ಸಂಗೀತ ಲೋಕದ ಬೆರಗು ಎಸ್‍ಪಿಬಿ: ಡಾ. ಹೆಚ್ ಎನ್ ಮಂಜುರಾಜ್

ಚಿತ್ರ ಕೃಪೆ: ಗೂಗಲ್

‘ಮಲೆಗಳಲುಲಿಯುವ ಓ ಕೋಗಿಲೆಯೇ
ಬಲು ಚೆಲ್ವಿದೆ ನಿನ್ನೀ ಗಾನ
ಇಂಗ್ಲಿಷಿಗೆ ತರ್ಜುಮೆ ಮಾಡಿದರೆ
ದೊರೆವುದು ನೊಬೆಲ್ ಬಹುಮಾನ’

ಕುವೆಂಪು ಅವರ ಕವಿತೆಯೊಂದರ ಸಾಲುಗಳಿವು. ಇದನ್ನು ಪ್ರಸ್ತಾಪಿಸುತ್ತಾ ಡಾ. ಹಾ ಮಾ ನಾಯಕರು, ‘ಕೋಗಿಲೆಯ ಹಾಡನ್ನು ಇಂಗ್ಲಿಷಿಗೆ ತರ್ಜುಮೆ ಮಾಡುವವರು ಯಾರು?’ ಎಂದು ಕೇಳುತ್ತಾ, ಪರೋಕ್ಷವಾಗಿ ಕುವೆಂಪು ಅವರ ಪ್ರತಿಭೆಗೆ ನೊಬೆಲ್ ಬಹುಮಾನ ಲಭಿಸುವುದು ಯಾವಾಗ? ಎಂಬ ದನಿಯಲ್ಲಿ ಬರೆದಿದ್ದರು.

ಏಕೆ ಈಗ ಈ ಮಾತು ನೆನಪಾಯಿತೆಂದರೆ, ಇಂಥ ಸವಾಲನ್ನೂ ಸಾಹಸವನ್ನೂ ಅಪೂರ್ವ ರೀತಿಯಲ್ಲಿ ತಮ್ಮ ಬದುಕಿನುದ್ದಕ್ಕೂ ಕೈಗೊಂಡು ಗಾಯನ ರಸಯಾತ್ರೆಯಲ್ಲಿ ಸಹೃದಯರನ್ನು ಮುಳುಗಿಸಿ, ತೇಲಿಸಿ, ಓಲಾಡಿಸಿದ ಲೆಜೆಂಡ್, ಯುಗಪ್ರವರ್ತಕ ಗಾನಗಾರುಡಿ ನಮ್ಮ ಶ್ರೀಪತಿ ಪಂಡಿತಾರಾಧ್ಯ ಬಾಲಸುಬ್ರಹ್ಮಣ್ಯಂ.

ಬಹುಶಃ ಗಾಯನ ಪ್ರಪಂಚದ ವಿಸ್ಮಯಗಳಿಬ್ಬರು ನಮ್ಮ ದೇಶದವರೇ ಆಗಿರುವುದು ಅಚ್ಚರಿ. ಒಬ್ಬರು ಲತಾ ಮಂಗೇಶ್ಕರ್ ಮತ್ತೊಬ್ಬರು ಎಸ್‍ಪಿಬಿ. ಹೇಗೆ ಹಾಡುತ್ತಿದ್ದರೋ, ಹೇಗೆ ಹಾಡಿದ್ದರೋ ಹಾಗೆಯೇ, ಅದಕಿಂತ ಇನ್ನೂ ಅದ್ಭುತವಾಗಿ ಹಾಡುವ ದೈವಾಂಶ ಸಂಭೂತರಿವರು. ಇವರ ಕಂಠಕ್ಕೆ ಯಾವತ್ತೂ ಇಪ್ಪತ್ತರ ಹರಯ; ಹಾಡುವಿಕೆಗೆ ಎಂದಿಗೂ ಬತ್ತದ ಉತ್ಸಾಹ; ಜೀವನದಲ್ಲಿ ಮಹಾನ್ ಮೌಲ್ಯಗಳನ್ನು ಧರಿಸಿ, ಶ್ರೇಷ್ಠವಾದುದನ್ನು ಸಾಧಿಸಿ ರಂಜಿಸಿದ ಗಂಧರ್ವರಿವರು.

