ಆಯಿ’ ನನಗೆ ತಾಯಿಯಂತಿದ್ದಳು !: ಡಾ. ಸದಾಶಿವ ದೊಡಮನಿ

” ‘ಆಯೀ’ನ ನೆನೆಯೋದು ಯಾ ಯಾಳಿ ಹೊತ್ತು?” ಸಮಯಾಸಮಯಗಳ ಗೊಡವೆ ಇಲ್ಲದೆ ತತಕ್ಷಣ ನೆನಪಾಗುವ ಸಂಜೀವಿ; ಅನುಗಾಲವೂ ದಿವ್ಯ ಸ್ಮರಣೆಯಲಿರುವ ಅಂತಃಕರಣದ ಮಹಾತಾಯಿ ಆಯಿ. ಆಯಿ ಎಂದರೆ ಬೇರೆ ಯಾರೂ ಅಲ್ಲ. ನನ್ನ ಅವ್ವನ ಅವ್ವ. ನಾನು ಎರಡನೆಯ ತರಗತಿಯನ್ನು ನಮ್ಮೂರಲ್ಲಿ (ವಿಜಯಪುರ ಜಿಲ್ಲೆ, ಇಂಡಿ ತಾಲೂಕು, ಬೂದಿಹಾಳ ) ಓದುತ್ತಿರುವ ಸಂದರ್ಭ, ಆಗ ಭೀಕರ ಬರಗಾಲ ತಲೆದೋರಿ, ಕುಡಿಯಲು ನೀರಿಗೂ ಬರ. ದನ-ಕರುಗಳಿಗೆ ಮೇವಿನ ಭವಣೆ. ಕೆಲಸವಿಲ್ಲದೆ ಉಪಜೀವನ ನಡೆಸುವುದೇ ಕಷ್ಟವಾದಾಗ ದಿಕ್ಕುಗಾಣದೆ ಅವ್ವ-ಅಪ್ಪ ಊರಿನ ಜನರೊಂದಿಗೆ ಅಕ್ಕ, ತಮ್ಮ, ತಂಗಿಯರನ್ನು ಕರೆದುಕೊಂಡು ದುಡಿಯಲು ಮುಂಬೈ ದಾರಿ ಹಿಡಿಯುವುದು ಅನಿವಾರ್ಯವಾಯಿತು. ಹೀಗಾದಾಗ ಅವ್ವ ನನ್ನನ್ನು ತನ್ನ ತವರುಮನೆಯಾದ ಗೊಳಸಂಗಿಗೆ ಕರೆದುಕೊಂಡು ಬಂದು, ‘ನೀನೊಬ್ಬ ಸಾಲಿ ಕಲಿ’ ಎಂದು ತನ್ನ ಅವ್ವ-ಅಪ್ಪನ ಹತ್ತಿರ ಬಿಟ್ಟು ಹೋದಳು. ( ಹೀಗೆ ಹೋದ ಮೇಲೆ ನಾನು ನನ್ನ ಅವ್ವ-ಅಪ್ಪನ ಮುಖವನ್ನು ಮತ್ತೆ ಕಂಡದ್ದು, ಐದು ವರ್ಷದ ನಂತರವೇ. ) ನನಗೆ ಇಂದಿಗೂ ಚೆನ್ನಾಗಿ ನೆನಪಿದೆ. ಇಲ್ಲಿಯ ಪರಸ್ಥಿತಿಯೂ ಅಷ್ಟೇ. ನಮ್ಮೂರಿಗಿಂತ ಭಿನ್ನವೇನೂ ಆಗಿರಲಿಲ್ಲ. ಕಿತ್ತು ತಿನ್ನುವ ಬಡತನ. ಅನಾರೋಗ್ಯದಿಂದ ಬಳಲುತ್ತಿದ್ದ ಮುತ್ಯಾ. ಅದರ ನಡುವೆ ಭೇತಾಳನಂತೆ ಕಾಡುವ ಬರ. ಈ ವಿಷಮತೆಗಳ ನಡುವೆಯೇ ನನ್ನ ಓದಿನ ಎರಡನೆಯ ಅಧ್ಯಾಯ ಗೊಳಸಂಗಿಯ ಪಕ್ಕದ ಊರು ತೆಲಗಿಯಲ್ಲಿ ಆರಂಭಗೊಂಡಿತು. ಮನೆ ಇರುವುದು ತೋಟದಲ್ಲಿ. ಅಲ್ಲಿಂದ ಸೂಮಾರು ನಾಲ್ಕು ಕಿ. ಮೀ. ದೂರ ಇರುವ ಶಾಲೆಗೆ ದಿನವೂ ನಡೆದುಕೊಂಡೇ ಹೋಗಿ ಬರಬೇಕಾಗುತ್ತಿತ್ತು.

