ಸದ್ದಿಲ್ಲದೇ ಒಳ ನುಗ್ಗಿದವನಿಗೆ
	ಭದ್ರವಾಗಿ ಮುಚ್ಚಿ, ಕೀಲಿ ಹಾಕಿದ್ದ
	ನನ್ನೆದೆಯ ಗುಬ್ಬಿ ಬಾಗಿಲನು
	ನಿನ್ನದೇ ಸ್ವಂತ ಸ್ವತ್ತೆಂಬಂತೆ
	ರಾಜ ಗಾಂಭೀರ್ಯದಲ್ಲಿ ತೆರೆದು 
	ಸದ್ದಿಲ್ಲದೇ ಒಳನುಗ್ಗಿ, 
	ಸಿಂಹಾಸನಾರೂಢನಾದೆಯಲ್ಲೋ
	ನಿನಗದೆಂತಹ ಸೊಕ್ಕು…?
	ಇಷ್ಟಾದರೆ ಸಹಿಸಿಕೊಳ್ಳುತ್ತಿದ್ದೆ
	ಪಾಪ, ಸುಸ್ತಾಗಿದ್ದಿರಬಹುದೇನೋ
	ಕುಳಿತು ಕೊಂಚ ಸುಧಾರಿಸಿಕೊಳ್ಳಲಿ ಎಂದು
	ಆದರೆ ಸುಮ್ಮನಿರದ ನೀನು
	ನನ್ನ ಕನಸುಗಳನ್ನೆಲ್ಲ 
	ವಶ ಪಡಿಸಿಕೊಂಡೆಯಲ್ಲೋ
	ನಿನಗದೆಂತಹ ಛಾತಿ…?
	ಇರಲಿ, ಜುಜೂಬಿ ಕನಸುಗಳಿಗಾಗಿ
	ಕೊರಗುವುದೇ..? ಹಾಳಾಗಲಿ 
	ಹೊಸ ಕನಸು ಹೆಣೆದರಾಯಿತು ಎಂದು
	ನನ್ನ ಮನಸಿಗೆ ಸಮಾಧಾನ ಹೇಳಿ
	ತಿರುಗಿ ನೋಡುವಷ್ಟರಲ್ಲಿ ನೀನು
	ನನ್ನ ಮನವನ್ನೇ ಆಳಲಾರಂಭಿಸಿದೆಯಲ್ಲೋ
	ನಿನಗದೆಂತಹ ಧೈರ್ಯ..?
	ಇರುತ್ತದೆ ಕೆಲವರಿಗೆ
	ಪರರ ಆಕ್ರಮಿಸಿ ಆಳುವ ತೆವಲು
	ಎಂದು ನಾನು ಸುಮ್ಮನಾದರೆ
	ನೀನು ಮೈಯನ್ನೂ ಆವರಿಸಿ
	ಮುತ್ತ ನೀಡಿ; ಮತ್ತ ಏರಿಸಿದೆಯಲ್ಲೋ
	ನಿನ್ನದೆಂತಹ ಹುಂಬತನ..!
	ಎಗ್ಗು ಸಿಗ್ಗಿಲ್ಲದೇ ನನ್ನ ಕೈ ಹಿಡಿದು
	ಐರಾವತವ ಹತ್ತಿಸಿ, 
	ಅಮರಾವತಿಗೆ ಕರೆದೊಯ್ದು
	ಸ್ವರ್ಗದ ಮೂಲೆ ಮೂಲೆಯನ್ನೂ ತೋರಿಸಿ……
	ಸಾಕು ಕಣೋ.. ಮೇರೆ ಮೀರುತ್ತಿರುವ 
	ಸುಖವನ್ನೆಲ್ಲ ಹಿಡಿದಿಡುವ ಶಕ್ತಿ ನನಗಿಲ್ಲೋ..
	ನಿನ್ನದೆಂತಹ ರಸಿಕತನ…!!!!
