1. ಕಣ್ಣುಗಳು
ನೂರಾರು ತಾರೆಗಳು
ಉಲ್ಕೆಗಳಾಗಿ ಉದುರಿದವು
ನಿನ್ನ ಕಣ್ ಹೊಳಪಿಗೆ ಸೋತು.
2. ಮಿಂಚು
ಬೆಳಕಾಗಿ ಬಾ, ಬೆಳದಿಂಗಳಾಗಿ ಬಾ
ಎಂದಾಡಿರೇ..
ಮಿಂಚಾಗಿ ಬಂದಳು
ದೃಷ್ಟಿಯನೆ ಹೊತ್ತೊಯ್ದಳು.
3. ಚಳಿ
ನವಂಬರ್ ಚಳಿ, ಭಾರವಾದ
ಕಂಬಳಿ ಹೊದೆಯಲು ಇಚ್ಚಿಸಿರಲು
ನಿನ್ನ ನೆನಪುಗಳು
ಬೆಚ್ಚನೆ ಭಿಗಿದಪ್ಪಿದವು.
4. ಹಣತೆ-ಪತಂಗ
ಸುಟ್ಟು ಬೂದಿಯಾಗುವೆ
ಎಂಬ ಅರಿವಿದ್ದರೂ ಏಕೆ
ಎನ್ನನೇ ಸುತ್ತಿ ಸುತ್ತಿ ಬರುತಿರುವೆ..
ನಿನ್ನ ಕೋಮಲ ರೆಕ್ಕೆಗಳ
ಸುಡುವ ಮನಸ್ಸಿಲ್ಲದೇ
ಇಗೋ.. ನಾನೇ ನಂದಿಹೋಗುತಿರುವೆ.
5. ನೀ ಚಂದಿರಳೇ..?
ಎಷ್ಟೇ ಹೊಳಪಿದ್ದರೂ
ಸ್ವಂತಿಕೆಯಿಲ್ಲದ ಹುಣ್ಣಿಮೆ
ಸೂರ್ಯನ ಪ್ರತಿಫಲನ
ಬಿಂಕದಲಿ ಬೀಗೊ
ನಿನ್ನ ರಾಶಿ ರಾಶಿ ಸೌಂದರ್ಯ
ನನ್ನ ಕಣ್ಮನಗಳ ಪ್ರತಿಫಲನ!
6. ಗರ್ವ
ನನ್ನ ಎದೆಯುಬ್ಬಿದೆ
ಧಮನಿ ಧಮನಿಯಲಿ
ನೀನಿರುವ
ಗರ್ವದಿಂದ..!!
7. ಶಿಕ್ಷೆ
ಜೀವಾವಧಿ ಶಿಕ್ಷೆಗೊಳಗಾದೆ
ಅವಳ ನೆನಪುಗಳ
ಭಿಗಿ ಬಂಧನದಲಿ
8. ಕೋರಿಕೆ
ಹೊಸೆದು ಹೊಸೆದು
ಕೈ ಸವೆದಿಹವು
ಇನ್ನಾದರೂ ಹಸನಾಗು
ಬದುಕೆ..!!
9. ಕ್ರೌಂಚವಧೆ
ಪ್ರಣಯಪಕ್ಷಿಗಳ ಕೊಲುವ
ಬೇಡನೂ ನಮ್ಮ ಜೋಡಿ ನೋಡಿ
ಸಂತಸಗೊಂಡನು
ಆದರೆ…,
ಆ ದೇವರೇಕೊ ಸಹಿಸದಾದನು.
10. ಪಾತರಗಿತ್ತಿ
ನಿನ್ನ ಮುಖವಾಡ ಹರಿದಿದೆ
ಸೊರಗಿರುವ ಬೆತ್ತಲೆ ಮನಸ್ಸು
ಇಣುಕಿದೆ, ಮುಚ್ಚದಿರು ಮರೆಮಾಚದಿರು..,
ವ್ಯರ್ಥವಾಗುವವು ನಿನ್ನೆಲ್ಲಾ ಪ್ರಯತ್ನಗಳು
ನೈಜತೆಯೊಂದೇ ನಿನಗುಳಿದ
ದಾರಿ ; ಪಾತರಗಿತ್ತಿ.
11. ಓ ಬೆಳಕೆ..
ನಿನ್ನ ಕಳೆದು ಬದುಕಲೆತ್ನಿಸಿ
ದಾರಿ ಮರೆತು ನಿಂತಿರುವೆ
ತಿರುಗಿ ನೋಡಿದರೆ ನೆರಳಿಲ್ಲ
ಅರಿತೆನಾಗ…
ಓ ಬೆಳಕೆ ನನ್ನೊಡನೆ ನೀನಿಲ್ಲ.
12. ಪಾಠ
ಬದುಕೆನಗೆ
ಶ್ರದ್ದೆಯಿಂದ
ಕಲಿಸುತಿಹುದು
ಬದುಕುವುದನ್ನ…!
