ಪ್ರಿಯ ಓದುಗರೇ, ನಾವೆಲ್ಲರು ಮನುಷ್ಯರು ಮನುಷ್ಯರಷ್ಟೇ.. ಹೀಗಾಗಿ ನಮ್ಮ ಬದುಕಿನಲ್ಲಿ ಏರಿಳಿತಗಳು ಸಹಜ. ಸೋಲು ಗೆಲುವುಗಳ ಲೆಕ್ಕಾಚಾರದಲ್ಲಿ ಹಲವು ಬಾರಿ ಎಡವುತ್ತೇವೆ. ಕೇವಲ ಗೆಲುವುಗಳನ್ನು ಸಂಭ್ರಮಿಸುವ ನಾವು ಸೋಲನ್ನು ಅಷ್ಟೇ ಸಲೀಸಾಗಿ ಸ್ವೀಕರಿಸಲಾರೆವು. ಪರರ ಗೆಲುವನ್ನು ಸೈರಿಸಿಕೊಳ್ಳದಷ್ಟು ಸಣ್ಣತನ ನಮ್ಮನ್ನಾಳುತ್ತಿದೆ. ಪರೀಕ್ಷೆಯಲ್ಲಿ ಫೇಲಾದೆ, ಸ್ಪರ್ಧೆಯಲ್ಲಿ ಸೋತೆ. ಪ್ರೀತಿಯಲ್ಲಿ ಮೋಸಹೋದೆ, ಅಮ್ಮ ಬೈದರು,ಅಪ್ಪ ಹೊಡೆದರು ಅಂತೆಲ್ಲಾ ತೀರ ಬಾಲಿಷ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಅವಿವೇಕತನ ಹೆಚ್ಚುತ್ತಿದೆ. ಪರೀಕ್ಷೆಗಳಲ್ಲಿ ಪಾಸಾಗುವುದು ಅನಿವಾರ್ಯ ನಿಜ ಹಾಗಂತ ಅನುತ್ತೀರ್ಣರಾದರೆ ಅಲ್ಲಿಗೆ ಬದುಕೆ ಮುಗಿಯಿತೆಂದಲ್ಲ. ನಮ್ಮ ಭಾಗ್ಯದ ಬಾಗಿಲನ್ನು ನಾವೇ ತೆಗೆದುಕೊಳ್ಳಬೇಕಲ್ಲವೇ? ಪ್ರತಿಯೊಬ್ಬ ಮನುಷ್ಯನಿಗು ಒಂದು ಕಲೆಯನ್ನ ಭಗವಂತ ಕೊಟ್ಟಿರುತ್ತಾನೆ ಅದನ್ನ ಕರಗತ ಮಾಡಿಕೊಂಡು ಯಶಸ್ವಿ ಬದುಕಿಗೆ ನಾವು ಹೋರಾಡಬೇಕು.. ಹತ್ತನೇ ತರಗತಿ ಫೇಲಾದ ಸಚಿನ್ ತೆಂಡೂಲ್ಕರ್ ಕ್ರಿಕೇಟ್ ದೇವರಾಗಲಿಲ್ಲವೇ, ಒಂದೇ ಸೋಲಿಗೆ ಕಂಗೆಟ್ಟು ಜಗತ್ತೇ ನಮ್ಮ ತಲೆಯಮೇಲೆ ಬಿದ್ದಂತೆ ಬದುಕಿನ ಆಸೆಯನ್ನ ಕಳೆದುಕೊಳ್ಳುವ ನಾವು ಛಲಬಿಡದೆ ಸಾಧಿಸಿದವರನ್ನ ಸ್ಫೂರ್ತಿಯಾಗಿ ಸ್ವೀಕರಿಸಬೇಕು. ಆಗ ಹೇಡಿ ಆಲೋಚನೆಗಳು ನಮ್ಮಿಂದ ಮೈಲುದೂರ ಓಡುತ್ತದೆ. ಬರೊಬ್ಬರಿ 10 ಬಾರಿ ಫೇಲ್ ಆದರು ಛಲ ಬಿಡದೆ ಐಎಎಸ್ ಅಧಿಕಾರಿಯಾದ ಬಿಹಾರದ ಅವನೀಶ್ ಶರಣ್ ಸೋತು ಸಾವಿಗೆ ಶರಣಾಗುವವರಿಗೆ ಒಮ್ಮೆ ನೆನಪಾದರು ಸಾಕು ಅವರ ಬದುಕೇ ಬದಲಾಗುತ್ತದೆ. ಇದು ಪರಿಕ್ಷಾ ಸಮಯ ವಿದ್ಯಾರ್ಥಿಗಳು ಪರೀಕ್ಷೆಯ ಜೊತೆಯಲ್ಲಿ ಫಲಿತಾಂಶವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕು ಗೆದ್ದರೆ ಸಂತೋಷ ಸೋತರೆ ಮುಂದಿನ ಗೆಲುವಿಗೆ ನಿರಂತರ ಪ್ರಯತ್ನವಿರಬೇಕು ಅಷ್ಟೇ.
ಇನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಅನೇಕರ ಬದಕು ಬರಿದಾಗುತ್ತಿದೆ. ಓದುವ ವಯಸ್ಸಲ್ಲಿ ಮನಸ್ಸು ಮಂಗಾಟವಾಡುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಪ್ರೀತಿ ಕಾರಣದಿಂದ ಸಾವಿಗೆ ಶರಣಾಗುತ್ತಿದ್ದಾರೆ. ಪ್ರೀತಿಸುವುದು ತಪ್ಪಲ್ಲ ಆದರೆ ಪ್ರೀತಿ ಸಿಗಲಿಲ್ಲ ಎಂಬ ಕಾರಣಕ್ಕೆ ತನ್ನನ್ನ ತಾನೇ ಕೊಂದುಕೊಳ್ಳುವುದು ಇಲ್ಲವೇ ಪ್ರೀತಿಸಿದವರನ್ನೇ ಕೊಲ್ಲುವುದು ಹೇಯನೀಯ. ಹೌದು ಪ್ರೇಮ ಪವಿತ್ರವೇ! ಹಾಗಂದ ಮಾತ್ರಕ್ಕೆ ಅದು ಸಿಗದೆ ಇದ್ದಾಗ ಜಗತ್ತನ್ನೇ ಬಿಟ್ಟು ಹೊರಡುವುದು ಮೂರ್ಖತನವಾದೀತು.ನಮ್ಮಲ್ಲಿ ಪ್ರೀತಿಸಿ ಗೆದ್ದವರು ಹಲವರಿದ್ದಾರೆ ಆದರೆ ಎಲ್ಲರು ಗೆದ್ದಿದ್ದಾರೆ ಎಂದಲ್ಲ. ಬದುಕಿನಲ್ಲಿ ನಾವು ಅದೆಷ್ಟೋ ಮಂದಿಯನ್ನು ಭೇಟಿಯಾಗುತ್ತೇವೆ ಬಂದು ಹೋದ ಪ್ರತಿಯೊಬ್ಬರು ನಮ್ಮ ಬದುಕಿನಲ್ಲಿ ಬಿಟ್ಟು ಹೋದ ವಿಚಾರಗಳು ಬದುಕಿಗೆ ಪಾಠವಾಗಬೇಕು ವಿನಃ ಬದುಕನ್ನೇ ಕೊನೆಗೊಳಿಸಿಕೊಳ್ಳಲು ಕಾರಣವಾಗಬಾರದು.ಹಾಗೇ ಪ್ರೀತಿಯಲ್ಲಿ ಅರೆಹುಚ್ಚರಾದವರಿಗೆ, ಪ್ರೀತಿ ಸಿಗಲಿಲ್ಲ ಎಂಬ ಕೊರಗಲ್ಲಿ ಖಿನ್ನತೆಗೆ ಒಳಗಾದವರಿಗೆ ಬದುಕೇ ಕೊನೆಯಾಯಿತು ಎನ್ನವವರಿಗೆ ನೆನಪಿರಲಿ, ಈ ಸೃಷ್ಟಿಯ ಮೊದಲ ಪ್ರೇಮಕಾವ್ಯ ರಾಧ ಕೃಷ್ಣರದ್ದೇ ಅಪೂರ್ಣವೆಂಬುದು.ಇಲ್ಲದ ಪ್ರೀತಿಯ ನೆನಪಲ್ಲಿ ಇರುವುದೆಲ್ಲವನ್ನು ಕಳೆದುಕೊಳ್ಳುವುದಕ್ಕಿಂತ ಬದುಕಿನ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುವುದು ಜಾಣತನ. ಬದುಕು ಪರಮಪವಿತ್ರವಾದದ್ದು ಅದನ್ನು ಕ್ಷುಲ್ಲಕ ಕಾರಣಕ್ಕಾಗಿ ವ್ಯರ್ಥಮಾಡಿಕೊಳ್ಳದಿರಿ. ನೀವು ಎಲ್ಲರನ್ನು ನಿಷ್ಕಲ್ಮಷ ಮನಸ್ಸಿನಿಂದ ಪ್ರೀತಿಸಿ ಆದರೆ ಅವರಿಂದಲೂ ಅದನ್ನೇ ನಿರೀಕ್ಷಿಸದಿರಿ ಏಕೆಂದರೆ ನಿರೀಕ್ಷೆಗಳೇ ಹಲವು ನೋವುಗಳಿಗೆ ಕಾರಣವಾಗಬಹುದು.
