ಕೆ.ಎಸ್.ಎನ್.ನುಡಿ ನಮನ..: ಶೋಭಾ ಶಂಕರ್


ಡಿಸೆಂಬರ್ ೨೮ ನಾಡಿನ ಜನತೆ ಎಂದಿಗೂ ಮರೆಯಲಾರದಂಥ ದಿನ.ಈಗಾಗಲೇ ಡಿ.೨೮ ಎಂದಾಕ್ಷಣ ನಮ್ಮ ಮನಸ್ಸಿನ ಮುಂದೆ ಕೆ.ಎಸ್.ಎನ್. ಅವರ ಭಾವಚಿತ್ರ ಕಣ್ಣ ಮುಂದೆ ಮೂಡಿರಬೇಕಲ್ಲ? ನಿಜ!! ಕೆ.ಎಸ್.ಎನ್. ಅಂದು ಅನಂತವಾಗಿ ಚಿರನಿದ್ರೆಗೆ ಜಾರಿದ ದಿನ. ನರಸಿಂಹಸ್ವಾಮಿಯವರು ತಮ್ಮ ಪ್ರೇಮಕವಿತೆಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಛಳಿಯದ ಸ್ಥಾನ ಪಡೆದುಕೊಂಡಿದ್ದಾರೆ .ದಾಂಪತ್ಯ-ಪ್ರೇಮವನ್ನು ಅಮರಗೊಳಿಸಿ, ’ಮೈಸೂರು ಮಲ್ಲಿಗೆ’ಯ ಕವಿ ಎಂದೇ ಚಿರಪರಿಚಿತರಾಗಿದ್ದವರು ನಮ್ಮೆಲ್ಲರ ಒಲವಿನ ಕವಿ ಕೆ.ಎಸ್.ಎನ್.

ಅವರ ವಾರಿಗೆಯವರು ಕಾವ್ಯವಲ್ಲದೇ, ಬೇರೆ ಪ್ರಕಾರಗಳ ಸಾಹಿತ್ಯಕೃಷಿಯಲ್ಲಿ ತೊಡಗಿಕೊಂಡರೂ, ನರಸಿಂಹಸ್ವಾಮಿಯವರು ಮಾತ್ರ ಕಾವ್ಯಕನ್ನಿಕೆಯನ್ನೇ ಬಲವಾಗಿ ನೆಚ್ಚಿಕೊಂಡಿದ್ರು. ದಾಂಪತ್ಯ-ಪ್ರೇಮ ಅವರ ಕಾವ್ಯದ ಮುಖ್ಯ ವಸ್ತು, ಹೆಂಡತಿಯನ್ನು ಕೋಟಿರೂಪಾಯಿಗೆ ಸಮ ಎಂದು ಕರೆದ ಏಕೈಕ ಕವಿ ನರಸಿಂಹಸ್ವಾಮಿಯವರು.

