ಕಾವ್ಯಧಾರೆ

ಮೂವರ ಕವನಗಳು: ನವೀನ್ ಮಧುಗಿರಿ, ಶ್ರೀಮಂತ್ ಎಮ್. ಯನಗುಂಟಿ, ಯದುನಂದನ್ ಗೌಡ ಎ.ಟಿ

ನಾವು

ಪ್ರೀತಿಯೆಂದರೆ ನಂಬಿಕೆ
ನೀನು ನನ್ನೆಷ್ಟು ನಂಬುವೆ?
ನಿನ್ನಷ್ಟೇ
ನಾನೇಕೆ ನಿನಗಿಷ್ಟವಾದೆ?
ಗೊತ್ತಿಲ್ಲ.
ಪ್ಲೀಸ್ ನಿಜ ಹೇಳು
ಕಾರಣ ಹುಡುಕುವುದು ಕಷ್ಟ
ನಾನು ನಿನ್ನೆಷ್ಟು ಪ್ರೀತಿಸಲಿ?
ಅದು ನಿನ್ನಿಷ್ಟ

ನಿಲ್ಲು
ಏನು?
ಪದೇ ಪದೇ ನೀನು ನಾನು ಅನ್ನುವುದು ನಿಲ್ಲಿಸು
ಮತ್ತೇನನ್ನಲಿ?
ನಾವು ಅಂತನ್ನುವುದು ಒಳ್ಳೆಯದು
ಯಾಕೆ?
ನೀನೆಂದರೆ ನಾನು
ನಾನೆಂದರೆ ನೀನು
~•~

ಬೆವರು

ನಮ್ಮಪ್ಪ
ಕವಿತೆಗಳ ಬರೆಯಲಿಲ್ಲ
ಭತ್ತ, ರಾಗಿ, ಜೋಳ ಬೆಳೆದ

ಅಕ್ಷರಗಳ ಸ್ಖಲಿಸಿಕೊಂಡ
ಕವಿಗೆ ಹಸಿವಾಯ್ತು
ಅಪ್ಪನ ಬೆವರು ತಿಂದ
~•~

ಸಿಹಿ ಸುದ್ದಿ

ಮೊನ್ನೆ ನಿನ್ನ ತುಟಿಯ
ನಾನು ಕಚ್ಚಿದ ಸುದ್ದಿ ತಿಳಿದು
ಊರ ಜನ
ಬೇವಿನ ಮರದ ಹೆಜ್ಜೇನು ಗೂಡಿಗೆ
ಬೆಂಕಿ ಹಚ್ಚಿ
ಬಾಯಿ ಸಿಹಿ ಮಾಡಿಕೊಂಡು
ತಮ್ಮ ಬಾಯಿ ಚಪಲ
ತೀರಿಸಿಕೊಂಡರಂತೆ
~•~

ಅನ್ನದಾತ

ಕವಿತೆ ಬರೆಯುವವನ ಹಸಿವಿಗೆ
ಅನ್ನ ಬೆಳೆಯುವ ಧಣಿ ನಾನು

ನನ್ನದು ಅನ್ನ ಬೆವರು
ಹಸಿರು ಉಸಿರುಗಳ ಕಾವ್ಯ

ಉಸಿರುಗಳ ಸ್ವರ
ಹಸಿವುಗಳ ಸ್ಥಾವರ

ನಿಮ್ಮ ಕವಿತೆಗಳಿಲ್ಲದೆಯೂ ನಾನು ಬದುಕುವೆ
ನನ್ನ ಬೆವರಿನಿಂದಲೇ ಈ ಭೂಮಿ ಬದುಕಿದೆ
~•~

~ ನವೀನ್ ಮಧುಗಿರಿ

 

 

 

 


ನನಗೇಕೆ…?

ಒಣಗಿದ ತೆಂಗಿನ ಗರಿಗಳ ನಡುವೆ
ಮೆಲ್ಲನೆ ನುಸುಳಿ ಬರುತಿರುವ ಬೆಳಕು 
ನನ್ನ ಮೇಲೇ ಬೀಳಬೇಕೆ?

ಕುಳಿತ ಕಟ್ಟೆಯು 
ಇಡಿ ರಾತ್ರಿ ಹೀರಿಕೊಂಡ ತಂಪನ್ನು 
ನನ್ನ ಮೇಲೆಯೇ ಪ್ರಯೋಗಿಸಬೇಕೆ…?

ಎದುರಿಗಿಟ್ಟ ಬಿಳಿಬಣ್ಣದ ಬಗೊಣಿಯಲ್ಲಿ 
ಏನಿದೆಯೆಂದು 
ಅಂದಾಜು ಮಾಡಲಾಗದವನು ನಾನು… 
ಹಾಕಿಕೊಂಡ ಎರಡೂ ಚಪ್ಪಲಿಗಳ ಸಂಖ್ಯೆ 
ಒಂದೆಯೇ ಎಂದೂ 
ಊಹಿಸದವನೂ ನಾನು…
ನನಗೇಕೆ 
ಅಗಣಿತ ಲೆಕ್ಕಗಳ ಬದುಕು…
ನನಗೇಕೆ ಈ ಅಪವಿತ್ರ ದ್ವಂದ್ವಗಳ ಬದುಕು…??

