ಚರಿತ್ರೆ ಪುನರಾವೃತಗೊಳ್ಳುತ್ತದೆಂದು ಓದಿ ತಿಳಿದಿದ್ದರೂ, ಹೇಳಿದವರಿಂದ ಕೇಳಿದ್ದರೂ ಅದು ಇಷ್ಟುಬೇಗ ತನ್ನ ಆವರಿಸುತ್ತದೆ ಎಂದು ಮತ್ತು ಅದರ ಮಿಕ ತಾನಾಗಬೇಕಾಗುತ್ತದೆ ಎನ್ನುವ ಸತ್ಯ ಜಯತೀರ್ಥನಿಗೆ ಕಹಿಯೂಟವಾಗಿತ್ತು.
ಮೊನ್ನೆ ವರೆಗೂ ತನ್ನ ಸಂಪತ್ತೇನು, ಮೆರೆದಾಟವೇನು, ಕಂಡ ಕನಸುಗಳೇನು ? ಒಂದೇ ಎರಡೇ? ಜೀವನವಿಡೀ ಕಾಮನಬಿಲ್ಲಿನ ಕನಸಿನಲ್ಲೇ ಕಳೆದುಹೋಗುತ್ತದೆ ಎಂದೆಣಿಸಿ, ಸೊಕ್ಕಿನಲ್ಲಿ ಮುಕ್ಕುತ್ತಿದ್ದ ಅವನಿಗೆ ಆರ್ಥಿಕ ಮುಗ್ಗಟ್ಟು ಲಕ್ವದ ತರ ಬಂದೆರಗಿತ್ತು. ಇಂಥ ಮುಗ್ಗಟ್ಟು ಶುರುವಾಗಿ ಒಂದು ವರ್ಷವಾಗಿದ್ದರೂ ಅವನು ಮತ್ತು ಅವನ ಹೆಂಡತಿ ಅದಕ್ಕೆ ಹೊರತಾಗೇ ಉಳಿದಿದ್ದರು. ಶುರುವಾದ ವರ್ಷಗಳಲ್ಲಿ ಕೊಂಚ ಹೆದರಿದ್ದರೂ ಅದರ ಬಿಸಿ ತಮ್ಮಿಬ್ಬರಿಗೆ ತಾಗದಾದಾಗ ಅದೇ ಭರವಸೆಯಲ್ಲಿ ಮಗುವಿನ ಯೋಚನೆ ಮಾಡಿ, ಪಡೆದು ಅದರ ಸವಿಯನ್ನುಂಡಿದ್ದರು.
ಆರ್ಥಿಕ ಮುಗ್ಗಟ್ಟಿನ ಬಗ್ಗೆ ಅಂದಾಜೇ ಇಲ್ಲದ ಯುವ ಜನಾಂಗ ಅದರ ಪೆಟ್ಟಿಗೆ ತತ್ತರಿಸಿದ್ದರು. ಕೆಲ ನಾಯಿಕೊಂಡೆ ಕಂಪನಿಗಳಂತೂ ಬೋರ್ಡು ತಿರುವಿದ್ದವು. ಕೆಲ ಕಂಪನಿಗಳು ಹೇಗೋ ಮಾಡಿ ಬಚಾಯಿಸಿಕೊಂಡು ಕುಂಟುತ್ತ ಮುಂದಕ್ಕೆ ಸಾಗುತ್ತಿದ್ದವು. ಆದರೆ ಕಳೆದ ವರ್ಷದಿಂದ ದೇಶ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು, ಹಣದುಬ್ಬರ ದುಪಟ್ಟಾಗಿ ಬೆಲೆಗಳು ಗಗನಕ್ಕೇರಿ, ಕೆಲ ಕಂಪನಿಗಳು ತಮ್ಮ ಯೋಜನೆಗಳನ್ನು ಕುಂಠಿತಗೊಳಿಸುತ್ತ ಕೆಲ ನೌಕರರನ್ನು ಮನೆಗೆ ಕಳಿಸುವುದು, ಇದ್ದವರಿಗೆ ಜಾಸ್ತಿ ಕೆಲಸ ಕೊಡುವುದು ನಡೆಸಿದ್ದವು.
ಅವನ ಹೆಂಡತಿಯ ಕೆಲಸ ಹೋಗಿತ್ತು. ಅವನಿಗೆ ಕೆಲಸ ದುಪಟ್ಟಾಗಿತ್ತು. ಉಸಿರೆತ್ತುವಂತಿಲ್ಲ. ಮನೆಗೆ ಕಳಿಸಲು ಕಂಪೆನಿಗಳು ತಯಾರಿದ್ದವು. ಹಲ್ಲು ಕಚ್ಚಿ ಮಾಡಬೇಕು. ನಾಗಾಲೋಟದಿಂದ ಓಡಬೇಕಿದ್ದ ಅವನ ಕನಸಿನ ಕುದುರೆ ಮುಗ್ಗುರಿಸುತ್ತಿತ್ತು.
ದರ್ಶಿನಿಯೊಂದರಲ್ಲಿ ನಿಂತು ಸಾದಾ ಇಡ್ಲಿ ವಡೆ ತಿನ್ನುತ್ತಿದ್ದ ಜಯತೀರ್ಥನ ಆಲೋಚನೆಗಳು ಎಲ್ಲೆಲ್ಲೋ ಸುತ್ತುತ್ತಿದ್ದವು.
*
ಹಿಂದೆ ಈ ತರದ ದರ್ಶಿನಿಗಳಲ್ಲಿ ತಿಂಡಿ ತಿನ್ನುವುದು ತನಗೆ ಇಷ್ಟವಿರುತ್ತಿರಲಿಲ್ಲ. ಮುಂಚಿತವಾಗಿ ಟೋಕನ್ ಕೊಂಡು ತಿಂಡಿ ಕೊಡುವವನಿಗೆ ಕೊಡಬೇಕು, ಕಾದುನಿಲ್ಲಬೇಕು, ಸರ್ತಿಗೊಮ್ಮೆ ತನ್ನ ತಿಂಡಿಯ ಬಗ್ಗೆ ಎಚ್ಚರಿಸುತ್ತಿರಬೇಕು. ಮತ್ತೆ ಪ್ಲೇಟು ಹಿಡಿದು ಜಾಗ ಹುಡುಕಿ ತಿನ್ನ ಬೇಕು. ಮಧ್ಯದಲ್ಲಿ ನೀರು ಬೇಕಾದಲ್ಲಿ ತಾನೇ ಹೋಗಿ ತಂದುಕೊಳ್ಳಬೇಕು.ಒಮ್ಮೆ ಇವನು ನೀರು ತರಲು ಹೋದಾಗ ಕ್ಲೀನರ್ ಪ್ಲೇಟ್ ತೆಗೆದಿದ್ದ. ಇವೆಲ್ಲದರ ಕಿರಿಕಿರಿ. ತನ್ನ ಹುದ್ದೆ ಏನು? ತನಗೆ ಬರುವ ಸಂಬಳವೇನು? ತನ್ನ ಕೈ ಕೆಳಗೆ ಹದಿನೈದು ಜನ ಕೆಲಸ ಮಾಡುತ್ತಿರುವಾಗ ತಾನು ಯಕಶ್ಚಿತ್ ಒಬ್ಬ ದರ್ಶಿನಿಯ ಕೆಲಸದವನ ಮುಂದೆ ನಿಲ್ಲುವುದೇ ? ಅದೂ ತನಗೆ ಬೇಕಾದ ತಿಂಡಿಗೆ ದುಡ್ಡು ತೆತ್ತು ! ಅಷ್ಟು ಜನ ಜಂಗುಳಿಯಲ್ಲಿ ತನಗೆ ಆರೋಗ್ಯಯುತ ತಿಂಡಿ ಸಿಗುತ್ತದೆಂದು ಅವನಿಗೆ ಖಾತ್ರಿಯಿರಲಿಲ್ಲ. ಅದೂ ಅಲ್ಲದೇ ದೊಡ್ಡ ಅನಾನುಕೂಲ ಅವನ ದೊಡ್ಡ ಕಾರಿಗೆ ದೊರಕದ ಪಾರ್ಕಿಂಗ್. ಅವನ ಹೆಂಡತಿಯಂತೂ ದರ್ಶಿನಿಯನ್ನು ತೀರ ಅಸಡ್ಡೆಯಿಂದ ಕಾಣುತ್ತಿದ್ದಳು.
