ತಾರೆ
	ಬದುಕು 
	ನೆನಪಿನಾ ಜೋಳಿಗೆಯ ಸರಕು
	ಆ ನೆನಪಿಗೂ ಬೇಕಿದೆ ಆಸರೆ 
	ಮಿನುಗುವುದೇ 
	ಮಿಂಚಿ ಮರೆಯಾದ ಆ ತಾರೆ.. 
	ಹೊಳೆಯುವುದೇ 
	ಮಿಂಚಿ ಮರೆಯಾದ ಆ ತಾರೆ..
	ನೆನಪಿನಾ ಬಾಣಲೆಗೆ ಹಾಕಿದಳು
	ಒಲವೆಂಬ ಒಗ್ಗರಣೆ 
	ಹಾಳಾಗಿದೆ ಹೃದಯ.. 
	ಸರಿಪಡಿಸಲಾರದು 
	ಯಾವುದೇ ಗುಜರಿ ಸಲಕರಣೆ
	ಅಂದು ಮನತಣಿಸಿದ್ದ 
	ಹಾವ-ಭಾವ ಮಾತುಗಳ ಸಮ್ಮಿಲನ 
	ಇಂದೇಕೊ ಕಾಡುತಿದೆ 
	ಖಾಲಿ ನೀರವತೆಯ ಮೌನ
	ಶುರುವಾಗಿದೆ ಅವಳೊಂದಿಗಿನ 
	ಆ ನೆನಪುಗಳ ಪ್ರಹಾರ.. 
	ಮನದ ಪಡಸಾಲೆಯಲ್ಲೆಲ್ಲೋ 
	ನಿರಂತರ ಮರುಪ್ರಸಾರ.
	ಕತ್ತಲಲ್ಲಿ ಮುದುಡಿದ್ದ ಮನಸಿಗೆ 
	ನಗುವೆಂಬ ಲಾಟೀನು ಹಿಡಿದು ತೋರಿದಳು ದಾರಿ 
	ನಾನಾಗಿಹೆ ಈಗ 
	ಆ ನೆನಪುಗಳ ಚಿಂದಿ ಆಯುವ ಭಿಕಾರಿ
	ಬದುಕು 
	ಬೇಕು-ಬೇಡಗಳ ಮಿಶ್ರಣ 
	ಆದರೂ 
	ಬೇಡವೆಂದು ಸರಿದು ದೂರಾಗುವ ಮೊದಲು 
	ಕೊಡಬಹುದಿತ್ತು 
	ಒಂದು ಪುಟ್ಟ ಸಕಾರಣ
	ಮೊದಲ ಅಧ್ಯಾಯಕೇ ಆಲಿಸಿತೇ 
	ಕವಿಯ ಮನಸು ? 
	ಮುನ್ನುಡಿಗೇ ಅಂತ್ಯವಾಯಿತೇ 
	ಕೃತಿ ಯ ಸೊಗಸು ? 
	ಆಲಾಪನೆಗೇ ನಿಲ್ಲುವುದೇ 
	ಸಂಗೀತದ ಸ್ವಾರಸ್ಯ ? 
	ಮುಂದುವರೆಸಲು ಅದೇನು 
	ವಿವೇಚಿತ ಆಲಸ್ಯ ?
	ಹೃದಯ ಹಟಮಾರಿ 
	ಮನಸು ಅಲೆಮಾರಿ 
	ಅದಕೇಕೆ 
	ಖಾಲಿ ಬಾನಂಗಳವ ದಿಟ್ಟಿಸುವ ಉಸಾಬರಿ 
	ಆದರೂ 
	ಹಳೆಯ ನೆನಪುಗಳ ಕಲಕುತ 
	ಯೋಚಿಸಿದೆ ಹೃದಯ…
	ಮತ್ತೆ ಮಿನುಗುವುದೇ 
	ಮಿಂಚಿ ಮರೆಯಾದ ಆ ತಾರೆ? 
	ಮತ್ತೆ ಹೊಳೆಯುವುದೇ 
	ಮಿಂಚಿ ಮರೆಯಾದ ಆ ತಾರೆ ?
