ಶ್ರೀ ವ್ಯಾಸಮಹರ್ಷಿಗಳು ತಮ್ಮ ಶಿಷ್ಯರಿಗೆ ಹೇಳಿದ ಮಹಾಭಾರತ ಕಥೆಯನ್ನು, ಅರ್ಜುನತನಯನಾದ ಅಭಿಮನ್ಯುವಿನ ಪುತ್ರ ಪರೀಕ್ಷಿತನ ಮಗನಾದ ಜನಮೇಜಯನು ಸರ್ಪಯಾಗ ಮಾಡುವ ಕಾಲದಲ್ಲಿ ವೈಶಂಪಾಯನನಿಂದ ಕೇಳಿ ತಿಳಿದನು : ಮಹರ್ಷಿ ವಿಶ್ವಾಮಿತ್ರ ಮೇನಕೆಯರ ಮಗಳೂ ಕಣ್ವಮಹರ್ಷಿಗಳ ಸಾಕುಮಗಳೂ ಆದ ಶಕುಂತಲೆಯನ್ನು ವರಿಸಿದವನು ಚಂದ್ರವಂಶದ ರಾಜನಾದ ದುಷ್ಯಂತ. ಈ ದುಷ್ಯಂತ ಶಕುಂತಲೆಯರ ಮಗನೇ ಭರತ. ಭರತನಿಂದಲೇ ಭಾರತವಂಶವಾಯಿತು. ಭರತನ ಮಗ ಸುಹೋತ್ರ ; ಸುಹೋತ್ರನ ಮಗ ಹಸ್ತಿ. ಇವನಿಂದಲೇ ರಾಜಧಾನಿಗೆ ಹಸ್ತಿನಾಪುರವೆಂಬ ಹೆಸರು ಬಂದದ್ದು. ಹಸ್ತಿಯ ಮಗ ಸಂವರಣ ; ಸಂವರಣನ ಮಗ ಕುರುಮಹಾರಾಜ. ಇವನಿಂದ ಅದು ಕುರುವಂಶವಾಯಿತು. ಕುರುಮಹಾರಾಜನ ಪರಂಪರೆಯಲ್ಲಿ ಪ್ರದೀಪನು ಜನಿಸಿದನು. ಆ ಪ್ರದೀಪನ ಮಗನೇ ಶಂತನು ಮಹಾರಾಜ. ಈ ಶಂತನುವಿನ ಮೊದಲ ಪ್ರೇಮ ಪ್ರಕರಣದಿಂದ ಮಹಾಭಾರತದ ಕಥೆ ಬಿಚ್ಚಿಕೊಳ್ಳುತ್ತದೆ-
	ಜಂಬೂದ್ವೀಪದ ಕುರುಜಾಂಗಣಕ್ಕೆ ರಾಜಧಾನಿ ಹಸ್ತಿನಪುರವು
	        ಪುರದಲಿ ಎಂದೂ ತುಂಬಿ ತುಳುಕುವುದು ಸಂತಸ ಸಂಭ್ರಮ ಸಡಗರವು
	        ಶಂತನು ಎಂಬುವ ರಾಜನು ಪುರಕ್ಕೆ, ಭರತನ ವಂಶದಿ ಬಂದವನು
	        ಸುಂದರ, ಶೂರ, ಗುಣಸಂಪನ್ನ ಎನ್ನುವ ಕೀರ್ತಿಯ ಪಡೆದವನು
	        ಗಂಗೆಯ ಕಂಡವ ಮೋಹವಗೊಂಡು ಅವಳ ಚೆಲುವಿಕೆಗೆ ಮನಸೋತು
	        ಏನು ಮಾಡಿದರೂ ಪ್ರಶ್ನಿಸೆನೆನ್ನುತ ಅವಳಿಗೆ ಭಾಷೆಯನವನಿತ್ತು
	        ಸಂಗಾತಿಯೆಂದು ಸಡಗರದಿಂದಲಿ ಗಂಗಾದೇವಿಯ ಕೈಹಿಡಿದ
	        ಹುಟ್ಟಿದ ಕೂಡಲೆ ಸಾವನು ಕಂಡ ಏಳು ಕಂದರಿಗೆ ಬಲುನೊಂದ
	        ವಸಿಷ್ಠ ಶಾಪದಿ ಎಂಟನೆ ವಸುವು ಗಂಗಾ-ಶಂತನು ಮಗನಾಗಿ
	        ವಂಶೋದ್ಧಾರಕ ಮಗುವಿನ ಉಳಿವಿಗೆ ಶಂತನು ಗಂಗೆಗೆ ದೂರಾಗಿ
	        ರಾಜನ ಬೇಡಿಕೆ ಮನ್ನಿಸಿದವಳು ಮಗನನು ಅವನಿಗೆ ಉಳಿಸಿದಳು