ಆದರೆ ಈಗ ಏನಾಗಿದೆ? ತಾವು ತಿಂಡಿ ತಿನ್ನುತ್ತಿದ್ದ ಐಶಾರಾಮೀ ಹೋಟೆಲ್ಲಿನ ತಿಂಡಿ ಇದ್ದಕ್ಕಿದ್ದಂತೆ ಬಿಳಿಯಾನೆಯಾಗಿ ಕಂಡಿತು. ಅಲ್ಲಿಯ ಬೆಲೆಗಿಂತ ಹತ್ತು ಪಟ್ಟು ಕಮ್ಮಿಯಲ್ಲಿ ರುಚಿಕಟ್ಟಾದ ತಿಂಡಿ ಇಲ್ಲಿ ಸಿಗುತ್ತಿತ್ತು. ಆರ್ಥಿಕ ಬಿಕ್ಕಟ್ಟು ಬಿಗುಮಾನವನ್ನು ಹಿಂದಿಕ್ಕಿತ್ತು.
ತಿಂಡಿ ಮುಗಿಸಿ, ಕಾಫಿ ಕುಡಿದು ಆಫೀಸಿಗೆ ಮೋಟರ್ ಬೈಕಿನಲ್ಲಿ ಹೊರಟ. ಕಾರಿಗೆ ಕೆಲ ದಿನ ರಜೆ ಘೋಷಿಸಿದ್ದ, ಖರ್ಚು ಕಮ್ಮಿ ಮಾಡಲು.
ಅಪ್ಪನ ಮಾತು ನೆನಪಿಗೆ ಬರುತ್ತಿದ್ದವು.
ಅಪ್ಪ ಸಾದಾಸೀದಾ ಶಾಲೆ ಮಾಸ್ತರರಾಗಿದ್ದರು ಒಂದು ತಾಲೂಕು ಪ್ರದೇಶದಲ್ಲಿ. ಅಲ್ಲೇ ಹಿರಿಯರು ಬಿಟ್ಟು ಹೋದ ಮನೆಯಲ್ಲೇ ಸಂಸಾರದೊಂದಿಗೆ ವಾಸ. ಒಬ್ಬಳು ಅಕ್ಕ ವತ್ಸಲಾ, ತಾನು. ನೆಮ್ಮದಿಯ ಸಂಸಾರ. ಅಂದರೇ ತನ್ನ ಕನಸುಗಳನ್ನು ಪೂರೈಸುವ ಮಟ್ಟದ್ದಾಗಿರಲಿಲ್ಲ. ಮುಂಚಿನಿಂದಲೂ ತನ್ನವು ಉಚ್ಚ ಮಟ್ಟದ ಕನಸುಗಳೇ. ಯಾವುದಕ್ಕೂ ಅಪ್ಪನ ಹತ್ತಿರ ಜಗಳವಾಗುತ್ತಿತ್ತು. ಅಮ್ಮನ ಮಧ್ಯಸ್ತಿಕೆಯಲ್ಲಿ ಕೆಲ ಕನಸುಗಳು ನನಸಾಗುತ್ತಿದ್ದವು. ಕೆಲವುಗಳ ಬಗ್ಗೆ ಹೊಂದಾಣಿಕೆಯಾಗುತ್ತಿತ್ತು. ಆದರೆ ಕನಸುಗಳು ಮಾತ್ರ ಹುಚ್ಚೆದ್ದು ಕುಣಿಯುತ್ತಿದ್ದವು. ಅಕ್ಕನ ಮುಂದೆ ಹೇಳಿದಾಗ ಛೇಡಿಸುತ್ತಿದ್ದಳು “ ನೀನೇನಾದ್ರೂ ರಾಜಕುಮಾರ ಅಂತ ತಿಳ್ಕೊಂಡಿದೀಯಾ?” ಅಂತ. ಹಾಗಂದಾಗಲೆಲ್ಲ “ ಹೌದು ಕಣೇ! ನಾನು ರಾಜಕುಮಾರನೇ. ನೋಡ್ತಿರು. ಮುಂದೆ ನಾನ್ಹೇಗೆ ಜೀವನ ಮಾಡ್ತೀನಿ ಅಂತ “ ಅಂತ ಸವಾಲೆಸೆಯುತ್ತಿದ್ದ.
ಅವನ ತಲೆಮಾರಿನವರ ರೀತಿಯಲ್ಲೇ ಓದಿನಲ್ಲಿ ಚುರುಕಾಗಿದ್ದ. ಅಂಕಗಳಿಸುವುದರಲ್ಲಿ ಎಂದೂ ಮುಂದೆ. ಹಾಗೆಯೇ ಒಳ್ಳೆಯ ತಾಂತ್ರಿಕ ವಿದ್ಯಾಲಯದಲ್ಲಿ ಇಂಜನೀರಿಂಗ್ ಪಾಸ್ ಮಾಡುವಷ್ಟರಲ್ಲಿ ಯಾವುದೋ ಕಂಪೆನಿಯವರು ಅವರ ಕಾಲೇಜಿಗೆ ಬಂದು ತಮಗೆ ಬೇಕಾದವರಲ್ಲಿ ಇವನನ್ನೂ ಆರಿಸಿದ್ದರು. ಕನಸು ಮನಸಿನಲ್ಲೂ ಎಣಿಸದ ಸಂಬಳ, ಸವಲತ್ತುಗಳು, ಬೆಂಗಳೂರಿನಲ್ಲಿ ಹವಾನಿಯಂತ್ರಿತ ಕೋಣೆಯಲ್ಲಿ ಹೆಣ್ಣು ಸಹೋದ್ಯೋಗಿಗಳ ಜೊತೆಯಲ್ಲಿ ಇಂಗ್ಲೀಷಿನಲ್ಲಿ ಮಾತಾಡುತ್ತಾ ಮುಂದಿರುವ ಮಾತಾಡದ ಗಣಕದ ಪೆಟ್ಟಿಗೆಯಲ್ಲಿ ಕೆಲಸ ಮುಗಿಸುವುದು ಅವನಿಗೆ ತುಂಬಾ ಸಂತೋಷ ತಂದಿತ್ತು. ಯಾವಾಗ ಬೇಕಾದರೂ ಹೋಗಿ ಹೀರಬಹುದಾದ ಕಾಫಿ/ಟೀ, ಅವರೇ ಕೊಟ್ಟ ಕೂಪನ್ ಕೊಟ್ಟು ಪಡೆಯ ಬಹುದಾದ ಮಧ್ಯಾಹ್ನದ ಬಿಸಿ ಬಿಸಿ ಊಟ. ಎಲ್ಲವೂ ತನ್ನ ನೆತ್ತಿಗೇರಿತ್ತು.
ಖರ್ಚಿಗೂ ಮೀರಿ ಬರುತ್ತಿದ್ದ ಸಂಬಳದ ಸಂಪತ್ತು ತನಗರಿವಿಲ್ಲದೇ ಎಲ್ಲೆಲ್ಲೋ ಸೇರಲು ಹವಣಿಸುತ್ತಿತ್ತು. ಜೊತೆಗೆ ಹೊಸ ಅಲೆಯ ಭರಕ್ಕೆ ತಾಳ ಹಾಕುತ್ತಿದ್ದ ಮಿತ್ರರು. ವಾರಾಂತ್ಯದ ಚಟಗಳಿಗೆ ದಾಸನಾಗಿದ್ದ. ಯಾವುದೂ ತಪ್ಪಲ್ಲವೆನಿಸತೊಡಗಿತ್ತು. ಜೀವನ ಇರುವುದೇ ಅನುಭವಿಸಲಿಕ್ಕೆ ಎಂಬ ತಾತ್ತ್ವಿಕ ಚಿಂತೆ ತುಂಬಿತ್ತು. ಅಲ್ಲಿಯವರೆಗೆ ಅಪ್ಪನ ಅರೆಕೊರೆ ಸಂಬಳದಲ್ಲಿ ಮುಗ್ಗರಿಸುತ್ತಿದ್ದು ನೋಡಿದ ತನಗೆ ಇಡೀ ಜೀವನವನ್ನು ಈಗಲೇ ತುಂಬಿಕೊಳ್ಳುವ ಆಶೆ ಯಾಗಿತ್ತು. ತನ್ನ ಮನೆಯಿಂದ ಆಕ್ಷೇಪಣೆ ಬರಬಹುದೆಂದು ಸಂಶಯ ಬಂದು, ಅವರಿಗೂ ಸಾಕಷ್ಟು ಹಣ ಕಳಿಸತೊಡಗಿದ್ದ. ಅಮ್ಮನಿಗೆ, ಅಕ್ಕನಿಗೆ ಒಡವೆ ಮಾಡಿಸಿದ್ದ. ಅಮ್ಮನಿಗಂತೂ ತನ್ನ ಮಗ ಪ್ರಯೋಜಕನಾಗಿದ್ದು ನೋಡಿ ತುಂಬಾನೇ ಖುಶಿಯಾಗಿತ್ತು. ಹೊಸ ಒಡವೆಯನ್ನು ಪಕ್ಕದ ಮನೆಯವರಿಗೂ, ನೆಂಟರಿಗೂ ತೋರಿಸುತ್ತ
“ ನಮ್ಮ ಜಯಣ್ಣ ಮಾಡಿಸಿದ್ದು “ ಎಂದು ಹೇಳಿಕೊಂಡು ತಿರುಗುತ್ತಿದ್ದಳು. ಅಪ್ಪನ ಹದ್ದಿನ ಕಣ್ಣು ಮಾತ್ರ ತನ್ನ ದುಂದು ವೆಚ್ಚದ ಮೇಲೆ ಬಿದ್ದಿತ್ತು.
