ಅಣ್ಣಾವ್ರ ಜೊತೆ ಒಂದು ಬೆಳಗ್ಗೆ: ಹೃದಯಶಿವ

ಗುರುಕಿರಣ್ ರನ್ನು ನಾವೆಲ್ಲಾ ಸಾಮಾನ್ಯವಾಗಿ ಗುರೂಜಿ ಅಂತೀವಿ. ಇಂಥ ಗುರೂಜಿ ಒಂದು ಬೆಳಗ್ಗೆ ತಮ್ಮ ಜೊತೆ ನನ್ನನ್ನೂ ಆಕಾಶ್ ಆಡಿಯೋಗೆ ಕರೆದುಕೊಂಡು ಹೋಗಿದ್ದರು. ಆಗಿನ್ನೂ ಒಂದೇ ಒಂದು ಹಾಡು ಸೈತ ಸಿನಿಮಾಗೆ ಬರೆದಿರಲಿಲ್ಲ ನಾನು. ಚಿತ್ರಗೀತೆ ಬರೆಯುವುದರ ಕುರಿತು ಆಗಷ್ಟೇ ಕಲಿಕೆಯ ಹಂತದಲ್ಲಿದ್ದ ನನಗೆ ರೆಕಾರ್ಡಿಂಗ್ ಸಂದರ್ಭದಲ್ಲಿ ಸ್ಟುಡಿಯೋ ಒಳಗೆ ಜರುಗುವ ವಿದ್ಯಮಾನಗಳ ಬಗ್ಗೆ ತೀರಾ ಕುತೂಹಲವಿತ್ತು.

ಗಾಯಕ/ಗಾಯಕಿ ಬಂದು ಸಾಹಿತಿಯ ಮುಖೇನ ಸಾಹಿತ್ಯವನ್ನು ತಮ್ಮ ಡೈರಿಯಂಥ ಪುಸ್ತಕದಲ್ಲಿ ಬರೆದುಕೊಳ್ಳುವುದು, ನಂತರ ಟ್ರ್ಯಾಕ್ ಕೇಳುವುದು, ಟ್ಯೂನಿಗನುಗುಣವಾಗಿ ತಾವು ಬರೆದುಕೊಂಡ ಸಾಹಿತ್ಯದ ಸಾಲುಗಳ ತಲೆಯ ಮೇಲೆ ನೊಟೇಷನ್ ಅನ್ನೋದನ್ನ ತಮ್ಮದೇ ಗಂಧರ್ವ ಭಾಷೆಯಲ್ಲಿ ಪುಟ್ಟದಾಗಿ ಬರೆದುಕೊಳ್ಳುವುದು, ಮತ್ತೊಂದು ಸಲ ಕೇಳುವುದು, ಅಗತ್ಯಬಿದ್ದರೆ ಯಾವ ರಾಗದಲ್ಲಿ ಕಂಪೋಸ್ ಮಾಡಿದ್ದಾರೆ ಅನ್ನುವಂಥದ್ದನ್ನ ಮ್ಯೂಸಿಕ್ ಡೈರೆಕ್ಟರ್ ಬಳಿ ಕೇಳಿಕೊಳ್ಳುವುದು, ಆನಂತರ ಒಳಕ್ಕೆ ಹೋಗಿ ಹೆಡ್ಗೆ ಹೆಡ್ ಫೋನ್ ಹಾಕಿಕೊಳ್ಳುವುದು, ಅದರ ಸೌಂಡ್ ವಾಲ್ಯೂಮ್ ಪರೀಕ್ಷಿಸಿಕೊಳ್ಳುವುದು, ತದನಂತರ ತಮ್ಮ ಬಾಯಿಗೂ ಮೈಕಿಗೂ ನಡುವಿನ ಅಂತರ ಎಷ್ಟಿರಬೇಕು ಅನ್ನೋದನ್ನ ಮ್ಯೂಸಿಕ್ ಡೈರೆಕ್ಟರ್ ಹಾಗೂ ಸೌಂಡ್ ಎಂಜಿನಿಯರ್ ಜೊತೆ ಚರ್ಚಿಸಿ ತಾವು ಹಾಡುವಾಗ ನಿಂತುಕೊಳ್ಳಬೇಕಾದ ಪಕ್ಕಾ ಪೊಸಿಸನ್ ನೋಡಿಕೊಳ್ಳುವುದು, ಒಂದೆರಡು ಮಾನಿಟರು ತೆಗೆದುಕೊಳ್ಳುವುದು,ಕಡೆಗೆ ಟೇಕ್.