	        ’ಮಾತಿಗೆ ತಪ್ಪಿದ’ ಎನ್ನುವ ನೆಪದಲಿ ಗಂಗೆಯು ಗಂಡನ ತ್ಯಜಿಸಿದಳು
	ಅಗಲಿದ ಮಡದಿಯ ಅನುದಿನ ನೆನೆಯುತ ಉಳಿದನು ರಾಜನು ಕೊರಗುತ್ತ
	        ದಿನದಿನ ಕಳೆಯಲು ಎಲ್ಲವ ಮರೆತನು ವಂಶದ ಕುಡಿಯನು ಸಲುಹುತ್ತ
	        ವರುಷಗಳನ್ನೆರಡಾದರೂ ಅವನು ಮರುಮದುವೆಯ ತಾನಾಗಿಲ್ಲ
	        ಎರಡನೆ ಮದುವೆಯ ಯೋಚನೆಯನ್ನು ಕನಸಲಿ ಕೂಡ ಮಾಡಿಲ್ಲ
	        ರಾಜನು ಪ್ರೀತಿಯ ಸುತನನು ಬೆಳೆಸುತ ಕರೆದನು ’ದೇವವ್ರತ’ನೆಂದು
	        ಲೋಕದ ಜನಗಳು ದೇವವ್ರತನನು ಕರೆದರು ’ಗಂಗಾಸುತ’ನೆಂದು
	ಗಂಗಾಪುತ್ರನು ಕಲಿತನು ಎಲ್ಲಾ ವಿದ್ಯೆಯ ಭಾರ್ಗವರಾಮನಲಿ
	        ಮಹಾಪರಾಕ್ರಮಿ ಎನ್ನುವ ಕೀರ್ತಿಯ ಶಾಶ್ವತ ಪಡೆದನು ಲೋಕದಲಿ
	ಶಂತನು ಒಂದಿನ ಬೇಟೆಯನಾಡುತ ಬಂದನು ಯಮುನಾ ನದಿ ಬಳಿಗೆ
	        ಕಂಡನು ನದಿಯಲಿ ದೋಣಿಯ ನಡೆಸುವ ಸುಂದರ ತರುಣಿಯ ಆ ಘಳಿಗೆ
	        ಕಂಡವನೇ ಮನಸೋತನು ಚೆಲುವೆಯ ಬಳಕುವ ದೇಹದ ಮೈ ಸಿರಿಗೆ
	        ಕೇಳಿದನವಳನು- ರಾಣಿಯ ಮಾಡುವೆ ಬರುವೆಯ ನೀನು ಅರಮನೆಗೆ
	        ಸುಂದರಿ ನಾಚುತ ನುಡಿದಳು- ಪ್ರಭುವೇ.. ಕೇಳಿರಿ ನನ್ನಯ ತಂದೆಯನು
	        ತಂದೆಯ ಮಾತನು ಮೀರೆನು ಎಂದೂ, ಬನ್ನಿರಿ ತೋರುವೆ ಅವನನ್ನು
	        ಎನ್ನುತ ರಾಜನ ಕರೆದೊಯ್ದಿದ್ದಳು ತನ್ನಯ ವಾಸಸ್ಥಾನಕ್ಕೆ
	        ಎಳೆತನದಿಂದಲಿ ತನ್ನನು ಸಾಕಿದ ನೆಚ್ಚಿನ ತಂದೆಯ ಸನಿಹಕ್ಕೆ
	        ಬೆಸ್ತರ ಒಡೆಯನು ದಾಶರಾಜನು ಶಂತನು ಮಾತನು ಆಲಿಸಿದ
	        ಮಗಳ ಭವಿಷ್ಯವು ಎದುರಿಗೆ ಬಂದಿರೆ ಮನದಲಿ ತುಂಬಾ ಯೋಚಿಸಿದ! 
	        ವಯಸಿನ ಅಂತರ ಬಹಳಷ್ಟಿರುವುದು ಆಗುವನೇ ಇವ ಒಳ್ಳೆ ಸಖ
	        ಮಗಳನು ಮುದುಕನಿಗಿತ್ತರೆ ಅವಳಿಗೆ ಸಿಗುವುದು ತಾನೆ ಎಂಥ ಸುಖ?
