ಹೀಗೊಂದು ಹಾದಿ.!!
	ಬಿಮ್ಮನೆ ಧ್ಯಾನಸ್ಥ ಭಂಗಿಯಲ್ಲಿ
	ಹರವಿಕೊಂಡ ಹಾದಿ.,
	ಅದೆಷ್ಟೋ ಚೈತ್ರಗಳ 
	ಹೂ ಅರಳುವಿಕೆಯನ್ನು ಕಂಡಿದೆಯಂತೆ.
	ಮುಳ್ಳುಗಳ ಸೋಕಿ ಸುರಿದ
	ನೆತ್ತರ ಪಸೆಯನ್ನು ಇಂಗಿಸಿಕೊಂಡಿದೆಯಂತೆ.
	ಹಾದಿ ಮೀರಿ ಬಂದವರೆಷ್ಟೋ
	ತಾವಾಗೇ ಉಳಿಯದೇ ಮಾರ್ಪಾಡಾಗಿದ್ದಾರೆ
	ಎನ್ನುವ ವರ್ತಮಾನ.!!
	ಮೌನವನ್ನೇ ಮೈಮೇಲೇರಿಕೊಂಡಂತೆ
	ನಿರ್ಲಿಪ್ತವಾಗಿ ಮಲಗಿದೆ ಹಾದಿ
	ಬದಲಾವಣೆಗಳಿಗೆ ಸಾಕ್ಷಿಯಾಗಿ.!!
	 ಉಬುಕಿ ಬಂದ
	ಹಸಿವ ನುಂಗಿ
	ಬಸವಳಿದವರೆಷ್ಟೋ
	ಹಾದಿಯ ಕ್ರಮಿಸಿ ಬಂದು
	ನೋಡಿದರೆ,
	ಹಸಿವೇ ರಾಗವಾಗಿದೆಯಂತೆ.!!
	ಅಳಲುಗಳೊಳಗೆ ತಾ ಮುಳುಗಿ
	ನಿಶ್ಚಲ ಗೋಡೆಗೊರಗಿ
	ಬಿಟ್ಟ ನಿಟ್ಟುಸಿರು,
	ಹಾದಿಯ ಕ್ರಮಿಸಿದೊಡನೆ
	ಕೊಳಲಾಗಿದೆಯಂತೆ.!!
	ಯುದ್ಧ ಮುಗಿದು ಸೃಷ್ಟಿಯಾದ 
	ಹೊಸಯುಗದ ಆದಿಯಲ್ಲಿ
	ಹರಿದ ನೆತ್ತರು ಆವಿಯಾಗಿ
	ಮೂಡಣ ರವಿ
	ನೆತ್ತರ ಕಾರಿಕೊಂಡನಂತೆ.!!
	ಯುದ್ಧ ಮುಗಿದು ಅವಸಾನವಾದ
	ತಾನದಲ್ಲಿ ಪ್ರವಹಿಸಿದ್ದ ನೆತ್ತರು
	ಆವಿಯಾಗಿ ಬಾನು ಸೇರಿ, 
	ಪಡುವಣ ಸೂರ್ಯ
	ನೆತ್ತರ ಮಡುವಿನಲ್ಲಿ ಬಿದ್ದನಂತೆ.
	ಹಾದಿಯ ಕ್ರಮಿಸಿ ಬಂದಾಗ,
	ನೆತ್ತರೇ ಬಣ್ಣವಾದಂತೆ.!!
	ಎಷ್ಟೆಲ್ಲಾ ಬದಲಾವಣೆಗಳನ್ನು
	ತಂದೊಡ್ಡಿದ ಹಾದಿ,
	ನಿರ್ವಿಕಾರವಾಗಿ ಚಾಚಿಕೊಂಡಿದೆ
	ಎಷ್ಡೋ ತಲೆಮಾರುಗಳಿಗೆ ಮೈಚಾಚಿ,
	ಕಾಲವೇ ಹಾದಿಯಾದಂತೆ.!!
-ಡಿ.ವಿ.ಪಿ.
	ಆಯ್ಕೆ
	ನನ್ನ ದೋಚಿದರು
	ನಾ ದೋಚಿದೆನೆ೦ದು
	ನಿಮಗೇಕೆ ನಗು?
	ಒಡವೆ ಬ೦ಗಾರ ಹೋಯಿತು.
	ಕೇಳಿ,
	ಬುದ್ಧಿ, ಪ್ರತಿಭೆ
	ಬದುಕುವ ಹಕ್ಕನ್ನಲ್ಲ!