13. ಮೊಳಕೆ
ಇಲ್ಲಿಗೆ ಮುಗಿದುಬಿಡಲೆಂದು
ಸಾಲು ಸಾಲು ನೆನಪುಗಳ
ಗುಂಡಿ ತೋಡಿ ಹೂತುಬಿಟ್ಟೆ
ಮೊದಲ ಮಳೆಯಲಿ
ಮಿಂದಾಗಲೇ ಅರಿವಾದದ್ದು..!
ಹೂಳಲಿಲ್ಲ ; ಬಿತ್ತಿದ್ದೇನೆಂದು.
14. ಗೋರಿ
ಎನ್ನ ಪ್ರೇಮಸೌಧವೇ
ಉರುಳಿಬಿದ್ದರೂ
ನನ್ನೆದೆ ಮೇಲೆ
ಹಾಗೆಯೇ ಕುಳಿತಿದ್ದ
ಗೋಪುರವ ಕಂಡು
ಜನ 'ಗೋರಿ' ಎಂದರು.
15. ಜಡೆಮಲ್ಲಿಗೆ
ರಾಮಮಂದಿರದಲ್ಲಿ
ಹಾಡಿದವಳ
ದಾವಣಿ ಲಂಗ
ಜಡೆಮಲ್ಲಿಗೆಗಳು
ಎನ್ನನು
ರಾಮಭಕ್ತನನ್ನಾಗಿಸಿದವು.
16. ಹನಿ ಸೂರ್ಯ
ಮುಸ್ಸಂಜೆ ಸೂರ್ಯ ಕಡಲ ಅಲೆಗಳ ಮೇಲೆ
ರಾಶಿ ರಾಶಿ ಹೊನ್ನನು ಪುಕ್ಕಟೆಯಾಗಿ ಚೆಲ್ಲುತ
'ನಾನು ಧಾನಶೂರ ಕರ್ಣನಲ್ಲ, ಅವನಪ್ಪ..!'
ಎಂದು ಗಹಗಹಿಸಿ ಮರೆಯಾದನು.
17. ಹನಿ ಸೂರ್ಯ
ಸುಲ್ತಾನನಾಗಿ ಸೂರ್ಯ ಕುದುರೆಯೇರಿ ಬರುತಿರೆ
ಹೂ ಧವಳವನ್ನಪ್ಪಿ ಮುದ್ದಿಸುತ್ತಾ ಮೈಮರೆತ
ಇಬ್ಬನಿ ಹನಿಗಳು ಪ್ರತಿರೋಧವಿಲ್ಲದೆ ಮಡಿದವು.
18. ಹನಿ ಸೂರ್ಯ
ಮುಂಜಾನೆದ್ದ ಸೂರ್ಯ ಆಕಳಿಸುತ್ತಾ ಬಂದು
ಮೋಡಕೆ ಎಡವಿ ಅಂಗಾತ ನೀರಿಗೆ ಬಿದ್ದಾಗ
ಕಡಲ ಅಲೆಗಳು ನಾಚಿ ಕೆಂಪದವು..!!
19. ಸೂರ್ಯ
ಮುಂಜಾನೆದ್ದು ಸ್ನಾನ ಮುಗಿಸಿ
ಇಸ್ತ್ರಿ ಮಾಡಿದ ಬಟ್ಟೆ ತೊಟ್ಟು ಹಾಜರಾದ ಸೂರ್ಯ
ನಾನಿನ್ನೂ ಮಲಗಿದ್ದನ್ನು ಕಂಡು
ಅಸೂಹೆಯ ನೋಟ ಬೀರಿ
ನನ್ನ ನಿದ್ರೆ ಕೆಡಿಸಿದ…!!!
20. ಸಿಂಧೂರ
ಸದಾ ಅವಳ ಬೆತ್ತಲೆ ಹಣೆಯನ್ನಪ್ಪಿ
ಮುತ್ತಿಡೋ ಸಿಂಧೂರವ ಕಂಡರೂ
ನಾ ಕರುಬುತ್ತೇನೆ
'ಅದು ನಿನ್ನ ಪ್ರತಿನಿಧಿಯೇ'
ಎಂದವಳು ಕೊಂಕಿಸಿ ನುಡಿದಾಗ
ಒಳಗೊಳಗೆ ಕರಗಿ ನೀರಾಗುತ್ತೇನೆ.
21. ಅನಾಥ ಪ್ರಜ್ಞೆ.
ಹೂವಿನ ಮಧುವಿನಾಳದ
ಒಳವಿಗಾಸೆಪಟ್ಟು
ಎಲೆ ಧವಳಗಳಡಿ
ಗೂಡು ಕಟ್ಟಿದೆ.
ನಂಬಿ ಬಂದ ಹೂ
ಸಂಜೆಗೆ ಬಾಡಿದೆ.
22. ಹಂಬಲ
ನಿನ್ನಲೇ ಕಳೆದೋದ ನನ್ನತನ ಬೀದಿಗೆ ಬಿದ್ದಮೇಲೆ
ನನ್ನೊಳಗೆ ನಾ ಕಂಡುಕೊಳ್ಳುತ್ತಿರುವೆ
ಎಂದೆಂದಿಗೂ ಕೊನೆಯಾಗುವ ಹಂಬಲವನ್ನು.