ಒಮ್ಮೆ ಊರಿಗೆ ಹೋದಾಗ ತನ್ನನ್ನು ಕೂರಿಸಿಕೊಂಡು “ಜಯಣ್ಣಾ! ಇದೇನಿದು ನಿನ್ನ ದುಂದುಗಾರಿಕೆ ! ನಿನಗೆ ಬರುವ ಸಂಬಳ ಎಷ್ಟ? ತಿಂಗಳ ಖರ್ಚೆಷ್ಟು? ಉಳಿತಾಯ ಎಷ್ಟು ಮಾಡಿದ್ದೀಯಾ? ನಿನ್ನಕ್ಕನ ಮದುವೆ ಆಗಬೇಕಲ್ಲ?” ಎನ್ನುವ ಇರಸುಮುರಸಿನ ಪ್ರಶ್ನೆಗಳನ್ನು ಹಾಕಿದ್ದರು.
ಮೊಸರನ್ನದಲ್ಲಿ ಸಿಕ್ಕು ಕಿರಿಕಿರಿ ಮಾಡುವ ಕಲ್ಲಿನಂತಹ ಅವರ ಪ್ರಶ್ನೆಗಳು ಯಾವತ್ತಾದರೂ ಬಂದೇಬರುತ್ತವೆ ಎಂದು ತಿಳಿದಿದ್ದ ತಾನು ಉತ್ತರಗಳನ್ನು ಸಿದ್ಧ ಮಾಡಿಕೊಂಡೇ ಇದ್ದ. “ ಅಪ್ಪಾ! ನೀನು ಅಕ್ಕನ ಮದುವೆಯ ಬಗ್ಗೆ ಚಿಂತೆ ಮಾಡ್ಬೇಡ. ಅದರ ಹೊಣೆ ನನಗಿರಲಿ“ ಎಂದಾಗ ಅವರಿಗೆ ಬೇಕಾದ ಆಶ್ವಾಸನೆ ಸಿಕ್ಕು ಅಂದಿಗೆ ಸುಮ್ಮನಿದ್ದರೂ ಅವರಿಗೆ ನೆಮ್ಮದಿ ಎನಿಸಿರಲಿಲ್ಲ. ಹೆಂಡತಿಯ ಹತ್ತಿರ “ನೀನಾದ್ರೂ ಸ್ವಲ್ಪ ಅವನಿಂದ ತಿಳ್ಕೊಳ್ಳೇ ! ಅವನ ಈ ಖರ್ಚು ನೋಡಿದ್ರೆ ನನಗೇಕೋ ಸಂಶಯವಾಗ್ತಿದೆ. ವಚ್ಚುನ ಮದುವೆಗೆ ಅವನೇನೂ ಕೊಡಬೇಕಾಗಿಲ್ಲ. ಆದರೆ ಅವನ ಜೀವನ ವಿಧಾನ ನನಗೆ ಹಿಡಿಸ್ತಾ ಇಲ್ಲ. ಅವಶ್ಯಕತೆಗಿಂತ ಹೆಚ್ಚು ಹಣ ಬಂದರೆ ನಮಗೆ ತಿಳಿಯದ ಹಾಗೆ ಬಯಕೆಗಳು ಕುದುರೆಯ ಮೇಲೆ ಸವಾರಿ ಮಾಡಲೆತ್ನಿಸುತ್ತವೆ. ಲಗಾಮಿಲ್ಲದ ಕುದುರಿ ಎಲ್ಲಿಗೆ ಕೊಂಡೊಯ್ಯುತ್ತದೋ ಗೊತ್ತಾಗುವುದಿಲ್ಲ. ಕುಣಿಗೆ ಬಿದ್ದಮೇಲೇ ಗೊತ್ತಾಗೋದು. ಸ್ವಲ್ಪ ಅವನಿಗೆ ಹೇಳು” ಎಂದಿದ್ದು ಕೇಳಿಸಿತ್ತು. ಮಾತೃಪ್ರೇಮದ ಭೂತ ನೆತ್ತಿಗೇರಿದ ತನ್ನಮ್ಮ “ಆಯ್ತು ಹೇಳ್ತೀನಿ. ಏನೋ ಹುಡುಗುತನ. ಕೈತುಂಬಾ ಸಂಬಳ. ಕೈಬಿಚ್ಚಿ ಖರ್ಚು ಮಾಡ್ತಿದ್ದಾನೆ ಅಷ್ಟೇ. ನನಗಂತೂ ಇಡೀ ಜೀವಮಾನ ಕಳೆದರೂ ಈ ಒಡವೆಗಳು ಸಿಗುತ್ತಿರಲಿಲ್ಲ. ಒಂಚೂರು ಸಂತೋಷವಾಗಿರೋಣ ಬಿಡಿ. ಜುಜುಬಿತನ ಯಾವಗ್ಲೂ ಇದ್ದಿದ್ದೇ. ನಿಮಗೂ ಏನು ಕಮ್ಮಿ ಮಾಡಿಲ್ಲಲ್ಲ. ಮಾಸಿದ ಅಂಗಿ ಹಾಕ್ಕೊಂಡು ಹೊರಗೆ ಹೋಗ್ತಿದ್ದವರು ನೋಡಿ, ಗರಿಗರೀ ಹೊಳೆಯೋ ಶರ್ಟ್ ಹಾಕಿ ಹೋಗುತ್ತಿದ್ದೀರಿ. ಕೈಗೆ ಅದೆಂಥ ವಾಚು ಅಂತೀರಾ ?” ಎನ್ನುತ್ತ ಪಟ್ಟಿ ಓದಿದ್ದಾಗ ಹತಾಶರಾಗಿದ್ದರು.
ಆದರೂ ತಳಮಳ ತಾಳಲಾರದೆ ಒಮ್ಮೆ ತನ್ನ ರೂಮಿಗೆ ಬಂದಿದ್ದರು. ಅಲ್ಲಿ ಎದ್ದು ಕಾಣುತ್ತಿದ್ದ ತನ್ನ ಅಸ್ತವ್ಯಸ್ತ ಬದುಕಿನ ಪರಿಚಯವಾಗಿತ್ತು. ಆದರೆ ತನ್ನ ಮುಂದೆ ಸೊಲ್ಲೆತ್ತಲಿಲ್ಲ. ಆಗಾಗ ಮಾತು ಬಂದಾಗ ಮಾತ್ರ ತಮ್ಮ ಅಭಿಪ್ರಾಯ ಹೇಳುತ್ತಿದ್ದರು.
ಹಾಗೂ ಹೀಗೂ ಕಾಲ ದೂಡಿಕೊಂಡು ಹೋಯಿತು. ವತ್ಸಲನಿಗೊಂದು ಒಳ್ಳೆ ಸಂಬಂಧ ಕೂಡಿ ಬಂತು. ಅಪ್ಪ ಉಳಿಸಿದ ಮತ್ತು ತಾನು ಜೋಡಿಸಿದ ಹಣದಿಂದ ಮದುವೆ ಸುಸೂತ್ರವಾಗಿ ನಡೆಯಿತು. ಜವಾಬುದಾರಿ ಕಳಚಿದ ಹಾಗಾಗಿ ಇನ್ನು ತಾನು ಅಪ್ಪನಿಗೆ ಖರ್ಚಿನ ಸಮಜಾಯಿಷಿ ಕೊಡಬೇಕಾಗಿಲ್ಲ ಎನಿಸಿತ್ತು. ಇನ್ನು ತನ್ನ ಮದುವೆ ತಾನೇ ! ಅದಕ್ಕೆ ತಾನಿನ್ನೂ ಸಿದ್ಧನಿರಲಿಲ್ಲ. ಅಲ್ಲಿಯವರೆಗೂ ಮಜಾ ಮಾಡಿದರಾಯಿತು ಅಂದುಕೊಂಡು ಊರಿಗೆ ಹೋಗುವುದನ್ನು ಕಮ್ಮಿ ಮಾಡಿ ತನ್ನ ವಿಲಾಸದ ಜೀವನ ಮುಂದುವರೆಸಿದ. ಬೆಂಗಳೂರಿನಲ್ಲಿ ಖರ್ಚು ಮಾಡುವವರಿಗೆ ಅವಕಾಶಗಳೇನು ಕಮ್ಮಿ! ಮೋಜಿನ ಗಳಿಗೆಗಳು ಹೇಗೆ ಕಳೆಯುತ್ತಿದ್ದವೋ ಗೊತ್ತಾಗುತ್ತಿರಲಿಲ್ಲ. ಹಣದ ಕೊರತೆಯಿರಲಿಲ್ಲ. ಜೊತೆಗೆ ದೋಸ್ತರು ಬೇರೇ.
