ಅವಲಕ್ಕಿ ಎಂಬ ಮಹಾ ಪುರಾಣ: ಡಾ. ವೃಂದಾ ಸಂಗಮ್

ಅವಲಕ್ಕಿಗೆ ಒಂದು ಪುರಾಣ ಅದ. ಅದು ಭವಿಷ್ಯೋತ್ತರ ಪುರಾಣದೊಳಗ ಬರತದ. ನಾವೆಲ್ಲ, ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ ಎಂಬ ಹಾಡನ್ನ ಮಕ್ಕಳಿದ್ದಾಗಲೇ ಹಾಡತಿದ್ವಿ. ಈಗೀಗ, ಅದಕ್ಕೂ ರಾಮಾಯಣಕ್ಕೂ ನಂಟು ಜೋಡಿಸಿದ್ದೂ ಕೇಳತೇವಿ. ಆದರ, ಅವಲಕ್ಕಿ ಪ್ರಾಚೀನತೆ ಬರೋದು ಮಹಾಭಾರತದಾಗ. ಮತ್ತ ಮುಂದ ಭಾಗವತ ಪುರಾಣದಾಗ, ಅಲ್ಲದ ಹರಿವಂಶದಾಗ. ಊಟಂದ್ರ ಊಟ ಅಲ್ಲ, ತಿಂಡಿ ಅಂದ್ರ ತಿಂಡಿ ಅಲ್ಲ, ಊಟನೂ ಹೌದು, ತಿಂಡಿನೂ ಹೌದು, ಬಹುರೂಪಿ, ನಾನ್ಯಾರು. ಅಂತ ಯಾರರೇ ಕೇಳಿದರ ಅದು ಅವಲಕ್ಕಿ ಅಂತ ಎಲ್ಲಾರಿಗೂ ಗೊತ್ತು. ಹೊತ್ತು ಗೊತ್ತಿಲ್ದ ಸವಿಯೋ ಸ್ನ್ಯಾಕ್ಸ ಅಂದ್ರ ಅದು ಅವಲಕ್ಕಿ. ಅವಲಕ್ಕಿ ಬಹುರೂಪಿ, ಅಲ್ಲಲ್ಲ ದೇವರೂಪಿ. ಯಾಕಂದ್ರ ಅವಲಕ್ಕಿ ಅನ್ನೋದಕ್ಕ ಪರ್ಯಾಯ ಪದ ಸುಧಾಮ. ಸುಧಾಮನ ಅವಲಕ್ಕಿ ಜಗತ್ಪ್ರಸಿದ್ಧ.

ಅಲ್ಲರೀ, ಎಲ್ಲಾ ಬಿಟ್ಟು, ಈ ಅವಲಕ್ಕಿ ಸುತ್ಯಾಕ ಸುತ್ತತೀತಿ ಅಂದ್ರ, ಹಂಗ ತನ್ನ ಸುತ್ತಲೂ ಎಲ್ಲರನ್ನೂ ಸುತ್ತಿಸಿಕೊಳ್ಳುವ ತಿಂಡಿಯೇ ಅವಲಕ್ಕಿ. ಅದು ಮಡೀ ಅಂದರ ಮಡೀ, ಅಲ್ಲಾಂದ್ರ ಸ್ನ್ಯಾಕ್ಸ. ಹಿಂದೆಲ್ಲಾ ಯಾತ್ರಾರ್ಥಿಗಳು ತಮ್ಮ ಕೃಷ್ಣಾಜಿನದಾಗ ಒಂದಿಷ್ಟು ಅವಲಕ್ಕಿ ಇಟಕೊಂಡೇ ಯಾತ್ರೆಗೆ ಹೊರಡತಿದ್ದರು. ಯಾಕಂದರ, ನಡೆದು ಹೋಗುವಾಗ, ಆಯಾಸ ಪರಿಹಾರಕ್ಕ, ತಕ್ಷಣಕ್ಕೆ ತಯಾರಾಗುವ, ರೆಡಿ ಟು ಈಟ್‌ ತಿಂಡಿ ಅದು. ಅವಲಕ್ಕಿ ಬೇಯಿಸಿದ ಪದಾರ್ಥ ಅಲ್ಲ. ಅದಕ್ಕಾಗೇ ಅದು ಮುಸುರೆ ಅಲ್ಲ, ಮತ್ತೆ ಅದಕ್ಕ Use before ಅಂತ deadline ಅಂತ ಇಲ್ಲ. ಅದನ್ನ ಬೇಯಿಸಿ ತಯಾರಿಸದೇ, ಹಾಗೆಯೇ ಕೂಡಾ ತಿನ್ನಬಹುದು. ಅದಕ್ಕಾಗೇ ಅದು ದೇವರ ವರ ಪ್ರಸಾದ.