	ನನ್ನ ಕೊಬ್ಬು ಕರಗಿತು
	ನಾ ಬಿದ್ದೆನೆ೦ದು
	ನಿಮ್ಮ ನಾಲಗೆ ಏಕೆ ಜೋರು?
	ಅಹ೦ ದೊಡ್ಡಸ್ತಿಕೆ ಸತ್ತಿತು.
	ಕೇಳಿ,
	ವಿನಯ,ಸ್ವಾಭಿಮಾನ
	ಆನ೦ದವನ್ನಲ್ಲ!
	ನನ್ನ ಮನೆ ಬಿತ್ತು
	ನಾ ಸೋತೆನೆ೦ದು
	ನಿಮ್ಮ ಹೊಟ್ಟೆಯಲ್ಲೇಕೆ ಉರಿ?
	ಅಧಿಕಾರ ಲಾಲಸೆ ಬತ್ತಿತು.
	ಕೇಳಿ,
	ಪ್ರಯತ್ನ,ಭರವಸೆ
	ಭವಿಶ್ಯವನ್ನಲ್ಲ!
	(ನೇಪಾಳದ ಭುಕ೦ಪದಲ್ಲಿ ನಿರಾಸೆಯಾದವರನ್ನು ನೆನೆದು)
	* ಉರ್ಬಾನ್ ಡಿಸೋಜ.
	ಹಾರೈಕೆ
	—————
	ಕೆಲ ಭಗ್ನ ನಿನ್ನೆಗಳು
	ಕೆಲ ಭವ್ಯ ನಾಳೆಗಳು
	ನಡುವೆ ಇಂಥದ್ದೇ
	ಒಂದು ಭಣಭಣ ಇಂದಿನಂದು
	ಒಂದಷ್ಟು ಸ್ಥಾಯಿ-ಸಂಚಾರಿಯೆರಡೂ ಆದ 
	ಕಣ್ತುಳುಕುವಷ್ಟು ಭಾರ ಭಾವ
	ಹೊರುತಾ ಕಂಪಿಸಿದ ಆ ಬೊಗಸೆಯಡಿ
	ನಾ ಬೊಗಸೆಯೊಡ್ಡಿದ್ದು.
	ದಾಟಿ ಸುರಿದುಹೋದ ಅಷ್ಟೂ ಆ ನೋವು
	ಹರಿದು ಭೋರ್ಗರೆದು
	ಒಂದಷ್ಟು ಕೆರೆಗಳಾಗಿ
	ಒಂದಷ್ಟು ಕಡಲ ಸೇರಿ
	ಆವಿಯಾಗಿ, ಮೋಡವಾಗಿ
	ಸುರಿದು ಮತ್ತೆ
	ಅದೇ ಆ ಬೊಗಸೆ ಸೇರಿದ ಸುದ್ಧಿ ಬಂತು.
	ನಿಜವೇ ಇದೊಂದು ತೂತುಬೊಗಸೆ.
	ಇಳಿಸಿಕೊಂಡೂ ಎಲ್ಲ ಒಳಗೆ,
	ಉಳಿಸಿಕೊಳುವುದಾಗಿಲ್ಲ,
	ಸಂತೈಸಿ, ಪರಿಷ್ಕರಿಸಿಯಿನ್ನೇನೋ
	ಗಳಿಸಿಕೊಡುವುದೂ ಆಗಿಲ್ಲ.
	ಕ್ಷಮೆಯಿರಲಿ ಈ ಬೊಗಸೆಗೆ.
	ಆಕಾಶವೇ ನೋಡುವ, 
	ನೆಲ ನೋಡಲರಿಯದ
	ಅಂಗೈ ಗೆರೆಗಳಲಿ
	ಕೊಡುವ, ಕೊಟ್ಟುಕೊಳುವ ಭಾಗ್ಯ ಬರೆದಿಲ್ಲ…
	ಹೇಳಲೇನೂ ಇಲ್ಲ,
	"ನಿನ್ನಂಗಳವೆಂದೂ ಮತ್ತೆ 
	ನನ್ನ ಹೆಸರಿನ ಬೆಳಗು ನೋಡದಿರಲಿ."
–ಅನುರಾಧಾ ಪಿ ಎಸ್.
*****
					

ಚಂದದ ಕವನಗಳು ಪ್ರಮೋದ್ ಮತ್ತು ಅನುರಾಧಾ ಅವ್ರೆ 🙂
mooroo kavanagalu ishtavaadavu….