ಅಪುರೂಪಕ್ಕೆ ಮನೆಗೆ ಹೋದಾಗ ಅಮ್ಮನ ಕೊರೆತ ಇರುತ್ತಿತ್ತು “ಮದುವೆ ಮಾಡ್ಕೋ ಜಯಣ್ಣಾ” ಅಂತ. ಅಪ್ಪ ನೇರವಾಗಿ ಹೇಳದೇ “ಮೊನ್ನೆ ಶಿವಮೊಗ್ಗ ದಿಂದ ಒಂದು ನೆಂಟಸ್ತಿಕೆ ಬಂದಿತ್ತು, ಒಳ್ಳೆ ಮನತನವಂತೆ. ಸ್ಥಿತಿವಂತರಂತೆ. ಕೂಡಿಬಂದರೆ ಮುಂದುವರೆಸಬಹುದು.” ಎನ್ನುತ್ತ ಅನ್ಯಾಪದೇಶವಾಗಿ ಅಮ್ಮನ ಮುಂದೆ ಹೇಳುತ್ತಿರುವುದು ಕೇಳಿಸುತ್ತಿತ್ತು. ತನಗಾಗಲೇ ಈ ಬಂಧನ ಬೇಡವೆಂದು ಅಮ್ಮನ ಮುಂದೆ ಹೇಳಿಯಾಗಿತ್ತು. ಆದರೆ ವಯಸ್ಸೊಂದಿದೆಯಲ್ಲ. ಅದು ಕೇಳಲಿಲ್ಲ. ಮುಕ್ತ ವಾತಾವರಣ ಬೇರೇ. ಹೆಣ್ಣು ಗಂಡು ಹೆಗಲ ಮೇಲೆ ಕೈ ಹಾಕಿಕೊಂಡು ಕೆಲಸ ಮಾಡುವ ಆಫೀಸಿನಲ್ಲಿಯ ಸಲಿಗೆ ಅವನನ್ನು ಸಹೋದ್ಯೋಗಿ ಅಲಮೇಲು ಕಡೆಗೆ ಈ ದೃಷ್ಟಿಯಿಂದ ನೋಡಲು ಪ್ರೇರೇಪಿಸಿದವು. ಒಳ್ಳೆ ಸುಂದರವಾದ ಹುಡುಗಿ. ಚಿನಕುರುಳಿಯಂತೆ ಲವಲವಿಕೆಯಿಂದ ಎಲ್ಲದರಲ್ಲೂ ಮುಂದುವರೆದು ತನ್ನ ಅಸ್ಮಿತೆಯನ್ನು ತೋರುತ್ತಿದ್ದಳು. ಇಬ್ಬರೂ ಒಂದೇ ಬ್ಯಾಚಾದ್ದರಿಂದ ಒಟ್ಟೊಟ್ಟಿಗೆ ಕೆಲಸ ಮಾಡಬೇಕಾಗುತ್ತಿತ್ತು. ಆಗಾಗ ಆಗುವ ಸಿಬ್ಬಂದಿಯ ಮೀಟಿಂಗ್ ಗಳಲ್ಲಿ, ಚರ್ಚಾ ಗೋಷ್ಟಿಗಳಲ್ಲಿ ತಮ್ಮ ಸಲಹೆಗಳನ್ನು ಅಭಿಪ್ರಾಯಗಳನ್ನು ಮುಂದಿರಿಸುವ ಮೂಲಕ ಒಬ್ಬರನ್ನೊಬ್ಬರು ಅರಿಯುವಷ್ಟು ಹತ್ತಿರವಾಗಿದ್ದರು. ನಂತರ ಹರೆಯ ತನ್ನ ಕೆಲಸ ಮುಂದುವರೆಸಿತ್ತು. ಇಬ್ಬರೂ ಇಷ್ಟಪಡುವುದು ಶುರುವಾಗಿ ಅವಳ ಕೆಲಸಕ್ಕೆ ತಾನು ಕೈ ಹಾಕುವುದು, ತನ್ನ ಕೆಲಸದಲ್ಲಿ ಅವಳು ಸಹಾಯ ಮಾಡುವುದು ನಡೆದು, ಸಣ್ಣಗೆ ಥ್ಯಾಂಕ್ಸ್ ಹೇಳುವುದರಿಂದ ಹಿಡಿದು, ಕ್ಯಾಂಟೀನಿಗೆ ಒಟ್ಟಿಗೆ ಹೋಗುವುದು, ಆಫೀಸಿನ ನಂತರ ಪಾರ್ಕುಗಳಲ್ಲಿಯ ಏಕಾಂತದಲ್ಲಿ ತಂತಮ್ಮ ಕುಟುಂಬದ ಹಿನ್ನೆಲೆಗಳನ್ನು ತಿಳಿಯುವುದು, ಆಗಾಗ ವಾರಾಂತ್ಯಗಳಲ್ಲಿ ಡಿನ್ನರ್ ಗಳಿಗೆ ಹೋಗುವುದರೊಂದಿಗೆ ತಾವಿಬ್ಬರೂ ಲವ್ ಬರ್ಡ್ಸ್ ಎನ್ನುವ ಮುದ್ರೆ ಹಾಕಿಸಿಕೊಂಡರು.
ಇಂದಿನ ತಲೆಮಾರಿನವರಿಗನುಗುಣವಾಗಿ ಇಬ್ಬರ ಭಿನ್ನ ಸಂಪ್ರದಾಯಗಳು ಅವರಿಗೆ ನಿಷಿದ್ಧವಾಗಿ ತೋರಲಿಲ್ಲ. ತಮ್ಮ ಕಚೇರಿಗಳಲ್ಲಿ ಯಾವ ಯಾವ ಜಾತಿಯವರೋ, ಧರ್ಮದವರೋ, ಭಾಷೆಯವರೋ, ಪ್ರಾಂತದವರೋ ತಮ್ಮನ್ನೆಲ್ಲ ಬೆಸೆಯುತ್ತಿರುವ ತಂತ್ರಜ್ಞಾನದ ಕೊಂಡಿಯನ್ನು ಆಧಾರ ಮಾಡಿಕೊಂಡು ಕೆಲಸ ಒಂದೇ ನಮ್ಮ ಸಂಸ್ಕೃತಿ ಎನ್ನುತ್ತ ಮದುವೆಯಾಗುತ್ತಿದ್ದರು. ಆದರೆ ಇನ್ನೂ ಸಂಪ್ರದಾಯದ ನೆರಳು ಬಿಡದ ಇವರುಗಳು ಮನೆಗಳಲ್ಲಿ ತಿಳಿಸಿ ಒಪ್ಪಿಗೆ ಪಡೆದು ಮದುವೆಯಾಗುವುದೆಂದು ಎಣಿಸಿದರು. ಇಬ್ಬರಿಗೂ ಮನಗಳಲ್ಲಿ ಅಳುಕಿದ್ದರೂ,
ತಾವಿಬ್ಬರೂ ಬ್ರಾಹ್ಮಣರೇ ಆಗಿದ್ದು, ಪಂಗಡಗಳು ಮಾತ್ರ ಬೇರೇ ಆದಕಾರಣ ತೊಡಕು ಬರಲಿಕ್ಕಿಲ್ಲ ಎಂದೆಣಿಸಿ ತಿಳಿಸಿ ಕಾದರು.