ನಮ್ಮ ಮಾಮಾ, ನಮಗ, ಅವಲಕ್ಕಿಗೆ ಪರ್ಯಾಯ ಪದ ಅಂದರ ನೀವೇ ಅಂತಿದ್ದ. ಅದು ಸುಳ್ಳು, ನಾನೊಬ್ಬಳೇ ಅಲ್ಲ. ನಮ್ಮೂರವರು ಎಲ್ಲಾ. ಪ್ರತೀ ದಿನಾ ಮುಂಜಾನೆ ಸ್ನಾನ ಮಾಡಿ, ಹಣಮಪ್ಪನ ಗುಡೀಗೆ ಹೋಗಿ ಬಂದು, ಒಂದು ಕಲಪರಟಿ ಅವಲಕ್ಕಿ ಮ್ಯಾಲ ಕೆನಿ ಮೊಸರು ಗಡದ್ದಾಗಿ ತಿಂದರ, ಹಬ್ಬ ಆಯಿತು ಅಂತ ಅರ್ಥ. ಅಲ್ಲಿಗೆ ಆ ದಿನದ ದೊಡ್ಡ ಸಾಧನೆ ಮುಗೀತು ಅಂತ. ಹಂಗಂತ ಅವಲಕ್ಕಿ ಅಪರೂಪದ ತಿಂಡಿ ಅಂತೇನೂ ಅಲ್ಲ. ಅದು ದಿನಾನೂ ತಿನ್ನೋದ. “Good Morning Sir. Had the Breakfast” ಅಂತೆಲ್ಲಾ ನಮ್ಮೂರಾಗ ಯಾರನ್ನೂ ಕೇಳೋಹಂಗೇ ಇಲ್ಲ. “ನಮ್ಮೂರಲ್ಲಿ ಹಂಗೇನಿಲ್ಲ” ಅಂತ ಹಾಡದಿದ್ದರೂ, ಕೇಳೋದು ಒಂದೇ, “ಸ್ನಾನಾತು, ಅವಲಕ್ಕಿ ತಿಂದ್ಯಾ,” ಅಂತಾನೇ. ನಮ್ಮೂರವರೆಲ್ಲಾ, “ಮುಂಜಾನೆದ್ದು ಕುಂಬಾರಣ್ಣ, ಅವಲಕ್ಕೀನ ತಿಂದಾನಣ್ಣ” ಅನ್ನೋವರೇ. ಅಲ್ಲಲ್ಲ, ತಿನ್ನೋವರೇ.
ಸ್ವಲ್ಪ ದಿನದ ಹಿಂದೆ, ಅಂದರೆ ಹಿಂದಿನ ದಿನದೊಳಗೆ, ನಮ್ಮೂರಲ್ಲಿ ಎಲ್ಲರಿಗೂ ಪ್ರಾಥಮಿಕ ಶಾಲೆಗೆ ಮಾತ್ರ ಅವಕಾಶವಿತ್ತು. ಹೈಸ್ಕೂಲಿಗೆ ಹೋಗಬೇಕೆಂದರೆ, ಇಂಗ್ಲೀಷನಲ್ಲಿ ಪಾಠ ಕಲಿಯಬೇಕೆಂದರೆ, ಹಾವೇರಿಗೆ ಹೋಗಬೇಕಿತ್ತು. ಹುಟ್ಟಿದೂರನ್ನು ಬಿಟ್ಟು ಅರ್ಥವಾಗದ ಭಾಷೆಯ ಶಾಲೆಯಲ್ಲಿ ಅಕ್ಷರಶಃ ಅನಾಥನಾದ ಹುಡುಗನೊಬ್ಬ, ರಜೆಯಲ್ಲಿ ಊರಿಗೆ ಬಂದ. ತಾಯಿಗೋ ಮಗನು ಕಲಿತ ಇಂಗ್ಲೀಷ್‌ ಕೇಳುವಾಸೆ. ಮಗನಿಗೆ ನೀನೇನು ಕಲಿತೆಯೋ, ಇಂಗ್ಲೀಷಿನಲ್ಲಿ ಮಾತಾಡಿ ತೋರಿಸು, ಎಂದಳಂತೆ. ಮಗನಿಗೋ ಅವಲಕ್ಕಿ ತಿನ್ನುವ ಆಸೆ. “ಮದರ್‌, ಐ ಮಿಸ್‌ ಅವಲಕ್ಕಿ, ಪ್ಲೀಸ್‌ ಗಿವ್‌ ಮೀ ಒನ್‌ ಕಲಪರ್ಟಿ ಅವಲಕ್ಕಿ.” ಎಂದನಂತೆ.
ನಮ್ಮ ಬಂಧು ಬಳಗದವರೆಲ್ಲರಿಗೂ, ಬಾಲ್ಯದ ನೆನಪಿನ ಖಜಾನೆ ಅಂದರ, ನಮ್ಮೂರಿನ ವರದಾ ನದಿ ಮತ್ತ ಹಂಗ ಮುಂಜಾನಿ ತಿಂಡಿ, ಅವಲಕ್ಕಿ ಮತ್ತದರ ತಲೀ ಮ್ಯಾಲ ಮೊಸರು. ನಮ್ಮೂರಾಗನೂ, ಈಗೀಗ ಹೊಸಾ ಸೊಸೆಯರು, ಮುಂಜಾನೆದ್ದು ದಿನಾ ಅವಲಕ್ಕಿ ತಿನ್ನಲಾರದೇ, ಹೊಸ ಹೊಸ ತಿಂಡಿಗಳ ಪ್ರಯೋಗ ಮಾಡತಾರ. ಅದರಾಗೂ, ಉಪ್ಪಿಟ್ಟಿಗೆ ನಮ್ಮೂರಿನವರೂ ಹೊಂದಿಕೊಂಡಾರ. ಅದೂ ಹೆಂಗಂದರ, ಎಲಿಯೊಳಗ ಅರ್ಧ ಭಾಗ ಉಪ್ಪಿಟ್ಟು. ಹಂಗ, ಇನ್ನರ್ಧ ಭಾಗ ಅವಲಕ್ಕಿ. ಅದು ಉಪ್ಪಿಟ್ಟಿಗೆ ಮಿಕ್ಚರ್‌ ಹಾಕಿದಂಗ. ನಾವು ಮೊದಲೆಲ್ಲಾ, ಉಪ್ಪಿಟ್ಟು ತಿನ್ನೋದು ವರ್ಷದಾಗ ಎರಡೇ ಸರತಿ. ಒಂದು ನಾಗರ ಚವತಿ ಉಪವಾಸ, ಇನ್ನೊಂದು ಕೃಷ್ಣ ಜನ್ಮಾಷ್ಟಮಿ ಉಪವಾಸ. ಯಾಕೆಂದ್ರೆ, ರವಾ ಬೇಯಿಸುವುದರಿಂದ ಮುಸುರೆ, ತಿಂದರೆ ಮಡಿ ಶುದ್ಧವಾಗಲಾರದು. ಆದರೂ ಈಗೀಗ, ಎಲ್ಲಾರ ಮನೆಯಲ್ಲೂ, “ಉದುರು ಉಪ್ಪಿಟ್ಟು, ಪದರ ಚಪಾತಿ, ಎದುರಿಟ್ಟಕೊಂಡು ಹೊಡೀತಾನ ನನಗಂಡ” ಅಂತ ನಡದದ. ಮತ್ತಿಲ್ಲೆ, ಹೊಡೀತಾನ ಅಂದರ, ನೇರಾನೇರ ಅರ್ಥಾ ಮಾಡಬೇಡಿ. ಹೊಡೀತಾನ ಅಂದರ, ಸಂಭ್ರಮಿಸಿಕೊಂಡು ತಿಂತಾನೆ ಅಂತ ಅರ್ಥ. ಆದರೆ, ಇಡ್ಲಿ, ದೋಸೆ, ಪೂರಿ, ಚಪಾತಿ, ಥಾಲಿ ಪೆಟ್ಟುಗಳು ತಿಂಡಿಯ ಸಾಲಿಗೆ ಬಂದಿಲ್ಲ. ಆದರೂ, ಒಮ್ಮೊಮ್ಮೆ ಮಾಡಿದರೂ, ಅವುಗಳನ್ನು ಹೊಟ್ಟೆತುಂಬ ತಿಂದು, ಆಮ್ಯಾಲೆ, ಕಲಪರಟಿ ಅವಲಕ್ಕಿ ತಿಂದರನೇ, ತಿಂಡಿಯ ಕೆಲಸ ಪೂರ್ತಿ. ಅದಕ್ಕಾಗೇ, ಕಷ್ಟಪಟ್ಟು ಈ ತಿಂಡಿಗಳನ್ನ ಮಾಡಿ, ಮ್ಯಾಲ ಮತ್ತ ಅವಲಕ್ಕಿ ಮಾಡೋದರ ಬದಲಿಗೆ, ಅವಲಕ್ಕಿ ಒಂದ ಕೊಟ್ಟು ಥಣ್ಣಗ ಕೂಡೋದು ಕಲತಾರ ಈ ಸೊಸೆಯರು. ಅವರಿಗೂ ಹಿತ, ಇವರಿಗೂ ಹಿತ ಅಂತ ದೊಡ್ಡವರೂ ಸುಮ್ಮನಿದ್ದಾರ.

ನೂರು ಗ್ರಾಂ ಅವಲಕ್ಕಿಯಲ್ಲಿ ಹಲವು ಬಗೆಯ ಪೌಷ್ಠಿಕಾಂಶಗಳಿರುತ್ತವೆ. ತಕ್ಷಣದ ಶಕ್ತಿವರ್ಧಕವಾಗಿ ಕಾರ್ಬೋಹೈಡ್ರೇಟುಗಳು 76 ಗ್ರಾಂ, ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನು 6.5 ಗ್ರಾಂ, ಹೃದಯದ ಆರೋಗ್ಯಕ್ಕೆ ಪೂರಕವಾದ ಕೊಬ್ಬು 1.1 ಗ್ರಾಂ, ಜೀರ್ಣಕ್ರಿಯೆಯ ಸುಧಾರಣೆಗಾಗಿ ಡಯಟರೀ ಫೈಬರು ನಾರು 2.5 ಗ್ರಾಂ, ರಕ್ತಹೀನತೆ ತಡೆಯಲು ಕಬ್ಬಿಣದೈರನ್ನು 2.6 ಮಿಲಿಗ್ರಾಂ, ಎಲುಬುಗಳ ಆರೋಗ್ಯಕ್ಕಾಗಿ ಕ್ಯಾಲ್ಸಿಯಂ 20 ಮಿಲಿಗ್ರಾಂ, ನರವ್ಯವಸ್ಥೆ ಮತ್ತು ದೇಹದ ಮೆಟಾಬಾಲಿಸಂಗೆ ಥಿಯಾಮಿನ್ ಎಂಬ ಬಿ ಒನ್ ಜೀವಸತ್ವ 0.2 ಮಿಲಿಗ್ರಾಂ, ರಕ್ತದೊತ್ತಡ ನಿಯಂತ್ರಣಕ್ಕಾಗಿ ಸೋಡಿಯಂ 5 ಮಿಲಿಗ್ರಾಂ ಮತ್ತು ಶರೀರದ ನೀರಿನ ಸಮತೋಲನಕ್ಕಾಗಿ ಪೊಟಾಷಿಯಂ 270 ಮಿಲಿಗ್ರಾಂ ಅಡಕವಾಗಿದೆಯೆಂದು ಆಹಾರತಜ್ಞರು ತಿಳಿಸುತ್ತಾರೆ. ಅಂದರ, ಅವಲಕ್ಕಿ ಮುಂಜಾನೆ ತಿಂದ್ರ, ಮಧ್ಯಾನ್ಹದ ಆಹಾರದವರೆಗೂ ತಲೀ ಚುರುಕಿರತದ, ದೇಹ ಪುಷ್ಟಿಯಿರತದ. ನಡು ನಡುವೆ ಏನೂ ತಿನಬೇಕಿಲ್ಲ. ಬೆಳಗಿನ ವೇಳೆಯಲ್ಲಿ ಅವಲಕ್ಕಿಯ ಸೇವನೆ ಒಳ್ಳೆಯದು ಎಂದು ಆಹಾರತಜ್ಞರೇ ಸಲಹೆ ನೀಡಿದ್ದಾರೆ. ಅವಲಕ್ಕಿ ಆರೋಗ್ಯಕಾರಿ, ಜೀರ್ಣಕಾರಿ, ಒಂಚೂರು ತರಕಾರಿ, ಇತ್ತ ಕಡೆ ಬಡವರಾಧಾರಿ; ಅತ್ತ ಕಡೆ ಶ್ರೀಮಂತರ ಸಹಕಾರಿ! ಮಡಿಯವರ ಹೊಟ್ಟೆಗೂ ಉಪಕಾರಿ, ತಕ್ಷಣಕೆ ಆಪತ್ಬಾಂಧವನಂತೆ, ಮರ್ಯಾದಾ ಪುರುಷೋತ್ತಮನ ರೂಪಧಾರಿ. ಹೇಗೆ ಬೇಕೋ ಹಾಗೆ ಬಳಸಲು ಅನುಕೂಲಕಾರಿ; ಬಹುತೇಕರ ಬೆಳಗಿನುಪಹಾರದ ಸಂಚಾರಿ.

