ಬದಲಾವಣೆಗಳು ಅನಿರೀಕ್ಷಿತ, ಇನ್ನಷ್ಟು ಬದಲಾವಣೆಗಳು ನಿರೀಕ್ಷಿತ. ಅನಿರೀಕ್ಷಿತವಾಗಿ ಉಂಟಾಗುವ ಬದಲಾವಣೆಗಳಲ್ಲಿ ಹೆಚ್ಚು ದೀರ್ಘಾವಧಿ ಆಯಸ್ಸು ಬಯಸಲು ಕಷ್ಟವಾಗಬಹುದು ಆದರೆ ನಿರೀಕ್ಷಿತ ಬದಲಾವಣೆಗೆ ಒಂದಷ್ಟು ಆಯಸ್ಸು ಹೆಚ್ಚು ಇರುತ್ತದೆ. ರಾತ್ರೋರಾತ್ರಿ ಸಿಕ್ಕ ಲಾಟರಿಯ ಜಯ, ತಾನು ಕಂಡು ಕೇಳರಿಯದಷ್ಟು ಸಿಕ್ಕ ಹಣ ಮತ್ತು ಒಡವೆ, ನಿರೀಕ್ಷೆಯಿಲ್ಲದೆ ದೊರೆತ ಗೆಲುವು, ಬಯಸದೆ ಸಿಕ್ಕ ಮೆಚ್ಚುಗೆ ಇದೆಲ್ಲವೂ ಮನಸ್ಸಿನಲ್ಲಿ ಇನ್ನಿಲ್ಲದ ಸಂತೋಷ ನೀಡಿತಾದರೂ ಅದರ ಹಿಂದೆ ಬರುವ ಒಂದಷ್ಟು ಜವಾಬ್ದಾರಿ, ಪ್ರಾಮಾಣಿಕತೆ, ನಿರಂತರ ಪರಿಶ್ರಮ ಇದೆಲ್ಲವೂ ಬಹು ಮುಖ್ಯವಾಗುವುದರಲ್ಲಿ ಸಂಶಯವಿಲ್ಲ.
ಪ್ರೌಢಾವಸ್ಥೆಗೆ ಬಂದ ಮಕ್ಕಳು ಶಾಲೆಯಲ್ಲಿ ಒಂದಷ್ಟು ಆಲೋಚನೆಗೆ ಇಳಿಯುತ್ತಾರೆ. ಅದೇನೆಂದರೆ ಆದಷ್ಟು ಬೇಗ ಹತ್ತನೇ ತರಗತಿ ಮುಗಿಸಿ ಕಾಲೇಜಿಗೆ ಹೋಗಬೇಕು, ಅಲ್ಲಿಗೆ ಹೋದ ನಂತರ ಕಾಲೇಜು ಮುಗಿಸಿ ಒಂದು ಉದ್ಯೋಗ ಗಿಟ್ಟಿಸಬೇಕು, ನಾನು ನಮ್ಮ ಕುಟುಂಬ ಎಲ್ಲರು ಸಂತೋಷದಿಂದಿರಬೇಕು ಎಂಬುದು ಬದುಕಿನ ಮಧ್ಯಮ ವರ್ಗದ ಪ್ರತಿ ಮಕ್ಕಳ ಕನಸು. ಆದರೆ ಈ ಕನಸಿನ ಬೆನ್ನತ್ತಿ ಅವಸರಕ್ಕೆ ಏಣಿ ಹಾಕಿ ಕಾಲು ಜಾರಿ ಬೀಳುವ ನೋವಿನ ಯಾತನೆ ಸುಧಾರಿಸಲು ಹಲವಾರು ದಿನಗಳು, ಕೆಲವೊಮ್ಮೆ ತಿಂಗಳು, ವರುಷಗಳೆ ಬೇಕಾದರೂ ಆಶ್ಚರ್ಯ ಪಡುವಂತಿಲ್ಲ. ಬದುಕು ಹಾಗೇ, ಗೆಲುವು, ಆಸ್ತಿ,ಹಣ, ಉದ್ಯೋಗ ಇನ್ನಿತರ ಹತ್ತಾರು ಬಯಕೆಗಳು