	        ಗಂಧವತಿಯ ಸೌಂದರ್ಯವ ಕಂಡು ಮುದುಕನ ಮನ ಹಾತೊರೆದಿಹುದು  
	        ಬೆಸ್ತರ ಹುಡುಗಿಗೆ ಪಟ್ಟದರಾಣಿಯ ಪಟ್ಟವು ತಪ್ಪದೆ ದೊರೆಯುವುದು
	         ಆದರೆ ರಾಜ್ಯದ ಒಡೆತನವೆಂದೂ ಹಿರಿಯ ಮಗನಿಗೇ ಸಿಕ್ಕುವುದು
	        ಮುದ್ದಿನ ಮಗಳಿಗೆ ಮಕ್ಕಳು ಹುಟ್ಟಲು ದಾಸ್ಯವೆ ಅವರಿಗೆ ದಕ್ಕುವುದು
	        ಎಂದಾಲೋಚಿಸಿ ಬೆಸ್ತರ ಒಡೆಯನು ನೋಡುತ ಶಂತನು ರಾಜನನು
	        ಕಡ್ಡಿಯ ಮುರಿಯುವ ರೀತಿಯಲಂದೇ ಒಡ್ಡಿದನೊಂದು ಷರತ್ತನ್ನು!
	        ರಾಜನೆ ಆಲಿಸು ರಾಜ್ಯದ ಒಡೆತನ ದೊರೆಯಲಿ ಮುಂದಿನ ದಿನಗಳಿಗೆ
	         ನನ್ನಯ ಮುದ್ದಿನ ಮಗಳಲಿ ನಾಳೆಗೆ ಹುಟ್ಟುವ ನಿನ್ನಯ ಮಕ್ಕಳಿಗೆ
	        ಪ್ರೀತಿಯ ಪುತ್ರನು ಗಂಗಾತನಯನು ದೇವವ್ರತ ತಾನಿರುವಾಗ
	        ಬೇರೆ ಮಕ್ಕಳಿಗೆ ರಾಜ್ಯವ ನೀಡಲು ಸಾದ್ಯವೇನು ರಾಜನಿಗಾಗ?
	        ಮನಸಿಗೆ ಒಪ್ಪದೆ ರಾಜನು ಬಂದನು ಹಸ್ತಿನಪುರಕ್ಕೆ ಹಿಂದಿರುಗಿ
	        ಮನದಲ್ಲಿಯೇ ತಾ ಕೊರಗುತ ಕುಳಿತನು ಹಗಲಿರುಳೂ ಸುಂದರಿಗಾಗಿ
	        ಅವಳನು ಪಡೆಯುವ ದಾರಿಯು ಕಾಣದೆ ಶಂತನು ಹಿಡಿದನು ಹಾಸಿಗೆಯ
	        ದಿನಗಳು ಉರುಳುತಲಿರೆ ಕೃಶನಾದನು ಸಹಿಸದೆ ವಿರಹದ ಬೇಸಿಗೆಯ
	ತಂದೆಯ ಚಿಂತೆಗೆ ಕಾರಣವರಿಯದೆ ದೇವವ್ರತ ತಾ ಮಿಡುಕಿದನು
	        ಸಾರಥಿ ಮೂಲಕ ಸಂಗತಿ ಅರಿಯುತ ಪರಿಹಾರವ ತಾ ಹುಡುಕಿದನು
	        ದಶರಥ ನೀಡಿದ ವಚನವ ಉಳಿಸಲು ರಾಮನು ನಡೆದನು ಕಾನನಕೆ
	        ಶಂತನು ಮನಸಿನ ಆಸೆಯ ನೀಗಿಸೆ ಪುತ್ರನು ಬೆಸ್ತರ ಪಾಳೆಯಕೆ 
	ಮರುದಿನ ಬಂದನು ಯಮುನಾತೀರದ ಬೆಸ್ತರ ಒಡೆಯನ ಬಳಿಯಲ್ಲಿ
	        ದಾಶರಾಜನಿಗೆ ಕೈಗಳ ಮುಗಿಯುತ ನುಡಿದನು ದೃಢತೆಯ ನುಡಿಯಲ್ಲಿ-
	        ಬಂಧುವೆ ಒಪ್ಪುವೆ ನಿನ್ನ ಷರತ್ತನು ರಾಜ್ಯದ ತ್ಯಾಗವ ಮಾಡುವೆನು