ನಮ್ಮ ಸಂಬಂಧಿ- ಸೋದರರು ಈಗಾಗಲೇ ಇಷ್ಟು ದೂರ ನಡೆದುಕೊಂಡೇ ಹೋಗಿ ಬರುತ್ತಿದ್ದರು. ಆದರೆ ಇದು ನನಗೆ ಮೊದಮೊದಲು ತುಂಬಾ ಕಷ್ಟವೆಂದಿನಿಸಿತು. ಆದರೆ ದಿನ ಕಳೆದಂತೆ ಅದು ನನಗೂ ಅಭ್ಯಾಸವಾಗಿ ಹೋಯಿತು. ಆ ಪರಿಸರ, ವ್ಯವಸ್ಥೆಗೆ ಹೊಂದಿಕೊಂಡು ನಾನೂ ಅವರಲ್ಲಿ ಒಬ್ಬನಾಗಿ ಹೋದೆ. ಶಾಲೆ ಹತ್ತು ಘಂಟೆಗೆ ಶುರುವಾಗುತ್ತಿದ್ದರೂ ನಾವು ಮಾತ್ರ ಬೆಳಿಗ್ಗೆ ಏಳು ಘಂಟೆಗೆಯೇ ಮನೆ ಬಿಡುತ್ತಿದ್ದೇವು. ಆಯಿ ರಾತ್ರಿ ಮೂರೋ-ನಾಲ್ಕೋ ಘಂಟೆಗೆ ಎದ್ದು, ತೆಳ್ಳಗೆ ಹಪ್ಪಳದ ಹಾಗೆ ರೊಟ್ಟಿ ಬಡೆಯುತ್ತಿದ್ದಳು. ರೊಟ್ಟಿ ಮಾಡಲು ಆಯಿ ಎಂದೂ ಬೇಸರ ಮಾಡಿಕೊಂಡವಳೇ ಅಲ್ಲ ಅದನ್ನು ನಾನು ಎಂದೂ ನೋಡಲಿಲ್ಲ. ಅದರಲ್ಲೂ ಸಜ್ಜಿ, ಮೆಕ್ಕೆಜೋಳದ (ಗೋವಿನ ಜೋಳ) ರೊಟ್ಟಿಯನ್ನು ಆಯಿ ತುಂಬಾ ಚೆನ್ನಾಗಿ ಮಾಡುತ್ತಿದ್ದಳು. ಹಾಗೆ ಮಾಡಿದ ರೊಟ್ಟಿಯನ್ನು ಮೂರು-ನಾಲ್ಕು ದಿನವಿಟ್ಟು ತಿನ್ನುತ್ತಿದ್ದೇವು. ಆ ರೊಟ್ಟಿಯಲ್ಲಿಯೇ ಒಂದಿಷ್ಟು ಒಣ ಕಾರ ಹಚ್ಚಿ, ಆಯಿ ನನಗೆ ಬುತ್ತಿ ಕಟ್ಟುತ್ತಿದ್ದಳು. ಬರೀ ಕಾರ -ರೊಟ್ಟಿಯಾದರೂ ಅದು ಬಹಳ ರುಚಿ ಹತ್ತುತ್ತಿತ್ತು. ನಮ್ಮ ಹೊಟ್ಟೆ ಹಸಿದುದರಿಂದ ಅದು ಅಷ್ಟು ರುಚಿ ಹತ್ತುತ್ತಿತ್ತೋ ಅಥವಾ ಆಯಿ ಮಾಡುವ ರೊಟ್ಟಿಯ ಸ್ವಾದವೋ ಹಾಗಿರುತ್ತಿತ್ತೋ ಗೊತ್ತಿಲ್ಲ. ಅದು ನನಗೆ ಇಂದಿಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ರೊಟ್ಟಿ ಅಷ್ಟೇ ಏಕೆ ಆಯಿ ಮಾಡುವ ಕುಸುಬಿ, ಕಡಲಿ ಕಿರಿಸಾಲೆ ರಾಜಗೀರ ಅಲ್ಲೂರೆನ -ಹೀಗೇ ಯಾವುದೇ ಪಲ್ಲೆಯಾಗಲಿ ಅದನ್ನು ಆಯಿ ಬಹಳ ರುಚಿ-ರುಚಿ (ಸ್ವಾದ) ಯಾಗಿ ಮಾಡುತ್ತಿದ್ದಳು.