ನಮ್ಮ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಅವಲಕ್ಕಿಗೆ ದೈವೀ ಸ್ಥಾನ. ಕೃಷ್ಣನದು ರಾಜ್ಯಭಾರ, ಅವ ಲಕ್ಕಿ, ಸುಧಾಮನೋ ಬರಿ ಸ್ವಾಧ್ಯಾಯ, ಸಂಸಾರ, ಅವನದೇ ಅವಲಕ್ಕಿ. ಎಂಬ ಕವಿವಾಣಿ ನೋಡಿದ್ದೀರಿ. ಪ್ರತಿ ಗುರುವಾರ, ರವಿವಾರ ಸಂಜೆ ಚಿಕ್ಕ ಬಟ್ಟಲಿನಲ್ಲಿ ಅವಲಕ್ಕಿ ಬೆಲ್ಲ ತುಪ್ಪ ನೈವೇದ್ಯಕ್ಕಿಟ್ಟು, ಮಂಗ್ಳಾರ್ತಿ ಮಾಡಿ, ಹಂಚುವಾಗ, ಪುಟ್ಟ ಬಟ್ಟಲು ಅದರೊಳಗೆ ಐದು ಜನರಿಗೆ ಹಂಚಿದಾಗ ನನಗೆಷ್ಟು ಬಂದೀತು. ಆದರೂ, ತಮ್ಮನ ಜೊತೆ ಜಗಳ. ನನಗೆ ಸ್ವಲ್ಪವೇ ಕೊಟ್ಟು ನಿನಗೇ ಜಾಸ್ತಿ ಇಟ್ಟಕೋತೀಯಾ ಅಂತ. ನೆನಪುಗಳ ಮಾಲೆ ಮಧುರ. ಅವಲಕ್ಕಿಯ ನೆನಪೂ, ಜಗಳವಾಡುವ ಪ್ರೀತಿಯ ನೆನಪೂ.

ತೆಳು ಅವಲಕ್ಕಿ, ಗಟ್ಟಿ ಅವಲಕ್ಕಿ, ಪೇಪರ್ ಅವಲಕ್ಕಿ, ಮೀಡಿಯಂ ಅವಲಕ್ಕಿ ಎಂದೆಲ್ಲಾ ಹಲವು ವಿಧಗಳಿವೆ. ಒಗ್ಗರಣೆ ಅವಲಕ್ಕಿ ಅಂದರೆ ಉಪ್ಪಿಟ್ಟಿನ ರೀತಿ ತಯಾರಿಸಿ ಸವಿಯಲು ಗಟ್ಟಿ ಅವಲಕ್ಕಿಯೇ ಸರಿ. ಪ್ರಸಾದ ಹಂಚಲು ಪೇಪರ್ ಅವಲಕ್ಕಿಯ ಬಳಕೆ. ಮೊಸರವಲಕ್ಕಿಗೆ ಮೀಡಿಯಂ ಅವಲಕ್ಕಿ ಸೂಕ್ತ. ಹೀಗೆ ಮೂಲವೊಂದೇ; ರೂಪ ಬೇರೆ! ಥೇಟ್ ಭಗವಂತನಂತೆ. ದೇವನೊಬ್ಬ; ನಾಮ ಹಲವು ಎಂದ ಹಾಗೆ. ಈಗ ಎಲ್ಲೆಡೆ ಆರ್ಗ್ಯಾನಿಕ್ ರೆಡ್ ಪೋಹಾ ಅಂತ, ಕೆಂಪಕ್ಕಿಯಿಂದ ತಯಾರಿಸಿದ ಅವಲಕ್ಕಿ ಸಿಗಹತ್ತಿದೆ. ತಮಿಳುನಾಡಿನಲ್ಲಿ ಇದು ಅವಲ್, ಇನ್ನೂ ಕೆಲವು ಕಡೆ ಇದು ಅಟುಕುಲ್. (ಬಹುಷಃ ಆಡುಕಲೆ ಶಬ್ದ ಇದರಿಂದಲೇ ಬಂದಿರಬೇಕು) ಮಹಾರಾಷ್ಟ್ರದಲ್ಲಿ ಪೋಹಾ. ರೆಡಿ ಟು ಈಟ್ ಮೊದಲಾದವುಗಳಲ್ಲಿ ‘ಕಂದೆ ಪೋಹಾ’ ಪ್ರಸಿದ್ಧಿ.

