ಈ ದಿನ ಮಳೆ ಬಿಡುವಂತೆ ಇರಲಿಲ್ಲ ಮಾಡಲು ಕೆಲಸಗಳು ಬೇಕಾದಿಷ್ಟಿದ್ದರು ಮಾಡುವಂತೆಯೂ ಇರಲಿಲ್ಲ, ಈ ಹಾಳಾದ ಮಳೆ ಈಗ್ಲೇ ಮಳೆಗಾಲದ ನಮೂನೆ ಮಾಡ್ತಿದೆ. ಮಳೆಗಾಲ ಶುರುವಾಯ್ತೆನೊ?ಎಂದು ಕಾಲು ತೊಳೆಯುತ್ತಾ, ಹಿಮ್ಮಡಿಗೆ ಹತ್ತಿದ ಸಗಣಿ ಸರಿಯಾಗಿ ತೊಳೆದಿದಿಯೋ ಇಲ್ಲವೋ ಎಂದು ಖಾತರಿಪಡಿಸಿ. ಸೀದಾ ಅಡುಗೆ ಮನೆಗೆ ತೆರಳಿ ತಿಂಡಿ ತಿಂದು ಜಗುಲಿಯ ಕುರ್ಚಿಯೇರಿ, ಬೀಳುವ ಮಳೆಯನ್ನೇ ದಿಟ್ಟಿಸುತ್ತ ಕವಳ ಮೆಲ್ಲಲು ಶುರು ಮಾಡಿದ. ಒಮ್ಮೆಲೇ ಏನೋ ನೆನಪಾದವನಂತೆ ದಿಗ್ಗನೆ ಎದ್ದು ಚಡಿ ಕಟ್ಟೆ ತುದಿಗೆ ನೆಡೆದು, ಕವಳದ ಕೆಂಪು ರಸಾಯನ ಪಚಕ್ಕನೆ ಉಗುಳಿದ. ಒಳಗೆ ಬಂದವನೇ ಅಂಗೀಯನ್ನ ತೊಡುತ್ತ ನಾನು”ಮಾದೇವು ಮನೆಗೆ ಹೋಗ್ಬರ್ತೇನೆ ಎಂದು ತಯಾರಾಗಿ ಮನೆ ಅಂಗಳದಲ್ಲಿದ್ದ, ಒಳಗಿದ್ದವರಿಗೆ ಈತನ ಮಾತು ಕೇಳಿತೋ ಇಲ್ಲವೋ ಲೆಕ್ಕಿಸದೆ. ಮತ್ತೇ ಈಗೀಗ ಬತೈತಿ ಎಂದುದು ಮಳೆಯನ್ನು ಶಪಿಸುತ್ತ ಹೊರಟ.
ಮಾದೇವು ತನ್ನ ವಯಸ್ಸಿನವನೆ ಅಥವಾ ಒಂದೆರಡು ವರ್ಷ ಹಿರಿಯನೊ, ಕಿರಿಯನೊ ಲೆಕ್ಕಇಟ್ಟವರು ಯಾರು? ಈತನ ಹುಟ್ಟಿನ ಕಾಲದಿಂದಲೂ ಎರಡು ಕುಟುಂಬಗಳ ಒಡನಾಟವಿತ್ತು.
ಮೊನ್ನೆ ಸಂತೆದಿನ ಈತ ಗ್ಯಾರೇಜಿನಲ್ಲಿ ಬೈಕ್ ರಿಪೇರಿ ಮಾಡಿಸುವಾಗ ಸಿಕ್ಕಿದ್ದ. ಏನೋ ಮಾರಾಯ ಬಾಳ ಅಪರೂಪ, ಎಂದು ಮಾತು ಆರಂಭಿಸಿದವನಿಗೆ ಮಾದೇವು ತನ್ನ ತಾಯಿ …. ಅರೋಗ್ಯ ಸರಿ ಇಲ್ವೆಂದು ಆಸ್ಪತ್ರೆಗೆ ತಿರುವುದೇ ಆಯ್ತು ಎಂದು ಹೇಳಿ ವಿಷಾದಿಸಿದ್ದ.