ಬದುಕಿನಲ್ಲಿ ಕೇವಲ ಗೆಲುವುಗಳನ್ನ ಯಶಸ್ಸುಗಳನ್ನ ಕಂಡವರು ಯಾರಾದರೊಬ್ಬರಿದ್ದಾರೆಯೇ? ಬದುಕೆಂದರೆನೇ ಜಯ ಅಪಜಯಗಳ ಒಟ್ಟು ಮೊತ್ತವಲ್ಲವೇ. ಎಲ್ಲರ ಬದುಕು ಏರಿಳಿತಗಳ ಮಿಳಿತ. ನಿರಂತರ ಗೆಲುವುಗಳ ಬಳಿಕ ಸಿಗುವ ಒಂದು ಸೋಲು ಮತ್ತು ಅಗಣಿತ ಸೋಲುಗಳ ಬಳಿಕ ಸಿಗುವ ಒಂದು ಗೆಲುವು ಇವು ಕಲಿಸುವ ಪಾಠ ಜಗತ್ತಿನ ಬೇರಾವ ಗುರುವು ಕಲಿಸಲಾರ. ಹೀಗಾಗಿ ಸೋಲುಗೆಲುವುಗಳಲ್ಲಿಯೇ ಪಾಠ ಕಲಿಯಬೇಕಿದೆ. ಉತ್ಸಾಹದಿಂದ ಉದ್ಯಮ ಶುರು ಮಾಡುವ ವ್ಯಕ್ತಿ ಮೊದಲ ಪ್ರಯತ್ನದಲ್ಲಿ ಸೋತಾಗಲೇ ಬದುಕುವ ಆಸೆ ಬಿಟ್ಟುಬಿಟ್ಟರೆ ಇವತ್ತು ಜಗತ್ತಿನ ಯಾವ ಉದ್ಯಮಿಗಳು ಉಳಿಯುತ್ತಿರಲ್ಲಿಲ್ಲ. ಸಾಮಾನ್ಯ ತಳ್ಳುವ ಗಾಡಿಯಿಂದ ಉದ್ಯಮ ಶುರುಮಾಡಿ ಪಂಚತಾರ ಹೋಟೆಲ್ಗಳ ಮಾಲಿಕರಾದವರ ಕಥೆಗಳಿವೆ ನಮ್ಮ ಮುಂದೆ. ಅಚಲ ವಿಶ್ವಾಸವಿದ್ದರೆ ಸಾಮಾನ್ಯ ಚಹ ಮಾರುವ ಬಾಲಕ ಸಹ ದೇಶದ ಪ್ರಧಾನಿಯಾಗಿ ಸಾಧನೆಗೈಯ್ಯಬಹುದಲ್ಲವೇ. ತ್ರಿವಿಕ್ರಮನಂತೆ ಛಲ ಬಿಡದೆ ಹೋರಾಡಿದವರಷ್ಟೇ ಇತಿಹಾಸದ ಪುಟದಲ್ಲಿ ಉಳಿಯುತ್ತಾರೆ. ಮಹಾತ್ಕಾರ್ಯಗಳಾಗಲು ಮಹಾತ್ಯಾಗ ಮಾಡಲೇಬೇಕು. ಗುರಿಯನ್ನ ಬೆನ್ನಟ್ಟಿ ಹೊರಡುವಾಗ ದಾರಿಯಲ್ಲಿ ಎದುರಾದ ಕಲ್ಲುಮುಳ್ಳುಗಳಿಗೆ ಹೆದರಿ ಮರಳಿದರೆ ನಾವು ಬದುಕಿದ್ದು ಸತ್ತಂತೆ. ಉದ್ಯಮದಲ್ಲಿಯೋ ,ಉದ್ಯೋಗದಲ್ಲಿಯೋ ನಾವು ಸೋತಾಗ ನಮ್ಮ ಕನಸನ್ನೇ ಕೊಲ್ಲುವುದು ದಡ್ಡತನ ಬದಲಾಗಿ ಮರಳಿ ಯತ್ನವ ಮಾಡುತ್ತಲೇಯಿರಬೇಕು ಗುರಿ ತಲುಪುವವರೆಗು.
