ಪಾಜಿಯು ಬದುಕಿದಂತೆ ಬದುಕಿ ಅಂತ ಹಾರೈಸಿದರು. ನಾ ಬರುವ ಮುಂಚೆ ಗ್ರಂಥಾಲಯದಲ್ಲಿ ಅಪ್ಪಾಜಿಯ ಅಗಲಿಕೆ ವಿಷಯವನ್ನು ಖಚಿತ ಪಡಿಸಿಕೊಂಡ ಅವರ ಕಣ್ಣಲ್ಲಿ ನೀರಾಡಿದ್ದನ್ನು ಸಿಬ್ಬಂದಿ ಹುಲಿಗೆಮ್ಮ ಹೇಳಿದಳು.

ಕೊಪ್ಪಳದಲ್ಲಿ ಅದೆಷ್ಟೊ ಅಸಂಖ್ಯ ಜನ ಪೊಲೀಸ್, ಶಿಕ್ಷಕ, ಬ್ಯಾಂಕ್, ವಕೀಲರು, ಪತ್ರಕರ್ತರು, ರಾಜಕೀಯ ಮುಖಂಡರು, ವಿವಿಧ ರೀತಿಯ ವೃತ್ತಿಯಲ್ಲಿರುವವರೆಲ್ಲಾ ನಿಮ್ಮ ಅಪ್ಪಾಜಿ ನಮಗೆ ಗ್ರಂಥಾಲಯಕ್ಕೆ ಕರೆದೊಯ್ದು ಓದಲು ಪುಸ್ತಕ ನೀಡುತ್ತಿದ್ದರು ಅಂತ ಈಗಲೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ.

ಬದುಕಿನಲ್ಲಿ ಗ್ರಂಥಾಲಯದೊಂದಿಗೆ ಬೆರತ ಜೀವ ಅಪ್ಪನದು, ಕೊಪ್ಪಳದ ಸಾಹಿತಿಗಳು, ಹೋರಾಟಗಾರರು, ಪ್ರಗತಿಪರರು ಹೀಗೆ ಎಲ್ಲರೊಂದಿಗೆ ಪ್ರೀತಿಯ ನಂಟು. ಕೊಪ್ಪಳ ಜಿಲ್ಲಾ ಹೋರಾಟದಲ್ಲಿ ಹಾಗೂ ಕೊಪ್ಪಳದಲ್ಲಿ ನಡೆದ ಸಮುದಾಯದ ಜಿ. ಕೆ. ಗೋವಿಂದರಾವ್ ಅವರ ಈಶ್ವರ ಅಲ್ಲಾ ನಾಟಕ ಪ್ರದರ್ಶನ. ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವೇದಿಕೆಯಲ್ಲಿ ಕಾಣದಿದ್ದರೂ ತೆರೆಮರೆಯಲ್ಲಿ ನೇಪಥ್ಯಗಾರನಂತೆ ಕೆಲಸ ಮಾಡುತ್ತಿದ್ದರು.

