ಹಂಪಿಯೆಂದು ಹೆಸರು ಕೇಳಿದ ಕೂಡಲೆ ನೆನಪಾಗೋದು ; ಅಲ್ಲಿನ ಶಿಲ್ಪ-ಕೆತ್ತನೆಗಳು, ಬೆಟ್ಟ-ಗುಡ್ಡಗಳು, ದೇವಾಲಯಗಳು. ಇತ್ತೀಚಿಗೆ ನಾವು ಕಾಣುವ ಹಂಪಿಯ ಪರಿಚಯಿಸಲು ಪ್ರಯತ್ನಿಸುವೆ.
ಹಂಪಿಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹೀಗಾಗಿ ಸುಮಾರು 30 ಚದರ ಕೀ. ಮೀ. ನಷ್ಟು ಈಗಲೂ ವ್ಯಾಪಕವಾದ ಗುಡಿಗುಂಡಾರ, ಶಿಲ್ಪಕೆತ್ತನೆ, ಪುಷ್ಕರಣಿ, ಕೋಟೆಗಳ ಮಾರ್ದನಿಯಿದೆ. ಹಾಗೆಯೇ ಕನ್ನಡದಷ್ಟೆ ಇಂಗ್ಲೀಷ್ ಮಾತಾಡುವ ಹಾಗೂ ಪಾಶ್ಚತ್ಯ, ಭಾರತೀಯ ಸಂಸ್ಕೃತಿಗಳ ಮಹಾಸಂಗಮತಾಣವಾಗಿ ಮಾರ್ಪಟ್ಟಿದೆ. ಪ್ರವಾಸಿಗರ ಪ್ರಭಾವದಿಂದ ಅಲ್ಲಿನ ಜನರು ಕೃಷಿಯ ಹೊರತುಪಡಿಸಿ ವ್ಯಾಪಾರವಹಿವಾಟು ನಡೆಸಿ ನಿಶ್ಚಿಂತರಾಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.
ನಾನು ಬೇರೆ ಕೆಲಸದ ಮೇಲೆ ಹಂಪಿ ವಿವಿಗೆ ಹೋಗಿ, ರಾತ್ರಿ ಅಲ್ಲಿಯೇ ತಂಗಿದ್ದೆ. ಮರುದಿನ ಬೆಳಿಗ್ಗೆಯೇ ಹೊಸ್ಪೇಟೆ ಬಸ್ಸ್ ಹಿಡಿದು ಕಮಲಾಪುರ ತಲುಪಿ ; ಹಂಪಿ ಬಸ್ಸು ಹತ್ತಿದೆ. ಬಸ್ಸು ಹೊರಟಿತು, ಮುಂದೆ ರಾಶಿರಾಶಿ ಬೃಹತ್ಶಿಲ್ಪಗಳ ಸಾಲು, ಅರ್ಧ ಬಿದ್ದು ಇನ್ನರ್ಧ' ನಾವು ಗಟ್ಟಿಯಾಗಿ ನಿಂತಿದ್ದೇವೆ' ಎಂದು ತೋರಿಸಿಕೊಳ್ಳುತ್ತಿರುವ ಕೋಟೆಗಳ ಕಂಡು ನನ್ನ ತುಟಿ ಕೊನರಿದವು. ಆದರೆ ಬಿದ್ದ ಚೌಕ ಕಲ್ಲುಗಳು ಅನಾಥವಾಗಿ ತಮ್ಮ ವಿಳಾಸವ ಮರೆತ್ತಿದ್ದ ಕಂಡು ಚಿತ್ತಕ್ಷೋಭಿತನಾದೆ.