೧೯೧೫ ಜನವರಿ ೨೬ ರಂದು, ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನನ. ಇವರ ತಂದೆ ಸುಬ್ಬರಾಯರು ಹಾಗು ತಾಯಿ ಹೊಸಹೊಳಲಿನ ನಾಗಮ್ಮ. ತಂದೆ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರ್ ಆಗಿದ್ದರು. ಅವರ ಮೇಧಾವಿತನ, ಮಹಾಕಾವ್ಯಗಳಲ್ಲಿ ಇದ್ದಂತಹ ಆಸಕ್ತಿ, ಉತ್ತಮ ಕೈಬರಹ ಶಿಸ್ತುಬದ್ಧ ಜೀವನ, ಮೊದಲಾದವು ಕೆ.ಎಸ್.ಎನ್.ಅವರ ಗಮನ ಸೆಳೆದಿದ್ದವು. ಅಂತೆಯೇ ತಾಯಿ ಪ್ರೀತಿ ವಾತ್ಸಲ್ಯಗಳು ಕವಿಯನ್ನು ಹೆಚ್ಚು ಪ್ರಭಾವಿತರನ್ನಾಗಿಸಿದ್ದವು. ಇವರೀರ್ವರ ಮನೋಜೀವನ ಕವಿಯ ಕಾವ್ಯದಲ್ಲಿ ಅಭಿವ್ಯಕ್ತಿಗೊಂಡಿದೆ. ಮೈಸೂರು ಟ್ರೈನಿಂಗ್ ಕಾಲೇಜಿನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಇವರು ತಮ್ಮ ಆರಂಭಿಕ ಶಿಕ್ಷಣ ಪಡೆದರು. ೧೯೨೧ ರಿಂದ ೧೯೨೮ರವರೆಗೆ ಈ ಸಂಸ್ಥೆಗಳಲ್ಲಿಯೇ ಓದಿದ ಅವರು ಮುಂದೆ ಪ್ರೌಢ ಶಿಕ್ಷಣಕ್ಕಾಗಿ ಮಹಾರಾಜ ಹೈಸ್ಕೂಲ್ ಸೇರಿದರು. ಇಲ್ಲಿ ಅವರು ವ್ಯಾಸಾಂಗ ಮಾಡಿದ್ದು ೧೯೨೮ ರಿಂದ ೧೯೩೧ ರ ವರೆಗೆ ಮಾತ್ರ ಕಾರಣಾಂತರಗಳಿಂದ ಬೆಂಗಳೂರಿಗೆ ಬಂದ ಇವರು, ತಮ್ಮ ಮುಂದಿನ ವಿದ್ಯಾಭ್ಯಾಸ ಅಲ್ಲಿಯೇ ಮುಂದುವರೆಸಿದರು. ಆದರೆ ಅವರ ತಂದೆಯ ಅಕಾಲಿಕ ಮರಣದಿಂದ ಬಿ.ಎ. ವ್ಯಾಸಾಂಗವನ್ನು ಪೂರ್ಣಗೊಳಿಸಲಾಗಲಿಲ್ಲ. ಮನೆಯ ಹಿರಿಯ ಮಗ ಕೆ.ಎಸ್.ಎನ್. ಅವರಿಗೆ ಜವಾಬ್ದಾರಿಗಳು ಹೆಚ್ಚಾದವು. ಕೆಲಸದ ಬೆನ್ನು ಹತ್ತಿದ ನರಸಿಂಹಸ್ವಾಮಿಯವರು, ಅಕ್ಕಸಾಲಿಗರ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಈ ನಡುವೆ ಅವರಿಗೆ ತಿಪಟೂರಿನ ವೆಂಕಮ್ಮನವರೊಂದಿಗೆ ಮದುವೆ ನಿಶ್ಚಯವಾಯಿತು.  ಹದಿಹರೆಯದ ಕವಿಗೆ ಆಗ ಕನಸು ಕಾಣುವ ವಯಸ್ಸು. ಕವಿಹೃದಯ ಎಂದ ಮೇಲೆ ಕೇಳಬೇಕೆ? ಆ ಸಮಯಕ್ಕೆ ಸೃಷ್ಟಿಯಾದವು ಕವನಗಳ ಭಂಡಾರ. 

ಒಂದು ಕಾಲಕ್ಕೆ ಕೆ.ಎಸ್.ಎನ್. ಅವರು ಇಂಗ್ಲೀಷಿನಲ್ಲಿ ಕಾವ್ಯರಚನೆ ಮಾಡಲು ವರ್ಡ್ಸ ವರ್ತ,  ರಾಬರ್ಟಬರ್ನ್ಸ್ ಮುಂತಾದ ಕವಿಗಳ ಪ್ರಭಾವ ಸಹಜವಾಗಿ ಇವರ ಮೇಲೂ ಅಗಿತ್ತು. ಕವಿ ಕುವೆಂಪು ಅವರಿಗೆ ಕಸಿನ್ಸ್ ಕನ್ನಡದಲ್ಲಿ ಬರೆಯಲು ಹೇಳಿದಂತೆಯೇ ಇವರಿಗೆ ಪಟ್ಟಾಭಿರಾಮನ್ ಎಂಬ ಮೇಷ್ರು ಕನ್ನಡದಲ್ಲಿ ಬರೆಯಲು ಹುರಿದುಂಬಿಸಿದರು. ವಿದ್ಯಾರ್ಥಿಯಾಗಿದ್ದ ಕಾಲದಿಂದಲೇ ಕವನ ರಚನೆ ಮಾಡುತ್ತಾ ಇದ್ದರು. ಕವಿವರ್ಯ ಕುವೆಂಪು ಅವರಿಂದ ಬೆನ್ನುತಟ್ಟಿಸಿ ಕೊಂಡ ಮೇಲಂತೂ, ಅವರ ಸೃಷ್ಟಿಯಲ್ಲಿ ಸಂಪೂರ್ಣವಾಗಿ ತಲ್ಲೀನರಾಗುವಂತೆ ಮಾಡಿತು.