ಚಲನಚಿತ್ರ ಹಿನ್ನೆಲೆ ಗಾಯನದಲ್ಲಿ ಎಸ್‍ಪಿಬಿ ಮಾಡಿದಷ್ಟು ಪ್ರಯೋಗಗಳನ್ನು ಇನ್ನಾರೂ ಮಾಡಿರಲಿಕ್ಕಿಲ್ಲ. ಅವರೊಂದು ಸಂದರ್ಶನದಲ್ಲಿ ಇದನ್ನೇ ಹೇಳುತ್ತಾರೆ: ಅದೇನೋ ನನಗೂ ಗೊತ್ತಿಲ್ಲ; ಯಾವ ನಟನ ಪರವಾಗಿ ನಾನು ಹಾಡಬೇಕೋ ಅವರ ದನಿಯ ಛಾಯೆ ನನ್ನನ್ನಾವರಿಸಿ ಬಿಡುತ್ತದೆ, ಬಲವಂತವಾಗಿ ನಾನು ಅವರ ಕಂಠವನ್ನು ಅನುಕರಿಸಲು ಹೋಗುವುದಿಲ್ಲ, ಇದೆಲ್ಲ ಆ ಭಗವಂತನ ಕೃಪೆ! ಎಂದು. ಹೌದು, ಇದರಿಂದಲೇ ಬಾಲಸುಬ್ರಹ್ಮಣ್ಯಂ ಕೇಳುಗರ ಹೃದಯವನ್ನು ಸೂರೆ ಮಾಡಿದ್ದು. ಕನ್ನಡ, ತೆಲಗು, ತಮಿಳು, ಹಿಂದಿ ಮೊದಲಾದ ಭಾಷೆಗಳ ಚಲನಚಿತ್ರ ಹಿನ್ನೆಲೆ ಗಾಯನದ ಒಂದು ಕಾಲದ ಚಕ್ರವರ್ತಿ, ಸಂಗೀತ ನಿರ್ದೇಶಕರ ಕಣ್ಮಣಿ, ರಾಗ-ತಾನ-ಪಲ್ಲವಿಗಳ ಪಲಕುಗಳನ್ನು ಪರಿಪರಿಯಾಗಿ ಪಸರಿಸಿದ ಈ ಕಂಠ ಇನ್ನು ಇಲ್ಲ ಎಂದಾಗ ತೀವ್ರ ವಿಷಾದವಾಗುತ್ತದೆ. ಅದರಲ್ಲೂ ಕೊರೋನಾ ಬಾಧಿತರಾಗಿ ಕೊನೆಯುಸಿರು ಬಿಟ್ಟರು ಎಂಬುದೇ ದುಃಖದ ವಿಷಯ. ಕೊರೋನಾ ಜಾಗೃತಿ ಗೀತೆಯನ್ನು ಹಾಡಿ, ಎಲ್ಲರನ್ನು ಎಚ್ಚರಿಸಿದ್ದ ಗಾಯಕನೇ ಕೊರೋನಾಗೆ ಬಲಿಯಾದರು ಎಂಬುದು ಎಂಥ ವಿಪರ್ಯಾಸ.