23. ನಿಟ್ಟುಸಿರು..
ಯಾವ ಕಟ್ಟು ಕಟ್ಟಳೆಗಳಿಲ್ಲದ
ಅಂತಸ್ತಿನ ಅತಿ-ಮಿತಿಗಳಿಲ್ಲದ
ಜಾತಿಯ ಆಳ-ಅಡಿಗಳಿಲ್ಲದ
ಕನಿಷ್ಠ ಸರಿ-ತಪ್ಪುಗಳಿಂದಲೂ ಹೊರತಾದ
ಲೋಕವೊಂದಿದೆಯಂತೆ
….ಅಲ್ಲಿ ಮತ್ತೆ ಸೇರೋಣ.
24. ನೆನಪು
ಕಯ್ಯಾರೆ ಕುಯ್ದು ತಂದು
ಮಾಲೆ ಕಟ್ಟಿದ ಹೂ
ಮತ್ಯಾರದೋ ಮುಡಿಯೇರಿದೆ
ಹೂಗಂಧವಿನ್ನೂ ಉಳಿದೇಯಿದೆ
ಕೈ ಬೆರಳುಗಳಲ್ಲಿ.
25. ಸವಾಲು
ನೀನು ಇನ್ನೆಂದಿಗೂ ಬೇಡ
ನಿನ್ನಿಂದ ದೂರ ಹೊರಟಿರುವೆ ಎಂದವಳೇ
ಮೊದಲು ನನ್ನೊಳಗಿಂದ ಹೊರ ಬಾ
ನಂತರವಷ್ಟೇ ನೀ ದೂರಾಗುವ ಯೋಚನೆ..
26. ನಿನ್ನತನ
ಎಲ್ಲದಕ್ಕೂ ಕೊನೆಯಿದೆ; ನಿನ್ನ ಮುಖವಾಡಕ್ಕೂ..
ಅನಂತರವೇ..
ನೀನು ನೀನಾಗಿಯೇ ಉಳಿಯಲು ಸಾಧ್ಯ.
27. ಅನ್ವೇಷಣೆ
ಎಲ್ಲೆಲ್ಲೋ ಹುಡುಕದಿರು
ಕಳೆದು ಹೋದವುಗಳೆಲ್ಲ ನಿನ್ನೋಳಗೆಯೇ ಹುದುಗಿವೆ
ನಿನ್ನ ಮನಸು ಕೂಡ.
28. ಅವಳು (ನನ್ನವಳು )
ಹಾಳಾದವಳು
ಅದೆಷ್ಟೋ ಸಾಲುಗಳ
ಗೀಚಿ ವಗಾಯಿಸಿದರೂ
ಎದೆಯೊಳಗೆ ನಿಘಂಟಾಗಿ
ಉಳಿದಿಹಳು.
-ಶರತ್ ಚಕ್ರವರ್ತಿ.
					
ಸುಂದರ ಸಾಲುಗಳು…
ಜೀವಾವಧಿ ಶಿಕ್ಷೆಗೊಳಗಾದೆ
ಅವಳ ನೆನಪುಗಳ
ಭಿಗಿ ಬಂಧನದಲಿ
all r nice honi gavanas ………… ,with best wishes…………………
sooper kalpane..chenda idhe
waw…nicee….
28 ಕ್ಕೂ ಓಟು ಹಾಕಿದೆ.
ನನಗೆ ಇಷ್ಟವಾದದ್ದು
"
ಎಲ್ಲದಕ್ಕೂ ಕೊನೆಯಿದೆ; ನಿನ್ನ ಮುಖವಾಡಕ್ಕೂ..
ಅನಂತರವೇ..
ನೀನು ನೀನಾಗಿಯೇ ಉಳಿಯಲು ಸಾಧ್ಯ."
excellent ‘HONEY’ಗಳು!
ನನ್ನ favourite—ಹಣತೆ , ಮೊಳಕೆ, ನೆನಪು.
expecting lot more.
ತುಂಬಾ ಅಂದವಾಗಿದೆ ಚುಟುಕುಗಳು…
ಕಯ್ಯಾರೆ ಕುಯ್ದು ತಂದು
ಮಾಲೆ ಕಟ್ಟಿದ ಹೂ
ಮತ್ಯಾರದೋ ಮುಡಿಯೇರಿದೆ
ಹೂಗಂಧವಿನ್ನೂ ಉಳಿದೇಯಿದೆ
ಕೈ ಬೆರಳುಗಳಲ್ಲಿ.
ಅದ್ಬೂತ ಭಾವ….
gud feelings……
cngradts……:-)
ಇಷ್ಟೊಂದು ಬಿಜಿ ಶೆಡುಲ್ ಇದ್ದರು ಎಷ್ಟೊಂದು ಮಧುರ ಚುಟುಕುಗಳು