ಜೀವನದಲ್ಲಿ ಕೆಲವರು ನಮ್ಮ ಗೆಲುವುಗಳಿಗಾಗಿ ಸದಾ ಪ್ರಾರ್ಥಿಸುತ್ತಾರೆ ಆದರೆ ಅದಕ್ಕಿಂತಲೂ ಹೆಚ್ಚು ಮಂದಿ ನಾವು ಸೋಲುಗಳಿಂದ ಕಂಗೆಟ್ಟಾಗ ಮತ್ತಷ್ಟು ನಮ್ಮನ್ನು ಕುಗ್ಗಿಸುವ ಪ್ರಯತ್ನಮಾಡುತ್ತಾರೆ. ಅನೇಕಬಾರಿ ನಮ್ಮ ಬೆನ್ನಹಿಂದೆಯೂ ಮಾತುಗಳನ್ನಾಡುತ್ತಾ ನಮ್ಮ ಕುರಿತು ಅಪಪ್ರಚಾರಗಳನ್ನು ಮಾಡಬಹುದು. ಆದರೆ ಅದಕ್ಕೆಲಾ ನಾವು ಪ್ರತಿಕ್ರಿಯಿಸುವ ಅವಶ್ಯಕತೆಯಿಲ್ಲ. ನಮ್ಮ ಬದುಕನ್ನ ನಾವಷ್ಟೇ ಬಾಳುತ್ತೇವೆ, ಸೋತರು ಗೆದ್ದರು ಅದರ ಕಾರ್ಯಕಾರಣ ಪರಿಣಾಮ ನಾವು ಮಾತ್ರವೇ ಆಗಿರುತ್ತೇವೆ. ಹೀಗಾಗಿ ಕೆಲ ಪರಿಸ್ಥಿಗಳಲ್ಲಿ ಅವರಿವರ ಬಾಯಿಗೆ ನಾವು ಆಹಾರವಾದೆವೆಂಬ ಕಾರಣಕ್ಕೆ ಖಿನ್ನತೆಗೆ ಒಳಗಾಗುವುದನ್ನ ಬಿಟ್ಟು ಆ ಸಮಯವನ್ನ ನಮ್ಮ ಗೆಲುವಿನ ಯಾನಕ್ಕೆ ಮೆಟ್ಟಿಲಾಗಿ ಬಳಸಿಕೊಳ್ಳುತ್ತಾ, ಆಡಿಕೊಂಡವರೇ ನಿಬ್ಬೆರಗಾಗುವ ಹಾಗೆ ನಾವು ಸಾಧನೆಗೈಯ್ಯಬೇಕು ವಿನಃ ಸಾವನ್ನರಸಿ ಹೋಗುವುದಲ್ಲ. ಅನೇಕರು ಹೇಳುತ್ತಾರೆ ನನ್ನ ಹಣೆಬರಹ ಸರಿಯಿಲ್ಲ, ನನಗೆ ಅದೃಷ್ಟವಿಲ್ಲ ಎಂದೆಲ್ಲಾ ಆತ್ಮೀಯರೆ ಪ್ರಯತ್ನವನ್ನೇ ಮಾಡದೆ ಎಲ್ಲವನ್ನ ಅದೃಷ್ಟ, ಹಣೆಬರಹವನ್ನು ಹೊಣೆಯಾಗಿಸಿ ನಾವು ಕೈಕಟ್ಟಿ ಕುಳಿತರೆ, ಕುಳಿತ ಜಾಗದಿಂದ ಒಂದಿಂಚು ನಮ್ಮ ಬದುಕು ಮುಂದೆ ಸಾಗಲಾರದು. ಕೈಗಳೆ ಇಲ್ಲದವರು