ನೀనిಲ್ಲದ ದಿನಗಳಲಿ
	ಮೌನವಾಗಿವೆ ಭಾವಗಳು
	ಮ್ಲಾನವಾಗಿವೆ ಕನಸಿನ ಬಣ್ಣಗಳು
	ಹೃದಯದ  ಸರಸಿಯಲ್ಲೇ ಅರಳಿದ
	ತಾವರೆಯ ಹೂಗಳು.
	ನೀನಿಲ್ಲದ ದಿನಗಳಲಿ ಇರುಳು
	ತಪ್ತವಾಗಿದೆ; ಪ್ರೀತಿಯ ಇನಿದನಿಗಳು
	ಸೊಂಪಾಗಿ ಹನಿಯಾಗಿ ತೊಟ್ಟಿಕ್ಕಲಾಗದೇ
	ಬತ್ತಿಹೋಗಿವೆ ಪಿಸು ಮಾತಿನ ಕುಸುಮಗಳು.
	ಹ್ಞಾಂ! ಹಾಗೂ ಪಿಸುಗುಟ್ಟಿ ನುಡಿಯಲಾಗದೆ
	ಹ್ಞುಂ, ಹೀಗೂ ಬಿಗುವಿಟ್ಟು ಸವಿ ಹೀರಲಾಗದೆ
	ಒಣಗಿವೆ ಚೆಂದುಟಿಗಳು; ಹೊರಗಿನ ನೋವಿನಲ್ಲೂ
	ಸುಖಿಸಿ ಇಹ ಮರೆಯಲೆಳೆಸುವ ಒಳಗಿನ ಅಂಗಗಳು 
	ತಟ್ಟನೆ ಕಾವೇರಿದರೂ ತಂಪಾಗದಿವೆ.
	ಗೆಳೆಯಾ, ಅಂದಿಗೆ ಬೆದೆ ಬಂದ ಸೊಕ್ಕಿನಲಿ
	ಹೆಡೆಯಾಡಿಸುತ್ತ ತಪ್ತವಾಗಿ ಹೋದ
	ಕಾಮನೆಗಳೆಲ್ಲ ಇಂದಿನ ಅರಿವಿಗೆ ತಣ್ಣಗಾಗಿ
	ಕರಗಿವೆ; ಬಿಸಿಯುಸಿರು ನಿಟ್ಟುಸಿರಾಗಿದೆ
	ರಾಗ-ರತಿಯ ನವಿರಾದ ನರಳಿಕೆಗಳೆಲ್ಲವೂ
	ಸತ್ತು ಪ್ರೇತವಾಗಿ ಸಂಚರಿಸುತ್ತವೆ.      
-ಶಿವರಾಂ ಎಚ್. ಬೆಂಗಳೂರು
ನೆನಪ ಕನಸು
	ಪಡುವಣದಿ ಗಿರಿಯು
	ಕೆಂಡ ಸಂಪಿಗೆ ಮುಡಿವಾಗ
	ಹಕ್ಕಿಯ ಹಿಂಡು ಪಟಪಟನೆ ರೆಕ್ಕೆ ಬಿಚ್ಚಿ ಚೀರಿ
	ಹಾರುವಾಗ
	ಇಳೆಗೆ ಕವಿದ ಕತ್ತಲು
	ಒಯ್ಯನೊಯ್ಯನೆ..ಮರೆಯಾಗಿ
	ಜಗವೆಲ್ಲ ಬೆಳಕಾಗಿ ಹಸಿರಿಗುಸಿರಾಗಿ
	ಹಸಿರು ತುಂಬಿದ ಗಿಡದ
	ಮೊಗ್ಗರಳಿ ಹೂವಾಗಿ
	ಬೀಸೋ ಎಳೆಗಾಳಿಯಲಿ ತಲೆದೂಗಿ ಭೃಂಗದೊಡನೆ ಬೆರೆತು
	ಜಗವ ಮರೆತು ಹೋಗಿ
	ನಿಂತ ನೀರಿನೆದೆಗೆ
	ರವಿಯಂಬು ಹೊಡೆದಾಗ
	ನೀರಲ್ಲಿ ಬಳುಕುವ
	ಎಳೆ ಬಾಳೆಮೀನೊಂದು ಮಿಂಚಂತೆ ಮಿನುಗಿ ಮರೆಯಾದಾಗ
	ಮನವು ಹಾರಿತು ನೆನಪಲೇ
	ನೆನಪ ಕಡಲಿಗೆ
	ಕಡಲ ದಡದಲಿ ನಿಂತು
	ಅತ್ತಿತ್ತ ತಡಕಾಡಿ ಹುಡುಕಿದರೆ
	ಮೂಡಿದೆ ದಡದ ತಡಿಯಲೇ ಅಡಿಯೊಂದು ಅಡಿಯಿಟ್ಟ ಕಡಲೇ.
	ನನ್ನೊಡಲೆಂದು  ಅರಿತಾಗ. ತಟ್ಟನೆದ್ದು  ಕಣ್ಬಿಟ್ಟು  ಕುಳಿತೆ
	ಅದೇ ಕೆಂಡಸಂಪಿಗೆಯ ಹೊಂಬೆಳಕು
	ಹಕ್ಕಿಯ ಹಿಂಡು ಶುಭೊದಯನ ನಿನಗೆಂದು ನುಡಿದಾಗ
	ಬರೆದ ಈ ಕವಿತೆ
	ನೆನಪಿನ ನಿನ್ನ. ಕನಸಾದಾಗ.
	-ಆಶಾ ದೀಪ
ನಿನ್ನ ಪುಟ
	ಒಮ್ಮೆಯಾದರು ಬರಿ
	ನಿನ್ನ ಪುಟದಿ 
	ಪೋನಾಯಿಸಿ ಕಟ್ ಮಾಡಿದ್ದಳು
	ಮತ್ತೆ ಸಿಗುವುದರೊಳಗೆ
	ಬರೆದು ಇವ ಸುಸ್ತಾಗಿದ್ದ
	ಸಿಕ್ಕಾಗ ಕೈಗಿತ್ತ ದೊಡ್ಡ ಕವರ್
	ಕರೆಕ್ಷನ್ ಎನ್ನುತ್ತ  ಹೊಕ್ಕಿದ್ದ
	ಗಾಜಿನ ಮನೆ
	ಓದಿ ಅವನ ಟೇಬಲ್ ಮೇಲೆಯೇ ಅವಳು
	ಬಿಟ್ಟು ಹೋದ ಪತ್ರ  ಪೂರ್ತಿ
	ಒದ್ದೆಯಾಗಿ
	ಅವನಿಗೆ ಅಕ್ಷರ ಅಸ್ಪಷ್ಟವಾದದ್ದು 
	ಯಾಕೆಂದು ಗೊತ್ತಾಗಲಿಲ್ಲ.
-ಅಕ್ಷತಾ ಕೃಷ್ಣಮೂರ್ತಿ ಬೇಲೇಕೇರಿ.
					