ಅಪ್ಪಾಜಿ ಇತಿಹಾಸವನ್ನು ಅರಿತಿದ್ದ,

ಡಾ, ಬಾಬಾಸಾಹೇಬ್ ಅಂಬೇಡ್ಕರ್, ಪೆರಿಯಾರ, ಸದ್ಗುರು ಶ್ರೀ ಸಿದ್ಧಾರೂಢರು, ಗುರುನಾಥರೂಢರು, ಶಿಶುನಾಳ ಶರೀಫಜ್ಜನ ಬಗ್ಗೆ ಅವರ ವಿಚಾರ ಅರ್ಥಮಾಡಿಸುತ್ತಿದ್ದ. ನಾವೆಲ್ಲಾ ಪದವಿ ಮೆಟ್ಟಿಲು ಹತ್ತುವವರೆಗೂ ನಮಗೆಲ್ಲಾ ಮನೆದೇವರು ಬಗ್ಗೆ ಹೇಳಿರಲಿಲ್ಲ, ಅದರ ಅರ್ಥ ದೇವರ ಬಗ್ಗೆ ತಿಳಿದುಕೊಳ್ಳಬಾರದು ಅಂತ ಅಲ್ಲ, ಮೊದಲು ತಿಳಿದುಕೊಳ್ಳಬೇಕಾದ್ದನ್ನು ಪ್ರೀತಿಯಿಂದಲೇ ತಿಳಿಸುತ್ತ ಹೋದ. ಅಪ್ಪಾಜಿ ನನ್ನ ಹಿರಿಯ ಅಕ್ಕ ಪಲ್ಲವಿಗೆ ತನ್ನ ತಾಯಿ ಅಂತ ಕರೆಯುತ್ತಿದ್ದ ನಮ್ಮವ್ವ ಅಂತ ಹೇಳುತ್ತಿದ್ದ. ಅಪ್ಪನ ಕೊನೆಯ ದಿನಗಳಲ್ಲಿ ನನ್ನ ಅಕ್ಕ ಎಂಬ ನನ್ನಪ್ಪನ ತಾಯಿ ಅವಳ ಸೇವೆ ನಮಗೆಲ್ಲರಿಗೂ ಮಾದರಿ. ಓದುಗರ ಪ್ರೀತಿಯ ಗ್ರಂಥಾಲಯದಲ್ಲಿ ಅಪ್ಪ ಪ್ರಿಯವಾಗಿದ್ದರೆ, ಅಣ್ಣ ಮಂಜುನಾಥ ಡಿ. ಡೊಳ್ಳಿನ ಪತ್ರಿಕಾರಂಗ ಮತ್ತು ದೃಶ್ಯಮಾಧ್ಯಮದಲ್ಲಿ ಕೆಲಸಮಾಡಿ, ಇದೀಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಪ್ಪಾಜಿಯಂತೆ ಅಮ್ಮನದು ಹೋರಾಟದ ಬದುಕು, ತನ್ನೂರಿನಲ್ಲಿ ಪ್ರೌಢಶಾಲೆ ಪ್ರವೇಶಿಸಿದ ಮೊದಲ ಮಹಿಳೆಯೂ ನನ್ನ ತಾಯಿ. ಅದು ಅವರ ಅಪ್ಪ ನನ್ನ ಅಜ್ಜ ಶಿಕ್ಷಕನಾಗಿದ್ದರು. ಊರಲ್ಲಿ ಪ್ರೌಢಶಾಲಾ ತೆರೆದಾಗ ಪ್ರೌಢಶಾಲಾ ಸಿಬ್ಬಂದಿ ಆಡಳಿತ ಮಂಡಳಿಯವರು ಮಾಸ್ತರ ನಿನ್ನ ಮಗಳನ್ನು ಶಾಲೆಗೆ ಕಳುಹಿಸಿ ಅಂದಿದ್ದಕ್ಕೆ ಅಮ್ಮ ಪ್ರೌಢಶಾಲಾ ಮೆಟ್ಟಿಲು ಹತ್ತಿದ್ದು. ಮುಂದೆ ಅಪ್ಪನು ಅಮ್ಮನನ್ನು ಮೆಟ್ರಿಕ್ ವರೆಗೆ ಓದಿಸಿ ತನ್ನದೇ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿ ಅಂತ ಸೇವೆ ಸಲ್ಲಿಸಿ ಇತ್ತೀಚಿಗಷ್ಟೇ ವಯೋನಿವೃತ್ತಿ ಪಡೆದಿದ್ದಾರೆ. ಒಂದು ತಾಟಿನೊಂದಿಗೆ ದೂರದ ಕೋಲಾರಕ್ಕೆ ಹೋಗಿ, ಅಲ್ಲಿಂದ ರಾಯಚೂರು ಸಿಂಧನೂರು ಹೀಗೆ ಬಂದು ಕೊಪ್ಪಳದಲ್ಲಿ ತಾಯಿನೆರಳು ಆಶ್ರಯದಲ್ಲಿ ಬದುಕು ಕಟ್ಟಿಕೊಂಡಿದ್ದು ಸಣ್ಣ ಸಾಧನೆ ಅಂತೂ ಅಲ್ಲವೇ ಅಲ್ಲ. ಅಪ್ಪನ ಸೇವೆಯ ಪ್ರತಿಫಲ ಕಾಯಕವೇ ಕೈಲಾಸ ಅಂತ ದುಡಿದ್ದರಿಂದಲೇ ಅಮ್ಮನ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ನಮ್ಮೊಂದಿಗೆ ದೈಹಿಕವಾಗಿ ಇಲ್ಲದ ಅಪ್ಪಾಜಿ ಅವರ ಸೇವೆಯ ನೆನೆಪಿಸಿದರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರು.