ಕಾಲುಗಳಲ್ಲಿಯೆ ವಿಮಾನ ಹಾರಿಸುತ್ತಿದ್ದಾರೆ. ಅಂಗವೈಕಲ್ಯವನ್ನು ಮೆಟ್ಟಿನಿಂತು ಕ್ರೀಡೆಯಲ್ಲಿ ಅಸಾಧಾರಣ ಸಾಧನೆ ಮಾಡುತ್ತಿದ್ದಾರೆ, ಕಣ್ಣುಗಳೆ ಇಲ್ಲದವರು ಜಗತ್ತೆ ತಮ್ಮತ್ತಾ ನೋಡುವಂತ ಸಾಹಸ ಮಾಡುತ್ತಿದ್ದಾರೆ ಆದರೆ ಎಲ್ಲಾ ಅನುಕೂಲಗಳಿರುವ ನಾವು ಅದೃಷ್ಟದ ಮೇಲೆ ಗೂಬೆ ಕೂರಿಸುತ್ತಾ ಬದುಕನ್ನ ಬರಿದಾಗಿಸಿಕೊಳ್ಳುತ್ತಿದ್ದೇವೆ. ಕುಳಿತಲ್ಲೇಕುಳಿತುಬದುಕಿಗೆ ತುಕ್ಕುಹಿಡಿಸಬೇಡಿ, ಏಳಿ ಎದ್ದೇಳಿ ತಡವಾಗುತ್ತಿದೆ ಗುರಿಯನ್ನ ಬೆನ್ನಟ್ಟಿ ಹೊರಡಿ. ಚಿಕ್ಕ ಪುಟ್ಟ ವಿಚಾರಗಳಿಗೆ ಪ್ರಾಣ ಕಳೆದುಕೊಳ್ಳುವ ಖಾಯಿಲೆ ಹೆಚ್ಚುತ್ತಿದೆ. ‘’ಮಾನವ ಜನ್ಮ ಬಲು ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ” ಎಂಬ ದಾಸರ ಮಾತನ್ನ ಮರೆಯದೆ ಆದದ್ದೆಲ್ಲಾ ಒಳಿತಿಗೆಂದು ಭಾವಿಸಿ ಸನ್ಮಾರ್ಗದಲ್ಲಿ ಸಾಧನೆಯ ಕಡೆಗೆ ಹೆಜ್ಜೆ ಹಾಕಿ. ಸಾವು, ಖಿನ್ನತೆ ಎಲ್ಲದಕ್ಕು ಪರಿಹಾರವಲ್ಲ. ಕತ್ತಲಾದ ಮೇಲೆ ಬೆಳಕು ಮೂಡಲೇ ಬೇಕು. ಬದುಕಿನಲ್ಲಿ ಈಸಬೇಕು ಇದ್ದು ಜಯಿಸಬೇಕು.. ಕೊನೆಯಲ್ಲಿ ಎಂತಹ ಕಾಠಿಣ್ಯದಲ್ಲಿಯೂ ನೆನಪಿನ್ನಲ್ಲುಳಿಯಲಿ ಶ್ರೀಕೃಷ್ಣ ಹೇಳಿದ ಮಾತು “ಈ ಸಮಯ ಕಳೆದು ಹೋಗುತ್ತದೆ” ಖುಷಿಯಲ್ಲಿದ್ದರೂ.. ದುಖಃದಲ್ಲಿದ್ದರೂ…
-ಪೂಜಾ ತೀರ್ಥಹಳ್ಳಿ
