ದಯೆಯ ಯಾದೃಚ್ಛ ಕ್ರಿಯೆ (Random act of kindness): ದಿನೇಶ್ ಉಡಪಿ

ಶುಕ್ರವಾರ ಕಾಲೇಜಿನ ಕೆಲಸಕ್ಕೆ ರಜೆ ಹಾಕಿಕೊಂಡು, ಕೆಲವು ಅಗತ್ಯ ಕೆಲಸಕ್ಕಾಗಿ ಕೆ.ಆರ್.ನಗರಕ್ಕೆ ಹೋಗಬೇಕಿತ್ತು. ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿತ್ತು, ಅತಿಯಾದ ತೇವಾಂಶದ ಕಾರಣ ವಿಪರೀತ ಶೆಕೆಯೂ ಇತ್ತು. ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಕೆಲಸ ಮುಗಿಸಿಕೊಂಡು ಮೈಸೂರಿನತ್ತ ಹೊರಟೆ. ಬಿಳಿಕೆರೆ ಹತ್ತಿರ ಬರುವಷ್ಟರಲ್ಲಿ ಮಳೆ ಸುರಿಯತೊಡಗಿತು, ಕುಂಭದ್ರೋಣ ಮಳೆ ಅಂತಾರಲ್ಲ ಹಾಗೆ. ಕಾರಿನ ವೈಪರ್ ಪೂರ್ತಿ ವೇಗದಲ್ಲಿ ನೀರನ್ನು ತಳ್ಳುತ್ತಿದ್ದರೂ ರಸ್ತೆ ಕಾಣದಷ್ಟು ಮಳೆ. ಬಹುತೇಕ ಎಲ್ಲ ವಾಹನಗಳೂ ರಸ್ತೆ ಪಕ್ಕ ಹಾಕಿಕೊಂಡು ನಿಂತಿದ್ದರು. ನನ್ನ ಚಿರಪರಿಚಿತ ರಸ್ತೆ ಮತ್ತು ಮಳೆ ನನ್ನ ಫೇವರೀಟ ! ಕಾರಣವಾಗಿ ಅದರಲ್ಲೇ ಎಚ್ಚರಿಕೆಯಿಂದ ವಾಹನ ಚಲಾಯಿಸಿಕೊಂಡು ರಿಂಗರೋಡ್ ದಾಟಿ ನಗರದೊಳಗೆ ಬಂದೆ. ಮಳೆ ಸುರಿಯುತ್ತಲೇ ಇತ್ತು. ಕೊರೋನಾ ಕಾರಣವಾಗಿ ಹೋಟೆಲ್ ಗಳಿಗೆ ಹೋಗಿ ಯಾವ ಕಾಲವಾಗಿತ್ತೋ? ಆದರೆ ಈ ಜಡಿಮಳೆಯಲ್ಲಿ ಸಂಜೆಯ ಬಿಸಿ ಚಹಾದ ಟೆಂಪ್ಟೇಶನ್ ತಡೆಯಲಾಗದೇ ಮುಂದಿನ ಒಂದು ಸಿಗ್ನಲ್ ನಲ್ಲಿ ಇರುವ ನನ್ನ ರೆಗುಲರ್ ರೆಸ್ಟುರಾಗೆ ಹೊರಟೆ. ಮಳೆಯಲ್ಲೇ ಇಳಿದು, ಒಳಗೆ ನುಗ್ಗಿ ಕೂತೆ. ಚಹಾಕ್ಕೆ ಆರ್ಡರ್ ಮಾಡಿ ಕಾಯುತ್ತಾ ಕೂತವನಿಗೆ ಒಂದು ಒಳ್ಳೆಯ ಕಥೆ, ಘಟನೆಯ ರೂಪದಲ್ಲಿ ಸಿಕ್ಕಿತ್ತು!.