ಆದಷ್ಟು ಬೇಗ ದೊರಕಿ ಬಿಡಬೇಕು, ನಾನು ಎಲ್ಲರಂತಾಗಿ ಬಿಡಬೇಕು ಎನ್ನುವ ಹಂಬಲದಲ್ಲಿ ಅವಸರದ ಬೆನ್ನೇರುವುದು ಸಹಜ ಗುಣ. ಆದರೆ ಅದೇನೋ ದೈವ ಮಾಂತ್ರಿಕ ನೀಡುವ ಕೊಡುಗೆಯೇ? ಅಥವಾ ಖರ್ಚೇ ಇಲ್ಲದೆ ಬೀಳುವ ರಾತ್ರಿಯ ಕನಸೆ? ಎಲ್ಲದಕ್ಕೂ ಸಮಯ ಸಂದರ್ಭ ಕೂಡಿಬರಲೇಬೇಕಿದೆ. ಕೆಲವೊಮ್ಮೆ ದೊರಕುವ ಅನಿರೀಕ್ಷಿತ ಕೊಡುಗೆಗಳು ಹೆಚ್ಚು ಕಾಲ ಉಳಿಯುವುದಿರಲಿ ಮನುಷ್ಯನ ಗುಣ,ವರ್ತನೆ,ಮಾತಿನ ಶೈಲಿಯನ್ನೇ ಬದಲಾಯಿಸಿ ಆತನ ಬದುಕಿನ ತಿರುವನ್ನೇ ವಿಶೇಷವಾಗಿ ಚಿತ್ರಿಸಿ ಬಿಡುತ್ತದೆ.
ಬದಲಾವಣೆ ಜಗದ ನಿಯಮ ಎಂಬುದು ಉಕ್ತಿಯಾದರೆ, ಬದಲಾವಣೆ ಜನರ ನಿಯಮವಾಗಿ ಇನ್ನಿಲ್ಲದ ವರ್ತನೆಗೆ ಕಾರಣವಾಗಿರಲು ಹತ್ತಾರು ಗೆದ್ದು ಸೋತವರ ಕಥೆಗಳು ನಮಗೆ ನಿದರ್ಶನವಾಗಿ ಬಿಡುತ್ತವೆ. ನಾವು ದೊಡ್ಡ ದೊಡ್ಡವರು ಜೀವನದಲ್ಲಿ ಬದುಕಿದ ರೀತಿಗೆ ಹೋಗುವುದೇ ಬೇಡ ನಮ್ಮೂರಿನ ನಮ್ಮ ಅಕ್ಕ ಪಕ್ಕದಲ್ಲಿ ಸಂಭವಿಸಿದ ಗೆದ್ದು ಸೋತವರ ಕಥೆಗಳನ್ನೇ ಗಮನಿಸೋಣ. ಅಪ್ಪ ಊರಿನ ಪಟೇಲ ಒಳ್ಳೆ ಹೆಸರು,ಗೌರವ ಎಲ್ಲವನ್ನು ಗ್ರಾಮದಲ್ಲಿ ಪಡೆದು ಬದುಕುತ್ತಿದ್ದ ಉತ್ತಮ ವ್ಯಕ್ತಿಗೆ ಬಂದೆರಗಿದ ಅನಿರೀಕ್ಷಿತ ಸಾವು ಆತನ ಮಗನಿಗೆ ಪಟೇಲನಾಗುವ ಸೌಭಾಗ್ಯ ದೊರಕಿಸಿ ಬಿಡುತ್ತದೆ. ಇದು ಆತ ಬಯಸಿರದ ಅನಿರೀಕ್ಷಿತ ಸ್ಥಾನ. ನಂತರ ಆತ ಆ ಸ್ಥಾನಕ್ಕೆ ತುಂಬುವ ಸ್ಥಾನಮಾನವಿದೆಯಲ್ಲ ಅದು ಎಷ್ಟರ ಮಟ್ಟಿಗೆ ತನ್ನ ಊರಿಗೆ, ಜನರಿಗೆ ಜೊತೆಗೆ ತನ್ನ ಕುಟುಂಬಕ್ಕೆ ದಕ್ಕಿಸಬೇಕಾದ ಕನಿಷ್ಠ ನ್ಯಾಯವನ್ನಾದರೂ ಒದಗಿಸಲೇಬೇಕು. ಆದರೆ ಅನಿರೀಕ್ಷಿತವಾಗಿ ಸಿಕ್ಕ ಈ ಸ್ಥಾನ ಆತನಿಗೆ ಯಾವುದೇ ಅನುಭವವಿಲ್ಲದೆ ದೊರಕಿದ್ದು. ಪದವಿ ದೊರಕಿತೆಂದು ಬೀಗಿ ಬದುಕುವ ಈತನ ಬದುಕು ಅವಸರದಲ್ಲಿಯೇ ಅವನತಿ ಕಂಡು ಮತ್ತಿನ್ಯಾವುದೋ ಪರಿಸ್ಥಿತಿಗೆ ತಲುಪುತ್ತದೆ. ಹೀಗಿರುವಾಗ ಅಪ್ಪನನ್ನೇ ಅನುಸರಿಸಿ ಅವರಂತೆ ಬದುಕ ನಡೆಸಿ ಉತ್ತಮ ಜೀವನ ನಡೆಸಬೇಕೆಂದುಕೊಂಡ ಎಷ್ಟೋ ಜನರು ತಂದೆಯಿಂದ ಕಲಿಯುವ ಪಾಠ, ಅನುಭವ ಮತ್ತು ತಾಳ್ಮೆಯಿಂದಾಗಿ ಹೆಚ್ಚಿನ ಸಮಯ ಅಂತಹ ಸ್ಥಾನ ಪಡೆಯಲು ತೆಗೆದುಕೊಂಡರು ಆತ ಅವಸರದಿಂದ ಅವನತಿ ಕಡೆಗೆ ಮುಖ ಮಾಡುವುದಿಲ್ಲ.
ಪ್ರಕೃತಿಯಲ್ಲಿ ಅವಸರದಿಂದ ಸೃಷ್ಟಿಯಾಗುವ ಯಾವುದೇ ಜೀವ ಅಥವಾ ನಿರ್ಜೀವ ವಸ್ತುವಿಗೆ ಕಾಲಾವಧಿ ಕೊಂಚ ಕಡಿಮೆಯೇ. ಇನ್ನು ಕೆಲ ಜೀವಿಗಳ ಹುಟ್ಟು ಅನಿರೀಕ್ಷಿತವಾದರೂ ಆ ಹುಟ್ಟಿಗೊಂದು ಅರ್ಥ ನೀಡಿ ಅಂತ್ಯ ತಲುಪುವ ಉದಾಹರಣೆಗಳು ನಮ್ಮೆದುರಿಗಿದೆ. ಅಲ್ಪ ಕಾಲದಲ್ಲಿ ಬದುಕುವ ರೇಷ್ಮೆ ಹುಳು, ಜೇನು ಹುಳು, ಪತಂಗ, ಇರುವೆ ಮುಂತಾದ ಜೀವಿಗಳು ಅವಸರದಿಂದ ಬದುಕ ನಡೆಸಿಲ್ಲವಾದರೂ ಅವುಗಳ ಜೀವನದ ಅಂತ್ಯಕಾಲ ಮಾತ್ರ ತುರ್ತುಗತಿ. ಆದರೆ ಬದುಕಲು ಒಂದಷ್ಟು ಆಯಸ್ಸು ಹೊತ್ತುಕೊಂಡು ಬರುವ ಮನುಷ್ಯ ಎಲ್ಲವನ್ನು ಅವಸರದಿಂದ ಪಡೆದು ತೃಪ್ತಿದಾಯಕವಲ್ಲದ ಬದುಕ ನಡೆಸಿ ಪಡೆದ ಗೌರವ, ಗೆಲುವು, ಸ್ಥಾನ, ಸಂಪಾದಿಸಿದ ಹಣ ಎಲ್ಲವೂ ತೃಣಕ್ಕೆ ಸಮವೆನ್ನಬಹುದು.
