ಬದುಕೆಂಬ ಅಚ್ಚರಿ: ಸುಮನಾ ರಮಾನಂದ,

“ಬದುಕು” ಈ ಮೂರಕ್ಷರದ ಪದ ಯಾವಾಗಲೂ ಒಂದು ಅಚ್ಚರಿಯೆನಿಸಿ ನನ್ನ ಮನಸಿಗೆ ಕಾಡುವುದುಂಟು.ಏಕೆಂದರೆ ಆ ಭಗವಂತ ನಮಗೆಲ್ಲ ಕೊಟ್ಟಿರುವುದು ಒಂದೇ ಒಂದು ಬದುಕು. ಬಯಸಿದರೂ ನಾವು ಇನ್ನೊಂದು ಮತ್ತೊಂದು ಅಂತ ಲೆಕ್ಕ ಹಾಕಿ ಬೇರೆ ಬದುಕನು ಪಡೆಯಲಾರೆವು.ಇರುವ ಒಂದು ಬದುಕನೇ ಸರಿಯಾಗಿ ಜೀವಿಸದೇ ಸುಮ್ಮನೆ ಮನಸಿಗೆ ಕಿರಿಕಿರಿ,ನೋವು ಮಾಡಿಕೊಂಡು ಬೇರೆಯವರಿಗೂ ನೆಮ್ಮದಿಯಿಂದ ಬದಕಲು ಬಿಡಲಾರದ ಮಂದಿ ಎಷ್ಟಿಲ್ಲ ಈ ಜಗದಲಿ.ಅವರಿಗೆಲ್ಲ ತಮ್ಮ ಬದುಕನು ತಮ್ಮದೇ ದೃಷ್ಟಿಕೋನದಿಂದ ನೋಡಿ ಗೊತ್ತಿರುವುದೇ ಹೊರತು ಬೇರೆಯವರ ದೃಷ್ಟಿಯಲಿ ಆ ಬದುಕನು ಹೇಗೆ ಕಾಣಬೇಕು ಅಂತ ತಿಳಿದಿರೋಲ್ಲ ಅನಿಸುತ್ತೆ ಒಮ್ಮೊಮ್ಮೆ.

ಬದುಕಿನ ಬಗ್ಗೆ ಬರೆಯಲು ಕುಳಿತರೆ ಅದೆಷ್ಟೂ ಪದಗಳಲಿ,ಸಾಲುಗಳಲಿ ವಿವರಿಸಲಾರದ ಭಾವವೊಂದು ಕಾಡುವುದುಂಟು ಮನಸಿಗೆ. ಏಕೆಂದರೆ ಬದುಕನು ಬಂದ ಹಾಗೆಯೇ ಸ್ವೀಕರಿಸಿದವರ ಜಾಯಮಾನಕೆ ನಾನೂ ಸೇರುತ್ತೇನೆ.ಸಣ್ಣಪುಟ್ಟ ವಿಷಯಗಳಿಗೂ ವಿಪರೀತ ಕೊರಗದೆ ಸೊರಗದೆ ನಮ್ಮ ಯೋಗ್ಯತೆ ಎಷ್ಟಿದೆಯೊ ಅಷ್ಟಕ್ಕೇ ನಮ್ಮ ಬದುಕನು ನಾವು ಮಾರ್ಪಡಿಸುತ್ತಾ ಅಂತಹ ಸನ್ನಿವೇಶಗಳಿಗೆ ನಮ್ಮನು ನಾವು ಅಳವಡಿಸಿಕೊಂಡರೆ ಮಾತ್ರ ನಿಜವಾದ ನೆಮ್ಮದಿಯನು,ಸಂತಸವನು ಪಡೆಯುತ್ತೇವೆ ಅನ್ನೊದಂತೂ ಸತ್ಯ.ನಾವು ಕಾಣುವ ಕನಸುಗಳು ದೊಡ್ಡದಾಗಿದ್ದರೆ ಖಂಡಿತಾ ತಪ್ಪಿಲ್ಲ ಆದರೆ ಅದೆಲ್ಲ ನನಸಾಗಿಸುವ ಶಕ್ತಿ ನಮ್ಮಲಿದ್ದರೆ ಮಾತ್ರ ಆ ಕನಸಿಗೆ ಬೆಲೆಯಿರುತ್ತದೆ,ಇಲ್ಲದಿದ್ದರೆ ನಾವೂ ಸಹ ಅಂಬಾನಿಯಂತಾಗಬೇಕಂತ ಬಯಸಿದರೆ ಸಾಮಾನ್ಯವಾದ ಬದುಕೂ ನಮ್ಮಿಂದ ಕೈತಪ್ಪಿ ಹೋಗುವ ಸಂಭವವಿರುತ್ತದೆ. ನಾವು ಬಾಳುವ ಬದುಕಲಿ ಸದಾಕಾಲ ವಿಶ್ವಾಸವಿರಬೇಕು ಆದರೆ ಅತಿಯಾದ ಆತ್ಮವಿಶ್ವಾಸವಿರಬಾರದಷ್ಟೆ.ಅದಿದ್ದರೆ ಮಾತ್ರ ಬದುಕು ದುಸ್ತರವೆನಿಸುವುದು.