	        ರಾಜ್ಯದ ಮೋಹವ ಇಂದೇ ಈಗಲೇ ನಿನ್ನೆದುರಲ್ಲೇ ದೂಡುವೆನು
	        ತಂದೆಯ ನಂತರ ರಾಜ್ಯದ ಒಡೆತನ ಹುಟ್ಟುವವರಿಗೇ ನೀಡುವೆನು
	        ತಂದೆಯ ಸುಖವೇ ನನ್ನಯ ಸುಖವು ಎನ್ನುತ ನಿನ್ನಲಿ ಬೇಡುವೆನು
	        ನನ್ನನು ನಂಬುವೆಯಾದರೆ ಒಪ್ಪಿಕೋ ಇಲ್ಲದೆ ಹೋದರೆ ಅಳಿಯುವನು
	        ನನ್ನಯ ತಂದೆಗೆ ನಿನ್ನಯ ಮಗಳನು ಕೊಟ್ಟರೆ ತಪ್ಪದೆ ಉಳಿಯುವನು
	        ಎನ್ನಲು ಬೆಸ್ತರ ಒಡೆಯನು ನುಡಿದನು- ನಿನ್ನಯ ಮಾತನು ಒಪ್ಪಿದೆನು
	        ತಂದೆಯ ಆಸೆಯ ತೀರಿಸಲೋಸುಗ ಬಂದಿಹೆ, ನಿನ್ನನು ಮೆಚ್ಚಿದೆನು
	        ಆದರೆ ಮುಂದಿನ ದಿನದಲಿ ನಿನ್ನಯ ಮಕ್ಕಳು ಇದನ್ನು ಒಪ್ಪುವರೆ
	        ಅವರವರುಗಳಿಗೆ ಜಗಳವು ಬಂದರೆ ನೆಮ್ಮದಿಯಿಂದ ಬದುಕುವರೆ? 
	        ಎನ್ನುತ ತನ್ನಯ ಮನಸಿನ ದುಗುಡವ ತಿಳಿಸಿದ ದೇವವ್ರತನಲ್ಲಿ
	        ಕೆಲ ಕ್ಷಣ ಮೌನವು ಮನೆಯನು ಮಾಡುತ ನೆಲೆಸಿತು ಅವರುಗಳೆಡೆಯಲ್ಲಿ!
	ಮುಂದಿನ ಕ್ಷಣದಲಿ ಮೂಡಿತು ನಿಶ್ಚಯ ಸದೃಢ ದೇವವ್ರತನಲ್ಲಿ
	        ತಂದೆಯ ಅಸೆಯ ತೀರಿಸಲೊಂದೇ ಮಾರ್ಗವು ಉಳಿದಿತ್ತವನಲ್ಲಿ
	        ನುಡಿದನು- ಅಯ್ಯಾ ಬಂಧುವೆ ಆಲಿಸು ಎಂದೂ ಸಂಶಯಪಡಬೇಡ
	        ಗಂಗಾಪುತ್ರನು ನೀಡಿದ ಮಾತನು ಎಂದೂ ತಪ್ಪನು ಇದು ನೋಡ 
	        ತಂದೆಯ ಹಿತವನು ಕೋರುವೆನೆಂದೂ ಹಿಂದಿಡೆನೆಂದೂ ಹೆಜ್ಜೆಯನು 
	        ನಿನ್ನಯ ಸಂಶಯ ತೀರಿಸಲೋಸುಗ ಮಾಡವೆನೊಂದು ಪ್ರತಿಜ್ಞೆಯನು
	        ಸೂರ್ಯ ಚಂದ್ರ ನಕ್ಷತ್ರಲೋಕಗಳು ಸಾಕ್ಷಿಯಾಗಿ ಇರುವುವು ಇಲ್ಲಿ
	        ಪಂಚಭೂತಗಳು ಎಲ್ಲ ಲೋಕಗಳು ಸಾಕ್ಷಿಯಾಗಿ ನಿಂತಿರುವಲ್ಲಿ
	        ಭೂಮಿಯಲೆಂದೂ ತಪ್ಪದೆ ಉಳಿಯುವೆ ಬ್ರಹ್ಮಚಾರಿಯೇ ನಾನಾಗಿ
	        ನನ್ನಯ ಮಾತನು ಉಳಿಸಿಕೊಳ್ಳುವೆನು ತಾಯಿಯ ಪಾದದಾಣೆಯಾಗಿ