ಅನಿರೀಕ್ಷಿತ ಗೆಲುವು, ಗೌರವ ಇದೆಲ್ಲವೂ ಭವಿಷ್ಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪೂರಕವಾದ ಅಂಶಗಳನ್ನು ಅಳವಡಿಸಿ ಸಾಗಿದರೆ ಅವರ ಗೆಲುವು, ಸ್ಥಾನಮಾನಕ್ಕೆ ಎಂದಿಗೂ ಧಕ್ಕೆ ತರಲಾರದು. ಕೆಲ ಹಿರಿಯರು, ಗೆಲುವಿನ ವ್ಯಕ್ತಿಗಳು, ಸ್ಥಾನಮಾನ ಪಡೆದ ಸಾಧಕರು ಹೇಳುವ ಮಾತು ಹೇಗೆಂದರೆ, ಈ ಗೆಲುವು, ಈ ಸ್ಥಾನಮಾನ, ಈ ಪದವಿ, ಗೌರವ ಎಲ್ಲವೂ ನನ್ನನ್ನು ಉನ್ನತ ಸ್ಥಾನಕ್ಕೆ ಏರಿಸಿರುವುದಷ್ಟೇ ಅಲ್ಲ ಅದರಿಂದ ಬದುಕಲು ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತದೆ ಎಂದು ಹೇಳುತ್ತಾರೆ. ಇದು ನಿಜಕ್ಕೂ ಪ್ರಭುದ್ಧ ಮಾತುಗಳೇ ಸರಿ. ಅವರಿಗೆ ತಿಳಿದಿರುತ್ತದೆ ಈ ಗೆಲುವು,ಸ್ಥಾನಮಾನ ಪಡೆದಷ್ಟೇ ಜೋಪಾನವಾಗಿ ಕಾಯ್ದುಕೊಂಡರಷ್ಟೇ ನಮ್ಮ ಬಳಿ ಇರುತ್ತದೆ ಇಲ್ಲವಾದಲ್ಲಿ ಮತ್ಯಾರದ್ಡೋ ಪಾಲಾಗುತ್ತದೆ ಎಂದು. ಅದಕ್ಕೆ ಬೇಕಾದ ತಯಾರಿ,ಸತತ ಅಭ್ಯಾಸ, ಬದುಕಲ್ಲಿ ಕಂಡುಕೊಳ್ಳಬೇಕಾದ ಅನುಭವ ಇದೆಲ್ಲದರ ಹಿಂದೆ ಸಾಗಿ ಅದನ್ನು ಜೋಪಾನವಾಗಿ ಸದೃಢಗೊಳಿಸಿಕೊಳ್ಳುತ್ತಾರೆ. ಇದು ಅಷ್ಟು ಸುಲಭದ ಮಾತು ಅಲ್ಲ ಏಕೆಂದರೆ ಇಂತಹ ಸಂದರ್ಭಗಳಲ್ಲಿ ಯಶಸ್ಸು ಪಡೆದು ಆ ಯಶಸನ್ನು ಸದೃಢವಾಗಿ ಉಳಿಸಿಕೊಂಡವರ ಸರಾಸರಿ ನೋಡಿದರೆ ಸಿಗುವ ಸಂಖ್ಯೆ ತೀರ ಕಡಿಮೆ.
ಈ ಮೊದಲೇ ತಿಳಿಸಿದ ಹಾಗೆ ಪರಿಶ್ರಮದಿಂದ ಪಡೆದ ಗೆಲುವಿದೆಯಲ್ಲ ಅದರ ಕಾಲಾವಧಿ ಬಹಳ ಹೆಚ್ಚು. ಹತ್ತಾರು ಅನುಭವ, ಕಠಿಣ ಪರಿಶ್ರಮ ನಿಮ್ಮನ್ನು ಹಾದಿ ತಪ್ಪಲು ಬಿಡಲಾರದು ಜೊತೆಗೆ ನಿಮ್ಮತನವನ್ನು ಕಸಿಯಲು ಬಿಡದು. ಒಬ್ಬ ಯುವಕ ಅಥವಾ ಯುವತಿ ತಾನೊಬ್ಬ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸಿನ ಬೆನ್ನತ್ತಿ ಪಟ್ಟ ಶ್ರಮ ಅವರಿಗಷ್ಟೇ ತಿಳಿದಿರುತ್ತದೆ. ಆದರೆ ಅದರಲ್ಲಿ ಕಂಡ ಗೆಲುವು ಅವರನ್ನು ಹೆಚ್ಚಿನ ಜವಾಬ್ದಾರಿ ಸ್ಥಾನಕ್ಕೆ ನಿಲ್ಲಿಸಿ ಪ್ರತಿ ಬಾರಿ ಎಚ್ಚರಿಕೆಯ ಜೀವನ ನಡೆಸಲು ಸೂಚಿಸುತ್ತಿರುತ್ತದೆ. ಏಕೆಂದರೆ ಅದು ಶ್ರಮದ ಫಲ. ಅದೇ ಐಎಎಸ್ ಅಧಿಕಾರಿ ಅಂತ್ಯ ಕಂಡು ಆತನ ಮಗನಿಗೆ ಸಿಗುವ ಇನ್ಯಾವುದೋ ಕೆಲಸ ಆತನನ್ನು ಅಪ್ಪನಷ್ಟು ಮಟ್ಟಕ್ಕೆ ಪ್ರಾಮಾಣಿಕತೆಯ ಹಾದಿಯಲ್ಲಿ ನಡೆಯಲು ಬಿಡಲಾರದು ಏಕೆಂದರೆ ಆ ಸ್ಥಾನ ದೊರಕಿದ್ದು ಅನಿರೀಕ್ಷಿತವಷ್ಟೇ, ಅದು ಪರಿಶ್ರಮದಿಂದಲ್ಲ ಎಂಬುದನ್ನು ಇಲ್ಲಿ ಗಮನಿಸಲೇಬೇಕು.