ವಿಪರೀತ ಮಳೆಯ ಕಾರಣ ಒಳಗೆ ಜನರೇ ಇರಲಿಲ್ಲ. ಹೊರಗೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಾ ಕೂತಿದ್ದೆ. ಬಾಗಿಲಿಗೆ ಹತ್ತಿರವಿದ್ದ ಒಂದು ಟೇಬಲ್ ನಲ್ಲಿ ಒಬ್ಬ ಸಧ್ರಢಕಾಯದ ಯುವಕ ಕೂತಿದ್ದ. ಟೀ ಶರ್ಟ ಮತ್ತು ಮಿಲಿಟರಿ ಡಿಸೈನಿನ ಸ್ಪೋರ್ಟ್ಸ ಪ್ಯಾಂಟ ಹಾಕಿದ್ದ. ನುಣ್ಣಗೆ ಶೇವ್ ಮಾಡಿದ ತಲೆ, ಆತ ಮಿಲಿಟರಿಗೆ ಸಂಬಂಧಪಟ್ಟವನಿರಬೇಕು ಅಂದುಕೊಂಡೆ. ಧಾರಾಕಾರವಾಗಿ ಮಳೆ ಸುರಿಯುತ್ತಲೇ ಇತ್ತು. ಹೊಟೆಲ್ ಎದುರಿನ ಒಂದು ಸಿಗ್ನಲ್ ಜಂಕ್ಷನ್ ನಲ್ಲಿ ಬಿಕ್ಷೆ ಬೇಡುತ್ತಾ ನಿಲ್ಲುತ್ತಿದ್ದ ಒಬ್ಬ ಕುರುಡು ಮುದುಕಿ, ಮತ್ತು ಅವಳ ಜೊತೆಗಿದ್ದ ಒಬ್ಬ ಪೀಚಲು ಹುಡುಗ, ಮಳೆಯಲ್ಲಿ ತೋಯಿಸಿಕೊಂಡು ಹೋಟೆಲ್ ಮುಂಭಾಗಕ್ಕೆ ಬಂದು ನಿಂತರು. ಮಳೆಯಲ್ಲಿ ನೆನೆದ ಮುದುಕಿ ಚಳಿಯಿಂದ ನಡುಗುತ್ತಾ ಇದ್ದುದನ್ನು ಗಮನಿಸಿದ ಹೋಟೆಲ್ ಮ್ಯಾನೇಜರ ಅವರನ್ನು ಒಳಗೆ ಬಂದು ಕೂರಲು ಹೇಳಿದ. ಇದು ಬಹಳ ಅಪರೂಪವಾಗಿತ್ತು, ಏಕೆಂದರೆ ಒಂದು ಕಪ್ ಚಹಾಕ್ಕೆ 40 ರೂಪಾಯಿ ಬಿಲ್ ಮಾಡುವ ಆ ಹೋಟೆಲ್ ಸ್ವಲ್ಪ ದುಬಾರಿಯೇ (ನನ್ನಂತಹವರಿಗೆ). ನಡುಗುತ್ತ ಕುಳಿತ ಮುದುಕಿಗೆ ಬಿಸಿ ಚಹಾದ ಅವಶ್ಯವಿತ್ತು, ಅವಳ ಜೊತೆಗೆ ಇದ್ದ ಹುಡುಗ ವೇಟರ್ನನ್ನು ಬಹುಶ: ಚಹಾಕ್ಕೆ ಎಷ್ಟು ರೇಟು ಎಂದು ಕೇಳಿರಬೇಕು.