’ಮೈಸೂರುಮಲ್ಲಿಗೆ’ ಕನ್ನಡದಲ್ಲಿಯೇ ಅತೀ ಹೆಚ್ಚು ಮರು ಮುದ್ರಣವನ್ನು ಕಂಡಿರುವ ಕವನ ಸಂಕಲನ. ಕೆ.ಎಸ್.ಎನ್. ಬರೆದದ್ದು ಹೆಚ್ಚಾಗಿ ದಾಂಪತ್ಯಗೀತೆಗಳನ್ನೇ. ’ಮೈಸೂರು ಮಲ್ಲಿಗೆ’ಯಲ್ಲಿ ಇರುವುದು ಕವಿಯ ದಾಂಪತ್ಯ ಜೀವನದ ರಸಾನುಭವಗಳು. ಅವರಿಗೆ ಮದುವೆಯಾದದ್ದು ೧೯೩೬ ರಲ್ಲಿ ’ಮೈಸೂರು ಮಲ್ಲಿಗೆ’ ಪ್ರಕಟವಾದದ್ದು ೧೯೪೨ರ ಹೊತ್ತಿಗೆ. ಈ ನಡುವೆ ಆರು ವರ್ಷಗಳಲ್ಲಿ ರಚಿಸಿದಂತಹ ದಾಂಪತ್ಯಗೀತೆಗಳೆಲ್ಲವೂ ಮಾವನ ಮನೆಯಲ್ಲಿಯೇ. ಇದರಲ್ಲಿ ಅತ್ಯಂತ ಪ್ರಸಿದ್ಧ ಗೀತೆ 
ರಾಯರು ಬಂದರು ಮಾವನ ಮನೆಗೆ….

’ಮೈಸೂರು ಮಲ್ಲಿಗೆ’ ಈ ಶೀರ್ಷಿಕೆಯ ಹಿನ್ನೆಲೆಯ ಸ್ಪೂರ್ತಿಗೆ ಒಂದು ಸಣ್ಣ ಕಥೆಯೇ ಇದೆ. ಕವಿಗೆ ಕ್ಲಾಕ ಟವರ್ ನ ಬಳಿ ಅವರಿಗೆ ಪರಿಚಯವಿದ್ದ ಮುಸ್ಲಿಂ ಕುಟುಂಬವೊಂದಿತ್ತು. ಅವರ ಮನೆಕಸುಬು ಮಲ್ಲಿಗೆ ಹೂವಿನ ಹಾರಗಳನ್ನು ಕಟ್ಟಿ ಮಾರುವುದು. ಕೆ.ಎಸ್.ಎನ್. ತಮ್ಮ ಪುಸ್ತಕಕ್ಕೆ ಹೆಸರಿಡುವುದರ ಬಗ್ಗೆ ಪ್ರಸ್ತಾಪಿಸಿದಾಗ, ಆ ಮನೆಯ ಸಾಹೇಬ ಸೂಚಿಸಿದ ಹೆಸರೇ ’ಮೈಸೂರು ಮಲ್ಲಿಗೆ’ ಈ ಶೀರ್ಷಿಕೆಯೇ ಅವರನ್ನು ನಾಡು ಎಂದೆಂದಿಗೂ ಮರೆಯಲಾರದಂಥ ಮಲ್ಲಿಗೆ ಕವಿಯನ್ನಾಗಿ ಮಾಡಿತು.

