ಇವತ್ತಿನ ಕವಿತೆಗಳು.
	1.
	ಇವತ್ತಿನ ರಾತ್ರಿ ಮುಗಿದು ಹೋಗೋದ್ರೊಳಗೆ
	ಚುಕ್ಕಿಗಳೆಲ್ಲ ಲೆಕ್ಕ ಚುಕ್ತಾ ಮಾಡಿ
	ಪುಸ್ತಕ ಮುಚ್ಚೋದ್ರೊಳಗೆ
	ಚಂದ್ರ ಪಾಳಿ ಮುಗಿಸಿ 
	ಖೋಲಿ ಸೇರೋದ್ರೊಳಗೆ
	ಬಿಲ ಬಿಟ್ಟ ಹಾವು
	ಇಲಿ ಬಲಿ
	ನುಂಗಿ ನೊಣೆದು
	ತೇಗೋದ್ರೊಳಗೆ
	ಗಿಡುಗನಂತವನು ಗಿಣಿಯಂತೋಳ ಜೊತೆ
	ಸುರತ ನಡೆಸಿ
	ಸ್ಖಲಿಸಿ ಬಿಡೋದ್ರೊಳಗೆ
	ಸೂರ್ಯ ಅನ್ನೋ ಮೂಧೇವಿ
	ಬೆಳೆಗ್ಗೆ ಬಂದು  ಬ್ಯಾಟರಿ
	ಹಾಕಿ ಬೆಳಕ ಹರಿಸೋದ್ರೊಳಗೆ
	ತಿಕ ಸುಟ್ಟ ಬೆಕ್ಕು
	ಮುಂಜಾನೆ ಮಿಯಾಂವ್ ಅಂತ
	ಹಿಮ್ಮಡಿ ನೆಕ್ಕೋದ್ರೊಳಗೆ
	ಹೀಗೇ ಸುಮ್ಮ ಸುಮ್ಮನೇ
	ಸತ್ತು
	ಹೋಗಿಬಿಡಬೇಕು
	ಮತ್ತೆ
	ಹೊಸದಾಗಿ ಹುಟ್ಟೋದಿಕ್ಕೆ
	ಅಂತ ಅಂದುಕೊಂಡೆ!
	2.
	ಕವಿತೆಗಳು
	ಸರಳವಾಗಿದ್ದರೆ ಸಾಕು
	ಭಾಷೆಯ ಬಾರಕೆ
	ಕುಸಿದು ಹೋಗದಂತಿರಬೇಕು
	ಹೇಳಬೇಕಾದ್ದನ್ನ
	ನೇರವಾಗಿ
	ಕಟುನನ್ನು ಕಟುಕನೆಂತಲು
	ಸಂತನನ್ನು ಸಂತನೆಂತಲು
	ಮುಖಕ್ಕೆ
	ರಾಚಿದ ಹಾಗೆ
	ಹೇಳಿಬಿಡಬೇಕು
	ಅನ್ನೋದು ನನ್ನ ನಂಬಿಕೆ
	ಓದುವವರಿಗೆ ಅರ್ಥವಾದರೆ
	ಅದೇ ನನ್ನ ಸಫಲತೆ
	ನನ್ನದು ಬೀದಿ ಬದಿಯ ಬಾಷೆ 
	ಅಂತ ಯಾರಾದರು ಹೇಳಿದರೆ
	ನನಗೆ ಸಂಕೋಚವೇನಿಲ್ಲ
	ನಾನು ಹುಟ್ಟಿದ್ದೇ ಅಲ್ಲಿ
	ಪದ್ಯಗಳನ್ನೋದಲು
	ಪಕ್ಕದಲಿ
	ಡಿಕ್ಷನರಿ ಇಟ್ಟುಕೊಳ್ಳಬೇಕೇನು?
	ನನ್ನ ಜನರ ನೋವುಗಳೇ
	ಒಂದು ಸಂವಹನ ಮಾದ್ಯಮವಾಗಿರುವಾಗ
	ಅವರ ಕಣ್ಣೀರೇ ಅಕ್ಷರಗಳಂತಿರುವಾಗ
	ಶಿಷ್ಟಬಾಷೆಯ
	ಹಂಗಾದರು ನನ್ನಂತವನಿಗ್ಯಾಕೆ ಬೇಕು?
	ಕು.ಸ.ಮಧುಸೂದನ್
ಹಲಿಗೆ ಬಡಿಯುವಾಸೆ ನನಗೆ!!
	ಹಲಿಗೆ ಬಡಿಯುವರನ್ನು ನೋಡಿದಾಗ
	ಹೊಲೆಯನಾಗಿ ಯಾಕೆ ಹುಟ್ಟಲಿಲ್ಲವೆನಿಸುತಿದೆ ನನಗೆ..
	ಏನು ತಲ್ಲೀನತೆ, ಏನು ಸೃಜನತೆ ಆ ಬಡಿತದಲ್ಲಿ..
	ಬಡಿದಂತೆ ಬಡಿದಂತೆ ಮಾಧುರ್ಯದ ಮೋಹನ
	ಕೇಳಿದಂತೆ ಕೇಳಿದಂತೆ ಹೃದಯ ಮಿಡಿತವೂ ಪಾವನ…
	ಆಹಾ ಅದೆಂಥ ಬಡಿತ
	ಆ ಬಡಿತಕ್ಕೆ ಅಣಿಯಾದ ಆ ಮನುಷ್ಯನೇ ಧನ್ಯ!!