ಹಾಡು ನಿಲ್ಲಿಸಿದ ಕೋಗಿಲೆ ಎಂಬುದರ ಬದಲಿಗೆ ಕೋಗಿಲೆಗೇ ಹಾಡು ಕಲಿಸಿದ ಗುರುವೆಂದರೆ ತಪ್ಪಾಗದು. ಅಷ್ಟರಮಟ್ಟಿಗೆ ಎಸ್‍ಪಿಬಿಗೆ ಹಾಡೆಂದರೆ ಮಗು, ನಗು, ಜೀವನದ ಎಲ್ಲ ಆಗುಹೋಗುಗಳ ಬಾನ ಬೆರಗು. ಅವರ ದನಿಯ ಮಾಂತ್ರಿಕತೆ, ಸಂಗೀತದ ಎಲ್ಲ ಸೂಕ್ಷ್ಮಾತಿಸೂಕ್ಷ್ಮಗಳ ಕರಗತ, ಶ್ರೋತೃಗಳನ್ನು ಸ್ವರ್ಗದಲಿ ತೇಲಾಡಿಸುವ ತನ್ಮಯತೆ, ಆಯಾ ಭಾಷೆಗಳ ಜಾಯಮಾನವನ್ನರಿತು ಭಾವಗಳ ಹಿಡಿದಿಡುವ ಸುಲಲಿತ ಸುಭಗತೆ ಎಸ್‍ಪಿಬಿಗಷ್ಟೇ ಸಾಧ್ಯ. ಜೊತೆಗೆ ಅದ್ಭುತ ನಟನಾಗಿಯೂ ಅವರು ತಮ್ಮೊಳಗಿನ ಕಲಾವಿದತನವನ್ನು ನಮಗೆ ಉಣಬಡಿಸಿದ್ದು ಸೋಜಿಗದ ಸಂಗತಿ. ಇವೆಲ್ಲದರಾಚೆಗೆ ಎಸ್‍ಪಿಬಿ ನಮ್ಮ ಹೃದಯಕ್ಕೆ ಹತ್ತಿರವಾದದ್ದು ‘ಎದೆ ತುಂಬಿ ಹಾಡುವೆನು’ ದಂಥ ಕಾರ‍್ಯಕ್ರಮಗಳ ಮೂಲಕ.

ಅರ್ಥ ಮಾಡಿಕೊಳ್ಳುವುದು ಸುಲಭ; ಅರ್ಥೈಸುವುದು ಕಠಿಣ; ಅದರಲ್ಲೂ ಸಂಗೀತಲೋಕದ ಏನೆಲ್ಲ ವಿಸ್ಮಯಗಳನ್ನು ತಮ್ಮ ಅನುಭವದ ಘಟನೆಗಳೊಂದಿಗೆ ಆ ಹಾಡಿನ ಮತ್ತು ಹಾಡಿದ ಹಿನ್ನೆಲೆಯ ವಿಶೇಷಗಳೊಂದಿಗೆ ವಿವರಿಸುತ್ತಾ ಅಂದು ಹಾಡಿದ್ದಕ್ಕಿಂತಲೂ ಇನ್ನೂ ಚೆನ್ನಾಗಿ ಹಾಡುತ್ತಾ ಮನೆಮಂದಿಯನ್ನು ಧನ್ಯರಾಗಿಸಿದ್ದು ಅಪರಿಮಿತ ಸಾಧನೆ. ಸ್ಪರ್ಧೆಯಲ್ಲಿ ಪಾಲ್ಗೊಂಡು ಹಾಡಿನ ಮಹಾ ಸಾಗರದ ದಡದಲ್ಲಿ ನಿಂತು ಇಂಥ ಬೃಹತ್ ಹಡಗನ್ನು ಹತ್ತಿರದಿಂದ ನೋಡಿದ ಚಿಕ್ಕ ಪುಟ್ಟ ಮಕ್ಕಳಿಗೂ ಎಸ್‍ಪಿಬಿ ತಿಳಿ ಹೇಳುವ ರೀತಿನೀತಿ ಆದರ್ಶನೀಯ.

ಎಸ್‍ಪಿಬಿಯ ವ್ಯಕ್ತಿತ್ವವೂ ಅಷ್ಟೇ ಉನ್ನತವಾದುದು. ಈ ವಿಚಾರದಲ್ಲಿ ಅಚಲ ಹಿಮಾಚಲ ಪರ್ವತ ಇವರು. ಅಪರಿಮಿತ ವಿನಯಮೂರ್ತಿ, ತನ್ನದೇನೂ ಇಲ್ಲ; ಆ ಭಗವಂತನೇ ಎಲ್ಲ ಎನ್ನುವ ಸದ್ಗುಣಿ, ಬದುಕಿನ ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಂಡು ‘ಏರುವನು ರವಿ ಏರುವನು; ಬಾನೊಳು ಸಣ್ಣಗೆ ತೋರುವನು; ಏರಿದವನು ಚಿಕ್ಕವನಿರಬೇಕೆಂಬಾ ಮಾತನು ಸಾರುವನು’ ಎಂಬುದನು ಪದೇ ಪದೇ ಪಠಿಸಿದ ಘನವಂತ ಗಾಯನದರಸ. ಸದಾ ಒಳಿತನ್ನು ಹಾರೈಸುತ್ತಾ, ಅರಸುತ್ತಾ, ಇನ್ನೂ ಏನಾದರೂ ಕಲಿಯುವುದು ಇದೆಯೇ ಎಂದು ಜಾಲಾಡುತ್ತಾ ಜನಮಾನಸಕ್ಕೆ ಕಲಿಸುತ್ತಾ ಬದುಕಿದ ಈ ಮಹಾನ್ ಚೇತನ ನಮ್ಮೆಲ್ಲರ ಪಾಲಿಗೆ ದೇವರ ಗುಡಿಯಲ್ಲಿ ಸದಾ ಹಚ್ಚಿಟ್ಟ ತುಪ್ಪದ ದೀಪ; ಆರದ ನಂದಾದೀಪ. ಪಾರಿಜಾತದ ಪರಿಮಳ. ಇಹಕೂ ಪರಕೂ ಓಡಾಡುವ, ಓಲಾಡುವ ಸೇತುವೆ; ಇವರ ಹಾಡು-ಮಾತು ನಮ್ಮ ಬಾಳಿನ ಸಂತಸವೇ; ಜೀವಿತವೇ!