ಯಾವ ಮೃಷ್ಠಾನ್ನದ ಆಟವೂ ಅದರ ಮುಂದೆ ನಡೆಯುತ್ತಿರಲಿಲ್ಲ. ನಾನು ಹಾಗೂ ಕೆಲ ಸೋದರ ಸಂಬಂಧಿಗಳು ಕೆಲ ವರ್ಷ ತೆಲಗಿಯಲ್ಲಿ ಶಾಲೆ ಕಲಿತು, ಅನಂತರ ಗೊಳಸಂಗಿಗೆ ವರ್ಗಾವಣೆ ತೆಗೆದುಕೊಂಡು ತೋಟದಿಂದ ಹೋಗಿ ಬಂದು ಮಾಡುತ್ತಿದ್ದೇವು. ಚಳಿ-ಮಳೆ-ಬಿಸಿಲಿನ್ನದೇ ನಮ್ಮ ಈ ಚಾರಣ ಅಖಂಡ ಹತ್ತು-ಹದಿನೈದು ವರ್ಷ ಹೀಗೆಯೇ ಸಾಗಿತು. ಗಿಡ, ಮರ, ಕಲ್ಲು, ದಿನ್ನೆ, ಕಾಡು ದಾರಿಗಳು ನಮಗೆ ಒಡನಾಡಿಯಾದವು. ಈಗಲೂ ಊರಿಗೆ ಹೋದಾಗ ಅವು ಅಪರಿಚಿತವೆಂದು ಅನ್ನಿಸುವುದೇ ಇಲ್ಲ. ಇಂದಿಗೂ ಆ ದಿನಮಾನಗಳಿಗೆ ನೆನಪಿನ ಸಾಕ್ಷಿಯಾಗಿ ನಿಂತಿವೆ. ಕೆಲವೊಮ್ಮೆ ಜತೆಗಾರರೆಲ್ಲ ನನ್ನೊಬ್ಬನನ್ನೇ ಬಿಟ್ಟು ಶಾಲೆಗೆ ಹೋದಾಗ ಆಯಿ ನನಗೆ ಅರ್ಧ ದಾರಿಯತನಕ ಕಳುಹಿಸಲು ಬರುತ್ತಿದ್ದಳು. ತುಂಬಾ ಅಂಜುಬುರುಕನಾದ ನನ್ನಲ್ಲಿ ಇಲ್ಲದ ಧೈರ್ಯ ತುಂಬಿ ‘ನಾ ಅದೀನಿ, ನೀ ಹೋಗು ; ‘ನಾ ಇಲ್ಲೇ ನಿಂತರತೀನಿ ನೀ ಹೋಗು’ ಎಂದು ನನ್ನ ಶಾಲೆಗೆ ಕಳುಹಿಸುತ್ತಿದ್ದಳು.