ಅವ್ವನಿಗೆ ಈ ನಡುವೆ ವಯೋಸಹಜ ಅನಾರೋಗ್ಯ ಜಾಸ್ತಿಯಾಗಿದ್ದು, ಈ ನಡುವೆ ಯಾರೊಂದಿಗೊ ಒಬ್ಬರೇ ಮಾತಾನಾಡುವ ಹಾಗೆ, ವರ್ಷಗಳ ಕೆಳಗೆ ಮರಣಿಸಿದ ತಂದೆಯೊಂದಿಗೆ ಮಾತಾಡೋ ಹಾಗೆ, ಜಗಳ ಆಡುವಾಗ ಹಾಗೆ, ಈ ಹಿಂದೆ ತೀರಿಕೊಂಡ ಮನೆಯರು, ನೆಂಟಿಷ್ಟರು ಎದುರಿನಲ್ಲಿಯೇ ಕುಳಿತ ಹಾಗೆ ಮಾತಾಡುತ್ತಾರೆಂದು ಹೇಳಿದ. ಹಾಗೆ ಸಾಗರ, ಶಿವಮೊಗ್ಗ, ಮಣಿಪಾಲ ಅಸ್ಪತೆಗೆ ಕರೆದುಕೊಂಡು ಹೋಗಿದ್ದಾಗಿಯೂ, ಅಲ್ಲಿಯೂ ಯಾವುದೇ ಪ್ರಯೋಜನವಾಗಿಲ್ಲವೆಂದ. “90- 95 ವಯಸ್ಸಲ್ಲಿ ಅರಳು -ಮರಳು ಸಾಮಾನ್ಯ ಮಾರಾಯ, ಆದ್ರೆ ಇದು ಸಲ್ಪ ಏನು ಅಂತಾನೆ ಗೊತ್ತಾಗ್ತಿಲ್ಲ ಅಪ್ಪಯ್ಯ 2, 3 ವರ್ಷ ಮೂಲೆ ಹಿಡಿದು ತೀರಿಕೊಂಡರೂ ಇಷ್ಟೊಂದು ಕಿರಿ ಕಿರಿ ಇರಲಿಲ್ಲ, ಎಲ್ಲಾದ್ರೂ ದೇವರ ಹತ್ರ ಹೇಳಿಕೆ ಮಾಡಿಸೋದೆ ಈಗಿರುವ ಪರಿಹಾರ” ಎಂದು ಬೇಸರಿಸಿದ್ದ.
ನಿನ್ನೆ ಸಂಜೆಯಿಂದ ಒಂದೇ ಸಮನೆ ಸುರಿಯುತ್ತಿದ್ದ ಅಕಾಲಿಕ ಮಳೆ ಈತನ ಎಲ್ಲ ಕೆಲಸಗಳಿಗೆ ರಜೆಯನ್ನೇ ಘೋಷಿಸಿತ್ತು. ಅತ್ತ ಜೋರಾಗಿಯೂ ಸುರಿಯದೆ, ಸುರಿಯುವುದೂ ನಿಲ್ಲದೆ, ಮಳೆ ಕಿರಿ ಕಿರಿ ಮಾಡುತ್ತಿರುವಾಗ ಸುಮ್ಮನೆ ಮನೆಯಲ್ಲಿ ಕೂರುವ ಬದಲು ಕೊನೆಗಾಲದಲ್ಲಿರುವ ಸಂಕ್ರತ್ತೆ ಯನ್ನ ಒಮ್ಮೆ ನೋಡಿ ಬರುವ ಯೋಚನೆ ತಲೆಗೆ ಬಂದಿದ್ದೆ, ಈತ ಗಡಿಬಿಡಿಯಲ್ಲಿ ಮನೆಯಿಂದ ಹೊರಡಲು ಕಾರಣ
ಮಳೆಯನ್ನು ಶಪಿಸುತ್ತ, ಸರಗೋಲು ದಾಟಿದಾಗಿಂದ ಮಳೆಗೆ ಕೆಳಗೆ ಇಳಿದು ಬರಾದೇ ಕಟ್ಟೆಯ ಮೇಲೆ ಕುಳಿತು ಗಂಟಲು ಹರಿಯುವಂತೆ ಕೂಗುತ್ತಿದ್ದ ಆಲಸಿ ನಾಯಿಗೆ ಹಚ, ಹಚ್ ಎನ್ನುತ್ತಾ ಮಾದೇವು ಮನೆ ಹೊಸಿಲು ದಾಟುತ್ತಿದ್ದ. ಅಷ್ಟರಲ್ಲಿ ನಾಯಿಯ ಕೂಗು ಕೇಳಿ ಹೊರಬಂದ ಮಾದೇವು ಸೊಸೆ ಸ್ವಾಗತಿಸಿದಳು ಮಾದೇವು ಮತ್ತೆ ಅವನ ಮಗನ ಬಗ್ಗೆ ಎಲ್ಲಿ ಹೋದರೆಂದು ಕೇಳಿ, ಸಂಕ್ರತ್ತೆ ಇರುವ ಕೋಣೆ ಕೇಳಿ ಮಾತಾನಾಡಿಸಲು ಕೊಣೆ ಗೆ ಧಾವಿಸಿದ.