ಅಣ್ಣ ಬಸವಣ್ಣನವರನ್ನು ಬಿಟ್ಟರೆ ನನಗೆ ನೆನಪಾಗುವುದು ಈತನೇ! ನಮ್ರತೆ ಮತ್ತು ಮಮತೆಯ ವಿಚಾರದಲ್ಲಿ. ಎನಗಿಂತ ಕಿರಿಯರಿಲ್ಲ ಎಂದು ಹೇಳುತ್ತಲೇ ತನ್ನೊಳಗನ್ನು ಶುದ್ಧಿ ಮಾಡಿಕೊಳ್ಳುವ ಕಾಯಕವನ್ನು ಕಲಿಸಿದ ಬಸವಣ್ಣನವರು ಮತ್ತು ಮಗುತನದಲ್ಲಿದ್ದು ಮುಗ್ಧತೆಯಿಂದ ನಗುತ್ತಾ ಗಾಯನದಿಂದ ರಂಜಿಸುತ್ತಾ ಸಾಧನೆಯಷ್ಟೇ ವ್ಯಕ್ತಿತ್ವವೂ ಅಷ್ಟೇ ಪರಿಶುದ್ಧವಾಗಿರಬೇಕು ಎಂದು ಬೋಧಿಸಿದ ಎಸ್‍ಪಿಬಿಯವರು ನಿಜಕ್ಕೂ ದೇವರಿಗೆ ಹತ್ತಿರವಾದವರು; ದೇವರೇ ಆದವರು. ಇರುವಷ್ಟು ಕಾಲ ಮಮತೆಯಿಂದ ಮತ್ತು ಘನತೆಯಿಂದ ಬದುಕಬೇಕು; ಮಾನವೀಯವಾಗಬೇಕು; ಗೊತ್ತಿದ್ದನ್ನು ಧಾರೆಯೆರೆಯಬೇಕು; ಆ ಮೂಲಕ ಧನ್ಯರಾಗಬೇಕು; ಒಳಿತನ್ನು ಗುರುತಿಸಿ ಗೌರವಿಸಬೇಕು; ಎಂದು ತಿಳಿದು ತಿಳಿಸಿದ ಮಹಾನುಭಾವರಿವರು.