ಆದರೆ ಅವರ ಇಬ್ಬರ ಮನೆಗಳಲ್ಲಿಯ ಸಂಪ್ರದಾಯದ ಗೋಡೆಗಳು ಬಿರುಕು ಬಿಡಲು ಸಿದ್ದವಿರಲಿಲ್ಲ. ಹಾಗಂತ ಇವರಿಬ್ಬರೂ ಇನ್ನು ಬಿಟ್ಟಿರಲು ಅಸಾಧ್ಯವೆನಿಸಿ ಹಿತೈಷಿಗಳ ಸಮಕ್ಷಮದಲ್ಲಿ ಒಂದು ದೇವಸ್ಥಾನದಲ್ಲಿ ಮದುವೆಯಾಗಿ ತಮ್ಮ ಮದುವೆಯನ್ನು ದಾಖಲು ಮಾಡಿಸಿದರು. ಆ ಫೋಟೋಗಳನ್ನು ಮನೆಗಳಿಗೆ ಕಳಿಸಿ ವಿಷಯ ತಿಳಿಸಿದರು. ಮತ್ತೆ ಫೋನ್ ಮಾಡುವಾಗ ಬೈಗುಳವೇ ಉತ್ತರವಾಗಿತ್ತು. ಮೂರು ವರ್ಷವಾಗಿದ್ದರೂ ಜಯತೀರ್ಥನಿಗೆ ಅಪ್ಪ ಅಮ್ಮನ ದರ್ಶನವಾಗಿರಲಿಲ್ಲ. ಅಲಮೇಲಿನ ಮನೆಯವರು ಬೆಂಗಳೂರಿನವರಾಗಿದ್ದು, ಬೇಗನೇ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ಮನೆಗೆ ಬಿಟ್ಟುಕೊಂಡರು. ಅಲಮೇಲುವಿನ ಹೆರಿಗೆಯೂ ಅವರೇ ವಹಿಸಿಕೊಂಡಿದ್ದರು. ಮೊಮ್ಮಗಳು ಬಂದಮೇಲೆ ಅಲ್ಲಿಯ ಗೋಡೆ ಮುರಿದೇ ಬಿದ್ದಿತ್ತು.
ಇಬ್ಬರೂ ಗಳಿಸುತ್ತಿದ್ದರು. ದುಬಾರಿ ಖರ್ಚು ಮಾಡುತ್ತಿದ್ದರು. ಮಗಳು ಕೇಳುವುದೇ ತಡ ಅದರ ಬೆಲೆ ಎಷ್ಟಾದರೂ ಇಲ್ಲವೆನ್ನುವ ಮಾತೇ ಇರುತ್ತಿರಲಿಲ್ಲ. ಡೀಲಕ್ಸ್ ಫ್ಲಾಟು, ಖರೀದಾದ ಕಾರು, ಮನೆಯಲ್ಲೇ ಇದ್ದು ಸಂಬಾಳಿಸುತ್ತಿದ್ದ ಕೆಲಸದ ಹುಡುಗಿ ಎಲ್ಲಾ ವೈಭವದ ಜೀವನ ನಡೆದಿತ್ತು. ಅವರ ದುಂದುಗಾರಿಕೆ ಅಲಮೇಲುವಿನ ತಂದೆತಾಯಿಯರಿಗೂ ಸರಿಬರುತ್ತಿರಲಿಲ್ಲ. ಅವಳೆಗೆ ನೇರವಾಗಿ ಮತ್ತು ಅಳಿಯನಿಗೆ ಪರೋಕ್ಷವಾಗಿ ಹೇಳಿ ನೋಡಿದ್ದರು. “ನೀವಂತೂ ಇಷ್ಟು ಸುಖ ಕಂಡಿರಲಿಲ್ಲ. ನಮಗೂ ಅದೇ ತೋರಿಸಿದಿರಿ. ಈಗ ಹಣ ಕೈಯಲ್ಲಾಡುವಾಗಲೂ ಪರದಾಡಬೇಕೇ? ನಿಮ್ಮನ್ನೇನೂ ಕೇಳುತ್ತಿಲ್ಲವಲ್ಲಾ!” ಎನ್ನುವ ನಿಷ್ಟುರದ ಮಾತು ಕೇಳಿಬಂದಾಗ ಕೈಚೆಲ್ಲಿದ್ದರು.
ಹೀಗೇ ಸುಗಮವಾಗಿ ಜೀವನ ನಡೆಯುತ್ತಿರುವಾಗ ಬಂದಪ್ಪಳಿಸಿತ್ತು ಮಾಂದ್ಯದ ಚಾವಟಿ ಏಟು. ಮೊದಲು ಅಮೆರಿಕೆಗೆ ಮಾತ್ರ ಅಂತ ತಿಳಿದ ಯುವ ಜನಾಂಗ ಅದರ ಬಿಸಿ ಭಾರತಕ್ಕೂ ಮುಟ್ಟುತ್ತದೆ ಎಂದು ಅರಿಯಲು ತುಂಬಾ ದಿನ ಬೇಕಾಗಲಿಲ್ಲ. ಇಲ್ಲಿಯ ಕಂಪೆನಿಗಳು ಕಾಸ್ಟ್ ಕಟಿಂಗ್ ಅಂತ ಹೇಳಿ ಪಿಂಕ್ ಸ್ಲಿಪ್ ಕೊಡಲು ಶುರು ಮಾಡಿದವು. ದಿನ ಬೆಳಗಾದರೆ ಯಾರು ಇರುತ್ತಾರೋ ಯಾರು ಗುಲಾಬಿ ಚೀಟಿಯನ್ನು ನೋಡಬೇಕಾಗುತ್ತದೋ ಎನ್ನುವ ಹೆದರಿಕೆ ಶುರುವಾಯಿತು.
ತನ್ನ, ಅಲಮೇಲುವಿನ ಕೆಲಸಗಳ ಮೇಲೆ ಪ್ರಹಾರ ಬಿದ್ದಿರಲಿಲ್ಲ. ಆದರೆ ಕಳೆದ ವರ್ಷ ಇಬ್ಬರಲ್ಲೊಬ್ಬರು ಎನ್ನುವ ಕಂಪೆನಿಯ ಪಾಲಸಿ ಹೇಳಿದಮೇಲೆ ಅಲಮೇಲು ಬಿಡಬೇಕೆಂದು ನಿರ್ಣಯಿಸಲಾಯಿತು. ಅಲ್ಲಿಂದ ಶುರುವಾಯಿತು ಕಷ್ಟಗಳ ಸುರಿಮಳೆ, ಸರಮಾಲೆ. ಒಂದೇ ಸಂಬಳದಲ್ಲಿ ಖರ್ಚೆಲ್ಲಾ ನಿಭಾಯಿಸುವುದು ಕಷ್ಟವಾಯಿತು. ಖರ್ಚುಗಳನ್ನು ಕಮ್ಮಿ ಮಾಡುವ ಪ್ರಯತ್ನಗಳು ನಡೆದವು. ಆದರೆ ಮುಂಚಿತವಾಗಿ ನಿಗದಿ ಪಡಿಸಿದ ಬ್ಯಾಂಕಿನ ಅಥವಾ ಇತರೆ ಆರ್ಥಿಕ ಸಂಸ್ಥೆಗಳ ಕಂತುಗಳನ್ನು ಕಟ್ಟಲೇ ಬೇಕಾಗಿತ್ತು. ಒಂದೊಂದಾಗಿ ಕಂತುಗಳು ಬಾಕಿಯಾಗತೊಡಗಿದವು. ಅಲ್ಲಿಂದ ಫೋನ್ ಗಳು ಬರತೊಡಗಿದವು. ಹಾಗೆ ಬಂದಾಗ ಇಬ್ಬರ ನಡುವೆ ರಸಕಸಿಗಳಾಗತೊಡಗಿದವು.