	ಮನುಕುಲದ ವಂಚನೆಗಳನ್ನೇ ಛೇಡಿಸುವ ಬಡಿತ…
	ಭೌತಿಕ ಸುಖದ ಹಿಂದೆ ಬೆನ್ನ ಹತ್ತಿ
	ನೆಮ್ಮದಿ ಕೆಡಿಸಿಕೊಳ್ಳುತ್ತಿರುವ ಮಂದಿಯ ನೋಡಿ 
	ನಗುವ ಬಡಿತ… 
	ಇದೆಂಥ ಬಡಿತ ಇದೆಂಥ ಮಾಧುರ್ಯ
	ಯಾಕಾಗಲಿಲ್ಲ ಈ ಅರಿವು ಇಡೀ ಮನುಕುಲಕೆಲ್ಲ..!
	ಯಾವ ಋಷಿಯ ಧ್ಯಾನಕೂ, ಯಾವ ಕೋಗಿಲೆಯ ಸಂಗೀತಕೂ,
	ಯಾವ ನಶೆಯ ಮತ್ತಿಗೂ, ಯಾವ ಸೂಳೆಯ ಸುಖಕೂ,
	ಕಡಿಮೆಯಿಲ್ಲ ನೀನು! ತಪ್ಪಿಲ್ಲ, ಒಮ್ಮೆ ನಾನೆಂದರೆ, ಎಲ್ಲರಿಗಿಂತಲೂ
	ನೀನೇ ಮಿಗಿಲೆಂದು!! 
	ಧನ್ಯವಾದ ಅರ್ಪಿಸಬೇಕೆನಿಸುತಿದೆ ಓ ಹಲಗೆಯೆ
	ನಿಜಕ್ಕೂ ಈ ಭ್ರಷ್ಟ ಪ್ರಪಂಚದ, ಈ ಸರ್ವಪಾಪಿ ಜನರ 
	ನಡುವಿನ ಬದುಕಿಗಿಂತಲೂ
	ನಿನ್ನ ಜೊತೆಯಲೇ ಹುಟ್ಟಿ, ನಿನ್ನ ಜೊತೆಯಲೇ ಬದುಕಿ, ನಿನ್ನ ದೇಹದ ಮೇಲೇ
	ಬೆರಳುಗಳನ್ನಾಡಿಸುತ ಉಸಿರು ಬಿಡಬೇಕೆನಿಸುವ ಆಸೆ ನನಗೆ.
	-ಶ್ರೀಮಂತ್.ಎಮ್.ವೈ
ಕಡಲೊಡಲ ನದಿ
	ನದಿ ಸೇರ ಬಯಸಿದೆ ಉಪ್ಪು ಕಡಲನ್ನ
	ಜೀವ ಹಾರಿ ಹೋಗುವ ಮುನ್ನ 
	ಉಪ್ಪಿಗೆ ಸೊಪ್ಪು ಹಾಕಿ 
	ಪ್ರತಿಭೆಯ ಹುಟ್ಟು ಹಾಕಿ 
	ಸೇರ ಬಯಸಿದೆ ಉಪ್ಪು ಕಡಲನ್ನ 
	ಸತ್ವ, ಖನಿಜ ಇಲ್ಲಿಯೇ ಹೀರಿ
	ಒಮ್ಮೆ ಉಪ್ಪು ಕಡಲ ಕಾಣಬೇಕು 
	ಕಂಡು, ಮರೆತು, ಬೆರೆತು 
	ಮತ್ತೆ ಊರಿಗೆ ಬಂದು 
	ನದಿಯಾಗಿ ಹರಿಯಬೇಕು 
	ಇಲ್ಲೇ ಕಲ್ಲು, ಮಣ್ಣೀನ ಹಾದಿಯಲ್ಲಿ ಸವೆಯಬೇಕು
	ಎಂದು, 
	ನದಿ ಸೇರ ಹೊರಟಿದೆ 
	ಜೀವ ಹಾರಿ ಹೋಗುವ ಮುನ್ನ 
	ಸೇರಬೇಕು ಉಪ್ಪು ಕಡಲನ್ನ 
	ಕಡಲಲ್ಲಿ ನದಿ ನೀರು ಕಾಣದು 
	ಊರಿಗೆ ಹಿಂದಿರುಗಿ
	ಎಲ್ಲರಿಗೂ ಬರಲಾಗದು.
	ಎಂದಾದರೂ, ಬಾಷ್ಪೀಕರಣಗೊಂಡು
	ಮೋಡಕಟ್ಟಿ, ಮಳೆಯಾಗಿ
	ಮತ್ತೆ ಮಣ್ಣಿಗೆ ಬರಬಹುದು 
	ಇಲ್ಲದಿರೆ
	ಕಡಲಲ್ಲೇ ನದಿಯಾಗಿ ಹರಿಯಬಹುದು 
	-ವೆಂಕಟೇಶ ನಾಯಕ್, ಮಂಗಳೂರು 
					


ಕವನಗಳು ಚೆನ್ನಾಗಿವೆ.