ನಮ್ಮ ಬದುಕನು ಮತ್ತೊಬ್ಬರ ಬದುಕಿನೊಂದಿಗೆ ಹೋಲಿಸಿದಾಗಲೇ ಸಮಸ್ಯೆಯ ಉಧ್ಬವವಾಗುತ್ತದೆ.ಹಾಗೊಂದು ವೇಳೆ ಹೋಲಿಸಿಕೊಳ್ಳುವ ಸಂದರ್ಭ ಬಂದರೆ ನಮಗಿಂತ ಯಾರಿಗೆ ಕಮ್ಮಿಯಾದ ಅವಕಾಶ ಸಿಕ್ಕಿರುವುದೊ ಅಂತಹವರೊಡನೆ ಹೋಲಿಸಿಕೊಂಡಾಗ ನಮಗೆ ಆ ಭಗವಂತ ಇಷ್ಟಾದರೂ ಕರುಣಿಸಿದ್ದಾನೆ ಅನ್ನುವ ಸತ್ಯದ ಅರಿವಾಗಿ ಬದುಕು ಸಹನೀಯವೆನಿಸುವುದು.

ನಾವು ಎದುರಿಸುವ ಬದುಕಿನಲಿ ಅದೆಷ್ಟೋ ರೀತಿಯಲಿ ಅಡೆತಡೆಗಳಿದ್ದರೂ,ಅವುಗಳನೆಲ್ಲ ನಿವಾರಿಸುವ ಶಕ್ತಿಯನೂ ಸಹ ಆ ಭಗವಂತನೇ ನಮಗೆ ಕೊಟ್ಟಿರುತ್ತಾನೆಂಬ ಸತ್ಯವನು ಮಾತ್ರ ನಾವು ಮರೆತಂತಿರುತ್ತೇವೆ.ನಾವು ಯಾವಾಗಲೂ ಏನೊ ಬೇಡದ ಚಿಂತೆಗಳಲಿ,ಆ ಕ್ಷಣದಲಿ ನಿವಾರಣೆಯಾಗದ ಯೋಚನೆಗಳಲಿ ಮುಳುಗಿ, ಬದುಕನು ಅದರಲಿರುವ ಅಮೂಲ್ಯವಾದ ಕ್ಷಣಗಳನೂ ಆಸ್ವಾದಿಸದೇ ಕಳೆದುಬಿಡುತ್ತೇವೆ. ಮುಂದೆ ಇದರ ಅರಿವಾಗುವ ಕಾಲ ಬಂದಾಗ ನಾವು ಮೌಲ್ಯಯುತವಾದೊಂದು ನಿಧಿಯ ಕಳೆದುಕೊಂಡೆವೆಂದು ಪರಿತಪಿಸಿ ಗೋಳಿಡುತ್ತೇವೆ.ಅದೆಂದಿಗೂ ನಮ್ಮ ಪಾಲಿಗೆ ನಿಲುಕದ ನಕ್ಷತ್ರವಾಗಿಬಿಡುತ್ತದೆ ಒಮ್ಮೊಮ್ಮೆ.ಹಾಗಾಗದಿರಬೇಕೆಂದರೆ ನಮಗಿರುವ ಯೋಗ್ಯತೆಯಲೇ ನಮ್ಮ ಗುರಿಯ ತಲುಪುವ ನಿಶ್ಚಯ ಮಾಡಬೇಕಿದೆ.

ಬದುಕಿನ ವಿಧವಿಧ ಮುಖಗಳು,ವಿವಿಧ ಮಜಲುಗಳು ನಮಗೆ ನಮ್ಮ ಸುತ್ತಮುತ್ತಲಿನ ವಾತಾವರಣದಲಿಯೇ ನಿತ್ಯ ಕಾಣಸಿಗುತ್ತದೆ.ಒಂದು ಉದ್ಯಾನವನದಲಿ ನಡೆಯುತಾ ಗಮನಿಸುವುದಾದರೆ ಅರಳುತಿರುವ ಹೂವಿರಬಹುದು, ಕಿಲಕಿಲನೆ ನಗುತಿರುವ ಮಗುವಿರಬಹುದು,
ತಮ್ಮ ಬೊಚ್ಚುಬಾಯಿಯಲಿ ನಗುತಾ ಹರಟುವ ಇಳಿಪ್ರಾಯದವರ ಆ ಮುಗ್ಧ ನಗುವಿನಲಿ,ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಆಗಸದಲಿ ಹಾರಾಡುವ ಹಕ್ಕಿಗಳ ಕಲರವವ ನೋಡುತಾ ನಮ್ಮ ಗೋಳನೆಲ್ಲ ಮರೆತು ನಾವು ಬಾಳುವ ಬದುಕನು ಸುಂದರಗೊಳಿಸುವ ಪ್ರಯತ್ನವನಾದರೂ ಮಾಡಬಹುದಲ್ಲವೇ…☺️

ಇನ್ನಾದರೂ ಕೊರಗದೇ, ಚಿಂತಿಸದೇ ಕ್ಷಣಕ್ಷಣವನೂ ಆಸ್ವಾದಿಸಿ ನಗು ನಗುತಾ ಬದುಕಿಬಿಡಿ..ಏನಂತೀರಿ ??

-ಸುಮನಾ ರಮಾನಂದ,


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x