ಅವಲಕ್ಕಿಯು ಹುಟ್ಟಿದ್ದು ಅಕ್ಕಿಯಿಂದಲೇ. ಭಾರತೀಯ ಸಂಸ್ಕೃತಿಯಲ್ಲಿ ಅಕ್ಕಿ ಮುಖ್ಯ ಆಹಾರ. ಅದರಿಂದಲೇ, ತಕ್ಷಣ ತಿನ್ನಬಹುದಾದ ರೂಪಕ್ಕೆ ತಂದ ರೂಪ ಅವಲಕ್ಕಿ. ಅಕ್ಕಿಯನ್ನು ನೆನೆಸಿ, ಸ್ವಲ್ಪ ಆವಿಯಲ್ಲಿ ಬೇಯಿಸಿ, ಒರಳುಗಲ್ಲಿನಲ್ಲಿ ಕುಟ್ಟಿ ತೆಳ್ಳಗೆ ಮಾಡುವುದೇ ಅವಲಕ್ಕಿ. ಇದೀಗ ಯಂತ್ರಗಳು ಆ ಕೆಲಸವನ್ನು ಮಾಡುತ್ತವೆ. ಆಕರ್ಷಕ ಪ್ಯಾಕೇಟುಗಳಲ್ಲಿ ಮಾರಾಟಕ್ಕೆ ಸಿದ್ಧವಾಗುತ್ತವೆ. ಹಿಂದೆಲ್ಲಾ ಇದನ್ನು ಮನೆಯಲ್ಲೇ, ಕೈಯಿಂದಲೇ ಕುಟ್ಟುವ ಪದ್ಧತಿಯಿತ್ತು. ಓಣಿಯಲ್ಲಿ ಯಾರ ಮನೆಯಲ್ಲಿ ಅವಲಕ್ಕಿ ಕುಟ್ಟುವುದಿದ್ದರೂ, ಎಲ್ಲರ ಸಹಕಾರ ಇದ್ದೇ ಇರುತ್ತಿತ್ತು. ಒಬ್ಬರು ಅದನ್ನು ಮಡಕೆಯಲ್ಲಿ ಹುರಿಯಲು, ಇನ್ನಿಬ್ಬರು ಒಟ್ಟಾಗಿ ಕುಟ್ಟಲು. ಇದು ನಿಜವಾಗಿಯೂ ಶ್ರಮದ ಕೆಲಸ. ಇಬ್ಬರೂ ಒಂಚೂರು ಬ್ಯಾಲನ್ಸ ತಪ್ಪದೇ, ಕುಟ್ಟುವುದೂ ಒಂದು ಕಲೆ. ಈಗ ಇದು ಮಷೀನ್ ನಲ್ಲಿ ಆಗುತ್ತದೆ. ಅವಲಕ್ಕಿ ಮಷೀನ್ ಬಂದ ಕೆಲ ದಿನಗಳು, ಮಡಿಯ ಹೆಂಗಸರು, ಮಷೀನಿನಲ್ಲಿ ತಯಾರಾದ ಅವಲಕ್ಕಿ ತಿಂತಿರಲಿಲ್ಲ. ಅವರಿಗಾಗಿ ಮಾತ್ರ ಮನೆಯಲ್ಲಿ ಕುಟ್ಟುತ್ತಿದ್ದರು. ಹೀಗೇ ಮನೆಯಲ್ಲಿ ಮಾತ್ರ ಕುಟ್ಟಿದ ಅವಲಕ್ಕಿ ಎಂದಾಗ, ನನಗೆ ನೆನಪು ಬರುವುದು, ಸಂಗೂರು ಕರಿಯಪ್ಪನವರದು. ಅವರು ಸ್ವಾತಂತ್ರ್ಯ ಹೋರಾಟಗಾರರು, ಮೈಲಾರ ಮಹದೇವಪ್ಪನವರ ಶಿಷ್ಯರು. ಬ್ರಿಟಿಷರೊಡನೆ ಹೋರಾಡುವಾಗ ತಮ್ಮ ಎಡಗೈ, ಭುಜದಿಂದ ಕೆಳಗೆ, ಕಳೆದು ಕೊಂಡಿದ್ದರು. ಖಾದಿ ತೊಡುತ್ತಿದ್ದರು. ಸುಮಾರು 1975 ರ ಹೊತ್ತಿಗೆ, ನಮ್ಮೂರಿಗೆ ಬಂದಾಗ, ಅವರು ನಮ್ಮ ಮನೆಗೆ ಬರುತ್ತಿದ್ದರು. ಸ್ವಾವಲಂಬಿ ಭಾರತದ, ಗಾಂಧೀಯವರ ಅನುಯಾಯಿಗಳಾದ್ದರಿಂದ ಅವರು, ಮಷೀನಿನ ಅವಲಕ್ಕಿ ತಿಂತಿರಲಿಲ್ಲ. ಮಡಿ ಹೆಂಗಸು, ನನ್ನಜ್ಜಿ ಅವರಿಗೆ ಮುತ್ತಲೆಲೆಯ ದೊನ್ನೆಯಲ್ಲಿ ಮನೆಯಲ್ಲಿ ಕುಟ್ಟಿದ ಅವಲಕ್ಕಿ ಹಾಗೂ ಗಾಣದಿಂದ ಮಾಡಿದ ಬೆಲ್ಲ ಕೊಡುತ್ತಿದ್ದಳು. ಸಂಭ್ರಮದಿಂದ ತಿಂದು, ಸುಧಾರಿಸಿಕೊಂಡು ಹೋಗುತ್ತಿದ್ದರು, ಸುಲಭವಾಗಿ ಹೊತ್ತೊಯ್ಯಬಹುದಾದ, ಹಾಳಾಗದ ಆಹಾರವಾಗಿದ್ದರಿಂದ, ಅವಲಕ್ಕಿ ರೈತರ ಕಣ್ಮಣಿ.

ಒಮ್ಮೆ ರಾಜನೊಬ್ಬ ತನ್ನ ಪ್ರವಾಸದಲ್ಲಿ, ತುಂಬ ಹಸಿವೆಯಾದಾಗ, ದಾರಿಯಲ್ಲಿ ಒಂದು ಗ್ರಾಮ ಸಿಕ್ಕಿತು. ತಕ್ಷಣಕ್ಕೆ ಹೊಟ್ಟೆ ತುಂಬುವಂಥ ರುಚಿಕರ ಊಟ ಸಿದ್ಧಪಡಿಸುವಂತೆ ತಿಳಿಸಿದ. ಆ ಗ್ರಾಮದ ಕೃಷಿಕನ ಮಗಳು ಬಲು ಚತುರೆ. ಅಕ್ಕಿ ಬೇಯಿಸಲು ಹೊತ್ತಾಗುತ್ತದೆ, ರೊಟ್ಟಿ ತಯಾರಿಸಲು ಸಮಯ ಬೇಕು. ಕೃಷಿಕನ ಮಗಳು ತಕ್ಷಣ ತಂದೆಯ ಮನೆಗೆ ಓಡಿ ಹೋಗಿ, ಬಾಳೆ ಎಲೆಯ ಮೇಲೆ ಬಿಸಿ ಬಿಸಿ ಅವಲಕ್ಕಿ ಒಗ್ಗರಣೆಯನ್ನು ತಯಾರಿಸಿದಳು. ರಾಜನು ತಿಂದ ತಕ್ಷಣ, “ಇಷ್ಟು ಬೇಗ, ಇಷ್ಟೊಂದು ರುಚಿಕರ ಆಹಾರ! ಭೇಷ್” ಎಂದು ಹೇಳಿ ಅವಳಿಗೆ ಬಂಗಾರದ ನಾಣ್ಯ ಕೊಟ್ಟನಂತೆ. ಅಂದಿನಿಂದ ಜನ ಅವಲಕ್ಕಿಯನ್ನು ‘ರೈತನ ಬಂಗಾರ’ ಎಂದು ಕರೆದರಂತೆ. ಅವಲಕ್ಕಿ, ಇದೊಂಥರ ಹೆಲ್ದಿ ಫುಡ್. ಓಟ್ಸ್, ಕಿನೊವ ಎಂದೆಲ್ಲಾ ವಿಜೃಂಭಿತಗೊಳ್ಳುತ್ತಿರುವಾಗ ಈ ಬಡಪಾಯಿ ಸುಧಾಮನ ಅವಲಕ್ಕಿಯು ಶ್ರೀಮಂತರ ಮನೆಗಳಿಂದ ಕಣ್ಮರೆಯಾಗುತ್ತಿದೆಯೇನೋ ಎಂಬ ಆತಂಕವಂತೂ ಇದೆ.

ಬಡ ಸುಧಾಮ, ಕೃಷ್ಣನಿಗೆ ಅವಲಕ್ಕಿ ಕೊಟ್ಟು ಧನ್ಯನಾದ ಕಥೆ ಪ್ರಚಲಿತವಿದೆ. ಇದು ಕೃಷ್ಣನ ಕಥೆಯಾದ್ದರಿಂದ, ಮಹಾಭಾರತ, ಭಾಗವತ, ಹರಿವಂಶದ ಪುರಾಣದಲ್ಲಿ ಬಂದೇ ಬರುತ್ತದೆ. ಯಾರಿಗೆ ಯಾವ ಸಮಯದಲ್ಲಿ ಅವಲಕ್ಕಿಯನ್ನು ಕೊಟ್ಟರೂ, ಅವಲಕ್ಕಿಯನ್ನು ಬೇಡಾ ಎನ್ನಬಾರದು, ಎನ್ನುತ್ತಲೇ ಒಂದು ಮುಕ್ಕು ಬಾಯಿಗೆ ಹಾಕುತ್ತಾರೆ. ಮುಂದೇನಿಲ್ಲ. ಒಂದು ಮುಕ್ಕು ಅವಲಕ್ಕಿ ಮುಕ್ಕಿದರೆ ಮುಗೀತು, ನಮ್ಮ ಮಾತನ್ನು ಕೈ, ಬಾಯಿ ಎರಡೂ ಕೇಳುವುದಿಲ್ಲ. ಡಬ್ಬಿಯೋ, ತಟ್ಟೆಯೋ ಖಾಲಿಯಾಗುವವರೆಗೂ ಅವು ಕೆಲಸ ಮಾಡುತ್ತಲೇ ಇರುತ್ತವೆ. ಯಾವುದೇ ಹಬ್ಬ ಬರಲಿ, ಹಬ್ಬದ ಪದ್ಧತಿಯೇನೇ ಇರಲಿ, ಊಟಕ್ಕೆ ಮೊದಲು ಉಪ್ಪಿನ ಕಾಯಂತೆ, ಹಬ್ಬಕ್ಕೆ ಮೊದಲು, ಬೇಸನ್‌ ಉಂಡಿ, ಅವಲಕ್ಕಿ, ಚಕ್ಕಲಿ ಡಬ್ಬಿ ತುಂಬ ತುಂಬಿಕೊಳ್ಳುತ್ತವೆ. ಹಬ್ಬದ ದಿನವಂತೂ, ಮನೆಯ ಹಿರಿಯ ಹೆಂಗಸರು, ಪೂಜೆ ಮಾಡುವವರಿಗೆ, ಬಲವಂತವಾಗಿಯಾದರೂ ನಾಲ್ಕು ತುತ್ತು ಅವಲಕ್ಕಿ ತಿನ್ನಿಸಿ, ಪೂಜೆಗೆ ಕೂಡಿಸುವುದುಂಟು. ಇಲ್ಲವಾದರೆ, ದೇವರ ಪೂಜೆಯೊಂದಿಗೆ, ಇವರ ಪೂಜೆಯೂ ಆಗುವುದೆಂಬ ಭಯ.