ಕೆಮ್ಮು, ನೆಗಡಿ, ಜ್ವರ ಏನೇ ಬಂದರೂ ಆಯಿ ಬಹಳ ಕಾಳಜಿಯಿಂದ ಉಪಚರಿಸುತ್ತಿದ್ದಳು. ಆ ಮೂಲಕ ಅವ್ವ-ಅಪ್ಪನ ನೆನಪನ್ನೇ ಮರೆಸಿದ್ದಳು. ಪ್ರಾಥಮಿಕ ಶಾಲೆಯ ಹಂತದಿಂದ ಕಾಲೇಜು ಶಿಕ್ಷಣದವರೆಗಿನ ಆ ಹತ್ತು-ಹದಿನೈದು ವರ್ಷಗಳ ಕಾಲ ಆಯಿ ನನ್ನನ್ನು ತನ್ನ ವಾತ್ಸಲ್ಯದ ಮಡಿಲಲ್ಲಿ ಇಟ್ಟುಕೊಂಡೇ ಬೆಳೆಸಿದಳು, ಬದುಕ ಕಲಿಸಿದಳು. ಆಯಿಗೆ ನನ್ನ ಮೇಲೆ ತುಂಬಾ ಪ್ರೀತಿ. ಹೇಳಿದ ಕೆಲಸವನ್ನೋ, ಮಾತನ್ನೋ ನಾನು ಕೇಳದಿದ್ದಾಗ ಆಯಿ ‘ಯಾಕ ಸದಪ್ಪ, ನೀನೂ ಗಮಂಡಿಗಿ ಬಂದಿಯನು’ ಎಂದು ಹುಸಿ ಕೋಪವನ್ನು ತೋರಿ, ನನ್ನ ಬೆದರಿಸುವ ಪ್ರಯತ್ನ ಮಾಡುತ್ತಿದ್ದಳೇ ಹೊರತು, ಅವಳು ಎಂದೂ ಬಡೆದವಲ್ಲ ಬೈದವಲ್ಲ. ಪ್ರೀತಿಯಿಂದಲೇ ಕೆಲಸವನ್ನು ಹೇಳಿ, ಮಾಡಿಸುತ್ತಿದ್ದಳು. ಒಂದರ್ಥದಲ್ಲಿ ಆಯಿ ಪ್ರೇಮಮಯಿ, ಕರುಣಾಮಯಿ. ತುಂಬಾ ಸರಳ ಜೀವಿ. ಬುದ್ಧನ ಪ್ರೀತಿ, ಬಸವಣ್ಣನ ದಯೆ, ಅಂಬೇಡ್ಕರರ ಸ್ವಾಭಿಮಾನದಂತಹ ಮೌಲ್ಯಗಳ ಸಾಕಾರ ಮೂರ್ತಿಯಾಗಿ ಆಯಿ ನನಗೆ ಕಾಣುತ್ತಾಳೆ. ಅದೇ ಸ್ವರೂಪದಲ್ಲಿ ಇಂದಿಗೂ ಹೃದಯದಲ್ಲೂ ನೆಲೆಸಿದ್ದಾಳೆ. ಅಂತಹ ‘ಆಯಿ ನನಗೆ ತಾಯಿಯಂತಿದ್ದಳು !’. ಆ ತಾಯಿಯನ್ನು ಕುರಿತು ಅವರ ಅಚ್ಚು ಮೆಚ್ಚಿನ ಮಕ್ಕಳಲ್ಲಿ ಒಬ್ಬರು, ಪ್ರತಿಭಾವಂತ ಸಾಹಿತಿ, ಸಂಘಟಕರೂ ಆದ ಡಾ. ಅರ್ಜುನ ಗೊಳಸಂಗಿಯವರು ತಮ್ಮ ಒಂದು ಕವಿತೆಯಲ್ಲಿ :

” ಒಬ್ಬರಿಗೂ ಬೈಯಲಿಲ್ಲ
ಬೆದರಿಸಿ ಬಡೆಯಲಿಲ್ಲ
ಪ್ರೀತಿಯ ತುತ್ತ ತಿನಿಸಿದವಳು
ತಂಗಳಿದ್ದರೂ ಬಂಧು-ಬಳಗ ಬರಲೆನ್ನುವಳು
ಹರಿದು ಹಂಚಿ ತಿನ್ನಲು ಕಲಿಸಿದಳು”

-ಎಂದು ಅವ್ವನ ಅನನ್ಯ ವ್ಯಕ್ತಿತ್ವವನ್ನು ಬಣ್ಣಿಸಿದ್ದಾರೆ. ಎಲ್ಲರೊಳು ಒಂದಾಗುವ, ಎಲ್ಲರ ಹಿತವನ್ನೇ ಬಯಸುವ ಆಯಿ ನಮ್ಮನ್ನು ಅಗಲಿ ಇಂದಿಗೆ ಏಳು ವರ್ಷಗಳು ಸಂದವು. ಆಯಿ ದೈಹಿಕವಾಗಿ ಮಾತ್ರ ದೂರವಾಗಿದ್ದಾಳೆ. ಆದರೆ ಅವಳ ಗುಣ-ವ್ಯಕ್ತಿತ್ವ-ಆದರ್ಶ-ನೆನಪುಗಳು ಇಂದಿಗೂ ಹೃದಯ ದೀಪಗಳಾಗಿ, ಕಣ್ಣ ಮುಂದಿನ ಬೆಳಕಾಗಿ ನಮ್ಮನ್ನು ಕೈ ಹಿಡಿದು ನೆನೆಸುತ್ತಿವೆ. ನಮ್ಮನ್ನು ಕಾಯುತ್ತಿವೆ. ಅಂತಹ ನಿರ್ಮಲ ಹೃದಯದ ಆಯಿಯ ಚರಣ ಕಮಲಗಳಿಗೆ ಹೃದಯ ಪೂರ್ವಕ ನಮನ, ಹೂ ಮನದ ಸುಮನ.

-ಡಾ. ಸದಾಶಿವ ದೊಡಮನಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x