ಇಂದು ಬೆಳಿಗ್ಗೆ ಸಹ ಅಂಥದೇ ಬಿಸಿಬಿಸಿ ಮಾತುಕತೆಯಾಗಿತ್ತು. ಅಲಮೇಲುವಿನ ಹೆಸರಿನಲ್ಲಿ ಕೆಲ ಪರ್ಸನಲ್ ಲೋನುಗಳಿದ್ದವು. ಅವುಗಳ ಕಂತುಗಳು ಬಾಕಿಯಾದಾಗ ಅವಳಿಗೇ ಫೋನ್ ಬರುತ್ತಿದ್ದವು. ಬಳಸುತ್ತಿದ್ದ ಭಾಷೆ ದುರುಸಾಗೇ ಇರುತ್ತಿತ್ತು. ಎಷ್ಡಾದರೂ ಬಾಕಿ ವಸೂಲಿಯ ಫೋನುಗಳಲ್ಲ! ಇದು ಅಲಮೇಲುವಿಗೆ ಕಿರಿಕಿರಿಯಾಗುತ್ತಿತ್ತು. ಇಂದು ಬೆಳೆಗ್ಗೆ ಸಹ ಅಂಥದೇ ಫೋನ್ ಬಂದಾಗ ಅವಳು ತನ್ನ ಹೆಸರಿನಲ್ಲಿದ್ದ ಸಾಲವನ್ನು ಮೊದಲು ತೀರಿಸಿಬಿಡಬೇಕೆಂದು ಸ್ವಲ್ಪ ಒತ್ತಾಯಿಸಿ ಹೇಳಿದ್ದಳು. ಜಯತೀರ್ಥ ರೊಚ್ಚಿಗೆದ್ದಿದ್ದ. ಅವನಿಗು ಸಹ ಅಂಥ ಫೋನ್ ಗಳು ಬಂದಿದ್ದು ಅವನ ತಲೆ ಸಹ ಕೆಟ್ಟಿತ್ತು. ಸಿಟ್ಟಿನಿಂದ “ ನನ್ನದು ನಿನ್ನದು ಅನ್ನೋದೇನು ? ಯಾವುದರಲ್ಲಿ ಕಮ್ಮಿ ಬ್ಯಾಲನ್ಸ್ ಇದೆಯೋ ಅದನ್ನು ಮುಂಚೆ ಕಟ್ಟಿಬಿಡೋಣ ಅಂತ ಮುಂಚಿತವಾಗಿ ಮಾತಾಡಿಕೊಂಡಿದ್ದೇವಲ್ಲ. ನಿನ್ನ ಹೆಸರಿನಲ್ಲಿಯ ಸಾಲ ತುಂಬಾನೇ ಇದೆ. ಅದಕ್ಕೇ ಅದಕ್ಕೆ ತುಂಬಿಲ್ಲ. ತೀರಿಸಿ ಬಿಡಬೇಕೆಂದರೆ ಅಷ್ಟು ಹಣ ಎಲ್ಲಿದೆ? ಫೋನ್ ಬಂದರೆ ಉತ್ತರ ಹೇಳು ಅಥವಾ ಫೋನ್ ತೆಗಿಬೇಡ. ಅಷ್ಟೇ; ಸುಮ್ನೆ ನನ್ ತಲೆ ತಿನ್ನಬೇಡ” ಎಂದು ಗದರಿದ್ದ. ಅಲಮೇಲುಗೆ ಅವನ ಈ ರೇಗಾಟ ತೀರ ಹೊಸದು. ಪರಿಸ್ಥಿತಿ ಅವಳಿಗೂ ಗೊತ್ತಿದ್ದರೂ ಅದೇಕೋ ತಾನು ಒಂಟಿಯಾದೆನೆನ್ನುವ ಭಾವನೆ ಬಂದು ಕಣ್ಣೀರು ಹರಿಯುತು. ಜಯತೀರ್ಥ ಇನ್ನೂ ರೊಚ್ಚಿಗೆದ್ದ. “ಅದೇನಾಯ್ತು ಅಂತ ಅಳೋದು? ಇಬ್ಬರದೂ ಸಂಸಾರ ಅಂದ ಮೇಲೆ ಅರ್ಥ ಮಾಡಿಕೊಂಡು ಹೋಗಬೇಕೇ ವಿನಾ ನನ್ನದು ತೀರಿಸಿ ಬಿಡು ಅಂದರೆ ಏನರ್ಥ ? ನೀನೇದ್ರೂ ನೇಣ್ ಹಾಕೋ ಅಂತೀಯಾ ಹಾಗಾದ್ರೆ ?” ಅಂತ ನಿಷ್ಟುರ ನುಡಿಗಳನ್ನಾಡಿದ ಅವಳೇನೂ ಮಾತಾಡದೆ ಅಳುತ್ತ ಒಳಗೋಡಿದಳು. ತಾನು ಸಹ ತಲೆಕೆಟ್ಟು ತಿಂಡಿನೂ ತಿನ್ನದೇ ಹೊರನಡೆದ. ಇದೀಗ ತಿಂಡಿ ತಿಂದು ಆಫೀಸಿನ ಕಡೆಗೆ ಹೊರಟಿದ್ದ.
*
ಆಫೀಸಿನಲ್ಲಿ ತುಂಬಾ ಕೆಲಸದ ಒತ್ತಡ. ಮನೆಗೆ ಕಳಿಸುವವರನ್ನೆಲ್ಲ ಕಳಿಸಿದ ಮೇಲೆ ಇದ್ದವರ ಮೇಲೆ ಅವರ ಕೆಲಸವೆಲ್ಲ ಬಿದ್ದಿತ್ತು. ಏನೂ ಮಾತಾಡುವ ಹಾಗಿರಲಿಲ್ಲ. ಜಾಸ್ತಿ ಮಾತಾಡಿದರೇ ಇದಕ್ಕೆ ಸಹ ಖೋತಾ ಬರಬಹುದೆಂದು ಹಲ್ಲು ಕಚ್ಚಿ ಕೆಲಸ ಮಾಡಬೇಕಿತ್ತು. ಇವತ್ತೂ ಅಷ್ಟೇ. ಹೊರೆ ಕೆಲಸ. ಸದ್ಯ ಟೀಮ್ ಮೇನೇಜರ್ ಯಾವುದೋ ಕೆಲಸದ ಮೇಲೆ ಹೊರಗೆ ಹೋದ್ದರಿಂದ ಜಯತೀರ್ಥನೂ ಸಮಯ ಮುಗಿದ ತಕ್ಷಣ ಮನೆಗೆ ಹೊರಟಿದ್ದ. ತಲೆಯಲ್ಲಿ ಏನೋ ಆಲೋಚನೆಗಳು “ ತಾನು ಬೆಳೆಗ್ಗೆ ಹಾಗೆ ರೇಗಾಡಬಾರದಿತ್ತು. ಪಾಪ ಅಲಮೇಲು ಹೀಗೆ ಎಂದೂ ಬೈಸಿಕೊಂಡವಳಲ್ಲ. ಮದುವೆಯಾದ ಹೊಸದರಲ್ಲಿ ಯಾರ ಬೆಂಬಲವೂ ಇಲ್ಲದ ಸಮಯದಲ್ಲಿ ಒಬ್ಬರಿಗೊಬ್ಬರಾಗಿ ಸಮಾಧಾನ ಹೇಳಿಕೊಳ್ಳುತ್ತಿದ್ದೆವು. ಅವಳು ತನ್ನನ್ನೇ ಹಚ್ಚಿಕೊಂಡಿದ್ದಾಳೆ, ತನ್ನ ಮೇಲೆ ತುಂಬಾ ಭರವಸೆ. ಬೆಳೆಗ್ಗೆ ತನ್ನ ಹತ್ತಿರ ಸಮಸ್ಯೆ ಹೇಳುವಾಗಲೂ ಅವಳ ಮನದಲ್ಲಿ ತಾನು ಏನೋ ಒಂದು ಪರಿಹಾರ ಹುಡುಕಬಹುದು ಎನಿಸಿ ಹೇಳಿರಬೇಕು. ಯಾವುದೋ ಹಾಳು ಮೂಡಲ್ಲಿದ್ದು ಅವಳ ಮೇಲೆ ರೇಗಾಡಿದೆ. ಪಾಪ ಹೇಗಿದ್ದಾಳೋ ಏನೋ “ ಎಂದುಕೊಳ್ಳುತ್ತಾ ಮನೆಗೆ ತಲುಪಿದ.