ಇಲ್ಲಿ ಅನಿರೀಕ್ಷಿತ ಗೆಲುವು, ಸಾಧನೆ, ಸಂಪಾದನೆ ಎಲ್ಲದಕ್ಕೂ ಎಲ್ಲವನ್ನು ತೋರಿಸುವ ಶಕ್ತಿ ಇದೆ. ಅದು ನಾವು ನಡೆದುಕೊಳ್ಳುವ ರೀತಿ, ತೋರುವ ಶ್ರದ್ಧೆ, ಗೆಲುವಿಗೆ ನೀಡಿದ ಮನ್ನಣೆ, ಇದೆಲ್ಲವು ನಮ್ಮನ್ನು ಇನ್ನಷ್ಟು ಉತ್ತಮರೆನಿಸಬಹುದು. ಆದರೆ ಅದನ್ನು ಕಲಿಯುವ, ಕಲಿತು ಜೊತೆ ನಡೆಸುವ ಮನಸ್ಥಿತಿ ನಮ್ಮದಾಗಬೇಕಿದೆ. “ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದನಂತೆ” ಎಂಬ ಹಿರಿಯರ ಗಾದೆ ಮಾತಿನಂತೆ ನಮ್ಮ ಅನಿರೀಕ್ಷಿತ ಗೆಲುವು, ಸಾಧನೆ, ಗೌರವ ಆಗಕೂಡದು. ಅದೆಷ್ಟೋ ನಮ್ಮ ಒಡನಾಡಿಗಳು, ಸಂಬಂಧಿಕರು, ಹಿತೈಷಿಗಳು ಹೀಗೆ ಅವರ ವರ್ತನೆಗಳನ್ನು ತೋರಿ ಹಿಂದೆ ಸರಿದ ಹಾದಿಯನ್ನೇ ಮರೆತು ಸಾಗುತ್ತಿರುವ ನಮಗೆ ಇಂತಹ ಗಾದೆಯ ನೆನಪಾಗುತ್ತದೆ. ಆದರೆ ಅವರ ಮುಂದೆ ಹೇಳುವಷ್ಟು ಮನಸ್ಸು ನಮ್ಮದಾಗಿರುವುದಿಲ್ಲ, ಕೇಳುವ ತಾಳ್ಮೆಯು ಅವರಿಗಿರುವುದಿಲ್ಲ.