ಈ ‘ಟೇಕ್’ ಅನ್ನೋದಿದೆಯಲ್ಲಾ ಆಗ ಸಾಹಿತಿಯ ಎರಡೂ ಕಿವಿಗಳು ಓಪನ್ನಾಗಿದ್ದು ಕಾಗುಣಿತ ಅಥವಾ ಉಚ್ಚಾರಣಾ ದೋಷಗಳೂ ಸಂಭವಿಸಿದರೆ ಸರಿಮಾಡುವುದು ಮುಖ್ಯವಾಗುತ್ತದೆ. ಏಕೆಂದರೆ,ಗಾಯಕ/ಗಾಯಕಿ ಶ್ರುತಿ, ತಾಳ, ಎಮೋಷನ್ನುಗಳ ಕಡೆ ಚಿತ್ತವನ್ನು ಕೇಂದ್ರೀಕರಿಸಿ ಹಾಡುತ್ತಿರಬೇಕಾದರೆ ಒಮ್ಮೊಮ್ಮೆ ಕಣ್ತಪ್ಪಿನಿಂದ ಇಂಥ ಅತಿಗಂಭೀರ ಅಪಾಯಗಳು ಸಂಭವಿಸುವುದುಂಟು. ಪರಭಾಷಾ ಗಾಯಕ/ಗಾಯಕಿಯರ ಕೈಗೆ ಕನ್ನಡದ ಮೈಕು ಕೊಟ್ಟಾಗ ಈ ಕುರಿತು ಅಪಾಯ ಡಬ್ಬಲ್ಲು. ಹೀಗೆ, ಮೇಲಿನಿಂದ ಹಂತಹಂತವಾಗಿ ಸಾಧ್ಯವಾದಷ್ಟು ಹೇಳಿಕೊಂಡು ಬಂದೆನಲ್ಲಾ, ಇಂಥವುಗಳ ಬಗ್ಗೆನೇ ಆ ಕಾಲಕ್ಕೆ ಕುತೂಹಲವಿದ್ದದ್ದು ನನಗೆ.


ಡಾ.ರಾಜ್ ಕುಮಾರ್ ಬಂದರು. ಹೌದು, ಬಂದವರು ನಿಜಕ್ಕೂ ಅಣ್ಣಾವ್ರೇ! ತಮ್ಮದೇ ಬ್ಯಾನರಿನಡಿ ಜೀ ಕನ್ನಡಕ್ಕಾಗಿ ನಿರ್ಮಾಣವಾಗುತ್ತಿದ್ದ ‘ಸೃಷ್ಟಿ’ ಧಾರಾವಾಹಿಯ ಟೈಟಲ್ ಸಾಂಗ್ ಹಾಡಲು ಸ್ಟುಡಿಯೋಗೆ ಬಂದಿದ್ದರು. ತಮ್ಮ ಎಂದಿನ ಬಿಳಿಪಂಚೆ, ಬಿಳಿಯಂಗಿ, ನಿಷ್ಕಲ್ಮಶ ನಗು, ಬದುಕಿನ ಸಾಕ್ಷಾತ್ಕಾರದ ಸಾಕ್ಷಿಯೆಂಬಂತೆ ಹೊಳೆಯುತ್ತಿದ್ದ ಕಣ್ಣುಗಳು ನನ್ನನ್ನು ಥಟ್ಟನೆ ಸೆಳೆದುದರಲ್ಲಿ ಅನುಮಾನವಿಲ್ಲ. ಅವರಿಗೆ ತೀರಾ ಸಮೀಪದಲ್ಲಿ ನಿಂತಿದ್ದ ಆ ಕ್ಷಣ, ಮಿಂಚು ಅನ್ನುತ್ತಾರಲ್ಲ ಅಂಥಾದೊಂದು ನನ್ನ ಮೈಮನಗಳಲ್ಲಿ ಸಂಚಲಿಸಿತ್ತು.