ಅಕ್ಷತಾ ರಾಜ್ ಪೆರಾಲ ಅವರ ಅವಲಕ್ಕಿ ಪವಲಕ್ಕಿ ಎಂಬ ಹೆಸರಿನ ಲೇಖನಗಳ ಸಂಗ್ರಹವೊಂದು ಕರಾವಳಿ ಲೇಖಕಿಯರ ಪುರಸ್ಕಾರ ಪಡೆದಿದೆಯಂತೆ. ಇದೇ ಹೆಸರಿನ ಮಕ್ಕಳ ಸಿನಿಮಾವೊಂದು 2021 ರಲ್ಲಿ ತೆರೆ ಕಂಡು, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಶ್ರೀ ಪ್ರಶಾಂತ ಆಡೂರ ಇವರ ಕುಟ್ಟವಲಕ್ಕಿ, ಗೊಜ್ಜವಲಕ್ಕಿ ಎಂಬ ಕೃತಿಗಳು ಪ್ರಸಿದ್ಧವಾಗಿವೆ. ಇವೇ ಅವಲಕ್ಕಿಯ ಮಹಿಮೆಯನ್ನೂ ಸಾರುತ್ತವೆ.
ಅವಲಕ್ಕಿ ತಿನ್ನಲು ಬೆಳಗಿನ ಹೊತ್ತೇ ಎಂದೇನಲ್ಲ; ಮೆತ್ತಗೆ ಮಾಡಿದರೆ ಮಧ್ಯಾಹ್ನದ ಭೋಜನದ ವೇಳೆಯಲ್ಲೂ ಸೈ, ಜೊತೆಯಲ್ಲಿ ಮೊಸರು ಇರಬೇಕು. ಸಂಜೆಯ ವೇಳೆಗೆ ಅವಲಕ್ಕಿ ಯಾರಿಗೆ ಇಷ್ಟವಿಲ್ಲ? ಜೊತೆಯಲ್ಲಿ ಸ್ವಲ್ಪ ಕುರುಕು ಮುರುಕುಗಳು ಇದ್ದರಂತೂ ಅವಲಕ್ಕಿಯು ಧರೆಗಿಳಿದ ಸ್ವರ್ಗವೇ ಸರಿ. ಹೆಚ್‌ ನರಸಿಂಹಯ್ಯನವರಿಗೆ ಅವಲಕ್ಕಿಯ ಬಗ್ಗೆ ತಿಳಿದಿರಲಿಲ್ಲವೆನಿಸುತ್ತದೆ. ಅವರಿಗೆ ಈ ರುಚಿಕರ ತಿಂಡಿ ಗೊತ್ತಿದ್ದರೆ ಖಂಡಿತವಾಗಿಯೂ ಮೂರು ಹೊತ್ತೂ ಕಾಂಕ್ರೀಟ್‌ ಎಂಬ ಉಪ್ಪಿಟ್ಟನ್ನು ತಿನ್ನಲು ಬಯಸುತ್ತಿರಲಿಲ್ಲ. ಯಾರಾದರೂ ನೆಂಟರಿಷ್ಟರು ದಿಢೀರನೆ ಬಂದಾಗಲೂ ಇದು ಮಾನ ಕಾಪಾಡುವ ಶ್ರೀಕೃಷ್ಣನ ಅಕ್ಷಯಪಾತ್ರೆ.
ಮೀಡಿಯಂ ಅವಲಕ್ಕಿ, ಗಟ್ಟಿ ಅವಲಕ್ಕಿ, ಪೇಪರ್ ಅವಲಕ್ಕಿ, ದಪ್ಪ ಅವಲಕ್ಕಿ, ನೈಲಾನ್‌ ಅವಲಕ್ಕಿ ಎಂದೆಲ್ಲಾ ಹಲವು ವಿಧಗಳಿವೆ. ಒಗ್ಗರಣೆ ಅವಲಕ್ಕಿ ಅಂದರೆ ಉಪ್ಪಿಟ್ಟಿನ ರೀತಿ ತಯಾರಿಸಿ ಸವಿಯಲು ಗಟ್ಟಿ ಅವಲಕ್ಕಿ, ಪ್ರಸಾದಕ್ಕೆ ಪೇಪರ್ ಅವಲಕ್ಕಿ, ಮೊಸರವಲಕ್ಕಿಗೆ ಮೀಡಿಯಂ ಅವಲಕ್ಕಿ, ಚುಡುವಾ ಮಾಡಲು ಗರಿಗರಿ ನೈಲಾನ್‌ ಅವಲಕ್ಕಿ ಹೀಗೆ ಮೂಲವೊಂದಾದರೂ ರೂಪ ಬೇರೆ ಬೇರೇ. ಭಗವಂತನಂತೆ. ದೇವನೊಬ್ಬ; ನಾಮ ಹಲವು. ಆರ್ಗ್ಯಾನಿಕ್ ರೆಡ್ ಪೋಹಾ ಅಂದ್ರೆ ಕೆಂಪಕ್ಕಿ ಅವಲಕ್ಕಿ. ಕಡಲೆಪುರಿಯಂತೆ ಭಟ್ಟಿಮನೆಯಲ್ಲಿ ಹುರಿದ ಅವಲಕ್ಕಿ. ಉಪ್ಪಿಟ್ಟಿಗೆ ಬಾಂಬೆ ರವಾ ಎಂಬ ಹೆಸರಿರುವಂತೆ, ಗಟ್ಟಿ ಅಪಲಕ್ಕಿಗೆ ಹುಬ್ಬಳ್ಳಿ ಅವಲಕ್ಕಿ ಎಂದು ಹೆಸರಿದೆ.