ಅಷ್ಟರಲ್ಲಿ ಆ ವೇಟರನನ್ನು ಅಲ್ಲಿ ಕೂತಿದ್ದ ಯುವಕ ತನ್ನ ಟೇಬಲ ಹತ್ತಿರ ಕರೆದು ಏನೋ ಹೇಳಿದ. ಸ್ವಲ್ಪ ಹೊತ್ತಿನಲ್ಲಿ ವೇಟರ್ ಬಿಸಿ ಚಹಾ ಮತ್ತು ಯಾವುದೋ ಒಂದು ತಿಂಡಿಯ ಪ್ಲೇಟನ್ನು ಆ ಮುದುಕಿ ಮತ್ತು ಹುಡುಗ ಕೂತಿದ್ದ ಟೇಬಲ್ ಮೇಲೆ ತಂದಿಟ್ಟ. ಅಷ್ಟರಲ್ಲಿ ನನ್ನ ಚಹಾವೂ ಬಂದಿತ್ತು. ಹೊರಗೆ ಮಳೆ ಧೋ ಎಂದು ಸುರಿಯುತ್ತಲೇ ಇತ್ತು. ನಾನು, ಆ ಯುವಕ, ಮ್ಯಾನೇಜರ್ ಮೂರ್ನಾಲ್ಕು ವೇಟರ್ ಗಳು ಎಲ್ಲರೂ ಹೊರಗಡೆ ಸುರಿಯುತ್ತಿದ್ದ ಮಳೆಯನ್ನೇ ನೋಡುತ್ತಾ ಸಮಯ ಕಳೆದಿದ್ದಾಯ್ತು. ತಿಂಡಿ ತಿಂದು ಚಹಾ ಕುಡಿದು ಕೂತಿದ್ದ ಅವರ ಟೇಬಲ್ ಹತ್ತಿರಕ್ಕೆ ಬಿಲ್ ತೆಗೆದುಕೊಂಡು ಹೋದ ವೇಟರ್, ಯುವಕನ ಕಡೆಗೆ ತೋರಿಸುತ್ತಾ ಏನೋ ಹೇಳಿ ಬಿಲ್ ಅನ್ನು ವಾಪಸ್ ತೆಗೆದುಕೊಂಡು ಹೋದ. ಅವರ ಬಿಲ್ಲನ್ನು ನಾನು ಕೊಡುತ್ತೇನೆ ಅಂತ ಯುವಕ ಹೇಳಿದ್ದು ಗೊತ್ತಾಯಿತು. ಮತ್ತೆ ಅವರ ಟೇಬಲ್ ಹತ್ತಿರ ಹೋದ ಮ್ಯಾನೇಜರ್ ಆ ಮುದುಕಿ ಮತ್ತು ಹುಡುಗನ ಹತ್ತಿರ ಏನೋ ಮಾತಾಡಿ, ವೇಟರ್ ನ್ನು ಕರೆದು ಏನೋ ಹೇಳಿದ, ಒಳಗೆ ಹೋದ ಆತ ಸ್ವಲ್ಪ ಹೊತ್ತಿನಲ್ಲಿ ಒಂದು ತಿಂಡಿಯ ಪಾರ್ಸೆಲ್ ಕವರನ್ನು ತಂದು ಅವರ ಕೈಗಿತ್ತ. ಅಷ್ಟರಲ್ಲಿ ಮಳೆ ಕಡಿಮೆಯಾಗಿದ್ದರಿಂದ ಅವರಿಬ್ಬರೂ ಅಲ್ಲಿಂದ ಎದ್ದರು. ಆ ಹುಡುಗ ಮುದುಕಿಯ ಕೈ ಹಿಡಿದುಕೊಂಡು ಪಾರ್ಸೆಲ್ ಎತ್ತಿಕೊಂಡು ಹೊರನಡೆದು, ರಸ್ತೆ ದಾಟುವುದು ಕಾಣಿಸಿತು.