ಹಿರಣ್ಯಕಶಿಪುವಿನ ಕಣ್ಣುಗಳಲ್ಲಿ ಉಕ್ಕಿ ಹರಿಯುತ್ತಿದ್ದ ರೌದ್ರರಸವಾಗಲೀ, ಬಬ್ರುವಾಹನನ ಖಡಕ್ ಡೈಲಾಗುಗಳಲ್ಲಿ ಪುಟಿದೇಳುತ್ತಿದ್ದ ವೀರರಸವಾಗಲೀ, ಕವಿರತ್ನನಾಗುವ ಮೊದಲು ಕುರಿ ಕಾಯುತ್ತಿದ್ದವನು ಚಿಮ್ಮಿಸುತ್ತಿದ್ದ ಹಾಸ್ಯರಸವಾಗಲೀ, ಪದ್ಮಾವತಿ ಪ್ರಿಯ ಶ್ರೀನಿವಾಸನ ಮುಖಾರವಿಂದದಲ್ಲಿ ತುಳುಕುತ್ತಿದ್ದ ಶಾಂತರಸವಾಗಲೀ- ಹೀಗೆ ಒಂಭತ್ತಕ್ಕೆ ಒಂಭತ್ತೂ ರಸಗಳನ್ನು ತಮ್ಮ ಸಹಜಾಭಿನಯದ ಮೂಸೆಯಿಂದ ಹೆಕ್ಕಿ ತೆಗೆದು ಚಿತ್ರರಸಿಕರಿಗೆ ಉಣಬಡಿಸುತ್ತಿದ್ದುದರ ಜೊತೆಗೆ ತಮ್ಮ ದೈವದತ್ತ ಕಂಠಸಿರಿಯಿಂದ ಹಾಡುಗಳಿಗೆ ನಿಜವಾದ ಜೀವ ಕೊಡುತ್ತಿದ್ದಂತಹ ಡಾ.ರಾಜ್ ಕುಮಾರ್ ನಿಜಕ್ಕೂ ಇವರೇನಾ? ಸರಳಾತಿ ಸರಳ ವ್ಯಕ್ತಿತ್ವದ ಅಣ್ಣಾವ್ರು ಇವರೇನಾ? ಎನ್ನುವಷ್ಟರಮಟ್ಟಿಗೆ ನಾನು ಅಕ್ಷರಶಃ ತಲ್ಲಣಗೊಂಡಿದ್ದೆ. ಯಾರ ಕಾಲಿಗೂ ಬೀಳದ ನಾನು ಅವತ್ತು ಆ ಮೇರುಕಲಾವಿದನ ಪಾದಗಳೆಡೆಗೆ ಶಿರಬಾಗಿದ್ದು ಇಂದಿಗೂ ನನ್ನ ಪಾಲಿಗೆ ಅಚ್ಚರಿಯ ಸಂಗತಿ. ಅವರ ವಾತ್ಸಲ್ಯದ ಹಸ್ತ ನನ್ನ ಶಿರವನ್ನು ಸೋಕುತ್ತಿದ್ದಂತೆಯೇ ಒಂದು ಬಗೆಯ ಅತೀವ ಪುಳಕ ನನ್ನನ್ನು ಕದಲಿಬಿಟ್ಟಿತ್ತು.


“ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ…” ಎಂದು ಆರಂಭವಾಗುವ ಕನಕದಾಸರ ಕೀರ್ತನೆಯನ್ನು ಅಣ್ಣಾವ್ರು ಒಳಗೆ ಭಾವತುಂಬಿ ಹಾಡುತ್ತಿದ್ದರು. ಗುರೂಜಿ ಟೇಕ್  ತಗೊಳ್ತಾ ಇದ್ದರು. ಲಿರಿಕ್ಸ್ ಶೀಟ್ ನ ಇನ್ನೊಂದು ಕಾಪಿ ನನ್ನ ಕೈಲಿತ್ತು. ಮೊದಲ ಕೆಲವು ಸಾಲುಗಳು ಮಾತ್ರ ಕನಕದಾಸರದ್ದಾಗಿದ್ದು, ಉಳಿದ ಸಾಲುಗಳನ್ನು ಕೆ.ಕಲ್ಯಾಣ್ ಬರೆದಿದ್ದರು. ಆ ದಿನ ಕಲ್ಯಾಣ್ ಬಂದಿರಲಿಲ್ಲ. ಹಾಗಾಗಿ, ಕನಕದಾಸರು ಹಾಗೂ ಕಲ್ಯಾಣ್ ಪರವಾಗಿ ‘ಗಾಯಕ/ಗಾಯಕಿ ಶ್ರುತಿ,ತಾಳ, ಎಮೋಷನ್ನುಗಳ ಕಡೆ ಚಿತ್ತವನ್ನು ಕೇಂದ್ರೀಕರಿಸಿ ಹಾಡುತ್ತಿರಬೇಕಾದರೆ ಒಮ್ಮೊಮ್ಮೆ ಕಣ್ತಪ್ಪಿನಿಂದ ಕಾಗುಣಿತ ಅಥವಾ ಉಚ್ಚಾರಣಾ ದೋಷಗಳು ಸಂಭವಿಸುವುದುಂಟು’ ಎಂಬ ಮಾತಿನನ್ವಯ ಎರಡೂ ಕಿವಿಗಳನ್ನು ತೆರೆದು ನಾನು ಕೂರಬೇಕಾಗಿತ್ತು.

ಡಾ.ರಾಜ್ ಕುಮಾರ್ ಥರದ ಗಾಯಕರ ವಿಷಯದಲ್ಲಿ ಈ ಮೇಲ್ಕಾಣಿಸಿದ ಮಾತು ಅಷ್ಟು ಸಮಂಜಸವಲ್ಲ ಅಂತ ನನಗವತ್ತನಿಸಿತ್ತು. ಏಕೆಂದರೆ, ಅಣ್ಣಾವ್ರಿಗೆ ಒಲಿದಿದ್ದ ಭಾಷಾಶುದ್ಧತೆ, ಒಂದೊಂದು ಅಕ್ಷರವನ್ನೂ ಉಚ್ಚರಿಸುವಾಗಿನ ಜಾಗ್ರತೆ ಅಂಥಾದ್ದು. ಸಾಹಿತ್ಯವನ್ನು ಜೀರ್ಣಿಸಿಕೊಂಡು ಅದರೊಳಗಿನ ಜೀವಂತಸೆಲೆಗೆ ಕುಂದು ಬಾರದಂತೆ ಮೈದುಂಬಿ ಹಾಡಿ ತಕ್ಕ ನ್ಯಾಯ ಒದಗಿಸಬಲ್ಲ ಕನ್ನಡದ ಕೆಲವೇ ಕೆಲವು ಗಾಯಕರಲ್ಲಿ ರಾಜಣ್ಣ ಪ್ರಮುಖರು. ಆದರೂ, ಅಂಥದೊಂದು ಅಪೂರ್ವ ಅನುಭವ ನನ್ನ ಪಾಲಿಗೆ ಸದಾ ಜೋಪಾನ ಮಾಡಿಕೊಳ್ಳಬೇಕಾದುದೇ.