ಮಳೆ ಅನಿರೀಕ್ಷಿತ ಅದರಲ್ಲಿ ನೆನೆಯುವ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಮಳೆಯಲ್ಲಿ ನೆನೆದು ಸಂಭ್ರಮಿಸಿ, ಮಳೆ ನಿಂತ ಮೇಲೆ ಆಗುವ ಶೀತದ ಬಗ್ಗೆ ಎಚ್ಚೆತ್ತು ಮುಂಜಾಗ್ರತ ಕ್ರಮ ಕೈಗೊಂಡರೆ ಸೂಕ್ತ, ಇಲ್ಲವಾದರೆ ಶೀತ, ಶೀತದಿಂದ ಜ್ವರ, ಜ್ವರದಿಂದ ಮತ್ಯಾವುದೋ ರೋಗಕ್ಕೋ ತುತ್ತಾಗಿ ಅನುಭವಿಸುವ ಬಾಧೆ ಮಳೆಯಲ್ಲಿ ನೆನೆದ ಸಂತೋಷದ ಕ್ಷಣಕ್ಕಿಂತಲೂ ಹೆಚ್ಚಿನ ಸಮಯವನ್ನು ಬೇನೆಯಲ್ಲಿಯೇ ಕಳೆಯುವಂತೆ ಮಾಡಿಬಿಡುತ್ತದೆ. ಕೆಲ ತಿಂಗಳುಗಳ ಹಿಂದೆ ಟಮೋಟ ಬೆಳೆದು ಕಾರು ಖರೀದಿಸಿದ ರೈತನೆಂದು ಟಿವಿಯಲ್ಲಿ ಕಂಡ ವಿಚಾರ ಆ ರೈತನಿಗೆ ಕಾರು ಬಂದ ನಂತರ ರೈತನೆಂದು ಮರೆಯದಿದ್ದರೆ ಸಾಕು ಎಂಬ ಭಾವನೆಯನ್ನು ನನ್ನಲ್ಲಿ ಮೂಡಿಸಿತು. ಇಲ್ಲಿ ಆತ ರೈತನೆಂಬುದನ್ನು ಮರೆತು ಬಂದ ಹಣದಲ್ಲಿ ಮೋಜು ಮಸ್ತಿಗಿಳಿದರೆ ಮತ್ತೆ ಟಮೋಟದಲ್ಲಿ ಲಕ್ಷ ಸಂಪಾದನೆ ಆಗಲು ಬಹುದು ಆಗದೆಯೂ ಇರಬಹುದು. ಆದರೆ ಇಂದಿನ ಮೋಜು ಆತನ ರೈತ ವೃತ್ತಿಯನ್ನು ಮರೆಸದಿದ್ದರೆ ಸಾಕು, ಕಾರಣ ಇಂತಹ ಸಂದರ್ಭಗಳಲ್ಲೇ ಸಭ್ಯತೆ, ಸದ್ಗುಣಗಳು ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲ ಜೊತೆಗಾರರು. ಹಣ ಬಂತೆಂದು ವೈರಿಗಳನ್ನೇ ಆಗಲಿ, ಹಿತೈಷಿಗಳನ್ನೇ ಆಗಲಿ ದ್ವೇಷಿಸಲು ಅಥವಾ ತಿರಸ್ಕಾರ ಭಾವದಿಂದ ನೋಡಲು ಹೊರಟಾಗ ಮುಂದೊಮ್ಮೆ ಅನಿರೀಕ್ಷಿತ ಹಣ ಖಾಲಿಯಾಗಬಹುದು ಆದರೆ ವ್ಯಕ್ತಿತ್ವ ಬದಲಾಗದು. ಅಂತಹ ಸನ್ನಿವೇಶಕ್ಕೆ ಎಡೆ ಮಾಡಿಕೊಡದಿದ್ದರೆ ಉತ್ತಮ.
ಅಲ್ಪ ಮಾನವನಾಗಿ ಜನಿಸಿ ಅತ್ಯುನ್ನತ ಸಾಧನೆ ಮಾಡದಿದ್ದರೂ ಪರವಾಗಿಲ್ಲ. ಆದರೆ ಹತ್ತಿರದ ಮನಸುಗಳಿಗೆ ಇನ್ನೂ ಹತ್ತಿರವಾಗಿ ಹೆಚ್ಚೆಚ್ಚು ಗೌರವ, ಸಾಧನೆ, ಸಂಪಾದನೆಯ ಹಾದಿ ಸವೆಸಲು ಅವಸರದ ಬದಲಾವಣೆಗೆ ಅನುವು ನೀಡದೆ ಅತಿ ಸರಳವಾಗಿ, ಸಂತೋಷವಾಗಿ ಬದುಕು ನಡೆಸಿ ತೃಪ್ತಿಯ ಅಂತ್ಯಕಂಡರಷ್ಟೇ ಸಾಕಲ್ಲವೇ?.
-ವಿಜಯ್ ಕುಮಾರ್ ಕೆ. ಎಂ.