ಈಗಾಗಲೇ ದಿನ್ ದಿನಕ್ಕೆ ಮಾತಾಡಿಸಲು ನೆಂಟಿಷ್ಟರು ಬರುತಿದ್ದರಿಂದ ಕೊಣೆಯಲ್ಲಿ ಬರುವವರಿಗೆ ಒಂದೆರಡು ಕುರ್ಚಿಯನ್ನು ಇರಿಸಿಸಿದ್ದರು. ತಾನು ಯಾರೆಂದು ಪರಿಚಯಸಲು ಹರ ಸಾಹಸ ಪಟ್ಟ ಈತನ ಅಸಹಾಯಕತೆ ನೋಡಿ ಅಡುಗೆ ಮನೆಯಿಂದಲೇ ಮಾದೇವನ ಹೆಂಡತಿ “ಇತ್ತೀತ್ಲಾಗೆ ಏನು ಗೊತ್ತಾಗದೆ ಇಲ್ಲ ಕಣ್ರೀ. ಮಣಿಪಾಲ್ ಹೋಗಿ ಆ ಮಾತ್ರೆ ತಿಂದ ಮೇಲೆ ಭಾರಿ ಒಂತರಾ ಆಗಿದರೆ” ಅಂತ ಅಲ್ಲಿಂದಲೇ ಹೇಳಿದಳು. ಕೊನೆಗೂ ಆತನ ಪರಿಚಯ ಅಜ್ಜಿಗೆ ತಿಳಿಸಲು ಸಫಲನಾದನು. ಅಜ್ಜಿ ಏನೋ ಮಾರಾಯ ಈಕಡೆ ಬರೋದೇ ಇಲ್ಲವಲ್ಲ ಎಂದು ಕೇಳಿ ಈತನ ಉತ್ತರಕ್ಕಾಗಿ ಕಾಯ ತೊಡಗಿತು, ಈತ ಉತ್ತರ ಹೇಳಿದ ಮೇಲು “ಎಂತ ಹೇಳ್ತಿಯ ಕೇಳೋದೇ ಇಲ್ಲ” ಎಂದು ಹೇಳಿ “ಅಲ್ಲ ? ಹೋದ ವರ್ಷ ಕೊನೆ ತೆಗೆಯುವಾಗ ಅಡಿಕೆ ಮರದಿಂದ ಬಿದ್ದು ಸತ್ತೋದರಂತಲ್ಲ ಯಾರೋ ಅದು ನೀನಾ ನಿಮ್ಮಣ್ಣನ?” ಎಂದು ಕೇಳಿತು. ಈತ ಕವಳ ತುಂಬಿದ ಬಾಯಲ್ಲೇ ನಗುತ್ತಾ “ಅದು ನಾನೇ ಮಾರಾಯ್ತಿ” ಎಂದು ಮತ್ತೆ ನಗತೊಡಗಿದ. ಕಥೆ ಇಲ್ಲಿಂದ ಪ್ರಾರಂಭ…
-ಆದರ್ಶ ಜೆ.