 

ಇಷ್ಟಕ್ಕೂ ಅಣ್ಣಾವ್ರು ಹಾಡಿದ್ದ ಅನೇಕ ಗೀತೆಗಳನ್ನು ಆವರೆಗೆ ರೇಡಿಯೋದಲ್ಲಿ, ಟಿವಿಯಲ್ಲಿ, ಯಾರಾದರೂ ಅಯ್ಯಪ್ಪಸ್ವಾಮೀ ಮಾಲೆ ಹಾಕಿಕೊಂಡಲ್ಲಿ, ದೇವಸ್ಥಾನಗಳಲ್ಲಿ, ಹಬ್ಬ, ಮದುವೆ, ಜಾತ್ರೆಗಳಂಥ ಸಂದರ್ಭಗಳಲ್ಲಿ, ಗಣೇಶನ ಉತ್ಸವ, ರಾಜ್ಯೋತ್ಸವಗಳ ನೆಪದ ಆರ್ಕೆಸ್ಟ್ರಾಗಳಲ್ಲಿ ಮಾತ್ರ ಕೇಳಿದ್ದುಂಟು. ಆನಂದಿಸಿದ್ದುಂಟು. ಅಂಥ ಎಲ್ಲಾ ಸಂದರ್ಭಗಳಲ್ಲಿ ರಾಜಣ್ಣ ಪಕ್ಕದಲ್ಲೇ ಕುಳಿತು ಹಾಡ್ತಾ ಇದಾರೋ ಏನೋ! ಅನ್ನುವಷ್ಟರಮಟ್ಟಿಗೆ ಹೃದಯ ಗೆದ್ದುಬಿಡುತ್ತಿದ್ದರು. ನನ್ನನ್ನು ಸಂಪೂರ್ಣ ತಮ್ಮ ಸುಪರ್ದಿಗೆ ಎಳೆದುಕೊಂಡುಬಿಡುತ್ತಿದ್ದರು. ಅಂಥ ಸಾಕ್ಷಾತ್ ರಾಜ್ ಕುಮಾರ್ ರವರು ಹಾಡುವುದನ್ನು ಯಥಾವತ್ತು ಕಣ್ತುಂಬಿಕೊಳ್ಳುವುದಿದೆಯಲ್ಲಾ ಅಂಥ ಅದೃಷ್ಟ ಎಲ್ಲರಿಗೂ ಸಿಗುವಂಥದಲ್ಲ. ಆ ಮಟ್ಟಿಗೆ ನಾನು ಭಾಗ್ಯವಂತ.


(ರೇಖಾಚಿತ್ರಗಳು:ಉಪೇಂದ್ರ ಪ್ರಭು)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

17 Comments
Oldest
Newest Most Voted
Inline Feedbacks
View all comments
M.S.Krishna murhy
M.S.Krishna murhy
12 years ago

Punyavantaru nivu.. antaha meru natana jogtegondistu hothu idiralla

savitri
savitri
12 years ago

ನಿಮ್ಮ ನುಭವವನ್ನು ಹಂಚಿಕೊಂಡಿದ್ದಕ್ಕೆ ಸಂತೋಷವಯಿತು. ಲೇಖನ  ಶೈಲಿ ಇಷ್ಟವಾಯಿತು.:-)

gurunath boragi
gurunath boragi
12 years ago

ishtavaayithu 😉

Swarna
Swarna
12 years ago

ಚೆನ್ನಾಗಿದೆ. ಹೃದಯ ಶಿವ ಅವರ ಮುಂದಿನ ಬರಹಕ್ಕೆ ಕಾಯುತ್ತೇವೆ

ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
12 years ago

ಲೇಖನ ಸೊಗಸಾಗಿದೆ. ಒಂದೇಡೆ ಡಾ.ರಾಜ್ ಮತ್ತೊಂದೆಡೆ ಕುವೆಂಪು ಎರಡೂ ಕರಿನಾಡಿನ ಅದಮ್ಯ ಚೇತನಗಳು…
ಲೇಖನರೊಂದಿಗೆ ಮೂಡಿ ಬಂದಿರುವ ರೇಖಾಚಿತ್ರಗಳು ತಾಜಾತನದಿಂದ ಕಂಗೊಳಿಸುತ್ತಿವೆ…ಲೇಖಕರಿಗೂ ಮತ್ತು ರೇಖಾಚಿತ್ರಕಾರರಿಗೂ ಶುಭಾಶಯಗಳು…