ತಮ್ಮ ಬದುಕುನುದ್ದಕ್ಕೂ ಪ್ರತಿಕೂಲ ಪರಿಸ್ಥಿತಿಯಲ್ಲಿ ಹೋರಾಟ ನಡೆಸುತ್ತಾ ಬಂದರೂ, ತಮ್ಮ ಕಾವ್ಯದೃಷ್ಟಿಯನ್ನು ಮಂದವಾಗಿಸಿಕೊಳ್ಳದೇ ನೋವನ್ನ ನುಂಗಿ ನಲಿವನ್ನ ಕಾವ್ಯಪ್ರಿಯರಿಗೆ ನೀಡುತ್ತಾ ಬಂದ ಕವಿ ಇವರು. ನವೋದಯದಿಂದ ಆರಂಭಗೊಂಡ ಅವರ ಕಾವ್ಯದೃಷ್ಟಿ, ನವ್ಯಕ್ಕೂ ಮುಂದುವರೆದು, ಮೂರು ದಶಕಕ್ಕೂ ಮೀರಿ ಕಾವ್ಯಸೇವೆಯನ್ನು ಸಲ್ಲಿಸಿದೆ. ಇವರ ಇತರ ಕೃತಿಗಳೆಂದರೆ, ಐರಾವತ, ಬಾಗಿಲು, ಮಲ್ಲಿಗೆ ಮಾಲೆ ಮತ್ತು ದುಂಡುಮಲ್ಲಿಗೆ. ಇವೆಲ್ಲಾ ಇವರ ಪ್ರಸಿದ್ಧ ಕವನ ಸಂಕಲನಗಳಾದರೆ, ಮಾರಿಯಕಲ್ಲು, ದಮಯಂತಿ, ಉಪವನ, ಹಕಲ್ಬರಿಫಿನ್ನನ ಸಾಹಸಗಳು, ಮೀಡಿಯಾ ಪ್ರಪಂಚ ಬಾಲ್ಯದಲ್ಲಿ, ಪತ್ರಗುಚ್ಛ, ನನ್ನ ಕನಸಿನ ಭಾರತ, ಮೋಹನಮಾಲೆ ಮತ್ತು ಸುಬ್ರಮ್ಮಣ್ಯಭಾರತಿ ಇವು ಅವರ ಸಾಹಿತ್ಯ ಪ್ರಕಾರಗಳು. ಆದರೆ ಕೆ.ಎಸ್.ಎನ್. ಸ್ವತಂತ್ರ್ಯವಾಗಿ ಬರೆದಿರುವುದು ಮೂರು ಕೃತಿಗಳನ್ನು ಮಾತ್ರ ಪದ್ಯಶೈಲಿಯೇ ಹೆಚ್ಚು ಪ್ರಿಯವಾಗಿತ್ತು ಎನ್ನುವುದು ಮನವರಿಕೆಯಾಗುವುದು.

ಇನ್ನು ಕವಿಯ ಪ್ರಶಸ್ತಿಗಳ ಬಗ್ಗೆ ಹೇಳ ಹೊರಟರೆ ಅದಕ್ಕೆ ಸಮಯ ಸಾಲದು. ಅದರಲ್ಲಿ ಕೆಲವೊಂದನ್ನು ಗಮನಿಸೋದಾದರೆ,
೧೯೭೨ ರಲ್ಲಿ     ರಾಜ್ಯೋತ್ಸವ ಪ್ರಶಸ್ತಿ.
೧೯೭೪ ರಲ್ಲಿ     ಕರ್ನಾಟಕ ಸಾಹಿತ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
೧೯೯೧ ರಲ್ಲಿ     ಬೆಂಗಳೂರಿನ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್.
೧೯೯೨ ರಲ್ಲಿ    ’ಮೈಸೂರು ಮಲ್ಲಿಗೆ’ ಸಿನಿಮಾಕ್ಕೆ ಶ್ರೇಷ್ಟಗೀತ ರಚನೆಕಾರ ಪ್ರಶಸ್ತಿ.
೧೯೯೬ ರಲ್ಲಿ     ಪ್ರತಿಷ್ಟಿತ ಪಂಪ ಪ್ರಶಸ್ತಿ ಕವಿಯ ಮುಡಿಯೇರಿತು.

ಕನ್ನಡ ಸಾಹಿತ್ಯಕ್ಕೆ ಕೆ.ಎಸ್.ಎನ್. ಅವರ ಕೊಡುಗೆ ಮರೆಯಲಾರದಂಥಹುದು. ಸಹೃದಯ ಕನ್ನಡಿಗರು ಅವರನ್ನು ಆರಭದಿಂದಲೂ ಪುರಸ್ಕರಿಸುತ್ತಲೇ ಬಂದಿದ್ದಾರೆ. ಕವಿ ತಾವೇ ಹೇಳಿದಂತೆ ಅವರ ಪತ್ನಿ ವೆಂಕಮ್ಮ ನರಸಿಂಹಸ್ವಾಮಿಗಳ ಬದುಕಿನಲ್ಲಿ ಅವರ ಸ್ಫೂರ್ತಿಯ ಸೆಲೆಯಾಗಿದ್ದರು. ಅವರ ಬದುಕಿನಲ್ಲಿ ಆಕೆ ವಹಿಸಿದ ಪಾತ್ರ ಬಹು ದೊಡ್ಡದು.