ಉಪ್ಪಿಟ್ಟು ಮತ್ತು ಅವಲಕ್ಕಿ ಎರಡೂ ಅಡುಗೆಮನೆಯ ಎರಡು ಕಣ್ಣುಗಳು. ದೇವರ ಮನೆಯಲ್ಲಿ ಅರಿಷಿಣ ಕುಂಕುಮದಂತೆ. ಒಗ್ಗರಣೆ ಅವಲಕ್ಕಿ ಇದು ಮಡಿಗೆ. ತರಕಾರಿಯೊಂದಿಗೆ ಮಾಡುವುದು. ಅವಲಕ್ಕಿ ಬಿಸಿಬೇಳೆ ಬಾತ್,‌ ಅವಲಕ್ಕಿ ಪೊಂಗಲ್‌, ಅವಲಕ್ಕಿ ವಾಂಗಿ ಭಾತ್‌, ಅವಲಕ್ಕಿ ಪುಳಿಯೋಗರೆ, ಮೊಸರವಲಕ್ಕಿ, ಕುಟ್ಟವಲಕ್ಕಿ, ಗೊಜ್ಜವಲಕ್ಕಿ, ಅವಲಕ್ಕಿ ಚೂಡಾ, ಅವಲಕ್ಕಿ ಬೋಂಡ, ಅವಲಕ್ಕಿ ಶಿರಾ, ಅವಲಕ್ಕಿ ಹುಳಿ ಬೆಲ್ಲದ್ದು, ಕಟ್ಟಾಮೀಟಾಗಳಾಗಿಯೂ ಅಚ್ಚುಮೆಚ್ಚು. ಅವಲಕ್ಕಿ ದೋಸೆ ಮಾಡುವರು. ಅವಲಕ್ಕಿ ಪಾಯಸ, ಅವಲಕ್ಕಿ ಲಡ್ಡು, ಗರಿಗರಿ ಕುರುಕಲು ಅವಲಕ್ಕಿ ಕಟ್ಲೆಟ್‌, ಅವಲಕ್ಕಿ ಉಪ್ಕಾರಿ, ಅವಲಕ್ಕಿ ಪಂಚಕಜ್ಜಾಯ, ಅವಲಕ್ಕಿ ರೊಟ್ಟಿ, ಅವಲಕ್ಕಿ ಸಂಡಿಗೆ, ಅವಲಕ್ಕಿ ಇಡ್ಲಿ, ಅವಲಕ್ಕಿ ಹಲ್ವಾ,‌ ಬರ್ಫಿ, ಅವಲಕ್ಕಿ ವಡೆ, ಅವಲಕ್ಕಿ ಚಕ್ಕುಲಿ, ಅವಲಕ್ಕಿ ಹಪ್ಪಳ, ಅವಲಕ್ಕಿ ಮಿಕ್ಸರ್, ಅವಲಕ್ಕಿ ಕೋಡುಬಳೆ, ಅವಲಕ್ಕಿ ನಿಪ್ಪಟ್ಟು. ಹೀಗೇ ಸಾಲು ಮುಂದುವರೆಯುತ್ತದೆ, ಇಲ್ಲಿ ಅವಲಕ್ಕಿ ಮೂಲವಸ್ತು. ಅದನ್ನು ಹೇಗೆ ಬೇಕೋ ಹಾಗೆ ಬಳಸುವುದರಲ್ಲಿ ನಮ್ಮ ಜನ ಪ್ರಯೋಗಶೀಲರು. ಅನ್ನಕ್ಕೆ ಬದಲು ಅವಲಕ್ಕಿ ಬಳಸಿ, ಅದಕ್ಕೆ ಕರಿದ ಗೋಡಂಬಿ ಹಾಕಿ, ಅವಲಕ್ಕಿ ಚಿತ್ರಾನ್ನವೆಂದೂ ಕೆಲವರು ಮಾಡುವುದುಂಟು. ಅವಲಕ್ಕಿ ಪಡ್ಡು, ಅವಲಕ್ಕಿ ಬೋಂಡ, ಇಡ್ಲಿ ದೋಸೆಗಳನ್ನು ನೆನೆ ಹಾಕುವಾಗ ಒಂದು ಹಿಡಿ ಅವಲಕ್ಕಿಯನ್ನು ಬೆರೆಸುವವರಿದ್ದಾರೆ. ಅವಲಕ್ಕಿ ತಿಂಡಿಗಳಲ್ಲಿ ರಾಜ. ಆದ್ದರಿಂದ ಅಡುಗೆ ಮನೆಯಲ್ಲಿ ಅವಲಕ್ಕಿಯದೇ ರಾಜ್ಯಭಾರ.

ಕುಟ್ಟವಲಕ್ಕಿಯಂದರೆ, ಬೆಂಗಳೂರಿನವರ ಪುಳಿಯೋಗರೆ ಅವಲಕ್ಕಿ, ಗೊಜ್ಜವಲಕ್ಕಿ ಅಲ್ಲ. ಕುಟ್ಟವಲಕ್ಕಿ ತಯಾರಿಕೆ, ಸಂಭ್ರಮದಲ್ಲಿ, ಎಲ್ಲರೂ ಜೊತೆಯಾಗಿ ಕೂತು ಚಹಾದೊಂದಿಗೆ ತಿನ್ನುವುದು ಇದರ ಮುಂದೆ ಇನ್ನೊಂದು ಯಾವ ಪಾರ್ಟಿಯೂ ಸರಿದೂಗಲಾರದು. ಆದರೂ ನಮ್ಮ ಮನೆಯಲ್ಲಿ ಹಳೆಯ ಕಾಲದಿಂದ ಅತ್ಯಂತ ಆತ್ಮೀಯರಾದವರು ಬಂದಾಗ ಮಾಡುವ ಪಾರ್ಟಿ ಎಂದರೆ, ಮೊಸರವಲಕ್ಕಿ. ಹಾಲಿನ ಕುಳಿಯಲ್ಲಿ ಎಮ್ಮೆಯ ಹಾಲನ್ನು ಸಣ್ಣ ಸಣ್ಣ ಮೊಸರು ಗಡಿಗೆಯಲ್ಲಿ ಹೆಪ್ಪು ಹಾಕುವುದು. ಎಲ್ಲರಿಗೂ ಪ್ರತ್ಯೇಕ ಒಂದು ಕೆನೆ ಮೊಸರಿನ ಗಡಿಗೆ. ಅದರ ಪಕ್ಕದಲ್ಲಿ, ಪುಟ್ಟ ಬಟ್ಟಲಿನಲ್ಲಿ ಅವಲಕ್ಕಿ, ಮುಂದೆ ಪಠಾಣಿ ಪುಡಿಯ ಚಟ್ನಿಪುಡಿ, ಅವಲಕ್ಕಿ ಹಪ್ಪಳ, ಅರಳು ಸಂಡಿಗೆ, ಮತ್ತೆ ಬಾಳಕದ ಮೆಣಸಿನಕಾಯಿ. ಗಡಿಗೆ ಮೊಸರಿಗೆ ತುಸುವೇ ಅವಲಕ್ಕಿ ಸೇರಿಸಿ, ತಿಂದ ಕೈಜಿಡ್ಡು ಮರುದಿನವೂ ಇರುತ್ತದೆ. ಹೊಟ್ಟೆಯೂ ತಂಪು.

‘ಹಂಚಿ ತಿನ್ನಲು ಪ್ರೇಮವೇನೂ ಅವಲಕ್ಕಿಯೇ? ‘ಎಂದ ಓರ್ವ ಹೆಣ್ಣು ಮಗಳು ಒಂದು ನಾಟಕದಲ್ಲಿ ಪ್ರಶ್ನಿಸುತ್ತಾಳೆ. ಅವಲಕ್ಕಿಗೆ ಪ್ರೇಮವಾಗುವ ಯೋಗ್ಯತೆ ಇರದೇ ಇರಬಹುದು; ಆದರೆ ಸ್ನೇಹ ಔದಾರ್ಯವಾಗುವ ತಾಕತ್ತಿದೆ. ಕೃಷ್ಣನ ಸುಧಾಮರ ಸಖ್ಯದ ಸುಂದರ ಆಖ್ಯಾನ. ಬಲು ಚಂದದ ರೂಪಕ, ಸ್ನೇಹದ ಪ್ರತೀಕವೇ. ಮನೀಗೆ ಬಂದವರಿಗೆ ಒಂದು ಅವಲಕ್ಕಿ ಚಹಾ ಮಾಡಿಲ್ಲವೆಂದರೆ, ಇನ್ನೊಮ್ಮೆ ಯಾರಾದರೂ ಬರಲು ಸಾಧ್ಯವೇ. ಅವರ ಮನೇಲಿ ಒಂದು ಮುಕ್ಕು ಅವಲಕ್ಕೀನೂ ಸಿಗೂದಿಲ್ಲಾಂತ ಆಡಿಕೊಂಡು ನಗುತ್ತಾರೆ. ಆದ್ದರಿಂದಲೇ ಅವಲಕ್ಕಿ ಎಂದರೆ, ಒಬ್ಬರೇ ತಿಂದರೆ ರುಚಿ. ಹಂಚಿ ತಿಂದರೆ ಬಲು ರುಚಿ.