ಸ್ವಲ್ಪ ಹೊತ್ತಿನ ನಂತರ ವೇಟರ್ ಬಂದು ಆ ಯುವಕನಿಗೆ ಬಿಲ್ ಕೊಟ್ಟ, ಅದನ್ನು ಎತ್ತಿಕೊಂಡ ಆತ ಮ್ಯಾನೇಜರ್ ಬಳಿಗೆ ಹೋದ. ಇಬ್ಬರ ಮಧ್ಯ ಸ್ವಲ್ಪ ಹೊತ್ತು ಏನೋ ಮಾತುಕತೆ ಆಯಿತು. ಬಿಲ್ ಕೈಯಲ್ಲಿ ಹಿಡಿದುಕೊಂಡು ಇಬ್ಬರೂ ಮಾತನಾಡುವುದು ಕಂಡು ನನಗೆ ಸಂಶಯ ಶುರುವಾಯಿತು. ನಾನು ಬರೀ ಟೀ ಕೊಡಲು ಹೇಳಿದ್ದು, ನೀವು ತಿಂಡಿಯನ್ನೂ ಕೊಟ್ಟು ಅದರ ಬೆಲೆಯನ್ನೂ ಸೇರಿಸಿದ್ದೀರಾ ಎಂದು ಆಕ್ಷೇಪಿಸುತ್ತಿರಬಹುದಾ? ಅಂತ ನಾನು ಅಂದುಕೊಂಡೆ. ನಂತರ ಆತ ಬಿಲ್ ಅನ್ನು ಇಟ್ಟು, ತನ್ನ ಟೇಬಲ್ ಹತ್ತಿರ ಬಂದು ಜರ್ಕಿನ್ ಹಾಕಿಕೊಂಡು, ಹೆಲ್ಮೆಟ್ ಕೈಯಲ್ಲಿ ಹಿಡಿದು ಮ್ಯಾನೇಜರನಿಗೆ ವಿಷ್ ಮಾಡಿ ಹೊರಟ. ನಾನು ಗಮನಿಸುತ್ತಲೇ ಇದ್ದೆ. ಆಮೇಲೆ ಮ್ಯಾನೇಜರ್ ನನ್ನ ಹತ್ತಿರದ ಟೇಬಲ್ಗೆ ಬಂದು ಮೊಬೈಲ ನೋಡುತ್ತಾ ಕುಳಿತ. ನಾನು ಆತನನ್ನ ಮಾತಿಗೆಳೆದೆ, “ಏನಾಯಿತು ಸರ್?” ಎಂದೆ, ಆತ ಬಹಳ ಉತ್ಸಾಹದಿಂದ “ ಅಯ್ಯೋ, ಒಂದು ಕಥೆ ಆಯ್ತು ಕೇಳಿ” ಅಂತ ಶುರು ಮಾಡಿದ. ಮುದುಕಿ ಮತ್ತು ಹುಡುಗ ಮಳೆಯಲ್ಲಿ ನೆನೆದುಕೊಂಡು ಬಂದು ಚಹಾ ಕೇಳಿದಾಗ, ಆ ಯುವಕ ಕರೆದು ಅವರಿಗೆ ಚಹಾ ಮತ್ತು ತಿಂಡಿಯನ್ನು ಕೊಡಿ ನಾನು ಬಿಲ್ ಕೊಡುತ್ತೇನೆ, ಅಂತ ಹೇಳಿದ ಘಟನೆವರೆಗೂ ನನ್ನ ಊಹೆ ಸರಿಯಾಗಿತ್ತು. ಮ್ಯಾನೇಜರ್ ಮುಂದುವರೆಸಿದ, ʼ ಬೆಳಗಿನ ತಿಂಡಿ ಉಳಿದಿತ್ತು, ಚೆನ್ನಾಗೆ ಇತ್ತು, ಅದನ್ನ ನಾನೇ ಪಾರ್ಸೆಲ್ ಮಾಡಿ ಕೊಡಲು ಹೇಳಿದೆʼ ಅಂದ. ಮುಂದಿನ ಕಥೆಯಲ್ಲಿಯೇ ಟ್ವಿಸ್ಟ್ ಇದ್ದದ್ದು.