– ನಂದನ್ ಜಿ
	ಕೆರೆಯಂಚಿಗೆ ಕುಳಿತು ಎಸೆದ ಕಲ್ಲುಗಳಿಂದುಂಟಾದ
	ಅಲೆಗಳನ್ನೆಣಿಸಿ ಹೇಳಬಲ್ಲೆಯಾ ಗೆಳತಿ?
	ಅಷ್ಟೇ ಸಂಖ್ಯೆಯ ನಿನ್ನ ಬಗೆಗಿನ ನೆನಪುಗಳು
	ನನ್ನೆದೆಯ ಕೊಳದಲ್ಲಿ
	ನಿನ್ನ ಜೊತೆಗೂಡಿ ನಡೆದ ಹೆಜ್ಜೆಗಳು ಮರೆಯಾಗಿಲ್ಲ
	ನೀ ನಕ್ಕು ನಲಿದ ಒಲುಮೆಯಂದದಿ ಉಲಿದ
	ಮಳೆಯ ಮುತ್ತಿಗೆ ತಣಿದ ಧರಣಿಯಂದದ ಕ್ಷಣವು
	ರಾತ್ರಿಯಾಗಸಕ್ಕೆ ಪೋಣಿಸಿದ ತಾರೆಗಳು
	ನಿನ್ನ ಕಣ್ಣುಗಳ ತದ್ರೂಪವೆಂದು ವರ್ಣಿಸಿ ಬರೆದ ಪದ್ಯ
	ನಿನ್ನ ಮುತ್ತಿಗೆ ಸೋತ ತುಟಿಗಳು,ಮಲ್ಲಿಗೆ ತೂಕದ ಮನಸು
	ನಭದ ಹೊಟ್ಟೆ ಸೀಳಿ ಸುಳಿವ ಮಿಂಚು
	ನಿನ್ನ ನೋಟದಿ ಬೆರೆತು ವಸಂತಕಾಲದ ಐಸಿರಿಯ ಹೊತ್ತು
	ಚಿಗುರೊಡೆದ ಬಯಕೆ,ಹಗುರಾದ ಮನಕೆ ಬೆರಕೆಯಾದ ಕ್ಷಣವು
	ಹೀಗೆ ಪುಂಖಾನುಪುಂಖವಾಗಿ ನುಗ್ಗುತಿವೆ ಸಲಿಲವಾಗಿ
	ಕಣ್ಣ ರೆಪ್ಪೆಗಳಿಗೆ ಪ್ರತಿನಿತ್ಯ ಜಳಕ, ನಿನ್ನ ನೆನೆದುದರ ಫಲವಾಗಿ
	— ರನ್ನ ಕಂದ
	ಮಲೆಹೆಗ್ಗಾಡಿನ ಹುಲಿಬೇಟೆ ಮತ್ತು ಕಾಡುಸಿದ್ದಿಗಳು
	ಬಂಗಾರದ ತನುಮಿಂಚನು
	ಥಳ-ಥಳ ಮೇಳೈಹಿಸುತ್ತ ಬಂದಿತು
	ಸೂಚನೆ ನೀಡದೆ
	ಬೆಳ್ಳಿಮುಗಿಲಿನಂತಹ 
	ಹತ್ತಿಸ್ಪಂಜಿನಂತಹ
	ಹೆಜ್ಜೆಗಳನಿಟ್ಟು
	ನೇಸರನ ಹೊಂಕಿರಣಗಳು
	ಸಂಜೆಯ ತಟ್ಟಿರಲು
	ದಿಂಗತದಾಚೆ ಕಪ್ಪುಮುಸುಕು
	ಇಳೆಗೆ ತಬ್ಬುತ್ತಿರಲು
	ತುಂತುರು ಮಳೆ ಅಭಿಷೇಕದ ಗೊಂಚಲು
	ತುಂಬು ಕುರವಂಜಿ ಹೂಗಳಲ್ಲಿ
	ಮಲೆಯ ಸಹ್ಯಾದ್ರಿ ಶೋಬಿಸುತ್ತಿರಲು
	ಕಾಡುಸಿದ್ದಿಯ ದನಗಾಹಿಯೋರ್ವ