ಹಸಿ ಎಣ್ಣಿ ಮೆಂಥೆ ಹಿಟ್ಟು, ಚಟ್ನಿಪುಡಿ ಹಾಕಿ ಹಸಿಕೊಬ್ಬರಿ ಹಾಕಿ ಕಲಸಿದ ಅವಲಕ್ಕಿ, ರೆಡಿ ಟು ಈಟ್‌ ಫುಡ್.‌ ಸ್ವಲ್ಪ ಬಿಸಿಲಿಗೆ ಹಾಕಿ, ಗರಿಗರಿ ಹುರಿದು, ಇಂಗು ಕರಿಬೇವಿನ ಒಗ್ಗರಣೆ, ರಗಡಷ್ಟು ಶೇಂಗಾ, ಪುಠಾಣಿ, ಒಣಖೊಬ್ರಿ, ಬಾಳಕ ಮೆಣಸಿನ ಕಾಯಿ, ಪುಠಾಣಿ ಹಿಟ್ಟು ಹಾಕಿ ಹಚ್ಚಿದ ಹಳದಿ ಅವಲಕ್ಕಿ ಕೊಟ್ಟರೆ, ಬ್ಯಾಡ ಅನ್ನೋವರಿಗೂ ಎರಡು ಹೊಟ್ಟಿ. ಇನ್ನ ಅವಲಕ್ಕಿ, ಉಪ್ಪಿಟ್ಟಿಗೆ ಉಳ್ಳಾಗಡ್ಡಿ ಹಾಕಲಿಕ್ಕೆ ಅವಕಾಶ ಎಂಥಾ ಮಡಿವಂತರ ಮನೆಯಲ್ಲೂ ಸಿಕ್ಕದ. ಉಳ್ಳಾಗಡ್ಡಿ, ಟೊಮೆಟೊ, ಕೋತಂಬರಿ, ಹಸಿಮೆಣಸು, ಹಸಿಕೊಬ್ರಿ ಹಾಕಿದ ವಗ್ಗರಣಿ ಅವಲಕ್ಕಿ ಮುಂಜಾನೆ ಬಿಸಿ ಬಿಸಿ ತಿನಲಿಕ್ಕೆ ಭಾಳ ರುಚಿ. ಎರಡನೇ ಸಲಕ್ಕ ಮೊಸರ ಹಾಕ್ಕೊಂಡು ತಿನ್ನೋವರೂ ಇದ್ದಾರ. ಹಚ್ಚಿದ ಅವಲಕ್ಕಿಗೆ ಕೆನೆ ಮೊಸರು, ಹಾಲು ಹಾಕಿಕೊಂಡು ತಿನ್ನುವವರೇ ಹೆಚ್ಚು. ಆದರೂ ಹಚ್ಚಿದ ಅವಲಕ್ಕಿಗೆ ಎರಡು ಚಮಚ ಚಹಾದ ಅರಕು (ಡಿಕಾಕ್ಷನ್)‌ ಹಾಕಿಕೊಂಡು ತಿನ್ನುವವರೇನೂ ಕಡಿಮೆಯಿಲ್ಲ. ಬಿಳಿ ಅವಲಕ್ಕಿಗೆ ಸಕ್ಕರೆ ತುಪ್ಪ, ಹಾಲು ಹಾಕಿಕೊಂಡು ತಿಂದರೆ, ಪಾಯಸ, ಖೀರಿಗಿಂತ ಸಿಹಿ.

ಕರಿದ ಅವಲಕ್ಕಿ ಗೋಕುಲಾಷ್ಟಮಿಗೆ ಸಿದ್ಧ ಪಡಿಸಿದರೂ, ತುಂಬ ಗೌರವಾನ್ವಿತರು ಬಂದಾಗ ತಯಾರಿಸುವ ತಿಂಡಿ. ದಪ್ಪ ಅವಲಕ್ಕಿಯನ್ನು ಎಣ್ಣೆಯಲ್ಲಿ ಕರಿದು ಮಾಡುವುದು. ಆದರೆ, ಇವೆಲ್ಲಕ್ಕಿಂತ ವಿಶಿಷ್ಟವಾದ ತಿಂಡಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿದೆ. ಅದೇ ಸಂಗೀತ. ಅಂದರೆ, ಹಾಡಲ್ಲ. ಇದು ಅವಲಕ್ಕಿಯ ತಿಂಡಿಯೇ. ಹಚ್ಚಿದ ಅವಲಕ್ಕಿಗೆ ಹಸಿ ಉಳ್ಳಾಗಡ್ಡಿ, ಟೊಮೆಟೊ, ಕೋತಂಬರಿ, ಖೊಬ್ರಿ ಜೊತೆಗೆ ಖಾರಾ ಸೇವು ಹಾಕಿ ಕಲಸಿದ ಅವಲಕ್ಕಿ. ಇದೇ ಸಂಗೀತ. ಇದಲ್ಲದೇ ಉಳ್ಳಾಗಡ್ಡಿ ಒಗ್ಗರಣೆ ಕಲಸಿದ ಕಾಂದಾ ಪೋಹೆ ಕೂಡಾ ರುಚಿಗೆ ಹೆಸರುವಾಸಿ. ಅವಲಕ್ಕಿ ಇರುವುದು ಒಂದೇ ಆದರೂ, ಬಂದ ಅತಿಥಿಗಳ ಗೌರವಕ್ಕೆ ತಕ್ಕಂತೆ ರೂಪಾಂತರ ಹೊಂದುವ ಏಕೈಕ ತಿಂಡಿಯಂದರೆ ಅದು ಅವಲಕ್ಕಿ.

ಉಪವಾಸಕ್ಕಾಧಾರಿ ಅವಲಕ್ಕಿ. ಮಡಿ ವಿಧವೆಯರಿಗೆ ಅನುದಿನ ಸಂಜೆಯ ಆಹಾರ. ಉಂಡ ಹೊಟ್ಟೆಯಲ್ಲಿಯೂ ಒಂದು ಪಾತೇಲಿ ಅವಲಕ್ಕಿಯನ್ನು ಭೋಜಿಸುವವರೂ ಇದ್ದಾರೆ. ಮಕ್ಕಳಿಗೆ ಅವಲಕ್ಕಿ ಮೂರು ಹೊತ್ತಿಗೂ ಬಯಸುವ ಆಧಾರ. ನಾವಂತೂ ಸಣ್ಣವರಿದ್ದಾಗ ಅವಲಕ್ಕಿಯನ್ನೇ ಮೂರೂ ಹೊತ್ತು ತಿಂದು ಬೆಳೆದವರು. ಹದಿನಾರು ಪಡಿ ಅವಲಕ್ಕಿ ಅಂದರೆ, ಇಪ್ಪತ್ತೈದು ಕೇ ಜಿ ಆಗಬಹುದು ಅಂದಾಜು, ತಿಂಗಳ ಮನೆ ಲೆಕ್ಕದಲ್ಲಿ. ಮನೆಯ ಭತ್ತದಿಂದ ತಯಾರಿಸುತ್ತಿದ್ದರು. ಆದರೆ, ಅಕ್ಕಿ ಹತ್ತು ಕೆ ಜಿ ಮಾತ್ರ ಅಕ್ಕಿ ಮಾಡಿಸುತ್ತಿದ್ದರು, ಅಂದರೆ ನೀವೇ ಊಹಿಸಿಕೊಳ್ಳಿ ನಮ್ಮ ಅವಲಕ್ಕಿ ಭಕ್ತಿಯನ್ನು.

ಆಯುರ್ವೇದದಲ್ಲಿ, ಅವಲಕ್ಕಿ ತಿಂದರೆ, ನೆಗಡಿ ಬೇಗ ಕಡಿಮೆಯಾಗುತ್ತದೆಯಂತೆ. ಇಂತಹ ದೇವರ ಅವಲಕ್ಕಿಯನ್ನು, ಅವಲಕ್ಕಿ ತಿಂದರೆ ಗ್ಯಾಸ್ಟ್ರಿಕ್‌ ಅಂತ, ಹೊಟ್ಟೆಯಲ್ಲಿ ಮೋಟಾರು ಸೈಕಲ್‌ ಓಡಾಡಿದಂತಾಗುತ್ತದೆ ಎಂದು ದೂರವಿಡುವವರನ್ನು ದೂರದಿರಿ. ಯಾಕೆಂದರೆ, ಅಷ್ಟು ಅವಲಕ್ಕಿಯನ್ನು ನಾವೇ ತಿನ್ನಲು ಅವರು ಅವಕಾಶ ಮಾಡಿಕೊಟ್ಟಿದ್ದಾರೆ. ಲೋಕೋಭಿನ್ನರುಚಿ ಮಾತ್ರವಲ್ಲ; ವಿಭಿನ್ನ ಅಭಿರುಚಿ ಕೂಡ. ಅವಲಕ್ಕಿ ಮಾರದ ಅಂಗಡಿಯಿಲ್ಲ. ಅವಲಕ್ಕಿ ತಯಾರು ಮಾಡದ ಹೆಂಗಸಿಲ್ಲ. ನನ್ನ ತಮ್ಮನ ಮದುವೆಯಲ್ಲಿ, ನನ್ನ ತಂದೆ ತಮ್ಮ ಸೊಸೆಗೆ ಅವಲಕ್ಕಿ ಮಾಡಲು ಬರುತ್ತದೆ ತಾನೇ, ಇಲ್ಲದಿದ್ದಲ್ಲಿ ನಾನೇ ಕಲಿಸುತ್ತೇನೆ ಬಿಡು ಎಂದು ರೇಗಿಸಿದ್ದರು.