	ಶಂತನುಪುತ್ರನ ಭೀಷ್ಮಪ್ರತಿಜ್ಞೆಯ ಆಲಿಸಿ ಜಗವೇ ಬೆರಗಾಯ್ತು
	        ದೇವವ್ರತನಿಗೆ ಭೀಷ್ಮನು ಎಂಬುವ ಹೆಸರಿನ ಖ್ಯಾತಿಯ ಬೆಳಕಾಯ್ತು
	        ದೇವದುಂದುಬಿಯು ಮೊಳಗುತಲಿರಲು ಹನಿ ಹನಿ ಹೂಮಳೆ ಉದುರಿತ್ತು
	        ದಾಶರಾಜ ಬಯಸಿದ್ದು ದಕ್ಕಿತು ಮನಸಿನ ಶಂಕೆಯು ಚದುರಿತ್ತು
	        ಯುವರಾಜನ ಆ ದೃಢನಿಶ್ಚಯಕೆ ಲೋಕವೆಲ್ಲ ತಲೆದೂಗಿತ್ತು
	        ತ್ಯಾಗವ ಮಾಡುವ ತ್ಯಾಗಿಗೆ ತಿಳಿವುದು ಅದರಲ್ಲಿನ ಸುಖ ಯಾವೊತ್ತೂ 
	ಬೆಸ್ತರ ಒಡೆಯನು ದಾಶರಾಜನು ನಾಚಿದ ತನ್ನಯ ಕೃತ್ಯಕ್ಕೆ
	        ಉತ್ತಮ ವ್ಯಕ್ತಿಯ ಬಾಳನು ಕೊಂದೆನು ಎನ್ನುತ ನೊಂದನು ಸದ್ಯಕ್ಕೆ
	        ಹೇಳಿದ- ಕಂದಾ ಹಿಂದಕೆ ಪಡೆದುಕೋ ನಿನ್ನಯ ಮನಸಿನ ನಿರ್ಧಾರ
	        ತಂದೆಯ ನಂತರ ನೀನೇ ವಹಿಸಿಕೋ ನಾಡಿನ ಸಾಮ್ರಾಜ್ಯದ ಭಾರ
	        ನನ್ನ ದುರಾಸೆಗೆ ನಿನ್ನಯ ಸುಖವನು ಬಲಿಗೊಡಬೇಡ ನನಗಾಗಿ
	        ನಿನ್ನೊಟ್ಟಿಗೆ ನಾ ಮಗಳನು ಕಳುಹುವೆ ತಂದೆಗೆ ಒಪ್ಪಿಸು ಖುಷಿಯಾಗಿ
	        ಪರಿಪರಿಯಾಗಿ ಬೇಡಿದನಾದರೂ ದೇವವ್ರತ ಅದನೊಪ್ಪಿಲ್ಲ
	        ತನ್ನಯ ಮಾತಿಗೆ ಬದ್ಧನಾದ ಅವನೆಂದೂ ಮಾತಿಗೆ ತಪ್ಪಿಲ್ಲ
	        ಭೀಷ್ಮಪ್ರತಿಜ್ಞೆಯ ಮಾಡಿದನಾಗಿ ’ಭೀಷ್ಮ’ನೆಂದೇ ತಾ ಹೆಸರಾದ
	        ಮಾನವಲೋಕಕೆ ಮಾದರಿಯಾಗಿ ಮಾನವರೆದೆಯಾಳದಿ ಉಳಿದ
	        
	ಭೀಷ್ಮನು ತಂದೆಯ ಕೋರಿಕೆ ತೀರಿಸೆ ಸತ್ಯವತಿಯನ್ನು ಕರೆತಂದ
	        ಶಾಶ್ವತ ಕೀರ್ತಿಯ ಲೋಕದಿ ಪಡೆದು ತಂದೆಯ ಮದುವೆಗೆ ಮುಂದಾದ
	        ಶಂತನು ಭೀಷ್ಮನ ತ್ಯಾಗವ ಕೇಳಿ ಮುಮ್ಮಲ ಮರುಗಿದ ನೋವಿನಲಿ
	        ಎಂತಹ ಪಾಪದ ಕೆಲಸವ ಮಾಡಿದೆನೆನ್ನುತ ಕೊರಗಿದ ಮನಸಿನಲಿ
	        ಭೀಷ್ಮನ ಅಪ್ಪುತ ನುಡಿದನು ಶಂತನು- ಕಂದಾ ನನ್ನಲಿ ಕರುಣೆಯಿಡು