	-ಸಿರಿ
	
	 
	ತಾಟದ ತುಂಬ ಹಾಲು ತುಪ್ಪ
	ಬಟ್ಟಲ ತುಂಬ ಕರದ ಸಂಡಗಿ
	ನನ್ನಾಕಿ ಜೋಡಿ ಕುಂತ ತಿನ್ನಾಂಗ ಆಗೇತಿ
	ಹಾಳಾದ ಕನಸ ಕಾಣ್ಕೊಂತ ಕುಂದ್ರೂದ ಆಗೇತಿ
	ಹಸಿರು ಕಡ್ಡಿ ಸೀರಿ ತಂದ
	ಐದು ಬೆರಳ ನೀರಿಗಿ ಮಾಡಿ
	ನನ್ನ ಚಲುವಿಗಿ ಕೈಯಾರ ತೊಡ್ಸಂಗ ಆಗೇತಿ
	ಹಾಳಾದ ಕನಸ ಕಾಣ್ಕೊಂತ ಕುಂದ್ರೂದ ಆಗೇತಿ
	ಸಣ್ಣ-ಸಣ್ಣ ಸಂಗ್ತಿಗಿ ಜಗಳಾ ಮಾಡಿ
	ಮುನ್ಸಿಕೊಂಡ ಮ್ಯಾಲ ರಮೀಸಿ
	ನನ್ನ ಚಲುವಿಗಿ ತೆಕ್ಕೆ ಬಡದ ತಬ್ಬಂಗ ಆಗೇತಿ
	ಹಾಳಾದ ಕನಸ ಕಾಣ್ಕೊಂತ ಕುಂದ್ರೂದ ಆಗೇತಿ
	ಜೋಡ ಎತ್ತಿನ ಚಕ್ಕಡಿ ಹೂಡಿ
	ಅದರಾಗ ಹೂವಿನ ಗಾದಿ ಹಾಸಿ
	ನನ್ನ ಚಲುವಿ ಜೋಡಿ ಕುಂತ ಹೋಗಂಗ ಆಗೇತಿ
	ಹಾಳಾದ ಕನಸ ಕಾಣ್ಕೊಂತ ಕುಂದ್ರೂದ ಆಗೇತಿ
	ಹೂವಿನ ತ್ವಾಟಕ ಒಬ್ಬ ಹೋಗಿ
	ಹತ್ತಾರ ತರಾ ಹೂವ ಜೋಡ್ಸಿ
	ಕೈಯಾರೆ ಕಟ್ಟಿ ನನ್ನ ಚಲುವಿಗಿ ಮುಡ್ಸಂಗ ಆಗೇತಿ
	ಹಾಳಾದ ಕನಸ ಕಾಣ್ಕೊಂತ ಕುಂದ್ರೂದ ಆಗೇತಿ
	ಗುಡ್ಡದ ಮ್ಯಾಲ ಇಬ್ಬರ ಹೋಗಿ
	ದಣಿಯುವಂಗ ಆಟಾ ಆಡಿ
	ಕಣ್ಣ ಮುಚ್ಚಿ ನನ್ನ ಚಲುವಿನ ಹಿಡಿಯುವಂಗ ಆಗೇತಿ
	ಹಾಳಾದ ಕನಸ ಕಾಣ್ಕೊಂತ ಕುಂದ್ರೂದ ಆಗೇತಿ
	ಅವಳಿ ಜವಳಿ ಮಕ್ಕಳ ಹಡೆದು
	ಜೋಡ ತೊಟ್ಟಿಲು ಕಟ್ಟಿ ತೂಗಿ
	ನನ್ನಕೆ ಜೋಡಿ ಜೋಗುಳ ಹಾಡಾಂಗ ಆಗೇತಿ
	ಹಾಳಾದ ಕನಸ ಕಾಣ್ಕೊಂತ ಕುಂದ್ರೂದ ಆಗೇತಿ
	– ಶ್ರೀಶೈಲ ಮಗದುಮ್ಮ
ನನ್ನ ತಂಗಿ
	ಎಳೆಯ ವಯಸು, ನಲಿವ ಮನಸು
	ಕಣ್ಣ ತುಂಬ ಕನಸಿದೆ;
	ಮುದ್ದು ಮುಖದ ಮುಗ್ಧ ಚೆಲುವು
	ಅಮ್ಮನಂತೆಯೇ ಅನಿಸಿದೆ!
	ಮನೆಯೊಳಗೆ-ಹೊರಗೆ ಕುಣಿವ ನಡೆಗೆ
	ಕಾಲಗೆಜ್ಜೆ ಝಣಝಣ;
	ಅವಳು ಇರದ ಒಂದು ದಿನವೂ
	ಮನೆಯು ಏಕೋ ಭಣಭಣ!
	ಅಡುಗೆ ಮನೆಯ ಸೇರಿ ಅಮ್ಮನ
	ಕಾಡಿ ಜಗಳವಾಡಲು;
	ಅಮ್ಮ ಮುನಿಯೆ ಓಡಿ ಬಂದು
	ನನ್ನ ಮಡಿಲಲವಿತಳು!
	ಹಬ್ಬ-ಪೂಜೆ ಬಂದರಂತೂ
	ಮೈಯ್ಯ ಮರೆತು ನಲಿವಳು;
	ಹಸಿರು ಲಂಗ, ಝುಮುಕಿ ಧರಿಸಿ,
	ಬಿಂದು ಇಟ್ಟು, ಬಳೆಯ ತೊಟ್ಟು,
	ತಾರೆಯಂತೆ ಹೊಳೆವಳು!
	ಒಂದು ಕ್ಷಣದ ಕೋಪದಲ್ಲಿ
	ಮುನಿದು ಒರಟನಾಗುವೆ;
	ಅವಳ ಕಣ್ಣ ಹನಿಗೆ ಸೋತು
	ಮುತ್ತನಿಟ್ಟು ರಮಿಸುವೆ.
	ಜಾತ್ರೆಯಲ್ಲಿ ಕೈಯ್ಯ ಹಿಡಿದು
	ನಡೆವ ಮುದ್ದು ಮಗುವು ನೀ;
	ನನ್ನ ಮನವು ನೊಂದ ಕ್ಷಣದಿ
	ನೋವ ಮರೆಸೊ ನಗುವು ನೀ..
-ವಿನಾಯಕ ಭಟ್,
					


(Y) (Y) (Y)
ಮೂರು ಕವನಗಳು ಚೆನ್ನಾಗಿವೆ.ವಿನಾಯಕ ಭಟ್ ಬಹಳ ಚೆಂದ ಬರೆದಿದ್ದೀರಿ.
ಧನ್ಯವಾದ ನೂರುಲ್ಲ ತ್ಯಾಮಗೊಂಡ್ಲು ಅವರೇ 🙂