ಕನ್ನಡ ನನ್ನ ಅನ್ನ; ಈ ಭಾಷೆ ಚಿನ್ನ; ಕನ್ನಡಿಗರು ನನ್ನನ್ನಪ್ಪಿ ಒಪ್ಪಿದ ಮೇಲೆ ನನ್ನ ಜೀವ-ಜೀವನ ಸಂಪನ್ನ ಎನ್ನುತ್ತಿದ್ದ ಈ ಸರಸ್ವತಿಯ ಪುತ್ರ ನವರಸಗಳನ್ನೀಂಟಿದ ಪರಿ ಒನ್ ಅ್ಯಂಡ್ ಓನ್ಲಿ; ಯುನಿಕ್ ಎಂದರೆ ಉತ್ಪ್ರೇಕ್ಷೆಯಲ್ಲ. ಮಾತೃಭಾಷೆ ತೆಲುಗಾದರೂ ಕನ್ನಡವನ್ನು ಪ್ರೀತಿಸಿದ ಈತನನ್ನು ಕನ್ನಡಿಗರೂ ಅಷ್ಟೇ ಮತ್ತು ಅದಕಿಂತ ಇನ್ನೂ ಒಂದು ಕೈ ಹೆಚ್ಚು ಪ್ರೀತಿಸಿ ಸಂಭ್ರಮಿಸಿರುವುದು ಇತಿಹಾಸದ ಸುವರ್ಣ ಪುಟ. ಸಂಗೀತಕ್ಕೆ ಭಾಷೆಯ ಹಂಗಿಲ್ಲ ಎಂಬ ಮಾತಿಗೆ ನಿದರ್ಶನ ಈ ಹಾಡಿನ ಸರದಾರ. ಅವರು ಮಾತಾಡುವಾಗ ತಮ್ಮೊಳಗಿನ ಭಾವನೆಯ ಮಹಾಪೂರವನ್ನು ಮನಕೆ ಮುಟ್ಟಿಸಲು ಮಧ್ಯೆ ಮಧ್ಯೆ ಬಳಸುತ್ತಿದ್ದ ಇಂಗ್ಲಿಷು ಕೂಡ ನಮಗೆ ಇಂಗ್ಲಿಷಾಗಿ ತೋರುತ್ತಿರಲಿಲ್ಲ; ಕಸಿವಿಸಿಯಾಗುತ್ತಿರಲಿಲ್ಲ; ಕಷ್ಟವಾಗುತ್ತಿರಲಿಲ್ಲ! ಸಂಸ್ಕೃತ, ಇಂಗ್ಲಿಷ್, ಕನ್ನಡದ ಎಲ್ಲ ನುಡಿಗಟ್ಟುಗಳನೂ ಒಳಗುಟ್ಟುಗಳನೂ ಅರಿತ ಮಹಾ ಮೇಧಾವಿ ಈತ. ಹಾಗಾಗಿ, ರಾಗವನ್ನು ದಾಟಿಸುವಷ್ಟೇ ಸರಾಗವಾಗಿ ಭಾವವನ್ನು ಸಂವಹನಿಸುವ ಅಪರೂಪದ ಮಾತುಗಾರ. ಉಳಿದ ಗಾಯಕ-ಗಾಯಕರನ್ನೂ ಸಂಗೀತ ನಿರ್ದೇಶಕರನ್ನೂ ಸಾಹಿತ್ಯ ರಚನಾಕಾರರನ್ನೂ ಅಷ್ಟೇ ಭಕ್ತಿ ಮತ್ತು ಪ್ರೀತಿಗಳಿಂದ ನೆನೆದು ಗೌರವಿಸುತ್ತಿದ್ದ ಎಸ್‍ಪಿಬಿ ಯಾವತ್ತೂ ಜಗತ್ತಿನ ಆದರ್ಶ.

ಶರೀರ ಇನ್ನಿಲ್ಲ ಅಷ್ಟೇ ; ಶಾರೀರ ನಾವಿರುವಷ್ಟೂ ಕಾಲ ಬಾಳುವ ಬಂಗಾರ. ನಮ್ಮ ಸುಖದುಃಖಗಳ ಜೊತೆಗಾರ. ಸಾಹಿತ್ಯ ಮತ್ತು ಸಂಗೀತಕ್ಕಿರುವ ಶಕ್ತಿಯೇ ಅಂಥದು. ಗಂಗೆಯಲ್ಲಿ ಮಿಂದಷ್ಟೇ ಪುಣ್ಯ ನಮ್ಮದು, ಇವರ ಹಾಡುಗಳನ್ನು ಆಲಿಸಿದರೆ; ಹಾಗೇ ಅವರು ಸದಾ ಧರಿಸಿ ದ್ರವಿಸಿದ ಶಾಶ್ವತ ಮೌಲ್ಯಗಳಾದ ಘನತೆ-ಮಮತೆ-ಸಮತೆಗಳನ್ನು ಪಾಲಿಸಿದರೆ! ಹೋಗಿ ಬನ್ನಿ ಎಸ್‍ಪಿಬಿ; ನಿಮ್ಮ ಹಾಡುಗಳನೇ ಅಘ್ರ್ಯ ಮಾಡಿ ಅಶ್ರುತರ್ಪಣದಲಿ ಮೀಯುತಾ ನಾವೆಲ್ಲ ನಿಮ್ಮನು ಸ್ವರ್ಗಕೆ ಬೀಳ್ಕೊಡುತಿದ್ದೇವೆ: ‘ಮಾಮರವೆಲ್ಲೋ; ಕೋಗಿಲೆಯೆಲ್ಲೋ; ಏನೀ ಸ್ನೇಹಾ ಸಂಬಂಧ; ಎಲ್ಲಿಯದೋ ಈ ಅನುಬಂಧ.’