	        ದುರ್ಬಲ ಮನಸಿನ ನನ್ನನು ಮನ್ನಿಸಿ ನನ್ನಯ ನೋವಿಗೆ ಮುಕ್ತಿ ಕೊಡು
	        ನನ್ನಯ ಬಾಳಿನ ಸರ್ವವೂ ನೀನೇ ನೀನಿಲ್ಲದಿರೆ ನಾನಿಲ್ಲ
	        ನಿನ್ನಯ ಸುಖವೇ ನನ್ನಯ ಸುಖವು ನಿನಗೇತಕೆ ಇದು ತಿಳಿದಿಲ್ಲ
	ದಶರಥ, ಹೆಂಡತಿ ಮೋಹಕೆ ಬಿದ್ದು ರಾಮನು ಕಾಡಿನ ಪಾಲಾದ
	        ಶಂತನು ಹೆಣ್ಣಿನ ಆಸೆಗೆ ಬಿದ್ದು ಪುತ್ರನ ಬದುಕಿಗೆ ಉರುಳಾದ
	        ಎನ್ನುವ ನಿಂದೆಯು ಎಂದಿಗೂ ಉಳಿವುದು ಬೇಡಪ್ಪಾ ನನಗೀ ಮದುವೆ
	        ನಿನ್ನ ಪ್ರತಿಜ್ಞೆಯ ಹಿಂದಕೆ ಪಡೆದುಕೊ ಸಂತಸ ತರುವುದು ನನಗದುವೆ
	        ಶಂತನು ಪರಿಪರಿ ಬೇಡಿದನಾದರೂ ಭೀಷ್ಮನು ಒಪ್ಪಿಗೆ ಕೊಡಲಿಲ್ಲ
	        ಕೊಟ್ಟಭಾಷೆಯನು ಹಿಂದಕೆ ಪಡೆಯಲು ಅವನ ಮನಸ್ಸನು ಬಿಡಲಿಲ್ಲ
	        ಬೇರೆಯ ದಾರಿಯು ಕಾಣದೆ ಶಂತನು ಸತ್ಯವತಿಯನ್ನು ಸ್ವೀಕರಿಸಿ
	        ಬಾಳಿನ ಕುಡಿಯನು ಬಲಿಪಡೆದಂತಹ ತನ್ನಯ ಕೃತ್ಯಕೆ ಕಳವಳಿಸಿ
	        ತ್ಯಾಗವ ಮಾಡಿದ ತನ್ನಯ ಪುತ್ರನ ಭೀಷ್ಮಪ್ರತಿಜ್ಞೆಗೆ ಪ್ರತಿಯಾಗಿ
	        ಶಂತನು ನೀಡಿದ ತುಂಬಿದ ಮನದಲಿ ಇಚ್ಛಾಮರಣವ ವರವಾಗಿ
	ಶಂತನು ಮದುವೆಯು ಅಂತೂ ಆಯಿತು ದಾಶರಾಜ ಸುತೆ ಜೊತೆಯಲ್ಲಿ
	        ಕುಂಟುತ ತೆವಳುತ ಎಂತೋ ಸಾಗಿತು ದಂಪತಿ ಜೀವನರಥವಲ್ಲಿ
	        ಮುದುಕನಿಗಾದರು ಇಬ್ಬರು ಮಕ್ಕಳು ಮುಂದಿನ ಎರಡೇ ವರುಷದಲಿ
	        ರಾಜನ ವಂಶವು ಬೆಳೆಯಿತು ಎನ್ನುತ ರಾಜ್ಯವು ಮುಳುಗಿತು ಹರುಷದಲಿ
	        ’ಚಿತ್ರಾಂಗದ’ ಎನ್ನುವ ಹಿರಿಮಗನು ’ವಿಚಿತ್ರವೀರ್ಯ’ನು ಕಿರಿಯವನು
	        ಆದರೆ ಮಕ್ಕಳ ಲಾಲನೆ ಪಾಲನೆ ಮಾಡದೆ ಶಂತನು ಗತಿಸಿದನು
	        ಮಕ್ಕಳ ಪಡೆದರೂ ಚಿಕ್ಕವಯಸ್ಸಲಿ ಶಂತನು ಪತ್ನಿಗೆ ವೈಧವ್ಯ
	        ಭೀಷ್ಮನು ಮಕ್ಕಳ ಹೆಸರಲಿ ಹೊತ್ತನು ಕುರುಸಾಮ್ರಾಜ್ಯದ ಕರ್ತವ್ಯ! 
***
					
tumbaa chennaagide