ಕವಿಯ ಪ್ರೀತಿ, ಪ್ರೇಮ, ನೋವು, ಸುಖ, ದುಃಖ, ಮನೆ ಹೆಂಡತಿ, ಮಕ್ಕಳು ಸುತ್ತಮುತ್ತಲ ಪರಿಸರ, ಸಾರ್ವಜನಿಕ ಜೀವನ, ಮೊದಲಾದ ಮಾನವೀಯ ಮೌಲ್ಯಗಳ ಸಹಜ ತುಡಿತಗಳು ಅಭಿವ್ಯಕ್ತಿಗೊಂಡಿವೆ. ಇಂಥಹ ಸಹಜ ಪ್ರಕ್ರಿಯೆಯೇ ಬದುಕಿನ ಸಾಂಸ್ಕೃತಿಕ ಅನನ್ಯತೆಯನ್ನ ತುಂಬಿಕೊಡುವುದು. ಈ ನಿಟ್ಟಿನಲ್ಲಿ ಕೆ.ಎಸ್.ಎನ್. ಒಬ್ಬ ಸಾಂಸ್ಕೃತಿಕ ಕವಿ  ಎಂದರೆ ಅತಿಶಯೋಕ್ತಿಯಲ್ಲ. ಇಂಥಹ ಮೇರು ಕವಿಯ ಬಗ್ಗೆ ಹೇಳಲು ವಯಸ್ಸಾದಂತೆ ದೃಷ್ಟಿ ಕಳೆದುಕೊಂಡರು ಬಳಿಕ ಅವರ ಕವಿತೆಗಳನ್ನ ಅಕ್ಷರ ರೂಪಕ್ಕೆ ಇಳಿಸುತ್ತಿದ್ದವರು ವೆಂಕಟೇಷಮೂರ್ತಿಯವರು. ಕವಿತೆ ಬರೆಯಬೇಕು ಅನ್ನಿಸಿದಾಗಲೆಲ್ಲಾ ಕವಿ ವೆಂಕಟೇಷಮೂರ್ತಿಗಳಿಗೆ ಹೇಳಿ ಕರೆಸಿಕೊಳ್ಳುತ್ತಿದ್ದರಂತೆ. ಮೂರ್ತಿಗಳು ಹೇಳೋ ಪ್ರಕಾರ ಕೆ.ಎಸ್.ಎನ್. ಕ್ಷಣಾರ್ದದಲ್ಲಿ ಕವಿತೆ ರಚನೆ ಮಾಡುತ್ತಿದ್ದರಂತೆ. ಇಂಥಹಾ ಮೇಧಾವಿ ಕವಿ ಇಂದು ನಮ್ಮೊಡನಿಲ್ಲ, ಆದರೂ ಅವರ ಕವನಗಳ ಮೂಲಕ ಮಲ್ಲಿಗೆಯ ಕಂಪನ್ನ ಅಜರಾಮರವಾಗಿಸಿದ ಈ ಮಹಾನ್ ಕವಿಗೆ ಇದೋ ನೂರೊಂದು ನಮನ….

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಶ್ರೀನಿವಾಸ್ ಪ್ರಭು

ಕೆ.ಎಸ್.ಎನ್. ಅವರ ಭಾವಚಿತ್ರ ಕಣ್ಣ ಮುಂದೆ ತಂದು ನಿಲ್ಲಿಸಿದಿರಿ. ಪ್ರೇಮ ಕವಿ, ರಸಿಕ ಕವಿ ಮೈಸೂರು ಮಲ್ಲಿಗೆಯ ಕಂಪು ಎಲ್ಲೆಡೆ ಪಸರಿಸಿದೆ. ಅವರ ಕವನಗಳನ್ನು ಓದುವುದೇ ಒಂದು ಖುಷಿ. ಕೇಳುವುದು ಮತ್ತೂ ಖುಶಿ. ಸಮಯೋಚಿತ ಲೇಖನ.

1
0
Would love your thoughts, please comment.x
()
x