ಬೆಟ್ಟ- ಗುಡ್ಡಗಳ ಅಂಚಲ್ಲಿ ನಾನು ಅನಾಥವಾಗಿ ಹೋಗಬೇಕಲ್ಲಾ ಎಂಬ ಖೇದದೊಂದಿಗೆ ನಾವಿರುವುದ ಮರೆತ ಬಸ್ಸು ಹಂಪಿಯ ಸೇರಬೇಕೆಂದು ತಹತಹಿಸುತಿತ್ತು. ಹಾದಿಯಲಿ ಎರಡು ಮಹಾಕೋಟೆಗಳ ದ್ವಾರಗಳನು ದಾಟಿದ ನಂತರ ಬಸ್ಸು ಬೆಕ್ಕಿನಿಂದ ಇಲಿ ತಪ್ಪಿಸಿಕೊಂಡಂತೆ ಓಡತೊಡಗಿತು. ಆ ಹಾದಿಯಲ್ಲಿ ಹಣ್ಣು, ಜ್ಯೂಸ್ ವ್ಯಾಪಾರಿಗಳ ಶುದ್ಧ ಇಂಗ್ಲೀಷ್ ಕಂಡು ನಾನು ನಗೆಸಾಗರದಲಿ ತೇಲಿಬಿಟ್ಟೆ.ಹಾಗೆ ಮುಂದೆ ಹೋದಂತೆ ಒರ್ವ ಸೈಕಲ್ಗಾಡಿಯ ತುಂಬ ಎಳೆನೀರಿನ ಗೊಂಚಲುಗಳ ಕಟ್ಟಿ ಪರಕೀಯರ ಕರೆದು Tender nut ,tender nut ಎಂದು ಕರೆಯುತ್ತಿದ್ದ ಕಂಡು ನಗುತ್ತಿದ್ದೆ. ಆದರೆ ಅದು ಅವರ ಉದರಗೀತೆಯೆಂದು ಮನಸ್ಸೆಂದಾಗ ಬಿದಿರುಗೊಂಬೆಯಾಗುತ್ತಿದ್ದೆ. ಇದನ್ನೆಲ್ಲ ಸ್ಮೃತಿಪಟಲದಲಿ ಗಿರಕಿ ಹೊಡೆಯುವಷ್ಟರಲ್ಲಿ ಹಂಪಿಯ ತಂಗುದಾಣಕ್ಕೆ ಬಸ್ಸು ಲಗ್ಗೆಯಿಟ್ಚಿತು.
ಎಲ್ಲಾ ನಗರಗಳ ಹಾಗೆಯೇ ಅಲ್ಲಿ ಅಂಗಡಿ, ಹೋಟೆಲ್ಗಳು ಕಂಡವು. ನಾನು ಬಸ್ಸ್ನಿಂದ ಕೆಳಗಿಳಿದೆ. ಆಗ ಮಧ್ಯವಯಸ್ಕನೊಬ್ಪ ಎನ್ನಡೆಗೆ ಧಾವಿಸಿ "Hi sir ,ಈ map ತಗೊಳ್ಳಿ ತಗೊಳ್ಳಿ ಹಂಪಿ ಸುತ್ತಾಡೋಕೆ ಹೆಲ್ಪಾಗುತ್ತೆ "ಎಂದು ಕನ್ನಡಿಸಿದ. ನಾನು ಕಿವಿಗೊಡದೆ ಮುನ್ನಡೆದೆ ; ಆಗ ನಾಲ್ಕೈದು ಅಜ್ಜಿಯರು "ಅಣ್ಣ, ಅಕ್ಕ ಕಾಯ್ ತಗೊಳ್ಳಿ, ಗುಡಿ ಹತ್ರ ಸಿಗಲ್ಲ " ಎಂದು ಕೂಗುತ್ತಿದ್ದನ್ನು ಕೇಳಿಸಿಕೊಂಡು ಬೇಸರವಾದರೂ ಕಿವುಡನಂತೆ ನಟಿಸಿ ಮುನ್ನಡೆದೆ.
ವಿರುಪಾಕ್ಷ ದೇವಾಲಯದ ಎದುರಿನ ರಾಜಬೀದಿಯಲಿ ಬೆನ್ನಿಗೆ ಚುರುಕು ಮುಟ್ಟಿಸುತ್ತಿದ್ದ ರವಿತೇಜನ ತಿರುಗಿ ನೋಡಿದೆ ; ಅವನು ಕೆಂಡನಾದ, ನಾನು ಸೋತನೆಂದು ತಲೆತಗ್ಗಿಸಿ ಶರಣಾದೆ.