	ಅಲೆಯುತ್ತಿದ್ದ ಹರ್ಷದಿ
	ಮಲೆಗಳ ಹೆಗ್ಗಾಡಿನ ಕಿಂಡಿಯಲಿ
	ಸಂಚು ಹಾಕುತ್ತಿದ್ದ ವಂಚನೆ
	ತಾಮ್ರವರ್ಣದ ಕಂಗಳ 
	ಹುಲಿ ಹಠಾತ್ತನೆ ಹಾರಿತ್ತು
	ಅವನ ಶಿರಬುಡವನೆ
	ಕಿತ್ತು ತಿಂದಿತ್ತು ಕ್ಷಣಾರ್ಧದಲ್ಲಿಯೆ
	ಮಲೆಯ ಉತ್ತುಂಗದವರೆಗೂ ಕಾವಳ
	ಚಾದರಿಸಿದೆ
	ನಸುಕಿನ ಕಾಡುಸಿದ್ದಿ ಒಡತಿ
	ಓಡಿ-ಓಡಿ ಬಂದಳು
	ಗೊತ್ತುಸೇರುವ ಹಕ್ಕಿಗಳ
	ತೋರಿಸಿ ಕಂದನಿಗೊಂದು
	ತುತ್ತು ನೆರೆಯಲು
	ಅವಳಾದುನಿಕಗೊಂಡ
	ತುಂಬುಗೆಜ್ಜೆಗಳ ಸದ್ದಿನಲಿ
	ಹುಲಿಸರಹದ್ದು ತಿಳಿಯಲಿಲ್ಲ
	ತಡವಿದ ಬೆರಳುಗಳ ಸೂಚನೆ 
	ನೆಲೆದಲಿ ಮೂಡಿದ ಹೆಜ್ಜೆಗುರುತುಗಳು
	ಅರ್ಥವೆಲ್ಲವೂ ಕ್ರೂರತೆ ಸಾಕ್ಷಿಗಳಲಿ
	ನೆತ್ತರು ಸಣ್ಣ ಝರಿಯೊಳಗೆ
	ಹರಿಯುತ್ತಿತ್ತು ಮತ್ತೆ
	ಕಾಡು ಸಿದ್ದಿಯ ಒಡತಿ
	ನಡುವಿಗೆ ಗುರಿಯಿಕ್ಕಿತು
	ಸೀಗೆಪೊದೆಯೊಳಗಿನ 
	ಸೂಚನೆ ಅರಿತ ಕಾಡು ಸಿದ್ದಿ
	ಯೋಚಿಸದೆ ಬಿಟ್ಟಳು 
	ಹಸಿರು ಮದ್ದಿನಬಾಣ
	ಎದೆಗೆ ಬಿಟ್ಟ ಗುರಿಕಾಲಿಗೆ ತಾಗಿತು 
	ಅಲ್ಲಿ ದೊಡ್ಡ ಅನಾಹುತವೇ ನಡೆದು
	ನೋವಿನೊಳಗೂ ಜಿಗಿಯಿತು ಮುದಕಹುಲಿಯು
	ಹತ್ತಿರ ಹಾರಿದ ಹುಲಿಯ ಕಂಡು 
	ಕಿರುಚಿತು ಮಗು ಕಾಡುಮಲ್ಲಿಗೆ ಬಳಿಯಲಿ 
	ಜೋತುಬಿದ್ದು ಅಳುತ್ತಿತ್ತು ಎಳೆಕಂದ
	ಅಗ್ನಿಯ ಬೊಂಬನು ಹತ್ತಿಸಿದ್ದಳು
	ಹುಲಿಮೂತಿಗೆ ಇಟ್ಟಳು ಗಾಬರಿಯಲಿ
	ಶಕ್ತಿ ಕ್ರೂರತೆ ಪ್ರದರ್ಶಿಸಿತ್ತು
	ಮತ್ತೆ ದಾಳಿಮಾಡಿತ್ತು
	ಕತ್ತಲು ಸುತ್ತಲು ಆವರಿಸಿತು