ಅಪ್ಪಾಜಿಯೂ ಕೋಟ್ಯಾಂತರ ಅಭಿಮಾನಿಗಳ ವರನಟ ಡಾ. ರಾಜಕುಮಾರ ಅವರ ಅಪ್ಪಟ ಅಭಿಮಾನಿ. ಬಂಗಾರದ ಮನುಷ್ಯ ಚಲನಚಿತ್ರ ನೋಡಿದಾಗಲೆಲ್ಲ ನಾನು ಅಣ್ಣಾವ್ರಂತೆ ಕೃಷಿ ಮಾಡಬೇಕು, ಭೂಮಿ ತೊಗಬೇಕು ಅಂತ ಕನಸು ಕಂಡವ ತನ್ನ ಕನಸಿನಂತೆ ತನ್ನ ನಿವೃತ್ತಿಯ ದಿನಗಳನ್ನು ಕೃಷಿ ಭೂಮಿಯಲ್ಲೆ ಕಳೆದ. ಈಗಲೂ ಅಲ್ಲೇ ಚಿರನಿದ್ರೆಯಲ್ಲಿದ್ದಾರೆ. ತಾನು ನೆಟ್ಟ ಮಾವಿನಮರ, ಪೇರಲಗಿಡ ತೆಂಗಿನ ಗಿಡಗಳು ಫಲ ನೀಡುತ್ತಿವೆ. ಅಪ್ಪನ ಕನಸಿನಂತೆ ಹಣ್ಣುಗಳನ್ನು ಮೊಮ್ಮಕ್ಕಳು ತಿನ್ನುತ್ತಾ ಅಜ್ಜನ ನೆರಳಿನಲ್ಲಿ ಆಟವಾಡುತ್ತಿದ್ದಾರೆ.
ಇಷ್ಟೇಲ್ಲವೂ ಆಗುವ ಹೊತ್ತಿಗೆ ಕೊಪ್ಪಳದ ಮೇ ಸಾಹಿತ್ಯ ಮೇಳದ ಸಂಗಾತಿಗಳೆಲ್ಲ ಸೇರಿ ಇದೇ ಮೇ ೨೫, ೨೬-೨೦೨೪ ಕೊಪ್ಪಳದಲ್ಲಿ ನಡೆದ ಮೇ ಸಾಹಿತ್ಯ ಮೇಳದ ಪುಸ್ತಕ ಪ್ರದರ್ಶನಕ್ಕೆ ಅಪ್ಪಾಜಿ ಹಾಗೂ ಕೊಪ್ಪಳದ ಮತ್ತೋರ್ವ ಪುಸ್ತಕ ಪ್ರೇಮಿಗಳು ಆತ್ಮೀಯರು ಆದ ಬಿ. ಆರ್. ತುಬಾಕಿಯವರನ್ನು ಸ್ಮರಿಸಿದ್ದು ಅಪ್ಪನನ್ನು ಮತ್ತೇ ಮತ್ತೇ ನಮ್ಮೊಳಗೆ ಹಸಿರಾಗಿಸಿದ್ದಾರೆ.
-ನಾಗರಾಜನಾಯಕ ಡಿ. ಡೊಳ್ಳಿನ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಪಿ.ಎಸ್. ಅಮರದೀಪ್, ಕೊಪ್ಪಳ
ಪಿ.ಎಸ್. ಅಮರದೀಪ್, ಕೊಪ್ಪಳ
21 days ago

ನಾಗರಾಜ್ ನಿಮ್ಮ ತಂದೆ ಬಗ್ಗೆ ಆಪ್ತವಾಗಿ ಬರೆದಿದ್ದೀರಿ. ಕೊಪ್ಪಳದಲ್ಲಿ ಗ್ರಂಥಾಲಯ ಅಂದರೆ ನಿಮ್ಮ‌ತಂದೆಯವರದು ಮೊದಲ ಹೆಸರು…. ಅದನ್ನು ನೀನೂ ಪಾಲಿಸಿಕೊಂಡು ಬರುತ್ತಿರುವುದು ಖುಷಿಯ ಸಂಗತಿ…. ಅಭಿನಂದನೆಗಳು

1
0
Would love your thoughts, please comment.x
()
x