ನಮ್ಮ ಪ್ರಾಥಮಿಕ ಶಾಲೆಯಲ್ಲಿ, ಕೆಲವು ಜಾತಿ ಸೂಚಕ ಬೈಗಳಿದ್ದವು. ಹುಗ್ಗಿ ಎಂದರೆ ಲಿಂಗವಾಚಕತ್ವವನ್ನೂ ಮೀರಿ, ಅದು ಅಯ್ಯನವರ ಜಾತಿಗೆ ಸೇರಿದ ವಿದ್ಯಾರ್ಥಿಗೆ ಬಯ್ಯುವ ಶಬ್ದವಾಗಿತ್ತು. ಹಾಗೆಯೇ, ಮೊಸರೂ ಅವಲಕ್ಕಿ ಅಂದರೆ, ಅದು ಹುಡುಗನೋ, ಹುಡುಗಿಯೋ ಬ್ರಾಹ್ಮಣರ ಜಾತಿಗೆ ಸೇರಿದವರಿಗೆ ಬೈಯುವ ಬೈಗಳಾಗಿತ್ತು. ಆದರೆ ಅದು ನಮಗೆ ಹೆಮ್ಮೆಯಾಗಿತ್ತು. ಒಟ್ಟಿನಲ್ಲಿ ಅವಲಕ್ಕಿ ಎಲ್ಲರಿಗೂ ಸಲ್ಲುವ ಎಲ್ಲ ಕಾಲಕ್ಕೂ ಒಗ್ಗುವ ಎಲ್ಲರಿಗೂ ಇಷ್ಟವಾಗುವ ಆಹಾರ ಪದಾರ್ಥ. ಅವಲಕ್ಕಿಯನ್ನು ಇಷ್ಟಪಡದವರು ಅಪರೂಪ. ಬೆಂಗಳೂರಿನಲ್ಲಿ ಉಪ್ಪಿಟ್ಟು ಕಾಫಿ, ಅಂದರೆ, ಹುಡುಗಿಯ ನೋಡಲು ಬರುವ ವರನ ಸೂಚನೆಯಾದರೆ, ನಮ್ಮೂರಲ್ಲೆಲ್ಲಾ ಅವಲಕ್ಕಿ, ಹಪ್ಪಳ ಸಂಡಿಗೆ, ಚಹಾ. ವರನ ಆಗಮನಕ್ಕೆ ಕಾಯುತ್ತಿರುತ್ತವೆ.

ಅಕ್ಕಿಯ ಸೋದರನೇ ಆದರೂ ಅವಲಕ್ಕಿಯ ಸ್ಥಾನ ಬಲು ದೊಡ್ಡದು. ಅವಲಕ್ಕಿಯನ್ನು ಮೆಚ್ಚುವವರನ್ನು ಬಾಲ ಗೋಪಾಲ ಎನ್ನುವರು. ನೆನೆಸಿದ ಬಟಾಣಿ ಕಾಳು, ದಪ್ಪಮೆಣಸಿನಕಾಯಿ, ಆಲೂಗೆಡ್ಡೆ, ಕ್ಯಾರೆಟ್ ಹಸಿಮೆಣಸು, ಕರಿಬೇವು ಇಂಗು ಮೊದಲಾದವುಗಳನ್ನು ಬೆರೆಸಿ ಸಿರಿವಂತಗೊಳಿಸಿದ ತರಕಾರಿ ಅವಲಕ್ಕಿ ಜೊತೆಗೆ ಚಟ್ನಿಪುಡಿ, ಹಪ್ಪಳ ಸಂಡಿಗೆ ಯಾರಿಗಿಷ್ಟವಿಲ್ಲ, ಕೈಯತ್ತಿ ಎಂದರೆ, ಕೈ ಬಾಯಿ ಎರಡೂ ತಿನ್ನುವಲ್ಲಿ ಶ್ರಮಪಡುತ್ತಿರುತ್ತವೆ. ಕರಿಬೇವು, ಉಳ್ಳಾಗಡ್ಡಿ ಹಾಕಿದ ಅವಲಕ್ಕಿ ತಿನ್ನಲಿಕ್ಕೆ ನಾಲ್ಕು ಬಾಯಿ ಅಷ್ಟೇ. ಅಡುಗೆಯ ಮನೆಯ ಆತ್ಮ, ಎಲ್ಲಾ ಅಡುಗೆಗಳಲ್ಲಿಯೂ ಒಂದು ಲಕ್ಕಿ ಎಂದರೆ ಅದು ಅವಲಕ್ಕಿ.

ಇಂತಹ ಅವಲಕ್ಕಿಯನ್ನು ಕುರಿತಾಗಿ ಹೆಚ್ಚಿನ ಕವಿಗಳು ಹಾಡು ಬರೆದಿಲ್ಲ. ಹೆಚ್ಚಿನ ಗ್ರಂಥದಲ್ಲಿ ಅದರ ವಿವರಣೆಯಿಲ್ಲ. ಹೆಚ್ಚಿನ ಸಿನೆಮಾ ನಾಟಕಗಳಲ್ಲಿ ಈ ತಿಂಡಿ ತಿಂದಿಲ್ಲ. ಇದು ಅವಲಕ್ಕಿಯ ಕುರಿತಾದ ಮಲತಾಯಿ ಧೋರಣೆಯೇ, ಯಾಕೆಂದರೆ, ಅದು ಲಕಿ ಅಲ್ಲವಲ್ಲ, ಅದು ಅವಲಕ್ಕಿ.

ಡಾ. ವೃಂದಾ ಸಂಗಮ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
MAJURAJ H N
MAJURAJ H N
23 days ago

ಅವಲಕ್ಕಿ ಪುರಾಣ ಚೆನ್ನಾಗಿದೆ, ಅವಲಕ್ಕಿ ಎಂಬ ಭಗವನ್ನಿಯಾಮಕ ಎಂಬ ನನ್ನ ಲೇಖನದ ಬಹುಪಾಲು ವಿಚಾರಗಳು ಇಲ್ಲಿ ಸುಳಿದಾಡಿವೆ…….!

ಈ ಲೇಖನವು ಕಳೆದ ಗುರುವಾರ ಸುರಹೊನ್ನೆ ಯಲಿ ಪ್ರಕಟವಾಗಿದೆ !!

ಇರಲಿ, ಇದು ಆಕಸ್ಮಿಕವೂ ಇರಬಹುದು !!!

ಲೇಖಕಿ ಹಾಗೂ ಸಂಪಾದಕರ ಗಮನಕ್ಕೆ ತಂದಿದ್ದೇನೆ ಅಷ್ಟೇ !!!

ಮಂಜುರಾಜ್, https://surahonne.com/?p=43266
(14-08-2025)

ದೀಪಾ
ದೀಪಾ
23 days ago

ಸೂಪರ್ ಅವಲಕ್ಕಿ ಪುರಾಣ ಮೇಡಂ.
ಓದಿದ ಮೇಲೆ ಒಂದ ಪ್ಲೇಟ ತಿನ್ನೋಣ,
ಬರ್ರಿ ನೀವು, ಜೊತೆಗೆ ಚಹಾ ಕುಡಿಯೋಣ.
👍 👌 👌 🫶

2
0
Would love your thoughts, please comment.x
()
x