-ಡಾ. ಹೆಚ್ ಎನ್ ಮಂಜುರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
Vijaya
Vijaya
3 years ago

ತುಂಬಾ ಚೆನ್ನಾಗಿದೆ ಗುರುಗಳೇ

ಪದ್ಮ ಆನಂದ್
ಪದ್ಮ ಆನಂದ್
3 years ago

ಮೇರು ವ್ಯಕ್ತಿತ್ವದ ಎಸ್‌.ಪಿ.ಬಿ. ಅವರ ಕುರಿತಾದ ಲೇಖನ ಅತ್ಯಂತ ಸೂಕ್ತವಾದ ರೀತಿಯಲ್ಲಿ ಕಟ್ಟಿಕೊಟ್ಟಿದ್ದೀರಿ. ಅವರ ಹಾಡುಗಳೊಂದಿಗೇ ಬೆಳೆದ ನನ್ನಂತಹವರಿಗೆ ಅವರ ಅಗಲಿಕೆ ತೀವ್ರ ನೋವಿನ ಸಂಗತಿ. ಲೇಖನ ಓದಿ ಮನಸ್ಸು ಆರ್ದ್ರವಾಯಿತು, ಮೂಕವಾಯಿತು. ಸಮಂಜಸ ಶ್ರದ್ದಾಂಜಲಿ.

Padma Anand
Padma Anand
3 years ago

ಮೇರು ವ್ಯಕ್ತಿತ್ವದ ಎಸ್.ಪಿ.ಬಿ.ಯವರ ಕುರಿತಾದ ಲೇಖನ ಅತ್ಯಂತ ಸೂಕ್ತವಾಗಿ ಮೂಡಿಬಂದಿದೆ. ಓದಿ ಮನಸ್ಸು ಆರ್ದ್ರವಾಯಿತು. ಸಮಂಜಸ ಶ್ರದ್ಧಾಂಜಲಿ.

ಕುಮಾರ್
ಕುಮಾರ್
3 years ago

SPB ರವರ ವ್ಯಕ್ತಿತ್ವದ ಚಂದದ ಪರಿಚಯ ಮಾಡಿದ್ದಾರೆ ಮಂಜುರಾಜ್ ಗುರುಗಳು.ಹಾಡುಗಾರನೆಂದರೆ ಬರಿ ಹಾಡುಗಾರನಲ್ಲ ಮೌಲ್ಯಗಳ ಆವಾಹಿಸಿಕೊಂಡ ಈ ಲೌಕಿಕದ ಸಂತೆಯೊಳಗಣ ಸಂತನಂತಹ ವ್ಯಕ್ತತ್ವ ಅವರದು ಎನ್ನುವ ರೀತಿ ನಿಜಕ್ಕೂ ಸತ್ಯವಾದ ಮಾತು.

Parthasarathy
Parthasarathy
3 years ago

ಉತ್ತಮ ಲೇಖನ.

ಹೆಚ್ಚೆನ್‌ ಮಂಜುರಾಜ್
ಹೆಚ್ಚೆನ್‌ ಮಂಜುರಾಜ್
3 years ago

ಓದಿ, ಪ್ರತಿಕ್ರಿಯಿಸಿದ ನಾಲ್ವರಿಗೂ ನನ್ನ ಅನಂತ ಧನ್ಯವಾದಗಳು.

ಸಂಗೀತ ಸಾಮ್ರಾಟನನ್ನು ಕುರಿತು ಪದ್ಯ ಬರೆಯಲು ಕುಳಿತೆ, ಸಾಧ್ಯವಾಗಲಿಲ್ಲ. ಇದು ನನ್ನ ವಿಷಾದ. ಖಾಲಿಯಾದ ಮನಸಿನಲಿ ಭಾವಗಳು ಬರಿದಾಗಿ, ಬಾನೂ ಭೂಮಿ ಸಪ್ಪೆಯೆನಿಸಿ, ಎಸ್‌ ಪಿ ಬಿ ಅಂತ್ಯ ಹೀಗಾಗಬಾರದಿತ್ತು ಎಂಬ ವ್ಯಥೆಯಲ್ಲಿದ್ದೆ.