ಶ್ರೀಮಂತ್ ಎಮ್. ಯನಗುಂಟಿ

 

 

 

 


ಪಂಚ್ ರಂಗಿ (ಹನಿಗವನಗಳು)

1.
ಪ್ರೀತಿಸಿದಾಕೆ ಸಿಕ್ಕರೆ
ಅವಳು ಅವನಿಗೆ ಹೆಂಡತಿ 
ಮುಂದಾಗುವರು ಅವರಿಬ್ಬರು
ಒಳ್ಳೆಯ ಸತಿ ಪತಿ

ಇಲ್ಲದಿದ್ದರೆ ಏನಾಗುವುದು 
ಗೊತ್ತೇ ಅವನ ಗತಿ?
ಬಾರ್ ನಲ್ಲಿ ಕುಳಿತು
ಕುಡಿಯುವಾಗ ಹೆಂಡ-ಅತಿ! 

2.
ರಾಜಕಾರಣಿಗಳು ಜನರಿಗೆ
ದುಡ್ಡು ತಿನ್ನಿಸಿದರೆ
ತೊಡಿಸುವರು ಅವರಿಗೆ ಜಯದ ಹಾರ!

ಅದೇ ರಾಜಕಾರಣಿಗಳು ಜನರ
ದುಡ್ಡು ತಿಂದರೆ
ತೋರಿಸುವರು ಅವರಿಗೆ ಪರಪ್ಪನ ಅಗ್ರಹಾರ! 

3.
ಅಂದವಾದ ಹುಡುಗಿಯ ಹಿಂದೆ 
ಅಲೆದಾಡಿದರೆ ಏನು ಚೆಂದ?
ಅವಳೊಪ್ಪಿದರೆ ಸಿಗುವುದಲ್ಲವೇ 
ನಿನಗೊಂದು ವಿವಾಹವೆಂಬ ಸುರಕ್ಷಾ ಬಂಧನ!

ನಿನ್ನ ಮೂತಿಯನ್ನು ಆಕೆ ಒಪ್ಪದಿದ್ದರೆ 
ನಿನಗೇನು ಉಳಿವುದು ಗೊತ್ತೇ ಕಂದ?
ಆಗ ನೀ ಒಪ್ಪದಿದ್ದರೂ ಸಿಗುವುದು
ನಿನಗೊಂದು ಸೋದರನೆಂಬ ರಕ್ಷಾ ಬಂಧನ!

4.
ಮದುವೆಗೆ ಮುನ್ನ ಆತ 
ದಿನಾ ಹೀರುತ್ತಿದ್ದ ಕಣ್ಣಿನಲ್ಲೇ
ಅವಳು ತೋರುತಿದ್ದ ಬ್ಯೂಟಿ!

ಮದುವೆಯ ನಂತರ ಈಕೆ 
ದಿನಾ ಹೀರುತ್ತಿದ್ದಾಳೆ ಕುಳಿತಲ್ಲೇ 
ಇವನು ಮಾಡುವ ಕಾಫಿ ಟೀ! 

5.
ಗುಂಪು ಚದರಿಸಲು 
ಪೊಲೀಸರು ಹಾರಿಸುವರು
ಗಾಳಿಯಲ್ಲಿ ಗುಂಡು!

ಹೆಂಡ್ತಿ ಹೆದರಿಸಲು
ಕೆಲವರು ಹಾಕುವರು
ಬಾಯಿಯಲ್ಲಿ ಗುಂಡು!

6.
ಮದುವೆಯಾದ ಹೊಸತರಲ್ಲಿ
ಹೆಂಡತಿ ಜೊತೆಗಿದ್ದರೆ ಡೈಲೀ ಸರಸ!

ಕೆಲವು ವರ್ಷಗಳು ಕಳೆದರೆ
ಹೆಂಡತಿ ಎಂದರೆ ಒಂದು ಡೈನೋಸರಸ!

7.
ಕೆಲವರ ಮಾತು 
ಗುಂಡು ಹೊಡೆದಂತಿರುತ್ತದೆ!

ಕುಡುಕರ ಮಾತು
ಗುಂಡು ಹೊಡೆದಮೇಲಿರುತ್ತದೆ!

8.
ಪ್ರೇಮ ನಿವೇದನೆ ಮಾಡಲು ಹೋದ
ಅವಳು ಆಗುತ್ತಾಳೆಂದು ತಿಳಿದು
ಅವನ ಬಾಳಿನ ನಂದಾದೀಪ!

ಆ ದೀಪವು
ಆಗಲೇ ಬೇರೆಯವನ ಬಾಳಿನಲ್ಲಿ
ಬೆಳಗುತ್ತಿರುವುದ ಕಂಡು ನೊಂದ ಪಾಪ!

9.
ಹಿಂದಿನಂತೆ ಹಕ್ಕಿಗಳು
ನಮ್ಮ ಬೆಂಗಳೂರಿನ ಕೆರೆಗಳಿಗೆ
ಬರುತ್ತಿಲ್ಲ ವಲಸೆ!

ಯಾಕೆಂದರೆ
ಅಲ್ಲೀಗ ತುಂಬಿರುವುದು ಬರೀ ಹೊಲಸೇ!
   
 – ಯದುನಂದನ್ ಗೌಡ  ಎ.ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.