ಮನೆ ಬಾಗಿಲು ತೆರೆದಾಗ ಮುಗುಳ್ನಗೆಯ ಪತ್ನಿಯನ್ನು ಕಂಡು ಮನ ಹಗುರಾಯತು. ಅವನೂ ಮುಗುಳ್ನಕ್ಕು ಸೋಫಾ ಮೇಲೆ ಮೈ ಚೆಲ್ಲಿದ. “ಯಾಕೆ ತುಂಬಾ ಕೆಲಸವಿತ್ತಾ? ಸಾಕಾಯಿತಾ?” ಎನ್ನುತ್ತ ಕೂದಲಿನಲ್ಲಿ ಕೈಯಾಡಿಸಿ ಓಲೈಸಿದಳು ಮಡದಿ. “ಸಾರೀ ಚಿನ್ನಾ ! ಬೆಳೆಗ್ಗೆ ತುಂಬಾ ರೇಗಾಡಿಬಿಟ್ಟೆ. ಯಾವುದೋ ದೆವ್ವ ತಲೆ ಮೇಲೆ ಕೂತ್ಕೊಂಡಿತ್ತು. ಬೇಜಾರಾಯಿತಾ?” ಎನ್ನುತ್ತ ಅವಳನ್ನು ತೆಕ್ಕೆಗೆ ಸೇರಿಸಿಕೊಂಡ. ಆಕೆ ಸಹ ಹುದುಗಿಕೊಳ್ಳುತ್ತ “ಭಯವಾಯ್ತು ಗೊತ್ತಾ! ಯಾವತ್ತೂ ನೀನು ಹೀಗೆ ರೇಗಾಡಿರ್ಲಿಲ್ಲ. ತಪ್ಪು ನಂದೇ ಅಂತಿಟ್ಕೋ. ಬೆಳೆಗ್ಗೆ ಬೆಳೆಗ್ಗೆ ನಿನ್ ತಲೆ ತಿನ್ಬಾರ್ದಾಗಿತ್ತು. ಮಾಮೂಲಾಗಿ ಆದ್ರೆ ಹೀಗೆ ಮಾಡೋಣ ಹಾಗೆ ಮಾಡೋಣ ಅಂತ ನೆಮ್ಮದಿಯಾಗಿ ಹೇಳ್ತಿದ್ದೆ. ಇವತ್ತು ಯಾಕೋ ಸಾಹೇಬರ ಮೂಡು ಗರಂ ಆಗಿತ್ತು. ಏನ್ಕತೆ” ಎಂದಳು ಮುಗುಳ್ನಗುತ್ತ.
“ಏನಿಲ್ಲ ಚಿನ್ನಾ ! ನಮಗೆ ನೋಡಿದ್ರೆ ಈ ತರದ ಸಮಸ್ಯೆಗಳು. ಯಾರಿಗಾದ್ರೂ ಹೇಳಿಕೊಳ್ಳೋಣ ಅಂದ್ರೆ ಉಳಿದವರು ಸಹ ಇದೇ ತರದ ಕಷ್ಟದಲ್ಲಿದಾರೆ. ಬಂಧುಗಳು ನಮಗೆ ಯಾರೂ ಹತ್ತಿರವಾಗಿಲ್ಲ. ಮನೆಯಲ್ಲಿ ದೊಡ್ಡವರು ಯಾರಾದ್ರೂ ಇದ್ದಿದ್ರೆ ಸ್ವಲ್ಪ ಸಮಜಾಯಿಸಿ ಹೇಳೋರು. ಬೆಳೆಗ್ಗೆ ಹಾಗೆ ರೇಗಾಡಿದ್ರೆ ಅಮ್ಮನೋ ಅಪ್ಪನೋ ನನ್ನ ತಲೆ ಸ್ವಲ್ಪ ತೊಳೀತಿದ್ರು. ಬುದ್ದಿವಾದ ಹೇಳ್ತಿದ್ರು. ನಮಗೂ ಕೋಪ ತೋರಿಸಿದ ಮೇಲೆ ತಪ್ಪೂಂತ ಅನಿಸಿದ್ರೂ ಹಾಳು ದುರಭಿಮಾನ. ಮಾತಾಡಲ್ಲ. ಆ ಸಮಯದಲ್ಲಿ ಮನೆಯಲ್ಲಿಯ ಹಿರಿಯರು ಇಬ್ಬರನ್ನೂ ಕೂರಿಸಿ ಸರಿಮಾಡ್ತಿದ್ರು. ಎಲ್ಲ ಸರಿಹೋಗ್ತಿತ್ತು. ಆದರೆ ನಮಗ್ಯಾರಿದ್ದಾರೆ ಹೇಳು? ನಮ್ಮಪ್ಪ ಅಮ್ಮ ಅಂತೂ ನಮ್ಮನ್ನ ಹೊರಹಾಕಿದ್ದಾರೆ. ನಿಮ್ಮ ಅಪ್ಪ ಅಮ್ಮನಿಗೆ ನಾನಂದ್ರೆ ಹೆದರಿಕೆ. ತಲೆ ಹಾಕಲ್ಲ. ಮತ್ತಿನ್ಯಾರು? ಯಾಕೋ ಒಂಟಿ ಎನಿಸ್ತಿದೆ“ ಎನ್ನುತ್ತ ಅವಳ ಮಡಿಲಲ್ಲಿ ತಲೆಯಿಟ್ಟು ಮಲಗಿದ. ಅಲಮೇಲು ಸಹ ಅದೇ ಎಮೋಷನ್ ನಲ್ಲಿದ್ದಳು. ಮಧ್ಯಾಹ್ನ ಅವಳಮ್ಮನಿಗೆ ಫೋನ್ ಮಾಡಿ ಬಯ್ಗಳು ತಿಂದಿದ್ದಳು. ಇಬ್ಬರೂ ಒಬ್ಬರನ್ನೊಬ್ಬರು ಸಮಾಧಾನ ಹೇಳಿಕೊಳ್ಳುತ್ತ ಸುಮಾರು ಸಮಯ ಹಾಗೇ ಕೂತಿದ್ದರು. ಅಷ್ಟರಲ್ಲಿ ಹೊರಗೆ ಆಡಲು ಹೋದ ಮಗಳು ಸಿಂಧು ಬಂದು “ಏ ಅಪ್ಪಾ. ಅಮ್ಮ ನಂದು ಏಳು” ಅನ್ನುತ್ತ ಅವನನ್ನು ಎಬ್ಬಿಸಿದಾಗ “ಓಕೆ ಓಕೆ ಪ್ರಿನ್ಸೆಸ್. ಅಮ್ಮ ನಿಂದೇ ಮೂಟೆ ಕಟ್ಕೋ” ಎನ್ನುತ್ತ ಮುಖ ತೊಳೆಯಲು ಎದ್ದ. ಆ ರಾತ್ರಿ ಆಹ್ಲಾದಕರವಾಗಿ ಕಳೆಯಿತು.
*
ಇನ್ನೂ ಬೆಳಕು ಹರಿದಿರಲಿಲ್ಲ. ಬೆಂಗಳೂರಿನ ವಿಪರೀತ ಚಳಿ ಮೈ ಕೊರೆಯುತ್ತಿತ್ತು. ಕರೆಗಂಟೆಯ ಸದ್ದಾಯಿತು.