Rukmini Nagannavar
12 years ago

ಅಣ್ಣಾವ್ರ ಜೊತೆಗಿನ ನಿಮ್ಮ ಅನುಭವಗಳನ್ನು ಬರಹದ ಮೂಲಕವಾದರೂ ನಮ್ಮೊಟ್ಟಿಗೆ ಹಂಚಿಕೊಂಡಿದಿರಲ್ಲ ನಾವು ಭಾಗ್ಯವಂತರೆ.
ನಿಮ್ಮ ವ್ಯಕ್ತಿತ್ವದಲ್ಲಿರುವ ಆಪ್ತತೆ ನಿಮ್ಮ ಬರಹದಲ್ಲೂ ಮಿಂಚಿದೆ ಎಂದರೆ ಅತಿಶಯೋಕ್ತಿ ಏನಲ್ಲ ಶಿವ! ತುಂಬಾ ಇಷ್ಟವಾಯಿತು ಲೇಖನ.
ಎಂದಿನಂತೆ ನಾ ನಿಮ್ಮ ಓದುಗಳು….  looking forward more articles

ರುಕ್ಮಿಣಿ ಎನ್.

niharika
niharika
12 years ago

ಹೌದು, ಅಂತಹ ಅಪರೂಪದ ವ್ಯಕ್ತಿತ್ವದವರೊಡನೆ ಕಳೆದ ಕ್ಷಣ ಕ್ಷಣವೂ ಸಾರ್ಥಕವಾಗುವಂತಹದು.
ರೆಕಾರ್ಡಿಂಗ್ ರೂಮೊಳಗೆ ನಮ್ಮನ್ನೂ ಕರೆದುಕೊಂಡು ಹೋದರೇನೋ ಅನ್ನಿಸುವಂತೆ ಬರೆದಿದ್ದೀರಿ, ಧನ್ಯವಾದ.

ಅಂದಹಾಗೆ ಲೇಖನ-ರೇಖಾಚಿತ್ರಗಳ ಜುಗಲ್ಬಂದಿ ಚೆನ್ನಾಗಿದೆ
ಇನ್ನಂಚೂರು ವಿವರವಾಗಿ ಬರೆಯಬಹುದಿತ್ತೇನೋ ಅಂತ ನನ್ನನಿಸಿಕೆ… 😉

ವೆಂಕಟೇಶ ಮಡಿವಾಳ ಬೆಂಗಳೂರು
ವೆಂಕಟೇಶ ಮಡಿವಾಳ ಬೆಂಗಳೂರು
12 years ago

ಅಣ್ಣಾವ್ರ ಜೊತೆಗಿನ ನಿಮ್ಮ  ಆ ಸಂದರ್ಭ  'ಅವಿಸ್ಮರಣೀಯ' -ನೀವು ಅಧ್ರುಸ್ಟವಂತರು ,ಹೇಗೆ ಅಂತೀರಾ?
ಅಣ್ಣಾವ್ರನ್ನ  ಮುಖತ ನೋಡಬೇಕು -ಮಾತಾಡಿಸಬೇಕು , ಎಂದು  ಅವರ ಹುಟ್ಟುಹಬ್ಬಕ್ಕೆ ( ಅವರು ನಮ್ಮನ್ನು ಅಗಲಿದ್ದು ಅವರ ಆ ಹುಟ್ಟು ಹಬ್ಬಕ್ಕೆ ಮುನ್ನ )ಹೋಗುವ ಎಂದು  ನಾವೆಲ್ ಅಗೆಳೆಯರು ಮಾತಾಡಿಕೊಂಡಿದ್ದೆವು , ಆದರೆ ಅವರು ನಮ್ಮನ್ನು ಅದಕ್ಕೆ ಮೊದಲೇ ಅಗಲಿದರು. 
ಹೀಗೆ ಒಂದು ಮಹೋನ್ನತ  ಆಶೆ -ಕನಸು ನನಸಾಗದೇ ಹೋಯ್ತು ,ಬೆಂಗಳೂರಲ್ಲೇ  ಇಷ್ಟು ವರ್ಷ ಇದ್ದು ( ಸುಮಾರು ಹತ್ತು ವರ್ಷಗಳಿಂದ ) ಅವರನ್ನು ನೋಡದೆ ಇದುದ್ದಕ್ಕೆ ಈಗಲೂ ನನ್ನನ್ನು ನಾನೇ ಹಳಿದುಕೊಳ್ಳುವೆ .. 
 