	ಕಾವಳ ಕಳೆದು
	ಹಾಲ್ದಿಂಗಳು ಮೂಡಿತ್ತು
	ಕಾಡು ಸಿದ್ದಿನಾಯಕನೇ ಬಂದ 
	ಬಂದೂಕುಗಳ ಹಿಡಿದು 
	ಹರ್ಷವಾಗಿತ್ತು ಕಾಡುಸಿದ್ದಿಹೂ ಎದೆಯೊಳಗೆ
	ವಿಲ-ವಿಲನೇ ಒದ್ದಾಡುತ್ತಿತ್ತು ಹುಲಿ
	ದೂರದಮಲೆ ಪೊದೆಗುಹೆಯೊಳಗೆ
	ರಕ್ತಗುರುತುಗಳಲಿ ನರಳುತ್ತ
	ಮಲಗಿತ್ತು ಬಹು ಯಾತನೆಯಲಿ
	ಮರೆಗುಳಿಗೆ ಮದ್ದನಿಟ್ಟನು
	ಶಿಶಿರ ಅಲೆದನು
	ತಿಂಗಳ ಬೆಳಕಿನ ತುಂಬ
	ತಂದನು ಜಲಪಾತಗಳ ತುದಿಯಿಂದ 
	ಸಂಜೀವಿನಿಯ ಎಲೆಗಳ
	ಅರೆದು ಹಚ್ಚಿದನು
	ಮಲೆಮುಂಜಾನೆ ಮಂಜಿಗೆ
	ಮತ್ತಷ್ಟು ಜೀವವ ಪಡೆಯಿತು
	ಧನ್ಯತೆಯ ಮರೆತು
	ಇವನ ಮೇಲೆದಾಳಿ ನಡೆಸಿತ್ತು..!
	ಮರಿಹುಲಿಗಳ ಜೊತೆಸೇರಿ 
	ಹಂಬಳ್ಳಿನೇಯ್ದ ಬಲೆಯಲಿ ಒಂದೇ
	ಕುಣಿಕೆಗೆ ಸೆರೆಹಿಡಿದನು
	ಮುದಕ ಹುಲಿಯನು
	ತನ್ನ ಹಸಿರು ಕುಟಿರದಲಿ 
	ತನ್ನ ಹೆಂಡತಿಮಕ್ಕಳ ಜೊತೆ 
	ಚಿಕಿತ್ಸೆಯ ನೀಡಿದನು ಅಲ್ಲಿಯೂ
	ಹಸಿವಿಗೆ ಬಂಗಾರದ ಬಣ್ಣದಜಿಂಕೆ
	ಬಾಡನು ತಂದುಕೊಟ್ಟನು
	ಮನುಷ್ಯನ ಜೊತೆಪಳಗಿದ
	ಹುಲಿಯು ಚೇತರಿಸಿಕೊಂಡು
	ಎಲ್ಲಾರು ಹಗಲಲಿ ಮಲಗಿರುವಾಗ
	ಬಹುದೂರದ ಕಾಡಿಗೆ
	ಹರ್ಷದಿ ಹೊರಟಿತ್ತು
	ಕಂಡಿತ್ತು ವಿಜ್ಞಾನಿಗಳ ಲ್ಯಾಬಿನಲಿ
	ಪ್ರಯೋಗ ಸಂಶೋದನೆಗೆ ವಸ್ತುವಾಗಿ
	ಸ್ವಲ್ಪ ದಿನಗಳಲ್ಲಿಯೆ 
	ಮಲೆಹೆಗ್ಗಾಡಿನಲಿ
	ಮರಿಗಳು ನಾಡಿನ ಗೋಜಿಗೆ ಬರದೆ
	ತಾಯಿ ತವಕದಲಿ ಮಿಂಚುಗಣ್ಣುಗಳ ಮಿಟುಕಿಸುತ್ತಿದ್ದವು..
	-ಸಿಪಿಲೆನಂದಿನಿ
					

ಕವನಗಳು ಚೆಂದವಾಗಿವೆ.