ಪ್ರೀತಿಯ ಹೆಜ್ಜೆಗಳು :
	ಪ್ರೀತಿಯ 
	ನಿನ್ನ 
	ಹೆಜ್ಜೆಗಳು
	ನನ್ನ 
	ಹೃದಯದ
	ಒಳಗೆ
	ಗೆಜ್ಜೆ 
	ಕಟ್ಟಿಕೊಂಡು 
	ಕುಣಿಯುತ್ತಿದೆ
	ಪ್ರೇಮದ
	ತಾಳದ 
	ಸದ್ದು
	ಮನಸ್ಸಿಗೆ 
	ಮುದಕೊಡುತ್ತದೆ.
	ಪ್ರೀತಿಯ ಅನುಭವ :
	ನಿನ್ನ 
	ಕಾಲಿಗೆ 
	ಚುಚ್ಚಿದ
	ಮುಳ್ಳನ್ನು 
	ಪ್ರೀತಿಯಿಂದಲೇ 
	ಮುಳ್ಳಿಗೂ 
	ನನಗೂ 
	ನೋವಾಗದೆ
	ತೆಗೆಯುವಾಗ 
	ಅಲ್ಲೊಂದು 
	ಪ್ರೀತಿಯ 
	ಅನುಭವವೇ
	ಬೇರೆ ….!!!
	ಹೊಸತನ :
	ನೀ
	ಬರೆದ
	ರಂಗೋಲೆ
	ಅಂಗಳದ 
	ಅಲಂಕಾರವೇ 
	ಬದಲಾಗಿ
	ಹೊಸತನ 
	ತಂದಿದೆ 
	ಒಂದೊಂದು 
	ಚುಕ್ಕೆಗಳ
	ಸಾಲುಗಳು 
	ನನ್ನ 
	ಹೃದಯದಲ್ಲಿ 
	ಚಿತ್ತಾರ
	ಮೂಡಿಸಿದೆ..
	ನಗು :
	ಗೆಳತಿ,
	ನಿನ್ನ
	ಪ್ರೀತಿ 
	ಮುಳ್ಳಿನ
	ನಡುವೆ 
	ಹೂ 
	ನಗುವಂತೆ…!!
	ನನ್ನವಳು…
	ಅಂದು ನೋಡದೆ 
	ಮಾತಾಡದೇ ಇರಲಾರೆಂದು
	ಹೇಳಿದವಳು ನನ್ನವಳು..!!
	ಇಂದು ನೋಡಿಯು
	ಮಾತಾಡದೇ ಮೌನವಾಗಿ 
	ಕುಳಿತಿದ್ದಾಳೆ ನನ್ನವಳು…!!
	ಗೆಳತಿ,
	ನೀ ಜೊತೆಯಲ್ಲಿದ್ದರೆ
	ಕಂಡ ಕನಸುಗಳು
	ನನಸಾಗುತ್ತವೆ…!!!
	ಗೆಳತಿ,
	ನಿನ್ನ ಮಾತುಗಳು ಹಾಗೆ…
	ನೀರು ಇಲ್ಲದ ಭಾವಿಯಂತೆ…
	ನಿನ್ನ ಭಾವನೆಗಳು ಹಾಗೆ…
	ನಾವಿಕನಿಲ್ಲದೆ ದೋಣಿಯಂತೆ…
	ಗೆಳತಿ, 
	ನಿನ್ನ ನೆನಪೇ 
	ನನ್ನನ್ನು ಕಾಡುವುದು 
	ಹಗಲು ಹೊತ್ತಿನಲ್ಲಿ 
	ರಾತ್ರಿಯಿಡಿ ಕಾಣುವುದು 
	ನಿನ್ನ ಕನಸು… ನಿನ್ನ ಕನಸು…
	ಗೆಳತಿ,
	ನನ್ನವಳು ಮಾತಿನ ಮಲ್ಲಿ ಇವಳು
	ಮಾತಿನ ಹಾದಿ ಉದ್ದಕ್ಕೂ 
	ಮೌನದ ಹೆಜ್ಜೆ ಇಟ್ಟು ಹೋಗಿದ್ದಾಳೆ…
-ಬಸವರಾಜ ಕದಮ್
'ಕಲ್ಲು ಬೆಂಚು ಮತ್ತು ಪ್ರೀತಿ'
	ಈ ಪಾರ್ಕಿನ ಮೂಲೆಯಲಿ 
	ಯಾರೂ ನನಗಿಷ್ಟ ಎಂದು
	ಹೇಳಿಕೊಳ್ಳಲು ಹೆದರುವ
	ಜಾಗವೊಂದಿದೆ
	ಜಾಗವೆಂದರೆ ಒಂದು ಕಲ್ಲುಬೆಂಚು.