ಅಣ್ಣಾವ್ರ ಭಾವ ಗೀತೆಗಳು , ಚಿತ್ರ ಗೀತೆಗಳು , ದೇವರ ಸ್ತುತಿಗಳನ್ನೂ ಕೇಳುವಾಗ – ಅವರ ಚಿತ್ರಗಳನ್ನು ನೋಡುವಾಗ  ಅವರು ನಮ್ಮೊಡನೆಯೇ ಇರುವರು ಎನ್ನಿಸುವುದು . 
ಅವರ ಚಿತ್ರಗಳು , ಹಾಡುಗಳ ಮೂಲಕ ಅವರು ಯಾವತ್ತೂ ಅಮರ . 
ಇಡೀ  ಕರುನಾಡು , ಕನ್ನಡ ನುಡಿಯ -ಕನ್ನಡ ಜನತೆಯ-  ಪ್ರತೀಕದಂತಿದ್ದ  ಅವರು ಕರ್ನಾಟಕಕ್ಕೆ ದೊಡ್ಡ ಆಸ್ತಿ . 
ವಿರೋಧಿಗಳು ಏನೆಲ್ಲಾ ಹೇಳಿದರೂ ಅವರ ಅಗತ್ಯತೆ ,ಈಗೀಗ ಹೆಚ್ಚು ಎನಿಸುತ್ತಿದೆ . 
 
ನಿಮಂ ಈ ಬರಹ ಬಹು ಆಪ್ತವಾಗಿದೆ , ಹೃದಯ ಶಿವ ಎನ್ನುವ ಹೆಸರು ಕೇಳಿದ್ದೆ ಈಗ ನೀವು ಇಲ್ಲ್ಲಿಯೇ ಬರೆಯುತ್ತಿರುವುದು ಖುಷಿ ತಂತು . 
ಚಿತ್ರ ರಂಗದ  ಒಳ ಹೊರಗೂ  ಕುತೂಹಲಕಾರಿ , ಇನ್ನಸ್ಟು ಅನುಭವಗಳಿದ್ದರೆ ಹಂಚಿಕೊಳ್ಳಿ . 
 
>>>> ಬರಹದ ಜೊತೆಗಿನ ರೇಖಾ ಚಿತ್ರಗಳೂ ಸೂಪರ್ .. ಕಲಾವಿದರಿಗೆ ನನ್ನಿ 
ಶುಭವಾಗಲಿ 
ವೆಂಕಟೇಶ ಮಡಿವಾಳ ಬೆಂಗಳೂರು 
\।/

Sumathi Deepa Hegde
12 years ago

ವಾವ್… ಸೊಗಸಾದ ಅನುಭವ….

sharada moleyar
sharada moleyar
12 years ago

ಲೇಖನ  ಶೈಲಿ ಇಷ್ಟವಾಯಿತು.:-)
nice

ಸುಷ್ಮಾ ಮೂಡುಬಿದರೆ

ಭಾಗ್ಯವಂತರು ನೀವೇ ಭಾಗ್ಯವಂತರು.. ಚೆನ್ನಾಗಿದೆ ಸರ್ ಲೇಖನ..