ರಾತ್ರಿ ಮೂರುವರೆಯಲ್ಲಿ ಎಚ್ಚರಾಗಿ, ಏನನ್ನಾದರೂ ದಾಖಲಿಸಬೇಕೆನಿಸಿ, ಕಂಪ್ಯೂಟರನು ಓಪನಿಸಿ, ಟೈಪಿಸಲು ಶುರುವಿಟ್ಟೆ, ಹಾಗೇ ಒಂದು ನುಡಿ ನಮನವಾಯಿತು, ಎಲ್ಲಿಯೂ ಏನನೂ ತಿದ್ದಲಿಲ್ಲ, ತಿದ್ದಬೇಕೆನಿಸಲಿಲ್ಲ. ತೀವ್ರ ಸಂತಾಪ ಮತ್ತು ತಾದಾತ್ಮ್ಯಗಳಿದ್ದರೆ ಆಗ ಹೀಗೆ ಸಂಭವಿಸಿ ಬಿಡುತ್ತದೇನೋ…….ಬೆಳಗಿನ ಜಾವದ ವೇಳೆಗೆ ಪಂಜುವಿಗೆ ಕಳಿಸಿದರೆ, ಬೆಳಗ್ಗೆ 7 ಗಂಟೆಯ ವೇಳೆಗೆ ಸಂಪಾದಕರು ಲೇಖನವನ್ನು ಪ್ರಕಟಿಸಿ, ವಿಶೇಷ ಲೇಖನ ಎಂಬ ಲಿಂಕ್‌ ಕಳಿಸಿದ್ದರು! ತುಂಬ ಸಂತೋಷವಾಯಿತು. ಸಕಾಲದಲ್ಲಿ ಪ್ರಕಾಶ ಕಂಡದ್ದಕ್ಕೆ. ನಟರಾಜು ಸರ್‌ ಅವರಿಗೆ ಧನ್ಯವಾದಗಳು.

ವಿಜಯ್‌ ಗೆ, ಪದ್ಮಾ ಆನಂದ್‌ ಅವರಿಗೆ, ಸ್ನೇಹಿತ ಕುಮಾರರಿಗೆ ಮತ್ತು ಪರಿಚಯವಿಲ್ಲದ ಆದರೂ ಓದಿ ಪ್ರತಿಕ್ರಿಯಿಸಿದ ಪಾರ್ಥಸಾರಥಿ ಅವರಿಗೆ ವಂದನೆಗಳು.

ಸಂಗೀತ ಸಾಧನೆಗೈದ ಎಸ್‌ ಪಿ ಬಿ ಯವರ ಅಂತ್ಯ ವ್ಯಥೆಯ ಕತೆ. ಇದನ್ನು ಯಾರೂ ಮರೆಯರು. ಎದೆ ತುಂಬಿ ಹಾಡಿದ ಈ ಮಹಾನ್‌ ಮಾನವಂತ; ಮಾನವೀಯ ಪರ್ವತ ಅಚಲ ಹಿಮಾಚಲ, ಎಂದೂ ಮುಗಿಯದ ಮತ್ತು ಮರೆಯದ ಹಾಡು.

– ಹೆಚ್ಚೆನ್‌ ಮಂಜುರಾಜ್‌, 9900119518

Santosh K
Santosh K
3 years ago

ಸ್ವರ ಸಾಮ್ರಾಟ ಎಸ್. ಪಿ. ಬಿ. ಯವಾರ ಕುರಿತು ಬರೆದ ಲೇಖನ ಅದ್ಬುತ ಮಂಜೂರಾಜ್ ಸರ್.ತಮ್ಮ ಲೇಖನ ಆ ಮಹಾನ್ ಗಾನ ಗಂಧರ್ವರಿಗೆ ಸಲ್ಲಿಸಿರುವ ಶ್ರದ್ದಾಂಜಲಿ

7
0
Would love your thoughts, please comment.x
()
x