“ಇದೇನು ಬೆಳಿಗ್ಗೆ ಬೆಳೆಗ್ಗೆ ? ಯಾರಿರಬಹುದು? ಯಾರೂ ಬರೋರು ಸಹ ಇಲ್ವಲ್ಲ ! ಜಯೂ, ನೀನೇ ಸ್ವಲ್ಪ ನೋಡು. ನಂಗಂತೂ ಹೆದರಿಕೆ “ ಎನ್ನುತ್ತ ಅಲಮೇಲು ಹೇಳಿದಾಗ, ಹೊದಿಕೆ ಸರಿಸಿ ಎದ್ದ ಜಯತೀರ್ಥ. ಕಣ್ಣುಜ್ಜುತ್ತಾ, ಬಾಗಿಲು ತೆರೆದಾಗ ದಂಗು ಬಡಿದಂತೆ ನಿಂತ. ಎದುರಿಗೆ ಅಪ್ಪ, ಅಮ್ಮ ನಿಂತಿದ್ದರು “ಅಪ್ಪಾ ! ಅಮ್ಮಾ! ಇದೇನಿದು ಇದ್ದಕ್ಕಿದ್ದ ಹಾಗೆ? ಮುಂಚೇ ತಿಳಿಸಿದ್ರೆ ಬರ್ತಿರ್ಲಿಲ್ವಾ ನಿಮ್ಮನ್ನು ರಿಸೀವ್ ಮಾಡಲಿಕ್ಕೆ ! ಬನ್ನಿ. ಬನ್ನಿ ಒಳಗ್ ಬನ್ನಿ ಮೊದಲು” ಎನ್ನುತ್ತಾ ಒಳಗೆ ಕರೆದು “ ಅಲ್ಮೇಲೂ ಯಾರು ಬಂದಿದ್ದಾರೆ ನೋಡಿಲ್ಲಿ” ಕಿರುಚಿದ ಹಾಗೆ ಕರೆದ. ಅಲಮೇಲು ಸಹ ಗಡಬಡಿ ಕೇಳಿಸಿಕೊಂಡವಳು ಹಾಸಿಗೆಯಿಂದ ಎದ್ದು ಹೊರಗೆ ಬಂದು ಗರ ಬಡಿದವಳಂತೆ ಹಾಗೇ ನಿಂತಳು. ಅಷ್ಟರಲ್ಲೇ ಸಾವರಿಸಿಕೊಂಡು ಕೂಡಲೇ ನಮಸ್ಕಾರ ಮಾಡಿದಳು. “ ಬೇಡಮ್ಮಾ ಬೇಡ. ಇನ್ನೂ ಮುಖ ಸಹ ತೊಳೆದಿಲ್ಲ” ಎನ್ನುತ್ತಿದ್ದ ಮಾವನ ಮಾತಿಗೆ “ ನಂಗದೇನೂ ಗೊತ್ತಿಲ್ಲ. ನಿಮ್ಮನ್ನು ಕಂಡ ಕೂಡಲೇ ನಮಸ್ಕಾರ ಮಾಡಿದೆ. ಬನ್ನಿ ಅತ್ತೆ. ಒಳಗಡೆ ಬನ್ನಿ. ಸಾಮಾನು ಕೊಡಿ. ಕೈಕಾಲು, ಮುಖ ತೊಳೆಯಿರಿ. ಬಿಸಿ ಬಿಸಿ ಕಾಫಿ ಮಾಡಿ ತರ್ತೀನಿ. ಮಾವ ನೀವು ಸಹ ಅಷ್ಟೇ.” ಎನ್ನುತ್ತಾ ಗಡಿಬಿಡಿ ಮಾಡಿದಳು. ಭೀಮಸೇನರಾಯರು ನಗುತ್ತಾ
“ನೀನೇನೋ ಗಡಿಬಿಡಿ ಮಾಡ್ಕೊಬೇಡಮ್ಮಾ. ನಾವು ಇಲ್ಲಿ ಕೆಲವು ದಿನ ಇರಬೇಕು ಅಂತಲೇ ಬಂದಿದೀವಿ. ಇವತ್ತೇ ನಿನ್ನ ಮರ್ಯಾದೆ ಎಲ್ಲ ಮುಗಿಸಿ ಬಿಡಬೇಡ. ನೀನು ಹೋಗು ರಮಾ. ನಿನ್ನ ಕೆಲಸ ಮುಗಿಸಿ ಬಾ. ಸಾಮಾನೆಲ್ಲ ಸೊಸೆಯನ್ನು ಕೇಳಿ ಎಲ್ಲಿಡಬೇಕೋ ನೋಡು. ನಾನು ಸ್ವಲ್ಪ ಇಲ್ಲೇ ಸೋಫಾದಲ್ಲಿ ಒರಗಿಕೊಳ್ತೀನಿ. ಕಾಲೇಕೋ ಎಳಿತಾ ಇದೆ ಬಸ್ಸಲ್ಲಿ ಕೂತು ಕೂತು” ಎನ್ನುತ್ತಾ ಸೋಫಾದ ಮೇಲೆ ಕೂತರು. ಅವರ ಧರ್ಮಪತ್ನಿ ಒಳ ನಡೆದರು ಸೊಸೆಯ ಜೊತೆ.
ಅಪ್ಪನಿಗೊಂದು ತಲೆದಿಂಬು ಕೊಡುತ್ತಾ ಜಯತೀರ್ಥನೆಂದ. “ ಇದೇನಪ್ಪಾ. ಇಷ್ಟು ದಿಢೀರ್ ಅಂತ ಬಂದಿಳಿದ್ರಿ. ಒಂದು ಫೋನ್ ಮಾಡ ಬಾರದಾಗಿತ್ತಾ !. ಎಷ್ಟು ಹುಡುಕಿದ್ರೋ ಏನೋ ! ಅದೂ ಈ ನಸುಕಿನಲ್ಲಿ “ ಅಂದ.
“ ಇಲ್ಲ ಕಣೋ! ನಾನೇನೂ ನಿಮ್ಮ ಬಿಲ್ಡಿಂಗ್ ಗೆ ಮೊದಲ ಸಲ ಬರ್ತಾ ಇಲ್ಲ. ಇಷ್ಟಕ್ಕೂ ಮುಂಚೆ ಎರಡು ಸಲ ಬಂದು ನಿನ್ನ ಬಗ್ಗೆ ವಿಚಾರಿಸಿ ಹೋಗಿದ್ದೆ. ಒಳಗೆ ಬರಬಹುದಾಗಿತ್ತು. ಹಾಳು ದುರಭಿಮಾನ ಒಂದಿದೆಯಲ್ಲ. ಹಾಗೇ ವಾಪಸ್ ಹೋಗಿದ್ದೆ. ಅವಾಗ ಹುಡುಕಿದ್ದೆ ಅಂತಿಟ್ಕೋ. ಮೊನ್ನೆ ಇಬ್ಬರೂ ನಿಶ್ಚಯಿಸಿದೆವು. ನಮಗಾದರೂ ಇನ್ಯಾರಿದ್ದಾರೆ ನಿಮ್ಮಿಬ್ಬರನ್ನ ಬಿಟ್ರೆ. ವಚ್ಚು ಅವಳ ಮನೆಯಲ್ಲಿ ಸುಖವಾಗಿದ್ದಾಳೆ. ನಾವು ನಿನ್ನ ಜೊತೆ ಇದ್ದು ಮೊಮ್ಮಗಳ್ನ ನೋಡಿಕೊಂತ ಇದ್ರೆ ನಿಮಗೂ ಸ್ವಲ್ಪ ಹಿರಿಯರ ಜೊತೆ ಇದ್ದ ಹಾಗಾಗುತ್ತೆ. ಮತ್ತೆ ನಿಮಗೆ ಅನುಕೂಲ ಸಹ ಆಗುತ್ತೆ. ಇವಳಂತೂ ತುಂಬಾನೇ ಪೇಚಾಡ್ತಿದ್ಲು. ಅಂದ ಹಾಗೆ ವಚ್ಚುಗೆ ಹೇಳಿದ್ದೆ. ಫೋನ್ ಮಾಡು ಅಂತ. ಮಾಡಿರ್ಬೇಕು ನೋಡು. “ ಅಂದರು ಭೀಮಸೇನರಾಯರು.
ನೆನ್ನೆ ರಾತ್ರಿಯ ತುಮುಲಕ್ಕೆ ದಣಿದಿದ್ದು, ಫೋನ್ ಸೈಲೆಂಟಿನಲ್ಲಿಟ್ಟು ಮಲಗಿದ್ದು ನೆನಪಾಯ್ತು. ಹೋಗಿ ನೋಡಿದ್ರೆ ಇಬ್ಬರ ಫೋನ್ ಗಳಲ್ಲೂ ಮಿಸ್ಡ್ ಕಾಲ್ಗಳಿದ್ದವು. “ಅಪ್ಪಾ. ಅಕ್ಕ ಫೋನ್ ಮಾಡಿದ್ದಾಳೆ. ನಾವಿಬ್ಬರೂ ಸೈಲೆಂಟ್ ನಲ್ಲಿಟ್ಟು ಮಲಗಿದ್ವು. ಅದಕ್ಕೆ ಗೊತ್ತಾಗಲಿಲ್ಲ. ಅಷ್ಟರಲ್ಲಿ ನೀವು ಬಂದೇ ಬಿಟ್ರಿ” ಎಂದ. “ಅದೊಂದು ತರ ಒಳ್ಳೇದೇ ಆಯ್ತು ಬಿಡು. ನಿಮ್ಮಿಬ್ಬರಿಗೂ ಸರ್ಪ್ರೈಜ್ ಆಯಿತು” ಎನ್ನುತ್ತ ಮುಗುಳ್ನಕ್ಕರು ಅಪ್ಪ.
ಅಪ್ಪ ಅಮ್ಮರನ್ನ ತನ್ನ ಮನೆಯಲ್ಲಿ ಕಂಡ ಜಯತೀರ್ಥನಿಗೆ ಅದೇನೋ ನೆಮ್ಮದಿ, ಸಮಾಧಾನ. ಅಲಮೇಲುವಿನ ಮೊಗದಲ್ಲೂ ಮಂದಹಾಸ. ನೆನ್ನೆಯಷ್ಟೇ ತಾವಿಬ್ಬರೂ ಮನೆಯಲ್ಲಿ ಹಿರಿಯರಿದ್ದರೇ ಚೆನ್ನ ಎಂದುಕೊಂಡಿದ್ದು ನೆನಪಾಗಿ, ದೇವರು ಮೊರೆ ಕೇಳಿದನೆನಿಸಿತು.
ಬೆಳಗಿನ ಅರುಣ ಕಿರಣಗಳು ಮೆಲ್ಲಗೆ ಅವರ ಮನೆಯಲ್ಲಿ ಕೈ ಚಾಚುತ್ತಿದ್ದವು.
ಮುಗಿಯಿತು
–ಚಂದಕಚರ್ಲ ರಮೇಶ ಬಾಬು