Santhoshkumar LM
Santhoshkumar LM
12 years ago

ಗೆಳೆಯ ಹೃದಯ ಶಿವ,
ಖಂಡಿತ ಈ ಲೇಖನವನ್ನು ಹೃದಯದಿಂದಲೇ ಬರೆದಿದ್ದೀರ. ಬಹಳ ಇಷ್ಟವಾಯಿತು. ಎಲ್ಲದಕ್ಕೂ ಮುನ್ನ ರೆಕಾರ್ಡಿಂಗ್ ಮಾಡುವ ಸ್ಟುಡಿಯೋದೊಳಗಿನ ವಾತಾವರಣದ ಬಗ್ಗೆ ನಮಗೆ ಎಳ್ಳಷ್ಟೂ ಗೊತ್ತಿಲ್ಲ. ನೀವು ಹೇಳಿದ್ದರಿಂದ ನಮಗೆ ಕೊಂಚ ತಿಳಿಯಿತು. ಇದೇ ರೀತಿಯ ಮಾಹಿತಿಯುಳ್ಳ ಲೇಖನಗಳು ನಿಮ್ಮಿಂದ ಮೂಡಿ ಬರಲಿ.
 
ರಾಜಣ್ಣನವರ ಜೊತೆ ನೀವು ಕಳೆದ ಸಮಯವನ್ನು ನೆನೆಸಿಕೊಂಡರೆ ನನಗೆ ನಿಜಕ್ಕೂ ಹೊಟ್ಟೆಕಿಚ್ಚಾಗುತ್ತದೆ. ಅವರ ಹಾಡುಗಳನ್ನು ರೇಡಿಯೋದಲ್ಲಿ ಕೇಳಿದರೇ ಪುಳಕಗೊಳ್ಳುವ ನಮಗೆ, ಅವರು ಎದುರೇ ನಿಂತು ಹಾಡುತ್ತಿದ್ದರೆ ಹೇಗಾಗಬೇಡ. ನಿಜಕ್ಕೂ ನೀವು ಅದೃಷ್ಟವಂತರು.
 
ಉಪೇಂದ್ರ ಪ್ರಭುರವರ ಈ ರೇಖಾಚಿತ್ರಗಳು ಮನಸೆಳೆಯುತ್ತವೆ.
ನಿಮ್ಮ ಲೇಖನಗಳ ಸರಣಿ ಹೀಗೆಯೇ ಮೂಡಿ ಬರಲಿ ಎಂದು ಆಶಿಸುತ್ತಾ….

Utham Danihalli
12 years ago

Estavaythu shivanna lekana hageye upendra sirra reka chithragallu

ಯಶವಂತ್
ಯಶವಂತ್
12 years ago

ಜೀವಮಾನದ ಅನುಭವ ನಿಮ್ಮದು… ನೀವೇ ಪುಣ್ಯವಂತರು!!!

parthasarathyn
12 years ago

ನಿಮ್ಮ ಅನುಭವ ನಮಗು ಸಂತಸ ಕೊಟ್ಟಿತು. ನವರಸಗಳಲ್ಲಿ ಕೆಲವು ರಸಗಳ ಹೆಸರು ಹೇಳಿದ್ದೀರಿ
ಹಾಗೆ ಸಾದ್ಯವಾದಲ್ಲಿ ನವರಸಗಳು ಅಷ್ಟನ್ನು ಯಾವವು ಎಂದು ಹೇಳಿರಿ 

prashasti
12 years ago

ಒಳ್ಳೆಯ ರಸಾನುಭವಕ್ಕೆ ಧನ್ಯವಾದಗಳು ಶಿವಣ್ಣ 🙂

ಹೃದಯಶಿವ
ಹೃದಯಶಿವ
12 years ago

ಪ್ರಕಟಿಸಿದ,ಓದಿದ ಹಾಗೂ ಚಿತ್ರ ಬರೆದುಕೊಟ್ಟ ಎಲ್ಲರಿಗೂ ಈ ಮೂಲಕ ನನ್ನ ಧನ್ಯವಾದಗಳು.

17
0
Would love your thoughts, please comment.x
()
x