ಹಾಗೆಯೇ ವಿರುಪಾಕ್ಷನ ಗುಡಿ ದಾಟಿ ತುಂಗೆಯೆಡಗೆ ಹೆಜ್ಜೆ ಹಾಕಿದೆ. ತುಂಗೆ ಬತ್ತಿದ ಕಾರಣ ನದಿಯ ಆಚೆಯ ದಡೆಗೆ ನಡೆದೆ. ಅಲ್ಲಿಯೆ ಪಕ್ಕದಲ್ಲಿ ಸಣ್ಣ ಅಂಗಡಿಯಲ್ಲಿ ವಿದೇಶಿಗರು ಕೊರಳಿಗೆ ಹಾಕಿಕೊಳ್ಳಲು ಒನಪಿನ ಹಾರಗಳು, ಉಂಗುರಗಳು, ಅಲಂಕಾರಿಕ ವಸ್ತುಗಳು ಮಾರಾಟಕ್ಕಿದ್ದವು. ಅಲ್ಲಿ ನಾನು ತೆಳ್ಳನೆಯ ಕಲ್ಲಿನಲಿ ಸೂರ್ಯನ ಪ್ರತಿಬಿಂಬವ ಕೆತ್ತಿದ್ದ ಆಕೃತಿಯ ಕೊರಳೊಲು ಹಾಕಲು ಬಯಸಿ ; 'ಅಣ್ಣ, ಇದು ಎಷ್ಚು 'ಎಂದೆ. ನನ್ನ ನೋಡಿ 100 ಎಂದನು ಅಂಗಡಿಯವ ಉತ್ತಿರಿಸಿದ. ನಾನು 50 ಕೊಡ್ತೀನಿ ಎಂದೆ. ಆಗ ಅವನು, '70 ಆದ್ರೆ ಕೊಡು ಇಲ್ಲಾಂದ್ರೆ ಬಿಡು, ನೀವು ಇಲ್ಲಿಯವರಂತ 100 ಅಂತ ಹೇಳಿನಿ ಅವ್ರಿಗೆಲ್ಲಾ (ವಿದೇಶಗರಿಗೆ)150ಕ್ಕಿಂತ ಕಡ್ಮಿ ಕೊಡಲ್ಲ ' ಅಂತ ಹೇಳಿ ಪಕ್ಕದಲ್ಲಿ ಕೂತಿದ್ದ ತನ್ನ ಹೆಂಡತಿಯ ಕಡೆ ಮುಖಮಾಡಿದ. ನಾನು ಅದೆ ಪ್ರತಿಬಿಂಬವ ಬಿರುಗಣ್ಣಿನಿಂದ ನೋಡೋದ ನಿಲ್ಲಿಸಿ, ಏನನ್ನದೆ ಮೂಕನಾದೆ.
ವಿರುಪಾಪುರ ಗಡ್ಡಿಯ ಹಾದಿಯ ಹಿಡಿದು ನಡೆಯತೊಡಗಿದೆ, ಅಲ್ಲಿ ಮರಳಿನ ರಸ್ತೆ, ತುಂಗೆಯ ಒಡಲಿನಲಿ ಸಿಗುವ ಒಣಗಿದ ಹುಲ್ಲಿನಿಂದ ರೆಸ್ಟೊರಂಟ್, ನಾನಾ ತರಹದ ಅಂಗಡಿಗಳು, ಕೆಫೆಗಳು, ನನ್ನ ಮನವ ಬೇರೆ ಲೋಕದೆಡೆಗೆ ಎಳೆದು ಬಿಗಿದುಕೊಂಡಿದ್ದವು. ಇವುಗಳನ್ನ ಬಿರುಗಣ್ಣಿನಿಂದ ನೋಡುವಾಗಲೆ ಹಾರ್ಮೋನಿಯಂ ಶಬ್ದ ಕಿವಿಯ ಹೊಕ್ಕಿ ತನ್ನಡೆಗೆ ಸೆಳೆದುಬಿಟ್ಟಿತು. ನನ್ನ ಕಾಲುಗಳ ಯಾರೋ ಹಗ್ಗ ಕಟ್ಟಿ ಎಳೆದಂತೆ ತಹತಹಿಸಿ ನಡೆದು ಅದಕೆ ಹತ್ತಿರವಾಯಿತು. ನನ್ನ ಕಂಗಳು ಅದರಲ್ಲಿಗೆ ವಕ್ರವಾಗಿ ಹಾಯ್ದವು. ಅಲ್ಲಿ ನಾಲ್ಕೈದು ವಿದೇಶಿಗರನ್ನು ತನ್ನ ಸುತ್ತಲು ಕೂಡಿಸಿಕೊಂಡು ಒರ್ವ ಹಾರ್ಮೋನಿಯಂ ಹಿಡಿದು ವಿರುಪಾಕ್ಷ, ಹನುವಂತ, ವಿಜಯನಗರ ಅರಸರ ಕಥೆಗಳನು ತಾ ಕರಗತಗೊಳಿಸಿಕೊಂಡ ಇಂಗ್ಲೀಷ್ ಪದಗಳಿಗೆ ಜೀವ ತುಂಬಿ ರಾಗಕಟ್ಟಿ ಹಾಡುತ್ತಿದ್ದನು. ಅದಕೆ ಮಂತ್ರಮುಗ್ಧರಾದ ವಿದೇಶಿಗರು ಎಮ್ಮೆಯಂತೆ ತಲೆಅಲ್ಲಾಡಿಸುತ್ತಿದ್ದರು.