	ಮಿಡಿವ ಹೃದಯಗಳಿಗೆ ಆಸರೆಯಾಗಿ,
	ಇನ್ನೂ ಹುಟ್ಟಿರದ ಮಾತುಗಳಿಗೆ
	ಕಿವಿಯಾಗಿ 
	ಒಂದಿಷ್ಟು ನಗುವನ್ನು ಮತ್ತೊಂದಷ್ಟು ಅಳುವನ್ನು
	ಹಾಗೇ ಆತುಕೊಂಡು ನಿಂತಿದೆ
	ಗಮನವಿಟ್ಟು ನೋಡಿದರೆ
	ಅಲ್ಲೆಲ್ಲೊ ಸಂದಿಗೊಂದುಗಳಲ್ಲಿ
	ಬಿದ್ದಿರುವ ಗುಲಾಬಿ ದಳಗಳು, ಅಪೂರ್ಣ ಪ್ರೇಮಪತ್ರಗಳು ಕಂಡಾವು
	ಪ್ರತಿಸಂಜೆಯೂ ಇಲ್ಲಿ ವಿನಿಮಯವಾಗುವ ಮಾತುಗಳೂ
	ಗಾಳಿಯಲಿ ತೇಲುತ್ತಿರಬಹುದಾದ 
	ಗುಮಾನಿಯಿದೆ
	ಈ ಬೆಂಚು ಕೆಲವೊಮ್ಮೆ ನಗುತ್ತದೆ
	ಅತ್ತವರನ್ನು ಸಂತೈಸುತ್ತದೆ
	ಕೆಲವೊಮ್ಮೆ ಜಗತ್ತಿನ ಸಂಬಂಧ ಕಡಿದುಕೊಂಡು 
	ಮೂಗನಾಗುತ್ತದೆ.
	ಅದೆಷ್ಟೋ ಯುವ ಪ್ರೇಮಿಗಳು
	ಪ್ರೇಮ ನಿವೇದನೆಯ 
	ಪಾಠಗಳನು ಇಲ್ಲಿಯೇ
	ಕಲಿತದ್ದೆಂಬ ಪುಕರಾರೂ
	ಚಾಲ್ತಿಯಲ್ಲಿದೆ
	ಕಲ್ಲಿನ ಮೇಲೆ ಕೆತ್ತಿರುವ
	ಅಕ್ಷರಗಳ ಗುಟ್ಟನ್ನು
	ಕಲ್ಲು ,ಯಾರಿಗೂ ಬಿಟ್ಟುಕೊಟ್ಟಿಲ್ಲ
	ಅದಕೇ ಇರಬೇಕು ಈ
	ಮೂಲೆಯನು ಹುಡುಕಿಕೊಂಡು
	ಬರುವವರ ಸಂಖ್ಯೆಯೂ
	ಹೆಚ್ಚಾಗುತ್ತಿದೆ…..
ರಮೇಶ್ ನೆಲ್ಲಿಸರ.
ಪೂರ್ಣಚಂದ್ರ ತೇಜಸ್ವಿ
	ಪೂರ್ಣಚಂದ್ರನಿಗೆ ಎಷ್ಟೊಂದು ಕಳೆಗಳು!
	ಬರೆವಣಿಗೆ, ಹೋರಾಟ, ಪರಿಸರ, ಬೇಟೆ,
	ವಿಜ್ಞಾನ, ಫೋಟೋಗ್ರಫಿ, ಕಂಪ್ಯೂಟರ್, ಗ್ರಾಫಿಕ್ಸ್,…
	ಒಂದೆ, ಎರಡೆ!
	ಅಪ್ಪನ ಹಾದಿಯ ಬಿಟ್ಟು,
	ತನ್ನದೇ ಜಾಡು ಹಿಡಿದು ಹೊರಟ.
	ಆನೆ ನಡೆದದ್ದೇ ದಾರಿ!
	ಇವ ಬಾಯಿ ತೆರೆದರೆ
	ಪತ್ರಕರ್ತರಿಗೆ ಹಬ್ಬ!
	ನೇರ ಮಾತು, ಹರಿತ ವಾಗ್ಬಾಣಗಳ ಸುರಿಮಳೆ!
	ಪ್ರಶಸ್ತಿ ಸನ್ಮಾನಗಳಿಂದ ಮಾರು ದೂರ!
	ಜನಜಂಗುಳಿಯಿಂದ ದೂರವಿದ್ದೂ
	ಜನಮಾನಸಕ್ಕೆ ಹತ್ತಿರ!
	ನಡುಮಧ್ಯಾಹ್ನ ಹೊಟ್ಟೆಬಿರಿಯೆ ಬಿರಿಯಾನಿ ತಿಂದು,
	ನಡುಮನೆಯಿಂದ ಎದ್ದು ಹೇಳದೆ ಕೇಳದೆ ಹೊರಟೇಬಿಟ್ಟ!
	ಸದಾ ಬೆರಗು ಹುಟ್ಟಿಸುವ ಸುತ್ತಣ ಮಾಯಾಲೋಕವ ಬಿಟ್ಟು,
	ಇನ್ನೊಂದು ಮಾಯಾಲೋಕವ ಅರಸುತ್ತ ಹೊರಟನೆ?
	ನಮ್ಮೆಲ್ಲ ಪ್ರಶ್ನೆಗಳಿಗೆ ಉಳಿದದ್ದು ನಿರುತ್ತರ!
	ಇವ ಸೃಷ್ಟಿಸಿದ ಪಾತ್ರಗಳು
	ನಮ್ಮ ನಡುವೆ ಇನ್ನೂ ಜೀವಂತ.
	– ತ.ನಂ.ಜ್ಞಾನೇಶ್ವರ
*****
					