ನಾನು ಕೇಳಿದೆ “ಮತ್ತೆ ಕೊನೆಗೆ ಆತ ಏನೋ ತಕರಾರು ತೆಗೆದನಲ್ಲ?” ಅಂದೆ. ʼ ಏ, ಅಂತದು ಏನೂ ಇಲ್ಲ ಸರ್, ಆ ಕೊಡಗು ಹುಡುಗ ಇದ್ದನಲ್ಲ ಅವನು, ಅವರಿಗೆ ಚಹಾ ತಿಂಡಿ ಕೊಟ್ಟು ಅದನ್ನು ನನ್ನ ಬಿಲ್ಲಿನಲ್ಲಿ ಸೇರಿಸಿ ಅಂತ ಹೇಳಿದ್ದ”. ನಾನು ಕೇಳಿದೆ, “ ಮತ್ತೆ ಬಿಲ್ ಕಟ್ಟುವಾಗ ಏನಾಯಿತು?”, ಮ್ಯಾನೇಜರ್ ನಗುತ್ತಾ ಹೇಳಿದ “ ಅವರಿಗೆ ಕೊಟ್ಟ ಬಿಲ್ ಅಲ್ಲಿ PAID ಅಂತ ಸೀಲ್ ಹಾಕಿ ಕೊಟ್ಟಿದ್ದೆ ಅಂದ”. ಒಂದು ನಿಮಿಷ ನನಗೆ ಗೊಂದಲವಾಯಿತು, ಆತ ಮುಂದುವರೆಸಿದ “ ಅಲ್ಲ ಅವರು ಒಬ್ಬ ಕಸ್ಟಮರ್ ಆಗಿ ಇನ್ನೊಬ್ಬರ ಬಿಲ್ ಕೊಡಬಹುದಾದರೆ, ನಾನು ಅಂತಹ ಒಳ್ಳೆಯ ಕಸ್ಟಮರ್ ಬಿಲ್ಲ ಅನ್ನು ಹೋಟೆಲ್ ಲೆಕ್ಕಕ್ಕೆ ಸೇರಿಸಿ ಕಾಂಪ್ಲಿಮೆಂಟ್ ಅಂತ ಸೇರಿಸಬಾರದಾ?, ಅವರು ಬಂದು, ಇಲ್ಲಾ ನಾನು ಮೊದಲೇ ಹೇಳಿದ್ದೆ, ಬಿಲ್ ಹಣವನ್ನು ನಾನೇ ಕೊಡುತ್ತೇನೆ ಅಂತ ಹಠ ಹಿಡಿದಿದ್ದರು, ನಾನು ಪಡೆಯಲಿಲ್ಲ” ಅಂದ, ನನಗೆ ಸೋಜಿಗವಾಯಿತು. ಬಿಸಿನೆಸ ಮನಸ್ಥಿತಿಯ ಹೋಟೆಲನವರು ಚಿಲ್ಲರೆ ಇಲ್ಲದೇ ಇದ್ದರೆ ಚಾಕಲೇಟ ಕೊಡುವವರು, ಅಂತಹುದರಲ್ಲಿ, ಒಂದು ಒಳ್ಳೆಯ ಮನಸ್ಸಿನ ಕೆಲಸಕ್ಕೆ ಸಂತೋಷಪಟ್ಟು ಅವನಿಂದ ಹಣ ಪಡೆಯದೇ ಇರುವ ಕೆಲಸ ಮಾಡಿದ್ದು ಕಂಡು ಸಂತೋಷವಾಯಿತು. ಒಬ್ಬ ವ್ಯಕ್ತಿಯ random act of kindnesss ಇನ್ನೊಬ್ಬನನ್ನು ಅದೂ ಒಬ್ಬ ವ್ಯಾಪಾರಿಯನ್ನು ಪ್ರಭಾವಿಸಿದ್ದನ್ನು ಮತ್ತು Pay it forward ಪದ್ಧತಿ ಕೆಲಸ ಮಾಡುವದನ್ನು ಕಣ್ಣಾರೆ ಕಂಡಂತಾಯಿತು.

-ದಿನೇಶ್ ಉಡಪಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಹೆಚ್ ಎನ್ ಮಂಜುರಾಜ್
ಹೆಚ್ ಎನ್ ಮಂಜುರಾಜ್
3 years ago

ಪ್ರಿಯ ದಿನೇಶ್ ಸರ್,

ಚೆನ್ನಾಗಿದೆ ಸರ್….ಅಪರೂಪದ ಘಟನೆ, ಲೋಕದಲಿ ಒಳಿತಿದೆ; ಅದನು ಕಾಣುವ ಒಳಗಣ್ಣು ಬೇಕಿದೆ. ಇದನೇ ಮಾಸ್ತಿಯವರು ಹೇಳುತಿದ್ದರು ಮತ್ತು ಬರೆದರು.

ಕೇಡಿಗೆ (evil) ನ್ಯೂಸ್ ಆಗುವ ‘ಅರ್ಹತೆ’ ಇದೆ; ಒಳ್ಳೆಯದಕ್ಕೆ ಈ ‘ಯೋಗ್ಯತೆ’ ಇಲ್ಲ! ಇದು ನನ್ನ ಅನಿಸಿಕೆ.

ನೀವು ಅಭಿವ್ಯಕ್ತಿಸುವ ವೈಧಾನಿ’ಕತೆ’ (attractive & systematic style) ಮನಂಬುಗುವಂಥದು.

✍ ಹೆಚ್ಚೆನ್ ಮಂಜುರಾಜ್

1
0
Would love your thoughts, please comment.x
()
x