ನನ ಮನಸು ಕಂಗ್ಲೀಷ್ – ಇಂಗ್ಲೀಷ್ ಸಂಭಾಷಣೆ ಮಗ್ಗಲಿಗೆ ಒರಳಿತು. ಅಲ್ಲಿ ಬಾಡಿಗೆಗೆ ನಿಲ್ಲುವ ಬೈಕುಗಳನು ಒಂದೆಡೆಗೆ ಸಾಲುಗಟ್ಟಿ ನಿಲ್ಲಿಸಿದರು. ಒರ್ವ ವಿದೇಶಿಗ ಬೈಕ್ನ 1000 ದಿನಕೆ ಕೊಡು ಎಂದು ಕೇಳತೊಡಗಿದ್ದ. ಆದರೆ ಆ ಅಂಗಡಿಯವ 1500 ಕೊಟ್ರೆ ಬೈಕ ಕೊಡುವೆ ಎಂದು ಕರಾರುವಕ್ತಾಗಿ ನುಡಿದಿದ್ದನು ಕಂಡು ಚಿತ್ತಕ್ಲೇಶನಾದೆ. ನಾ ನಡೆದು ಬಂದಲ್ಲೆಲ್ಲಾ ನನ್ನ ಕಣ್ಣು ಕ್ಲಿಕ್ಕಿಸಿಕೊಂಡದ್ದು ; ಒಂದಲ್ಲ ನೂರೆಂಟು ವಿಷಯ. ಅದರಲಿ ಮೊದಲನೆಯದು ಮಹಾಬದಲಾವಣೆ. ಅದೆ ಉಡುಗೆ-ತೊಡುಗೆ, ಭಾಷೆ, ಇತ್ಯಾಧಿ. ಸ್ಥಳೀಯರ ಅರ್ಧಂಬರ್ಧ ಇಂಗ್ಲೀಷನು ಕೇಳಿಸಿಕೊಂಡ ನನ್ನ ಕಿವಿ ಪೆಚ್ಚಾಯಿತು. ಒಮ್ಮೆ ನಾನು ಹಂಪಿಯೆಂದು ನೆನೆಸಿಕೊಂಡರೆ ಇವೆಲ್ಲಾ ಘಟನೆಗಳು ನನ್ನ ಸ್ಮೃತಿಪಟಲದಲಿ ಗಿರಕಿ ಹೊಡೆಯುತ್ತಿರುತ್ತವೆ. .
ಬಿ. ಎಲ್. ಆನಂದ ಆರ್ಯ
ಅಲ್ಲಿ ನಾಲ್ಕೈದು ವಿದೇಶಿಗರನ್ನು ತನ್ನ ಸುತ್ತಲು ಕೂಡಿಸಿಕೊಂಡು ಒರ್ವ ಹಾರ್ಮೋನಿಯಂ ಹಿಡಿದು ವಿರುಪಾಕ್ಷ, ಹನುವಂತ, ವಿಜಯನಗರ ಅರಸರ ಕಥೆಗಳನು ತಾ ಕರಗತಗೊಳಿಸಿಕೊಂಡ ಇಂಗ್ಲೀಷ್ ಪದಗಳಿಗೆ ಜೀವ ತುಂಬಿ ರಾಗಕಟ್ಟಿ ಹಾಡುತ್ತಿದ್ದನು. ಅದಕೆ ಮಂತ್ರಮುಗ್ಧರಾದ ವಿದೇಶಿಗರು ಎಮ್ಮೆಯಂತೆ ತಲೆಅಲ್ಲಾಡಿಸುತ್ತಿದ್ದರು.
ಅಲ್ಲಿ ಹಾರ್ಮೋನಿಯಂ ನ ನಾದ ಸರಿ ಇರಲಿಲ್ಲವೋ ಅಥವಾ ವಿದೇಶಿಗರಿಗೇ ಏನೂ ಅರ್ಥವಾಗದೇ ತಲೆ ಅಲ್ಲಾಡಿಸುತ್ತಿದ್ದರೋ ಇದನ್ನು ಸ್ವಲ್ಪ ಬಿಡಿಸಿ ಹೇಳಿ ಏಕೇಂದರೆ ಇಂಗ್ಲೀಷ್ ಪದಗಳಿಗೆ ಜೀವ ತುಂಬಿ ರಾಗಕಟ್ಟಿ ಹಾಡುತ್ತಿದ್ದನು. ಅದಕೆ ಮಂತ್ರಮುಗ್ಧರಾದ ವಿದೇಶಿಗರು ಎಮ್ಮೆಯಂತೆ ತಲೆಅಲ್ಲಾಡಿಸುತ್ತಿದ್ದರು ಎಂದಿದ್ದಿರಿ..ಆದರೆ ಇದರಲ್ಲಿ ವಿದೇಶಿಗರಿಗೇ ಅರ್ಥವಾಗುತ್ತಿಲ್ಲ ಎಂಬುವುದನ್ನ ನೀವೇ ತಿರ್ಮಾನಿಸಿದಂತಿದೇ…