ಅವಳೆಂದರೆ,,,
	ಅದ್ಯಾವುದೋ ಒಂದು ಹೊತ್ತಿನ ಮೌನ,
	ಮತ್ತೆಲ್ಲಿಂದಲೋ ತೂರಿ ಬಂದ ನಿಲ್ಲದ ಮಾತು,, ಮಚ್ಚೆಯ
	ಜೊತೆಜೊತೆಗೆ ಚೆಲುವಿನ ಗುಳಿಕೆನ್ನೆ,
	ಮರೆತಾಗ
	ಹೆಚ್ಚಾಗೇ ನೆನಪಾಗೊ ಏನೋ ಒಂದು ಗುರುತು.
	ಅವಳೆಂದರೆ,,,
	ಹಾಳಾದ ಸಂಜೆಯನೇ ರಂಗೇರಿಸೊ ಬೆಳಕು, ಮತ್ತನ್ನೆ
	ಬಗಲಲ್ಲೇ ಎತ್ತಿಟ್ಟುಕೊಂಡು ಬೀಸೋ ತಂಗಾಳಿ,, ನಿಧಾನ
	ಗತಿಯಲಿ ಏರಿಇಳಿಯೊ ರಂಗು,
	ಕಡಲಿನೆದೆಮೇಲೆ
	ಪ್ರತಿಫಲಿಸೋ ಅರೆನೀಲಿಮೋಡದ ಸಂದಿಗೊಂದಿಯ ಬಿಳಿ.
	ಅವಳೆಂದರೆ,,,
	ತುಂತುರು
	ಮತ್ತೆ ಚಳಿ ಹಿಡಿಸೊ ಆಷಾಡದ ಮಳೆ,,
	ನೆನೆವಾಗ
	ಕಾರಣವಿರದೇ ಮನಸೊಳಗೆ ಮೂಡೋ ಸಂಭ್ರಮ,
	ಜ್ವರದಮೂಲಕ ಕಾಡುವ ಹೊಸ ರಗಳೆ.
	ಅವಳೆಂದರೆ,,,
	ಮತ್ತೆ ಏನೇನೋ ಹೊಸತು,
	ಆದರೇ ಹೊಗಳಿಕೆಗೆ ಸಿಗದೆ ಅಡಗಿಕೂತ
	ಹಳೆಯ ಪದ,,
	ಅನರ್ಥದ ಕವಿತೆಗೊಂದು ಕೊನೆಯ ಸಾಲಿನ ಅರ್ಥ,
	ಪ್ರತಿಯೊಂದರಲ್ಲೂ ಪರಿಶುದ್ಧ…
	-ಕಡಲ ಬೇಟೆಗಾರ
'ಖಾಲಿ ಜೇಬು'
	ಆಗಸದ ಚಿಪ್ಪುಬೆನ್ನಿನ ಮೇಲೆ
	ತೆವಳುತ್ತಲೇ ಇವೆ ಬಿಳಿಮೋಡಗಳು
	ಗಾಳಿಯೊಂದಿಗೆ ಸಮಾನಂತರದಿ
	ಕೆಂಪು ಗಿರಗಟ್ಲೆ
	ಇರುಳಿಡೀ ಹುಟ್ಟುಹಾಕಿದ ಸುಸ್ತು
	ತೀರದಲಿ ಬಿಚ್ಚಲು ಮರೆತ ದೋಣಿ ಹಗ್ಗದ ವ್ಯಂಗ್ಯ ನಗು
	ಮೆದುಳು, ಹೃದಯ, ಕಿಡ್ನಿ
	ಜಾಗ ಕಂಡಲೆಲ್ಲ ಹೆಚ್ಚುವರಿ ಜೇಬುಗಳು 
	ಸತ್ತ ಭಾವನೆಗಳನು ಸಮಾಧಿ ಮಾಡಲು
	ಮೂರುದಿನಕೆ ನೆಟ್ಟ ಗಿಡವೂ 
	ಎಲೆ ಹುಟ್ಟಿಸಲು ಮರೆತಿದೆ
	ನಿರ್ವಾತದಲೂ ಉಸಿರು
	ಬಿಗಿಹಿಡಿವ ನಾಟಕ
	ಪ್ರತೀ ಜೇಬಿನ ಬುಡಕ್ಕೂ
	ತಳವಿರದ ಹೊಟ್ಟೆ
	ತೇಪೆ ಹಾಕಲು ಮರೆತ 
	ಅನಾದಿ ಅಜ್ಜಿಯ ಕನವರಿಕೆ
	ಒಂದೊಂದೇ ಅನುಭವಿಸಿ
	ಅಹೋರಾತ್ರಿ ಹೆತ್ತದ್ದು
	ಮತ್ತೊಂದು ಜೇಬಲಿ ಮಾಯ
	ನಾನೀಗ ಮತ್ತೆ ಖಾಲಿ ಜೇಬು….
-ರಮೇಶ್ ನೆಲ್ಲಿಸರ.
	ಕ್ಷಮಿಸು ಒಲವೆ ಮೋಹಿಸಲು ಬಾರದು ನನಗೆ!!!!!!
	ಭಾವನೆಗೆ ಬಣ್ಣವ ಎರಚಿ ಒಣಗಿಸಿದೆ,
	ಮನದ ಪಟವ ಗಾಳಿಯಲಿ ಹಾರಿಸಿ
	ಸೂತ್ರವ ಹರಿದೆ,
	ಅಮೂರ್ತ ರೂಪದ ನನ್ನ ಮೂರ್ತಿ ರೂಪಿಸಿ
	ಒಡೆದು ಚೂರಾಗಿಸಿದೆ,
	ಕ್ಷಮಿಸು ಒಲವೆ ಮೋಹಿಸಲು ಬಾರದು ನನಗೆ……
	ಮಂದ ಉರಿವ ದೀಪವ ಬರ ಬರನೆ
	ಉರಿಸಿ ಆರಿಸಿದೆ,
	ಮೊಗ್ಗಾದ ಹೂವ ಅರಳುವ ಮುನ್ನವೇ
	ಕೈಯಾರೇ ಕಿತ್ತೆ,
	ಕೊನೆಯಿಲ್ಲದ ದಾರಿಯ ತೋರಿಸಿ
	ದಾರಿಯ ಮಧ್ಯೆ ಅಡ್ಡಲಾದೆ,
	ಕ್ಷಮಿಸು ಒಲವೆ ಮೋಹಿಸಲೂ ಬಾರದು ನನಗೆ……                                                           
	-ದಿನೇಶ್ ಚನ್ನಬಸಪ್ಪ
					

